ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ – Kannada News | British Airways Pilots Food Poisoning in Hyderabad: BA Investigates Flight Safety Incident

ಹೈದರಾಬಾದ್, ಜುಲೈ 23: ಹೈದರಾಬಾದ್‌ನಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಅಸ್ವಸ್ಥಗೊಂಡ ಭೀಕರ ಘಟನೆಯೊಂದು  ನಡೆದಿದೆ. ಹೈದರಾಬಾದ್‌ನಲ್ಲಿ ರಾತ್ರಿ ತಂಗಿದ್ದ ವೇಳೆ ಸೇವಿಸಿದ ಆಹಾರದಿಂದಾಗಿ ಪೈಲಟ್‌(Pilot)ಗಳಿಗೆ ಫುಡ್ ಪಾಯ್ಸನ್ ಆಗಿತ್ತು ಎನ್ನಲಾಗಿದೆ, ಈ ಕುರಿತು ಬ್ರಿಟಿಷ್ ಏರ್‌ವೇಸ್ ಸಂಸ್ಥೆ ತನಿಖೆಗೆ ಆದೇಶಿಸಿದೆ.

ವರದಿಗಳ ಪ್ರಕಾರ, ವಿಮಾನವು ಆಕಾಶದಲ್ಲಿ ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಮುಖ್ಯ ಪೈಲಟ್‌ಗಳಲ್ಲಿ ಒಬ್ಬರು ತೀವ್ರ ಹೊಟ್ಟೆನೋವು ಹಾಗೂ ಅನಾರೋಗ್ಯದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ವಿಮಾನವು ಲಂಡನ್‌ಗೆ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣವೇ ಆ ಪೈಲಟ್‌ಗೆ ಆಮ್ಲಜನಕ ನೀಡಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು.

ಉಳಿದ ಇಬ್ಬರು ಪೈಲಟ್‌ಗಳಿಗೂ ಅಲ್ಪಪ್ರಮಾಣದ ಅನಾರೋಗ್ಯ ಉಂಟಾಗಿದ್ದರೂ, ಸಮಯಪ್ರಜ್ಞೆಯಿಂದ ವಿಮಾನವನ್ನು ನಿಯಂತ್ರಿಸಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಯಾವುದೇ ಹಂತದಲ್ಲೂ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಅಸ್ವಸ್ಥತೆಗೆ ಕಾರಣವೇನು?

ಹೈದರಾಬಾದ್‌ನಿಂದ ವಿಮಾನವೇರುವ ಮುನ್ನ ಮೂವರೂ ಪೈಲಟ್‌ಗಳು ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ಒಟ್ಟಿಗೆ ಉಪಹಾರ (Breakfast) ಸೇವಿಸಿದ್ದರು. ಇದರ ಜೊತೆಗೆ ಸ್ಥಳೀಯ ಖಾಸಗಿ ಕಂಪನಿಯೊಂದರ ಬಾಟಲ್ ನೀರನ್ನು ಕುಡಿದಿದ್ದರು. ಇದೇ ಆಹಾರ ಅಥವಾ ನೀರಿನಿಂದಲೇ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ.

ಮತ್ತಷ್ಟು ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ; ಆರೋಪಿ ಬಂಧನ

ಹೋಟೆಲ್ ವಸತಿ ವ್ಯವಸ್ಥೆ ಮರುಪರಿಶೀಲನೆ

ಸಂಸ್ಥೆಯ ಸಹೋದ್ಯೋಗಿಗಳ ಆರೋಗ್ಯವೇ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿರುವ ಬ್ರಿಟಿಷ್ ಏರ್‌ವೇಸ್, ಹೈದರಾಬಾದ್‌ನಲ್ಲಿ ಸಿಬ್ಬಂದಿಗೆ ನೀಡಲಾಗುವ ಹೋಟೆಲ್ ವಸತಿ ಹಾಗೂ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುತ್ತಿರುವುದಾಗಿ ತಿಳಿಸಿದೆ. ಬ್ರಿಟಿಷ್ ಏರ್‌ವೇಸ್ ಯುನೈಟೆಡ್ ಕಿಂಗ್‌ಡಮ್‌ನ (UK) ಅತಿದೊಡ್ಡ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ.

ಲಂಡನ್‌ನ ‘ಹೀಥ್ರೂ’ ಮತ್ತು ‘ಗ್ಯಾಟ್ವಿಕ್’ ವಿಮಾನ ನಿಲ್ದಾಣಗಳನ್ನು ಕೇಂದ್ರವಾಗಿಸಿಕೊಂಡು, ಏಷ್ಯಾ, ಯುರೋಪ್, ಅಮೆರಿಕ ಸೇರಿದಂತೆ ಪ್ರಪಂಚದ 200 ಕ್ಕೂ ಹೆಚ್ಚು ನಗರಗಳಿಗೆ ನಿರಂತರ ವಿಮಾನ ಸೇವೆ ಒದಗಿಸುತ್ತದೆ. ಈ ಸಂಸ್ಥೆಯು ಬೋಯಿಂಗ್ 777, ಬೋಯಿಂಗ್ 787 ಡ್ರೀಮ್‌ಲೈನರ್ ಮತ್ತು ಭಾರಿ ಗಾತ್ರದ ಏರ್‌ಬಸ್ A380 ಸೇರಿದಂತೆ ಅತ್ಯಾಧುನಿಕ ವಿಮಾನಗಳನ್ನು ಹೊಂದಿದ್ದು, ಪ್ರತಿವರ್ಷ ಕೋಟ್ಯಂತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾಗೆ ‘ಡಬಲ್’ ಟ್ರಬಲ್ – Kannada News | Double Injury Blow for Sri Lanka Ahead of India Test Series

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಸ್ಟಾರ್ ಆಟಗಾರರಾದ ಕುಸಾಲ್ ಮೆಂಡಿಸ್ ಮತ್ತು ಪಾತುಮ್ ನಿಸ್ಸಂಕಾ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಲಂಕಾ ಪ್ರೀಮಿಯರ್ ಲೀಗ್ (LPL) 2026ರಲ್ಲಿ ಕೊಲಂಬೊ ಕ್ಯಾಪ್ಸ್ ತಂಡವನ್ನು ಮುನ್ನಡೆಸುತ್ತಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕುಸಲ್ ಮೆಂಡಿಸ್, ಜುಲೈ 19 ರಂದು ನಡೆದ ಪಂದ್ಯದಲ್ಲಿ ರನ್ ಗಳಿಸಲು ಓಡುವಾಗ ಬಲಗಾಲಿನ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದಾರೆ.

ಇದರಿಂದಾಗಿ ಅವರು ಪ್ರಸಕ್ತ ಎಲ್‌ಪಿಎಲ್ ಸರಣಿಯ ಉಳಿದ ಪಂದ್ಯಗಳಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.

ಮತ್ತೊಂದೆಡೆ ಭರ್ಜರಿ ಫಾರ್ಮ್‌ನಲ್ಲಿದ್ದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಅವರು ಮಣಿಕಟ್ಟಿನ ತೀವ್ರ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರ ಪ್ರಕಾರ ಅವರು ಸಂಪೂರ್ಣ ಗುಣಮುಖರಾಗಲು ಕನಿಷ್ಠ 4 ರಿಂದ 6 ವಾರಗಳ ಸಮಯ ಬೇಕಾಗಬಹುದು. ಹೀಗಾಗಿ ನಿಸ್ಸಂಕಾ ಕೂಡ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಇತ್ತ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡಿರುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಭಾರತದ ವಿರುದ್ಧದ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನ ಭಾಗ. ಈ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರೆ ಲಂಕಾ ತಂಡವು WTC ಫೈನಲ್ ರೇಸ್​ನಲ್ಲಿ ಉಳಿಯಬಹುದು. ಆದರೆ ಸರಣಿ ಆರಂಭಕ್ಕೆ ವಾರಗಳು ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರಿಬ್ಬರು ಗಾಯಗೊಂಡಿರುವುದು ಶ್ರೀಲಂಕಾ ಪಾಲಿಗೆ ಹಿನ್ನಡೆಯಾಗಲಿದೆ.

ಭಾರತ-ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ
ಮೊದಲನೇ ಟೆಸ್ಟ್ ಆಗಸ್ಟ್ 15 – ಆಗಸ್ಟ್ 19 ಗಾಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ
ಎರಡನೇ ಟೆಸ್ಟ್ ಆಗಸ್ಟ್ 23 – ಆಗಸ್ಟ್ 27 ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್, ಕೊಲಂಬೊ

ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಸರಣಿ:

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.

ಅಂದರೆ ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಶ್ರೀಲಂಕಾ ದುರ್ಬಲ ತಂಡ ಎನ್ನಬಹುದು.

ಇದನ್ನೂ ಓದಿ: RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಹೀಗಾಗಿಯೇ ಶ್ರೀಲಂಕಾ ವಿರುದ್ಧದ 2 ಮ್ಯಾಚ್​ಗಳಲ್ಲೂ ಭಾರತ ತಂಡ ಗೆಲ್ಲಲೇಬೇಕು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಲ್ಲಿ ಉಳಿಯಬಹುದು.

Source link

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ – Kannada News | Why Cricket is Out of Commonwealth Games 2026

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್​ನಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಅಧಿಕೃತವಾಗಿ ಕೈ ಬಿಡಲಾಗಿದೆ. ಕಳೆದ 2022ರ ಬರ್ಮಿಂಗ್​ಹ್ಯಾಮ್ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತಾದರೂ, ಈ ಬಾರಿ ಕ್ರೀಡಾಭಿಮಾನಿಗಳಿಗೆ ಯಾವುದೇ ಕ್ರಿಕೆಟ್​ ಪಂದ್ಯಗಳ ರಸದೌತಣ ಸಿಗುವುದಿಲ್ಲ. ಹಾಗಿದ್ರೆ ಈ ಬಾರಿಯ ಕ್ರೀಡಾಕೂಟದಿಂದ ಕ್ರಿಕೆಟ್ ಅನ್ನು ಕೈ ಬಿಡಲು ಕಾರಣಗಳೇನು ಎಂದು ನೋಡುವುದಾದರೆ…

ಆತಿಥೇಯರ ಬಿಕ್ಕಟ್ಟು ಮತ್ತು ಬಜೆಟ್ ಕಡಿತ:

2026ರ ಕಾಮನ್​ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಆಯೋಜಿಸಬೇಕಿತ್ತು. ಆದರೆ ವಿಪರೀತ ವೆಚ್ಚದ ಕಾರಣ ನೀಡಿ ಆಸ್ಟ್ರೇಲಿಯಾ ಕೊನೆಕ್ಷಣದಲ್ಲಿ ಹಿಂದೆ ಸರಿಯಿತು. ಆಗ ಕ್ರೀಡಾಕೂಟವನ್ನು ಉಳಿಸಲು ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ಮುಂದೆ ಬಂದಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರೀಡಾಕೂಟ ಆಯೋಜಿಸಬೇಕಾದ್ದರಿಂದ, ಗ್ಲ್ಯಾಸ್ಗೋ ಕೇವಲ 10 ಕ್ರೀಡೆಗಳಿಗೆ ಮಾತ್ರ ಸೀಮಿತಗೊಳಿಸಿ ಅತ್ಯಂತ ಸರಳವಾಗಿ ಕ್ರೀಡಾಕೂಟ ನಡೆಸಲು ನಿರ್ಧರಿಸಿದೆ.

ಕ್ರೀಡಾಂಗಣ ಹಾಗೂ ಮೂಲಸೌಕರ್ಯದ ಕೊರತೆ:

ಹೊಸದಾಗಿ ಯಾವುದೇ ಕ್ರೀಡಾಂಗಣ ನಿರ್ಮಿಸದೆ, ಈಗಾಗಲೇ ಲಭ್ಯವಿರುವ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಗ್ಲ್ಯಾಸ್ಗೋ ನಿರ್ಧರಿಸಿದೆ. ಗ್ಲ್ಯಾಸ್ಗೋ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣಗಳು ಲಭ್ಯವಿಲ್ಲ. ಕೇವಲ ಒಂದು ಕ್ರೀಡಾಕೂಟಕ್ಕಾಗಿ ಹೊಸ ಪಿಚ್ ಅಥವಾ ಕ್ರೀಡಾಂಗಣ ನಿರ್ಮಿಸುವುದು ಆರ್ಥಿಕವಾಗಿ ಭಾರೀ ನಷ್ಟ ತರಬಹುದು ಎಂಬ ಕಾರಣಕ್ಕೆ ಕ್ರಿಕೆಟ್‌ಗೆ ಕೋಕ್ ನೀಡಲಾಗಿದೆ.

ಕಡ್ಡಾಯ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಇಲ್ಲ:

ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ನಿಯಮಾವಳಿಗಳ ಪ್ರಕಾರ, ಅಥ್ಲೆಟಿಕ್ಸ್ ಮತ್ತು ಈಜು ಕ್ರೀಡೆಗಳು ಮಾತ್ರ ಕಡ್ಡಾಯವಾಗಿರಬೇಕು. ಕ್ರಿಕೆಟ್ ‘ಐಚ್ಛಿಕ ಕ್ರೀಡೆ’ ವಿಭಾಗಕ್ಕೆ ಸೇರುವುದರಿಂದ, ಆತಿಥೇಯ ದೇಶಕ್ಕೆ ಇದನ್ನು ಕೈಬಿಡುವ ಸಂಪೂರ್ಣ ಹಕ್ಕಿರುತ್ತದೆ. ಹೀಗಾಗಿ ಆರ್ಥಿಕ ಹೊರೆಯ ಕಾರಣ ಕ್ರಿಕೆಟ್ ಪಂದ್ಯಾವಳಿಯನ್ನು ಕೈ ಬಿಡಲಾಗಿದೆ.

ಇದನ್ನೂ ಓದಿ: NEET ಪ್ರತಿಭಟನೆ: ವಿದ್ಯಾರ್ಥಿಗಳ ಪರ ನಿಂತ ಯುವರಾಜ್ ಸಿಂಗ್!

ಭಾರತಕ್ಕೆ ದೊಡ್ಡ ಹಿನ್ನಡೆ:

2022ರ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಕ್ರಿಕೆಟ್ ಜೊತೆಗೆ ಭಾರತಕ್ಕೆ ಹೆಚ್ಚು ಪದಕ ತಂದುಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಹಾಕಿಯಂತಹ ಪ್ರಮುಖ ಕ್ರೀಡೆಗಳನ್ನೂ ಸಹ ಕೈಬಿಡಲಾಗಿದೆ. ಇದರಿಂದಾಗಿ ಭಾರತದ ಪದಕಗಳ ಸಂಖ್ಯೆ ಗಣನೀಯವಾಗಿ ಕುಸಿಯುವ ಆತಂಕ ಎದುರಾಗಿದೆ.

Source link

ಮರಿ ಮೊಮ್ಮಗಳ ಜೊತೆ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​ – Kannada News | Viral Video: Heartwarming Clip of Late Chennamma and HD Deve Gowda Spending Time with Great Granddaughter Moves Netizens

ಬೆಂಗಳೂರು, ಜುಲೈ 23: ಮಾಜಿ ಪ್ರಧಾನಿ ಹೆಚ್​​​.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದ ಬಳಿಕ ಈ ಇಳಿವಯಸ್ಸಿನಲ್ಲಿಯೂ ದಂಪತಿಯ ನಡುವಿದ್ದ ಪ್ರೀತಿ ಮತ್ತು ಅನ್ಯೋನ್ಯತೆಯ ಕುರಿತಾದ ವಿಚಾರಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆ. ಪತ್ನಿಯ ಪಾರ್ಥಿವ ಶರೀರದ ಎದುರು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ದೊಡ್ಡಗೌಡರ ವಿಡಿಯೋಗಳೂ ಸಾಕಷ್ಟು ಜನರ ಕಣ್ಣಂಚಲ್ಲಿ ನೀರು ತರಿಸಿತ್ತು. ಈ ನಡುವೆ ದೇವೇಗೌಡ ಮತ್ತು ಚೆನ್ನಮ್ಮ ದಂಪತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ನಡುವೇ ಚೆನ್ನಮ್ಮನವರು ಮರಿ ಮೊಮ್ಮಗಳ ಜೊತೆ ಕಾಲ ಕಳೆಯುತ್ತಿರುವ ಮುದ್ದಾದ ದೃಶ್ಯಗಳು ಇದರಲ್ಲಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಸೂಪರ್​ವೈಸರ್: ರಾಜಸ್ಥಾನ ಕಾಲೇಜಿನಲ್ಲಿ ಮಾಸ್ ಕಾಪಿ – Kannada News | Rajasthan Exam Cheating Scandal: Supervisor Helps Students Mass Copy in Jaisalmer BA Exam

ಜೈಸಲ್ಮೇರ್,ಜುಲೈ 23: ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಸರಣಿ ವಿವಾದ ನಡೆಯುತ್ತಿರುವ ಬೆನ್ನಲ್ಲೇ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪರೀಕ್ಷಾ(Exam) ಅಕ್ರಮದ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಎ (BA) ದ್ವಿತೀಯ ವರ್ಷದ ಪರೀಕ್ಷೆ ನಡೆಯುತ್ತಿದ್ದಾಗ, ಪರೀಕ್ಷಾ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಹೇಳಿಕೊಡುತ್ತಿದ್ದುದನ್ನು ವಿಶ್ವವಿದ್ಯಾಲಯದ ಫ್ಲೈಯಿಂಗ್ ಸ್ಕ್ವಾಡ್ ರೆಡ್‌ಹ್ಯಾಂಡ್‌ ಆಗಿ ಹಿಡಿದಿದೆ. ಘಟನೆಗೆ ಸಂಬಂಧಿಸಿದಂತೆ ಜೋಧ್‌ಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯ ಅಧಿಕಾರಿಗಳು ಪರೀಕ್ಷಾ ಹಾಲ್‌ನಲ್ಲಿದ್ದ ಎಲ್ಲಾ 93 ಉತ್ತರ ಪತ್ರಿಕೆಗಳನ್ನು ಸೀಲ್ ಮಾಡಿದ್ದು, ‘ಸಾಮೂಹಿಕ ನಕಲು’ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರೀಕ್ಷಾ ಹಾಲ್‌ನಲ್ಲಿ ನಡೆದಿದ್ದೇನು?
ಜೈಸಲ್ಮೇರ್‌ನ ಕಜೋಯ್ ಗ್ರಾಮದಲ್ಲಿರುವ ‘ಶ್ರೀ ಕರ್ಣಿ ಕಾಲೇಜಿ’ನಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಬಿಎ ದ್ವಿತೀಯ ವರ್ಷದ ‘ಹಿಂದಿ ಸಾಹಿತ್ಯ’ ಪರೀಕ್ಷೆ ನಡೆಯುತ್ತಿತ್ತು. ಪ್ರೊ. ಅಮನ್ ಸಿಂಗ್ ನೇತೃತ್ವದ ಜೆಎನ್‌ವಿಯು ಫ್ಲೈಯಿಂಗ್ ಸ್ಕ್ವಾಡ್ ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿತು. ಜೈ ಕರಣ್ ಮತ್ತು ಓಂ ಪ್ರಕಾಶ್ ಎಂಬ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಹಾಲ್‌ನಲ್ಲಿ ನಿಂತು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಓದಿ ಹೇಳಿಕೊಡುತ್ತಿದ್ದುದ್ದು ಕಂಡುಬಂತು.

ಫ್ಲೈಯಿಂಗ್ ಸ್ಕ್ವಾಡ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಬಹುತೇಕ ಎಲ್ಲಾ ವಿದ್ಯಾರ್ಥಿಗಳ ಉತ್ತರಗಳು ಅಕ್ಷರಶಃ ಒಂದೇ ರೀತಿ ಇರುವುದು ದೃಢಪಟ್ಟಿತು. ಘಟನೆ ನಡೆದ ಕೂಡಲೇ ಕಾಲೇಜಿನ ಸಿಸಿಟಿವಿ (CCTV)ಯನ್ನು ಪರೀಕ್ಷಿಸಲಾಗಿತ್ತು ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಉತ್ತರ ಡಿಕ್ಟೇಟ್ ಮಾಡುತ್ತಿರುವುದು ಸಿಸಿಟಿವಿ ಕೆಮೆರಾದಲ್ಲೂ ಸ್ಪಷ್ಟವಾಗಿ ಸೆರೆಯಾಗಿದೆ.

ಹೊಸ ಉತ್ತರ ಪತ್ರಿಕೆ ವಿತರಣೆ: ತಕ್ಷಣವೇ 93 ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಹೊಸ ಉತ್ತರ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

ಮತ್ತಷ್ಟು ಓದಿ: ‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್​ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ

ವಿದ್ಯಾರ್ಥಿಗಳಿಗೆ 3 ವರ್ಷ ನಿಷೇಧ ಭೀತಿ: ಅಕ್ರಮ ಎಸಗಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ 1 ರಿಂದ 3 ವರ್ಷಗಳ ಕಾಲ ಯಾವುದೇ ಪರೀಕ್ಷೆ ಬರೆಯದಂತೆ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶ್ಯಾಮ್ ಸುಂದರ್ ಮೀನಾ ತಿಳಿಸಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಶಿಕ್ಷಕರು ಹಾಗೂ ಕಾಲೇಜು ಮಂಡಳಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪವನ್ ಕುಮಾರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ವಿಡಿಯೋ

ಜೈಸಲ್ಮೇರ್ ಮತ್ತು ನೆರೆಯ ಬಾರ್ಮರ್ ಜಿಲ್ಲೆಯಾದ್ಯಂತ ಫ್ಲೈಯಿಂಗ್ ಸ್ಕ್ವಾಡ್ ಸರಣಿ ತಪಾಸಣೆ ನಡೆಸಿದ್ದು, ಶಿವ್ ಎಂಬಲ್ಲಿನ ಮತ್ತೊಂದು ಪರೀಕ್ಷಾ ಕೇಂದ್ರದಲ್ಲೂ ವಂಚನೆ ಪ್ರಕರಣ ವರದಿಯಾಗಿದೆ. ರಾಜಸ್ಥಾನದಲ್ಲಿ ಸರಣಿ ಪೇಪರ್ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯಿದೆ’ಯಡಿ ಕಠಿಣ ಶಿಕ್ಷೆ ಮತ್ತು ಜೈಲು ಶಿಕ್ಷೆಯ ನಿಯಮಗಳನ್ನು ಜಾರಿಗೆ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜೀವದ ಹಂಗು ತೊರೆದು ಮಲಪ್ರಭಾ ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ – Kannada News | Mallikarjuna Ganiger: Bailhongal Youth Bravely Rescues Woman from Swollen Malaprabha

ಬೈಲಹೊಂಗಲ, ಜು.23: ನದಿಯ ನೀರಿನ ಭಾರಿ ಸೆಳೆತದ ನಡುವೆಯೂ ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಮಲಪ್ರಭಾ ನದಿಗೆ ಧುಮುಕಿ, ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸಾಹಸಿಕವಾಗಿ ರಕ್ಷಿಸಿರುವ ಶ್ಲಾಘನೀಯ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ನಡೆದಿದೆ. ನದಿಗೆ ಜಿಗಿದು ಯುವತಿಯ ಜೀವ ಉಳಿಸಿದ ಈ ಸಾಹಸಿ ಯುವಕನನ್ನು ಮಲ್ಲಿಕಾರ್ಜುನ ಗಾಣಿಗೇರ ಎಂದು ಗುರುತಿಸಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮನನೊಂದಿದ್ದ ಯುವತಿ, ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪದ ಸೇತುವೆಯ ಮೇಲಿಂದ ಬರೋಬ್ಬರಿ 120 ಅಡಿ ಎತ್ತರದಿಂದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನದಿಯಲ್ಲಿ ಸದ್ಯ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಯುವತಿ ಕೊಚ್ಚಿ ಹೋಗಿ ಮುಳುಗುತ್ತಿದ್ದಳು. ಈ ದೃಶ್ಯವನ್ನು ಕಂಡ ಸ್ಥಳೀಯ ಯುವಕ ಮಲ್ಲಿಕಾರ್ಜುನ ಗಾಣಿಗೇರ, ಒಂದು ಕ್ಷಣವೂ ಯೋಚಿಸದೆ ತಕ್ಷಣವೇ ನದಿಗೆ ಜಿಗಿದಿದ್ದಾರೆ. ಮುಳುಗುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ದಡಕ್ಕೆ ತಂದು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಪ್ರಜ್ಞೆ ಹಾಗೂ ಅಪಾರ ಧೈರ್ಯ ಪ್ರದರ್ಶಿಸಿ ಯುವತಿಯ ಜೀವ ಉಳಿಸಿದ ಮಲ್ಲಿಕಾರ್ಜುನ ಗಾಣಿಗೇರ ಅವರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Sanchaya Converter: ಕನ್ನಡಕ್ಕೆ ಬರುತ್ತಿದೆ ಹೊಸ ಫಾಂಟ್ ಕನ್ವರ್ಟರ್; ASCII ಇಂದ ಯೂನಿಕೋಡ್, ಯೂನಿಕೋಡ್​ನಿಂದ ASCII ಗೆ ಸುಲಭವಾಗಿ ಪರಿವರ್ತಿಸಿ – Kannada News | Sanchaya Converter, new Kannada font converter for Unicode and ASCII texts

ಸಂಚಯ ಕನ್ವರ್ಟರ್Image Credit source: Screenshot @ converter.sanchaya.net

ಬೆಂಗಳೂರು, ಜುಲೈ 23: ಕನ್ನಡದ ಮುದ್ರಣ ಕ್ಷೇತ್ರದ ದಶಕಗಳ ಸಮಸ್ಯೆಗೆ ಮತ್ತೊಂದು ಪರಿಹಾರ ಲಭ್ಯವಾಗುತ್ತಿದೆ. ಶ್ರೀಲಿಪಿ, ನುಡಿ, ಬರಹ ಇತ್ಯಾದಿ ಆಸ್ಕಿ (ASCII) ಫಾಂಟ್​ಗಳಿಂದ ಯೂನಿಕೋಡ್​ಗೆ ಪರಿವರ್ತಿಸಬಲ್ಲ, ಮತ್ತು ಯೂನಿಕೋಡ್​ನಿಂದ ವಿವಿಧ ಆಸ್ಕಿ ಫಾಂಟ್​ಗಳಿಗೆ ಪರಿವರ್ತಿಸಬಲ್ಲ ಸಮಗ್ರ ಕನ್ವರ್ಟರ್​ವೊಂದನ್ನು ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಿ ಫೌಂಡೇಶನ್​ನ ಸಂಚಯ ಸಂಸ್ಥೆಯು ಈ ಕನ್ವರ್ಟ್ ಅಭಿವೃದ್ಧಿಪಡಿಸುತ್ತಿರುವುದು.

ಈಗಾಗಲೇ ಕನ್ನಡದಲ್ಲಿ ಕೆಲವು ಕನ್ವರ್ಟರ್​​ಗಳು ಲಭ್ಯ ಇದ್ದರೂ ಯಾವುದೂ ಕೂಡ ಸಮಗ್ರ ಫಾಂಟ್ ಪರಿವರ್ತನೆ ಕೊಡುವುದಿಲ್ಲ. ಸಂಚಯ ಕನ್ವರ್ಟರ್​ನಲ್ಲಿ ಯಾವುದೇ ASCII ಫಾಂಟ್​ಗಳ ಪಠ್ಯವನ್ನು ಯೂನಿಕೋಡ್ ಪಠ್ಯವಾಗಿ ಪರಿವರ್ತಿಸಬಹುದು. ಯೂನಿಕೋಡ್ ಪಠ್ಯವನ್ನು ಯಾವುದೇ ASCII ಪಠ್ಯಗಳಿಗೆ ಕನ್ವರ್ಟ್ ಮಾಡಬಹುದು.

ಇದನ್ನೂ ಓದಿ: ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

ಸಂಚಯ ಕನ್ವರ್ಟರ್ ಸದ್ಯ ಅಭಿವೃದ್ಧಿ ಹಂತದಲ್ಲಿದೆ. ಶ್ರೀಲಿಪಿ, ನುಡಿ, ಬರಹ, ಆಕೃತಿ, ಪ್ರಕಾಶಕ್ ಫಾಂಟ್​ಗಳನ್ನು ಯುನಿಕೋಡ್​ಗೆ, ಹಾಗೂ ಯುನಿಕೋಡ್​ನಿಂದ ಆ ಫಾಂಟ್​ಗಳಿಗೆ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸದ್ಯಕ್ಕೆ ಟಿವಿ9 ಪರಿಶೀಲನೆ ನಡೆಸಿದಾಗ ಯೂನಿಕೋಡ್​ನಿಂದ ನುಡಿಗೆ ಕನ್ವರ್ಶನ್ ಸರಿಯಾಗಿ ಆಗುತ್ತಿದೆ. ಮುಂದಿ ದಿನಗಳಲ್ಲಿ ಎಲ್ಲಾ ASCII ಫಾಂಟ್​ಗಳ ಪರಿವರ್ತನೆ ಸಾಧ್ಯವಾಗಬಹುದು.

ಈ ಕನ್ವರ್ಟರ್ ಲಿಂಕ್ ಇಲ್ಲಿದೆ: converter.sanchaya.net

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

ಯಾರಿಗೆ ಉಪಯೋಗ ಈ ಕನ್ವರ್ಟರ್?

ಮುದ್ರಣ ಕ್ಷೇತ್ರಕ್ಕೆ ಈ ಕನ್ವರ್ಟರ್ ನೆರವಾಗುತ್ತದೆ. ಇಂಟರ್ನೆಟ್​ನಲ್ಲಿ ಕನ್ನಡ ಅಕ್ಷರಗಳೆಲ್ಲವೂ ಯೂನಿಕೋಡ್ ಆಗಿ ಹೋಗಿವೆಯಾದರೂ, ಹೆಚ್ಚಿನ ಮುದ್ರಣ ಸಂಸ್ಥೆಗಳು ಮತ್ತು ಡಿಟಿಪಿ ಸೆಂಟರ್​ಗಳು ಬೇರೆ ಬೇರೆ ಕಾರಣಗಳಿಗೆ ಈಗಲೂ ಕೂಡ ASCII ಫಾಂಟ್​ಗಳನ್ನೇ ಬಳಸುತ್ತಿರುವುದುಂಟು. ಹೀಗಾಗಿ, ಕನ್ವರ್ಟರ್ ಅಗತ್ಯತೆ ಇನ್ನೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CSAB Counseling 2026: NIT, IIIT ಗಳಲ್ಲಿ ಖಾಲಿ ಇರುವ B.Tech ಸೀಟುಗಳ ಭರ್ತಿಗೆ ಜುಲೈ 28 ರಿಂದ ನೋಂದಣಿ ಆರಂಭ! – Kannada News | CSAB Special Counseling 2026: Last Chance for NIT, IIIT, GFTI Admissions

ನವದೆಹಲಿ: JoSAA (ಜಾಯಿಂಟ್ ಸೀಟ್ ಅಲೋಕೇಶನ್ ಅಥಾರಿಟಿ) ಕೌನ್ಸೆಲಿಂಗ್‌ನ ಎಲ್ಲಾ ಸುತ್ತುಗಳು ಮುಕ್ತಾಯಗೊಂಡ ನಂತರ, ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಕೇಂದ್ರ ಸೀಟ್ ಹಂಚಿಕೆ ಮಂಡಳಿ (CSAB) ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಘೋಷಿಸಿದೆ. JEE Main 2026 ಅಂಕಗಳ ಆಧಾರದ ಮೇಲೆ ನಡೆಯುವ ಈ ವಿಶೇಷ ಕೌನ್ಸೆಲಿಂಗ್ ಮೂಲಕ NIT, IIIT ಹಾಗೂ ಇತರ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ (GFTI) ಪ್ರವೇಶ ಪಡೆಯಲು ಜುಲೈ 28 ರಿಂದ ನೋಂದಣಿ ಆರಂಭವಾಗಲಿದೆ. JoSAA ನಲ್ಲಿ ಸೀಟು ಪಡೆಯಲು ಸಾಧ್ಯವಾಗದ ಅಥವಾ ಉತ್ತಮ ಆಯ್ಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಕೊನೆಯ ಮತ್ತು ಸುವರ್ಣ ಅವಕಾಶವಾಗಿದೆ.

ಜುಲೈ 28 ರಿಂದ ನೋಂದಣಿ:

CSAB ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯು 2 ವಿಶೇಷ ಸುತ್ತುಗಳಲ್ಲಿ ನಡೆಯಲಿದ್ದು, ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:

  • ಜುಲೈ 28, 2026: ಖಾಲಿ ಸೀಟುಗಳ ಪಟ್ಟಿ ಪ್ರಕಟಣೆ, ಹೊಸ ನೋಂದಣಿ ಮತ್ತು ಆಯ್ಕೆ ಭರ್ತಿ (Choice Filling) ಆರಂಭ.
  • ಜುಲೈ 31: ಮೊದಲ ಅಣಕು ಸೀಟು ಹಂಚಿಕೆ (Mock Seat Allotment) ಪ್ರಕಟಣೆ.
  • ಆಗಸ್ಟ್ 5 : ನೋಂದಣಿ ಹಾಗೂ ಆಯ್ಕೆಗಳನ್ನು ಲಾಕ್ ಮಾಡಲು ಕೊನೆಯ ದಿನ.
  • ಆಗಸ್ಟ್ 6: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ.
  • ಆಗಸ್ಟ್ 12: ಎರಡನೇ ಸುತ್ತಿನ ಅಂತಿಮ ಫಲಿತಾಂಶ ಬಿಡುಗಡೆ.

ಈ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಇರುವ 31 NITಗಳು, 26 IIITಗಳು, IIEST, 3 SPAಗಳು ಹಾಗೂ 50ಕ್ಕೂ ಹೆಚ್ಚು GFTI ಸಂಸ್ಥೆಗಳಲ್ಲಿ ಖಾಲಿ ಇರುವ B.Tech ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

ಸಾವಿರಾರು ಖಾಲಿ ಸೀಟುಗಳು ಲಭ್ಯ: ಕಡಿಮೆ ರ‍್ಯಾಂಕ್ ಬಂದವರಿಗೂ ಪ್ರವೇಶದ ಭರವಸೆ!

ಪ್ರತಿ ವರ್ಷ JoSAA ಕೌನ್ಸೆಲಿಂಗ್ ಮುಗಿದ ನಂತರ ದೇಶದ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸರಿಸುಮಾರು 13,000 ರಿಂದ 14,000 ಸೀಟುಗಳು ಖಾಲಿ ಉಳಿಯುತ್ತವೆ. ಹೀಗಾಗಿ, JEE Main ನಲ್ಲಿ ಕೊಂಚ ಕಡಿಮೆ ರ‍್ಯಾಂಕ್ ಅಥವಾ ಅಂಕ ಪಡೆದ ಅಭ್ಯರ್ಥಿಗಳಿಗೂ CSAB ಸುತ್ತಿನಲ್ಲಿ ತಮ್ಮಿಷ್ಟದ ಕಾಲೇಜು ಅಥವಾ ಎಂಜಿನಿಯರಿಂಗ್ ವಿಭಾಗ (Branch) ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. JoSAA ಗಿಂತಲೂ ಕೊಂಚ ಸಡಿಲವಾದ ಕಟ್-ಆಫ್ ಶ್ರೇಣಿಯಲ್ಲಿ ಸೀಟುಗಳು ದೊರೆಯುವುದು CSAB ನ ಪ್ರಮುಖ ವೈಶಿಷ್ಟ್ಯವಾಗಿದೆ.

ಇದನ್ನೂ ಓದಿ: ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ಯಾರಿಗೆಲ್ಲ ಸಿಗಲಿದೆ ಅರ್ಜಿ ಸಲ್ಲಿಸಲು ಅರ್ಹತೆ?

JEE Main 2026 ರಲ್ಲಿ ಅರ್ಹತೆ ಪಡೆದ ಪ್ರತಿಯೊಬ್ಬ ಅಭ್ಯರ್ಥಿಯೂ CSAB ವಿಶೇಷ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಬಹುದು.
JoSAA ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸೀಟು ಸಿಗದವರು. JoSAA ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿರುವವರು ಅಥವಾ ಸೀಟು ಸಿಕ್ಕರೂ ರದ್ದು ಮಾಡಿಕೊಂಡವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ/OBC/EWS ವರ್ಗದ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕಗಳನ್ನು ಪಡೆದಿರಬೇಕು (SC/ST/PwD ಅಭ್ಯರ್ಥಿಗಳಿಗೆ ಕನಿಷ್ಠ ಶೇ.65 ಅಂಕಗಳು ಕಡ್ಡಾಯ).

ಹೊಸ ನೋಂದಣಿ ಮತ್ತು ಆಯ್ಕೆ ಭರ್ತಿ ಕಡ್ಡಾಯ!

JoSAA ಕೌನ್ಸೆಲಿಂಗ್‌ನಲ್ಲಿ ಮಾಡಿದ ನೋಂದಣಿ ಅಥವಾ ಆಯ್ಕೆಗಳು CSAB ಕೌನ್ಸೆಲಿಂಗ್‌ಗೆ ಮಾನ್ಯವಾಗುವುದಿಲ್ಲ. ಅಭ್ಯರ್ಥಿಗಳು CSAB ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸದಾಗಿ ನೋಂದಾಯಿಸಿಕೊಂಡು, ತಮ್ಮ ಆದ್ಯತೆಯ ಕಾಲೇಜು ಮತ್ತು ಕೋರ್ಸ್‌ಗಳನ್ನು ಮತ್ತೊಮ್ಮೆ ನಮೂದಿಸಬೇಕಾಗುತ್ತದೆ. ಒಮ್ಮೆ ಆಯ್ಕೆಗಳನ್ನು ಲಾಕ್ ಮಾಡಿದ ನಂತರ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲವಾದ್ದರಿಂದ, ವಿದ್ಯಾರ್ಥಿಗಳು ಗಮನವಿಟ್ಟು ಕಾಲೇಜುಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್ – Kannada News | Rao Ramesh Recalls Heartwarming Memory With Puneeth Rajkumar During KGF 2 Shooting in Mysuru

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ ಕೋಮಲ್ ಕುಮಾರ್ ಅಭಿನಯದ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾ ಸದ್ಯ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಬಹುಭಾಷಾ ನಟ ರಾವ್ ರಮೇಶ್ ಅವರು ಚಿತ್ರದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಪುನೀತ್ ರಾಜ್​​ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ರಾವ್ ರಮೇಶ್ ಅವರೇ ಸ್ವತಃ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಕನ್ನಡ ಪ್ರೇಕ್ಷಕರಿಗೆ ತಮ್ಮದೇ ಧ್ವನಿಯಲ್ಲಿ ಹತ್ತಿರವಾಗಲಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರ ವಿಡಿಯೋದಲ್ಲಿ ರಾವ್ ರಮೇಶ್ ಅವರು ಚಿತ್ರದ ಜೊತೆಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸರಳತೆಯನ್ನು ನೆನೆದು ರಾವ್ ರಮೇಶ್ ಭಾವುಕರಾಗಿದ್ದಾರೆ. ‘ಮೈಸೂರಿನಲ್ಲಿ ಕೆಜಿಎಫ್ ಶೂಟಿಂಗ್ ನಡೆಯುತ್ತಿದ್ದಾಗ ನಾನು ಹೋಟೆಲ್ ಜಿಮ್‌ನಲ್ಲಿದ್ದೆ. ಆಗ ಅಲ್ಲಿಗೆ ಅಪ್ಪು ಸರ್ ಬಂದರು. ನಾನು ಅವರನ್ನು ನೋಡಿ ಆಶ್ಚರ್ಯಪಟ್ಟೆ. ನನ್ನನ್ನು ಗುರುತಿಸಿದ ಅವರು, ನೀವೊಬ್ಬ ಅತ್ಯದ್ಭುತ ನಟ ಸರ್ ಎಂದು ಹೊಗಳಿದರು. ಅಷ್ಟೇ ಅಲ್ಲದೆ, ನಮ್ಮ ಮನೆಗೆ ಬನ್ನಿ ಸರ್, ಒಟ್ಟಿಗೆ ಊಟ ಮಾಡೋಣ ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು. ಆದರೆ ಇಂದು ಅವರು ನಮ್ಮೊಂದಿಗಿಲ್ಲ’ ಎಂದು ರಾವ್ ರಮೇಶ್ ಆ ದಿನದ ಘಟನೆಯನ್ನು ನೆನೆದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ರಾವ್ ರಮೇಶ್ ಅವರು ಮೊದಲ ಬಾರಿ ಕನ್ನಡದಲ್ಲಿ ನಟಿಸಿದ್ದು ನಿಖಿಲ್ ಕುಮಾರಸ್ವಾಮಿ ಅವರ ‘ಜಾಗ್ವಾರ್’ ಚಿತ್ರದಲ್ಲಿ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಸಿಬಿಐ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದರು. ವಿಶೇಷವೆಂದರೆ, ಆ ಚಿತ್ರದಲ್ಲೂ ಕೂಡ ರಾವ್ ರಮೇಶ್ ಅವರೇ ತಮ್ಮ ಪಾತ್ರಕ್ಕೆ ಖುದ್ದಾಗಿ ಕನ್ನಡದಲ್ಲಿ ಡಬ್ ಮಾಡಿದ್ದರು. ಅವರ ಗಂಭೀರ ಧ್ವನಿ ಮತ್ತು ಅದ್ಭುತ ಸಂಭಾಷಣೆ ಚತುರತೆ ಕನ್ನಡಿಗರಿಗೆ ಅದ್ಭುತ ಅನುಭವ ನೀಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ! – Kannada News | Karnataka Farmers in Crisis: Dharwad Farmer Destroys Chilli Crop as Prices Crash, Bidar Soybean Fields Dry Up

ಧಾರವಾಡ, ಬೀದರ್, ಜುಲೈ 23: ಕರ್ನಾಟಕದ ರೈತರು ಪ್ರಸ್ತುತ ಎರಡೆರಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಳೆಯ ಕೊರತೆಯಿಂದ ಬೆಳೆ ಒಣಗಿ ಹೋಗುತ್ತಿದೆ. ಧಾರವಾಡ ಜಿಲ್ಲೆಯ ಗೋವನಕೊಪ್ಪ ಗ್ರಾಮದ ರೈತರೊಬ್ಬರು ಮೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ದರ ಕುಸಿತದಿಂದಾಗಿ ನಾಶಪಡಿಸಿದ್ದಾರೆ. ಪ್ರತಿ ಕೆಜಿ ಮೆಣಸಿನಕಾಯಿಗೆ ಕೇವಲ 6 ರೂಪಾಯಿ ದರ ಕೇಳುತ್ತಿದ್ದರಿಂದ, ಕಟಾವು ಮತ್ತು ಸಾಗಣೆಗೆ ತಗಲುವ ವೆಚ್ಚವನ್ನೂ ಭರಿಸಲು ಸಾಧ್ಯವಾಗದೆ ರೈತರು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಒಳಗಾಗಿದ್ದಾರೆ. 10 ಕೆಜಿಗೆ ಕನಿಷ್ಠ 300 ರೂಪಾಯಿ ದೊರೆತರೆ ಮಾತ್ರ ಲಾಭ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮತ್ತೊಂದೆಡೆ, ಬೀದರ್ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗದೆ, ರೈತರು ಬಿತ್ತಿದ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದ ಸೋಯಾಬೀನ್ ಬೆಳೆ ಕೈಕೊಡುತ್ತಿದೆ. ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ, ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಎರಡೂ ಸನ್ನಿವೇಶಗಳು ರಾಜ್ಯದ ರೈತರ ದಯನೀಯ ಸ್ಥಿತಿಯನ್ನು ಬಹಿರಂಗಪಡಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version