ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ಬೆಂಗಳೂರಿನಿಂದ ಸ್ಥಳಕ್ಕೆ ಬಂದ ವಾಸ್ತು ತಜ್ಞ ಹೇಳಿದ್ದಿಷ್ಟು – Kannada News | HD devegowda Wife Chennamma funeral In Mavinakere as Vastu, here Is expert exclusive chit chat

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ವಾಸ್ತು ಪ್ರಕಾರವೇ ಅಂತ್ಯಕ್ರಿಯೆ ನೆರವೇರಲಿದೆ. ಹೀಗಾಗಿ ದೇವೇಗೌಡ ರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಬೆಂಗಳೂರಿನ ಖ್ಯಾತ ವಾಸ್ತು ತಜ್ಞ ಹರಿಪ್ರಸಾಧ್ ಅವರು ಹರದನಹಳ್ಳಿಗೆ ಭೇಟಿ ನೀಡಿ ಅಂತ್ಯಕ್ರಿಯೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಖ್ಯಾತ ವಾಸ್ತು ತಜ್ಞ ಹರಿಪ್ರಸಾದ್, ದೇವೇಗೌಡರ ಕುಟುಂಬ ದೇವರು, ವಾಸ್ತು ಬಿಟ್ಟು ಏನನ್ನೂ ಮಾಡಲ್ಲ. ಇಂತಹ ದೈವ ಭಕ್ತರು ಎಲ್ಲೂ ಸಿಗಲ್ಲ. ಎಲ್ಲಿ ಅಂತಿಮ ಸಂಸ್ಕಾರ ಎಂದು ಸ್ಥಳ ನಿಗದಿ ಆಗಿದೆ. ಆದರೆ ಅಲ್ಲಿ ಯಾವ ಕಡೆ ಮಾಡಬೇಕು ಎಂದು ನೋಡಲು ಬಂದಿದ್ದೇನೆ. ಈ ಮೊದಲೇ ಚರ್ಚೆ ಮಾಡಿದ್ದರು. ಈಗ ಖುದ್ದು ನೋಡಲು ಬಂದಿದ್ದೇನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Auto Tips: ಕಾರುಗಳಿಗೆ ನಾಲ್ಕೇ ಚಕ್ರಗಳು ಏಕೆ? ಇದರ ಹಿಂದಿನ ವಿಜ್ಞಾನ ತಿಳಿದರೆ ಅಚ್ಚರಿಯಾಗುತ್ತದೆ! – Kannada News | Why cars have four wheels science behind four wheel design

ಕಾರುಗಳ ಸಾಂದರ್ಭಿಕ ಚಿತ್ರImage Credit source: AP

ಇಂದು ಜಗತ್ತಿನಾದ್ಯಂತ ಕೋಟ್ಯಂತರ ಕಾರುಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಸಣ್ಣ ಹ್ಯಾಚ್‌ಬ್ಯಾಕ್‌ನಿಂದ ಹಿಡಿದು ಐಷಾರಾಮಿ ಸೆಡಾನ್‌, ಎಸ್‌ಯುವಿ (SUV) ಮತ್ತು ಸ್ಪೋರ್ಟ್ಸ್ ಕಾರುಗಳವರೆಗೆ ಬಹುತೇಕ ಎಲ್ಲ ವಾಹನಗಳಲ್ಲೂ ನಾಲ್ಕು ಚಕ್ರಗಳನ್ನೇ ನಾವು ಕಾಣುತ್ತೇವೆ. ಆದರೆ ಎಂದಾದರೂ ನಿಮ್ಮ ಮನಸ್ಸಿಗೆ ಒಂದು ಪ್ರಶ್ನೆ ಬಂದಿದೆಯೇ? ಕಾರುಗಳಿಗೆ ನಾಲ್ಕೇ ಚಕ್ರಗಳು ಏಕೆ ಇರುತ್ತವೆ? ಮೂರು, ಐದು ಅಥವಾ ಆರು ಚಕ್ರಗಳ ಕಾರುಗಳನ್ನು ಸಾಮಾನ್ಯವಾಗಿ ಏಕೆ ತಯಾರಿಸುವುದಿಲ್ಲ? ಈ ಪ್ರಶ್ನೆಗೆ ಉತ್ತರ ಕೇವಲ ವಾಹನ ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ಇತಿಹಾಸ, ವಿಜ್ಞಾನ, ಸುರಕ್ಷತೆ ಮತ್ತು ಎಂಜಿನಿಯರಿಂಗ್‌ನ ಹಲವು ಅಂಶಗಳು ಅಡಗಿವೆ.

ಕಾರುಗಳ ಇತಿಹಾಸವನ್ನು ಗಮನಿಸಿದರೆ, ಮೊದಲ ವಾಹನಗಳು ಕುದುರೆಬಂಡಿಗಳ ಮಾದರಿಯಲ್ಲಿಯೇ ರೂಪುಗೊಂಡಿದ್ದವು. ಶತಮಾನಗಳ ಕಾಲ ಜನರು ಸರಕು ಮತ್ತು ಪ್ರಯಾಣಕ್ಕಾಗಿ ಬಳಸುತ್ತಿದ್ದ ರಥಗಳು ಹಾಗೂ ಬಂಡಿಗಳು ಸಾಮಾನ್ಯವಾಗಿ ನಾಲ್ಕು ಚಕ್ರಗಳನ್ನು ಹೊಂದಿದ್ದವು. ಈ ವಿನ್ಯಾಸವು ತೂಕವನ್ನು ಸಮತೋಲನವಾಗಿ ಹೊರುವುದಲ್ಲದೆ ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿಯೂ ಮಾಡುತ್ತಿತ್ತು. ನಂತರ 19ನೇ ಶತಮಾನದಲ್ಲಿ ಆಧುನಿಕ ಕಾರುಗಳ ಅಭಿವೃದ್ಧಿ ಆರಂಭವಾದಾಗ, ಇಂಜಿನಿಯರ್‌ಗಳು ಈಗಾಗಲೇ ಯಶಸ್ವಿಯಾಗಿದ್ದ ಈ ನಾಲ್ಕು ಚಕ್ರಗಳ ವಿನ್ಯಾಸವನ್ನೇ ಮುಂದುವರಿಸಿಕೊಂಡರು.

ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ನಾಲ್ಕು ಚಕ್ರಗಳು ವಾಹನಕ್ಕೆ ಅತ್ಯುತ್ತಮ ಸ್ಥಿರತೆಯನ್ನು ಒದಗಿಸುತ್ತವೆ. ಒಂದು ವಾಹನದ ತೂಕವನ್ನು ನಾಲ್ಕು ಮೂಲೆಗಳಲ್ಲಿ ಸಮಾನವಾಗಿ ಹಂಚಿದಾಗ ಅದು ರಸ್ತೆಯ ಮೇಲೆ ಉತ್ತಮ ಹಿಡಿತವನ್ನು ಪಡೆಯುತ್ತದೆ. ಕಾರು ವೇಗವಾಗಿ ಚಲಿಸುವಾಗ ಅಥವಾ ತಿರುವುಗಳನ್ನು ತೆಗೆದುಕೊಳ್ಳುವಾಗ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಾಲ್ಕು ಚಕ್ರಗಳ ವ್ಯವಸ್ಥೆಯಲ್ಲಿ ವಾಹನದ ಗುರುತ್ವಾಕರ್ಷಣ ಕೇಂದ್ರವು ಸಮರ್ಪಕವಾಗಿ ನಿಯಂತ್ರಿತವಾಗಿರುವುದರಿಂದ ಉರುಳುವ ಅಪಾಯ ಕಡಿಮೆಯಾಗುತ್ತದೆ.

Auto Tips: ಕಾರ್ ಸನ್‌ಶೇಡ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ?

ಮೂರು ಚಕ್ರಗಳ ವಾಹನಗಳು ಸಹ ಜಗತ್ತಿನಲ್ಲಿ ಇವೆ. ಭಾರತದ ಆಟೋ ರಿಕ್ಷಾಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ಮೂರು ಚಕ್ರಗಳ ವಾಹನಗಳಲ್ಲಿ ಸ್ಥಿರತೆ ನಾಲ್ಕು ಚಕ್ರಗಳ ವಾಹನಗಳಷ್ಟಿರುವುದಿಲ್ಲ. ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ಅಥವಾ ತೀಕ್ಷ್ಣ ತಿರುವುಗಳಲ್ಲಿ ಸಂಚರಿಸುವಾಗ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದೇ ಕಾರಣದಿಂದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಾರು ತಯಾರಕರು ನಾಲ್ಕು ಚಕ್ರಗಳ ವಿನ್ಯಾಸವನ್ನೇ ಆಯ್ಕೆ ಮಾಡುತ್ತಾರೆ.

ಇನ್ನು ಕೆಲವರಿಗೆ ಐದು ಚಕ್ರಗಳ ಕಾರುಗಳ ಕಲ್ಪನೆ ಬರಬಹುದು. ವಾಸ್ತವವಾಗಿ ಐದನೇ ಚಕ್ರವನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹೆಚ್ಚುವರಿ ಚಕ್ರ ಅಳವಡಿಸಿದರೆ ವಾಹನದ ತೂಕ ಹೆಚ್ಚಾಗುತ್ತದೆ. ಜೊತೆಗೆ ಸಸ್ಪೆನ್ಷನ್, ಬ್ರೇಕಿಂಗ್ ಮತ್ತು ಸ್ಟೀರಿಂಗ್ ವ್ಯವಸ್ಥೆಗಳು ಇನ್ನಷ್ಟು ಸಂಕೀರ್ಣವಾಗುತ್ತವೆ. ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಇದರಿಂದ ದೊರೆಯುವ ಲಾಭ ಅಷ್ಟಾಗಿ ಇರುವುದಿಲ್ಲ. ಹೀಗಾಗಿ ನಾಲ್ಕು ಚಕ್ರಗಳ ವಿನ್ಯಾಸವೇ ಅತ್ಯಂತ ಸಮರ್ಥ ಮತ್ತು ಆರ್ಥಿಕ ಪರಿಹಾರವಾಗಿದೆ.

ನಾಲ್ಕು ಚಕ್ರಗಳ ಮತ್ತೊಂದು ಪ್ರಮುಖ ಲಾಭವೆಂದರೆ ಉತ್ತಮ ಚಾಲನಾ ನಿಯಂತ್ರಣ. ಕಾರಿನ ಮುಂಭಾಗದ ಎರಡು ಚಕ್ರಗಳು ದಿಕ್ಕು ಬದಲಿಸುವ ಕೆಲಸ ಮಾಡುತ್ತವೆ. ಹಿಂಭಾಗದ ಚಕ್ರಗಳು ವಾಹನದ ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಈ ವ್ಯವಸ್ಥೆಯಿಂದ ಚಾಲಕನಿಗೆ ವಾಹನದ ಮೇಲೆ ಹೆಚ್ಚಿನ ನಿಯಂತ್ರಣ ಸಿಗುತ್ತದೆ. ಮಳೆ, ಮಣ್ಣು ಅಥವಾ ಅಸಮ ರಸ್ತೆಗಳಲ್ಲಿಯೂ ಕಾರು ಹೆಚ್ಚು ಸುರಕ್ಷಿತವಾಗಿ ಚಲಿಸುತ್ತದೆ.

ಆದರೆ ಎಲ್ಲ ವಾಹನಗಳೂ ನಾಲ್ಕು ಚಕ್ರಗಳಾಗಿರಬೇಕೆಂದಿಲ್ಲ. ಭಾರೀ ಸರಕು ಸಾಗಣೆ ಟ್ರಕ್‌ಗಳು, ಸೇನಾ ವಾಹನಗಳು ಮತ್ತು ಗಣಿಗಾರಿಕಾ ಕ್ಷೇತ್ರದಲ್ಲಿ ಬಳಸುವ ದೊಡ್ಡ ವಾಹನಗಳು ಆರು, ಎಂಟು ಅಥವಾ ಇನ್ನೂ ಹೆಚ್ಚು ಚಕ್ರಗಳನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಅವು ಹೆಚ್ಚಿನ ತೂಕವನ್ನು ಹೊರುವ ಅಗತ್ಯ. ಹೆಚ್ಚುವರಿ ಚಕ್ರಗಳು ವಾಹನದ ತೂಕವನ್ನು ಸಮಾನವಾಗಿ ಹಂಚಿ ರಸ್ತೆಯ ಮೇಲೆ ಉತ್ತಮ ಹಿಡಿತ ಒದಗಿಸುತ್ತವೆ. ಆದರೆ ಸಾಮಾನ್ಯ ಪ್ರಯಾಣಿಕ ಕಾರುಗಳಿಗೆ ನಾಲ್ಕು ಚಕ್ರಗಳೇ ಸಾಕಷ್ಟು ಎಂದು ಪರಿಗಣಿಸಲಾಗುತ್ತದೆ.

ಆಧುನಿಕ ಆಟೋಮೊಬೈಲ್ ಉದ್ಯಮದಲ್ಲಿ ಸಾವಿರಾರು ಪರೀಕ್ಷೆಗಳು ಮತ್ತು ಸಂಶೋಧನೆಗಳ ಬಳಿಕ ನಾಲ್ಕು ಚಕ್ರಗಳ ವಿನ್ಯಾಸವೇ ಅತ್ಯುತ್ತಮ ಆಯ್ಕೆಯಾಗಿದೆ ಎಂಬುದು ಸಾಬೀತಾಗಿದೆ. ಇದು ಸುರಕ್ಷತೆ, ಸ್ಥಿರತೆ, ಕಡಿಮೆ ವೆಚ್ಚ, ಸುಲಭ ನಿರ್ವಹಣೆ ಮತ್ತು ಉತ್ತಮ ಕಾರ್ಯಕ್ಷಮತೆಯ ಸಮತೋಲನವನ್ನು ಒದಗಿಸುತ್ತದೆ. ಅದಕ್ಕಾಗಿಯೇ ದಶಕಗಳ ಕಾಲ ತಂತ್ರಜ್ಞಾನ ಬದಲಾಗಿದ್ದರೂ ಕಾರುಗಳ ಮೂಲ ವಿನ್ಯಾಸದಲ್ಲಿ ನಾಲ್ಕು ಚಕ್ರಗಳ ಸ್ಥಾನ ಮಾತ್ರ ಅಚಲವಾಗಿದೆ.

ಹೀಗಾಗಿ ಮುಂದಿನ ಬಾರಿ ನೀವು ರಸ್ತೆಯಲ್ಲಿ ಕಾರನ್ನು ನೋಡಿದಾಗ, ಅದರ ನಾಲ್ಕು ಚಕ್ರಗಳ ಹಿಂದೆ ಕೇವಲ ಒಂದು ವಿನ್ಯಾಸವಲ್ಲ, ಹಲವು ವರ್ಷಗಳ ಇತಿಹಾಸ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನ ಅಡಗಿದೆ ಎಂಬುದನ್ನು ನೆನಪಿಸಿಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಮನೆಯಲ್ಲೇ ರಕ್ತ ಪರೀಕ್ಷೆ ಮಾಡುವ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ವಿದೇಶಿ ಮಹಿಳೆ – Kannada News | American woman praises India’s healthcare system

ಮುಂಬೈ, ಜುಲೈ 19: ವಿದೇಶಿಗರು (foreigner) ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯುತ್ತಾರೆ. ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ವಿವಿಧ ರುಚಿಕರ ಖಾದ್ಯಗಳನ್ನು ಸವಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಭಾರತೀಯರಿಗೆ ಸಾಮಾನ್ಯ ಎನಿಸುವ ಮನೆ ಬಾಗಿಲಿನ ರಕ್ತ ಪರೀಕ್ಷೆ ಸೇವೆಗೆ ವಿದೇಶಿ ಮಹಿಳೆ ಫುಲ್ ಫಿದಾ ಆಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಅಮೆರಿಕನ್ ಮಹಿಳೆ ಮನೆಯಿಂದಲೇ ರಕ್ತ ಪರೀಕ್ಷೆ ಮಾಡಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲಿಜ್ ಅಂಡ್ ಶಿವ್ (Liz and shiv) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮನೆ ಬಾಗಿಲಿನ ರಕ್ತ ಪರೀಕ್ಷೆ ಸೇವೆಯನ್ನು ಶ್ಲಾಘಿಸಿದ್ದಾರೆ. ಈ ವಿದೇಶಿ ಮಹಿಳೆ ಮನೆ ಬಾಗಿಲಿಗೆ ಬಂದು ರಕ್ತ ಮಾಡುವ ಈ ಸೇವೆಗೆ ಹೆಚ್ಚುವರಿ ಹಣ ಪಾವತಿಸಿಲ್ಲ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ತನ್ನ ಅನುಭವ ಬಿಚ್ಚಿಟ್ಟ ಲಿಜ್ ಭಾರತದಲ್ಲಿ ಈ ರೀತಿ ಸೇವೆಯಿದೆ ಎಂದು ನಿಜಕ್ಕೂ ನಂಬಲಾಗದು. ನಾನು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಆಸ್ಪತ್ರೆಯಿಂದ ಸಿಬ್ಬಂದಿಯೊಬ್ಬರು ರಕ್ತದ ಮಾದರಿಯನ್ನು ಸಂಗ್ರಹಿಸಲು ನಾನಿರುವ ಅಪಾರ್ಟ್‌ಮೆಂಟ್‌ಗೆ ಬಂದರು. ಮನೆಗೆ ಬಂದು ರಕ್ತ ಪರೀಕ್ಷೆ ಮಾಡಿಸಿದ್ದಕ್ಕೆ ಶುಲ್ಕವನ್ನು ಆಸ್ಪತ್ರೆ ಸಿಬ್ಬಂದಿ ಪಡೆದಿಲ್ಲ. ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದರೆ ಖರ್ಚು ಆಗುವಷ್ಟೇ ಈ ಸೇವೆಗೆ ಆಗಿದೆ ಎಂದು ಹೇಳಿದ್ದಾರೆ.

ನಾನು ಈ ರೀತಿ ಸೇವೆ ಭಾರತದಲ್ಲಿ ಮಾತ್ರ ನೋಡಿದ್ದೇನೆ, ಬೇರೆಲ್ಲಿಯೂ ಇಂತಹ ಸೌಲಭ್ಯವಿಲ್ಲ. ಆಸ್ಪತ್ರೆಗೆ ಹೋಗಿ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಕಾಯುವುದಕ್ಕಿಂತ ಕ್ಷಣಾರ್ಧದಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಮನೆಯಲ್ಲಿ ಕುಳಿತುಕೊಂಡೆ ರಕ್ತ ಪರೀಕ್ಷೆ ಆಯ್ತು ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಬೀದಿ ಬದಿ ವ್ಯಾಪಾರಿ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದೇನು ವಿಶೇಷವಲ್ಲ, ಭಾರತದಲ್ಲಿ ಕಾಮನ್ ಎಂದಿದ್ದಾರೆ. ಮತ್ತೊಬ್ಬರು, ವಿದೇಶಿಗರಿಗೆ ಇದು ನಿಜಕ್ಕೂ ಅಚ್ಚರಿಯಾಗುತ್ತದೆ. ಭಾರತೀಯರಿಗೆ ಹೊಸದೇನು ಅನಿಸಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಧನಾತ್ಮಕ ಅಂಶ ಗುರುತಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ISRO Recruitment 2026: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ! – Kannada News | VSSC ISRO Apprentice Recruitment 2026 27: 460 Vacancies, Walk in Interview for Engineers

Isro ಇಂಟರ್ನ್‌ಶಿಪ್‌ ಅವಕಾಶImage Credit source: Getty Images

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವ್ಯಾಪ್ತಿಗೆ ಒಳಪಡುವ ತಿರುವನಂತಪುರಂನ ಪ್ರತಿಷ್ಠಿತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (VSSC) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುವರ್ಣಾವಕಾಶವನ್ನು ನೀಡಿದೆ. 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 460 ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ವಿವಿಧ ಪದವೀಧರರಿಗೆ ಇಸ್ರೋದಂತಹ ಹೆಮ್ಮೆಯ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ವಾಕ್-ಇನ್ ಸಂದರ್ಶನ:

ಈ ನೇಮಕಾತಿಯ ಅತ್ಯಂತ ಪ್ರಮುಖ ವಿಶೇಷತೆಯೆಂದರೆ, ಅಭ್ಯರ್ಥಿಗಳು ಯಾವುದೇ ಮುಂಗಡ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರವಾಗಿ ಜುಲೈ 25 ಶನಿವಾರದಂದು ನಡೆಯಲಿರುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬೇಕಾಗುತ್ತದೆ. ಅಂದು ಬೆಳಗ್ಗೆ 9:30 ರಿಂದ ಸಂಜೆ 5:00 ರವರೆಗೆ ಸಂದರ್ಶನ ಪ್ರಕ್ರಿಯೆಗಳು ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕಾಗುತ್ತದೆ. 1 ವರ್ಷದ ಅವಧಿಯ ಈ ತರಬೇತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ವಾಕ್-ಇನ್ ಸಂದರ್ಶನದ ಪ್ರದರ್ಶನದ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ.

ಇಲಾಖಾವಾರು ಹುದ್ದೆಗಳ ವಿವರ ಮತ್ತು ಮಾಸಿಕ ಸ್ಟೈಫಂಡ್:

ಪ್ರಸ್ತುತ ಬಿಡುಗಡೆಯಾಗಿರುವ ಅಧಿಸೂಚನೆಯ ಪ್ರಕಾರ, ಒಟ್ಟು 460 ಹುದ್ದೆಗಳಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಸಂಖ್ಯೆ 273 ಆಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 12,300 ರೂ. ಸ್ಟೈಫಂಡ್ (ಭತ್ಯೆ) ನೀಡಲಾಗುತ್ತದೆ. ಇನ್ನುಳಿದ 187 ಹುದ್ದೆಗಳನ್ನು ಟೆಕ್ನಿಷಿಯನ್ ಅಪ್ರೆಂಟಿಸ್ ವಿಭಾಗದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇವರಿಗೆ ಮಾಸಿಕ 10,900ರೂ. ಸ್ಟೈಫಂಡ್ ಲಭ್ಯವಾಗಲಿದೆ. ಈ ತರಬೇತಿಯು ಅಭ್ಯರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದ ಉತ್ತಮ ಉದ್ಯೋಗಾವಕಾಶಗಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಹ ವಿಭಾಗಗಳು:

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿಇ (BE) ಅಥವಾ ಬಿ.ಟೆಕ್ (B.Tech) ಪದವಿ ಮುಗಿಸಿರಬೇಕು. ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಕ್ಯಾಟರಿಂಗ್ ಟೆಕ್ನಾಲಜಿಯಲ್ಲಿ ಪ್ರಥಮ ದರ್ಜೆ ಪದವಿ ಪಡೆದವರೂ ಸಹ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಎಂಜಿನಿಯರಿಂಗ್ ಡಿಪ್ಲೊಮಾ (Diploma) ಉತ್ತೀರ್ಣರಾಗಿರಬೇಕು. ಏರೋನಾಟಿಕಲ್/ಏರೋಸ್ಪೇಸ್ ಎಂಜಿನಿಯರಿಂಗ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ವಯೋಮಿತಿ ಮತ್ತು ಮೀಸಲಾತಿ ಸಡಿಲಿಕೆ:

ಜುಲೈ 31, 2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ (UR) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 28 ರಿಂದ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ (ಹುದ್ದೆಗಳಿಗೆ ಅನುಗುಣವಾಗಿ ಮಾರ್ಪಾಡಾಗುತ್ತದೆ). ಆದರೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಮೀಸಲು ವರ್ಗದ ಅಭ್ಯರ್ಥಿಗಳು 28 ರಿಂದ 35 ವರ್ಷಗಳವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ಪ್ರಮುಖ ಸೂಚನೆ:

ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ (Self-Attested) ಜೆರಾಕ್ಸ್ ಪ್ರತಿಗಳೊಂದಿಗೆ ಕೇರಳದ ತಿರುವನಂತಪುರಂ ಜಿಲ್ಲೆಯ ಮಣಕಾಡುವಿನಲ್ಲಿರುವ “ಕಾರ್ತಿಕ ತಿರುನಾಳ್ ಸರ್ಕಾರಿ ವೃತ್ತಿಪರ ಮತ್ತು ಪ್ರೌಢಶಾಲೆ (KTCT GVHSS – ಬಾಲಕಿಯರ ಶಾಲೆ), VSSC ಪೆವಿಲಿಯನ್” ವಿಳಾಸಕ್ಕೆ ಜುಲೈ 25 ರಂದು ಹಾಜರಾಗಬೇಕು. ಸಂದರ್ಶನದ ಸ್ಥಳದಲ್ಲೇ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಸ್ರೋ VSSC ಅಧಿಕೃತ ವೆಬ್‌ಸೈಟ್ ಆದ www.vssc.gov.in ಅನ್ನು ಪರಿಶೀಲಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Auto Tips: ಕಾರ್ ಸನ್‌ಶೇಡ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ? – Kannada News | Car sunshade benefits does it really reduce car heat and protect interior

ಬೇಸಿಗೆಯಲ್ಲಿ ಕಾರನ್ನು (Car) ಕೆಲವೇ ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದರೂ ಅದರೊಳಗೆ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಸ್ಟೀರಿಂಗ್, ಸೀಟ್‌ಗಳು ಮತ್ತು ಡ್ಯಾಶ್‌ಬೋರ್ಡ್ ಅತಿಯಾಗಿ ಬಿಸಿಯಾಗಿರುವುದರಿಂದ ಚಾಲನೆ ಆರಂಭಿಸುವ ಮುನ್ನವೇ ಎಸಿ ಆನ್ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಕಾರಿನ ಮುಂಭಾಗದ ಗಾಜಿಗೆ ಸನ್‌ಶೇಡ್ ಅಳವಡಿಸುತ್ತಾರೆ. ಆದರೆ ಇದು ಕೇವಲ ಬಿಸಿಲು ತಡೆಯುವ ಪರಿಕರವೋ ಅಥವಾ ನಿಜವಾಗಿಯೂ ಪರಿಣಾಮಕಾರಿಯೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ತಜ್ಞರ ಪ್ರಕಾರ, ಉತ್ತಮ ಗುಣಮಟ್ಟದ ಸನ್‌ಶೇಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಕಾರಿನ ಒಳಗಿನ ಉಷ್ಣತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದರ ಜೊತೆಗೆ ಕಾರಿನ ಒಳಾಂಗಣಕ್ಕೂ ಉತ್ತಮ ರಕ್ಷಣೆ ನೀಡುತ್ತದೆ.

ಸನ್‌ಶೇಡ್‌ನ ಮುಖ್ಯ ಕೆಲಸವೆಂದರೆ ಸೂರ್ಯನ ಕಿರಣಗಳನ್ನು ನೇರವಾಗಿ ಕಾರಿನೊಳಗೆ ಪ್ರವೇಶಿಸದಂತೆ ತಡೆಯುವುದು. ಸಾಮಾನ್ಯವಾಗಿ ಸನ್‌ಶೇಡ್‌ನ ಹೊರಭಾಗದಲ್ಲಿ ಪ್ರತಿಫಲಿತ (Reflective) ಪದರವಿರುತ್ತದೆ. ಇದು ಸೂರ್ಯನ ಶಾಖವನ್ನು ಪ್ರತಿಫಲಿಸಿ ಹೊರಕ್ಕೆ ತಳ್ಳುವುದರಿಂದ ಕಾರಿನ ಒಳಭಾಗ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ. ಇದರ ಪರಿಣಾಮವಾಗಿ ಸ್ಟೀರಿಂಗ್, ಡ್ಯಾಶ್‌ಬೋರ್ಡ್, ಸೀಟ್‌ಗಳು ಮತ್ತು ಇತರ ಪ್ಲಾಸ್ಟಿಕ್ ಭಾಗಗಳು ಅತಿಯಾದ ಉಷ್ಣತೆಗೆ ಒಳಗಾಗುವುದಿಲ್ಲ.

ವಿವಿಧ ಪರೀಕ್ಷೆಗಳ ಪ್ರಕಾರ, ಉತ್ತಮ ಸನ್‌ಶೇಡ್ ಬಳಸಿದರೆ ಕಾರಿನ ಒಳಗಿನ ತಾಪಮಾನವು ಸುಮಾರು 10ರಿಂದ 20 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಬಹುದು. ವಿಶೇಷವಾಗಿ ಡ್ಯಾಶ್‌ಬೋರ್ಡ್‌ನ ಮೇಲ್ಮೈ ಉಷ್ಣತೆಯನ್ನು ಗಣನೀಯವಾಗಿ ಇಳಿಸಲು ಇದು ಸಹಕಾರಿಯಾಗಿದೆ. ಇದರಿಂದ ಕಾರಿನ ಎಸಿ ಬೇಗನೆ ತಂಪು ಮಾಡುತ್ತದೆ ಮತ್ತು ವಾಹನವನ್ನು ಓಡಿಸಲು ಹೆಚ್ಚು ಆರಾಮದಾಯಕ ಅನುಭವ ಸಿಗುತ್ತದೆ.

ಸನ್‌ಶೇಡ್‌ನ ಮತ್ತೊಂದು ಪ್ರಮುಖ ಲಾಭವೆಂದರೆ ಅದು ಕಾರಿನ ಒಳಾಂಗಣವನ್ನು ದೀರ್ಘಕಾಲ ಸುರಕ್ಷಿತವಾಗಿರಿಸುತ್ತದೆ. ನಿರಂತರವಾಗಿ ಬಿಸಿಲಿಗೆ ಒಡ್ಡಿದರೆ ಡ್ಯಾಶ್‌ಬೋರ್ಡ್ ಬಣ್ಣ ಕಳೆದುಕೊಳ್ಳುವುದು, ಪ್ಲಾಸ್ಟಿಕ್ ಭಾಗಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು ಮತ್ತು ಸೀಟ್‌ಗಳ ಗುಣಮಟ್ಟ ಕುಸಿಯುವ ಸಾಧ್ಯತೆ ಇರುತ್ತದೆ. ಸನ್‌ಶೇಡ್ ಬಳಸುವುದರಿಂದ ಇಂತಹ ಹಾನಿಯನ್ನು ಬಹುತೇಕ ಕಡಿಮೆ ಮಾಡಬಹುದು. ಜೊತೆಗೆ ಕಾರಿನ ಒಳಗೆ ಇರಿಸುವ ಮೊಬೈಲ್ ಹೋಲ್ಡರ್, ಸುಗಂಧ ದ್ರವ್ಯ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಇತರ ಪರಿಕರಗಳೂ ಅತಿಯಾದ ಬಿಸಿಯಿಂದ ರಕ್ಷಣೆ ಪಡೆಯುತ್ತವೆ.

Auto Tips: ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುತ್ತಿದ್ದೀರಾ? ಈ 5 ವಿಷಯಗಳನ್ನು ಕಡ್ಡಾಯವಾಗಿ ಪರಿಶೀಲಿಸಿ

ಬೇಸಿಗೆಯಲ್ಲಿ ಸನ್‌ಶೇಡ್ ಬಳಸುವಾಗ ಒಂದು ವಿಷಯವನ್ನು ತಪ್ಪದೇ ಗಮನಿಸಬೇಕು. ಅದರ ಹೊಳೆಯುವ ಅಥವಾ ಬೆಳ್ಳಿ ಬಣ್ಣದ ಭಾಗವು ಹೊರಭಾಗದತ್ತ, ಅಂದರೆ ಸೂರ್ಯನತ್ತ ಮುಖ ಮಾಡಿರಬೇಕು. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಪ್ರತಿಫಲಿಸುತ್ತವೆ. ಅಲ್ಲದೆ ಸನ್‌ಶೇಡ್ ಸಂಪೂರ್ಣವಾಗಿ ಮುಂಭಾಗದ ಗಾಜನ್ನು ಮುಚ್ಚುವಂತೆ ಅಳವಡಿಸಿ, ಕಾರಿನ ಸನ್‌ವೈಸರ್ ಸಹಾಯದಿಂದ ಅದನ್ನು ಸ್ಥಿರವಾಗಿ ಹಿಡಿದಿಡುವುದು ಉತ್ತಮ.

ಹೆಚ್ಚಿನವರಿಗೆ ತಿಳಿದಿರದ ಮತ್ತೊಂದು ಸಂಗತಿಯೆಂದರೆ, ಕೆಲವು ಡಬಲ್-ಸೈಡ್ ಸನ್‌ಶೇಡ್‌ಗಳನ್ನು ಚಳಿಗಾಲದಲ್ಲೂ ಬಳಸಬಹುದು. ಈ ವೇಳೆ ಸನ್‌ಶೇಡ್ ಅನ್ನು ತಿರುಗಿಸಿ ಅಳವಡಿಸಿದರೆ ಕಾರಿನೊಳಗಿನ ಉಷ್ಣತೆ ಹೆಚ್ಚು ಸಮಯ ಉಳಿಯಲು ಸಹಾಯವಾಗುತ್ತದೆ. ಹೀಗಾಗಿ ಚಳಿಯ ವಾತಾವರಣದಲ್ಲೂ ಕಾರಿನ ಒಳಭಾಗ ಬೇಗ ತಂಪಾಗುವುದನ್ನು ತಪ್ಪಿಸಬಹುದು.

ಸನ್‌ಶೇಡ್ ಖರೀದಿಸುವಾಗ ನಿಮ್ಮ ಕಾರಿನ ಮಾದರಿಗೆ ಸರಿಯಾಗಿ ಹೊಂದುವ ಗಾತ್ರವನ್ನು ಆಯ್ಕೆ ಮಾಡುವುದು ಮುಖ್ಯ. ಉತ್ತಮ ಗುಣಮಟ್ಟದ ಪ್ರತಿಫಲಿತ ಪದರ ಹೊಂದಿರುವ ಸನ್‌ಶೇಡ್ ಹೆಚ್ಚು ಪರಿಣಾಮಕಾರಿ. ಸಾಧ್ಯವಾದರೆ ಕಾರನ್ನು ನೆರಳಿನಲ್ಲೇ ನಿಲ್ಲಿಸುವ ಅಭ್ಯಾಸ ಬೆಳೆಸಿದರೆ ಅದರ ಪ್ರಯೋಜನ ಇನ್ನಷ್ಟು ಹೆಚ್ಚಾಗುತ್ತದೆ.

ಒಟ್ಟಾರೆ, ಕಾರ್ ಸನ್‌ಶೇಡ್ ಕೇವಲ ಒಂದು ಸಾಮಾನ್ಯ ಆಕ್ಸೆಸರಿ ಅಲ್ಲ. ಕಡಿಮೆ ವೆಚ್ಚದಲ್ಲಿ ಕಾರಿನ ಒಳಗಿನ ತಾಪಮಾನವನ್ನು ನಿಯಂತ್ರಿಸಲು, ಒಳಾಂಗಣವನ್ನು ಬಿಸಿಲಿನ ಹಾನಿಯಿಂದ ರಕ್ಷಿಸಲು ಮತ್ತು ಬೇಸಿಗೆಯಲ್ಲಿ ಆರಾಮದಾಯಕ ಚಾಲನಾ ಅನುಭವ ಪಡೆಯಲು ಇದು ಅತ್ಯಂತ ಉಪಯುಕ್ತ ಸಾಧನವಾಗಿದೆ. ಸರಿಯಾದ ರೀತಿಯಲ್ಲಿ ಬಳಸಿದರೆ ಬೇಸಿಗೆಯಲ್ಲಷ್ಟೇ ಅಲ್ಲ, ಚಳಿಗಾಲದಲ್ಲೂ ಇದರ ಲಾಭವನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Sun, 19 July 26

Source link

ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ – Kannada News | Liquor sale banned across hassan district On July 20 And 21 Over HD Devegowda Wife chennamma funeral

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಸಕಲ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ,ಸೋಮವಾರ ಮಧ್ಯಾಹ್ನ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದ್ದು, ಜನ ಹೆಚ್ಚು ಸೇರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು (ಜುಲೈ 19) ಹಾಗೂ ಸೋಮವಾರ (ಜುಲೈ 20) ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಣ್ಯಾತಿ ಗಣ್ಯರು ಭಾಗಿ ಹಿನ್ನೆಲೆಯಲ್ಲಿ 5 ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಹರದನಹಳ್ಳಿಯಲ್ಲಿ 2, ಹೊಳೆನರಸೀಪುರದಲ್ಲಿ 3 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ನು ಸಿಎಂ ಡಿ.ಕೆ.ಶಿವಕುಮಾರ್‌ ನಾಳೆ ಮಧ್ಯಾಹ್ನ 3 ಗಂಟೆಗೆ ಆಗಮಿಸುತ್ತಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿಯ ಪಾರ್ಥಿವ ಶರೀರವನ್ನ ಮನೆಯಿಂದ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡ್ರು – Kannada News | H.D. Deve Gowda Grieves as Wife Chennamma Embarks on Final Journey

ಬೆಂಗಳೂರು, ಜುಲೈ 19: ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮನೆಯಿಂದ ಅಂತಿಮ ಯಾತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಹೆಚ್​.ಡಿ. ದೇವೇಗೌಡರು ತೀವ್ರವಾಗಿ ಭಾವುಕರಾದರು. ಪತ್ನಿ ಅಗಲಿಕೆಯ ನೋವು ತಾಳಲಾರದೆ ಅವರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಎಲ್ಲರ ಮನಸ್ಸನ್ನು ಕಲಕಿದವು. ಶೈತ್ಯಾಗಾರ ಪೆಟ್ಟಿಗೆಯ ಮೇಲೆ ಕೈಯಿಟ್ಟು ಕಣ್ಣೀರಿಟ್ಟ ದೇವೇಗೌಡರು, ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸಿದರು. ಅವರ ಪುತ್ರಿ ಹಾಗೂ ಇತರ ಕುಟುಂಬ ಸದಸ್ಯರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಈ ನೋವಿನ ಸಂದರ್ಭದಲ್ಲಿ, ಮಾಜಿ ಪ್ರಧಾನಮಂತ್ರಿಯವರ ಪತ್ನಿಯ ನಿಧನಕ್ಕೆ ಅನೇಕ ಗಣ್ಯರು ಮತ್ತು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ಚೆನ್ನಮ್ಮ ಅವರ ಅಂತಿಮ ಯಾತ್ರೆಯು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ನಡೆಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಬಂಡಾಯ ಸಂಸದರಿಗೂ ಆಹ್ವಾನ ವಿರೋಧಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು – Kannada News | Opposition walks out of All Party Meet Over Invite To TMC Rebels to Meeting

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನದ (Parliament Monsoon Session) ಮುನ್ನಾದಿನವಾದ ಇಂದು (ಭಾನುವಾರ) ಆಯೋಜಿಸಲಾಗಿದ್ದ ಸರ್ವಪಕ್ಷ ಸಭೆಯಿಂದ ವಿರೋಧ ಪಕ್ಷಗಳ ನಾಯಕರು ವಾಕ್‌ಔಟ್ ನಡೆಸಿದರು. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಲವು ಬಂಡಾಯ ಸಂಸದರನ್ನು ಒಳಗೊಂಡ ಹೊಸದಾಗಿ ರೂಪುಗೊಂಡಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷವು ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು. ಆದರೆ, ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷಗಳ ಸಂಸದರು ಸಭೆಗೆ ಮರಳಿದರು.

ಕಳೆದ ತಿಂಗಳು ಸುಮಾರು 20 ಬಂಡಾಯ ಟಿಎಂಸಿ ಸಂಸದರು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದರು. ಆದರೆ ಈ ವಿಲೀನಕ್ಕೆ ಇನ್ನೂ ಅಧಿಕೃತವಾಗಿ ಅನುಮೋದನೆ ಸಿಗದ ಕಾರಣ, ಆ ಪಕ್ಷವನ್ನು ಸಭೆಗೆ ಸೇರಿಸಿಕೊಂಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ 20 ಬಂಡಾಯ ಸಂಸದರನ್ನು ಇಂದಿಗೂ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಎಂದೇ ತೋರಿಸಲಾಗುತ್ತಿದೆ. ಹೀಗಾಗಿ ವಿರೋಧ ಪಕ್ಷಗಳ ಈ ವಾಕ್‌ಔಟ್ ಕೇವಲ ಸಾಂಕೇತಿಕ ಪ್ರತಿಭಟನೆಯಾಗಿತ್ತು.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಟಿಎಂಸಿ ನಾಯಕರ ಆಕ್ಷೇಪ:

ಈ ವೇಳೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿ, “ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಬಲ ಇನ್ನೂ 28 ಎಂದೇ ತೋರಿಸುತ್ತಿದೆ. ಹೀಗಿರುವಾಗ ಯಾವ ಆಧಾರದ ಮೇಲೆ ಸಂಸದೀಯ ವ್ಯವಹಾರಗಳ ಸಚಿವರು ಬಂಡಾಯಗಾರರ ಪಕ್ಷವನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದಾರೆ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ

ಬಂಡಾಯ ನಾಯಕರ ಸ್ಪಷ್ಟನೆ:

ಇದೇ ವೇಳೆ, ಎನ್‌ಸಿಪಿಐ (ಬಂಡಾಯ ಬಣ) ಬಣದ ನಾಯಕಿಯಾಗಿರುವ ಕಾಕೊಲಿ ಘೋಷ್ ದಸ್ತಿದಾರ್ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಸಂಸದೀಯ ವ್ಯವಹಾರಗಳ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಟಿಎಂಸಿ ಬಂಡಾಯ ಸಂಸದ ಸುದೀಪ್ ಬಂದೋಪಾಧ್ಯಾಯ ಮಾತನಾಡಿ, “20 ಸಂಸದರನ್ನು ಹೊಂದಿರುವ ನಮ್ಮ ಹೊಸ ಪಕ್ಷವನ್ನು ಆಹ್ವಾನಿಸಲಾಗಿತ್ತು. ನಾವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೇವೆ. ಸದನವು ವಿರೋಧ ಪಕ್ಷಗಳಿಗೂ ಸೇರಿದ್ದು ಎಂಬುದನ್ನು ಒಪ್ಪಿಕೊಳ್ಳಬೇಕು. ಸದನ ಸುಗಮವಾಗಿ ನಡೆಯಲು ಸರ್ಕಾರವೇ ಜವಾಬ್ದಾರಿ ಹೊರಬೇಕು. ನಮ್ಮ ಪಕ್ಷವು ಜಾತ್ಯತೀತತೆ, ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಬದ್ಧವಾಗಿದೆ. ನಮ್ಮ ಪಕ್ಷದ 20 ಸಂಸದರಲ್ಲಿ ಮೂವರು ಮುಸ್ಲಿಂ ಸಂಸದರಿದ್ದಾರೆ” ಎಂದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ:

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಮುನ್ನ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಿದರು. “ಸಂಸತ್ತಿನ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದ್ದು, ಇಂದು ಎಲ್ಲಾ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಸಂಸತ್ತು ಎಲ್ಲರಿಗೂ ಸೇರಿದ್ದಾಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಶಾಸಕಾಂಗ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಹಕರಿಸುವ ನಿರೀಕ್ಷೆಯಿದೆ. ಸಂಸತ್ತು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆಯೋ, ದೇಶಕ್ಕೆ ಅಷ್ಟೇ ಹೆಚ್ವು ಪ್ರಯೋಜನವಾಗುತ್ತದೆ. ನಾವು ವಿರೋಧ ಪಕ್ಷಗಳ ಮಾತುಗಳನ್ನು ಕೇಳುತ್ತೇವೆ, ಅವರು ಕೂಡ ನಮ್ಮ ಮಾತನ್ನು ಕೇಳುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 3 ಪಂದ್ಯಗಳಲ್ಲೂ ಟಾಸ್ ಸೋತ ಗಿಲ್; ಭಾರತ ತಂಡದಲ್ಲಿ 3 ಬದಲಾವಣೆ – Kannada News | IND vs ENG 3rd ODI: Lords Series Decider Preview, Playing XI and India’s 22 Year Wait

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಏತನ್ಮಧ್ಯೆ, ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿತು. ಇದೀಗ ಲಾರ್ಡ್ಸ್‌ನಲ್ಲಿ ಉಭಯ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸರಣಿ ಕೈಸೇರಲಿದೆ. ಈಗಾಗಲೇ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿ ಗೆಲುವಿನೊಂದಿಗೆ ಈ ಪ್ರವಾಸಕ್ಕೆ ಅಂತ್ಯ ಹಾಡಲು ನೋಡುತ್ತಿದೆ.

ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಇಂಗ್ಲೆಂಡ್‌ ತಂಡದಲ್ಲಿ 1 ಬದಲಾವಣೆಯಾಗಿದ್ದರೆ, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳಾಗಿವೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಕೂಡ ಈ ಮೊದಲೇ ಗಾಯಗೊಂಡು ಪಂದ್ಯದಿಂದ ಹೊರಬಿದ್ದಿದ್ದರು. ಇವರಿಬ್ಬರ ಜೊತೆಗೆ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಈ ಮೂವರ ಬದಲಿಗೆ ಕೆಎಲ್ ರಾಹುಲ್, ಪ್ರಿನ್ಸ್ ಯಾದವ್ ಹಾಗೂ ಅರ್ಷದೀಪ್ ಸಿಂಗ್​ರನ್ನು ಆಡಿಸಲಾಗುತ್ತಿದೆ.

22 ವರ್ಷಗಳಿಂದ ಗೆಲುವಿನ ಬರ

ವಾಸ್ತವವಾಗಿ ಟೀಂ ಇಂಡಿಯಾಗೆ ಲಾರ್ಡ್ಸ್ ಮೈದಾನವು 1983 ರ ವಿಶ್ವಕಪ್ ಪ್ರಶಸ್ತಿ ಗೆಲುವು ಮತ್ತು 2002 ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಂತಹ ಸ್ಮರಣೀಯ ನೆನಪುಗಳಿಗೆ ಹೆಸರುವಾಸಿಯಾಗಿದೆ. ಆದರೆ ಕಟು ವಾಸ್ತವವೆಂದರೆ 2004 ರಿಂದ ಟೀಂ ಇಂಡಿಯಾ ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ. ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಸೆಪ್ಟೆಂಬರ್ 5, 2004 ರಂದು ಬಂದಿತು, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಆ ಐತಿಹಾಸಿಕ ವಿಜಯದ ನಂತರ ಈಗ ಪೂರ್ಣ 22 ವರ್ಷಗಳು ಕಳೆದಿವೆ, ಆದರೆ ಟೀಂ ಇಂಡಿಯಾ ಇನ್ನೂ ಇಲ್ಲಿ ವಿಜಯವನ್ನು ಸವಿದಿಲ್ಲ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್.

ಇಂಗ್ಲೆಂಡ್‌ ತಂಡ: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Life Style: ನಿಮ್ಮ ಚಿನ್ನದ ಆಭರಣಗಳು ಕಪ್ಪಾಗಿವೆಯೇ?, ನಿಮಿಷಗಳಲ್ಲಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್ – Kannada News | How to clean gold jewellery at home Here is the easy method tips

ಚಿನ್ನದ (Gold) ಆಭರಣಗಳು ಪ್ರತಿಯೊಬ್ಬರಿಗೂ ಅಮೂಲ್ಯವಾದ ಆಸ್ತಿ. ಮದುವೆ, ಹಬ್ಬ ಅಥವಾ ವಿಶೇಷ ಕಾರ್ಯಕ್ರಮಗಳಲ್ಲಿ ಧರಿಸುವ ಈ ಆಭರಣಗಳು ಪ್ರತಿದಿನದ ಬಳಕೆಯಿಂದ ನಿಧಾನವಾಗಿ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಬೆವರು, ಧೂಳು, ಮೇಕಪ್ ಉತ್ಪನ್ನಗಳು ಮತ್ತು ಪರಿಸರದ ಕಸ ಆಭರಣದ ಮೇಲೆ ಅಂಟಿಕೊಂಡು ಅದರ ಕಾಂತಿಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕಾಗಿ ಪ್ರತಿ ಬಾರಿ ಜ್ಯುವೆಲ್ಲರ್ ಬಳಿ ಹೋಗಬೇಕೆಂದಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ವಸ್ತುಗಳ ಸಹಾಯದಿಂದ ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸಿ ಮತ್ತೆ ಹೊಸದಿನಂತೆ ಹೊಳೆಯುವಂತೆ ಮಾಡಬಹುದು.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಅತ್ಯಂತ ಸುರಕ್ಷಿತ ವಿಧಾನವೆಂದರೆ ಉಗುರುಬೆಚ್ಚಗಿನ ನೀರು ಮತ್ತು ಮೃದುವಾದ ಲಿಕ್ವಿಡ್ ಸೋಪ್ ಬಳಸುವುದು. ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಕೆಲವು ಹನಿಗಳಷ್ಟು ಲಿಕ್ವಿಡ್ ಸೋಪ್ ಸೇರಿಸಿ, ಆಭರಣಗಳನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ನಂತರ ಮೃದುವಾದ ಟೂತ್‌ಬ್ರಶ್‌ನಿಂದ ನಿಧಾನವಾಗಿ ಉಜ್ಜಿ, ಶುದ್ಧ ನೀರಿನಲ್ಲಿ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿದರೆ ಆಭರಣದ ಮೇಲಿನ ಕೊಳೆ ದೂರವಾಗಿ ಹೊಳಪು ಮರಳುತ್ತದೆ.

ಆಭರಣದ ಮೇಲೆ ಸ್ವಲ್ಪ ಹೆಚ್ಚು ಕಲೆ ಅಥವಾ ಕೊಳೆ ಇದ್ದರೆ ಬೇಕಿಂಗ್ ಸೋಡಾವನ್ನು ಬಳಸಬಹುದು. ಒಂದು ಚಮಚ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ, ಅದನ್ನು ಆಭರಣದ ಮೇಲೆ ನಿಧಾನವಾಗಿ ಹಚ್ಚಿ ಎರಡು-ಮೂರು ನಿಮಿಷಗಳ ನಂತರ ತೊಳೆದು ಒಣಗಿಸಬಹುದು. ಆದರೆ ಈ ವಿಧಾನವನ್ನು ಮುತ್ತು, ಪಚ್ಚೆ, ಓಪಲ್ ಅಥವಾ ಇತರ ಅಮೂಲ್ಯ ಕಲ್ಲುಗಳಿರುವ ಆಭರಣಗಳಿಗೆ ಬಳಸಬಾರದು. ಏಕೆಂದರೆ ಇದರಿಂದ ರತ್ನಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಕೆಲವು ಸಂದರ್ಭಗಳಲ್ಲಿ ನಾನ್-ಜೆಲ್ ಟೂತ್‌ಪೇಸ್ಟ್ ಕೂಡ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಸಹಕಾರಿ. ಅಲ್ಪ ಪ್ರಮಾಣದ ಟೂತ್‌ಪೇಸ್ಟ್ ಹಚ್ಚಿ ಮೃದುವಾದ ಬ್ರಶ್‌ನಿಂದ ನಿಧಾನವಾಗಿ ಸ್ವಚ್ಛಗೊಳಿಸಿ ನಂತರ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಸಣ್ಣ ಕಲೆಗಳು ಮಾಯವಾಗುತ್ತವೆ. ಆದರೆ ಹೆಚ್ಚು ಒತ್ತಡದಿಂದ ಉಜ್ಜುವುದನ್ನು ತಪ್ಪಿಸಬೇಕು.

Hair Wash During Periods: ಪಿರಿಯಡ್ಸ್ ಸಮಯದಲ್ಲಿ ತಲೆಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆಯೇ?

ತುಂಬಾ ಹಳೆಯದಾಗಿರುವ ಅಥವಾ ಗಟ್ಟಿಯಾದ ಕಲೆ ಹಿಡಿದಿರುವ ಚಿನ್ನದ ಆಭರಣಗಳಿಗೆ ಅಮೋನಿಯಾ ದ್ರಾವಣವನ್ನು ಕೆಲವೊಮ್ಮೆ ಮಾತ್ರ ಬಳಸಬಹುದು. ಒಂದು ಭಾಗ ಅಮೋನಿಯಾಕ್ಕೆ ಆರು ಭಾಗ ನೀರು ಸೇರಿಸಿ ದ್ರಾವಣ ತಯಾರಿಸಿ, ಆಭರಣವನ್ನು ಅದರಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಇಡಬಾರದು. ಬಳಿಕ ತಕ್ಷಣ ಶುದ್ಧ ನೀರಿನಲ್ಲಿ ತೊಳೆದು ಒಣಗಿಸಬೇಕು. ಈ ವಿಧಾನವನ್ನು ಆಗಾಗ ಬಳಸುವುದರಿಂದ ಆಭರಣದ ಫಿನಿಷ್ ಹಾಳಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದಾಗ ಮಾತ್ರ ಬಳಸುವುದು ಉತ್ತಮ.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ. ಗಟ್ಟಿಯಾದ ಬ್ರಶ್ ಅಥವಾ ಸ್ಕ್ರಬ್ಬರ್ ಬಳಸಬಾರದು. ಬ್ಲೀಚ್, ಆಮ್ಲ ಅಥವಾ ತೀವ್ರ ರಾಸಾಯನಿಕ ಕ್ಲೀನರ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ವಜ್ರ ಅಥವಾ ಇತರ ಅಮೂಲ್ಯ ಕಲ್ಲುಗಳಿರುವ ಆಭರಣಗಳಿಗೆ ಮನೆಮದ್ದು ಪ್ರಯೋಗಿಸುವ ಮೊದಲು ಜ್ಯುವೆಲ್ಲರ್ ಸಲಹೆ ಪಡೆಯುವುದು ಉತ್ತಮ. ಸ್ವಚ್ಛಗೊಳಿಸಿದ ನಂತರ ಆಭರಣಗಳನ್ನು ಸಂಪೂರ್ಣವಾಗಿ ಒಣಗಿದ ಬಳಿಕವೇ ಬಾಕ್ಸ್ ಅಥವಾ ಪೌಚ್‌ನಲ್ಲಿ ಇಡಬೇಕು.

ಇದರ ಜೊತೆಗೆ ಚಿನ್ನದ ಆಭರಣಗಳ ಹೊಳಪು ಹೆಚ್ಚು ದಿನ ಉಳಿಯಬೇಕಾದರೆ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೇಕಪ್, ಸುಗಂಧ ದ್ರವ್ಯ ಅಥವಾ ಹೇರ್ ಸ್ಪ್ರೇ ಬಳಸಿದ ಬಳಿಕವೇ ಆಭರಣ ಧರಿಸುವುದು ಉತ್ತಮ. ಸ್ನಾನ ಮಾಡುವಾಗ ಅಥವಾ ಈಜುಕೊಳಕ್ಕೆ ಹೋಗುವ ಮೊದಲು ಆಭರಣಗಳನ್ನು ತೆಗೆದು ಇಡಬೇಕು. ಪ್ರತಿಯೊಂದು ಆಭರಣವನ್ನೂ ಪ್ರತ್ಯೇಕ ಮೃದುವಾದ ಬಟ್ಟೆ ಅಥವಾ ಪೌಚ್‌ನಲ್ಲಿ ಸಂಗ್ರಹಿಸಿದರೆ ಗೀರು ಬೀಳುವುದನ್ನು ತಪ್ಪಿಸಬಹುದು. ಕಾಲಕಾಲಕ್ಕೆ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸುವುದರಿಂದ ಚಿನ್ನದ ಆಭರಣಗಳು ಹೆಚ್ಚು ದಿನ ಹೊಸದಿನಂತೆ ಹೊಳೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Sun, 19 July 26

Source link

Exit mobile version