KCET Results 2026: ಇಂದು ಪ್ರಕಟವಾಗಲಿದೆ ಕೆಸಿಇಟಿ ಫಲಿತಾಂಶ; ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ – Kannada News

ಇಂದು ‘ಕೆಸಿಇಟಿ-2026’ ಫಲಿತಾಂಶ ಪ್ರಕಟImage Credit source: Pinterest

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವು ಇಂದು (ಜೂನ್ 6, ಶನಿವಾರ) ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಫಲಿತಾಂಶ ಪ್ರಕಟಣೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ:

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹ ಅಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ಹಾಗೂ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಕೆಸಿಇಟಿ ರಿಸಲ್ಟ್ ಪ್ರಕಟ; ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್!

ಮಧ್ಯಾಹ್ನ 2 ಗಂಟೆಯ ನಂತರ ರಿಸಲ್ಟ್ ಲಭ್ಯ:

ಸುದ್ದಿಗೋಷ್ಠಿ ಮುಗಿದ ಬಳಿಕ, ಮಧ್ಯಾಹ್ನ 2:00 ಗಂಟೆಯ ನಂತರ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಫಲಿತಾಂಶ ಹಾಗೂ ರ‍್ಯಾಂಕ್ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸರ್ವರ್ ನಿಧಾನವಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೊಂಚ ಸಮಯ ಕಾಯ್ದು ಪರ್ಯಾಯ ಲಿಂಕ್‌ಗಳ ಮೂಲಕ ಪ್ರಯತ್ನಿಸಬೇಕಾಗಿ ವಿನಂತಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ 30 ನಿಮಿಷಗಳ ಫೈಟ್ – Kannada News

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಾರಾಣಸಿ’ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಈಗ ಚಿತ್ರದ ಕಥೆಯ ಬಗ್ಗೆ ಸ್ವತಃ ರಾಜಮೌಳಿ ಅವರ ತಂದೆ ಹಾಗೂ ಖ್ಯಾತ ಚಿತ್ರಕಥೆ ಲೇಖಕ ವಿಜಯೇಂದ್ರ ಪ್ರಸಾದ್ ಅವರು ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ರಾಮಾಯಣದ ಪ್ರಮುಖ ಘಟ್ಟವಾದ ರಾಮ ಮತ್ತು ಕುಂಭಕರ್ಣನ ನಡುವಿನ ಮಹಾಯುದ್ಧ ಈ ಸಿನಿಮಾದಲ್ಲಿ ಇರಲಿದ್ದು, ಅದು ಬರೋಬ್ಬರಿ 30 ನಿಮಿಷಗಳ ಕಾಲ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿನಿಮಾ ಬಗ್ಗೆ ವಿಜಯೇಂದ್ರ ಪ್ರಸಾದ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಈ ಸಿನಿಮಾ ರಾಜಕೀಯ ಹಿನ್ನೆಲೆ ಹೊಂದಿದೆಯೇ ಅಥವಾ ಪೌರಾಣಿಕವೇ ಎಂದು ಕೇಳಿದಾಗ, ‘ಇದು ರಾಮ ಮತ್ತು ಕುಂಭಕರ್ಣನ ನಡುವೆ ನಡೆಯುವ ಯುದ್ಧ. ನೀವು ಈಗಾಗಲೇ ಟೀಸರ್​​ನಲ್ಲಿ ರಾಮ-ಕುಂಭಕರ್ಣರನ್ನು ನೋಡಿದ್ದೀರಿ ಅಲ್ಲವೇ? ಹನುಮಂತನ ಬಾಲ ಮತ್ತು ಅದರ ಮೇಲಿರುವ ರಥವನ್ನು ಗಮನಿಸಿರಬಹುದು. ನಾನು ಅದೇ ದೃಶ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಅದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ’ ಎಂದು ಹೇಳಿದ್ದಾರೆ

60 ದಿನಗಳ ಕಾಲ ನಡೆದ ಶೂಟಿಂಗ್:

ಚಿತ್ರದಲ್ಲಿ ಮಹೇಶ್ ಬಾಬು ಅವರು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ರಾಜಮೌಳಿ ಈ ಹಿಂದೆಯೇ ಖಚಿತಪಡಿಸಿದ್ದರು. ‘ಮೊದಲ ದಿನ ಮಹೇಶ್ ಬಾಬು ರಾಮನ ಗೆಟಪ್‌ನಲ್ಲಿ ಫೋಟೋಶೂಟ್‌ಗೆ ಬಂದಾಗ ನನಗೆ ಮೈ ರೋಮಾಂಚನಗೊಂಡಿತ್ತು. ಅವರಲ್ಲಿ ಕೃಷ್ಣನ ಕಳೆ ಮತ್ತು ರಾಮನ ಶಾಂತತೆ ಎರಡೂ ಇವೆ’ ಎಂದು ರಾಜಮೌಳಿ ನೆನಪಿಸಿಕೊಂಡಿದ್ದಾರೆ.

ರಾಮ ಹಾಗೂ ಕುಂಭಕರ್ಣನ ಯುದ್ಧದ ದೃಶ್ಯವನ್ನು ಸತತ 60 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಮುಕ್ತಾಯಗೊಂಡಿದೆ. ಇದು ಮಹೇಶ್ ಬಾಬು ಹಾಗೂ ತಮ್ಮ ಸಿನಿಮಾ ಜರ್ನಿಯಲ್ಲೇ ಅತ್ಯಂತ ಸ್ಮರಣೀಯ ದೃಶ್ಯವಾಗಲಿದೆ ಎಂಬ ನಂಬಿಕೆ ರಾಜಮೌಳಿ ಅವರಿಗಿದೆ.

ಚಿತ್ರದಲ್ಲಿ ರಾಮನಾಗಿ ಮಹೇಶ್ ಬಾಬು ನಟಿಸುತ್ತಿದ್ದರೆ, ಕುಂಭಕರ್ಣನ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಡಿಲ್ಲ.

ಇದನ್ನೂ ಓದಿ: ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು

ಈ ಚಿತ್ರದಲ್ಲಿ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿದ್ದಾರೆ. ಮಹೇಶ್ ಬಾಬು ರಾಮನಾದರೆ, ಪ್ರಿಯಾಂಕಾ ಅವರದ್ದು ಸೀತೆ ಪಾತ್ರವೇ ಎಂಬ ಪ್ರಶ್ನೆ ಮೂಡಿದೆ. ಪ್ರಿಯಾಂಕಾ ಸುದೀರ್ಘ ಗ್ಯಾಪ್ ನಂತರ ಭಾರತೀಯ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಭಾರಿ ಕುತೂಹಲ ಕೆರಳಿಸಿರುವ ಈ ಸಿನಿಮಾ 2027ರಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ವಿದ್ಯಾರ್ಥಿಗಳು ಯಶಸ್ಸಿಗೆ ಈ ಅಭ್ಯಾಸ ರೂಡಿಸಿಕೊಳ್ಳಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News

ವಿದ್ಯಾರ್ಥಿಗಳು ಯಶಸ್ಸಿಗೆ ಈ ಅಭ್ಯಾಸ ರೂಡಿಸಿಕೊಳ್ಳಿImage Credit source: Pinterest

ವಿದ್ಯಾರ್ಥಿ ಜೀವನವು ಪ್ರತಿಯೊಬ್ಬರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ವಿದ್ಯೆಯನ್ನು ಗಳಿಸಲು ಹಂಬಲಿಸುವವನೇ ವಿದ್ಯಾರ್ಥಿ. ಆದರೆ, ಎಲ್ಲರೂ ಯಶಸ್ವಿ ವಿದ್ಯಾರ್ಥಿಗಳಾಗುವುದಿಲ್ಲ. ಯಶಸ್ಸನ್ನು ಸಾಧಿಸಲು ಕೇವಲ ಅದೃಷ್ಟವಷ್ಟೇ ಸಾಕಾಗುವುದಿಲ್ಲ, ಬದಲಿಗೆ ಕೆಲವು ಸದ್ಗುಣಗಳನ್ನು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧನೆಗೆ ಶಿಸ್ತು, ಸಂಯಮ, ತಾಳ್ಮೆ, ಸಹನೆ, ಮತ್ತು ಆಲೋಚನಾ ಶಕ್ತಿಗಳು ಅತ್ಯಂತ ಮುಖ್ಯ. ಈ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಅಧ್ಯಯನದಲ್ಲಿ ಸಂಪೂರ್ಣ ಯಶಸ್ಸು ಗಳಿಸಲು ಸಾಧ್ಯ. ಉದಾಸೀನತೆ, ನಿರ್ಲಕ್ಷ್ಯ ಮತ್ತು ನಕಾರಾತ್ಮಕ ಆಲೋಚನೆಗಳು ವಿದ್ಯಾರ್ಥಿಯ ಪ್ರಗತಿಗೆ ಅಡ್ಡಿಯಾಗುತ್ತವೆ ಮತ್ತು ಜೀವನದ ಪರಿಪೂರ್ಣತೆಯನ್ನು ತಡೆಯುತ್ತವೆ.

ವಿದ್ಯೆಯ ಮಹತ್ವವನ್ನು ಸಾರುವ ವಿದ್ಯಾದದಾತಿ ವಿನಯಂ ಶ್ಲೋಕವು ಬಹಳ ಪ್ರಸ್ತುತ. ವಿದ್ಯೆಯಿಂದ ವಿನಯ, ವಿನಯದಿಂದ ಅರ್ಹತೆ, ಅರ್ಹತೆಯಿಂದ ಸಂಪತ್ತು, ಮತ್ತು ಸಂಪತ್ತಿನಿಂದ ಸುಖಮಯ ಜೀವನವನ್ನು ರೂಪಿಸಿಕೊಳ್ಳಬಹುದು. ಬಾಲ್ಯದಿಂದಲೇ, ವಿಶೇಷವಾಗಿ ಐದನೇ ತರಗತಿಯ ನಂತರ, ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ, ಶಿಸ್ತು ಮತ್ತು ಗುರಿಯ ಕಡೆಗೆ ಒಲವನ್ನು ಬೆಳೆಸುವುದು ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ. ರಾಜನಿಗೆ ತನ್ನ ರಾಜ್ಯದಲ್ಲಿ ಮಾತ್ರ ಗೌರವ ಸಿಕ್ಕರೆ, ವಿದ್ಯಾವಂತನಿಗೆ ಪ್ರಪಂಚದಾದ್ಯಂತ ಗೌರವ ಸಿಗುತ್ತದೆ ಎಂಬ ಮಾತು ವಿದ್ಯಾವಾನ್ ಸರ್ವತ್ರ ಪೂಜ್ಯತೆ ಎಂಬುದನ್ನು ದೃಢೀಕರಿಸುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಆದರ್ಶ ವಿದ್ಯಾರ್ಥಿಯು ಹೊಂದಿರಬೇಕಾದ ಐದು ಪ್ರಮುಖ ಗುಣಲಕ್ಷಣಗಳನ್ನು ಈ ರೀತಿ ವಿವರಿಸಲಾಗಿದೆ:

  • ಸೂರ್ಯೋದಯಕ್ಕೆ ಮುನ್ನ ಏಳುವುದು: ಮುಂಜಾನೆ ಬೇಗ ಏಳುವ ಅಭ್ಯಾಸವು ಮನಸ್ಸನ್ನು ಚುರುಕುಗೊಳಿಸುತ್ತದೆ. ತಡವಾಗಿ ಏಳುವ ವಿದ್ಯಾರ್ಥಿಯ ಮನಸ್ಸು ಮಂದವಾಗುವ ಸಾಧ್ಯತೆ ಇರುತ್ತದೆ.
  • ಕಾಕಚೇಷ್ಟ (ಕಾಗೆಯಂತೆ ಗಮನ): ಕಾಗೆಯು ಸುತ್ತಮುತ್ತಲಿನ ಪರಿಸರದ ಬಗ್ಗೆ ನಿರಂತರವಾಗಿ ಗಮನವಿಡುವಂತೆ, ವಿದ್ಯಾರ್ಥಿಯು ತನ್ನ ಗುರಿಯ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಸಣ್ಣ ಅಡೆತಡೆಯೂ ತನ್ನ ಗುರಿಯಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು.
  • ಬಕೋಧ್ಯಾನಂ (ಕೊಕ್ಕರೆಯಂತೆ ಏಕಾಗ್ರತೆ): ಕೊಕ್ಕರೆಯು ನೀರಿನಲ್ಲಿ ಮೀನು ಹಿಡಿಯುವಾಗ ಯಾವುದೇ ಬೇರೆ ವಿಷಯಗಳಿಗೆ ಗಮನ ಕೊಡದೆ ಏಕಾಗ್ರತೆಯಿಂದ ಇರುವಂತೆ, ವಿದ್ಯಾರ್ಥಿಯು ತನ್ನ ಅಧ್ಯಯನದಲ್ಲಿ ಸಂಪೂರ್ಣ ಏಕಾಗ್ರತೆಯನ್ನು ಸಾಧಿಸಬೇಕು.
  • ಶ್ವಾನನಿದ್ರಾ (ನಾಯಿಯಂತೆ ಎಚ್ಚರ): ನಾಯಿಯು ನಿದ್ರಿಸುತ್ತಿದ್ದರೂ ಸಣ್ಣ ಶಬ್ದಕ್ಕೂ ಎಚ್ಚರಗೊಳ್ಳುವಂತೆ, ವಿದ್ಯಾರ್ಥಿಯು ಯಾವುದೇ ಪಾಠವನ್ನು ಅತಿ ಜಾಗರೂಕತೆಯಿಂದ ಗ್ರಹಿಸುವ ಶಕ್ತಿಯನ್ನು ಹೊಂದಿರಬೇಕು.
  • ಸಮತೋಲಿತ ಆಹಾರ ಮತ್ತು ಲೌಕಿಕ ಆಕರ್ಷಣೆಗಳಿಂದ ದೂರವಿರುವುದು: ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಮನಸ್ಸಿನ ಶಾಂತಿಗೆ ಇದು ಅತ್ಯಗತ್ಯ. ಇದಲ್ಲದೆ, ಲೌಕಿಕ ಆಕರ್ಷಣೆಗಳು, ಮನರಂಜನೆ ಮತ್ತು ಅನಗತ್ಯ ವಿಷಯಗಳಲ್ಲಿ ಸಮಯ ಕಳೆಯುವುದನ್ನು ತಪ್ಪಿಸಿ, ತನ್ನ ಗುರಿ ಮತ್ತು ಪಠ್ಯಕ್ರಮದ ಮೇಲೆ ಗಮನ ಹರಿಸುವುದು ಯಶಸ್ವಿ ವಿದ್ಯಾರ್ಥಿಯ ಲಕ್ಷಣವಾಗಿದೆ.

ಜ್ಞಾನ ಸಂಪಾದನೆ ಮುಖ್ಯ. ಹೊಸ ವಿಷಯಗಳನ್ನು ಕಲಿಯುವ ಹಂಬಲ, ಅದರ ಬಗ್ಗೆ ಆಳವಾದ ತಿಳುವಳಿಕೆ ಪಡೆಯುವ ನಿರಂತರ ಪ್ರಯತ್ನ, ಇವೆಲ್ಲವೂ ಆದರ್ಶ ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುತ್ತವೆ. ಈ ಗುಣಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:20 am, Sat, 6 June 26

Source link

ಕೆಎಲ್​ ರಾಹುಲ್ ‘ಅನ್‌ಸೋಲ್ಡ್’ ಆಗಲು ಇದುವೇ ಅಸಲಿ ಕಾರಣ! – Kannada News

ಕರ್ನಾಟಕದ ಟಿ20 ಲೀಗ್ ಮಹಾರಾಜ ಟ್ರೋಫಿ ಟೂರ್ನಿಯ 5ನೇ ಸೀಸನ್​​ಗೆ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಬಿಕರಿಯಾಗದೇ ಉಳಿದಿದ್ದಾರೆ. 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ರಾಹುಲ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿರಲಿಲ್ಲ.

ಇದರ ಬೆನ್ನಲ್ಲೇ ಕೆಎಲ್ ರಾಹುಲ್ ‘ಅನ್‌ಸೋಲ್ಡ್’ ಸುದ್ದಿ ಮಹತ್ವ ಪಡೆದುಕೊಂಡಿತು. ಆದರೆ ಅವರ ಬಿಕರಿಯಾಗದೇ ಉಳಿಯಲು ಮುಖ್ಯ ಕಾರಣ ಮುಂಬರುವ ಸರಣಿಗಳು. ಅಂದರೆ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಕೆಎಲ್​ಆರ್​ ಅಲಭ್ಯರಾಗುವುದು ಖಚಿತ. ಹೀಗಾಗಿಯೇ ಯಾವುದೇ ಫ್ರಾಂಚೈಸಿ ಅವರ ಖರೀದಿಗೆ ಮುಂದಾಗಲಿಲ್ಲ.

ಅಲಭ್ಯರಾಗುವುದು ಯಾಕೆ?

  • ಟೆಸ್ಟ್ ಪಂದ್ಯ: ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಭಾರತ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
  • ಏಕದಿನ ಸರಣಿ: ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಬೆನ್ನಲ್ಲೇ ಮೂರು ಮ್ಯಾಚ್​​ಗಳ ಏಕದಿನ ಸರಣಿ ಶುರುವಾಗಲಿದೆ.
  • ಇಂಗ್ಲೆಂಡ್ ಸರಣಿ: ಅಘ್ಘಾನ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್​ ಸರಣಿಗಾಗಿ ತೆರಳಲಿದೆ. ಈ ಸರಣಿಯು ಜುಲೈ 1 ರಿಂದ ಆರಂಭವಾಗಲಿದೆ.

ಅಂದರೆ ಕೆಎಲ್ ರಾಹುಲ್ ಜೂನ್-ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಖಚಿತ. ಇತ್ತ ಮಹಾರಾಜ ಟ್ರೋಫಿ ಟಿ20 ಟೂರ್ನಿ ನಡೆಯಲಿರುವುದು ಜೂನ್ 20 ರಿಂದ ಜುಲೈ 12 ರವರೆಗೆ. ಈ ಅವಧಿಯಲ್ಲಿ ಕೆಎಲ್ ರಾಹುಲ್ ಲಭ್ಯರಿರುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.

ಹೀಗಾಗಿಯೇ ಟೂರ್ನಿಗೆ ಲಭ್ಯರಿರದ ಆಟಗಾರನಿಗೆ ಹಣ ವ್ಯಯಿಸಿ, ತಂಡದ ಒಂದು ಸ್ಲಾಟ್ ವ್ಯರ್ಥ ಮಾಡಿಕೊಳ್ಳಲು ಫ್ರಾಂಚೈಸಿಗಳು ಮುಂದಾಗಿಲ್ಲ.

ಮತ್ತೆ ಹೆಸರು ನೀಡಿದ್ದು ಯಾಕೆ?

ಕೆಎಲ್ ರಾಹುಲ್ ರಾಷ್ಟ್ರೀಯ ತಂಡಗಳ ಪರ ಕಣಕ್ಕಿಳಿಯುವುದಾದರೆ ಮತ್ತೆ ಯಾಕೆ ಹೆಸರು ನೀಡಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಹಿಂದಿನ ಪ್ರಕ್ರಿಯೆ.

ಅಂದರೆ ಮಹಾರಾಜ ಟೂರ್ನಿಯ ಹರಾಜಿನ ದಿನಾಂಕಕ್ಕಿಂತ ಮುಂಚೆಯೇ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಾಹುಲ್ ಅವರು ಕರ್ನಾಟಕದ ಆಟಗಾರನಾಗಿರುವುದರಿಂದ ಆರಂಭದಲ್ಲಿ ತಮ್ಮ ರಾಜ್ಯದ ಟೂರ್ನಿಯಲ್ಲಿ ಆಡುವ ಆಸಕ್ತಿಯಿಂದ ಹೆಸರು ನೀಡಿದ್ದರು.

ಇದಾದ ಬಳಿಕವಷ್ಟೇ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ದಿನಾಂಕ ನಿಗದಿಯಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಹಾಗೆಯೇ ಕೆಎಸ್​​ಸಿಎ ನಿಯಮಗಳ ಪ್ರಕಾರ, ಒಮ್ಮೆ ಒಬ್ಬ ಆಟಗಾರ ಅಧಿಕೃತವಾಗಿ ಹರಾಜಿನ ಡ್ರಾಫ್ಟ್‌ಗೆ ಹೆಸರು ನೋಂದಾಯಿಸಿದರೆ, ಅವರ ಹೆಸರನ್ನು ಹರಾಜಿನ ಪಟ್ಟಿಯಿಂದ ದಿಢೀರ್ ಎಂದು ತೆಗೆಯಲು ಬರುವುದಿಲ್ಲ. ಆ ಹೆಸರನ್ನು ಹರಾಜುದಾರರು ಕರೆದೇ ಕರೆಯಬೇಕು.

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಹೀಗಾಗಿ ಕೆಎಲ್ ರಾಹುಲ್ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಹರಾಜುದಾರರು ಫ್ರಾಂಚೈಸಿಗಳಿಗೆ ಮುಂಚಿತವಾಗಿಯೇ “ಇವರು ಟೂರ್ನಿಗೆ ಅಲಭ್ಯರಾಗಲಿದ್ದಾರೆದ್ದಾರೆ” ಎಂಬ ಅಧಿಕೃತ ಮಾಹಿತಿಯನ್ನು ತಿಳಿಸಿದ್ದರು. ಹೀಗಾಗಿಯೇ ಯಾವುದೇ ಫ್ರಾಂಚೈಸಿ ಅವರ ಮೇಲೆ ಬಿಡ್ ಮಾಡಲಿಲ್ಲ.

Source link

ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್! – Kannada News

ನೌಕರರ ಹಾಜರಾತಿ ಪತ್ತೆ ಹಚ್ಚಲು ಇ-ಆಡಳಿತ ಇಲಾಖೆಯಿಂದ ‘ಕರ್ತವ್ಯ’ ಆಪ್ ಬಳಕೆ

ಬೆಂಗಳೂರು, ಜೂನ್ 06: ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸರಣಿ ಗೈರುಹಾಜರಿ ಹಾಗೂ ವಿಳಂಬಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆ ಹೋಗಿದೆ. ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಮುಖ್ಯಮಂತ್ರಿಗಳು ಗುರುವಾರ (ಜೂನ್ 4) ನಡೆಸಿದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಬೆಳಗ್ಗೆ 10 ಗಂಟೆಯೊಳಗೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ.
  • ನೌಕರರ ಹಾಜರಾತಿ ಪತ್ತೆ ಹಚ್ಚಲು ಇ-ಆಡಳಿತ ಇಲಾಖೆಯಿಂದ ‘ಕರ್ತವ್ಯ’ ಆಪ್ ಬಳಕೆ.
  • ಲೇಟಾಗಿ ಬರುವ ಸಿಬ್ಬಂದಿಗಳ ಪಟ್ಟಿಯನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸಲಿದೆ AI ತಂತ್ರಜ್ಞಾನ.

‘ಕರ್ತವ್ಯ App’ ಬಳಕೆ ಕಡ್ಡಾಯ

ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸಲು ಇ-ಆಡಳಿತ ಇಲಾಖೆಯು ಕರ್ತವ್ಯ (KAAMS) App ಸಿದ್ಧಪಡಿಸಿದೆ. ಈಗಾಗಲೇ HRMS ತಂತ್ರಾಂಶದಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮಾಹಿತಿಯನ್ನು ಇದರಲ್ಲಿ ನೋಂದಾಯಿಸಲಾಗಿದೆ. ಆದರೆ, ಬಹಳಷ್ಟು ಸಿಬ್ಬಂದಿಗಳು ಈ ಆಪ್ ಅನ್ನು ನಿರಂತರವಾಗಿ ಬಳಸುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗಾಗಿ, ಇನ್ನು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಬೆಳಗ್ಗೆ 10 ಗಂಟೆಗೆ ಕರ್ತವ್ಯ ಆಪ್‌ನಲ್ಲಿ ಚೆಕ್ ಇನ್ ಹಾಗೂ Check Out ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೇಟ್ ಆಗಿ ಬಂದ್ರೆ ಹಿಡಿಯುತ್ತೆ AI ತಂತ್ರಜ್ಞಾನ!

ಈ ನಿಯಮವನ್ನು ಕೇವಲ ಆದೇಶಕ್ಕೆ ಸೀಮಿತಗೊಳಿಸದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇ-ಆಡಳಿತ ಇಲಾಖೆಯು ಅತ್ಯಾಧುನಿಕ AI (ಕೃತಕ ಬುದ್ಧಿಮತ್ತೆ) ತಂತ್ರಾಂಶವನ್ನು ಬಳಸಿಕೊಳ್ಳುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ತಂತ್ರಾಂಶವು ಸ್ವಯಂಚಾಲಿತವಾಗಿ ವರದಿ ಸಿದ್ಧಪಡಿಸಲಿದೆ. ಈ AI ಜನರೇಟೆಡ್ ವರದಿಯನ್ನು ಆಯಾ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಲಾಗಿನ್ ಡ್ಯಾಶ್‌ ಬೋರ್ಡ್‌ಗೆ ನೇರವಾಗಿ ಕಳುಹಿಸಲಾಗುತ್ತದೆ. ಇಲಾಖಾ ಮುಖ್ಯಸ್ಥರು ಪ್ರತಿದಿನ ಈ ಡ್ಯಾಶ್‌ ಬೋರ್ಡ್ ಪರಿಶೀಲಿಸಿ, ಹಾಜರಾತಿ ದಾಖಲಿಸದವರಿಗೆ ತಕ್ಷಣವೇ ಸೂಕ್ತ ಸೂಚನೆ ಅಥವಾ ನೋಟಿಸ್ ನೀಡಬೇಕಾಗುತ್ತದೆ.

ಪ್ರವಾಸದಲ್ಲಿದ್ದರೆ ಏನು ಮಾಡಬೇಕು?

ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿದ್ದರೆ (On Official Duty), ಅದಕ್ಕೂ ಆ್ಯಪ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಹ ನೌಕರರು ಆ್ಯಪ್​ನಲ್ಲಿರುವ OOD Option ಆಯ್ಕೆ ಮಾಡಿ, ತಮ್ಮ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಬೇಕು. ತದನಂತರ ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ಧೃಡೀಕರಿಸಬೇಕಾಗುತ್ತದೆ.

ಇದನ್ನೂ ಓದಿ ದೇಶದಲ್ಲೇ ಮೊದಲು: AI ಬಳಸಿ ಅನುವಾದಗೊಂಡ ಕನ್ನಡ ಪುಸ್ತಕ ಮೈಸೂರಿನಲ್ಲಿ ಬಿಡುಗಡೆ!

ಈ ಆದೇಶವನ್ನು ಕಡ್ಡಾಯವೆಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆ್ಯಪ್ ಬಳಕೆಯ ಹೆಚ್ಚಿನ ಮಾಹಿತಿಗಾಗಿ ಯುಟ್ಯೂಬ್‌ನಲ್ಲಿ (YouTube) ಲಭ್ಯವಿರುವ ‘Kartavya (KAAMS) APP’ ವಿಡಿಯೋ ವೀಕ್ಷಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಮೃತಧಾರೆ’ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ – Kannada News

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯು (Amruthadhare Serial) ದಿನದಿಂದ ದಿನಕ್ಕೆ ತಿರುವಿನೊಂದಿಗೆ ಸಾಗುತ್ತಿದೆ. ಈಗ ಕಥೆ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇತ್ತೀಚಿನ ಸಂಚಿಕೆಗಳಲ್ಲಿ ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಭೂಮಿಕಾ, ಈಗ ರೌಡಿಗಳ ಹೆಡೆಮುರಿ ಕಟ್ಟಲು ಭದ್ರಕಾಳಿ ಅವತಾರ ತಾಳಿದ್ದಾಳೆ.

ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ ಸಹಾಯದೊಂದಿಗೆ ಕಿಡ್ನ್ಯಾಪರ್‌ಗಳ ಅಡಗುದಾಣವನ್ನು ಪತ್ತೆಹಚ್ಚಲು ಮುಂದಾಗುತ್ತಾಳೆ. ಒಂದು ಹಳೆಯ ಗೋದಾಮಿನಲ್ಲಿ ಮಿಂಚನ್ನು ಕೂಡಿಹಾಕಿರುವುದು ಗೊತ್ತಾದ ತಕ್ಷಣ ಅಲ್ಲಿಗೆ ಧಾವಿಸುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್‌ಗಳು ಮಿಂಚನ್ನು ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.

ನಂತರ ಆಕೆಯನ್ನು ಕಿಡ್ನ್ಯಾಪ್ ಮಾಡಿದವರ ಬಳಿ ಭೂಮಿಕಾ ತೆರಳುತ್ತಾಳೆ. ತಾಯಿಯ ಮಮತೆಯ ಜೊತೆಗೆ ರೌಡಿಗಳನ್ನು ಸಂಹರಿಸುವ ಉಗ್ರ ರೂಪ ತಳೆಯುತ್ತಾಳೆ. ಮಗಳನ್ನು ಕಾಪಾಡಲು ಮುಂದಾಗುವ ಭೂಮಿಕಾ ಎದುರು ಬರುವ ಪ್ರತಿಯೊಬ್ಬ ಗೂಂಡಾಗೂ ತಕ್ಕ ಶಾಸ್ತಿ ಮಾಡುತ್ತಾಳೆ. ಕೈಗೆ ಸಿಕ್ಕ ಕಡ್ಡಿ, ಕಬ್ಬಿಣದ ರಾಡ್‌ಗಳನ್ನೇ ಆಯುಧವಾಗಿಸಿಕೊಂಡು ರೌಡಿಗಳ ಮೇಲೆ ಮುಗಿಬೀಳುತ್ತಾಳೆ. ಭೂಮಿಕಾಳ ಈ ಅನಿರೀಕ್ಷಿತ ಸಾಹಸ ನೋಡಿ ಎಲ್ಲರೂ ಬೆಚ್ಚಿಬೀಳುತ್ತಾರೆ.

ಇದನ್ನೂ ಓದಿ: ಅಮೃತಧಾರೆ: ಆ ಒಂದು ವಿಷಯಕ್ಕೆ ದಿಯಾಳನ್ನು ಕೊಂದೇ ಬಿಟ್ಟ ಜೆಡಿ

ಸಾಮಾನ್ಯವಾಗಿ ಸೌಮ್ಯ ಸ್ವಭಾವದ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ಭೂಮಿಕಾ, ಮಗಳ ರಕ್ಷಣೆಗಾಗಿ ಇಷ್ಟು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಈ ರೋಚಕ ಸಂಚಿಕೆಯು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಭೂಮಿಕಾ ತನ್ನ ಮಗಳು ಮಿಂಚನ್ನು ಕಿಡ್ನ್ಯಾಪರ್‌ಗಳಿಂದ ಸುರಕ್ಷಿತವಾಗಿ ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಮೆಟ್ರೋದಿಂದ ಪರಿಸರಸ್ನೇಹಿ ಹೆಜ್ಜೆ: ಬೆಂಗಳೂರಿಲ್ಲಿ 2 ಲಕ್ಷ ಗಿಡ ನೆಡಲು ಮುಂದಾದ ಬಿಎಂಆರ್‌ಸಿಎಲ್ – Kannada News

ಹಂತ ಹಂತವಾಗಿ ಲಕ್ಷಾಂತರ ಗಿಡಗಳನ್ನು ಈಗಾಗಲೇ ಯಶಸ್ವಿಯಾಗಿ ನೆಡಲಾಗಿದೆ.Image Credit source: tv9

ಬೆಂಗಳೂರು, ಜೂನ್ 6: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳು ಕೂಡ ತೀವ್ರಗೊಳ್ಳುತ್ತಿವೆ. ಈ ಗಂಭೀರ ಪರಿಸ್ಥಿತಿಗೆ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭಾರಿ ಪರಿಸರಸ್ನೇಹಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಮೆಟ್ರೋ ಕಾಮಗಾರಿಗಳಿಗಾಗಿ ಕತ್ತರಿಸಲಾಗಿದ್ದ ಸಾವಿರಾರು ಮರಗಳಿಗೆ ಪರ್ಯಾಯವಾಗಿ, ನಗರದ ವಿವಿಧ ಮೆಟ್ರೋ ಕಾರಿಡಾರ್‌ಗಳಲ್ಲಿ ಒಟ್ಟು ಎರಡು ಲಕ್ಷ ಗಿಡಗಳನ್ನು ನೆಡಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ನಮ್ಮ ಮೆಟ್ರೋದ ಈ ನಡೆಗೆ ಪ್ರಯಾಣಿಕರು ಹಾಗೂ ಪರಿಸರ ಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋದಿಂದ 2 ಲಕ್ಷ ಗಿಡ ನೆಡುವ ಯೋಜನೆ.
  • ಮೆಟ್ರೋ ಮಾರ್ಗವನ್ನು ಹಸಿರು ಕಾರಿಡಾರ್ ಆಗಿ ಪರಿವರ್ತನೆ.
  • ಬಿಎಂಆರ್​ಸಿಎಲ್ ನಡೆಗೆ ಪ್ರಯಾಣಿಕರಿಂದ ಭಾರಿ ಪ್ರಶಂಸೆ.

ಮೆಟ್ರೋ ಹಳದಿ, ಹಸಿರು ಮಾರ್ಗಗಳಲ್ಲಿ ಹಸಿರೀಕರಣ

ಬೆಂಗಳೂರಿನ ರಸ್ತೆಗಳಿಗೆ ಪ್ರತಿದಿನ ಸುಮಾರು ಎರಡು ಸಾವಿರ ಹೊಸ ವಾಹನಗಳು ಇಳಿಯುತ್ತಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಹೊರಸೂಸುವ ವಿಷಕಾರಿ ಅನಿಲ ನಗರದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬಿಎಂಆರ್‌ಸಿಎಲ್, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ (Yellow Line) ಪ್ರಮುಖ ನಿಲ್ದಾಣಗಳಾದ ಆರ್.ವಿ. ರಸ್ತೆ, ಬಿಟಿಎಂ ಲೇಔಟ್, ರಾಗಿಗುಡ್ಡ, ಜಯದೇವ ಆಸ್ಪತ್ರೆ ಹಾಗೂ ಮಾದಾವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗದ ಹಸಿರು ಲೈನಿನಲ್ಲಿ ಬರುವ ಜೆ.ಪಿ. ನಗರ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದೆ. ಈ ಭಾಗಗಳಲ್ಲಿ ಈಗಾಗಲೇ ಹಂತ ಹಂತವಾಗಿ ಲಕ್ಷಾಂತರ ಗಿಡಗಳನ್ನು ಯಶಸ್ವಿಯಾಗಿ ನೆಡಲಾಗಿದ್ದು, ಉಳಿದ ಸಸಿಗಳನ್ನು ನೆಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಹಸಿರು ಸಾರಿಗೆ ಕಾರಿಡಾರ್ ಪರಿಕಲ್ಪನೆ: ಸಂಘಸಂಸ್ಥೆಗಳ ಸಾಥ್

ಬಿಎಂಆರ್‌ಸಿಎಲ್ ಈಗಾಗಲೇ ಆರ್.ವಿ. ರಸ್ತೆ, ಬಿಟಿಎಂ ಲೇಔಟ್, ರಾಗಿಗುಡ್ಡ, ಜಯದೇವ ಆಸ್ಪತ್ರೆ ಮತ್ತು ಜೆ.ಪಿ. ನಗರ ಮೆಟ್ರೋ ನಿಲ್ದಾಣಗಳ ಸುತ್ತಲಿನ ಪ್ರದೇಶಗಳನ್ನು ಪರಿಸರಸ್ನೇಹಿ ‘ಹಸಿರು ಸಾರಿಗೆ ಕಾರಿಡಾರ್‌’ಗಳಾಗಿ (Green Transit Corridors) ಯಶಸ್ವಿಯಾಗಿ ಪರಿವರ್ತಿಸಿದೆ. ಮೆಟ್ರೋ ಮಾರ್ಗಗಳ ನಿರ್ಮಾಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿತ್ತು. ಇದರ ನಷ್ಟವನ್ನು ಸರಿದೂಗಿಸಲು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಸಾರ್ವಜನಿಕ ವಲಯದ ಸಂಘ-ಸಂಸ್ಥೆಗಳ ಮತ್ತು ವಿವಿಧ ಎನ್‌ಜಿಒಗಳ ಸಕ್ರಿಯ ಸಹಯೋಗದೊಂದಿಗೆ ಬಾಕಿ ಉಳಿದಿರುವ ಗಿಡಗಳನ್ನು ನೆಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಬಿಎಂಆರ್‌ಸಿಎಲ್‌ನ ಈ ಬೃಹತ್ ಪರಿಸರ ಕಾಳಜಿಯು ಮುಂದಿನ ದಿನಗಳಲ್ಲಿ ಬೆಂಗಳೂರಿನ ಮಾಲಿನ್ಯ ನಿಯಂತ್ರಣಕ್ಕೆ ದಾರಿಯಾಗಲಿದ್ದು, ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿಂದು ವರುಣಾರ್ಭಟ! ಆರೆಂಜ್ ಅಲರ್ಟ್​ ಘೋಷಣೆ – Kannada News

ಬೆಂಗಳೂರು, ಜೂನ್ 06: ಕಾಲಿಡುತ್ತಿರುವ ಮುಂಗಾರು ಮಳೆಯ (Weather) ಅಬ್ಬರ ಕರ್ನಾಟಕದಲ್ಲಿ ಜೋರಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಜಾಗರೂಕತೆಯ ಮುನ್ನೆಚ್ಚರಿಕೆಗಳನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್​ ಘೋಷಿಸಿದ್ದು, ಕರಾವಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಿಗೆ ಭಾರಿ ಮಳೆಯ ‘ಆರೆಂಜ್ ಅಲರ್ಟ್’ ಘೋಷಣೆ.
  • ಮಲೆನಾಡು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಮುನ್ನೆಚ್ಚರಿಕೆ.
  • ರಾಜ್ಯದಾದ್ಯಂತ ಬಿರುಗಾಳಿ, ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ.

ಕರಾವಳಿಗೆ ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ, ಯೆಲ್ಲೋ ಅಲರ್ಟ್​?

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದ್ದು, ಇಲ್ಲಿಯೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.

ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಕೊಡಗು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಳೆ ಮತ್ತು ಸಿಡಿಲಿನ ಸಮಯದಲ್ಲಿ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು. ರೈತರು ಮತ್ತು ಸಾರ್ವಜನಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಒಟಿಟಿ ಬಿಡುಗಡೆ: ಜಿಯೋ ಹಾಟ್‌ಸ್ಟಾರ್ ಹೊಸ ಪ್ರಯೋಗಕ್ಕೆ ಪ್ರೇಕ್ಷಕರು ಗರಂ – Kannada News

ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಸಂಚಲನ ಮೂಡಿಸಿದ್ದ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಕೊನೆಗೂ ಒಟಿಟಿ ಅಂಗಳಕ್ಕೆ ಪ್ರವೇಶಿಸಿದೆ. ಜೂನ್ 4 ರಂದು ಬಹುನಿರೀಕ್ಷಿತ ಈ ಸಿನಿಮಾ ‘ಜಿಯೋ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಕಂಡಿದೆ. 2025ರ ಕೊನೆಯಲ್ಲಿ ಬಂದ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ, ಈ ಎರಡನೇ ಭಾಗದ ಒಟಿಟಿ ಬಿಡುಗಡೆಗಾಗಿ ವಿಶ್ವಾದ್ಯಂತ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾದ ಶೈಲಿ ಈಗ ಪ್ರೇಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದಕ್ಕೆ ಮುಖ್ಯ ಕಾರಣ, ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಸಿನಿಮಾವನ್ನು ಎಂದಿನಂತೆ ನೇರವಾಗಿ ವೀಕ್ಷಿಸಲು ಒಟಿಟಿಯಲ್ಲಿ ಅಪ್‌ಲೋಡ್ ಮಾಡುವ ಬದಲು, ಜೂನ್ 4 ರಂದು ಸಂಜೆ 7 ಗಂಟೆಗೆ ‘ಲೈವ್ ಪ್ರಸಾರ’ (ನೇರ ಪ್ರಸಾರ) ಮಾಡುವ ಹೊಸ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಪ್ರೇಕ್ಷಕರಿಗೆ ಪ್ರೀಮಿಯಂ ಅನುಭವ ನೀಡಲು ಸಂಸ್ಥೆಯು 50ಕ್ಕೂ ಹೆಚ್ಚು ಬ್ರ್ಯಾಂಡ್ ಪಾಲುದಾರರೊಂದಿಗೆ ಸೇರಿ 30 ನಿಮಿಷಗಳ ಪೂರ್ವ ಪ್ರದರ್ಶನ ಕಾರ್ಯಕ್ರಮ (ಪ್ರೀ-ಶೋ) ಹಾಗೂ ಸಿನಿಮಾದ ಮಧ್ಯೆ ಮಧ್ಯೆ ಕಾಮೆಂಟರಿ ವಿರಾಮವನ್ನು ಒಳಗೊಂಡ ಲೈವ್ ಸ್ಟ್ರೀಮಿಂಗ್ ಆಯೋಜಿಸಿತ್ತು.

ಆದರೆ, ಜಿಯೋ ಹಾಟ್‌ಸ್ಟಾರ್‌ನ ಈ ವಿಭಿನ್ನ ಪ್ರಯೋಗ ಪ್ರೇಕ್ಷಕರಿಗೆ ಅತಿಯಾದ ಕಿರಿಕಿರಿಯನ್ನು ಉಂಟುಮಾಡಿದೆ. ಲೈವ್ ಪ್ರಸಾರದ ಕಾರಣದಿಂದಾಗಿ ಪ್ರೇಕ್ಷಕರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಿನಿಮಾ ನೋಡುವ ಆನಂದ ಸಿಗಲಿಲ್ಲ. ಅಷ್ಟೇ ಅಲ್ಲದೆ, ಸಂಜೆ 7 ಗಂಟೆಯ ಲೈವ್ ಪ್ರಸಾರವನ್ನು ಸರಿಯಾದ ಸಮಯಕ್ಕೆ ವೀಕ್ಷಿಸಲು ಸಾಧ್ಯವಾಗದ ಸಿನಿಮಾ ಪ್ರೇಮಿಗಳಿಗೆ ಸಂಪೂರ್ಣ ಚಿತ್ರವನ್ನು ಮೊದಲಿನಿಂದ ನೋಡಲು ಸಾಧ್ಯವಾಗದೆ ನಿರಾಶೆಯಾಯಿತು. ಮಧ್ಯೆ ಮಧ್ಯೆ ಬಂದ ಕಾಮೆಂಟರಿಗಳು ಸಿನಿಮಾ ನೋಡುವ ಮೂಡ್ ಕೆಡಿಸಿದವು ಎಂದು ವೀಕ್ಷಕರು ದೂರಿದ್ದಾರೆ.

ಇದನ್ನೂ ಓದಿ: ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್

ಸದ್ಯ ಜಿಯೋ ಹಾಟ್‌ಸ್ಟಾರ್‌ನ ಈ ಅನಗತ್ಯ ನಾಟಕೀಯ ಪ್ರಯೋಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ‘ಬ್ರ್ಯಾಂಡಿಂಗ್ ಹೆಸರಿನಲ್ಲಿ ಸಿನಿಮಾ ನೋಡುವ ಮಜಾವನ್ನೇ ಹಾಳು ಮಾಡಿದ್ದಾರೆ, ಇದರ ಬದಲು ನೇರವಾಗಿ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬೇಕಿತ್ತು’ ಎಂದು ನೆಟ್ಟಿಗರು ಚಿತ್ರತಂಡ ಹಾಗೂ ಒಟಿಟಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಣ್ಣಗಾಯ್ತು ಮುನಿಯಪ್ಪ ಮುನಿಸು, ನಿಲ್ಲದ ಜಮೀರ್‌ ಬೆಂಬಲಿಗರ ಆಕ್ರೋಶ: ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ – Kannada News

ತುಮಕೂರಿನಲ್ಲಿ ಜಮೀರ್ ಬೆಂಬಲಿಗರಿಂದ ಪ್ರತಿಭಟನೆImage Credit source: tv9

ಬೆಂಗಳೂರು, ಜೂನ್ 6: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಸೃಷ್ಟಿಯಾಗಿದ್ದ ಖಾತೆ ಹಂಚಿಕೆ ಬಿಕ್ಕಟ್ಟು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆಯಿಂದ ಆರಂಭವಾದ ಭಿನ್ನಮತದ ಜ್ವಾಲೆಯನ್ನು ತಣಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಹಿರಿಯ ಸಚಿವ ಕೆಎಚ್ ಮುನಿಯಪ್ಪ ಅವರ ಮುನಿಸು ಸದ್ಯ ಶಮನಗೊಂಡಿದೆ. ಆದರೆ, ಮತ್ತೊಂದೆಡೆ ಮೊದಲ ಪಟ್ಟಿಯಲ್ಲಿ ಮಂತ್ರಿಗಿರಿ ಸಿಗದಿದ್ದಕ್ಕೆ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸುವ ಮೂಲಕ ಹೈಕಮಾಂಡ್‌ಗೆ ಹೊಸ ತಲೆನೋವು ತಂದಿಟ್ಟಿದ್ದಾರೆ.

ಮುಖ್ಯಾಂಶಗಳು

  • ಮುನಿಯಪ್ಪ ಜತೆ ರಾಹುಲ್ ಗಾಂಧಿ ಸಂಧಾನ ಯಶಸ್ವಿ
  • ಜಮೀರ್ ಬೆಂಬಲಿಗರಿಂದ ಆಕ್ರೋಶ, ಪ್ರತಿಭಟನೆ.
  • ಸಚಿವ ಸ್ಥಾನಕ್ಕೆ ಕಾಯುತ್ತಿರುವ ಶಾಸಕರು.

ರಾಹುಲ್ ಸಂಧಾನ ಯಶಸ್ವಿ: ವರಸೆ ಬದಲಿಸಿದ ಮುನಿಯಪ್ಪ

ತಾವು 8 ಬಾರಿ ಗೆದ್ದಿದ್ದರೂ ತಮಗೆ ಜನರ ನೇರ ಸೇವೆಗೆ ಅವಕಾಶವಿಲ್ಲದ ಆಹಾರ ಖಾತೆ ನೀಡಲಾಗಿದೆ ಎಂದು ಕೆಂಡಕಾರಿದ್ದ ಸಚಿವ ಕೆಎಚ್ ಮುನಿಯಪ್ಪ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಮುನಿಯಪ್ಪ ಅವರೊಂದಿಗೆ ನೇರವಾಗಿ ಮಾತನಾಡಿ ಸಮಾಧಾನಪಡಿಸಿದ್ದಾರೆ. ಇದಕ್ಕೂ ಮುನ್ನ ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸತತ 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ರಾಹುಲ್ ಗಾಂಧಿ ಅವರ ಭರವಸೆಯ ಬಳಿಕ ‘ನಾನು ಸಂತೋಷವಾಗಿದ್ದೇನೆ’ ಎಂದು ಮುನಿಯಪ್ಪ ವರಸೆ ಬದಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಮುನಿಯಪ್ಪಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಜಮೀರ್ ಬೆಂಬಲಿಗರ ಜ್ವಾಲಾಗ್ನಿ

ಇತ್ತ ಮುನಿಯಪ್ಪ ಅವರ ಮುನಿಸು ತಣ್ಣಗಾಗಿದ್ದರೆ, ಅತ್ತ ಮೊದಲ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಅವರ ಬೆಂಬಲಿಗರು ಸಿಡಿದೆದ್ದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ ಚಿಕ್ಕಮಗಳೂರು, ಹುಬ್ಬಳ್ಳಿ, ವಿಜಯನಗರ, ಮಂಡ್ಯ, ಹಾವೇರಿ, ದಾವಣಗೆರೆ, ತುಮಕೂರು ಹಾಗೂ ಕೊಪ್ಪಳ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಮೀರ್ ಪರ ಭಾರಿ ಪ್ರತಿಭಟನೆಗಳು ನಡೆದಿವೆ. ಜಮೀರ್ ವಿರುದ್ಧ ವೈರಲ್ ಆಗಿರುವ ಆಡಿಯೋ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಘೋಷಣೆ ಕೂಗಿರುವ ಬೆಂಬಲಿಗರು, 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ, ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದ ಸಚಿವ ಕೆಜೆ ಜಾರ್ಜ್ ಅವರ ಬೇಡಿಕೆಯಂತೆ ಕೆಪಿಸಿಎಲ್ (KPCL) ಎಂಡಿ ಹುದ್ದೆಗೆ ರಾಜೇಂದ್ರ ಚೋಳನ್ ಅವರ ನೇಮಕಾತಿ ಆದೇಶವನ್ನು ಹಿಂಪಡೆದು, ಗೌರವ್ ಗುಪ್ತಾ ಅವರನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದರಿಂದ ಜಾರ್ಜ್ ಸದ್ಯ ನಿರಾಳರಾಗಿದ್ದಾರೆ ಎನ್ನಲಾಗಿದೆ.

ಮಂತ್ರಿ ಸ್ಥಾನಕ್ಕಾಗಿ ಶಾಸಕರ ಚಾತಕ ಪಕ್ಷಿ ವರಸೆ: ಮೋದಿ ಲೇವಡಿ

ಮೊದಲ ಪಟ್ಟಿಯಲ್ಲಿ ಸಚಿವರಾದವರಿಗೆ ಖಾತೆಯ ಚಿಂತೆಯಾದರೆ, ಉಳಿದ ಶಾಸಕರಿಗೆ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಆತುರ ಶುರುವಾಗಿದೆ. ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಚ್.ಕೆ.ಪಾಟೀಲ್, ಮಧು ಬಂಗಾರಪ್ಪ ಸೇರಿದಂತೆ ಪ್ರಮುಖರು ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ವಿಶ್ವಾಸ ವ್ಯಕ್ತಪಡಿಸಿದ್ದರೆ, ಮಾಜಿ ಸಚಿವೆ ಉಮಾಶ್ರೀ ಕೂಡ ರೇಸ್‌ನಲ್ಲಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್!

ಕಾಂಗ್ರೆಸ್‌ನ ಈ ಆಂತರಿಕ ಕಸರತ್ತನ್ನು ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಲೇವಡಿ ಮಾಡಿದ್ದು, ಕಾಂಗ್ರೆಸ್‌ನ ಕಿತ್ತಾಟ ಆ ಪಕ್ಷದ ಮೂಲ ಸಂಸ್ಕೃತಿ ಎಂದು ಹಳಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version