SIR: ಎಸ್‌ಐಆರ್ ಫಾರ್ಮ್‌ಗಳಲ್ಲಿ 2002ರ ಮಾಹಿತಿ ಕಡ್ಡಾಯವಲ್ಲ; ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ – Kannada News | 2002 Details Not Mandatory on SIR Forms: Karnataka CEO V Anbukkumar

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಫಾರ್ಮ್‌ಗಳಲ್ಲಿ ನಾಗರಿಕರು ತಮ್ಮ ಹಾಗೂ ತಮ್ಮ ಪೂರ್ವಜರ 2002ರ ವಿವರಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಬುಧವಾರ (ಜು.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಜಿಟಲೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಗಸ್ಟ್ 8ರ ಒಳಗೆ ಸಾರ್ವಜನಿಕರು ಫಾರ್ಮ್‌ಗಳನ್ನು ಸಲ್ಲಿಸಬೇಕು. 2002ರ ಮಾಹಿತಿ ಲಭ್ಯವಿಲ್ಲದಿದ್ದರೂ ಫಾರ್ಮ್ ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ ಮತದಾರರ ನೋಂದಣಾಧಿಕಾರಿಗಳು (ERO) ನಂತರದ ಹಂತದಲ್ಲಿ ಸೂಚಿಸಲಾದ 12 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಕೋರಿ ನೋಟಿಸ್ ನೀಡಲಿದ್ದಾರೆ. ಈ ವಿಷಯದಲ್ಲಿ EROಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಭರ್ಜರಿ ಪ್ರಗತಿ ಕಾಣುತ್ತಿರುವ ಸಮೀಕ್ಷೆ

ಜುಲೈ 22 ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 5,53,70,473 (98.89%) ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಶೇ 100ರಷ್ಟು ಸಾಧನೆಯಾಗಲಿದೆ. ಇದುವರೆಗೆ ಒಟ್ಟು 3,67,81,041 (66.35%) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಒಟ್ಟು 5,93,787 (1.07%) ಫಾರ್ಮ್‌ಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. ಸಂಗ್ರಹಿಸಿದ ಫಾರ್ಮ್‌ಗಳಲ್ಲಿ ಶೇ 28.14 ಸ್ವಯಂ ಮ್ಯಾಪ್ (Self-mapped) ಆಗಿದ್ದರೆ, ಶೇ 34.87 ರಷ್ಟು ಸಲ್ ಸಂತತಿಯ ಆಧಾರದಲ್ಲಿ (Progeny) ಮ್ಯಾಪ್ ಆಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಗೈರುಹಾಜರಿ ಮತ್ತು ಸ್ಥಳಾಂತರಗೊಂಡ ಮತದಾರರ ಪರಿಶೀಲನೆ

ಸಮೀಕ್ಷೆ ವೇಳೆ ಇದುವರೆಗೆ ಶೇ 8.09ರಷ್ಟು (44,84,331) ಮತದಾರರು ಗೈರುಹಾಜರಿ, ಮರಣ ಹೊಂದಿದ, ಕಾಯಂ ಸ್ಥಳಾಂತರಗೊಂಡ ಅಥವಾ ನಕಲಿ (ASDDO) ಪಟ್ಟಿಗೆ ಸೇರಿದ್ದಾರೆ. ಇದರಲ್ಲಿ 26.32 ಲಕ್ಷ ಜನರು ಕಾಯಂ ಸ್ಥಳಾಂತರಗೊಂಡಿದ್ದರೆ, 9.81 ಲಕ್ಷಕ್ಕೂ ಹೆಚ್ಚು ಮತದಾರರು ಮೃತರಾಗಿದ್ದಾರೆ.

ಈ ಪ್ರತಿಯೊಂದು ಪ್ರಕರಣದಲ್ಲೂ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರು (BLA) ನೆರೆಹೊರೆಯವರ ಸಹಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಈ ದತ್ತಾಂಶಗಳನ್ನು ಪರಿಶೀಲಿಸಲು ವಿನಂತಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ವಿಳಂಬಕ್ಕೆ ಕಾರಣವೇನು?

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 1.03 ಕೋಟಿಗೂ ಹೆಚ್ಚು ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ 30.04 ರಷ್ಟು ಡಿಜಿಟಲೀಕರಣಗೊಂಡಿದೆ. ಇಲ್ಲಿ ಶೇ 22.97 ರಷ್ಟು ಮತದಾರರು ಸ್ಥಳಾಂತರಗೊಂಡ ಅಥವಾ ಲಭ್ಯವಿಲ್ಲದ ಪಟ್ಟಿಯಲ್ಲಿದ್ದಾರೆ (ASDDO). ಇದು ಡಿಜಿಟಲೀಕರಣ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ವೆಬ್‌ಸೈಟ್ ಸರ್ವರ್ ಸಮಸ್ಯೆಯಿಂದಾಗಿ ಎದುರಾದ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಚುನಾವಣಾಧಿಕಾರಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *