‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು – Kannada News | Ravi Mohan Cheers for CM Vijay starrer Jana Nayagan in Theatre TN Minister Cries

ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ವಿಮರ್ಶಕರಿಂದ ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಹಾಗೂ ವಿಜಯ್ ಅಭಿಮಾನಿಗಳು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ಖ್ಯಾತ ನಟ ರವಿ ಮೋಹನ್ (Ravi Mohan) ಸಹ ಥಿಯೇಟರ್‌ಗೆ ತೆರಳಿ ಸಿನಿಮಾ ವೀಕ್ಷಿಸಿದ್ದು, ವಿಜಯ್ ಅವರ ಎಂಟ್ರಿ ಸೀನ್‌ಗೆ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.

ಚೆನ್ನೈನ ಖ್ಯಾತ ವೆಟ್ರಿ ಥಿಯೇಟರ್​ನ ಕೊನೆಯ ಸಾಲಿನಲ್ಲಿ ಕುಳಿತು ರವಿ ಮೋಹನ್ ಅವರು ಸಾರ್ವಜನಿಕರೊಂದಿಗೆ ‘ಜನ ನಾಯಗನ್’ ವೀಕ್ಷಿಸಿದ್ದಾರೆ. ವಿಜಯ್ ಅವರ ಗ್ರ್ಯಾಂಡ್ ಎಂಟ್ರಿ ದೃಶ್ಯ ಬಂದಾಗ ರವಿ ಮೋಹನ್ ಎದ್ದು ನಿಂತು ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ಖುಷಿಪಟ್ಟ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ಮುಗಿದ ಬಳಿಕ ಥಿಯೇಟರ್ ಹೊರಗೆ ಕಾದಿದ್ದ ಅಭಿಮಾನಿಗಳೊಂದಿಗೆ ಅವರು ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ.

ಥಿಯೇಟರ್‌ನಲ್ಲೇ ಕಣ್ಣೀರಿಟ್ಟ ತಮಿಳುನಾಡು ಸಚಿವ:

ವಿಜಯ್ ಅವರ ರಾಜಕೀಯ ಪ್ರವೇಶದ ಬಳಿಕ ಬಿಡುಗಡೆ ಆಗಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳಿಗೆ ಇದು ಅತ್ಯಂತ ಭಾವುಕ ಕ್ಷಣವಾಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ, ತಮಿಳುನಾಡು ಕಾರ್ಮಿಕ ಕ್ಷೇಮಾಭಿವೃದ್ಧಿ ಸಚಿವ ಮೊಹಮ್ಮದ್ ಪರ್ವೇಜ್ ಅವರು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಾ ಕಣ್ಣೀರು ಹಾಕಿದ್ದಾರೆ.

ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸಚಿವರು ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ‘ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಮತ್ತು ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವುದರಿಂದ ಈ ಸಿನಿಮಾ ವೀಕ್ಷಣೆ ತಮಗೆ ಅತ್ಯಂತ ಭಾವುಕ ಅನುಭವ ನೀಡಿತು’ ಎಂದು ಚಿತ್ರ ವೀಕ್ಷಣೆಯ ಬಳಿಕ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

‘ಜನ ನಾಯಗನ್’ ಕಥೆ ಏನು?

ಎಚ್. ವಿನೋದ್ ನಿರ್ದೇಶನದ ಹಾಗೂ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತೀರಿಹೋದ ತಮ್ಮ ಸ್ನೇಹಿತನ ಮಗಳನ್ನು ಸಾಕಿ ಬೆಳೆಸಿ, ಆಕೆಯ ಬಾಲ್ಯದ ನೋವುಗಳನ್ನು ಮರೆಸಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲು ಪಡುವ ಶ್ರಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಭ್ರಷ್ಟರ ವಿರುದ್ಧ ನಡೆಸುವ ಹೋರಾಟವೇ ಈ ಚಿತ್ರದ ಮುಖ್ಯ ಕಥಾವಸ್ತುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ZIM: ಸರಣಿ ನಿರ್ಧಾರಕ ಪಂದ್ಯಕ್ಕೆ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? – Kannada News | IND vs ZIM 2nd T20 Preview: Pitch Report, Head to Head and India’s Probable XI

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ಜಿಂಬಾಬ್ವೆಯನ್ನು (India vs Zimbabwe) 7 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಶ್ರೇಯಸ್ ಅಯ್ಯರ್ (Shreyas Iyer) ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಮೊದಲ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಯುವ ಆಟಗಾರರಿಗೆ ಪ್ಲೇಯಿಂಗ್ 11 ರಲ್ಲಿ ಅವಕಾಶ ನೀಡಿದ್ದರು. ಅಶೋಕ್ ಶರ್ಮಾ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಮಯಾಂಕ್ ಯಾದವ್ ಎರಡು ವರ್ಷಗಳ ನಂತರ ತಂಡಕ್ಕೆ ಮರಳಿದ್ದರು. ಮಯಾಂಕ್ ಸಿಕ್ಕ ಅವಕಾಶದಲ್ಲಿ ಮಿಂಚಿದರೆ, ಅಶೋಕ್​ ಶರ್ಮಾಗೆ ಉತ್ತಮ ಆರಂಭ ಸಿಗಲಿಲ್ಲ. ಇತ್ತ ಅಭಿಷೇಕ್ ಶರ್ಮಾ ಕೂಡ ಮೊದಲ ಪಂದ್ಯದಲ್ಲಿ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಎರಡನೇ ಪಂದ್ಯದಿಂದ ಇವರಿಬ್ಬರನ್ನು ಹೊರಗಿಡಲಾಗುತ್ತಾ ಅಥವಾ ಅದೇ ತಂಡವನ್ನು ಕಣಕ್ಕಿಳಿಸಲಾಗುತ್ತಾ ಎಂಬುದು ಪ್ರಶ್ನೆ.

ಅಶೋಕ್ ಶರ್ಮಾಗೆ ಮತ್ತೊಂದು ಅವಕಾಶ

ಎರಡನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ತೀರ ಕಡಿಮೆ. ಏಕೆಂದರೆ ಗೆಲುವಿನ ಸಂಯೋಜನೆಯನ್ನು ಯಾರೂ ಕೂಡ ಬದಲಿಸಲು ಹೋಗುವುದಿಲ್ಲ. ಆದಾಗ್ಯೂ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಅಶೋಕ್ ಶರ್ಮಾ ಚೊಚ್ಚಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ನಾಲ್ಕು ಓವರ್‌ಗಳಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟರಾದರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಆದಾಗ್ಯೂ ಅವರಿಗೆ ಎರಡನೇ ಪಂದ್ಯದಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು.

ಅಭಿಷೇಕ್ ಬದಲಿಗೆ ಪ್ರಭ್‌ಸಿಮ್ರಾನ್?

ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ 1 ಬದಲಾವಣೆಯಾಗಬಹುದು. ಅಭಿಷೇಕ್ ಶರ್ಮಾ ಇತ್ತೀಚೆಗೆ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ವಿಶ್ವಕಪ್‌ನಲ್ಲಿ ಅವರ ಪ್ರದರ್ಶನವೂ ಕಳಪೆಯಾಗಿತ್ತು. ಅವರು ತಮ್ಮ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 73 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಮೊದಲ ಟಿ20ಯಲ್ಲಿ 8 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಹೀಗಾಗಿ ಅಭಿಷೇಕ್ ಬದಲಿಗೆ ಪ್ರಭ್‌ಸಿಮ್ರಾನ್‌ಗೆ ಅವಕಾಶ ನೀಡಬಹುದು. ಇದು ಸಾಧ್ಯವಾದರೆ ವೈಭವ್ ಮತ್ತು ಪ್ರಭ್‌ಸಿಮ್ರಾನ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಉಳಿದಂತೆ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ಪಿಚ್ ವರದಿ

ಹರಾರೆಯಲ್ಲಿರುವ ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಇಬ್ಬರಿಗೂ ಅನುಕೂಲಕರವಾಗಿದೆ. ಮೊದಲ ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ಬೌನ್ಸ್ ಪಡೆದರು. ಮಾಯಾಂಕ್ ಯಾದವ್ ಅವರ ಬೌಲಿಂಗ್‌ನಿಂದ ವಿಕೆಟ್ ಕೀಪಿಂಗ್ ಮಾಡುವಾಗ ಇಶಾನ್ ಕಿಶನ್ ಕಷ್ಟಪಟ್ಟು ಕೆಲಸ ಮಾಡಬೇಕಾಯಿತು. ಆದ್ದರಿಂದ, ಈ ಪಿಚ್ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಈ ಪಿಚ್‌ನಲ್ಲಿ 170 ಕ್ಕಿಂತ ಹೆಚ್ಚಿನ ಸ್ಕೋರ್ ಗುರಿ ಕಲೆಹಾಕುವುದು ಕಷ್ಟ.

IND vs ZIM: ಭಾರತ- ಜಿಂಬಾಬ್ವೆ ನಡುವೆ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?

ಹರಾರೆಯಲ್ಲಿ ಎರಡೂ ತಂಡಗಳ ದಾಖಲೆ

ಇಲ್ಲಿಯವರೆಗೆ, ಭಾರತ ಮತ್ತು ಜಿಂಬಾಬ್ವೆ ನಡುವೆ ಹರಾರೆ ಮೈದಾನದಲ್ಲಿ 13 ಪಂದ್ಯಗಳು ನಡೆದಿವೆ. ಭಾರತ ಈ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 3 ಪಂದ್ಯಗಳನ್ನು ಗೆದ್ದಿದೆ. ಭಾರತ ಕಳೆದ ಐದು ಪಂದ್ಯಗಳನ್ನು ಸುಲಭವಾಗಿ ಗೆದ್ದಿದೆ. ಭಾರತ ಈಗ ಎರಡನೇ ಟಿ20ಐ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದೆ.

ಎರಡನೇ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್​ 11: ಅಭಿಷೇಕ್ ಶರ್ಮಾ/ ಪ್ರಭ್‌ಸಿಮ್ರಾನ್‌ ಸಿಂಗ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರಾವಳಿಯಲ್ಲಿ ವರುಣನ ಆರ್ಭಟ: ಜು 25ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ! – Kannada News | Heavy Rain: Holiday Declared for Schools and Colleges in Dakshina Kannada, Udupi Tomorrow

ಪ್ರಾತಿನಿಧಿಕ ಚಿತ್ರImage Credit source: Getty images

ಮಂಗಳೂರು, ಜುಲೈ 24: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ (rain) ಕೊಂಚ ಸಡಿಲಗೊಂಡಿದೆ. ಆದರೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಅಂದರೆ ಜುಲೈ 25ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ (Holiday) ಘೋಷಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ನಾಳೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ (ಪಿಯುಸಿ) ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಇಂದು ಕೂಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಇದನ್ನೂ ಓದಿ: Karnataka Weather Forecast: ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್

ಅದೇ ರೀತಿಯಾಗಿ ಮಳೆ ಹೆಚ್ಚಾಗುತ್ತಿರುವ ಕಾರಣ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೂ ನಾಳೆ ರಜೆ ನೀಡಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ್ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯ ಮಟ್ಟದಲ್ಲೇ ಇದೆ ಕರಾವಳಿಯ ಮಳೆ

ಇನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಇಂದಿನ ಅಂಕಿ-ಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಆಗಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡದಲ್ಲಿ 38.3 ಮಿ.ಮೀ (ಸರಾಸರಿ ವಾಡಿಕೆ 37.4 ಮಿ.ಮೀ) ಹಾಗೂ ಉಡುಪಿಯಲ್ಲಿ 48.0 ಮಿ.ಮೀ (ಸರಾಸರಿ ವಾಡಿಕೆ 47.8 ಮಿ.ಮೀ) ಮಳೆ ದಾಖಲಾಗಿದ್ದು, ಎರಡೂ ಕಡೆ ವರುಣನ ಆರ್ಭಟ ಸದ್ಯಕ್ಕೆ ಸಹಜ ಸ್ಥಿತಿಯಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಶ್ರೀರಾಮನ ಪಾತ್ರ ಮಾಡಲು ಭಯ, ಅನುಮಾನ ಇತ್ತು’: ವಿವರಿಸಿದ ರಣಬೀರ್ ಕಪೂರ್ – Kannada News | Actor Ranbir Kapoor felt fear playing Lord Rama in Ramayana movie Comic Con

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ನಿರ್ದೇಶಕ ನಿತೀಶ್ ತಿವಾರಿ, ನಟರಾದ ಯಶ್, ರಣಬೀರ್ ಕಪೂರ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (San Diego Comic-Con) ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಶ್ರೀರಾಮನ ಪಾತ್ರ ನಿರ್ವಹಿಸುವ ಬಗ್ಗೆ ಮಾತನಾಡಿದ ರಣಬೀರ್ ಕಪೂರ್ (Ranbir Kapoor), ಮೊದಲ ಬಾರಿಗೆ ಈ ಅವಕಾಶ ಬಂದಾಗ ತಮ್ಮಲ್ಲಿ ಮೂಡಿದ್ದ ಭಯ ಮತ್ತು ಅನುಮಾನಗಳನ್ನು ಹಂಚಿಕೊಂಡಿದ್ದಾರೆ.

‘ಬಹಳಷ್ಟು ಭಯ ಮತ್ತು ಗೊಂದಲಗಳಿದ್ದವು’

‘ಈ ಸಿನಿಮಾದ ಆಫರ್ ನನ್ನ ಬಳಿ ಬಂದಾಗ ನನಗೆ ತುಂಬಾ ಭಯ ಮತ್ತು ಅನುಮಾನಗಳಿದ್ದವು. ನನ್ನಿಂದ ಇದು ಸಾಧ್ಯವೇ? ನಾನು ಈ ಪಾತ್ರಕ್ಕೆ ಅರ್ಹನೇ ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಆದರೆ, ಆ ಅನುಮಾನಗಳು ಶೀಘ್ರದಲ್ಲೇ ಧನ್ಯತಾ ಭಾವವಾಗಿ ಬದಲಾದವು. ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ, ಆಶೀರ್ವಾದ ಹಾಗೂ ನೈತಿಕ ಜವಾಬ್ದಾರಿ ಎಂದು ಭಾವಿಸಿದೆ. ರಾಮಾಯಣವು ನಮ್ಮ ಪ್ರಜ್ಞೆಯಲ್ಲೇ ಬೆರೆತುಹೋಗಿದೆ. 4000ಕ್ಕೂ ಹೆಚ್ಚು ವರ್ಷಗಳಿಂದ ಲಕ್ಷಾಂತರ ಜನರ ಧರ್ಮ ಮತ್ತು ಧೈರ್ಯದ ಸಂಕೇತವಾಗಿರುವ ಶ್ರೀರಾಮನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಪ್ರತಿನಿಧಿಸುವುದು ಅತ್ಯಂತ ಸವಾಲಿನ ಕೆಲಸ’ ಎಂದು ರಣಬೀರ್ ಹೇಳಿದ್ದಾರೆ.

ಶ್ರೀರಾಮನ ಪಾತ್ರವನ್ನು ಪೂರ್ಣಗೊಳಿಸಲು ಪರಿಪೂರ್ಣತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ಮತ್ತು ನಂಬಿಕೆ ಮುಖ್ಯ ಎಂಬುದನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ರಣಬೀರ್ ತಿಳಿಸಿದರು. ತೆರೆಮೇಲೆ ಈ ಪಾತ್ರವನ್ನು ನೋಡಲು ರಣಬೀರ್ ಕಪೂರ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ರಣಬೀರ್ ಬಗ್ಗೆ ನಟ ಯಶ್ ಹೇಳಿದ್ದೇನು?

ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅವರು ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರ ಆಯ್ಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ನಾನು ಶುದ್ಧವಾಗಿದ್ದೆ’: ಸಾಯಿ ಪಲ್ಲವಿ

‘ಈ ಪ್ರಪಂಚದಲ್ಲಿ ಯಾರೂ ಬಂದು ನನ್ನಲ್ಲಿ ಶ್ರೀರಾಮನ ಪಾತ್ರ ಮಾಡಲು ಬೇಕಾದ ಎಲ್ಲಾ ಸದ್ಗುಣಗಳಿವೆ ಎಂದು ಹೇಳಲು ಸಾಧ್ಯವಿಲ್ಲ. ರಣಬೀರ್ ಕೂಡ ಅದೇ ಮಾತು ಹೇಳಿರುವುದು ಅವರ ವಿನಮ್ರತೆಯನ್ನು ತೋರಿಸುತ್ತದೆ. ಅವರು ಅದ್ಭುತ ನಟ. ಶ್ರೀರಾಮನ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅವರು ಈ ಪಾತ್ರಕ್ಕಾಗಿ ಪಟ್ಟಿರುವ ಶ್ರಮಕ್ಕೆ ನನ್ನ ಕಡೆಯಿಂದ ದೊಡ್ಡ ಗೌರವವಿದೆ’ ಎಂದು ಯಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧೂಮಪಾನದಿಂದ ಶ್ವಾಸಕೋಶ ಮಾತ್ರವಲ್ಲ, ಮೂಳೆಗಳು ಬಲಹೀನವಾಗಿ ಫ್ರ್ಯಾಕ್ಚರ್ ಅಪಾಯ ಹೆಚ್ಚಾಗುತ್ತೆ! – Kannada News | Smoking Weakens Your Bones Too, Says Dr. Surendra Kamath

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಹೆಚ್ಚಿನವರು ಧೂಮಪಾನದಿಂದ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಮಾತ್ರ ಉಂಟಾಗುತ್ತವೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ, ಧೂಮಪಾನವು ಮೂಳೆಗಳ ಆರೋಗ್ಯ (Bone Health) ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ದೀರ್ಘಕಾಲ ಧೂಮಪಾನ ಮಾಡುವವರಲ್ಲಿ ಆಸ್ಟಿಯೋಪೊರೋಸಿಸ್ (Osteoporosis), ಮೂಳೆ ಮುರಿತ (Fracture), ಮೂಳೆಗಳು ತಡವಾಗಿ ಜೋಡಣೆಯಾಗುವುದು (Delayed Bone Healing) ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ. ಸುರೇಂದ್ರ ಕಾಮತ್ ಅವರ ಪ್ರಕಾರ, ತಂಬಾಕು ಹೊಗೆಯಲ್ಲಿ 7,000ಕ್ಕೂ ಹೆಚ್ಚು ರಾಸಾಯನಿಕಗಳು ಇದ್ದು, ಅವುಗಳಲ್ಲಿ ಅನೇಕವು ದೇಹಕ್ಕೆ ವಿಷಕಾರಿಯಾಗಿವೆ. ಇವುಗಳು ಹೃದಯ, ಶ್ವಾಸಕೋಶ ಮತ್ತು ರಕ್ತನಾಳಗಳಷ್ಟೇ ಅಲ್ಲದೆ, ಮೂಳೆಗಳ ಬೆಳವಣಿಗೆ ಮತ್ತು ಬಲವನ್ನೂ ದುರ್ಬಲಗೊಳಿಸುತ್ತವೆ.

ಧೂಮಪಾನದಿಂದ ಮೂಳೆಗಳಿಗೆ ಹೇಗೆ ಹಾನಿಯಾಗುತ್ತದೆ?

ಧೂಮಪಾನವು ಮೂಳೆ ರಚನೆ ಮತ್ತು ಮೂಳೆ ಕ್ಷಯದ ನಡುವಿನ ಸಮತೋಲನವನ್ನು ಹಾಳು ಮಾಡುತ್ತದೆ. ಪರಿಣಾಮವಾಗಿ ಮೂಳೆ ಖನಿಜ ಸಾಂದ್ರತೆ (Bone Mineral Density – BMD) ಕಡಿಮೆಯಾಗುತ್ತದೆ ಮತ್ತು ಆಸ್ಟಿಯೋಪೊರೋಸಿಸ್ ಅಪಾಯ ಹೆಚ್ಚುತ್ತದೆ.

ಮೂಳೆ ರಚನೆ ಕಡಿಮೆಯಾಗುತ್ತದೆ: ನಿಕೋಟಿನ್ (Nicotine) ಎಂಬ ರಾಸಾಯನಿಕವು ಹೊಸ ಮೂಳೆಗಳನ್ನು ರಚನೆ ಆಸ್ಟಿಯೋಬ್ಲಾಸ್ಟ್ (Osteoblast) ಕೋಶಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಇದರಿಂದ ಹೊಸ ಮೂಳೆಗಳ ಬೆಳವಣಿಗೆ ನಿಧಾನವಾಗುತ್ತದೆ.

ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ: ಧೂಮಪಾನ ಮಾಡುವವರಲ್ಲಿ ದೇಹವು ಆಹಾರದಿಂದ ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಮೂಳೆಗಳು ಕ್ರಮೇಣ ದುರ್ಬಲ ಅಥವಾ ಬಲಹೀನಗೊಳ್ಳುತ್ತವೆ.

ಹಾರ್ಮೋನ್ ಅಸಮತೋಲನ: ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟವು ಬೇಗ ಕಡಿಮೆಯಾಗುವುದರಿಂದ ಮೆನೋಪಾಸ್ ನಂತರ ಆಸ್ಟಿಯೋಪೊರೋಸಿಸ್ ಅಪಾಯ ಹೆಚ್ಚುತ್ತದೆ. ಪುರುಷರಲ್ಲಿಯೂ ಟೆಸ್ಟೋಸ್ಟೆರೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!

ಆಕ್ಸಿಡೇಟಿವ್ ಒತ್ತಡ ಹೆಚ್ಚಾಗುತ್ತದೆ: ಧೂಮಪಾನದಿಂದ ಫ್ರೀ ರಾಡಿಕಲ್‌ಗಳು ಹೆಚ್ಚಾಗಿ ಉತ್ಪತ್ತಿಯಾಗಿ ಮೂಳೆ ಕೋಶಗಳಿಗೆ ಹಾನಿ ಉಂಟುಮಾಡುತ್ತವೆ.

ರಕ್ತ ಪೂರೈಕೆ ಕಡಿಮೆಯಾಗುತ್ತದೆ: ಧೂಮಪಾನವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಮೂಳೆಗಳಿಗೆ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳು ಸಮರ್ಪಕವಾಗಿ ತಲುಪುವುದಿಲ್ಲ.

ಮೂಳೆ ಮುರಿತವಾದರೆ ಗುಣವಾಗುವುದಕ್ಕೆ ಏಕೆ ಸಮಯ ತೆಗೆದುಕೊಳ್ಳುತ್ತದೆ?

ನಿಕೋಟಿನ್ ಹೊಸ ರಕ್ತನಾಳಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಪರಿಣಾಮವಾಗಿ:

  • ಮೂಳೆಗಳು ನಿಧಾನವಾಗಿ ಜೋಡಣೆಯಾಗುತ್ತವೆ.
  • ಗಾಯ ಗುಣಮುಖವಾಗಲು ಹೆಚ್ಚು ಸಮಯ ಬೇಕಾಗುತ್ತದೆ.
  • ಸೋಂಕಿನ ಅಪಾಯ ಹೆಚ್ಚಾಗುತ್ತದೆ.
  • ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆ ವಿಳಂಬವಾಗಬಹುದು.

ಮೂಳೆಗಳ ಸಾಮರ್ಥ್ಯ ಹೆಚ್ಚಿಸಲು ಏನು ಮಾಡಬೇಕು?

  • ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿ.
  • ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸಿ.
  • ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ.
  • ಪ್ರತಿದಿನ 30– 45 ನಿಮಿಷ ವ್ಯಾಯಾಮ ಮಾಡಿ.
  • ವಾಕಿಂಗ್, ಜಾಗಿಂಗ್, ತೂಕ ಎತ್ತುವ ವ್ಯಾಯಾಮ (Weight-bearing Exercise) ಮಾಡಿ.
  • ಮದ್ಯಪಾನವನ್ನು ಮಿತಿಗೊಳಿಸಿ.
  • ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್‌ ನೆಲದಲ್ಲಿ ಮಿಂಚಿದ ಕುಲ್ದೀಪ್ ಯಾದವ್

Source link

ಪೊಲೀಸ್ ಸೇವೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಎಸಿಪಿ ರಾಜೇಶ್‌ಗೆ ಡಿಜಿ ಪದಕ ಪ್ರದಾನ – Kannada News | CCB ACP LY Rajesh awarded dg medal for Excellent Service And Investigation

ಬೆಂಗಳೂರು, (ಜುಲೈ 24): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಿಸಿಬಿ ಎಸಿಪಿಯಾಗಿರುವ ಎಲ್.ವೈ. ರಾಜೇಶ್ (LY Rajesh) ಅವರಿಗೆ ಅತ್ಯುತ್ತಮ ಸೇವೆಗಾಗಿ ಪ್ರತಿಷ್ಠಿತ ಡಿಜಿ ಪದಕ ಪ್ರದಾನ ಮಾಡಲಾಗಿದೆ. ಡ್ರಗ್ಸ್​​ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ನೀಡಿದ ಕೊಡುಗೆ, ಸಮಾಜಮುಖಿ ಕಾರ್ಯಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪದಕ ನೀಡಿ ಗೌರವಿಸಲಾಗಿದೆ.

ಸದ್ಯ ರಾಜೇಶ್ ಅವರು ಸಿಸಿಬಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದು, ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಹೆಮ್ಮೆ ಅವರದ್ದು. ಪೊಲೀಸ್ ಸೇವೆಯ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಫೇಲ್ ಆಗಿರುವ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಆಯೋಜನೆ ಮಾಡಿ, ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ.

ಪೊಲೀಸ್ ಕೆಲಸಕ್ಕೂ ಸೈ ಸಮಾಜಮುಖಿ ಕಾರ್ಯಕ್ಕೂ ಜೈ

ಓರ್ವ ಪೊಲೀಸ್ ಅಧಿಕಾರಿಗೆ ತನ್ನ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ತಡೆ, ಆರೋಪಿಗಳ ಬಂಧನವೇ ಆದ್ಯ ಕರ್ತವ್ಯವಾಗಿರುತ್ತದೆ. ಇದನ್ನಷ್ಟೇ ತಮ್ಮ ಕರ್ತವ್ಯವೆಂದು ಭಾವಿಸದೇ ತಮ್ಮ ವ್ಯಾಪ್ತಿಯನ್ನೂ ದಾಟಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ವಿವಿಧ ರೀತಿಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಹಳ ವಿರಳ. ಇಂತಹ ವಿರಳ ಅಧಿಕಾರಿಗಳ ಪೈಕಿ ಗುರುತಿಸಿಕೊಂಡಿರುವವರು ರಾಜೇಶ್ . ಹೌದು…ರಾಜೇಶ್ ಅವರು ಖಾಕಿ ತೊಟ್ಟು ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲದೇ, ಖಾಕಿ ಆಚೆಗೂ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವುದಕ್ಕೆ, ತನ್ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ.

ಕನ್ನಡದ ಯುವ ನಟ ಭೀಮ ಚಿತ್ರ ಖ್ಯಾತಿಯ ಜಯಸೂರ್ಯ ಅವರ ತಂದೆಯೂ ಆಗಿರುವ ರಾಜೇಶ್ ಅವರು, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿರುವ ರಾಜೇಶ್, ಲೋಕಾಯುಕ್ತದಲ್ಲೂ (Lokayuktha) ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಇವರಿಗೆ, ಈಗಾಗಲೇ ಅನೇಕ ಪದಕಗಳು ಕೂಡಾ ಸಂದಿವೆ. ರಾಜೇಶ್ ಅವರ ಸೇವೆಗೆ ಅನೇಕ ಸಂಘ ಸಂಸ್ಥೆಗಳು ಕೂಡ ಗೌರವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ಪ್ರತಿಭಟನೆ: ದೆಹಲಿಯ ಸಂಗೀತ ಕಾರ್ಯಕ್ರಮ ಮುಂದೂಡಿದ ಗಾಯಕ ಸೋನು ನಿಗಮ್ – Kannada News | Singer Sonu Nigam postpones his Music concert in Delhi due to NEET Student Protests CJP

ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೆಹಲಿ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳ ಪ್ರತಿಭಟನೆ (Student Protest) ಮುಂದುವರಿದಿದೆ. ಹಲವು ನಟ-ನಟಿಯರು ಹಾಗೂ ಪ್ರಮುಖ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ (Sonu Nigam) ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ತಮ್ಮ ದೆಹಲಿ ಸಂಗೀತ ಕಚೇರಿಯನ್ನು ಮುಂದೂಡಿದ್ದಾರೆ.

ಜುಲೈ 25ರಂದು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸೋನು ನಿಗಮ್ ಅವರ ‘ಬಾಸಿಟಿವಿಟಿ – ಸೋನು ನಿಗಮ್ ರಿಮೆಂಬರ್ಸ್ ರಫಿ’ ಹೆಸರಿನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ ಈ ಕಾರ್ಯಕ್ರಮವನ್ನು ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ, ‘ಪ್ರಸ್ತುತ ದೇಶದಲ್ಲಿರುವ ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ’ ಎಂದು ಸೋನು ನಿಗಮ್ ಸ್ಪಷ್ಟಪಡಿಸಿದ್ದಾರೆ.

ವೈರಲ್ ವೀಡಿಯೋ ಮತ್ತು ಗೊಂದಲ:

ಇದಕ್ಕೂ ಒಂದು ದಿನದ ಮುನ್ನ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರು ನೀಟ್ ಪ್ರತಿಭಟನೆಯ ಬಗ್ಗೆ ಪ್ರಶ್ನಿಸಿದಾಗ ಸೋನು ನಿಗಮ್ ಕಿರಿಕಿರಿಗೊಂಡ ದೃಶ್ಯ ವೈರಲ್ ಆಗಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದ ಅವರು, ‘ನಾನು ಇಲ್ಲಿಗೆ ಬಂದಿರುವುದು ಯಾವುದಕ್ಕಾಗಿ? ಸಾಕು… ಈಗಲೇ ನಿಲ್ಲಿಸಿ’ ಎಂದು ಹೇಳಿ ಮಾತು ಮುಗಿಸಿದ್ದರು. ಈ ವೀಡಿಯೋ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅವರು ತಮ್ಮ ಸಂಗೀತ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಜುಲೈ 25ರಂದು ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ತಮ್ಮ ಹಾಸ್ಯ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಟಿಕೆಟ್ ಖರೀದಿಸಿದ ಎಲ್ಲರಿಗೂ ಹಣ ಮರುಪಾವತಿಸಲಾಗುವುದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ವಶಕ್ಕೆ ಒಳಗಾಗಿದ್ದ ನಟಿ ಆಯೆಷಾ ಖಾನ್ ಮೊದಲ ಪ್ರತಿಕ್ರಿಯೆ

ನಟಿ ಸೋಹಾ ಅಲಿ ಖಾನ್ ಅವರು ತಮ್ಮ ಪಾಡ್‌ಕಾಸ್ಟ್‌ನ ಮುಂದಿನ ಸಂಚಿಕೆಯ ಬಿಡುಗಡೆಯನ್ನು ಮುಂದೂಡಿದ್ದಾರೆ. ‘ವಿದ್ಯಾರ್ಥಿಗಳು ತಮಗಾಗಿ ಮತ್ತು ಭವಿಷ್ಯಕ್ಕಾಗಿ ರಸ್ತೆಗೆ ಇಳಿದು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಧ್ವನಿಗಿಂತ ಅವರ ಧ್ವನಿಯೇ ಜೋರಾಗಿ ಕೇಳಿಸಬೇಕು, ಹಾಗಾಗಿ ನಾವು ಹಿಂದಕ್ಕೆ ನಿಲ್ಲುತ್ತಿದ್ದೇವೆ’ ಎಂದು ಸೋಹಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ZIM: ಭಾರತ- ಜಿಂಬಾಬ್ವೆ ನಡುವೆ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Zimbabwe 2nd T20: Match Preview, Live Stream, Date, Time and Squads

ಆತಿಥೇಯ ಜಿಂಬಾಬ್ವೆ ತಂಡವನ್ನು ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್​ಗಳಿಂದ ಸುಲಭವಾಗಿ ಮಣಿಸಿದ್ದ ಟೀಂ ಇಂಡಿಯಾ (India vs Zimbabwe) ಇದೀಗ ಎರಡನೇ ಟಿ20 ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಇದು ಸಾಧ್ಯವಾದರೆ ನಾಯಕನಾಗಿ ಶ್ರೇಯಸ್ ಅಯ್ಯರ್​ಗೆ (Shreyas Iyer) ಇದು ಮೊದಲ ಟಿ20 ಸರಣಿ ಗೆಲುವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಇತ್ತ ಮೊದಲ ಟಿ20 ಸೋತಿರುವ ಜಿಂಬಾಬ್ವೆ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಹೀಗಾಗಿ ಈ ನಿರ್ಣಾಯಕ ಪಂದ್ಯ ಯಾವಾಗ? ಎಲ್ಲಿ? ಎಷ್ಟು ಗಂಟೆಗೆ ಆರಂಭವಾಗಲಿದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯ ಜುಲೈ 25 ರ ಶನಿವಾರದಂದು ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 4:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 4 ಗಂಟೆಗೆ ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 2ನೇ ಟಿ20 ಪಂದ್ಯವನ್ನು ನಾನು ಟಿವಿಯಲ್ಲಿ ಹೇಗೆ ನೋಡಬಹುದು?

ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯವನ್ನು ನೀವು Unite8 ಸ್ಪೋರ್ಟ್ಸ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಮೊಬೈಲ್​ನಲ್ಲಿ FanCode ಅಪ್ಲಿಕೇಶನ್ ಬಳಸಿ ವೀಕ್ಷಿಸಬಹುದು.

IND vs ZIM: ಸ್ಟಾರ್, ಸೋನಿ, ಹಾಟ್ ಸ್ಟಾರ್​ನಲ್ಲಿ ಪ್ರಸಾರವಾಗಲ್ಲ ಟಿ20 ಸರಣಿ! ಎಲ್ಲಿ ವೀಕ್ಷಿಸಬಹುದು?

ಉಭಯ ತಂಡಗಳು

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಜಿಂಬಾಬ್ವೆ ತಂಡ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮನಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರ್ವಾ, ನ್ಯೂಮನ್ ನ್ಯಾಮುರಿ, ಮಿಲ್ಟನ್ ಶುಂಬಾ, ಮಿಲ್ಟನ್ ಶುಂಬಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ; ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ, ಇನ್ನಷ್ಟು ತಲೆದಂಡ ಸಾಧ್ಯತೆ – Kannada News | NTA terminated 47 officials in major overhaul amid NEET paper leak protests

ನವದೆಹಲಿ, ಜುಲೈ 24: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆ ಮುಂದುವರಿದಿದೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಇದರ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಬೃಹತ್ ಕಾರ್ಯಾಚರಣೆ ನಡೆಸಿದ್ದು, ತನ್ನ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಎನ್​ಟಿಎಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಭಾಗವಾಗಿ ಇನ್ನೂ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಯೊಳಗೆ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಸರ್ಕಾರವು ಕ್ರಮಗಳನ್ನು ಬಿಗಿಗೊಳಿಸುತ್ತಿದ್ದು, ವಜಾಗೊಂಡಿರುವ ಕೆಲವು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮವನ್ನೂ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳು ಹೊರಬರಲಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳಿಂದಾಗಿ ವಿವಾದಕ್ಕೆ ಸಿಲುಕಿರುವ ಎನ್‌ಟಿಎ ಸಂಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: TV9 Kannada News Live: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್: 47 ಅಧಿಕಾರಿಗಳನ್ನ ವಜಾ ಮಾಡಿದ ಕೇಂದ್ರ ಸರ್ಕಾರ

ನೀಟ್ ಪೇಪರ್ ಲೀಕ್ ಪ್ರಕರಣದಿಂದಾಗಿ ಎನ್‌ಟಿಎ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿದ್ದು, ಸಂಸ್ಥೆಯನ್ನು ಸಂಪೂರ್ಣ ಪುನರ್​​ರಚನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸಂಸ್ಥೆ ವಿಫಲವಾಗಿದೆ ಎಂದು ಟೀಕಿಸಿ ಎನ್‌ಟಿಎಯನ್ನೇ ರದ್ದುಗೊಳಿಸಬೇಕೆಂದು ಹಲವರು ಆಗ್ರಹಿಸಿದ್ದರೂ, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಪೇಪರ್ ಲೀಕ್ ತಡೆ ಮಸೂದೆಗೆ ಸಂಪುಟ ಸಮ್ಮತಿ:

ಪೇಪರ್ ಲೀಕ್ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಕರಡು ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‌ಟಿಎ ಈ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಮಂಜೂರಾತಿ ನೀಡಲಾಗಿದ್ದು, ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈ ಮಸೂದೆಯು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ಕ್ಕೆ ತಿದ್ದುಪಡಿ ತರಲಿದ್ದು, ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಕೋಟಿ ರೂ. ದಂಡ ವಿಧಿಸಲು ಪ್ರಸ್ತಾಪಿಸಿದೆ.

ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಎಂದರೇನು?:

NTA (National Testing Agency) ಎಂಬುದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಪರೀಕ್ಷಾ ಸಂಸ್ಥೆಯಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕವಾಗಿ, ದಕ್ಷತೆಯಿಂದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳೊಂದಿಗೆ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ ಸಿಬಿಎಸ್‌ಇ (CBSE), ಯುಜಿಸಿ (UGC) ಮುಂತಾದ ಸಂಸ್ಥೆಗಳು ನಡೆಸುತ್ತಿದ್ದ ಬೃಹತ್ ಸ್ಪರ್ಧಾತ್ಮಕ ಪರೀಕ್ಷೆಗಳ ಹೊಣೆಯನ್ನು ತಗ್ಗಿಸಲು NTAಯನ್ನು ಸ್ಥಾಪಿಸಲಾಯಿತು.

NTA ನಡೆಸುವ ಪ್ರಮುಖ ಪರೀಕ್ಷೆಗಳು ಯಾವುವು?:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ದೇಶಾದ್ಯಂತ ವೈದ್ಯಕೀಯ, ಎಂಜಿನಿಯರಿಂಗ್, ನಿರ್ವಹಣೆ, ಉನ್ನತ ಶಿಕ್ಷಣ ಹಾಗೂ ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳ ವಿವರ ಇಲ್ಲಿದೆ.

NEET (UG): ದೇಶದಾದ್ಯಂತ ಎಂ.ಬಿ.ಬಿ.ಎಸ್ (MBBS), ಬಿ.ಡಿ.ಎಸ್ (BDS), ಆಯುಷ್ (AYUSH) ಮುಂತಾದ ಪದವಿ ಹಂತದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಏಕೈಕ ರಾಷ್ಟ್ರೀಯ ಪರೀಕ್ಷೆ.

JEE Main: ಎನ್‌ಐಟಿ (NIT), ಐಐಐಟಿ (IIIT) ಹಾಗೂ ಇತರ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಬಿ.ಇ, ಬಿ.ಟೆಕ್ (B.E/B.Tech) ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಜೊತೆಗೆ ಇದು ಐಐಟಿ (IIT) ಪ್ರವೇಶದ JEE Advanced ಪರೀಕ್ಷೆಗೆ ಅರ್ಹತಾ ಪರೀಕ್ಷೆಯಾಗಿದೆ.

CUET (Common University Entrance Test): ದೇಶದ ಕೇಂದ್ರೀಯ ಮತ್ತು ಇತರ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪದವಿ (UG) ಮತ್ತು ಸ್ನಾತಕೋತ್ತರ (PG) ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆ.

UGC NET: ಸಹಾಯಕ ಪ್ರಾಧ್ಯಾಪಕ ಹುದ್ದೆ (Assistant Professor) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಅರ್ಹತೆಗಾಗಿ ನಡೆಸುವ ಪರೀಕ್ಷೆ.

CMAT ಮತ್ತು GPAT: ಮ್ಯಾನೇಜ್‌ಮೆಂಟ್ (MBA) ಮತ್ತು ಫಾರ್ಮಸಿ (M.Pharm) ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು.

CSIR UGC-NET: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಜೆಆರ್‌ಎಫ್ (JRF) ಮತ್ತು ಉಪನ್ಯಾಸಕ ಹುದ್ದೆಯ ಅರ್ಹತೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಸಂಬಂಧಿಸಿದಂತೆ ಆಗಾಗ ಕೇಳಲಾಗುವ ಪ್ರಮುಖ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಹೀಗಿವೆ:

ಪ್ರಶ್ನೆ: NTA ಎಂದರೇನು ಮತ್ತು ಇದರ ಮುಖ್ಯ ಕೆಲಸವೇನು?

ಉತ್ತರ: NTA (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಎಂಬುದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಭಾರತದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ನಡೆಸುವ ಪ್ರಮುಖ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಇದರ ಮುಖ್ಯ ಕೆಲಸವಾಗಿದೆ.

ಪ್ರಶ್ನೆ: NTAಯನ್ನು ಯಾವಾಗ ಸ್ಥಾಪಿಸಲಾಯಿತು?

ಉತ್ತರ: NTAಯನ್ನು 2017ರ ನವೆಂಬರ್‌ನಲ್ಲಿ ಸ್ಥಾಪಿಸಲಾಯಿತು. ಇದಕ್ಕೂ ಮೊದಲು ಪರೀಕ್ಷೆಗಳನ್ನು ನಡೆಸುತ್ತಿದ್ದ ಸಿಬಿಎಸ್‌ಇ (CBSE) ಮತ್ತು ಯುಜಿಸಿ (UGC)ಯಂತಹ ಸಂಸ್ಥೆಗಳ ಮೇಲಿನ ಹೊರೆಯನ್ನು ತಗ್ಗಿಸಲು ಇದನ್ನು ಜಾರಿಗೆ ತರಲಾಯಿತು.

ಪ್ರಶ್ನೆ: NTA ನಡೆಸುವ ಅತ್ಯಂತ ಪ್ರಮುಖ ಪರೀಕ್ಷೆಗಳು ಯಾವುವು?

ಉತ್ತರ: NTA ದೇಶದ ಬೃಹತ್ ಪರೀಕ್ಷೆಗಳಾದ NEET (UG), JEE (Main), CUET (UG & PG), UGC-NET ಮುಂತಾದ ಪರೀಕ್ಷೆ ನಡೆಸುತ್ತದೆ.

ಪ್ರಶ್ನೆ: NTA ಪರೀಕ್ಷೆಗಳನ್ನು ಯಾವ ರೂಪದಲ್ಲಿ ನಡೆಸಲಾಗುತ್ತದೆ?

ಉತ್ತರ: NTA ನಡೆಸುವ ಹೆಚ್ಚಿನ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ (CBT – Computer Based Test) ಮಾದರಿಯಲ್ಲಿರುತ್ತವೆ. ಆದರೆ, NEET (UG)ಯಂತಹ ಕೆಲವು ಪರೀಕ್ಷೆಗಳನ್ನು ಪೆನ್ ಮತ್ತು ಪೇಪರ್ (OMR) ರೂಪದಲ್ಲಿ ನಡೆಸಲಾಗುತ್ತದೆ.

ಪ್ರಶ್ನೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅಭ್ಯಾಸಕ್ಕಾಗಿ NTA ನೀಡುವ ಸೌಲಭ್ಯವೇನು?

ಉತ್ತರ: ಕಂಪ್ಯೂಟರ್ ಜ್ಞಾನವಿಲ್ಲದ ಅಥವಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ NTA ದೇಶಾದ್ಯಂತ ‘ಟೆಸ್ಟ್ ಪ್ರಾಕ್ಟೀಸ್ ಸೆಂಟರ್‌ಗಳನ್ನು’ ಸ್ಥಾಪಿಸಿದೆ. ವಿದ್ಯಾರ್ಥಿಗಳು ಇಲ್ಲಿಗೆ ತೆರಳಿ ಉಚಿತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಅಭ್ಯಾಸ ಮಾಡಬಹುದು.

ಪ್ರಶ್ನೆ: NTA ಅಧಿಕೃತ ವೆಬ್‌ಸೈಟ್ ಯಾವುದು?

ಉತ್ತರ: NTAಯ ಅಧಿಕೃತ ವೆಬ್‌ಸೈಟ್: nta.ac.in

Source link

Exit mobile version