Ashadha Amavasya 2026: ಇಂದು ಆಷಾಢ ಅಮಾವಾಸ್ಯೆ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Ashadha Amavasya 2026: Bhaumavati Yoga, Significance and Rituals for Prosperity

ಸನಾತನ ಧರ್ಮದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಗೂ ತನ್ನದೇ ಆದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವಿದೆ. ಆದರೆ, ಆಷಾಢ ಮಾಸದ ಅಮಾವಾಸ್ಯೆಯನ್ನು ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರ ಪರ್ವಕಾಲ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ ಆಷಾಢ ಅಮಾವಾಸ್ಯೆಯು ಜುಲೈ 14 ರಂದು ಬಂದಿದ್ದು, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಲ್ಲಿ ಅತ್ಯಂತ ಅಪರೂಪದ ಯೋಗವನ್ನು ಹೊತ್ತು ತಂದಿದೆ. ಈ ಪವಿತ್ರ ದಿನದ ಮಹತ್ವ, ಆಚರಣೆಗಳು ಮತ್ತು ಆಹಾರ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಭೌಮವತಿ ಅಮಾವಾಸ್ಯೆಯ ಅಪರೂಪದ ಕಾಕತಾಳೀಯ:

ಅಮಾವಾಸ್ಯೆಯು ವಾರದ ದಿನಗಳ ಆಧಾರದ ಮೇಲೆ ವಿಶೇಷ ಹೆಸರನ್ನು ಪಡೆಯುತ್ತದೆ. ಸೋಮವಾರದಂದು ಅಮಾವಾಸ್ಯೆ ಬಂದರೆ ಅದನ್ನು ಸೋಮವತಿ ಅಮಾವಾಸ್ಯೆ ಎಂದೂ, ಮಂಗಳವಾರ ಬಂದರೆ ಅದನ್ನು ಭೌಮವತಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. 2026ರ ಜುಲೈ 14ರಂದು ಮಂಗಳವಾರ ಇರುವುದರಿಂದ, ಈ ಬಾರಿ ಬಂದಿರುವುದು ಕೇವಲ “ಭೌಮವತಿ ಅಮಾವಾಸ್ಯೆ” ಮಾತ್ರ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ‘ಭೂಮಿ ಪುತ್ರ’ ಅಥವಾ ‘ಭೌಮ’ ಎಂದು ಕರೆಯುವುದರಿಂದ, ಈ ದಿನ ಮಾಡುವ ಆರಾಧನೆಗೆ ವಿಶೇಷ ಶಕ್ತಿಯಿರುತ್ತದೆ. ಜಾತಕದಲ್ಲಿ ಮಂಗಳ ದೋಷ ಇರುವವರು ಅಥವಾ ಸಾಲದ ಬಾಧೆಯಿಂದ ಬಳಲುತ್ತಿರುವವರು ಈ ದಿನ ಪರಿಹಾರ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ.

ಪಿತೃ ತರ್ಪಣ ಮತ್ತು ಶ್ರಾದ್ಧ ಕಾರ್ಯದ ಮಹತ್ವ:

ಆಷಾಢ ಅಮಾವಾಸ್ಯೆಯು ನಮ್ಮ ಅಗಲಿದ ಪೂರ್ವಜರನ್ನು (ಪಿತೃಗಳನ್ನು) ಸ್ಮರಿಸಲು ಮತ್ತು ಅವರ ಕೃಪೆಗೆ ಪಾತ್ರರಾಗಲು ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಈ ದಿನ ನದಿ, ಸಮುದ್ರ ಅಥವಾ ಜಲಮೂಲಗಳ ಬಳಿ ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಕುಟುಂಬದಲ್ಲಿರುವ ‘ಪಿತೃ ದೋಷ’ಗಳನ್ನು ನಿವಾರಿಸಿ, ವಂಶಾಭಿವೃದ್ಧಿ, ಧನಲಾಭ ಮತ್ತು ಮನೆಯಲ್ಲಿ ನೆಮ್ಮದಿಯನ್ನು ಕರುಣಿಸುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗೋ ಪೂಜೆ ಮತ್ತು ಕರ್ಮ ಫಲಗಳ ನಿವಾರಣೆ:

ಈ ದಿನ ಗೋವಿನ (ಹಸುವಿನ) ಸೇವೆ ಮಾಡುವುದು ಕೋಟಿ ಪುಣ್ಯಕ್ಕೆ ಸಮಾನ ಎಂದು ಶಾಸ್ತ್ರಗಳು ಹೇಳುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಗೋವಿನ ದರ್ಶನ ಪಡೆಯುವುದು ಮತ್ತು ಅದಕ್ಕೆ ಹಸಿರು ಹುಲ್ಲು, ಬೆಲ್ಲ ಅಥವಾ ಆಹಾರ ನೀಡುವುದು ಅತ್ಯಂತ ಶುಭ ತರುತ್ತದೆ. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿರುವುದರಿಂದ, ಈ ದಿನ ಗೋಸೇವೆ ಮಾಡುವುದರಿಂದ ನಮ್ಮ ಹಿಂದಿನ ಜನ್ಮಗಳ ಪಾಪ ಕರ್ಮಗಳು ಕರಗಿ, ಸಕಲ ದೇವತೆಗಳ ಆಶೀರ್ವಾದ ದೊರೆಯುತ್ತದೆ.

ಗುರು ಗ್ರಹದ ಅಸ್ತಮ ಮತ್ತು ಧಾರ್ಮಿಕ ನಿಯಮಗಳು:

ಈ ಬಾರಿಯ ಆಷಾಢ ಅಮಾವಾಸ್ಯೆಯ ಮತ್ತೊಂದು ದೊಡ್ಡ ಜ್ಯೋತಿಷ್ಯ ವಿದ್ಯಮಾನವೆಂದರೆ, ಇದೇ ದಿನ ದೇವಗುರು ಬೃಹಸ್ಪತಿ (ಗುರು ಗ್ರಹ) ಅಸ್ತಮಿಸುತ್ತಾನೆ. ಈ ಸ್ಥಿತಿಯು ಆಗಸ್ಟ್ 12 ರವರೆಗೆ ಇರಲಿದೆ. ಗುರು ಅಸ್ತಮದ ಅವಧಿಯಲ್ಲಿ ಮದುವೆ, ಗೃಹಪ್ರವೇಶದಂತಹ ಯಾವುದೇ ಶುಭ ಮತ್ತು ಮಾಂಗಲಿಕ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಆದರೆ, ಈ ಸಮಯವು ಜಪ, ತಪ, ಮಂತ್ರ, ಧ್ಯಾನ ಮತ್ತು ದಾನ ಧರ್ಮಗಳಂತಹ ಆಧ್ಯಾತ್ಮಿಕ ಕಾರ್ಯಗಳಿಗೆ ಬಂಗಾರದಂತಹ ಅವಕಾಶವಾಗಿದೆ.

ಈ ದಿನ ಮಾಡಬೇಕಾದ ಪ್ರಮುಖ ಪೂಜಾ ವಿಧಿಗಳು:

ಈ ಪವಿತ್ರ ದಿನದ ಸಂಪೂರ್ಣ ಲಾಭ ಪಡೆಯಲು ಬೆಳಿಗ್ಗೆ ಬೇಗ ಎದ್ದು ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಪವಿತ್ರ ಸ್ನಾನ ಮಾಡಬೇಕು. ನಂತರ ಬಡವರಿಗೆ ಅಥವಾ ಅಗತ್ಯವಿರುವವರಿಗೆ ಅನ್ನ, ಬಟ್ಟೆ ಅಥವಾ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಕರ್ಮ ದೋಷಗಳು ನಿವಾರಣೆಯಾಗುತ್ತವೆ. ಇದು ಮಂಗಳವಾರದ ಅಮಾವಾಸ್ಯೆಯಾದ್ದರಿಂದ ಆಂಜನೇಯನಿಗೆ ವಿಶೇಷ ಪೂಜೆ ಮಾಡುವುದು ಮತ್ತು ಹನುಮಾನ್ ಚಾಲೀಸಾ ಪಠಿಸುವುದರಿಂದ ಮಂಗಳ ದೋಷ ಮತ್ತು ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ.

ಆಹಾರದ ನಿಯಮಗಳು:

ಅಮಾವಾಸ್ಯೆಯ ದಿನ ನಮ್ಮ ಶರೀರ ಮತ್ತು ಮನಸ್ಸನ್ನು ಹಗುರವಾಗಿಡುವುದು ಮುಖ್ಯ, ಆದ್ದರಿಂದ ಸಾತ್ವಿಕ ಆಹಾರ ಸೇವನೆಗೆ ಒತ್ತು ನೀಡಬೇಕು. ಉಪವಾಸ ಮಾಡುವವರು ಋತುಮಾನದ ಹಣ್ಣುಗಳು, ಹಾಲು, ಮೊಸರು, ಸಾಗು (ಸಾಬೂದಾನ) ಮತ್ತು ಭಕ್ಷ್ಯಗಳನ್ನು ಸೇವಿಸಬಹುದು. ಉಪವಾಸ ಮಾಡದವರು ಹೆಸರುಕಾಳು ತರಕಾರಿ ಸಾರು, ಸಾದಾ ಅನ್ನ, ರೊಟ್ಟಿ ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಮತ್ತು ಮಾದಕ ದ್ರವ್ಯಗಳನ್ನು ಕಡ್ಡಾಯವಾಗಿ ತ್ಯಜಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ರಾಜ್ಯಕ್ಕೆ ಮತ್ತೆ ವಾಪಸಾಯ್ತಾ ಮಹಾಮಾರಿ ಕೊರೊನಾ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 14 July 2026 Latest Updates on Politics, Weather, Rain, SIR, Cinema Online

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Breaking News Today Live Updates in Kannada: ನೆರೆರಾಜ್ಯ ಆಂಧ್ರಪ್ರದೇಶದ ಕಡಪಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದು, ಕರ್ನಾಟಕದಲ್ಲೂ ಜುಲೈನಲ್ಲಿ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋಂಕಿನ ಗಂಭೀರತೆ ಕಡಿಮೆ ಇದ್ದರೂ ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಮಂಗಳೂರಿನ ಉರ್ವಾ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ 11 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಶೇ20ರಷ್ಟು ಸುರಕ್ಷತಾ ಶುಲ್ಕ ವಿಧಿಸಿದ್ದು, ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸುಂಕದ ಸಮರದಿಂದ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಭಾರತದ ಆರ್ಥಿಕತೆಗೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ – Kannada News | Sri Muralis PARAAK Teaser Launch: Actor Addresses Film Concept

ನಟ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಪರಾಕ್ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಹಾಲೇಶ್ ಕೋಗುಂಡಿ ನಿರ್ದೇಶನದ ಈ ಚಿತ್ರವು ಕಮರ್ಷಿಯಲ್ ಅಂಶಗಳ ಜೊತೆಗೆ ವಿಭಿನ್ನ ಕಥಾವಸ್ತುವನ್ನು ಹೊಂದಿದೆ ಎಂದು ಶ್ರೀಮುರಳಿ ತಿಳಿಸಿದ್ದಾರೆ. ಇದು ಕಳೆದ ಎರಡೂವರೆ-ಮೂರು ವರ್ಷಗಳಿಂದ ಚರ್ಚೆಯಲ್ಲಿದ್ದ ಹೊಸ ಪರಿಕಲ್ಪನೆಯ ಸಿನಿಮಾ ಎಂದು ಅವರು ಹೇಳಿದರು. ಚಿತ್ರವು ಕಂಟೆಂಟ್-ಡ್ರಿವನ್ ಆಗಿದ್ದು, ಒಬ್ಬ ವ್ಯಕ್ತಿಯ ಹಿನ್ನೆಲೆ, ಘಟನೆಗಳು ಹಾಗೂ ನ್ಯಾಯದ ಕುರಿತು ಮಹತ್ವದ ವಿಚಾರಗಳನ್ನು ಒಳಗೊಂಡಿದೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು – Kannada News | Iran Missile Attack in Hormuz: UAE Oil Tankers Hit, Indian Sailor Killed Amid US Blockade

ಟೆಹ್ರಾನ್, ಜುಲೈ 14: ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಸೋಮವಾರ ರಾತ್ರಿ ಓಮನ್ ದೇಶದ ಕಡಲ ಗಡಿಯೊಳಗೆ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್​​ಗೆ ಸೇರಿದ ಎರಡು ಬೃಹತ್ ತೈಲ ಟ್ಯಾಂಕರ್ ಹಡಗುಗಳ ಮೇಲೆ ಇರಾನ್ ಸೇನೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಎಂಟು ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಯುಎಇ ದೇಶದ ಹೆಮ್ಮೆಯ ತೈಲ ಹಡಗುಗಳಾದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಹಾರ್ಮುಜ್ ಜಲಸಂಧಿಯ ದಕ್ಷಿಣದ ಪ್ರಮುಖ ಹಡಗು ಮಾರ್ಗದ ಮೂಲಕ ಹಾದುಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಗೊಳಗಾದ ‘ಮೊಂಬಾಸಾ’ ಟ್ಯಾಂಕರ್‌ನಲ್ಲಿದ್ದ ಒಬ್ಬ ಭಾರತೀಯ ನಾವಿಕ ಸಾವನ್ನಪ್ಪಿದ್ದು, ಗಾಯಗೊಂಡ ಎಂಟು ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳಾಗಿದ್ದಾರೆ.

ಹಡಗುಗಳಿಗೆ ಭಾರಿ ಹಾನಿ: ಕ್ಷಿಪಣಿ ಬಿದ್ದ ತಕ್ಷಣ ಎರಡೂ ಬೃಹತ್ ಹಡಗುಗಳಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತು. ಆದರೆ, ಹಡಗಿನಲ್ಲಿದ್ದ ಸಿಬ್ಬಂದಿ ಪ್ರಾಣದ ಹಂಗು ತೊರೆದು ಸಮಯಪ್ರಜ್ಞೆಯಿಂದ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಮಹಾ ವಿನಾಶವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಎಕ್ಸ್​ ಪೋಸ್ಟ್​

ಇದು ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆ: ಯುಎಇ ಆಕ್ರೋಶ

ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಯುಎಇ ವಿದೇಶಾಂಗ ಸಚಿವಾಲಯ (MoFA), ಮೃತಪಟ್ಟ ಭಾರತೀಯ ನಾವಿಕನ ಕುಟುಂಬಕ್ಕೆ ಹಾಗೂ ಭಾರತ ಸರ್ಕಾರಕ್ಕೆ ತನ್ನ ಸಂತಾಪವನ್ನು ಸೂಚಿಸಿದೆ. “ಇರಾನ್‌ನ ಈ ಉದ್ಧಟತನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯ 2817 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇರಾನ್ ತಕ್ಷಣ ತನ್ನ ಎಲ್ಲಾ ಯುದ್ಧ ಚಟುವಟಿಕೆಗಳನ್ನು ನಿಲ್ಲಿಸಿ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು. ನಮ್ಮ ಸಾರ್ವಭೌಮತ್ವದ ಮೇಲಿನ ಈ ದಾಳಿಗೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ” ಎಂದು ಯುಎಇ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದೆ.

ಮತ್ತಷ್ಟು ಓದಿ: ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ

ಇಂದಿನಿಂದ ಇರಾನ್‌ಗೆ ಅಮೆರಿಕದ ಜಲ ದಿಗ್ಬಂಧನ

ಈ ರಕ್ತಪಾತದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣದ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಇರಾನಿನ ಬಂದರುಗಳಿಗೆ ಬರುವ ಮತ್ತು ಅಲ್ಲಿಂದ ಹೋಗುವ ಎಲ್ಲಾ ಹಡಗುಗಳ ಮೇಲೆ ಅಮೆರಿಕದ ನೌಕಾಪಡೆ (CENTCOM) ಕಠಿಣ ಕಡಲ ದಿಗ್ಬಂಧನವನ್ನು ಮರುಸ್ಥಾಪಿಸುತ್ತಿದೆ ಎಂದು ಪ್ರಕಟಿಸಿದ್ದಾರೆ.

ಈ ಹಿಂದೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಏರ್ಪಟ್ಟಿದ್ದ ಮಧ್ಯಂತರ ಒಪ್ಪಂದವು ಇರಾನ್‌ನ ಈ ದಾಳಿಯಿಂದ ಸಂಪೂರ್ಣವಾಗಿ ಮುರಿದುಬಿದ್ದಿದೆ. ತಾನು ಇರಾನ್ ಬಂದರುಗಳನ್ನು ಮಾತ್ರ ಬ್ಲಾಕ್ ಮಾಡುವುದಾಗಿ ಮತ್ತು ಈ ಮಾರ್ಗದಲ್ಲಿ ಹಾದುಹೋಗುವ ಇತರ ದೇಶಗಳ ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಅಮೆರಿಕ ಇನ್ಮುಂದೆ ‘ವಿಶೇಷ ಟೋಲ್ ಶುಲ್ಕ’ ವಿಧಿಸಲಿದೆ ಎಂದು ಟ್ರಂಪ್ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ

ಯುದ್ಧದ ತೀವ್ರತೆ: ಜಾಗತಿಕ ತೈಲದ ಐದನೇ ಒಂದು ಭಾಗವನ್ನು ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಲವಂತವಾಗಿ ಮುಚ್ಚಿದ್ದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ಮಿಲಿಟರಿ ನೆಲೆಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿತ್ತು. ಸದ್ಯ ಈ ಕ್ಷಿಪಣಿ ದಾಳಿಯು ಇಡೀ ಕೊಲ್ಲಿ ಪ್ರದೇಶವನ್ನು ಜಾಗತಿಕ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.

ಭಾರತಕ್ಕೆ ಭಾರಿ ತಲೆನೋವು: ಭಾರತೀಯ ನಾವಿಕ ಸಾವನ್ನಪ್ಪಿರುವುದು ಮತ್ತು ಹಲವರು ಗಾಯಗೊಂಡಿರುವುದು ಭಾರತಕ್ಕೆ ಕಳವಳ ಮೂಡಿಸಿದೆ. ಭಾರತವು ತನ್ನ ಇಂಧನ ಭದ್ರತೆಗಾಗಿ ಈ ಮಾರ್ಗವನ್ನೇ ಅವಲಂಬಿಸಿರುವುದರಿಂದ, ಅಮೆರಿಕ ಮತ್ತು ಇರಾನ್ ನಡೆಸುತ್ತಿರುವ ಈ ಜಿದ್ದಾಜಿದ್ದಿನ ‘ಸುಂಕದ ಸಮರ’ ಹಾಗೂ ಕಡಲ ಯುದ್ಧವು ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿ, ಭಾರತದಲ್ಲೂ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಭೀತಿ ಮೂಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ಮುಂಗಾರು ದುರ್ಬಲ, ಇಂದು-ನಾಳೆ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ – Kannada News | Karnataka Weather Forecast for 14 and 15 July 2026: IMD Predicts Light Rain and Strong Winds Across Several Districts

ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಮುಂಗಾರು (Monsoon Rain) ದುರ್ಬಲಗೊಂಡಿದ್ದು, ಮಳೆಯ ಅಬ್ಬರ ತಗ್ಗಿದೆ. ಆದಾಗ್ಯೂ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಜುಲೈ 14 ಹಾಗೂ 15 ರಂದು ಸಾಧಾರಣ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ (Weather Forecast) ನೀಡಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯಾಗುತ್ತಾ?

ಉತ್ತರ ಒಳನಾಡು ಕರ್ನಾಟಕದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ದಕ್ಷಿಣ ಒಳನಾಡು ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಜುಲೈ 15ಕ್ಕೆ ಎಲ್ಲೆಲ್ಲಿ ಮಳೆಯಾಗಲಿದೆ?

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜುಲೈ 15 (ಬುಧವಾರ) ಕೂಡ ರಾಜ್ಯದ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಒಂದೆರಡು ಕಡೆ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲೂ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಆದರೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇರುವುದರಿಂದ ರೈತರು, ವಾಹನ ಸವಾರರು ಹಾಗೂ ಹೊರಾಂಗಣ ಕೆಲಸ ಮಾಡುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್? – Kannada News | Prithviraj Sukumaran: Why His Malayalam Films Are Failing Despite Rajamouli Varanasi Hype

ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಸದ್ಯ ಅವರು ಎಸ್‌ಎಸ್‌ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ವಂತ ಚಿತ್ರರಂಗದಲ್ಲಿ ಮಾತ್ರ ಅವರ ಮಾರುಕಟ್ಟೆ ಕೊಂಚ ಮಂಕಾದಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾ ‘ಐ, ನೋಬಡಿ’ ಇತ್ತೀಚೆಗಷ್ಟೇ ತೆರೆಕಂಡಿದೆ. ಈ ಚಿತ್ರ ಬೇರೆ ಭಾಷೆಗೂ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೆ ಡಬ್ ಆದ ಭಾಷೆಗಳಲ್ಲಿ ಸಿನಿಮಾ ಅಟ್ಟರ್ ಫ್ಲಾಪ್ ಹಾದಿಯಲ್ಲಿದೆ. ಮಲಯಾಳಂನಲ್ಲೂ ಕೂಡ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ.

ಇತ್ತೀಚಿನ ಸಿನಿಮಾಗಳ ಸರಣಿ ಸೋಲು

ಪೃಥ್ವಿರಾಜ್ ಯಾವಾಗಲೂ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ಅವರ ಸೋಲೋ ಸಿನಿಮಾಗಳು ಯಶಸ್ಸು ಕಂಡಿಲ್ಲ. ‘ಪಲ್ಲಿಚಟ್ಟಂಬಿ’ ಮತ್ತು ‘ಸರ್ಜಮೀನ್’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿವೆ. ಈ ಸಿನಿಮಾಗಳಲ್ಲಿ ಅವರ ನಟನೆಗೆ ಒಳ್ಳೆಯ ಹೆಸರು ಬಂದರೂ ಸಹ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬಿದ್ದಿವೆ.

ಮಾರುಕಟ್ಟೆ ಬಗ್ಗೆ ಗಮನ ಹರಿಸಬೇಕಾದ ಸಮಯ

ಪೃಥ್ವಿರಾಜ್ ಬಹುಭಾಷಾ ನಟನಾಗಿ ಬೇರೆ ಭಾಷೆಗಳಲ್ಲಿ ದೊಡ್ಡ ಯಶಸ್ಸು ಪಡೆಯುತ್ತಿದ್ದಾರೆ. ಆದರೆ ಸ್ವಂತ ಮಲಯಾಳಂ ಚಿತ್ರರಂಗದಲ್ಲಿ ಅವರ ಸಿನಿಮಾಗಳು ಹಿನ್ನಡೆ ಅನುಭವಿಸುತ್ತಿವೆ. ಅವರು ಕೇವಲ ನಟನಷ್ಟೇ ಅಲ್ಲದೆ ಒಬ್ಬ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಹೌದು.

ವಿಶ್ಲೇಷಕರ ಪ್ರಕಾರ, ಪೃಥ್ವಿರಾಜ್ ಈಗ ತಮ್ಮ ಮಲಯಾಳಂ ಸಿನಿಮಾಗಳ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಕೇವಲ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಬದಲು ಕಥೆಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗಿದೆ.

ಇದನ್ನೂ ಓದಿ: ‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಬಿಡುಗಡೆಯಾದಾಗ ಪೃಥ್ವಿರಾಜ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡುವುದು ಖಚಿತ. ಆದರೆ ಆ ಸಿನಿಮಾ ತೆರೆಗೆ ಬರಲು ಇನ್ನೂ ಸಾಕಷ್ಟು ಸಮಯವಿದೆ. ಅಲ್ಲಿಯವರೆಗೆ ಅವರು ತಮ್ಮ ಮಲಯಾಳಂ ಮಾರುಕಟ್ಟೆಯನ್ನು ಗಟ್ಟಿಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಗರಣದ ಬೆನ್ನಲ್ಲೇ ದೊಡ್ಡ ನಿರ್ಧಾರ: ರಾಮ ಮಂದಿರ ‘CEO’ ಹುದ್ದೆಗೆ ಅರ್ಜಿ ಆಹ್ವಾನಿಸಿದ ಟ್ರಸ್ಟ್ – Kannada News | Ram Mandir CEO: Ayodhya Trust Hires Chief for Transparency and Security Reforms

ಅಯೋಧ್ಯೆ, ಜುಲೈ 14: ಇತ್ತೀಚೆಗಷ್ಟೇ ರಾಮ ಮಂದಿರ(Ram Mandir)ದಲ್ಲಿ ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ನೌಕರರೇ ವ್ಯವಸ್ಥಿತವಾಗಿ ಲೂಟಿ ಮಾಡಿದ ಘಟನೆ ಬಯಲಿಗೆ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಮ ಜನ್ಮಭೂಮಿ ಟ್ರಸ್ಟ್​ ಮಂದಿರದ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಟ್ರಸ್ಟ್​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಟ್ರಸ್ಟ್​ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ವಿಶೇಷ ತನಿಖಾ ತಂಡ ಕಳ್ಳತನದ ತನಿಖೆ ನಡೆಸಿ ಈಗಾಗಲೇ ಎಂಟು ಜನರನ್ನು ಜೈಲಿಗಟ್ಟಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಆಯ್ಕೆಯಾಗುವ ಸಿಇಒ ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕಗೊಳ್ಳಲಿದ್ದು, ಇಡೀ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಾ ಟ್ರಸ್ಟ್​ನ ಪ್ರಧಾನ ಕಾರ್ಯದಶರ್ಶಗೆ ವರದಿ ಒಪ್ಪಿಸಬೇಕಾಗುತ್ತದೆ.

ರಾಮನ ಭಕ್ತರಿಗಷ್ಟೇ ಚಾನ್ಸ್, ಇಲ್ಲಿದೆ ವಯಸ್ಸು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ
ಮಂದಿರದ ಪವಿತ್ರತೆ ಮತ್ತು ಭದ್ರತೆಯನ್ನು ಕಾಯಬಲ್ಲ ಅತ್ಯಂತ ದಕ್ಷ ಅಧಿಕಾರಿಯನ್ನು ಹುಡುಕಲು ಟ್ರಸ್ಟ್ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ವಯಸ್ಸು ಮತ್ತು ಅನುಭವ: ಅಭ್ಯರ್ಥಿಯ ವಯಸ್ಸು 50 ರಿಂದ 70 ವರ್ಷದೊಳಗಿರಬೇಕು. ದೊಡ್ಡ ಸಾರ್ವಜನಿಕ ಸಂಸ್ಥೆ, ಬ್ಯಾಂಕ್ ಅಥವಾ ಕಂಪನಿಗಳಲ್ಲಿ ಕನಿಷ್ಠ 20 ವರ್ಷಗಳ ವ್ಯವಸ್ಥಾಪಕ ಅನುಭವ ಕಡ್ಡಾಯ. ಸಾಮಾನ್ಯ ಆಡಳಿತ, ಹಣಕಾಸು, ಕಾನೂನು, ಭದ್ರತೆ ಮತ್ತು ಐಟಿ (IT) ಕ್ಷೇತ್ರಗಳ ಜ್ಞಾನವಿರಬೇಕು.

ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಧಾರ್ಮಿಕ ನಂಬಿಕೆ: ಅರ್ಜಿದಾರರು ಕಡ್ಡಾಯವಾಗಿ ಹಿಂದೂ ಧರ್ಮದ ಸಕ್ರಿಯ ಅನುಯಾಯಿ ಹಾಗೂ ಶ್ರೀರಾಮನ ಭಕ್ತರಾಗಿರಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಇರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ತಮ್ಮ ಪ್ರೊಫೈಲ್ ಅನ್ನು ಜುಲೈ 18, 2026 ರ ಶನಿವಾರ ಸಂಜೆ 4 ಗಂಟೆಯೊಳಗೆ searchcommittee.srjbt@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಸಂಬಳ ಮತ್ತು ಇತರೆ ಸವಲತ್ತುಗಳನ್ನು ಮುಖಾಮುಖಿ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ.

ಎಕ್ಸ್​ ಪೋಸ್ಟ್​

ಕಳ್ಳತನ ತಡೆಯಲು ಜೇಬಿಲ್ಲದ ಬಟ್ಟೆ ಮತ್ತು ಬ್ಯಾಂಕ್ ಬದಲಾವಣೆ

ವಿಶ್ವದ ಮೂಲೆ ಮೂಲೆಗಳಿಂದ ಬರುವ ಕೋಟ್ಯಂತರ ರಾಮಭಕ್ತರ ನಂಬಿಕೆಗೆ ದ್ರೋಹವಾಗಬಾರದು ಎಂಬುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ. ಕಾಣಿಕೆ ಹಣ ಎಣಿಸುವ ಸಿಬ್ಬಂದಿಗಳಿಗೆ ಇನ್ಮುಂದೆ ಜೇಬಿಲ್ಲದ ವಿಶೇಷ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಬಿಗಿಗೊಳಿಸಲಾಗುತ್ತಿದೆ.

ಖಾಸಗಿ ಬ್ಯಾಂಕುಗಳ ಪ್ರವೇಶ: ಸದ್ಯ ಮಂದಿರದ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿರ್ವಹಿಸುತ್ತಿದೆಯಾದರೂ, ಅವರ ಭದ್ರತಾ ಲೋಪದಿಂದಲೇ ಕಳ್ಳತನ ನಡೆದಿದೆ ಎಂದು ಟ್ರಸ್ಟ್ ಆರೋಪಿಸಿದೆ. ಹೀಗಾಗಿ, ಇನ್ಮುಂದೆ ಹಣದ ಠೇವಣಿಗಾಗಿ ದೇಶದ ಪ್ರಮುಖ ಖಾಸಗಿ ವಲಯದ ಹೈಟೆಕ್ ಬ್ಯಾಂಕುಗಳ ತಂತ್ರಜ್ಞಾನ ಮತ್ತು ಸೇವೆಗಳನ್ನು ಬಳಸಿಕೊಳ್ಳಲು ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಹೊಸ ಸಿಇಒ ನೇಮಕದೊಂದಿಗೆ ರಾಮ ಮಂದಿರದ ಆಡಳಿತ ಶೈಲಿ ಸಂಪೂರ್ಣ ಕಾರ್ಪೊರೇಟ್ ಮಾದರಿಗೆ ಬದಲಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:53 am, Tue, 14 July 26

Source link

ಯಾದಗಿರಿಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಧಾರಣೆಗಳ ಮುಂದಿನ ಮಾಹಿತಿಯೇ ಇಲ್ಲ! ತಜ್ಞರ ಸಮಿತಿ ವರದಿಯಲ್ಲಿ ಆಘಾತಕಾರಿ ಅಂಶ ಬಯಲು – Kannada News | Yadgir Pregnancy Tracking Gaps Raise Concern: Expert Panel Flags Missing Follow up in Over 16,000 Cases

ಯಾದಗಿರಿ ಜಿಲ್ಲಾಸ್ಪತ್ರೆ (ಸಾಂದರ್ಭಿಕ ಚಿತ್ರ)Image Credit source: tv9

ಯಾದಗಿರಿ, ಜುಲೈ 14: ಯಾದಗಿರಿ (Yadgir) ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಗರ್ಭಧಾರಣೆ ಮೇಲ್ವಿಚಾರಣೆ ಕುರಿತಂತೆ ಕೇಳಿಬಂದಿದ್ದ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಮಟ್ಟದ ಬಹುಶಿಸ್ತೀಯ ತಜ್ಞರ ಸಮಿತಿಯನ್ನು ರಚಿಸಿದ್ದರು. ಸಮಿತಿ ಕಳೆದ ಏಪ್ರಿಲ್ 6ರಿಂದ 10ರವರೆಗೆ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, 74 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನೇಕ ಆಘಾತಕಾರಿ ಅಂಶಗಳು ಬಯಲಾಗಿವೆ.

ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ. ಈ ಅಂಶವೇ ಆರೋಗ್ಯ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ

ವರದಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ, ಬಾಲಗರ್ಭಿಣಿಯರಲ್ಲಿ ಗರ್ಭಪಾತ, ಶಿಶು ಮರಣ ಪ್ರಮಾಣ ಹೆಚ್ಚಿರುವುದು ಹಾಗೂ ಗರ್ಭಧಾರಣೆಗಳ ಸಮರ್ಪಕ ಅನುಸರಣೆ (Follow-up) ಕೊರತೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಗರ್ಭಧಾರಣೆಯ 12 ವಾರಗಳ ಬಳಿಕ ಕೆಲವು ಕಡೆ ಅಕ್ರಮವಾಗಿ ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗುತ್ತಿರುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಗರ್ಭಧಾರಣೆ ವೇಳೆ ನೀಡುವ ನೋಂದಣಿ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆ ಹಾಗೂ ಗರ್ಭಪಾತ ಮಾತ್ರೆಗಳ ದುರ್ಬಳಕೆ ನಡೆಯುತ್ತಿರುವ ಆರೋಪಗಳನ್ನೂ ವರದಿ ಉಲ್ಲೇಖಿಸಿದೆ.

ಬಾಲ್ಯ ವಿವಾಹ ಹೆಚ್ಚಳ

ಇನ್ನೊಂದು ಆತಂಕಕಾರಿ ಅಂಶವೆಂದರೆ, ಜಿಲ್ಲೆಯಲ್ಲಿ 18 ವರ್ಷ ತುಂಬುವ ಮೊದಲೇ ಶೇ 33.2ರಷ್ಟು ಮಹಿಳೆಯರ ವಿವಾಹ ನಡೆಯುತ್ತಿರುವುದು. ಇದರಿಂದ ಬಾಲ್ಯ ಗರ್ಭಧಾರಣೆಗಳ ಪ್ರಮಾಣ ಹೆಚ್ಚುತ್ತಿರುವ ಸಾಧ್ಯತೆಯನ್ನೂ ವರದಿ ಪ್ರಸ್ತಾಪಿಸಿದೆ. ಅವಿವಾಹಿತೆಯರ ಗರ್ಭಪಾತ ಪ್ರಕರಣಗಳಲ್ಲಿ ಕುಟುಂಬದವರು ಮಾಹಿತಿ ನೀಡದಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ಹೇಳಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಹೇಳುವುದೇನು?

ಆದರೆ, ಈ ಆರೋಪಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ತಳ್ಳಿಹಾಕಿದ್ದಾರೆ. ವೈದ್ಯಕೀಯ ಕಾರಣಗಳಿಂದಲೇ ಗರ್ಭಪಾತಗಳು ನಡೆದಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಗರ್ಭಪಾತದ ಪ್ರಮಾಣ ಶೇ 4.6 ಇದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಅದು ಕೇವಲ ಶೇ 2.7 ಮಾತ್ರ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ ಹೆಣ್ಣು ಭ್ರೂಣ ಪತ್ತೆ, ಹತ್ಯೆ: ಕಾರಿನಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ಆರು ಮಂದಿ ಬಂಧನ

ಈ ನಡುವೆ ತಜ್ಞರ ಸಮಿತಿಯ ವರದಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸ್ಪಷ್ಟೀಕರಣದ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾರೆ ಎಂದಿದ್ದ ಆಮಿರ್ ಖಾನ್; ಇಲ್ಲಿದೆ ಅಸಲಿ ಕಥೆ – Kannada News | Aamir Khan Shah Rukh Dog Controversy: The Truth Behind Bollywood Infamous Feud

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಹಿಂದೊಮ್ಮೆ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ‘ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ಹಾಕುತ್ತಿದ್ದೇನೆ’ ಎಂದು ಆಮಿರ್ ಹೇಳಿದ್ದರು. ಇದನ್ನು ಕೇಳಿ ಶಾರುಖ್ ಖಾನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅಸಲಿಗೆ ಆಮಿರ್ ಖಾನ್ ಮಾತನಾಡಿದ್ದು ನಟ ಶಾರುಖ್ ಬಗ್ಗೆ ಅಲ್ಲ. ಅದು ಅವರ ಮನೆಯಲ್ಲಿದ್ದ ನಾಯಿಯ ಹೆಸರಾಗಿತ್ತು.

2008ರಲ್ಲಿ ನಡೆದ ಘಟನೆ ಇದು

ಆಮಿರ್ ಖಾನ್ 2008ರಲ್ಲಿ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ‘ನಾನು ಪಂಚಗನಿಯಲ್ಲಿ ಕುಟುಂಬದೊಂದಿಗೆ ಕೂತಿದ್ದೇನೆ. ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ನೀಡುತ್ತಿದ್ದೇನೆ’ ಎಂದು ಬರೆದಿದ್ದರು. ತಕ್ಷಣವೇ ಆಮಿರ್ ಖಾನ್ ಸ್ಪಷ್ಟನೆ ಕೂಡ ನೀಡಿದ್ದರು. ‘ಶಾರುಖ್ ಎಂಬುದು ನಮ್ಮ ಮನೆಯ ನಾಯಿಯ ಹೆಸರು. ಅದಕ್ಕೆ ನಾನು ಹೆಸರಿಟ್ಟಿಲ್ಲ. ಆ ಮನೆಯನ್ನು ನಾನು ಖರೀದಿಸುವ ಮುನ್ನವೇ ಕೇರ್‌ಟೇಕರ್ಸ್ ಆ ನಾಯಿಗೆ ಆ ಹೆಸರು ಇಟ್ಟಿದ್ದರು’ ಎಂದು ವಿವರಿಸಿದ್ದರು.

ನಾಯಿಗೆ ‘ಶಾರುಖ್’ ಎಂದು ಹೆಸರಿಟ್ಟಿದ್ದು ಯಾಕೆ?

ಕೆಲವು ವರ್ಷಗಳ ಹಿಂದೆ ನಟ ಶಾರುಖ್ ಖಾನ್ ಅದೇ ಮನೆಯಲ್ಲಿ ಜಾಹೀರಾತು ಶೂಟಿಂಗ್ ಮಾಡಿದ್ದರು. ಅದೇ ದಿನ ಕೇರ್‌ಟೇಕರ್ಸ್ ಒಂದು ನಾಯಿ ಮರಿಯನ್ನು ತಂದಿದ್ದರು. ನೆಚ್ಚಿನ ನಟನ ನೆನಪಿಗಾಗಿ ಅದಕ್ಕೆ ಶಾರುಖ್ ಎಂದು ಹೆಸರಿಟ್ಟಿದ್ದರು.

ವಿವಾದಕ್ಕೆ ಆಮಿರ್ ಖಾನ್ ಕ್ಷಮೆ

ಈ ಬರಹದಿಂದ ಅಭಿಮಾನಿಗಳ ಭಾವನೆಗೆ ಧಕ್ಕೆಯಾಗಿತ್ತು. ಹೀಗಾಗಿ ಆಮಿರ್ ಖಾನ್ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ್ದರು. ‘ನಾನು ಕೇವಲ ತಮಾಷೆಗಾಗಿ ಹಾಗೆ ಬರೆದಿದ್ದೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಶಾರುಖ್ ಖಾನ್, ‘ನನ್ನ ಹೆಸರಿನ ಮೇಲೆ ನನಗೆ ಯಾವುದೇ ಕಾಪಿರೈಟ್ ಇಲ್ಲ. ಜನರು ಪ್ರೀತಿಯಿಂದ ಹೆಸರಿಡುತ್ತಾರೆ’ ಎಂದು ಸರಳವಾಗಿ ತೇಲಿಬಿಟ್ಟಿದ್ದರು.

ಇದನ್ನೂ ಓದಿ: ಕಬೀರ್ ಬೇಡಿಯಿಂದ ಆಮಿರ್ ಖಾನ್‌ವರೆಗೆ; ಮೂರು ಬಾರಿ ಮದುವೆಯಾದ ಬಾಲಿವುಡ್ ತಾರೆಯರಿವರು

ಈಗ ಇಬ್ಬರೂ ಆಪ್ತ ಸ್ನೇಹಿತರು

ಕಳೆದ ವರ್ಷ ಈ ಘಟನೆಯನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದಾರೆ. ‘ಆ ಸಮಯದಲ್ಲಿ ನಮ್ಮಿಬ್ಬರ ನಡುವೆ ತಮಾಷೆಯ ಪೈಪೋಟಿ ಇತ್ತು. ಪ್ರಶಸ್ತಿ ಸಮಾರಂಭಗಳಲ್ಲಿ ಶಾರುಖ್ ಕೂಡ ನನ್ನ ಕಾಲೆಳೆಯುತ್ತಿದ್ದರು. ಆದರೆ ಈಗ ನಾವಿಬ್ಬರೂ ತುಂಬಾ ಆಪ್ತ ಸ್ನೇಹಿತರಾಗಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:43 am, Tue, 14 July 26

Source link

Corona Virus Returns: ಆಂಧ್ರಪ್ರದೇಶಗಲ್ಲಿ ಕೊರೊನಾಗೆ ಇಬ್ಬರು ಬಲಿ; ಕರ್ನಾಟಕಕ್ಕೆ ಮತ್ತೆ ಒಕ್ಕರಿಸಲಿದೆಯೇ ಕೋವಿಡ್ ಮಹಾಮಾರಿ? – Kannada News | Covid Fear Returns: Coronavirus Cases Rise to 32 in Karnataka, High Alert After Andhra Deaths

ಬೆಂಗಳೂರು, ಜುಲೈ 14: ನಾಲ್ಕು ವರ್ಷಗಳ ಹಿಂದೆ ಜಗತ್ತನ್ನೇ ನಡುಗಿಸಿದ್ದ ಹೆಮ್ಮಾರಿ ಕೊರೊನಾ (Corona) ಈಗ ಮತ್ತೆ ಅಬ್ಬರಿಸಲು ಹೊಂಚು ಹಾಕುತ್ತಿದೆ. ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೊವಿಡ್ ಆತಂಕ ಸೃಷ್ಟಿಸಿದ್ದು, ಕರ್ನಾಟಕದ ಗಡಿಯಲ್ಲೂ ಆತಂಕದ ನೆರಳು ಆವರಿಸಿದೆ. ರಾಜ್ಯದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಆಂಧ್ರದ ಕಡಪಾದಲ್ಲಿ ಇಬ್ಬರ ಬಲಿ!

ಕಳೆದ ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಚೀನಾದ ವುಹಾನ್ ವೈರಸ್ ರೂಪಾಂತರದ ಭೀತಿ ಈಗ ಮತ್ತೆ ಶುರುವಾಗಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿರುವ ಸುದ್ದಿ ವೈರಲ್ ಆಗಿದ್ದು, ಎಂಟು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸ ರೂಪಾಂತರದ ಶಂಕೆಯಿಂದಾಗಿ ರೋಗಿಗಳ ಐದು ಸ್ಯಾಂಪಲ್‌ಗಳನ್ನು ಪುಣೆಯ ಎನ್‌ಐವಿ (NIV) ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ ಅಲ್ಲಿನ ಆರೋಗ್ಯ ಇಲಾಖೆ ಕಾಯುತ್ತಿದೆ.

ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು!

ನೆರೆರಾಜ್ಯದ ಭೀತಿಯ ಬೆನ್ನಲ್ಲೇ ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಜೂನ್ ತಿಂಗಳಲ್ಲಿ ಕೇವಲ 14 ಪಾಸಿಟಿವ್ ಪ್ರಕರಣಗಳಿದ್ದರೆ, ಜುಲೈನ ಕಳೆದ ಹತ್ತು ದಿನಗಳಲ್ಲಿಯೇ ಈ ಸಂಖ್ಯೆ 32ಕ್ಕೆ ತಲುಪಿದೆ. ಒಟ್ಟು 193 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ 32 ಜನರಲ್ಲಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ: 2022 ರ ನಂತರ ಮೊದಲ ಸಾವು ದಾಖಲು, ಕಡಪದಲ್ಲಿ ಇಬ್ಬರು ಬಲಿ, ನಾಲ್ವರಿಗೆ ಪಾಸಿಟಿವ್

ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಆಯುಕ್ತರು

ಈ ಕೋವಿಡ್ ಆತಂಕದ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ್ ಹೆಗಡೆ, ಕಡಪಾದಲ್ಲಿ ಸಂಭವಿಸಿರುವ ಸಾವುಗಳು ಶಂಕಿತ ಪ್ರಕರಣಗಳಾಗಿವೆ. ಈ ಬಗ್ಗೆ ಆಂಧ್ರ ಸರ್ಕಾರದೊಂದಿಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಸದ್ಯ ಪತ್ತೆಯಾಗಿರುವ ಪ್ರಕರಣಗಳು ಅಷ್ಟೊಂದು ಗಂಭೀರವಾಗಿಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಡ್ಡಾಯ ಪರೀಕ್ಷೆ ನಡೆಸಿದಾಗ ಮಾತ್ರ ಲಕ್ಷಣ ರಹಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಆರೋಗ್ಯ ಇಲಾಖೆ ದಿನನಿತ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಧೈರ್ಯ ತುಂಬಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version