‘ವಾರಣಾಸಿ’ ಟೈಟಲ್ ವಿವಾದ ಸುಖಾಂತ್ಯ, ರಾಜಮೌಳಿ ನಿರಾಳ – Kannada News | Varanasi movie title confusion ends, director Subbareddy gave away title rights

ರಾಜಮೌಳಿ (Rajamouli) ನಿರ್ದೇಶನ ಮಾಡಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟಿಸಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಜಮೌಳಿಯ ಸಿನಿಮಾಗಳಿಗೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಬೇಡಿಕೆ ಕುದುರಿದ್ದು, ‘ವಾರಣಾಸಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಈಗಿನಿಂದಲೇ ಕುತೂಹಲ ಜೋರಾಗಿದೆ. ಸಿನಿಮಾದ ಹೆಸರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ ಆ ಟೈಟಲ್ ಘೋಷಣೆಯ ಬಳಿಕ ಸಣ್ಣ ವಿವಾದವೊಂದು ಹುಟ್ಟಿಕೊಂಡಿತ್ತು. ಆದರೆ ಈಗ ಆ ವಿವಾದ ಸುಖಾಂತ್ಯವಾಗಿದೆ.

ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾಗ ನಿರ್ದೇಶಕ ಸುಬ್ಬಾರೆಡ್ಡಿ ಅವರು ‘ವಾರಣಾಸಿ’ ಸಿನಿಮಾದ ಟೈಟಲ್ ತಮ್ಮ ಬಳಿ ಇದ್ದು, ರಾಜಮೌಳಿ ತಮ್ಮ ಅನುಮತಿ ಪಡೆಯದೇ ಸಿನಿಮಾದ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ‘ವಾರಣಾಸಿ’ ಸಿನಿಮಾದ ಹೆಸರನ್ನು ಸಿನಿಮಾದ ನಿರ್ಮಾಪಕರಿಗೆ ನೀಡಿದ್ದಾರೆ. ಆ ಮೂಲಕ ವಿವಾದವನ್ನು ಖುದ್ದು ತಾವೇ ಸುಖಾಂತ್ಯಗೊಳಿಸಿದ್ದಾರೆ.

ಚಲನಚಿತ್ರ ನಿರ್ಮಾಪಕರ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಹಾಗೂ ನಿರ್ದೇಶಕ ಸುಬ್ಬಾರೆಡ್ಡಿ ಅವರುಗಳು ಚರ್ಚೆ ನಡೆಸಿದ ಬಳಿಕ ‘ವಾರಣಾಸಿ’ ಸಿನಿಮಾದ ಟೈಟಲ್ ಮೇಲಿನ ಹಕ್ಕನ್ನು ವರ್ಗಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುಬ್ಬಾರೆಡ್ಡಿ, ‘2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನೋಂದಾಯಿಸಿ ಆ ಕಥೆಯ ಮೇಲಿನ ಕೆಲಸವನ್ನು ಆರಂಭಿಸಿದ್ದೆ. ಆದರೆ ಅದೇ ಶೀರ್ಷಿಕೆ ರಾಜಮೌಳಿ ಅವರ ಸಿನಿಮಾಗೆ ಅವಶ್ಯಕತೆಯಿದೆ ಎಂದು ತಿಳಿದ ತಕ್ಷಣ, ತೆಲುಗು ಚಿತ್ರರಂಗದ ಗೌರವವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಬಿಟ್ಟುಕೊಡಲು ನಿರ್ಧರಿಸಿದೆ ಎಂದರು. ತಮ್ಮ ನೆಚ್ಚಿನ ನಟ ಮಹೇಶ್ ಬಾಬು, ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಕೆ.ಎಲ್. ನಾರಾಯಣ ಒಟ್ಟಾಗಿ ಮಾಡುತ್ತಿರುವ ಈ ಬ್ರಹ್ಮಾಂಡ ಚಿತ್ರಕ್ಕೆ ಶೀರ್ಷಿಕೆ ನೀಡುವುದನ್ನು ತಾವೇ ಭಾಗ್ಯವೆಂದು ಭಾವಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಈ ಶೀರ್ಷಿಕೆಯನ್ನು ತಾವೆಂದಿಗೂ ವ್ಯಾಪಾರಿಕೋನದಿಂದ ನೋಡಿಲ್ಲವೆಂದೂ, ಒಂದು ರೂಪಾಯಿಯನ್ನೂ ಪಡೆಯುವ ಯೋಚನೆ ತಮಗೆ ಬಂದಿರಲಿಲ್ಲವೆಂದೂ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದರು. ‘ಶೀರ್ಷಿಕೆ ಎನ್ನುವುದು ನನಗೆ ಕೇವಲ ಒಂದು ಭಾವನೆ. ಅದನ್ನು ಮಾರಾಟ ಮಾಡಲು ಅಲ್ಲ, ಬದಲಿಗೆ ಉತ್ತಮ ಸಿನಿಮಾಗಾಗಿ ನೀಡಲು ನಾನು ಸಿದ್ಧನಾದೆ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ತಾವು ಈ ಟೈಟಲ್ ನೀಡಲು ನಿರ್ಮಾಣ ಸಂಸ್ಥೆಯಿಂದ ಹಣವನ್ನೇ ಪಡೆದಿಲ್ಲ ಎಂದು ಹೇಳಿದ್ದಾರೆ.

ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಮಾತನಾಡಿ, ಆರಂಭದಲ್ಲಿ ಸುಬ್ಬಾರೆಡ್ಡಿ ಆ ಶೀರ್ಷಿಕೆಯೊಂದಿಗೆ ಭಾವುಕವಾಗಿ ಗುರುತಿಸಿಕೊಂಡಿದ್ದರು, ಹಾಗಾಗಿ ತಕ್ಷಣವೇ ಅವರ ಬಳಿ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದರು. ನಂತರ ರಾಜಮೌಳಿ ಹಾಗೂ ಕೆ.ಎಲ್. ನಾರಾಯಣರಂತಹ ದಿಗ್ಗಜರ ಚಿತ್ರಕ್ಕೆ ಶೀರ್ಷಿಕೆ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ವಿವರಿಸಿದಾಗ, ಸುಬ್ಬಾರೆಡ್ಡಿ ತಕ್ಷಣವೇ ಒಪ್ಪಿಕೊಂಡರು ಎಂದು ತಿಳಿಸಿದರು. ಶೀರ್ಷಿಕೆಗಳನ್ನು ಹಣಕ್ಕಾಗಿ ಎದುರು ನೋಡದೆ, ಚಿತ್ರರಂಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಸಹಕರಿಸಿಕೊಳ್ಳಬೇಕು ಎಂಬುದಕ್ಕೆ ಈ ನಿರ್ಧಾರವು ಉತ್ತಮ ಉದಾಹರಣೆಯಾಗಿದೆ ಎಂದು ವೀರಶಂಕರ್ ಅಭಿಪ್ರಾಯಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:47 pm, Fri, 24 July 26

Source link

ಸಾಮಾಜಿಕ ಜಾಲತಾಣಗಳಲ್ಲಿ ಕೋರ್ಟ್ ನೇರಪ್ರಸಾರದ ವಿಡಿಯೋ ಶೇರ್ ಮಾಡುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ – Kannada News | Supreme Court restricts sharing of live streamed court videos on social media

ನವದೆಹಲಿ, ಜುಲೈ 24: ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ಆಡಿಯೋಗಳನ್ನು ಅನುಮತಿಯಿಲ್ಲದೆ ಕಟ್ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಮರುಪೋಸ್ಟ್ ಮಾಡುವುದು ಮತ್ತು ಅವುಗಳಿಂದ ಹಣ ಗಳಿಸುವುದನ್ನು ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಕೋರ್ಟ್ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುವಂತಿಲ್ಲ.

ಮಾಧ್ಯಮಗಳಿಗೆ ಸಂಬಂಧಿಸಿಲ್ಲ:

ಈ ಆದೇಶವು ಪತ್ರಕರ್ತರ ಹಾಗೂ ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ವಿಡಿಯೋಗಳನ್ನು ಎಡಿಟ್ ಮಾಡಿ ಯೂಟ್ಯೂಬ್ ಶಾರ್ಟ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್, ಮೀಮ್ಸ್ ರೂಪದಲ್ಲಿ ಹಂಚಿಕೊಳ್ಳುವುದು ಮತ್ತು ವ್ಯೂಸ್​ಗಾಗಿ ಅದನ್ನು ವಿಜೃಂಭಿಸಿ ಪ್ರಸಾರ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ

ಕೇಂದ್ರ ಹಾಗೂ ರಾಜ್ಯಗಳಿಗೆ ನೋಟಿಸ್:

ಲೈವ್ ಸ್ಟ್ರೀಮ್ ವಿಡಿಯೋಗಳ ದುರ್ಬಳಕೆ ತಡೆಯಲು ಸೂಕ್ತ ನಿಯಮಾವಳಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಪೀಠವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ನೇರಪ್ರಸಾರದ ವಿಡಿಯೋಗಳನ್ನು ಪೂರ್ವಾಪರ ಅನುಮತಿಯಿಲ್ಲದೆ ಕಾಪಿ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ಆದೇಶವು ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಎಲ್ಲ ಹೈಕೋರ್ಟ್‌ಗಳ ನೇರಪ್ರಸಾರದ ವಿಡಿಯೋಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್​ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ನ್ಯಾಯಾಲಯದ ವಿಡಿಯೋಗಳಿಂದ ತುಣುಕುಗಳನ್ನು ತೆಗೆಯುವುದು, ಎಡಿಟ್ ಮಾಡುವುದು, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಹಾಗೂ ಅಪ್‌ಲೋಡ್ ಮಾಡುವುದಕ್ಕೆ ಈ ನಿರ್ಬಂಧ ಅನ್ವಯಿಸಲಿದೆ. ವಿಡಿಯೋಗಳನ್ನು ಬಳಸಲು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ನಿರ್ದೇಶನವು ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸದ್ಯ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಕೆಲವು ನಿರ್ದಿಷ್ಟ ವಿಚಾರಣೆಗಳ ನೇರಪ್ರಸಾರ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ನ್ಯಾಯಾಂಗ ಪ್ರಕ್ರಿಯೆಯ ಸುಲಭ ಲಭ್ಯತೆ ಮತ್ತು ಮುಕ್ತ ನ್ಯಾಯದ ಭಾಗವಾಗಿ ಲೈವ್ ಸ್ಟ್ರೀಮಿಂಗ್ ನೀಡಲಾಗುತ್ತಿದ್ದರೂ, ಅದರ ದುರ್ಬಳಕೆಗೆ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮಳೆ ಅಭಾವ: 31 ಜಿಲ್ಲೆಗಳ ಪೈಕಿ 25 ಕಡೆ ಶೇ.20ಕ್ಕಿಂತ ಹೆಚ್ಚು ಕೊರತೆ – Kannada News | Monsoon Crisis: 25 Out of 31 Districts in Karnataka Face Massive Rain Deficit; Vijayanagara Worst Hit

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮುಂದುವರಿದಿದ್ದು, 31 ಜಿಲ್ಲೆಗಳ ಪೈಕಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆ ದಾಖಲಾಗಿದೆ. ಉಳಿದ 25 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ಕೊರತೆ ಕಂಡುಬಂದಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ.60ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಅಭಾವ ಎದುರಾಗಿದೆ. ಮೈಸೂರು ಮತ್ತು ಹಾವೇರಿ ಜಿಲ್ಲೆಗಳು ಸಹ ಸಾಮಾನ್ಯ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ ಮಳೆ ಪಡೆದಿವೆ. ಎರಡೂ ಜಿಲ್ಲೆಗಳಲ್ಲಿ ತಲಾ ಶೇ.-57 ಮತ್ತು ಶೇ. -50ರಷ್ಟು ಕಡಿಮೆ ಮಳೆಯಾಗಿದೆ.

ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ

ಜುಲೈ 22ರವರೆಗೆ ರಾಜ್ಯದಲ್ಲಿ 253 ಮಿ.ಮೀ. ಮಳೆ ದಾಖಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ 392 ಮಿ.ಮೀ. ಮಳೆ ಸುರಿಯಬೇಕಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟಾರೆ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್ ಅಂತ್ಯಕ್ಕೆ ಈ ಕೊರತೆ ಶೇ.42 ಇದ್ದು, ಇದೀಗ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸಾಮಾನ್ಯ ಮಳೆಯಿಂದ ಶೇ.20ರವರೆಗೆ ಹೆಚ್ಚು ಅಥವಾ ಕಡಿಮೆ ದಾಖಲಾಗಿದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಶೇ.20ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಕಡಿಮೆ’ ಹಾಗೂ ಶೇ.60ಕ್ಕಿಂತ ಹೆಚ್ಚು ಕೊರತೆ ಇದ್ದರೆ ‘ಅತ್ಯಂತ ಕಡಿಮೆ’ ಎಂದು ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

ಮಳೆ ಕೊರತೆಗೆ ಕಾರಣವೇನು?

ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ದುರ್ಬಲ ಗಾಳಿ,ಬಂಗಾಳ ಕೊಲ್ಲಿಯಲ್ಲಿ ಮುಂಗಾರು ವಾಯುಭಾರ ಕುಸಿತ (Monsoon Depressions) ರೂಪುಗೊಳ್ಳದಿರುವುದು ರಾಜ್ಯದಲ್ಲಿ ಮಳೆ ಕೊರತೆಗೆ ಪ್ರಮುಖ ಕಾರಣಗಳಾಗಿವೆ.

ಜುಲೈನಲ್ಲಿ ಮಳೆ ಹೆಚ್ಚಾದರೂ ಕೊರತೆ ಮುಂದುವರಿಕೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಮಳೆ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ವರ್ಷ ಜುಲೈನಲ್ಲಿ ಜೂನ್‌ಗಿಂತ ಹೆಚ್ಚು ಮಳೆಯ ದಿನಗಳು ದಾಖಲಾಗಿವೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಸುಮಾರು ಎರಡು ಪಟ್ಟು ಹೆಚ್ಚು ಮಳೆಯಾಗಿದೆ. ಆದರೂ ಈ ಜಿಲ್ಲೆಗಳು ತಮ್ಮ ಸಾಮಾನ್ಯ ಮಳೆಯ ಪ್ರಮಾಣವನ್ನು ತಲುಪಿಲ್ಲ.

ಬಾಗಲಕೋಟೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ

ಜುಲೈ 22ರವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ 128 ಮಿ.ಮೀ. ಬದಲು 134 ಮಿ.ಮೀ. ಮಳೆ ಸುರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:14 pm, Fri, 24 July 26

Source link

ಕದ್ದುಮುಚ್ಚಿ ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ವಿಜಯ್ ಪತ್ನಿ ಸಂಗೀತಾ? – Kannada News | CM Vijay wife Sangeetha Sornalingam Jana Nayagan screening Viral Video Fact Check

ತಮಿಳುನಾಡು ಮುಖ್ಯಮಂತ್ರಿ ಹಾಗೂ ಪ್ರಸಿದ್ಧ ನಟ ವಿಜಯ್ (CM Vijay) ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ತಿಂಗಳುಗಳ ಕಾಲ ಸೆನ್ಸಾರ್ ಮಂಡಳಿಯ ತೊಡಕುಗಳಿಂದ ವಿಳಂಬವಾಗಿದ್ದ ಈ ಸಿನಿಮಾ ಕೊನೆಗೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸಿನಿಮಾ ರಿಲೀಸ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಮ್ (Sangeetha Sornalingam) ಅವರ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಗೀತಾ ಅವರು ‘ಜನ ನಾಯಗನ್’ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಆಗಮಿಸಿದ್ದಾರೆ ಎಂಬ ಕ್ಯಾಪ್ಷನ್​ನೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿತ್ತು.

ವೈರಲ್ ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋ ಕ್ಲಿಪ್‌ನಲ್ಲಿ ಸಂಗೀತಾ ಅವರು ಸಾಂಪ್ರದಾಯಿಕ ಉಡುಪಿನಲ್ಲಿ, ಮಾಸ್ಕ್ ಧರಿಸಿ ಕಾರಿನಿಂದ ಕೆಳಗಿಳಿಯುವುದು ಕಂಡುಬಂದಿದೆ. ವಿಜಯ್ ಅವರ ಕೊನೆಯ ಚಿತ್ರವನ್ನು ವೀಕ್ಷಿಸಲು ಸಂಗೀತಾ ಥಿಯೇಟರ್‌ಗೆ ಬಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಸಂಗೀತಾ ಅವರು ಮಾಸ್ಕ್ ಧರಿಸಿರಿ ಕದ್ದು ಮುಚ್ಚಿ ಬಂದಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಅದು ನಿಜವಲ್ಲ.

ಈ ವೀಡಿಯೋದ ಅಸಲಿ ಸತ್ಯಾಂಶವೇನು?

ವಿಡಿಯೋದ ಅಸಲಿ ವಿಷಯ ಬೇರೆಯೇ ಇದೆ. ಫ್ಯಾಕ್ಟ್ ಚೆಕ್ ಪ್ರಕಾರ, ಈ ವೀಡಿಯೋ ಹಳೆಯದಾಗಿದ್ದು, ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಳೆಯ ವೀಡಿಯೋವನ್ನು ಹಾಗೂ ‘ಜನ ನಾಯಗನ್’ ಬಿಡುಗಡೆಯಾದ ಥಿಯೇಟರ್‌ನ ಇತ್ತೀಚಿನ ದೃಶ್ಯಗಳೊಂದಿಗೆ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಸಂಗೀತಾ ಅವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ.

ಇದನ್ನೂ ಓದಿ: ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್

ಸಂಗೀತಾ-ವಿಜಯ್ ವಿಚ್ಛೇದನದ ವದಂತಿಗಳು:

1999ರ ಆಗಸ್ಟ್ 25ರಂದು ವಿವಾಹವಾಗಿದ್ದ ವಿಜಯ್ ಮತ್ತು ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಸುಮಾರು 30 ವರ್ಷಗಳ ದಾಂಪತ್ಯ ಜೀವನದ ನಂತರ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 10ರಂದು ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪತ್ನಿ ಸಂಗೀತಾ ಮತ್ತು ಮಕ್ಕಳು ಭಾಗವಹಿಸಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ – Kannada News | Mandya Drought Crisis: Farmers Suffer as KRS Water Levels Drop Amid 83% Rain Deficit

ಮಂಡ್ಯ, ಜುಲೈ 24: ಜಿಲ್ಲೆಯಲ್ಲಿ ಮಳೆರಾಯನ (rain) ಮುನಿಸು ಮುಂದುವರಿದಿದೆ. ಮುಂಗಾರು ಶುರುವಾಗಿ ಜುಲೈ ಕಳೆಯುತ್ತಾ ಬಂದರೂ ಒಂದು ಹನಿ ಮಳೆಯಿಲ್ಲದೆ ಮಂಡ್ಯದ ರೈತರು ಕಂಗಾಲಾಗಿದ್ದಾರೆ. ಜಮೀನುಗಳು ಹಚ್ಚಹಸಿರಿನಿಂದ ಕಂಗೊಳಿಸಬೇಕಿದ್ದ ಸಮಯದಲ್ಲಿ ಒಣಭೂಮಿಯಾಗಿ (drought)  ಮಾರ್ಪಟ್ಟಿವೆ. ಇತ್ತ ಕೆಆರ್​ಎಸ್ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿದ್ದು, ಕೃಷಿಗೆ ನೀರಿಲ್ಲದೆ ಬಿತ್ತನೆ ಕಾರ್ಯ ಸಂಪೂರ್ಣ ಸ್ತಬ್ಧಗೊಂಡಿದೆ.

ಜಿಲ್ಲೆಯಲ್ಲಿ ಬರೋಬ್ಬರಿ 83% ಮಳೆ ಕೊರತೆ

​ಮಂಡ್ಯ ಅಂದರೆ ನೆನಪಾಗುವುದು ಹಚ್ಚಹಸಿರಿನ ಕಬ್ಬಿನ ಗದ್ದೆಗಳು. ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕಾವೇರಿ ಮಡಿಲಲ್ಲಿ ಮಳೆರಾಯನ ಕೃಪೆಯಿಲ್ಲದೆ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಜುಲೈ ತಿಂಗಳಲ್ಲಿ ಆರ್ಭಟಿಸಬೇಕಿದ್ದ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ 83% ಮಳೆ ಕೊರತೆ ಎದುರಾಗಿದೆ. ಇದರಿಂದ ಜಮೀನಿನಲ್ಲಿ ಉಳುಮೆ ಮಾಡುವುದಕ್ಕೂ ತೇವಾಂಶ ಇಲ್ಲದಂತಾಗಿದ್ದು, ರೈತರು ಆಗಸದತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ.​

ಕೃಷಿ ಚಟುವಟಿಕೆಗಿಲ್ಲ ನೀರು 

ಇನ್ನೊಂದೆಡೆ ಜೀವನಾಡಿ ಕೆಆರ್​ಎಸ್ ಜಲಾಶಯದ ಸ್ಥಿತಿ ಕೂಡ ಶೋಚನೀಯವಾಗಿದೆ. ಡ್ಯಾಂನಲ್ಲಿ ಸದ್ಯಕ್ಕೆ ಇರುವುದು ಕೇವಲ 92 ಅಡಿ ನೀರು ಮಾತ್ರ. ಇದರಲ್ಲಿ ಕೇವಲ 12 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಹೀಗಾಗಿ ಸರ್ಕಾರ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಿದ್ದು, ಆಣೆಕಟ್ಟೆಯಿಂದ ಕೃಷಿಗೆ ನೀರು ಹರಿಸುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Karnataka Dam Water Level: ಇನ್ನೊಂದೇ ವಾರದಲ್ಲಿ ಪೂರ್ಣ ಭರ್ತಿಯಾಗಲಿದೆ ಆಲಮಟ್ಟಿ ಡ್ಯಾಂ! ಜಲಾಶಯಗಳ ನೀರಿನ ಮಟ್ಟದ ವಿವರ

ಪರಿಣಾಮ ಕಾಲುವೆ ನಂಬಿಕೊಂಡಿದ್ದ ರೈತರಿಗೆ ಬಿತ್ತನೆ ಮಾಡಲಾಗದೆ ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಈ ಬಾರಿ 2 ಲಕ್ಷದ 6 ಸಾವಿರ ಹೆಕ್ಟೇರ್ ಕೃಷಿ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ ಬಿತ್ತನೆಯಾಗಿರುವುದು ಕೇವಲ 18 ಸಾವಿರ ಹೆಕ್ಟೇರ್ ಮಾತ್ರ. ಅಂದರೆ ಶೇಕಡಾ 9 ರಷ್ಟು ಮಾತ್ರ.

ಬರ ಪೀಡಿತ ಜಿಲ್ಲೆ ಘೋಷಣೆ ಒತ್ತಾಯ

ಮಂಡ್ಯ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಈಗ ಬರದ ಛಾಯೆ ಆವರಿಸಿದೆ. ಮಳೆ ಇಲ್ಲ, ನದಿ ನೀರೂ ಸಿಗದೇ  ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯನ್ನ ಬರ ಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕೇ? ಹಾಗಾದ್ರೆ ಈ ರೀತಿ ಮಾಡಿ – Kannada News |  RTC: How to change the owner’s name in the RTC

ಮನೆ ಸೇರಿದಂತೆ ಆಸ್ತಿಯ ದಾಖಲೆಗಳು ಎಲ್ಲರ ಬಳಿ ಇರುತ್ತದೆ. ಹೌದು, ಕೃಷಿ ಭೂಮಿಯ ಮಾಲೀಕತ್ವ, ಹಕ್ಕುಗಳು ಹಾಗೂ ಬೆಳೆಗಳ ವಿವರಗಳನ್ನು ತೋರಿಸುವ ಅಧಿಕೃತ ಆರ್‌ಟಿಸಿ (RTC) ದಾಖಲೆ ಇದಾಗಿದೆ. ಕೃಷಿ ಸಾಲ ಸೇರಿದಂತೆ ಇತರ ಅಗತ್ಯಗಳಿಗೆ ಪಹಣಿ ಅಗತ್ಯ. ಇದು ಭೂಮಿಯ ಒಡೆಯ ಯಾರು, ಜಮೀನಿನ ವಿಸ್ತೀರ್ಣ ಎಷ್ಟು ಮತ್ತು ಬೆಳೆಗಳ ವಿವರಗಳನ್ನು ಒಳಗೊಂಡಿದೆ. ಪಹಣಿಯು ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು. ಆರ್ ಟಿಸಿಯಲ್ಲಿನ ಹೆಸರು ತಿದ್ದುಪಡಿ ಮಾಡಿಕೊಳ್ಳಲು ಮಾರಾಟ ಪತ್ರ, ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ಹಿಂದಿನ ಪಹಣಿಯ ಪ್ರತಿಗಳು ನಿಮ್ಮ ಬಳಿಯಿರಲೇ ಬೇಕು.

ಮಾಲೀಕರ ಹೆಸರು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ.

ಹಂತ 2: ಮಾರಾಟ ಪತ್ರ, ದಾನ ಪತ್ರ ಅಥವಾ ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಹಿಂದಿನ ಪಹಣಿಯ ಪ್ರತಿಯೊಂದಿಗೆ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿ.

ಹಂತ 3: ಪಹಣಿಯಲ್ಲಿನ ತಿದ್ದುಪಡಿಗೆ ನಿಗದಿತ ಸರ್ಕಾರಿ ಶುಲ್ಕವನ್ನು ಪಾವತಿಸಿ.

ಹಂತ 4: ಪಹಣಿ ಪತ್ರದಲ್ಲಿನ ತಿದ್ದುಪಡಿಗೆ ಇಲಾಖೆಯು ಇತರರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ನೋಟಿಸ್ ಹೊರಡಿಸುತ್ತದೆ.

ಹಂತ 5: ಯಾವುದೇ ಆಕ್ಷೇಪಣೆಗಳು ಬಾರದಿದ್ದಲ್ಲಿ, ನಿಮ್ಮ ಹೆಸರನ್ನು ಪಹಣಿಯಲ್ಲಿ ಅಧಿಕೃತವಾಗಿ ಸೇರಿಸುತ್ತದೆ.

ಇದನ್ನೂ ಓದಿ: ನಿಮ್ಮ ಆಧಾರ್ ಬಯೋಮೆಟ್ರಿಕ್‌ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಪಹಣಿ ಪತ್ರ ಎಂದರೇನು?

ಉತ್ತರ: ಭೂಮಿಯ ಮಾಲೀಕತ್ವವನ್ನು ತಿಳಿಸುವ ಅತ್ಯಂತ ಮುಖ್ಯವಾದ ದಾಖಲೆ.

ಪ್ರಶ್ನೆ: ಆರ್ ಟಿಸಿಯಲ್ಲಿನ ಮಾಲೀಕರ ಹೆಸರು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದು ಹೇಗೆ?

ಉತ್ತರ: ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು.

ಪ್ರಶ್ನೆ: ಆರ್ ಟಿಸಿಯಲ್ಲಿ ಮಾಲೀಕರ ಹೆಸರು ಬದಲಾವಣೆಗೆ ಏನೆಲ್ಲಾ ದಾಖಲೆಗಳು ಬೇಕು?

ಉತ್ತರ: ಮಾರಾಟ ಪತ್ರ, ದಾನ ಅಥವಾ ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಹಿಂದಿನ ಪಹಣಿಯ ಪ್ರತಿ ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿದ ಸ್ಟಾರ್ ಕ್ರಿಕೆಟಿಗರ ಪತ್ನಿಯರು – Kannada News | Jantar Mantar Student Protest: Cricketers’ Wives Speak Out Against Police Brutality, NEET

ಶಿಕ್ಷಣ ಸಚಿವರ ರಾಜೀನಾಮೆ ಮತ್ತು ನೀಟ್ (NEET protest) ಪತ್ರಿಕೆ ಸೋರಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸುವುದರ ಜೊತೆಗೆ ಲಾಠಿ ಪ್ರಹಾರ ನಡೆಸಿದ್ದರು. ಈ ಘಟನೆ ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಗಿದ್ದು, ಹಲವಾರು ವಿದ್ಯಾರ್ಥಿಗಳು ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸಕ್ರಿಯ ಕ್ರಿಕೆಟಿಗರು ಈ ಘಟನೆ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ಅವರ ಪತ್ನಿಯರು ಮಾತ್ರ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.

ರಿತಿಕಾ ಸಜ್ದೆ (ರೋಹಿತ್ ಶರ್ಮಾ ಅವರ ಪತ್ನಿ): ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 9 ವರ್ಷದ ಮಗುವಿನ ಪ್ರತಿಭಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪೊಲೀಸ್ ಲಾಠಿಚಾರ್ಜ್‌ಗೆ ತಾನು ಹೆದರುವುದಿಲ್ಲ ಮತ್ತು ಭಗತ್ ಸಿಂಗ್‌ನಿಂದ ಪ್ರೇರಿತಳಾಗಿ ತಾನು ಇಲ್ಲಿಗೆ ಬಂದಿದ್ದೇನೆ ಎಂದು ಮಗು ನೀಡಿದ ಹೇಳಿಕೆಯನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ.

ದೇವೀಶಾ ಶೆಟ್ಟಿ (ಸೂರ್ಯಕುಮಾರ್ ಯಾದವ್ ಅವರ ಪತ್ನಿ): ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವೀಶಾ ಶೆಟ್ಟಿ ಅವರು ಸರಣಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಹಂಚಿಕೊಂಡದ್ದು, ‘ಸರ್ಕಾರವನ್ನು ಟೀಕಿಸುವುದು, ಪ್ರಧಾನಿಯನ್ನು ಪ್ರಶ್ನಿಸುವುದು ಮತ್ತು ನೀತಿಗಳ ವಿರುದ್ಧ ಪ್ರತಿಭಟಿಸುವುದು ಪ್ರಜಾಪ್ರಭುತ್ವ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರವನ್ನು ಆಶ್ರಯಿಸುವುದು ಮತ್ತು ಸರ್ಕಾರಿ ಆಸ್ತಿಗಳನ್ನು ನಾಶಪಡಿಸುವುದು ಸಹ ತಪ್ಪು’ ಎಂದು ಬರೆದುಕೊಂಡಿದ್ದಾರೆ.

ಸಂಜನಾ ಗಣೇಶನ್ (ಜಸ್ಪ್ರೀತ್ ಬುಮ್ರಾ ಅವರ ಪತ್ನಿ): ಕ್ರೀಡಾ ನಿರೂಪಕಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಪ್ರಯೋಗವನ್ನು ಖಂಡಿಸಿದ್ದಾರೆ. ‘ಯಾವುದೇ ಪ್ರಜಾಪ್ರಭುತ್ವದಲ್ಲಿ, ಅಶ್ರುವಾಯುದಿಂದಾಗಿ ಮಕ್ಕಳು ಉಸಿರುಗಟ್ಟಿಸುವುದನ್ನು ಸಾಮಾನ್ಯ ವಿಷಯವೆಂದು ಪರಿಗಣಿಸಬಾರದು’ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾ ಸರೋಜ್ (ರಿಂಕು ಸಿಂಗ್ ಅವರ ಭಾವಿ ಮಡದಿ): ಕ್ರಿಕೆಟಿಗ ರಿಂಕು ಸಿಂಗ್ ಅವರ ಭಾವಿ ಪತ್ನಿ ಮತ್ತು ಮಚ್ಚಲಿಶಹರ್ (ಯುಪಿ) ನ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಲು ನೇರವಾಗಿ ಜಂತರ್ ಮಂತರ್‌ಗೆ ಆಗಮಿಸಿದ್ದರು. ಹಿರಿಯ ನಾಯಕಿ ಡಿಂಪಲ್ ಯಾದವ್ ಅವರೊಂದಿಗೆ ಅವರು ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಅನ್ನು ತೀವ್ರವಾಗಿ ಪ್ರತಿಭಟಿಸಿದರು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯಿದ್ದು, ‘ಪ್ರತಿಯೊಬ್ಬ ವಿದ್ಯಾರ್ಥಿಗೂ ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡುವ ಮತ್ತು ಅವರ ಕನಸುಗಳನ್ನು ನನಸಾಗಿಸುವ ಹಕ್ಕಿದೆ. ಹಿಂಸೆಯಲ್ಲ, ಶಾಂತಿಯುತ ಚರ್ಚೆಗಳ ಮೂಲಕ ಮಾತ್ರ ಭಾರತದ ಭವಿಷ್ಯಕ್ಕೆ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಬಹುದು’ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:55 pm, Fri, 24 July 26

Source link

ಹೆಚ್​​​ಡಿ ದೇವೇಗೌಡರ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭೇಟಿ – Kannada News | Governor thaawarchand gehlot Visits HD Devegowda House For cehannama demise

ಬೆಂಗಳೂರು, (ಜುಲೈ 24): ಮಾಜಿ ಪ್ರಧಾನಿ ಹೆಚ್​​​​ಡಿ ದೇವೇಗೌಡ ಅವರ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದು, ಚೆನ್ನಮ್ಮ ನಿಧನ ಹಿನ್ನೆಲೆಯಲ್ಲಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ದೇವೇಗೌಡ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟಕ್ಕೆ ಬ್ರೇಕ್​​ ಹಾಕಲು ಮುಂದಾದ ರಾಜ್ಯ ಸರ್ಕಾರ: ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರ – Kannada News | Karnataka to Deploy CCTV, GPS Tracking for Anna Bhagya Rice to Curb Black Marketing; Ration Shop Hours Extended

ಬೆಂಗಳೂರು, ಜುಲೈ 24: ಕಾಳಸಂತೆಯಲ್ಲಿ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಅನ್ನಭಾಗ್ಯದ ಅಕ್ಕಿಯ ಮಾರಾಟ ಸರ್ಕಾರಕ್ಕೆ ತಲೆನೋವಾಗಿ ಮಾರ್ಪಟ್ಟಿದ್ದು, ಶತಾಯ ಗತಾಯ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈಗಾಗಲೇ 1,493 ಪ್ರಕರಣಗಳನ್ನು ದಾಖಲಿಸಿ, ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆಯಾದರೂ ಕಾಳಸಂತೆ ಜಾಲ ಇನ್ನೂ ಸಕ್ರಿಯವಾಗಿಯೇ ಇರುವ ಕಾರಣ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಏನೆಲ್ಲ ನಿರ್ಧಾರ?

ಅಕ್ಕಿ ಕಳ್ಳಸಾಗಣೆಗೆ ತಡೆ ಹಾಕಲು ಸರ್ಕಾರ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದ ಮೋಸ ತಪ್ಪಿಸಲು ಸಿಸಿಟಿವಿ ಅಳವಡಿಕೆ, ಕಮಾಂಡ್ ಸೆಂಟರ್ ಮೂಲಕ ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗಳ ರಿಯಲ್ ಟೈಮ್ ಮಾನಿಟರಿಂಗ್, ಯಾವ ಲಾರಿ ಅಂಗಡಿಗೆ ಹೋಗುತ್ತಿದೆ, ಮಧ್ಯದಲ್ಲಿ ಮಾರ್ಗ ಬದಲಿಸುತ್ತಿದೆಯೇ ಎನ್ನುವುದನ್ನೂ ಪರಿಶೀಲಿಸುವ ವ್ಯವಸ್ಥೆ ಜಾರಿಯಾಗಲಿದೆ.

ಇದನ್ನೂ ಓದಿ: ಬಡವರ ಹೊಟ್ಟೆಗೆ ಕನ್ನ ಹಾಕಿದ ಮಾಜಿ ಜಿ.ಪಂ ಸದಸ್ಯನ ಮಗ; ಯಾದಗಿರಿಯಲ್ಲಿ ಬಟಾ ಬಯಲಾಯ್ತು ಅಕ್ರಮ ಅಕ್ಕಿ ದಂಧೆ

ನ್ಯಾಯಬೆಲೆ ಅಂಗಡಿ ಸಮಯ ವಿಸ್ತರಣೆ

ಫಲಾನುಭವಿಗಳಿಗೆ ಇನ್ನಷ್ಟು ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲೂ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂಗಡಿಗಳು ತೆರೆದಿರಲಿದ್ದು, ಫಲಾನುಭವಿಗಳು ತಮ್ಮ ಅನುಕೂಲದ ವೇಳೆಯಲ್ಲಿ ಅಕ್ಕಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವದ ಭರವಸೆಯಾಗಿರುವ ಇಂದಿರಾ ಕಿಟ್ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದ್ದು, ಮುಂದಿನ ಎರಡು-ಮೂರು ತಿಂಗಳೊಳಗೆ ಕಿಟ್ ವಿತರಣೆ ಆರಂಭವಾಗಲಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಈ ಕಿಟ್‌ಗಳಿಂದ ಜನರಿಗೆ ಪೌಷ್ಟಿಕ ಆಹಾರ ತಲುಪಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಕುರಿತು ಈ ವೇಳೆ ಮಾತನಾಡಿದ ಸಚಿವರು, ಸರ್ಕಾರ ಆರಂಭದಲ್ಲಿ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರದಿಂದ ಅಗತ್ಯ ಪ್ರಮಾಣದ ಅಕ್ಕಿ ಸಿಗದ ಕಾರಣ ಐದು ಕೆಜಿ ಅಕ್ಕಿ ಹಾಗೂ ಉಳಿದ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು. ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಮೂರು ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ವಿತರಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:31 pm, Fri, 24 July 26

Source link

ಮಹಾರಾಷ್ಟ್ರದಲ್ಲಿ ಮಳೆಯಬ್ಬರ: ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ

ಚಿಕ್ಕೋಡಿ, ಜುಲೈ 24: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಕರ್ನಾಟಕದ ಗಡಿ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಮಳೆಯಿಲ್ಲದಿದ್ದರೂ, ಮಹಾರಾಷ್ಟ್ರದ ಮಳೆಯಿಂದಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಎಂಟು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.  ಕೃಷ್ಣಾ ನದಿಗೆ ಸುಮಾರು 90,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂದಗಂಗಾ ಮತ್ತು ವೇದಗಂಗಾ ನದಿಗಳು ಕೂಡ ಮೈದುಂಬಿ ಹರಿಯುತ್ತಿವೆ. ಕಲ್ಲೋಳ ಬ್ಯಾರೇಜ್ ಬಳಿಯ ದತ್ತ ಮಂದಿರವೂ ಮುಳುಗಡೆಯಾಗಿದ್ದು, ನದಿಗಳ ನೀರಿನ ಮಟ್ಟ ಏರಿಕೆ ಕಂಡಿರುವುದರಿಂದ ಕೃಷಿ ಭೂಮಿ ಜಲಾವೃತವಾಗುವ ಭೀತಿ ರೈತರಲ್ಲಿ ಆತಂಕ ಮೂಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version