ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ! – Kannada News | Bengaluru Police Crack 70 Crime Cases: 94 Arrested, Rs 4.9 Crore Worth Stolen Assets Recovered

ಬೆಂಗಳೂರು, ಜುಲೈ 17: ನಗರದ ಉತ್ತರ ವಿಭಾಗದ ಪೊಲೀಸರು ಕಳ್ಳರು, ದರೋಡೆಕೋರರು ಹಾಗೂ ಸುಲಿಗೆಕೋರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದಿದ್ದ ಮನೆಗಳ್ಳತನ, ದರೋಡೆ, ಸರಗಳ್ಳತನ, ವಾಹನ ಕಳವು ಸೇರಿದಂತೆ ಒಟ್ಟು 70 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಬರೋಬ್ಬರಿ 94 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಒಟ್ಟು 4,91,94,517 ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನಗಳನ್ನು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಅವರು ಇಂದು ಅಧಿಕೃತವಾಗಿ ಮೂಲ ಮಾಲೀಕರಿಗೆ (ವಾರಸುದಾರರಿಗೆ) ಹಸ್ತಾಂತರಿಸಲಿದ್ದಾರೆ.

ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳ ವಿವರ

ಉತ್ತರ ವಿಭಾಗದ ಆರ್.ಟಿ.ನಗರ, ಮಲ್ಲೇಶ್ವರಂ, ಸಂಜಯ್ ನಗರ, ಹೆಬ್ಬಾಳ, ಯಶವಂತಪುರ, ಸುಬ್ರಮಣ್ಯ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯ ವೇಳೆ ಜಪ್ತಿ ಮಾಡಲಾದ ಬೃಹತ್ ಕಳವು ಮಾಲಿನ ಪಟ್ಟಿ ಇಲ್ಲಿದೆ:

  • ಚಿನ್ನ ಮತ್ತು ಬೆಳ್ಳಿ: 2 ಕೆ.ಜಿ. 462 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. 381 ಗ್ರಾಂ ಬೆಳ್ಳಿ ವಸ್ತುಗಳು.
  • ನಗದು ಹಣ:ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 34.34 ಲಕ್ಷ ರೂ.
  • ವಾಹನಗಳು: ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೈಕಿ ಸದ್ಯ 64 ಬೈಕ್‌ಗಳು ಹಾಗೂ 4 ಆಟೋರಿಕ್ಷಾಗಳು.
  • ಗ್ಯಾಜೆಟ್ಸ್: 71 ದುಬಾರಿ ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್ ಹಾಗೂ 1 ಟ್ಯಾಬ್.
  • ಇತರೆ ಜಪ್ತಿ: 44.780 ಕೆ.ಜಿ. ತೂಕದ ಶ್ರೀಗಂಧದ ಮರ, 5 ಗ್ಯಾಸ್ ಸಿಲಿಂಡರ್‌ಗಳು ಹಾಗೂ ₹23 ಲಕ್ಷ ಮೌಲ್ಯದ 11 ಗ್ರಾಂ ಮಾದಕ ದ್ರವ್ಯ (ಡ್ರಗ್ಸ್).

ಠಾಣಾವಾರು ಪ್ರಮುಖ ಯಶಸ್ಸಿನ ಹೈಲೈಟ್ಸ್

  • ಮಲ್ಲೇಶ್ವರಂ ಪೊಲೀಸ್ ಠಾಣೆ: ಬರೋಬ್ಬರಿ 14 ಪ್ರಕರಣಗಳನ್ನು ಭೇದಿಸಿರುವ ಮಲ್ಲೇಶ್ವರಂ ಪೊಲೀಸರು 12 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇವರಿಂದ 1.84 ಕೋಟಿ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ, 6 ಬೈಕ್ ಹಾಗೂ 17 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
  • ಹೆಬ್ಬಾಳ ಪೊಲೀಸ್ ಠಾಣೆ: 6 ಪ್ರಕರಣಗಳಲ್ಲಿ 5 ಆರೋಪಿಗಳನ್ನು ಬಂಧಿಸಿ, 82.01 ಲಕ್ಷ ರೂ. ಮೌಲ್ಯದ 507 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
  • ನಂದಿನಿ ಲೇಔಟ್ ಠಾಣೆ: 7 ಪ್ರಕರಣಗಳಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ ಬರೋಬ್ಬರಿ 44.780 ಕೆ.ಜಿ. ಶ್ರೀಗಂಧದ ಮರ, ಚಿನ್ನ ಹಾಗೂ ವಾಹನಗಳು ಸೇರಿ ಒಟ್ಟು 48.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
  • ಯಶವಂತಪುರ ಪೊಲೀಸ್ ಠಾಣೆ: 9 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಿ 36.37 ಲಕ್ಷ ರೂ. ಮೌಲ್ಯದ ಚಿನ್ನ, 17 ಮೊಬೈಲ್ ಹಾಗೂ ಅತ್ಯಾಧುನಿಕ ‘ಕೃತಕ ಬುದ್ಧಿಮತ್ತೆ (AI) ಡಿಜಿಟಲ್ ಉಪಕರಣ’ವನ್ನು ಜಪ್ತಿ ಮಾಡಲಾಗಿದೆ.
  • ಆರ್.ಟಿ. ನಗರ ಮತ್ತು ಸಂಜಯನಗರ: ಆರ್.ಟಿ. ನಗರದಲ್ಲಿ 9 ಪ್ರಕರಣಗಳಲ್ಲಿ 14 ಆರೋಪಿಗಳನ್ನು ಬಂಧಿಸಿ 30.18 ಲಕ್ಷ ರೂ. ಮೌಲ್ಯದ ಮಾಲು ರಿಕವರಿ ಮಾಡಲಾಗಿದೆ. ಸಂಜಯನಗರದಲ್ಲಿ ಅತ್ಯಧಿಕ ಅಂದರೆ 19 ಪ್ರಕರಣಗಳನ್ನು ಭೇದಿಸಿ 7 ಆರೋಪಿಗಳನ್ನು ಬಂಧಿಸಿ 27.44 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಇದರೊಂದಿಗೆ ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ಆರ್.ಎಂ.ಸಿ ಯಾರ್ಡ್ ಹಾಗೂ ಜಾಲಹಳ್ಳಿ ಮತ್ತು ಜೆ.ಪಿ ನಗರ ಠಾಣೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಕಳೆದುಕೊಂಡು ಕಂಗಾಲಾಗಿದ್ದ ಸಾರ್ವಜನಿಕರು ಇಂದು ತಮ್ಮ ವಸ್ತುಗಳನ್ನು ಮರಳಿ ಪಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿಬದಿ ವ್ಯಾಪಾರಿಗಳು ಬಡವರು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ – Kannada News | Ramalingareddy Advocates for Hawkers Zones to Resolve Bengaluru Footpath Issues

ಬೆಂಗಳೂರು, ಜು.17: ರಾಜಧಾನಿಯಲ್ಲಿ ಫುಟ್‌ಪಾತ್ ಒತ್ತುವರಿ ಸಮಸ್ಯೆ ಮತ್ತು ಬೀದಿಬದಿ ವ್ಯಾಪಾರಿಗಳ ಭವಿಷ್ಯದ ಕುರಿತು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ. ಫುಟ್‌ಪಾತ್‌ಗಳು ಸಾರ್ವಜನಿಕರ ಓಡಾಟಕ್ಕಾಗಿ ಇವೆ. ಅಲ್ಲಿರುವ ವ್ಯಾಪಾರಿಗಳನ್ನು ತೆರವುಗೊಳಿಸಲು ಯಾರೂ ಆಕ್ಷೇಪಿಸುವುದಿಲ್ಲ, ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು. ಹಾಕರ್ಸ್ ಝೋನ್ ವ್ಯವಸ್ಥೆ ಪ್ರಪಂಚದಾದ್ಯಂತ ಇದೆ. ಬೆಂಗಳೂರಿನಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಬೀದಿಬದಿ ವ್ಯಾಪಾರಿಗಳು ಬಡವರಲ್ಲಿ ಬಡವರು. ಅವರಿಗೆ ಸೂಕ್ತ ಹಾಕರ್ಸ್ ಝೋನ್ ಒದಗಿಸಿ, ಪಾದಚಾರಿಗಳಿಗೆ ಫುಟ್‌ಪಾತ್‌ಗಳನ್ನು ಬಿಟ್ಟುಕೊಡುವುದು ಸೂಕ್ತ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಫುಟ್‌ಪಾತ್ ವ್ಯಾಪಾರಿಗಳಿಗೆ 20,000 ರೂ. ಒನ್ ಟೈಮ್ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ರಾಮಲಿಂಗಾರೆಡ್ಡಿ ನೆನಪಿಸಿದರು. ರಾಹುಲ್ ಗಾಂಧಿಯವರು ಕೂಡ ಇವರೊಂದಿಗೆ ಚರ್ಚೆ ನಡೆಸಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ತಿದ್ದುಪಡಿ ತರಲಾಗಿತ್ತು ಎಂದು ಸಚಿವರು ವಿವರಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ವ್ಯಾಪಾರಿಗಳಿಗೆ ಹಾಕರ್ಸ್ ಝೋನ್ ವ್ಯವಸ್ಥೆ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಕೊನೆಯ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಔಟ್

Source link

ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ ಪುತ್ರ ಹೆಚ್​​ಡಿ ಕುಮಾರಸ್ವಾಮಿ – Kannada News | Former PM Deve Gowda’s Wife Chennamma in Critical Condition; HD Kumaraswamy Visits Hospital

ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಹೆಚ್​ಡಿ ರೇವಣ್ಣ ಮತ್ತು ಕುಟುಂಬ ಸದಸ್ಯರು ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಮೊನ್ನೆ ಸಂಜೆ ಚೆನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹೆಚ್.ಡಿ.ಕುಮಾರಸ್ವಾಮಿ ವೈದ್ಯರೊಂದಿಗೆ ಮಾತನಾಡಿ, ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಶೀಘ್ರ ಚೇತರಿಕೆಗಾಗಿ ಕುಟುಂಬಸ್ಥರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ – Kannada News | If you have these documents, it is easy to get a door number for a new house.

ಎಲ್ಲರ ಮನೆಗೂ ಡೋರ್ ನಂಬರ್ (door number) ಇದ್ದೆ ಇರುತ್ತದೆ. ತುರ್ತು ಸೇವೆಗಳ ಆಗಮನ, ಸ್ಥಳೀಯ ಸರ್ಕಾರಿ ದಾಖಲೆಗಳು, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ನಂತಹ ಅಧಿಕೃತ ಗುರುತಿಗೆ ಮನೆ ಸಂಖ್ಯೆ ಪ್ರಮುಖ ಆಧಾರವಾಗಿದೆ. ನೀವೇನಾದ್ರೂ ಹೊಸ ಮನೆ ಕಟ್ಟಿದ್ದರೆ ಡೋರ್ ನಂಬರ್ ಪಡೆಯುವುದು ಹೇಗೆ ಎನ್ನುವ ಗೊಂದಲ ಇರಬಹುದು. ಆದರೆ ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೆಲವು ದಿನಗಳಲ್ಲೇ ಮನೆಗೆ ಡೋರ್ ನಂಬರ್ ಪಡೆಯಬಹುದು.

 ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಹಂತ 1: ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಹಂತ 2: ಅರ್ಜಿಯೊಂದಿಗೆ ಆಸ್ತಿ ಪತ್ರ , ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರವನ್ನು ಲಗತ್ತಿಸಿ.

ಹಂತ 3: ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.

ಹಂತ 4: ಪರಿಶೀಲನೆ ಬಳಿಕ ನಿಮ್ಮ ಮನೆಯನ್ನು ಗ್ರಾಮ ಅಥವಾ ನಗರದ ಆಸ್ತಿ ನೋಂದಣಿ ರಿಜಿಸ್ಟರ್‌ನಲ್ಲಿ ನಮೂದಿಸಿ ಅಧಿಕೃತ ಡೋರ್ ನಂಬರ್ ನೀಡಲಾಗುತ್ತದೆ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಉತ್ತರ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಪ್ರಶ್ನೆ: ಹೊಸ ಮನೆಗೆ ಮನೆ ಸಂಖ್ಯೆ ಪಡೆಯಲು ಏನೆಲ್ಲಾ ದಾಖಲೆಗಳು ಬೇಕು?

ಉತ್ತರ: ಅರ್ಜಿಯೊಂದಿಗೆ ಆಸ್ತಿ ಪತ್ರ, ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರಗಳಂತಹ ದಾಖಲೆಗಳು ಬೇಕು.

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಯಾವಾಗ ನೀಡುತ್ತಾರೆ?

ಉತ್ತರ: ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಡೋರ್ ನಂಬರ್ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:27 pm, Fri, 17 July 26

Source link

ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ – Kannada News | Scientists develop Sodium Metal Battery that can be charged very quickly

ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಜಗತ್ತೇ ಬೆರಗಾಗುವಂತಹ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಾಧನಗಳನ್ನು ಕೇವಲ 4 ನಿಮಿಷಗಳಲ್ಲಿ ಶೇ. 100 ರಷ್ಟು ಫುಲ್ ಚಾರ್ಜ್ ಮಾಡಬಲ್ಲ ಅತ್ಯಾಧುನಿಕ ‘ಸೋಡಿಯಂ ಮೆಟಲ್ ಬ್ಯಾಟರಿ’ (Sodium Metal Battery) ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಏನಿದು ಸೋಡಿಯಂ ಮೆಟಲ್ ಬ್ಯಾಟರಿ?

ಪ್ರಸ್ತುತ ನಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಲಿಥಿಯಂ-ಅಯಾನ್ (Lithium-ion) ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಆದರೆ ಲಿಥಿಯಂ ಅತ್ಯಂತ ದುಬಾರಿ ಮತ್ತು ಜಗತ್ತಿನ ಕೆಲವು ದೇಶಗಳಲ್ಲಿ ಮಾತ್ರ ಸಿಗುತ್ತದೆ. ಇದಕ್ಕೆ ಪರ್ಯಾಯವಾಗಿ ಚೀನಾದ ಸಂಶೋಧಕರು ಸುಲಭವಾಗಿ ಮತ್ತು ಅತಿ ಅಗ್ಗವಾಗಿ ಸಿಗುವ ಸೋಡಿಯಂ (ಉಪ್ಪು) ಬಳಸಿ ಈ ಮೆಟಲ್ ಬ್ಯಾಟರಿಯನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

4 ನಿಮಿಷಗಳಲ್ಲಿ ಚಾರ್ಜ್ ಆಗುವುದು ಹೇಗೆ ಸಾಧ್ಯ?

ವಿಜ್ಞಾನಿಗಳು ಈ ಬ್ಯಾಟರಿಗಾಗಿ ‘ಕ್ವಾಸಿ-ಸಾಲಿಡ್ ಜೆಲ್ ಎಲೆಕ್ಟ್ರೋಲೈಟ್’ (Quasi-Solid Gel Electrolyte) ಎಂಬ ವಿಶೇಷ ಜೆಲ್ ಅನ್ನು ರೂಪಿಸಿದ್ದಾರೆ. ಇದು ಬ್ಯಾಟರಿಯ ಒಳಗೆ ಸೋಡಿಯಂ ಅಯಾನ್‌ಗಳು ಅತಿ ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದು ಕೇವಲ 4 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಬ್ಯಾಟರಿ ಬಾಳಿಕೆ ಮತ್ತು ಸುರಕ್ಷತೆ ಹೆಚ್ಚು

ಸಾಮಾನ್ಯವಾಗಿ ಬ್ಯಾಟರಿಗಳನ್ನು ಅತಿ ವೇಗವಾಗಿ ಚಾರ್ಜ್ ಮಾಡಿದಾಗ ಶಾರ್ಟ್ ಸರ್ಕ್ಯೂಟ್ ಆಗುವ ಅಥವಾ ಬ್ಯಾಟರಿ ಹಾಳಾಗುವ ಅಪಾಯ ಇರುತ್ತದೆ. ಆದರೆ, ಈ ಹೊಸ ಜೆಲ್ ತಂತ್ರಜ್ಞಾನವು ಬ್ಯಾಟರಿ ಒಳಗೆ ಸೂಜಿಯಂತಹ ಲೋಹದ ರಚನೆಗಳು (Dendrites) ಬೆಳೆಯದಂತೆ ತಡೆಯುತ್ತದೆ. ಇದರಿಂದ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗುವುದು ತಪ್ಪುತ್ತದೆ ಮತ್ತು ವರ್ಷಗಳ ಕಾಲ ಬ್ಯಾಟರಿಯ ಸಾಮರ್ಥ್ಯ ಕುಂದದೆ ದೀರ್ಘಕಾಲ ಬಾಳಿಕೆ ಬರುತ್ತದೆ.

ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಸಾರ್ವಜನಿಕರಿಗೆ ಯಾವಾಗ ಲಭ್ಯ?

ಈ ತಂತ್ರಜ್ಞಾನವು ಸದ್ಯಕ್ಕೆ ಸಂಶೋಧನಾ ಪ್ರಯೋಗಾಲಯಗಳ (Labs) ಹಂತದಲ್ಲಿದೆ. ಮಾರುಕಟ್ಟೆಗೆ ಬರುವ ಮುನ್ನ ಇದರ ಸುರಕ್ಷತೆ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ಈ ತಂತ್ರಜ್ಞಾನ ಯಶಸ್ವಿಯಾದರೆ ಮೊಬೈಲ್ ಮಾತ್ರವಲ್ಲದೆ ಎಲೆಕ್ಟ್ರಿಕ್ ಕಾರುಗಳು (EVs) ಮತ್ತು ಸೌರ ಇಂಧನ ಶೇಖರಣಾ ಗ್ರಿಡ್‌ಗಳಲ್ಲಿ ಇದು ಭಾರಿ ಕ್ರಾಂತಿ ಸೃಷ್ಟಿಸಲಿದೆ.

ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಸೋಡಿಯಂ ಬ್ಯಾಟರಿಗಳನ್ನು ತಯಾರಿಸುವ ವೆಚ್ಚ ಅತ್ಯಂತ ಕಡಿಮೆ. ಹೀಗಾಗಿ ಭವಿಷ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲು ಈ ಆವಿಷ್ಕಾರ ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:08 pm, Fri, 17 July 26

Source link

ಬಾಲಿವುಡ್‌ನ ಮುಖವಾಡ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್: ಬಿಟೌನ್ ಮಂದಿಗೆ ಬರೀ ಅಸೂಯೆ – Kannada News | Rakul Preet Singh Slams Bollywood Insecurity and praises Telugu Industry Supportive Culture

ಚಿತ್ರರಂಗದಲ್ಲಿ ಸದಾ ಮುನ್ನೆಲೆಗೆ ಬರುವ ‘ಬಾಲಿವುಡ್ ವರ್ಸಸ್ ದಕ್ಷಿಣ ಭಾರತದ ಚಿತ್ರರಂಗ’ ಎಂಬ ಚರ್ಚೆಗೆ ಈಗ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಹೊಸ ಕಿಡಿ ಹೊತ್ತಿಸಿದ್ದಾರೆ. ಮುಂಬೈನ ಹಿಂದಿ ಚಿತ್ರರಂಗದಲ್ಲಿರುವ ಅಸೂಯೆ ಮತ್ತು ನೆಗೆಟಿವ್ ಪಿಆರ್ (Negative PR) ತಂತ್ರಗಳ ವಿರುದ್ಧ ಕಿಡಿಕಾರಿರುವ ರಕುಲ್, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ನಂತರ ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಬೆಳೆದ ರಕುಲ್ ಪ್ರೀತ್ ಸಿಂಗ್, 2014ರಲ್ಲಿ ‘ಯಾರಿಯಾ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಮತ್ತು ಟಾಲಿವುಡ್ (Telugu Film Industry) ನಡುವಿನ ಕೆಲಸದ ಸಂಸ್ಕೃತಿಯ ವ್ಯತ್ಯಾಸಗಳನ್ನು ಬಹಿರಂಗಪಡಿಸಿದ್ದಾರೆ.

ಸೌತ್‌ನಲ್ಲಿ ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಾರೆ:

ತೆಲುಗು ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ರಕುಲ್, ‘ಟಾಲಿವುಡ್‌ನಲ್ಲಿ ತೀವ್ರ ಪೈಪೋಟಿ ಇದ್ದಾಗಲೂ ಚಿತ್ರನಿರ್ಮಾಪಕರು ಮತ್ತು ಕಲಾವಿದರು ಪರಸ್ಪರ ಬೆಂಬಲಿಸುತ್ತಾರೆ. ಒಬ್ಬರ ಸಿನಿಮಾದ ಟ್ರೇಲರ್ ಅನ್ನು ಮತ್ತೊಬ್ಬರು ಪ್ರಮೋಟ್ ಮಾಡುತ್ತಾರೆ. ಪ್ರಚಾರದ ಈವೆಂಟ್‌ಗಳಿಗೆ ಹಾಜರಾಗುತ್ತಾರೆ. ಸಿನಿಮಾ ಯಶಸ್ವಿಯಾದಾಗ ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಾರೆ. ಈ ರೀತಿಯ ಆರೋಗ್ಯಕರ ವಾತಾವರಣ ತೆಲುಗು ಇಂಡಸ್ಟ್ರಿಯಲ್ಲಿದೆ’ ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಕಾಲೆಳೆಯುವ ತಂತ್ರ, ಅಸೂಯೆ ಹೆಚ್ಚು:

ಇದೇ ವೇಳೆ ಬಾಲಿವುಡ್‌ನಲ್ಲಿರುವ ನೆಗೆಟಿವ್ ಧೋರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ರಕುಲ್ ಪ್ರೀತ್ ಸಿಂಗ್ ಅವರು, ‘ಮುಂಬೈನಲ್ಲಿ ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಬೆಂಬಲಿಸುವುದಿಲ್ಲ. ಇದಕ್ಕೆ ಅಲ್ಲಿರುವ ಅಭದ್ರತೆ ಮತ್ತು ಅಸೂಯೆಯೇ ಕಾರಣ. ಒಬ್ಬರ ಚಿತ್ರವನ್ನು ಸೋಲಿಸಲು ಮತ್ತೊಬ್ಬರ ವಿರುದ್ಧ ನೆಗೆಟಿವ್ ಪಿಆರ್ ಮಾಡಿಸುವುದು ಇಲ್ಲಿ ಕಾಮನ್ ಆಗಿದೆ. ಬಾಲಿವುಡ್ ಕೂಡ ಸೌತ್ ಇಂಡಸ್ಟ್ರಿಯಂತೆ ನೆಗೆಟಿವ್ ಪಿಆರ್ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ನಮ್ಮ ಭಾರತೀಯ ಚಿತ್ರರಂಗ ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಲಿದೆ’ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ವಾಟ್ಸಪ್ ಮೂಲಕ ದೋಖಾ: ಎಚ್ಚರಿಕೆ ನೀಡಿದ ನಟಿ

ರಕುಲ್ ಮುಂಬರುವ ಸಿನಿಮಾಗಳು:

ಇತ್ತೀಚೆಗಷ್ಟೇ ಆಯುಷ್ಮಾನ್ ಖುರಾನಾ, ವಾಮಿಕಾ ಗಬ್ಬಿ ಮತ್ತು ಸಾರಾ ಅಲಿ ಖಾನ್ ನಟನೆಯ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಕುಲ್ ಪ್ರೀತ್ ಸಿಂಗ್, ಮುಂದಿನ ದಿನಗಳಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಪೌರಾಣಿಕ ಚಿತ್ರದಲ್ಲಿ ಅವರು ‘ಶೂರ್ಪನಖಿ’ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:12 pm, Fri, 17 July 26

Source link

Karnataka Weather Update: ಸತತ ಎರಡನೇ ದಿನವೂ ಬೆಂಗಳೂರಲ್ಲಿ ವರ್ಷಧಾರೆ, ರಾಜ್ಯದ ಹಲವೆಡೆ ಕೆಲ ದಿನ ಮಳೆ – Kannada News | Weather Update: Bengaluru Witnesses Rain for Second Consecutive Day; More Showers Expected Across Karnataka for Two Days

ಬೆಂಗಳೂರಲ್ಲಿ ಮಳೆImage Credit source: Manjunath Naglikar X Account

ಬೆಂಗಳೂರು, ಜುಲೈ 17: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ (Bengaluru) ಸತತ ಎರಡನೇ ದಿನವೂ ಮಳೆಯಾಗಿದ್ದು (Rain), ಹಲವು ಪ್ರದೇಶಗಳಲ್ಲಿ ಸಾಧಾರಣ ಮತ್ತು ತುಂತುರು ವರ್ಷಧಾರೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಯಶವಂತಪುರ ವಸಂತನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ , ಕೆ.ಆರ್. ಮಾರ್ಕೆಟ್‌ ಸೇರಿದಂತೆ ಹಲವೆಡೆ ವರುಣನ ಆಗಮನವಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು ತೀವ್ರ ಪರದಾಟ ನಡೆಸಿದ್ದಾರೆ.

ಇನ್ನೆರಡು ದಿನ ಮಳೆ

ಈ ನಡುವೆ ಕರ್ನಾಟಕದ ಹಲವೆಡೆ ಇನ್ನೂ ಎರಡು ದಿನಗಳ ಕಾಲ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 18 ಮತ್ತು 19ರಂದು, ದಕ್ಷಿಣ ಒಳನಾಡು ಭಾಗದಲ್ಲಿ ಇಂದು ಮತ್ತು ನಾಳೆ (ಜುಲೈ 18) ಒಂದೆರಡು ಪ್ರದೇಶಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್​​ ಘೋಷಿಸಿರುವುದಾಗಿ ತಿಳಿಸಿದೆ. ಧಾರವಾಡ, ಗದಗ, ಹಾವೇರಿ, ಬೀದರ್​, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಅಂದಾಜಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಬೆಂಗಳೂರು ಸೇರಿ ಅಕ್ಕ ಪಕ್ಕದ ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಕುಸಿತ; ತುಂಗಭದ್ರೆಯಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು

ಭೂಕುಸಿತದ ಮುನ್ನೆಚ್ಚರಿಕೆ

ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಜುಲೈ, 17, 18ರಂದು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ – Kannada News | Ram Temple donation theft row Ram Mandir trust begins 10 day purification ritual

ಅಯೋಧ್ಯೆ, ಜುಲೈ 17: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ (Ram Mandir) ಸಂಕೀರ್ಣದಿಂದ ಕಾಣಿಕೆ ಕಳ್ಳತನ ನಡೆದಿದೆ. ಈ ಘಟನೆಗೆ ರಾಮ ಭಕ್ತರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪಾವಿತ್ರ್ಯ ಮತ್ತು ಘನತೆಯನ್ನು ಪುನಃಸ್ಥಾಪಿಸಲು 10 ದಿನಗಳ ವಿಶೇಷ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ಆಚರಣೆಯನ್ನು ಪ್ರಾರಂಭಿಸಿದೆ. ದೇವಾಲಯದ ಗರ್ಭಗುಡಿ, ಗೋಡೆಗಳು ಮತ್ತು ದೇವಾಲಯದ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವ ಈ ವಿಶೇಷ ಆಚರಣೆಯಲ್ಲಿ ಒಟ್ಟು 70 ವೈದಿಕ ಆಚಾರ್ಯರು ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನದ ಘಟನೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮತ್ತು ಭಗವಂತನಲ್ಲಿ ಕ್ಷಮೆ ಯಾಚಿಸಲು ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ಅವರ ಸೂಚನೆಯಂತೆ ಬುಧವಾರದಿಂದ ಈ ಶುದ್ಧೀಕರಣ ವಿಧಿವಿಧಾನಗಳು ಆರಂಭವಾಗಿದ್ದು, ಅಯೋಧ್ಯೆಯ ವಿವಿಧ ಗುರುಕುಲಗಳ ಮೂಲಕ ಪ್ರತಿದಿನ ‘ವಿಷ್ಣು ಸಹಸ್ರನಾಮ ಸ್ತೋತ್ರ’ ಪಠಣವನ್ನು ನಡೆಸಲಾಗುತ್ತಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಭಗವಾನ್ ವಿಷ್ಣುವಿನ 1,000 ವಿಭಿನ್ನ ನಾಮಗಳನ್ನು ಜಪಿಸುವ ಈ ಆಚರಣೆಯು ಸಕಾರಾತ್ಮಕತೆ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ದೇಣಿಗೆ ವಿವಾದ: ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್

“ಶ್ರೀ ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಕಾಣಿಕೆ ಕಳ್ಳತನವಾದ ಘಟನೆಯ ನಂತರ, ಮಂದಿರದ ಪವಿತ್ರತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ಟ್ರಸ್ಟ್ ವತಿಯಿಂದ ದೇವಾಲಯದ ಆವರಣ ಮತ್ತು ವಿವಿಧ ಗುರುಕುಲಗಳಲ್ಲಿ 10 ದಿನಗಳ ವಿಶೇಷ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ವಿಧಿಯನ್ನು ಆರಂಭಿಸಲಾಗಿದೆ” ಎಂದು ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ. ಪ್ರತಿದಿನ ಕನಿಷ್ಠ 251 ಬಾರಿ ವಿಷ್ಣು ಸಹಸ್ರನಾಮ ಸ್ತೋತ್ರದ ಪಠಣ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.

ದೇವಾಲಯದ ಶುದ್ಧೀಕರಣ ಹೇಗೆ?:

ವೇದ ಪಠಣ, ರುದ್ರಾಭಿಷೇಕ, ಹೋಮ, ಹವನ, ರಾಮಾರ್ಚನೆ ಮತ್ತು ಇತರ ಧಾರ್ಮಿಕ ಆಚರಣೆಗಳ ಮೂಲಕ ದೇವಾಲಯ ಸಂಕೀರ್ಣವನ್ನು ಶುದ್ಧೀಕರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ದೇವಾಲಯದ ಪಾವಿತ್ರ್ಯತೆ ಮತ್ತು ಧಾರ್ಮಿಕ ಘನತೆಯನ್ನು ಕಾಪಾಡಿಕೊಳ್ಳಲು ಕಳ್ಳತನ, ಅಪವಿತ್ರಗೊಳಿಸುವಿಕೆ ಅಥವಾ ದೇವಾಲಯದೊಳಗೆ ಯಾವುದೇ ಇತರ ಅನುಚಿತ ಘಟನೆಯ ನಂತರ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ಆಚರಣೆಗಳು ಅಗತ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಲ್ಲಿಸಲಿದೆ ಎಸ್​ಐಟಿ

ಎಸ್‌ಐಟಿ ತನಿಖೆ:

ಜೂನ್ 13ರಂದು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಯಿತು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ರಾಮ ಮಂದಿರದ ದೇಣಿಗೆ ಎಣಿಕೆಗೆ ಸಂಬಂಧಿಸಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:02 pm, Fri, 17 July 26

Source link

Tech Tips: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ? – Kannada News | Phone Charging after 100 percent where does electricity go smartphone battery tech tips

ಸ್ಮಾರ್ಟ್‌ಫೋನ್ (Smartphone) ಅನ್ನು ಚಾರ್ಜ್‌ಗೆ ಹಾಕಿದಾಗ 100% ಆದ ಕೂಡಲೇ ಚಾರ್ಜಿಂಗ್ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಬಹುತೇಕ ಜನರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅದರ ಹಿಂದೆ ಒಂದು ವಿಶೇಷ ತಂತ್ರಜ್ಞಾನ ಕೆಲಸ ಮಾಡುತ್ತದೆ. ಹಲವರು ‘‘100% ಆದ ಮೇಲೂ ಚಾರ್ಜರ್ ಕನೆಕ್ಟ್ ಇದ್ದರೆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?’’ ಎಂಬ ಪ್ರಶ್ನೆ ಕೇಳುತ್ತಾರೆ. ಇದರ ಉತ್ತರ ಫೋನ್‌ನ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಅಡಗಿದೆ.

ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಐಯಾನ್ ಅಥವಾ ಲಿಥಿಯಂ-ಪಾಲಿಮರ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಈ ಬ್ಯಾಟರಿಗಳಲ್ಲಿ ಸುರಕ್ಷತೆಗಾಗಿ ವಿಶೇಷ ಚಾರ್ಜಿಂಗ್ ಕಂಟ್ರೋಲರ್ ಅಳವಡಿಸಲಾಗಿರುತ್ತದೆ. ಬ್ಯಾಟರಿ ಸುಮಾರು 80% ತಲುಪುವವರೆಗೆ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ. ನಂತರ ಬ್ಯಾಟರಿಯ ಮೇಲೆ ಒತ್ತಡ ಕಡಿಮೆ ಮಾಡಲು ಚಾರ್ಜಿಂಗ್ ವೇಗವನ್ನು ನಿಧಾನಗೊಳಿಸಲಾಗುತ್ತದೆ. ಇದನ್ನು ‘‘ಕಾನ್ಸ್ಟಂಟ್ ವೋಲ್ಟೇಜ್’’ ಹಂತ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಬ್ಯಾಟರಿಗೆ ಹೋಗುವ ಕರೆಂಟ್ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಬ್ಯಾಟರಿ ಸುರಕ್ಷಿತವಾಗಿ 100% ತಲುಪುತ್ತದೆ.

ಅನೇಕರು 100% ಆದ ನಂತರವೂ ಚಾರ್ಜರ್ ವಿದ್ಯುತ್ ಅನ್ನು ಬ್ಯಾಟರಿಯೊಳಗೆ ತಳ್ಳುತ್ತಲೇ ಇರುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ಸುಳ್ಳು. ಫೋನ್‌ನಲ್ಲಿರುವ ಚಾರ್ಜಿಂಗ್ ಸರ್ಕ್ಯೂಟ್ ಬ್ಯಾಟರಿ ಪೂರ್ಣ ಚಾರ್ಜ್ ಆದ ಬಳಿಕ ಮುಖ್ಯ ಚಾರ್ಜಿಂಗ್ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಅಂದರೆ ಚಾರ್ಜರ್‌ನಿಂದ ಬರುತ್ತಿರುವ ವಿದ್ಯುತ್ ನೇರವಾಗಿ ಬ್ಯಾಟರಿಗೆ ನಿರಂತರವಾಗಿ ಹರಿಯುವುದಿಲ್ಲ.

ಆದರೆ ಫೋನ್ ಆನ್ ಆಗಿರುವವರೆಗೆ ಅದು ಸ್ವಲ್ಪ ಪ್ರಮಾಣದ ವಿದ್ಯುತ್ ಬಳಸುತ್ತಲೇ ಇರುತ್ತದೆ. ಉದಾಹರಣೆಗೆ ನೆಟ್‌ವರ್ಕ್ ಸಂಪರ್ಕ, ವಾಟ್ಸ್ಆಪ್ ಸಂದೇಶಗಳು, ಬ್ಯಾಕ್​ಗ್ರೌಂಡ್ ಆ್ಯಪ್‌ಗಳು, ಅಲಾರಂ ಹಾಗೂ ಇತರೆ ಸೇವೆಗಳು ಬ್ಯಾಟರಿಯಿಂದ ಶಕ್ತಿಯನ್ನು ಬಳಸುತ್ತವೆ. ಇದರಿಂದ ಬ್ಯಾಟರಿ 100% ರಿಂದ 99% ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು. ಆಗ ಫೋನ್‌ನ ಚಾರ್ಜಿಂಗ್ ವ್ಯವಸ್ಥೆ ಮತ್ತೆ ಅಲ್ಪ ಪ್ರಮಾಣದ ವಿದ್ಯುತ್ ನೀಡುವ ಮೂಲಕ ಬ್ಯಾಟರಿಯನ್ನು 100% ಹಂತದಲ್ಲೇ ಕಾಯ್ದುಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ‘‘ಟ್ರಿಕಲ್ ಚಾರ್ಜಿಂಗ್’’ ಅಥವಾ ‘‘ಟಾಪ್-ಅಪ್ ಚಾರ್ಜಿಂಗ್’’ ಎಂದು ಕರೆಯಲಾಗುತ್ತದೆ.

Tech Tips: ಪಾರ್ಟ್ನರ್ ಜೊತೆ ಖಾಸಗಿ ಸಮಯ ಕಳೆಯುವಾಗ ಈ ಫೋನ್ ಸೆಟ್ಟಿಂಗ್ಸ್ ತಪ್ಪದೇ ಆಫ್ ಮಾಡಿ

ಇದಕ್ಕಾಗಿಯೇ ಕೆಲವೊಮ್ಮೆ ಫೋನ್ 100% ಎಂದು ತೋರಿಸಿದರೂ ಚಾರ್ಜಿಂಗ್ ಚಿಹ್ನೆ ಇನ್ನೂ ಕಾಣಿಸಬಹುದು. ವಾಸ್ತವದಲ್ಲಿ ಅದು ಬ್ಯಾಟರಿಯನ್ನು ಅತಿಯಾಗಿ ಚಾರ್ಜ್ ಮಾಡುತ್ತಿಲ್ಲ; ಬದಲಾಗಿ ಸುರಕ್ಷಿತ ಮಟ್ಟದಲ್ಲಿ ನಿರ್ವಹಿಸುತ್ತಿರುತ್ತದೆ. ಆಧುನಿಕ ಫೋನ್‌ಗಳಲ್ಲಿ ಓವರ್‌ಚಾರ್ಜ್ ರಕ್ಷಣಾ ವ್ಯವಸ್ಥೆ ಇರುವುದರಿಂದ ಬ್ಯಾಟರಿಗೆ ಹಾನಿಯಾಗುವ ಸಾಧ್ಯತೆ ಬಹಳ ಕಡಿಮೆ.

ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಫೋನ್ ತೋರಿಸುವ 100% ಅಂಕಿ ಅಕ್ಷರಶಃ ಬ್ಯಾಟರಿಯ ನಿಜವಾದ 100% ಸಾಮರ್ಥ್ಯವನ್ನು ಸೂಚಿಸುವುದಿಲ್ಲ. ಬ್ಯಾಟರಿಯ ಆಯುಷ್ಯ ಹೆಚ್ಚಿಸಲು ಕಂಪನಿಗಳು ಸ್ವಲ್ಪ ಸುರಕ್ಷತಾ ಮಿತಿಯನ್ನು ಇಟ್ಟುಕೊಳ್ಳುತ್ತವೆ. ಅಂದರೆ ಫೋನ್ 100% ಎಂದು ತೋರಿಸಿದರೂ ಬ್ಯಾಟರಿಯ ನಿಜವಾದ ಗರಿಷ್ಠ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸದೇ ಇರಬಹುದು. ಇದರಿಂದ ಬ್ಯಾಟರಿಯ ಮೇಲೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಅದರ ಜೀವಿತಾವಧಿ ಹೆಚ್ಚುತ್ತದೆ.

ಬ್ಯಾಟರಿಯ ದೀರ್ಘಾವಧಿ ಆರೋಗ್ಯಕ್ಕಾಗಿ ಕೆಲವು ತಜ್ಞರು ಬ್ಯಾಟರಿಯನ್ನು ಯಾವಾಗಲೂ 20% ರಿಂದ 80% ನಡುವಿನ ಮಟ್ಟದಲ್ಲಿ ಇಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ನಿರಂತರವಾಗಿ 100% ಮಟ್ಟದಲ್ಲಿ ಇರಿಸುವುದು ಬ್ಯಾಟರಿಗೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಆದರೂ ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸ್ಮಾರ್ಟ್ ಚಾರ್ಜಿಂಗ್ ತಂತ್ರಜ್ಞಾನದಿಂದ ರಾತ್ರಿ ಪೂರ್ತಿ ಚಾರ್ಜ್‌ಗೆ ಇಟ್ಟರೂ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ.

ಒಟ್ಟಾರೆ ಹೇಳುವುದಾದರೆ, ಫೋನ್ 100% ತಲುಪಿದ ಬಳಿಕ ಚಾರ್ಜರ್‌ನ ವಿದ್ಯುತ್ ವ್ಯರ್ಥವಾಗುವುದಿಲ್ಲ ಮತ್ತು ಬ್ಯಾಟರಿಯೊಳಗೆ ಅನಿಯಂತ್ರಿತವಾಗಿ ಹರಿಯುವುದೂ ಇಲ್ಲ. ಫೋನ್‌ನಲ್ಲಿರುವ ಸ್ಮಾರ್ಟ್ ಚಾರ್ಜಿಂಗ್ ಕಂಟ್ರೋಲರ್ ಅಗತ್ಯವಿದ್ದಾಗ ಮಾತ್ರ ಅಲ್ಪ ಪ್ರಮಾಣದ ವಿದ್ಯುತ್ ಬಳಸಿ ಬ್ಯಾಟರಿಯನ್ನು ಸುರಕ್ಷಿತವಾಗಿ ಪೂರ್ಣ ಚಾರ್ಜ್ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ. ಇದೇ ಕಾರಣಕ್ಕೆ ಇಂದಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸುರಕ್ಷಿತವಾಗಿದ್ದು, ಓವರ್‌ಚಾರ್ಜಿಂಗ್ ಸಮಸ್ಯೆಯನ್ನು ಬಹುತೇಕ ನಿವಾರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version