ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್ ಹೆಸರಿಸಿದ ರಾಬಿನ್ ಉತ್ತಪ್ಪ! – Kannada News | Robin uthappa picks india’s all time odi xi

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಪಂದ್ಯಗಳ ಯಶಸ್ಸಿನ ಪಯಣ ರೋಚಕವಾದದ್ದು. ಕಪಿಲ್ ದೇವ್ ಸಾರಥ್ಯದ 1983ರ ವರ್ಲ್ಡ್ ಕಪ್ ಗೆಲುವಿನಿಂದ ಹಿಡಿದು, ಧೋನಿ ಯುಗದ 2011ರ ವಿಶ್ವಕಪ್ ವಿಜಯ ಹಾಗೂ ಇತ್ತೀಚಿನ ರನ್ ಮಷಿನ್ ವಿರಾಟ್ ಕೊಹ್ಲಿ ಸಾಮ್ರಾಜ್ಯದವರೆಗೆ ಭಾರತ ಹಲವು ದಿಗ್ಗಜ ಆಟಗಾರರನ್ನು ಕಂಡಿದೆ. ಇಂತಹ ಬಳಗದಿಂದ ಸಾರ್ವಕಾಲಿಕ 11 ಆಟಗಾರರನ್ನು ಆಯ್ಕೆ ಮಾಡುವುದು ಸವಾಲೇ ಸರಿ. ಇದಾಗ್ಯೂ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ಆಲ್​ ಟೈಮ್ ಒಡಿಐ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಸಾರ್ವಕಾಲಿಕ ಇಲವೆನ್​ನಲ್ಲಿ ಕಾಣಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಟಾಪ್-3 ಬ್ಯಾಟರ್​ಗಳು:

ಸಚಿನ್ ತೆಂಡೂಲ್ಕರ್: ವಿಶ್ವ ಕ್ರಿಕೆಟ್‌ನ ‘ದೇವರೆಂದೇ’ ಖ್ಯಾತರಾದ ಸಚಿನ್ ಇಲ್ಲದೆ ಯಾವುದೇ ಸಾರ್ವಕಾಲಿಕ ತಂಡ ಅಪೂರ್ಣ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಸಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರನ್ನು ಉತ್ತಪ್ಪ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.

ಸೌರವ್ ಗಂಗೂಲಿ: ‘ದಾದಾ’ ಖ್ಯಾತಿಯ ಗಂಗೂಲಿ ಮತ್ತು ಸಚಿನ್ ಜೋಡಿ ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದೆ. ಎಡಗೈ ಆಟಗಾರನಾಗಿ ಗಂಗೂಲಿ ಅವರ ಆಕ್ರಮಣಕಾರಿ ಆಟ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ ಉತ್ತಪ್ಪ ಗಂಗೂಲಿ ಅವರನ್ನು ಓಪನರ್ ಸ್ಥಾನದಲ್ಲಿ ಹೆಸರಿಸಿದ್ದಾರೆ.

ವಿರಾಟ್ ಕೊಹ್ಲಿ: ಮೂರನೇ ಕ್ರಮಾಂಕಕ್ಕೆ ಆಧುನಿಕ ಕ್ರಿಕೆಟ್‌ನ ರನ್ ಮಷಿನ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗಿಂತ ಸೂಕ್ತ ಆಟಗಾರ ಮತ್ತೊಬ್ಬರಿಲ್ಲ. ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿರುವ ಕೊಹ್ಲಿಯನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

ಮಧ್ಯಮ ಕ್ರಮಾಂಕ:

ಯುವರಾಜ್ ಸಿಂಗ್: 2011ರ ವಿಶ್ವಕಪ್ ಸರಣಿ ಶ್ರೇಷ್ಠ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಹಾಗೂ ಬೌಲಿಂಗ್‌ನಲ್ಲೂ ಪ್ರಮುಖ ವಿಕೆಟ್ ಪಡೆಯುವ ಅದ್ಭುತ ಆಲ್‌ರೌಂಡರ್ ಯುವರಾಜ್​ ಸಿಂಗ್ ಅವರನ್ನು ಉತ್ತಪ್ಪ 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ.

ಎಂ.ಎಸ್. ಧೋನಿ (ನಾಯಕ / ವಿಕೆಟ್ ಕೀಪರ್): ಸಾರ್ವಕಾಲಿಕ ತಂಡದ ನಾಯಕತ್ವವನ್ನು ಉತ್ತಪ್ಪ ಅವರು ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ಹೊರಿಸಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಆಗಿಯೂ ಅವರನ್ನೇ ಹೆಸರಿಸಿದ್ದಾರೆ.

ಆಲ್‌ರೌಂಡರ್‌ ಮತ್ತು ಫಿನಿಶರ್ಸ್:

ಸುರೇಶ್ ರೈನಾ: ಏಕದಿನ ಮಾದರಿಯಲ್ಲಿ ನಂಬಿಕಸ್ಥ ಎಡಗೈ ಬ್ಯಾಟರ್. ಲೋವರ್-ಮಿಡಲ್ ಆರ್ಡರ್‌ನಲ್ಲಿ ವೇಗವಾಗಿ ರನ್ ಗಳಿಸುವ, ಅದ್ಭುತ ಫೀಲ್ಡಿಂಗ್ ಹಾಗೂ ಪಾರ್ಟ್-ಟೈಮ್ ಸ್ಪಿನ್ ಮಾಡುವ ಚತುರತೆ ಹೊಂದಿರುವ ಸುರೇಶ್ ರೈನಾ ಅವರನ್ನು ಉತ್ತಪ್ಪ ತಮ್ಮ ಸಾರ್ವಕಾಲಿಕ ಇಲೆವೆನ್​ನಲ್ಲಿ ಹೆಸರಿಸಿದ್ದಾರೆ.

ಕಪಿಲ್ ದೇವ್: 1983ರ ವಿಶ್ವಕಪ್ ಹೀರೊ, ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಕಪಿಲ್ ದೇವ್ ಕೂಡ ರಾಬಿನ್ ಉತ್ತಪ್ಪ ಹೆಸರಿಸಿದ ಸಾರ್ವಕಾಲಿಕ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

ರವೀಂದ್ರ ಜಡೇಜಾ: ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಲೈನಪ್ ವಿಸ್ತರಿಸಿ ಆಲ್​ಟೈಮ್ ಇಲೆವೆನ್ ಹೆಸರಿಸಿರುವ ಉತ್ತಪ್ಪ, ರವೀಂದ್ರ ಜಡೇಜಾ ಅವರನ್ನು ಕೆಳ ಕ್ರಮಾಂಕದ ಆಲ್​ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ.

ಬೌಲರ್​ಗಳು:

ಅನಿಲ್ ಕುಂಬ್ಳೆ: ಭಾರತದ ಪರ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಈ ತಂಡದ ಮುಖ್ಯ ಸ್ಪಿನ್ನರ್ ಉತ್ತಪ್ಪ ಹೆಸರಿಸಿದ್ದಾರೆ.

ಝಹೀರ್ ಖಾನ್: ಭಾರತದ ಶ್ರೇಷ್ಠ ಎಡಗೈ ವೇಗಿ, ಹೊಸ ಚೆಂಡಿನಲ್ಲಿ ಸ್ವಿಂಗ್ ಹಾಗೂ ಹಳೆಯ ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದ ಝಹೀರ್ ಖಾನ್ ಅವರನ್ನು ಕೂಡ ರಾಬಿನ್ ಉತ್ತಪ್ಪ ತಮ್ಮ ಸಾರ್ವಕಾಲಿಕ ಏಕದಿನ ಇಲೆವೆನ್​ಗೆ ಆಯ್ಕೆ ಮಾಡಿದ್ದಾರೆ.

ಜಸ್​ಪ್ರೀತ್ ಬುಮ್ರಾ: ಯಾರ್ಕರ್ ಸ್ಪೆಷಲಿಸ್ಟ್ ಹಾಗೂ ಆಧುನಿಕ ಕ್ರಿಕೆಟ್​ನ ಯಶಸ್ವಿ ಬೌಲರ್​ ಜಸ್​ಪ್ರೀತ್ ಬುಮ್ರಾ ಅವರನ್ನು ಕೂಡ ರಾಬಿನ್ ಉತ್ತಪ್ಪ ಅವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್: ಸಚಿನ್ ತೆಂಡೂಲ್ಕರ್ , ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಕಪಿಲ್ ದೇವ್, ರವೀಂದ್ರ ಜಡೇಜಾ, ಅನಿಲ್ ಕುಂಬ್ಳೆ, ಝಹೀರ್ ಖಾನ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: 13 ಸಿಕ್ಸ್​, 5 ಫೋರ್​: ದಾಖಲೆಯ ಸೆಂಚುರಿ ಸಿಡಿಸಿದ ನಿಕೋಲಸ್ ಪೂರನ್

ಒಟ್ಟಾರೆಯಾಗಿ, ರಾಬಿನ್ ಉತ್ತಪ್ಪ ಆರಿಸಿರುವ ಈ ತಂಡವು ಮೈದಾನಕ್ಕಿಳಿದರೆ ವಿಶ್ವದ ಯಾವುದೇ ಬಲಿಷ್ಠ ತಂಡವನ್ನಾದರೂ ಸುಲಭವಾಗಿ ಮಣಿಸುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!

Published On – 12:16 pm, Thu, 16 July 26

Source link

Kia Syros EV: ಕಿಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಅನಾವರಣ: 526 ಕಿ.ಮೀ. ವ್ಯಾಪ್ತಿ 25,000ಕ್ಕೆ ಬುಕ್ಕಿಂಗ್ – Kannada News | Kia Syros EV booking open 526km range fast charging features india

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಿಯಾ ಇಂಡಿಯಾ ತನ್ನ ಹೊಸ ಕಿಯಾ ಸೈರೋಸ್ ಇವಿ (Kia Syros EV) ಅನ್ನು ಅನಾವರಣಗೊಳಿಸಿದೆ. ಕಾರಿನ ಅಧಿಕೃತ ಬೆಲೆ ಇನ್ನೂ ಪ್ರಕಟವಾಗಿಲ್ಲ. ಆದರೆ, ಗ್ರಾಹಕರು ₹25,000 ಟೋಕನ್ ಮೊತ್ತ ನೀಡಿ ಈಗಲೇ ಪ್ರೀ-ಬುಕಿಂಗ್ ಮಾಡಬಹುದು. ಬೆಲೆ ಘೋಷಣೆಯಾದ ಬಳಿಕ ವಿತರಣೆ ಪ್ರಾರಂಭವಾಗಲಿದೆ.

ಈ ಎಲೆಕ್ಟ್ರಿಕ್ SUV ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. 42 kWh ಬ್ಯಾಟರಿ ಪ್ಯಾಕ್ ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 443 ಕಿಲೋಮೀಟರ್ ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇನ್ನೊಂದು 51.4 kWh ದೊಡ್ಡ ಬ್ಯಾಟರಿ ಪ್ಯಾಕ್ 526 ಕಿಲೋಮೀಟರ್ ವರೆಗೆ ARAI ಪ್ರಮಾಣಿತ ರೇಂಜ್ ನೀಡುತ್ತದೆ. ಇದರಿಂದ ದೀರ್ಘ ದೂರ ಪ್ರಯಾಣ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.

ಕಿಯಾ ಸೈರೋಸ್ EVನಲ್ಲಿ ಫ್ರಂಟ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, ಗರಿಷ್ಠ 170 hp ಶಕ್ತಿಯನ್ನು ಉತ್ಪಾದಿಸುತ್ತದೆ. ದೊಡ್ಡ ಬ್ಯಾಟರಿ ಹೊಂದಿರುವ ಮಾದರಿ ಕೇವಲ 8.1 ಸೆಕೆಂಡುಗಳಲ್ಲಿ 0ರಿಂದ 100 ಕಿಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಚಾರ್ಜಿಂಗ್ ವಿಷಯದಲ್ಲಿಯೂ ಈ ಕಾರು ಗಮನ ಸೆಳೆಯುತ್ತದೆ. ಇದರಲ್ಲಿ 100 kW DC ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದ್ದು, ಕೇವಲ 39 ನಿಮಿಷಗಳಲ್ಲಿ 10% ರಿಂದ 80% ವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಜೊತೆಗೆ 11 kW AC ಚಾರ್ಜಿಂಗ್‌ಗೂ ಬೆಂಬಲ ನೀಡಲಾಗಿದೆ.

Auto Tips: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಫೀಚರ್‌ಗಳ ವಿಚಾರದಲ್ಲಿ ಕಿಯಾ ಸೈರೋಸ್ EV ಪ್ರೀಮಿಯಂ ಅನುಭವ ನೀಡಲಿದೆ. ಡಿಜಿಟಲ್ ಡಿಸ್ಪ್ಲೇ, ಪನೋರಾಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, Harman Kardon ಸೌಂಡ್ ಸಿಸ್ಟಮ್, Vehicle-to-Load (V2L) ತಂತ್ರಜ್ಞಾನ, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಹಾಗೂ Level-2 ADAS ಸೇರಿದಂತೆ ಹಲವು ಆಧುನಿಕ ಸುರಕ್ಷತಾ ಮತ್ತು ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು

  • ಲೆವೆಲ್-2 ADAS.
  • 360 ಡಿಗ್ರಿ ಕ್ಯಾಮೆರಾ.
  • ಆರು ಏರ್‌ಬ್ಯಾಗ್‌ಗಳು.
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC).
  • ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ತಂತ್ರಜ್ಞಾನಗಳು.

ಬಣ್ಣಗಳ ಆಯ್ಕೆ

ಸೈರೋಸ್ EV ಹಲವು ಮೋನೋಟೋನ್ ಹಾಗೂ ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಖರೀದಿದಾರರು ತಮ್ಮ ಇಷ್ಟಕ್ಕೆ ತಕ್ಕ ಬಣ್ಣವನ್ನು ಆಯ್ಕೆ ಮಾಡಬಹುದು.

ಬ್ಯಾಟರಿಗೆ ಜೀವಿತಾವಧಿ ವಾರಂಟಿ

ಕಿಯಾ ಸೈರೋಸ್ EVಗೆ Lifetime Battery Warranty ನೀಡುವುದಾಗಿ ಘೋಷಿಸಿದೆ. ಇದು ಎಲೆಕ್ಟ್ರಿಕ್ ಕಾರು ಖರೀದಿಸುವವರಲ್ಲಿ ಬ್ಯಾಟರಿ ಬದಲಾವಣೆ ಕುರಿತ ಆತಂಕವನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆಯಾಗಿದೆ.

ಕಿಯಾ ತನ್ನ ಹೊಸ ಸೈರೋಸ್ EV ಮೂಲಕ ಭಾರತೀಯ ಎಲೆಕ್ಟ್ರಿಕ್ SUV ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ಸ್ಥಾನ ಪಡೆಯುವ ಗುರಿ ಹೊಂದಿದೆ. ಹೆಚ್ಚು ರೇಂಜ್, ವೇಗವಾದ ಚಾರ್ಜಿಂಗ್ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಯಸುವ ಗ್ರಾಹಕರಿಗೆ ಇದು ಆಕರ್ಷಕ ಆಯ್ಕೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಬೆಂಗಳೂರಿನ ಆಟೋ ಚಾಲಕನ ಆತ್ಮೀಯತೆಗೆ ಫಿದಾ ಆದ ವಿದೇಶಿಗ – Kannada News | Bengaluru: An American citizen sacrificed himself for the kindness of an auto driver in Bengaluru

ಬೆಂಗಳೂರು, ಜುಲೈ 16: ವಿದೇಶಿಗರಿಗೆ ಭಾರತ ಅಂದ್ರೆ ಅದೇನೋ ಸೆಳೆತ. ಭಾರತಕ್ಕೆ ಬರುವ ವಿದೇಶಿಗರು ಬೆಂಗಳೂರಿಗೂ (Bengaluru) ಭೇಟಿ ನೀಡಿ ಇಲ್ಲಿನ ತಿಂಡಿ ತಿನಿಸುಗಳನ್ನು ಸವಿಯುವುದಿದೆ. ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದಿದೆ. ಆದರೆ ಬೆಂಗಳೂರಿಗೆ ಬಂದ ಅಮೆರಿಕನ್ ವ್ಯಕ್ತಿಯೊಬ್ಬ ಬೆಂಗಳೂರಿನ ಆಟೋಚಾಲಕನ ಸೌಹಾರ್ದಯುತ ಮಾತಿಗೆ ಫುಲ್ ಫಿದಾ ಆಗಿದ್ದಾನೆ. ಆಟೋ ಚಾಲಕನ ಬಳಿ ಚಿಕ್‌ಪೇಟ್‌ಗೆ ಹೋಗಲು ಹೇಳಿದ್ದು, ಆತ ನಯವಾಗಿಯೇ ನಿರಾಕರಿಸಿದ್ದಾನೆ. ನಗು ಮೊಗದ ಆಟೋಚಾಲಕನ ಮಾತಿಗೆ ಫುಲ್ ಫಿದಾ ಆಗಿದ್ದು, ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಅಮೆರಿಕನ್ ವ್ಯಕ್ತಿ (Whichchris) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ಬೆಂಗಳೂರಿನ ಆಟೋ ಚಾಲಕ ಹಾಗೂ ಅಮೆರಿಕನ್ ಪ್ರವಾಸಿಗ ನಡುವಿನ ಸಂಭಾಷಣೆ ಕಾಣಬಹುದು. ವಿದೇಶಿಗ ಆಟೋ ಚಾಲಕನನ್ನು ಚಿಕ್ಕಪೇಟೆಗೆ ಕರೆದೊಯ್ಯಬಹುದೇ ಎಂದು ಕೇಳಿದ್ದಾನೆ. ಆಟೋ ಚಾಲಕನಿಗೆ ಇಂಗ್ಲಿಷ್ ಬಾರದೇ ಇರುವ ಕಾರಣ ಇಂದು ಶನಿವಾರ ಶಾಲಾ ಪಿಕಪ್ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿದೇಶಿಗನಿಗೆ ಇಲ್ಲಿ ಆಟೋಗಳು ಸಿಗುತ್ತದೆ. ಅದಲ್ಲದೇ ಓಲಾ ಅಥವಾ ಉಬರ್ ಬುಕ್ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾನೆ. ಆಟೋ ಚಾಲಕನ ಸಲಹೆಗೆ ಧನ್ಯವಾದ ತಿಳಿಸಿದ್ದಾನೆ. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಫಾಲೋ ಮಾಡುವಂತೆ ತಿಳಿಸಿರುವುದನ್ನು ನೋಡಬಹುದು. ಕೊನೆಗೆ ವಿದೇಶಿಗ ಜತೆಗೆ ಮಾತಿಗಿಳಿದ ಆಟೋ ಚಾಲಕ ನೀವು ಕನ್ನಡದಲ್ಲಿ ವಿಡಿಯೋ ಮಾಡ್ತೀರಾ? ಎಂದು ಕೇಳಿದ್ದಾನೆ. ಆದರೆ ಈ ಅಮೆರಿಕನ್ ವ್ಯಕ್ತಿ ಕೆನಡಾ ಎಂದು ತಪ್ಪಾಗಿ ಅರ್ಥೈಸಿಕೊಂಡು ನಾನು ಕೆನಡಾದಲ್ಲಿ ಯಾವುದೇ ವೀಡಿಯೊಗಳನ್ನು ಮಾಡಿಲ್ಲ ಎಂದು ಹೇಳಿದ್ದು, ಇದು ತಮಾಷೆಯ ಸಂದರ್ಭವಾಗಿ ಏರ್ಪಟ್ಟಿರುವುದನ್ನು ಕಾಣಬಹುದು.

ಇದನ್ನೂ ಓದಿ: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ

ಈ ವಿಡಿಯೋ 2.7 ಮಿಲಿಯನ್‌ಗೂ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಂತ ಅದ್ಭುತ ಇಂಗ್ಲಿಷ್ ಎಂದಿದ್ದಾರೆ. ಇನ್ನೊಬ್ಬರು, ಕರ್ನಾಟಕದವರು ಜನರು ತುಂಬಾ ಒಳ್ಳೆಯವ್ರು. ಭಾಷೆ ಯಾವುದೇ ಇರಲಿ, ಎಲ್ಲವನ್ನೂ ಸರಾಗವಾಗಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾಷೆ ಗೊತ್ತಿಲ್ಲದಿದ್ರೂ ಅರ್ಥ ಮಾಡಿಕೊಂಡು ವ್ಯವಹರಿಸಿದ ರೀತಿ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿಯಿಂದಲೇ ವೈದ್ಯನ ಕೊಲೆ ಪ್ರಕರಣ: ಆರೋಪಿ ಡಾ. ಪ್ರಿಯಾಂಕಾ ಎರಡನೇ ಪತ್ನಿ!; ಬಗೆದಷ್ಟೂ ಬಯಲಾಗ್ತಿದೆ ಅಚ್ಚರಿಯ ಮಾಹಿತಿ – Kannada News | Dharwad Doctor Death Case: Accused Dr. Priyanka is the Second Wife; Shocking Details Emerge as Police Investigate

ಪತ್ನಿಯಿಂದಲೇ ವೈದ್ಯನ ಕೊಲೆ Image Credit source: Tv9 Kannada

ಧಾರವಾಡ, ಜುಲೈ 16: ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ ಕೊಲೆ ಪ್ರಕರಣ ಸಂಬಂಧ ಬಗೆದಷ್ಟೂ ಅಚ್ಚರಿಯ ವಿಚಾರಗಳು ಬಯಲಾಗುತ್ತಿವೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳದ ಕಿರಣ್​​ ಅವರಿಗೆ 9 ವರ್ಷಗಳ ಹಿಂದೆ ವಿಜಯಪುರದ ನೇತ್ರ ತಜ್ಞೆ ಡಾ. ಪ್ರಿಯಾಂಕಾ ಜೊತೆಗೆ ಮದುವೆ ಆಗಿತ್ತು. ವೈದ್ಯೆಯಾಗಿದ್ದರೂ ಆಕೆ ಪ್ರ್ಯಾಕ್ಟೀಸ್​​ಗೆ ತೆರಳದೆ ಮನೆಯಲ್ಲಿಯೇ ಇರುತ್ತಿದ್ದರು. ಜೊತೆಗೆ ಪತಿಯ ಕುಟುಂಬಸ್ಥರಿಂದಲೂ ಪ್ರಿಯಾಂಕಾ ದೂರವೇ ಉಳಿದಿದ್ದರು. ಕಿರಣ್​​ ಕಡೆಯವರು ಬಂದರೆ ಗಲಾಟೆ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.

ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಡಾ. ಕಿರಣ್​​

ಪ್ರಿಯಾಂಕಾ ಉತ್ತಮ ಆರ್ಥಿಕ ಸ್ಥಿತಿಯ ಹಿನ್ನೆಲೆ ಹೊಂದಿದ್ದರೆ ಕಿರಣ್​​ ಸಾಮಾನ್ಯ ವರ್ಗದಿಂದ ಬಂದವರು. ಹೀಗಾಗಿ ಅರವಳಿಕೆ ತಜ್ಞರಾಗಿದ್ದ ಇವರಿಗೆ ಬಡ ರೋಗಿಗಳ ಮೇಲೆ ವಿಶೇಷ ಕಾಳಜಿ ಇತ್ತು. ಅವರ ನಡವಳಿಕೆಯಿಂದ ಒಳ್ಳೆಯ ಹೆಸರು ಕೂಡ ಮಾಡಿದ್ದರು. ಆದರೆ ಮನೆಗೆ ತೆರಳಿದ ಕೂಡಲೇ ಪತ್ನಿ ಪ್ರಿಯಾಂಕಾ ಜಗಳ ತೆಗೆಯುತ್ತಿದ್ದ ಕಾರಣ ರೋಸಿದ್ದ ಅವರು ಇತ್ತೀಚಿನ ದಿನಗಳಲ್ಲಿ ಮೌನಕ್ಕೆ ಜಾರಿದ್ದರು. ಹೀಗಿದ್ದರೂ ಯಾರೊಂದಿಗೂ ತಮ್ಮ ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಮನೆಯಲ್ಲೇ ಅನಸ್ತೇಶಿಯಾ ತಜ್ಞನ ಭೀಕರ ಕೊಲೆ; ಪತ್ನಿಯಿಂದಲೇ ದುರಂತ ಅಂತ್ಯ ಕಂಡ ವೈದ್ಯ?

ಎರಡನೇ ಮದುವೆಯಾಗಿದ್ದ ಕಿರಣ್​​

ಡಾ.ಕಿರಣ್ ಹೊನ್ನಣ್ಣನವರ್ ಮತ್ತು ಪ್ರಿಯಾಂಕಾ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಮೊದಲ ಪತ್ನಿ ಮತ್ತು ಪತಿಯಿಂದ ವಿಚ್ಛೇದನ ಪಡೆದಿದ್ದ ಇವರಿಗೆ ಮ್ಯಾಟ್ರಿಮೋನಿ ಮೂಲಕ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಎರಡನೇ ವಿವಾಹ ಆಗಿದ್ದರು. ಆದರೆ ಪತಿ ಮೇಲೆ ಪ್ರಿಯಾಂಕಾ ನಿರಂತರವಾಗಿ ಅನುಮಾನಪಡುತ್ತಿದ್ದ ಕಾರಣ, ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಈ ನಡುವೆ ಕಿರಣ್ ಹೊನ್ನಣ್ಣನವರ್ ಅವರನ್ನು ನಿನ್ನೆ ಬೆಳಗ್ಗೆ ಚಾಕುವಿನಿಂದ ಇರಿದು ಪ್ರಿಯಾಂಕಾ ಕೊಲೆ ಮಾಡಿದ್ದಾರೆ. ಬಳಿಕ ಬಳಿಕ ಪುತ್ರ ನಿಹಿಲ್​​ಗೆ 2 ಕಡೆ ಚಾಕುವಿನಿಂದ ಇರಿದಿದ್ದಾರೆ. ಮನೆಗೆ ಹೋದಾಗ ಬಾಲಕ ಉಸಿರಾಡುವುದನ್ನು ಗಮನಿಸಿದ್ದ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ನಿಹಿಲ್​​ಗೆ ಚಿಕಿತ್ಸೆ ಮುಂದುವರಿದಿದೆ.

ತಪ್ಪೊಪ್ಪಿಕೊಂಡಿರುವ ಆರೋಪಿ

ತಾನೇ ಕೊಲೆ ಮಾಡಿರುವುದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗ್ತಿದೆ. ಕೊಲೆ ಬಳಿಕ ಆಕೆ ತಾನೂ ಇನ್ಸುಲಿನ್​​ ಚುಚ್ಚಿಕೊಂಡಿದ್ದ ಕಾರಣ ಲೋ ಶುಗರ್​​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪ್ರಿಯಾಂಕಾ ಆರೋಗ್ಯ ಸ್ಥಿರವಾಗಿದ್ದು, ಶುಗರ್ ಏರುಪೇರು ಬಿಟ್ಟರೆ ಬೇರೆ ಸಮಸ್ಯೆ ಇಲ್ಲ. ಮಾನಸಿಕ ಅಥವಾ ಇತರ ಯಾವುದೇ ಕಾಯಿಲೆ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ್ ಹಸಬಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡ ಮತ್ತೊಂದು ಸಿನಿಮಾ – Kannada News | Shradha Kapoor starrer Eetha movie release to be postponed due to Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24ಕ್ಕೆ ಬಿಡುಗಡೆ ಆಗಲಿದೆ. ಭಾರಿ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರು ಸಹ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಬೇರೆ ಕೆಲವು ಸಿನಿಮಾಗಳು ಬಿಡುಗಡೆ ಆಗುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದವು. ಆದರೆ ಇದೀಗ ಒಂದೊಂದೆ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕ ಬದಲಾಯಿಸುವ ಮೂಲಕ ‘ಟಾಕ್ಸಿಕ್’ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಳ್ಳುತ್ತಿವೆ. ಇದು ಜಾಣತನದ ನಿರ್ಣಯವೂ ಸಹ ಆಗಿದೆ.

ಈಗಾಗಲೇ ತೆಲುಗಿನ ಸ್ಟಾರ್ ನಟ ನಾನಿ ಅವರ ‘ಪ್ಯಾರಡೈಸ್’ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ. ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ 22 ಕ್ಕೆ ಬಿಡುಗಡೆ ಆಗುವುದಕ್ಕಿತ್ತು, ಆದರೆ ‘ಟಾಕ್ಸಿಕ್’ ಸಿನಿಮಾ ಬಹುತೇಕ ಅದೇ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು, ಸಿನಿಮಾ ಈಗ ಸೆಪ್ಟೆಂಬರ್ 24 ರಂದು ಅಂದರೆ ‘ಟಾಕ್ಸಿಕ್’ ರಿಲೀಸ್ ಆದ ಒಂದು ತಿಂಗಳ ಬಳಿಕವಷ್ಟೆ ರಿಲೀಸ್ ಆಗಲಿದೆ.

ಇದೀಗ ಮತ್ತೊಂದು ಸಿನಿಮಾ ‘ಟಾಕ್ಸಿಕ್’ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡಿದೆ. ಅದುವೇ ಹಿಂದಿಯ ‘ಇಠ’. ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಯೋಗ್ರಫಿ ಸಿನಿಮಾ ‘ಇಠ’ದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಮರಾಠಿ ನೃತ್ಯಗಾರ್ತಿ, ನಟಿಯೊಬ್ಬರ ಜೀವನ ಆಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾ ಆಗಸ್ಟ್ 28ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಸಿನಿಮಾದ ದಿನಾಂಕ ಬದಲಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್

ಮೂಲಗಳ ಪ್ರಕಾರ, ‘ಇಠ’ ಸಿನಿಮಾದ ಬಿಡುಗಡೆಯನ್ನು ಆಗಸ್ಟ್ 24ಕ್ಕಿಂತಲೂ ಮುಂಚಿತವಾಗಿಯೇ ಮಾಡಲು ಚಿತ್ರತಂಡ ಯೋಜಿಸಿದೆಯಂತೆ. ನಿರ್ಮಾಣ ಸಂಸ್ಥೆಯಾದ ಮ್ಯಾಡಾಕ್ ಫಿಲ್ಮ್ಸ್ ಅವರು ಚಿತ್ರದ ಬಿಡುಗಡೆಯನ್ನು ಮುಂದೂಡಬೇಕೇ ಅಥವಾ ಮುಂಚಿತವಾಗಿ ಬಿಡುಗಡೆ ಮಾಡಬೇಕೇ ಎಂದು ಯೋಚಿಸುತ್ತಿದ್ದಾರೆ. ಆದರೆ, ಅವರು ಚಿತ್ರವನ್ನು ಮೂಲ ದಿನಾಂಕವಾದ ಆಗಸ್ಟ್ 28 ರಂದೇ ಬಿಡುಗಡೆ ಮಾಡಲು ಉದ್ದೇಶಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಡುಗಡೆಯ ದಿನಾಂಕ ಬದಲಾವಣೆಯ ಕುರಿತು ಅವರು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಒಟ್ಟು 4 ಸಿನಿಮಾಗಳು ಬಿಡುಗಡೆಯಾಗಲು ಸಿದ್ಧವಾಗಿದ್ದವು. ಈ ಅವಧಿಯನ್ನು ಮೊದಲು ಕಾಯ್ದಿರಿಸಿದ ಚಿತ್ರ ‘ಖೋಸ್ಲಾ ಕಾ ಘೋಷ್ಲಾ 2’. ಮೊದಲ ಭಾಗದಂತೆಯೇ, ಈ ಚಿತ್ರದ ಮುಂದುವರಿದ ಭಾಗದಲ್ಲಿ ಅನುಪಮ್ ಖೇರ್, ಬೊಮನ್ ಇರಾನಿ, ರಣವೀರ್ ಶೌರಿ, ಪರ್ವಿನ್ ದಬಾಸ್ ಮತ್ತು ತಾರಾ ಶರ್ಮಾ ಮೊದಲಾದವರು ನಟಿಸಿದ್ದಾರೆ. ನಂತರ, ‘ದಿ ವ್ವಾನ್’ (The Vvan) ಚಿತ್ರತಂಡ ಕೂಡ ಆಗಸ್ಟ್ 28 ರಂದೇ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಕಳೆದ ವಾರ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ನಟನೆಯ ಜಂಗಲ್ ಅಡ್ವೆಂಚರ್ ಚಿತ್ರವು ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

‘ಈಠಾ’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರು ಪ್ರಸಿದ್ಧ ಮರಾಠಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವಕರ್ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಛಾವಾ’ ಸಿನಿಮಾ ನಿರ್ದೇಶಿಸಿದ್ದ ಲಕ್ಷ್ಮಣ್ ಉಠೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯ್ಯೂಬ್ ಕೂಡ ನಟಿಸಿದ್ದಾರೆ. ಇದನ್ನು ಮ್ಯಾಡಾಕ್ ಫಿಲ್ಮ್ಸ್‌ನ ದಿನೇಶ್ ವಿಜನ್ ನಿರ್ಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ! – Kannada News | Puri Jagannath Rath Yatra: Significance of Yellow and Red Colors in Devotion

ಪುರಿ ಜಗನ್ನಾಥ ರಥಯಾತ್ರೆImage Credit source: Getty Images

ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಇಂದು, ಅಂದರೆ ಜುಲೈ 16 (ಗುರುವಾರ) ದಿಂದ ಅತ್ಯಂತ ವೈಭವದಿಂದ ಪ್ರಾರಂಭವಾಗುತ್ತಿದೆ. ಈ ಒಂಬತ್ತು ದಿನಗಳ ಸುದೀರ್ಘ ರಥೋತ್ಸವದಲ್ಲಿ ಜಗನ್ನಾಥನು ತನ್ನ ಒಡಹುಟ್ಟಿದವರಾದ ಬಲಭದ್ರ ಮತ್ತು ಸುಭದ್ರೆಯೊಂದಿಗೆ ಮುಖ್ಯ ಆಲಯದಿಂದ ಗುಂಡಿಚಾ ದೇವಸ್ಥಾನಕ್ಕೆ ಪಯಣಿಸುತ್ತಾನೆ. ಭಗವಂತನೇ ಭಕ್ತರ ಬಳಿಗೆ ಬರುವ ಈ ಅದ್ಭುತ ಮತ್ತು ಐತಿಹಾಸಿಕ ಕ್ಷಣವನ್ನು ಕಣ್ಣುತುಂಬಿಕೊಳ್ಳಲು ಜಗತ್ತಿನಾದ್ಯಂತ ಲಕ್ಷಾಂತರ ಜನರು ಪುರಿಗೆ ಆಗಮಿಸುತ್ತಾರೆ.

ಜಗನ್ನಾಥ ರಥಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಬಣ್ಣಗಳು, ಭಕ್ತಿ ಮತ್ತು ಸಂಪ್ರದಾಯಗಳ ಮಹಾ ಸಂಗಮವಾಗಿದೆ. ಪುರಿಯ ಬೀದಿಗಳಲ್ಲಿ ಲಕ್ಷಾಂತರ ಭಕ್ತರು ಒಟ್ಟಿಗೆ ಸೇರಿ ರಥವನ್ನು ಎಳೆಯುವಾಗ ಭಕ್ತಿಯ ಪರಕಾಷ್ಠೆ ಕಣ್ಣಿಗೆ ಕಟ್ಟುತ್ತದೆ. ಈ ಭವ್ಯ ಹಬ್ಬದ ವಾತಾವರಣದಲ್ಲಿ ಭಕ್ತರು ಧರಿಸುವ ಉಡುಪುಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣಗಳು ಅತ್ಯಂತ ಪ್ರಮುಖವಾಗಿ ಎದ್ದು ಕಾಣುತ್ತವೆ. ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳ ಹಿಂದಿರುವ ರಹಸ್ಯವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಂದಿಘೋಷ ರಥ ಮತ್ತು ಬಣ್ಣಗಳ ದೈವಿಕ ನಂಟು:

ಶ್ರೀ ಜಗನ್ನಾಥ ದೇವರ ಮುಖ್ಯ ರಥವಾದ ‘ನಂದಿಘೋಷ’ ರಥವನ್ನು ಮುಖ್ಯವಾಗಿ ಕೆಂಪು ಮತ್ತು ಹಳದಿ ಬಣ್ಣದ ವಸ್ತ್ರಗಳಿಂದಲೇ ಅಲಂಕರಿಸಲಾಗುತ್ತದೆ. ಶ್ರೀ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಈ ಭವ್ಯ ರಥವು 16 ಚಕ್ರಗಳನ್ನು ಹೊಂದಿದೆ. ಭಕ್ತರು ತಮ್ಮ ಆರಾಧ್ಯ ದೈವನ ರಥದ ಬಣ್ಣಗಳನ್ನೇ ಹೋಲುವ ಉಡುಪುಗಳನ್ನು ಧರಿಸುವ ಮೂಲಕ ಭಗವಂತನೊಂದಿಗೆ ನೇರ ಆಧ್ಯಾತ್ಮಿಕ ಸಂಪರ್ಕ ಹೊಂದಲು ಬಯಸುತ್ತಾರೆ. ಇದು ಕೇವಲ ಬಣ್ಣಗಳ ಆಯ್ಕೆಯಲ್ಲ, ಭಕ್ತಿಯ ಸಾಕಾರ ರೂಪವಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ರಥಯಾತ್ರೆಯಲ್ಲಿ ಹಳದಿ ಬಣ್ಣದ ಮಹತ್ವ ಮತ್ತು ಪವಿತ್ರತೆ:

ಹಿಂದೂ ಧರ್ಮ ಮತ್ತು ಸಂಪ್ರದಾಯಗಳಲ್ಲಿ ಹಳದಿ ಬಣ್ಣಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಜಗನ್ನಾಥನನ್ನು ಜಗತ್ಪಾಲಕನಾದ ಶ್ರೀಮನ್ನಾರಾಯಣನ (ವಿಷ್ಣು) ಸ್ವರೂಪವೆಂದು ಆರಾಧಿಸಲಾಗುತ್ತದೆ ಮತ್ತು ವಿಷ್ಣುವಿಗೆ ಹಳದಿ ವಸ್ತ್ರ (ಪೀತಾಂಬರ) ಎಂದರೆ ಅತ್ಯಂತ ಪ್ರೀತಿ. ಹಾಗಾಗಿ, ರಥಯಾತ್ರೆಯ ಸಮಯದಲ್ಲಿ ಹಳದಿ ಬಟ್ಟೆಗಳನ್ನು ಧರಿಸುವುದು ದೈವಿಕ ಆಶೀರ್ವಾದ, ಜ್ಞಾನ, ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಕೆಂಪು ಬಣ್ಣದ ಆಧ್ಯಾತ್ಮಿಕ ಶಕ್ತಿ ಮತ್ತು ಉತ್ಸಾಹ:

ರಥೋತ್ಸವದಲ್ಲಿ ಹಳದಿಯಷ್ಟೇ ಪ್ರಮುಖವಾಗಿ ಕಾಣಿಸಿಕೊಳ್ಳುವ ಮತ್ತೊಂದು ಬಣ್ಣವೆಂದರೆ ಕೆಂಪು. ಭಾರತೀಯ ಸಂಪ್ರದಾಯದಲ್ಲಿ ಕೆಂಪು ಬಣ್ಣವು ಶಕ್ತಿ, ಚೈತನ್ಯ, ಆಧ್ಯಾತ್ಮಿಕ ಉತ್ಸಾಹ ಮತ್ತು ಸೌಭಾಗ್ಯದ ಸಂಕೇತವಾಗಿದೆ. ರಥವನ್ನು ಎಳೆಯಲು ಬೇಕಾದ ಭಕ್ತಿಯ ಶಕ್ತಿಯನ್ನು ಹಾಗೂ ಹಬ್ಬದ ಸಂಭ್ರಮವನ್ನು ಈ ಬಣ್ಣವು ಭಕ್ತರಲ್ಲಿ ಜಾಗೃತಗೊಳಿಸುತ್ತದೆ. ಈ ಕೆಂಪು ಮತ್ತು ಹಳದಿ ಬಣ್ಣಗಳ ಸಂಯೋಜನೆಯು ರಥಯಾತ್ರೆಗೆ ಅತ್ಯಂತ ರೋಮಾಂಚಕ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೋದಲ್ಲಿ ಪ್ರತಿಭಾ ಪಲಾಯನ: ಗಗನಯಾನದ ಹೊತ್ತಲ್ಲೇ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ – Kannada News | ISRO Brain Drain: 100 plus Scientists Resign Amid Gaganyaan, New Rules Imposed

ನವದೆಹಲಿ, ಜುಲೈ 16: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ ಸೇರಿದಂತೆ ಹಲವು ಉಪಗ್ರಹ ಉಡಾವಣೆಗಳ ಯಶಸ್ಸಿಗಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಆದರೆ ಇಂತಹ ನಿರ್ಣಾಯಕ ಘಟ್ಟದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಒಳಗೆ ಭಾರಿ ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಇಸ್ರೋ(ISRO)ದ ಕನಿಷ್ಠ 100 ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದು, ಸಂಸ್ಥೆಗೆ ಭಾರಿ ಹಿನ್ನಡೆ ತಂದಿದೆ.

ಅನುಭವಿ ವಿಜ್ಞಾನಿಗಳ ಈ ದಿಢೀರ್ ಹೊರಹರಿವನ್ನು ತಡೆಯಲು ಎಚ್ಚೆತ್ತುಕೊಂಡಿರುವ ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಜುಲೈ 14 ರಂದು ಹೊಸ ಆಂತರಿಕ ಜ್ಞಾಪಕ ಪತ್ರವನ್ನು ಹೊರಡಿಸಿದ್ದು, ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂಪ್ರೇರಿತ ನಿವೃತ್ತಿ (VRS) ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ.

ಇನ್ಮುಂದೆ ರಾಜೀನಾಮೆ ಅಷ್ಟು ಸುಲಭವಲ್ಲ

ಇಷ್ಟು ದಿನ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರು ತಮ್ಮ ವ್ಯಾಪ್ತಿಯ ವಿಜ್ಞಾನಿಗಳ ರಾಜೀನಾಮೆ ಅಥವಾ ವಿಆರ್‌ಎಸ್ ವಿನಂತಿಗಳನ್ನು ಪರಿಶೀಲಿಸಿ ಸುಲಭವಾಗಿ ಅಂಗೀಕರಿಸುವ ಅಧಿಕಾರ ಹೊಂದಿದ್ದರು. ಆದರೆ ಹೊಸ ನಿಯಮಗಳ ಪ್ರಕಾರ ಈ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ.

ಕೇಂದ್ರೀಕೃತ ವ್ಯವಸ್ಥೆ: ಗಗನಯಾನದಂತಹ ದೇಶದ ಪ್ರಮುಖ ಕಾರ್ಯಾಚರಣೆಗಳಲ್ಲಿ ತೊಡಗಿರುವ ‘ಗ್ರೂಪ್ ಎ’ ದರ್ಜೆಯ ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯ ರಾಜೀನಾಮೆಗಳನ್ನು ಇನ್ಮುಂದೆ ಸ್ಥಳೀಯವಾಗಿ ಸ್ವೀಕರಿಸುವಂತಿಲ್ಲ.

ದೆಹಲಿ ಮಟ್ಟದಲ್ಲಿ ಪರಿಶೀಲನೆ: ಎಲ್ಲಾ ರಾಜೀನಾಮೆ ಅರ್ಜಿಗಳನ್ನು ನೇರವಾಗಿ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಉನ್ನತ ಮಟ್ಟದ ಸಮಿತಿಯೇ ಸೂಕ್ಷ್ಮವಾಗಿ ಪರಿಶೀಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಮತ್ತಷ್ಟು ಓದಿ:ISRO SAC Recruitment 2026: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ

ಯಾವುದೇ ಮುನ್ಸೂಚನೆಯಿಲ್ಲದೆ ವಿಜ್ಞಾನಿಗಳು ಹೊರನಡೆದರೆ, ಆ ಜಾಗಕ್ಕೆ ತಕ್ಷಣವೇ ಮತ್ತೊಬ್ಬರನ್ನು ತರುವುದು ಅಸಾಧ್ಯ. ಏಕೆಂದರೆ ಬಾಹ್ಯಾಕಾಶ ವಿಜ್ಞಾನದಲ್ಲಿ ಪ್ರತಿಯೊಬ್ಬ ವಿಜ್ಞಾನಿಯ ಪರಿಣತಿಯೂ ಅತ್ಯಂತ ವಿಶಿಷ್ಟವಾದುದು. ಈ ಹಠಾತ್ ನಿರ್ಗಮನ ದೇಶದ ಕೋಟ್ಯಂತರ ರೂಪಾಯಿಗಳ ಯೋಜನೆಗಳ ಗಡುವನ್ನು ವಿಸ್ತರಿಸುವಂತೆ ಮಾಡುತ್ತಿವೆ ಎಂಬುದು ಸರ್ಕಾರದ ಕಳವಳವಾಗಿದೆ.

ವಿಜ್ಞಾನಿಗಳು ಇಸ್ರೋ ತೊರೆಯುತ್ತಿರುವುದಕ್ಕೆ ಅಸಲಿ ಕಾರಣವೇನು?

ಸರ್ಕಾರ ಅಥವಾ ಇಸ್ರೋ ಈ ವಲಸೆಗೆ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ತಜ್ಞರ ಪ್ರಕಾರ ಇದಕ್ಕೆ ಮುಖ್ಯ ಕಾರಣ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮದ ಭಾರಿ ಬೆಳವಣಿಗೆ ಎಂದು ಹೇಳುತ್ತಿದ್ದಾರೆ.

ಖಾಸಗಿ ಸ್ಟಾರ್ಟ್‌ಅಪ್‌ಗಳ ಆಕರ್ಷಣೆ: ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದೆ. ಸ್ಕೈರೂಟ್ (Skyroot), ಅಗ್ನಿಕುಲ್ (Agnikul) ನಂತಹ ನೂರಾರು ನವೋದ್ಯಮಗಳು ಕೋಟ್ಯಂತರ ರೂಪಾಯಿ ಬಂಡವಾಳದೊಂದಿಗೆ ಭಾರತದಲ್ಲಿ ತಲೆಯೆತ್ತಿವೆ. ಈ ಖಾಸಗಿ ಕಂಪನಿಗಳು ಇಸ್ರೋದ ಅನುಭವಿ ವಿಜ್ಞಾನಿಗಳಿಗೆ ಭಾರಿ ಸಂಬಳ ಹಾಗೂ ಉನ್ನತ ನಾಯಕತ್ವದ ಹುದ್ದೆಗಳ ಆಮಿಷ ಒಡ್ಡಿ ತಮ್ಮತ್ತ ಸೆಳೆಯುತ್ತಿವೆ.

ಸಾಂಸ್ಥಿಕ ಒತ್ತಡ: ಕೇವಲ ಸಂಬಳವಷ್ಟೇ ಅಲ್ಲದೆ, ಇಸ್ರೋದಲ್ಲಿನ ವೃತ್ತಿಜೀವನದ ಬೆಳವಣಿಗೆಯ ಮಂದಗತಿ, ಅತಿಯಾದ ಆಡಳಿತಾತ್ಮಕ ಒತ್ತಡ ಹಾಗೂ ಮುಕ್ತ ಕೆಲಸದ ಸಂಸ್ಕೃತಿಯ ಕೊರತೆಯೂ ವಿಜ್ಞಾನಿಗಳನ್ನು ಹೊರಹೋಗುವಂತೆ ಪ್ರೇರೇಪಿಸುತ್ತಿದೆ ಎಂದು ಇಸ್ರೋದ ಮಾಜಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಕೇವಲ ಕಠಿಣ ನಿಯಮಗಳನ್ನು ತಂದು ವಿಜ್ಞಾನಿಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ, ಬದಲಿಗೆ ಅವರಿಗೆ ಸೂಕ್ತ ಪ್ರೇರಣೆ ನೀಡಬೇಕು ಎಂಬುದು ಅವರ ವಾದ.

ಇಸ್ರೋದಲ್ಲಿ ಇಂತಹ ಪ್ರತಿಭಾ ಪಲಾಯನ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಸಲ್ಲಿಕೆಯಾಗಿದ್ದ ಆರ್‌ಟಿಐ (RTI) ವರದಿಯೊಂದರ ಪ್ರಕಾರ, 2012 ರಿಂದ 2017 ರ ನಡುವಿನ ಕೇವಲ ಐದು ವರ್ಷಗಳ ಅವಧಿಯಲ್ಲೇ ಸುಮಾರು 300 ಕ್ಕೂ ಹೆಚ್ಚು ನುರಿತ ವಿಜ್ಞಾನಿಗಳು ಇಸ್ರೋ ಸಂಸ್ಥೆಯನ್ನು ತೊರೆದಿದ್ದರು.

ಆದರೆ, ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಭಾರಿ ವ್ಯತ್ಯಾಸವಿದೆ. ಹಿಂದೆ ಭಾರತ ಕೇವಲ ಉಪಗ್ರಹಗಳನ್ನು ಉಡಾಯಿಸುತ್ತಿತ್ತು. ಆದರೆ ಇಂದು ಗಗನಯಾನದ ಮೂಲಕ ಭಾರತೀಯರನ್ನು ಸ್ವದೇಶಿ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವ ಹಾಗೂ ಚಂದ್ರ, ಮಂಗಳ ಗ್ರಹಗಳ ಅನ್ವೇಷಣೆಯ ಅತ್ಯಂತ ಜವಾಬ್ದಾರಿಯುತ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅನುಭವಿ ತಜ್ಞರ ಜ್ಞಾನವನ್ನು ಸಂಸ್ಥೆಯೊಳಗೆ ಉಳಿಸಿಕೊಳ್ಳುವುದು ಭಾರತದ ಜಾಗತಿಕ ಪ್ರತಿಷ್ಠೆಯ ದೃಷ್ಟಿಯಿಂದ ಅತ್ಯಂತ ಕಡ್ಡಾಯವಾಗಿದೆ. ಸರ್ಕಾರದ ಈ ಹೊಸ ‘ಬಿಗಿ ನೀತಿ’ ವಿಜ್ಞಾನಿಗಳ ವಲಸೆಯನ್ನು ತಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:38 am, Thu, 16 July 26

Source link

72 ಕೋಟಿ ರೂ. ಅಕ್ರಮ ಪ್ರಕರಣ: ನಿವೃತ್ತಿಗೆ 15 ದಿನ ಬಾಕಿ ಇರುವಾಗಲೇ ಕೆಆರ್‌ಡಿಎಲ್ ಇಂಜಿನಿಯರ್ ಬಂಧನ – Kannada News | Koppal Rs 72 Crore Scam: Lokayukta Arrests KRIDL Engineer ZM Chincholkar Ahead of Retirement

ನಿವೃತ್ತಿಗೆ 15 ದಿನ ಬಾಕಿ ಇರುವಾಗಲೇ ಕೆಆರ್‌ಡಿಎಲ್ ಇಂಜಿನಿಯರ್ ಬಂಧನImage Credit source: tv9

ಕೊಪ್ಪಳ, ಜುಲೈ 16: ಕೊಪ್ಪಳ (Koppal) ಜಿಲ್ಲೆಯಲ್ಲಿ ಸುಮಾರು ಐದು ವರ್ಷಗಳ ಹಿಂದೆ ನಡೆದಿದ್ದ ಎನ್ನಲಾದ 72 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕೆಆರ್‌ಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಕಾರ್ಯನಿರ್ವಾಹಕ ಇಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಹಾಗೂ ಗುತ್ತಿಗೆದಾರ ದೇವರಾಜ್ ಅವರನ್ನು ಬಂಧಿಸಲಾಗಿದೆ. ನಿವೃತ್ತಿಗೆ ಕೇವಲ 15 ದಿನ ಬಾಕಿ ಇರುವಾಗಲೇ ಅಧಿಕಾರಿಯ ಬಂಧನ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ಬಂದಿದೆ.

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು ಹಲವು ದೂರು

ಲಭ್ಯ ಮಾಹಿತಿಯ ಪ್ರಕಾರ, 339 ಕಾಮಗಾರಿಗಳನ್ನು ಕೈಗೊಳ್ಳದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸುಮಾರು 72 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದ ಕೇಂದ್ರಬಿಂದುವಾಗಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಅಧಿಕಾರಿಗಳು ಆರೋಪಗಳಿಗೆ ಪೂರಕ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಬಂಧನದ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿದ್ದ ಕಾರ್ಯನಿರ್ವಾಹಕ ಇಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಗುತ್ತಿಗೆದಾರ ದೇವರಾಜ್ ಅವರನ್ನೂ ಬಂಧಿಸಲಾಗಿದೆ.

ಕಾಮಗಾರಿ ನಡೆಸದೆ ಬಿಲ್ ಸಲ್ಲಿಸಿ ಹಣ ಪಡೆದ ಆರೋಪ


ಕಾಮಗಾರಿ ನಡೆಸದೆ ಬಿಲ್‌ಗಳನ್ನು ಸಲ್ಲಿಸಿ ಹಣ ಪಡೆದಿರುವ ಆರೋಪದ ಜೊತೆಗೆ, ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಜಿಎಸ್‌ಟಿ ಹಣದ ದುರುಪಯೋಗ ಮಾಡಿರುವ ಆರೋಪವೂ ವ್ಯಕ್ತವಾಗಿತ್ತು. ಈ ಸಂಬಂಧವೂ ಲೋಕಾಯುಕ್ತದಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸೇವೆಯಿಂದ ವಜಾಗೊಂಡಿದ್ದ ಚಿಂಚೋಳ್ಕರ್

ಕಳೆದ ವರ್ಷವೇ ಚಿಂಚೋಳ್ಕರ್ ವಿರುದ್ಧ ಕೆಆರ್‌ಡಿಎಲ್ ಅಧಿಕಾರಿಗಳು ಹಾಗೂ ಇತರ ದೂರುದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿಂದೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತಾದರೂ, ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು ಎಂದು ತಿಳಿದುಬಂದಿದೆ.

ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಅಗತ್ಯವಿದ್ದರೆ ಚಿಂಚೋಳ್ಕರ್ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್: ನಂಬರ್ ಪ್ಲೇಟ್, ಚೆಸ್ಸಿ ಅಳಿಸಿ ಮಾರಾಟ ದಂಧೆ – Kannada News | Major Bike Theft Gang Uncovered in Raichur: 18 Stolen Vehicles Worth 17.3 Lakh Seized

ರಾಯಚೂರು, ಜು.16: ನಗರದ ಮಾಲ್‌ಗಳು ಹಾಗೂ ಜನದಟ್ಟಣೆಯ ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು, ಅವುಗಳ ಇಂಜಿನ್ ಹಾಗೂ ಚೆಸ್ಸಿ ನಂಬರ್‌ಗಳನ್ನು ಅಳಿಸಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಬೈಕ್ ಮೆಕ್ಯಾನಿಕ್ ಹಾಗೂ ಆತನ ಸಹಚರನನ್ನು ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇವಲ ಒಂದು ಬೈಕ್ ಪತ್ತೆ ಹಚ್ಚಲು ಹೋದ ಪೊಲೀಸರಿಗೆ ಬರೋಬ್ಬರಿ 18 ಬೈಕ್ ಕಳ್ಳತನದ ಸರಣಿ ಜಾಲ ಬಯಲಾಗಿರುವುದು ದೊಡ್ಡ ಯಶಸ್ಸು ತಂದುಕೊಟ್ಟಿದೆ. ಬಂಧಿತ ಆರೋಪಿಗಳನ್ನು ಬೈಕ್ ಮೆಕ್ಯಾನಿಕ್ ಇಮ್ರಾನ್ (26) ಹಾಗೂ ಗಾರೆ ಕೆಲಸ ಮಾಡುತ್ತಿದ್ದ ಆತನ ಸಹಚರ ಆಕಾಶ್ (20) ಎಂದು ಗುರುತಿಸಲಾಗಿದೆ. ನಗರದ ಪ್ರಸಿದ್ಧ ‘ಮ್ಯಾಕ್ಸ್’ ಬಟ್ಟೆ ಮಾಲ್ ಎದುರು ಸಾರ್ವಜನಿಕರೊಬ್ಬರು ನಿಲ್ಲಿಸಿದ್ದ ಬೈಕ್ ಅನ್ನು ಈ ಇಬ್ಬರು ಇತ್ತೀಚೆಗೆ ಕದ್ದಿದ್ದರು. ಈ ಕುರಿತು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬೈಕ್ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಇಮ್ರಾನ್ ಮತ್ತು ಆಕಾಶ್ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಸರಣಿ ಬೈಕ್ ಕಳ್ಳತನದ ಜಾಲ ಬಯಲಾಗಿದೆ.

ಆರೋಪಿ ಇಮ್ರಾನ್ ಬೈಕ್ ಮೆಕ್ಯಾನಿಕ್ ಆಗಿದ್ದರಿಂದ ಆತನಿಗೆ ಬೈಕ್‌ಗಳನ್ನು ಕಳ್ಳತನ ಮಾಡುವ ಕೆಲಸ ಚೆನ್ನಾಗಿ ಗೊತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಹ್ಯಾಂಡಲ್ ಲಾಕ್ ಮುರಿದು ಸುಲಭವಾಗಿ ಬೈಕ್ ಕದಿಯುತ್ತಿದ್ದ ಈ ಇಬ್ಬರು, ತಕ್ಷಣವೇ ಆ ಬೈಕ್‌ಗಳನ್ನು ಗ್ಯಾರೇಜ್‌ಗೆ ತರುತ್ತಿದ್ದರು. ಪೊಲೀಸರು ಅಥವಾ ಮಾಲೀಕರು ಗುರುತಿಸಬಾರದು ಎಂಬ ಕಾರಣಕ್ಕೆ ಬೈಕ್‌ನ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದರಲ್ಲದೆ, ಮೆಕ್ಯಾನಿಕ್ ಉಪಕರಣಗಳನ್ನು ಬಳಸಿ ಬೈಕ್‌ನ ಮೇಲಿರುವ ಅಸಲಿ ಚೆಸ್ಸಿ ನಂಬರ್ ಹಾಗೂ ಇಂಜಿನ್ ನಂಬರ್‌ಗಳನ್ನೇ ಸಂಪೂರ್ಣವಾಗಿ ಅಳಿಸಿ ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳು ನೀಡಿದ ಮಹತ್ವದ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 17 ಲಕ್ಷದ 30 ಸಾವಿರ ರೂಪಾಯಿ ಮೌಲ್ಯದ 18 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ವಾಹನಗಳಲ್ಲಿ ದುಬಾರಿ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಹಾಗೂ ಪಲ್ಸರ್ ಬೈಕ್‌ಗಳು ಸೇರಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾಳೆ ಆಷಾಢ ಮಾಸದ ಮೊದಲ ಶುಕ್ರವಾರ; ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಹೇಗಿದೆ ನೋಡಿ – Kannada News | Chamundi Hills Gears Up for Ashadha Fridays: EO Roopa Details Extensive Preparations

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಭಕ್ತರಿಗೆ ಸುಗಮ ದರ್ಶನ ಒದಗಿಸಲು ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರೂಪಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಾರಿಯ ಆಷಾಢದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಪ್ರಮುಖವಾಗಿ, ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಎದುರಾದ ಗೊಂದಲಗಳನ್ನು ನಿವಾರಿಸಿ, ಸುಗಮ ದರ್ಶನಕ್ಕೆ ಒತ್ತು ನೀಡಲಾಗಿದೆ. ಶಶಿ ರಂಜನ್ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದ್ದು, ಶುಕ್ರವಾರ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಒಂದು ಲಕ್ಷ ಲಾಡು ಪ್ರಸಾದ ತಯಾರಿಕೆಗೆ ಚಾಲನೆ ನೀಡಲಾಗಿದ್ದು, ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Source link

Exit mobile version