ಪತಿ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ: ಸುಪ್ರೀಂಕೋರ್ಟ್​ – Kannada News

ನವದೆಹಲಿ, ಜೂನ್ 05: ಪತಿ ದಿನಗಟ್ಟಲೆ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ ಎಂದು ಸುಪ್ರೀಂಕೋರ್ಟ್(Supreme Court)​ ಅಭಿಪ್ರಾಯಪಟ್ಟಿದೆ. ಪತ್ನಿಯ  ಆತ್ಮಹತ್ಯೆ ಪ್ರಕರಣವೊಂದರ ಸುದೀರ್ಘ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಅದರ ಭಾಗವಾಗಿ ಕೆಲವು ದಿನಗಳ ಕಾಲ ದಂಪತಿಗಳ ನಡುವೆ ಮಾತುಕತೆ ನಿಲ್ಲುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಕಾನೂನಾತ್ಮಕ ‘ಕ್ರೌರ್ಯ’ಎಂದು ಪರಿಗಣಿಸಲು ಸಾಧ್ಯವಿಲ್ಲ ದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ರದ್ದುಗೊಳಿಸಿ, ಪತಿ ಹಾಗೂ ಆತನ ಕುಟುಂಬಸ್ಥರನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸಂಪೂರ್ಣವಾಗಿ ದೋಷಮುಕ್ತಗೊಳಿಸಿ (ಖುಲಾಸೆ) ಆದೇಶ ಹೊರಡಿಸಿದೆ.

ಮದುವೆಯಾದ ಕೆಲವು ದಿನಗಳ ನಂತರ ಮಹಿಳೆಯು ವೀಸಾ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದಾಗಿ ಮಸ್ಕತ್‌ನಲ್ಲಿದ್ದ ಪತಿಯೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಆಕೆ ತನ್ನ ಪೋಷಕರ ಮನೆಯಲ್ಲಿದ್ದಾಗ, ಕೌಟುಂಬಿಕ ಅಸಮಾಧಾನದ ಹಿನ್ನೆಲೆಯಲ್ಲಿ ಪತಿಯು ಸುಮಾರು 13 ದಿನಗಳ ಕಾಲ ದೂರವಾಣಿ ಮೂಲಕ ಮಾತನಾಡಲು ನಿರಾಕರಿಸಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಆಧಾರದ ಮೇಲೆ ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಮೊಕದ್ದಮೆ ದಾಖಲಿಸಲಾಗಿತ್ತು.

ಮತ್ತಷ್ಟು ಓದಿ: ಕರ್ನಾಟಕ ಹೈಕೋರ್ಟ್​​ಗೆ ಜಡ್ಜ್​​ಗಳಾಗಿ 6 ವಕೀಲರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು

ಕೆಳ ನ್ಯಾಯಾಲಯಗಳು ಭಾವನಾತ್ಮಕವಾಗಿ ಶಿಕ್ಷೆ ವಿಧಿಸಿದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಕೇವಲ 13 ದಿನಗಳ ಕಾಲ ಫೋನ್‌ನಲ್ಲಿ ಮಾತನಾಡದಿರುವುದನ್ನು ಕ್ರೌರ್ಯ ಅನ್ನಲಾಗದು ಎಂದು ಹೇಳಿದೆ. ಪತ್ನಿಯು ತನ್ನ ಪೋಷಕರ ಮನೆಗೆ ಹೋಗಿದ್ದಕ್ಕೆ ಪತಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ ದಾಂಪತ್ಯದ ಭಾಗವೇ ಹೊರತು, ಅದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಗಂಭೀರ ಅಪರಾಧವಲ್ಲ ಎಂದು ನ್ಯಾಯಪೀಠವು ತೀರ್ಪು ನೀಡಿದೆ.

ಇಂತಹ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಕೇವಲ ಆರೋಪಗಳನ್ನು ಮಾಡುವ ಬದಲಾಗಿ, ಪತಿಯು ನಿಜಕ್ಕೂ ಮಹಿಳೆಗೆ ಮಾನಸಿಕವಾಗಿ ತೀವ್ರ ಹಿಂಸೆ ನೀಡಿದ್ದಾನೆಯೇ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಕೇವಲ ಸಂವಹನದ ಕೊರತೆಯು ಕ್ರೌರ್ಯದ ವ್ಯಾಪ್ತಿಗೆ ಬರುವುದಿಲ್ಲ. ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಅಥವಾ ಸಾಕ್ಷ್ಯರಹಿತ ಆರೋಪಗಳು ಬಂದಾಗ, ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಹೊರೆ ಆರೋಪಿಗಳ ಮೇಲಿರುವುದಿಲ್ಲ; ಬದಲಿಗೆ ಆರೋಪ ಹೊರಿಸಿದವರೇ ಅದನ್ನು ಸಾಬೀತುಪಡಿಸಬೇಕು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಕೌಟುಂಬಿಕ ವ್ಯಾಜ್ಯಗಳಲ್ಲಿ ಕಾನೂನಿನ ಪಾರದರ್ಶಕ ಬಳಕೆಯನ್ನು ಖಚಿತಪಡಿಸಿದೆ. ಸಣ್ಣಪುಟ್ಟ ಕೌಟುಂಬಿಕ ಜಗಳಗಳನ್ನು ಕ್ರಿಮಿನಲ್ ಅಪರಾಧಗಳಾಗಿ ಬಿಂಬಿಸುವುದನ್ನು ತಡೆಯುವ ಮೂಲಕ, ಈ ತೀರ್ಪು ಮುಗ್ಧ ಕುಟುಂಬಗಳಿಗೆ ನ್ಯಾಯ ಒದಗಿಸಿದೆ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ – Kannada News

ದೇವನಹಳ್ಳಿ, ಜೂ.5: ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಹಾಗೂ ಕೆ.ಎಚ್. ಮುನಿಯಪ್ಪ ಅವರು ಬಂಡಾಯದ ಬಾವುಟ ಹಾರಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ನೂತನ ಸರ್ಕಾರಕ್ಕೆ ಎದುರಾಗಿರುವ ಈ ದೊಡ್ಡ ಕಂಟಕವನ್ನು ನಿವಾರಿಸಲು ಹಾಗೂ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಮಹತ್ವದ ಮೀಟಿಂಗ್​ನ್ನು ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವಿಐಪಿ ಲಾಂಜ್ ಹಾಗೂ ಪಕ್ಕದಲ್ಲೇ ಇರುವ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ಈ ಹೈವೋಲ್ಟೇಜ್ ಸಭೆ ನಡೆಸುತ್ತಿದ್ದಾರೆ.

ರಾಜ್ಯ ನಾಯಕರ ಅಸಮಾಧಾನ ಶಮನಗೊಳಿಸಲು ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಸಭೆ ನಡೆಸುತ್ತಿದ್ದಾರೆ. ಈಗಾಗಲೇ ಉಂಟಾಗಿರುವ ಗೊಂದಲದ ತೀವ್ರತೆಯನ್ನು ಅರಿತು ಹೈಕಮಾಂಡ್ ನಾಯಕರು, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ತುರ್ತಾಗಿ ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನ ವಿಐಪಿ ಲಾಂಜ್‌ನಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರನ್ನು ಭೇಟಿಯಾಗಿ ತಮ್ಮ ಖಾತೆ ಬದಲಾವಣೆ ಕುರಿತು ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ, ತಾಜ್ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸುಮಾರು 40 ನಿಮಿಷಗಳ ಕಾಲ ಹಿರಿಯ ನಾಯಕರ ಮಹತ್ವದ ಸಭೆ ನಿಗದಿಯಾಗಿದೆ. 8 ಬಾರಿ ಗೆದ್ದಿದ್ದರೂ ಹಿರಿತನಕ್ಕೆ ಗೌರವ ಸಿಕ್ಕಿಲ್ಲ ಹಾಗೂ ತಮಗೆ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆ ಬೇಕು ಎಂಬ ತಮ್ಮ ಬೇಡಿಕೆಯನ್ನು ಮುನಿಯಪ್ಪ ಅವರು ವರಿಷ್ಠರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರ ಹಾಗೂ ಮುನಿಯಪ್ಪ ಅವರ ಅಸಮಾಧಾನ ಎರಡನ್ನೂ ಒಟ್ಟಿಗೆ ಶಮನಗೊಳಿಸಲು ಹೈಕಮಾಂಡ್ ಸೂತ್ರವೊಂದನ್ನು ಸಿದ್ಧಪಡಿಸುತ್ತಿದ್ದು, ಈ ಹೈವೋಲ್ಟೇಜ್ ಸಭೆಯ ನಂತರ ರಾಜ್ಯ ರಾಜಕಾರಣದ ಮುಂದಿನ ಚಿತ್ರಣ ಸ್ಪಷ್ಟವಾಗಲಿದೆ.

‘ನಾನು ಚಾರ್ಜ್ ತೆಗೆದುಕೊಳ್ಳಲ್ಲ’ ಎಂದು ಹಠ ಹಿಡಿದ ಕೆ.ಎಚ್. ಮುನಿಯಪ್ಪ

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಈಗ ಮತ್ತಷ್ಟು ಜ್ವಾಲೆಯಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಪ್ರಕಟಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಮತ್ತೊಬ್ಬ ಪ್ರಭಾವಿ ನಾಯಕ ಕೆ.ಎಚ್. ಮುನಿಯಪ್ಪ ಅವರು ಸರ್ಕಾರದ ವಿರುದ್ಧ ನೇರ ಬಂಡಾಯ ಸಾರಿದ್ದಾರೆ. ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಅವರು, “ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ ಎಂದು ಜಿದ್ದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಆರದ ಖಾತೆ ಕಿಚ್ಚು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಕೆಎಚ್ ಮುನಿಯಪ್ಪ ಬಹಿರಂಗ ಅಸಮಾಧಾನ

ಕಾಂಗ್ರೆಸ್ ಹೈಕಮಾಂಡ್‌ಗೆ ಮುನಿಯಪ್ಪ ಕೊಟ್ಟ ‘2028’ರ ವಾರ್ನಿಂಗ್

ರಾಜ್ಯ ಕಾಂಗ್ರೆಸ್ ಸಂಪುಟದಲ್ಲಿ ಖಾತೆ ಹಂಚಿಕೆಯ ಕಿಚ್ಚು ಈಗ ಹೈಕಮಾಂಡ್ ನಾಯಕರ ವಿರುದ್ಧದ ಬಹಿರಂಗ ಆಕ್ರೋಶವಾಗಿ ಮಾರ್ಪಟ್ಟಿದೆ. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು, ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧವೇ ನೇರ ವಾಗ್ದಾಳಿ ನಡೆಸಿದ್ದಾರೆ. ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆ ಮಾಡುವಾಗ ನಮ್ಮ ಸೀನಿಯಾರಿಟಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ಎಲ್ಲ ನಾಯಕರನ್ನೂ ಸಮತೋಲನವಾಗಿ ನೋಡಬೇಕಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಎಲ್ಲರನ್ನೂ ಒಂದೇ ಕಣ್ಣಿನಿಂದ ನೋಡಬೇಕು” ಎಂದು ಮುನಿಯಪ್ಪ ಅವರು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chandra Gochar: ಚಂದ್ರ ಮಕರ ರಾಶಿಗೆ ಪ್ರವೇಶ; ಇಂದು ಈ 3 ರಾಶಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ಅನಿರೀಕ್ಷಿತ ಧನಲಾಭ! – Kannada News

ಚಂದ್ರ ಮಕರ ರಾಶಿ ಪ್ರವೇಶImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಅಥವಾ ನಕ್ಷತ್ರಗಳನ್ನು ಬದಲಾಯಿಸುತ್ತಿರುತ್ತವೆ. ಕೆಲವು ಗ್ರಹಗಳು ಪ್ರತಿ ತಿಂಗಳು ರಾಶಿ ಬದಲಾಯಿಸಿದರೆ, ಇನ್ನು ಕೆಲವು ಗ್ರಹಗಳು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಸ್ಥಾನ ಪಲ್ಲಟ ಮಾಡುತ್ತವೆ. ಗ್ರಹಗಳ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದೀಗ ಮನಸ್ಸಿನ ಕಾರಕನಾದ ಚಂದ್ರನ ಸಂಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ.

ತುಲಾ ರಾಶಿಯಿಂದ ಮಕರ ರಾಶಿಗೆ ಚಂದ್ರನ ಮಹತ್ವದ ಸಾಗಣೆ:

ಇತ್ತೀಚೆಗೆ ಜೂನ್ 4 ರಂದು, ಚಂದ್ರನು ತನ್ನ ರಾಶಿ ಸ್ಥಾನವನ್ನು ಬದಲಾಯಿಸಿದ್ದಾನೆ. ಅಂದರೆ ಚಂದ್ರನು ತುಲಾ ರಾಶಿಯಿಂದ ಹೊರನಡೆದು ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನ ಈ ಸಂಚಾರ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಈ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದು ಅನಿರೀಕ್ಷಿತ ಆರ್ಥಿಕ ಪ್ರಯೋಜನಗಳು ಮತ್ತು ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ:

ಮಕರ ರಾಶಿಗೆ ಚಂದ್ರನ ಸಂಚಾರವು ಮೇಷ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಅತ್ಯಂತ ಅದೃಷ್ಟಶಾಲಿಯಾಗಿರಲಿದೆ. ದೀರ್ಘಕಾಲದವರೆಗೆ ಆರ್ಥಿಕ ಸಮಸ್ಯೆಗಳು ಹಾಗೂ ಸಾಲದ ಬಾಧೆಯಿಂದ ಬಳಲುತ್ತಿದ್ದವರಿಗೆ ಈ ಸಮಯದಲ್ಲಿ ಮುಕ್ತಿ ಸಿಗಲಿದೆ ಮತ್ತು ಆದಾಯದ ಮೂಲಗಳು ಹೆಚ್ಚಾಗಲಿವೆ. ವಿಶೇಷವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರಿಗೆ ಈ ಅವಧಿಯಲ್ಲಿ ಭಾರಿ ಲಾಭ ಕಾಯ್ದಿರಿಸಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ಇದು ಸುವರ್ಣ ಅವಕಾಶವಾಗಿದ್ದು, ಹಿಂದೆ ಮಾಡಿದ್ದ ಹೂಡಿಕೆಗಳು ಈಗ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಲಾಭವನ್ನು ತಂದುಕೊಡಲಿವೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ತುಲಾ ರಾಶಿ:

ತುಲಾ ರಾಶಿಯ ಜನರಿಗೆ ಮಕರ ರಾಶಿಯ ಚಂದ್ರನ ಗೋಚಾರವು ಚಿನ್ನದಂತಹ ದಿನಗಳನ್ನು ತರಲಿದೆ. ನಿರುದ್ಯೋಗಿಗಳಿಗೆ ಬಹಳ ದಿನಗಳಿಂದ ಕಾಯುತ್ತಿದ್ದ ಉತ್ತಮ ಉದ್ಯೋಗಾವಕಾಶಗಳು ಕೈಗೆಟುಕಲಿವೆ. ಆರ್ಥಿಕ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಲಿದ್ದು, ಅನಿರೀಕ್ಷಿತ ಮಾರ್ಗಗಳಿಂದ ಧನಲಾಭವಾಗಲಿದೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುವ ಯೋಗವಿದೆ. ಒಟ್ಟಾರೆಯಾಗಿ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಂತೋಷದ ವಾತಾವರಣ ನೆಲೆಸಲಿದೆ.

ಮೀನ ರಾಶಿ:

ಮೀನ ರಾಶಿಯ ಜನರಿಗೆ ಈ ಚಂದ್ರನ ಸಂಚಾರದಿಂದಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಅನಿರೀಕ್ಷಿತ ಲಾಭಗಳು ದೊರೆಯಲಿವೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಕೋರ್ಟ್ ಕಚೇರಿ ಅಥವಾ ಕೌಟುಂಬಿಕ ಸಮಸ್ಯೆಗಳು ಈ ಅವಧಿಯಲ್ಲಿ ಬಗೆಹರಿಯಲಿವೆ. ಹಿಂದೆ ಮಾಡಿದ ಹೂಡಿಕೆಗಳಿಂದ ನಿಮಗೀಗ ದುಪ್ಪಟ್ಟು ಲಾಭ ಸಿಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಮತ್ತು ಕೀರ್ತಿ ಹೆಚ್ಚಾಗಲಿದೆ. ಈ ರಾಶಿಯ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯ ಕ್ಷಣಗಳನ್ನು ಕಳೆಯಲಿದ್ದು, ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ಶುಭ ಯೋಗವೂ ಒದಗಿಬರಲಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Fri, 5 June 26

Source link

Viral: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ – Kannada News

ಬೆಂಗಳೂರು, ಜೂನ್ 05: ದೂರದ ಊರಿನಿಂದ ಉದ್ಯೋಗಕ್ಕೆಂದು ಬೆಂಗಳೂರಿಗೆ (Bengaluru) ಬರುವ ಯುವಕ ಯುವತಿಯರು ಅಗ್ಗದ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತದೆಯೇ ಎಂದು ನೋಡುತ್ತಾರೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ಎಚ್ ಎಸ್ ಆರ್ ಲೇಔಟ್ (HSR Layout) ತೊರೆಯಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವುದೇ ಅವರು 1 BHK ಮನೆಗೆ ಪಾವತಿಸುತ್ತಿರುವ 45000 ರೂ ಬಾಡಿಗೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಬೆಂಗಳೂರು ಮೂಲದ ಪೇಪಾಲ್ ಉದ್ಯೋಗಿಯೊಬ್ಬರು ಗ್ರೇಪ್‌ವೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಗುಡ್‌ಬೈ ಎಚ್‌ಎಸ್‌ಆರ್ ಲೇಔಟ್! 1BHK ಮನೆಗೆ 45 ಸಾವಿರ ಬಾಡಿಗೆ ನೀಡುವುದು ಸಂಪೂರ್ಣ ಹುಚ್ಚುತನ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್ ನಲ್ಲಿ, ನಾನು ಅಂತಿಮವಾಗಿ ಎಚ್‌ಎಸ್‌ಆರ್ ಲೇಔಟ್ ತೊರೆಯುವ ನಿರ್ಧಾರ ಮಾಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಇಂದು ತುಂಬಾ ನಿರಾಳವಾಗಿದೆ. ಇದು ನನ್ನ ಹೆಗಲ ಮೇಲಿನ ದೊಡ್ಡ ಭಾರವನ್ನು ಇಳಿಸಿದಂತಾಗುತ್ತದೆ. ಈ ನಿರ್ಧಾರದಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಆರಂಭದಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈ ಪ್ರದೇಶದಲ್ಲಿದ್ದಾರೆ. ಹೀಗಾಗಿ ನಾನು ಸಾಮಾಜಿಕ ಒತ್ತಡಕ್ಕೆ ಮಣಿದು ಈ ಸ್ಥಳದಲ್ಲೇ ಉಳಿಯಲು ನಿರ್ಧಾರ ಮಾಡಿದ್ದೆ ಎಂದು ಬರೆದುಕೊಂಡಿದ್ದಾರೆ.

ಹಲವಾರು ಅಪಾರ್ಟ್‌ ಮೆಂಟ್‌ಗಳಿಗೆ ಭೇಟಿ ನೀಡಿದ ನಂತರ, HSR ಲೇಔಟ್‌ನ ಹೊರಗೆ ಕೂಸ ಉತ್ತಮ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳಿವೆ ಎಂದು ಅರಿತು ಕೊಂಡೆ. ನನ್ನ ವಾರ್ಷಿಕ 24 ಲಕ್ಷ ರೂಪಾಯಿ ಆದಾಯಕ್ಕೂ ಈ ಬಾಡಿಗೆಯೂ ಹೆಚ್ಚು ಹೊರೆಯಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್‌ಗೆ ನನ್ನ ವಿದಾಯ, ಮತ್ತು ಭಯಾನಕ ಟ್ರಾಫಿಕ್‌ಗೆ ವಿದಾಯ, ನನ್ನ ಈ ನಿರ್ಧಾರ ಇನ್ನಷ್ಟು ಸರಳವಾಗಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ನಿರ್ಧಾರ ನಿಮಗೆ ಸರಿ ಎನಿಸಿದರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನನಗೂ ಈ ಬೆಂಗಳೂರಿನಿಂದ ಹೊರಗೆ ಹೋಗಲು ಸಹಾಯ ಮಾಡಿ ಗೆಳೆಯ ಎಂದು ಕೇಳಿದ್ದಾರೆ. ಮತ್ತೊಬ್ಬರು, ಬೆನ್ನು ನೋವು ಅಥವಾ ಕೆಲಸದ ಒತ್ತಡವಿದ್ದರೆ ಯಾವಾಗಲೂ ಆಫೀಸಿಗೆ ಹತ್ತಿರವಿರುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:08 pm, Fri, 5 June 26

Source link

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್ – Kannada News

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ!Image Credit source: cbc

ಬೆಂಗಳೂರು, ಜೂನ್ 05: ನಗರದ ಅಕ್ರಮವಾಗಿ ಮತ್ತು ಯಾವುದೇ ಪರವಾನಗಿ ಇಲ್ಲದೆ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವೈದ್ಯನನ್ನು ಡಾ ರಾಜ್ ಕಮಲ್ ಎಂದು ಗುರುತಿಸಲಾಗಿದ್ದು, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಎಕ್ಸೋಟಿಕ್ (Exotic) ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸಲಾಗಿದೆ. ರಾಜ್ ಸೇರಿದಂತೆ ಇನ್ನೂ 6 ಮಂದಿಯನ್ನು ಈ ಕೇಸ್​ನಲ್ಲಿ ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಜಯನಗರದ ಖ್ಯಾತ ವೈದ್ಯ ಡಾ. ರಾಜ್ ಕಮಲ್ ಸೇರಿ ಏಳು ಮಂದಿ ಬಂಧನ.
  • ಐಷಾರಾಮಿ ಫ್ಲಾಟ್‌ನಲ್ಲಿ ವಿದೇಶಿ ಹೆಬ್ಬಾವು, ಆಮೆಗಳು ಹಾಗೂ ಗಾಂಜಾ ಪತ್ತೆಯಾಗಿ ತನಿಖೆ ತೀವ್ರ.
  • ಇನ್‌ಸ್ಟಾಗ್ರಾಮ್‌ನ ‘@Zoo2You’ ಖಾತೆಯ ಮೂಲಕ ಮಕ್ಕಳ ಮುಂದೆ ಪ್ರಾಣಿಗಳ ಪ್ರದರ್ಶನ ದಂಧೆ ಬಯಲು.

ಐಷಾರಾಮಿ ಮನೆಯಲ್ಲಿ ವನ್ಯಜೀವಿಗಳ ಸಾಮ್ರಾಜ್ಯ!

ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಾಸವಿದ್ದ ಈ ವೈದ್ಯರು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅಂತರರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿ ಈ ಕೃತ್ಯ ಎಸಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಜಾಗೃತ ದಳ ಮತ್ತು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ವೈದ್ಯನ ನಿವಾಸದ ಮೇಲೆ ಜಂಟಿ ದಾಳಿ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮನೆಯ ಒಳಗೆ ಪ್ರತ್ಯೇಕ ಪಂಜರಗಳು ಮತ್ತು ವಿಶೇಷ ಕೃತಕ ವಾತಾವರಣ ನಿರ್ಮಿಸಿ ವಿವಿಧ ದೇಶಗಳ ವಿಲಕ್ಷಣ ಪ್ರಾಣಿಗಳನ್ನು ಸಾಕಿರುವುದು ಪತ್ತೆಯಾಗಿದೆ.

ಬಾಲ್ ಹೆಬ್ಬಾವುಗಳು, ಹಲ್ಲಿಗಳು, ಆಮೆಗಳು ಸೇರಿದಂತೆ ವಿಲಕ್ಷಣ ವನ್ಯಜೀವಿಗಳು, ವಿಮಾನ ನಿಲ್ದಾಣದ ಸಾಮಾನು ಟ್ಯಾಗ್‌ಗಳನ್ನು ಹೊಂದಿರುವ ಸೂಟ್‌ಕೇಸ್‌ಗಳು ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಭಾರತಕ್ಕೆ ತಂದು, ಇಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಜಾಲದೊಂದಿಗೆ ವೈದ್ಯನಿಗೆ ಸಂಪರ್ಕವಿತ್ತೇ ಎಂಬ ಆಯಾಮದಲ್ಲಿ ತನಿಖೆ ಆರಂಭವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ತನಿಖಾಧಿಕಾರಿಗಳು ಗಾಂಜಾ ಕುರುಹುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ ಜಾಲದ ಶಂಕೆ

ವನ್ಯಜೀವಿ ನಿಯಮಾವಳಿಗಳ ಪ್ರಕಾರ, ವಿದೇಶಿ ಮೂಲದ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಅಥವಾ ಇಟ್ಟುಕೊಳ್ಳಲು ಕೇಂದ್ರ ಸರ್ಕಾರದ ‘ಪರಿವೇಶ್‌’ (PARIVESH) ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಮತ್ತು ಸೂಕ್ತ ದಾಖಲೆ ಹೊಂದಿರಬೇಕು. ಆದರೆ ಬಂಧಿತ ವೈದ್ಯನ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳು ಇರಲಿಲ್ಲ. ಈ ಪ್ರಾಣಿಗಳನ್ನು ಕಸ್ಟಮ್ಸ್ ಕಣ್ತಪ್ಪಿಸಿ ದೇಶದೊಳಗೆ ಹೇಗೆ ತರಲಾಯಿತು ಮತ್ತು ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ (Animal Smuggling) ಜಾಲ ಯಾವುದು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳು ವಿದೇಶಿ ಸಾಕುಪ್ರಾಣಿ ವ್ಯಾಪಾರದ ಪ್ರಮುಖ ಕೇಂದ್ರಗಳಾದ ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ದೇಶಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಾಲೆಗಳು, ಕಾಲೇಜುಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವನ್ಯಜೀವಿ ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುವ “@Zoo2You” ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಮೇಲೂ ಅನುಮಾನಗಳು ಹುಟ್ಟಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಚರಣ್ ಬಳಿಕ ಕಿಚ್ಚ ಸುದೀಪ್​​​ಗೆ ಹೊಸ ಬಾಡಿಗಾರ್ಡ್? – Kannada News

ರಾಮ್ ಚರಣ್ ಅವರು ಇತ್ತೀಚೆಗೆ ತಮ್ಮ ಬಾಡಿಗಾರ್ಡ್ ಕಾರಣಕ್ಕೆ ಸುದ್ದಿ ಆಗಿದ್ದಾರೆ. ‘ಪೆದ್ದಿ’ ಸಿನಿಮಾದ ಪ್ರಚಾರದ ವೇಳೆ ರಾಮ್ ಚರಣ್ ಅವರ ಜೊತೆಗಿರುವ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ರಾಮ್ ಚರಣ್ ನೇಮಕ ಮಾಡಿಕೊಂಡ ಹೊಸ ಬಾಡಿಗಾರ್ಡ್ ಇವರು ಎನ್ನಲಾಗುತ್ತಿದೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಹಿಂಭಾಗದಲ್ಲೂ ಓರ್ವ ಬಾಡಿಗಾರ್ಡ್ ಕಾಣಿಸಿದ್ದಾರೆ. ಇವರು ಕಿಚ್ಚನ (Kichcha) ಹೊಸ ಬಾಡಿಗಾರ್ಡ್ ಇರಬಹುದೇ ಎಂಬ ಪ್ರಶ್ನೆ ಮೂಡಿದೆ.

ಕಿಚ್ಚ ಸುದೀಪ್ ಅವರ ಈಗಿರುವ ವೈಯಕ್ತಿಕ ಬಾಡಿಗಾರ್ಡ್ ಹೆಸರು ಕಿಚ್ಚ ಕಿರಣ್. ಅವರು ಹಲವು ವರ್ಷಗಳಿಂದ ಸುದೀಪ್ ಜೊತೆ ಇದ್ದಾರೆ. ಸಾರ್ವಜನಿಕವಾಗಿ ಸೇರಿದಾಗ ಅಭಿಮಾನಿಗಳಿಂದ ಸುದೀಪ್ ಅವರನ್ನು ರಕ್ಷಣೆ ಮಾಡುವ ಕೆಲಸ ಇವರದ್ದು. ಈಗ ಸುದೀಪ್ ಜೊತೆ ವಿದೇಶಿ ವ್ಯಕ್ತಿಯೋರ್ವ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿ ಮೂಡಿಸಿದೆ.

ಸುದೀಪ್ ಅಳಿಯ ಸಂಜಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಶೋ ನೋಡಲು ಸುದೀಪ್ ಅವರು ಬೆಂಗಳೂರಿನ ಸಂತೋಷ್ ಥಿಯೇಟರ್​​ಗೆ ಕುಟುಂಬ ಸಮೇತವಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ರಕ್ಷಣೆಗೆ ವಿದೇಶಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರು 6.1 ಅಡಿ ಎತ್ತರ ಇದ್ದಾರೆ. ಅವರ ಬಾಡಿಗಾರ್ಡ್ ಸುದೀಪ್​ಗೂ ಎತ್ತರ ಇದ್ದಾರೆ ಅನ್ನೋದು ವಿಶೇಷ. ಇವರ ಹೆಸರೇನು? ಇಂದಿಗೆ ಮಾತ್ರ ಸುದೀಪ್ ರಕ್ಷಣೆಗೆ ಅವರು ಬಂದರೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್

ಸುದೀಪ್ ಅವರು ‘ಮಾರ್ಕ್’ ಸಿನಿಮಾ ಬಳಿಕ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರ ನಟನೆಯ ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲ ಭಾಗದ ಶೂಟ್ ನಡೆದಿದ್ದು, ಈ ಬಗ್ಗೆ ಇನ್ನಷ್ಟೇ ಅಪ್​​​ಡೇಟ್ ಸಿಗಬೇಕಿದೆ. ಶೀಘ್ರವೇ ಬಿಗ್ ಬಾಸ್ ಕೂಡ ಆರಂಭ ಆಗಲಿದೆ. ಇದನ್ನು ಸುದೀಪ್ ಹೋಸ್ಟ್ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್ – Kannada News

ಬೆಂಗಳೂರು, ಜೂ.5: ಬೆಂಗಳೂರಿನಲ್ಲಿ ದಿನಕ್ಕೊಂದು ಸ್ಕ್ಯಾಮ್​​​​​ಗಳು ನಡೆಯುತ್ತಿರುತ್ತದೆ. ಇದೀಗ ಈ ವಂಚನೆಗೆ ಹೊಸ ರೂಪ ನೀಡಿದ್ದಾರೆ. “ನಿಮಗೆ 8 ಲಕ್ಷ ರೂ. ಕೇರಳ ಲಾಟರಿ ಹೊಡೆದಿದೆ” ಎಂಬ ವಂಚಕರ ನಕಲಿ ಮಾತನ್ನು ನಂಬಿ ಪಶ್ಚಿಮ ಬೆಂಗಳೂರಿನ ಇಬ್ಬರು ನಾಗರಿಕರು ಬರೋಬ್ಬರಿ 13.71 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ವೆಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಂಚನೆಗೊಳಗಾದವರಲ್ಲಿ ವಲಗೇರಹಳ್ಳಿಯ 60 ವರ್ಷದ ಎನ್‌ಜಿಒ (NGO) ಉದ್ಯೋಗಿ ಒಬ್ಬರು 7.45 ಲಕ್ಷ ರೂ. ಕಳೆದುಕೊಂಡಿದ್ದರೆ, ಮಾರುತಿ ನಗರದ 52 ವರ್ಷದ ರೈತರೊಬ್ಬರು 6.26 ಲಕ್ಷ ರೂ. ಕಳೆದುಕೊಂಡು ಕಂಗಾಲಾಗಿದ್ದಾರೆ.

‘ಕೇರಳ ಜಾಕ್‌ಪಾಟ್’ ಅಥವಾ ‘ಕೇರಳ ಸ್ಟೇಟ್ ಲಾಟರಿ’ ಪ್ರತಿನಿಧಿಗಳೆಂದು ಹೇಳಿಕೊಂಡ ಸೈಬರ್ ಕಳ್ಳರು, ಇಬ್ಬರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ 8 ಲಕ್ಷ ರೂ. ಲಾಟರಿ ಬಂದಿದೆ ಎಂದು ನಂಬಿಸಿದ್ದರು. ಲಾಟರಿ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ವಂಚಕರು ‘thekeralajackpotresult.online’ ಎಂಬ ನಕಲಿ ವೆಬ್‌ಸೈಟ್ ಲಿಂಕ್ ಕಳುಹಿಸಿದ್ದರು. ಸಂತ್ರಸ್ತರು ಆ ಲಿಂಕ್ ತೆರೆದಾಗ, ಅವರು ಲಾಟರಿ ಗೆದ್ದಿರುವಂತೆ ವೆಬ್‌ಸೈಟ್‌ನಲ್ಲಿ ನಕಲಿಯಾಗಿ ಎಡಿಟ್ ಮಾಡಿ ತೋರಿಸಲಾಗಿತ್ತು. ನಂಬಿಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಸರಿನ ನಕಲಿ ಪತ್ರಗಳನ್ನೂ ಕಳುಹಿಸಲಾಗಿತ್ತು.

ಹಣ ಬಿಡುಗಡೆ ಮಾಡಲು ಎನ್‌ಜಿಒ ಉದ್ಯೋಗಿಗೆ ಜಿಎಸ್‌ಟಿ (GST), ಟಿಡಿಎಸ್ (TDS) ಮತ್ತು ಆದಾಯ ತೆರಿಗೆ ಪಾವತಿಸುವಂತೆ ವಂಚಕರು ಸೂಚಿಸಿದ್ದರು. ಇತ್ತ ರೈತನಿಗೆ ಜಿಎಸ್‌ಟಿ ಜೊತೆಗೆ ಆರ್‌ಬಿಐನಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯಲು ಹಣ ಕೇಳಿದ್ದರು. ಅಷ್ಟೇ ಅಲ್ಲದೆ, ಲಾಟರಿ ಹಣವು ಥಾಯ್ಲೆಂಡ್‌ನ ‘ಥಾಯ್ ಬಹ್ತ್’ ಕರೆನ್ಸಿಯಲ್ಲಿದೆ, ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಕರೆನ್ಸಿ ಕನ್ವರ್ಷನ್ ಚಾರ್ಜ್ ಬೇಕು ಎಂದು ನಂಬಿಸಿ ಇಬ್ಬರಿಂದಲೂ ಲಕ್ಷಾಂತರ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ತಮಗೆ ಮೋಸ ಹೋಗಿರುವುದು ಇಬ್ಬರಿಗೂ ಅರಿವಾಗಿದೆ.

ಇದನ್ನೂ ಓದಿ: ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ಪ್ರಯಾಣಿಕರ ಗಮನಕ್ಕೆ: ಈ ರೈಲ್ವೆ ಮಾರ್ಗಕ್ಕೆ ಜೂ.15 ರಿಂದ ಹೊಸ ಮುಂಗಾರು ವೇಳಾಪಟ್ಟಿ

ಕರ್ನಾಟಕದಲ್ಲಿ 2007 ರಿಂದಲೇ ಲಾಟರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಕರ್ನಾಟಕದ ನಾಗರಿಕರು ಲಾಟರಿ ಕಾನೂನುಬದ್ಧವಾಗಿರುವ ಕೇರಳದಂತಹ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿ ದೈಹಿಕವಾಗಿ ಟಿಕೆಟ್ ಖರೀದಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಮುಖ್ಯವಾದ ವಿಷಯವೆಂದರೆ, ಕೇರಳ ಸರ್ಕಾರದ ಲಾಟರಿ ಟಿಕೆಟ್‌ಗಳು ಯಾವಾಗಲೂ ಕಾಗದದ ರೂಪದಲ್ಲಿರುತ್ತವೆಯೇ ಹೊರತು, ಅವುಗಳನ್ನು ಎಂದಿಗೂ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವುದಿಲ್ಲ. ಹೀಗಾಗಿ ಇಂತಹ ಆನ್‌ಲೈನ್ ಲಾಟರಿ ಆಮಿಷಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:26 pm, Fri, 5 June 26

Source link

‘ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ’: ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಬಿಗ್ ಶಾಕ್

ದೇವನಹಳ್ಳಿ, ಜೂನ್ 5: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆಎಚ್ ಮುನಿಯಪ್ಪ, ‘ನಾನು ಆಹಾರ ಇಲಾಖೆ ಸಚಿವನಾಗಿ ಅಧಿಕಾರ ಸ್ವೀಕರಿಸುವುದಿಲ್ಲ (ಚಾರ್ಜ್ ತೆಗೆದುಕೊಳ್ಳಲ್ಲ)’ ಎಂದು ಘೋಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ‘ನಾನು ಯುಪಿಎ ಕೇಂದ್ರ ಸರ್ಕಾರದಲ್ಲೂ ಸಚಿವನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಆದರೆ ಖಾತೆ ಹಂಚಿಕೆಯಲ್ಲಿ ಆಗಿರುವ ಲೋಪವನ್ನು ಹೈಕಮಾಂಡ್ ನಾಯಕರೇ ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಅವರ ಈ ಹಠಾತ್ ನಿರ್ಧಾರ ಡಿಕೆಶಿ ಸಂಪುಟವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ – Kannada News

ಚೆನ್ನೈ, ಜೂನ್ 05: ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಕೆ ಅಣ್ಣಾಮಲೈ(K Annamalai) ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ  ಘೋಷಿಸಿದ್ದಾರೆ. ತಮ್ಮ ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ. ನಾನು ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಇಂದಿನಿಂದ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ನಾನು ಹೊಸ ರಾಜಕೀಯ ಆಂದೋಲನ ಪ್ರಾರಂಭಿಸುತ್ತಿದ್ದೇನೆ ಮತ್ತು ಈ ಪ್ರಯತ್ನದಲ್ಲಿ ನಿಮ್ಮೆಲ್ಲರ ಬೆಂಬಲವನ್ನು ನಾನು ಬಯಸುತ್ತೇನೆ ಎಂದು ಅಣ್ಣಾಮಲೈ ಹೇಳಿದರು.

ತಮಿಳುನಾಡು ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ತೀವ್ರ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಜನಪ್ರಿಯ ಯುವ ನಾಯಕ ಕೆ. ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಅಣ್ಣಾಮಲೈ ಅವರ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಗಳಿಂದ ಹೊರಗುಳಿದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಅಣ್ಣಾಮಲೈ ಅವರ ಈ ನಿರ್ಧಾರವು, ಚೆನ್ನೈನಿಂದ ದೆಹಲಿಯವರೆಗಿನ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ರಾಜೀನಾಮೆಗೂ ಮುನ್ನ ಜೂನ್ 2 ರಂದು ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ತಮಿಳುನಾಡು ಬಿಜೆಪಿಯೊಳಗಿನ ಆಂತರಿಕ ಪರಿಸ್ಥಿತಿ ಹಾಗೂ ತಮ್ಮ ಕಳವಳಗಳ ಕುರಿತು ಬಹಿರಂಗವಾಗಿ ಚರ್ಚಿಸಿದ್ದರು. ಯಾವುದೇ ಮುಖಾಮುಖಿ ಇಲ್ಲದೆ ಸೌಹಾರ್ದಯುತವಾಗಿಯೇ ಅವರು ಬಿಜೆಪಿಯಿಂದ ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾಮಲೈ ಅಸಮಾಧಾನಕ್ಕೆ ಕಾರಣವಾದ 5 ಪ್ರಮುಖ ಅಂಶಗಳು:
1. ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ವಿರೋಧ:
ಅಣ್ಣಾಮಲೈ ಅವರು ಆರಂಭದಿಂದಲೂ ಎಐಎಡಿಎಂಕೆ (AIADMK) ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶೇಕಡಾ 11.24 ರಷ್ಟು ಮತಗಳನ್ನು ಗಳಿಸಿತಾದರೂ, ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೊಯಮತ್ತೂರು ಕ್ಷೇತ್ರದಲ್ಲಿ ಸ್ವತಃ ಅಣ್ಣಾಮಲೈ ಅವರೂ ಸೋಲನ್ನು ಅನುಭವಿಸಿದ್ದರು.

2. ರಾಜ್ಯಾಧ್ಯಕ್ಷ ಸ್ಥಾನದಿಂದ ದಿಢೀರ್ ಪದಚ್ಯುತಿ
2021 ರಿಂದ 2025 ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಅಣ್ಣಾಮಲೈ ಪಕ್ಷದ ಪ್ರಭಾವವನ್ನು ಗಣನೀಯವಾಗಿ ಹೆಚ್ಚಿಸಿದ್ದರು. ಆದರೆ, ಏಪ್ರಿಲ್ 2025 ರಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಪುನಃಸ್ಥಾಪಿಸುವ ಉದ್ದೇಶದಿಂದ ಹೈಕಮಾಂಡ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ, ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಿತು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮೈತ್ರಿ ಮಾತುಕತೆಗೆ ಅಣ್ಣಾಮಲೈ ಅವರ ಪದಚ್ಯುತಿಯನ್ನೇ ಪ್ರಮುಖ ಷರತ್ತಾಗಿ ಇರಿಸಿದ್ದರು ಎನ್ನಲಾಗಿದೆ.

3. 2026 ರ ವಿಧಾನಸಭಾ ಚುನಾವಣೆಯಲ್ಲಿ ಕಡೆಗಣನೆ
2026 ರ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಹಾಗೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಿಂದ ಅಣ್ಣಾಮಲೈ ಅವರನ್ನು ಸಂಪೂರ್ಣವಾಗಿ ಬದಿಗಿಡಲಾಗಿತ್ತು. ಈ ಕಡೆಗಣನೆಯಿಂದ ಬೇಸತ್ತ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೂ ನಿರಾಕರಿಸಿದ್ದರು.

4. ಕೇಂದ್ರದ ನೀತಿಗಳ ವಿರುದ್ಧ ಆಕ್ಷೇಪ:
ಕೇಂದ್ರ ಸರ್ಕಾರದ ಕೆಲವು ನೀತಿಗಳನ್ನು ಅಣ್ಣಾಮಲೈ ಮುಕ್ತವಾಗಿ ಪ್ರಶ್ನಿಸಿದ್ದರು. ವಿಶೇಷವಾಗಿ ಶಾಲೆಗಳಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ಆ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ತಮಿಳುನಾಡಿನ ಪರವಾಗಿ ಧ್ವನಿ ಎತ್ತಿದ್ದರು.

5.ಚುನಾವಣಾ ಕಾರ್ಯತಂತ್ರದಲ್ಲಿ ಭಿನ್ನಾಭಿಪ್ರಾಯ
ಅಭ್ಯರ್ಥಿಗಳ ಆಯ್ಕೆ, ಸೀಟು ಹಂಚಿಕೆ ಮತ್ತು ಮೈತ್ರಿ ನಿರ್ವಹಣೆಯ ವಿಷಯದಲ್ಲಿ ಅಣ್ಣಾಮಲೈ ಅವರ ಚಿಂತನೆಗಳಿಗೂ ಹಾಗೂ ಬಿಜೆಪಿಯ ಉನ್ನತ ನಾಯಕತ್ವದ ಕಾರ್ಯಶೈಲಿಗೂ ಭಾರಿ ಭಿನ್ನಾಭಿಪ್ರಾಯಗಳು ಮೂಡಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ಚಿನ್ನದ ಬೆಲೆ 2 ದಿನದಲ್ಲಿ 45 ರು ಇಳಿಕೆ; ಬೆಳ್ಳಿ ಬೆಲೆ 5-10 ರೂ ಕಡಿಮೆ – Kannada News

ನವದೆಹಲಿ, ಜೂನ್ 5: ಭಾರತದಲ್ಲಿ ಚಿನ್ನದ ಬೆಲೆಯ (Gold Rates) ಸತತ ಇಳಿಕೆ ಆಗುತ್ತಿದೆ. ನಿನ್ನೆ ಗುರುವಾರ ಗ್ರಾಮ್​ಗೆ 10 ರೂ ಇಳಿದಿದ್ದ ಆಭರಣ ಚಿನ್ನದ ಬೆಲೆ ಇವತ್ತು ಶುಕ್ರವಾರ 35 ರೂ ಕಡಿಮೆಗೊಂಡಿದೆ. ಎರಡು ದಿನದಲ್ಲಿ 45 ರುಗಳಷ್ಟು ಬೆಲೆ ತಗ್ಗಿದೆ. ಆದರೆ, ವಿದೇಶಗಳಲ್ಲಿ ಹಲವೆಡೆ ಇದರ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆ ಹಲವು ದಿನಗಳ ಬಳಿಕ ಕಡಿಮೆ ಆಗಿದೆ. ಈ ಬಿಳಿ ಲೋಹ ಗ್ರಾಮ್​ಗೆ 5ರಿಂದ 10 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,573 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,275 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,680 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,573 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,275 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,275 ರೂ
  • ಚೆನ್ನೈ: 14,430 ರೂ
  • ಮುಂಬೈ: 14,275 ರೂ
  • ದೆಹಲಿ: 14,290 ರೂ
  • ಕೋಲ್ಕತಾ: 14,275 ರೂ
  • ಕೇರಳ: 14,275 ರೂ
  • ಅಹ್ಮದಾಬಾದ್: 14,280 ರೂ
  • ಜೈಪುರ್: 14,290 ರೂ
  • ಲಕ್ನೋ: 14,290 ರೂ
  • ಭುವನೇಶ್ವರ್: 14,275 ರೂ

ಇದನ್ನೂ ಓದಿ: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 591 ರಿಂಗಿಟ್ (14,006 ರುಪಾಯಿ)
  • ದುಬೈ: 538.50 ಡಿರಾಮ್ (13,998 ರುಪಾಯಿ)
  • ಅಮೆರಿಕ: 147.50 ಡಾಲರ್ (14,056 ರುಪಾಯಿ)
  • ಸಿಂಗಾಪುರ: 195.60 ಸಿಂಗಾಪುರ್ ಡಾಲರ್ (14,506 ರುಪಾಯಿ)
  • ಕತಾರ್: 538.50 ಕತಾರಿ ರಿಯಾಲ್ (14,077 ರೂ)
  • ಸೌದಿ ಅರೇಬಿಯಾ: 554 ಸೌದಿ ರಿಯಾಲ್ (14,061 ರುಪಾಯಿ)
  • ಓಮನ್: 57 ಒಮಾನಿ ರಿಯಾಲ್ (14,110 ರುಪಾಯಿ)
  • ಕುವೇತ್: 45.19 ಕುವೇತಿ ದಿನಾರ್ (14,035 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version