ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಗಾಯಕಿ ವಾಣಿ ಹರಿಕೃಷ್ಣ – Kannada News | Singer Vani Harikrishna Breaks Down after Paying Last Respects to S Janaki in Mysore

ಮೈಸೂರಿನ ಮಹಾರಾಜ ಮೈದಾನದಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಬಳಿಕ ಗಾಯಕಿ ವಾಣಿ ಹರಿಕೃಷ್ಣ ಅವರು ಭಾವುಕರಾದರು. ಹಳೆಯ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಎಸ್. ಜಾನಕಿ (S Janaki) ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಅವರು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ಹಿರಿಯ ನಟಿ ತಾರಾ ಅವರು ಸಂತೈಸಿದರು. ‘ನಾನು ಸಿನಿಮಾದಲ್ಲಿ ಹಾಡುವುದಕ್ಕೂ ಮುನ್ನವೇ ಅವರು ನನ್ನನ್ನು ನೋಡಿದ್ದರು. ಸರಿತಾ ರೀತಿಯೇ ಇದ್ದಾಳೆ ಅಂತ ನನಗೆ ಹೇಳುತ್ತಿದ್ದರು. ನನಗೆ ಅವರು ಆಪ್ತವಾಗಿದ್ದರು. ಇಂದು ಅವರ ಪಾದಗಳನ್ನು ನೋಡಲು ನನಗೆ ಬಹಳ ಕಷ್ಟ ಆಯಿತು. ಆ ಪಾದಗಳಿಗೆ ನಾನು ಬಹಳ ಸಲ ನಮಸ್ಕಾರ ಮಾಡಿದ್ದೆ. ಅವರ ನೆನಪುಗಳು ಸದಾ ನನ್ನ ಜೊತೆ ಇರುತ್ತವೆ’ ಎಂದು ವಾಣಿ ಹರಿಕೃಷ್ಣ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ – Kannada News | IND vs ENG ODI Schedule 2026 and Squads

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಮುಗಿದಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ 4-0 ಅಂತರದಿಂದ ಗೆದ್ದುಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾ ಏಕದಿನ ಸರಣಿಗಾಗಿ ಸಜ್ಜಾಗಿದೆ. ಜುಲೈ 14 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಈ ಸರಣಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಸಮಯ ( IST) ಸ್ಥಳ 
1ನೇ ಏಕದಿನ ಪಂದ್ಯ ಜುಲೈ 14, 2026 (ಮಂಗಳವಾರ) ಮಧ್ಯಾಹ್ನ 3:30 ಕ್ಕೆ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
2ನೇ ಏಕದಿನ ಪಂದ್ಯ ಜುಲೈ 16, 2026 (ಗುರುವಾರ) ಸಂಜೆ 5:30 ಕ್ಕೆ ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
3ನೇ ಏಕದಿನ ಪಂದ್ಯ ಜುಲೈ 19, 2026 (ಭಾನುವಾರ) ಮಧ್ಯಾಹ್ನ 3:30 ಕ್ಕೆ ಲಾರ್ಡ್ಸ್, ಲಂಡನ್

ಉಭಯ ತಂಡಗಳ ಆಟಗಾರರು:

  • ಭಾರತ ತಂಡ
  •  ನಾಯಕ: ಶುಬ್‌ಮನ್ ಗಿಲ್
  • ಉಪನಾಯಕ: ಶ್ರೇಯಸ್ ಅಯ್ಯರ್
  • ಬ್ಯಾಟರ್ಸ್: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
  • ವಿಕೆಟ್ ಕೀಪರ್ಸ್: ಕೆ.ಎಲ್. ರಾಹುಲ್, ಇಶಾನ್ ಕಿಶನ್
  •  ಆಲ್ ರೌಂಡರ್ಸ್: ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ.
  •  ಬೌಲರ್ಸ್: ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಗುರ್ನೂರ್ ಬ್ರಾರ್.

ಇದನ್ನೂ ಓದಿ: ಗೆಳೆತಿಯನ್ನು ಸೋಲಿಸಿ ವಿಂಬಲ್ಡನ್ ಕಿರೀಟ ಗೆದ್ದ ಲಿಂಡಾ ನೊಸ್ಕೋವಾ!

  • ಇಂಗ್ಲೆಂಡ್ ತಂಡ
  • ನಾಯಕ: ಹ್ಯಾರಿ ಬ್ರೂಕ್.
  • ಬ್ಯಾಟರ್ಸ್: ಜೋ ರೂಟ್, ಬೆನ್ ಡಕೆಟ್.
  • ವಿಕೆಟ್ ಕೀಪರ್ಸ್: ಜೋಸ್ ಬಟ್ಲರ್, ಟಾಮ್ ಬ್ಯಾಂಟನ್.
  • ಆಲ್ ರೌಂಡರ್ಸ್: ಸ್ಯಾಮ್ ಕರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್.
  •  ಬೌಲರ್ಸ್: ಜೋಫ್ರಾ ಆರ್ಚರ್, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ರೆಹಾನ್ ಅಹ್ಮದ್.

 ಸರಣಿಯ ಪ್ರಮುಖ ಆಕರ್ಷಣೆ:

  • ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
  • ಇನ್ನು ಈ ಮೂವರು ದಿಗ್ಗಜರು ಕಣಕ್ಕಿಳಿಯಲಿರುವುದು ಯುವ ನಾಯಕ ಶುಭ್​ಮನ್ ಗಿಲ್ ಮುಂದಾಳತ್ವದಲ್ಲಿ ಎಂಬುದು ವಿಶೇಷ.
  • ಮುಂಬರುವ ಏಕದಿನ ವಿಶ್ವಕಪ್​ ದೃಷ್ಟಿಯಿಂದ ಈ ವಿದೇಶಿ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಮಹತ್ವದ ಸರಣಿಯಾಗಿ ಮಾರ್ಪಟ್ಟಿದೆ.

ಅದರಲ್ಲೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 0-4 ಅಂತರದ ಹೀನಾಯ ಸೋಲು ಕಂಡಿರುವ ಭಾರತ ತಂಡವು, ಈಗ ಏಕದಿನ ಸರಣಿಯ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ. ಟಿ20 ಸರಣಿಯ ಆಘಾತದಿಂದ ತಂಡವನ್ನು ಹೊರತಂದು ಒನ್ ಡೇ ಸರಣಿಯಲ್ಲಿ ಗೆಲ್ಲಿಸುವುದು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪಾಲಿಗೆ ದೊಡ್ಡ ಸವಾಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಈ ಏಕದಿನ ಸರಣಿಯು ಭಾರಿ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ.

Source link

“ಮರ್ಯಾದೆಯಿಂದ ಮಾತನಾಡಿ”: ರೆಫರಿ ವಿರುದ್ಧ ತಿರುಗಿ ನಿಂತ ಮೆಸ್ಸಿ! – Kannada News | Lionel Messi Loses Cool At Referee During Switzerland Match

ಅರ್ಜೆಂಟೀನಾ ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ, ಲಿಯೋನೆಲ್ ಮೆಸ್ಸಿ ಮತ್ತು ಮ್ಯಾಚ್ ರೆಫರಿ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದೆ. ಕಾನ್ಸಾಸ್ ಸಿಟಿಯಲ್ಲಿರುವ ‘ಆ್ಯರೋಹೆಡ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿತ್ತು.

ಇದರ ನಡುವೆ ರೆಫರಿ ಜೊವಾವೊ ಪಿನ್ಹೈರೊ ನೀಡಿದ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ, ಮೈದಾನದಲ್ಲೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲೆಂಡ್‌ಗೆ ಫ್ರೀ-ಕಿಕ್ ಅವಕಾಶ ಸಿಕ್ಕಾಗ ಮೆಸ್ಸಿ ರಕ್ಷಣಾತ್ಮಕ ಗೋಡೆಯ ಭಾಗವಾಗಿ ನಿಂತಿದ್ದರು. ಈ ವೇಳೆ ಮೆಸ್ಸಿಗೆ ರೆಫರಿ ಜೊವಾವೊ ಪಿನ್ಹೈರೊ ಉದ್ಧಟತನದ ಧಾಟಿಯಲ್ಲಿ ಜಾಗ ಬದಲಾಯಿಸುವಂತೆ ಆದೇಶಿಸಿದರು.

ರೆಫರಿಯ ಈ ವರ್ತನೆ ಮತ್ತು ಧ್ವನಿ ಮೆಸ್ಸಿ ಅವರನ್ನು ಕೆರಳಿಸಿತು. ತಕ್ಷಣವೇ ರೆಫರಿ ಹತ್ತಿರ ಹೋದ ಅರ್ಜೆಂಟೀನಾ ನಾಯಕ, ಅತ್ಯಂತ ಗಂಭೀರವಾಗಿ ತಮ್ಮೊಂದಿಗೆ ಗೌರವದಿಂದ ವರ್ತಿಸುವಂತೆ ಎಚ್ಚರಿಸಿದರು.

“ನನಗೆ ಗೌರವ ಕೊಡಿ…”

ರೆಫರಿಯ ಆಜ್ಞೆಯಿಂದ ಕುಪಿತಗೊಂಡ ಲಿಯೋನೆಲ್ ಮೆಸ್ಸಿ,  “ನನ್ನೊಂದಿಗೆ ಮರ್ಯಾದೆಯಿಂದ ಮಾತನಾಡಿ. ನನ್ನನ್ನು ಅಗೌರವಿಸಬೇಡಿ. ನಾನು ನಿನ್ನೊಂದಿಗೆ ಗೌರವದಿಂದಲೇ ಮಾತನಾಡಿದ್ದೇನೆ.” ಎಂದು ಅಸಮಾಧಾನ ಹೊರಹಾಕಿದರು.

ಸಾಮಾನ್ಯವಾಗಿ ಶಾಂತ ಸ್ವಭಾವದ ಮೆಸ್ಸಿ ಮೈದಾನದಲ್ಲಿ ಇಷ್ಟು ಕೋಪಗೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆದರೆ, ಈ ವಾಗ್ವಾದದ ವೇಳೆಯೂ ಮೆಸ್ಸಿ ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಶಿಸ್ತು ಕಾಪಾಡಿಕೊಂಡಿದ್ದರು. ರೆಫರಿ ಕೂಡ ಈ ಘಟನೆಗೆ ಮೆಸ್ಸಿಗೆ ಯಾವುದೇ ಹಳದಿ ಕಾರ್ಡ್ ನೀಡದೆ ಪಂದ್ಯವನ್ನು ಮುಂದುವರಿಸಿದರು. ಇದೀಗ ಈ ವಾಗ್ವಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಫಲಿತಾಂಶವೇನು?

ಭರ್ಜರಿ ಪೈಪೋಟಿ ನಡುವೆಯೂ ಅರ್ಜೆಂಟೀನಾ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ನಿಗದಿತ ಅವಧಿಯಲ್ಲಿ ಪಂದ್ಯ ಸಮಬಲಗೊಂಡಿದ್ದರಿಂದ ಹೆಚ್ಚುವರಿ ಸಮಯ  ನೀಡಲಾಗಿತ್ತು.

ಈ ವೇಳೆ ಜೂಲಿಯನ್ ಅಲ್ವಾರೆಝ್ ಮತ್ತು ಲೌಟಾರೊ ಮಾರ್ಟಿನೆಝ್ ಗಳಿಸಿದ ಅದ್ಭುತ ಗೋಲುಗಳು ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟವು.

ಇದನ್ನೂ ಓದಿ: ಪ್ರಮುಖ ಸ್ಟ್ರೈಕರ್​ಗೆ ರೆಡ್ ಕಾರ್ಡ್​: ಅರ್ಜೆಂಟೀನಾ ಪಂದ್ಯದಲ್ಲಿ ಮತ್ತೆ ವಿವಾದ!

ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸೆಮಿಫೈನಲ್ ಪ್ರವೇಶಿಸಿದ್ದು, ಸೆಮಿಫೈನಲ್​ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Source link

ಹಾರ್ಮುಜ್​ನಲ್ಲಿ ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ದಾಳಿ, ಓರ್ವ ನಾಪತ್ತೆ, 10 ಮಂದಿ ಅಪಾಯದಿಂದ ಪಾರು – Kannada News | Hormuz Strait Crisis: 10 Indian Sailors Rescued, 1 Missing Amid US Iran Ship Attack

ಟೆಹ್ರಾನ್, ಜುಲೈ 12: ಇರಾನ್(Iran) ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷ ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳಿಂದ ಭೀಕರ ದಾಳಿಗೊಳಗಾದ ‘M/V GFS ಗ್ಯಾಲಕ್ಸಿ’ ವಾಣಿಜ್ಯ ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ 10 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಭಾನುವಾರ ಪ್ರಕಟಿಸಿದೆ. ಆದರೆ, ದುರದೃಷ್ಟವಶಾತ್ ಒಬ್ಬ ಭಾರತೀಯ ನಾವಿಕ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆಯನ್ನು ಕಾಪಾಡಬೇಕೆಂದು ಬಲವಾದ ನಿಲುವನ್ನು ತೆಗೆದುಕೊಂಡಿದೆ.

ದಾಳಿಗೆ ಇರಾನ್ ನೀಡಿದ ಕಾರಣವೇನು?
ಸೈಪ್ರಸ್ ಧ್ವಜ ಹೊತ್ತ ಈ ಕಂಟೇನರ್ ಹಡಗು ತಾನು ಅನುಮೋದಿಸಿದ ಅಧಿಕೃತ ಜಲಮಾರ್ಗವನ್ನು ಅನುಸರಿಸದ ಕಾರಣ ಅದನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ. ಹಡಗು ತನ್ನ ಮಾರ್ಗವನ್ನು ಬದಲಾಯಿಸುವಂತೆ ಮೊದಲು ಎಚ್ಚರಿಕೆ ನೀಡಿ ಗುಂಡು ಹಾರಿಸಲಾಗಿತ್ತು, ಆದರೂ ಹಡಗು ಮುಂದೆ ಸಾಗಿದ್ದರಿಂದ ಅದರ ಮೇಲೆ ನೇರ ದಾಳಿ ನಡೆಸಬೇಕಾಯಿತು ಎಂದು ಇರಾನ್ ಸಮರ್ಥಿಸಿಕೊಂಡಿದೆ.

ಮತ್ತಷ್ಟು ಓದಿ: ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ; ತಂದೆಯ ಅಂತ್ಯಕ್ರಿಯೆ ಬಳಿಕ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಶಪಥ

ಇರಾನ್ ಮೇಲೆ ಅಮೆರಿಕದ ಭೀಕರ ವಾಯುದಾಳಿ
ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಭಾನುವಾರ ಬೆಳಗಿನ ಜಾವ ಇರಾನ್‌ನೊಳಗೆ ತನ್ನ 3ನೇ ಅಲೆಯ ಅತ್ಯಂತ ತೀವ್ರವಾದ ವಾಯುದಾಳಿಗಳನ್ನು ಆರಂಭಿಸಿದೆ. ಅಮೆರಿಕದ ಯುದ್ಧವಿಮಾನಗಳು ಇರಾನ್‌ನ ನೌಕಾ ನೆಲೆಗಳು ಹಾಗೂ ಕ್ಷಿಪಣಿ ಕೇಂದ್ರಗಳು ಸೇರಿದಂತೆ ಬರೋಬ್ಬರಿ 140 ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಪ್ರತೀಕಾರದ ಜಾಲ: ಕಳೆದ ವಾರ ಇರಾನ್‌ನಲ್ಲಿ ನಡೆದ ಎರಡು ಸುತ್ತಿನ ದಾಳಿಗಳಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 115ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೆ ಇರಾನ್ ಸಹ ಜೋರ್ಡಾನ್, ಕತಾರ್, ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಇಸ್ರೇಲ್ ಈ ದಾಳಿಗಳ ಹೊಣೆ ಹೊರದಿದ್ದರೂ, ಗಲ್ಫ್ ಅರಬ್ ರಾಷ್ಟ್ರಗಳು ಇರಾನ್‌ನ ಆಕ್ರಮಣಶೀಲತೆಯನ್ನು ತಡೆಯಲು ಒಳಗೊಳಗೆ ಅಮೆರಿಕಕ್ಕೆ ಸಾಥ್ ನೀಡುತ್ತಿವೆ ಎನ್ನಲಾಗಿದೆ.

ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಅಮೆರಿಕದ ಹಿರಿಯ ಅಧಿಕಾರಿಗಳು, ಇರಾನ್‌ನಲ್ಲಿ ಸದ್ಯ ಅಧಿಕಾರ ಚಲಾಯಿಸುತ್ತಿರುವುದು ಯಾರು ಎಂಬ ಗೊಂದಲ ಮೂಡಿದೆ ಎಂದಿದ್ದಾರೆ.

ತೈಲ ಮಾರುಕಟ್ಟೆಯ ನರನಾಡಿ: 2026ರ ಫೆಬ್ರವರಿಯಲ್ಲಿ ಇರಾನ್-ಅಮೆರಿಕ ಸಂಘರ್ಷ ಆರಂಭವಾಗುವ ಮುನ್ನ, ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ (LNG) ಐದನೇ ಒಂದು ಭಾಗ (20%) ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತಿತ್ತು.

ಆರ್ಥಿಕ ಪ್ರಭಾವ: ಯುದ್ಧದ ಆರಂಭದಲ್ಲಿ ಜಾಗತಿಕ ತೈಲ ಬೆಲೆಗಳು ಬ್ಯಾರೆಲ್‌ಗೆ 120 ಡಾಲರ್ ಗರಿಷ್ಠ ಮಟ್ಟಕ್ಕೆ ತಲುಪಿ ಇಂಧನ ಬಿಕ್ಕಟ್ಟು ಸೃಷ್ಟಿಸಿತ್ತು. ಪ್ರಸ್ತುತ ತೈಲ ಬೆಲೆಗಳು ಗಣನೀಯವಾಗಿ ಕುಸಿದಿದ್ದರೂ, ಇರಾನ್ ಮತ್ತೆ ಜಲಸಂಧಿಯನ್ನು ಮುಚ್ಚಿ ಹಡಗುಗಳ ಮೇಲೆ ದಾಳಿ ಮಾಡುತ್ತಿರುವುದು ಜಾಗತಿಕ ಷೇರು ಮಾರುಕಟ್ಟೆ ಹಾಗೂ ಭಾರತದಂತಹ ಇಂಧನ ಆಮದು ರಾಷ್ಟ್ರಗಳ ಮೇಲೆ ಭಾರಿ ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿದೆ. ನಾಪತ್ತೆಯಾಗಿರುವ ಭಾರತೀಯ ನಾವಿಕನನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಭಾರತೀಯ ನೌಕಾಪಡೆ ಮತ್ತು ವಿದೇಶಾಂಗ ಇಲಾಖೆ ರಾಜತಾಂತ್ರಿಕವಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪದ್ಮಭೂಷಣ ತಿರಸ್ಕರಿಸಿದ್ದ ಎಸ್. ಜಾನಕಿ; ಕಾರಣ ತಿಳಿಸಿದ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್ – Kannada News | Music Director RP Patnaik reveals why singer S Janaki rejected Padma Bhushan Award

ಭಾರತೀಯ ಸಿನಿಮಾ ಸಂಗೀತದ ಇತಿಹಾಸದಲ್ಲಿ ತಮ್ಮದೇ ಆದ ಸುವರ್ಣ ಅಧ್ಯಾಯ ಬರೆದ ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಮೈಸೂರಿನಲ್ಲಿ ಕೊನೆಯುಸಿರೆಳೆದ ಜಾನಕಮ್ಮ ಅವರ ಅಂತ್ಯಕ್ರಿಯೆ ಇಂದು (ಜುಲೈ 12) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸದ್ಯ ಮೈಸೂರಿನ ಮಹಾರಾಜ ಮೈದಾನದಲ್ಲಿ ಸಾರ್ವಜನಿಕ ಹಾಗೂ ಗಣ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಭಾವುಕ ಕ್ಷಣದಲ್ಲಿ, ಟಿವಿ ವಾಹಿನಿಯೊಂದರ ಜೊತೆ ಮಾತನಾಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್ (RP Patnaik) ಅವರು, ಜಾನಕಮ್ಮ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರು ಕೇಂದ್ರ ಸರ್ಕಾರದ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ತಿರಸ್ಕರಿಸಿದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.

ಅವರಿಗಾಗಿ ಸಂಗೀತ ಲೋಕಕ್ಕೆ ಬಂದೆ: ಆರ್​ಪಿ ಪಟ್ನಾಯಕ್ ಭಾವುಕ:

‘ಜಾನಕಿ ಅಮ್ಮ ಕೇವಲ ಗಾಯಕಿಯಲ್ಲ, ಅವರೊಂದು ಸಂಗೀತ ಶಾಲೆ. ಇಳಯರಾಜ ಅವರ ಸಂಗೀತ, ಎಸ್​ಪಿಬಿ ಅವರ ಧ್ವನಿ ಹಾಗೂ ಜಾನಕಮ್ಮ ಅವರ ಗಾಯನವೇ ನಾನು ಸಂಗೀತ ಕ್ಷೇತ್ರಕ್ಕೆ ಬರಲು ಪ್ರಮುಖ ಪ್ರೇರಣೆ. ಎಸ್​ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರ ಕಾಂಬಿನೇಷನ್ ಒಂದು ಅದ್ಭುತ ಮ್ಯಾಜಿಕ್. ಇಂದು ನಾವು ಬಾಲಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆಯೋ, ಅದೇ ಮಟ್ಟದಲ್ಲಿ ಜಾನಕಮ್ಮ ಅವರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಮಾರ್ಚ್ 21ರಂದು ನಾನು ವೈಜಾಗ್‌ನಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. 87ರ ಹರೆಯದಲ್ಲೂ ಅವರು ತಾಯಿಯಂತೆ ನಮ್ಮನ್ನು ಬರಮಾಡಿಕೊಂಡು ಅತ್ಯಂತ ಉತ್ಸಾಹದಿಂದ ಮಾತನಾಡಿಸಿದ್ದರು’ ಎಂದು ಪಟ್ನಾಯಕ್ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಎಸ್. ಜಾನಕಿ ಅವರ ಗಾಯನವೇ ಒಂದು ವಿಸ್ಮಯ:

ಜಾನಕಮ್ಮ ಅವರ ಗಾಯನದ ದೈವಿಕ ಶಕ್ತಿಯ ಬಗ್ಗೆ ಮಾತನಾಡಿದ ಪಟ್ನಾಯಕ್, ‘ಅವರ ಧ್ವನಿಯಲ್ಲಿ ನೂರಾರು ಭಾವನೆಗಳು ಮೂಡಿಬರುತ್ತಿದ್ದವು. ಒಮ್ಮೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ನನ್ನ ಬಳಿ ಹೇಳಿದ್ದರು. ಹಾಡುವಾಗ ಜಾನಕಮ್ಮ ಗಂಟಲಿನಲ್ಲಿ ಎಷ್ಟೇ ಎಕ್ಸ್‌ಪ್ರೆಶನ್ ತಂದರೂ, ಅವರ ಮುಖದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುತ್ತಿರಲಿಲ್ಲ, ಒಂದೇ ಮುಖಭಾವ ಇರುತ್ತಿತ್ತು. ಅದು ಹೇಗೆ ಸಾಧ್ಯವಾಗುತ್ತದೆಯೋ ಆ ಮಹಾತಾಯಿಗೆ ಅಂತ ಬಾಲಸುಬ್ರಹ್ಮಣ್ಯಂ ಅವರು ಜಾನಕಮ್ಮ ಅವರ ಪ್ರತಿಭೆಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಅವರು ಒಂದೇ ಟೇಕ್‌ನಲ್ಲಿ ಹಾಡಿದ ‘ನೀ ಲೀಲಾ ಪಾಡೆದ ದೇವಾ’ ಹಾಡು ಇಂದಿಗೂ ನನಗೆ ಒಂದು ದೊಡ್ಡ ವಿಸ್ಮಯ’ ಎಂದರು.

ಇದನ್ನೂ ಓದಿ: ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್

ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ್ದು ಏಕೆ?

ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಜಾನಕಿ ಅವರು ತಿರಸ್ಕರಿಸಿದ ಘಟನೆಯ ಬಗ್ಗೆ ಮಾತನಾಡಿದ ಆರ್​ಪಿ ಪಟ್ನಾಯಕ್, ‘ಪ್ರಶಸ್ತಿಗಳಿಗೆ ಜಾನಕಮ್ಮ ಅವರ ಹೆಸರು ಸೇರಿದರೆ ಆ ಪ್ರಶಸ್ತಿಗೆ ಗೌರವ ಬರುತ್ತದೆ ವಿನಃ, ಪ್ರಶಸ್ತಿಗಳಿಂದ ಜಾನಕಮ್ಮ ಅವರಿಗೆ ಸಿಗುವ ಗೌರವ ಏನೂ ಇಲ್ಲ. ಅವರು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲಾದ ಎತ್ತರದಲ್ಲಿದ್ದಾರೆ. ಅವರಿಗೆ ಪದ್ಮಭೂಷಣ ಪ್ರಶಸ್ತಿ ಎಷ್ಟೋ ವರ್ಷಗಳ ಹಿಂದೆಯೇ ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅತ್ಯಂತ ತಡವಾಗಿ (ಅವರ ವೃತ್ತಿಜೀವನದ ಕೊನೆಯ ದಿನಗಳಲ್ಲಿ) ಪ್ರಶಸ್ತಿ ಪ್ರಕಟಿಸಿತು. ದಕ್ಷಿಣ ಭಾರತದ ಕಲಾವಿದರಿಗೆ ಮಾಡಿದ ಈ ತಾರತಮ್ಯ ಹಾಗೂ ವಿಳಂಬ ನೀತಿಯಿಂದ ನೊಂದುಕೊಂಡು ಅವರು ಆ ಪ್ರಶಸ್ತಿಯನ್ನು ಗೌರವಪೂರ್ವಕವಾಗಿಯೇ ತಿರಸ್ಕರಿಸಿದ್ದರು. ಅವರು ಪ್ರಶಸ್ತಿಗಳಿಗಿಂತ ಮಿಗಿಲಾದ ಜನಮನದ ಕಲಾ ಸರಸ್ವತಿ’ ಎಂದು ಪಟ್ನಾಯಕ್ ಸ್ಪಷ್ಟಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪ್ಲೀಸ್ ನನ್ನ ಬಿಟ್ಟು ಹೋಗ್ಬೇಡ; ಪ್ರೇಯಸಿಯ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡ ಯುವಕ – Kannada News | Mumbai: Young man falls at his girlfriend’s feet and pleads tearfully at a Mumbai railway station

ಮುಂಬೈ, ಜುಲೈ 12: ಪ್ರೀತಿ (love) ಯೇ ಹಾಗೆ, ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಈ ಜಗತ್ತೇ ಕಾಣುವುದಿಲ್ಲ. ಹುಡುಗರು ತನ್ನನ್ನು ಪ್ರೀತಿಸುವ ಜೀವದ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಇದೀಗ ಪ್ರೇಮಿಯೊಬ್ಬನು ಮುಂಬೈನ (Mumbai) ಬೋರಿವಳ್ಳಿ ರೈಲ್ವೆ ಸ್ಟೇಷನ್ ನಲ್ಲಿ ತನ್ನ ಪ್ರೇಯಸಿಯ ಕಾಲಿಗೆ ಬಿದ್ದಿದ್ದಾನೆ. ನನ್ನನ್ನು ಬಿಟ್ಟು ಹೋಗಬೇಡ ಎಂದು ಅಂಗಲಾಚಿ ಬೇಡಿಕೊಂಡಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಭಾರತೀಯ ಇನ್ ಲಾಸ್ಟ್ 24 ಹವರ್ (Bharatiyainlast24hr) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ತನ್ನ ಪ್ರೇಮಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ಪ್ಲೀಸ್ ನನ್ನ ಬಿಟ್ಟು ಹೋಗ್ಬೇಡ ಎನ್ನುತ್ತಿದ್ದಂತೆ ಯುವತಿ ಆತನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸಾರ್ವಜನಿಕರು ಯುವಕ ಯುವತಿಯನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದಾರೆ. ಈ ವಿಡಿಯೋದ ಕೊನೆಯಲ್ಲಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಜನರೇಷನ್ ಝೆಡ್ ಡೇಟಿಂಗ್ ಎಫೆಕ್ಟ್; ಪ್ರೀತಿ ಹೆಸರಿನಲ್ಲಿ ರಿಲೇಷನ್ಶಿಪ್‌ಗೆ ನಾನಾ ಅರ್ಥ ನೀಡಿದ್ದಾರೆ ಯುವಜನತೆ

ಈ ವಿಡಿಯೋ ಹದಿಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ರೀತಿ ಮಾಡ್ಬೇಡಿ. ಒಮ್ಮೆ ನಿಮ್ಮ ಹೆತ್ತವರನ್ನು ಯೋಚಿಸಿ, ದುಡ್ಡು ಸಂಪಾದಿಸಿ ಹಾಗೂ ಎಲ್ಲವನ್ನೂ ಸಂಪಾದಿಸಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನಿಜವಾದ ಪ್ರೀತಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರಾಮಾಣಿಕ ಪ್ರೀತಿಗೆ ಯಾವಾಗಲೂ ಹೀಗೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

S Janaki Passes Away: ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್ – Kannada News | Legendary Singer S. Janaki Passes Away; Vijay Prakash Pays Last Respects in Mysore

ಮೈಸೂರು, ಜುಲೈ 12: ಹಿರಿಯ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ (88) ನಿಧನದಿಂದ ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಯಿತು. ಜಾನಕಿಯವರ ನಿಧನದ ಸುದ್ದಿ ತಿಳಿದ ಕೂಡಲೇ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಅಭಿಮಾನಿಗಳು, ಕಲಾವಿದರು, ರಾಜಕಾರಣಿಗಳು ಮತ್ತು ಗಣ್ಯರು ಅವರ ಅಂತಿಮ ದರ್ಶನ ಪಡೆಯಲು ಮೈಸೂರಿನತ್ತ ಧಾವಿಸಿದರು. ಈ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಗಾನಕೋಗಿಲೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಬಾಲ್ಯದಲ್ಲಿ ರೇಡಿಯೊದಲ್ಲಿ ಎಸ್. ಜಾನಕಿ ಅವರ ಹಾಡುಗಳನ್ನು ಕೇಳಿ ಬೆಳೆದ ವಿಜಯ್ ಪ್ರಕಾಶ್, ಆ ಸಮಯದಲ್ಲಿ ಜಾನಕಮ್ಮ ಯಾರು ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ನಂತರ ಸಂಗೀತ ಲೋಕಕ್ಕೆ ಬಂದಾಗ ಅವರ ಗಾಯನದ ಸೂಕ್ಷ್ಮತೆ ಮತ್ತು ತಾಂತ್ರಿಕತೆಯನ್ನು ಅರ್ಥಮಾಡಿಕೊಂಡೆ ಎಂದು ತಿಳಿಸಿದ್ದಾರೆ.

ಜಾನಕಮ್ಮನವರು 17 ಭಾಷೆಗಳಲ್ಲಿ ಸುಮಾರು 48,000 ಹಾಡುಗಳನ್ನು ಹಾಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದ ವಿಜಯ್ ಪ್ರಕಾಶ್, ಇದು ಅಸಾಧ್ಯವಾದ ಸಾಧನೆ ಎಂದು ಬಣ್ಣಿಸಿದ್ದಾರೆ. ಒಬ್ಬ ವ್ಯಕ್ತಿ 100 ವರ್ಷ ಬದುಕಿದರೂ 36,000 ದಿನ ಮಾತ್ರ ಬದುಕುತ್ತಾರೆ. ಇಷ್ಟು ಹಾಡುಗಳನ್ನು ಹಾಡಲು ದೈಹಿಕ ಸಾಮರ್ಥ್ಯ, ಆಸಕ್ತಿ ಮತ್ತು ಶಕ್ತಿ ಬೇಕು. ಇದೆಲ್ಲಕ್ಕೂ ಮಿಗಿಲಾಗಿ ಭಗವಂತನ ಕರುಣೆ ಇರಬೇಕು. ಈ ಸಾಧನೆ ಒಂದು ಚಮತ್ಕಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಟಿಎಂ ಮೆಷಿನ್ ಕಾರಿಗೆ ಕಟ್ಟಿ ಎಳೆದೊಯ್ದ ಗ್ಯಾಂಗ್,ಮೂರೇ ನಿಮಿಷದಲ್ಲಿ ಹಣ ದೋಚಿದ ದುಷ್ಕರ್ಮಿಗಳು – Kannada News | Balasore ATM Heist: Gang Drags Machine with Car, Steals Cash in 3 Minutes

ಬಾಲಸೋರ್, ಜುಲೈ 12: ಸಾಮಾನ್ಯ ದರೋಡೆಕೋರರು ಎಟಿಎಂ(ATM) ಅನ್ನು ಒಡೆದು ಹಣ ಕದಿಯುವುದು ಸಾಮಾನ್ಯ, ಆದರೆ ಈ ದುಷ್ಕರ್ಮಿಗಳ  ಗ್ಯಾಂಗ್ ನೇರವಾಗಿ ಎಟಿಎಂ ಯಂತ್ರವನ್ನೇ ಕದ್ದುಕೊಂಡು ಹೋಗಿದ್ದಾರೆ. ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಈಗ ಭಾರೀ ಚರ್ಚೆಯಾಗುತ್ತಿದೆ. ಶನಿವಾರ ಬೆಳಗಿನ ಜಾವ 2 ಗಂಟೆ ಸಮಯ. ಜನಸಂಚಾರವಿಲ್ಲದ ಸಮಯವನ್ನು ನೋಡಿ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಎಟಿಎಂ ಕೇಂದ್ರದ ಬಳಿ ಬಂದು ನಿಂತರು.

ಬೆಳಗಿನ ಜಾವ 2.14 ಗಂಟೆ ವೇಳೆಗೆ ದುಷ್ಕರ್ಮಿಗಳು ವಾಹನದಿಂದ ಇಳಿದು, ಎಟಿಎಂ ಕಿಯೋಸ್ಕ್ ಒಳಗೆ ನುಗ್ಗಿ, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಮತ್ತು ಮತ್ತೊಂದು ತುದಿಯನ್ನು ತಮ್ಮ ಕಾರಿಗೆ ಗಟ್ಟಿಯಾಗಿ ಕಟ್ಟಿದ್ದಾರೆ. ಕಾರನ್ನು ಅತಿವೇಗವಾಗಿ ಮುಂದಕ್ಕೆ ಚಲಾಯಿಸಿದ ತಕ್ಷಣ, ಆ ಬಲಕ್ಕೆ ಎಟಿಎಂ ಯಂತ್ರ ಕಿತ್ತು ಬಂತು. ಎಟಿಎಂ ಅಳವಡಿಸಿದ್ದ ಕಿಯೋಸ್ಕ್ ಸಂಪೂರ್ಣ ಛಿದ್ರವಾಗಿತ್ತು. ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಈ ಕಾರ್ಯಾಚರಣೆ ಮುಗಿಸಿದ ಗ್ಯಾಂಗ್, ಕಿತ್ತುಕೊಂಡ ಯಂತ್ರವನ್ನು ತಮ್ಮ ವಾಹನಕ್ಕೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ದೌಡಾಯಿಸಿತು. ಅಲ್ಲಿ ಯಂತ್ರವನ್ನು ಒಡೆದು ಒಳಗಿದ್ದ ನಗದನ್ನು ದೋಚಿ ಪರಾರಿಯಾಯಿತು.

ಈ ಇಡೀ ದರೋಡೆಯ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕಪ್ಪು ಬಣ್ಣದ ಥಾರ್ ಕಾರು ಎಟಿಎಂನ ಮುಂದೆ ಬಂದು ನಿಲ್ಲುವುದು, ಕಳ್ಳರು ಹಗ್ಗ ಕಟ್ಟುವುದು, ಯಂತ್ರವನ್ನು ಕಿತ್ತುಕೊಂಡು ಓಡಿಹೋಗುವುದು ಎಲ್ಲವೂ ಸಿನಿಮಾದ ಸ್ಟಂಟ್ ದೃಶ್ಯದಂತೆಯೇ ಇದೆ. ಪೊಲೀಸರು ಈ ವಿಡಿಯೋವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಡಿಯೋ

ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಕಳೆದ ಕೆಲ ತಿಂಗಳುಗಳಿಂದ ಬಾಲಸೋರ್ ಜಿಲ್ಲೆಯ ಈ ಭಾಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಎಟಿಎಂ ಮೆಷಿನ್ ಅನ್ನೇ ಎಳೆದುಕೊಂಡು ಹೋಗುವಷ್ಟು ಧೈರ್ಯ ತೋರಿಸುತ್ತಿರುವ ಕಳ್ಳರ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಭದ್ರತೆಯನ್ನು ಬಿಗಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿ ರೂ.ಗೂ ಅಧಿಕ ಹಣದೊಂದಿಗೆ ಸಿಬ್ಬಂದಿಯೇ ಪರಾರಿ!

ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ಕಾಣಿಸಿದ ಥಾರ್ ವಾಹನದ ನಂಬರ್ ಪ್ಲೇಟ್ ಮತ್ತು ದಾಳಿಕೋರರನ್ನು ಗುರುತಿಸಲು ತೀವ್ರ ಶೋಧ ನಡೆಸುತ್ತಿದ್ದಾರೆ.

Published On – 12:25 pm, Sun, 12 July 26

Source link

ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್ – Kannada News | PM Narendra Modi CM Vijay Chiranjeevi Rajinikanth Kamal Haasan Condole Singer S Janaki Death

ಭಾರತೀಯ ಚಿತ್ರರಂಗದ ಲೆಜೆಂಡರಿ ಸಿಂಗರ್, ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಗಾಯಕಿ ಎಸ್. ಜಾನಕಿ (88) ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್, ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖರು ಸೋಶಿಯಲ್ ಮೀಡಿಯಾ ಮೂಲಕ ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾವುಕರಾಗಿ ಜಾನಕಮ್ಮ ಅವರನ್ನು ಸ್ಮರಿಸಿದ್ದಾರೆ. ‘ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮನವರ ನಿಧನವು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿನ ಅವರ ಹಾಡುಗಳು ತಲೆಮಾರುಗಳಾದ್ಯಂತ ಜನಪ್ರಿಯವಾಗಿದ್ದವು. ಅವರು ಪ್ರತಿಯೊಂದು ಭಾವನೆಗೂ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಗಾಯನದ ಮೂಲಕ ಧ್ವನಿಯಾಗಿದ್ದರು. ಅವರ ಸುಮಧುರ ಗೀತೆಗಳು ಮುಂಬರುವ ವರ್ಷಗಳಲ್ಲೂ ಕೇಳುಗರನ್ನು ಮಂತ್ರಮುಗ್ಧಗೊಳಿಸುವುದನ್ನು ಮುಂದುವರಿಸುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಸಂಖ್ಯಾತ ಅಭಿಮಾನಿಗಳು ಮತ್ತು ಇಡೀ ಸಂಗೀತ ಕ್ಷೇತ್ರಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

ಭಾರತೀಯ ಸಂಗೀತ ಜಗತ್ತಿನ ಧ್ರುವತಾರೆ: ತಮಿಳುನಾಡು ಸಿಎಂ ವಿಜಯ್

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರು ಎಸ್. ಜಾನಕಿ ಅವರ ಕೊಡುಗೆಯನ್ನು ನೆನೆದು ಸಂತಾಪ ಸೂಚಿಸಿದ್ದಾರೆ. ‘ಭಾರತೀಯ ಚಲನಚಿತ್ರ ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ನೂರಾರು ತಲೆಮಾರುಗಳ ಹೃದಯ ಗೆದ್ದಿದ್ದ ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಗಲಿಕೆಯ ಸುದ್ದಿ ತೀವ್ರ ದುಃಖ ತಂದಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಅವರು ಸಂಗೀತ ಲೋಕದಲ್ಲಿ ಅಳಿಸದ ಮುದ್ರೆ ಒತ್ತಿದ್ದಾರೆ’ ಎಂದಿದ್ದಾರೆ.

‘ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅಸಂಖ್ಯಾತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ತಮ್ಮ ಮಧುರ ಕಂಠ, ಭಾವನೆಗಳನ್ನು ವ್ಯಕ್ತಪಡಿಸುವ ಅಸಾಧಾರಣ ಸಾಮರ್ಥ್ಯ ಮತ್ತು ಸಂಗೀತದ ಮೇಲಿನ ಅಚಲ ಭಕ್ತಿಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯುತ್ತಾರೆ. ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸಿಎಂ ವಿಜಯ್ ಪೋಸ್ಟ್ ಮಾಡಿದ್ದಾರೆ.

ನನ್ನ ಸಿನಿ ಜರ್ನಿಯ ಹಿನ್ನೆಲೆ ಧ್ವನಿ ಅವರದ್ದಾಗಿತ್ತು: ಮೆಗಾಸ್ಟಾರ್ ಚಿರಂಜೀವಿ

ತೆಲುಗು ನಟ ಚಿರಂಜೀವಿ ಅವರು ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ‘ಜಾನಕಮ್ಮ ಅವರ ನಿಧನದ ಸುದ್ದಿ ನನ್ನ ಹೃದಯವನ್ನು ಕಲುಕಿದೆ. ನನ್ನ ಸಿನಿಮಾ ಜರ್ನಿಯಲ್ಲಿ, ಅಸಂಖ್ಯಾತ ಮರೆಯಲಾಗದ ಹಾಡುಗಳಿಗೆ ಅವರು ತಮ್ಮ ಅದ್ಭುತ ಧ್ವನಿಯನ್ನು ನೀಡಿದ್ದರು. ಪರದೆಯ ಮೇಲಿನ ನಮ್ಮ ಭಾವನೆಗಳಿಗೆ ಜೀವ ನೀಡಿದ್ದು ಅವರ ಧ್ವನಿ. ನನ್ನ ವೃತ್ತಿಜೀವನದಲ್ಲಿ ಪ್ರೇಕ್ಷಕರು ನೆನಪಿಸಿಕೊಳ್ಳುವ ನೂರಾರು ಹಾಡುಗಳ ಹಿಂದೆ ಜಾನಕಮ್ಮ ಅವರ ಮಧುರ ಧ್ವನಿಯಿದೆ. ಇಂದು ನಾವು ಸಂಗೀತ ಲೋಕದ ಎತ್ತರದ ಶಿಖರವನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಹಾಡು ತಲೆಮಾರುಗಳವರೆಗೆ ಸ್ಫೂರ್ತಿಯಾಗಿ ಸದಾ ಪ್ರತಿಧ್ವನಿಸುತ್ತದೆ’ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಎಕ್ಸ್‌ನಲ್ಲಿ ಬರೆಯುತ್ತಾ, ‘ತಮ್ಮ ಜೇನಿನಂತಹ ಮಧುರ ಧ್ವನಿಯಿಂದ ತಲೆಮಾರುಗಳ ಜನರನ್ನು ರಂಜಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ. ಜಾನಕಿ ಅವರಿಗೆ ಕಮಲ್ ಹಾಸನ್ ಅವರು ಕಾವ್ಯಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಆ ಹಾಡು ಎಂದೆಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಅಮ್ಮಾ, ಆ ಪ್ರೀತಿಯನ್ನು ಮತ್ತೆ ಹುಡುಕಲು ನಾನು ಎಲ್ಲಿಗೆ ಹೋಗಲಿ? ನಿಮ್ಮ ಅಗಲಿಕೆಯಿಂದ ಎಷ್ಟೋ ಜನರು ಎಂದಿಗೂ ಮರೆಯಲಾಗದ ದುಃಖವನ್ನು ಹೊತ್ತಿದ್ದಾರೆ. ಅವರೆಲ್ಲರಿಗೂ ನನ್ನ ಆಳವಾದ ಸಂತಾಪಗಳು’ ಎಂದು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಸಂಗೀತ ನಿರ್ದೇಶಕ ಇಳಯರಾಜ್ ಸಂತಾಪ – Kannada News | Ilaiyaraaja Mourns the Demise of Legendary Singer S. Janaki

ಬೆಂಗಳೂರು, ಜುಲೈ 12: ಹಿರಿಯ ಗಾಯಕಿ ಎಸ್​. ಜಾನಕಿ ಅವರ ನಿಧನಕ್ಕೆ ಸಂಗೀತ ನಿರ್ದೇಶಕ ಇಳಯರಾಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲಂಡನ್‌ನಿಂದ ವೀಡಿಯೊ ಮೂಲಕ ಇಳಯರಾಜ್, ಜಾನಕಿ ಅಮ್ಮ ಅವರ ನಿಧನದ ಸುದ್ದಿ ಕೇಳಿ ತಮಗೆ ಅತ್ಯಂತ ದುಃಖ ಮತ್ತು ಆಘಾತವಾಗಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಅಸಹನೀಯ ದುಃಖಗಳನ್ನು, ಸಹಿಸಲಾಗದ ಘಟನೆಗಳನ್ನು ಸಹಿಸಿಕೊಂಡು ಅವರು ಬದುಕಿದರು ಎಂಬುದು ಅತ್ಯಂತ ವೇದನೆಯ ವಿಷಯ ಎಂದು ಇಳಯರಾಜ್ ಸ್ಮರಿಸಿದ್ದಾರೆ. ತಮ್ಮ ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಜಾನಕಿ ಅಮ್ಮ ತಮ್ಮ ಪ್ರತಿಯೊಂದು ಹಾಡಿನಲ್ಲೂ ನಿರೂಪಿಸುತ್ತಲೇ ಬಂದಿದ್ದಾರೆ. ಅವರು ಅತ್ಯಂತ ಕಠಿಣ ಪರಿಶ್ರಮಿ. ಜಾನಕಿ ಅವರ ಅಗಲಿಕೆ ಭಾರತೀಯ ಚಲನಚಿತ್ರ ಸಂಗೀತ ಲೋಕಕ್ಕೆ ಒಂದು ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version