ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ – Kannada News | Samay Raina Indias Got Latent 2 beats Ranveer Singh Dhurandhar Ormax OTT Rankings 2026

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಭಾರಿ ನಿರೀಕ್ಷೆಯೊಂದಿಗೆ ಒಟಿಟಿಗೆ ಲಗ್ಗೆ ಇಟ್ಟಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ನಟನೆಯ ಸೂಪರ್ ಹಿಟ್ ಆ್ಯಕ್ಷನ್ ಸಿನಿಮಾ ‘ಧುರಂಧರ್’ ಒಟಿಟಿ ಚಾರ್ಟ್‌ನಲ್ಲೂ ಅಧಿಪತ್ಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಹೊರಬಿದ್ದಿರುವ ವರದಿಯೊಂದು ಎಲ್ಲರ ಲೆಕ್ಕಾಚಾರವನ್ನೂ ಉಲ್ಟಾ ಮಾಡಿದೆ. ಖ್ಯಾತ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಸಮಯ್ ರೈನಾ (Samay Raina) ಅವರ ವಿವಾದಾತ್ಮಕ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ (India’s Got Latent 2) ರಿಯಾಲಿಟಿ ಶೋ ‘ಧುರಂಧರ್’ ಚಿತ್ರವನ್ನು ಧೂಳೀಪಟ ಮಾಡಿ ಈ ವರ್ಷದ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಒಟಿಟಿ ಕಂಟೆಂಟ್ ಆಗಿ ಹೊರಹೊಮ್ಮಿದೆ.

ಪ್ರಸಿದ್ಧ ಮಾಧ್ಯಮ ಸಲಹಾ ಮತ್ತು ಪ್ರೇಕ್ಷಕರ ಮಾಪನ ಸಂಸ್ಥೆಯಾದ ‘ಆರ್ಮ್ಯಾಕ್ಸ್ ಮೀಡಿಯಾ’ ತನ್ನ ಅರ್ಧವಾರ್ಷಿಕ ಒಟಿಟಿ ವರದಿಯನ್ನು ಬಿಡುಗಡೆ ಮಾಡಿದೆ. ‘ದಿ ಇಂಡಿಯಾ ಒಟಿಟಿ ವಾಚ್‌ಲಿಸ್ಟ್: ಆನ್ ಆರ್ಮ್ಯಾಕ್ಸ್ ಸ್ಟ್ರೀಮ್‌ವ್ಯೂ ರಿಪೋರ್ಟ್ (ಜನವರಿ-ಜೂನ್ 2026)’ ಹೆಸರಿನ ಈ ವರದಿಯು, ಈ ವರ್ಷದ ಮೊದಲ ಆರು ತಿಂಗಳಲ್ಲಿ ಭಾರತೀಯ ಪ್ರೇಕ್ಷಕರು ಒಟಿಟಿ ವೇದಿಕೆಗಳಲ್ಲಿ ಯಾವೆಲ್ಲಾ ಸಿನಿಮಾಗಳು, ವೆಬ್ ಸರಣಿಗಳು ಮತ್ತು ರಿಯಾಲಿಟಿ ಶೋಗಳನ್ನು ಮುಗಿಬಿದ್ದು ನೋಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.

ಸಮಯ್ ರೈನಾ ಶೋಗೆ 38.5 ಮಿಲಿಯನ್ ವೀಕ್ಷಣೆ!

ಕಳೆದ ತಿಂಗಳಷ್ಟೇ ಪ್ರಸಾರ ಆರಂಭಿಸಿದ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ ಶೋ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಜನಪ್ರಿಯತೆ ಗಳಿಸಿದೆ. ಈ ಶೋ ಬರೋಬ್ಬರಿ 38.5 ಮಿಲಿಯನ್ (3.85 ಕೋಟಿ) ವೀಕ್ಷಕರನ್ನು ಸೆಳೆಯುವ ಮೂಲಕ 2026ರ ಅತ್ಯಂತ ಯಶಸ್ವಿ ಒಟಿಟಿ ಶೋ ಆಗಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದು ನಿರ್ದೇಶಕ ಆದಿತ್ಯ ಧರ್ ಅವರ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ‘ಧುರಂಧರ್’ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿರುವುದು ವಿಶೇಷ.

‘ಧುರಂಧರ್’ ಚಿತ್ರಕ್ಕೆ ಎಷ್ಟನೇ ಸ್ಥಾನ?

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ್ದ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ 35.2 ಮಿಲಿಯನ್ ವೀಕ್ಷಣೆಗಳೊಂದಿಗೆ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಇದರ ಬೆನ್ನಲ್ಲೇ ಬಿಡುಗಡೆಯಾದ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ 27.8 ಮಿಲಿಯನ್ ವೀಕ್ಷಣೆಗಳೊಂದಿಗೆ 6ನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ನ್ಯಾಯಾಲಯದ ದಾರಿ ತಪ್ಪಿಸಬೇಡಿ; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

ನಸೀರುದ್ದೀನ್ ಶಾ ಮತ್ತು ಜಿಮ್ ಸರ್ಭ್ ನಟನೆಯ ‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ವೆಬ್ ಸರಣಿಯು 17.8 ಮಿಲಿಯನ್ ವೀಕ್ಷಣೆಗಳೊಂದಿಗೆ 7ನೇ ಸ್ಥಾನದಲ್ಲಿದೆ. ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದ ಪ್ರಭಾಸ್ ನಟನೆಯ ಹಾರರ್-ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಒಟಿಟಿಯಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ. ಇದು ಒಟ್ಟು 17.5 ಮಿಲಿಯನ್ ವೀಕ್ಷಣೆಯೊಂದಿಗೆ 9ನೇ ಸ್ಥಾನ ಪಡೆದುಕೊಂಡಿದೆ. ದಿವ್ಯಾ ದತ್ತಾ ಮತ್ತು ಸಂಜಯ್ ಮಿಶ್ರಾ ನಟನೆಯ ‘ಜಿಯೋಹಾಟ್‌ಸ್ಟಾರ್’ನ ‘ಚಿರಯ್ಯಾ’ ಚಿತ್ರ 16.3 ಮಿಲಿಯನ್ ವೀಕ್ಷಣೆಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೋರ್ಡಾನ್‌ ವಾಯುನೆಲೆಯಲ್ಲಿ ಇರಾನ್​ನಿಂದ ಅಮೆರಿಕದ ಹಲವು ಯುದ್ಧ ವಿಮಾನಗಳು ಧ್ವಂಸ – Kannada News | Iran claims it Destroyed US fighter jets in Jordan

ಟೆಹ್ರಾನ್, ಜುಲೈ 17: ಜೋರ್ಡಾನ್‌ನಲ್ಲಿ ಅಮೆರಿಕದ (United States) ಯುದ್ಧ ವಿಮಾನಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಪ್ರತಿಪಾದಿಸಿದೆ. ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಮಧ್ಯೆ, ಜೋರ್ಡಾನ್‌ನಲ್ಲಿ ಬೀಡುಬಿಟ್ಟಿರುವ ಅಮೆರಿಕದ ಯುದ್ಧ ವಿಮಾನಗಳು ಮತ್ತು ಇಂಧನ ಮರುಪೂರಣ ವಿಮಾನಗಳ ಮೇಲೆ ಭಾರಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ (Iran) ಅಧಿಕೃತವಾಗಿ ಘೋಷಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಜೋರ್ಡಾನ್‌ನ ಅಲ್-ಅಜ್ರಾಕ್ ವಾಯುನೆಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಇರಾನ್ ಸೇನೆಯ ಹೇಳಿದ್ದೇನು?:

ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಅಸಂಖ್ಯಾತ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು ಮತ್ತು ಇಂಧನ ತುಂಬಿಸುವ ಟ್ಯಾಂಕರ್ ವಿಮಾನಗಳು ಸಂಪೂರ್ಣವಾಗಿ ನಾಶವಾಗಿವೆ. ಇನ್ನೂ ಹಲವು ವಿಮಾನಗಳಿಗೆ ತೀವ್ರ ಹಾನಿಯಾಗಿದೆ ಎಂದು ಇರಾನ್ ಹೇಳಿಕೊಂಡಿದೆ.

ಇದನ್ನೂ ಓದಿ: ‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್!

ಇರಾನ್‌ನ ಒಳಗಿನ ಸೇತುವೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ರಾತ್ರಿ ಅವಧಿಯ ಬಾಂಬ್ ದಾಳಿಗೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಿರುವುದಾಗಿ ಇರಾನ್ ತಿಳಿಸಿದೆ. ಇದೇ ವೇಳೆ, ಜೋರ್ಡಾನ್‌ನಲ್ಲಿರುವ ಅಮೆರಿಕದ ವಿರೋಧಿ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಳ್ಳುವಂತೆ ಇರಾನ್ ಅಲ್ಲಿನ ಸ್ಥಳೀಯ ಜನರಿಗೂ ಕರೆ ನೀಡಿದೆ.

ಆಸ್ಪತ್ರೆಯ ಮೇಲಿನ ದಾಳಿಗೆ ಪ್ರತೀಕಾರ:

ಖುಜೆಸ್ತಾನ್ ಪ್ರಾಂತ್ಯದ ಅಹ್ವಾಜ್‌ನಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ಅಮೆರಿಕದ ರಾತ್ರಿ ಅವಧಿಯ ದಾಳಿಗಳು ಧ್ವಂಸಗೊಳಿಸಿದ್ದು, ಇದಕ್ಕೆ ಪ್ರತಿಕಾರವಾಗಿಯೇ ಈ ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತನ್ನ ಹೇಳಿಕೆಯಲ್ಲಿ ಜೋರ್ಡಾನ್ ದೇಶದ ನಾಗರಿಕರು ತಮ್ಮ ದೇಶದಲ್ಲಿರುವ “ಆಕ್ರಮಣಕಾರಿ ಮತ್ತು ಇಸ್ಲಾಂ ವಿರೋಧಿ ಅಮೆರಿಕನ್ನರ ಹಿತಾಸಕ್ತಿಗಳನ್ನು” ಗುರಿಯಾಗಿಸಿಕೊಂಡು ದಾಳಿ ನಡೆಸಬೇಕು ಎಂದು ಕರೆ ನೀಡಿದೆ.

ಇದನ್ನೂ ಓದಿ: ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಫೆಬ್ರವರಿ 28ರಿಂದ ಯುದ್ಧ ಆರಂಭವಾದಾಗಿನಿಂದ ಇರಾನ್ ಪ್ರಾದೇಶಿಕವಾಗಿರುವ ಹಲವು ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಾ ಬಂದಿದೆ. ಗಲ್ಫ್ ರಾಷ್ಟ್ರಗಳು ಇದನ್ನು ತೀವ್ರವಾಗಿ ಖಂಡಿಸಿವೆ. ಇರಾನ್ ಪ್ರಮುಖವಾಗಿ ಕುವೈತ್, ಬಹ್ರೇನ್ ಮತ್ತು ಕತಾರ್​ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಮೂರೂ ದೇಶಗಳು ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ವರದಿ ಮಾಡಿವೆ. ಇದರೊಂದಿಗೆ ಸಿರಿಯಾದಲ್ಲಿರುವ ಅಮೆರಿಕ ನೆಲೆಯ ಮೇಲೆಯೂ ಇರಾನ್ ದಾಳಿ ಮಾಡಿದೆ ಎಂದು ಹೇಳಿಕೊಂಡಿದೆಯಾದರೂ, ವಾಷಿಂಗ್ಟನ್ ಅಥವಾ ಸಿರಿಯಾ ಸರ್ಕಾರ ಇದನ್ನು ಖಚಿತಪಡಿಸಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:28 pm, Fri, 17 July 26

Source link

ರಾಜಕೀಯವಾಗಿ ನಾವು ಸಿದ್ಧರಿದ್ದೇವೆ: SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ – Kannada News | We Are Politically Prepared: Krishna Byre Gowda Says GBA Elections Will Be Held Immediately After SIR

ದೆಹಲಿ, ಜುಲೈ 17: ‘‘ಸರ್ಕಾರಕ್ಕೆ ಸಮಯ ಕೇಳುವ ಉದ್ದೇಶವಿಲ್ಲ. ನಾವು ಜಿಬಿಎ ಚುನಾವಣೆ ಮಾಡಲಿಕೆ ರಾಜಕೀಯವಾಗಿ ಸಿದ್ಧವಾಗಿದ್ದೇವೆ. ಎಸ್​ಐಆರ್ ನಡೆಯುವಾಗ ಚುನಾವಣೆ ಮಾಡಿದರೆ ಸರಿಯಾಗಿರಲ್ಲ, ಹೀಗಾಗಿ‌‌ ಎಸ್​ಐಆರ್​ ಮುಗಿದ ಬಳಿಕ ಚುನಾವಣೆ ನಡೆಯಲಿದ್ದು, ಇದರಲ್ಲಿ ಯಾವ ರಾಜಕೀಯ ಉದ್ದೆಶ ಇಲ್ಲ’’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಡಿಸೆಂಬರೊಳಗೆ ಜಿಬಿಎ ಎಲೆಕ್ಷನ್​​​ ವಿಚಾರವಾಗಿ ಮಾತನಾಡಿದ ಅವರು, ‘‘ಪ್ರಸ್ತುತ SIR ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದು, ಇದು ಸಂಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಆಗಸ್ಟ್ 8ರ ನಂತರ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ಇನ್ನು, SIR ನಂತರ ಹೊಸ ಮತದಾರರ ಪಟ್ಟಿ ಬರುವುದರಿಂದ, ಹಳೆಯ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಿದರೆ ಸುಮಾರು 2-3 ಲಕ್ಷ ಮತದಾರರ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಹೊಸ ಮತದಾರರ ಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಸುವುದೇ ಸೂಕ್ತ ಎಂದು ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿದೆ. ಸರ್ಕಾರ ಚುನಾವಣೆಗೆ ಸಿದ್ಧವಿದ್ದು, SIR ಪ್ರಕ್ರಿಯೆ ಮುಗಿದ ತಕ್ಷಣವೇ ಚುನಾವಣೆ ನಡೆಸಲಿದೆ’’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ – Kannada News | PM Modi Inaugurates 4 Redeveloped High Tech Railway Stations in Karnataka Under Amrit Bharat Scheme

ನವೀಕೃತಗೊಂಡ ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ
Image Credit source: Narendra Modi X Account

ಬೆಂಗಳೂರು, ಜುಲೈ 17: ಕೇಂದ್ರ ಬಿಜೆಪಿ ಸರ್ಕಾರದ ಅಮೃತ ಭಾರತ್‌ ಯೋಜನೆಯಡಿಯಲ್ಲಿ ನವೀಕೃತಗೊಂಡಿರುವ ಕರ್ನಾಟಕದ ನಾಲ್ಕು ರೈಲು ನಿಲ್ದಾಣಗಳು ಸೇರಿ ದೇಶಾದ್ಯಂತ ಒಟ್ಟು 75 ರೈಲ್ವೇ ಸ್ಟೇಷನ್​​ಗಳನ್ನು ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ನ ಜಲಂಧರ್​ ಕಂಟೋನ್ಮೆಂಟ್​​ ರೈಲು ನಿಲ್ದಾಣದಿಂದ​ ವರ್ಚುವಲ್​​ ಮೂಲಕ ಇಂದು (ಜುಲೈ 17) ಉದ್ಘಾಟಿಸಿದ್ದಾರೆ. ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿ ನಿಲ್ದಾಣಗಳ ಕಟ್ಟದ ವಿನ್ಯಾಸ ಮಾಡಲಾಗಿದ್ದು, ವಿಶ್ವ ದರ್ಜೆಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಇವು ಹೊಂದಿವೆ. ಅಮೃತ ಭಾರತ್‌ ಯೋಜನೆಯಡಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕೊಪ್ಪಳ, ಧಾರವಾಡದ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲ್ವೇ ನಿಲ್ದಾಣಗಳು ಸಹ ನವೀಕೃತಗೊಂಡಿವೆ.

ನವೀಕೃತಗೊಂಡ ಬಾದಾಮಿ ರೈಲ್ವೇ ನಿಲ್ದಾಣದ ವಿಶೇಷತೆ

ಅಮೃತ್ ಭಾರತ ಯೋಜನೆಯಡಿ ಬಾದಾಮಿ ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ ನೀಡಲಾಗಿದ್ದು, 15.10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದೆ. 2 ಫ್ಲಾಟ್​​ಫಾರಂಗಳ ಸಂಖ್ಯೆಯನ್ನು 3ಕ್ಕೆ ಏರಿಸಲಾಗಿದ್ದು, ಟಿಕೆಟ್​​ ಕೌಂಟರ್​​ಗಳ ಸಂಕ್ಯೆಯೂ ಒಂದರಿಂದ ನಾಲ್ಕ್ಕೆ ಹೆಚ್ಚಳಗೊಂಡಿದೆ. ವಿಕಲಚೇತನರಿಗೆ, ದೃಷ್ಟಿಹೀನರಿಗಾಗಿ ಪ್ರತ್ಯೇಕ ಟಿಕೆಟ್ ಕೌಂಟರ್ ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ 200 ಚಮೀ ಹೊಸ ಕಟ್ಟಡ ನಿರ್ಮಿಸಲಾಗಿದ್ದು, 12 ಮೀಟರ್​​ ಅಗಲದ ಮೇಲ್ಸೇತುವೆ, ಮುಂಭಾಗದಲ್ಲಿ ದೀಪಾಲಂಕಾರ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿ ಸೌಲಭ್ಯ, ಕುಡಿಯುವ ನೀರಿನ ಬೂತ್, ದೃಷ್ಟಿಹೀನರಿಗೆ ಸ್ಪರ್ಷಮಾರ್ಗಗಳು, ಕಾಯ್ದಿರಿಸಿದ ಪಾರ್ಕಿಂಗ್, ವಿಶೇಷ ಶೌಚಾಲಯಗಳು, 2 ಪ್ರಯಾಣಿಕರ ಲಿಫ್ಟ್​​ಗಳು, ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಒಳಗೊಂಡಂತೆ 1 ಹವಾನಿಯಂತ್ರಿತ ಕಾಯುವ ಕೊಠಡಿ ಸೇರಿ ಒಟ್ಟು ಐದು ಕಾಯುವ ಕೊಠಡಿಗಳು, ಸೋಲಾರ್ ವ್ಯವಸ್ಥೆ, ವೈಫೈ ಸೌಲಭ್ಯ ಸೇರಿ ಹಲವು ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!

17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣ ನವೀಕರಣ

ಅಳ್ನಾವರ ರೈಲು ನಿಲ್ದಾಣ ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಪ್ರವೇಶ ದ್ವಾರ ಹಾಗೂ ಮುಂಭಾಗದ ವಿನ್ಯಾಸವನ್ನು ಮಾಡಲಾಗಿದೆ. ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸುಸಜ್ಜಿತ ಪಾರ್ಕಿಂಗ್‌ಗಾಗಿ ವಿಶಾಲವಾದ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರಿಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ 200 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ಡಿಜಿಟಲ್ ಟಿಕೆಟ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರಯಾಣಿಕರು ವಿಶ್ರಮಿಸಲು ಹವಾನಿಯಂತ್ರಿತ (AC) ಕಾಯುವ ಕೋಣೆಗಳು, ಮಹಿಳೆಯರಿಗಾಗಿ ಪ್ರತ್ಯೇಕ ಬೇಬಿ-ಫೀಡಿಂಗ್ ಕೊಠಡಿ ಮತ್ತು ಪ್ರತ್ಯೇಕ ಎಕ್ಸಿಕ್ಯೂಟಿವ್ ಲೌಂಜ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್‌ಫಾರ್ಮ್ 1 ಮತ್ತು 2ಕ್ಕೆ ಸುಧಾರಿತ ರೂಫ್ ಶೆಲ್ಟರ್‌ಗಳನ್ನು ಅಳವಡಿಸಲಾಗಿದ್ದು, ನಿಲ್ದಾಣ ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವಚ್ಛ ಹಾಗೂ ಅತ್ಯಾಧುನಿಕ ಶೌಚಾಲಯ ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ.ಹಿರಿಯ ನಾಗರಿಕರು ಮತ್ತು ರೋಗಿಗಳ ಅನುಕೂಲಕ್ಕಾಗಿ 2 ಹೊಸ ಲಿಫ್ಟ್‌, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ದೈಹಿಕ ವಿಕಲಚೇತನರಿಗಾಗಿ ವಿಶೇಷ ರ‍್ಯಾಂಪ್‌ಗಳು ಮತ್ತು ಹೈ-ಸ್ಪೀಡ್ ಉಚಿತ ವೈ-ಫೈ ವ್ಯವಸ್ಥೆಯನ್ನು ಈ ನಿಲ್ದಾಣ ಒಳಗೊಂಡಿದೆ.

ಹೈಟೆಕ್​​ ಸ್ಪರ್ಶ ಕಂಡ ಕೊಪ್ಪಳದ ರೈಲು ನಿಲ್ದಾಣ

21.14 ಕೋಟಿ ವೆಚ್ಚದಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ನವೀಕರಣಗೊಳಿಸಲಾಗಿದ್ದು, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು 1508 ಚದರ ಮೀಟರ್ ವಿಸ್ತೀರ್ಣದ ಜಿ+1 ಹೊಸ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ.ಟಿಕೆಟ್ ಬುಕ್ಕಿಂಗ್ ಕಚೇರಿ, ನಿರೀಕ್ಷಣಾ ಕೊಠಡಿಗಳು, 600 ಚದರ ಮೀಟರ್ ವ್ಯಾಪ್ತಿಯ ಸುತ್ತಾಟ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಶೆಲ್ಟರ್ ನಿರ್ಮಾಣ, 12 ಮೀಟರ್ ಅಗಲದ ಹೊಸ ಕೇಂದ್ರ ಫುಟ್ ಓವರ್ ಬ್ರಿಡ್ಜ್ , ಪ್ರಯಾಣಿಕರ ಓಡಾಟಕ್ಕೆ 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳ ಸೌಲಭ್ಯ, ರೈಲು ನಿಲ್ದಾಣ ಹಾಗೂ ಸುತ್ತಲೂ ಎಲ್‌ಇಡಿ ಆಧಾರಿತ ಬೆಳಕಿನ ವ್ಯವಸ್ಥೆ, ಸುಲಭ್ ಶೌಚಾಲಯ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ, ಹವಾನಿಯಂತ್ರಿತ ಕಾಯುವ ಕೋಣೆ, ಡಿಜಿಟಲ್ ಲಾಕರ್, ಶಿಶು ಆಹಾರ ಕೋಣೆಗಳ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು-ಉತ್ತರಗಳು (FAQ’s)

ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಕರ್ನಾಟಕದ ಯಾವೆಲ್ಲ ನವೀಕೃತ ರೈಲು ನಿಲ್ದಾಣಗಳ ಉದ್ಘಾಟನೆ?

ಉತ್ತರ: ಬಂಟ್ವಾಳ, ಕೊಪ್ಪಳ, ಧಾರವಾಡದ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲು ನಿಲ್ದಾಣಗಳ ಉದ್ಘಾಟನೆ

ಪ್ರಶ್ನೆ: ಎಲ್ಲಿಂದ ವರ್ಚುವಲ್​​ ಮೂಲಕ ನವೀಕೃತ ರೈಲು ನಿಲ್ದಾಣಗಳನ್ನು ಮೋದಿ ಉದ್ಘಾಟಿಸಿದ್ದಾರೆ?

ಉತ್ತರ: ಪಂಜಾಬ್​​ನ ಜಲಂಧರ್​​ ಕ್ಯಾಂಟ್​​ ರೈಲು ನಿಲ್ದಾಣದಿಂದ ವರ್ಚುವಲ್​​ ಮೂಲಕ ಮೋದಿ ಉದ್ಘಾಟನೆ

ಪ್ರಶ್ನೆ: ದೇಶಾದ್ಯಂತ ಒಟ್ಟು ಎಷ್ಟು ನವೀಕೃತ ರೈಲು ನಿಲ್ದಾಣಗಳಿಗೆ ಇಂದು ಮೋದಿ ಚಾಲನೆ?

ಉತ್ತರ: ದೇಶಾದ್ಯಂತ ಒಟ್ಟು 75 ನವೀಕೃತ ರೈಲು ನಿಲ್ದಾಣಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

Source link

ಬೇರ್ಪಡುವ ಮುನ್ನ ಮತ್ತೊಂದು ಇತಿಹಾಸ ಸೃಷ್ಟಿಸಿದ ರೋ-ಕೊ ಜೋಡಿ..! – Kannada News | Virat Kohli and Rohit Sharma Record: Third Indian Duo to Cross 8K Runs, Retirement Looms

ಭಾರತ ತನ್ನ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 1932 ರಲ್ಲಿ ಆಡಿತು. ಅಂದಿನಿಂದ, ಕಳೆದ 94 ವರ್ಷಗಳಲ್ಲಿ ಭಾರತೀಯ ಜೋಡಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಸೇರಿಸಿದ್ದು ಇದು ಮೂರನೇ ಬಾರಿಯಾಗಿದೆ. ಇವರಿಬ್ಬರಿಗೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ 12,400 ರನ್‌ಗಳನ್ನು ಕಲೆಹಾಕಿದ್ದರು. ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಒಟ್ಟಾಗಿ 11,037 ರನ್‌ಗಳನ್ನು ಬಾರಿಸಿದ್ದರು(PC-PTI).

Source link

ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್​ನ್ಯೂಸ್​​! 1.15 ಕೋಟಿ ರೂ ಅನುದಾನ ಘೋಷಣೆ – Kannada News | Good News for Coastal Kambala Organizers: Government Announces 1.15 Crore Grant

ಉಡುಪಿ, ಜುಲೈ 17: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ (Kambala) ಆಚರಣೆ ಕುರಿತು ಪರ-ವಿರೋಧ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ನೀಡಿದೆ. 2025-26ನೇ ಸಾಲಿನ ಕರಾವಳಿಯಲ್ಲಿ ನಡೆಯುವ 23 ಕಂಬಳಗಳಿಗೆ ತಲಾ 5 ಲಕ್ಷ ರೂ ಅಂತೆ ಒಟ್ಟು 1 ಕೋಟಿ 15 ಲಕ್ಷ ರೂ ಅನುದಾನ (Grant) ಘೋಷಣೆ ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಸಂಘಟಕರು ಸ್ವಾಗತಿಸಿದ್ದಾರೆ.

ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದ ಡಾ. ದೇವಿಪ್ರಸಾದ್ ಶೆಟ್ಟಿ

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ‘‘ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸಿಎಂ ಡಿಕೆ ಶಿವಕುಮಾರ್ ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಪ್ರತಿ ಕಂಬಳಕ್ಕೂ 5 ಲಕ್ಷ ರೂ ಅನುದಾನ ಕೊಟ್ಟಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 23 ಕಂಬಳಗಳಿಗೆ ಇದರಿಂದ ಅನುಕೂಲವಾಗಲಿದೆ. ಕಂಬಳ ಆಯೋಜನೆ ದೊಡ್ಡ ಹೊರೆ. ಸಂಪ್ರದಾಯ ಸಂಸ್ಕೃತಿ ತುಳುನಾಡಿನ ಕೀರ್ತಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಇದರಿಂದ ಅನುಕೂಲವಾಗಿದೆ’’ ಎಂದಿದ್ದಾರೆ.

ಇದನ್ನೂ ಓದಿ: ‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಯಾಕೆಂಬ ಕಾರಣ ನೀಡಿದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್!

‘‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದ್ದರು. ಸದಾನಂದ ಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ ಅನುದಾನ ಕೊಟ್ಟಿದ್ದರು. ರಾಜಕೀಯ ಭೇದವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿವೆ. ಇದು ಕಂಬಳಕ್ಕೆ ಸರ್ಕಾರಗಳು ಕೊಟ್ಟ ಗೌರವ. ಮುಂದಿನ ಬಜೆಟ್​ನಲ್ಲಿ ಕಂಬಳಕ್ಕೆ 5 ಕೋಟಿ ರೂ ಅನುದಾನ ಮೀಸಲಿರಿಸುವಂತೆ ಬೇಡಿಕೆ ಇಟ್ಟಿದ್ದಾರೆ.’’

ಮೈಸೂರಿನಲ್ಲಿ ಏಕೆ ಕಂಬಳ ಆಗಬಾರದು? ಡಾ. ದೇವಿಪ್ರಸಾದ್ ಶೆಟ್ಟಿ ಪ್ರಶ್ನೆ

ಇನ್ನು ಮೈಸೂರು ದಸರಾ ಕಂಬಳ ವಿವಾದ ವಿಚಾರವಾಗಿ ಮಾತನಾಡಿದ ಅವರು, ‘‘ಕಂಬಳದಲ್ಲಿ ರಾಜಕೀಯ ಇಲ್ಲ. ರಾಜಕೀಯ ಧರ್ಮ ಮೀರಿ ನಡೆಯುವ ಕ್ರೀಡೆ. ಎಲ್ಲಾ ರಾಜಕೀಯ ಪಕ್ಷದವರು ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಪಕ್ಷದ ಕರಾವಳಿಯ ಶಾಸಕರು ವಿರೋಧ ಮಾಡುವುದು ಸರಿಯಲ್ಲ. ಒಂದು ಪಕ್ಷದ ಪರವಾಗಿ ನಿಲ್ಲುವು ತೆಗೆದುಕೊಂಡಿದ್ದೀರಿ, ಕಂಬಳ ನಿಮಗೆ ಗೌರವ ಕೊಟ್ಟಿದೆ, ನೀವೇನು ಕಂಬಳಕ್ಕೆ ಗೌರವ ತಂದಿಲ್ಲ. ಕಂಬಳದ ಗೌರವವನ್ನು ರಾಜ್ಯಾದ್ಯಂತ ಎತ್ತಿಹಿಡಿರಿ. ಕಂಬಳ ನಮ್ಮ ಜಿಲ್ಲೆಗೆ ಮಾತ್ರ ಸೀಮಿತವೇ, ಮೈಸೂರಿನಲ್ಲಿ ಏಕೆ ಕಂಬಳ ಆಗಬಾರದು’’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; ಎಫ್‌ಐಆರ್ ದಾಖಲು

‘‘ಕಂಬಳದ ಬಗ್ಗೆ ಮೈಸೂರಿನಲ್ಲಿ ಅನಗತ್ಯ ಅಪಪ್ರಚಾರವಾಗುತ್ತಿದೆ. ಕೆಳ ವರ್ಗದವರ ದಬ್ಬಾಳಿಕೆ ಎಂದು ಬಿಂಬಿಸಲಾಗುತ್ತಿದೆ. ಹಿಂದುಳಿದ ವರ್ಗದ ಕೋಟೆ ಚೆನ್ನಯ್ಯರ ಹೆಸರಲ್ಲಿ, ಸೂರ್ಯ ಚಂದ್ರರ ಹೆಸರಲ್ಲಿ, ಕಾಂತ ಬಾರೆ ಬೂದ ಬಾರೆ ಹೆಸರಲ್ಲಿ ಕಂಬಳ ಮಾಡುತ್ತೇವೆ. ಇದು ದೇಶಕ್ಕೆ ಮಾದರಿ ವ್ಯವಸ್ಥೆ. ನಮ್ಮ ಕಂಬಳವನ್ನು ವೈಭವೀಕರಿಸುವ ಕೆಲಸವನ್ನು ಕರಾವಳಿಯ ಜನಪ್ರತಿನಿಧಿಗಳು ಧೈರ್ಯದಿಂದ ಮಾಡಿ. ಆದ್ದರಿಂದ ಕರಾವಳಿಯ ಜನಪ್ರತಿನಿಧಿಗಳು ಯಾವುದೇ ಪಕ್ಷದ ಕೈಗೊಂಬೆಗಳಾಗದೆ ಕಂಬಳದ ವೈಭವವನ್ನು ರಾಜ್ಯಾದ್ಯಂತ ಎತ್ತಿಹಿಡಿಯಲು ಧೈರ್ಯದಿಂದ ಕೆಲಸ ಮಾಡಬೇಕು’’ ಎಂದು ಅವರು ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:52 pm, Fri, 17 July 26

Source link

ಪ್ರತ್ಯೇಕ ರಸ್ತೆ ಅಪಘಾತ: ನವ ವಿವಾಹಿತೆ ಸೇರಿ ಮೂವರು ದಾರುಣ ಸಾವು; ಹಲವರಿಗೆ ಗಂಭೀರ ಗಾಯ – Kannada News | Tragic Accidents in Karnataka: Newlywed Woman Among Three Killed in Separate Road Mishaps

ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿImage Credit source: Tv9 Kannada

ತುಮಕೂರು/ಮೈಸೂರು, ಜುಲೈ 17: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಟ್ರ್ಯಾಕ್ಟರ್​​ನಲ್ಲಿದ್ದ ಛತ್ತೀಸ್‌ಗಢದ ಬಾರಿ ಲಾಲ್(30) ಮತ್ತು ಗೋಲು(35) ಮೃತ ದುರ್ದೈವಿಗಳಾಗಿದ್ದಾರೆ. ಬೆಂಗಳೂರು ಕಡೆ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಬೆಳಿಗ್ಗಿನ ಜಾವ 3 ಗಂಟೆ ಸುಮಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್​​ನಲ್ಲಿ ಕೂಲಿಗೆಂದು ಬಂದಿದ್ದ ಹಲವರು ಇದ್ದರು ಎನ್ನಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ನವವಿವಾಹಿತೆ ದುರ್ಮರಣ

ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ನವವಿವಾಹಿತೆ ದುರ್ಮರಣ ಹೊಂದಿರುವ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ. ಮೇಘನಾ(20) ಮೃತ ದುರ್ದೈವಿಯಾಗಿದ್ದು, 15 ದಿನಗಳ ಹಿಂದಷ್ಟೇ ಈಕೆಯನ್ನು ಮೂಕನಹುಂಡಿಯಿಂದ ಬಿದರಗೂಡಿಗೆ ವಿವಾಹ ಮಅಡಿಕೊಡಲಾಗಿತ್ತು. ಹೆಲ್ಮೆಟ್ ಧರಿಸದಿದ್ದರಿಂದ ಗಂಭೀರ ಗಾಯವಾಗಿ ಮೇಘನಾ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಘಟನೆ ಬಗ್ಗೆ ಕುವೆಂಪುನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ!

KSRTC ಬಸ್​​ ಎಕ್ಸೆಲ್​​ ಕಟ್​​ ಆಗಿ ಅಪಘಾತ

ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ ನುಗ್ಗಿರುವ KSRTC ಬಸ್​​

ಮುಂಭಾಗದ ಆ್ಯಕ್ಸೆಲ್​​ ಕಟ್​​ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ KSRTC ಬಸ್​​ ನುಗ್ಗಿರುವ ಘಟನೆ ಬಾಗಲಕೋಟೆ ಸಮೀಪದ ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯ ಕುಳಗೇರಿ ಕ್ರಾಸ್ ಮತ್ತು ಗೋವನಕೊಪ್ಪ ಗ್ರಾಮದ ಮಧ್ಯೆ ನಡೆದಿದೆ. ಅಪಘಾತದಲ್ಲಿ ಬಸ್​​ನಲ್ಲಿದ್ದ 6-7 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಭವನೀಯ ದೊಡ್ಡ ಅವಘಡ ತಪ್ಪಿದ್ದು, ಬಸ್​​ನಲ್ಲಿ ಚಾಲಕ ಕಂ ನಿರ್ವಾಹಕರಾಗಿ ಓರ್ವ ಸಿಬ್ಬಂದಿ ಮಾತ್ರ ಇದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Indian law Privacy: ನಿಮ್ಮ ಒಪ್ಪಿಗೆ ಇಲ್ಲದೆ ಸಂಗಾತಿ ನಿಮ್ಮ ಫೋನ್ ಮುಟ್ಟುವುದು ಅಪರಾಧವೇ? ಕಾನೂನು ಹೇಳುವುದೇನು ಗೊತ್ತಾ? – Kannada News | Is Checking Spouse’s Phone Legal in India? Right to Privacy and Indian Law Explained

ಪತಿ-ಪತ್ನಿ ಪರಸ್ಪರ ಮೊಬೈಲ್ ಚೆಕ್ ಮಾಡಬಹುದೇ?Image Credit source: Getty Images

ಮದುವೆ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಪವಿತ್ರ ಬಂಧ ಮಾತ್ರವಲ್ಲ, ಎರಡು ಕುಟುಂಬಗಳ ನಡುವಿನ ಮಹತ್ವದ ಸಂಬಂಧವೂ ಹೌದು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರೀತಿ, ವಿಶ್ವಾಸದ ಜೊತೆಗೆ ಕೆಲವೊಮ್ಮೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಅನುಮಾನಗಳು ಸಹಜವಾಗಿ ಮೂಡುತ್ತವೆ. ಇಂತಹ ಸಂದರ್ಭಗಳಲ್ಲಿ ಸಂಗಾತಿಯ ನಡವಳಿಕೆಯ ಮೇಲೆ ಸಂಶಯಗೊಂಡು ಅವರ ಮೊಬೈಲ್ ಫೋನ್ ಪರಿಶೀಲಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಗಂಡ ಹೆಂಡತಿಯ ಮೊಬೈಲ್ ಅಥವಾ ಹೆಂಡತಿ ಗಂಡನ ಮೊಬೈಲ್ ಫೋನ್ ಪರಿಶೀಲಿಸಬಹುದೇ? ಇದು ಅಪರಾಧವೇ? ಇದರ ಬಗ್ಗೆ ಭಾರತದ ಕಾನೂನು ಹೇಳುವುದೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಎಲ್ಲದರ ಮೇಲೂ ಹಕ್ಕಿದೆ ಎಂಬ ತಪ್ಪು ಕಲ್ಪನೆ ಬೇಡ:

ಮದುವೆಯಾದ ನಂತರ ಅನೇಕರು ತಮ್ಮ ಸಂಗಾತಿ ಹೊಂದಿರುವ ಪ್ರತಿಯೊಂದು ವಸ್ತುವಿನ ಮೇಲೂ ತಮಗೆ ಸಂಪೂರ್ಣ ಹಕ್ಕಿದೆ ಎಂದು ಭಾವಿಸುತ್ತಾರೆ. ಅವರು ಬಯಸಿದಾಗಲೆಲ್ಲಾ ತಮ್ಮ ಸಂಗಾತಿಯ ಮೊಬೈಲ್ ಫೋನ್ ತೆಗೆದುಕೊಂಡು ವಾಟ್ಸಾಪ್ ಚಾಟ್‌ಗಳು, ಕರೆ ಇತಿಹಾಸ (Call Logs) ಅಥವಾ ಗ್ಯಾಲರಿಯನ್ನು ಪರಿಶೀಲಿಸಬಹುದು ಎಂದು ಅಂದಕೊಂಡಿರುತ್ತಾರೆ. ಆದರೆ ಕಾನೂನಿನ ಪ್ರಕಾರ ಇದು ತಪ್ಪು. ಮದುವೆಯ ನಂತರವೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ ಎಂಬುದನ್ನು ಮರೆಯಬಾರದು.

ಸಂವಿಧಾನ ನೀಡಿದ ‘ಗೌಪ್ಯತೆಯ ಹಕ್ಕು’ ಮದುವೆಯ ನಂತರವೂ ಇರುತ್ತದೆ:

ಭಾರತೀಯ ಕಾನೂನಿನ ಪ್ರಕಾರ, ಪತಿ ಅಥವಾ ಪತ್ನಿ ಯಾರೇ ಆಗಿರಲಿ, ಸಂಗಾತಿಯ ಅನುಮತಿಯಿಲ್ಲದೆ ಪರಸ್ಪರರ ಮೊಬೈಲ್ ಫೋನ್ ಪರಿಶೀಲಿಸುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿಲ್ಲ. ಭಾರತೀಯ ಸಂವಿಧಾನದ ವಿಧಿ 21ರ (Article 21) ಅಡಿಯಲ್ಲಿ ‘ಗೌಪ್ಯತೆಯ ಹಕ್ಕು’ (Right to Privacy) ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಈ ಹಕ್ಕು ಮದುವೆಯ ಬಂಧಕ್ಕೆ ಒಳಗಾದ ನಂತರವೂ ಕೊನೆಗೊಳ್ಳುವುದಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರವಾಗಿ ಅನ್ವಯಿಸುತ್ತದೆ.

ಇದನ್ನೂ ಓದಿ: ವಿಚಿತ್ರ ಮೂಢನಂಬಿಕೆಗಳು! ಜಗತ್ತಿನ ಈ 6 ನಂಬಿಕೆಗಳ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿ ಆಗುತ್ತೆ

ಒಪ್ಪಿಗೆಯಿಲ್ಲದೆ ಫೋನ್ ಮುಟ್ಟುವುದು ಗೌಪ್ಯತೆಯ ಉಲ್ಲಂಘನೆ:

ನಿಮ್ಮ ಸಂಗಾತಿಯ ಮೊಬೈಲ್ ಫೋನ್ ಅನ್ನುಅವರ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಪರಿಶೀಲಿಸುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧದ ಚೌಕಟ್ಟಿಗೆ ಬರಬಹುದು. ಸಂಗಾತಿಯ ವಾಟ್ಸಾಪ್ ಸಂದೇಶಗಳು, ಫೋಟೋಗಳು, ಕರೆ ದಾಖಲೆಗಳು ಅಥವಾ ಇಮೇಲ್‌ಗಳನ್ನು ಅವರ ಅನುಮತಿಯಿಲ್ಲದೆ ನೋಡುವುದು ಅವರ ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ನೇರವಾಗಿ ಉಲ್ಲಂಘಿಸಿದಂತಾಗುತ್ತದೆ.

ಪಾಸ್‌ವರ್ಡ್ ಕೇಳಿ ಒತ್ತಾಯಿಸುವುದು ಕಾನೂನುಬಾಹಿರ:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯು ಹೆಚ್ಚಾಗಿದ್ದು, ಸಂಗಾತಿಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಇಮೇಲ್ ಖಾತೆಗಳನ್ನು ಪರಿಶೀಲಿಸಲು ಬಯಸುವುದು ಸಾಮಾನ್ಯವಾಗಿದೆ. ಆದರೆ, ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸಂಗಾತಿ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್ ಹಂಚಿಕೊಳ್ಳುವಂತೆ ಸಂಗಾತಿಯನ್ನು ಪೀಡಿಸುವುದು ಅಥವಾ ಒತ್ತಾಯಿಸುವುದು ಕಾನೂನುಬಾಹಿರ ನಡೆ ಎನಿಸಿಕೊಳ್ಳುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:55 pm, Fri, 17 July 26

Source link

ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಾಟರಿ ದಂಧೆ: ಬೀದರ್ ಮೂಲದ ವ್ಯಕ್ತಿ ಅರೆಸ್ಟ್ – Kannada News | Murdeshwar Temple Name Misused: Fake Lucky Draw Scammer Arrested by Police

ಉತ್ತರ ಕನ್ನಡ, ಜು.17: ವಿಶ್ವಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರ ದೇವಸ್ಥಾನದ (Murdeshwar Temple) ಹೆಸರನ್ನು ದುರುಪಯೋಗಪಡಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅದೃಷ್ಟ ಡ್ರಾ (Lucky Draw) ನಡೆಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಮುರುಡೇಶ್ವರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಪ್ರಮುಖ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ. ಆರೋಪಿ ನರಸಿಂಗ್ ಅತ್ಯಂತ ವ್ಯವಸ್ಥಿತವಾಗಿ ನಕಲಿ ಜಾಲವನ್ನು ರೂಪಿಸಿಕೊಂಡು ಜನರನ್ನು ವಂಚಿಸುತ್ತಿದ್ದ.

ಆರೋಪಿಯು “ಶ್ರೀ ಮುರ್ಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಸೃಷ್ಟಿಸಿದ್ದ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಆ ಮೂಲಕ ಲಾಟರಿ ಟಿಕೆಟ್ ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ: ನನ್ನ ಮಗಳು ನನಗೆ ಬೇಕು, ಕೊಲೆಗಡುಕನನ್ನು ನನ್ನ ಮುಂದೇ ನಿಲ್ಲಿಸಿ

ಮುರುಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಸಾರ್ವಜನಿಕರನ್ನು ದೋಚುತ್ತಿರುವ ಈ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ದೇವಸ್ಥಾನದ ವ್ಯವಸ್ಥಾಪಕರಾದ ಮಂಜುನಾಥ ಶೆಟ್ಟಿ ಅವರು ಈ ವಂಚನೆಯ ಜಾಲದ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿಗಳನ್ನು ಕಲೆಹಾಕಿ, ಕೊನೆಗೆ ಬೀದರ್ ಮೂಲದ ಆರೋಪಿ ನರಸಿಂಗ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವಸ್ಥಾನಕ್ಕೂ ಮತ್ತು ಇಂತಹ ಯಾವುದೇ ಲಕ್ಕಿ ಡ್ರಾಗೂ ಯಾವುದೇ ಸಂಬಂಧ ಇರುವುದಿಲ್ಲ. ಭಕ್ತರು ಇಂತಹ ನಕಲಿ ಲಾಟರಿ ಆಮಿಷಗಳಿಗೆ ಬಲಿಯಾಗಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Budget EV Car: ಮೈಲೇಜ್ ಬಗ್ಗೆ ಚಿಂತೆಯೇ? ಭಾರತದಲ್ಲಿ ಸಿಗುವ ಅಗ್ಗದ 5 ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ – Kannada News | Cheapest electric cars in india best budget evs with high range

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕರು ಈಗ ಎಲೆಕ್ಟ್ರಿಕ್ ಕಾರುಗಳತ್ತ (Electric Car) ಮುಖ ಮಾಡುತ್ತಿದ್ದಾರೆ. ಇಂಧನ ವೆಚ್ಚವನ್ನು ಕಡಿಮೆ ಮಾಡಬೇಕೆಂದು ಬಯಸುವವರಿಗೆ ಕಡಿಮೆ ಬೆಲೆಯ EVಗಳು ಉತ್ತಮ ಆಯ್ಕೆಯಾಗಿವೆ. ಭಾರತದಲ್ಲಿ ₹10 ಲಕ್ಷದೊಳಗೆ ಮತ್ತು ಅದರ ಸಮೀಪದಲ್ಲಿ ದೊರೆಯುವ ಕೆಲವು ಎಲೆಕ್ಟ್ರಿಕ್ ಕಾರುಗಳು ನಗರ ಬಳಕೆಗೆ ಸಾಕಷ್ಟು ಸೂಕ್ತವಾಗಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ.

  1. Tata Tiago EV

ಟಾಟಾ ಟಿಯಾಗೋ EV ಭಾರತದಲ್ಲಿ ದೊರೆಯುವ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ಬೆಲೆ ಸುಮಾರು ₹6.99 ಲಕ್ಷದಿಂದ ಆರಂಭವಾಗುತ್ತದೆ. 19.2kWh ಮತ್ತು 24kWh ಎಂಬ ಎರಡು ಬ್ಯಾಟರಿ ಆಯ್ಕೆಗಳು ಲಭ್ಯವಿದ್ದು, ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 223 ರಿಂದ 293 ಕಿ.ಮೀ.ವರೆಗೆ ಚಾಲನಾ ಶ್ರೇಣಿ (ರೇಂಜ್) ನೀಡುತ್ತದೆ. ನಗರದಲ್ಲಿ ಪ್ರತಿದಿನ ಓಡಾಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

  1. MG Comet EV

ನಗರದ ಟ್ರಾಫಿಕ್‌ನಲ್ಲಿ ಸುಲಭವಾಗಿ ಚಲಿಸಲು ವಿನ್ಯಾಸಗೊಳಿಸಿರುವ MG ಕಾಮೆಟ್ EV ಎರಡು ಬಾಗಿಲಿನ ಕಾಂಪ್ಯಾಕ್ಟ್ ಕಾರು. ಇದರ ಆರಂಭಿಕ ಬೆಲೆ ಸುಮಾರು ₹7.60 ಲಕ್ಷ. 17.3kWh ಬ್ಯಾಟರಿ ಹೊಂದಿರುವ ಈ ಕಾರು ಒಂದೇ ಚಾರ್ಜ್‌ನಲ್ಲಿ ಸುಮಾರು 230 ಕಿ.ಮೀ.ವರೆಗೆ ಸಂಚರಿಸಬಲ್ಲದು. ಸಣ್ಣ ಕುಟುಂಬ ಮತ್ತು ನಗರ ಬಳಕೆಗೆ ಇದು ಅತ್ಯುತ್ತಮ ಆಯ್ಕೆ.

  1. Tata Punch EV

SUV ಶೈಲಿಯ ಎಲೆಕ್ಟ್ರಿಕ್ ಕಾರು ಖರೀದಿಸಲು ಬಯಸುವವರಿಗೆ ಟಾಟಾ ಪಂಚ್ EV ಉತ್ತಮ ಆಯ್ಕೆಯಾಗಿದೆ. ಇದರ ಆರಂಭಿಕ ಬೆಲೆ ಸುಮಾರು ₹9.69 ಲಕ್ಷದಿಂದ ಆರಂಭವಾಗುತ್ತದೆ. ಬ್ಯಾಟರಿ ಆಯ್ಕೆಯನ್ನು ಅವಲಂಬಿಸಿ ಸುಮಾರು 275 ರಿಂದ 350 ಕಿ.ಮೀ.ವರೆಗೆ ರೇಂಜ್ ನೀಡುತ್ತದೆ. ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ.

Kia Syros EV: ಕಿಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಅನಾವರಣ: 526 ಕಿ.ಮೀ. ವ್ಯಾಪ್ತಿ 25,000ಕ್ಕೆ ಬುಕ್ಕಿಂಗ್

  1. Citron eC3

ಸಿಟ್ರೋನ್ eC3 ಭಾರತದಲ್ಲಿನ ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಇದರ ಆರಂಭಿಕ ಬೆಲೆ ಸುಮಾರು ₹9.5 ಲಕ್ಷದ ಸಮೀಪದಲ್ಲಿದೆ. ಸುಮಾರು 320 ಕಿ.ಮೀ.ವರೆಗೆ ಪ್ರಮಾಣೀಕೃತ ರೇಂಜ್ ನೀಡುವ ಈ ಕಾರು ದೈನಂದಿನ ಬಳಕೆಗೆ ಸೂಕ್ತವಾಗಿದೆ. ಆರಾಮದಾಯಕ ಕ್ಯಾಬಿನ್ ಮತ್ತು ಉತ್ತಮ ಚಾಲನಾ ಅನುಭವ ಇದರ ವಿಶೇಷತೆ.

  1. Tata Nexon EV

ಸ್ವಲ್ಪ ಹೆಚ್ಚಿನ ಬಜೆಟ್ ಹೊಂದಿರುವವರಿಗೆ ಟಾಟಾ ನೆಕ್ಸಾನ್ EV ಉತ್ತಮ ಆಯ್ಕೆಯಾಗಬಹುದು. ಇದರ ಆರಂಭಿಕ ಬೆಲೆ ಸುಮಾರು ₹12.5 ಲಕ್ಷದಷ್ಟಿದ್ದು, ವಿವಿಧ ಬ್ಯಾಟರಿ ಆಯ್ಕೆಗಳೊಂದಿಗೆ 275 ರಿಂದ 489 ಕಿ.ಮೀ.ವರೆಗೆ ರೇಂಜ್ ನೀಡುತ್ತದೆ. ವೇಗದ ಚಾರ್ಜಿಂಗ್, ಉತ್ತಮ ಸುರಕ್ಷತೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳಿಂದ ಇದು ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ SUVಗಳಲ್ಲಿ ಒಂದಾಗಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಮೊದಲು ಗಮನಿಸಬೇಕಾದ ವಿಷಯಗಳು

ಕೇವಲ ಬೆಲೆಯನ್ನು ಮಾತ್ರ ನೋಡದೆ, ಕಾರಿನ ಬ್ಯಾಟರಿ ಸಾಮರ್ಥ್ಯ, ಒಂದೇ ಚಾರ್ಜ್‌ನಲ್ಲಿ ಸಿಗುವ ರೇಂಜ್, ನಿಮ್ಮ ಪ್ರದೇಶದಲ್ಲಿರುವ ಚಾರ್ಜಿಂಗ್ ಸೌಲಭ್ಯ, ಬ್ಯಾಟರಿಯ ವಾರಂಟಿ ಮತ್ತು ಸೇವಾ ಜಾಲವನ್ನು ಪರಿಶೀಲಿಸುವುದು ಮುಖ್ಯ. ನಿಮ್ಮ ದಿನನಿತ್ಯದ ಓಡಾಟದ ಅಗತ್ಯಕ್ಕೆ ತಕ್ಕ ಕಾರನ್ನು ಆಯ್ಕೆ ಮಾಡಿದರೆ ಇಂಧನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. EVಗಳ ನಿರ್ವಹಣಾ ವೆಚ್ಚವೂ ಸಾಮಾನ್ಯ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗಿಂತ ಕಡಿಮೆ ಇರುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಉಳಿತಾಯ ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version