ಬೆಂಗಳೂರು, ಜುಲೈ 08: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ (HD Devegowda) ಪದ್ಮನಾಭನಗರದ ನಿವಾಸಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದ ಎಸ್.ಟಿ. ಸಮುದಾಯದ ಮುಖಂಡರ ನಿಯೋಗ ಭೇಟಿ ನೀಡಿದೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ಹೆಚ್ಚಳ ಕುರಿತು ಹೆಚ್ಡಿಡಿ ಜೊತೆಗೆ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.
ಮೆಲ್ಬೋರ್ನ್, ಜುಲೈ 8: ಭಾರತದ ಪ್ರಧಾನಿ ಮೋದಿ (PM Modi) 3 ರಾಷ್ಟ್ರಗಳ ಪ್ರವಾಸಕ್ಕಾಗಿ ಇಂಡೋನೇಷ್ಯಾಗೆ ತೆರಳಿದ್ದರು. ಅಲ್ಲಿನ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗೆ ತೆರಳಿರುವ ಪ್ರಧಾನಿ ಮೋದಿ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ಪರವಾಗಿ ಅಲ್ಲಿನ ವಸತಿ ಮತ್ತು ನಗರಾಭಿವೃದ್ಧಿ ಸಚಿವೆ ಕ್ಲೇರ್ ಒ’ನೀಲ್ ಹಾಗೂ ಆಸ್ಟ್ರೇಲಿಯಾ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರಧಾನಿ ಮೋದಿ ಅವರ ಆಗಮನದಿಂದ ಮೆಲ್ಬೋರ್ನ್‌ನಲ್ಲಿರುವ ಭಾರತೀಯ ಸಮುದಾಯದಲ್ಲಿ ಭಾರಿ ಉತ್ಸಾಹ ಮೂಡಿದೆ. ಪ್ರಧಾನಿಯವರಿಗಾಗಿ ಆಯೋಜಿಸಲಾಗಿರುವ ವಿಶೇಷ ಸಮುದಾಯ ಸತ್ಕಾರ ಸಮಾರಂಭದಲ್ಲಿ ಅವರನ್ನು ಅತ್ಯಂತ ಅದ್ಧೂರಿಯಾಗಿ ಸ್ವಾಗತಿಸಲು ಭಾರತೀಯ ಮೂಲದ ನಾಗರಿಕರು ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ ಅವರ ಈ ಪ್ರವಾಸವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ, ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಅಂದರೆ ಜುಲೈ 8 ರಂದು ತಮ್ಮ 54ನೇ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಂಗೂಲಿ ಭಾರತ ಕ್ರಿಕೆಟ್ಗೆ ನೀಡಿದ ಕೊಡುಗೆಗಳು ಅಪಾರ. ಗಂಗೂಲಿ ನಾಯಕರಾಗಿದ್ದಾಗ ಟೀಂ ಇಂಡಿಯಾಕ್ಕೆ ಸೇರಿದ ಆಟಗಾರರು ತಂಡವನ್ನು ಹಲವು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದರು. ಅವರಲ್ಲಿ ಧೋನಿ, ಯುವರಾಜ್, ಸೆಹ್ವಾಗ್, ಜಹೀರ್ ಖಾನ್ರಂತಹ ಶ್ರೇಷ್ಠ ಆಟಗಾರರಿದ್ದಾರೆ (PC-PTI).
ಇಂತಹ ಗಂಗೂಲಿಗೆ ಭಾರತ ಕ್ರಿಕೆಟ್ನಲ್ಲಿ ಅಪಾರ ಗೌರವ ಸಂದಿದೆ. ಇದೀಗ ಗಂಗೂಲಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದಲೂ ಸ್ಮರಣೀಯ ಕಾಣಿಕೆಯೊಂದು ಸಿಕ್ಕಿದೆ. ತನ್ನ ಹುಟುಹಬ್ಬದ ಸಂತಸದಲ್ಲಿರುವ ಗಂಗೂಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ (PC-PTI).
ಈ ವಿಚಾರವನ್ನು ಸ್ವತಃ ಗಂಗೂಲಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ನನ್ನನ್ನು ಹಾಲ್ ಆಫ್ ಫೇಮ್ಗೆ ಸೇರಿಸಿದ್ದಕ್ಕಾಗಿ ಐಸಿಸಿ ಮತ್ತು ಅಧ್ಯಕ್ಷ ಜಯ್ ಶಾ ಅವರಿಗೆ ಧನ್ಯವಾದಗಳು. ಇದು ಒಂದು ದೊಡ್ಡ ಗೌರವ. ಇಲ್ಲಿಯವರೆಗೆ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ ಕೇವಲ 10 ಭಾರತೀಯರಲ್ಲಿ ಒಬ್ಬರಾಗಿರುವುದು ಅದ್ಭುತವಾಗಿದೆ. ಕೆಲವು ಶ್ರೇಷ್ಠ ಹೆಸರುಗಳ ಭಾಗವಾಗುವುದು ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ (PC-PTI).
ಸೌರವ್ ಗಂಗೂಲಿ ಅವರ ಸೇರ್ಪಡೆಯೊಂದಿಗೆ ಐಸಿಸಿ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ ಭಾರತೀಯ ಪುರುಷ ಕ್ರಿಕೆಟಿಗರ ಸಂಖ್ಯೆ 10 ಕ್ಕೇರಿದೆ. ಇವರ ಜೊತೆಗೆ ಇಬ್ಬರು ಭಾರತೀಯ ಮಹಿಳಾ ಕ್ರಿಕೆಟಿಗರು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ಭಾರತ ಕ್ರಿಕೆಟ್ಬಿಂದ ಈ ಗೌರವಕ್ಕೆ ಭಾಜನರಾದ 12 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಗಂಗೂಲಿ ಪಾತ್ರರಾಗಿದ್ದಾರೆ (PC-PTI).
ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದ ಭಾರತೀಯರಲ್ಲಿ, ಸುನಿಲ್ ಗವಾಸ್ಕರ್ (2009), ಬಿಶನ್ ಸಿಂಗ್ ಬೇಡಿ (2009), ಕಪಿಲ್ ದೇವ್ (2009), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018), ಸಚಿನ್ ತೆಂಡೂಲ್ಕರ್ (2019), ವಿನೂ ಮಂಕಡ್ (2021), ಡಯಾನಾ ಎಡುಲ್ಜಿ (2023), ವೀರೇಂದ್ರ ಸೆಹ್ವಾಗ್ (2023), ನೀತು ಡೇವಿಡ್ (2024), ಎಂಎಸ್ ಧೋನಿ (2025), ಸೌರವ್ ಗಂಗೂಲಿ (2026) (PC-PTI).
ಪ್ರೀತಂ ಗುಬ್ಬಿ ನಿರ್ದೇಶನದ ನೂತನ ಚಿತ್ರದ ಮೂಲಕ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ಅವರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ಇಶಾ ಲಂಕೇಶ್ ನಟನೆಯ ಈ ಹೊಸ ಚಿತ್ರಕ್ಕೆ ‘ನವಿಶಾ ಫಿಲ್ಮ್ಸ್’ ಬಂಡವಾಳ ಹೂಡಲಿದೆ. ಖ್ಯಾತ ಪತ್ರಕರ್ತ, ಲೇಖಕ ಪಿ. ಲಂಕೇಶ್ ಮೊಮ್ಮಗಳ ಸಿನಿಮಾ ಎಂಬ ಕಾರಣಕ್ಕೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿದೆ.
ಈ ಸಿನಿಮಾವನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶಿಸಲಿದ್ದಾರೆ. ‘ನವಿಶಾ ಫಿಲ್ಮ್ಸ್’ ಮೂಲಕ ಶಿವರಾಜ್ ಕನಗನಪಲ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆಯ 2ನೇ ಚಿತ್ರವಾಗಿದೆ.
ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಇಶಾ ಲಂಕೇಶ್, ನಟನೆಗೆ ಬೇಕಾಗಿರುವ ಪೂರ್ವತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅವರ ಅಭಿನಯ ಹೇಗಿರಲಿದೆ ಎಂಬ ಕೌತುಕ ಪ್ರೇಕ್ಷಕರಿಗೆ ಇದೆ.
ಸದ್ಯಕ್ಕೆ ಈ ಸಿನಿಮಾದ ಹೆಸರು ಏನೆಂಬುದು ಬಹಿರಂಗ ಆಗಿಲ್ಲ. ನೂತನ ಚಿತ್ರದ ನಾಯಕಿಯ ಕುರಿತಾಗಿ ಮಾತ್ರ ತಿಳಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ ಅವರು ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ವಾಷಿಂಗ್ಟನ್, ಜುಲೈ 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು. ಇದೀಗ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದು, ಇಂದು ರಾತ್ರಿಯೇ ಇರಾನ್ (Iran War) ಮೇಲೆ ಅಮೆರಿಕ ಮತ್ತೊಮ್ಮೆ ದಾಳಿ ನಡೆಸಲಿದೆ ಎಂಬ ಸುಳಿವು ನೀಡಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಹಡಗುಗಳ ಮೇಲೆ ನಡೆಸಿದ ದಾಳಿಯು ಸಂಘರ್ಷವನ್ನು ಕೊನೆಗೊಳಿಸಲು ಎರಡೂ ದೇಶಗಳು ಮಾಡಿಕೊಂಡಿದ್ದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಇರಾನ್ ಮಾಡುತ್ತಿರುವ ಕೆಲಸಗಳು ನನಗೆ ಸಮಾಧಾನ ತಂದಿಲ್ಲ. ಅವರು ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದುವುದು ನನಗಿಷ್ಟವಿಲ್ಲ. ಇರಾನ್ ನಡೆಸಿದ ದಾಳಿಗಳು ತಾತ್ಕಾಲಿಕ ಒಪ್ಪಂದದ ಉಲ್ಲಂಘನೆಯಾಗಿದ್ದು, ಇರಾನ್ ಮಾಡಿರುವುದು ತಪ್ಪು. ಇರಾನ್ ತನ್ನ ಪರಮಾಣು ಯೋಜನೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವೇ ಅದನ್ನು ನಿಲ್ಲಿಸುತ್ತೇವೆ ಎಂದು ನಮ್ಮ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಅಮೆರಿಕ-ಇರಾನ್ ಕದನ ವಿರಾಮವು ಸಂಪೂರ್ಣವಾಗಿ ಮುರಿದುಬಿದ್ದಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ರಾತ್ರೋರಾತ್ರಿ ನಡೆಸಿದ ದಾಳಿಯಲ್ಲಿ ಅಮೆರಿಕದ ಪಡೆಗಳು ಇರಾನ್‌ನ 28 ದೋಣಿಗಳನ್ನು ಧ್ವಂಸಗೊಳಿಸಿವೆ ಎಂದು ಹೇಳಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇರಾನ್‌ನ ಮತ್ತಷ್ಟು ಯುದ್ಧ ನೌಕೆಗಳನ್ನು ಖಂಡಿತವಾಗಿಯೂ ನಾಶಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ ಕೊನೆಯ ವಾರದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಬೃಹತ್ ದಾಳಿಯಿಂದ ಈ ಸಂಘರ್ಷ ಆರಂಭವಾಯಿತು. ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ತನ್ನದೇ ಎಂದು ವಾದಿಸುತ್ತಿರುವ ಇರಾನ್ ಅಲ್ಲಿ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸುವುದಾಗಿ ಹೇಳಿದೆ. ಅಲ್ಲದೆ ತನ್ನ ಅಧಿಕೃತ ಮಾರ್ಗವನ್ನು ಬಿಟ್ಟು ಚಲಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದೆ.
ಇರಾನ್ ಮಿಲಿಟರಿ ಹಾರ್ಮುಜ್ ಜಲಸಂಧಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 3 ಹಡಗುಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಮಂಗಳವಾರ ಇರಾನ್ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಇದಾದ ನಂತರ ಇರಾನ್ ಕೂಡ ಗಲ್ಫ್ ದೇಶಗಳ ಮೇಲಿನ ದಾಳಿಯೊಂದಿಗೆ ಪ್ರತಿಕಾರ ತೀರಿಸಿಕೊಂಡಿದೆ. ಇನ್ನೂ ಎರಡೂ ದೇಶಗಳ ನಡುವಿನ ಯುದ್ಧದ ಕಾವು ಹೆಚ್ಚಾಗುವ ಸಾಧ್ಯತೆಗಳಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಳೆಯಲ್ಲಿ ನೆನೆಯುವುದರಿಂದ ಸಿಗುವ ಪ್ರಯೋಜನಗಳುImage Credit source: Getty Images
ಮಳೆಗಾಲ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಈ ಋತು ಆರಂಭವಾಗುತ್ತಿದ್ದಂತೆ ತಂಪಾದ ಗಾಳಿ ಮತ್ತು ಜಿನುಗುವ ಮಳೆ(Rain) ಮನಸ್ಸಿಗೆ ಹೊಸ ಉಲ್ಲಾಸ ನೀಡುವುದರಿಂದ ಮಳೆಯಲ್ಲಿ ನೆನೆಯಲು ಅನೇಕರಿಗೆ ಇಷ್ಟವಾಗುತ್ತದೆ. ಈ ಅನುಭವ ಎಲ್ಲಾ ಸಮಯದಲ್ಲಿಯೂ ಸಿಗದಿರುವುದರಿಂದ ಇದನ್ನು ಸಿಕ್ಕಾಗ ಆನಂದಿಸುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಆದರೆ ಕೆಲವರಿಗೆ ಮಳೆಯಲ್ಲಿ ನೆನೆದರೆ ಆರೋಗ್ಯ ಹಾಳಾಗುತ್ತದೆ ಎಂಬ ಭಯವಿರುತ್ತದೆ. ಆರೋಗ್ಯ ತಜ್ಞರು ಆರೋಗ್ಯವಂತ ವ್ಯಕ್ತಿ ಅಲ್ಪ ಸಮಯ ಮಳೆಯಲ್ಲಿ ನೆನೆಯುವುದರಿಂದ ದೊಡ್ಡ ತೊಂದರೆ ಆಗುವುದಿಲ್ಲ. ಆದರೆ ದೀರ್ಘ ಸಮಯ ನೆನೆಯುವುದು ಅಥವಾ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಸೋಂಕುಗಳ ಅಪಾಯ ಹೆಚ್ಚಾಗಬಹುದು ಎನ್ನುತ್ತಾರೆ.
ಮಳೆಯಲ್ಲಿ ಕೆಲ ನಿಮಿಷ ನೆನೆಯುವುದರಿಂದ ಒತ್ತಡ ಕಡಿಮೆಯಾಗಬಹುದು. ಪ್ರಕೃತಿಯೊಂದಿಗೆ ಸಮಯ ಕಳೆಯುವುದರಿಂದ ದೇಹದಲ್ಲಿ ‘ಎಂಡೋರ್ಫಿನ್’ ಮತ್ತು ‘ಸೆರೋಟೊನಿನ್’ ಹಾರ್ಮೋನ್‌ಗಳ ಚಟುವಟಿಕೆ ಹೆಚ್ಚಾಗಿ ಮನಸ್ಸು ಹಗುರವಾಗಿರುವ ಅನುಭವ ನೀಡಬಹುದು. ಬಿಸಿಲಿನ ವಾತಾವರಣದ ಬಳಿಕ ಮಳೆಯ ತಂಪು ದೇಹಕ್ಕೆ ನೆಮ್ಮದಿಯನ್ನೂ ನೀಡುತ್ತದೆ.
ಆದರೆ ಮೊದಲ ಮಳೆಯಲ್ಲಿ ನೆನೆಯುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಆರಂಭಿಕ ಮಳೆಯ ನೀರಿನಲ್ಲಿ ವಾಯುಮಾಲಿನ್ಯದ ಕಣಗಳು, ಧೂಳು ಮತ್ತು ಕೆಲವು ರಾಸಾಯನಿಕಗಳು ಬೆರೆತಿರುವ ಸಾಧ್ಯತೆ ಇರುತ್ತದೆ. ಹೆಚ್ಚು ಸಮಯ ಒದ್ದೆಯಾದ ಬಟ್ಟೆಯಲ್ಲೇ ಇರುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ಜ್ವರ, ಶೀತ ಅಥವಾ ಚರ್ಮದ ಸೋಂಕಿನ ಅಪಾಯ ಹೆಚ್ಚಾಗಬಹುದು. ಕಾಲಿನಲ್ಲಿ ಹೆಚ್ಚು ಹೊತ್ತು ಒದ್ದೆ ಬಟ್ಟೆಯಲ್ಲಿದ್ದರೆ ಫಂಗಲ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಒಣ ಬಟ್ಟೆ ಧರಿಸಿ, ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಬಿಸಿ ಸೂಪ್, ಕಷಾಯ ಅಥವಾ ನೀರು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಮಳೆಯಲ್ಲಿ ನೆನೆಯುವುದರಿಂದ ವಿಟಮಿನ್ ಬಿ12 ಅಥವಾ ಇತರ ವಿಶೇಷ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಹಾಗೆಯೇ ಮಳೆಯಲ್ಲಿ ನೆನೆಯುವುದರಿಂದಲೇ ಜ್ವರ ಬರುತ್ತದೆ ಎನ್ನುವುದೂ ಕೂಡ ಸರಿಯಲ್ಲ. ಆದರೆ ತೇವಾಂಶ, ಚಳಿ ಮತ್ತು ವೈರಸ್‌ಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು. ಆದ್ದರಿಂದ ಮಳೆಯ ಸೌಂದರ್ಯವನ್ನು ಆನಂದಿಸುವ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.
ಕೊಲ್ಕತ್ತಾ, ಜುಲೈ 8: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಕೊಲ್ಕತ್ತಾದಲ್ಲಿ ಪಕ್ಷದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ತೀವ್ರ ಆಕ್ರೋಶಗೊಂಡು, ತಮ್ಮದೇ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರುಯಿಪುರ ಘಟನೆಯನ್ನು ಪ್ರತಿಭಟಿಸಲು ಮಮತಾ ಬ್ಯಾನರ್ಜಿ ಇಂದು ಬೀದಿಗಿಳಿದರು. ಆ ಮೆರವಣಿಗೆಯ ಸಮಯದಲ್ಲಿ ಅವರ ಮನೆಯೆದುರು ಅಸ್ತವ್ಯಸ್ತ ಪರಿಸ್ಥಿತಿ ಉಂಟಾಯಿತು. ಅಲ್ಲಿ, ಜನಸಂದಣಿಯನ್ನು ನಿಯಂತ್ರಿಸಲು ಮಮತಾ ಮೈಕ್ರೊಫೋನ್‌ನೊಂದಿಗೆ ಕೆಳಗೆ ಇಳಿದರು. ಆಗ ಅವರು ತಮ್ಮ ಮನೆಯ ಮುಂದೆ ಕಾರ್ಯಕರ್ತರನ್ನು ಚದುರಿಸುವಾಗ ಕೋಪಗೊಂಡು ಅವರಲ್ಲೊಬ್ಬನ ಕೆನ್ನೆಗೆ ಬಾರಿಸಿದ್ದಾರೆ. ಆದರೆ, ಅವರು ಅಷ್ಟು ಕೋಪಗೊಂಡಿದ್ದ ಯಾಕೆ ಎಂಬುದು ಸ್ಪಷ್ಟವಾಗಿಲ್ಲ.
ಕೊಲ್ಕತ್ತಾದಲ್ಲಿ ಟಿಎಂಸಿ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಕೂಡ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮನೆಯ ಸುತ್ತಲೂ ಭಾರಿ ಸಂಖ್ಯೆಯ ನಾಯಕರು, ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಮೆರವಣಿಗೆ ಮುಂದುವರಿಯುತ್ತಿದ್ದಂತೆ, ಮಮತಾ ಬ್ಯಾನರ್ಜಿ ಅವರಿಗೆ ಹತ್ತಿರವಾಗಲು ಕಾರ್ಯಕರ್ತರು ಮುಗಿಬಿದ್ದರು. ಇದರಿಂದಾಗಿ ಅಲ್ಲಿ ತೀವ್ರ ನೂಕುನುಗ್ಗಲು ಉಂಟಾಯಿತು. ಆಗ ಕೋಪಗೊಂಡ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳದಲ್ಲಿದ್ದ ನಾಯಕರು ಮತ್ತು ಭದ್ರತಾ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾದರು.
A frustrated Mamata Banerjee slaps her own party colleagues during TMC’s ‘protest march’ today: pic.twitter.com/Mav7HPyNvr
— Surajit Dasgupta (@surajitdasgupta) July 8, 2026
ಮಮತಾ ಬ್ಯಾನರ್ಜಿ ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯಗಳು ಅಲ್ಲಿನ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯನ್ನು ಬಳಸಿಕೊಂಡು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಮಮತಾ ಬ್ಯಾನರ್ಜಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ ಪುರುಷರ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಉಭಯ ದೇಶಗಳ ಮಹಿಳಾ ತಂಡಗಳು ಏಕೈಕ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿವೆ. ಎರಡೂ ತಂಡಗಳು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿವೆ. ಗಮನಿಸಬೇಕಾದ ಸಂಗತಿಯೆಂದರೆ ಮೊದಲ ಬಾರಿಗೆ, ಲಾರ್ಡ್ಸ್‌ನಲ್ಲಿ ಮಹಿಳಾ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯವು ಜುಲೈ 10 ರಿಂದ 13 ರವರೆಗೆ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ತಂಡ ಕೂಡ ಇಂಗ್ಲೆಂಡ್ನಲ್ಲಿದೆ. ಆದರೆ ಪಂದ್ಯ ಆರಂಭಕ್ಕೆ ಎರಡು ದಿನಗಳಿರುವಾಗ ಭಾರತ ವನಿತಾ ಪಡೆಗೆ ಆಘಾತ ಎದುರಾಗಿದೆ.
ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಪ್ರತೀಕಾ ರಾವಲ್ ಈ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿಯನ್ನು ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ತಿಳಿಸಿದ್ದಾರೆ. ಹೀಗಾಗಿ ಪ್ರತೀಕಾ ರಾವಲ್ ಬದಲಿಗೆ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡದ ಭಾಗವಾಗಿದ್ದ ಅನುಭವಿ ಬ್ಯಾಟರ್ ಪ್ರಿಯಾ ಪುನಿಯಾ ಅವರನ್ನು ಬದಲಿ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಇಲ್ಲಿಯವರೆಗೆ ಒಟ್ಟು 14 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಮೂರು ಪಂದ್ಯಗಳನ್ನು ಗೆದ್ದಿದ್ದು, ಒಂದು ಪಂದ್ಯವನ್ನು ಸೋತಿದೆ. ಉಳಿದಂತೆ ಹತ್ತು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಉಭಯ ತಂಡಗಳ ನಡುವಿನ ಕೊನೆಯ ಟೆಸ್ಟ್ ಪಂದ್ಯ 2023 ರಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಇಂಗ್ಲೆಂಡ್ ತಂಡವನ್ನು 347 ರನ್‌ಗಳಿಂದ ಸೋಲಿಸಿತ್ತು.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಂದಿನಿ ಶರ್ಮಾ, ಹರ್ಲೀನ್ ಡಿಯೋಲ್, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಸಯಾಲಿ ಸತ್ಘರೆ ಮತ್ತು ಸ್ನೇಹ್ ರಾಣಾ.
ಶಾಸಕ ಸುರೇಶ್ ಕುಮಾರ್ Image Credit source: S Suresh Kumar Facebook
ಬೆಂಗಳೂರು, ಜುಲೈ 08: ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಭ್ರಷ್ಟಾಚಾರ ಆರೋಪ ಮಾಡಿ ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಸಂಬಂಧ ಸ್ವಯಂಪ್ರೇರಿತರಾಗಿ 160 ಪುಟಗಳ ದಾಖಲೆಗಳೊಂದಿಗೆ, 27 ಪುಟಗಳ ಉತ್ತರವನ್ನು ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ನೀಡಿದ್ದಾರೆ. ಜುಲೈ 2ರ ಗುರುವಾರದಂದು ತನ್ನ ವಿರುದ್ಧ ಓರ್ವ ವ್ಯಕ್ತಿ ಕರ್ನಾಟಕ ಲೋಕಾಯುಕ್ತರ ಬಳಿ ದೂರು ಸಲ್ಲಿಸಿರುವುದು ಮಾಧ್ಯಮಗಳ ಮೂಲಕ ತಿಳಿದಿದ್ದು, ದೂರಿನ ಅಂಶಗಳನ್ನು ಅಧ್ಯಯನ ಮಾಡಿದ ನಂತರ ಲೋಕಾಯುಕ್ತರಿಗೆ ಉತ್ತರ ನೀಡುವುದಾಗಿ ತಕ್ಷಣವೇ ತಿಳಿಸಿದ್ದೆ. ಹೀಗಾಗಿ ಲೋಕಾಯುಕ್ತರಿಂದ ಯಾವುದೇ ನೋಟಿಸ್ ಅಥವಾ ಸಂದೇಶ ಬರದಿದ್ದರೂ ಸ್ವಯಂ ಪ್ರೇರಿತವಾಗಿ, ಸುದೀರ್ಘ ಉತ್ತರ ನೀಡಿರೋದಾಗಿ ಶಾಸಕರು ಹೇಳಿದ್ದಾರೆ.
‘ಆರೋಪದಲ್ಲಿ ಕಿಂಚಿತ್ತೂ ಹುರುಳಿಲ್ಲ’
ಶಾಸಕರೂ ಸೇರಿದಂತೆ, ಯಾವುದೇ ಜನಪ್ರತಿನಿಧಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಯಮಾನುಸಾರ ಅವಕಾಶವಿಲ್ಲ. ಹೀಗಾಗಿ ಟೆಂಡರ್ ಕುರಿತಂತೆ ಯಾವುದೇ ಕಡತದ ಮೇಲೆ ನಾವು ನಿರ್ಧಾರ ಕೈಗೊಂಡು ಸಹಿ ಹಾಕುವ ಅನುಮೋದನೆ ಮಾಡುವ ಅವಕಾಶ ಇರುವುದಿಲ್ಲ. ಇದೆಲ್ಲವೂ ಕಾನೂನು ಮತ್ತು ನಿಯಮಗಳ ಅನುಸಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ನಡೆಸಬೇಕಿರುವ ಕಾರ್ಯ. ಹೀಗಿರುವಾಗ ತನ್ನ ವಿರುದ್ಧ ಸಲ್ಲಿಸಿರುವ ಈ ದೂರಿನಲ್ಲಿ ತೋರಿಸಿರುವ ಯಾವುದೇ ಅಂಶದಲ್ಲಿ ಕಿಂಚಿತ್ತೂ ಹುರುಳಿಲ್ಲ ಎಂಬುದನ್ನು ಮಾನ್ಯ ಲೋಕಾಯುಕ್ತರಿಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಯಾರೋ ಬೇನಾಮಿ ಗುತ್ತಿಗೆದಾರರಿಗೆ ಸಹಾಯ ಮಾಡಿದ್ದೇನೆ ಮತ್ತು ನಗರ ಪಾಲಿಕೆಗೆ 300 ಕೋಟಿ ರೂ. ನಷ್ಟ ಉಂಟಾಗುವಂತೆ ಮಾಡಿದ್ದೇನೆ ಎಂಬ ಹಸಿ ಸುಳ್ಳಿನಿಂದ ಕೂಡಿರುವ ಆರೋಪವನ್ನು ಸಂಪೂರ್ಣವಾಗಿ ತಾನು ಅಲ್ಲಗೆಳೆದಿದ್ದು, ಆರೋಪ ಮಾಡಿರುವವರು ಆ ಸಂಬಂಧ ಒಂದೇ ಒಂದು ಪುರಾವೆಯನ್ನೂ ಒದಗಿಸಿರುವುದಿಲ್ಲ. ತನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ, ಗುತ್ತಿಗೆ ವಿಚಾರದಲ್ಲಾಗಲಿ ಅಥವಾ ಇನ್ಯಾವುದೇ ಕಾರ್ಯದಲ್ಲಾಗಲಿ , ಕಾನೂನುಬಾಹಿರವಾಗಿ ನಿಯಮ ಉಲ್ಲಂಘಿಸಿ ಕಾರ್ಯವೆಸಗಿಲ್ಲ ಎಂದೂ ಸಹ ಉತ್ತರದಲ್ಲಿ ತಿಳಿಸಿರೋದಾಗಿ ಶಾಸಕರು ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ತೆಗೆದುಕೊಂಡು ಕಾಮಗಾರಿ ಮಾಡದೆ ಬಿಲ್ ಪಡೆದಿರುವ, ಒಂದೊಮ್ಮೆ ಕಾಮಗಾರಿ ಮಾಡಿದ್ದರೂ ಸೂಚಿತ ಗುಣಮಟ್ಟದ ಮತ್ತು ಸೂಚಿತ ಪ್ರಮಾಣದ ಕಾರ್ಯ ಮಾಡದೆ ಅನೇಕ ಪ್ರಮಾದಗಳನ್ನು ಎಸಗಿರುವ ಗುತ್ತಿಗೆದಾರನ ಪರವಾಗಿ ತನ್ನ ವಿರುದ್ಧ ಈ ದೂರು ಸಲ್ಲಿಸಲಾಗಿದೆ ಎಂಬ ಬಗ್ಗೆಯೂ ಲೋಕಾಯುಕ್ತರ ಗಮನಕ್ಕೆ ತಂದಿದ್ದೇನೆ. ಇದೊಂದು ಶುದ್ಧ ರಾಜಕೀಯ ಪ್ರೇರಿತ ದೂರು. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದೇ ಈ ಸುಳ್ಳು ದೂರಿನ ಉದ್ದೇಶ ಎಂಬುದು ಸ್ಪಷ್ಟವಾಗಿರೋದಾಗಿ ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು, ಜುಲೈ 08: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆಗೆ ವೇಗ ನೀಡಿದೆ. ಈ ಸಂಬಂಧ ಇಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮಹತ್ವದ ಸಭೆ ಮಾಡಲಾಗಿದ್ದು, ಎರಡನೇ ಏರ್ಪೋರ್ಟ್ (2nd airport) ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಬೆಂಗಳೂರು ನಗರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.
ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರದ ಒಲವು
ರಾಜ್ಯ ಸರ್ಕಾರ ಈಗಾಗಲೇ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಒಂದು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಚುಡಹಳ್ಳಿ–ಸೋಮನಹಳ್ಳಿ ಪ್ರದೇಶ. ಮತ್ತೊಂದು ತುಮಕೂರು ರಸ್ತೆಯ ಕುಣಿಗಲ್–ನೆಲಮಂಗಲ ನಡುವಿನ ಪ್ರದೇಶ. ಈ ಎರಡೂ ಸ್ಥಳಗಳಲ್ಲಿ ಸುಮಾರು 4,500 ರಿಂದ 5,200 ಎಕರೆ ಭೂಮಿಯನ್ನ ಗುರುತು ಮಾಡಲಾಗಿದ್ದು, ಇದರ ಸಾಧಕ ಬಾಧಕ ಹಾಗೂ ತಾಂತ್ರಿಕ ಕಾರ್ಯ ಸಾಧ್ಯತೆ, ಬಗ್ಗೆ ಚರ್ಚೆ ಮಾಡಲಾಗಿದೆ. ಇದರ ನಡುವೆ ಬೆಂಗಳೂರಿನ ದಕ್ಷಿಣ ಜಿಲ್ಲೆ ವಿಮಾನ ನಿಲ್ದಾಣದ ಬಗ್ಗೆ ಸರ್ಕಾರ ಒಲವು ಹೊಂದಿದೆ.
ಬೆಂಗಳೂರು ದಕ್ಷಿಣದಲ್ಲೇ 2ನೇ ಏರ್ಪೋರ್ಟ್ ಮಾಡಲಾಗುವುದು ಎಂದ ಸಿಎಂ
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಸಭೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘‘ಎರಡನೇ ಏರ್ಪೋರ್ಟ್ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಟೆಕ್ನಿಕಲ್ ಸಾಧ್ಯತೆ ಇರುವ ಕಡೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಲ್ಯಾಂಡ್ ದರ ಕೂಡ ಕಡಿಮೆ ಇರಬೇಕು. ಒಂದೊಂದು ಮನೆ ಇದ್ದರೆ ಪರವಾಗಿಲ್ಲ, ಅವರಿಗೂ ಪರಿಹಾರ ಕೊಡಬೇಕು’’ ಎಂದರು.
‘‘ಹೆಚ್ಚು ಊರು ಇರುವ ಕಡೆ ಬೇಡ ಎಂದು ಹೇಳಿದ್ದೇವೆ. ದಕ್ಷಿಣದಲ್ಲಿಯೇ ಏರ್ಪೋರ್ಟ್ ಮಾಡಲಾಗುವುದು. ಜಾಗ ಯಾವುದು ಅಂತಿಮ ಆಗಿಲ್ಲ. ಆದರೆ ಹೆಚ್ಚು ಜನ ವಸತಿ ಪ್ರದೇಶಗಳನ್ನ ಹೊರತುಪಡಿಸಿ. ಖಾಲಿ ಪ್ರದೇಶವನ್ನ ಗುರುತಿಸಲು ಸೂಚಿಲಾಗಿದೆ’’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೊಸ ಅವಕಾಶಗಳು ಸೃಷ್ಟಿ ಸಾಧ್ಯತೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಎದುರಾಗಿದೆ. ಮುಂದಿನ ಹಲವು ದಶಕಗಳ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಈ ಯೋಜನೆಗೆ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರದ ಶಿಫಾರಸಿನ ಬಳಿಕ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ತಾಂತ್ರಿಕ ಪರಿಶೀಲನೆ ನಡೆಸಲಿದೆ. ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆಯೊಂದಿಗೆ ಯೋಜನೆ ಮುಂದಿನ ಹಂತಕ್ಕೆ ಸಾಗಲಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ಬೆಂಗಳೂರಿನ ವಿಮಾನ ಸಂಚಾರದ ಒತ್ತಡ ಕಡಿಮೆಯಾಗುವುದರ ಜೊತೆಗೆ, ಕೈಗಾರಿಕೆ, ಲಾಜಿಸ್ಟಿಕ್ಸ್, ಹೂಡಿಕೆ, ಉದ್ಯೋಗ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಎರಡನೇ ವಿಮಾನ ನಿಲ್ದಾಣ ಅನುಕೂಲಗಳು
ಬೆಂಗಳೂರಿನ ಈಗಿನ ವಿಮಾನ ನಿಲ್ದಾಣದ ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದೆ. ಭವಿಷ್ಯದಲ್ಲಿ ಹೆಚ್ಚುತ್ತಿರುವ ವಿಮಾನ ಸಂಚಾರವನ್ನು ಸುಲಭವಾಗಿ ನಿರ್ವಹಿಸಲು ನೆರವಾಗಲಿದೆ.
ಕೈಗಾರಿಕೆ, ಐಟಿ, ಲಾಜಿಸ್ಟಿಕ್ಸ್ ಮತ್ತು ರಫ್ತು ವಲಯಕ್ಕೆ ಉತ್ತೇಜನ ಸಿಗಲಿದೆ.
ನೇರವಾಗಿ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ, ಮೆಟ್ರೋ, ರೈಲು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.
ಹೊಸ ಕೈಗಾರಿಕಾ ವಲಯ, ಏರೋಸಿಟಿ, ಗೋದಾಮು ಮತ್ತು ವಾಣಿಜ್ಯ ಕೇಂದ್ರಗಳು ಬೆಳೆಯುವ ಸಾಧ್ಯತೆ.
ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ದೀರ್ಘಾವಧಿಯಲ್ಲಿ ಪೂರಕವಾಗಲಿದೆ.
ತುರ್ತು ಪರಿಸ್ಥಿತಿಗಳಲ್ಲಿ ಪರ್ಯಾಯ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ.
ಅನಾನುಕೂಲತೆ ಏನು?
4,500–5,200 ಎಕರೆ ಭೂಸ್ವಾಧೀನ ದೊಡ್ಡ ಸವಾಲು.
ರೈತರಿಂದ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ.
ಭೂ ಪರಿಹಾರ ವೆಚ್ಚ ಮತ್ತು ಯೋಜನೆಯ ಒಟ್ಟು ವೆಚ್ಚ ಸಾವಿರಾರು ಕೋಟಿ ರೂ ಹೆಚ್ಚಾಗುತ್ತದೆ.
ಪರಿಸರ, ಅರಣ್ಯ ಮತ್ತು ಪರಿಸರ ಅನುಮತಿಗಳನ್ನು ಪಡೆಯಲು ತೊಡಕು.
ಸುತ್ತಮುತ್ತಲಿನ ಗ್ರಾಮಗಳ ಪುನರ್ವಸತಿ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಸಾಧ್ಯತೆ.
ಸದ್ಯ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆ ಇದೀಗ ಮಹತ್ವದ ಹಂತ ತಲುಪಿದೆ. ಸರ್ಕಾರ ಎರಡು ಸ್ಥಳಗಳನ್ನು ಗುರುತಿಸಿದ್ದು, ಇಂದಿನ ಸಭೆಯಲ್ಲಿ ಅವುಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದು, ಸರ್ಕಾರ ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲು ಒಲವು ಹೊಂದಿದೆ. ಆದರೆ ರಾಜ್ಯ ಸರ್ಕಾರದ ಶಿಫಾರಸಿನ ಆಧಾರದಲ್ಲಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಂತಿಮ ಸ್ಥಳವನ್ನು ಆಯ್ಕೆ ಮಾಡಲಿದೆ ಕಾದು ನೋಡಬೇಕು.