ಖಾಸಗಿಯಾಗಿ ಅಭಿವೃದ್ಧಿಗೊಂಡ ಭಾರತದ ಮೊದಲ ರಾಕೆಟ್ ‘ವಿಕ್ರಮ್-1’ ಇಂದು ಉಡಾವಣೆ: ಬಾಹ್ಯಾಕಾಶಕ್ಕೆ ಹಾರಲಿವೆ ಪ್ರಧಾನಿ ಮೋದಿ ಪೋಸ್ಟ್‌ಕಾರ್ಡ್‌ – Kannada News | Skyroot Aerospace’s Vikram 1 Lifts Off from Sriharikota, Propelling India’s Space Dream

ಸ್ಕೈರೂಟ್ ಏರೋಸ್ಪೇಸ್ ಮತ್ತು ಪ್ರಧಾನಿ ಮೋದಿ

ಶ್ರೀಹರಿಕೋಟ, ಜು.18: ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲು ಸಕಲ ಸಿದ್ಧತೆಗಳು ನಡೆದಿವೆ. ದೇಶದ ಪ್ರಮುಖ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ (Vikram-1) ರಾಕೆಟ್ ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಏನಿದು ‘ಮಿಷನ್ ಆಗಮನ್’ ಯೋಜನೆ?

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ ಸಾರಾಭಾಯ್ ಅವರ ನೆನಪಿಗಾಗಿ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ. ಭಾರತೀಯ ನೆಲದಿಂದ ಬಾಹ್ಯಾಕಾಶ ಕಕ್ಷೆಯನ್ನು ತಲುಪಲಿರುವ, ಸಂಪೂರ್ಣವಾಗಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ರಾಕೆಟ್ ಎಂಬ ಹೆಗ್ಗಳಿಕೆಗೆ ಈ ವಿಕ್ರಮ್-1 ಪಾತ್ರವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯರ ಅದ್ಭುತ ಸಾಧನೆಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸ್ಕೈರೂಟ್ ಸಂಸ್ಥೆಯು ಈ ವಿಕ್ರಮ್-1 ರಾಕೆಟ್ ಅನ್ನು ಅತ್ಯಾಧುನಿಕವಾಗಿ ತಯಾರಿಸಿದೆ. ಈ ಉಡಾವಣೆಯನ್ನು ‘ಮಿಷನ್ ಆಗಮನ್’ ಯೋಜನೆಯಡಿ ಕೈಗೊಳ್ಳಲಾಗುತ್ತಿದ್ದು, ಇದು ಪ್ರಮುಖವಾಗಿ ತಂತ್ರಜ್ಞಾನ ಪ್ರದರ್ಶನದ ಪೇಲೋಡ್‌ಗಳನ್ನು ಬಾಹ್ಯಾಕಾಶ ಕಕ್ಷೆಗೆ ಹೊತ್ತೊಯ್ಯಲಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಪ್ರಧಾನಿ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳ ಕೈಬರಹದ ಪೋಸ್ಟ್‌ಕಾರ್ಡ್:

ಈ ಬಾರಿಯ ವಿಕ್ರಮ್-1 ಉಡಾವಣೆ ಕೇವಲ ತಾಂತ್ರಿಕ ದೃಷ್ಟಿಯಿಂದಷ್ಟೇ ಅಲ್ಲದೆ, ಭಾವನಾತ್ಮಕವಾಗಿಯೂ ವಿಶೇಷತೆಗಳನ್ನು ಒಳಗೊಂಡಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುವ ವಿಶೇಷ ಉದ್ದೇಶವನ್ನು ಈ ಮಿಷನ್ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಬರಹದಲ್ಲಿ ಬರೆದ ಹಾಗೂ ‘ವಂದೇ ಮಾತರಂ’ ಎಂಬ ದೇಶಭಕ್ತಿಯ ಪದಗಳನ್ನು ಒಳಗೊಂಡಿರುವ ವಿಶೇಷ ಪೋಸ್ಟ್‌ಕಾರ್ಡ್ ಅನ್ನು ಈ ಬಾಹ್ಯಾಕಾಶ ನೌಕೆಯು ಕೊಂಡೊಯ್ಯುತ್ತಿದೆ.

ಪ್ರಧಾನಿ ಮೋದಿಯವರ ಪೋಸ್ಟ್‌ಕಾರ್ಡ್ ಜೊತೆಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಾಲಿ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಹಾಗೂ ಭಾರತದ ಹೆಮ್ಮೆಯ ಗಗನಯಾತ್ರಿಗಳು ತಮ್ಮ ಕೈಬರಹದಲ್ಲಿ ಬರೆದಿರುವ ರಹಸ್ಯ ಪೋಸ್ಟ್‌ಕಾರ್ಡ್‌ಗಳನ್ನು ಸಹ ಈ ರಾಕೆಟ್ ತನ್ನೊಂದಿಗೆ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಬಲವನ್ನು ಜಗತ್ತಿಗೆ ಸಾಬೀತುಪಡಿಸಲು ವಿಕ್ರಮ್-1 ಸಜ್ಜಾಗಿದ್ದು, ಇಡೀ ದೇಶವೇ ಇಂದಿನ ಉಡಾವಣೆಯನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದೆ.

ಇದನ್ನೂ ಓದಿ: ಇಸ್ರೋದಲ್ಲಿ ಪ್ರತಿಭಾ ಪಲಾಯನ: ಗಗನಯಾನದ ಹೊತ್ತಲ್ಲೇ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ

“ಇದು ಭಾರತದ ಬಾಹ್ಯಾಕಾಶ ಪಯಣದ ಹೊಸ ಮೈಲಿಗಲ್ಲು”: ಪ್ರಧಾನಿ ಮೋದಿ ಟ್ವೀಟ್

ಪ್ರಧಾನಿ ಮೋದಿ ಅವರು ಈ ಬಗ್ಗೆ ಎಕ್ಸ್​​​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತದ ಯುವಶಕ್ತಿ ಮತ್ತು ಬಾಹ್ಯಾಕಾಶ ಸುಧಾರಣೆಗಳನ್ನು ಶ್ಲಾಘಿಸಿದ್ದಾರೆ. “ಇದು ಭಾರತದ ಬಾಹ್ಯಾಕಾಶ ಪಯಣದ ಐತಿಹಾಸಿಕ ಹೊಸ ಗಡಿ! ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಭಾರತದ ಮೊದಲ ಖಾಸಗಿ ಉಡಾವಣಾ ನೌಕೆ ವಿಕ್ರಮ್-1 ರ ಚೊಚ್ಚಲ ಆರ್ಬಿಟಲ್ ಉಡಾವಣೆಯನ್ನು ಕೈಗೊಳ್ಳುತ್ತಿದೆ. ಈ ನಾಲ್ಕು ಹಂತದ ರಾಕೆಟ್ ಅತ್ಯಂತ ವೇಗದ ಮತ್ತು ಬೇಡಿಕೆಗೆ ತಕ್ಕ ಬಾಹ್ಯಾಕಾಶ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.” “ಈ ಮಿಷನ್ ನಮ್ಮ ಯುವಕರ ಪ್ರತಿಭೆ, ದೃಢಸಂಕಲ್ಪ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ. ನಮ್ಮ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಆವಿಷ್ಕಾರ ಮತ್ತು ಉದ್ಯಮಗಳಿಗೆ ಹೇಗೆ ಹೊಸ ಅವಕಾಶಗಳನ್ನು ಮುಕ್ತಗೊಳಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಮೋದಿ ಬರೆದಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸತ್ ಬಜೆಟ್ ಅಧಿವೇಶನದಲ್ಲಿ ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ: ಒಬ್ಬರದ್ದು ಶೂನ್ಯ ಸಾಧನೆ! – Kannada News | Karnataka MPs Attendance in Parliament Budget Session: Radhakrishna Doddamani Records Zero Attendance

ಸಂಸತ್ ಅಧಿವೇಶನ (ಸಂಗ್ರಹ ಚಿತ್ರ)Image Credit source: PTI

ಬೆಂಗಳೂರು, ಜುಲೈ 19: ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliment Monsoon Session) ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಜೆಟ್ ಅಧಿವೇಶನದ ಸಂಸದರ ಹಾಜರಾತಿ ವಿವರಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಕರ್ನಾಟಕದ (Karnataka) ಇಬ್ಬರು ಲೋಕಸಭಾ ಸದಸ್ಯರು ಕಳಪೆ ಹಾಜರಾತಿಯಿಂದ ಗಮನ ಸೆಳೆದಿದ್ದು, ಮತ್ತೊಂದೆಡೆ ಕೆಲ ಸಂಸದರು 90 ಪ್ರತಿಶತಕ್ಕೂ ಹೆಚ್ಚು ಹಾಜರಾತಿ ದಾಖಲಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಲಭ್ಯ ಅಂಕಿಅಂಶಗಳ ಪ್ರಕಾರ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಧಾಕೃಷ್ಣ ದೊಡ್ಡಮನಿ ಬಜೆಟ್ ಅಧಿವೇಶನದ 31 ಕಲಾಪಗಳಲ್ಲಿ ಒಂದಕ್ಕೂ ಹಾಜರಾಗದೆ ಶೇ 0 ಹಾಜರಾತಿ ದಾಖಲಿಸಿದ್ದಾರೆ. ಈ ಕುರಿತು ಅವರ ಆಪ್ತರು ಪ್ರತಿಕ್ರಿಯಿಸಿ, ಕುಟುಂಬದ ಸದಸ್ಯರೊಬ್ಬರ ಗಂಭೀರ ಅನಾರೋಗ್ಯ ಹಾಗೂ ಸಂಸದರ ಆರೋಗ್ಯ ಸಮಸ್ಯೆಯಿಂದ ಅವರು ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ 31 ಕಲಾಪಗಳಲ್ಲಿ 13 ದಿನ ಮಾತ್ರ ಹಾಜರಾಗಿದ್ದು, ಅವರ ಹಾಜರಾತಿ ಶೇ 41.9 ಆಗಿದೆ. ಇದು ಕರ್ನಾಟಕದ ಸಂಸದರ ಪೈಕಿ ಅತ್ಯಂತ ಕಡಿಮೆ ಹಾಜರಾತಿಗಳಲ್ಲಿ ಒಂದಾಗಿದೆ.

ಅತಿಹೆಚ್ಚು ಹಾಜರಾತಿ ಹೊಂದಿರುವ ಸಂಸದರು

ಡಾ. ಸಿ.ಎನ್. ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ) ಮತ್ತು ಶ್ರೇಯಸ್ ಎಂ. ಪಟೇಲ್ (ಹಾಸನ) ಅವರು ಶೇ 90ಕ್ಕಿಂತ ಹೆಚ್ಚು ಹಾಜರಾತಿ ದಾಖಲಿಸಿ ಕರ್ನಾಟಕದ ಅತ್ಯುತ್ತಮ ಹಾಜರಾತಿ ಹೊಂದಿರುವ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ರಮೇಶ್ ಜಿಗಜಿಣಗಿ (ವಿಜಯಪುರ) ಮತ್ತು ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು) ತಲಾ ಶೇ 87 ಹಾಜರಾತಿ ದಾಖಲಿಸಿದ್ದಾರೆ.

ಪಿ.ಸಿ. ಮೋಹನ್ (ಬೆಂಗಳೂರು ಕೇಂದ್ರ) ಹಾಗೂ ಮಲ್ಲೇಶ್ ಬಾಬು (ಕೋಲಾರ) ಶೇ 83.8 ಹಾಜರಾತಿ ದಾಖಲಿಸಿದ್ದು, ಜಗದೀಶ್ ಶೆಟ್ಟರ್ (ಬೆಳಗಾವಿ) ಮತ್ತು ಕುಮಾರ್ ನಾಯಕ್ (ರಾಯಚೂರು) ಶೇ 80.6 ಹಾಜರಾತಿಯೊಂದಿಗೆ ಮುಂದಿದ್ದಾರೆ.

ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ (ಮೈಸೂರು-ಕೊಡಗು) ಮತ್ತು ಸಾಗರ್ ಖಂಡ್ರೆ (ಬೀದರ್) ಶೇ 74 ಹಾಜರಾತಿ ದಾಖಲಿಸಿದ್ದಾರೆ. ಬಸವರಾಜ ಬೊಮ್ಮಾಯಿ (ಹಾವೇರಿ) ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ (ದಾವಣಗೆರೆ) ಶೇ 67.7, ಸುನೀಲ್ ಬೋಸ್ (ಚಾಮರಾಜನಗರ) ಶೇ 64.5, ಬಿ.ವೈ. ರಾಘವೇಂದ್ರ (ಶಿವಮೊಗ್ಗ) ಮತ್ತು ಗೋವಿಂದ ಕಾರಜೋಳ (ಚಿತ್ರದುರ್ಗ) ಶೇ 61, ಇ. ತುಕಾರಾಂ (ಬಳ್ಳಾರಿ) ಹಾಗೂ ರಾಜಶೇಖರ್ ಹಿಟ್ನಾಳ್ (ಕೊಪ್ಪಳ) ಶೇ 58 ಹಾಜರಾತಿ ದಾಖಲಿಸಿದ್ದಾರೆ.

ಶೇ 90ರ ಮೇಲ್ಪಟ್ಟು ಹಾಜರಾತಿಯುಳ್ಳ ಸಂಸದರ ಸಂಖ್ಯೆ ಶೇ 50ಕ್ಕೂ ಕಡಿಮೆ!

ದೇಶವ್ಯಾಪಿ ಅಂಕಿಅಂಶಗಳ ಪ್ರಕಾರ, ಲೋಕಸಭೆಯ ಶೇ 45.76 ಸದಸ್ಯರು ಮಾತ್ರ ಶೇ 90ರಿಂದ 100ರಷ್ಟು ಹಾಜರಾತಿ ದಾಖಲಿಸಿದ್ದು, ಶೇ 75ಕ್ಕಿಂತ ಹೆಚ್ಚು ಹಾಜರಾತಿ ಹೊಂದಿರುವ ಸದಸ್ಯರ ಪ್ರಮಾಣ ಶೇ 63.98 ಆಗಿದೆ. ಮುಂಗಾರು ಅಧಿವೇಶನದಲ್ಲಿ ಪ್ರಮುಖ ಮಸೂದೆಗಳು ಮತ್ತು ಆರ್ಥಿಕ ವಿಷಯಗಳ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಸದರ ಹಾಜರಾತಿ ಮತ್ತೊಮ್ಮೆ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟೋ ಡ್ರೈವರ್ ಅಕೌಂಟ್‌ನಲ್ಲಿ 29 ಲಕ್ಷ, ಪೌರಕಾರ್ಮಿಕನ ಖಾತೆಯಲ್ಲಿ 34 ಲಕ್ಷ! ಅಮಾಯಕರ ಬ್ಯಾಂಕ್ ಖಾತೆ ಬಳಸಿ ಕೋಟ್ಯಂತರ ರೂ. ವಂಚನೆ – Kannada News | Chikkamagaluru Cyber Fraud: Poor Peoples Bank Accounts Used for Lakhs of Transactions

ಚಿಕ್ಕಮಗಳೂರು, ಜುಲೈ 18: ಬಡತನ ಹಾಗೂ ಮುಗ್ಧತೆಯನ್ನು ಬಂಡವಾಳವಾಗಿಸಿಕೊಂಡು, ಸಾಲ ಕೊಡಿಸುವ ಮತ್ತು ಮಾಸಿಕ ಹಣದ ಆಮಿಷ ಒಡ್ಡಿ ಅಮಾಯಕರ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ನಗದು ವಹಿವಾಟು ನಡೆಸಿರುವ ಭೀಕರ ಸೈಬರ್ ವಂಚನೆ ಪ್ರಕರಣವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದೇ ಒಂದು ತಿಂಗಳ ಅವಧಿಯಲ್ಲಿ ಆಟೋ ಚಾಲಕರು, ಗೃಹಿಣಿಯರು ಹಾಗೂ ಪೌರಕಾರ್ಮಿಕರ ಬ್ಯಾಂಕ್ ಖಾತೆಗಳಲ್ಲಿ ತಲಾ 25 ರಿಂದ 35 ಲಕ್ಷ ರೂಪಾಯಿಗಳಷ್ಟು ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದ್ದು, ಆರು ರಾಜ್ಯಗಳ ಸೆನ್ (CEN) ಪೊಲೀಸರಿಂದ ನೋಟೀಸ್ ಜಾರಿಯಾದ ಬಳಿಕ ಈ ವ್ಯವಸ್ಥಿತ ಜಾಲದ ಸ್ಫೋಟಕ ಸತ್ಯ ಬಯಲಾಗಿದೆ.

ಆಮಿಷದ ಬಲೆ

ನಗರದ ಶಂಕರಪುರ ಬಡಾವಣೆಯ ದಿನಗೂಲಿ ನೌಕರರು ಹಾಗೂ ಶ್ರಮಿಕ ವರ್ಗವೇ ಈ ಜಾಲದ ಪ್ರಮುಖ ಬಲಿಪಶುಗಳಾಗಿದ್ದಾರೆ. ಸ್ಥಳೀಯ ಪರಿಚಿತ ಯುವಕರಾದ ರಾಹುಲ್, ಚಿನ್ನ, ಸಂಜಯ್, ಶರತ್, ಅಸ್ಲಂ ಹಾಗೂ ಚೇತನ್ ಎಂಬುವವರು ಬಡ ಕುಟುಂಬಗಳನ್ನು ಸಂಪರ್ಕಿಸಿ, ಬ್ಯಾಂಕ್ ಖಾತೆ ತೆರೆದರೆ ಪ್ರತಿ ತಿಂಗಳು 1,000 ರೂ. ಜಮಾ ಆಗುತ್ತದೆ ಹಾಗೂ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತದೆ ಎಂದು ನಂಬಿಸಿ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು. ಖಾತೆದಾರರಿಗೆ ಮೊಬೈಲ್ ಫೋನ್ ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು, ಬ್ಯಾಂಕ್ ಖಾತೆಗೆ ತಮ್ಮದೇ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಿದ್ದರು. ಇದರ ಪರಿಣಾಮವಾಗಿ ಪಾಸ್‌ಬುಕ್, ಚೆಕ್‌ಬುಕ್ ಸೇರಿದಂತೆ ಯಾವುದೇ ಒಟಿಪಿ (OTP) ಅಥವಾ ಬ್ಯಾಂಕಿಂಗ್ ವ್ಯವಹಾರದ ಸಂದೇಶಗಳು ಮೂಲ ಖಾತೆದಾರರಿಗೆ ತಿಳಿಯದಂತೆ ಆರೋಪಿಗಳೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರು.

ಖಾತೆದಾರರು ಸಾಲ ಪ್ರಕ್ರಿಯೆ ವಿಳಂಬವಾದಾಗ ಖಾತೆ ರದ್ದುಪಡಿಸುವಂತೆ ಕೋರಿದಾಗ, ಖಾತೆ ಕ್ಯಾನ್ಸಲ್ ಆಗಿದೆ ಎಂದು ಆರೋಪಿಗಳು ಸುಳ್ಳು ಹೇಳಿ ನಂಬಿಸಿದ್ದರು. ಆದರೆ ಮೂರು ವರ್ಷಗಳ ಹಳೆಯ ಖಾತೆಗಳನ್ನು ಸಕ್ರಿಯವಾಗಿಟ್ಟುಕೊಂಡು ಇತ್ತೀಚಿನ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಸದ್ಯಕ್ಕೆ ಐವರು ಸಂತ್ರಸ್ತರು ಅಧಿಕೃತವಾಗಿ ದೂರು ನೀಡಿದ್ದರೂ, ಶಂಕರಪುರ ಒಂದರಲ್ಲೇ 48ಕ್ಕೂ ಹೆಚ್ಚು ಅಮಾಯಕರ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ವಂಚನೆಯ ಮೊತ್ತ ಕೋಟಿ ದಾಟುವ ಸಾಧ್ಯತೆಯಿದೆ ಎಂದು ಸ್ಥಳೀಯವಾಗಿ ಶಂಕಿಸಲಾಗಿದೆ.

ಕಸ್ಟಡಿಗೆ ಪ್ರಮುಖ ಆರೋಪಿಗಳು; ಸಿಬಿಐ-ಇಡಿ ತನಿಖೆಗೆ ಹೆಚ್ಚಿದ ಒತ್ತಾಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, 6 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಪ್ರಕರಣದ ತೀವ್ರತೆ ಹಾಗೂ ತನಿಖೆಯ ಅಗತ್ಯತೆಯನ್ನು ಪರಿಗಣಿಸಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯವು ಪ್ರಮುಖ ಆರೋಪಿಗಳಾದ ಅಸ್ಲಾಂ, ರಾಹುಲ್ ಮತ್ತು ಪ್ರಶಾಂತ್‌ನನ್ನು ಮೂರು ದಿನಗಳ ಕಾಲ ಸೆನ್ ಪೊಲೀಸರ ಕಸ್ಟಡಿಗೆ ನೀಡಿದೆ. ಆಟೋ ಚಾಲಕ ಆನಂದ್, ಗೃಹಿಣಿ ಅಶ್ವಿನಿ ಹಾಗೂ ಪೌರಕಾರ್ಮಿಕ ಹನುಮಂತ ಅವರ ಖಾತೆಗಳಲ್ಲಿ ಕ್ರಮವಾಗಿ 29 ಲಕ್ಷ ಮತ್ತು 34 ಲಕ್ಷ ರೂ. ವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಈ ಜಾಲವು ಕೇವಲ ಸ್ಥಳೀಯ ಮಟ್ಟದ್ದಾಗಿರದೆ ಅಂತರರಾಷ್ಟ್ರೀಯ ಆಯಾಮಗಳನ್ನು ಹೊಂದಿರುವ ಸಾಧ್ಯತೆಯಿದೆ. ಬಂಧಿತರು ಕೇವಲ ಪಾತ್ರಧಾರಿಗಳಾಗಿದ್ದು, ಇವರ ಹಿಂದೆ ದೊಡ್ಡ ಸೂತ್ರಧಾರಿಗಳು ಇರುವ ಶಂಕೆಯಿರುವುದರಿಂದ ಪ್ರಕರಣವನ್ನು ಸಿಬಿಐ (CBI) ಅಥವಾ ಜಾರಿ ನಿರ್ದೇಶನಾಲಯಕ್ಕೆ (ED) ವಹಿಸಬೇಕು ಎಂದು ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಸದ್ಯಕ್ಕೆ ಯಾವುದೇ ಹಣ ಕಾಣದ ಬಡ ಕೂಲಿ ಕಾರ್ಮಿಕರು ಪೊಲೀಸ್ ಠಾಣೆ ಅಲೆಯುವಂತಾಗಿದ್ದು, ಸೆನ್ ಪೊಲೀಸರ ತನಿಖೆಯಿಂದ ಈ ದುಬೈ ಲಿಂಕ್ ಅಥವಾ ಸ್ಥಳೀಯ ಹವಾಲಾ ಜಾಲದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026: ಸೌದಿಯಲ್ಲಿ ಮಿಂಚಿದ ದಕ್ಷಿಣ ಕನ್ನಡದ ಪ್ರತಿಭೆ; ವಿದೇಶಿ ಕೆಟಗರಿಯಲ್ಲಿ ಅಯಾನ್ ಯೂಸುಫ್ ಟಾಪರ್ – Kannada News | Vitlas Ayaan Yusuf Kolnad Brings Pride to Indian Community in Saudi Arabia with Stellar NEET 2026 Result

ಅಕ್ಷತಾ ವರ್ಕಾಡಿ
|

Updated on:Jul 18, 2026 | 9:16 AM


ನೀಟ್ 2026 ಪರೀಕ್ಷೆಯ ವಿದೇಶಿ ವಿಭಾಗದಲ್ಲಿ ದಕ್ಷಿಣ ಕನ್ನಡದ ವಿಟ್ಲ ಮೂಲದ ಮೊಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡ್ ಶೇ 99.92ರಷ್ಟು ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಸೌದಿ ಅರೇಬಿಯಾದ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ಅಲ್-ಜುಬೈಲ್ ವಿದ್ಯಾರ್ಥಿಯಾಗಿರುವ ಅಯಾನ್, ತಮ್ಮ ಸಾಧನೆಯ ಮೂಲಕ ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಈ ಮಹತ್ತರ ಸಾಧನೆಗಾಗಿ ಶಾಲೆ ಮತ್ತು ಕುಟುಂಬದವರು ಸಂಭ್ರಮಿಸಿದ್ದಾರೆ.

Published on: Jul 18, 2026 09:15 AM

Source link

ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ! – Kannada News | Ex India U19 Star, Jaffna Kings Co Owner Manjot Kalra Arrested For LPL Fixing

ಲಂಕಾ ಪ್ರೀಮಿಯರ್ ಲೀಗ್​ ಆರಂಭದ ಬೆನ್ನಲ್ಲೇ ಆಘಾತವೊಂದು ಎದುರಾಗಿದೆ. ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕರಾದ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ನಿರೋಧಕ ತನಿಖಾ ದಳದ ಪೊಲೀಸರು ಕೊಲಂಬೋದಲ್ಲಿ ಬಂಧಿಸಿದ್ದಾರೆ. ಮಂಜೋತ್ ಕಲ್ರಾ ಭಾರತ ಅಂಡರ್-19 ತಂಡದ ಮಾಜಿ ಆಟಗಾರ ಎಂಬುದು ಇಲ್ಲಿ ಉಲ್ಲೇಖಾರ್ಹ.

ಮಂಜೋತ್ ಕಲ್ರಾ ಮತ್ತು ಉದ್ಯಮಿ ಮಯಾಂಕ್ ಗೋಯಲ್ ನೇತೃತ್ವದ ‘ಸ್ಪೋರ್ಟ್ಸ್ ಕಮ್ಯೂನ್’ ಸಂಸ್ಥೆಯು ಮೇ 2026 ರಲ್ಲಿ ‘ಜಾಫ್ನಾ ಕಿಂಗ್ಸ್’ ತಂಡದ ಹೊಸ ಮಾಲೀಕತ್ವವನ್ನು ಖರೀದಿಸಿತ್ತು. ಇದೀಗ ಆಟಗಾರರೊಬ್ಬರೊಂದಿಗೆ ಮ್ಯಾಚ್​ ಫಿಕ್ಸಿಂಗ್​ ಯತ್ನಿಸಿದ ಗಂಭೀರ ಆರೋಪ ಮೇಲೆ ಮಂಜೋತ್ ಕಲ್ರಾ ಅವರನ್ನು ಬಂಧಿಸಲಾಗಿದೆ.

ಯಾರು ಈ ಮಂಜೋತ್ ಕಲ್ರಾ?

ಮಂಜೋತ್ ಕಲ್ರಾ 2018ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ ಟೀಮ್ ಇಂಡಿಯಾಗೆ ಕಪ್ ತಂದುಕೊಟ್ಟಿದ್ದ ಆರಂಭಿಕ ಬ್ಯಾಟರ್.  ಅಲ್ಲದೆ ಪ್ರಸ್ತುತ ಭಾರತ ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ ಅಂಡರ್-19 ತಂಡದಲ್ಲಿ ಮಂಜೋತ್ ಕಲ್ರಾ ಜೊತೆಯಾಗಿ ಆಡಿದ್ದರು.

ಇತ್ತೀಚೆಗೆ ಕ್ರೀಡಾ ಉದ್ಯಮಿಯಾಗಿ ಬದಲಾಗಿದ್ದ ಕಲ್ರಾ, ಎಲ್‌ಪಿಎಲ್‌ನ ‘ಜಾಫ್ನಾ ಕಿಂಗ್ಸ್’ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದರು. ಇದೀಗ ಮಾಲೀಕನಾಗಿಯೇ ಪಂದ್ಯದ ಫಲಿತಾಂಶ ಬದಲಾಯಿಸಲು ಸ್ವಂತ ತಂಡದ ಆಟಗಾರರಿಗೇ ಲಕ್ಷಾಂತರ ರೂಪಾಯಿ ಲಂಚ ನೀಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಕೊಲಂಬೋದ ಪಂಚತಾರಾ ಹೋಟೆಲ್‌ ಒಂದರಲ್ಲಿ ತಂಗಿದ್ದ ಮಂಜೋತ್ ಕಲ್ರಾ ಅವರನ್ನು ಕ್ರೀಡಾ ಅಪರಾಧ ತಡೆ ವಿಶೇಷ ತನಿಖಾ ಘಟಕದ (SIU) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂದ್ಯದ ಫಲಿತಾಂಶ ಬದಲಾಯಿಸಲು ಆಟಗಾರನಿಗೆ ನೀಡಲು ಇಟ್ಟುಕೊಂಡಿದ್ದ ಸುಮಾರು 9.5 ಮಿಲಿಯನ್ ಶ್ರೀಲಂಕಾ ರೂಪಾಯಿ (ಅಂದಾಜು ₹24 ಲಕ್ಷ ಭಾರತೀಯ ರೂಪಾಯಿ) ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಕಲ್ರಾ ಜೊತೆಗೆ ಯುವರಾಜ್ ಪುಷ್ಪಾ ಎಂಬ ಮತ್ತೊಬ್ಬ ಭಾರತೀಯ ಪ್ರಜೆಯನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಹಗರಣ ಬಯಲಿಗೆಳೆದ ಲಂಕಾ ಆಟಗಾರರು:

ಜಾಫ್ನಾ ಕಿಂಗ್ಸ್ ತಂಡದ ಪ್ರಮುಖ ಶ್ರೀಲಂಕಾ ಆಟಗಾರರಾದ ಭಾನುಕ ರಾಜಪಕ್ಷ, ಅವಿಷ್ಕ ಫೆರ್ನಾಂಡೋ ಮತ್ತು ದುನಿತ್ ವೆಲ್ಲಾಲಗೆ ಅವರಿಗೆ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ಗಾಗಿ ಆಮಿಷ ಒಡ್ಡಿದ್ದರು. ಆದರೆ, ಈ ಆಟಗಾರರು ತಕ್ಷಣವೇ ಜಾಗೃತರಾಗಿ ಭ್ರಷ್ಟಾಚಾರ ನಿರೋಧಕ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಈ ದೊಡ್ಡ ಜಾಲ ಬಯಲಾಗಿದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್ ನ್ಯೂಸ್: ಕೋಚ್ ಆಫರ್ ತಿರಸ್ಕರಿಸಿದ ಆ್ಯಂಡಿ ಫ್ಲವರ್!

ಕೋರ್ಟ್ ವಶಕ್ಕೆ ಆರೋಪಿಗಳು:

ಬಂಧಿತ ಮಂಜೋತ್ ಕಲ್ರಾ ಮತ್ತು ಯುವರಾಜ್‌ನನ್ನು ಶ್ರೀಲಂಕಾದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಜುಲೈ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ  ಹೊಂದುವುದಾಗಿ ತಿಳಿಸಿದೆ. ಈ ಕಪ್ಪುಚುಕ್ಕೆಯ ನಡುವೆಯೂ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ಎಂದಿನಂತೆ ಮುಂದುವರಿಯಲಿವೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

Source link

ಯಾವುದೇ ಕ್ರ್ಯಾಶ್ ಡಯಟ್ ಇಲ್ಲದೆ 35 ಕೆಜಿ ತೂಕ ಇಳಿಸಿಕೊಂಡ ಭೂಮಿ ಪೆಡ್ನೇಕರ್ – Kannada News | Bhumi Pednekar Fitness Journey: How the Birthday Girl Shed 35 Kgs Without Any Crash Diet

ಬಾಲಿವುಡ್‌ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಇಂದು (ಜುಲೈ 18) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆ ಹಾಗೂ ಅದ್ಭುತ ಬಾಡಿ ಟ್ರಾನ್ಸ್‌ಫರ್ಮೇಷನ್ ಮೂಲಕ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನ ಕಠಿಣ ಸೌಂದರ್ಯದ ಮಾನದಂಡಗಳ ನಡುವೆಯೂ ಭೂಮಿ ತಮ್ಮ ಫಿಟ್‌ನೆಸ್ ಜರ್ನಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರು ಎಂದಿಗೂ ಯಾವುದೇ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳದೆ ತಮಗೆ ಸೂಕ್ತವಾದ ಆರೋಗ್ಯಕರ ಹಾದಿಯನ್ನು ಆರಿಸಿಕೊಂಡಿದ್ದಾರೆ.

ತೂಕ ಹೆಚ್ಚಳದಿಂದ ತೂಕ ಇಳಿಕೆಯವರೆಗಿನ ಜರ್ನಿ

ಭೂಮಿ ಪೆಡ್ನೇಕರ್ ತಮ್ಮ ಚೊಚ್ಚಲ ಸಿನಿಮಾ ‘ದಮ್ ಲಗಾ ಕೆ ಹೈಶಾ’ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ಅವರು ಬರೋಬ್ಬರಿ 30 ಕೆಜಿಗಿಂತ ಹೆಚ್ಚು ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದು ಬಾಲಿವುಡ್‌ನ ಸಾಂಪ್ರದಾಯಿಕ ನಾಯಕಿಯರ ಇಮೇಜನ್ನು ಬದಿಗೆ ಸರಿಸಿತ್ತು. ಆ ನಂತರ ಅವರು ಯಾವುದೇ ಕ್ರ್ಯಾಶ್ ಡಯಟ್ ಅಥವಾ ಕಠಿಣ ವರ್ಕೌಟ್ ಇಲ್ಲದೆ 35 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡರು. ಕೇವಲ ಸಮತೋಲಿತ ದಿನಚರಿ ಮತ್ತು ಸ್ವಯಂ ಕಾಳಜಿಯ ಮೂಲಕ ಅವರು ಈ ಸಾಧನೆ ಮಾಡಿದರು.

ಸರಳ ಮತ್ತು ಆರೋಗ್ಯಕರ ಬೆಳಗಿನ ದಿನಚರಿ

ಭೂಮಿ ಪೆಡ್ನೇಕರ್ ಅವರ ಫಿಟ್‌ನೆಸ್ ದಿನಚರಿ ಅತ್ಯಂತ ಸರಳವಾಗಿದೆ. ಅವರ ಬೆಳಗಿನ ದಿನಚರಿಯು ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಒಳಗೊಂಡ ಪೌಷ್ಟಿಕಾಂಶದ ಉಪಹಾರದೊಂದಿಗೆ ಪ್ರಾರಂಭವಾಗುತ್ತದೆ. ಇದು ಅವರಿಗೆ ದಿನವಿಡೀ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಇದರ ನಂತರ ಅವರು ರನ್ನಿಂಗ್ ಮಾಡುತ್ತಾರೆ. ಇದು ಅವರ ಮೂಡ್ ಸುಧಾರಿಸಲು ಹಾಗೂ ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ರನ್ನಿಂಗ್ ಅವರ ಹೃದಯ ಮತ್ತು ಮೂಳೆಗಳ ಆರೋಗ್ಯಕ್ಕೂ ಉತ್ತಮವಾಗಿದೆ.

ಫಿಟ್‌ನೆಸ್ ಒಂದು ಜೀವನಶೈಲಿ

ಫಿಟ್‌ನೆಸ್ ಈಗ ಭೂಮಿ ಅವರ ಜೀವನದ ಒಂದು ನಿಯಮಿತ ಭಾಗವಾಗಿದೆ. ಅವರು ದಿನಾಲೂ ಪೈಲೇಟ್ಸ್, ರನ್ನಿಂಗ್ ಮತ್ತು ವೇಟ್ ಟ್ರೈನಿಂಗ್‌ನಂತಹ ವಿಭಿನ್ನ ವರ್ಕೌಟ್‌ಗಳನ್ನು ಮಾಡುತ್ತಾರೆ. ಅವರು ಪ್ರತಿದಿನ ಸುಮಾರು ಒಂದು ಗಂಟೆ ಕಾಲ ವ್ಯಾಯಾಮಕ್ಕಾಗಿ ಸಮಯ ಮೀಸಲಿಡುತ್ತಾರೆ. ಇದರೊಂದಿಗೆ ಪ್ರತಿದಿನ 7,000 ರಿಂದ 8,000 ಹೆಜ್ಜೆಗಳನ್ನು ನಡೆಯುತ್ತಾರೆ.

ಮಾನಸಿಕ ಶಕ್ತಿ ಮತ್ತು ಯಶಸ್ಸಿನ ಹಾದಿ

ಭೂಮಿ ತಮ್ಮ ಮೊದಲ ಸಿನಿಮಾದಲ್ಲಿ ತೂಕ ಹೆಚ್ಚಿಸಿಕೊಂಡಾಗಲೂ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದ್ದರು. ಅವರು ಯಾವುದೇ ಟೀಕೆಗಳನ್ನು ಎದುರಿಸಲಿಲ್ಲ. ಪ್ರೇಕ್ಷಕರ ಈ ಬೆಂಬಲ ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿತು. ಆನಂತರ ಅವರು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಶುಭ್ ಮಂಗಲ್ ಸಾವಧಾನ್’ ಮತ್ತು ‘ಬಾಲಾ’ ನಂತಹ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಪ್ರತಿಯೊಬ್ಬರ ದೇಹದ ಪ್ರಕೃತಿ, ಮೆಟಾಬಾಲಿಸಂ ಮತ್ತು ಆರೋಗ್ಯದ ಸ್ಥಿತಿಗಳು ವಿಭಿನ್ನವಾಗಿರುತ್ತವೆ. ನಟಿ ಭೂಮಿ ಪೆಡ್ನೇಕರ್ ಅವರಿಗೆ ಸೂಕ್ತವಾದ ಡಯಟ್ ಪ್ಲಾನ್ ನಿಮಗೂ ಅನ್ವಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದರೆ, ಯಾವುದೇ ಸೆಲೆಬ್ರಿಟಿಗಳ ಡಯಟ್ ಅನ್ನು ಕುರುಡಾಗಿ ಅನುಸರಿಸಬೇಡಿ. ಯಾವುದೇ ಹೊಸ ಡಯಟ್ ಅಥವಾ ತೀವ್ರವಾದ ವ್ಯಾಯಾಮವನ್ನು ಪ್ರಾರಂಭಿಸುವ ಮುನ್ನ ಅರ್ಹ ಪೌಷ್ಟಿಕತಜ್ಞರು ಅಥವಾ ವೈದ್ಯರ ಸಲಹೆಯನ್ನು ಪಡೆಯುವುದು ಕಡ್ಡಾಯ ಮತ್ತು ಅತ್ಯಂತ ಸುರಕ್ಷಿತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Traditional Reasons: ಪೂಜೆಯಲ್ಲಿ ದೇವರಿಗೆ ಬಳಸುವ ಹೂವುಗಳನ್ನು ಏಕೆ ನೀರಿನಿಂದ ತೊಳೆಯಬಾರದು? – Kannada News | Why Not Wash Flowers for Pooja? Hindu Tradition, Science and Spirituality Explained

ಪೂಜೆಯಲ್ಲಿ ಹೂವುಗಳ ಮಹತ್ವImage Credit source: instagram

ಹಿಂದೂ ಸಂಪ್ರದಾಯದಲ್ಲಿ ಪೂಜೆ ಮತ್ತು ಆಚರಣೆಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಯಾವುದೇ ಪೂಜಾ ವಿಧಿವಿಧಾನಗಳಿರಲಿ, ಅಲ್ಲಿ ಶುದ್ಧತೆಗೆ ಮೊದಲ ಆದ್ಯತೆ. ದೇವರಿಗೆ ಸಮರ್ಪಿಸುವ ಹಣ್ಣು-ಹಂಪಲುಗಳು, ಎಲೆಗಳು ಮತ್ತು ಬಳಸುವ ಪಾತ್ರೆಗಳನ್ನು ನೀರಿನಿಂದ ತೊಳೆದು ಶುದ್ಧೀಕರಿಸುವುದು ವಾಡಿಕೆ. ಆದರೆ, ಪೂಜೆಯಲ್ಲಿ ಪ್ರಮುಖವಾಗಿ ಬಳಸಲಾಗುವ ಹೂವುಗಳ ವಿಷಯಕ್ಕೆ ಬಂದಾಗ ಒಂದು ವಿಶೇಷ ನಿಯಮವಿದೆ. ಹೂವುಗಳನ್ನು ಸಾಮಾನ್ಯವಾಗಿ ನೀರಿನಿಂದ ತೊಳೆಯದೆ, ಗಿಡದಿಂದ ಕೊಯ್ದ ಹಾಗೆಯೇ ನೇರವಾಗಿ ದೇವರಿಗೆ ಅರ್ಪಿಸಲಾಗುತ್ತದೆ. ಇದು ಕೇವಲ ಮೂಢನಂಬಿಕೆಯಲ್ಲ; ಇದರ ಹಿಂದೆ ನೈಸರ್ಗಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ದೇವರಿಗೆ ಹೂವುಗಳನ್ನೇ ಏಕೆ ಅರ್ಪಿಸಬೇಕು?

ಪ್ರಾಚೀನ ಕಾಲದಿಂದಲೂ ಪ್ರಕೃತಿ ಆರಾಧನೆಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಕೃತಿಯ ಅತ್ಯಂತ ಸುಂದರ ಸೃಷ್ಟಿಯಾದ ಹೂವುಗಳು ಶುದ್ಧತೆ, ನಮ್ರತೆ, ಪ್ರೀತಿ ಮತ್ತು ಭಕ್ತಿಯ ಸಂಕೇತಗಳಾಗಿವೆ. ಭಕ್ತನು ತನ್ನಲ್ಲಿರುವ ಅಹಂಕಾರವನ್ನು ತೊರೆದು, ಹೂವಿನಂತೆ ಮೃದುವಾಗಿ ದೇವರಿಗೆ ಶರಣಾಗುವುದನ್ನು ಇದು ಸೂಚಿಸುತ್ತದೆ. ಹೂವುಗಳ ನೈಸರ್ಗಿಕ ಪರಿಮಳವು ಪೂಜಾ ಕೊಠಡಿಯಲ್ಲಿ ಸಕಾರಾತ್ಮಕ ಶಕ್ತಿ (Positive Energy) ಮತ್ತು ಪ್ರಶಾಂತ ವಾತಾವರಣವನ್ನು ನಿರ್ಮಿಸುತ್ತದೆ. ಇದೇ ಕಾರಣಕ್ಕೆ ಧರ್ಮಗ್ರಂಥಗಳು ಯಾವಾಗಲೂ ಹೊಸದಾಗಿ ಅರಳಿದ, ತಾಜಾ ಹೂವುಗಳನ್ನೇ ಪೂಜೆಗೆ ಬಳಸಬೇಕೆಂದು ಒತ್ತಿ ಹೇಳುತ್ತವೆ.

ಹೂವುಗಳನ್ನು ನೀರಿನಿಂದ ಏಕೆ ತೊಳೆಯಬಾರದು?

ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯದಿರಲು ಪ್ರಮುಖ ನೈಸರ್ಗಿಕ ಕಾರಣಗಳಿವೆ. ಹೂವುಗಳ ನಿಜವಾದ ಸೌಂದರ್ಯವೇ ಅವುಗಳ ಸುಗಂಧ. ನೀರಿನಿಂದ ತೊಳೆದಾಗ ದಳಗಳ ಮೇಲಿರುವ ಸುವಾಸನೆಯ ತೈಲಗಳು ಮತ್ತು ಪರಿಮಳವು ಮಸುಕಾಗಬಹುದು. ಇದಲ್ಲದೇ ಹೂವಿನ ಕೇಂದ್ರದಲ್ಲಿರುವ ಪರಾಗ (Pollen) ಮತ್ತು ನೈಸರ್ಗಿಕ ಮಕರಂದವನ್ನು ಅತ್ಯಂತ ಪವಿತ್ರ ಹಾಗೂ ಜೀವಂತ ಶಕ್ತಿ ಎಂದು ಪರಿಗಣಿಸಲಾಗುತ್ತದೆ. ನೀರು ತಗುಲಿದಾಗ ಈ ಪರಾಗಗಳು ತೊಳೆದು ಹೋಗಿ ಹೂವು ತನ್ನ ದೈವಿಕ ಗುಣವನ್ನು ಕಳೆದುಕೊಳ್ಳುತ್ತದೆ.

ತಾಜಾತನ ಮತ್ತು ಮೃದುತ್ವಕ್ಕೆ ಹಾನಿ:

ಹೂವಿನ ದಳಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ನೀರು ತಗುಲಿದ ತಕ್ಷಣ ಕೆಲವು ಹೂವುಗಳು ಮೃದುತ್ವ ಕಳೆದುಕೊಂಡು ಬೇಗನೆ ಬಾಡುತ್ತವೆ ಅಥವಾ ಅವುಗಳ ದಳಗಳು ಉದುರಿಹೋಗುತ್ತವೆ. ಪ್ರಕೃತಿಯು ನೀಡಿದ ವಸ್ತುವನ್ನು ಅದು ಹೇಗೆ ಇದೆಯೋ, ಅದೇ ನೈಸರ್ಗಿಕ ರೂಪದಲ್ಲಿ ಅಂದರೆ ತೊಳೆಯದೇ ದೇವರಿಗೆ ಸಮರ್ಪಿಸುವುದು ಶ್ರೇಷ್ಠ ಎಂಬುದು ಸನಾತನ ಧರ್ಮದ ನಂಬಿಕೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಹೂವುಗಳು ಕೊಳಕಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ಹೂವುಗಳ ಮೇಲೆ ಧೂಳು, ಮಣ್ಣು ಅಥವಾ ಸಣ್ಣಪುಟ್ಟ ಕೀಟಗಳಿದ್ದರೆ, ಅವುಗಳನ್ನು ನೀರಿನಲ್ಲಿ ಹಾಕಿ ತೊಳೆಯುವ ಬದಲು ಮೃದುವಾದ ಒಣ ಬಟ್ಟೆಯಿಂದ ಅಥವಾ ಹಸ್ತದಿಂದ ಹಗುರವಾಗಿ ಸವರಿ ಸ್ವಚ್ಛಗೊಳಿಸಬೇಕು. ಪೂಜೆಗೆ ಸದಾ ಸ್ವಚ್ಛವಾದ ಪರಿಸರದಿಂದ ತಂದ, ಹೊಸದಾಗಿ ಅರಳಿದ ಹೂವುಗಳನ್ನು ಬಳಸುವುದು ಅತ್ಯಂತ ಮಂಗಳಕರ.

ದೇವರಿಗೆ ಹೂವುಗಳನ್ನು ತೊಳೆಯದೆ ಅರ್ಪಿಸುವ ಸಂಪ್ರದಾಯವು ಪ್ರಕೃತಿಯನ್ನು ಅದರ ಸಹಜ ಸ್ಥಿತಿಯಲ್ಲಿ ಗೌರವಿಸುವ ಒಂದು ಅದ್ಭುತ ಆಚರಣೆಯಾಗಿದೆ. ಹೂವಿನ ತಾಜಾತನ, ಪರಿಮಳ ಮತ್ತು ನೈಸರ್ಗಿಕತೆಯೇ ಅದರ ನಿಜವಾದ ಪವಿತ್ರತೆ. ಈ ಹಿನ್ನೆಲೆಯಲ್ಲಿ, ಪ್ರಕೃತಿ ಮತ್ತು ದೈವಿಕತೆಯ ನಡುವಿನ ಅವಿನಾಭಾವ ಸಂಬಂಧವನ್ನು ಎತ್ತಿಹಿಡಿಯುವ ಸುಂದರ ಕಲ್ಪನೆ ಇದಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಫ್ಯಾನ್ಸ್​ಗೆ ಗುಡ್ ನ್ಯೂಸ್: ಕೋಚ್ ಆಫರ್ ತಿರಸ್ಕರಿಸಿದ ಆ್ಯಂಡಿ ಫ್ಲವರ್! – Kannada News | Big Boost for RCB: Andy Flower Says ‘No’ to England

ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಆ ಹುದ್ದೆಯನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಬ್ರೆಂಡನ್ ಮೆಕಲಮ್ ಅವರ ವಜಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಫ್ಲವರ್ ಅವರನ್ನೇ ತನ್ನ ಮೊದಲ ಆಯ್ಕೆಯನ್ನಾಗಿ ಮಾಡಿಕೊಂಡಿತ್ತು. ಆದರೆ, ಆ್ಯಂಡಿ ಫ್ಲವರ್ ತಾವು ಆರ್‌ಸಿಬಿ ಮತ್ತು ಲಂಡನ್ ಸ್ಪಿರಿಟ್ ತಂಡಗಳ ಜವಾಬ್ದಾರಿಯಲ್ಲೇ ಸಂತೋಷವಾಗಿದ್ದೇನೆ. ಹೀಗಾಗಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗುತ್ತಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹುದ್ದೆ ನಿರಾಕರಿಸಲು ಮುಖ್ಯ ಕಾರಣವೇನು?

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆ್ಯಂಡಿ ಫ್ಲವರ್, ತಾವು ಈ ನಿರ್ಧಾರಕ್ಕೆ ಬರಲು ಇರುವ ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​  ಒಂದೇ ಸಮಯದಲ್ಲಿ ಇಂಗ್ಲೆಂಡ್ ತಂಡ ಹಾಗೂ ಐಪಿಎಲ್ ಫ್ರಾಂಚೈಸಿ ಎರಡನ್ನೂ ನಿಭಾಯಿಸುವ  ಮುಕ್ತ ಆಫರ್ ನೀಡಿತ್ತು. ಆದರೆ, ಐಪಿಎಲ್ ನಡೆಯುವ ತಿಂಗಳುಗಳು ಇಂಗ್ಲೆಂಡ್‌ನ ತವರಿನ ಕ್ರಿಕೆಟ್ ಸೀಸನ್‌ನ ಆರಂಭಿಕ ಹಂತದೊಂದಿಗೆ ನೇರವಾಗಿ ಸಂಘರ್ಷಕ್ಕೊಳಗಾಗುತ್ತವೆ.

“ನಾನು ಇಂಗ್ಲೆಂಡ್ ಕೋಚ್ ಆಗಿದ್ದರೆ ಇಲ್ಲೇ ಇದ್ದು ಆಟಗಾರರನ್ನು ಗಮನಿಸಬೇಕು, ಅದು ಸಾಧ್ಯವಾಗದ ಕಾರಣ ಈ ಆಫರ್ ಬೇಡವೆಂದೆ” ಎಂದು ಫ್ಲವರ್ ತಿಳಿಸಿದ್ದಾರೆ.

ಈ ಬಗ್ಗೆ ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ ಅವರೊಂದಿಗೆ ನಾನು ಮಾತುಕತೆ ನಡೆಸಿರುವುದು ನಿಜ. ಆದರೆ ಪ್ರಸ್ತುತ ನಾನು ಕೆಲಸ ಮಾಡುತ್ತಿರುವ ಸಂಸ್ಥೆಗಳು, ಅಲ್ಲಿನ ಸುತ್ತಮುತ್ತಲಿನ ಜನರು ಮತ್ತು ಆಟಗಾರರೊಂದಿಗೆ ನಾನು ತುಂಬಾ ಕಂಫರ್ಟಬಲ್ ಆಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಸಿಬಿ ಪಾಲಿಗೆ ಫ್ಲವರ್ ಅನಿವಾರ್ಯ ಏಕೆ?

ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಯಶಸ್ಸಿನ ಹಿಂದಿನ ದಿಕ್ಸೂಚಿಯಾಗಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ ಲೋಕದ ಅತ್ಯಂತ ಯಶಸ್ವಿ ತಂತ್ರಜ್ಞರಾಗಿರುವ ಫ್ಲವರ್, ಆರ್‌ಸಿಬಿ ತಂಡದಲ್ಲಿ ಹೊಸ ಗೆಲುವಿನ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ.

2025 ಮತ್ತು 2026ರ ಸೀಸನ್‌ಗಳಲ್ಲಿ ಆರ್‌ಸಿಬಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಹೆಗ್ಗಳಿಕೆಯೂ ಇವರಿಗಿದೆ. ಮುಂಬರುವ ಐಪಿಎಲ್ ಸೀಸನ್‌ನ ಮಿನಿ ಹರಾಜು ಹಾಗೂ ತಂಡದ ಪುನರ್ನಿರ್ಮಾಣದ ದೃಷ್ಟಿಯಿಂದ ಫ್ಲವರ್ ಆರ್‌ಸಿಬಿಯಲ್ಲೇ ಉಳಿದಿರುವುದು ತಂಡಕ್ಕೆ ಆನೆಬಲ ತಂದಿದೆ.

ಇಂಗ್ಲೆಂಡ್ ತಂಡಕ್ಕೆ ಮುಂದಿನ ದಾರಿಯೇನು?

ಆ್ಯಂಡಿ ಫ್ಲವರ್ ಅವರ ಈ ‘ನೋ’ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ದೊಡ್ಡ ಹಿನ್ನಡೆಯಾಗಿದೆ. ಮುಂಬರುವ ಆಗಸ್ಟ್ 19 ರಿಂದ ಪಾಕಿಸ್ತಾನ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್ ಹುಡುಕಬೇಕಾದ ಅನಿವಾರ್ಯತೆ ಇಸಿಬಿಗೆ ಎದುರಾಗಿದೆ.

ಇದನ್ನೂ ಓದಿ: ಗಾಂಜಾ ಕಿಕ್… ಪಾಕಿಸ್ತಾನ್ ಆಟಗಾರನಿಗೆ ಐಸಿಸಿ ನಿಷೇಧ!

ಸದ್ಯಕ್ಕೆ ಇಂಗ್ಲೆಂಡ್ ಕೋಚ್ ರೇಸ್‌ನಲ್ಲಿ ರಾಹುಲ್ ದ್ರಾವಿಡ್, ಜೋನಾಥನ್ ಟ್ರಾಟ್, ರಿಚರ್ಡ್ ಡಾಸನ್, ಸ್ಟೀಫನ್ ಫ್ಲೆಮಿಂಗ್ ಮತ್ತು ಟಾಮ್ ಮೂಡಿ ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

ಗಾಂಜಾ ಕಿಕ್… ಪಾಕಿಸ್ತಾನ್ ಆಟಗಾರನಿಗೆ ಐಸಿಸಿ ನಿಷೇಧ! – Kannada News | Pakistan All Rounder Mohammad Nawaz Gets 3 Month ICC Ban in Dope Case

ಪಾಕಿಸ್ತಾನ್ ಕ್ರಿಕೆಟ್ ತಂಡದ ಅನುಭವಿ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಮೊಹಮ್ಮದ್ ನವಾಝ್ ಅವರು ಐಸಿಸಿ (ICC) ಆ್ಯಂಟಿ-ಡೋಪಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂರು ತಿಂಗಳ ಅವಧಿಗೆ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದಾರೆ. ಆದರೆ, ಅವರು ಈಗಾಗಲೇ ಸ್ವಯಂಪ್ರೇರಿತ ಅಮಾನತು ಅವಧಿಯನ್ನು ಪೂರೈಸಿರುವುದರಿಂದ ತಕ್ಷಣವೇ ಕ್ರಿಕೆಟ್ ಮೈದಾನಕ್ಕೆ ಮರಳಲು ಅರ್ಹರಾಗಿದ್ದಾರೆ.

ನಿಷೇಧಕ್ಕೆ ಕಾರಣವೇನು?

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಬಳಿಕ ಮೊಹಮ್ಮದ್ ನವಾಝ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ಅಂಶ ಪತ್ತೆಯಾಗಿದೆ. ಇದು ಗಾಂಜಾ ಬಳಕೆಯಿಂದ ಉತ್ಪತ್ತಿಯಾಗುವ ರಾಸಾಯನಿಕವಾಗಿದೆ.

ಐಸಿಸಿ ನಿಯಮಗಳ ಪ್ರಕಾರ, ಇದನ್ನು ಕ್ರೀಡಾ ಪ್ರದರ್ಶನವನ್ನು ಹೆಚ್ಚಿಸುವ ಉದ್ದೇಶದ ಔಷಧಿಯ ಬದಲಿಗೆ, ‘ದುರ್ಬಳಕೆಯ ವಸ್ತು’ ಎಂದು ವರ್ಗೀಕರಿಸಲಾಗಿದೆ. ನವಾಝ್ ಇದನ್ನು ಪಂದ್ಯಾವಳಿಯ ಹೊರಗೆ ಮನರಂಜನೆಗಾಗಿ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ತಪ್ಪು ಒಪ್ಪಿಕೊಂಡ ನವಾಝ್:

ನವಾಝ್ ಅವರ ಮೂತ್ರದ ಮಾದರಿಯಲ್ಲಿ ಪತ್ತೆಯಾಗಿರುವ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ರಾಸಾಯನಿಕವು ದೇಹದಲ್ಲಿ ಗಾಂಜಾ ಅಂಶವಿದ್ದರೆ ಮಾತ್ರ ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಐಸಿಸಿ ವಿಚಾರಣೆ ನಡೆಸಿದಾಗ, ತಾವು ಪಂದ್ಯಾವಳಿ ಇಲ್ಲದ ಸಮಯದಲ್ಲಿ ಕೇವಲ ಮನರಂಜನೆಗಾಗಿ ಗಾಂಜಾ ಬಳಸಿದ್ದಾಗಿ ಅವರು ಸ್ವತಃ ಒಪ್ಪಿಕೊಂಡಿದ್ದಾರೆ. ಹೀಗಾಗಿ ನವಾಝ್​ಗೆ ಕೇವಲ 3 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಯ ಅವಧಿ ಕಡಿತಗೊಂಡಿದ್ದು ಹೇಗೆ?

ನವಾಝ್ ಅವರ ಮೂರು ತಿಂಗಳ ನಿಷೇಧದ ಅವಧಿಯನ್ನು ಮೇ 1, 2026 ರಿಂದಲೇ ಜಾರಿಗೆ ಬರುವಂತೆ ಪರಿಗಣಿಸಲಾಗಿತ್ತು. ಏಕೆಂದರೆ ಅಂದಿನಿಂದಲೇ ಅವರು ಸ್ವಯಂಪ್ರೇರಿತವಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಅಲ್ಲದೆ ಐಸಿಸಿ ಸೂಚಿಸಿದ ಮಾದಕ ದ್ರವ್ಯ ದುರ್ಬಳಕೆ ತಡೆ ಪುನರ್ವಸತಿ ಕಾರ್ಯಕ್ರಮದಲ್ಲಿ  ಭಾಗವಹಿಸಲು ನವಾಝ್ ಒಪ್ಪಿಕೊಂಡ ಕಾರಣ, ಅವರ ಪ್ರಮುಖ ಶಿಕ್ಷೆಯ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಕಡಿತಗೊಳಿಸಲಾಯಿತು.

ತಕ್ಷಣವೇ ಮೈದಾನಕ್ಕೆ ವಾಪಸ್:

ನವಾಝ್ ಈಗಾಗಲೇ ಮೇ ತಿಂಗಳಿನಿಂದ ಜುಲೈ ಮಧ್ಯದವರೆಗೆ ಸುಮಾರು ಎರಡುವರೆ ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ಹೊರಗುಳಿದಿರುವುದರಿಂದ, ಅವರ ಅಮಾನತನ್ನು ಐಸಿಸಿ ಅಧಿಕೃತವಾಗಿ ತೆರವುಗೊಳಿಸಿದೆ. ಅವರು ಇಂದಿನಿಂದಲೇ ಯಾವುದೇ ರೀತಿಯ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ವದಂತಿಗಳಿಗೆ ಬಿಸಿಸಿಐ ಬ್ರೇಕ್!

ದಾಖಲೆಗಳು ರದ್ದು:

ಫೆಬ್ರವರಿ 7, 2026 ರಿಂದ ಮೇ 1, 2026 ರ ನಡುವಿನ ಅವಧಿಯಲ್ಲಿ ಮೊಹಮ್ಮದ್ ನವಾಝ್ ಆಡಿರುವ ಎಲ್ಲಾ ಪಂದ್ಯಗಳ ವೈಯಕ್ತಿಕ ಪ್ರದರ್ಶನ ಮತ್ತು ದಾಖಲೆಗಳನ್ನು ಐಸಿಸಿ ಅಮಾನ್ಯಗೊಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಅವರು ಆಡಿದ 7 ಪಂದ್ಯಗಳ ದಾಖಲೆಗಳೂ ಇದರಲ್ಲಿ ಸೇರಿವೆ. ಈ ಡೋಪಿಂಗ್ ತನಿಖೆಯ ಕಾರಣದಿಂದಾಗಿ ಅವರು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ‘ಸರ್ರೆ’ ತಂಡದ ಪರವಾಗಿ ಆಡಬೇಕಿದ್ದ ಪ್ರಮುಖ ಒಪ್ಪಂದವನ್ನು ಕೂಡ ಕಳೆದುಕೊಂಡಿದ್ದಾರೆ.

Source link

ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ – Kannada News | HD Deve Gowda’s Wife Chennamma Health Critical, Under ICU Treatment at Manipal Hospital Bengaluru

ಬೆಂಗಳೂರು, ಜುಲೈ 18: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಸಿರಾಟದ ಸಮಸ್ಯೆಯಿಂದಾಗಿ ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನುರಿತ ವೈದ್ಯರ ತಂಡ ನಿರಂತರ ನಿಗಾ ವಹಿಸಿದೆ. ಚಿಕಿತ್ಸೆ ಸಂಪೂರ್ಣವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ. ತಾಯಿ ಆರೋಗ್ಯ ಗಂಭೀರವಾಗಿರುವ ಕಾರಣ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಇಂದಿನ ಎಲ್ಲಾ ಪಕ್ಷದ ಸಭೆಗಳು ಹಾಗೂ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ ತಡರವರೆಗೆ ದೇವೇಗೌಡರ ಕುಟುಂಬ ಆಸ್ಪತ್ರೆಯಲ್ಲೇ ಇದ್ದು, ಇಂದು ಬೆಳಗ್ಗೆ 10 ಗಂಟೆಯ ಬಳಿಕ ಆಸ್ಪತ್ರೆ ಆಡಳಿತದಿಂದ ಆರೋಗ್ಯ ಬುಲೆಟಿನ್ ಪ್ರಕಟವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version