ವಾಷಿಂಗ್ಟನ್, ಏಪ್ರಿಲ್ 10: ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ಇಂದು ಇರಾನ್ ಜೊತೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ (Pakistan) ತೆರಳಿದ್ದಾರೆ. ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜೆಡಿ ವ್ಯಾನ್ಸ್, “ನಾವು ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದಂತೆ ಇರಾನಿಯನ್ನರು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಮುಕ್ತವಾಗಿ ಕೈ ಚಾಚಲು ಸಿದ್ಧರಿದ್ದೇವೆ. ಆದರೆ, ಅಮೆರಿಕದ ಜೊತೆ ಆಟವಾಡಿದರೆ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲಾರ, ಏಪ್ರಿಲ್ 10: ಅರಣ್ಯ ಭೂಮಿ ಒತ್ತುವರಿ (Land Encroachment) ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಭೂಮಿಯನ್ನು ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ಗೆ ಹಿನ್ನಡೆಯಾಗಿದೆ. ಜೊತೆಗೆ ಅವರು ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಲಾಗಿದೆ.
ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶ
ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್‌ಕುಮಾರ್ ಸಲ್ಲಿಸಿದ ಮೇಲ್ಮನವಿ ಅಜಿ ವಿಚಾರಣೆ ಮಾಡಿದ ನ್ಯಾಯಾಲಯ, ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. 2025ರ ಜನವರಿ 15 ಮತ್ತು 16ರಂದು ನಡೆಸಿದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಈ ಆದೇಶ ನೀಡಲಾಗಿದೆ.
ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಅತಿಕ್ರಮಣ ಮಾಡಲಾದ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಆದೇಶ ಪಾಲನೆ ಮಾಡದಿದ್ದಲ್ಲಿ, ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಭೂಮಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 2 ದಶಕಗಳಿಂದ ಅರಣ್ಯ ಭೂಮಿಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಸರ್ವೆ ಸಂಖ್ಯೆ 1 ಮತ್ತು 2ರಲ್ಲಿ 60.23 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದ ಭೂಮಿಯ ಪೈಕಿ ಸುಮಾರು 60.23 ಎರಕೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಜಂಟಿ ಸರ್ವೇ ಕಾರ್ಯದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಜಂಟಿ ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ನವದೆಹಲಿ, ಏಪ್ರಿಲ್ 10: ದೆಹಲಿ ಪೊಲೀಸರು ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿರುವ ಪ್ರಮುಖ ಗೂಢಚಾರ ಜಾಲವನ್ನು ಭೇದಿಸಿದ್ದು, 11 ಜನರನ್ನು ಬಂಧಿಸಿದ್ದಾರೆ. ಐಎಸ್‌ಐ ಜೊತೆಗೆ ಮಾತ್ರವಲ್ಲದೆ ಈ ಗೂಢಚಾರ ಜಾಲವು ನಿಷೇಧಿತ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ನೊಂದಿಗೆ ಸಂಪರ್ಕ ಹೊಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ದೆಹಲಿ ಮತ್ತು ಪಂಜಾಬ್‌ನ ವಿವಿಧ ಸ್ಥಳಗಳಿಂದ 11 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರು ದೇಶದ ವಿವಿಧ ಭಾಗಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಗುಂಪು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದ್ದು, ಬೇಹುಗಾರಿಕೆ ಗುಂಪಾಗಿ ಮಾತ್ರವಲ್ಲದೆ ಭಯೋತ್ಪಾದಕ ಘಟಕವಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ದೇಶಾದ್ಯಂತ 9 ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ತಿಳಿದುಬಂದಿದೆ. ಕಥುವಾದಿಂದ ಉತ್ತರ ಭಾರತದವರೆಗಿನ ಹಲವಾರು ಮಿಲಿಟರಿ ಪ್ರದೇಶಗಳಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿತ್ತು.
VIDEO | Delhi Police Special Cell busted an inter-state terror, arms and espionage module linked to ISI-BKI, arresting 11 accused from Punjab and Delhi. Nine solar-powered CCTV cameras installed near sensitive locations, along with 4 pistols and 24 cartridges, were recovered, and… pic.twitter.com/M8xoKFMEH0
ಈ ಜಾಲವು ಮಿಲಿಟರಿ ನೆಲೆಗಳು, ರೈಲು ನಿಲ್ದಾಣಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳ ಡೇಟಾ, ಸ್ಥಳ, ಫೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ, ಈ ಆರೋಪಿಗಳು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ತರಲು ಪ್ರಯತ್ನಿಸುತ್ತಿದ್ದರು. ತನಿಖಾ ಸಂಸ್ಥೆಗಳ ಪ್ರಕಾರ, ಆರೋಪಿಗಳು ಕಂಟೋನ್ಮೆಂಟ್ ಮತ್ತು ರೈಲ್ವೆ ನಿಲ್ದಾಣದಂತಹ ಸೂಕ್ಷ್ಮ ಸ್ಥಳಗಳಲ್ಲಿ ಸೌರಶಕ್ತಿ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಈ ಕ್ಯಾಮೆರಾಗಳಿಂದ ಲೈವ್ ಫೀಡ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಹುಭಾಷೆಯಲ್ಲಿ ಬಿಡುಗಡೆ ಆಗಲಿರುವ ‘ಅದಿತಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾವನ್ನು ಕೇವಲ 5 ಶಾಟ್‌ಗಳಲ್ಲಿ ಚಿತ್ರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. ಆ ಮೂಲಕ ‘ಅದಿತಿ’ ಸಿನಿಮಾ (Aditi Movie) ಕುತೂಹಲ ಮೂಡಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇದೆ. ಬಹುತೇಕ ಮಹಿಳೆಯರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ‘ಅದಿತಿ’ ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಯಿತು. ಈ ಚಿತ್ರದ ಶೀರ್ಷಿಕೆಗೆ ‘ಲಿಬರ್ಟಿ’ ಎಂಬ ಟ್ಯಾಗ್ಲೈನ್ ಇದೆ.
‘ಮಿಲೆನಿಯಮ್ ಆಡ್ ಮೀಡಿಯಾ’ ಮೂಲಕ ‘ಅದಿತಿ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾಗೆ ನೆಲ್ಸನ್ ರೋಜರ್ಸ್ ಡಬ್ಲ್ಯೂ. ಮತ್ತು ಸೋಲೋಮನ್ ಕೆ. ಜಾರ್ಜ್ ಅವರು ನಿರ್ದೇಶನ ಮಾಡಿದ್ದಾರೆ. ವ್ಯಾಲೆರಿನಾ ಮರಿಯಾ ರೋಜರ್ಸ್ ಮತ್ತು ನೆಲ್ಸನ್ ರೋಜರ್ಸ್ ಡಬ್ಲ್ಯೂ. ಅವರು ಬಂಡವಾಳ ಹೂಡಿದ್ದಾರೆ. ನೆಲ್ಸನ್ ರೋಜರ್ಸ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಈ ಸಿನಿಮಾದ ಪ್ರಚಾರದ ಮೊದಲ ಹಂತವಾಗಿ ಹಾಡುಗಳು, ಟೀಸರ್ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ವೈ2ಕೆ ಮ್ಯೂಸಿಕ್ ಆಡಿಯೋ ಕಂಪನಿ ಲೋಗೋ ಅನಾವರಣ ಸಮಾರಂಭವು ಕೂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ‘ಆ ದಿನಗಳು’ ಖ್ಯಾತಿಯ ಚೇತನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಅದಿತಿ’ ಚಿತ್ರತಂಡಕ್ಕೆ ವಿಶ್ ಮಾಡಿದರು.
ಇಶಾನಾ, ಹರ್ಷಿತಾ ಕಲ್ಲಿಂಗಲ್, ಆರತಿ, ನಿಸರ್ಗ ಮಂಜುನಾಥ್, ಯಶಾ, ಸುನಿಲ್, ಡ್ಯಾನಿ ಕುಟ್ಟಪ್ಪ, ಅಜಿತ್ ಕುಮಾರ್, ಗೋಪಿ ಮುಂತಾದವರು ‘ಅದಿತಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ಈ ಸಿನಿಮಾದ ವಿಶೇಷತೆಗಳ ಬಗ್ಗೆ ತಿಳಿಸಿದರು. ಈ ಸಿನಿಮಾದಲ್ಲಿ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇದೆ ಎಂದು ಅವರು ಹೇಳಿದರು.
‘ಈ ಸಿನಿಮಾವನ್ನು ಕೇವಲ 5 ಶಾಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರತಿಯೊಂದು ದೃಶ್ಯಗಳು 20-25 ನಿಮಿಷ ಇರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಕಲಾವಿದರಿಗೆ ತರಬೇತಿ ನೀಡಿದ್ದೇವೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಅವರ ಸಲಹೆ, ಸಹಕಾರ ನೀಡುವುದಲ್ಲದೇ ಬಹಳ ಚೆನ್ನಾಗಿ ಶಾಟ್ಸ್ ಸೆರೆ ಹಿಡಿದುಕೊಟ್ಟಿದ್ದಾರೆ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕೊಂಕಣಿ ಭಾಷೆಗಳಲ್ಲಿ ಸಿನಿಮಾವು ಏಕಕಾಲಕ್ಕೆ ಬರಲಿದೆ’ ಎಂದು ಅವರು ಹೇಳಿದರು.
‘ಅದಿತಿ’ ಸಿನಿಮಾದ ಟೀಸರ್:
ಈ ಚಿತ್ರದ ಎಲ್ಲ ಭಾಷೆಯ ಅವತರಣಿಕೆಗಳಿಗೆ ಮಹಿಳೆಯರೇ ಸಂಭಾಷಣೆ ಬರೆದಿದ್ದಾರೆ. ಕನ್ನಡದಲ್ಲಿ ಕುಮುದಹಳ್ಳಿ ಅರುಣ್‌ಮೂರ್ತಿ ಅವರ ಸಂಭಾಷಣೆ ಇರಲಿದೆ. ಗ್ಲಾಮರಸ್ ಹಾಡುಗಳಿಗೆ ಪ್ರಿಯಾ ಮಾಲಿ, ಚೇತನ ನಾಯಕ್ ಧ್ವನಿಯಾಗಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ರಮೇಶ್ ಕೃಷ್ಣ, ಕೃಷ್ಣ ಪ್ರಿಯದರ್ಶನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೊನೆ ಹಂತದ ಛಾಯಾಗ್ರಹಣವನ್ನು ವೆಂಕಟೇಶ್ ಆರ್. ಮಾಡಿದ್ದಾರೆ. ಸೋಲೋಮನ್ ಕೆ. ಜಾರ್ಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಬೆಂಗಳೂರು, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಉಪ ಚುನಾವಣೆ (Davanagere By Election) ಮುಗಿದರೂ ಸಹ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿನ (Congress Muslim Leaders) ಕಿಚ್ಚು ತಣ್ಣಗಾಗಿಲ್ಲ. ಬದಲಾಗಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೌದು…ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ದಾವಣಗೆರೆ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹಮದ್, ಅಬ್ದುಲ್ ಜಬ್ಬರ್ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರು ರಣದೀಪ್ ಸುರ್ಜೇವಾಲಗೆ ದೂರು ನೀಡಿದ್ದಾರೆ. ಇದರೊಂದಿಗೆ ಟಿಕೆಟ್ ವಿಚಾರವಾಗಿ ಮುಸ್ಲಿಂ ನಾಯಕರಲ್ಲಿ ಇದ್ದ ಭಿನ್ನಾಭಿಪ್ರಾಯ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಅದರಲ್ಲೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ತೀವ್ರ ಅಸಮಾಧಾನ ಇರುವುದು ಬಹಿರಂಗವಾದಂತಾಗಿದೆ.
ಜಮೀರ್ ಅಹ್ಮದ್ ವಿರುದ್ಧ ಗಂಭೀರ ಆರೋಪ
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಯಾಸಿನ್ ಖಾನ್ ಪಠಾಣ್ ಹಾಗೂ ಬಿಲ್ಕೀಸ್ ಬಾನು ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೆಲವೊಂದು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಚಿವ ಜಮೀರ್ ಏಕಚಕ್ರಾಧಿಪತ್ಯದ ವಿರುದ್ಧ ಸೆಡ್ಡು ಹೊಡೆದಿರೋ ಕೆಲ ಅಲ್ಪಸಂಖ್ಯಾತ ನಾಯಕರು, ದಾವಣಗೆರೆ ಬೈಎಲೆಕ್ಷನ್ನಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಿ ಅಂತಿದ್ದಾರೆ. ಕೆಲಸ ಮಾಡಿದವರ ಲೆಕ್ಕ ಇಡಿ ಅಂತಿದ್ದು, ಪ್ರಾರಂಭದಲ್ಲಿ ಬೈಲೆಕ್ಷನ್ನಿಂದ ದೂರ ಉಳಿದಿದ್ದ ಜಮೀರ್ ವಿರುದ್ಧ ಪರೋಕ್ಷವಾಗಿಯೇ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಜೋಡಿ ಗುಡುಗಿದೆ. ಹೌದು..ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಮರ್ಥ್ಗೆ ಒಪ್ಪಿಗೆ ನೀಡಿದ್ವಿ. ಆನಂತರ ಪಕ್ಷಕ್ಕೆ ಕೊಟ್ಟ ಮಾತಿನಂತೆ ನಾವು ಕೆಲಸ ಮಾಡಿದ್ದೇವೆ. ಆದ್ರೆ, ಕೆಲವರು ಕೆಲಸ ಮಾಡಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಪರೋಕ್ಷವಾಗಿಯೇ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಿದ್ದೇವೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಆದ್ರೆ ಪಟ್ಟಿಯಲ್ಲಿ ಸಚಿವ ಜಮೀರ್ ಹೆಸರು ಇಲ್ಲ. ವಿರೋಧ ಪಕ್ಷದವರ ಜೊತೆಗೂಡಿ ಪಕ್ಷದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಸೋಕೆ ಕೆಲ ಪಕ್ಷದ ಮುಖಂಡರೇ ಹುನ್ನಾರ ಮಾಡಿದ್ರು ಎಂದು ರಿಜ್ವಾನ್, ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.
ಜಮೀರ್ ಅಹಮ್ಮದ್ ಖಾನ್ ಕೈಕೊಟ್ಟಿದ್ದಕ್ಕೆ ಪರಿಸ್ಥಿತಿ ಕೈ ಮೀರಿದಾಗ ಸಾದಿಕ್ನನ್ನ ಮನವೊಲಿಸಲು ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ಗೆ ಜಬಾವ್ದಾರಿ ಕೊಡಲಾಗಿತ್ತು. ಸಿಎಂ, ಡಿಸಿಎಂ ಸೂಚನೆಯಂತೆಯೇ ಮುನಿಸು ಶಮನ ಮಾಡೋ ಕೆಲಸ ಇವರಿಬ್ಬರು ಮಾಡಿದ್ದರು. ಇದೀಗ ಜಮೀರ್ ವಿರುದ್ಧ ಕೆಲ ಮುಸ್ಲಿಂ ನಾಯಕರು ಸಿಡಿದೆದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಹೈಕಮಾಂಡ್ಗೆ ದೂರು ನೀಡಿದ್ದಾರೆ.
ತೆರೆಮರೆಯಲ್ಲಿದ್ದ ಮುಸ್ಲಿಂ ನಾಯಕರ ಗುದ್ದಾಟ ಬಯಲಿಗೆ
ದಾವಣಗೆರೆ ದಕ್ಷಿಣ ಟಿಕೆಟ್ ಹಂಚಿಕೆ ವೇಳೆ ಅಲ್ಪಸಂಖ್ಯಾತರ ಮಧ್ಯೆ ಭಿನ್ನಾಭಿಪ್ರಾಯ ಬಂದಿತ್ತು. ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡಿಸುತ್ತೇನೆಂದು ಜಮೀರ್ ಭರವಸೆ ಕೊಟ್ಟಿದ್ದರು. ಆ ವೇಳೆ ತಾನೇ ಅಖಂಡ ಕರ್ನಾಟಕದ ಮುಸ್ಲಿಂ ಅಧಿಪತಿ ಎಂಬಂತೆ ಜಮೀರ್ ಅಬ್ಬರಿಸಿದ್ದರು. ಆದ್ರೆ ಪ್ರಯತ್ನಕ್ಕೆ ಸಹಕಾರ ಸಿಗದಿದ್ದರಿಂದ ಮುಸ್ಲಿಂ ನಾಯಕರಿಗೆ ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ಸಿಗಲೇ ಇಲ್ಲ. ಹೀಗಾಗಿ ಟಿಕೆಟ್ ಕೊಡಿಸುತ್ತೇನೆಂದುಭರವಸೆ ಕೊಟ್ಟಿದ್ದ ಜಮೀರ್ ಅಂತರ ಕಾಯ್ದುಕೊಂಡ್ರು. ದಾವಣಗೆರೆ ದಕ್ಷಿಣದಿಂದ ದೂರ ಉಳಿದಿದ್ದು, ಇದು ಕೆಲ ಅಲ್ಪಸಂಖ್ಯಾತ ಮುಖಂಡರಿಗೆ ಸಿಟ್ಟು ತರಿಸಿತ್ತು. ಹೀಗೆ ತೆರೆಮರೆಯಲ್ಲೇ ನಡೆದಿದ್ದ ಮುಸ್ಲಿಂ ನಾಯಕರ ಗುದ್ದಾಟ ಈಗ ಬಹಿರಂಗವಾಗಿ ಹೊರಬಂದಂತಾಗಿದೆ.
ದಾವಣಗೆರೆ ಬಂದು ಹಿಂಬಾಗಿಲಿನಿಂದ ಹೋಗಿದ್ದ ಜಮಿರ್
ಟಿಕೆಟ್ ಘೋಷಣೆಯಾದ ಬಳಿಕ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ಕಡೆ ಮುಖ ಹಾಕಿಲ್ಲ. ಕೇರಳ ಚುನಾವಣೆ ನೆಪ ಮಾಡಿಕೊಂಡು ಅಲ್ಲಿಯೇ ಠಿಕಾಣಿ ಹೂಡಿದ್ದರು. ಇತ್ತ ಅಭಿಮಾನಿಗಳು ಹಾಗೂ ಮುಸ್ಲಿಂ ಕಾರ್ಯಕರ್ತರು ಜಮೀರ್ ಕರೆಯಿಸಿ ಎಂದು ಡಿಕೆಶಿ, ಸಿದ್ದರಾಮಯ್ಯ ಹೋದಲೆಲ್ಲ ಪಟ್ಟು ಹಿಡಿದಿದ್ದರು. ಕೊನೆಗೆ ಸಿಎಂ ಸೂಚನೆಯಂತೆ ಜಮೀರ್ ಕೇಳದಿಂದ ದಾವಣಗೆರೆಗೆ ಹಾರಿಬಂದಿದ್ದು, ಎಸ್ಎಸ್ ಮಲ್ಲಿಕಾರ್ಜುನ ಮನೆಯಲ್ಲಿ ಊಟ ಸವಿದು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹಿಂಬಾಗಿಲಿನಿಂದ ಹೋಗಿದ್ದು, ಮತ್ತೆ ದಾವಣಗೆರೆ ಕಡೆ ತಲೆ ಹಾಕಲೇ ಇಲ್ಲ. ಆದ್ರೆ, ದಾವಣಗೆರೆಯಲ್ಲಿ ಪ್ರಚಾರ ಮಾಡದೇ ನೇರವಾಗಿ ಬಾಗಲಕೋಟೆಯಲ್ಲಿ ಎರಡು ದಿನ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದು ಸಹ ಕೆಲ ನಾಯಕರ ಕಣ್ಣು ಕೆಂಪಾಗಿಸಿದೆ.
ರಿಸಲ್ಟ್ ಮೇಲೆ ನಿಂತಿದೆ ಮುಂದಿನ ಬೆಳವಣಿಗೆ
ಹೌದು….ಜಮೀರ್ ಅಹಮ್ಮದ್ ಖಾನ್ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎಂದು ಸ್ವತಃ ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಒಂದು ವೇಳೆ ಫಲಿತಾಂಶ ಪರವಾಗಿ ಬಂದರೆ ಅಸಮಾಧಾನ ಕೊಂಚ ತಣ್ಣಗಾಗುತ್ತೆ. ಒಂದು ವೇಳೆ ರಿಸಲ್ಟ್ ವ್ಯತರಿಕ್ತವಾಗಿ ಅಂದರೆ ಸಮರ್ಥ್ ಸೋತರೆ ಭಿನ್ನಮತ ಮತ್ತಷ್ಟು ಸ್ಫೋಟಗೊಳ್ಳಲಿದೆ. ಜಮೀರ್ ವಿರೋಧ ಮುಸ್ಲಿಂ ನಾಯಕರ ಮಾತ್ರವಲ್ಲ ಎಸ್ಎಸ್ ಮಲ್ಲಿಕಾರ್ಜುನ ಸೇರಿದಂತೆ ಹಲವು ಲಿಂಗಾಯರ ನಾಯಕರು ಸಹ ಜಮೀರ್ ಮೇಲೆ ಮುಗಿಬೀಳುವ ಸಾಧ್ಯತೆಗಳಿದ್ದು, ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಳ್ಳುವುದು ಗ್ಯಾರಂಟಿ.
ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಿದ್ದು, ಮುಸ್ಲಿಂ ನಾಯಕರ ನಡುವೆ ಎರಡು ಬಣಗಳು ಸೃಷ್ಟಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಐಪಿಎಲ್ 2026 (IPL 2026) ರ 16ನೇ ಪಂದ್ಯದಲ್ಲಿ ಎರಡು ಅಜೇಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡವನ್ನು ತನ್ನ ತವರು ಮೈದಾನದಲ್ಲಿ ಎದುರಿಸುತ್ತಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಆವೃತ್ತಿಯಲ್ಲಿ ಆಡಿದ ಸತತ 2 ಪಂದ್ಯಗಳನ್ನು ಗೆದ್ದಿದೆ. ಇತ್ತ ರಾಜಸ್ಥಾನ ಕೂಡ ಸತತ 3 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ, ಏಪ್ರಿಲ್ 10 ರ ಶುಕ್ರವಾರದಂದು ರಾಜಸ್ಥಾನ ಮತ್ತು ಬೆಂಗಳೂರಿನ ನಡುವೆ ಯಾವ ತಂಡವು ತಮ್ಮ ಗೆಲುವಿನ ಓಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ನೋಡುವುದು ಆಸಕ್ತದಾಯಕವಾಗಿರಲಿದೆ.
ಟಾಸ್ ಗೆದ್ದ ರಾಜಸ್ಥಾನ್
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆಗಳನ್ನು ಮಾಡಲಾಗಿದೆ. ರಾಜಸ್ಥಾನ್ ತಂಡದಲ್ಲಿ ತುಷಾರ್ ದೇಶಪಾಂಡೆ ಬದಲಿಗೆ ಬ್ರಿಜೆಶ್ ಬಂದಿದ್ದರೆ, ಇತ್ತ ಆರ್‌ಸಿಬಿ ತಂಡದಲ್ಲಿ ಜೆಕೋಬ್ ಡಫಿ ಬದಲಿಗೆ ಜೋಶ್ ಹೇಜಲ್‌ವುಡ್ ಆಡುತ್ತಿದ್ದಾರೆ.
ಹೆಡ್ ಟು ಹೆಡ್ ರೆಕಾರ್ಡ್
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ ಕೇವಲ 14 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಪ್ರಸ್ತುತ ಫಾರ್ಮ್ ಅನ್ನು ಆಧರಿಸಿ, ಎರಡೂ ತಂಡಗಳು ಮೇಲುಗೈ ಸಾಧಿಸಿರುವಂತೆ ತೋರುತ್ತದೆ.
ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 6 ಅಂಕಗಳನ್ನು ಹೊಂದಿರುವ ರಾಜಸ್ಥಾನ್ ತಂಡದ ನೆಟ್ ರನ್ ರೇಟ್ +2.403 ಆಗಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ +2.501 ನೆಟ್ ರನ್ ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದರೆ ಮತ್ತೊಂದೆಡೆ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ.
ಇಂದಿನ ಕಾಲದಲ್ಲಿ ಆರೋಗ್ಯ ತಪಾಸಣೆ (Health check-up)ಮಾಡಿಸಿಕೊಳ್ಳುವುದು ಬಹಳ ಸುಲಭ. ಅನೇಕ ಲ್ಯಾಬ್‌ಗಳು ಈಗ ಮನೆಬಾಗಿಲಿಗೇ ಬಂದು ಬ್ಲಡ್ ಸ್ಯಾಂಪಲ್ ಸಂಗ್ರಹಿಸುವ ಸೌಲಭ್ಯ ನೀಡುತ್ತಿವೆ. ಇದರಿಂದ ಹಲವರು ಲ್ಯಾಬ್‌ಗೆ ಹೋಗದೇ ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಸ್ಯಾಂಪಲ್ ಕಲೆಕ್ಷನ್ ಉತ್ತಮವೇ ಅಥವಾ ಲ್ಯಾಬ್‌ಗೆ ಹೋಗಿ ಪರೀಕ್ಷೆ ಮಾಡಿಸುವುದೇ ಉತ್ತಮವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಹಾಗಾದರೆ ಮನೆ ಸ್ಯಾಂಪಲ್ ಕಲೆಕ್ಷನ ಮಾಡಿಸುವುದರಿಂದ ಆಗುವ ಲಾಭಗಳೇನು, ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳೇನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದರಿಂದಾಗುವ ಲಾಭಗಳು:
ಸಾಮಾನ್ಯವಾಗಿ ಮನೆ ಸ್ಯಾಂಪಲ್ ಕಲೆಕ್ಷನ್‌ನ ಮುಖ್ಯ ಲಾಭವೆಂದರೆ ಸಮಯ ಉಳಿವು. ಲ್ಯಾಬ್ ದೂರದಲ್ಲಿರುವವರು, ಹಿರಿಯರು ಅಥವಾ ಹೊರಗೆ ಹೋಗಲು ಅಸಾಧ್ಯವಾಗಿರುವವರು ಈ ಸೇವೆಯನ್ನು ಸುಲಭವಾಗಿ ಬಳಸಬಹುದು. ಪ್ರಯಾಣದ ತೊಂದರೆ, ದೀರ್ಘ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪುತ್ತದೆ. ಆದರೆ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರು ಸರಿಯಾಗಿ ತರಬೇತಿ ಪಡೆದವರಾಗಿರಬೇಕು ಮತ್ತು ಲ್ಯಾಬ್ ಮಾನ್ಯತೆ ಪಡೆದಿರಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗುತ್ತದೆ.
ಲ್ಯಾಬ್‌ಗೆ ಹೋಗಿ ಸ್ಯಾಂಪಲ್ ನೀಡುವುದು ಹೆಚ್ಚು ವಿಶ್ವಾಸಾರ್ಹವಾಗಿದೆ. ಲ್ಯಾಬ್‌ನಲ್ಲಿ ಎಲ್ಲಾ ಅಗತ್ಯ ಯಂತ್ರೋಪಕರಣಗಳು ಮತ್ತು ತಜ್ಞರು ಇರುವುದರಿಂದ ಸ್ಯಾಂಪಲ್ ಗುಣಮಟ್ಟ ಉತ್ತಮವಾಗಿರುತ್ತದೆ. ಸ್ಯಾಂಪಲ್ ತಕ್ಷಣವೇ ಪ್ರಾಸೆಸ್ ಆಗುವುದರಿಂದ ಫಲಿತಾಂಶಗಳು ಹೆಚ್ಚು ನಿಖರವಾಗಿರುವ ಸಾಧ್ಯತೆ ಇದೆ. ಮನೆಯಿಂದ ಲ್ಯಾಬ್‌ಗೆ ಸ್ಯಾಂಪಲ್ ಸಾಗಿಸುವಾಗ ತಾಪಮಾನ ನಿಯಂತ್ರಣ ಮತ್ತು ಸರಿಯಾದ ಹ್ಯಾಂಡ್ಲಿಂಗ್ ಸಮಸ್ಯೆಗಳು ಎದುರಾಗಬಹುದು. ಆದರೆ ಲ್ಯಾಬ್‌ನಲ್ಲಿ ಈ ಸಮಸ್ಯೆಗಳು ಕಡಿಮೆ.
ಯಾವುದು ಉತ್ತಮ?
ಸಾಮಾನ್ಯ ಮತ್ತು ರೂಟೀನ್ ಟೆಸ್ಟ್‌ಗಳಿಗೆ ಮನೆ ಸ್ಯಾಂಪಲ್ ಕಲೆಕ್ಷನ್ ಸೂಕ್ತವಾಗಬಹುದು. ಆದರೆ HIV, ಇನ್ಫೆಕ್ಷನ್, ಥೈರಾಯ್ಡ್ ಅಥವಾ ಹೃದಯ ಸಂಬಂಧಿತ ಪ್ರಮುಖ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಹೋಗುವುದು ಉತ್ತಮ. ಅಂತಿಮವಾಗಿ, ಯಾವ ಪರೀಕ್ಷೆ ಮಾಡಿಸುತ್ತೀರಿ ಎಂಬುದರ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ. ಆದ್ರಂಗ್ ವಿಶ್ವಾಸಾರ್ಹ ಲ್ಯಾಬ್ ಆಯ್ಕೆಮಾಡಿ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರ ಸ್ವಚ್ಛತೆ ಗಮನಿಸುವುದನ್ನು ಮರೆಯಬೇಡಿ.
ನವದೆಹಲಿ, ಏಪ್ರಿಲ್ 10: ಆನ್ಲೈನ್ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಡಿಜಿಟಲ್ ಪೇಮೆಂಟ್ ಸಿಸ್ಟಂನಲ್ಲಿ (Digital payment system) ಸರ್ಕಾರ ಒಂದಷ್ಟು ಮಾರ್ಪಾಡು ಮಾಡಲು ಹೊರಟಿದೆ. ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಅಧಿಕ ಮೌಲ್ಯದ ವಹಿವಾಟುಗಳಿಗೆ ಒಂದು ಗಂಟೆ ವಿಳಂಬ ಪಾವತಿ ವ್ಯವಸ್ಥೆ ತರುವ ಪ್ರಸ್ತಾಪವ ಆರ್ಬಿಐ ಮುಂದಿದೆ ಎಂದು ವರದಿಗಳು ಹೇಳುತ್ತಿವೆ. ಈ ಪ್ರಸ್ತಾಪದ ಪ್ರಕಾರ ಯುಪಿಐ ಮತ್ತು ಐಎಂಪಿಎಸ್ ಇತ್ಯಾದಿ ಮೂಲಕ ಮಾಡಲಾಗುವ 10,000 ರೂಗೂ ಅಧಿಕ ಮೊತ್ತದ ಪೇಮೆಂಟ್ಗಳು ರಿಯಲ್ ಟೈಮ್ನಲ್ಲಿ ಸಂದಾಯವಾಗುವುದಿಲ್ಲ.
ಗಮನಿಸಬೇಕಾದ ಸಂಗತಿ ಎಂದರೆ ಈ ನಿರ್ಬಂಧವು ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಪೇಮೆಂಟ್ಗೆ ಅನ್ವಯ ಆಗುತ್ತದೆ. ವರ್ತಕರಿಗೆ ಮಾಡಲಾಗುವ ಪೇಮೆಂಟ್ಗಳು ಮಾಮೂಲಿ ರೀತಿಯಲ್ಲಿ ರಿಯಲ್ಟೈಮ್ನಲ್ಲೇ ಆಗುತ್ತವೆ.
10,000 ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ಒಂದು ಗಂಟೆಯ ಕೂಲಿಂಗ್ ಪೀರಿಯಡ್ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಆ ಹಣವು ತತ್ಕ್ಷಣವೇ ವ್ಯಕ್ತಿಯ ಖಾತೆಗೆ ರವಾನೆಯಾಗುವುದಿಲ್ಲ. ಆನ್ಲೈನ್ನಲ್ಲಿ ಕೆಲವರು ಲಿಂಕ್ಗಳನ್ನು ಕಳುಹಿಸಿ ಅಕ್ರಮವಾಗಿ ಪೇಮೆಂಟ್ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹಲವು ಬೆಳಕಿಗೆ ಬರುತ್ತಿವೆ. ಹಾಗೆಯೇ, ಯುಪಿಐ ಗ್ರಾಹಕರು ತಪ್ಪಾಗಿ ಹಣ ಕಳುಹಿಸುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಆರ್ಬಿಐ ಈ ರೀತಿಯ ಕ್ರಮ ತೆಗೆದುಕೊಂಡಿದೆ.
ಪರಿಚಿತ ವ್ಯಕ್ತಿಗಳ ವೈಟ್ಲಿಸ್ಟ್
ಆರ್ಬಿಐ ಬಳಿ ಇನ್ನೊಂದು ಪ್ರಸ್ತಾಪ ಇದೆ. ಹಣ ಕಳುಹಿಸಲಾಗುವ ವ್ಯಕ್ತಿಗಳು ಅಪರಿಚಿತರಾಗಿದ್ದರೆ ರಿಯಲ್ಟೈಮ್ನಲ್ಲಿ ಪೇಮೆಂಟ್ ಮಾಡುವುದು ಅಪಾಯ ಆಗಬಹುದು. ಆದರೆ, ಪರಿಚಿತರಾಗಿದ್ದರೆ? ಆರ್ಬಿಐ ಇದಕ್ಕೊಂದು ಪರಿಹಾರ ಹುಡುಕಿದೆ. ನೆಟ್ಬ್ಯಾಂಕಿಂಗ್ನಲ್ಲಿ ಇರಲಾಗುವಂತೆ ಪರಿಚಿತ ಅಥವಾ ಖಾತ್ರಿ ಇರುವ ವ್ಯಕ್ತಿಗಳಿಗೆ ಪೂರ್ವಾನುಮತಿ ಕೊಡಲು ವೈಟ್ಲಿಸ್ಟಿಂಗ್ನಂತಹ ವ್ಯವಸ್ಥೆ ಮಾಡುವುದು ಆರ್ಬಿಐನ ಉದ್ದೇಶವಾಗಿದೆ.
10,000ಕ್ಕೂ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್ಗಳ ಮೇಲೆ ಆರ್ಬಿಐ ನಿರ್ಬಂಧ ಹಾಕಲು ಕಾರಣವಿದೆ. ಹೆಚ್ಚಿನ ಫ್ರಾಡ್ ಕೇಸ್ಗಳು ಈ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಸಂಬಂಧಿಸಿದ್ದೇ ಆಗಿವೆ. ಈ ಫ್ರಾಡ್ಗಳಿಗೆ ಜನರು ಕಳೆದುಕೊಂಡಿರುವ ಒಟ್ಟೂ ಹಣದ ಶೇ. 98.5ರಷ್ಟು ಮೊತ್ತವು ಈ ಕೆಟಗರಿಯದ್ದಾಗಿದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಯುಪಿಐ, ಐಎಂಪಿಎಸ್ ಪೇಮೆಂಟ್ ನಿಯಮವನ್ನು ಆರ್ಬಿಐ ಬಿಗಿಗೊಳಿಸಲು ಮುಂದಾಗಿದೆ.
ಹಾವೇರಿ, ಏಪ್ರಿಲ್ 10: ಅತ್ತ ಮಧ್ಯ ಪ್ರಾಚ್ಯದಲ್ಲಿ ಕದನವಿರಾಮ ಘೋಷಣೆಯಾಗಿದ್ದರೂ, ಇತ್ತ ಕರುನಾಡಿನಲ್ಲಿ ಮಾತ್ರ ಇನ್ನೂ ಗ್ಯಾಸ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸೌದೆ ಒಲೆಯಲ್ಲೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಅಡುಗೆ ಸಿಲಿಂಡರ್ಗಾಗಿ (Gas Cylinder)ಹಾವೇರಿಯಲ್ಲಿ ಗಲಾಟೆಯೇ (Fight) ನಡೆದಿದೆ. ಇ-ಕೆವೈಸಿ ಮಾಡಿಸಲು ಬಂದ ಗ್ರಾಹಕರ ಮೇಲೆ ಹಲ್ಲೆ HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಹುಕ್ಕೇರಿಮಠದ ಎದುರಿರುವ HP ಗ್ಯಾಸ್ ಕಚೇರಿಯಲ್ಲಿ ನಡೆದಿದೆ.
ನಡೆದಿದ್ದೇನು?
ಬ್ಲಾಕ್ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ, ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕನಕಾಪುರ ಗ್ರಾಮದ ಮಾಲತೇಶ್ ಗಾಜಿ ಮೇಲೆ ಮ್ಯಾನೇಜರ್ ಅಲೀಂ ಮತ್ತು ಗಣೇಶ ಸೇರಿ ನಾಲ್ವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಮ್ಯಾನೇಜರ್ ಅಲೀಂ ಮತ್ತು ಗಾಯಾಳು ಗ್ರಾಹಕ ಮಾಲತೇಶ್ರನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಾವು ಹಲ್ಲೆ ಮಾಡಿಲ್ಲ ಎಂದ ಸಿಬ್ಬಂದಿ
ಇನ್ನು ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಆದರೆ ನಾವು ಹಲ್ಲೆ ಮಾಡಿಲ್ಲ, ಅವರೇ ಹಲ್ಲೆ ಮಾಡಿ ನಮ್ಮ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದು HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಸಿಸಿಟಿವಿ ಪರಿಶೀಲನೆ ಮಾಡುವಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
HP ಗ್ಯಾಸ್ ಮ್ಯಾನೇಜರ್ ಅಲೀಂ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ HP ಗ್ಯಾಸ್ ಮ್ಯಾನೇಜರ್ ಅಲೀಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಚೇರಿಯಲ್ಲಿ ಕ್ಯೂ ಇತ್ತು. ಗ್ರಾಹಕ ಕ್ಯೂ ಬಿಟ್ಟು ನಮ್ಮ ಬಳಿ ಬಂದು ಇ-ಕೆವೈಸಿ ಮಾಡಿ ಎಂದಿದ್ದಾರೆ. ಕಚೇರಿಯಲ್ಲಿ ಫ್ಯಾನ್ ಇಲ್ಲ, ಸಿಲಿಂಡರ್ ಇಲ್ಲ ಹೇಗೆ ಕ್ಯೂ ನಿಲ್ಲುವುದು ಅಂತಾ ಬಂದು ಜಗಳ ಮಾಡಿದ್ದಾರೆ. ನಮ್ಮ ಮೇಲೆ ಗ್ರಾಹಕನೇ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಜಿಲ್ಲಾಸ್ಪತ್ರೆ ಮುಂದೆ ಕಚೇರಿಯ ಸಿಬ್ಬಂದಿ ಮತ್ತು ಗ್ರಾಹಕರ ಕಡೆಯ ಜನರು ಜಮಾವಣೆಗೊಂಡಿದ್ದಾರೆ. ದೂರು-ಪ್ರತಿದೂರು ಆಗುವ ಸಾಧ್ಯತೆ ಕೂಡ ಇದೆ.
ಮಥುರಾ, ಏಪ್ರಿಲ್ 10: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಶೃಂಗಾರ್ ಘಾಟ್ ಬಳಿ ಯಮುನಾ ನದಿಯಲ್ಲಿ (Yamuna River) ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿದ ಪರಿಣಾಮವಾಗಿ 10 ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಪಂಜಾಬ್‌ನ ಲುಧಿಯಾನದ ಸುಮಾರು 25 ಭಕ್ತರು ಪ್ರಯಾಣಿಸುತ್ತಿದ್ದ ಬೋಟ್ ಮಗುಚಿ ಬಿದ್ದಿದೆ. ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಈ ಭಕ್ತರು ಗಂಗಾ ನದಿಯ ಮೂಲಕ ಬೋಟ್ನಲ್ಲಿ ಸಾಗುತ್ತಿದ್ದರು.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮಥುರಾ ಜಿಲ್ಲೆಯಲ್ಲಿ ನಡೆದ ದೋಣಿ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ. “ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಭಗವಾನ್ ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ