ನಟಿ ಸಮಂತಾ ರುತ್ ಪ್ರಭು ಸರಳ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ – Kannada News | Samantha Ruth Prabhu intimate Baby Shower Photos with Husband Raj Nidimoru goes Viral

ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ಜೀವನದ ಅತ್ಯಂತ ಸುಂದರ ಹಾಗೂ ಸಂತಸದ ದಿನಗಳನ್ನು ಆನಂದಿಸುತ್ತಿದ್ದಾರೆ. ಶೀಘ್ರದಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು, ಇತ್ತೀಚೆಗೆ ತಮ್ಮ ಪತಿ, ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಅವರೊಂದಿಗೆ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಸೀಮಂತ ಶಾಸ್ತ್ರವನ್ನು (Baby Shower) ಆಚರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಖಾಸಗಿ ಸಮಾರಂಭದ ಸುಂದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಕಳೆದ ಡಿಸೆಂಬರ್‌ನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಅತ್ಯಂತ ಖಾಸಗಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಈಗ ತಮ್ಮ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದೆ. ಇತ್ತೀಚೆಗೆ ಸೂಪರ್ ಹಿಟ್ ಆದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ಅವರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು.

ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಜೋಡಿ

ವೈರಲ್ ಆಗಿರುವ ಸೀಮಂತದ ಫೋಟೋಗಳಲ್ಲಿ ಸಮಂತಾ ಗೋಲ್ಡ್ ಡೀಟೇಲಿಂಗ್ ಇರುವ ಮರೂನ್ ಬಣ್ಣದ ಕಸೂತಿ ಕಲೆಯ ಸಾಂಪ್ರದಾಯಿಕ ಉಡುಪಿನಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪತ್ನಿಯ ಉಡುಪಿಗೆ ಮ್ಯಾಚ್ ಆಗುವಂತೆ ರಾಜ್ ನಿಡಿಮೋರು ಕೂಡ ಮರೂನ್ ಸಿಲ್ಕ್ ಕುರ್ತಾ ಧರಿಸಿದ್ದಾರೆ. ಕೇವಲ ಕುಟುಂಬದ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ನೆಚ್ಚಿನ ನಟಿಯ ಮುಖದಲ್ಲಿನ ನಗು ಕಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.

100 ಕೋಟಿ ಕ್ಲಬ್ ಸೇರಿದ ‘ಮಾ ಇಂಟಿ ಬಂಗಾರಂ’

ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿ, ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡು 100 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ತೆಲುಗು ಚಿತ್ರರಂಗದ ಇತಿಹಾಸದಲ್ಲೇ 100 ಕೋಟಿ ಕ್ಲಬ್ ಸೇರಿದ ಮೊದಲ ನಾಯಕಿ ಪ್ರಧಾನ ಸಿನಿಮಾ ಎಂಬ ದಾಖಲೆಯನ್ನು ಬರೆದಿದೆ. ವಿಶೇಷವೆಂದರೆ ಈ ಚಿತ್ರವನ್ನು ಸಮಂತಾ ಮತ್ತು ರಾಜ್ ನಿಡಿಮೋರು ಜಂಟಿಯಾಗಿ ನಿರ್ಮಿಸಿದ್ದರು. ಗುಲ್ಶನ್ ದೇವಯ್ಯ ಮತ್ತು ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿದ್ದ ಈ ಚಿತ್ರ ಜುಲೈ 17ರಿಂದ ‘ಜಿಯೋ ಹಾಟ್‌ಸ್ಟಾರ್’ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಇದನ್ನೂ ಓದಿ: ಅಡೆತಡೆ ಮೀರಿ 100 ಕೋಟಿ ಕ್ಲಬ್ ಸೇರಿದ ಸಮಂತಾ ನಟನೆಯ ಮಾ ಇಂಟಿ ಬಂಗಾರಂ

ಹೆರಿಗೆಯ ನಂತರ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್:

ಸದ್ಯ ಗರ್ಭಧಾರಣೆಯ ಕಾರಣದಿಂದಾಗಿ ನಟನೆಯಿಂದ ತಾತ್ಕಾಲಿಕ ಬ್ರೇಕ್ ಪಡೆದಿರುವ ಸಮಂತಾ, ಹೆರಿಗೆಯ ನಂತರ ಭರ್ಜರಿಯಾಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಚಿತ್ರದ ಸೀಕ್ವೆಲ್ (ಭಾಗ 2) ಮೂಲಕ ಅವರು ಮತ್ತೆ ಬಣ್ಣ ಹಚ್ಚಲಿದ್ದಾರೆ. ಇದರ ಜೊತೆಗೆ ಆದಿತ್ಯ ರಾಯ್ ಕಪೂರ್, ವಾಮಿಕಾ ಗಬ್ಬಿ ಮತ್ತು ಅಲಿ ಫಜಲ್ ನಟನೆಯ ಬಹುನಿರೀಕ್ಷಿತ ವೆಬ್ ಸೀರೀಸ್ ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್ಡಮ್’ನಲ್ಲೂ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾರ ಭವಿಷ್ಯ: ಜುಲೈ 19 ರಿಂದ ಈ ರಾಶಿಯವರಿಗೆ ಅದೃಷ್ಟ: ಆದರೆ ಅಂದುಕೊಂಡ ಕಾರ್ಯಕ್ಕೆ ತೊಂದರೆಯಾಗುವ ಸಾಧ್ಯತೆ – Kannada News | Rashi Bhavishya: July 19 28, 2026 Weekly Predictions for All Zodiac Signs

ಜುಲೈ 19ರಿಂದ 28, 2026ರ ವರೆಗೆ ​ಗ್ರಹಗತಿಗಳ ಸಂಚಾರ ಮತ್ತು ಸಂಯೋಗದ ಆಧಾರ ಮೇಲೆ ಅಂದುಕೊಂಡ ಕಾರ್ಯಕ್ಕೆ ಸಣ್ಣ ತೊಂದರೆ, ಬೇಸರಿಸದೇ ಮುಂದೆ ಸಾಗುವುದು, ಬೆನ್ನ ಹಿಂದೆ ಕುಚೋದ್ಯ, ಪ್ರಾಮಾಣಿಕತೆ ಪ್ರಶ್ನೆ, ಲಾಭ ನಷ್ಟದ ಲೆಕ್ಕಾಚಾರ ಮುಂತಾದವು ಇವೆಲ್ಲ ಈ ವಾರದಲ್ಲಿ ಕಾಣಿಸಿಕೊಳ್ಳಲಿದೆ

ಮೇಷ ರಾಶಿ :

​ದ್ವಿತೀಯದಲ್ಲಿ ಮಂಗಳ ಹಾಗೂ ಅಷ್ಟಮದಲ್ಲಿ ಚಂದ್ರನ ಸಂಚಾರವಿರುವುದರಿಂದ ಈ ವಾರ ಮಾತಿನ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಚೆನ್ನಾಗಿದ್ದರೂ ಆಕಸ್ಮಿಕ ಖರ್ಚುಗಳು ಎದುರಾಗಬಹುದು. ಹಳೆಯ ಹೂಡಿಕೆಗಳು ಕೈ ಹಿಡಿಯಲಿವೆ. ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸುವಿರಿ.

ವೃಷಭ ರಾಶಿ :

​ನಿಮ್ಮದೇ ರಾಶಿಯಲ್ಲಿ ಮಂಗಳನಿದ್ದು, ಸಪ್ತಮದಲ್ಲಿ ಚಂದ್ರನಿದ್ದಾನೆ. ನಿಮ್ಮ ಆಲೋಚನೆಗಳಲ್ಲಿ ಸ್ಪಷ್ಟತೆ ಇರಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವಕ್ಕೆ ಮನ್ನಣೆ ಸಿಗಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ತಾಳ್ಮೆ ಅಗತ್ಯ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ.

ಮಿಥುನ ರಾಶಿ :

​ನಿಮ್ಮ ರಾಶ್ಯಾಧಿಪತಿ ಬುಧ ಸ್ವಕ್ಷೇತ್ರದಲ್ಲಿದ್ದಾನೆ. ನಿಮ್ಮ ಬುದ್ಧಿವಂತಿಕೆ ಹಾಗೂ ಸಂವಹನ ಕಲೆ ಈ ವಾರ ಅದ್ಭುತವಾಗಿ ಕೆಲಸ ಮಾಡಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸಿ.

ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಸೂರ್ಯ ಮತ್ತು ಗುರುಗಳ ಯುತಿ ಇದೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆದರೆ ಗುರು ಅಸ್ತನಾಗಿರುವುದರಿಂದ ಅತಿಯಾದ ಆತ್ಮವಿಶ್ವಾಸ ಬೇಡ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಸಿಂಹ ರಾಶಿ :

​ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಕೇತುಗಳಿರುವುದರಿಂದ ಸೃಜನಶೀಲ ಕೆಲಸಗಳಿಗೆ ಉತ್ತಮ ವೇದಿಕೆ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಯೋಚಿಸಿ. ವಿದೇಶಿ ಮೂಲಗಳಿಂದ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ :

​ದಶಮದಲ್ಲಿ ಬುಧನ ಸ್ಥಾನ ಇರುವುದರಿಂದ ಉದ್ಯೋಗ ರಂಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಕಾರ್ಯಕ್ಷಮತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ವಾರವಿದು. ಸ್ನೇಹಿತರಿಂದ ನಿರೀಕ್ಷಿತ ಸಹಾಯ ದೊರೆಯಲಿದೆ.

ತುಲಾ ರಾಶಿ :

​ಲಾಭ ಸ್ಥಾನದಲ್ಲಿ ಶುಕ್ರನ ಇಡುವಿಕೆಯಿಂದಾಗಿ ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರುವ ಸಮಯ ಹತ್ತಿರ ಬಂದಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗದಲ್ಲಿ ವರ್ಗಾವಣೆ ಬಯಸುವವರಿಗೆ ಶುಭ ವಾರ್ತೆ ಸಿಗಲಿದೆ.

ವೃಶ್ಚಿಕ ರಾಶಿ :

​ಚಂದ್ರನ ಸಂಚಾರ ನಿಮ್ಮ ರಾಶಿಯಲ್ಲೇ ಇರುವುದರಿಂದ ವಾರದ ಆರಂಭದಲ್ಲಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ಆದರೆ ದಶಮದ ಶುಕ್ರ ನಿಮ್ಮ ಕೈ ಹಿಡಿಯಲಿದ್ದಾನೆ. ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಸಂಗಾತಿಯ ಬೆಂಬಲ ಮಾನಸಿಕ ಸ್ಥಿರತೆ ನೀಡಲಿದೆ.

ಧನು ರಾಶಿ :

​ಭಾಗ್ಯ ಸ್ಥಾನದ ಗ್ರಹಬಲ ಚೆನ್ನಾಗಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ತಂದೆಯವರ ಕಡೆಯಿಂದ ಆಸ್ತಿ ಅಥವಾ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ. ಹಠಾತ್ ಅದೃಷ್ಟ ನಿಮ್ಮದಾಗಬಹುದು.

ಮಕರ ರಾಶಿ :

​ಪಂಚಮದಲ್ಲಿ ಮಂಗಳ ಹಾಗೂ ಅಷ್ಟಮದಲ್ಲಿ ಶುಕ್ರನ ಸ್ಥಾನ ಇರುವುದರಿಂದ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಿ. ಶತ್ರುಗಳ ತಂತ್ರಗಳು ಧೂಳೀಪಟವಾಗಲಿವೆ. ರಹಸ್ಯ ಮೂಲಗಳಿಂದ ಧನಲಾಭವಾಗುವ ಯೋಗವಿದೆ. ಆತುರದ ಹೂಡಿಕೆಗಳನ್ನು ತಡೆಯಿರಿ.

ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಮತ್ತು ಲಗ್ನ ಇರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಮೂಡಲಿದೆ. ಸಪ್ತಮದ ಶುಕ್ರ ವೈವಾಹಿಕ ಜೀವನದಲ್ಲಿ ಮಧುರತೆಯನ್ನು ತರಲಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ಸಾರ್ವಜನಿಕ ರಂಗದಲ್ಲಿ ಮನ್ನಣೆ ಸಿಗಲಿದೆ.

ಇದನ್ನೂ ಓದಿ: ಜಗನ್ನಾಥ ರಥಯಾತ್ರೆ ಆರಂಭ; ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸುವ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ?

ಮೀನ ರಾಶಿ :

​ನಿಮ್ಮ ರಾಶಿಯಲ್ಲಿ ಶನಿಯ ಸಂಚಾರವಿದ್ದು, ಆರನೇ ಮನೆಯಲ್ಲಿ ಗ್ರಹಬಲವಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಕ್ಕರೂ ಖಂಡಿತ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆಯುವ ಹಾದಿ ಸುಲಭವಾಗಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – Kannada News | Punjab needs BJP double engine government for rapid growth PM Modi says in Jalandhar Rally

ಜಲಂಧರ್, ಜುಲೈ 17: ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ (AAP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಪಂಜಾಬ್ ರಾಜ್ಯದ ಯುವಕರ ಭವಿಷ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಜಲಂಧರ್‌ನಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (PM Modi), ಪಂಜಾಬ್‌ನಲ್ಲಿ ಪೊಲೀಸ್ ಠಾಣೆಗಳಿಗೂ ಸುರಕ್ಷತೆಯಿಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮೋದಿ ಭರವಸೆ ನೀಡಿದ್ದಾರೆ.

ಪಂಜಾಬ್ ರಾಜ್ಯದ ಭದ್ರತಾ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ಇಲ್ಲಿ ಪೊಲೀಸ್ ಠಾಣೆಗಳೂ ಸುರಕ್ಷಿತವಾಗಿಲ್ಲ. ಪದೇಪದೆ ಪೊಲೀಸ್ ಠಾಣೆಗಳ ಮೇಲೆಯೇ ದಾಳಿಗಳು ನಡೆಯುತ್ತಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪಂಜಾಬ್‌ನ ಭವಿಷ್ಯವೇ ಹಾಳಾಗುತ್ತಿದೆ. ಡ್ರಗ್ಸ್ ದಂಧೆಕೋರರು ಯಾವುದೇ ಭಯವಿಲ್ಲದೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಪಂಜಾಬ್‌ನ ಯುವ ಪೀಳಿಗೆಯನ್ನು ಮಾದಕ ವ್ಯಸನದ ಕೂಪಕ್ಕೆ ತಳ್ಳಲಾಗುತ್ತಿದೆ” ಎಂದು ಮೋದಿ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?

ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾವಾಗ, ಎಲ್ಲಿ ಗ್ಯಾಂಗ್ ವಾರ್ ಆರಂಭವಾಗುತ್ತದೆ ಅಥವಾ ಯಾವ ಕಡೆಯಿಂದ ಗುಂಡುಗಳು ಹಾರಿಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇಲ್ಲಿ ವ್ಯಾಪಾರ-ವ್ಯವಹಾರ ಮಾಡುವುದು ಕಷ್ಟಕರವಾಗಿದೆ. ಸಾರ್ವಜನಿಕರಿಂದ ಬಹಿರಂಗವಾಗಿ ಹಫ್ತಾ ವಸೂಲಿ ಮಾಡಲಾಗುತ್ತಿದೆ” ಎಂದು ಮೋದಿ ಆರೋಪಿಸಿದರು.

ಬಿಜೆಪಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದ ಮೋದಿ:

“ಪಂಜಾಬ್‌ನಲ್ಲಿ ನಿಜವಾದ ಬದಲಾವಣೆಯನ್ನು ತರಲು ಬಿಜೆಪಿಯಿಂದ ಮಾತ್ರ ಸಾಧ್ಯ. ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯಕ್ಕೆ ಹೊಸ ಹೂಡಿಕೆಗಳು ಹರಿದುಬರಬೇಕು, ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಮತ್ತು ಪಂಜಾಬ್‌ನಲ್ಲಿ ತಯಾರಾಗುವ ಉತ್ಪನ್ನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆಂದರೆ ಈ ಎಲ್ಲಾ ಕಾರ್ಯಗಳನ್ನು ಬಿಜೆಪಿ ಮಾತ್ರವೇ ಸಾಧಿಸಬಲ್ಲದು” ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಇದನ್ನೂ ಓದಿ: ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ

ರಾಜ್ಯದ ಪ್ರಸ್ತುತ ಆಡಳಿತ ವ್ಯವಸ್ಥೆಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಕೇಂದ್ರದ ಯೋಜನೆಗಳು ಜನರಿಗೆ ತಲುಪದಂತೆ ತಡೆಯುತ್ತಿವೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್‌ನಂತಹ ಆರೋಗ್ಯ ಯೋಜನೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ಪಂಜಾಬ್‌ನ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದರೆ ರಾಜಕೀಯ ಅಡೆತಡೆಗಳು ನಿವಾರಣೆಯಾಗಬೇಕು ಎಂದು ಮೋದಿ ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾಲೊರಿ ಬರ್ನ್‌ ಮಾಡಲು ರನ್ನಿಂಗ್ vs ಸೈಕ್ಲಿಂಗ್ ಯಾವುದು ಬೆಸ್ಟ್‌ ತಿಳಿದುಕೊಳ್ಳಿ – Kannada News | Running or Cycling: The Ultimate Cardio Workout Comparison

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಕೇವಲ ಸೌಂದರ್ಯದ ಸಮಸ್ಯೆಯಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರುವ ಪ್ರಮುಖ ಕಾರಣವಾಗಿದೆ. ಹೆಚ್ಚಿದ ತೂಕದಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕೊಬ್ಬಿನ ಯಕೃತ್ (Fatty Liver) ಸೇರಿದಂತೆ ಅನೇಕ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಅನೇಕರು ಜಿಮ್‌, ವಾಕಿಂಗ್‌, ರನ್ನಿಂಗ್‌ ಮತ್ತು ಸೈಕ್ಲಿಂಗ್‌ಗೆ ಮೊರೆ ಹೋಗುತ್ತಾರೆ. ಆದರೆ ಈ ಎರಡರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರನ್ನಿಂಗ್ ಮತ್ತು ಸೈಕ್ಲಿಂಗ್ ಎರಡೂ ಉತ್ತಮ ಕಾರ್ಡಿಯೊ ವ್ಯಾಯಾಮಗಳಾಗಿವೆ. ಆದರೆ ಯಾವುದು ಉತ್ತಮ ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿ, ವಯಸ್ಸು, ದೇಹದ ತೂಕ ಹಾಗೂ ಫಿಟ್ನೆಸ್ ಗುರಿಯನ್ನು ಅವಲಂಬಿಸಿರುತ್ತದೆ.

ಯಾವುದು ಹೆಚ್ಚು ಕ್ಯಾಲೊರಿ ಕರಗಿಸುತ್ತದೆ?

ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಹೋಲಿಕೆ ಮಾಡಿದರೆ ರನ್ನಿಂಗ್ ಮಾಡುವಾಗ ಸೈಕ್ಲಿಂಗ್‌ಗಿಂತ ಹೆಚ್ಚು ಕ್ಯಾಲೊರಿ ಕರಗುತ್ತದೆ. ಓಡುವಾಗ ದೇಹದ ಬಹುತೇಕ ಎಲ್ಲಾ ಪ್ರಮುಖ ಸ್ನಾಯುಗಳು ಸಕ್ರಿಯವಾಗುತ್ತವೆ. ದೇಹವನ್ನು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮುಂದಕ್ಕೆ ತಳ್ಳಲು ಹೆಚ್ಚು ಶಕ್ತಿ ಬೇಕಾಗುವುದರಿಂದ ಕ್ಯಾಲೊರಿ ಬಳಕೆ ಹೆಚ್ಚಾಗುತ್ತದೆ. ಉದಾಹರಣೆಗೆ, ಸುಮಾರು 70 ಕೆ.ಜಿ. ತೂಕವಿರುವ ವ್ಯಕ್ತಿಯು 30 ನಿಮಿಷಗಳ ಕಾಲ ಮಧ್ಯಮ ವೇಗದಲ್ಲಿ ಓಡಿದರೆ ಸುಮಾರು 300–400 ಕ್ಯಾಲೊರಿ ಕರಗಬಹುದು. ಇದೇ ಸಮಯದಲ್ಲಿ ಮಧ್ಯಮ ವೇಗದಲ್ಲಿ ಸೈಕ್ಲಿಂಗ್ ಮಾಡಿದರೆ ಸುಮಾರು 220–350 ಕ್ಯಾಲೊರಿ ಕರಗಬಹುದು. ಆದರೆ ವೇಗ ಮತ್ತು ತೀವ್ರತೆ ಹೆಚ್ಚಾದಂತೆ ಈ ಪ್ರಮಾಣ ಬದಲಾಗುತ್ತದೆ.

ಮೊಣಕಾಲು ನೋವಿದ್ದರೆ ಸೈಕ್ಲಿಂಗ್ ಉತ್ತಮ ಆಯ್ಕೆ

ರನ್ನಿಂಗ್ ವೇಳೆ ಮೊಣಕಾಲು ಹಾಗೂ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದ್ದರಿಂದ ಅಧಿಕ ತೂಕ ಇರುವವರು, ಮೊಣಕಾಲು ನೋವಿರುವವರು, ಸಂಧಿವಾತ (Arthritis) ಸಮಸ್ಯೆಯಿರುವವರು, ಹಿರಿಯರು ಇವರಿಗೆ ಸೈಕ್ಲಿಂಗ್ ಹೆಚ್ಚು ಸುರಕ್ಷಿತ ಆಯ್ಕೆಯಾಗಿದೆ. ಇದು ಕೀಲುಗಳಿಗೆ ಕಡಿಮೆ ಒತ್ತಡ ನೀಡುತ್ತಾ ಹೃದಯದ ಆರೋಗ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.

ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ?

ತ್ವರಿತವಾಗಿ ಕೊಬ್ಬು ಕರಗಿಸಲು ಬಯಸುವ ಮತ್ತು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರು ರನ್ನಿಂಗ್ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ ದೇಹಕ್ಕೆ ಕಡಿಮೆ ಒತ್ತಡದೊಂದಿಗೆ ವ್ಯಾಯಾಮ ಮಾಡಲು ಬಯಸುವವರಿಗೆ ಸೈಕ್ಲಿಂಗ್ ಸಹ ಉತ್ತಮ ಫಲಿತಾಂಶ ನೀಡುತ್ತದೆ.

ಇದನ್ನೂ ಓದಿ: ದೃಷ್ಟಿ ಮಸಕಾಗುವುದನ್ನು ತಡೆಯಲು ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ

ವ್ಯಾಯಾಮದ ಜೊತೆಗೆ ಆಹಾರವೂ ಮುಖ್ಯ

ತೂಕ ಇಳಿಸಿಕೊಳ್ಳುವುದು ಕೇವಲ ವ್ಯಾಯಾಮದಿಂದ ಮಾತ್ರ ಸಾಧ್ಯವಲ್ಲ. ಆಹಾರ ಪದ್ಧತಿಯೂ ಪ್ರಮುಖ ಪಾತ್ರ ವಹಿಸುತ್ತದೆ.

  • ಪ್ರತಿದಿನ ಸಾಕಷ್ಟು ಪ್ರೋಟೀನ್ ಸೇವಿಸಿ.
  • ಹೆಚ್ಚು ಸಕ್ಕರೆ ಮತ್ತು ಜಂಕ್ ಫುಡ್ ಕಡಿಮೆ ಮಾಡಿ.
  • ತರಕಾರಿ, ಹಣ್ಣು, ಸಂಪೂರ್ಣ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ.
  • ದಿನಕ್ಕೆ 2–3 ಲೀಟರ್ ನೀರು ಕುಡಿಯಿರಿ.
  • 7–8 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯಿರಿ.

ಇತ್ತೀಚಿನ ಕೆಲವು ಫಿಟ್ನೆಸ್ ಅಧ್ಯಯನಗಳ ಪ್ರಕಾರ, High Intensity Interval Training (HIIT) ಮಾದರಿಯ ರನ್ನಿಂಗ್ ಅಥವಾ Interval Cycling ಮಾಡಿದರೆ ವ್ಯಾಯಾಮ ಮುಗಿದ ನಂತರವೂ ದೇಹದಲ್ಲಿ ಕ್ಯಾಲೊರಿ ಕರಗುವಿಕೆ (Afterburn Effect ಅಥವಾ EPOC) ಕೆಲ ಗಂಟೆಗಳವರೆಗೆ ಮುಂದುವರಿಯಬಹುದು. ಇದರಿಂದ ತೂಕ ಇಳಿಕೆಗೆ ಹೆಚ್ಚುವರಿ ನೆರವು ದೊರೆಯುತ್ತದೆ.

ಯಾರಿಗೆ ಯಾವ ವ್ಯಾಯಾಮ ಸೂಕ್ತ?

ತ್ವರಿತ ಕ್ಯಾಲೊರಿ ಕರಗಿಸಲು: ರನ್ನಿಂಗ್
ಮೊಣಕಾಲು ಅಥವಾ ಕೀಲು ಸಮಸ್ಯೆ ಇದ್ದರೆ: ಸೈಕ್ಲಿಂಗ್
ಹೃದಯ ಆರೋಗ್ಯ ಸುಧಾರಿಸಲು: ಎರಡೂ ಉತ್ತಮ
ಹೊಸಬರಿಗೆ: ನಿಧಾನಗತಿಯ ಸೈಕ್ಲಿಂಗ್ ಅಥವಾ ವೇಗದ ನಡಿಗೆ ಆರಂಭಿಸಿ
ಸಾರಾಂಶ

ರನ್ನಿಂಗ್ ಮತ್ತು ಸೈಕ್ಲಿಂಗ್ ಎರಡೂ ಆರೋಗ್ಯಕ್ಕೆ ಅತ್ಯುತ್ತಮ ವ್ಯಾಯಾಮಗಳು. ರನ್ನಿಂಗ್ ಹೆಚ್ಚು ಕ್ಯಾಲೊರಿ ಕರಗಿಸಿದರೂ, ಸೈಕ್ಲಿಂಗ್ ಕೀಲುಗಳಿಗೆ ಸುರಕ್ಷಿತವಾಗಿದೆ. ನಿಮ್ಮ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಫಿಟ್ನೆಸ್ ಗುರಿಗೆ ಅನುಗುಣವಾಗಿ ಸೂಕ್ತ ವ್ಯಾಯಾಮವನ್ನು ಆಯ್ಕೆ ಮಾಡುವುದು ಉತ್ತಮ. ಯಾವುದೇ ಹೊಸ ವ್ಯಾಯಾಮ ಆರಂಭಿಸುವ ಮೊದಲು, ವಿಶೇಷವಾಗಿ ಹೃದಯ ಅಥವಾ ಕೀಲು ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಫಿಟ್ನೆಸ್ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ವೈಯಕ್ತಿಕ ಆರೋಗ್ಯ ಸಮಸ್ಯೆಗಳು ಅಥವಾ ವ್ಯಾಯಾಮ ಸಂಬಂಧಿತ ಅನುಮಾನಗಳಿದ್ದರೆ ವೈದ್ಯರು ಅಥವಾ ಅರ್ಹ ಫಿಟ್ನೆಸ್ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು: ಓಡೋಡಿ ಬಂದ ಗ್ರಾಮಸ್ಥರು – Kannada News | Water Pipeline Bursts, Massive Jet of Water Shoots Into the Air; Villagers Rush to the Spot

ಬಾಗಲಕೋಟೆ, ಜುಲೈ 17: ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದಲ್ಲಿ ಬಬಲೇಶ್ವರ-ತುಬಚಿ ಏತನೀರಾವರಿ ಯೋಜನೆಯ ಮುಖ್ಯ ಪೈಪ್‌ಲೈನ್ ಒಡೆದ ಪರಿಣಾಮ ಗಗನದೆತ್ತರಕ್ಕೆ ನೀರು ಚಿಮ್ಮಿದ ಘಟನೆ ನಡೆದಿದೆ. ಪೈಪ್‌ಲೈನ್ ಸಂಪೂರ್ಣವಾಗಿ ಹಾನಿಗೊಳಗಾದ ಪರಿಣಾಮ ಬೃಹತ್ ಪ್ರಮಾಣದಲ್ಲಿ ನೀರು ಆಕಾಶದತ್ತ ಚಿಮ್ಮಿದೆ. ಸುತ್ತಲಿನ ಹೊಲಗದ್ದೆಗಳು ಹಾಗೂ ರಸ್ತೆಗೆ ನೀರು ಹರಿದಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ರೈತರ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಇನ್ನು ಆಕಾಶದೆತ್ತರಕ್ಕೆ ಚಿಮ್ಮಿದ ನೀರಿನ ದೃಶ್ಯವು ನೋಡುಗರಲ್ಲಿ ತೀವ್ರ ಅಚ್ಚರಿ ಹಾಗೂ ಕೌತುಕವನ್ನು ಮೂಡಿಸಿದೆ. ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ರೈತರು ಆತಂಕಗೊಂಡಿದ್ದು, ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಪೈಪ್‌ಲೈನ್ ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವ ಕ್ರಿಕೆಟ್​ನ ಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ – Kannada News | Sir Garfield Sobers, West Indies Cricket Legend and All rounder, Dies at 89

ವೆಸ್ಟ್ ಇಂಡೀಸ್‌ ತಂಡದ ಮಾಜಿ ನಾಯಕ, ವಿಶ್ವ ಕ್ರಿಕೆಟ್​ನ ದಿಗ್ಗಜ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಸರ್ ಗಾರ್ಫೀಲ್ಡ್ ಸೋಬರ್ಸ್ (Sir Garfield Sobers) ತಮ್ಮ 89 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸೋಬರ್ಸ್ ಇಂದು ನಿಧನರಾಗಿದ್ದಾರೆ. ಜುಲೈ 28 ರಂದು 90ನೇ ವರ್ಷಕ್ಕೆ ಕಾಲಿಡಬೇಕಿದ್ದ ಸೋಬರ್ಸ್ ತಮ್ಮ ಹುಟ್ಟುಹಬ್ಬಕ್ಕೆ 11 ದಿನಗಳ ಮೊದಲು ಅಂದರೆ ಜುಲೈ 17 ರಂದು ಕೊನೆಯುಸಿರೆಳಿದಿದ್ದಾರೆ. ಬಾರ್ಬಡೋಸ್‌ನಿಂದ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಗ್ಯಾರಿ ಸೋಬರ್ಸ್ ದೀರ್ಘಕಾಲದವರೆಗೆ ವೆಸ್ಟ್ ಇಂಡೀಸ್‌ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.

ಅತ್ಯಂತ ಯಶಸ್ವಿ ಆಲ್‌ರೌಂಡರ್

ಜುಲೈ 28, 1936 ರಂದು ಬಾರ್ಬಡೋಸ್‌ನ ಸೇಂಟ್ ಮೈಕೆಲ್‌ನಲ್ಲಿ ಜನಿಸಿದ ಗಾರ್ಫೀಲ್ಡ್ ಸೋಬರ್ಸ್ 1952 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ಎರಡೇ ವರ್ಷಗಳಲ್ಲಿ ಅಂದರೆ 1954 ರಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಮುಂದಿನ 20 ವರ್ಷಗಳ ಕಾಲ, ಸೋಬರ್ಸ್ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಟೆಸ್ಟ್ ಕ್ರಿಕೆಟ್ ಅನ್ನು ಸ್ಮರಣೀಯವಾಗಿಸಿದರು. ಎಡಗೈ ಬ್ಯಾಟಿಂಗ್ ಮತ್ತು ಎಡಗೈ ಮಧ್ಯಮ ವೇಗದ ಬೌಲರ್ ಆಗಿದ್ದ ಸೋಬರ್ಸ್ ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಲ್‌ರೌಂಡರ್ ಎಂದು ಪರಿಗಣಿಸಲಾಗಿದೆ.

ಸತತ 6 ಸಿಕ್ಸರ್‌ ಹೊಡೆದ ಮೊದಲ ಬ್ಯಾಟ್ಸ್‌ಮನ್

ಸರ್ ಸೋಬರ್ಸ್ 1965 ರಿಂದ 1972 ರವರೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕರಾಗಿದ್ದರು, ಈ ಅವಧಿಯಲ್ಲಿ 39 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. ಇದಲ್ಲದೆ, ಯಾವುದೇ ರೀತಿಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಹೊಡೆದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ಕಾರ್ಡಿಫ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದರು. ಅವರ ಬ್ಯಾಟಿಂಗ್ ಪರಾಕ್ರಮದಿಂದಾಗಿ ಸೋಬರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 57.78 ಸರಾಸರಿಯನ್ನು ಹೊಂದಿದ್ದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 54.87 ರ ಸರಾಸರಿ ಹೊಂದಿದ್ದರು.

ಸೋಬರ್ಸ್ ಅವರ ವೃತ್ತಿಜೀವನ ಹೇಗಿತ್ತು?

ಸರ್ ಸೋಬರ್ಸ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 57.78 ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳು ಸೇರಿವೆ. ಹಾಗೆಯೇ 109 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 93 ಟೆಸ್ಟ್‌ಗಳಲ್ಲಿ 34 ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಒಟ್ಟಾರೆಯಾಗಿ, ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಸೋಬರ್ಸ್ 383 ಪಂದ್ಯಗಳನ್ನು ಆಡಿದ್ದು, 86 ಶತಕಗಳು ಸೇರಿದಂತೆ 54.87 ಸರಾಸರಿಯಲ್ಲಿ 28314 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ 36 ಬಾರಿ ಐದು ವಿಕೆಟ್‌ಗಳು ಸೇರಿದಂತೆ 1043 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:16 pm, Fri, 17 July 26

Source link

ವಿಶ್ವಕಪ್‌ ಸ್ವರೂಪದಲ್ಲಿ ಬದಲಾವಣೆ; 4 ತಂಡಗಳ ನಾಯಕರ ಅಸಮಾಧಾನ – Kannada News | ICC 2027 World Cup Controversy: Associate Nations Challenge New ODI Rules

2027 ರ ಏಕದಿನ ವಿಶ್ವಕಪ್‌ (2027 ODI World Cup) ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಐಸಿಸಿ (ICC) ಮುಂಬರುವ ಏಕದಿನ ವಿಶ್ವಕಪ್​ನ ಸ್ವರೂಪವನ್ನು ಬದಲಾಯಿಸಿತ್ತು. ಇದೀಗ ಐಸಿಸಿಯ ಈ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ ಜಯ್ ಶಾ ನೇತೃತ್ವದ ಐಸಿಸಿಯ ಈ ನಿರ್ಧಾರವನ್ನು ವ್ಯಾಪಕವಾಗಿ ಟೀಕಿಸಲಾಗಿದ್ದು, ಕ್ರಿಕೆಟ್​ನಲ್ಲಿ ಈಗಷ್ಟೇ ಬೆಳೆಯುತ್ತಿರುವ ತಂಡಗಳಿಗೆ ಐಸಿಸಿ ರೂಪಿಸಿರುವ ನಿಯಮ ಹಾನಿಕಾರಕವೆಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ನಾಲ್ಕು ತಂಡಗಳ ನಾಯಕರು ಇದರ ವಿರುದ್ಧ ಮಾತನಾಡಿದ್ದಾರೆ.

ವಿಶ್ವಕಪ್‌ನ ಸ್ವರೂಪದಲ್ಲಿ ಏನು ಬದಲಾವಣೆಗಳಾಗಿವೆ?

ಐಸಿಸಿ ಇತ್ತೀಚೆಗೆ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2027 ರ ಪುರುಷರ ವಿಶ್ವಕಪ್ ಮತ್ತು 2028 ರ ಪುರುಷರ ಟಿ20 ವಿಶ್ವಕಪ್‌ನ ಸ್ವರೂಪದಲ್ಲಿ ಬದಲಾವಣೆಗಳನ್ನು ಘೋಷಿಸಿತು. ಇದೀಗ ಏಕದಿನ ವಿಶ್ವಕಪ್‌ನ ಸ್ವರೂಪವು ವಿವಾದ ಹುಟ್ಟುಹಾಕಿದೆ. ವಾಸ್ತವವಾಗಿ, ಈ 14 ತಂಡಗಳ ಟೂರ್ನಮೆಂಟ್‌ನ ಮುಖ್ಯ ಸುತ್ತನ್ನು ಪ್ರವೇಶಿಸಲು ಕೇವಲ 12 ತಂಡಗಳು ಮಾತ್ರ ಅರ್ಹವಾಗಿರುತ್ತವೆ. ಏಕೆಂದರೆ ಕೆಳ ಸ್ಥಾನದಲ್ಲಿರುವ ಮೂರು ತಂಡಗಳ ನಡುವೆ ಅರ್ಹತಾ ಸುತ್ತನ್ನು ಆಡಲಾಗುತ್ತದೆ, ಅದರಲ್ಲಿ ಒಂದು ತಂಡ ಮಾತ್ರ 12 ತಂಡಗಳೊಂದಿಗೆ ಗುಂಪು ಹಂತಕ್ಕೆ ಮುನ್ನಡೆಯುತ್ತದೆ, ಉಳಿದ ಎರಡು ತಂಡಗಳು ಪಂದ್ಯಾವಳಿಯಿಂದ ಹೊರಹೋಗುತ್ತವೆ.

ಈ ನಿರ್ಧಾರವು ಇಡೀ ವಿಶ್ವಕಪ್‌ನಲ್ಲಿ ಆಡುವ ಅಸೋಸಿಯೇಟ್ ತಂಡಗಳು ಟೂರ್ನಮೆಂಟ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಹೆಚ್ಚಿನ ಅಸೋಸಿಯೇಟ್ ತಂಡಗಳು ಮೂರರಲ್ಲಿ ಕೊನೆಯ ಎರಡರಲ್ಲಿ ಸ್ಥಾನ ಪಡೆಯುತ್ತವೆ ಮತ್ತು ಆದ್ದರಿಂದ, ಅವುಗಳಲ್ಲಿ ಒಂದು ತಂಡ ಮಾತ್ರ ಮುಂದಿನ ಸುತ್ತಿಗೆ ಮುನ್ನಡೆಯುತ್ತದೆ. ಈ ಹಿಂದೆ, ವಿಶ್ವಕಪ್ ಅನ್ನು 2003 ರ ಸ್ವರೂಪದಲ್ಲಿ ಆಡುವ ನಿರೀಕ್ಷೆಯಿತ್ತು, ಇದರಲ್ಲಿ ಎಲ್ಲಾ 14 ತಂಡಗಳು ಗುಂಪು ಹಂತದಲ್ಲಿ ಆಡಿದ್ದವು. ಆದರೆ ಈ ಬಾರಿ ವಿಶ್ವಕಪ್ ಸ್ವರೂಪವನ್ನು ಬದಲಿಸಲಾಗಿದೆ.

ಅಸಮಾಧಾನ ಹೊರಹಾಕಿದ ನಾಯಕರು

ಐಸಿಸಿಯ ಈ ನಿರ್ಧಾರವು ನಮೀಬಿಯಾ, ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್‌ನಂತಹ ತಂಡಗಳ ನಾಯಕರ ಕೋಪಕ್ಕೆ ಕಾರಣವಾಗಿದೆ. ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಕ್ರಿಕೆಟ್ ಅನ್ನು ಉತ್ತೇಜಿಸುವ ಐಸಿಸಿಯ ಹಕ್ಕುಗಳನ್ನು ಪ್ರಶ್ನಿಸಿದ್ದು, ‘ಐಸಿಸಿ ವಿಶ್ವಾದ್ಯಂತ ಆಟವನ್ನು ಅಭಿವೃದ್ಧಿಪಡಿಸುವ ಬಗ್ಗೆ ಬಹಳಷ್ಟು ಮಾತನಾಡುತ್ತದೆ, ಆದರೆ ಈ ರೀತಿಯ ನಿರ್ಧಾರಗಳು ಅಸೋಸಿಯೇಟ್ ರಾಷ್ಟ್ರಗಳು ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಆಡಲು ಕಷ್ಟಕರವಾಗಿಸುತ್ತದೆ’ ಎಂದಿದ್ದಾರೆ.

ಹಾಗೆಯೇ ನಮೀಬಿಯಾದ ನಾಯಕ ಗೆರ್ಹಾರ್ಡ್ ಎರಾಸ್ಮಸ್, ‘ನಾವೆಲ್ಲರೂ ವಿಶ್ವಕಪ್‌ನಲ್ಲಿ ಆಡುವ ಹಕ್ಕನ್ನು ಗಳಿಸಬೇಕು ಎಂದು ನಂಬುತ್ತೇವೆ, ಆದರೆ ಅರ್ಹತಾ ಪ್ರಕ್ರಿಯೆಯು ನಮಗೆ ದೊಡ್ಡ ವೇದಿಕೆಯಲ್ಲಿ ಆಡಲು ನಿಜವಾದ ಅವಕಾಶವನ್ನು ಪಡೆಯುವ ರೀತಿಯಲ್ಲಿ ಇರಬೇಕೆಂದು ನಾವು ಬಯಸುತ್ತೇವೆ’ ಎಂದಿದ್ದಾರೆ

ಅದೇ ರೀತಿ, ಸ್ಕಾಟ್ಲೆಂಡ್ ನಾಯಕ ರಿಚಿ ಬೆರಿಂಗ್ಟನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ‘ಆಟಗಾರರು ಪ್ರತಿಯೊಂದು ನಿರ್ಧಾರವನ್ನು ತಾವಾಗಿಯೇ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುವುದಿಲ್ಲ, ಆದರೆ ಆಟ ಮತ್ತು ಅವರ ವೃತ್ತಿಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ನಿರ್ಧಾರಗಳನ್ನು ಅವರೊಂದಿಗೆ ಸಮಾಲೋಚಿಸಬೇಕು’ ಎಂದಿದ್ದಾರೆ.

ಐಸಿಸಿಯ ಪೂರ್ಣ ಸದಸ್ಯನಾಗಿದ್ದರೂ, ಐರ್ಲೆಂಡ್‌ನಂತಹ ತಂಡವು ಸಹ ಆಡುವುದು ಖಚಿತವಿಲ್ಲ. ತಂಡದ ನಾಯಕ ಪಾಲ್ ಸ್ಟಿರ್ಲಿಂಗ್ ಫಿಫಾ ವಿಶ್ವಕಪ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿ, ‘ಸಣ್ಣ ಮತ್ತು ಅಸೋಸಿಯೇಟ್ ತಂಡಗಳು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿವೆ ಮತ್ತು ಜಾಗತಿಕ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತಿವೆ. ಫುಟ್ಬಾಲ್ ವಿಶ್ವಕಪ್ ಇತರ ಕ್ರೀಡೆಗಳಲ್ಲಿ ಇದು ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಹೀಗಾಗಿ ಕ್ರಿಕೆಟ್ ಕೂಡ ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾರ್ಕ್ ಪ್ಯಾಟರ್ನ್​ ಪ್ರದರ್ಶಿಸಿದ್ದಕ್ಕೆ ಸ್ಪೈಸ್‌ಜೆಟ್​ಗೆ 1 ಲಕ್ಷ ರೂ ದಂಡ: ಪ್ರಲ್ಹಾದ ಜೋಶಿ ಸೂಚನೆ ಬೆನ್ನಲ್ಲೇ ಕಠಿಣ ಕ್ರಮ – Kannada News | SpiceJet Fined Over Dark Patterns in Ticket Booking After Pralhad Joshi’s Directive

ನವದೆಹಲಿ, ಜುಲೈ 17: ವಿಮಾನಯಾನ ಟಿಕೆಟ್ ಬುಕಿಂಗ್ ಮಾಡುವಾಗ ಗ್ರಾಹಕರನ್ನು ಆಕರ್ಷಿಸಲು ಮತ್ತು ದಾರಿ ತಪ್ಪಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ‘ಡಾರ್ಕ್ ಪ್ಯಾಟರ್ನ್’ (Dark Pattern) ಪ್ರದರ್ಶಿಸುತ್ತಿದ್ದ ಸ್ಪೈಸ್‌ಜೆಟ್ (SpiceJet) ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ 1 ಲಕ್ಷ ರೂ ದಂಡ ವಿಧಿಸುವ ಮೂಲಕ ತಕ್ಕ ಪಾಠ ಕಲಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ​ ಜೋಶಿ (Pralhad Joshi) ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದ ಸ್ಪೈಸ್‌ಜೆಟ್

ಸ್ಪೈಸ್‌ಜೆಟ್ ಸಂಸ್ಥೆಯು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ ತಂತ್ರಗಳನ್ನು ಬಳಸುತ್ತಿರುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಸಚಿವರ ಆದೇಶದ ಬೆನ್ನಲ್ಲೇ ತನಿಖೆ ನಡೆಸಿದ CCPA ತಂಡಕ್ಕೆ ಸ್ಪೈಸ್‌ಜೆಟ್ ಸಂಸ್ಥೆಯು ಗ್ರಾಹಕರನ್ನು ಮೋಸಗೊಳಿಸುವ ಡಾರ್ಕ್ ಪ್ಯಾಟರ್ನ್ ಮತ್ತು ಪೂರ್ವನಿಯೋಜಿತ ಸಮ್ಮತಿ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಸಾಬೀತಾಗಿದೆ.

ಸಚಿವ ಪ್ರಲ್ಹಾದ ಜೋಶಿ ಟ್ವೀಟ್​​

ಸ್ಪೈಸ್‌ಜೆಟ್ ಸಂಸ್ಥೆಯು ತನ್ನ ಆನ್‌ಲೈನ್ ವೇದಿಕೆಯಲ್ಲಿ ಸ್ವಯಂ ಚಾಲಿತ ನೋಂದಣಿ ಪ್ರಚಾರದ ಸಂದೇಶಗಳು ಮತ್ತು ಗ್ರಾಹಕರ ಮೇಲೆ ಪ್ರಭಾವ ಬೀರುವಂತಹ ದಾರಿ ತಪ್ಪಿಸುವ ಇಂಟರ್‌ಫೇಸ್ ವಿನ್ಯಾಸಗೊಳಿಸಿತ್ತು. ಗ್ರಾಹಕರು ಟಿಕೆಟ್ ಬುಕ್ ಮಾಡುವಾಗ “ಸ್ಪೈಸ್‌ ಕ್ಲಬ್ ಪ್ರಚಾರದ ಕೊಡುಗೆ, ಡೀಲ್‌ ಮತ್ತು ಅಪ್‌ಡೇಟ್‌ಗಳನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ” ಎಂಬ ಆಯ್ಕೆಯನ್ನು ಮೊದಲೇ ಟಿಕ್ ಮಾಡಲಾಗಿರುತ್ತಿತ್ತು. ಅಷ್ಟೇ ಅಲ್ಲದೆ, “ಸೀಮಿತ ಅವಧಿಯ ಕೊಡುಗೆ! ದರ ಏರಿಕೆಯನ್ನು ತಪ್ಪಿಸಲು ಮತ್ತು ಉತ್ತಮ ಡೀಲ್ ಪಡೆಯಲು ಈಗಲೇ ಬುಕ್ ಮಾಡಿ” ಎನ್ನುವಂತಹ ತಪ್ಪು ಸಂದೇಶಗಳ ಮೂಲಕ ಗ್ರಾಹಕರಲ್ಲಿ ಅನಗತ್ಯ ಆತುರ ಮೂಡಿಸಿ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ.

ಸ್ಪೈಸ್‌ಜೆಟ್ ಸಂಸ್ಥೆಗೆ CCPA ಖಡಕ್ ಸೂಚನೆ

ಈ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ಸಂಸ್ಥೆಗೆ 1 ಲಕ್ಷ ರೂ ದಂಡ ವಿಧಿಸಿರುವ CCPA, ಇಂತಹ ಗ್ರಾಹಕ ವಿರೋಧಿ ಮತ್ತು ಡೀಫಾಲ್ಟ್-ಸಮ್ಮತಿ ಅಭ್ಯಾಸಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಶ್ವತವಾಗಿ ನಿಲ್ಲಿಸಬೇಕು ಎಂದು ಖಡಕ್ ಆದೇಶ ನೀಡಿದೆ. ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಗ್ರಾಹಕರ ಒಪ್ಪಿಗೆಯನ್ನು ಯಾವಾಗಲೂ ಸ್ಪಷ್ಟವಾಗಿ, ಮಾಹಿತಿಯುಕ್ತವಾಗಿ ಮತ್ತು ಮುಕ್ತವಾಗಿ ಪಡೆದುಕೊಳ್ಳಬೇಕು ಎಂದು ಪ್ರಾಧಿಕಾರವು ವಿಮಾನಯಾನ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:46 pm, Fri, 17 July 26

Source link

ಸುಳ್ಳಾಯಿತೇ ಆಮಿರ್ ಖಾನ್ ಹೇಳಿಕೆ? ಸೋನಮ್ ವಾಂಗ್ಚುಕ್ ಭೇಟಿಯಾಗಿದ್ದ ಹಳೆಯ ವಿಡಿಯೋ ವೈರಲ್ – Kannada News | Aamir Khan Sonam Wangchuk 2008 meeting Video goes viral now after 3 Idiots Claim Denial

ಬಾಲಿವುಡ್‌ನ ಬ್ಲಾಕ್‌ಬಸ್ಟರ್ ‘3 ಈಡಿಯಟ್ಸ್’ (3 Idiots) ಚಿತ್ರದ ಪ್ರಮುಖ ಪಾತ್ರ ಫುನ್ಸುಖ್ ವಾಂಗ್ಡು ಸೃಷ್ಟಿಗೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೇ ಸ್ಫೂರ್ತಿ ಎಂಬುದು ಜಗಜ್ಜಾಹಿರಾದ ವಿಷಯ. ಆದರೆ ಇತ್ತೀಚೆಗೆ ಲಂಡನ್‌ನ ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಆಮಿರ್ ಖಾನ್ (Aamir Khan), ‘3 ಇಡಿಯಟ್ಸ್ ಸಿನಿಮಾ ಮಾಡುವಾಗ ನಮಗೆ ಸೋನಮ್ ವಾಂಗ್ಚುಕ್ ಯಾರೆಂದೇ ಗೊತ್ತಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಆಮಿರ್ ಖಾನ್ ಮತ್ತು ಸೋನಮ್ ವಾಂಗ್ಚುಕ್ (Sonam Wangchuk) 2008ರಲ್ಲೇ ಭೇಟಿಯಾಗಿದ್ದ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಆಮಿರ್ ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಸೋನಮ್ ವಾಂಗ್ಚುಕ್ ಅವರು, ‘3 ಈಡಿಯಟ್ಸ್’ ಬಿಡುಗಡೆಯಾಗುವ ಒಂದು ವರ್ಷಕ್ಕೂ ಮುಂಚೆ ಅಂದರೆ 2008ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಮಿರ್ ಖಾನ್ ಅವರನ್ನು ಭೇಟಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಸೋನಮ್ ಪ್ರಶಸ್ತಿ ಸ್ವೀಕರಿಸುವಾಗ ಆಮಿರ್ ಖಾನ್ ಚಪ್ಪಾಳೆ ತಟ್ಟುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿವೆ.

ಆಮಿರ್-ಸೋನಮ್ ಭೇಟಿಯ ಮಾತುಕಥೆ:

‘ಆ ಭೇಟಿಯ ಸಂದರ್ಭದಲ್ಲಿ ನಾನು ಅಮೀರ್ ಖಾನ್ ಅವರಿಗೆ ಸಿಯಾಚಿನ್ ಗಡಿ ಸಂಘರ್ಷದ ಕುರಿತು ಸಿನಿಮಾ ಮಾಡುವಂತೆ ಐಡಿಯಾ ನೀಡಿದ್ದೆ. ಎರಡು ದೇಶಗಳು ಪ್ರತಿದಿನ ಬರೋಬ್ಬರಿ 7 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿವೆ. ಇದರ ಬದಲು ಸಾಮಾನ್ಯ ಜನರು ಈ ಸಮಸ್ಯೆಯನ್ನು ಬಗೆಹರಿಸಿ, ಆ ಹಣವನ್ನು ಶಿಕ್ಷಣಕ್ಕೆ ಬಳಸುವಂತೆ ಸಿನಿಮಾದಲ್ಲಿ ತೋರಿಸಬಹುದಲ್ಲವೇ ಎಂದು ಕೇಳಿದ್ದೆ. ಆಮಿರ್ ಕೂಡ ನನ್ನ ಪ್ರೆಸೆಂಟೇಶನ್ ಅನ್ನು ಆಸಕ್ತಿಯಿಂದ ನೋಡಿದ್ದರು’ ಎಂದು ಸೋನಮ್ ಹೇಳಿದ್ದಾರೆ.

ತದನಂತರ ಸೋನಮ್ ವಾಂಗ್ಚುಕ್ ಅವರು ಹೆಚ್ಚಿನ ವ್ಯಾಸಂಗಕ್ಕಾಗಿ ಯುರೋಪ್‌ಗೆ ತೆರಳಿದ್ದರು. ಆದರೆ ಡಿಸೆಂಬರ್ 2009ರಲ್ಲಿ ‘3 ಈಡಿಯಟ್ಸ್’ ಬಿಡುಗಡೆಯಾದಾಗ, ಅವರ ಸ್ನೇಹಿತರು ಫೋನ್ ಮಾಡಿ ‘ನಿಮ್ಮ ಲಡಾಖ್ ಶಾಲೆ ಮತ್ತು ನಿಮ್ಮ ಜೀವನದ ಆಧಾರದ ಮೇಲೆಯೇ ಆಮಿರ್ ಖಾನ್ ಸಿನಿಮಾ ಮಾಡಿದ್ದಾರೆ’ ಎಂದು ತಿಳಿಸಿದಾಗ ಸೋನಮ್‌ಗೆ ಶಾಕ್ ಆಗಿತ್ತಂತೆ.

ಶಾಲೆಗೆ ಬಂದಿದ್ದ ಚಿತ್ರತಂಡವನ್ನು ವಾಪಸ್ ಕಳುಹಿಸಲಾಗಿತ್ತು:

ಈ ಬಗ್ಗೆ ಅವರು ತಮ್ಮ ಶಾಲೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿತ್ತು. ಅದೇನೆಂದರೆ, ‘3 ಈಡಿಯಟ್ಸ್’ ಚಿತ್ರತಂಡವು ಸೋನಮ್ ಅವರ ಶಾಲೆಗೆ ಶೂಟಿಂಗ್ ಮಾಡಲು ಬಂದಿತ್ತು. ಆದರೆ ಅವರು ತಮ್ಮ ಪ್ರಾಜೆಕ್ಟ್ ಬಗ್ಗೆ ಅತ್ಯಂತ ರಹಸ್ಯ ಕಾಯ್ದುಕೊಂಡಿದ್ದರು ಮತ್ತು ಶಾಲೆಯ ಆವರಣಕ್ಕೆ ಭಾರಿ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳನ್ನು ತರಲು ಯೋಜಿಸಿದ್ದರು. ಲಡಾಖ್‌ನ ಪರಿಸರ ಕಾಪಾಡುವ ನಿಟ್ಟಿನಲ್ಲಿ ಸೋನಮ್ ಅವರ ಶಾಲೆಯು ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಿತ್ತು. ಹೀಗಾಗಿ ಚಿತ್ರತಂಡವು ಹತ್ತಿರದ ಮತ್ತೊಂದು ಶಾಲೆಯಲ್ಲಿ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಶೂಟ್ ಮಾಡಿತ್ತು.

ಇದನ್ನೂ ಓದಿ: ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ

ಸೋನಮ್ ವಾಂಗ್ಚುಕ್ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು?

ಲಡಾಖ್‌ನಲ್ಲಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಲಂಡನ್ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರಿಗೆ ಪ್ರಶ್ನಿಸಲಾಯಿತು. ಆಗ ಉತ್ತರಿಸಿದ್ದ ಅವರು, ‘3 ಈಡಿಯಟ್ಸ್ ಸಿನಿಮಾ ಮಾಡುವಾಗ ನಮಗೆ ಸೋನಮ್ ವಾಂಗ್ಚುಕ್ ಬಗ್ಗೆ ಗೊತ್ತಿರಲಿಲ್ಲ ಎಂಬುದು ಅಸಲಿ ಸತ್ಯ. ಇತ್ತೀಚೆಗೆ ಚತುರ್ (ನಟ ಓಮಿ ವೈದ್ಯ) ಕೂಡ ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾನೆ. ಆದರೆ ಅದು ತಪ್ಪು ಕಲ್ಪನೆ. ನನಗಾಗಲಿ, ನಿರ್ದೇಶಕ ರಾಜಕುಮಾರ್ ಹಿರಾನಿಗಾಗಲಿ ಅಥವಾ ಚಿತ್ರಕಥೆಗಾರ ಅಭಿಜಾತ್‌ಗಾಗಲಿ ಆ ಸಮಯದಲ್ಲಿ ಸೋನಮ್ ಬಗ್ಗೆ ತಿಳಿದಿರಲಿಲ್ಲ. ಆದರೂ ಸೋನಮ್ ಅವರು ಮಾಡುತ್ತಿರುವ ಪರಿಸರ ಕಾಳಜಿಯ ಕೆಲಸ ಶ್ಲಾಘನೀಯ. ಅವರನ್ನು ಗೌರವಿಸಲು ಅವರು 3 ಈಡಿಯಟ್ಸ್ ಚಿತ್ರದ ಪಾತ್ರಕ್ಕೆ ಸ್ಫೂರ್ತಿಯಾಗಿರಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:54 pm, Fri, 17 July 26

Source link

ಕಾರವಾರ: ಭಾರಿ ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ – Kannada News | Coastal Police Heroic Rescue: Youth Saved from Drowning at Karwar Tagore Beach

ಕಾರವಾರ ಜು.17: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಅಲೆಗಳ ಆರ್ಭಟ ತೀವ್ರಗೊಂಡಿದೆ. ಇಂತಹ ಪ್ರಾಣಾಪಾಯದ ಸನ್ನಿವೇಶದಲ್ಲಿ ಕಾರವಾರದ ಪ್ರಸಿದ್ಧ ಟಾಗೋರ್ ಕಡಲತೀರದಲ್ಲಿ (Tagore Beach) ಕಡಲಿಗೆ ಇಳಿದು ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ್ದಾರೆ. ಕಾರವಾರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಮುದ್ರ ತೀವ್ರವಾಗಿ ಉಕ್ಕಿ ಹರಿಯುತ್ತಿದ್ದು, ಅಲೆಗಳ ರಭಸ ಹೆಚ್ಚಾಗಿದೆ. ಈ ವೇಳೆ ಟಾಗೋರ್ ಕಡಲತೀರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಯಾರಿಗೂ ತಿಳಿಯದಂತೆ ಸಮುದ್ರದ ಆಳಕ್ಕೆ ಇಳಿದಿದ್ದಾನೆ. ಅಲೆಗಳ ಅಬ್ಬರಕ್ಕೆ ಸಿಲುಕಿ ಆತ ನೀರಿನಲ್ಲಿ ಮುಳುಗುತ್ತಿರುವುದನ್ನು ತೀರದಲ್ಲಿದ್ದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತಕ್ಷಣವೇ ಗಮನಿಸಿದ್ದಾರೆ. ಸ್ವಲ್ಪ ತಡಮಾಡಿದ್ದರೂ ಯುವಕ ಸಮುದ್ರದ ಪಾಲಾಗುತ್ತಿದ್ದನು. ಆದರೆ, ಪೊಲೀಸರು ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ತಕ್ಷಣವೇ ಸ್ಪೀಡ್ ಬೋಟ್ ಮೂಲಕ ಸಮುದ್ರದ ಮಧ್ಯಕ್ಕೆ ಧಾವಿಸಿದ್ದಾರೆ. ಅಲೆಗಳ ನಡುವೆಯೂ ಚಾಣಾಕ್ಷತನದಿಂದ ಬೋಟ್ ಮುನ್ನಡೆಸಿದ ಪೊಲೀಸ್ ಸಿಬ್ಬಂದಿ, ಮುಳುಗುತ್ತಿದ್ದ ಯುವಕನನ್ನು ಸುರಕ್ಷಿತವಾಗಿ ನೀರಿನಿಂದ ಮೇಲೆತ್ತಿ ಬೋಟ್ ಒಳಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ಸಮುದ್ರದ ಮಧ್ಯದಿಂದ ಸುರಕ್ಷಿತವಾಗಿ ದಡಕ್ಕೆ ತಂದು ಬಿಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version