Bengaluru Air Quality: ಬೆಂಗಳೂರಿಗರಿಗೆ ಶುಭ ಸುದ್ದಿ: ಇಂದಿನ ವಾಯು ಗುಣಮಟ್ಟ ಸೂಪರ್, ನಿಮ್ಮ ಏರಿಯಾದ AQI ಎಷ್ಟಿದೆ? – Kannada News | Bengaluru AQI Today: Air Quality Improves Across Karnataka Cities

ಬೆಂಗಳೂರು, ಜುಲೈ 25: ಇಂದು ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದೆ. ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಮಳೆ ಹಾಗೂ ಗಾಳಿಯ ವೇಗ ಹೆಚ್ಚಾಗಿರುವ ಪರಿಣಾಮವಾಗಿ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ (AQI) ವಿವರ

ಇಂದಿನ ವಾಯು ಗುಣಮಟ್ಟದ ದಾಖಲೆಯ ಪ್ರಕಾರ, ಬೆಂಗಳೂರಿನ ಸರಾಸರಿ AQI ಮಟ್ಟವು 45 ರಿಂದ 53ರ ಆಜುಬಾಜಿನಲ್ಲಿದೆ. ವಾಯು ಮಾಲಿನ್ಯದ ವರ್ಗೀಕರಣದ ಪ್ರಕಾರ ಇದನ್ನು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ಮಟ್ಟ ಎಂದು ಪರಿಗಣಿಸಲಾಗುತ್ತದೆ.

ನಗರದ ಬಿಟಿಎಂ ಲೇಔಟ್, ಬಸವನಗುಡಿ, ಬನಶಂಕರಿ ಹಾಗೂ ವೈಟ್‌ಫೀಲ್ಡ್ ಭಾಗಗಳಲ್ಲಿ ಪಿಎಂ 2.5 (PM 2.5) ಮತ್ತು ಪಿಎಂ 10 (PM 10) ಕಣಗಳ ಪ್ರಮಾಣ ತೀರಾ ಕಡಿಮೆಯಿದೆ. ಯಾವುದೇ ಹಾನಿಕಾರಕ ಅನಿಲಗಳ ಸಾಂದ್ರತೆ ಹೆಚ್ಚಿಲ್ಲದಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ಉಸಿರಾಟದ ತೊಂದರೆ ಇರುವವರು ಯಾವುದೇ ಭೀತಿಯಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಇತರ ಜಿಲ್ಲೆ ಹಾಗೂ ಪ್ರಮುಖ ನಗರಗಳಲ್ಲೂ ಗಾಳಿಯ ಶುದ್ಧತೆ ಉತ್ತಮ ಸ್ಥಿತಿಯಲ್ಲಿದೆ. ಬೆಳಗಾವಿಯ ಇಂದಿನ AQI ಮಟ್ಟವು ಸುಮಾರು 66ರಷ್ಟಿದ್ದು, ಸಾಧಾರಣ ವಲಯದಲ್ಲಿದೆ.

ಬಾಗಲಕೋಟೆಯ ವಾಯು ಗುಣಮಟ್ಟ ಸೂಚ್ಯಂಕ 86ರಷ್ಟಿದ್ದು, ಮಾಲಿನ್ಯ ನಿಯಂತ್ರಣದಲ್ಲಿದೆ. ಬಳ್ಳಾರಿಯಲ್ಲಿ AQI 48 ರಿಂದ 50ರಷ್ಟಿದ್ದು ‘ಉತ್ತಮ’ ವಿಭಾಗದಲ್ಲಿದ್ದರೆ, ಮೈಸೂರಿನಲ್ಲೂ ವಾಯು ಶುದ್ಧತೆ ಉತ್ತಮ ಮಟ್ಟದಲ್ಲಿದೆ.

ಮಳೆಗಾಲದ ವಾತಾವರಣ ಮುಂದುವರಿದಿರುವುದರಿಂದ ಮುಂಬರುವ ದಿನಗಳಲ್ಲೂ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಹೀಗೆಯೇ ಹಸಿರು ಮತ್ತು ಸಾಧಾರಣ ವಲಯದಲ್ಲೇ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ – Kannada News | Asian Games 2026: 18 Teams Ready for Cricket Showdown

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಮತ್ತು ಸ್ವರೂಪ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 18 ತಂಡಗಳು (10 ಪುರುಷರ ಮತ್ತು 8 ಮಹಿಳಾ ತಂಡಗಳು) ಪದಕದ ಬೇಟೆಗಾಗಿ ಅಖಾಡಕ್ಕಿಳಿಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಟೂರ್ನಿ ಕುರಿತಾದ ಸಂಪೂರ್ಣ ಮಾಹಿತಿ ಈ ಕಳಗಿನಂತಿದೆ…

10 ತಂಡಗಳ ಪುರುಷರ ಟೂರ್ನಿ:

ಪುರುಷರ ವಿಭಾಗದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಬಲಿಷ್ಠ ತಂಡಗಳನ್ನು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಸಲಾಗುತ್ತಿದೆ.

  •  ನೇರ ಕ್ವಾರ್ಟರ್ ಫೈನಲ್ ಪ್ರವೇಶ:ಏಷ್ಯಾದ ನಾಲ್ಕು ಪ್ರಮುಖ ಟಿ20 ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ.
  • ಪ್ರಾಥಮಿಕ ಸುತ್ತಿನ ಲೀಗ್: ಉಳಿದ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಲಿವೆ.

ಇದನ್ನೂ ಓದಿ: ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಟೂರ್ನಿಯ ಸ್ವರೂಪವೇನು?

ಪ್ರಾಥಮಿಕ ಸುತ್ತಿನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಲ್ಲಿ ಕಾಣಿಸಿಕೊಂಡಿರುವ ತಂಡಗಳು ಮೊದಲ ಸುತ್ತು ಆಡಲಿದೆ. ಈ ಸುತ್ತಿನ ಪಂದ್ಯಗಳ ಬಳಿಕ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಮೊದಲ ಎರಡು ತಂಡಗಳು (ಒಟ್ಟು 4 ತಂಡಗಳು) ಮುಂದಿನ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಪ್ರಾಥಮಿಕ ಹಂತ ಮುಗಿದ ಬಳಿಕ ಅಸಲಿ ಜಿದ್ದಾಜಿದ್ದಿ ಆರಂಭವಾಗಲಿದ್ದು, ಇಲ್ಲಿ ಒಟ್ಟು 8 ತಂಡಗಳು ಮುಖಾಮುಖಿಯಾಗಲಿವೆ. ಅಂದರೆ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳ ವಿರುದ್ಧ 4 ತಂಡಗಳು ಸೆಣಸಲಿದೆ.

ಇಂಡೋ-ಪಾಕ್ ಪಂದ್ಯ ಯಾವಾಗ?:

ಅಧಿಕೃತ ಡ್ರಾ ಪ್ರಕಾರ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ವೇಳಾಪಟ್ಟಿಯ ವಿರುದ್ಧ ಬದಿಗಳಲ್ಲಿ ಇರಿಸಲಾಗಿದೆ. ಹೀಗಾಗಿ, ಉಭಯ ತಂಡಗಳು ಮುಖಾಮುಖಿಯಾಗಬೇಕಾದರೆ ಕನಿಷ್ಠ ಸೆಮಿಫೈನಲ್ ಅಥವಾ ಫೈನಲ್ ಹಂತದವರೆಗೆ ಸಾಗಬೇಕಾಗುತ್ತದೆ.

ಪುರುಷರ ಟೂರ್ನಿ ಯಾವಾಗ ಶುರು?

2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ ಜಪಾನ್‌ನಲ್ಲಿ ಜರುಗಲಿದೆ.

  • ಪ್ರಾಥಮಿಕ ಲೀಗ್ ಹಂತ (ಗ್ರೂಪ್ ಪಂದ್ಯಗಳು): ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 27, 2026
  • ಕ್ವಾರ್ಟರ್ ಫೈನಲ್ ಪಂದ್ಯಗಳು: ಸೆಪ್ಟೆಂಬರ್ 28 ಮತ್ತು 29, 2026
  • ಸೆಮಿಫೈನಲ್ ಪಂದ್ಯಗಳು: ಅಕ್ಟೋಬರ್ 1, 2026
  • ಪದಕದ ಪಂದ್ಯಗಳು (ಫೈನಲ್ ಮತ್ತು ಕಂಚಿನ ಪದಕದ ಪಂದ್ಯ): ಅಕ್ಟೋಬರ್ 1, 2026

ಎಲ್ಲಾ 10 ತಂಡಗಳ ಪಂದ್ಯಗಳು ಜಪಾನ್‌ನ ಐಚಿ ಪ್ರಾಂತ್ಯದ ಕೋಗಿ ಅಥ್ಲೆಟಿಕ್ ಪಾರ್ಕ್ ಮೈದಾನದಲ್ಲಿ ಟಿ20 ಮಾದರಿಯಲ್ಲಿ ನಡೆಯಲಿವೆ.

ಹೇಗಿರಲಿದೆ ಮಹಿಳಾ ಟಿ20 ಟೂರ್ನಿ?

2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯು ನೇರ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು ಇರುವುದಿಲ್ಲ. ಟೂರ್ನಿಯಲ್ಲಿ ಒಟ್ಟು 8 ದೇಶಗಳ ಮಹಿಳಾ ತಂಡಗಳು ಭಾಗವಹಿಸುತ್ತಿದ್ದು, ಎಲ್ಲಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದಲೇ ತಮ್ಮ ಅಭಿಯಾನವನ್ನು ಆರಂಭಿಸಲಿವೆ.

ಮಹಿಳಾ ಟಿ20 ಟೂರ್ನಿಯ ವೇಳಾಪಟ್ಟಿ:

ಮಹಿಳಾ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22, 2026 ರವರೆಗೆ ನಡೆಯಲಿವೆ. ಟಿ20 ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯು ನಾಕೌಟ್ ಹಂತದಿಂದಲೇ ಶುರುವಾಗಲಿದೆ. ಈ ಟೂರ್ನಿಯ ವೇಳಾಪಟ್ಟಿ ಈ ಕೆಳಗಿನಂತಿದೆ:

ದಿನಾಂಕ  ಪಂದ್ಯದ ಹಂತ ತಂಡಗಳು ಸ್ಥಳ
ಸೆಪ್ಟೆಂಬರ್ 17 ಕ್ವಾರ್ಟರ್ ಫೈನಲ್ 1 ಭಾರತ vs ಜಪಾನ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 18 ಕ್ವಾರ್ಟರ್ ಫೈನಲ್ 2 ಬಾಂಗ್ಲಾದೇಶ್ vs ಚೀನಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 3 ಶ್ರೀಲಂಕಾ vs ಮಲೇಷ್ಯಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 4 ಪಾಕಿಸ್ತಾನ್ vs ಥೈಲ್ಯಾಂಡ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 1 QF 1 ವಿಜೇತರು vs QF 2 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 2 QF 3 ವಿಜೇತರು vs QF 4 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಕಂಚಿನ ಪದಕದ ಪಂದ್ಯ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಚಿನ್ನದ ಪದಕದ ಪಂದ್ಯ (ಫೈನಲ್) ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್

ಚೀನಾ ದೇಶದ ಹ್ಯಾಂಗ್‌ಝೌನಲ್ಲಿ ನಡೆದ ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿಯೂ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಮತ್ತು ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಭಾರತದ ಮುಡಿಗೆ ಏರಿಸುವ ಬಲವಾದ ವಿಶ್ವಾಸದಲ್ಲಿದೆ.

Source link

‘ಕರಾವಳಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಓಪನಿಂಗ್ – Kannada News | Karavali Box Office Day 1: Prajwal Devaraj, Raj B Shetty Starrer Earns 7 Lakh on Opening Day

ಭಾರೀ ಕುತೂಹಲ ಮೂಡಿಸಿದ್ದ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಸಾಕಷ್ಟು ವಿವಾದಗಳ ಬೆನ್ನಲ್ಲೇ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ. ಚಿತ್ರತಂಡಕ್ಕೆ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಆಸೆ ಇರಲಿಲ್ಲ. ಆದರೆ, ನಟ ಪ್ರಜ್ವಲ್ ಅವರ ಸಂಭಾವನೆ ವಿಷಯಕ್ಕೆ ಸಂಬಂಧಿಸಿದಂತೆ ಈ ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಸಮಸ್ಯೆಯನ್ನೇ ಎದುರಿಸಬೇಕಾಗಿ ಬಂತು. ಸದ್ಯ ಈ ಎಲ್ಲಾ ಅಡೆತಡೆಗಳನ್ನು ಮೀರಿ ರಿಲೀಸ್ ಆಗಿರುವ ಸಿನಿಮಾದ ಮೊದಲ ದಿನದ ಗಳಿಕೆಯ ವಿವರ ಹೊರಬಿದ್ದಿದೆ. ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿರುವುದರಿಂದ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿಯೇ ಇದೆ ಎನ್ನಬಹುದು.

ಸಾಸ್ನಿಲ್ಕ್​ ವರದಿ ಪ್ರಕಾರ ‘ಕರಾವಳಿ’ ಸಿನಿಮಾ ಮೊದಲ ದಿನ ದೇಶಾದ್ಯಂತ 77 ಲಕ್ಷ ರೂಪಾಯಿ ಗಳಿಕೆ ಮಾಡುವ ಮೂಲಕ ಭರವಸೆ ಮೂಡಿಸಿದೆ. ಪ್ರಮುಖ ಟಿಕೆಟ್ ಬುಕಿಂಗ್ ಆ್ಯಪ್ ಆದ ‘ಬುಕ್ ಮೈ ಶೋ’ನಲ್ಲಿ ಈ ಚಿತ್ರಕ್ಕೆ ಗರಿಷ್ಠ ಮಟ್ಟದ ರೆಸ್ಪಾನ್ಸ್ ಸಿಗುತ್ತಿರುವುದು ಕಲೆಕ್ಷನ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 14.9 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆಗಿರುವುದು ಚಿತ್ರಕ್ಕೆ ಸಿಗುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರು ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಎಲ್ಲೆಡೆ ಉತ್ತಮವಾದ ಮೌತ್ ಟಾಕ್ ಕೇಳಿಬರುತ್ತಿದೆ. ಹೀಗಾಗಿ, ವೀಕೆಂಡ್ ದಿನಗಳಾದ ಶನಿವಾರ ಮತ್ತು ಭಾನುವಾರ ಈ ಸಿನಿಮಾದ ಕಲೆಕ್ಷನ್ ಗ್ರಾಫ್ ಇನ್ನು ದೊಡ್ಡ ಮಟ್ಟದಲ್ಲಿ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಮುಂಬರುವ ದಿನಗಳಲ್ಲಿ ಚಿತ್ರ ಮತ್ತಷ್ಟು ಭರ್ಜರಿ ಗಳಿಕೆ ಕಾಣುವ ವಿಶ್ವಾಸದಲ್ಲಿದೆ ಚಿತ್ರತಂಡ.

ಇದನ್ನೂ ಓದಿ: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

ಇನ್ನು ಸಿನಿಮಾದ ವಿವಾದದ ವಿಷಯಕ್ಕೆ ಬರುವುದಾದರೆ, ಈ ಹಿಂದೆ ನಡೆದ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದ ಸಮಯದಲ್ಲೇ ದೊಡ್ಡ ಗದ್ದಲ ಸೃಷ್ಟಿಯಾಗಿತ್ತು. ಪ್ರಜ್ವಲ್ ದೇವರಾಜ್ ಸಂಭಾವನೆ ಬಾಕಿ ಉಳಿಸಿಕೊಂಡಿದ್ದಕ್ಕೆ ಡಬ್ಬಿಂಗ್ ಮಾಡಲ್ಲ ಎಂದಿದ್ದರು. ಹೀಗಾಗಿ, ಅವರಿಗೆ ಬೇರೆಯವರಿಂದ ಡಬ್ ಮಾಡಿಸಿ, ಸಿನಿಮಾ ರಿಲೀಸ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vastu Tips: ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಡಬಹುದೇ? ಶಾಸ್ತ್ರಗಳು ಹೇಳುವುದೇನು? – Kannada News | Tulsi Plant Vastu Tips: Placement and Benefits for Prosperity at Home

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಹಾಗೂ ಪೂಜನೀಯ ಎಂದು ಪರಿಗಣಿಸಲಾಗಿದೆ. ಬಹುತೇಕ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿಯೂ ತುಳಸಿ ಕಟ್ಟೆಯಿದ್ದು, ಪ್ರತಿದಿನ ನಿಗದಿತ ಆಚರಣೆಗಳೊಂದಿಗೆ ಅದನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿ ಗಿಡದಲ್ಲಿ ಶ್ರೀ ಮಹಾಲಕ್ಷ್ಮಿಯು ವಾಸಿಸುತ್ತಾಳೆ. ಅಲ್ಲದೆ, ತುಳಸಿಯು ಶ್ರೀಹರಿ ವಿಷ್ಣುವಿಗೆ ಅತ್ಯಂತ ಪ್ರಿಯವಾದುದು. ಶಾಸ್ತ್ರೋಕ್ತವಾಗಿ ತುಳಸಿಯನ್ನು ಪೂಜಿಸುವ ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ಹಾಗೂ ವಿಷ್ಣುವಿನ ವಿಶೇಷ ಅನುಗ್ರಹ ನೆಲೆಸಿರುತ್ತದೆ.

ವಾಸ್ತು ಶಾಸ್ತ್ರದಲ್ಲಿ ತುಳಸಿಯ ಮಹತ್ವ:

ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಪ್ರಾಚೀನ ಕಾಲದಿಂದಲೂ ಹಿಂದೂ ಸಂಪ್ರದಾಯದ ಅಮೂಲ್ಯ ಭಾಗವಾಗಿರುವ ಈ ಗಿಡವು, ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸುವುದಲ್ಲದೆ, ನಿರಂತರವಾಗಿ ಧನಾತ್ಮಕ (ಸಕಾರಾತ್ಮಕ) ಶಕ್ತಿಯನ್ನು ಆಕರ್ಷಿಸುತ್ತದೆ. ಆದರೆ ಹಲವರಲ್ಲಿ “ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳನ್ನು ಮನೆಯಲ್ಲಿ ನೆಡಬಹುದೇ?” ಎಂಬ ಗೊಂದಲವಿರುತ್ತದೆ.

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಡಬಹುದೇ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳನ್ನು ನೆಡುವುದು ಖಂಡಿತವಾಗಿಯೂ ಶುಭ. ಆದರೆ ಹೀಗೆ ನೆಡುವಾಗ ಗಿಡಗಳ ಸಂಖ್ಯೆಯು 3, 5 ಅಥವಾ 7 ರಂತಹ ಬೆಸ ಸಂಖ್ಯೆಗಳಲ್ಲಿ (Odd Numbers) ಇರಬೇಕು. ನೆನಪಿಡಿ, ಅಗತ್ಯಕ್ಕಿಂತ ಹೆಚ್ಚು ಗಿಡಗಳನ್ನು ನೆಡಬಾರದು. ಹೆಚ್ಚು ಗಿಡಗಳಿದ್ದರೆ ಅವುಗಳ ಸರಿಯಾದ ಆರೈಕೆ ಮಾಡಲು ಸಾಧ್ಯವಾಗದೆ, ಪೂಜೆಯ ಪೂರ್ಣ ಫಲವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ತುಳಸಿ ಗಿಡ ನೆಡಲು ಸೂಕ್ತವಾದ ದಿಕ್ಕು ಯಾವುದು?

ತುಳಸಿ ಗಿಡದಿಂದ ಪೂರ್ಣ ಶುಭ ಫಲಗಳು ದೊರೆಯಬೇಕಾದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಅತ್ಯಗತ್ಯ. ಮನೆಯ ಪೂರ್ವ ಭಾಗದಲ್ಲಿ ತುಳಸಿ ನೆಡುವುದು ಅತ್ಯಂತ ಶ್ರೇಷ್ಠ. ಈಶಾನ್ಯ ದಿಕ್ಕಿನಲ್ಲಿ ಇಡುವುದು ಮನೆಗೆ ಲಕ್ಷ್ಮಿಯ ಅನುಗ್ರಹ ಮತ್ತು ಶಾಂತಿಯನ್ನು ತರುತ್ತದೆ. ಆದರೆ ತುಳಸಿ ಗಿಡವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಏಕೆಂದರೆ ದಕ್ಷಿಣವು ಪಿತೃಗಳ ಮತ್ತು ಯಮನ ದಿಕ್ಕಾಗಿದ್ದು, ಇಲ್ಲಿ ಇಡುವುದರಿಂದ ಹಾನಿಯಾಗಬಹುದು.

ಪಾಲಿಸಬೇಕಾದ ಮುಖ್ಯ ನಿಯಮಗಳು:

ತುಳಸಿ ಗಿಡವನ್ನು ಯಾವಾಗಲೂ ಮನೆಯ ಅಂಗಳ ಅಥವಾ ಬಾಲ್ಕನಿಯಂತಹ ಸ್ವಚ್ಛ ಮತ್ತು ಗಾಳಿ-ಬೆಳಕು ಬರುವ ಸ್ಥಳದಲ್ಲೇ ಇಡಬೇಕು. ಮನೆಯಲ್ಲಿರುವ ತುಳಸಿ ಗಿಡ ಎಂದಿಗೂ ಒಣಗಿಹೋಗಬಾರದು. ಭಾನುವಾರ ಮತ್ತು ಏಕಾದಶಿ ದಿನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲಿ ತುಳಸಿ ಗಿಡಕ್ಕೆ ತಪ್ಪದೇ ನಿಯಮಿತವಾಗಿ ನೀರನ್ನು ಸಮರ್ಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿ ರಣಮಳೆಯ ಹಾವಳಿ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ – Kannada News | Karnataka Weather Forecast: Heavy rainfall in Coastal Karnataka; School College Holiday Declared in Dakshina Kannada, Udupi

ಬೆಂಗಳೂರು, ಜುಲೈ 25: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ  ಜೊತೆಗೆ ಗಂಟೆಗೆ 30 ರಿಂದ 50 kmph ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.

ಕರಾವಳಿ ಕರ್ನಾಟಕ

ಕರಾವಳಿ ಪ್ರದೇಶದಲ್ಲಿ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇಂದೂ ಸಹ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 kmph ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಉಡುಪಿಯಲ್ಲಿ ಆರೆಂಜ್ ಅಲರ್ಟ್​ ನೀಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಅಂಗನವಾಡಿಯಿಂದ ಪಿಯುಸಿವರೆಗಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಟಿ. ಕೆ. ಸ್ವರೂಪ್ ಈ ರಜೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ಉತ್ತರ ಒಳನಾಡು

ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ರಾಯಚೂರು, ಹಾವೇರಿ, ಯಾದಗಿರಿ ಮತ್ತು ಕಲ್ಬುರ್ಗಿ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 kmph ವೇಗದ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 kmph ವೇಗದ ಗಾಳಿ ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡು

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಂಟೆಗೆ 40 ರಿಂದ 50 kmph ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು,ಯೆಲ್ಲೋ ಅಲರ್ಟ್​ ಜಾರಿಯಲ್ಲಿದೆ. ಚಿತ್ರದುರ್ಗ ಮತ್ತು ಮೈಸೂರಿನ ಹಲವೆಡೆ ಗಂಟೆಗೆ 40 ರಿಂದ 50 kmph ವೇಗದ ಬಿರುಗಾಳಿ ಸಹಿತ ಸಾಧಾರಣ ಮಳೆ ಬೀಳಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಗಂಟೆಗೆ 30 ರಿಂದ 40 kmph ವೇಗದ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಹಾಗೂ ಗಾಳಿಯ ರಭಸ ಹೆಚ್ಚಿರಲಿದ್ದು, ಸಾರ್ವಜನಿಕರು ಅಗತ್ಯ ಜಾಗರೂಕತೆ ವಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ – Kannada News | Midnight Address: PM Modi Thanks Youth Following NEET Controversy

ದೆಹಲಿ, ಜು.25: ದೇಶದಲ್ಲಿ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಮಧ್ಯರಾತ್ರಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆಯೂ ಒಂದು ವಿಡಿಯೋ ಮೂಲಕ ಸಂದೇಶ ನೀಡಿದ್ದ ಪ್ರಧಾನಿ, ಈಗ “ಥ್ಯಾಂಕ್ಯೂ ಫ್ರೆಂಡ್ಸ್” ಎಂದು ಹೇಳುವ ಮೂಲಕ ಯುವಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಹೊಸ ಸಂದೇಶದಲ್ಲಿ, ಪ್ರಧಾನಿ ಮೋದಿ ಅವರು ಹಿಂದಿನ ವಿಡಿಯೋಗೆ ದೊರೆತ ಪ್ರತಿಕ್ರಿಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. “ನಿನ್ನೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವಿಡಿಯೋಗೆ ನೀವು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. ಅಲ್ಲದೆ, “ಸಕಾರಾತ್ಮಕ ಸಲಹೆಗಳನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಪ್ರೀತಿಯಿಂದ ನಮ್ಮ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ. ಯುವಕರೇ, ಎಲ್ಲರಿಗೂ ಧನ್ಯವಾದ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸಂದೇಶವು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ಸಮಯದಲ್ಲಿ ಬಂದಿರುವುದು ಗಮನಾರ್ಹವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ – Kannada News | Jana Nayagan Box Office Day 2 Vijay Starrer Faces Massive 50 Drop Despite Crossing 100 Cr Globally

ಭಾರೀ ನಿರೀಕ್ಷೆ ಮೂಡಿಸಿ ತೆರೆಕಂಡಿದ್ದ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೇ ಅತಿ ದೊಡ್ಡ ಹಿನ್ನಡೆ ಅನುಭವಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡಿದ್ದು, ಚಿತ್ರತಂಡಕ್ಕೆ ಭಾರೀ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಮೊದಲ ದಿನವಾದ ಗುರುವಾರ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡು 42.70 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ‘ಜನ ನಾಯಗನ್’ ಸಿನಿಮಾ, ಎರಡನೇ ದಿನವಾದ ಶುಕ್ರವಾರ ಕೇವಲ 21.15 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಅಂದರೆ ಕೇವಲ ಒಂದೇ ದಿನದಲ್ಲಿ ಚಿತ್ರದ ಗಳಿಕೆ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿದಂತಾಗಿದೆ. ಇದರೊಂದಿಗೆ ಚಿತ್ರದ ಶೋಗಳ ಸಂಖ್ಯೆಯೂ 13,067 ರಿಂದ 12,190 ಕ್ಕೆ ಇಳಿಕೆಯಾಗಿದೆ. ಥಿಯೇಟರ್‌ ಆಕ್ಯುಪೆನ್ಸಿ ಕೂಡ ಶೇ. 41.6 ರಿಂದ ಶೇ. 29.5 ಕ್ಕೆ ಪಲ್ಟಿಯಾಗಿದೆ.

ಸದ್ಯಕ್ಕೆ ಎರಡು ದಿನಗಳ ಪ್ರದರ್ಶನದಿಂದ ಭಾರತದಲ್ಲಿ ಒಟ್ಟು 63.85 ಕೋಟಿ ರೂಪಾಯಿ ನೆಟ್ ಹಾಗೂ 75.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ದಿನ 10.00 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಅಲ್ಲಿನ ಒಟ್ಟು ಗಳಿಕೆಯನ್ನು 37.50 ಕೋಟಿಗೆ ಕೊಂಡೊಯ್ದಿದೆ. ಈ ಮೂಲಕ ಜಾಗತಿಕವಾಗಿ ಚಿತ್ರದ ಗ್ರಾಸ್ ಕಲೆಕ್ಷನ್ 112.50 ಕೋಟಿ ರೂಪಾಯಿ ತಲುಪಿದಂತಾಗಿದೆ.

ಎರಡು ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರೋದು ಎಂದರೆ ಅದು ತಮಾಷೆಯ ವಿಷಯ ಅಲ್ಲ. ಆದರೆ, ಸಿನಿಮಾದ ಒಟ್ಟಾರೆ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತೀರಾ ಕಮ್ಮಿ ಎನಿಸುತ್ತಿದೆ. ಎರಡನೇ ದಿನವೂ ತಮಿಳು ಭಾಷೆಯಲ್ಲೇ ಹೆಚ್ಚಿನ ಗಳಿಕೆ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಮೂಲಗಳ ಪ್ರಕಾರ ‘ಜನ ನಾಯಗನ್’ ಚಿತ್ರದ ಬಜೆಟ್ ಬರೋಬ್ಬರಿ 300 ರಿಂದ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಿರುವ ಕಾರಣ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಅನಿವಾರ್ಯವಾಗಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಸಿನಿಮಾ ಭರ್ಜರಿ ಪಿಕ್‌ಅಪ್ ಕಾಣದೇ ಹೋದರೆ ನಿರ್ಮಾಪಕರಿಗೆ ತೊಂದರೆ ಆಗಬಹುದು.

ಪ್ರಶ್ನೆ:  ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಿದೆ
ಉತ್ತರ:
ಜುಲೈ 23

ಪ್ರಶ್ನೆ: ಇದು ವಿಜಯ್ ಕೊನೆ ಚಿತ್ರವೇ? 
ಉತ್ತರ:
ಹೌದು

ಪ್ರಶ್ನೆ: ಎರಡು ದಿನಕ್ಕೆ ಜನ ನಾಯಗನ್ ಗಳಿಸಿದ್ದೆಷ್ಟು?
ಉತ್ತರ: 
112.50 ಕೋಟಿ ರೂಪಾಯಿ

Source link

ಆಷಾಡ ಶುಕ್ಲ ಏಕಾದಶಿ ರಾಶಿಫಲ: ಈ ರಾಶಿಯವರಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಯಾರಿಗೆ ಗೃಹ-ವಿವಾಹ ಯೋಗ? – Kannada News | Astrological Insights: Dr. Basavaraj Gurujis Daily Forecast for 25 07 2026 and Planetary Effects

ಬೆಂಗಳೂರು, ಜು.25: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 25, ಶನಿವಾರದ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಡ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿಯ ಈ ದಿನ, ಜೇಷ್ಠ ನಕ್ಷತ್ರ ಮತ್ತು ವೈದೃತಿ ಯೋಗವಿದೆ. ಈ ದಿನವನ್ನು ದೇವಶಯನಿ ಏಕಾದಶಿ ಎಂದು ಆಚರಿಸಲಾಗುತ್ತಿದ್ದು, ಚಾತುರ್ಮಾಸ ವ್ರತದ ಪೂರ್ವತಯಾರಿಗೆ ವಿಶೇಷವಾಗಿದೆ. ಉಡುಪಿ ಸೇರಿದಂತೆ ಅನೇಕ ಮಠಗಳಲ್ಲಿ ತಪ್ತ ಮುದ್ರಾ ಧಾರಣೆಯಂತಹ ಮಹತ್ವದ ಕಾರ್ಯಗಳು ನಡೆಯುತ್ತವೆ. ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ವೃಶ್ಚಿಕ ರಾಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಆದಾಯ ಹೆಚ್ಚಳ, ರೈತರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಶುಭ, ಹಳೆ ಬಾಕಿ ವಸೂಲಿ ಆಗುವ ಸಾಧ್ಯತೆಗಳಿವೆ. ವೃಷಭ ರಾಶಿಯವರಿಗೆ ಹಣ ಬಂದರೂ ಖರ್ಚು ಹೆಚ್ಚಾಗುವ ಸಂಭವವಿದ್ದು, ಗೃಹ ನಿರ್ಮಾಣ ಯೋಗವಿದೆ. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲ, ಆಸ್ತಿ ವಿಚಾರದಲ್ಲಿ ಗೊಂದಲ ನಿವಾರಣೆ. ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ವಾಹನ ಯೋಗ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಕೀರ್ತಿ ಪ್ರತಿಷ್ಠೆ. ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿ, ಕಾನೂನು ವಿಷಯಗಳಲ್ಲಿ ಶುಭ. ತುಲಾ ರಾಶಿಯವರಿಗೆ ಆರ್ಥಿಕ ಲಾಭ, ಹೊಸ ವ್ಯಾಪಾರಕ್ಕೆ ಪ್ರಯತ್ನ. ವೃಶ್ಚಿಕ ರಾಶಿಯವರಿಗೆ ಅರ್ಧಂಬರ್ಧ ಕೆಲಸಗಳು ಪೂರ್ಣ, ವಿವಾಹ ಯೋಗ. ಧನು ರಾಶಿಯವರಿಗೆ ಅದೃಷ್ಟ ಮತ್ತು ದೈವ ಬಲ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ. ಮಕರ ರಾಶಿಯವರಿಗೆ ಯಶಸ್ಸು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ. ಕುಂಭ ರಾಶಿಯವರಿಗೆ ಅಧಿಕಾರ ಪ್ರಾಪ್ತಿ, ಋಣಭಾದೆಯಿಂದ ಮುಕ್ತಿ. ಮೀನ ರಾಶಿಯವರಿಗೆ ಆರ್ಥಿಕ ಲಾಭ, ಧರ್ಮ ಕಾರ್ಯಗಳಲ್ಲಿ ಭಾಗಿ. ಈ ದಿನ ಪ್ರತಿಯೊಂದು ರಾಶಿಯವರಿಗೂ ಆಯಾ ಗ್ರಹಸ್ಥಿತಿಗೆ ಅನುಗುಣವಾಗಿ ಶುಭ, ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ತಿಳಿಸಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಹಳೆಯದನ್ನು ಮರೆತು ಮುನ್ನಡೆದರೆ ಶ್ರೇಯಸ್ಸು… – Kannada News | Daily Horoscope for July 25, 2026: Uttarayan Greeshma season, Ashada Masa shukla Paksha Satursday astrology Prediction

ಮೇಷ ರಾಶಿ:

ಆಹಾರದ ಉದ್ಯಮಕ್ಕೆ ಹೊಸ ತಿರುವು ಕೊಡಬಹುದು. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ಸಂಗಾತಿಯನ್ನು ಬಿಟ್ಟಿರುವುದು ಬೇಸರ ತರಿಸಬಹುದು. ಇಂದು ತಿಳಿದು ಕೂಗಾಡಬಹುದು.‌ ವಯೋಮಾನಕ್ಕೆ ಸಹಜವಾದ ಖಾಯಿಲೆಯಿಂದ ಕೊರಗುವಿರಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಉಪದೇಶ ನೀಡುವ ಬದಲು ಆಚರಿಸಿದರೆ ಉತ್ತಮ.

ವೃಷಭ ರಾಶಿ:

ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ಮನೆಯಲ್ಲಿ ನಿಮಗಾಗಿ ತರದ ವಸ್ತುಗಳನ್ನು ಇಷ್ಟಪಟ್ಟು ಪಡೆಯುವಿರಿ. ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ. ಕಳೆದುಕೊಂಡ ಸಂಬಂದವು ಮತ್ತೆ ಚಿಗುರಬಹುದು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು.

ಮಿಥುನ ರಾಶಿ:

ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ. ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ಬಂಧುಗಳ ಒಡನಾಟ ಹೆಚ್ಚಾಗುವುದು. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ದೈವಿಕ ವಿಘ್ನಗಳಿಗೆ ಅಲೌಕಿಕ ಉಪಾಯದಿಂದ ಪರಿಹಾರ ಸಾಧ್ಯವಾಗಲಿದೆ. ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು.

ಕರ್ಕಾಟಕ ರಾಶಿ:

ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ಮರಣಭೀತಿಯು ನಿಮ್ಮನ್ನು ಕಾಡಬಹುದು.‌ ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ. ಅಲ್ಪಾದಾಯದಲ್ಲಿ ತೃಪ್ತಿಪಡುವಿರಿ. ಕುಟುಂಬದಿಂದ ನಿಮ್ಮ ಬಗ್ಗೆ ಮಹತ್ತರವಾದ ಬದಲಾವಣೆ ಕಾಣಿಸುವುದು. ಸಂಗಾತಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು.

ಸಿಂಹ ರಾಶಿ:

ಪರಾವಲಂಬನೆಯನ್ನು ಇಂದು ಕಡಿಮೆಮಾಡುವಿರಿ. ಉನ್ನತ ವಿದ್ಯಾಭ್ಯಾಸವು ಕಷ್ಟವೆನಿಸಬಹುದು. ತುಂಬಾ ಕಷ್ಟದಿಂದ ಗಳಿಸಿದ ಹಣವನ್ನು ಖರ್ಚುಮಾಡಲು ಮನಸ್ಸುಬಾರದು. ಹೊರಗಡೆ ಸುತ್ತಾಡಲು ಹೋಗಬಹುದು. ಅಪರಿಚಿತ ಸ್ಥಳದಲ್ಲಿಯೂ ಪರಿಚಿತರ ಭೇಟಿಯಾಗಲಿದೆ. ಇನ್ನೊಬ್ಬರನ್ನು ಅನುಕರಿಸುವ ನಿಮ್ಮ ಸ್ವಭಾವವನ್ನು ಬಿಡುವುದು ಒಳ್ಳೆಯದು. ಕೆಲವು ವಿಚಾರದಲ್ಲಿ ಧೈರ್ಯದ ಕೊರೆತೆ ಕಾಣುವುದು. ನೂತನ ಸ್ನೇಹವನ್ನು ಬೆಳೆಸಿಕೊಳ್ಳುವಿರಿ.

ಕನ್ಯಾ ರಾಶಿ:

ಗೃಹೋಪಯೋಗಿ ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ಜೊತೆ ಮಾತನಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ವಿದ್ಯಾಪ್ರಗತಿಯು ಬಹಳ ಯಶಸ್ವಿಯಾಗುವುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ.

ತುಲಾ ರಾಶಿ:

ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಮಂಗಲಕರವಾದ ಕಾರ್ಯವನ್ನು ಆರಂಭ ಮಾಡಲು ಪ್ರಶಸ್ತ ದಿನ ಎನಿಸುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸಬಹುದು.

ವೃಶ್ಚಿಕ ರಾಶಿ:

ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ಮನಸ್ಸು ಒತ್ತಾಯ ಮಾಡುವುದು. ಅತಿಯಾಗಿ ದೇಹವನ್ನು ದಂಡಿಸಬೇಡಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ. ವಸ್ತುಗಳ ಕಳ್ಳತನವಾಗಬಹುದು. ಇದೇ ವಿಚಾರಕ್ಕೆ ಮನೆಯಲ್ಲಿ ಕಲಹವಾದೀತು. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಯಾರನ್ನಾದರೂ ಗೆಳೆಯರನ್ನಾಗಿ ಮಾಡಿಕೊಳ್ಳುವಿರಿ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ.

ಧನು ರಾಶಿ:

ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಹಣವನ್ನು ಸಾಲವಾಗಿಯೂ ಒಡೆಯಬಹುದು. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಅಸ್ಥಿರವಾದ ವ್ಯವಸ್ಥೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು.

ಮಕರ ರಾಶಿ:

ನಿಮ್ಮ ಸಂತೋಷ ಅನ್ಯರ ಹಸ್ತದಲ್ಲಿ ಇಲ್ಲ ಎಂಬುದು ಗೊತ್ತಾಗಲಿ. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಇಂದು ನಿಮ್ಮ ಭಾರ ಇಳಿಯಿತು ಎಂಬ ಹರ್ಷೋದ್ಗಾರ ಬೇಡ. ಮತ್ತೊಂದು ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು. ಒಬ್ಬರೇ ಎಲ್ಲಿಯಾದರೂ ಸುತ್ತಾಟ ಮಾಡಬಹುದು. ಅನವಶ್ಯಕವಾದ ಚಿಂತನೆಯಿಂದ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ:

ದುಃಖದಿಂದ ಇದ್ದವರಿಗೆ ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಸ್ಥೈರ್ಯವು ಕಡಿಮೆ ಆಗುವುದು. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ.

ಮೀನ ರಾಶಿ:

ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಎಲ್ಲಿಂದಲಾದರೂ ನಿಮಗೆ ಐಡಿಯಾ ಸಿಗಬಹುದು. ಬೇಡದ ಯೋಚನೆಗಳೇ ನಿಮ್ಮ ತಲೆಯಲ್ಲಿ ಸುತ್ತಬಹುದು. ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ನೀವು ಅಂದು ಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರವು ಉಂಟಾದೀತು. ಪ್ರೀತಿಪಾತ್ರರಿಗೆ ಸಮಯ ವ್ಯರ್ಥ ಮಾಡುವಿರಿ. ನಿಮ್ಮ ಪ್ರೇಮವು ಇಂದು ಯಾರಿಂದಲೋ ಬಹಿರಂಗವಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:15 – 10:15, ಯಮಗಂಡ ಕಾಲ 14:15 – 15:37 ಗುಳಿಕ ಕಾಲ 06:05 – 07:40

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕ ಸಾವಿಗೆ ಭಾರತ ಖಂಡನೆ – Kannada News | Indian sailor killed in strike on commercial vessel in Black Sea near Russia MEA condemns attack

ನವದೆಹಲಿ, ಜುಲೈ 24: ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ರಷ್ಯಾಕ್ಕೆ ಹತ್ತಿರವಿರುವ ಕಪ್ಪು ಸಮುದ್ರದ ಜಲಪ್ರದೇಶದಲ್ಲಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಹಡಗಿನಲ್ಲಿದ್ದ ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ದೃಢಪಡಿಸಿದೆ. ಹಾಗೇ, ಭಾರತೀಯ ನಾವಿಕನ ಸಾವಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಮಾರ್ಷಲ್ ಐಲ್ಯಾಂಡ್ಸ್‌ನ ಧ್ವಜ ಹೊಂದಿದ್ದ ‘ಎಮ್‌ವಿ ಒಮೊರ್ಫಿ’ ಎಂಬ ವಾಣಿಜ್ಯ ಹಡಗು ರಷ್ಯಾದ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಹಡಗಿನಲ್ಲಿ ಒಟ್ಟು ಸಿಬ್ಬಂದಿಯ ಪೈಕಿ ಮೂವರು ಭಾರತೀಯರಿದ್ದರು. ಈ ದಾಳಿಯಲ್ಲಿ ಒಬ್ಬ ಭಾರತೀಯ ನಾವಿಕ ಪ್ರಾಣ ಕಳೆದುಕೊಂಡಿದ್ದು, ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ

ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್ ಬಂದರಿನಿಂದ ಕೊನೆಯದಾಗಿ ಪ್ರಯಾಣ ಬೆಳೆಸಿದ್ದ ಈ ಹಡಗಿನಲ್ಲಿ ಘಟನೆ ಸಂಭವಿಸಿದಾಗ ಮೂವರು ಭಾರತೀಯರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಮೃತರ ಗುರುತನ್ನು ವಿದೇಶಾಂಗ ಸಚಿವಾಲಯ ಇನ್ನೂ ಬಹಿರಂಗಪಡಿಸಿಲ್ಲವಾದರೂ, ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.

ರಷ್ಯಾ ಸರ್ಕಾರದ ಸ್ಪಂದನೆ:

ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮೃತ ನಾವಿಕನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ರಾಜತಾಂತ್ರಿಕ ನೆರವು ನೀಡಲು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ

ದಾಳಿಯನ್ನು ಖಂಡಿಸಿದ ಭಾರತ:

ವಾಣಿಜ್ಯ ಹಡಗುಗಳು ಮತ್ತು ನಿರಪರಾಧಿ ನಾಗರಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಇಂತಹ ದಾಳಿಗಳನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಜಾಗತಿಕ ವಾಣಿಜ್ಯ ಮತ್ತು ಸಮುದ್ರ ಸಂಚಾರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳು ಕಳವಳಕಾರಿಯಾಗಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಎಲ್ಲಾ ಕಡೆಯವರೂ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version