Monsoon travel tips: ಮಳೆಗಾಲದಲ್ಲಿ ಈ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ಸಾಧ್ಯವಾದಷ್ಟು ತಪ್ಪಿಸಿ – Kannada News | These are the tourist destinations that are not suitable to visit during the monsoon

ಮಳೆಗಾಲದ (monsoon) ಆಗಮನದೊಂದಿಗೆ ಪ್ರಕೃತಿಯ ಸೌಂದರ್ಯವೂ ಹೆಚ್ಚುತ್ತದೆ. ನದಿ, ಹೊಳೆ, ಜಲಪಾತಗಳು ತುಂಬಿ ಹರಿಯುತ್ತವೆ, ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಪ್ರಕೃತಿಯ ಸೌಂದರ್ಯ ರಾಶಿಯಯನ್ನು ಸವಿಯಲೆಂದೇ ನಮ್ಮ ಜನ ಈ ಸಮಯಲ್ಲಿ ಟ್ರಿಪ್‌ ಹೋಗಲು ಇಷ್ಟಪಡುತ್ತಾರೆ. ಮಡಿಕೇರಿ, ಚಿಕ್ಕಮಗಳೂರು, ಕೇರಳ ಸೇರಿದಂತೆ ಗಿರಿಧಾಮ, ಜಲಪಾತ  ಇತ್ಯಾದಿ ಪ್ರವಾಸಿ ತಾಣಕ್ಕೆ ಟ್ರಿಪ್ ಪ್ಲಾನ್‌ ಮಾಡುತ್ತಾರೆ. ಮಾನ್ಸೂನ್‌ ಟ್ರಿಪ್‌ ಮನಸ್ಸಿಗೆ ಮುದ ನೀಡುವುದೇನೋ ನಿಜ ಆದರೆ ಪ್ರವಾಹ ಭೀತಿ, ಭೂಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಕಾರಣ ಈ ಕೆಲವೊಂದು ಸ್ಥಳಗಳಿಗೆ ಮಳೆಗಾಲದಲ್ಲಿ ಪ್ರವಾಸ ಹೋಗಬಾರದು. ಈ ಬಾರಿ ಮಳೆ ಕಡಿಮೆ ಇದ್ದರೂ ಸಹ ಇಲ್ಲಿಗೆಲ್ಲಾ ಪ್ರವಾಸ ಹೋಗಬೇಡಿ. ಆ ಪ್ರವಾಸಿ ಸ್ಥಳಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಯಾವ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ತಪ್ಪಿಸಬೇಕು?

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ಗಿರಿಧಾಮಗಳಿಗೆ ಹೆಸರುವಾಗಿಯಾದ ಸ್ಥಳವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ದುಪ್ಪಟ್ಟಾಗುತ್ತದೆ. ಈ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದೇ ಪ್ರಕೃತಿ ಪ್ರಿಯರು ದೂರದೂರಗಳಿಂದ ಇಲ್ಲಿ ಪ್ರವಾಸ ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸ ಯೋಜಿಸುವುದು ಸೂಕ್ತವಲ್ಲ. ಏಕೆಂದರೆ ಹಿಮಾಚಲವು ಗುಡ್ಡಗಾಡು ಪ್ರದೇಶವಾಗಿದ್ದು, ಮಳೆಯ ಸಮಯದಲ್ಲಿ ಬಂಡೆಗಳು ಬೀಳುವ, ಗುಡ್ಡಗಳು ಕುಸಿಯುವ ಅಪಾಯವಿದೆ. ಆದ್ದರಿಂದ, ನೀವು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದರೆ, ಮಳೆಗಾಲದ ಮೊದಲು ಅಥವಾ ನಂತರ ಭೇಟಿ ನೀಡಲು ಯೋಜಿಸಿ.

ಉತ್ತರಾಖಂಡ: ಹಿಮಾಚಲ ಪ್ರದೇಶದಂತೆಯೇ, ಉತ್ತರಾಖಂಡವೂ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇಲ್ಲಿಗೂ ಮಳೆಗಾಲದಲ್ಲಿ ಪ್ರವಾಸ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಇಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಜಾರುವುದಲ್ಲದೆ,  ಪರ್ವತ ಪ್ರದೇಶವಾಗಿರುವುದರಿಂದ ಇಲ್ಲಿ ಭೂ ಕುಸಿತದ ಅಪಾಯವೂ ಹೆಚ್ಚಿರುತ್ತದೆ. ಹಾಗಾಗಿ ಇಲ್ಲಿಗೆ ಮಾನ್ಸೂನ್‌ ಟ್ರಿಪ್‌ ಯೋಜಿಸಬಾರದು.

ಇದನ್ನೂ ಓದಿ: ಮಳೆಗಾಲದಲ್ಲಿ ಪ್ರವಾಸ ಹೋಗುವಾಗ ಅನುಸರಿಸಲೇಬೇಕಾದ ಸುರಕ್ಷತಾ ಕ್ರಮಗಳಿವು

ಋಷಿಕೇಶ: ಮಳೆಗಾಲದಲ್ಲಿ ಋಷಿಕೇಶಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಳೆಗಾಲದಲ್ಲಿ ಗಂಗಾ ನದಿಯ ನೀರಿನ ಮಟ್ಟ ಹಠಾತ್ತನೆ ಏರುತ್ತದೆ, ಕೆಲವೊಮ್ಮೆ ಪ್ರವಾಹದಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಈ ಜಾಗಕ್ಕೆ ಮಳೆಗಾಲದಲ್ಲಿ ಪ್ರವಾಸ ಯೋಜಿಸಬೇಡಿ.

ಕೇರಳ: ದೇವರ ನಾಡು ಕೇರಳ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಜಾಗ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ದುಪ್ಪಟ್ಟಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಜನ ವಯನಾಡು, ಮುನ್ನಾರ್‌ಗೆ ಪ್ರವಾಸ ಹೋಗಲು ಯೋಜಿಸುತ್ತಾರೆ. ಆದರೆ ಈ ಪ್ರದೇಶಗಳಲ್ಲಿ ಭೂ ಕುಸಿತಗಳು ಸಂಭವಿಸುವ ಕಾರಣ ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ಗಿರಿಧಾಮಗಳು ಬೆಟ್ಟ ಪ್ರದೇಶಗಳು ಮಾತ್ರವಲ್ಲ, ಕರಾವಳಿ ಪ್ರದೇಶ, ಅಪಾಯಕಾರಿ ನದಿ, ಜಲಪಾತಗಳಿರುವ ಸ್ಥಳಗಳಿಗೂ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:35 pm, Sat, 11 July 26

Source link

IND vs ENG: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ – Kannada News | India vs England T20: Shreyas Iyer wins toss, makes 2 changes; Samson returns!

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ನಡೆಯುತ್ತಿದೆ. ಈಗಾಗಲೇ ಸರಣಿ ಸೋತಿರುವ ಶ್ರೇಯಸ್ ಅಯ್ಯರ್ (Shreyas Iyer) ಪಡೆ ಕ್ಲೀನ್ ಸ್ವೀಪ್ ತಪ್ಪಿಸಲು ಪ್ರಯತ್ನಿಸಲಿದೆ. ಇತ್ತ ಆತಿಥೇಯ ಇಂಗ್ಲೆಂಡ್ ಕೊನೆಯ ಪಂದ್ಯವನ್ನು ಗೆದ್ದು ಸರಣಿಗೆ ಅಂತ್ಯ ಹಾಡಲು ಯತ್ನಿಸಲಿದೆ. ಟೀಂ ಇಂಡಿಯಾ ಒಂದು ವೇಳೆ ಈ ಪಂದ್ಯವನ್ನು ಸೋತರೆ ಟಿ20 ರ್ಯಾಂಕಿಂಗ್​ನಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಸರಣಿಯನ್ನು ಒಂದು ಪಂದ್ಯವನ್ನಾದರೂ ಗೆದ್ದು ಪ್ರವಾಸಕ್ಕೆ ಅಂತ್ಯಹಾಡುವ ಇರಾದೆಯಲ್ಲಿದೆ.

ಟಾಸ್ ಗೆದ್ದ ಶ್ರೇಯಸ್ ಅಯ್ಯರ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಲಿದೆ. ವಾಸ್ತವವಾಗಿ ಶ್ರೇಯಸ್ ಅಯ್ಯರ್ ನಾಯಕನಾಗಿ ಸತತ 5ನೇ ಪಂದ್ಯದಲ್ಲೂ ಟಾಸ್ ಗೆದ್ದಿದ್ದಾರೆ. ಆದರೆ ಟಾಸ್ ಗೆದ್ದವರು ಪಂದ್ಯ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇದೀಗ ಈ ಪಂದ್ಯದಲ್ಲೂ ಶ್ರೇಯಸ್ ಟಾಸ್ ಗೆದ್ದಿದ್ದು ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆಡಿದ ಮೂರು ಪಂದ್ಯಗಳಲ್ಲಿ ನಿರಸ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿಯವರನ್ನು ಈ ಪಂದ್ಯದಿಂದ ಹೊರಗಿಡಲಾಗಿದೆ. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್​ಗೆ ಮತ್ತೆ ಅವಕಾಶ ನೀಡಲಾಗಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಅವರನ್ನು ಈ ಪಂದ್ಯದಿಂದ ಹೊರಗಿಟ್ಟು, ಸೂರ್ಯಾಂಶ್ ಶೆಡ್ಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸೌತಾಂಪ್ಟನ್‌ನಲ್ಲಿ ಭಾರತದ ದಾಖಲೆ

ಈ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಟಿ20 ಪಂದ್ಯವನ್ನು ಆಡಿದೆ. ಈ ಪಂದ್ಯವನ್ನು 2022 ರಲ್ಲಿ ಆಡಲಾಗಿದ್ದು, ಭಾರತ ತಂಡವು ಇಂಗ್ಲೆಂಡ್ ತಂಡವನ್ನು 50 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 198 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್ 148 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಬಾರಿಯೂ ಟೀಂ ಇಂಡಿಯಾದಿಂದ ಇದೇ ರೀತಿಯ ಪ್ರದರ್ಶನವನ್ನು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

IND vs ENG: 14 ವರ್ಷಗಳ ನಂತರ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್‌

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಸೂರ್ಯಾಂಶ್ ಶೆಡ್ಗೆ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ.

ಇಂಗ್ಲೆಂಡ್‌ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್ (ರೆಹಾನ್ ಅಹ್ಮದ್ ಬದಲಿಗೆ), ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:27 pm, Sat, 11 July 26

Source link

ವಿಯೆಟ್ನಾಂನಲ್ಲಿ ಬೋಟ್ ಮುಳುಗಿ 15 ಭಾರತೀಯ ಪ್ರವಾಸಿಗರು ಸಾವು; ಪ್ರಧಾನಿ ಮೋದಿ ಸಂತಾಪ – Kannada News | 15 Indian Tourists dead as boat capsizes in Vietnam PM Narendra Modi Condoles Assures All Possible Assistance

ನವದೆಹಲಿ, ಜುಲೈ 11: ವಿಯೆಟ್ನಾಂನ ಫೂ ಕ್ವೋಕ್ (Phu Quoc) ದ್ವೀಪದ ಬಳಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದ್ದು, ಭಾರತೀಯ ಅಧಿಕಾರಿಗಳು ವಿಯೆಟ್ನಾಂ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಭರವಸೆ ನೀಡಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಬೋಟ್ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, “ವಿಯೆಟ್ನಾಂನ ಫೂ ಕ್ವೋಕ್ ಬಳಿ ಭಾರತೀಯ ನಾಗರಿಕರು ಪ್ರಯಾಣಿಸುತ್ತಿದ್ದ ಬೋಟ್ ಅಪಘಾತಕ್ಕೀಡಾದ ದುರಂತದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಅತ್ಯಂತ ಪ್ರಾಮಾಣಿಕ ಸಾಂತ್ವನಗಳು. ಗಾಯಗೊಂಡು ಬದುಕುಳಿದವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಕಚೇರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿವೆ. ನಮ್ಮ ಅಧಿಕಾರಿಗಳು ವಿಯೆಟ್ನಾಂ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂನ ದ್ವೀಪದ ಬಳಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆ

32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 36 ಜನರಿದ್ದ ಈ ಸ್ಪೀಡ್ ಬೋಟ್ ಹಾನ್ ಮೇ ರುತ್ ದ್ವೀಪದಿಂದ ಪ್ರಯಾಣಿಸುತ್ತಿದ್ದಾಗ, ಕರಾವಳಿಯಿಂದ ಕೇವಲ 400 ಮೀಟರ್ ದೂರದಲ್ಲಿ ತಲೆಕೆಳಗಾಗಿ ಪಲ್ಟಿಯಾಗಿದೆ. ಸ್ಥಳೀಯ ರಕ್ಷಣಾ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಬೋಟ್‌ನ ಒಳಗಿನಿಂದ 21 ಜನರನ್ನು ರಕ್ಷಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಇಬ್ಬರು ಮಹಿಳೆಯರು ಮತ್ತು 13 ಪುರುಷರು ಸೇರಿದಂತೆ ಒಟ್ಟು 15 ಭಾರತೀಯ ಪ್ರವಾಸಿಗರು ಈ ಅಪಘಾತದಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಆಂಧ್ರಪ್ರದೇಶದ ಪ್ರವಾಸಿಗರು:

ಮಾಧ್ಯಮಗಳ ವರದಿ ಪ್ರಕಾರ, ಈ ಪ್ರವಾಸಿಗರು ಆಂಧ್ರಪ್ರದೇಶಕ್ಕೆ ಸೇರಿದ ಒಂದೇ ಗುಂಪಿನವರಾಗಿದ್ದಾರೆ ಎನ್ನಲಾಗಿದೆ. ಬೋಟ್‌ನಲ್ಲಿ 32 ಭಾರತೀಯರೊಂದಿಗೆ ನಾಲ್ವರು ಸಿಬ್ಬಂದಿ ಇದ್ದರು. ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು 1 ಗಂಟೆಗೆ, ಪ್ರವಾಸಿಗರನ್ನು ಹಾನ್ ಮೇ ರುತ್‌ನಿಂದ ಅನ್ ಥೋಯ್ ಬಂದರಿಗೆ ಕರೆದೊಯ್ಯುತ್ತಿದ್ದಾಗ ಬೋಟ್ ಪಲ್ಟಿಯಾಗಿದೆ. ಈ ಬೋಟ್ ಅನ್ನು ‘ಓಷಿಯನ್ ಪರ್ಲ್ ಐಲ್ಯಾಂಡ್ ಕಂಪನಿ’ ನಿರ್ವಹಿಸುತ್ತಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ:

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ಸಂತ್ರಸ್ತ ಕುಟುಂಬಗಳ ಪರವಾಗಿ ನಿಲ್ಲುತ್ತದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಮತ್ತು ಶೋಧ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು

ಭಾರತೀಯ ರಾಯಭಾರ ಕಚೇರಿಯಿಂದ ಸಹಾಯವಾಣಿ:

ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ದುರಂತವನ್ನು ಖಚಿತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಹೋ ಚಿ ಮಿನ್ ಸಿಟಿ ಮತ್ತು ಹನೋಯಿ ನಗರಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಹನೋಯಿ ನಿಯಂತ್ರಣ ಕೊಠಡಿ ಸಂಖ್ಯೆ: +84 91 308 9165

ಹೋ ಚಿ ಮಿನ್ ಸಿಟಿಯ ಕಾನ್ಸುಲೇಟ್ ಜನರಲ್ ಕಚೇರಿ ಸಂಖ್ಯೆಗಳಾದ +84 36 281 7930, +84 91 552 37 14, ಮತ್ತು +84 33 452 0414 ಸಂಪರ್ಕಿಸಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 7:20 pm, Sat, 11 July 26

Source link

‘ಒಂದಿನ ದೊಡ್ಡದಾಗಿ ಬೆಳಿತೀನಿ’; ಹೇಳಿದ್ದನ್ನು ಮಾಡಿ ತೋರಿಸಿದ ಯಶ್ – Kannada News | Rocking Star Yash Toxic Journey From Serials to Global Stardom Inspiration to millions

‘ರಾಕಿಂಗ್ ಸ್ಟಾರ್’ ಯಶ್ (Yash) ಸಾಕಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ‘ಟಾಕ್ಸಿಕ್’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲು ರೆಡಿ ಆಗಿದೆ. ಈ ಚಿತ್ರದ ಮೂಲಕ ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಯಶ್ ಅವರು ತುಂಬಾನೇ ಸಣ್ಣ ಮಟ್ಟದಿಂದ ಇಲ್ಲಿವರೆಗೆ ಬಂದು ನಿಂತಿದ್ದಾರೆ. ಅವರ ಒಂದ ಹಳೆಯ ಸಂದರ್ಶನವನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ.

2012ರಲ್ಲಿ ಯಶ್ ನಟನೆಯ ‘ಲಕ್ಕಿ’ ಸಿನಿಮಾ ರಿಲೀಸ್ ಆಗಿತ್ತು. ಆ ಸಂದರ್ಭದಲ್ಲಿ ಯಶ್ ಹಾಗೂ ರಮ್ಯಾ ಮಧ್ಯೆ ಏನೋ ಕಿರಿಕ್ ಆಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಯಶ್ ತಳ್ಳಿ ಹಾಕಿದ್ದರು. ‘ನನ್ನ ಹಾಗೂ ರಮ್ಯಾ ಮಧ್ಯೆ ಎಲ್ಲವೂ ಸರಿ ಇದೆ’ ಎಂದು ಅವರು ಹೇಳಿದ್ದರು.

ಸೀರಿಯಲ್​ ಸಂದರ್ಭದ ನೆನಪನ್ನು ಯಶ್ ಹಂಚಿಕೊಂಡಿದ್ದರು. ‘ಸೀರಿಯಲ್​​ನಲ್ಲಿ ಇದ್ದಾಗ ಸಂದರ್ಶನ ನಡೆಯುತ್ತಿತ್ತು. ಎಲ್ಲರನ್ನೂ ಮಾತನಾಡಿಸಿದ್ದರು, ನನ್ನನ್ನು ಮಾತನಾಡಿಸಿರಲಿಲ್ಲ. ಬೆಳೆಯುತ್ತೇನೆ, ಆಗ ಇವರೆಲ್ಲ ಸಂದರ್ಶನ ಮಾಡ್ತಾರೆ ಎಂದು ಅಂದುಕೊಂಡಿದ್ದೆ. ಮುಂದೊಂದು ದಿನ ಅದೇ ವ್ಯಕ್ತಿ ಸಂದರ್ಶನ ಬೇಕು ಎಂದು ಸಾಕಷ್ಟು ಬಾರಿ ಕಾಲ್ ಮಾಡಿದ್ದ. ಸುಮಾರು ದಿನ ಕಾದಿದ್ದರು. ಇವತ್ತು ನನ್ ಟೈಮ್, ಮತ್ತೊಂದು ದಿನ ಮತ್ತೊಬ್ಬರ ಟೈಮ್’ ಎಂದಿದ್ದರು ಯಶ್.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ನಯನತಾರಾ ಪಡೆದ ಸಂಭಾವನೆ ಬರೋಬ್ಬರಿ 12 ಕೋಟಿ ರೂ.?

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಅವರು ಈ ಚಿತ್ರಕ್ಕೆ ನಿರ್ಮಾಪಕ ಕೂಡ ಹೌದು. ಭಾರಿ ಬಜೆಟ್​​ನ ಸಿನಿಮಾ ಹಾಲಿವುಡ್ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾದ ಟೀಸರ್ ಹಾಗೂ ಹಾಡುಗಳು ಧೂಳೆಬ್ಬಿಸಿವೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಜೊತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ. ಆಗಸ್ಟ್ 26ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಬೋಲ್ಡ್​ ದೃಶ್ಯದ ಕಾರಣಕ್ಕೆ ಈ ಚಿತ್ರ ಚರ್ಚೆಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನ್ಯೂಜಿಲೆಂಡ್​ನಲ್ಲಿ ತಮ್ಮ ಮಫ್ಲರ್ ಕತೆ ಹೇಳುತ್ತಾ ಭಾವುಕರಾದ ಪ್ರಧಾನಿ ಮೋದಿ – Kannada News | PM Modi Wore 30 year old Muffler gifted by New Zealander in Auckland Indian Community Event

ಆಕ್ಲೆಂಡ್, ಜುಲೈ 11: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in New Zealand) ಇಂದು ನ್ಯೂಜಿಲೆಂಡ್‌ನಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಅತ್ಯಂತ ಭಾವನಾತ್ಮಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ನರೇಂದ್ರ ಮೋದಿಯಿನ್ನೂ ರಾಜಕೀಯಕ್ಕೆ ಕಾಲಿಡದ ಸಂದರ್ಭದಲ್ಲಿ ನ್ಯೂಜಿಲೆಂಡ್​ಗೆ ಬಂದಿದ್ದರಂತೆ. ಆಗ ನ್ಯೂಜಿಲೆಂಡ್ ಪ್ರಜೆಯೊಬ್ಬರು ಅವರಿಗೆ ಉಡುಗೊರೆಯಾಗಿ ಮಫ್ಲರ್, ಟೋಪಿ, ಹ್ಯಾಂಡ್ ಗ್ಲೌಸ್ ಕೊಟ್ಟಿದ್ದಂತೆ. ಆ ಮಫ್ಲರ್ ಅನ್ನೇ ಇಂದು ಧರಿಸಿಕೊಂಡು ಬಂದಿದ್ದೇನೆ ಎಂದು ಮೋದಿ ತಾವು ಹಾಕಿಕೊಂಡು ಬಂದಿದ್ದ ಮಫ್ಲರ್ ಅನ್ನು ಅನಿವಾಸಿ ಭಾರತೀಯರ ಮುಂದೆ ಎತ್ತಿ ಹಿಡಿದಿದ್ದಾರೆ. ಈ ವೇಳೆ ಅಲ್ಲಿದ್ದ ಭಾರತೀಯರು ಭಾರೀ ಕರತಾಡನ ಮಾಡಿದ್ದಾರೆ.

ಆ ದಿನ ಸಾಮಾನ್ಯ ಪ್ರಜೆಯಾಗಿ ನ್ಯೂಜಿಲೆಂಡ್​ಗೆ ಬಂದಿದ್ದ ನಾನು ಈ ಬಾರಿ ಪ್ರಧಾನಿಯಾಗಿ ಆಗಮಿಸಿದ್ದೇನೆ. ಅಂದು ನ್ಯೂಜಿಲೆಂಡ್​ನ ಪ್ರಜೆ ನನಗೆ ನೀಡಿದ್ದ ಮಫ್ಲರ್, ಟೋಪಿಯನ್ನು ಇಂದಿಗೂ ನಾನು ಇಟ್ಟುಕೊಂಡಿದ್ದೇನೆ ಎಂದು ಮೋದಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

“ನಿಮ್ಮ ಕಣ್ಣೆದುರಿಗಿರುವ ಈ ಮಫ್ಲರ್ ಅನ್ನು 25-30 ವರ್ಷಗಳ ಹಿಂದೆ ಒಬ್ಬ ನ್ಯೂಜಿಲೆಂಡ್ ಪ್ರಜೆ ನನಗೆ ಉಡುಗೊರೆಯಾಗಿ ನೀಡಿದ್ದರು. ಕಳೆದ ಇಷ್ಟು ವರ್ಷಗಳಲ್ಲಿ ನಾನು ಇದನ್ನು ಹಲವು ಬಾರಿ ಬಳಸಿದ್ದೇನೆ ಮತ್ತು ನಿಮ್ಮ ಪ್ರೀತಿಯನ್ನು ನಾನು ಹೇಗೆ ಜೋಪಾನವಾಗಿಟ್ಟಿದ್ದೇನೋ, ಹಾಗೆಯೇ ಈ ಮಫ್ಲರ್ ಅನ್ನು ಇಂದಿಗೂ ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡಿದ್ದೇನೆ” ಎಂದು ಮೋದಿ ಭಾವುಕರಾಗಿ ನುಡಿದರು.

ನ್ಯೂಜಿಲೆಂಡ್‌ಗೆ 2 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಆಕ್ಲೆಂಡ್‌ನಲ್ಲಿ ನಡೆದ ಅದ್ಧೂರಿ ಸಮುದಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿಯಾಗಿ ಇದು ತಮ್ಮ ಮೊದಲ ಭೇಟಿಯಾಗಿದ್ದರೂ, ಈ ಪ್ರವಾಸವು 25ರಿಂದ 30 ವರ್ಷಗಳ ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಟೋ ಡ್ರೈವರ್‌ಗೆ ನೀರು ಹಾಕಿ ತೊಳೆಯಿಸಿದ ವ್ಯಕ್ತಿ – Kannada News | Viral Bangalore Video: Citizen Teaches Auto Driver Public Accountability for Urinating in Public

ಬೆಂಗಳೂರು, ಜು.11: ಭಾರತದಲ್ಲಿ ಸಾರ್ವಜನಿಕ ವರ್ತನೆಗೆ ಸಂಬಂಧಿಸಿದಂತೆ ಹೊಣೆಗಾರಿಕೆ ಮತ್ತು ಜವಾಬ್ದಾರಿ ಎನ್ನುವುದು ಅನೇಕರಲ್ಲಿ ಕಾಣ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಸಾರ್ವಜನಿಕ ಸ್ಥಳಗಳಲ್ಲಿ ತಪ್ಪು ಮಾಡುವವರನ್ನು ತಿದ್ದಲು ಹೋದರೆ ಪ್ರಾಣಕ್ಕೇ ಕಂಟಕ ಬಂದೊದಗಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಆದರೆ, ಇಂತಹ ಭಯದ ವಾತಾವರಣದ ಮಧ್ಯೆಯೂ ಬೆಂಗಳೂರಿನ ಜಾಗೃತ ನಾಗರಿಕರೊಬ್ಬರು ಸಾರ್ವಜನಿಕವಾಗಿ ತಪ್ಪು ಮಾಡಿದ ಆಟೋ ಚಾಲಕನಿಗೆ ಸ್ಥಳದಲ್ಲೇ ಪಾಠ ಕಲಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆಗೆ ಪಾತ್ರನಾಗಿದ್ದಾರೆ.

ಇತ್ತೀಚೆಗಷ್ಟೇ ಸ್ವಚ್ಛಗೊಳಿಸಲಾಗಿದ್ದ ಫುಟ್‌ಪಾತ್ ಪಕ್ಕದ ಮರವೊಂದರ ಬಳಿ ಆಟೋ ಚಾಲಕನೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಈ ವ್ಯಕ್ತಿ ಆತನನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಟೋ ಚಾಲಕ ತಪ್ಪು ಮಾಡುತ್ತಿರುವುದನ್ನು ಗಮನಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರಿನ ನಾಗರಿಕ, ಆಟೋ ಚಾಲಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆ ಜಾಗಕ್ಕೆ ನೀರು ಹಾಕಿ ತಾನೇ ಸ್ವತಃ ತೊಳೆಯುವಂತೆ ಆಟೋ ಚಾಲಕನಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ. ಅದರಂತೆ ಆಟೋ ಚಾಲಕ ತಾನು ಗಲೀಜು ಮಾಡಿದ ಜಾಗವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದಾನೆ. ಈ ಇಡೀ ಘಟನೆಯ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್​​ನಲ್ಲಿ ವೈರಲ್​​ ಆಗಿರುವ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ 27 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು (Views) ಪಡೆದು ಭಾರಿ ವೈರಲ್ ಆಗಿದೆ. ನೆಟ್ಟಿಗರು ಈ ಬೆಂಗಳೂರಿನ ವ್ಯಕ್ತಿಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಭಾರತದಲ್ಲಿ ಇಂತಹ ಸಾರ್ವಜನಿಕ ಕಿಡಿಗೇಡಿಗಳಿಗೆ ‘ಸಾರ್ವಜನಿಕ ಅವಮಾನ’ ಮತ್ತು ಸ್ಥಳದಲ್ಲೇ ಶಿಕ್ಷೆ ನೀಡುವುದು ಒಂದೇ ಸೂಕ್ತ ಪರಿಹಾರ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ: ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ

ನಮ್ಮ ರಸ್ತೆಗಳು ಉಚಿತ ವಾಶ್ ಪಡೆದಾಗ, ಚಾಲಕನಿಗೆ ಮೊಪ್ ಸಿಕ್ಕಿತು. ಕರ್ಮ ಇವತ್ತು ಹೊಸ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಮಾಡಿದ್ದು ನೂರಕ್ಕೆ ನೂರು ಸರಿ. ಇಂತಹ ಜನರಿಗೆ ಇಂತಹ ಪಾಠಗಳೇ ಅಗತ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಸ್ವಚ್ಛ ಭಾರತದ ಕುರಿತು ಅಂತ್ಯವಿಲ್ಲದ ಭಾಷಣಗಳನ್ನು ಕೇಳುವುದಕ್ಕಿಂತ ಸಾರ್ವಜನಿಕ ಅವಮಾನ + ತಕ್ಷಣದ ಶಿಕ್ಷೆ ಹೆಚ್ಚು ಪರಿಣಾಮಕಾರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಸ್ವಲ್ಪ ಕಠಿಣವಾಗಿ ಕಂಡರೂ ಅತ್ಯಗತ್ಯವಾಗಿತ್ತು. ನಗರದ ಮೇಲಿನ ಗೌರವವು ನಮ್ಮ ರಸ್ತೆಗಳು ಮತ್ತು ಮರಗಳನ್ನು ಗೌರವಿಸುವುದರಿಂದಲೇ ಆರಂಭವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Sat, 11 July 26

Source link

ಗೋಮೂತ್ರದಿಂದ ತಲೆ, ಮುಖವನ್ನು ತೊಳೆಯುವ ವಿಶಿಷ್ಟ ಬುಡಕಟ್ಟು ಜನಾಂಗವಿದು – Kannada News | The Mundari tribe people of South Sudan shower with cow urine; know the reason behind it

ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವನ್ನು ನೀಡಿರುವಂತೆ ಗೋಮೂತ್ರವನ್ನು (cow urine) ಸಹ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಅನೇಕ ಪೂಜಾ ಕೈಂಕರ್ಯಗಳಲ್ಲೂ ಬಳಸಲಾಗುತ್ತದೆ. ಅಲ್ಲದೆ ಇದರಲ್ಲಿ ಜೌಷಧೀಯ ಗುಣಗಳಿದ್ದು, ಇದರ ಸೇವನೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ನಮ್ಮ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ ಖಂಡದಲ್ಲಿರುವ ದಕ್ಷಿಣ ಸುಡಾನ್‌ನ ಮುಂಡಾರಿ ಬುಡಕಟ್ಟು ಜನಾಂಗದವರಿಗೂ  ಗೋವುಗಳು ಬರೀ ಪ್ರಾಣಿಯಾಗಿರದೆ ಸಂಪತ್ತು, ಘನತೆ ಮತ್ತು ಜೀವನದ ಮೂಲವಾಗಿದ್ದು, ಅವರು ಸಹ ಗೋವುಗಳಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ಜನ ತಲೆ ಮತ್ತು ಮುಖ ತೊಳೆಯುವುದು ಗೋಮೂತ್ರದಲ್ಲಿಯೇ. ಇವರ ಈ ಸಂಪ್ರದಾಯದ ಹಿಂದೆಯೂ ಕಾರಣಗಳಿಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಮುಂಡಾರಿ ಬುಡಕಟ್ಟು ಜನಾಂಗದವರು ಗೋಮೂತ್ರದಲ್ಲಿ ತಲೆ ತೊಳೆಯುವುದೇಕೆ?

ತಮ್ಮ ವಿಶಿಷ್ಟ ಪದ್ಧತಿಗಳು ಮತ್ತು ಅಭ್ಯಾಸಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಸುಡಾನ್‌ ದೇಶದ ಮುಂಡಾರಿ ಬುಡಕಟ್ಟು ಜನಾಂಗದವರು ಗೋವುಗಳಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ. ಹಸು ಸಾಕಾನೆ ಇವರ ಮೂಲ ಕಸುಬಾಗಿದ್ದು, ಜೀವನೋಪಾಯಕ್ಕೆ ಇವರು ಅಂಕೋಲೆ-ವಾಟುಸಿ ತಳಿಯ ದೊಡ್ಡ ಕೊಂಬುಗಳ ಹಸುಗಳನ್ನೇ ಅವಲಂಬಿಸಿದ್ದಾರೆ. ಈ ಬುಡಕಟ್ಟಿನಲ್ಲಿ, ಗೋವು ಕೇವಲ ಪ್ರಾಣಿಯಲ್ಲ, ಅದು ಗೌರವ, ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿದೆ. ಅಷ್ಟೇ ಅಲ್ಲದೆ ಇವರು ಪ್ರತಿನಿತ್ಯ ಬೆಳಿಗ್ಗೆ ಗೋಮೂತ್ರದಿಂದ ಮುಖ ಮತ್ತು ತಲೆಯನ್ನು ತೊಳೆಯುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಹ Davud Akhundzada ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ಮುಂಡಾರಿ ಜನಾಂಗದವರು ಗೋಮೂತ್ರವನ್ನು ಪ್ರಾಥಮಿಕವಾಗಿ ನಂಜುನಿರೋಧಕವಾಗಿ ಬಳಸುತ್ತಾರೆ. ಹೌದು ಇಲ್ಲಿನ ಜನರು ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಅದರಿಂದ ಸ್ನಾನ ಮಾಡುವುದರಿಂದ ದೇಹ ಶುದ್ಧಗೊಳಿಸುತ್ತದೆ ಎಂದು ನಂಬುತ್ತಾರೆ.  ಹಾಗಾಗಿ ಚರ್ಮದ ಸೋಂಕುಗಳು ಮತ್ತು ಕೀಟದ ಕಡಿತದಿಂದ ರಕ್ಷಣೆ ಪಡೆಯಲು, ಆರೋಗ್ಯವನ್ನು ವೃದ್ಧಿಸಲು ಇವರು ಗೋಮೂತ್ರದಲ್ಲಿ ಮುಖ, ಕೈಕಾಲುಗಳನ್ನು ತೊಳೆಯುತ್ತಾರೆ. ಜೊತೆಗೆ  ಇವರು ವಾಸಿಸುವ ಪ್ರದೇಶದಲ್ಲಿ ತೀವ್ರವಾದ ಶಾಖ ಇರುವುದರಿಂದ ಮತ್ತು ಇತರ ಅಂಶಗಳಿಂದಾಗಿ ಇವರು ಬೇಗನೆ ಚರ್ಮದ ಸೋಂಕುಗಳಿಗೆ ಗುರಿಯಾಗುತ್ತಾರೆ. ಈ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಹಸುಗಳ ಮೂತ್ರದಲ್ಲಿ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೆ ಗೋಮೂತ್ರದಲ್ಲಿ ಅಮೋನಿಯಾ ಇದ್ದು, ಇದು ಬ್ಲೀಚಿಂಗ್‌ ಏಜೆಂಟ್‌ ಅಗಿ ಕಾರ್ಯ ನಿರ್ವಹಿಸುತ್ತದೆ, ಹಾಗಾಗಿ ಕಿತ್ತಳೆ ಬಣ್ಣದ ತಲೆಗೂದಲನ್ನು ಪಡೆಯಲು ಇವರು ಗೋಮೂತ್ರದಲ್ಲಿ ತಲೆಸ್ನಾನ ಮಾಡುತ್ತಾರೆ. ಕಿತ್ತಳೆ ಬಣ್ಣ ಇವರ ಸಂಸ್ಕೃತಿಯಲ್ಲಿ ಶುದ್ಧತೆಯನ್ನು ಪ್ರತಿನಿಧಿಸುವ ಬಣ್ಣವಾಗಿದೆ.

ಇದನ್ನೂ ಓದಿ: ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ?

ಇದಲ್ಲದೆ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ವಾಸಿಸುವ ಕೆಲವೊಂದಿಷ್ಟು ಈ ಬುಡಕಟ್ಟು ಜನ ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಲು ಗೋಮೂತ್ರದಿಂದ ತಲೆ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂಡಾರಿ ಜನರು ಗೋವಿನ ಸಗಣಿಯನ್ನು ಸುಟ್ಟು ಅದರ ಬೂದಿಯನ್ನು ತಮ್ಮ ದೇಹದ ಮೇಲೆ ಉಜ್ಜಿಕೊಳ್ಳುತ್ತಾರೆ. ಈ ಬೂದಿ ಸನ್‌ಸ್ಕ್ರೀನ್‌ ಮತ್ತು ಸೊಳ್ಳೆ ನಿವಾರಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ನಂಬುತ್ತಾರೆ. ಮುಂಡಾರಿ ಜನಾಂಗದವರ ಈ ವಿಶಿಷ್ಟ ಸಂಪ್ರದಾಯದ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಹರಿದಾಡುತ್ತಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ: ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ – Kannada News | Bengaluru Parking Policy 2026: GBA Proposes Smart Parking on Private Lands

ಬೆಂಗಳೂರು, ಜುಲೈ 11: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ (bangaluru) ಪಾರ್ಕಿಂಗ್ ಜಾಗ ಹುಡುಕುವುದು ವಾಹನ ಸವಾರರಿಗೆ ಮಾತ್ರವಲ್ಲ, ಸರ್ಕಾರಕ್ಕೂ ದೊಡ್ಡ ತಲೆನೋವಾಗಿದೆ. ಹೀಗಾಗಿಯೇ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾರ್ಕಿಂಗ್ ನೀತಿ -2026ರ (Parking Policy 2026) ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಆ ಮೂಲಕ ಖಾಸಗಿ ಪ್ರದೇಶಗಳನ್ನ ಪಾರ್ಕಿಂಗ್ ತಾಣವಾಗಿಸುವ ಹೊಸ ಯೋಜನೆಗೆ ಕೈಹಾಕಿದೆ.

ಪಾರ್ಕಿಂಗ್ ನೀತಿ-2026 ಜಾರಿಗೆ ಮುಂದಾದ ಜಿಬಿಎ

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಎಷ್ಟಿದಿಯೋ, ಪಾರ್ಕಿಂಗ್ ಸಮಸ್ಯೆ ಕೂಡ ಅಷ್ಟೇ ಇದೆ. ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕೊಡುವುದು ಅಸಾಧ್ಯವಾಗುತ್ತಿದೆ. ಹೀಗಾಗಿ ಪಾರ್ಕಿಂಗ್ ನೀತಿ-2026 ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದು, ಕರಡು ಅಧಿಸೂಚನೆ ಪ್ರಕಟಿಸಿದೆ. ಪ್ರಮುಖವಾಗಿ ವಾಣಿಜ್ಯ ವಲಯಗಳಲ್ಲಿರುವ ಖಾಸಗಿ ಖಾಲಿ ನಿವೇಶನಗಳನ್ನ ಮಾಲೀಕರ ಒಪ್ಪಿಗೆ ಅನ್ವಯ ಪಾರ್ಕಿಂಗ್ ತಾಣವಾಗಿಸುವ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಿದೆ.

ಈ ಪಾರ್ಕಿಂಗ್ ನೀತಿಗೆ ಮಿಶ್ರ ಪ್ರತಿಕ್ರಿಯೆ

ಸರ್ಕಾರಿ ಜಾಗಗಳ ಕೊರತೆಯಿಂದಾಗಿ ಖಾಸಗಿ ನಿವೇಶನಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಜಿಬಿಎ ಮುಖ್ಯ ಉದ್ದೇಶವಾಗಿದೆ. ಇನ್ನು ಖಾಲಿ ನಿವೇಶನ ನೀಡುವ ಮಾಲೀಕರಿಗೆ 15 ರಿಂದ 35 ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡಲು ಜಿಬಿಎ ಚಿಂತಿಸಿದೆ. ಆದರೆ ಈ ನೀತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾರ್ಕಿಂಗ್ ನೀತಿ-2026ರಲ್ಲಿ ಏನಿದೆ?

  • ಖಾಸಗಿ ಖಾಲಿ ನಿವೇಶನಗಳಲ್ಲಿ ಬಹುಮಹಡಿ ಪಾರ್ಕಿಂಗ್ ಸೌಲಭ್ಯಕ್ಕೆ ಆದ್ಯತೆ
  • ನಿವೇಶನ ನೀಡುವ ಮಾಲೀಕರಿಗೆ 15 ರಿಂದ 35 ವರ್ಷಗಳ ತೆರಿಗೆ ವಿನಾಯಿತಿ
  • ನಿವೇಶನ ಅಳತೆಗನುಸಾರವಾಗಿ ತೆರಿಗೆ ವಿನಾಯಿತಿ ನೀಡಲು ನಿರ್ಧಾರ
  • ನಿವೇಶನದ ಮಾಲೀಕರಿಗೆ ಪೇ ಆ್ಯಂಡ್ ಪಾರ್ಕಿಂಗ್​ನ ಆದಾಯ ಹಂಚಿಕೆ
  • ಪ್ರಮುಖ ರಸ್ತೆಗಳಲ್ಲಿ ಮತ್ತು ಸಿಗ್ನಲ್ ಸಮೀಪ ಪಾರ್ಕಿಂಗ್ ನಿಷೇಧ

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ

ಇನ್ನು ಖಾಸಗಿ ವಾಣಿಜ್ಯ ನಿವೇಶನಗಳನ್ನ ಪಾರ್ಕಿಂಗ್ ತಾಣವಾಗಿಸಲು ಆಸಕ್ತಿ ತೋರಿರುವ ಜಿಬಿಎ ಚಿಂತನೆಗೆ ಪರ, ವಿರೋಧ ವ್ಯಕ್ತವಾಗಿದೆ. ಮಾಲೀಕರು ಮುಂದಿನ ದಿನಗಳಲ್ಲಿ ತಮ್ಮ ಆಸ್ತಿಯ ಹಕ್ಕನ್ನು ಕಳೆದುಕೊಳ್ಳಬಹುದು ಎಂಬ ಗುಸುಗುಸು ಶುರುವಾಗಿದೆ. ವಾಣಿಜ್ಯ ನಿವೇಶನಗಳನ್ನ ಜಿಬಿಎ ಪಾರ್ಕಿಂಗ್ ಉದ್ದೇಶಕ್ಕೆ ಬಿಟ್ಟುಕೊಡಲು ಆಸಕ್ತಿ ತೋರುವುದು ಕಷ್ಟ. ಆದರೆ ತೆರಿಗೆ ವಿನಾಯಿತಿ ಹಾಗೂ ಆದಾಯ ಹಂಚಿಕೆ ಗಮನಿಸಿ ಯೋಜನೆಗೆ ಯಾರು ಮನಸ್ಸು ಮಾಡುತ್ತಾರೆ ಅಂತಾ ಅಂತಿಮ ಅಧಿಸೂಚನೆ ಹೊರಬಿದ್ದ ಬಳಿಕ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ನಂತರವೇ ರಾಷ್ಟ್ರಗೀತೆ ಹಾಡಬೇಕು; ಸರ್ಕಾರದ ಮಹತ್ವದ ಆದೇಶ – Kannada News | Should Use Correct Text and Pronunciation While Singing National Anthem and National Song Centre Orders

ನವದೆಹಲಿ, ಜುಲೈ 11: ರಾಷ್ಟ್ರಗೀತೆಯಾದ ಜನಗಣಮನ ಮತ್ತು ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಕುರಿತಾಗಿ ಕೆಲವು ಮಹತ್ವದ ಆದೇಶಗಳನ್ನು ಹೊರಡಿಸಿದೆ. ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ವಿವಿಧ ಗೀತೆಗಳನ್ನು ಹಾಡುವ ಅಥವಾ ನುಡಿಸುವ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಈ ಸ್ಪಷ್ಟನೆಯನ್ನು ನೀಡಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ಹಾಡಬೇಕು ಅಥವಾ ಪ್ಲೇ ಮಾಡಬೇಕು. ಅದರ ನಂತರ ರಾಷ್ಟ್ರಗೀತೆಯಾದ (National Anthem) ಜನಗಣಮನ ಗೀತೆಯನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಆದೇಶಿಸಲಾಗಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಿ, ನಂತರ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಬೇಕು. ಕರ್ನಾಟಕದಲ್ಲಾದರೆ ಜೈ ಭಾರತ ಜನನಿಯ ತನುಜಾತೆ ಹಾಡಿದ ಬಳಿಕವೇ ವಂದೇ ಮಾತರಂ ಮತ್ತು ಜನಗಣಮನ ಗೀತೆಯನ್ನು ಹಾಡಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಈ ನೂತನ ಆದೇಶವನ್ನು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು (UT) ಮತ್ತು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಲಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ರಾಷ್ಟ್ರಗೀತೆಯನ್ನು ಹಾಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೂಡ ಸೂಚಿಸಲಾಗಿದೆ.

ಇದನ್ನೂ ಓದಿ:  ಜನಗಣಮನವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?

ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಬಳಿಕವೇ ರಾಷ್ಟ್ರಗೀತೆಯನ್ನು ಹಾಕಬೇಕು. ಯಾವಾಗಲೆಲ್ಲಾ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಬಳಸಲಾಗುತ್ತದೆಯೋ, ಆಗ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಜೊತೆಯಾಗಿಯೇ ಪ್ಲೇ ಮಾಡಬೇಕು. ಆದರೆ ಮೊದಲು ರಾಷ್ಟ್ರೀಯ ಗೀತೆ ಬರಬೇಕು, ನಂತರವೇ ರಾಷ್ಟ್ರಗೀತೆ ಬರಬೇಕು” ಎಂದು ಗೃಹ ಸಚಿವಾಲಯ (MHA) ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸರಿಯಾದ ಸಾಹಿತ್ಯ ಮತ್ತು ಉಚ್ಚಾರಣೆ:

ಕೇಂದ್ರ ಸರ್ಕಾರವು ಈ ಆದೇಶದಲ್ಲಿ ಕೇವಲ ಕ್ರಮವನ್ನು ಮಾತ್ರವಲ್ಲದೆ, ಗೀತೆಗಳನ್ನು ಹಾಡುವ ಗುಣಮಟ್ಟದ ಕಡೆಗೂ ಗಮನ ಹರಿಸಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಅದರ ಮೂಲ ಸಾಹಿತ್ಯ ಹಾಗೂ ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ತಪ್ಪುಗಳಾಗಬಾರದು ಎಂದು ಸರ್ಕಾರ ಹೇಳಿದೆ.

ಅಧಿಕಾರಿಗಳು ಮತ್ತು ಸಂಸ್ಥೆಗಳ ನೆರವಿಗಾಗಿ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಅಧಿಕೃತ ಸಾಹಿತ್ಯ ಹಾಗೂ ಅದರ ಸರಿಯಾದ ಉಚ್ಚಾರಣೆಯ ಮಾರ್ಗದರ್ಶನವನ್ನು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಸಂದರ್ಭಗಳ ಸಮಗ್ರ ಪಟ್ಟಿ ಬಿಡುಗಡೆ:

ಹಾಗೆಯೇ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಯಾವೆಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು, ಯಾವ ಸಂದರ್ಭಗಳಲ್ಲಿ ಹಾಡಲೇಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂಬುದರ ಸಂಪೂರ್ಣ ಮತ್ತು ಸಮಗ್ರ ಪಟ್ಟಿಯನ್ನು ಗೃಹ ಸಚಿವಾಲಯದ ನಿಯಮಾವಳಿಗಳು ಒಳಗೊಂಡಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಎಲ್ಲಾ ಮದರಸಾಗಳಲ್ಲಿ ಇನ್ನುಮುಂದೆ ವಂದೇ ಮಾತರಂ ಹಾಡುವುದು ಕಡ್ಡಾಯ

ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ಸರ್ಕಾರಿ ಅಧಿಕೃತ ಸಮಾರಂಭಗಳಿಗೆ ರಾಷ್ಟ್ರಪತಿಗಳ ಆಗಮನ ಮತ್ತು ಅವರ ನಿರ್ಗಮನದ ಸಮಯದಲ್ಲಿ, ದೂರದರ್ಶನ ಮತ್ತು ಆಕಾಶವಾಣಿ ಮೂಲಕ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಮಾತನಾಡುವ ಮುನ್ನ ಮತ್ತು ಮಾತನಾಡಿದ ನಂತರ ರಾಷ್ಟ್ರಗೀತೆಯನ್ನು ಹಾಕುವುದು ಕಡ್ಡಾಯ. ಹಾಗೇ, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ಸಮಾರಂಭಗಳಿಗೆ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಮಿಸುವಾಗ ಹಾಗೂ ನಿರ್ಗಮಿಸುವಾಗಲೂ ಕಡ್ಡಾಯ. ಪರೇಡ್ ಸಮಯದಲ್ಲಿ ರಾಷ್ಟ್ರಧ್ವಜವನ್ನು ತರುವಾಗ, ಭಾರತ ಸರ್ಕಾರವು ವಿಶೇಷ ಆದೇಶ ಹೊರಡಿಸುವ ಇತರೆ ಯಾವುದೇ ಸಂದರ್ಭಗಳಲ್ಲಿ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಕಡ್ಡಾಯವಾಗಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಇಡೀ ಸಭೆಯು ಸಾವಧಾನ (ಅಟೆನ್ಷನ್) ಸ್ಥಿತಿಯಲ್ಲಿ ನಿಲ್ಲಬೇಕು.

ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳಿಗೆ ಈ ನೂತನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Sat, 11 July 26

Source link

ಪಿಆರ್​ಸಿ ಜಟಾಪಟಿ: ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ – Kannada News | R. Ashoka Demands Withdrawal of Karnataka Permanent Resident Certificate Order

ಮೈಸೂರು, ಜುಲೈ 11: ರಾಜ್ಯದಲ್ಲಿ ಸರ್ಕಾರದಿಂದ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘‘ಈ ಆದೇಶವು ಸಂವಿಧಾನದ ಉಲ್ಲಂಘನೆಯಾಗಿದ್ದು, ಕೂಡಲೇ ಅದನ್ನು ವಾಪಸ್ ಪಡೆಯುವಂತೆ’’ ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ಕಾಯಕ ಸಮುದಾಯಗಳ ಸಭೆಯಲ್ಲಿ ಮಾತನಾಡಿದ ಅವರು, ‘‘ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಪೌರತ್ವವನ್ನು ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಸೇರಿದ್ದು. ಪ್ರಸ್ತುತ ಆದೇಶವು 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸಿಸಿದವರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಿದ್ದು, ಇದು ವಿದೇಶಿಯರಿಗೆ, ವಿಶೇಷವಾಗಿ ಬಾಂಗ್ಲಾದೇಶದವರಿಗೆ ನೆರವಾಗುವ ಹುನ್ನಾರ’’ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version