ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ – Kannada News | Modi Late night selfie Video Vows Strict Action on Exam Paper Leaks: Fast Track Courts and New Laws Coming

ನವದೆಹಲಿ, ಜುಲೈ 24: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ವಿಡಿಯೋ ಸಂದೇಶದ ಮೂಲಕ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಸಾಮಾನ್ಯ ಅಥವಾ ಸಣ್ಣ ವಿಷಯವಲ್ಲ, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಡುವ ಕಷ್ಟ-ವೇದನೆ ನನಗೂ ಅರ್ಥವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕೇಂದ್ರ ಸರ್ಕಾರ ತನ್ನ ಹೋರಾಟವನ್ನು ಇನ್ನಷ್ಟು ಬಿಗಿಗೊಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯಾದ ಕಳೆದ ಎರಡೂವರೆ ತಿಂಗಳಿನಿಂದ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ಮುಖ್ಯ ಅಪರಾಧಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ. ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂಬುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಹೀಗಾಗಿ, ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಅಲ್ಪಾವಧಿಯಲ್ಲೇ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಜುಲೈ 19 ರಂದೇ ಫಲಿತಾಂಶವನ್ನು ಪ್ರಕಟಿಸಿದೆ.

ಮತ್ತಷ್ಟು ಓದಿ: ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಮೋದಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ:ಪ್ರಲ್ಹಾದ್ ಜೋಶಿ

ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಕರಡು ಸಿದ್ಧ

ನಾವು ಕೇವಲ ಇಷ್ಟಕ್ಕೇ ತೃಪ್ತರಾಗುವವರಲ್ಲ ಎಂದಿರುವ ಪ್ರಧಾನಿ, ಅಕ್ರಮ ಎಸಗಿದವರಿಗೆ ಅತ್ಯಂತ ಶೀಘ್ರ ಹಾಗೂ ಕಠಿಣ ಶಿಕ್ಷೆ ವಿಧಿಸಲು ‘ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ’ ಸ್ಥಾಪಿಸುವ ಕರಡು ಪ್ರಸ್ತಾಪವನ್ನು ಜಾರಿಗೆ ತರಲು ಇಲಾಖೆಗಳಿಗೆ ಸೂಚನೆ ನೀಡಿದ್ದರು. ತಡರಾತ್ರಿ ಇಲಾಖೆಗಳು ಈ ಕಾನೂನಿನ ಕರಡನ್ನು ಪ್ರಧಾನಿಯವರಿಗೆ ಹಸ್ತಾಂತರಿಸಿವೆ.

ಪ್ರಧಾನಿ ಮೋದಿ ವಿಡಿಯೋ

ಸಂಸತ್ತಿನಲ್ಲಿ ಮಸೂದೆ ಮಂಡನೆ

ಫಾಸ್ಟ್ ಟ್ರ್ಯಾಕ್ ಕೋರ್ಟ್ ಮತ್ತು ಕಠಿಣ ಶಿಕ್ಷೆಯ ಈ ಹೊಸ ಕರಡು ಮಸೂದೆಯ ಕುರಿತು ಕೇಂದ್ರ ಸಚಿವ ಸಂಪುಟ ಚರ್ಚಿಸಲಿದ್ದು, ಮುಂಗಾರು ಅಧಿವೇಶನದ ಎರಡನೇ ವಾರದಲ್ಲೇ ಈ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲು ಪ್ರಯತ್ನಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:27 am, Fri, 24 July 26

Source link

SIR: ಎಸ್‌ಐಆರ್ ಫಾರ್ಮ್‌ಗಳಲ್ಲಿ 2002ರ ಮಾಹಿತಿ ಕಡ್ಡಾಯವಲ್ಲ; ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ – Kannada News | 2002 Details Not Mandatory on SIR Forms: Karnataka CEO V Anbukkumar

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಫಾರ್ಮ್‌ಗಳಲ್ಲಿ ನಾಗರಿಕರು ತಮ್ಮ ಹಾಗೂ ತಮ್ಮ ಪೂರ್ವಜರ 2002ರ ವಿವರಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಬುಧವಾರ (ಜು.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಜಿಟಲೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಗಸ್ಟ್ 8ರ ಒಳಗೆ ಸಾರ್ವಜನಿಕರು ಫಾರ್ಮ್‌ಗಳನ್ನು ಸಲ್ಲಿಸಬೇಕು. 2002ರ ಮಾಹಿತಿ ಲಭ್ಯವಿಲ್ಲದಿದ್ದರೂ ಫಾರ್ಮ್ ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ ಮತದಾರರ ನೋಂದಣಾಧಿಕಾರಿಗಳು (ERO) ನಂತರದ ಹಂತದಲ್ಲಿ ಸೂಚಿಸಲಾದ 12 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಕೋರಿ ನೋಟಿಸ್ ನೀಡಲಿದ್ದಾರೆ. ಈ ವಿಷಯದಲ್ಲಿ EROಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಭರ್ಜರಿ ಪ್ರಗತಿ ಕಾಣುತ್ತಿರುವ ಸಮೀಕ್ಷೆ

ಜುಲೈ 22 ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 5,53,70,473 (98.89%) ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಶೇ 100ರಷ್ಟು ಸಾಧನೆಯಾಗಲಿದೆ. ಇದುವರೆಗೆ ಒಟ್ಟು 3,67,81,041 (66.35%) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಒಟ್ಟು 5,93,787 (1.07%) ಫಾರ್ಮ್‌ಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. ಸಂಗ್ರಹಿಸಿದ ಫಾರ್ಮ್‌ಗಳಲ್ಲಿ ಶೇ 28.14 ಸ್ವಯಂ ಮ್ಯಾಪ್ (Self-mapped) ಆಗಿದ್ದರೆ, ಶೇ 34.87 ರಷ್ಟು ಸಲ್ ಸಂತತಿಯ ಆಧಾರದಲ್ಲಿ (Progeny) ಮ್ಯಾಪ್ ಆಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಗೈರುಹಾಜರಿ ಮತ್ತು ಸ್ಥಳಾಂತರಗೊಂಡ ಮತದಾರರ ಪರಿಶೀಲನೆ

ಸಮೀಕ್ಷೆ ವೇಳೆ ಇದುವರೆಗೆ ಶೇ 8.09ರಷ್ಟು (44,84,331) ಮತದಾರರು ಗೈರುಹಾಜರಿ, ಮರಣ ಹೊಂದಿದ, ಕಾಯಂ ಸ್ಥಳಾಂತರಗೊಂಡ ಅಥವಾ ನಕಲಿ (ASDDO) ಪಟ್ಟಿಗೆ ಸೇರಿದ್ದಾರೆ. ಇದರಲ್ಲಿ 26.32 ಲಕ್ಷ ಜನರು ಕಾಯಂ ಸ್ಥಳಾಂತರಗೊಂಡಿದ್ದರೆ, 9.81 ಲಕ್ಷಕ್ಕೂ ಹೆಚ್ಚು ಮತದಾರರು ಮೃತರಾಗಿದ್ದಾರೆ.

ಈ ಪ್ರತಿಯೊಂದು ಪ್ರಕರಣದಲ್ಲೂ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರು (BLA) ನೆರೆಹೊರೆಯವರ ಸಹಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಈ ದತ್ತಾಂಶಗಳನ್ನು ಪರಿಶೀಲಿಸಲು ವಿನಂತಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ವಿಳಂಬಕ್ಕೆ ಕಾರಣವೇನು?

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 1.03 ಕೋಟಿಗೂ ಹೆಚ್ಚು ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ 30.04 ರಷ್ಟು ಡಿಜಿಟಲೀಕರಣಗೊಂಡಿದೆ. ಇಲ್ಲಿ ಶೇ 22.97 ರಷ್ಟು ಮತದಾರರು ಸ್ಥಳಾಂತರಗೊಂಡ ಅಥವಾ ಲಭ್ಯವಿಲ್ಲದ ಪಟ್ಟಿಯಲ್ಲಿದ್ದಾರೆ (ASDDO). ಇದು ಡಿಜಿಟಲೀಕರಣ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ವೆಬ್‌ಸೈಟ್ ಸರ್ವರ್ ಸಮಸ್ಯೆಯಿಂದಾಗಿ ಎದುರಾದ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಚುನಾವಣಾಧಿಕಾರಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? – Kannada News | Jana Nayagan Day 1 Box Office Collection: Negative Reviews and Piracy Hit Film 100 Crore Dream

ಸಾಕಷ್ಟು ಹೈಪ್ ಸೃಷ್ಟಿಸಿದ್ದ ‘ಜನ ನಾಯಗನ್’ ಸಿನಿಮಾ (Jana Nayagan Movie) ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತಿಲ್ಲ. ಬಿಡುಗಡೆಗೂ ಮುನ್ನ ಸಿನಿಮಾ ವಿಶ್ವಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡು, ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ನೆಗೆಟಿವ್ ವಿಮರ್ಶೆಗಳು ವ್ಯಕ್ತವಾಗಿರುವುದು ಚಿತ್ರದ ಗಳಿಕೆಗೆ ದೊಡ್ಡ ಹೊಡೆತ ನೀಡಿದೆ. ಪರಿಣಾಮವಾಗಿ, ಚಿತ್ರದ ಮೊದಲ ದಿನದ ವಿಶ್ವದಾದ್ಯಂತದ ಒಟ್ಟು ಗಳಿಕೆ ಕೇವಲ 78.27 ಕೋಟಿ ರೂಪಾಯಿ ಆಗಿದೆ.

ಮೊದಲ ದಿನವಾದ ಗುರುವಾರದಂದು ಭಾರತದಾದ್ಯಂತ ಭರ್ಜರಿ 13,067 ಶೋ ಪ್ರದರ್ಶನ ಕಂಡ ಈ ಚಿತ್ರವು, ಶೇಕಡಾ 41.6 ರಷ್ಟು ಥಿಯೇಟರ್ ಆಕ್ಯುಪೆನ್ಸಿ ದಾಖಲಿಸಿದೆ. ಇದರೊಂದಿಗೆ ಭಾರತದಲ್ಲಿ ಕೇವಲ 41.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವಲ್ಲಿ ಮಾತ್ರ ಸಿನಿಮಾ ಯಶಸ್ವಿಯಾಗಿದೆ. ಇದರಲ್ಲಿ ಹೆಚ್ಚಿನ ಪಾಲು (36.50 ಕೋಟಿ ರೂಪಾಯಿ) ತಮಿಳಿನಿಂದ ಬಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 48.27 ಕೋಟಿ ರೂಪಾಯಿ ತಲುಪಿದೆ ಎಂದು sacnilk ವರದಿ ಮಾಡಿದೆ.

ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ್ದು, ಒಟ್ಟು 30.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತ ಹಾಗೂ ಸಾಗರೋತ್ತರ ಗಳಿಕೆ ಎರಡನ್ನೂ ಸೇರಿಸಿ ಚಿತ್ರವು ವಿಶ್ವಾದ್ಯಂತ ಒಟ್ಟಾರೆಯಾಗಿ 78.27 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಪಡೆದುಕೊಂಡಿದೆ. ಮೊದಲ ದಿನವೇ ನೆಗೆಟಿವ್ ಟಾಕ್ ಸಿಕ್ಕಿರುವುದರಿಂದ, ಮುಂಬರುವ ವೀಕೆಂಡ್ ದಿನಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಚೇತರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ

‘ಜನ ನಾಯಗನ್’ ಸಿನಿಮಾ ಬಿಡುಗಡೆಯಾಗುವ ಮೊದಲೇ ಲೀಕ್ ಆಗಿದೆ. ಇದು ಗಳಿಕೆ ಕುಗ್ಗಲು ಮುಖ್ಯ ಕಾರಣ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಸುತ್ತ ಎದ್ದಿರುವ ಈ ನೆಗೆಟಿವ್ ಹೈಪ್, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Swapna Shastra: ಕನಸಿನಲ್ಲಿ ಜಿರಳೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Cockroach Dreams Meaning: Swapnashastra’s Interpretation and Omen

ಸ್ವಪ್ನಶಾಸ್ತ್ರದ ಪ್ರಕಾರ, ನಿದ್ರೆಯ ಸಮಯದಲ್ಲಿ ನಮಗೆ ಬೀಳುವ ಪ್ರತಿಯೊಂದು ಕನಸಿಗೂ ವಿಭಿನ್ನ ಹಾಗೂ ವಿಶೇಷವಾದ ಅರ್ಥವಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಕೆಲವು ಕನಸುಗಳನ್ನು ಶುಭ ಶಕುನವೆಂದು ಪರಿಗಣಿಸಿದರೆ, ಇನ್ನು ಕೆಲವನ್ನು ಮುಂಬರುವ ಅಶುಭ ಘಟನೆಗಳ ಸಂಕೇತವೆಂದು ನೋಡಲಾಗುತ್ತದೆ. ಈ ಕನಸುಗಳ ಆಧಾರದ ಮೇಲೆ, ಭವಿಷ್ಯದಲ್ಲಿ ಎದುರಾಗಬಹುದಾದ ಕೆಲವು ಘಟನೆಗಳ ಬಗ್ಗೆ ನಾವು ಮುಂಚಿತವಾಗಿಯೇ ಜಾಗರೂಕರಾಗಬಹುದು. ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಆಗಾಗ್ಗೆ ಜಿರಳೆಗಳು (Cockroaches) ಕಾಣಿಸಿಕೊಳ್ಳುವುದು ಸಹ ಒಂದು ವಿಶೇಷ ಚಿಹ್ನೆಯಾಗಿದೆ. ಇಂತಹ ಕನಸುಗಳು ಮುಖ್ಯವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಅವರ ಸುತ್ತಲಿನ ವಾತಾವರಣಕ್ಕೆ ಸಂಬಂಧಿಸಿರುತ್ತವೆ.

ಕನಸಿನಲ್ಲಿ ಸಾಲು ಸಾಲು ಜಿರಳೆಗಳು ಕಾಣಿಸಿಕೊಂಡರೆ:

ಕನಸಿನಲ್ಲಿ ಒಂದೇ ಬಾರಿಗೆ ಅಥವಾ ಒಂದೇ ಜಾಗದಲ್ಲಿ ಸಾಲು ಸಾಲಾಗಿ ಅನೇಕ ಜಿರಳೆಗಳನ್ನು ನೋಡುವುದು ಒಳ್ಳೆಯ ಸಂಕೇತವಲ್ಲ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಇದು ನಿಮ್ಮ ಶತ್ರುಗಳು ಅಥವಾ ನಿಮಗಾಗದವರು ಸಕ್ರಿಯರಾಗಿದ್ದಾರೆ ಮತ್ತು ನಿಮಗೆ ಹಾನಿ ಮಾಡಲು ಸಂಚು ರೂಪಿಸುತ್ತಿರಬಹುದು ಎಂಬುದರ ಸಂಕೇತವಾಗಿದೆ. ಆದ್ದರಿಂದ ಇಂತಹ ಕನಸು ಬಿದ್ದರೆ ನೀವು ಹೆಚ್ಚು ಜಾಗರೂಕರಾಗಿರಬೇಕು. ವಿಶೇಷವಾಗಿ ಯಾರನ್ನೂ ತಕ್ಷಣವೇ ಕುರುಡಾಗಿ ನಂಬಬಾರದು ಮತ್ತು ನಿಮ್ಮ ವೃತ್ತಿ ಅಥವಾ ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಎಚ್ಚರ ವಹಿಸಬೇಕು.

ಒಂದು ಅಥವಾ ಎರಡು ಜಿರಳೆಗಳು ತೆವಳುತ್ತಿರುವುದನ್ನು ನೋಡುವುದು:

ನಿಮ್ಮ ಕನಸಿನಲ್ಲಿ ಕೇವಲ ಒಂದು ಅಥವಾ ಎರಡು ಜಿರಳೆಗಳು ಮೆಲ್ಲನೆ ತೆವಳುತ್ತಿರುವುದನ್ನು ನೀವು ಕಂಡರೆ, ಅದು ನಿಮ್ಮ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಕನಸುಗಳು ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಹೆಚ್ಚಿರುವುದನ್ನು, ಆತ್ಮವಿಶ್ವಾಸದ ಕೊರತೆಯನ್ನು ಅಥವಾ ತೀವ್ರವಾದ ಮಾನಸಿಕ ಒತ್ತಡವನ್ನು (Mental Stress) ಸೂಚಿಸುತ್ತವೆ. ಅಂತಹ ಕನಸು ಬಿದ್ದ ನಂತರ, ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಹಾಗೂ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಹಾರುವ ಜಿರಳೆಯನ್ನು ಕನಸಿನಲ್ಲಿ ನೋಡುವುದು:

ಕನಸಿನಲ್ಲಿ ಗಾಳಿಯಲ್ಲಿ ಹಾರುವ ಜಿರಳೆಯನ್ನು ನೋಡುವುದು ಜೀವನದಲ್ಲಿ ಬರಲಿರುವ ಹಠಾತ್ ಬದಲಾವಣೆಗಳು ಅಥವಾ ಅನಿರೀಕ್ಷಿತ ಘಟನೆಗಳನ್ನು ಸೂಚಿಸುತ್ತದೆ. ನಿಮ್ಮ ವೃತ್ತಿಜೀವನ (Career) ಅಥವಾ ಕುಟುಂಬದ ಪರಿಸ್ಥಿತಿಯಲ್ಲಿ ಕೆಲವೊಂದು ಏರಿಳಿತಗಳು ಹಾಗೂ ಅಡೆತಡೆಗಳು ಎದುರಾಗುವ ಸಾಧ್ಯತೆಯನ್ನು ಇದು ತೋರಿಸುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಇಂತಹ ನಕಾರಾತ್ಮಕ ಕನಸುಗಳು ಬಿದ್ದಾಗ ಮನಸ್ಸಿಗೆ ಧೈರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಪಡೆಯಲು ದಿನವೂ ಹನುಮಾನ್ ಚಾಲೀಸಾ ಪಠಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 am, Fri, 24 July 26

Source link

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ – Kannada News | Sonam Wangchuk Ends 26 Day Hunger Strike as PM Modi Announces Tough Anti Paper Leak Bill

ಸೋನಂ ವಾಂಗ್ಚುಕ್ ಉಪವಾಸ ಅಂತ್ಯImage Credit source: All India Radio News

ನವದೆಹಲಿ, ಜುಲೈ 24: ಹೋರಾಟಗಾರ ಹಾಗೂ ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ (Sonam Wangchuk) 26 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಶುಕ್ರವಾರ ಮುಂಜಾನೆ ಅಂತ್ಯಗೊಳಿಸಿದ್ದಾರೆ. ನೀಟ್ ಪರೀಕ್ಷೆ (NEET Exam) ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸ್ಪಂದಿಸಿರುವ ಕೇಂದ್ರ ಸರ್ಕರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ್ದಾರೆ. ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆಪಿ ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದರು.

ಉಪವಾಸ ಕೊನೆಗೊಳಿಸಿದ ಬಗ್ಗೆ ಸೋನಂ ವಾಂಗ್ಚುಕ್ ಹೇಳಿದ್ದೇನು?

ಸರ್ಕಾರದೊಂದಿಗೆ ಸುದೀರ್ಘ ಮಾತುಕತೆಯ ಬಳಿಕ ಹಾಗೂ ದೇಶದಲ್ಲಿ ಹಿಂಸಾಚಾರ ಸಂಭವಿಸುವ ಸಾಧ್ಯತೆಯನ್ನು ಮನಗಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಸೋನಂ ವಾಂಗ್ಚುಕ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸೋನಂ ವಾಂಗ್ಚುಕ್, ವಿವಿಧ ರಾಜಕೀಯ ಪಕ್ಷಗಳ 65 ಸಂಸದರು ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು. ಎಲ್ಲರೂ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಜಾಗರೂಕರಾಗಿರಬೇಕು ಎಂದು ಕರೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಉಪವಾಸ ಅಂತ್ಯಗೊಳಿಸಿದ ವಿಡಿಯೋ

ಸೋನಂ ವಾಂಗ್ಚುಕ್ ಎಕ್ಸ್ ಸಂದೇಶ

ಪ್ರಧಾನಿ ಮೋದಿ ಹಾರೈಕೆ

ಉಪವಾಸ ಅಂತ್ಯಗೊಳಿಸಿದ ಬಳಿಕ ಸೋನಂ ವಾಂಗ್ಚುಕ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ವೈದ್ಯರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಶೀಘ್ರವೇ ತೂಕವನ್ನು ಮರಳಿ ಪಡೆಯಬೇಕು ಎಂದು ಅವರು ಸಂದೇಶ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಹೊಸ ಕಾನೂನು

ಇದೇ ವೇಳೆ ಪ್ರಧಾನಿ ಮೋದಿ, ದೇಶದಲ್ಲಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಒಳಗೊಂಡ ಹೊಸ ಮಸೂದೆ ತರಲಾಗುವುದು ಎಂದು ಘೋಷಿಸಿದ್ದಾರೆ. ಈ ಮಸೂದೆಯಲ್ಲಿ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳು ಇರಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ಈ ಮಸೂದೆಯನ್ನು ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:04 am, Fri, 24 July 26

Source link

Bengaluru Air Quality: ಬೆಂಗಳೂರಿಗರಿನಲ್ಲಿ ಉತ್ತಮ ವಾಯುಗುಣಮಟ್ಟ; ಮಲೆನಾಡು-ಕರಾವಳಿಯಲ್ಲಿ ಸ್ವಚ್ಛ ವಾತಾವರಣ! – Kannada News | Karnataka Air Quality Index July 24: Bengaluru AQI Moderate, Clean Air Across State

ಬೆಂಗಳೂರಿಗರಿನಲ್ಲಿ ಉತ್ತಮ ವಾಯುಗುಣಮಟ್ಟ

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಮಳೆ ಹಾಗೂ ಗಾಳಿಯ ಸಂಚಾರದಿಂದಾಗಿ ವಾಯು ಮಾಲಿನ್ಯ ಪ್ರಮಾಣವು ನಿಯಂತ್ರಣದಲ್ಲಿದ್ದು, ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ (AQI) ‘ಉತ್ತಮ’ ಅಥವಾ ‘ಸಾಧಾರಣ’ ವಿಭಾಗದಲ್ಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ವಾಯು ಮಾನಿಟರಿಂಗ್ ಏಜೆನ್ಸಿಗಳ ಮಾಹಿತಿಯಂತೆ ಇಂದಿನ ಕರ್ನಾಟಕದ ಪ್ರಮುಖ ನಗರಗಳ ಗಾಳಿಯ ಸ್ಥಿತಿಗತಿ ಹೀಗಿದೆ.

ಬೆಂಗಳೂರಿನಲ್ಲಿ ‘ಸಾಧಾರಣ’ ಮಟ್ಟದಲ್ಲಿದೆ ಗಾಳಿಯ ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI 55 ರಿಂದ 77ರ ನಡುವೆ ದಾಖಲಾಗಿದೆ. ಇದು ‘ಸಾಧಾರಣ’ (Moderate) ವಿಭಾಗಕ್ಕೆ ಸೇರುತ್ತದೆ. ನಗರದ ಪ್ರಮುಖ ಮಾಲಿನ್ಯಕಾರಕ ಘಟಕಗಳಾಗಿ PM2.5 ಮತ್ತು PM10 ಧೂಳಿನ ಕಣಗಳು ಕಂಡುಬಂದಿವೆ.

  • ಬಿಟಿಎಂ ಲೇಔಟ್ ಹಾಗೂ ಜಯನಗರ: AQI 65 – 70 (ಸಾಧಾರಣ)
  • ಸಿಲ್ಕ್ ಬೋರ್ಡ್ ಹಾಗೂ ವೈಟ್‌ಫೀಲ್ಡ್: AQI 80 – 95 (ಸಂಚಾರ ದಟ್ಟಣೆಯಿಂದಾಗಿ ಕೊಂಚ ಹೆಚ್ಚಳ)
  • ಹೆಬ್ಬಾಳ ಹಾಗೂ ಪೀಣ್ಯ: AQI 60 – 75 (ಸಾಧಾರಣ)

ಮುಂಗಾರು ಮಳೆಯ ವಾತಾವರಣ ಇರುವ ಕಾರಣ ಧೂಳಿನ ಪ್ರಮಾಣ ಕಡಿಮೆಯಾಗಿದ್ದು, ಇತ್ತೀಚಿನ ದಿನಗಳಿಗೆ ಹೋಲಿಸಿದರೆ ನಗರದ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಪರಿಸ್ಥಿತಿ

  • ಬೆಳಗಾವಿ: AQI 42
  • ಮೈಸೂರು: AQI 52
  • ಮಂಗಳೂರು: AQI 48
  • ಹುಬ್ಬಳ್ಳಿ-ಧಾರವಾಡ: AQI 58
  • ಬಳ್ಳಾರಿ ಹಾಗೂ ಬೀದರ್: AQI 65 – 70

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಗಾಳಿಯ ನೈರ್ಮಲ್ಯತೆ ಹೆಚ್ಚಾಗಿದೆ. ಅಸ್ತಮಾ, ಶ್ವಾಸಕೋಶದ ತೊಂದರೆ ಅಥವಾ ಉಸಿರಾಟದ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಬೆಳಗಿನ ಜಾವದ ವಾಕಿಂಗ್ ಸಮಯದಲ್ಲಿ ಮಾಸ್ಕ್ ಧರಿಸುವುದು ಸೂಕ್ತ. ವಾಹನ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಅಥವಾ ಜಂಕ್ಷನ್‌ಗಳ ಬಳಿ ದೀರ್ಘಕಾಲ ಇರುವುದನ್ನು ತಪ್ಪಿಸಿ. ಇಂದಿನ ವಾಯು ಗುಣಮಟ್ಟವು ಬಹುತೇಕ ಜನರಿಗೆ ಸುರಕ್ಷಿತವಾಗಿದ್ದು, ದೈನಂದಿನ ಹೊರಾಂಗಣ ಚಟುವಟಿಕೆಗಳನ್ನು ಆರಾಮವಾಗಿ ಮುಂದುವರಿಸಬಹುದು.

Source link

ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ – Kannada News | Ramayana Trailer Release Postponed At The Last Minute Producer Namit Malhotra Reveals The Reason

ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದ (Ramayana Movie) ಟ್ರೇಲರ್ ಪ್ರಿವ್ಯೂ ಈವೆಂಟ್ ಕಳೆದ ವಾರವಷ್ಟೇ ದೆಹಲಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಅಲ್ಲಿ ಬಂದ ಸೆಲೆಬ್ರಿಟಿಗಳಿಗೆ ಮಾತ್ರ ಟ್ರೇಲರ್ ತೋರಿಸಲಾಗಿತ್ತು. ಇಂದು (ಜುಲೈ 24) ಯೂಟ್ಯೂಬ್‌ನಲ್ಲಿ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಟ್ರೇಲರ್ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಪೋಸ್ಟ್ ಮೂಲಕ ಇದಕ್ಕೆ ಕಾರಣ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಇಂದು ನಮ್ಮ ‘ರಾಮಾಯಣ’ ಚಿತ್ರಕ್ಕೆ ಅತ್ಯಂತ ವಿಶೇಷವಾದ ಕ್ಷಣ. ರಾಮಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನನ್ನ ಕನಸು, ಈಗ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗಿನ ನಮ್ಮ ಪಾಲುದಾರಿಕೆಯಿಂದಾಗಿ ನನಸಾಗುತ್ತಿದೆ. ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ, ನಾವು ನಮ್ಮ ಚಿತ್ರದ ಟ್ರೇಲರ್ ಅನ್ನು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಒಂದೇ ಬಾರಿಗೆ ವಿಶ್ವದಾದ್ಯಂತ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಟ್ರೇಲರ್ ಹೊಸ ರಿಲೀಸ್ ದಿನಾಂಕವನ್ನು ಅವರು ರಿವೀಲ್ ಮಾಡಿಲ್ಲ.

‘100ಕ್ಕೂ ಹೆಚ್ಚು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಯಾವುದೇ ಪ್ರಮುಖ ಹಾಲಿವುಡ್ ಸಿನಿಮಾಗಳಂತೆಯೇ ನಮ್ಮ ರಾಮಾಯಣವನ್ನು ಇಡೀ ಜಗತ್ತಿಗೆ ತೋರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಜನರು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತು ನಮ್ಮ ಕಥೆಗಳನ್ನು ಹೊಸ ಹೆಮ್ಮೆ ಹಾಗೂ ಉತ್ಸಾಹದೊಂದಿಗೆ ಅನ್ವೇಷಿಸಲು ಇದು ದಾರಿಯನ್ನು ಮಾಡಿಕೊಡಲಿದ್ದು, ಇದು ನಿಜಕ್ಕೂ ವಿಶೇಷವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದ ಸೀತೆ ಪಾತ್ರ ಸಾಯಿ ಪಲ್ಲವಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದೇಕೆ?

‘ಇದನ್ನು ಸಾಧ್ಯವಾಗಿಸಲು ಸಹಾಯ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ರಾಮಾಯಣದ ಭಕ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ದೇಶದ ಯುವ ಪೀಳಿಗೆಯೇ ನಮ್ಮ ಭವಿಷ್ಯ, ನಮ್ಮ ಭವಿಷ್ಯವನ್ನು ರಕ್ಷಿಸಲು ನಾವೆಲ್ಲರೂ ಕೈಲಾದಷ್ಟು ಶ್ರಮಿಸೋಣ’ ಎಂದಿದ್ದಾರೆ ನಮಿತ್ ಮಲ್ಹೋತ್ರ.

‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ನಿರ್ದೇಶನ ಇದೆ. ನಮಿತ್ ಮಲ್ಹೋತ್ರ ಹಾಗೂ ಯಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗೂ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ.

Source link

Karnataka Weather Forecast: ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್ – Kannada News | Karnataka Weather Today July 24: Orange Alert for Uttara Kannada, Schools Closed in Sirsi and Siddapur as Heavy Rain Forecast

ಬೆಂಗಳೂರು, ಜುಲೈ 24: ಕರ್ನಾಟಕದಲ್ಲಿ ಮುಂಗಾರು (Monsoon Rain) ಚುರುಕುಗೊಂಡಿದ್ದು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ (Weather Forecast) ನೀಡಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು (ಜುಲೈ 24) ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ರಜೆ ಘೋಷಿಸಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೆರಡು ಕಡೆ ಭಾರೀ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ.

ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಕೆಲವೆಡೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಹಾವೇರಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಮಳೆಯ ಸಾಧ್ಯತೆ ವ್ಯಕ್ತವಾಗಿದೆ.

ಬೆಂಳೂರಿನಲ್ಲೂ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳ ಕೆಲವೆಡೆ ಗಂಟೆಗೆ 40-50 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಸಾಧಾರಣದಿಂದ ಮಧ್ಯಮ ಮಳೆಯಾಗಲಿದೆ.

ಜುಲೈ 25ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಬಹುತೇಕ ಕಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ? ಎಷ್ಟು?

ಗುರುವಾರ ಮಧ್ಯಾಹ್ನಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಹೆಚ್ಚು ಮಳೆ ದಾಖಲಾಗಿರುವ ಪ್ರದೇಶಗಳು ಇಂತಿವೆ:

  • ಬ್ರಹ್ಮಾವರ (ಉಡುಪಿ ಜಿಲ್ಲೆ) – 7 ಸೆಂ.ಮೀ.
  • ಜಗಲ್​​ಬೆಟ್ (ಉತ್ತರ ಕನ್ನಡ ಜಿಲ್ಲೆ) – 7 ಸೆಂ.ಮೀ.
  • ಜೋಯಿಡಾ (ಉತ್ತರ ಕನ್ನಡ ಜಿಲ್ಲೆ) – 7 ಸೆಂ.ಮೀ.
  • ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ) – 7 ಸೆಂ.ಮೀ.
  • ಲೋಂಡಾ (ಬೆಳಗಾವಿ ಜಿಲ್ಲೆ) – 7 ಸೆಂ.ಮೀ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ! – Kannada News | Horoscope Today 24th July​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 24, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಈ ಶುಕ್ರವಾರವು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು, ಶಕ್ತಿ, ಧನ ಮತ್ತು ಋಣ ವಿಮುಕ್ತಿಗೆ ಅತ್ಯಂತ ವಿಶೇಷವಾಗಿದೆ. ಆದಿ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಅರ್ಪಿಸುವುದು, ಹೋಮ-ಹವನಗಳು ಶುಭಕರ. ಉಡುಪಿ ಕೃಷ್ಣಮಠದಲ್ಲಿ ಮಹಾಭಿಷೇಕ ಮತ್ತು ವಿಠೋಬ ನವರಾತ್ರಿ ಇಂದಿನಿಂದ ಆರಂಭ. ಇಂದು ರವಿ ಕರ್ಕಾಟಕದಲ್ಲಿ, ಚಂದ್ರ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಮನೋಬಲವನ್ನು ತಗ್ಗಿಸುವ ಪ್ರಯತ್ನ ನಡೆಯಲಿದೆ.. – Kannada News | Daily Horoscope for July 24, 2026: Uttarayan Greeshma season, Ashada Masa shukla Paksha Friday astrology Prediction

ಮೇಷ ರಾಶಿ:

ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ ಮನಸ್ತಾಪಗಳು ಬರಬಹುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಮಾಡಬೇಕು ಎಂದುಕೊಂಡ ಕೆಲಸಗಳು ಆರಂಭವಾಗದೇ ಇರಬಹುದು. ಕಲಹಕ್ಕಿಂತ ಮೌನವೇ ಲೇಸು ಎನಿಸಬಹುದು. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ಯಾವ ಹಳ್ಳ ಎಷ್ಟು ಆಳವೆಂದು ಬಿದ್ದಮೇಲೆ ಗೊತ್ತಾಗುವುದು.

ವೃಷಭ ರಾಶಿ:

ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ‌. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಮಾನಸಿಕವಾಗಿ ಆಗುವ ನೋವನ್ನು ಶಮನ ಮಾಡಿಕೊಳ್ಳಲು ದೂರಪ್ರಯಾಣ ಮಾಡಬಹುದು. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು. ಸುಮ್ಮನೇ ವಾಗ್ವಾದಗಳು ಬೇಡ. ಹೊಂದಣಿಕೆಯಿಂದ‌ ಇತ್ಯರ್ಥ ಮಾಡಿಕೊಳ್ಳಿ. ನಿಮ್ಮ ಮೂಲ ಉದ್ದೇಶವು ಮರೆಯಾಗಬಹುದು. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡುವುದು ಉತ್ತಮ.

ಮಿಥುನ ರಾಶಿ:

ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೋಪವು ನಿಮ್ಮನ್ನು ದಾರಿ ತಪ್ಪಿಸಬಹುದು. ನಿಮ್ಮ ಉದ್ಯೋಗವು ಕೆಲವು ವರ್ಷಗಳಿಗಾದರೂ ಚಿಂತೆ ಇರದಂತೆ ಮಾಡಿಕೊಳ್ಳಲು ಯೋಚಿಸಿ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.

​ಕರ್ಕಾಟಕ ರಾಶಿ:

ಇಂದು ಮಕ್ಕಳಿಂದ ಸಂತೋಷವಾರ್ತೆಗಾಗಿ ಕಾಯುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸ್ನೇಹಿತರ ಸಹಾಯದಿಂದ ಹೊಸ ಉದ್ಯಮವನ್ನು ಆರಂಭಿಸುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ನಿಮ್ಮ ನಿಲುವೂ ಮುಖ್ಯವೇ ಆಗುವುದು. ಅರ್ಥಿಕತೆಯನ್ನು ನೀವು ವೃದ್ಧಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ದೀರ್ಘಕಾಲದ ಹೂಡಿಕೆಗೆ ನಿಮ್ಮ ಗಟ್ಟಿಯಾದ ನಿಲುವಿರಲಿ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ.

ಸಿಂಹ ರಾಶಿ:

ಉದ್ಯೋಗದಲ್ಲಿ ನಿಮ್ಮ ಲಾಭದ ಅಂಶವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವಿರಿ. ಸಂಗಾತಿಯನ್ನು ನೀವು ಸಂತೋಷ ಪಡಿಸುವಿರಿ. ಹರಟೆಯಿಂದ ಇಂದಿನ ದಿನವು ಮುಕ್ತಾಯವಾಗುವುದು. ವೈಯಕ್ತಿಕ ಪ್ರಚಾರವನ್ನು ಮಾಡಿಕೊಳ್ಳುವ ಅವಶ್ಯಕತೆವಿಲ್ಲ. ಅದು ತಾನಾಗಿಯೇ ಬರುವಂತೆ ಇರಲಿ. ಒತ್ತಡವು ಕಡಿಮೆಯಾಗಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು.

​ಕನ್ಯಾ ರಾಶಿ:

ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು. ಆಲಂಕಾರಿಕ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ನೀವು ಅಂದುಕೊಂಡದ್ದು ಮಾತ್ರ ಸತ್ಯ ಎನ್ನುವ ನಿರ್ಧಾರಕ್ಕೆ ಬರುವುದು ಬೇಡ.‌ ಇನ್ನೊಂದು ಮುಖವನ್ನೂ ನೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವವರಿದ್ದೀರಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಕಾರ್ಯಭಾರವನ್ನು ವರ್ಗಾಯಿಸಲು ಪ್ರಯತ್ನಿಸುವಿರಿ.

ತುಲಾ ರಾಶಿ:

ಸಂಗಾತಿಯ ಪ್ರೀತಿಯನ್ನು ನೀವು ಒಪ್ಪಿಕೊಳ್ಳುವುದು ನಿಮಗೆ ಅನಿವಾರ್ಯವಾದೀತು. ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ನಿಮಗೆ ಸಿಗುವರು. ಸೌಂದರ್ಯಕ್ಕೆ ಆಕರ್ಷಿತರಾಗುವಿರಿ. ಆರೋಗ್ಯದ ಖರ್ಚನ್ನು ನಿರ್ವಹಿಸಲು ವಿಮೆ ಮೊದಲಾದುದರ ಮೊರೆ ಹೊಗುವಿರಿ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ. ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆಪ್ತರ ಬಗ್ಗೆ ಇರುವ ನಿಮ್ಮ ಭಾವವು ಪ್ರಕಟವಾಗಬಹುದು.

ವೃಶ್ಚಿಕ ರಾಶಿ:

ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ನಿಮ್ಮ ಬಳಿ ಇರುವುದನ್ನು ಇನ್ನೊಬ್ಬರಿಗೆ ಕೊಡುವ ಮನಸ್ಸು ಇರದು. ಅಧಿಕವಾದ ಮಾತುಗಳು ನಿಮ್ಮ ಸ್ವಭಾವವನ್ನು ತಿಳಿಸುವುದು. ದೇಹಪೀಡೆಯಿಂದ ಕಷ್ಟವಾಗುವುದು. ಹೊಸ ತಂತ್ರಜ್ಞಾನವನ್ನು ಕಲಿಯುವ ಮನಸ್ಸಾದೀತು. ಯಾವುದೇ ಚಿಂತೆಯಲ್ಲಿ ಹಣದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಕಾಗುವುದು.

ಧನು ರಾಶಿ:

ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ದೂರದಿಂದ ಹೋಗುವಿರಿ. ಮಕ್ಕಳ ಪ್ರೀತಿಯು ನಿಮಗೆ ಸಿಗಲಿದೆ. ಕುಟುಂಬದ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ನಿಮ್ಮ ಪ್ರೇಮವು ಬಹಳ ಅಚ್ಚುಕಟ್ಟಾಗಿ ಇರುವುದು. ವ್ಯವಹಾರದಲ್ಲಿ ತಿಳಿವಳಿಕೆ ಕಡಿಮೆಯಿರುವಂತೆ ತೋರುವುದು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ.

​ಮಕರ ರಾಶಿ:

ನಿಮ್ಮನ್ನು ಹಳಿದವರೇ ನಿಮ್ಮ ಸಹವಾಸ ಬಯಸಿ ಇಂದು ಬರಬಹುದು. ಗುಣಮಟ್ಟದ ಜೀವನಕ್ಕೆ ಹೋಗಲು ಸತತವಾಗಿ ಮಾಡಿದ ಪ್ರಯತ್ನವು ಇಂದು ಫಲ ಕೊಡಬಹುದು. ಬೆಳೆಗಾರರಿಗೆ ನಷ್ಟದ ಚಿಂತೆ ಕಾಡಬಹುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವುದು ಬೇಡ. ಕಛೇರಿಯಲ್ಲಿ ಕೆಲಸದಲ್ಲಿ ಖುಷಿಯಿದ್ದು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮನ್ನು ಕಂಡು ಇತರರೂ ಖುಷಿಪಟ್ಟಾರು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ:

ನಿಮ್ಮ ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವಿರಿ. ಮಕ್ಕಳಿಗೆ ನೀವು ತೋರಿಸುವ ಪ್ರೀತಿಯು ಖುಷಿ ಕೊಡುವುದು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿದ್ದೀರಿ. ಆಲಸ್ಯದಿಂದ ಮನೆಯಲ್ಲಿಯೇ ಇರುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು.

​ಮೀನ ರಾಶಿ:

ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಮುಕ್ತವಾಗಿ ಇರಲು ಕಷ್ಟವಾದೀತು. ಪವಿತ್ರ ಸ್ಥಳದಲ್ಲಿ ಕುಟುಂಬದ ಜೊತೆ ಸಮಯ ಕಳೆಯುವಿರಿ. ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು. ಆಪ್ತರಿಗೆಂದು ಉಡುಗೊರೆಯನ್ನು ಸಿದ್ಧಮಾಡಿಕೊಳ್ಳುವಿರಿ. ಅನಗತ್ಯ ಮಾತಿನಿಂದ ನಿಮಗೆ ಸುಸ್ತಾದೀತು.‌ ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಐಂದ್ರ, ಕರಣ : ವೈಧೃತಿ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:51 – 12:26, ಯಮಗಂಡ ಕಾಲ 15:37 – 17:12, ಗುಳಿಕ ಕಾಲ 07:40 – 09:15

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version