PMJVK ಯೋಜನೆ ಫಲಾನುಭವಿಗಳು ಯಾರು? ಜಿಲ್ಲಾ ಮಟ್ಟದ ಮಾಹಿತಿ ಇಲ್ಲವೆಂದ ಕೇಂದ್ರ ಸರ್ಕಾರ – Kannada News | PMJVK Scheme: Centre Admits to Lacking District Level Database to Measure Impact of Minority Development Funds

ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜುImage Credit source: PTI

ಬೆಂಗಳೂರು, ಜುಲೈ 24: ಕರ್ನಾಟಕದ ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (PMJVK) ಅಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ, ಈ ಯೋಜನೆಯ ಪರಿಣಾಮವನ್ನು ಅಳೆಯಲು ಅಗತ್ಯವಾದ ಜಿಲ್ಲಾ ಮಟ್ಟದ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ.

ರಾಯಚೂರು ಸಂಸದ ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, PMJVK ಯೋಜನೆಯಡಿ ಫಲಾನುಭವಿಗಳ ಪ್ರದೇಶ, ಮೂಲಸೌಕರ್ಯ ಕೊರತೆ ಅಥವಾ ಯೋಜನೆಯ ಪರಿಣಾಮವನ್ನು ಅಳೆಯುವ ಪ್ರತ್ಯೇಕ ಜಿಲ್ಲಾ ಮಟ್ಟದ ಡೇಟಾಬೇಸ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. PMJVK ಯೋಜನೆಯು ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳ ಅಭಿವೃದ್ಧಿ ಕೊರತೆ ನಿವಾರಣೆಗೆ ರೂಪಿಸಿರುವ ಬೇಡಿಕೆ ಆಧಾರಿತ (Demand-Driven) ಯೋಜನೆಯಾಗಿದೆ. ಆದರೆ, ಫಲಾನುಭವಿಗಳ ಪ್ರದೇಶಗಳನ್ನು ಗುರುತಿಸುವುದು, ಸ್ಥಳೀಯ ಮೂಲಸೌಕರ್ಯದ ಕೊರತೆಗಳನ್ನು ದಾಖಲಿಸುವುದು ಅಥವಾ ಯೋಜನೆಯ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಯಾವುದೇ ಕೇಂದ್ರ ಡೇಟಾಬೇಸ್‌ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಗುಂಡಿ ಬಿದ್ದ ಗುಂಡ್ಲುಪೇಟೆ ಮುಖ್ಯ ರಸ್ತೆಗಳನ್ನು ಸ್ವಂತ ವೆಚ್ಚದಲ್ಲಿ ಮುಚ್ಚಿದ ಕೂಲಿ ಕಾರ್ಮಿಕ

699 ಯೋಜನೆಗಳು, 7 ಕೋಟಿಗೂ ಹೆಚ್ಚು ಅನುದಾನ

ಜನರಿಗಾಗಿ ರೂಪಿಸಲಾದ ಯೋಜನೆಗಳು ನಿಜವಾಗಿಯೂ ಅವರ ಜೀವನದಲ್ಲಿ ಬದಲಾವಣೆ ತಂದಿವೆಯೇ ಎಂಬುದನ್ನು ತಿಳಿಯಲು ಯಾವುದೇ ವ್ಯವಸ್ಥೆ ಇಲ್ಲ. ಸಾರ್ವಜನಿಕ ಹಣ ಅಗತ್ಯವಿರುವ ಸಮುದಾಯಗಳಿಗೆ ತಲುಪುತ್ತಿದೆಯೇ, ಯೋಜನೆಗಳು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ನಾಗರಿಕರು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2021-22ರಿಂದ 2025-26ರವರೆಗೆ ಕರ್ನಾಟಕದಲ್ಲಿ PMJVK ಅಡಿಯಲ್ಲಿ 699 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 7 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಫಲಿತಾಂಶ ಆಧಾರಿತ ಮೇಲ್ವಿಚಾರಣೆ ಇಲ್ಲದ ಕಾರಣ, ಈ ಹೂಡಿಕೆ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಮೂಲಭೂತ ಸೇವೆಗಳ ಸುಧಾರಣೆಗೆ ಎಷ್ಟು ನೆರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕುಮಾರ ನಾಯಕ ಹೇಳಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಸುಮಾರು ಶೇ.15ರಷ್ಟಿದ್ದು, ಅನೇಕ ಕುಟುಂಬಗಳು ಸರ್ಕಾರಿ ಕಲ್ಯಾಣ ಯೋಜನೆಗಳನ್ನೇ ಅವಲಂಬಿಸಿವೆ. ಜಿಲ್ಲಾ ಮಟ್ಟದ ಮಾಹಿತಿ ಇಲ್ಲದ ಕಾರಣ, ಯಾವ ಪ್ರದೇಶಗಳು ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿವೆ ಎಂಬುದನ್ನು ಗುರುತಿಸುವುದು ಹಾಗೂ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವುದು ಕಷ್ಟವಾಗುತ್ತಿದೆ ಎಂದು ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-G) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY)ಗಳಿಗೆ ಇರುವಂತೆ ಜಿಲ್ಲಾವಾರು ಕಾರ್ಯಕ್ಷಮತೆಯ ಮೇಲ್ವಿಚಾರಣಾ ವ್ಯವಸ್ಥೆಯನ್ನು PMJVKಗೂ ಜಾರಿಗೊಳಿಸಬೇಕು ಎಂದು ಕುಮಾರ ನಾಯಕ ಆಗ್ರಹಿಸಿದ್ದಾರೆ. ಯೋಜನೆಯ ಫಲಿತಾಂಶಗಳನ್ನು ನಿಯಮಿತವಾಗಿ ದಾಖಲಿಸಿ, ಅಭಿವೃದ್ಧಿಯಿಂದ ವಂಚಿತ ಪ್ರದೇಶಗಳನ್ನು ಗುರುತಿಸಿ, ಭವಿಷ್ಯದ ಹೂಡಿಕೆಗಳನ್ನು ಅಗತ್ಯವಿರುವ ಕಡೆಗೆ ಕೇಂದ್ರೀಕರಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಯೋಜನೆಯ ನೈಜ ಲಾಭ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ? ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪಿನ ಮಾಹಿತಿ ಇಲ್ಲಿದೆ – Kannada News | When Is Property Considered Ancestral? Karnataka High Court Explains Children’s Rights in Inherited Property

ಕರ್ನಾಟಕ ಹೈಕೋರ್ಟ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 24: ಪಿತ್ರಾರ್ಜಿತ ಆಸ್ತಿ (Ancestral Property) ಮತ್ತು ಸ್ವಯಾರ್ಜಿತ ಆಸ್ತಿ (Self-acquired Property) ನಡುವಿನ ವ್ಯತ್ಯಾಸದ ಬಗ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ಇತ್ತೀಚೆಗೆ ಮಹತ್ವದ ತೀರ್ಪು ಹಾಗೂ ಸ್ಪಷ್ಟನೆ ನೀಡಿದೆ. ತಾತನಿಂದ ತಂದೆಗೆ ಬಂದ ಎಲ್ಲ ಆಸ್ತಿಯೂ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಹೊಂದಿರುವ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಸ್ತಿಯ ಮೂಲ, ಅದು ಹೇಗೆ ಸಂಪಾದನೆಯಾಯಿತು ಮತ್ತು ಅದರ ಕಾನೂನು ಸ್ವರೂಪ ಯಾವುದು ಎಂಬುದರ ಆಧಾರದಲ್ಲೇ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಸ್ವಯಾರ್ಜಿತ ಆಸ್ತಿಯೇ ಎಂಬುದು ನಿರ್ಧಾರವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪಿತ್ರಾರ್ಜಿತ ಆಸ್ತಿ ಎಂದು ಯಾವಾಗ ಪರಿಗಣಿಸಲಾಗುತ್ತದೆ?

ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ಕೌಟುಂಬಿಕ ಆಸ್ತಿಯಾಗಿ ತಲೆಮಾರುಗಳಿಂದ ಮುಂದುವರಿದಿರುವ ಹಾಗೂ ಅದರ ಜಂಟಿ ಸ್ವರೂಪ ಉಳಿಸಿಕೊಂಡಿರುವ ಆಸ್ತಿಯನ್ನೇ ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂಥ ಆಸ್ತಿಯಲ್ಲಿ ಮಕ್ಕಳಿಗೆ ಹುಟ್ಟಿನಿಂದಲೇ ಹಕ್ಕು ಉಂಟಾಗುತ್ತದೆ.

ತಂದೆಗೆ ಬಂದ ಎಲ್ಲ ಆಸ್ತಿಯಲ್ಲೂ ಮಕ್ಕಳಿಗೆ ಹುಟ್ಟಿನಿಂದ ಹಕ್ಕಿದೆಯೇ?

ಇಲ್ಲ. ತಾತ ತನ್ನ ಸ್ವಂತ ದುಡಿಮೆಯಿಂದ ಅಥವಾ ಖರೀದಿಯಿಂದ ಸಂಪಾದಿಸಿದ ಸ್ವಯಾರ್ಜಿತ ಆಸ್ತಿಯನ್ನು ನಂತರ ತಂದೆ ಪಡೆದಿದ್ದರೂ, ಅದು ಸ್ವಯಂಚಾಲಿತವಾಗಿ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂಥ ಆಸ್ತಿಯನ್ನು ತಂದೆ ತನ್ನ ಪ್ರತ್ಯೇಕ ಆಸ್ತಿಯಾಗಿ ಹೊಂದಿರಬಹುದು. ಆ ಸಂದರ್ಭದಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ.

ಸ್ವಯಾರ್ಜಿತ ಆಸ್ತಿ ಎಂದರೇನು?

ವ್ಯಕ್ತಿಯೊಬ್ಬರು ತಮ್ಮ ಸ್ವಂತ ಆದಾಯ, ಖರೀದಿ, ಉಡುಗೊರೆ, ಉಯಿಲು (Will) ಅಥವಾ ವೈಯಕ್ತಿಕ ಪ್ರಯತ್ನದ ಮೂಲಕ ಪಡೆದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇಂತಹ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಆ ವ್ಯಕ್ತಿಗೇ ಇರುತ್ತದೆ. ಅದನ್ನು ಯಾರಿಗೆ ಬೇಕಾದರೂ ವರ್ಗಾಯಿಸುವ ಅಥವಾ ಉಯಿಲು ಮಾಡುವ ಅಧಿಕಾರವೂ ಅವರಿಗೇ ಸೇರಿದೆ.

ಸ್ವಯಾರ್ಜಿತ ಆಸ್ತಿ ಯಾವಾಗ ಪಿತ್ರಾರ್ಜಿತವಾಗಬಹುದು?

ಸ್ವಯಾರ್ಜಿತ ಆಸ್ತಿಯನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಹಿಂದೂ ಅವಿಭಕ್ತ ಕುಟುಂಬದ ಸಾಮೂಹಿಕ ಆಸ್ತಿಯಾಗಿ ಸೇರಿಸಿದರೆ ಅಥವಾ ಅದು ಕುಟುಂಬದ ಆಸ್ತಿಯಾಗಿ ತನ್ನ ಸ್ವರೂಪ ಉಳಿಸಿಕೊಂಡಿದ್ದರೆ, ಆ ಸಂದರ್ಭಗಳಲ್ಲಿ ಅದರ ಕಾನೂನು ಸ್ವರೂಪ ಬದಲಾಗಬಹುದು. ಕೇವಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾದ ಕಾರಣಕ್ಕೆ ಮಾತ್ರ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು?

ತಂದೆ ಜೀವಂತವಾಗಿರುವವರೆಗೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕು ಇರುವುದಿಲ್ಲ. ಆದರೆ ತಂದೆ ಉಯಿಲು ಮಾಡದೆ ಮೃತಪಟ್ಟರೆ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿ ಮಕ್ಕಳು ಪಾಲು ಪಡೆಯಬಹುದು. ಅಥವಾ ತಂದೆ ಉಯಿಲಿನಲ್ಲಿ ಮಕ್ಕಳಿಗೆ ಪಾಲು ನೀಡಿದ್ದರೆ ಅದರಂತೆ ಅವರಿಗೆ ಹಕ್ಕು ಸಿಗುತ್ತದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಹಕ್ಕು ಇದೆಯೇ?

ಹೌದು. 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕು ಇದೆ. ಆದರೆ ಈ ತಿದ್ದುಪಡಿಯ ಪ್ರಕಾರ ಕೂಡ, ಸ್ವಯಾರ್ಜಿತ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ಮಹಿಳೆ ಉಷಾ ಎನ್ ಸ್ವಾಮಿ ಎಂಬವರು ತಮ್ಮ ತಾತನ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ತಾತನ ನಿಧನದ ಬಳಿಕ ಆಸ್ತಿ ತಂದೆಗೆ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗಿದೆ ಮತ್ತು ತಮಗೂ ಜನ್ಮಸಿದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು. ಆದರೆ, ಆ ಆಸ್ತಿಯು ಮೂಲತಃ ತಾತನ ಸ್ವಯಾರ್ಜಿತ ಆಸ್ತಿಯಾಗಿದ್ದು, ನಂತರ ತಂದೆಗೆ ಅವರ ಪ್ರತ್ಯೇಕ ಆಸ್ತಿಯಾಗಿ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಹಿಂದೆ ತೀರ್ಪು ನೀಡಿದೆ. ಹೀಗಾಗಿ ಮಹಿಳೆಯು ಪಾಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನೂ ಓದಿ: ಹಿಂದೂ ವಿವಾಹ ಒಪ್ಪಂದವಲ್ಲ, ಪವಿತ್ರ ಸಂಸ್ಕಾರ; ಆಸಕ್ತಿ ಇಲ್ಲ ಎಂದು ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅರ್ಹತೆ ಪಡೆಯಲು NEET UGಯಲ್ಲಿ ಕನಿಷ್ಠ ಎಷ್ಟು ಅಂಕ ಪಡೆದಿರಬೇಕು? – Kannada News | NEET UG 2026: MBBS Seats Increase, Cut off and Counseling Process Updates

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇತ್ತೀಚೆಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) UG 2026 ಫಲಿತಾಂಶಗಳನ್ನು ಪ್ರಕಟಿಸಿದೆ. ಮತ್ತೊಂದೆಡೆ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯು (NMC) ಹೊಸ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ್ದು, ಈ ಬಾರಿ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೌನ್ಸೆಲಿಂಗ್ ಪ್ರಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್‌ನಲ್ಲಿ ಅಖಿಲ ಭಾರತ ಕೋಟಾ ಕೌನ್ಸೆಲಿಂಗ್ ಪ್ರಾರಂಭವಾಗಲಿದ್ದು, ತದನಂತರ ರಾಜ್ಯ ಕೋಟಾ ಕೌನ್ಸೆಲಿಂಗ್ ನಡೆಯಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಪ್ರವೇಶ; ನಿರೀಕ್ಷಿತ ಕಟ್ಆಫ್ ವಿವರಗಳು:

ಈ ವರ್ಷ NEET UG ಅರ್ಹತಾ ಅಂಕಗಳು (Qualifying Marks) 213 ಕ್ಕೆ ಏರಿಕೆಯಾಗಿದ್ದು, ಇದು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶದ ಮೇಲೆಯೂ ಪರಿಣಾಮ ಬೀರಲಿದೆ ಎಂದು ವೈದ್ಯಕೀಯ ಪರೀಕ್ಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಅಖಿಲ ಭಾರತ ಕೋಟಾ (AIQ): ಸಾಮಾನ್ಯ ವರ್ಗದ (General Category) ಅಭ್ಯರ್ಥಿಗಳಿಗೆ ಅಖಿಲ ಭಾರತ ಕೋಟಾದಡಿಯಲ್ಲಿ ಸರ್ಕಾರಿ ಕಾಲೇಜು ಪಡೆಯಲು ಕಟ್ಆಫ್ ಅಂಕ ಸುಮಾರು 565 ಇರಬಹುದು.
  • ರಾಜ್ಯ ಕೋಟಾ (State Quota): ಸಾಮಾನ್ಯ ವರ್ಗದ ಅಭ್ಯರ್ಥಿಗಳು 539 ರವರೆಗಿನ ಅಂಕಗಳಿಗೆ ರಾಜ್ಯ ಕೋಟಾದ ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಪಡೆಯುವ ಸಾಧ್ಯತೆಯಿದೆ. (ಗಮನಿಸಿ: ರಾಜ್ಯ ಕೋಟಾ ಕಟ್ಆಫ್ ಆಯಾ ರಾಜ್ಯಗಳಿಗೆ ಅನುಗುಣವಾಗಿ ಬದಲಾಗುತ್ತದೆ).

ದೇಶಾದ್ಯಂತ 9,000ಕ್ಕೂ ಹೆಚ್ಚು MBBS ಸೀಟುಗಳ ಹೆಚ್ಚಳ:

NMC ಬಿಡುಗಡೆ ಮಾಡಿರುವ 2026-27ನೇ ಶೈಕ್ಷಣಿಕ ಸಾಲಿನ ಹೊಸ ಮ್ಯಾಟ್ರಿಕ್ಸ್ ಪ್ರಕಾರ, ಈ ವರ್ಷ ಒಟ್ಟು 823 ವೈದ್ಯಕೀಯ ಕಾಲೇಜುಗಳಲ್ಲಿ 1,36,939 MBBS ಸೀಟುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಹೊಸದಾಗಿ ಪ್ರಾರಂಭವಾದ 4 ವೈದ್ಯಕೀಯ ಕಾಲೇಜುಗಳೂ ಸೇರಿವೆ. ಕಳೆದ ಸಾಲಿನಲ್ಲಿ 819 ಕಾಲೇಜುಗಳ ಮೂಲಕ 1,28,875 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗಿತ್ತು. ಅಂದರೆ, ಈ ಬಾರಿ 9,000ಕ್ಕೂ ಹೆಚ್ಚು ಹೊಸ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ.

ಕೌನ್ಸೆಲಿಂಗ್ ಪ್ರಕ್ರಿಯೆಯ ಎರಡು ಪ್ರಮುಖ ವಿಭಾಗಗಳು:

ಎಂಬಿಬಿಎಸ್ ಪ್ರವೇಶಕ್ಕಾಗಿ ಮುಖ್ಯವಾಗಿ ಎರಡು ಹಂತಗಳಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತದೆ:

  • ಅಖಿಲ ಭಾರತ ಕೋಟಾ ಕೌನ್ಸೆಲಿಂಗ್ (AIQ): ಇದನ್ನು ವೈದ್ಯಕೀಯ ಸಮಾಲೋಚನಾ ಸಮಿತಿ (MCC) ನಿರ್ವಹಿಸುತ್ತದೆ. ಇದರ ಮೂಲಕ AIIMS, JIPMER ನಂತಹ ಕೇಂದ್ರೀಯ ಸಂಸ್ಥೆಗಳ ಶೇ.100ರಷ್ಟು ಸೀಟುಗಳು ಹಾಗೂ ಪ್ರತಿಯೊಂದು ರಾಜ್ಯದ ಸರ್ಕಾರಿ ಕಾಲೇಜುಗಳ ಶೇ.15 ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.
  • ರಾಜ್ಯ ಕೋಟಾ ಕೌನ್ಸೆಲಿಂಗ್ (State Quota): ಆಯಾ ರಾಜ್ಯಗಳ ಆರೋಗ್ಯ ಸೇವೆಗಳ ನಿರ್ದೇಶನಾಲಯವು ಇದನ್ನು ನಡೆಸುತ್ತದೆ. ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಉಳಿದ ಶೇ.85 ಸೀಟುಗಳನ್ನು ಈ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲಾಗುತ್ತದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಕೌನ್ಸೆಲಿಂಗ್‌ನ 4 ಹಂತಗಳು (Rounds of Counseling):

ಸೀಟುಗಳ ಹಂಚಿಕೆಗಾಗಿ ನಾಲ್ಕು ಸುತ್ತುಗಳಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತದೆ:

  • ಮೊದಲ ಸುತ್ತು (Round 1): ನೋಂದಣಿ, ಆಯ್ಕೆ ಭರ್ತಿ (Option Entry) ಮತ್ತು ಸೀಟು ಹಂಚಿಕೆ ನಡೆಯುತ್ತದೆ. ಅಭ್ಯರ್ಥಿಗಳು ಸೀಟು ಖಚಿತಪಡಿಸಬಹುದು ಅಥವಾ ಮುಂದಿನ ಸುತ್ತಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
  • ಎರಡನೇ ಸುತ್ತು (Round 2): ಮೊದಲ ಸುತ್ತಿನಲ್ಲಿ ಹಂಚಿಕೆಯಾಗದೆ ಉಳಿದಿರುವ ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ.
  • ಮಾಪ್-ಅಪ್ ಸುತ್ತು (Mop-Up Round / Round 3): ಮೊದಲ ಮತ್ತು ಎರಡನೇ ಸುತ್ತಿನ ನಂತರವೂ ಖಾಲಿ ಉಳಿಯುವ ಸೀಟುಗಳನ್ನು ಭರ್ತಿ ಮಾಡಲು ಈ ಸುತ್ತು ನಡೆಯುತ್ತದೆ.
  • ಸ್ಟ್ರೇ ವೇಕೆನ್ಸಿ ಸುತ್ತು (Stray Vacancy Round): ಕೊನೆಯದಾಗಿ ಉಳಿದುಕೊಳ್ಳುವ ಸೀಟುಗಳನ್ನು ಭರ್ತಿ ಮಾಡಲು ಈ ಹಂತವನ್ನು ನಡೆಸಲಾಗುತ್ತದೆ. ಕೆಲವು ಬಾರಿಗೆ ಈ ಸುತ್ತಿನಲ್ಲಿ ತುಸು ಕಡಿಮೆ ಅಂಕಗಳಿದ್ದರೂ ಸೀಟು ಸಿಗುವ ಸಾಧ್ಯತೆಯಿರುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

NEET UG 2026 ರಲ್ಲಿ ಸಾಮಾನ್ಯ ವರ್ಗಕ್ಕೆ ಸರ್ಕಾರಿ ಸೀಟಿಗೆ ನಿರೀಕ್ಷಿತ ಕಟ್ಆಫ್ ಎಷ್ಟು?

ಉತ್ತರ: ಅಖಿಲ ಭಾರತ ಕೋಟಾಕ್ಕೆ ಸುಮಾರು 565 ಅಂಕಗಳು ಮತ್ತು ರಾಜ್ಯ ಕೋಟಾಕ್ಕೆ ಸುಮಾರು 539 ಅಂಕಗಳು.

2026-27ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು ಎಷ್ಟು MBBS ಸೀಟುಗಳು ಲಭ್ಯವಿವೆ?

ಉತ್ತರ: 823 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 1,36,939 MBBS ಸೀಟುಗಳು ಲಭ್ಯವಿವೆ.

MBBS ಪ್ರವೇಶಕ್ಕೆ ಕೌನ್ಸೆಲಿಂಗ್ ಎಷ್ಟು ಸುತ್ತುಗಳಲ್ಲಿ ನಡೆಸಲಾಗುತ್ತದೆ?

ಉತ್ತರ: MBBS ಪ್ರವೇಶಕ್ಕೆ ಒಟ್ಟು ನಾಲ್ಕು ಸುತ್ತುಗಳಲ್ಲಿ (Round 1, Round 2, Mop-Up, Stray Vacancy) ಕೌನ್ಸೆಲಿಂಗ್ ನಡೆಸಲಾಗುತ್ತದೆ.

Source link

ಫ್ಲಿಪ್​ಕಾರ್ಟ್​ನಲ್ಲಿ ಬುಕ್ ಮಾಡಿದ್ದು ಐಫೋನ್, ಬಂದಿದ್ದು ಗಡ್ಡಕ್ಕೆ ಹಚ್ಚುವ ಎಣ್ಣೆ, 1.8 ಲಕ್ಷ ರೂ. ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ – Kannada News | Flipkart fined Rs 1.8 Lakh by Consumer Court for delivering beard oil instead of iPhone

ಮುಂಬೈ,ಜುಲೈ 24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಪ್ರೀಮಿಯಂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡಕ್ಕೆ ಬೆಳೆಸುವ ಎಣ್ಣೆ’ ತಲುಪಿಸಿದ್ದ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್(Flipkart)​ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಗ್ರಾಹಕನಿಗೆ ಫೋನ್‌ನ ಪೂರ್ಣ ಮೊತ್ತ 1.11 ಲಕ್ಷ ರೂ. ವನ್ನು ಬಡ್ಡಿ ಸಮೇತ ಮರುಪಾವತಿಸುವುದರ ಜೊತೆಗೆ, ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕಾನೂನು ವೆಚ್ಚವಾಗಿ 70,000 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?
ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ ನೋ-ಕಾಸ್ಟ್ ಇಎಂಐ ಯೋಜನೆಯಡಿ 1,11,793 ರೂ. ವೆಚ್ಚ ಮಾಡಿ ಆ್ಯಪಲ್ ಐ-ಫೋನ್ 14 ಪ್ರೊ (128 GB) ಬುಕ್ ಮಾಡಿದ್ದರು. ಫೋನ್‌ಗಾಗಿ ಆರ್ಡರ್ ಮಾಡಿದ್ದ ಚಾರ್ಜರ್ ಮತ್ತು ಕವರ್ ಸರಿಯಾಗಿ ತಲುಪಿದ್ದರೂ, ಮುಖ್ಯ ಪಾರ್ಸೆಲ್ ಓಪನ್ ಮಾಡಿದಾಗ ಐಫೋನ್ ಬದಲಿಗೆ ಬಾಕ್ಸ್‌ನಲ್ಲಿ ‘ಗಡ್ಡದ ಬೆಳವಣಿಗೆಗೆ ಬಳಸುವ ಎಣ್ಣೆ’ ಮತ್ತು ಪ್ಯಾಕಿಂಗ್ ಸಾಮಗ್ರಿಗಳಿರುವುದು ಕಂಡುಬಂದಿತ್ತು.

ಗ್ರಾಹಕ ತಕ್ಷಣವೇ ಅಗತ್ಯ ಸಾಕ್ಷ್ಯಗಳೊಂದಿಗೆ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿದರೂ, ಸಂಸ್ಥೆಯು ಯಾವುದೇ ಹಣ ಮರುಪಾವತಿ ಅಥವಾ ಹೊಸ ಫೋನ್ ನೀಡದೇ, ದೂರನ್ನು ಪರಿಹರಿಸಲಾಗಿದೆ ಎಂದು ಪದೇ ಪದೇ ಕ್ಲೋಸ್ ಮಾಡಿದೆ. ಸಮಸ್ಯೆ ಬಗೆಹರಿಯದಿದ್ದಾಗ ಗ್ರಾಹಕರು ಮುಂಬೈನ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೀಠವು ಈ ಕೆಳಗಿನ ಪ್ರಮುಖ ಆದೇಶಗಳನ್ನು ನೀಡಿದೆ.

ಮತ್ತಷ್ಟು ಓದಿ: Amazon Summer Sale: ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಸಮ್ಮರ್ ಸೇಲ್: ಫ್ಲಿಪ್​ಕಾರ್ಟ್​ನಲ್ಲಿ ಸಾಸಾ ಲೇಲೆ ಸೇಲ್

ಐಫೋನ್‌ನ ಪೂರ್ಣ ಮೊತ್ತ 1,11,793 ರೂ.ವನ್ನು ವಾರ್ಷಿಕ ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಜೊತೆಗೆ ಗ್ರಾಹಕನಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ 50,000 ರೂ. ಹಾಗೂ ವ್ಯಾಜ್ಯದ ವೆಚ್ಚವಾಗಿ 20,000 ರೂ.ವನ್ನು 45 ದಿನಗಳ ಒಳಗೆ ಪಾವತಿಸಬೇಕು.

ಗ್ರಾಹಕರಿಗೆ ತಪ್ಪು ವಸ್ತು ತಲುಪಿದಾಗ ಇ-ಕಾಮರ್ಸ್ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಸದೆ ದೂರನ್ನು ಮುಚ್ಚುವುದು “ಅನ್ಯಾಯದ ವ್ಯಾಪಾರ ಪದ್ಧತಿ” ಎಂದು ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಈ ಪ್ರಕರಣದಲ್ಲಿ ತಯಾರಕ ಕಂಪನಿಯಾದ ‘ಆ್ಯಪಲ್ ಇಂಡಿಯಾ’ ಪಾತ್ರವೇನೂ ಇಲ್ಲದಿರುವುದರಿಂದ, ಅದರ ವಿರುದ್ಧದ ದೂರನ್ನು ಆಯೋಗ ವಜಾಗೊಳಿಸಿದೆ. ಪ್ಯಾಕಿಂಗ್ ಮತ್ತು ವಿತರಣೆಯ ಸಂಪೂರ್ಣ ತಪ್ಪು ಫ್ಲಿಪ್‌ಕಾರ್ಟ್ ಮತ್ತು ಅದರ ಮಾರಾಟಗಾರ ಸಂಸ್ಥೆಯದ್ದಾಗಿದೆ ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕರಾವಳಿ’ ಸಿನಿಮಾ ಬಿಡುಡಗೆ ತಡೆಯಬಹುದಿತ್ತು: ಪ್ರಜ್ವಲ್ ದೇವರಾಜ್ ಹಾಗೆ ಮಾಡಲಿಲ್ಲ ಏಕೆ? – Kannada News | Prajwal Devaraj talks about Karavali movie controversy

ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಅರವಿಂದ್ ಇನ್ನೂ ಹಲವರು ನಟಿಸಿ, ಗುರುದತ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಇಂದು (ಜುಲೈ 24) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಕಳೆದ ಕೆಲ ದಿನಗಳಿಂದಲೂ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗುತ್ತಿದ್ದು, ಸಿನಿಮಾ ನೋಡಿದ ಮಂದಿ ಮೆಚ್ಚಿಕೊಂಡಿದ್ದಾರೆ. ಎಲ್ಲೆಡೆ ಪ್ರೀಮಿಯರ್ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆ, ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗಾ ನಡುವೆ ಭಿನ್ನಾಭಿಪ್ರಾಯ ಮೂಡಿ, ಪ್ರಜ್ವಲ್ ಅವರು ಸಿನಿಮಾದ ಪ್ರಚಾರಕ್ಕೆ ಬರಲಿಲ್ಲ, ಪ್ರಜ್ವಲ್ ಅವರಿಂದ ಪಾತ್ರಕ್ಕೆ ಡಬ್ ಸಹ ಮಾಡಿಸಿಲ್ಲ. ಇಷ್ಟು ದಿನ ಬಹುತೇಕ ಮೌನವಾಗಿದ್ದ ಪ್ರಜ್ವಲ್ ಅವರು ಇದೀಗ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಹಾಗೂ ಹಿಂದೆ ನಡೆದ ವಿವಾದಗಳ ಬಗ್ಗೆ ಮಾತನಾಡಿದ್ದಾರೆ.

‘ಕರಾವಳಿ’ ಸಿನಿಮಾನಲ್ಲಿ ತಮಗೆ ಡಬ್ಬಿಂಗ್ ಮಾಡಲು ಅವಕಾಶ ಸಿಗದೆ ಇರುವುದು ಬಹಳ ನೋವಿದೆ ಎಂದ ಪ್ರಜ್ವಲ್, ‘ಯಾವುದೇ ನಟನ ಒಪ್ಪಿಗೆ ಇಲ್ಲದೆ ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಧ್ವನಿ ನೀಡಿಸುವಂತಿಲ್ಲ. ಅದು ನಟನ ಹಕ್ಕಿನ ಉಲ್ಲಂಘನೆ. ನಟನಿಂದ ಎನ್​​ಓಸಿ ಪಡೆದ ಬಳಿಕವೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಬಹುದು. ನನ್ನ ಸುತ್ತಲೂ ಇದ್ದ ಕೆಲವರು, ನೀವು ಸಿನಿಮಾದ ಮೇಲೆ ದಾವೆ ಹೂಡಿ, ಬಿಡುಗಡೆ ತಡೆಯಿರಿ, ರಿಲೀಸ್ ಆಗದಂತೆ ಸ್ಟೇ ತನ್ನಿ’ ಎಂದರು. ಆದರೆ ನನಗೆ ಅದು ಇಷ್ಟವಿಲ್ಲ’ ಎಂದಿದ್ದಾರೆ.

‘ಆ ಸಿನಿಮಾಕ್ಕಾಗಿ ನನ್ನನ್ನೂ ಸೇರಿದಂತೆ ಹಲವಾರು ತಂತ್ರಜ್ಞರು, ನಟ-ನಟಿಯರು ವರ್ಷಗಳ ಗಟ್ಟಲೆ ಕೆಲಸ ಮಾಡಿದ್ದಾರೆ. ಆದರೆ ಈಗ ನನ್ನೊಬ್ಬನಿಗೆ ಅನ್ಯಾಯ ಆಗಿದೆ ಎಂದು ನಾನು ಸಿನಿಮಾದ ವಿರುದ್ಧ ಸ್ಟೇ ತರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ನಾನು ಆ ಕೆಲಸಕ್ಕೆ ಕೈ ಹಾಕಲಿಲ. ನಮ್ಮ-ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಬಹುದು ಆದರೆ ನಮ್ಮೆಲ್ಲರಿಗಿಂತಲೂ ಸಿನಿಮಾ ದೊಡ್ಡದು, ಆ ಕಾರಣಕ್ಕಾಗಿಯೇ ನಾನು ಅವಕಾಶ ಇದ್ದರೂ ಸಹ ಸಿನಿಮಾದ ವಿರುದ್ಧ ಸ್ಟೇ ತರುವ ಕಾರ್ಯ ಮಾಡಲಿಲ್ಲ’ ಎಂದಿದ್ದಾರೆ ಪ್ರಜ್ವಲ್.

ಇದನ್ನೂ ಓದಿ:ರಾಜ್​ ಬಿ. ಶೆಟ್ಟಿ ಮೇಲೆ ಅಸಮಾಧಾನವೇ? ಪ್ರಜ್ವಲ್ ದೇವರಾಜ್ ಉತ್ತರ ಏನು?

ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡೇ ನಾನು ‘ಕರಾವಳಿ’ ಸಿನಿಮಾ ಒಪ್ಪಿಕೊಂಡಿದ್ದು, ಸಾಕಷ್ಟು ನಿರೀಕ್ಷೆಗಳು, ಉತ್ಸಾಹ ಎಲ್ಲವೂ ಇತ್ತು. ಆ ಸಿನಿಮಾ ಕನ್ನಡ ಚಿತ್ರರಂಗದ ಶ್ರೇಣಿಯನ್ನು ಹೆಚ್ಚಿಸುತ್ತದೆ ಎಂದು ನಂಬಿ ನಾವೆಲ್ಲರೂ ಕೆಲಸ ಮಾಡಿದ್ದೆವು. ನಾನು ಸ್ವತಃ ಸಿನಿಮಾಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದೇನೆ. ಈಗ ಜನ ನೋಡಿ ಮೆಚ್ಚಿಕೊಳ್ಳುತ್ತಿರುವುದು ಬಹಳ ಸಂತೋಷ ತಂದಿದೆ. ಆದರೆ ನಾನು ಪರಿಪೂರ್ಣವಾಗಿ ಸಿನಿಮಾದ ಭಾಗ ಆಗದೇ ಇರುವ ಬಗ್ಗೆ ಖಂಡಿತ ಬೇಸರ ಇದೆ. ಆದರೆ ನಾವು ಮನುಷ್ಯರ ಭಿನ್ನಭಿಪ್ರಾಯಗಳು ಕ್ಷಣಿಕ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ ಪ್ರಜ್ವಲ್.

ಸಂಭಾವನೆ ವಿಚಾರ ಹಾಗೂ ಇನ್ನಿತರೆಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ ಕಾರಣ, ಪ್ರಜ್ವಲ್ ಅವರಿಂದ ಅವರ ಪಾತ್ರಕ್ಕೆ ಡಬ್ ಮಾಡಿಸದೆ ಬೇರೊಬ್ಬ ನಟನಿಂದ ಡಬ್ಬಿಂಗ್ ಅನ್ನು ನಿರ್ದೇಶಕ ಗುರುದತ್ ಗಾಣಿಗಾ ಮಾಡಿಸಿದ್ದಾರೆ. ಇದನ್ನು ಪ್ರಜ್ವಲ್ ದೇವರಾಜ್ ಅಭಿಮಾನಿಗಳು ‘ಕರಾವಳಿ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪ್ರಶ್ನೆ ಸಹ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಮನ್‌ವೆಲ್ತ್ ಗೇಮ್ಸ್ 2026: ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಶುಭಾರಂಭ, ಮೊದಲ ಪದಕ ಖಚಿತಪಡಿಸಿದ ಲವ್ಲಿಕಾ – Kannada News | CWG 2026 Glasgow: Lovlina Secures India’s First Medal, Boosting Hopes

ಗ್ಲ್ಯಾಸ್ಗೋ, ಜು.24 : ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ ಶುರುವಾಗಲಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ (CWG) ನ ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಂಭ್ರಮಿಸಲು ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತದ ತಾರಾ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಲವ್ಲಿಕಾ ಬೊರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು (ಕಂಚು) ಖಚಿತಪಡಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್ ನಿಯಮಗಳ ಪ್ರಕಾರ ಸೆಮಿಫೈನಲ್‌ನಲ್ಲಿ ಸೋಲುವ ಇಬ್ಬರೂ ಸ್ಪರ್ಧಿಗಳಿಗೂ ಕಂಚಿನ ಪದಕ ನೀಡಲಾಗುತ್ತದೆ. ಡ್ರಾ ಪ್ರಕ್ರಿಯೆಯಲ್ಲಿ ಲವ್ಲಿಕಾ ಅವರಿಗೆ ‘ಬೈ’ (Bye) ಲಭಿಸಿ ನೇರವಾಗಿ ಅಂತಿಮ ನಾಲ್ಕರ ಘಟ್ಟ ತಲುಪಿರುವುದರಿಂದ, ಅವರು ರಿಂಗ್‌ಗೆ ಇಳಿಯುವ ಮುನ್ನವೇ ಪದಕ ಖಾತರಿಯಾಗಿದೆ. ಲವ್ಲಿಕಾ ಅವರ ಈ ಪದಕದ ಖಾತ್ರಿಯು ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಮೂಡಿಸಿದೆ. 2022ರ ಬರ್ಮಿಂಗ್‌ಹ್ಯಾಮ್ ಆವೃತ್ತಿಯಲ್ಲಿ ಭಾರತ ಒಟ್ಟು 61 ಪದಕಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿತ್ತು.

ಇದನ್ನೂ ಓದಿ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ

ಆದರೆ, ಈ ಬಾರಿ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಆವೃತ್ತಿಯಲ್ಲಿ ಕೇವಲ 10 ಪ್ರಮುಖ ಕ್ರೀಡೆಗಳನ್ನು ಮಾತ್ರ ಸೇರ್ಪಡೆಗೊಳಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಭಾರತಕ್ಕೆ ಹೆಚ್ಚು ಪದಕಗಳನ್ನು ತಂದುಕೊಟ್ಟಿದ್ದ ಹಾಕಿ, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಹಾಗೂ ಕುಸ್ತಿ ಕ್ರೀಡೆಗಳನ್ನು ಈ ಬಾರಿ ಕೈಬಿಡಲಾಗಿದೆ. ಈ ಕ್ರೀಡೆಗಳಿಂದಲೇ ಭಾರತಕ್ಕೆ ಕಳೆದ ಬಾರಿ 28 ಪದಕಗಳು ಬಂದಿದ್ದವು. ಪ್ರಮುಖ ಕ್ರೀಡೆಗಳು ಇಲ್ಲದಿದ್ದರೂ, ಲವ್ಲಿಕಾ ನೀಡಿದ ಈ ಶುಭಾರಂಭದಿಂದಾಗಿ ಭಾರತ ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ 30ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಆಶಾವಾದ ಹೊಂದಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:39 am, Fri, 24 July 26

Source link

ಎದೆ ಸೀಳಿದರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?: ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ – Kannada News | NEET Row: BJP MLC CT Ravi Sparks Controversy with Remarks on Protestors, Alleges “Tukde Tukde Gang” Involvement

ಚಿಕ್ಕಮಗಳೂರು, ಜುಲೈ 24: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಸಂಬಂಧ ವಿಧಾನ ಪರಿಷತ್​​ ಬಿಜೆಪಿ ಸದಸ್ಯ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ, ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ. ಆತ ಬಂದು ನೀಟ್ ವಿರುದ್ದ ಹೋರಾಟ ಮಾಡುತ್ತಿದ್ದಾನೆ ಎಂದರೆ ಏನರ್ಥ? ಪ್ರತಿಭಟನೆಯಲ್ಲಿ ಬಂದ ಮುಲ್ಲಾ ಗಳು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳ್ತಾರೆ, ಮೋದಿ ಹಠಾವೋ ಅಂತಾರೆ. ಸಿಎಎಗೂ, ಎನ್​​ಆರ್​​ಸಿಗೂಗೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಏನು ಸಂಬಂಧ? ಭಾರತವನ್ನ ತುಂಡರಿಸಬೇಕು ಎಂದು ಹೇಳಿದ ತುಕಡೆ ಗ್ಯಾಂಗ್​​ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

7 ತಿಂಗಳ ಮಗುವಿನ ಪ್ರಾಣ ಉಳಿಸಲು ‘ಸಾವಿನ ಹಾದಿ’ಯಲ್ಲಿ ಓಡಿದ ಹೀರೋ: ಹಿಮಾಚಲದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯ ಸಾಹಸ – Kannada News | Himachal Ambulance Hero Risks Life to Save 7 Month Old Baby Amidst Chamba Landslides

ಚಂಬಾ, ಜುಲೈ 24: ಹಿಮಾಚಲ ಪ್ರದೇಶದ ಪರ್ವತ ಸಾಲುಗಳಲ್ಲಿ ನಿರಂತರ ಮಳೆಯಿಂದಾಗಿ ಬೆಟ್ಟಗಳು ಕುಸಿದು ಬೀಳುತ್ತಿದ್ದರೆ, ಮತ್ತೊಂದೆಡೆ ಮಾನವೀಯತೆ ಹಾಗೂ ಸಾಹಸದ ಅಪರೂಪದ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದೆ. ಭೂಕುಸಿತ(Landslide)ದಿಂದ ರಸ್ತೆ ಸಂಪೂರ್ಣ ಧ್ವಂಸಗೊಂಡು ಬಂಡೆಗಳು ಬೀಳುತ್ತಿದ್ದ ಅಪಾಯಕಾರಿ ಹಾದಿಯಲ್ಲೇ, 7 ತಿಂಗಳ ಪುಟ್ಟ ಮಗುವನ್ನು ಎದೆಗೆ ಅಪ್ಪಿಕೊಂಡು ಕಂದಮ್ಮನ ಪ್ರಾಣ ಉಳಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರ ಸಾಹಸೀ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಧಾರಾಕಾರ ಮಳೆಯಿಂದಾಗಿ ಚಂಬಾ ಜಿಲ್ಲೆಯ ಪರ್ವತ ರಸ್ತೆಯ ಮೇಲೆ ದೊಡ್ಡ ದೊಡ್ಡ ಬಂಡೆಗಳು, ಕಲ್ಲುಗಳು ಮತ್ತು ಮಣ್ಣು ಕುಸಿದುಬಿದ್ದು ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಮೇಲಿನ ಬೆಟ್ಟದ ಇಳಿಜಾರಿನಿಂದ ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಕಲ್ಲುಗಳು ಉರುಳಿಬೀಳುವ ಪರಿಸ್ಥಿತಿ ಇತ್ತು.

ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ವಾಹನ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಆದರೆ ಮಗುವಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಿದ್ದರಿಂದ, ರಸ್ತೆ ಸರಿಹೋಗುವವರೆಗೆ ಕಾಯದೇ ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣವೇ ನಿರ್ಧಾರ ಕೈಗೊಂಡರು. 7 ತಿಂಗಳ ಮಗುವನ್ನು ತಮ್ಮ ಎದೆಗೆ ಭದ್ರವಾಗಿ ಅಪ್ಪಿಕೊಂಡು, ಪ್ರಾಣದ ಹಂಗು ತೊರೆದು ಬಂಡೆಗಳು ಬೀಳುತ್ತಿದ್ದ ಹಾದಿಯಲ್ಲೇ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಾ ಸುರಕ್ಷಿತವಾಗಿ ರಸ್ತೆಯ ಇನ್ನೊಂದು ಬದಿಗೆ ದಾಟಿಸಿದರು.

ಮತ್ತಷ್ಟು ಓದಿ: ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ

ನಿಖಿಲ್ ಸೈನಿ ಎಂಬುವವರು ಈ ವೀಡಿಯೊವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಅವರು ಎಲ್ಲಾ ಖ್ಯಾತಿ ಮತ್ತು ಚಪ್ಪಾಳೆಗಳಿಗೆ ಅರ್ಹರು. ಚಂಬಾದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರು ತನ್ನ ಸ್ವಂತ ಜೀವವನ್ನು ಪಣಕ್ಕಿಟ್ಟು, 7 ತಿಂಗಳ ಮಗು ಸುರಕ್ಷಿತವಾಗಿ ತಲುಪಲು ಬೀಳುವ ಕಲ್ಲುಗಳ ಮಧ್ಯೆಯೇ ಹೊತ್ತೊಯ್ದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಚಂಬಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯಿಂದಾಗಿ ಭೂಕುಸಿತಗಳು ದಿನನಿತ್ಯದ ಸವಾಲಾಗಿ ಪರಿಣಮಿಸಿವೆ. ವಾಹನ ಸಂಚಾರ ಬಂದ್ ಆದಾಗಲೆಲ್ಲಾ ಇಂತಹ ತುರ್ತು ಸೇವಾ ಸಿಬ್ಬಂದಿಗಳು ಹಾಗೂ ರಕ್ಷಣಾ ಪಡೆಗಳು ತಮ್ಮ ಜೀವದ ಹಂಗು ತೊರೆದು ಕಾಲ್ನಡಿಗೆಯಲ್ಲೇ ರೋಗಿಗಳನ್ನು ಮತ್ತು ಸಂತ್ರಸ್ತರನ್ನು ತಲುಪಿಸುವ ಕಾರ್ಯ ಮಾಡುತ್ತಿರುವುದು ಈ ಭಾಗದ ಕಠಿಣ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ವಿಡಿಯೋ

ಪ್ರಕೃತಿ ವಿಕೋಪದ ನಡುವೆ ನಿರಂತರ ರಕ್ಷಣೆ
ಹಿಮಾಚಲ ಪ್ರದೇಶದ ಚಂಬಾ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಗಾಲದ ಭಾರಿ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿವೆ. ರಸ್ತೆಗಳು ಮುಚ್ಚಿಹೋಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ, ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ಕಾಲ್ನಡಿಗೆಯಲ್ಲೇ ಕಿಲೋಮೀಟರ್‌ಗಟ್ಟಲೆ ಸಾಗಿ ರೋಗಿಗಳನ್ನು ಮತ್ತು ಮಕ್ಕಳನ್ನು ಆಸ್ಪತ್ರೆಗೆ ತಲುಪಿಸುತ್ತಿದ್ದಾರೆ.

ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ
ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಂಬ್ಯುಲೆನ್ಸ್ ಸಿಬ್ಬಂದಿಯ ಅಪಾರ ಧೈರ್ಯ ಮತ್ತು ಕರುಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ತನ್ನ ಜೀವಕ್ಕಿಂತ ಅಪರಿಚಿತ ಮಗುವಿನ ಪ್ರಾಣ ಮುಖ್ಯ ಎಂದು ಭಾವಿಸಿದ ಈತ ನಿಜವಾದ ಸೂಪರ್ ಹೀರೋ ಎಂದು ಜನ ಕೊಂಡಾಡಿದ್ದಾರೆ.

ಅದೇ ಸಮಯದಲ್ಲಿ, ಮಳೆಗಾಲದ ಸಂದರ್ಭದಲ್ಲಿ ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಸೂಕ್ತ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮತ್ತೆ ಮಳೆ, ಕೃಷ್ಣಾ ನದಿ ಹರಿವಿನ ಮಟ್ಟ ಏರಿಕೆ, ಬೋಟ್ ಸಂಚಾರ ಬಂದ್ – Kannada News | Krishna River Water Level Rises After Heavy Rain in Maharashtra; Boat Services Suspended Near Belagavi

ಬೆಳಗಾವಿ, ಜುಲೈ 24: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ನದಿಯು ಮತ್ತೆ ಉಕ್ಕಿ ಹರಿಯಲು ಆರಂಭಿಸಿದೆ. ಕೆಲವೇ ದಿನಗಳ ಹಿಂದೆ ಸಂಪೂರ್ಣವಾಗಿ ಖಾಲಿಯಾಗಿದ್ದ ನದಿ, ಇದೀಗ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೋರ್ಗರೆಯುತ್ತಾ ಹರಿಯುತ್ತಿದೆ. ನದಿಯಲ್ಲಿ ನೀರಿನ ಹರಿವು 60 ಸಾವಿರ ಕ್ಯೂಸೆಕ್ ದಾಟಿದೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಸಮೀಪದ ರಬಕವಿ ಮತ್ತು ಬೆಳಗಾವಿ ಜಿಲ್ಲೆಯ ಮಹೇಶವಾಡಗಿ ನಡುವಿನ ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೀರಿನ ಸೆಳವು ಜೋರಾಗಿರುವುದರಿಂದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಳದಿಂದ ರೈತರಲ್ಲಿ ಸಂತಸ ಮೂಡಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತು ದನಕರುಗಳಿಗೆ ನೀರಿನ ಲಭ್ಯತೆ ಸುಧಾರಿಸಿದೆ. ಆದರೆ, ನೀರಿನ ಮಟ್ಟದ ಏರಿಳಿತದ ಬಗ್ಗೆ ಅವರಿಗೆ ಆತಂಕವೂ ಇದೆ. ಅಲ್ಲದೆ, ಸುಮಾರು ಹತ್ತು ವರ್ಷಗಳಿಂದ ವಿಳಂಬವಾಗಿರುವ ರಬಕವಿ-ಮಹೇಶವಾಡಗಿ ಸೇತುವೆ ಕಾಮಗಾರಿಯ ಬಗ್ಗೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅಧಿಕಾರಿಗಳು ಶೀಘ್ರವೇ ಸೇತುವೆ ನಿರ್ಮಾಣ ಕಾರ್ಯ ಮುಗಿಸುವಂತೆ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಕೃಷ್ಣಾ ನದಿಯ ಭಾಗದಲ್ಲಿ ಹೆಚ್ಚಿದ ಹರಿವು, ಕಾವೇರಿ ಕಣಿವೆಯಲ್ಲಿ ಕ್ಷೀಣಿಸಿದ ಸಂಗ್ರಹ – Kannada News | Karnataka Dam Water Level: Inflow Rises in Krishna Basin, Cauvery Storage Drops

ಬೆಂಗಳೂರು, ಜುಲೈ 24: ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟದ ತಾಜಾ ವರದಿ ಲಭ್ಯವಾಗಿದ್ದು, ಕೃಷ್ಣಾ ನದಿ ಪಾತ್ರದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದರೆ, ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.

1. ಹೇಮಾವತಿ ಜಲಾಶಯ (ಹಾಸನ)

  • ಗರಿಷ್ಠ ಮಟ್ಟ: 2922 ಅಡಿ (37 TMC)
  • ಇಂದಿನ ನೀರಿನ ಮಟ್ಟ: 2904.65 ಅಡಿ (22.82 TMC)
  • ಒಳಹರಿವು: 1,198 ಕ್ಯೂಸೆಕ್ | ಹೊರಹರಿವು: 500 ಕ್ಯೂಸೆಕ್
    (ಕಳೆದ ವರ್ಷ ಇದೇ ದಿನ: 2921.03 ಅಡಿ – 36.16 TMC ನೀರಿತ್ತು, ಒಳಹರಿವು 6,761 ಕ್ಯೂಸೆಕ್ ಇತ್ತು)

2. ಕೆ.ಆರ್.ಎಸ್. ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ (49.45 TMC)
  • ಇಂದಿನ ನೀರಿನ ಮಟ್ಟ: 91.95 ಅಡಿ (17.13 TMC)
  • ಒಳಹರಿವು: 713 ಕ್ಯೂಸೆಕ್
  • ಹೊರಹರಿವು: 1,578 ಕ್ಯೂಸೆಕ್

3. ಆಲಮಟ್ಟಿ ಜಲಾಶಯ (ವಿಜಯಪುರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 518.58 ಮೀಟರ್
  • ಒಳಹರಿವು: 73,162 ಕ್ಯೂಸೆಕ್
  • ಹೊರಹರಿವು: 43,567 ಕ್ಯೂಸೆಕ್

4. ಬಸವಸಾಗರ ಜಲಾಶಯ (ಯಾದಗಿರಿ)

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ: 490.92 ಮೀಟರ್
  • ಒಳಹರಿವು: 43,000 ಕ್ಯೂಸೆಕ್
  • ಹೊರಹರಿವು: 00 ಕ್ಯೂಸೆಕ್

5. ಕಬಿನಿ ಜಲಾಶಯ (ಮೈಸೂರು)

  • ಗರಿಷ್ಠ ಮಟ್ಟ: 84 ಅಡಿ (19.52 TMC)
  • ಇಂದಿನ ನೀರಿನ ಮಟ್ಟ: 73.14 ಅಡಿ (13.27 TMC)
  • ಒಳಹರಿವು: 2,369 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
    (ಕಳೆದ ವರ್ಷ ಇದೇ ದಿನ: 83.60 ಅಡಿ – 19.28 TMC ನೀರಿತ್ತು, ಒಳಹರಿವು 11,592 ಕ್ಯೂಸೆಕ್ ಇತ್ತು)

ರಬಕವಿ-ಮಹಿಷವಾಡಗಿ ಬೋಟ್ ಸಂಚಾರ ಬಂದ್

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ 60,000 ಕ್ಯೂಸೆಕ್ ಗಡಿದಾಟಿದೆ. ಇದರಿಂದಾಗಿ ನದಿ ಬೋರ್ಗರೆದು ಹರಿಯುತ್ತಿದ್ದು, ತೀರದ ರೈತರಲ್ಲಿ ಹರ್ಷ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಗಡಿ ಗ್ರಾಮ ಮಹಿಷವಾಡಗಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ ನಡುವೆ ಸಂಚರಿಸುತ್ತಿದ್ದ ಬೋಟ್ ಸಂಚಾರವನ್ನು ನೀರಿನ ಸೆಳವು ಜೋರಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ. ರಬಕವಿ-ಮಹಿಷವಾಡಗಿ ನಡುವೆ ಕೇವಲ 300 ಮೀಟರ್ ಸೇತುವೆ ಕಾಮಗಾರಿ ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಈ ಸೇತುವೆ ಪೂರ್ಣಗೊಂಡಿದ್ದರೆ ಬೋಟ್ ಸಂಚಾರದ ಅಗತ್ಯವೇ ಇರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸ್ಥಳೀಯರು, ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version