ಹಿಂದೂ ಯುವತಿಗೆ ಚಾಕು ತೋರಿಸಿ ಕಿರುಕುಳ ಆರೋಪ; ಬ್ರೆಡ್ ಚೀಸ್ ಕಥೆ ಹೇಳಿದ ಯುವಕರು: ಪುತ್ತೂರಿನ ಎರಡು ಠಾಣೆಗಳಲ್ಲಿ ಎಫ್‌ಐಆರ್ ದಾಖಲು – Kannada News | Dakshina Kannada: Puttur Harassment Case Sees Two FIRs Filed, Police Probe Viral Video

ಪುತ್ತೂರಿನಲ್ಲಿ ಯುವತಿ ಚಾಕು ತೋರಿಸಿ ಕಿರುಕುಳ ಆರೋಪ (ಸಿಸಿಟಿವಿ ದೃಶ್ಯ ವೈರಲ್)Image Credit source: Tv9 kannada

ಮಂಗಳೂರು, ಜು.9: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಬಳಿ ಹಿಂದೂ ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕರು ಚಾಕು ತೋರಿಸಿ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪುತ್ತೂರು ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪುರುಷರಕಟ್ಟೆ ಬಸ್ಸು ನಿಲ್ದಾಣದ ಬಳಿ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುರುಷರಕಟ್ಟೆ ಬಳಿ ಸ್ಕೂಟಿ ನಿಲ್ಲಿಸಿ ಬಸ್ ಹತ್ತಲು ತೆರಳುತ್ತಿದ್ದಾಗ ತನಗೆ ಮುಂಚೆಯೇ ಪರಿಚಯವಿದ್ದ ಸುಹೈಲ್ ಹಾಗೂ ಆತನ ಜೊತೆಯಲ್ಲಿದ್ದ ಇನ್ನು ಮೂವರು ಯುವಕರು ತನಗೆ ಅಡ್ಡಗಟ್ಟಿ, ಚಾಕು ತೋರಿಸಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಯುವತಿಯ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(1) (ಮಹಿಳೆಯ ಘನತೆಗೆ ಧಕ್ಕೆ/ಕಿರುಕುಳ) ಹಾಗೂ ಸೆಕ್ಷನ್ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ತಕ್ಷಣವೇ ಪ್ರಾಥಮಿಕ ತನಿಖೆ ನಡೆಸಿ, ದೂರಿನಲ್ಲಿದ್ದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ಬೇರೆಯದೇ ಆದ ಆಯಾಮ ಸಿಕ್ಕಿದೆ. ಯುವಕರ ಹೇಳಿಕೆಯ ಪ್ರಕಾರ, ತಾವು ಯಾವುದೇ ಅಪರಾಧಿಕ ಕೃತ್ಯ ಎಸಗಿಲ್ಲ. ತಾವು ಸ್ಥಳೀಯ ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ, ಅದಕ್ಕೆ ಚೀಸ್ ಹಾಕಲು ಬೇಕರಿ ಮಾಲೀಕರಿಂದ ಚಾಕು ಪಡೆದುಕೊಂಡಿದ್ದೆವು. ಚೀಸ್​​ ಕಟ್​​ ಮಾಡಿದ ನಂತರ ಆ ಚಾಕುವನ್ನು ವಾಪಸ್ ಬೇಕರಿಗೆ ನೀಡಲು ಹೋಗುತ್ತಿದ್ದಾಗ ಅಲ್ಲಿ ಯುವತಿ ಎದುರಾಗಿದ್ದಾಳೆ. ಆದರೆ, ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಹಾಗೂ ಇತರರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ, ದುರುದ್ದೇಶಪೂರ್ವಕವಾಗಿ ಯುವತಿಯನ್ನು ಮುಂದೆ ಬಿಟ್ಟು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಯುವಕರು ಪ್ರತಿಯಾಗಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ

ಯುವಕರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೂ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಸದ್ಯ ಪುರುಷರಕಟ್ಟೆ ಜಂಕ್ಷನ್ ಮತ್ತು ಬೇಕರಿ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಯುವತಿ ಹೇಳಿದಂತೆ ಚಾಕು ತೋರಿಸಿ ಬೆದರಿಕೆ ಹಾಕಲಾಗಿದೆಯೇ ಅಥವಾ ಯುವಕರು ಹೇಳುತ್ತಿರುವ ಚೀಸ್ ಕತ್ತರಿಸುವ ಚಾಕುವಿನ ಕಥೆ ನಿಜವೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಾಕ್ಷ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಗಾಲದಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದ್ದರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ! – Kannada News | Weak Digestion in Monsoon: Causes, Symptoms and Easy Health Tips

ಮಳೆಗಾಲ (Rain) ಆರಂಭವಾಗುತ್ತಿದ್ದಂತೆ ವೈರಲ್ ಸೋಂಕುಗಳ ಜೊತೆಗೆ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳೂ ಹೆಚ್ಚಾಗುತ್ತವೆ. ಕೆಲವರಿಗೆ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆನೋವು ಅಥವಾ ಅತಿಸಾರ ಪದೇಪದೇ ಕಾಣಿಸಿಕೊಳ್ಳುತ್ತದೆ. ತಜ್ಞರ ಪ್ರಕಾರ, ಮಳೆಗಾಲದಲ್ಲಿ ಹವಾಮಾನದ ಬದಲಾವಣೆ, ತೇವಾಂಶ ಮತ್ತು ಆಹಾರದಲ್ಲಿನ ಅಸ್ವಚ್ಛತೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ತೇವಾಂಶದಿಂದ ದೇಹದ ಚಯಾಪಚಯ ಕ್ರಿಯೆ (Metabolism) ಸ್ವಲ್ಪ ನಿಧಾನವಾಗಬಹುದು. ಇದರಿಂದ ಆಹಾರ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಪರಿಣಾಮವಾಗಿ ಹೊಟ್ಟೆ ಭಾರವಾದ ಅನುಭವ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು.

ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ, ಸಮೋಸಾ ಹಾಗೂ ಇತರೆ ಎಣ್ಣೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಆಮ್ಲೀಯತೆ (Acidity) ಮತ್ತು ಎದೆ ಉರಿ ಸಮಸ್ಯೆಯನ್ನು ಹೆಚ್ಚಿಸಬಹುದು. ಇನ್ನೊಂದು ಪ್ರಮುಖ ಕಾರಣವೆಂದರೆ ಕಲುಷಿತ ನೀರು ಮತ್ತು ಆಹಾರ. ಮಳೆಯ ನೀರಿನಿಂದ ಬ್ಯಾಕ್ಟೀರಿಯಾ, ವೈರಸ್ ಆಹಾರ ಮತ್ತು ಕುಡಿಯುವ ನೀರಿಗೆ ಸೇರಬಹುದು. ಇದರಿಂದ ಫುಡ್ ಪಾಯ್ಸನಿಂಗ್, ವಾಂತಿ, ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹೊರಗೆ ಕತ್ತರಿಸಿ ಇಟ್ಟ ಹಣ್ಣುಗಳು, ಬೀದಿ ಆಹಾರ ಮತ್ತು ಹೆಚ್ಚು ಸಮಯ ಸಂಗ್ರಹಿಸಿದ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.

ಇದನ್ನೂ ಓದಿ: ಮಳೆಯಲ್ಲಿ ನೆನೆಯಲು ಇಷ್ಟವಿದ್ದರೆ ಈ ವಿಷಯಗಳನ್ನು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ:

ತಜ್ಞರ ಸಲಹೆಯಂತೆ, ಮಳೆಗಾಲದಲ್ಲಿ ತಾಜಾ ಬಿಸಿ ಆಹಾರ ಸೇವಿಸಿ, ಕುದಿಸಿ ತಣ್ಣಗಾದ ಅಥವಾ ಸುರಕ್ಷಿತ ಕುಡಿಯುವ ನೀರನ್ನು ಮಾತ್ರ ಬಳಸಬೇಕು. ಮೊಸರು ಅಥವಾ ಫರ್ಮೆಂಟೆಡ್ ಆಹಾರಗಳು ಕೆಲವರಿಗೆ ಕರುಳಿನ ಆರೋಗ್ಯಕ್ಕೆ ಸಹಕಾರಿ ಆಗಬಹುದು, ಆದರೆ ಹೊಟ್ಟೆಗೆ ಸಂಬಂಧಪಟ್ಟ ಸೋಂಕು ಅಥವಾ ಅತಿಸಾರ ಇದ್ದರೆ ವೈದ್ಯರ ಸಲಹೆಯಂತೆ ಆಹಾರ ಆಯ್ಕೆ ಮಾಡುವುದು ಸೂಕ್ತ. ಜೊತೆಗೆ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಆಹಾರದ ಆಯ್ಕೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಸರಿಯಾದ ಆಹಾರ ಪದ್ಧತಿ ಮತ್ತು ಸ್ವಚ್ಛತೆಯನ್ನು ಪಾಲಿಸಿದರೆ ಬಹುತೇಕ ಅಜೀರ್ಣ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನೇ ನಂಬರ್ 1 ಟಾರ್ಗೆಟ್,ಇರಾನ್‌ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದ ಟ್ರಂಪ್ – Kannada News | Trump: Iran Plotting My Assassination; US Iran Conflict Escalates Amid Attacks

ವಾಷಿಂಗ್ಟನ್, ಜುಲೈ 09: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಸೇನಾ ಸಂಘರ್ಷವು ಈಗ ತುತ್ತತುದಿಗೆ ತಲುಪಿದೆ. ಇರಾನ್ ದೇಶವು ತನ್ನನ್ನು ಹತ್ಯೆ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಹಸ್ಯ ಸಂಚು ರೂಪಿಸುತ್ತಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಡರಾತ್ರಿ ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯ ನಡುವೆ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, “ನಾನು ಇರಾನ್‌ನ ಪ್ರಮುಖ ಮತ್ತು ನಂಬರ್ ಒನ್ ಗುರಿಯಾಗಿದ್ದೇನೆ. ಇರಾನ್ ನಾಯಕತ್ವದ ಕೆಲವು ಶಕ್ತಿಗಳು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿವೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕದನ ವಿರಾಮ ಒಪ್ಪಂದ ಮುಗಿದ ಕಥೆ, ಮಾತುಕತೆ ಸಮಯ ವ್ಯರ್ಥ
ಕಳೆದ ತಿಂಗಳಷ್ಟೇ ಕತಾರ್ ಮಧ್ಯಸ್ಥಿಕೆಯಲ್ಲಿ ಮಾಡಿಕೊಳ್ಳಲಾಗಿದ್ದ ಮಧ್ಯಂತರ ಕದನ ವಿರಾಮ ಒಪ್ಪಂದ ಈಗ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.ಇರಾನ್ ಪ್ರತಿ ದಿನವೂ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಕಿಡಿಕಾರಿದ ಟ್ರಂಪ್, ನಾವು ಈಗಾಗಲೇ ಇರಾನ್ ಮೇಲೆ ಕಠಿಣ ದಾಳಿ ನಡೆಸಿದ್ದೇವೆ. ಇಂದು ರಾತ್ರಿಯೂ ಅವರ ಮಿಲಿಟರಿ ನೆಲೆಗಳ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಲಿದ್ದೇವೆ ಎಂದು ಯುದ್ಧದ ಮುನ್ಸೂಚನೆ ನೀಡಿದ್ದಾರೆ.

ಸಮಾಲೋಚಕರ ವಿರುದ್ಧ ಹತಾಶೆ

ಇರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಟ್ರಂಪ್, “ಆ ದೇಶದೊಂದಿಗೆ ವ್ಯವಹರಿಸುವುದು ಕೇವಲ ಸಮಯ ವ್ಯರ್ಥ. ನಮ್ಮ ಅದ್ಭುತ ಸಮಾಲೋಚಕರು ಬಯಸಿದರೆ ಮಾತನಾಡುತ್ತಿರಲಿ, ಆದರೆ ನನಗೆ ಈ ಜನರು ಹಾಗೂ ಅವರ ವರ್ತನೆ ಇಷ್ಟವಿಲ್ಲ,” ಎಂದು ಹೇಳಿದ್ದಾರೆ.

ಅಮೆರಿಕ ದಾಳಿಗೆ ಇರಾನ್‌ನ 8 ಸೈನಿಕರು ಸಾವು
ಇತ್ತೀಚಿನ ಅಮೆರಿಕದ ಭೀಕರ ವಾಯುದಾಳಿಗೆ ಸಂಬಂಧಿಸಿದಂತೆ ಇರಾನ್‌ನ ಅಧಿಕೃತ ರಾಜ್ಯ ದೂರದರ್ಶನವು ದೊಡ್ಡ ಸುದ್ದಿಯೊಂದನ್ನು ಪ್ರಕಟಿಸಿದೆ. ಬುಧವಾರ ಬೆಳಿಗ್ಗೆ ದಕ್ಷಿಣ ಇರಾನ್‌ನ ತೈಲ ಕೇಂದ್ರಗಳಾದ ಬಂದರ್ ಅಬ್ಬಾಸ್ ಮತ್ತು ನೈಋತ್ಯದ ಬುಶೆಹರ್ ಮಿಲಿಟರಿ ನೆಲೆಗಳ ಮೇಲೆ ಅಮೆರಿಕದ ಸೇನೆ ನಡೆಸಿದ ದಾಳಿಯಲ್ಲಿ ಇರಾನ್ ವಾಯುಪಡೆ ಹಾಗೂ ನೌಕಾಪಡೆಯ ಎಂಟು ಧೈರ್ಯಶಾಲಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಇರಾನ್ ಸೇನೆ ದೃಢಪಡಿಸಿದೆ.

ಮತ್ತಷ್ಟು ಓದಿ: ಇರಾನ್ ಮೇಲೆ ಮತ್ತೊಂದು ಭೀಕರ ದಾಳಿಗೆ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ

ಅಮೆರಿಕವು ಏಕಪಕ್ಷೀಯವಾಗಿ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಒಪ್ಪಂದಗಳ ಚೌಕಟ್ಟನ್ನು ಗಾಳಿಗೆ ತೂರಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಆಕ್ರೋಶ ಹೊರಹಾಕಿದ್ದಾರೆ.

ಟ್ರಂಪ್ ಅವರ ಈ ಭಯಕ್ಕೆ ಕಾರಣವೇನು?
ಖಾಸಿಂ ಸುಲೈಮಾನಿ ಹತ್ಯೆಯ ಸೇಡು: ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ (2020) ಇರಾನ್‌ನ ಅತ್ಯಂತ ಪ್ರಭಾವಿ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿಯನ್ನು ಡ್ರೋನ್ ದಾಳಿ ಮೂಲಕ ಬಗ್ದಾದ್‌ನಲ್ಲಿ ಹತ್ಯೆ ಮಾಡಿಸಿದ್ದರು. ಅಂದಿನಿಂದ ಇರಾನ್, ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಬಹಿರಂಗವಾಗಿ ಶಪಥ ಮಾಡಿದೆ. ಇತ್ತೀಚೆಗಷ್ಟೇ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನವಾಗಿದೆ.

ಅವರ ನಂತರ ಇರಾನ್ ಮಿಲಿಟರಿ ಅಮೆರಿಕದ ವಿರುದ್ಧ ಮತ್ತಷ್ಟು ಆಕ್ರಮಣಕಾರಿ ಧೋರಣೆ ತಳೆದಿದ್ದು, ಒಮಾನ್ ರಾಜತಾಂತ್ರಿಕವಾಗಿ ತಂದಿದ್ದ ಕದನ ವಿರಾಮವನ್ನು ಮುರಿದು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಹಡಗುಗಳ ಮೇಲೆ ದಾಳಿ ಆರಂಭಿಸಿದೆ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ರಫ್ತಿಗೆ ಅಡ್ಡಿಯಾಗುವ ಭೀತಿಯಿಂದಾಗಿ ಇಡೀ ವಿಶ್ವವೇ ಈ ಮಹಾಯುದ್ಧದ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:05 am, Thu, 9 July 26

Source link

Shravana Masa: ಶ್ರಾವಣ ಮಾಸದಲ್ಲಿ ಈ ರೀತಿ ಕನಸು ಬೀಳುವುದು ಮನೆ, ಹಣ, ಆರೋಗ್ಯ, ಉದ್ಯೋಗದಲ್ಲಿ ಶುಭ ಫಲಗಳ ಸೂಚನೆ – Kannada News | Shravana Masa Dreams: Unraveling Shiva’s Divine Messages and Blessings

ಶ್ರಾವಣ ಮಾಸ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಹಾಗೂ ಪುಣ್ಯಮಯ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ವರ್ಷದ ಶ್ರಾವಣ ಮಾಸವು ಸಮೀಪಿಸುತ್ತಿದ್ದು, ಈ ಮಾಸವು ವಿಶೇಷವಾಗಿ ಪರಮಶಿವನ ಆರಾಧನೆಗೆ ಸಮರ್ಪಿತವಾಗಿದ್ದು, ಶಿವಭಕ್ತರು ಉಪವಾಸ, ಅಭಿಷೇಕ, ಜಪ, ಪೂಜೆ ಹಾಗೂ ವಿವಿಧ ವ್ರತಗಳನ್ನು ಆಚರಿಸುತ್ತಾರೆ. ದಕ್ಷಿಣಾಯನ ಕಾಲದಲ್ಲಿದ್ದರೂ ಶ್ರಾವಣ ಮಾಸದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ದೈವಿಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಈ ಕಾರಣದಿಂದಲೇ ಈ ತಿಂಗಳಲ್ಲಿ ಕಾಣುವ ಕೆಲವು ಕನಸುಗಳಿಗೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ ಎಂದು ನಂಬಲಾಗಿದೆ.

ಶ್ರಾವಣದಲ್ಲಿ ಕಾಣುವ ಕನಸುಗಳ ಮಹತ್ವವೇನು?

ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದಲ್ಲಿ ಕಾಣುವ ಕನಸುಗಳು ಸಾಮಾನ್ಯ ಕನಸುಗಳಲ್ಲ. ಅವು ಶಿವನ ಕೃಪೆ, ದೈವಿಕ ಸಂದೇಶ ಅಥವಾ ಜೀವನದಲ್ಲಿ ಸಂಭವಿಸಲಿರುವ ಶುಭ ಬದಲಾವಣೆಗಳ ಸಂಕೇತವಾಗಿರಬಹುದು. ದೇವರುಗಳು, ನಾಗದೇವತೆ, ದೇವಾಲಯ, ನದಿ ಅಥವಾ ಪೂಜೆಗೆ ಸಂಬಂಧಿಸಿದ ದೃಶ್ಯಗಳು ಕಾಣುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಶ್ರಾವಣದಲ್ಲಿ ಈ ಕನಸುಗಳು ಬಿದ್ದರೆ ಏನು ಫಲ?

ನಾಗದೇವರ ದರ್ಶನ:

ಕನಸಿನಲ್ಲಿ ನಾಗದೇವರು ಅಥವಾ ಹಾವು ಶಾಂತ ಸ್ವರೂಪದಲ್ಲಿ ಕಾಣಿಸಿಕೊಂಡು ಮುಂದೆ ದಾರಿ ತೆರೆಯುವಂತೆ ಕಂಡರೆ, ಅದು ಶಿವನ ವಿಶೇಷ ಅನುಗ್ರಹದ ಸಂಕೇತ ಎನ್ನಲಾಗುತ್ತದೆ. ಕುಟುಂಬದಲ್ಲಿದ್ದ ಕಲಹಗಳು ದೂರವಾಗಿ, ಆರೋಗ್ಯ ಸುಧಾರಿಸಿ, ಆರ್ಥಿಕ ಸ್ಥಿತಿ ಉತ್ತಮವಾಗುವ ಸಾಧ್ಯತೆ ಇದೆ. ಆಸ್ತಿ ಹಾಗೂ ಸಂಪತ್ತಿನ ವೃದ್ಧಿಗೂ ಇದು ಶುಭ ಸೂಚನೆಯಾಗಿದೆ.

ಶಿವ ದೇವಾಲಯ ಕಾಣುವುದು:

ಕನಸಿನಲ್ಲಿ ಶಿವನ ದೇವಾಲಯ ಅಥವಾ ಶಿವಲಿಂಗದ ದರ್ಶನವಾದರೆ, ಶೀಘ್ರದಲ್ಲೇ ಹೊಸ ಮನೆ, ಫ್ಲಾಟ್ ಅಥವಾ ಸ್ವಂತ ನಿವಾಸದ ಯೋಗ ದೊರೆಯಬಹುದು ಎಂದು ನಂಬಲಾಗಿದೆ. ಇದು ಜೀವನದಲ್ಲಿ ಸ್ಥಿರತೆ ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ. ಇದಲ್ಲದೇ ಬಿಲ್ವದ ಮರ, ರುದ್ರಾಕ್ಷಿ ಅಥವಾ ವಿಭೂತಿ ಕನಸಿನಲ್ಲಿ ಕಾಣಿಸಿಕೊಂಡರೆ, ಮನಸ್ಸಿನ ಇಚ್ಛೆಗಳು ಈಡೇರುವ ಸಾಧ್ಯತೆ ಹೆಚ್ಚಿರುತ್ತದೆ. ಸಮಾಜದಲ್ಲಿ ಗೌರವ, ಕೀರ್ತಿ, ಪ್ರತಿಷ್ಠೆ ಹೆಚ್ಚುವುದರ ಜೊತೆಗೆ ಅಧಿಕಾರ ಅಥವಾ ಪ್ರಮುಖ ಸ್ಥಾನ ದೊರೆಯುವ ಯೋಗವೂ ಉಂಟಾಗಬಹುದು.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಶಿವನಿಗೆ ಅಭಿಷೇಕ ಮಾಡುವ ದೃಶ್ಯ:

ಕನಸಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಂತೆ ಕಂಡರೆ, ಉದ್ಯೋಗದಲ್ಲಿ ಬಡ್ತಿ, ವೃತ್ತಿಜೀವನದಲ್ಲಿ ಪ್ರಗತಿ ಅಥವಾ ಉತ್ತಮ ಅವಕಾಶಗಳು ದೊರೆಯುವ ಸೂಚನೆ ಎಂದು ಹೇಳಲಾಗುತ್ತದೆ. ಇದಲ್ಲದೇ ನದಿ ಹರಿಯುತ್ತಿರುವುದು ಅಥವಾ ನದಿಯಲ್ಲಿ ಸ್ನಾನ ಮಾಡುವ ಕನಸು ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತವಾಗಿದೆ. ಇದು ಪಾಪಕ್ಷಯ, ಕರ್ಮಬಂಧನಗಳಿಂದ ಮುಕ್ತಿ ಹಾಗೂ ಮನಸ್ಸಿನ ನೆಮ್ಮದಿಯನ್ನು ಸೂಚಿಸುತ್ತದೆ.

ಶ್ರಾವಣ ಮಾಸದ ಆಧ್ಯಾತ್ಮಿಕ ವಿಶೇಷತೆ:

ಶ್ರಾವಣ ಮಾಸದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ಈ ತಿಂಗಳಲ್ಲಿ ಮಂಗಳ ಗೌರಿ ವ್ರತ, ಸೋಮವಾರ ವ್ರತ, ರುದ್ರಾಭಿಷೇಕ, ಬಿಲ್ವದಳ ಅರ್ಪಣೆ ಮುಂತಾದ ಪೂಜೆಗಳನ್ನು ಭಕ್ತಿಯಿಂದ ಆಚರಿಸಿದರೆ ಶಿವನ ಅನುಗ್ರಹ ಸುಲಭವಾಗಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶಿವನು ಸೃಷ್ಟಿಯ ಅಂತ್ಯ ಮತ್ತು ಪುನರುತ್ಥಾನದ ಅಧಿಪತಿಯಾಗಿರುವುದರಿಂದ, ಅವರ ಕೃಪೆಯಿಂದ ಜೀವನದಲ್ಲಿನ ಕಷ್ಟಗಳು ದೂರವಾಗಿ ಹೊಸ ಆರಂಭಕ್ಕೆ ದಾರಿ ತೆರೆದುಕೊಳ್ಳುತ್ತದೆ. ಶ್ರಾವಣದಲ್ಲಿ ಕಾಣುವ ಶುಭ ಕನಸುಗಳು ಆರೋಗ್ಯ, ಕುಟುಂಬ ಸೌಹಾರ್ದತೆ, ಆರ್ಥಿಕ ಅಭಿವೃದ್ಧಿ, ಆಧ್ಯಾತ್ಮಿಕ ಬೆಳವಣಿಗೆ ಹಾಗೂ ವೃತ್ತಿಜೀವನದ ಯಶಸ್ಸಿನ ಸಂಕೇತಗಳಾಗಿವೆ ಎಂದು ಧಾರ್ಮಿಕ ಗ್ರಂಥಗಳು ವಿವರಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ಮಾತನಾಡಿದರೆ ವಿವಾದ ಆಗುತ್ತಿದೆ’; ಬೇಸರ ಹೊರಹಾಕಿದ ನೀನಾಸಂ ಸತೀಶ್ – Kannada News | Neenasam Satish Expresses Disappointment Says My Words Are Becoming Controversial

ನಟ ನಿನಾಸಂ ಸತೀಶ್ ‘ಅಯೋಗ್ಯ 2’ ಚಿತ್ರದಲ್ಲಿ ರಚಿತಾ ರಾಮ್ ಜೊತೆ ನಟಿಸಿದ್ದಾರೆ. ತಮ್ಮ ಮುಂಬರುವ ‘ಅಯೋಗ್ಯ 2’ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಯೋಗ್ಯ 2 ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಕಾಂಟ್ರವರ್ಸಿ ಮನುಷ್ಯನಲ್ಲ, ಆದರೆ ನಾನು ಮಾತನಾಡಿದರೆ ವಿವಾದಗಳು ಆಗುತ್ತಿವೆ’ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಅವರು ನಿರ್ಮಾಪಕರ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ ಆಗಿತ್ತು.

ಅಯೋಗ್ಯ ಚಿತ್ರದ ಮೊದಲ ಭಾಗದ ನಿರ್ಮಾಣದ ಸಮಯದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದ ಸತೀಶ್, ‘ಅಯೋಗ್ಯ 2 ನನ್ನ ಪಾಲಿಗೆ ಮತ್ತೊಂದು ಭಾವನಾತ್ಮಕ ಕ್ಷಣ. ಚಿತ್ರದ ನಿರ್ಮಾಪಕ ಮುನಿಗೌಡ್ರಿಗೆ ವಿಶೇಷ ಧನ್ಯವಾದ.ಇಷ್ಟು ದೊಡ್ಡ ಬಜೆಟ್‌ನ ಚಿತ್ರವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದು ಶ್ಲಾಘಿಸಿದರು. ರಚಿತಾ ರಾಮ್, ರವಿಶಂಕರ್, ಸಾಧು ಕೋಕಿಲ, ಗಿರಿ, ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಇರುವ ಅಯೋಗ್ಯ 2 ಚಿತ್ರದ ನಿರ್ವಹಣೆ ಕಷ್ಟಕರ ಎಂದು ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಮೇಲೆ ಮತ್ತೊಂದು ಭೀಕರ ದಾಳಿಗೆ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ – Kannada News | US Iran Conflict Escalates: India Urges Restraint Amidst Global Oil Supply Fears

ನವದೆಹಲಿ, ಜುಲೈ 09:ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಬುಧವಾರ ಮುಂಜಾನೆಯಷ್ಟೇ ಇರಾನ್ ಮೇಲೆ ಪ್ರಬಲ ದಾಳಿ ನಡೆಸಿದ್ದ ಅಮೆರಿಕ ಇಂದು ರಾತ್ರಿಯೂ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ. ಈ ಹಠಾತ್ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆಯಾಗುವ ಭೀತಿ ಎದುರಾಗಿದ್ದು, ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರತ ಸರ್ಕಾರ ಹೇಳಿದ್ದೇನು?
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ಉಭಯ ದೇಶಗಳು ತಕ್ಷಣವೇ ಯುದ್ಧದ ಹಠವನ್ನು ಬಿಟ್ಟು ಸಂಯಮ ಕಾಯ್ದುಕೊಳ್ಳಬೇಕು. ನಾಗರಿಕರ ರಕ್ಷಣೆ ಹಾಗೂ ಇಂಧನ ಸರಬರಾಜಿನ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕ ಹಾದಿಗೆ ಮರಳಬೇಕು ಎಂದು ಹೇಳಿದೆ.

ಟ್ರಂಪ್ ಗುಡುಗಿದ್ದು ಏಕೆ?
ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಮಿಲಿಟರಿ ಮೈತ್ರಿಕೂಟದ ಶೃಂಗಸಭೆಯಲ್ಲಿ ಅಸಾಮಾನ್ಯ ಆಕ್ರಮಣಕಾರಿ ಶೈಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ನಾಯಕತ್ವವು ಹುಚ್ಚುಚ್ಚಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ಓದಿ: ಜಾಗತಿಕ ತೈಲ ಮಾರ್ಗದಲ್ಲಿ ಮತ್ತೆ ಯುದ್ಧ ಭೀತಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಭೀಕರ ದಾಳಿ

“ನಾವು ನಿನ್ನೆ ರಾತ್ರಿ ಇರಾನ್ ಮೇಲೆ ತುಂಬಾ ಕಠಿಣ ದಾಳಿ ನಡೆಸಿದ್ದೇವೆ. ಅಗತ್ಯಬಿದ್ದರೆ ಇಂದು ರಾತ್ರಿಯೂ ಅವರ ಮೇಲೆ ಬಲವಾದ ವಾಯುದಾಳಿ ನಡೆಸುವ ಸಾಧ್ಯತೆ ಹೆಚ್ಚು. ಇರಾನ್ ಬಹಳ ದಿನಗಳಿಂದ ಮಧ್ಯಪ್ರಾಚ್ಯದ ರೌಡಿಯಂತೆ ವರ್ತಿಸುತ್ತಿತ್ತು. ಆದರೆ ಇನ್ಮುಂದೆ ಅವರ ಬೆದರಿಕೆಗಳು ನಡೆಯುವುದಿಲ್ಲ,” ಎಂದು ಟ್ರಂಪ್ ಸವಾಲು ಹಾಕಿದ್ದಾರೆ. ಶಾಂತಿ ಮಾತುಕತೆಯ ವೇಳೆ ಕೊಟ್ಟ ಭರವಸೆಗಳಿಂದ ಇರಾನ್ ಪದೇ ಪದೇ ಹಿಂದೆ ಸರಿಯುತ್ತಿದೆ ಎಂದು ಟ್ರಂಪ್ ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮುಖ್ಯ ಏಕೆ?
ಒಮಾನ್ ಮತ್ತು ಇರಾನ್ ದೇಶಗಳ ನಡುವೆ ಇರುವ ಈ ಕಿರಿದಾದ ಹಾರ್ಮುಜ್ ಜಲಸಂಧಿಯು ಇಡೀ ಜಗತ್ತಿನ ಅತ್ಯಂತ ಕಾರ್ಯತಂತ್ರದ ಪ್ರಮುಖ ಕಡಲ ಮಾರ್ಗವಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ರಫ್ತಿನ ಬಹುದೊಡ್ಡ ಪಾಲು ಇದೇ ಮಾರ್ಗದ ಮೂಲಕ ಸಾಗುತ್ತದೆ. ಭಾರತವು ತನ್ನ ಸಿಂಹಪಾಲು ಕಚ್ಚಾ ತೈಲವನ್ನು ಗಲ್ಫ್ ದೇಶಗಳಿಂದ ಇದೇ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುವುದರಿಂದ, ಇಲ್ಲಿ ಯುದ್ಧ ನಡೆದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುವ ಮತ್ತು ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುವ ಭೀತಿ ಇದೆ. ಇದೇ ಕಾರಣಕ್ಕೆ ಭಾರತವು ಉಭಯ ದೇಶಗಳಿಗೆ ಶಾಂತಿಯ ಮಂತ್ರ ಪಠಿಸುವಂತೆ ಒತ್ತಾಯಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಿರ್ಣಾಯಕ ಪಂದ್ಯಕ್ಕೆ 5 ಅರ್ಜೆಂಟೀನಾ ರೆಫರಿ: ಫ್ರಾನ್ಸ್​ಗೆ ಆತಂಕ! – Kannada News | FIFA Appoints All Argentine Refereeing Team For France Vs Morocco Match

ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯಗಳ ಆರಂಭಕ್ಕೂ ಮುನ್ನವೇ ಮೈದಾನದ ಹೊರಗೆ ಭಾರಿ ವಿವಾದವೊಂದು ಸೃಷ್ಟಿಯಾಗಿದೆ. ಜುಲೈ 9ರಂದು (ಭಾರತದಲ್ಲಿ ಜುಲೈ 10) ಬೋಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಬಲಿಷ್ಠ ಫ್ರಾನ್ಸ್ ಮತ್ತು ಮೊರಾಕೊ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಫಿಫಾ ಅರ್ಜೆಂಟೀನಾ ರೆಫರಿಗಳನ್ನೇ ನೇಮಿಸಿದ್ದಾರೆ. ಈ ಒಂದು ನಿರ್ಧಾರ ಇದೀಗ ಜಾಗತಿಕ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದರ ಎಲ್ಲಾ ಐದೂ ಆನ್-ಫೀಲ್ಡ್ ರೆಫರಿ ಒಂದೇ ದೇಶದಿಂದ ಆಯ್ಕೆ ಮಾಡಿದ್ದಾರೆ. ಇದರಲ್ಲೇನು ತಪ್ಪು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಫುಟ್​ಬಾಲ್ ಪ್ರೇಮಿಗಳು ಮುಂದಿಡುತ್ತಿರುವ ಉತ್ತರ ಅರ್ಜೆಂಟೀನಾ ತಂಡದ ಸಾಂಪ್ರದಾಯಿಕ ಎದುರಾಳಿ ಫ್ರಾನ್ಸ್‌ ಎಂಬುದು.

ಐವರು ಅರ್ಜೆಂಟೀಯನ್ನರು!

ಸಾಮಾನ್ಯವಾಗಿ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಪಂದ್ಯ ಆಡುತ್ತಿರುವ ತಂಡಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ತಡೆಯಲು ತಟಸ್ಥ ದೇಶಗಳ ರೆಫರಿಗಳನ್ನು ನೇಮಿಸಲಾಗುತ್ತದೆ. ಆದರೆ, ಫ್ರಾನ್ಸ್-ಮೊರಾಕೊ ಪಂದ್ಯಕ್ಕೆ ಮುಖ್ಯ ರೆಫರಿಯಾಗಿ ಅನುಭವಿ ಫ್ಯಾಕುಂಡೋ ಟೆಲ್ಲೋ ಅವರನ್ನು ನೇಮಿಸಲಾಗಿದೆ.

ಇವರೊಂದಿಗೆ ಸಹಾಯಕರಾಗಿ ಜುವಾನ್ ಪ್ಯಾಬ್ಲೋ ಬೆಲಾಟ್ಟಿ, ಗೇಬ್ರಿಯಲ್ ಚೇಡ್, ನಾಲ್ಕನೇ ಅಧಿಕಾರಿಯಾಗಿ ಡೇರಿಯೊ ಹೆರೆರಾ ಮತ್ತು ಮೀಸಲು ಅಧಿಕಾರಿಯಾಗಿ ಕ್ರಿಸ್ಟಿಯನ್ ನವಾರೊ ಕಾರ್ಯನಿರ್ವಹಿಸಲಿದ್ದಾರೆ. ಈ ಐದೂ ಅಧಿಕಾರಿಗಳು ಅರ್ಜೆಂಟೀನಾ ದೇಶದವರಾಗಿದ್ದಾರೆ.

ವಿವಾದ ಏಕೆ?

ಕಳೆದ 2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಫ್ರಾನ್ಸ್ ಸೋಲು ಮುಖ್ಯ ಕಾರಣ ರೆಫರಿಗಳು ತೋರಿದ ತಾರತಮ್ಯ ಮತ್ತು ಪಕ್ಷಪಾತದ ತೀರ್ಪುಗಳು ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದಾದ ಬಳಿಕ ಉಭಯ ದೇಶಗಳ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಮೈದಾನದ ಒಳಗೆ ಹಾಗೂ ಹೊರಗೆ ತೀವ್ರ ಪೈಪೋಟಿ ಮತ್ತು ಹಗೆತನ ಮುಂದುವರಿದಿದೆ.

ಇಂತಹ ಪರಿಸ್ಥಿತಿಯಲ್ಲಿ, ಫ್ರಾನ್ಸ್ ತಂಡದ ಸೆಮಿಫೈನಲ್ ಹಾದಿಯನ್ನು ನಿರ್ಧರಿಸುವ ಪಂದ್ಯಕ್ಕೆ ಅರ್ಜೆಂಟೀನಾದವರನ್ನೇ ರೆಫರಿಗಳನ್ನಾಗಿ ಹಾಕಿರುವುದು ಫ್ರೆಂಚ್ ಅಭಿಮಾನಿಗಳನ್ನು ಕೆರಳಿಸಿದೆ. ಅಲ್ಲದೆ “ಫ್ರಾನ್ಸ್ ತಂಡವನ್ನು ಟೂರ್ನಿಯಿಂದ ಹೊರಹಾಕಲು ಫಿಫಾ ಸಂಚು ರೂಪಿಸಿದೆ” ಎಂಬ ಗಂಭೀರ ಆರೋಪಗಳೂ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.

  • ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದಕ್ಕೆ ಒಂದೇ ದೇಶದ ರೆಫರಿಗಳನ್ನು ನೇಮಿಸಿರುವುದು ಇದೇ ಮೊದಲು!.
  • ಪ್ರಸ್ತುತ ವಿಶ್ವಕಪ್‌ನಲ್ಲಿ ನಡೆದಿರುವ ಹಿಂದಿನ 96 ಪಂದ್ಯಗಳಲ್ಲಿ ಯಾವುದೇ ಒಂದು ಪಂದ್ಯಕ್ಕೂ ಈ ರೀತಿ ಐದೂ ಆನ್-ಫೀಲ್ಡ್ ರೆಫರಿಗಳನ್ನು ಒಂದೇ ದೇಶದಿಂದ ಆಯ್ಕೆ ಮಾಡಿರಲಿಲ್ಲ.

ಪಂದ್ಯದ ಮೇಲೆ ಎಲ್ಲರ ಕಣ್ಣು!

2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡ ಮೊರಾಕೊವನ್ನು 2-0 ಇಂದ ಸೋಲಿಸಿತ್ತು. ಈಗ ಮೊರಾಕೊ ತಂಡಕ್ಕೆ ಅದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವಿದೆ. ಆದರೆ, ಮೈದಾನದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚಾಗಿ ಅರ್ಜೆಂಟೀನಾದ ರೆಫರಿ ಫ್ಯಾಕುಂಡೋ ಟೆಲ್ಲೋ ಅವರ ಪ್ರತಿಯೊಂದು ನಿರ್ಧಾರ, ಕೊಡುವ ಪ್ರತಿಯೊಂದು ಫೌಲ್ ಹಾಗೂ ಹಳದಿ ಕಾರ್ಡ್‌ಗಳ ಮೇಲೆ ಇಡೀ ವಿಶ್ವದ ಫುಟ್‌ಬಾಲ್ ಪ್ರೇಮಿಗಳ ಕಣ್ಣು ಇರಲಿರುವುದಂತೂ ಸತ್ಯ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಹೀಗಾಗಿಯೇ ಈ ನಿರ್ಣಾಯಕ ಪಂದ್ಯವು ರೆಫರಿಗಳ ಕಾರಣದಿಂದ ಭಾರೀ ಮಹತ್ವ ಪಡೆದುಕೊಂಡಿದೆ. ಈ ಪಂದ್ಯವು ನಿಯಮಗಳ ಪ್ರಕಾರವೇ ನಡೆಯುತ್ತದೆಯೇ ಅಥವಾ ರೆಫರಿಗಳ ಸಣ್ಣ ತಪ್ಪು ನಿರ್ಧಾರವೂ ದೊಡ್ಡ ವಿವಾದಕ್ಕೆ ನಾಂದಿ ಹಾಡುತ್ತದೆಯೇ ಎಂಬ ಆತಂಕ ಎಲ್ಲರಲ್ಲಿದೆ. ಹೀಗಾಗಿ, ಈ ಪಂದ್ಯವು ಕೇವಲ ಎರಡು ದೇಶಗಳ ನಡುವಿನ ಸೆಣಸಾಟವಾಗಿ ಉಳಿಯದೆ, ಫಿಫಾ ಇತಿಹಾಸದ ಅತ್ಯಂತ ಜಿದ್ದಾಜಿದ್ದಿನ ಪರೀಕ್ಷೆಯಾಗಿ ಮಾರ್ಪಟ್ಟಿದೆ.

Published On – 9:27 am, Thu, 9 July 26

Source link

Karnataka Dam Water Level: ಗಾಜನೂರು ತುಂಗಾ ಡ್ಯಾಂ ಭರ್ತಿ; ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 8ರ ನೀರಿನ ಮಟ್ಟದ ವಿವರ – Kannada News | Karnataka reservoir water level on july 9 high inflow continues tunga dam full

ಬೆಂಗಳೂರು, ಜು.9 : ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಒಂದೆಡೆ ಶಿವಮೊಗ್ಗದ ಗಾಜನೂರು ಡ್ಯಾಂ ಭರ್ತಿಯಾಗಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೂರಾರು ಎಕರೆ ಬೆಳೆ ಹಾನಿಯಾಗಿದೆ. ಇಂದು ಅಂದರೆ ಜುಲೆ 9ರಂದು ಯಾವೆಲ್ಲ ನದಿಗಳ ನೀರಿನ ಒಳಹರಿವು ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

1.ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ (ಆಲಮಟ್ಟಿ ಡ್ಯಾಂ) ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 512.59 ಮೀಟರ್

ಒಳಹರಿವು: 1,31,940 ಕ್ಯೂಸೆಕ್

ಹೊರಹರಿವು: 483 ಕ್ಯೂಸೆಕ್

2. ಹೇಮಾವತಿ ಜಲಾಶಯ (ಗೊರೂರು, ಹಾಸನ)

ಗರಿಷ್ಠ ಮಟ್ಟ: 2922 ಅಡಿ (37 TMC)

ಇಂದಿನ ನೀರಿನ ಮಟ್ಟ: 2900.63 ಅಡಿ (20.102 TMC)

ಒಳಹರಿವು: 15,647 ಕ್ಯೂಸೆಕ್

ಹೊರಹರಿವು: 300 ಕ್ಯೂಸೆಕ್
(
ಕಳೆದ ವರ್ಷ ಇದೇ ದಿನ 2919.82 ಅಡಿ ಅಂದರೆ 35.003 TMC ನೀರಿತ್ತು).

3. ಲಿಂಗನಮಕ್ಕಿ ಜಲಾಶಯ (ಸಾಗರ, ಶಿವಮೊಗ್ಗ)

ಗರಿಷ್ಠ ಮಟ್ಟ: 1819 ಅಡಿ (151.64 TMC)

ಇಂದಿನ ನೀರಿನ ಮಟ್ಟ: 1760.85 ಅಡಿ (28.58 TMC)

ಒಳಹರಿವು: 36,867 ಕ್ಯೂಸೆಕ್

ಹೊರಹರಿವು: ಸದ್ಯಕ್ಕೆ ಯಾವುದೇ ಹೊರಹರಿವು ಇಲ್ಲ.

4. ಭದ್ರಾ ಜಲಾಶಯ (ಭದ್ರಾವತಿ, ಶಿವಮೊಗ್ಗ)

ಗರಿಷ್ಠ ಮಟ್ಟ: 186 ಅಡಿ (71.535 TMC)

ಇಂದಿನ ನೀರಿನ ಮಟ್ಟ: 144.7 ಅಡಿ (30.142 TMC)

ಒಳಹರಿವು: 16,304 ಕ್ಯೂಸೆಕ್

ಹೊರಹರಿವು: 216 ಕ್ಯೂಸೆಕ್

ಇದನ್ನೂ ಒದಿ: ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ

ಗಾಜನೂರಿನ ತುಂಗಾ ಡ್ಯಾಂ ಭರ್ತಿ

ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಡ್ಯಾಂನ 22 ಗೇಟ್‌ಗಳ ಮೂಲಕ ಸದ್ಯ 30,000 ಕ್ಯೂಸೆಕ್ಸ್ ನೀರನ್ನು ತುಂಗಾ ನದಿಗೆ ಬಿಡಲಾಗುತ್ತಿದ್ದು, ನದಿ ತುಂಬಿ ಹರಿಯುತ್ತಿದೆ. ನಿನ್ನೆ ನದಿಗೆ 48,000 ಕ್ಯೂಸೆಕ್ಸ್ ನೀರು ಹರಿಸಲಾಗಿತ್ತು.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಅವಾಂತರ: ಜಲಾವೃತಗೊಂಡ ನೂರಾರು ಎಕರೆ ಬೆಳೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ದೂದಗಂಗಾ ನದಿಯ ಅಬ್ಬರ ಮುಗಿಲು ಮುಟ್ಟಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ನದಿ ದಡದಿಂದ ಅರ್ಧ ಕಿಲೋಮೀಟರ್ ಹೊರಗೂ ಪ್ರವಾಹದ ನೀರು ನುಗ್ಗಿದ್ದು, ಬೇಡಕಿಹಾಳ ಗ್ರಾಮ ಸಂಪೂರ್ಣವಾಗಿ ಊರು ಸುತ್ತುವರೆದಿದೆ. ಗ್ರಾಮದ ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ಐದು ದಿನಗಳಿಂದ ಬೆಳೆಗಳು ನೀರಲ್ಲೇ ನಿಂತಿರುವುದರಿಂದ ಸಂಪೂರ್ಣ ಕೊಳೆತು ಹೋಗುವ ಆತಂಕ ಎದುರಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gemini Horoscope: ಈ ತಿಂಗಳಲ್ಲಿ ಮಿಥುನ ರಾಶಿಗೆ ಹಣ, ವೃತ್ತಿ ಮತ್ತು ಆರೋಗ್ಯದಲ್ಲಿ ಸವಾಲುಗಳು ಎದುರಾಗಲಿವೆ! – Kannada News | Gemini Horoscope July 2026: Navigating Planetary Influences and Solutions

ಜುಲೈನಲ್ಲಿ ಮಿಥುನ ರಾಶಿ ಭವಿಷ್ಯImage Credit source: Getty Images

​ಮಿಥುನ ರಾಶಿಯ ಅಧಿಪತಿಯಾದ ಬುಧ ಗ್ರಹವು ಮಿಥುನ ರಾಶಿಯಲ್ಲೇ ಪುನರ್ವಸು ನಕ್ಷತ್ರದಲ್ಲಿ ಸ್ಥಿತನಾಗಿದ್ದಾನೆ. ಇದು ಸಾಮಾನ್ಯವಾಗಿ ಬುದ್ಧಿಮತ್ತೆ ಮತ್ತು ಸಂವಹನಕ್ಕೆ ಒಳ್ಳೆಯದೇ ಆದರೂ, ಇತರ ಗ್ರಹಗಳ ಸ್ಥಾನಗಳು ಮತ್ತು ದೃಷ್ಟಿಗಳು ಜೀವನದ ಕೆಲವು ಕ್ಷೇತ್ರಗಳಲ್ಲಿ ಏರುಪೇರುಗಳನ್ನು ಉಂಟುಮಾಡಬಹುದು.

​ಸೂರ್ಯ ಮತ್ತು ಗುರು ಕರ್ಕಾಟಕ ರಾಶಿಯಲ್ಲಿದ್ದಾರೆ. ಮಿಥುನಕ್ಕೆ 2ನೇ ಮನೆ – ಧನ ಹಾಗೂ ಕುಟುಂಬ ಸ್ಥಾನ. ಇಲ್ಲಿ ಗುರುವು ಅಸ್ತಂಗತನಾಗಿದ್ದಾನೆ. ​ಶುಕ್ರ ಮತ್ತು ಕೇತು ಸಿಂಹ ರಾಶಿಯಲ್ಲಿದ್ದಾರೆ, ಮಿಥುನಕ್ಕೆ 3ನೇ ಮನೆ ​ಶನಿ ಮತ್ತು ರಾಹು ಕ್ರಮವಾಗಿ ಮೀನ ಮತ್ತು ಕುಂಭ ರಾಶಿಯಲ್ಲಿದ್ದು, ವಕ್ರಿ ಚಲನೆಯಲ್ಲಿದ್ದಾರೆ. ಮಂಗಳ ವೃಷಭ ರಾಶಿಯಲ್ಲಿದ್ದಾನೆ ಮಿಥುನಕ್ಕೆ 12ನೇ ಮನೆ – ವ್ಯಯ ಸ್ಥಾನ

​ಧನಹಾನಿ ಮತ್ತು ಅನಗತ್ಯ ಖರ್ಚುಗಳು:

ಮಿಥುನ ರಾಶಿಗೆ 12ನೇ ಮನೆಯಾದ ವ್ಯಯ ಸ್ಥಾನದಲ್ಲಿ ಕ್ರೂರ ಗ್ರಹವಾದ ಮಂಗಳನಿದ್ದಾನೆ. ಇದು ಜುಲೈ ತಿಂಗಳಿನಲ್ಲಿ ಅನಿರೀಕ್ಷಿತ ಅಥವಾ ಅನಗತ್ಯ ಖರ್ಚುಗಳನ್ನು ಹೆಚ್ಚಿಸಬಹುದು. ಆಸ್ಪತ್ರೆಯ ವೆಚ್ಚಗಳು, ಪ್ರಯಾಣದ ವೆಚ್ಚಗಳು ಅಥವಾ ಹಠಾತ್ ನಷ್ಟಗಳು ಎದುರಾಗಬಹುದು. ಧನ ಸ್ಥಾನ ಗುರು ಇದ್ದರೂ ಆತ ಅಸ್ತಂಗತನಾಗಿರುವುದರಿಂದ ಧನಸಹಾಯ ಅಥವಾ ಆರ್ಥಿಕ ಹರಿವು ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ.

ಭಿನ್ನಾಭಿಪ್ರಾಯ ಮತ್ತು ಸಂವಹನ ದೋಷ:

​ರಾಶ್ಯಾಧಿಪತಿ ಬುಧನು ಸ್ವಸ್ಥಾನದಲ್ಲಿದ್ದರೂ, 2ನೇ ಮನೆಯಲ್ಲಿ ಸೂರ್ಯನ ತೇಜಸ್ಸು ಹಾಗೂ ಗುರುವಿನ ಅಸ್ತಂಗತ ಸ್ಥಿತಿಯಿಂದಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗ ಉದ್ವೇಗ ಉಂಟಾಗಬಹುದು. ನಿಮ್ಮ ಮಾತುಗಳು ಇತರರಿಗೆ ಕಠಿಣವಾಗಿ ಕೇಳಿಸಬಹುದು. ಇದರಿಂದ ಸಣ್ಣ ವಿಷಯಗಳೂ ದೊಡ್ಡ ಜಗಳಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

​ವೃತ್ತಿ ಮತ್ತು ಉದ್ಯೋಗದಲ್ಲಿ ಅಸ್ಥಿರತೆ:

ಕರ್ಮ ಸ್ಥಾನದಲ್ಲಿ ಶನಿ ಗ್ರಹವು ವಕ್ರಿಯಾಗಿದ್ದಾನೆ. ಇದು ಉದ್ಯೋಗದಲ್ಲಿ ತಡೆಗಳು, ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಅಥವಾ ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನು ತರಬಹುದು. ವ್ಯಾಪಾರಸ್ಥರಿಗೆ ಜುಲೈ ತಿಂಗಳಿನಲ್ಲಿ ನಿರೀಕ್ಷಿತ ಲಾಭ ಸಿಗುವುದು ಕೊಂಚ ತಡವಾಗಬಹುದು.

​ಆರೋಗ್ಯ ಮತ್ತು ಮಾನಸಿಕ ಆತಂಕ:

​12ನೇ ಮನೆಯ ಮಂಗಳ ಮತ್ತು 9ನೇ ಮನೆಯಲ್ಲಿ ವಕ್ರಿ ರಾಹುವಿನ ಪ್ರಭಾವದಿಂದಾಗಿ ನಿದ್ರಾಹೀನತೆ, ರಕ್ತದೊತ್ತಡ ಅಥವಾ ಅತಿಯಾದ ಆತಂಕ ಎದುರಾಗಬಹುದು. ಶಿರೋವೇದನೆ ಅಥವಾ ಕಣ್ಣಿಗೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆಗಳು ಕಾಡಬಹುದು.

ಪರಿಹಾರಗಳು:

​ಬುಧ ಗ್ರಹದ ಪ್ರೀತ್ಯರ್ಥವಾಗಿ ಪ್ರತಿ ಬುಧವಾರ ಹಸಿರು ಹೆಸರು ಬೇಳೆಯನ್ನು ದಾನ ಮಾಡಿ ಅಥವಾ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ. ಗಣೇಶನಿಗೆ ದೂರ್ವೆಯನ್ನು ಸಮರ್ಪಿಸಿ. ಇದರಿಂದ ಬುದ್ಧಿಶಕ್ತಿ ಚುರುಕಾಗಿ, ತಪ್ಪು ನಿರ್ಧಾರಗಳನ್ನು ತಡೆಯಬಹುದು.
​ಖರ್ಚು ನಿಯಂತ್ರಣಕ್ಕೆ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಉತ್ತಮ. ಮಂಗಳವಾರದ ದಿನ ದೇವಸ್ಥಾನದಲ್ಲಿ ಕೆಂಪು ಕಡಲೆ ಅಥವಾ ತೊಗರಿ ಬೇಳೆಯನ್ನು ದಾನ ಮಾಡಿ. ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರಿಂದ ಧನಹಾನಿ ಮತ್ತು ಅಪಘಾತಗಳ ಭಯ ದೂರವಾಗುತ್ತದೆ. ಗುರುವು ಅಸ್ತಂಗತನಾಗಿರುವುದರಿಂದ ಗುರುವಾರಗಳಂದು ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಹಾಗೂ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪವನ್ನು ಹಚ್ಚಿ. ಕಪ್ಪು ಕಡಲೆಯನ್ನು ದಾನ ಮಾಡುವುದು ವೃತ್ತಿ ಜೀವನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲೆಗಳಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ನಿಷೇಧಿಸಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು – Kannada News | Chhattisgarh HC Upholds Gayatri Mantra, Saraswati Vandana in Schools

ಬಿಲಾಸ್‌ಪುರ, ಜುಲೈ 09: ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ(Gayatri Mantra), ಸರಸ್ವತಿ ವಂದನೆ ಮತ್ತು ಶಾಂತಿ ಮಂತ್ರಗಳನ್ನು ಪಠಿಸುವುದನ್ನು ತಡೆಯಬೇಕು ಮತ್ತು ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಜಯನ್ನು ಛತ್ತೀಸ್​ಗಢ ಹೈಕೋರ್ಟ್​ ವಜಾಗೊಳಿಸಿದೆ. ಯಾವುದೇ ನಿರ್ದಿಷ್ಟ ಧಾರ್ಮಿಕ ಸಿದ್ಧಾಂತವನ್ನು ಬಲವಂತವಾಗಿ ಹೇರದ ಹೊರತು, ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದನ್ನು ಸಂವಿಧಾನವು ನಿಷೇಧಿಸುವುದಿಲ್ಲ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ವಿವಾದವೇನು, ಆದೇಶದಲ್ಲಿ ಏನಿದೆ?

ಛತ್ತೀಸ್​ಗಢ ಶಾಲಾ ಶಿಕ್ಷಣ ಇಲಾಖೆಯು ಜೂನ್ 12 ರಂದು ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, 2026-27ನೇ ಸಾಲಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ, ರಾಷ್ಟ್ರಗೀತೆ, ಸರಸ್ವತಿ ವಂದನೆ, ಗುರು ಮಂತ್ರ ಹಾಗೂ ದಿನದ ಕೊನೆಯಲ್ಲಿ ಗಾಯತ್ರಿ ಮಂತ್ರ ಮತ್ತು ಶಾಂತಿ ಮಂತ್ರಗಳನ್ನು ಪಠಿಸಬೇಕು ಎಂದು ಸೂಚಿಸಲಾಗಿತ್ತು.

ಇದನ್ನು ವಿರೋಧಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ‘‘ಇದು ಶಿಕ್ಷಣದ ಕೇಸರಿಕರಣ ಮತ್ತು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಸರ್ಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಇಂತಹ ಧಾರ್ಮಿಕ ಮಂತ್ರಗಳನ್ನು ಕಡ್ಡಾಯಗೊಳಿಸುವುದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಅರ್ಜಿದಾರರ ಪರ ವಕೀಲ ಆಮಿರ್ ಖಾನ್ ವಾದಿಸಿದ್ದರು.

ಮತ್ತಷ್ಟು ಓದಿ: ಅತ್ಯಂತ ಪ್ರಬಲ ಮಂತ್ರ ಯಾವುದು ಗೊತ್ತಾ? ಅದರ ವಿಶೇಷ ಇಲ್ಲಿದೆ ನೋಡಿ

ಹೈಕೋರ್ಟ್‌ನಲ್ಲಿ ಸರ್ಕಾರದ ಪ್ರತಿವಾದವೇನು?

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಭಾಗ: ಈ ಆದೇಶವು ಯಾವುದೇ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸದುದ್ದೇಶ ಹೊಂದಿದೆ.

ಜ್ಞಾನ ಮತ್ತು ಏಕಾಗ್ರತೆಯ ಸಂಕೇತ: ಗಾಯತ್ರಿ ಮಂತ್ರವು ಕೇವಲ ಪೂಜೆಯಲ್ಲ, ಅದು ಜ್ಞಾನ, ಬುದ್ಧಿವಂತಿಕೆ ಮತ್ತು ಸಕಾರಾತ್ಮಕ ಯೋಚನೆಗಳನ್ನು ನೀಡುವ ಮಂತ್ರವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಯಾರ ಮೇಲೂ ಬಲವಂತವಿಲ್ಲ: ಸರ್ಕಾರದ ಆದೇಶದಲ್ಲಿರುವ ಕಡ್ಡಾಯ ಎಂಬ ಪದವು ಶಾಲೆಗಳಲ್ಲಿ ಶಿಸ್ತು ಕಾಪಾಡಲು ಮಾತ್ರ ಬಳಸಲಾಗಿದೆಯೇ ಹೊರತು ಯಾರ ಮೇಲೂ ಧರ್ಮ ಹೇರಲು ಅಲ್ಲ.

ವಿದ್ಯಾರ್ಥಿಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಅಮಿತೇಂದ್ರ ಕಿಶೋರ್ ಪ್ರಸಾದ್ ಅವರ ಏಕಸದಸ್ಯ ಪೀಠವು ಜುಲೈ 2 ರಂದು ಈ ಮಹತ್ವದ ತೀರ್ಪನ್ನು ನೀಡಿದ್ದು, ಅದನ್ನು ಇತ್ತೀಚೆಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಯಾವುದೇ ಬಲವಂತದ ಕ್ರಮವಿಲ್ಲ: ಈ ಮಂತ್ರಗಳನ್ನು ಪಠಿಸಲು ನಿರಾಕರಿಸುವ ಅಥವಾ ತಮ್ಮ ನಂಬಿಕೆಗೆ ವಿರುದ್ಧ ಎಂದು ಭಾವಿಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಂಡ ಅಥವಾ ಶಿಸ್ತು ಕ್ರಮ ಜರುಗಿಸುವ ಕಡ್ಡಾಯ ನಿಯಮ ಈ ಆದೇಶದಲ್ಲಿ ಎಲ್ಲೂ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ದೂರುಗಳೇ ಬಂದಿಲ್ಲ: ಈ ನಿಯಮ ಈಗಾಗಲೇ ಶಾಲೆಗಳಲ್ಲಿ ಜಾರಿಯಲ್ಲಿದ್ದು, ಇಷ್ಟು ದಿನ ಯಾವುದೇ ವಿದ್ಯಾರ್ಥಿ, ಪೋಷಕರು ಅಥವಾ ಶಿಕ್ಷಕರಿಂದ ಈ ಬಗ್ಗೆ ಯಾವುದೇ ತಕರಾರು ಅಥವಾ ದೂರುಗಳು ಬಂದಿಲ್ಲ ಎಂದು ಕೋರ್ಟ್ ಗಮನಿಸಿದೆ.

ಅಕಾಲಿಕ ಅರ್ಜಿ: ಅರ್ಜಿದಾರರು ಕೇವಲ ಊಹಾಪೋಹಗಳ ಆಧಾರದ ಮೇಲೆ, ರಾಜಕೀಯ ಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಯಾರಿಗೂ ನೇರ ಹಾನಿಯಾಗಿಲ್ಲ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.

ಈ ಹಿಂದೆಯೂ ಮಧ್ಯಪ್ರದೇಶ ಮತ್ತು ಹರಿಯಾಣದ ಶಾಲೆಗಳಲ್ಲಿ ಗೀತಾ ಪಠಣ ಹಾಗೂ ಯೋಗವನ್ನು ಕಡ್ಡಾಯಗೊಳಿಸಿದಾಗ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಅವುಗಳನ್ನು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ನೈತಿಕ ಮತ್ತು ದೈಹಿಕ ಶಿಕ್ಷಣ ಎಂದು ಪರಿಗಣಿಸಿ ಮಾನ್ಯ ಮಾಡಿದ್ದವು. ಈಗ ಛತ್ತೀಸ್‌ಗಢ ಹೈಕೋರ್ಟ್ ಕೂಡ ಅದೇ ಮಾದರಿಯ ತೀರ್ಪು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version