Wednesday Puja Tips: ಬುಧವಾರ ತಪ್ಪದೇ ಈ ಒಂದು ಮಂತ್ರ 108 ಬಾರಿ ಪಠಿಸಿ; ಪ್ರಯೋಜನ ಸಾಕಷ್ಟಿವೆ! – Kannada News | Wednesday Ganesha Puja: Rituals, Benefits and Offerings for Success

ಬುಧವಾರ ಶ್ರೀ ಗಣೇಶನ ಆರಾಧನೆImage Credit source: Getty Images

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಅದರಲ್ಲಿ ಬುಧವಾರವನ್ನು ಶ್ರೀ ಗಣೇಶನ ಆರಾಧನೆಗೆ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ವಿಘ್ನಗಳನ್ನು ನಿವಾರಿಸುವ, ಬುದ್ಧಿ, ಜ್ಞಾನ ಹಾಗೂ ವಿವೇಕದ ಅಧಿಪತಿಯಾದ ಗಣೇಶನನ್ನು ಯಾವುದೇ ಶುಭ ಕಾರ್ಯಕ್ಕೂ ಮೊದಲು ಪೂಜಿಸುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬುಧವಾರದಂದು ಭಕ್ತಿಯಿಂದ ಗಣೇಶನ ಆರಾಧನೆ ಮಾಡಿದರೆ ಜೀವನದಲ್ಲಿನ ಅಡೆತಡೆಗಳು ದೂರವಾಗಿ, ಶಿಕ್ಷಣ, ಉದ್ಯೋಗ, ವ್ಯವಹಾರ ಹಾಗೂ ಕುಟುಂಬ ಜೀವನದಲ್ಲಿ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ.

ಬುಧವಾರವೇ ಗಣೇಶನ ಪೂಜೆಗೆ ಏಕೆ ವಿಶೇಷ?

ಹಿಂದೂ ಸಂಪ್ರದಾಯದಲ್ಲಿ ಗಣೇಶನನ್ನು ಪ್ರಥಮ ಪೂಜಿತ ದೇವರು ಎಂದು ಕರೆಯಲಾಗುತ್ತದೆ. ಯಾವುದೇ ದೇವರ ಆರಾಧನೆಗೂ ಮೊದಲು ಗಣೇಶನನ್ನು ಸ್ಮರಿಸುವ ಪದ್ಧತಿ ಇಂದಿಗೂ ಮುಂದುವರಿದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರವು ಬುಧ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದ್ದು, ಬುದ್ಧಿವಂತಿಕೆ, ಸಂವಹನ ಕೌಶಲ್ಯ, ವ್ಯಾಪಾರ ಅಭಿವೃದ್ಧಿ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ದಿನ ಗಣೇಶನ ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ಕಾರ್ಯಗಳಲ್ಲಿ ಯಶಸ್ಸು ಹಾಗೂ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಜು. 16ರಂದು ಗುರು-ಆದಿತ್ಯ ರಾಜಯೋಗ; ಈ ಮೂರು ಜನ್ಮಸಂಖ್ಯೆಯವರಿಗೆ ಅದೃಷ್ಟ!

ಬುಧವಾರ ಗಣೇಶನ ಪೂಜೆ ಮಾಡುವ ಸರಿಯಾದ ವಿಧಾನ:

ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಬಳಿಕ ಮನೆಯ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಬೇಕು. ನಂತರ ಗಣೇಶನಿಗೆ ದೂರ್ವಾ ಹುಲ್ಲು, ಕೆಂಪು ಅಥವಾ ಹಳದಿ ಹೂವುಗಳು, ಕೇಸರಿ ಹಾಗೂ ಅಕ್ಷತೆ ಅರ್ಪಿಸಬೇಕು. ತುಪ್ಪದ ದೀಪ ಹಚ್ಚಿ ಧೂಪ ಹಾಗೂ ಆರತಿಯಿಂದ ಪೂಜೆ ನೆರವೇರಿಸಬೇಕು. ಪೂಜೆಯ ಸಮಯದಲ್ಲಿ “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಕೊನೆಯಲ್ಲಿ ಆರತಿ ಮಾಡಿ ಪ್ರಸಾದವನ್ನು ಕುಟುಂಬ ಸದಸ್ಯರಿಗೆ ಹಂಚಬೇಕು.

ಗಣೇಶನಿಗೆ ಯಾವ ನೈವೇದ್ಯ ಅರ್ಪಿಸಿದರೆ ಇಷ್ಟವಾಗುತ್ತದೆ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಮೋದಕ ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯವಾಗಿದೆ. ಇದರ ಜೊತೆಗೆ ಲಡ್ಡು, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಋತುಮಾನದ ಹಣ್ಣುಗಳನ್ನು ಸಹ ಅರ್ಪಿಸಬಹುದು. ಭಕ್ತಿಯಿಂದ ಅರ್ಪಿಸುವ ಯಾವುದೇ ನೈವೇದ್ಯವನ್ನು ಗಣೇಶ ಸಂತೋಷದಿಂದ ಸ್ವೀಕರಿಸಿ ತನ್ನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ – Kannada News | Shiradi Ghat Landslide Threat: Sakaleshpur District Administration Issues High Alert, Restricts Tourist Entry to Waterfalls

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿರುವುದುImage Credit source: tv9

ಹಾಸನ, ಜುಲೈ 8: ಹಾಸನ (Hassan) ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ (Monsoon Rain) ಅಬ್ಬರ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ (NH-75) ಶಿರಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿಯುವ ಭೀತಿ ಆವರಿಸಿದೆ. ಈ ಹಿಂದೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ವಾಹನ ಸಂಚಾರ ಸ್ಥಗಿತಕ್ಕೆ ಕಾರಣವಾಗಿದ್ದ ದೊಡ್ಡತಪ್ಲು (ಸಕಲೇಶಪುರದಿಂದ ಮಂಗಳೂರು ಕಡೆಗೆ ತೆರಳುವ ಮಾರ್ಗ) ಬಳಿ ಈ ಬಾರಿಯೂ ಆತಂಕ ಹೆಚ್ಚಾಗಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ಸದ್ಯ 200 ಮೀಟರ್‌ಗಿಂತಲೂ ಅಧಿಕ ಜಾಗದಲ್ಲಿ ರಸ್ತೆಬದಿಯ ಮಣ್ಣು ಜರಗುತ್ತಿದ್ದು, ತಡೆಗೋಡೆ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಪರ್ಯಾಯ ಪಥ ಇರುವುದರಿಂದ ಸದ್ಯಕ್ಕಿಲ್ಲ ಟ್ರಾಫಿಕ್ ಆತಂಕ

ದೊಡ್ಡತಪ್ಲು ಬಳಿ ರಸ್ತೆ ಕಾಮಗಾರಿ ಬಾಕಿ ಇರುವುದರಿಂದ ಗುಡ್ಡದ ಮಣ್ಣು ಕುಸಿಯುತ್ತಿದ್ದರೂ, ಈ ಬಾರಿ ವಾಹನ ಸಂಚಾರಕ್ಕೆ ತಕ್ಷಣದ ದೊಡ್ಡ ಆತಂಕ ಎದುರಾಗಿಲ್ಲ. ಹೆದ್ದಾರಿಯ ಮತ್ತೊಂದು ಪಥದ ರಸ್ತೆಯು ಮುಕ್ತವಾಗಿದ್ದು, ಅದರ ಮೂಲಕವೇ ಸದ್ಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ, ಮಳೆಯ ಪ್ರಮಾಣ ಹೀಗೆಯೇ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಕಲೇಶಪುರ ತಹಶೀಲ್ದಾರ್ ಕಟ್ಟುನಿಟ್ಟಿನ ಆದೇಶ

ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ನದಿ-ಹಳ್ಳಗಳ ನೀರಿನ ಮಟ್ಟದಲ್ಲಿನ ಅಸಾಧಾರಣ ಏರಿಕೆ ಹಾಗೂ ರಸ್ತೆ-ಗುಡ್ಡ ಕುಸಿತದ ಮುನ್ಸೂಚನೆ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಜುಲೈ 7ರಂದು ಮಹತ್ವದ ಅಧಿಕೃತ ಆದೇಶವೊಂದನ್ನು ಹೊರಡಿಸಿದ್ದಾರೆ. ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಯ ಹಿತದೃಷ್ಟಿಯಿಂದ ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಜಲಪಾತಗಳು, ನದಿಗಳು, ಹಳ್ಳಗಳು, ಜಲಾಶಯಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಭೂಕುಸಿತ ಸಂಭವಿಸಬಹುದಾದ ಜಾಗಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಭೇಟಿ ನೀಡುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಎಚ್ಚರಿಕೆ

ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳು ಅಥವಾ ಪ್ರವಾಸಿಗರು ಈ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸುವುದು ಅಥವಾ ಪ್ರವೇಶಿಸಲು ಅವಕಾಶ ಕಲ್ಪಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ತಾಲೂಕಿನ ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ಟ್ರೆಕ್ಕಿಂಗ್ ವ್ಯವಸ್ಥೆ ಕಲ್ಪಿಸಬಾರದು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಜ್ಜರ್ ಹತ್ಯೆ, ಭಾರತಕ್ಕೆ ಕ್ಲೀನ್ ಚಿಟ್, ಸಂಪೂರ್ಣ ಚಿತ್ರಣವನ್ನೇ ಬದಲಿಸಿದ ಆಪರೇಷನ್ ಹಾರ್ಡ್ ಬಾಲ್ – Kannada News | Operation Hardball: US Led Global Crackdown Dismantles Lawrence Bishnoi Gangster Network

ವಾಷಿಂಗ್ಟನ್, ಜುಲೈ 08: ಭಾರತದ ಜೈಲಿನಲ್ಲಿ ಕುಳಿತು ಜಾಗತಿಕ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್(Lawrence Bishnoi) ಮತ್ತು ಆತನ ಸಹಚರರಿಗೆ ಅಮೆರಿಕ ಭಾರಿ ಹೊಡೆತ ನೀಡಿದೆ. ಅಮರಿಕ, ಕೆನಡಾ ಮತ್ತು ಯುರೋಪ್​ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಆಪರೇಷನ್ ಹಾರ್ಡ್​ ಬಾಲ್ ಎಂಬ ಜಾಗತಿಕ ಕಾರ್ಯಾಚರಣೆಯಲ್ಲಿ ಬಿಷ್ಣೋಯ್ ಸಿಂಡಿಕೇಟ್​​ನ 24 ಅಂತಾರಾಷ್ಟ್ರೀಯ ಶೂಟರ್​ಗಳು ಹಾಗೂ ಅಪರಾಧಿಗಳನ್ನು ಬಂಧಿಸಲಾಗಿದೆ.

2023 ರಲ್ಲಿ ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದಾಗ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂದು ಕೆನಡಾ ವಾದಿಸಿತ್ತು.

ಬಿಷ್ಣೋಯ್ ಗ್ಯಾಂಗ್ ಬಳಕೆ: ಭಾರತ ಸರ್ಕಾರವು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಬಳಸಿಕೊಂಡು ವಿದೇಶದಲ್ಲಿರುವ ಖಲಿಸ್ತಾನಿ ಮುಖಂಡರನ್ನು ಹತ್ಯೆ ಮಾಡಿಸುತ್ತಿದೆ ಎಂದು ಕೆನಡಾ ಆರೋಪಿಸಿತ್ತು. ಭಾರತ ಸರ್ಕಾರವು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು. ಇದು ಯಾವುದೇ ಆಧಾರವಿಲ್ಲದ, ರಾಜಕೀಯ ಪ್ರೇರಿತ ಮತ್ತು ಅಸಂಬದ್ಧ ಆರೋಪ ಎಂದು ಭಾರತ ಸ್ಪಷ್ಟಪಡಿಸಿತ್ತು ಹಾಗೂ ಇದಕ್ಕೆ ತಕ್ಕ ಸಾಕ್ಷಿಗಳನ್ನು ನೀಡುವಂತೆ ಕೆನಡಾಕ್ಕೆ ಸವಾಲು ಹಾಕಿತ್ತು.

ಅಮೆರಿಕದ ತನಿಖೆ ಬಯಲಿಗೆಳೆದ ಸತ್ಯವೇನು?
ಅಮೆರಿಕದ ಎಫ್‌ಬಿಐ (FBI) ನೇತೃತ್ವದಲ್ಲಿ ಜಾಗತಿಕ ಏಜೆನ್ಸಿಗಳು ಜಂಟಿಯಾಗಿ ನಡೆಸಿದ ‘ಆಪರೇಷನ್ ಹಾರ್ಡ್ ಬಾಲ್’ ತನಿಖೆಯ ವರದಿ ಈಗ ಸಂಪೂರ್ಣ ಚಿತ್ರಣವನ್ನು ಬದಲಾಯಿಸಿದೆ.

ಭಾರತ ಸರ್ಕಾರಕ್ಕೆ ಕ್ಲೀನ್ ಚೀಟ್: ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅಧಿಕೃತ ಆರೋಪಪಟ್ಟಿಯಲ್ಲಿ , ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರ ಅಥವಾ ಭಾಗೀದಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಮೆರಿಕದ ಪ್ರಾಸಿಕ್ಯೂಟರ್‌ಗಳು ಎಲ್ಲೂ ಭಾರತ ಸರ್ಕಾರದ ಹೆಸರನ್ನು ಉಲ್ಲೇಖಿಸಿಲ್ಲ.

ಇದೇ ವೇಳೆ 2023ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಲಾರೆನ್ಸ್​ ಬಿಷ್ಣೋಯ್ ಮತ್ತು ಆತನ ಆಪ್ತ ಗೋಲ್ಡಿ ಬ್ರಾರ್ ಕೈವಾಡವಿದೆ ಎಂದು ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

ಏನಿದು ‘ಆಪರೇಷನ್ ಹಾರ್ಡ್ ಬಾಲ್’
ಅಮೆರಿಕದ ನ್ಯಾಯಾಂಗ ಇಲಾಖೆ (DoJ) ಪ್ರಕಾರ, ಭಾರತ ಮೂಲದ ಅಪರಾಧ ಜಾಲಗಳು ಅಮೆರಿಕ, ಕೆನಡಾ, ಯುಕೆ, ಯುರೋಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಕೊಲೆ, ಸುಲಿಗೆ, ಮತ್ತು ಮಾದಕವಸ್ತು ಕಳ್ಳಸಾಗಣೆ ನಡೆಸುತ್ತಿದ್ದವು. ಇದನ್ನು ಮಟ್ಟಹಾಕಲು ವರ್ಷಗಳ ಕಾಲ ರಹಸ್ಯ ತನಿಖೆ ನಡೆಸಿ ಈ ಕಾರ್ಯಾಚರಣೆ ರೂಪಿಸಲಾಗಿತ್ತು.

37 ಜನರ ವಿರುದ್ಧ ಚಾರ್ಜ್​ಶೀಟ್: ಅಮೆರಿಕದ ನ್ಯಾಯಾಲಯದಲ್ಲಿ ಬಿಷ್ಣೋಯ್ ಸೇರಿದಂತೆ ಒಟ್ಟು 37 ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ದೋಷಾರೋಪಣೆ ಪಟ್ಟಿಗಳನ್ನು ದಾಖಲಿಸಲಾಗಿದೆ.

ಮತ್ತಷ್ಟು ಓದಿ: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?

ಕಾರ್ಯಾಚರಣೆಯ ಭಾಗವಾಗಿ ಕ್ಯಾಲಿಫೋರ್ನಿಯಾದಲ್ಲಿ 11 ಜನ ಸೇರಿದಂತೆ ಅಮೆರಿಕದಲ್ಲಿ 13, ಕೆನಡಾದಲ್ಲಿ 3, ಸ್ಪೇನ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ. 7 ಜನ ಈಗಾಗಲೇ ವಿವಿಧ ಜೈಲುಗಳಲ್ಲಿದ್ದಾರೆ. ಇನ್ನುಳಿದ 10 ಪರಾರಿಯಾದ ಉಗ್ರರಿಗಾಗಿ ತೀವ್ರ ಹುಡುಕಾಟ ಮುಂದುವರೆದಿದೆ.

ಈ ದಾಳಿಗಳ ವೇಳೆ ಬರೋಬ್ಬರಿ 1,000 ಕಿಲೋ ಕೊಕೇನ್, ಹೆರಾಯಿನ್, ಲಕ್ಷಾಂತರ ನಗದು ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾರೆನ್ಸ್ ಬಿಷ್ಣೋಯ್ ಸದ್ಯ ಭಾರತದ ಹೈ-ಸೆಕ್ಯುರಿಟಿ ಜೈಲಿನಲ್ಲಿದ್ದರೂ, ಕಳ್ಳಸಾಗಣೆ ಮಾಡಲಾದ ಮೊಬೈಲ್ ಫೋನ್‌ಗಳು ಮತ್ತು ಇಂಟರ್ನೆಟ್ ಕರೆಗಳ (VoIP) ಮೂಲಕ ವಿದೇಶಿ ಅಪರಾಧಗಳನ್ನು ನಿಯಂತ್ರಿಸುತ್ತಿದ್ದ ಎಂದು ಅಮೆರಿಕದ ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ.

ಗೋಲ್ಡಿ ಬ್ರಾರ್ (ಉತ್ತರ ಅಮೆರಿಕ): ಕೆನಡಾ ಮತ್ತು ಅಮೆರಿಕದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಮುಖ್ಯ ಕಮಾಂಡರ್ ಆಗಿ ಕಾರ್ಯಾಚರಣೆ ನಡೆಸುತ್ತಿದ್ದಾನೆ.

ರೋಹಿತ್ ಗೋದಾರ (ಯುರೋಪ್): ಯುರೋಪಿಯನ್ ದೇಶಗಳಲ್ಲಿ ಕುಳಿತು ಶಸ್ತ್ರಾಸ್ತ್ರ ಹಾಗೂ ಹತ್ಯೆಗಳ ಸ್ಕೆಚ್ ಹಾಕುತ್ತಿದ್ದಾನೆ.

ಸುಖ್‌ರಾಜ್ ಸಿಂಗ್ ಕಾಂಗ್ (ಭಾರತ): ಗ್ಯಾಂಗ್‌ನ ಭಾರತದ ಆಪರೇಷನ್‌ಗಳನ್ನು ನಿರ್ವಹಿಸುತ್ತಿದ್ದ.

ಸಾಮಾಜಿಕ ಮಾಧ್ಯಮದಲ್ಲಿ ‘ದೇಶಭಕ್ತಿ’ಯ ಮುಖವಾಡ
ಕೊಲೆ, ಅಪಹರಣ, ಮತ್ತು ಮಾನವ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಲಾರೆನ್ಸ್ ಬಿಷ್ಣೋಯ್, ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಾನೊಬ್ಬ ದೇಶಭಕ್ತ, ರಾಷ್ಟ್ರೀಯವಾದಿ ಮತ್ತು ಧಾರ್ಮಿಕ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ವಿದೇಶಗಳಲ್ಲಿರುವ ಭಾರತೀಯ ಯುವಕರನ್ನು ತನ್ನ ಗ್ಯಾಂಗ್‌ಗೆ ಸೆಳೆಯಲು ಬಿಷ್ಣೋಯ್ ಈ ಮುಖವಾಡವನ್ನು ಬಳಸಿಕೊಳ್ಳುತ್ತಿದ್ದ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ವಾಟ್ಸಾಪ್ ಮೂಲಕ 5 ಮಿಲಿಯನ್ ಡಾಲರ್ ಸುಲಿಗೆ, ನಟನ ಮನೆಗೆ ಗುಂಡು
ಬಿಷ್ಣೋಯ್ ಗ್ಯಾಂಗ್ ಅಮೆರಿಕದ ಲಾಸ್ ಏಂಜಲೀಸ್‌ನ ಪ್ರಮುಖ ಉದ್ಯಮಿಗಳಿಗೆ ಎನ್‌ಕ್ರಿಪ್ಟ್ ಮಾಡಿದ ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆ ಹಾಕಿ ಬರೋಬ್ಬರಿ 40 ಕೋಟಿ ರೂಪಾಯಿ (5 ಮಿಲಿಯನ್ ಯುಎಸ್ ಡಾಲರ್) ಸುಲಿಗೆಗೆ ಬೇಡಿಕೆ ಇಟ್ಟಿತ್ತು. ಅಲ್ಲದೆ, 2023 ರ ನವೆಂಬರ್‌ನಲ್ಲಿ ಕೆನಡಾದಲ್ಲಿ ವಾಸಿಸುತ್ತಿದ್ದ ಪ್ರಮುಖ ಭಾರತೀಯ ನಟ ಮತ್ತು ಗಾಯಕನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿ, ಯಾರೂ ನಮ್ಮಿಂದ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಪಂಜಾಬಿ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಪೋಸ್ಟ್ ಹಾಕಿದ್ದನ್ನೂ ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ-ಕೆನಡಾ ಸಂಬಂಧದ ಮೇಲಿನ ಪರಿಣಾಮ
ಈ ಹಿಂದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ್ದರು. ಭಾರತವು ಇದನ್ನು ಅಸಂಬದ್ಧ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿತ್ತು. ಈಗ ಅಮೆರಿಕದ ತನಿಖೆಯಲ್ಲಿ ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರಂತಹ  ಇಂಟರ್​ನ್ಯಾಷನಲ್ ಗ್ಯಾಂಗ್‌ಸ್ಟರ್‌ಗಳ ಒಪ್ಪಂದ ಇರುವುದು ಸಾಬೀತಾಗುತ್ತಿರುವುದರಿಂದ, ಭಾರತದ ವಾದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬೆಂಬಲ ಸಿಕ್ಕಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ವಾರ್ಷಿಕ ಸಭೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಮಾತು – Kannada News | No Parade In Public: Minister Priyank Kharge Talks about Belagavi RSS pracharaks gather

ಬೆಂಗಳೂರು/ಬೆಳಗಾವಿ, (ಜುಲೈ 08): ಇದೇ ಜುಲೈ 10ರಿಂದ 12ರವರೆಗೆ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ (Belagavi) ಆರ್​​ಎಸ್​​ಎಸ್​ (RSS) ಪ್ರಚಾರಕರ ವಾರ್ಷಿಕ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಜನಗಣತಿ ಪ್ರಕ್ರಿಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಈ ಸಭೆಯಲ್ಲಿ ದೇಶದಾದ್ಯಂತ ಇರುವ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮ ಬೇಕಿದ್ರೆ ನಡೆಸಿಕೊಳ್ಳಲಿ. ಆದ್ರೆ, ಬೀದಿಗಿಳಿದು ಪರೇಡ್​ಗೆ ಅವಕಾಶ ಇಲ್ಲ ಎಂದ ಖಡಕ್ ಆಗಿ ಹೇಳಿದ್ದಾರೆ.

ನಾನು ಗೃಹ ಸಚಿವನಾಗಿ ಇರುವ ತನಕ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಚರ್ಚೆಯಾಗುತ್ತಿದ್ದು, ಇದರ ಮಧ್ಯೆ ಇದೀಗ ಬೆಳಗಾವಿ ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲೇ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವ ಬ್ಯಾಂಕ್​ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು – Kannada News | Karnataka among 5 states at rose to upper middle income level by World Bank report

ಬೆಂಗಳೂರು, ಜುಲೈ 8: ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕೆಲವೇ ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಇದೆ. ಅತಿಹೆಚ್ಚು ತಲಾದಾಯ ಇರುವ ಭಾರತೀಯ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದೆಹಲಿಯನ್ನು ಬಿಟ್ಟರೆ ಕರ್ನಾಟಕವೇ (Karnataka) ಅತಿಹೆಚ್ಚು ತಲಾದಾಯ ಹೊಂದಿರುವುದು. ವಿಶ್ವಬ್ಯಾಂಕ್‌ನ ಆದಾಯ ವರ್ಗೀಕರಣದ ಪ್ರಕಾರ, ಭಾರತ ವಿಶ್ವಬ್ಯಾಂಕ್‌ನ ‘ಕೆಳ-ಮಧ್ಯಮ ಆದಾಯ’ (Lower-Middle Income) ಮಟ್ಟದಲ್ಲಿದ್ದರೂ 5 ರಾಜ್ಯಗಳು ‘ಮೇಲ್ಮಧ್ಯಮ ಆದಾಯದ’ (Upper-Middle Income) ಮಿತಿಯನ್ನು ದಾಟಿ ಮುನ್ನಡೆದಿವೆ. ದೆಹಲಿ, ಕರ್ನಾಟಕ ಬಿಟ್ಟರೆ ಈ ಸಾಧನೆ ಮಾಡಿರುವುದು ತೆಲಂಗಾಣ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳು ಮಾತ್ರ. ಇತರ 3 ರಾಜ್ಯಗಳು ಅತ್ಯಲ್ಪ ಅಂತರದಿಂದ ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿಲ್ಲ. ಅವರು ಮಹಾರಾಷ್ಟ್ರ, ಹರ್ಯಾಣ ಮತ್ತು ಕೇರಳ ರಾಜ್ಯಗಳು.

ಮೇಲ್ಮಧ್ಯಮ ಆದಾಯ ಮಿತಿ ದಾಟಿದ 5 ರಾಜ್ಯಗಳು

ವಿಶ್ವಬ್ಯಾಂಕ್ ಪ್ರಕಾರ ಮೇಲ್ಮಧ್ಯಮ ಆದಾಯದ ಗುಂಪಿಗೆ ಸೇರಲು ಕನಿಷ್ಠ $4,635 ತಲಾ ಆದಾಯದ ಅಗತ್ಯವಿದೆ. ಭಾರತದ ಈ ಐದು ರಾಜ್ಯಗಳು ಅದನ್ನು ಮೀರಿವೆ:

  1. ದೆಹಲಿ: $6,217 (ದೇಶದಲ್ಲೇ ಮೊದಲ ಸ್ಥಾನ)
  2. ಕರ್ನಾಟಕ: $5,579 (ಎರಡನೇ ಸ್ಥಾನ)
  3. ತೆಲಂಗಾಣ: $5,407
  4. ತಮಿಳುನಾಡು: $5,329
  5. ಗುಜರಾತ್: $4,734

ಸ್ವಲ್ಪದರಲ್ಲೇ ಮೈಲಿಗಲ್ಲು ವಂಚಿತಗೊಂಡ 3 ರಾಜ್ಯಗಳು

ಈ ರಾಜ್ಯಗಳು ಅತ್ಯಲ್ಪ ಡಾಲರ್‌ಗಳ ವ್ಯತ್ಯಾಸದಿಂದಾಗಿ ಮೇಲ್ಮಧ್ಯಮ ಆದಾಯದ ಪಟ್ಟಿಗೆ ಸೇರಲು ಬಾಕಿ ಉಳಿದಿವೆ:

  1. ಮಹಾರಾಷ್ಟ್ರ: $4,628 (ಕೇವಲ $8 ರಷ್ಟು ಬಾಕಿ)
  2. ಹರಿಯಾಣ: $4,627 (ಕೇವಲ $9 ರಷ್ಟು ಬಾಕಿ)
  3. ಕೇರಳ: $4,610 (ಕೇವಲ $26 ರಷ್ಟು ಬಾಕಿ)

ಇದನ್ನೂ ಓದಿ: ನಕಲಿ ವೆಬ್ಸೈಟ್​ಗಳನ್ನು ಗುರುತಿಸುವುದು ಸುಲಭ; 5 ಉಪಾಯಗಳನ್ನು ಹಂಚಿಕೊಂಡಿದೆ ಸರ್ಕಾರದ ಪಿಐಬಿ ಫ್ಯಾಕ್ಟ್​ಚೆಕ್

ಕನಿಷ್ಠ ಆದಾಯ ಹೊಂದಿರುವ ರಾಜ್ಯಗಳು

ದೇಶದಲ್ಲಿ ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ:

  • ಬಿಹಾರ: $984 (ದೇಶದಲ್ಲೇ ಅತ್ಯಂತ ಕಡಿಮೆ)
  • ಉತ್ತರ ಪ್ರದೇಶ: $1,403
  • ಜಾರ್ಖಂಡ್: $1,470

ವಿಶ್ವಬ್ಯಾಂಕ್ ವರ್ಗೀಕರಣ ಹೇಗೆ ಕೆಲಸ ಮಾಡುತ್ತದೆ?

  • ಕಡಿಮೆ ಆದಾಯ (Low Income): $1,175 ಕ್ಕಿಂತ ಕಡಿಮೆ
  • ಕೆಳ-ಮಧ್ಯಮ ಆದಾಯ (Lower-Middle Income): $1,175 ರಿಂದ $4,635 (ಭಾರತ ಒಟ್ಟಾರೆಯಾಗಿ ಈ ಗುಂಪಿನಲ್ಲಿದೆ)
  • ಮೇಲ್ಮಧ್ಯಮ ಆದಾಯ (Upper-Middle Income): $4,635 ರಿಂದ $14,375
  • ಹೆಚ್ಚಿನ ಆದಾಯ (High Income): $14,375 ಕ್ಕಿಂತ ಹೆಚ್ಚು

ಕೆಲ ರಾಜ್ಯಗಳ ಬೆಳವಣಿಗೆಗೆ ಪ್ರಮುಖ ಕಾರಣಗಳೇನು?

ವಿಶೇಷವಾಗಿ ಕರ್ನಾಟಕ, ದೆಹಲಿ, ಮತ್ತು ತೆಲಂಗಾಣದಂತಹ ರಾಜ್ಯಗಳ ಈ ಸಾಧನೆಗೆ ಅಲ್ಲಿನ ಮಾಹಿತಿ ತಂತ್ರಜ್ಞಾನ (IT), ಉತ್ಪಾದನಾ ವಲಯ (Manufacturing), ಆರ್ಥಿಕ ಸೇವೆಗಳು, ಕೈಗಾರಿಕಾ ಪ್ರಗತಿ ಹಾಗೂ ಹೆಚ್ಚಿನ ವಿದೇಶಿ ಹೂಡಿಕೆಗಳು ಪ್ರಮುಖ ಕಾರಣವಾಗಿವೆ. ಉದಾಹರಣೆಗೆ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ತಲಾ ಆದಾಯವು ಇಂದು ವಿಯೆಟ್ನಾಂ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗಿಂತಲೂ ಅಧಿಕವಾಗಿದೆ.

ಆದಾಗ್ಯೂ, ಶ್ರೀಮಂತ ರಾಜ್ಯಗಳು ಮತ್ತು ಬಡ ರಾಜ್ಯಗಳ ನಡುವಿನ ಆರ್ಥಿಕ ಅಂತರವು (Interstate inequality) ಕಳೆದ ಮೂರು ದಶಕಗಳಲ್ಲಿ ಹೆಚ್ಚುತ್ತಿರುವುದು ಮತ್ತೊಂದು ಆತಂಕಕಾರಿ ವಿಷಯವಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಜೂನ್​ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ

ಕರ್ನಾಟಕ ಮುಖ್ಯಮಂತ್ರಿ ಡಿಕೆಶಿ ಪ್ರತಿಕ್ರಿಯೆ

ವಿಶ್ವಬ್ಯಾಂಕ್​ನ ಲೇಟೆಸ್ಟ್ ವರದಿಯಲ್ಲಿ ಕರ್ನಾಟಕವು ಮೇಲ್ಮಧ್ಯಮ ಆದಾಯ ಗುಂಪಿಗೆ ಬಡ್ತಿ ಪಡೆದಿರುವ ವಿಚಾರವನ್ನು ರಾಜ್ಯ ಸಿಎಂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿ, ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ವಿಚಾರ ಎಂದಿದ್ದಾರೆ.

‘ನಮ್ಮ ರೈತರು, ಕಾರ್ಮಿಕರು, ಉದ್ದಿಮೆದಾರರು, ನವೋದ್ಯಮಗಳು, ಕೈಗಾರಿಕೆಗಳು, ಸಂಶೋಧಕರು, ಮಹಿಳೆಯರು, ಯುವಜನರ ಕಠಿಣ ಪರಿಶ್ರಮ ಮತ್ತು ಆಶೋತ್ತರಗಳನ್ನು ಇದು ಪ್ರತಿಬಿಂಬಿಸುತ್ತದೆ. ಇವರು ಕರ್ನಾಟಕವನ್ನು ತಂತ್ರಜ್ಞಾನ, ಉತ್ಪಾದನೆ, ನಾವೀನ್ಯತೆ ಮತ್ತು ಹೂಡಿಕೆಯಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದಾರೆ’ ಎಂದು ಡಿಕೆಶಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಅವರ ಎಕ್ಸ್ ಪೋಸ್ಟ್

‘ಕರ್ನಾಟಕದ ಅತಿದೊಡ್ಡ ಬಲವೇ ಅದರ ಜನರು. ಅವಕಾಶ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರಬೇಕೆನ್ನುವುದು ನಮ್ಮ ದೃಷ್ಟಿ. ರಾಜ್ಯದ ಆರ್ಥಿಕ ಪ್ರಗತಿಯ ಲಾಭಗಳು ಪ್ರತಿಯೊಂದು ಮನೆ, ಪ್ರದೇಶ ಮತ್ತು ನಾಗರಿಕರನ್ನು ಮುಟ್ಟುವಂತಾಗಬೇಕು’ ಎಂದು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:15 pm, Wed, 8 July 26

Source link

ಕ್ರೀಡಾಪಟುಗಳೇ ಎಚ್ಚರ… SAI ಹೆಸರಿನಲ್ಲಿ ವಂಚನೆ ಜಾಲ ಬಯಲು! – Kannada News | Fake SAI Alert: Emerging Athletes Scammed Online!

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ (MYAS) ಮಾನ್ಯತೆ ಪಡೆದಿರುವುದಾಗಿ ಸುಳ್ಳು ಹೇಳಿಕೊಂಡು ಆಟಗಾರರನ್ನು ವಂಚಿಸುತ್ತಿದ್ದ ‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (Sports Association of India)’ ಎಂಬ ನಕಲಿ ಸಂಸ್ಥೆಯ ಜಾಲವನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಬಯಲಿಗೆಳೆದಿದೆ. ದೇಶದ ಉದಯೋನ್ಮುಖ ಕ್ರೀಡಾಪಟುಗಳು ಇಂತಹ ನಕಲಿ ಜಾಹೀರಾತುಗಳನ್ನು ನಂಬಿ ಹಣ ಕಳೆದುಕೊಳ್ಳದಂತೆ ಪಿಐಬಿ ಫ್ಯಾಕ್ಟ್‌ಚೆಕ್ ಎಚ್ಚರಿಕೆ ನೀಡಿದೆ.

ನಕಲಿ SAI  ಸಂಸ್ಥೆ:

ಭಾರತ ಸರ್ಕಾರದ ಅಧಿಕೃತ ಕ್ರೀಡಾ ಸಂಸ್ಥೆಯ ಹೆಸರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (Sports Authority of India – SAI) ಆಗಿದೆ. ಆದರೆ ವಂಚಿಸುತ್ತಿರುವ ನಕಲಿ ಸಂಸ್ಥೆಯು ‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (Sports Association of India) ಎಂಬ ಹೆಸರನ್ನು ಬಳಸುತ್ತಿದೆ. ಹೆಸರಲ್ಲೇ ಇರುವ ಈ ಸಣ್ಣ ವ್ಯತ್ಯಾಸವನ್ನು ಕ್ರೀಡಾಪಟುಗಳು ಮತ್ತು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಪಿಐಬಿ  ಎಚ್ಚರಿಸಿದೆ.

‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ದ ನಕಲಿ ಜಾಹೀರಾತು

ವಂಚಿಸುತ್ತಿರುವುದು ಹೇಗೆ?

ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೆಸರಿನ ನಕಲಿ ಸಂಸ್ಥೆಯು ಅಧಿಕೃತ ಸರ್ಕಾರಿ ಕ್ರೀಡಾ ಸಂಸ್ಥೆಯಂತೆ ನಟಿಸಲು ಹಲವು ತಂತ್ರಗಳನ್ನು ಬಳಸುತ್ತಿದೆ. ಅವುಗಳಲ್ಲಿ ಮುಖ್ಯವಾದವು…

  • ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದಾಗಿ ಹೇಳಿ ಆಟಗಾರರಿಗೆ ಆಕರ್ಷಕ ಆಯ್ಕೆ ಪತ್ರಗಳನ್ನು ಕಳುಹಿಸಲಾಗುತ್ತಿದೆ.
  •  ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಲು ಪ್ರತಿ ಆಟಗಾರರಿಂದ ₹1,500 ನೋಂದಣಿ ಶುಲ್ಕವನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ.
  • ಆಟಗಾರರಲ್ಲಿ ನಂಬಿಕೆ ಹುಟ್ಟಿಸಲು ನಕಲಿ ಪ್ರಚಾರ ಸಾಮಗ್ರಿಗಳು ಮತ್ತು ಜಾಹೀರಾತುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ.

ಸರ್ಕಾರದ ಸ್ಪಷ್ಟನೆ ಏನು?

ಪಿಐಬಿ ಫ್ಯಾಕ್ಟ್‌ಚೆಕ್ ನಡೆಸಿರುವ ತನಿಖೆಯ ಬೆನ್ನಲ್ಲೇ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ಈ ಬಗ್ಗೆ ತನಿಖೆಯನ್ನೂ ಕೂಡ ಕೈಗೊಳ್ಳುವ ಸಾಧ್ಯತೆಯಿದೆ.

  •  ಯಾವುದೇ ಮಾನ್ಯತೆ ಇಲ್ಲ: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೂ ಈ ‘ಕ್ರೀಡಾ ಸಂಸ್ಥೆ’ಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಯಾವುದೇ ಅಧಿಕೃತ ಮಾನ್ಯತೆ ಅಥವಾ ಸಂಯೋಜನೆ ನೀಡಿಲ್ಲ.
  • ‘ಫಿಟ್ ಇಂಡಿಯಾ’ ಹೆಸರಿನ ದುರ್ಬಳಕೆ: ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಫಿಟ್ ಇಂಡಿಯಾ ಚಳವಳಿ’ಗೂ ಈ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಫಿಟ್ ಇಂಡಿಯಾ ಲೋಗೋ ಅಥವಾ ಬ್ರ್ಯಾಂಡಿಂಗ್ ಬಳಸಲು ಈ ಸಂಸ್ಥೆಗೆ ಯಾವುದೇ ಅನುಮತಿ ಅಥವಾ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಕ್ರೀಡಾಪಟುಗಳು ಏನು ಮಾಡಬೇಕು?

  • ಯಾವುದೇ ಕ್ರೀಡಾಕೂಟಕ್ಕೆ ನೋಂದಾಯಿಸಿಕೊಳ್ಳುವ ಮುನ್ನ ಆ ಸಂಸ್ಥೆಗೆ ಕ್ರೀಡಾ ಸಚಿವಾಲಯದ ಅಧಿಕೃತ ಅಂಗೀಕಾರ ಇದೆಯೇ ಎಂಬುದನ್ನು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.
  • ಆನ್‌ಲೈನ್‌ನಲ್ಲಿ ಕೇಳಲಾಗುವ ಅನಧಿಕೃತ ನೋಂದಣಿ ಶುಲ್ಕಗಳನ್ನು ಪಾವತಿಸಬೇಡಿ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಒಟ್ಟಾರೆಯಾಗಿ ಹೇಳಬೇಕೆಂದರೆ, ಕ್ರೀಡಾ ಲೋಕದಲ್ಲಿ ಸಾಧನೆ ಮಾಡಬೇಕೆಂಬ ಯುವ ಪ್ರತಿಭೆಗಳ ಕನಸನ್ನು ಬಂಡವಾಳ ಮಾಡಿಕೊಳ್ಳುವ ಇಂತಹ ನಕಲಿ ಜಾಲಗಳ ಬಗ್ಗೆ ಸದಾ ಜಾಗರೂಕರಾಗಿರಿ. ಯಾವುದೇ ಸಂಸ್ಥೆಗೆ ಹಣ ಪಾವತಿಸುವ ಮುನ್ನ ಕೇಂದ್ರ ಕ್ರೀಡಾ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ಮೂಲಕ ಅದರ ನೈಜತೆಯನ್ನು ಕಡ್ಡಾಯವಾಗಿ ಪರಿಶೀಲಿಸಿ. ನಿಮ್ಮ ಸುತ್ತಮುತ್ತಲಿನ ಕ್ರೀಡಾಪಟುಗಳು, ಪೋಷಕರು ಮತ್ತು ತರಬೇತುದಾರರಿಗೆ ಈ ನಕಲಿ ‘ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ಜಾಲದ ಬಗ್ಗೆ ಮಾಹಿತಿ ನೀಡಿ, ಅವರನ್ನು ವಂಚನೆಯಿಂದ ಪಾರು ಮಾಡಿ. ನೆನಪಿಡಿ, ನಿಮ್ಮ ಎಚ್ಚರಿಕೆಯೇ ವಂಚಕರಿಗೆ ಮೊದಲ ತಡೆಗೋಡೆ!

Source link

ಬರುಯಿಪುರ್ ಅತ್ಯಾಚಾರ-ಕೊಲೆ ಕೇಸ್: ಆರೋಪಿಯ ಎನ್​ಕೌಂಟರ್, ಆತ ಸತ್ತಿದ್ದೇ ಒಳ್ಳೆಯದಾಯಿತು ಎಂದ ತಾಯಿ – Kannada News | Baruipur Murder Accused Prabhash Mondal Killed in Police Encounter, Mother Says He Deserved It

ಕೋಲ್ಕತ್ತಾ, ಜುಲೈ 08: ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಬರಿಯಿಪುರ್ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ(Murder) ಪ್ರಕರಣದ ಆರೋಪಿ ಪ್ರಭಾಸ್ ಮಂಡಲ್ ಮಂಗಳವಾರ ರಾತ್ರಿ ನಡೆದ ಪೊಲೀಸ್ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ. ಮಗನ ಕೃತ್ಯಕ್ಕೆ ಸ್ವತಃ ತಾಯಿಯೇ ಆಕ್ರೋಶ ಹೊರಹಾಕಿದ್ದು, ಶವ ತರಲು ತಾನು ಹೋಗುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಎನ್‌ಕೌಂಟರ್ ನಡೆದಿದ್ದು ಹೇಗೆ?
ಮಂಗಳವಾರ ತಡರಾತ್ರಿ 12.45ರ ಸುಮಾರಿಗೆ ಬರುಯಿಪುರದ ಸೂರ್ಯಪುರದಲ್ಲಿ ಘಟನೆ ನಡೆದಿದೆ. ಆರೋಪಿ ಪ್ರಭಾಸ್​​ ಮಂಡಲ್​ನನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಸಾರ್ವಜನಿಕರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಪೊಲೀಸರು ತಡರಾತ್ರಿ ಈ ಕಾರ್ಯಾಚರಣೆ ನಡೆಸಿದ್ದರು.

ಆದರೆ, ಕತ್ತಲೆಯ ಲಾಭ ಪಡೆಯಲು ಯತ್ನಿಸಿದ ಪ್ರಭಾಸ್, ದಿಢೀರನೆ ಪೊಲೀಸರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆಯೇ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಭಾಸ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಪ್ರಭಾಸ್ ತಾಯಿ ಹೇಳಿಕೆ

ಹುಡುಗಿಯನ್ನು ಹಿಂಸಿಸಿದವನು ಸತ್ತಿದ್ದೇ ಒಳ್ಳೆಯದಾಯಿತು:ತಾಯಿ
ತನ್ನ ಮಗ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಸುದ್ದಿ ಕೇಳಿ ತಾಯಿ ಸಂಧ್ಯಾ ಮಂಡಲ್ ತೀವ್ರ ದುಃಖಿತರಾಗಿದ್ದರೂ, ಮಗನ ಕೃತ್ಯವನ್ನು ಖಂಡಿಸಿದ್ದಾರೆ. ಒಬ್ಬ ತಾಯಿಯಾಗಿ ನನಗೆ ದುಃಖವಾಗುತ್ತಿದೆ ನಿಜ. ಆದರೆ ಅವನು ಮಾಡಿದ ಪಾಪದ ಕೃತ್ಯಕ್ಕೆ ಅವನಿಗೆ ತಕ್ಕ ಶಿಕ್ಷೆಯೇ ಸಿಕ್ಕಿದೆ. ಆ ಪುಟ್ಟ ಹುಡುಗಿಯನ್ನು ಅವನು ಎಷ್ಟು ಹಿಂಸಿಸಿದ್ದನೋ, ಹಾಗಾಗಿ ಅವನು ಸತ್ತಿದ್ದೇ ಒಳ್ಳೆಯದಾಯಿತು. ನಾನು ಅವನ ಶವವನ್ನು ಮನೆಗೆ ತರಲು ಹೋಗುವುದಿಲ್ಲ, ಅವನ ಮುಖ ನೋಡಲು ಸಹ ನನಗೆ ಇಷ್ಟವಿಲ್ಲ. ಅವನು ನನ್ನ ಮಾತು ಕೇಳದೆ ಯಾವಾಗಲೂ ಕುಡಿದು ತಿರುಗುತ್ತಿದ್ದ ಎಂದಿದ್ದಾರೆ.

ಮತ್ತಷ್ಟು ಓದಿ: ಗುಟ್ಟಾಗಿ ಮದುವೆಯಾಗಿದ್ದಳಾ ಸಿಯಾ? ಕೇತನ್ ಕೊಲೆ ಪ್ರಕರಣದಲ್ಲಿ ಹೊಸ ರಹಸ್ಯ ಬಯಲು

ಪ್ರಕರಣದ ಹಿನ್ನೆಲೆ ಏನು?
ಕಳೆದ ಶನಿವಾರ ರಾತ್ರಿ ಸೂರ್ಯಪುರದ ಪೊದೆಗಳು ಹಾಗೂ ಕಾಡುಗಳಿಂದ ಆವೃತವಾದ ಏಕಾಂತ ಜಾಗದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ ಬರುಯಿಪುರದ ಕೊಳವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ಬಾಲಕಿಯ ಶವ ಎಲ್ಲಿದೆ ಎಂಬುದನ್ನು ಪೊಲೀಸರಿಗೆ ತೋರಿಸಿದ್ದೇ ಈ ಪ್ರಭಾಸ್ ಮಂಡಲ್. ಈ ಪ್ರಕರಣದ ಪ್ರಮುಖ ಆರೋಪಿ ಆನಂದ್ ಸರ್ದಾರ್ ಮತ್ತು ಆತನ ಸಹಚರರು ಆ ಹುಡುಗಿಯನ್ನು ಅಪಹರಿಸಿ ಮರಳಿ ಕರೆತರಲು ತನಗೆ 10,000 ರೂಪಾಯಿ ಸುಪಾರಿ ಕೊಡುವುದಾಗಿ ಒಪ್ಪಿಕೊಂಡಿದ್ದರು ಎಂದು ಪ್ರಭಾಸ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಸದ್ಯ ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Dam Water Level: ಮೈದುಂಬಿ ಹರಿಯುತ್ತಿವೆ ರಾಜ್ಯದ ಜಲಾಶಯಗಳು: ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 8ರ ನೀರಿನ ಮಟ್ಟದ ವಿವರ – Kannada News | Karnataka Reservoir Water Level on july 8: Monsoon Inflow Boosts Almatti, KRS, Bhadra Dams

ಬೆಂಗಳೂರು, ಜು.8: ಪಶ್ಚಿಮ ಘಟ್ಟಗಳು ಸೇರಿದಂತೆ ರಾಜ್ಯದಾದ್ಯಂತ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಜಯಪುರದ ಆಲಮಟ್ಟಿ ಡ್ಯಾಂಗೆ ಅತಿ ಹೆಚ್ಚು ನೀರು ಹರಿದುಬರುತ್ತಿದ್ದು, ಕೆಆರ್‌ಎಸ್, ತುಂಗಭದ್ರಾ ಮತ್ತು ಭದ್ರಾ ಜಲಾಶಯಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.

ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ)

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಆಲಮಟ್ಟಿ ಡ್ಯಾಂಗೆ ಮಹಾರಾಷ್ಟ್ರ ಹಾಗೂ ಘಟ್ಟ ಪ್ರದೇಶದ ಮಳೆಯಿಂದಾಗಿ ಅತಿ ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ.

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 510.68 ಮೀಟರ್

ಒಳಹರಿವು: 1,26,373 ಕ್ಯೂಸೆಕ್

ಹೊರಹರಿವು: 483 ಕ್ಯೂಸೆಕ್

ಕೆಆರ್‌ಎಸ್ ಜಲಾಶಯ (ಮಂಡ್ಯ)

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕಾಗಿರುವುದರಿಂದ ಮಂಡ್ಯದ ಕೃಷ್ಣರಾಜಸಾಗರ (KRS) ಡ್ಯಾಂ ನೀರಿನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ನಿನ್ನೆ ಬೆಳಗ್ಗೆ 5,734 ಕ್ಯೂಸೆಕ್ ಇದ್ದ ಒಳಹರಿವು ಇಂದು ಮತ್ತಷ್ಟು ಹೆಚ್ಚಾಗಿದೆ.

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ನೀರಿನ ಮಟ್ಟ: 83.64 ಅಡಿ

ಒಳಹರಿವು: 7,531 ಕ್ಯೂಸೆಕ್

ಹೊರಹರಿವು: 790 ಕ್ಯೂಸೆಕ್

ತುಂಗಭದ್ರಾ ಜಲಾಶಯ (ಕೊಪ್ಪಳ)

ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ತೀವ್ರಗೊಂಡಿದೆ. ಕೇವಲ ಎರಡೇ ದಿನಗಳಲ್ಲಿ ಜಲಾಶಯಕ್ಕೆ 2 ಟಿಎಂಸಿಗೂ ಅಧಿಕ ನೀರು ಹರಿದುಬಂದಿದೆ. ಎರಡು ದಿನಗಳ ಹಿಂದೆ 9 ಟಿಎಂಸಿ ಇದ್ದ ನೀರಿನ ಸಂಗ್ರಹ ಈಗ 11.217 ಟಿಎಂಸಿಗೆ ಏರಿಕೆಯಾಗಿದೆ.

ಒಟ್ಟು ಸಂಗ್ರಹ ಸಾಮರ್ಥ್ಯ: 105 ಟಿಎಂಸಿ

ಇಂದಿನ ಸಂಗ್ರಹ: 11.217 ಟಿಎಂಸಿ

ಒಳಹರಿವು: 17,000ಕ್ಕೂ ಅಧಿಕ ಕ್ಯೂಸೆಕ್

ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ (ಪ್ರಸ್ತುತ ಸಂಗ್ರಹ: 12.485 ಟಿಎಂಸಿ)

ಭದ್ರಾ ಜಲಾಶಯ (ಶಿವಮೊಗ್ಗ)

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೂ ಸಹ ಮಲೆನಾಡು ಭಾಗದ ಮಳೆಯಿಂದಾಗಿ ಉತ್ತಮ ಒಳಹರಿವು ಇದೆ.

ಗರಿಷ್ಠ ಮಟ್ಟ: 186 ಅಡಿ

ಇಂದಿನ ನೀರಿನ ಮಟ್ಟ: 142.8 ಅಡಿ

ಒಳಹರಿವು: 17,818 ಕ್ಯೂಸೆಕ್

ಹೊರಹರಿವು: 214 ಕ್ಯೂಸೆಕ್

ಒಟ್ಟು ಸಾಮರ್ಥ್ಯ: 71.535 ಟಿಎಂಸಿ (ಪ್ರಸ್ತುತ ಸಂಗ್ರಹ: 28.752 ಟಿಎಂಸಿ)

ಇದನ್ನೂ ಓದಿ: ಭಯೋತ್ಪಾದನಾ ಪಿತೂರಿ ಜಾಲ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಎನ್‌ಐಎ ಶೋಧ

ಹಾರಂಗಿ ಜಲಾಶಯ (ಕೊಡಗು)

ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯವು ಸಹ ತುಂಬುವ ಹಂತದತ್ತ ಸಾಗುತ್ತಿದೆ.

ಗರಿಷ್ಠ ಮಟ್ಟ: 2859 ಅಡಿ

ಇಂದಿನ ನೀರಿನ ಮಟ್ಟ: 2838 ಅಡಿ

ಒಳಹರಿವು: 2,090 ಕ್ಯೂಸೆಕ್

ಹೊರಹರಿವು: 180 ಕ್ಯೂಸೆಕ್

ಬಸವಸಾಗರ ಜಲಾಶಯ (ನಾರಾಯಣಪುರ – ಯಾದಗಿರಿ)

ಯಾದಗಿರಿ ಜಿಲ್ಲೆಯ ಹೂವಿನಹಡಗಲಿ (ಹುಣಸಗಿ) ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯದಲ್ಲಿ ಒಳಹರಿವು ಸದ್ಯಕ್ಕೆ ಕ್ಷೀಣಿಸಿದೆ.

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ಮಟ್ಟ: 488.80 ಮೀಟರ್

ಒಳಹರಿವು: 00 ಕ್ಯೂಸೆಕ್

ಹೊರಹರಿವು: 767 ಕ್ಯೂಸೆಕ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೊನೆಗೂ ನನ್ನ ಕನಸು ನನಸಾಯ್ತು; ಸ್ವಂತ ಮನೆ ಖರೀದಿಸಿದ ಖುಷಿಯಲ್ಲಿ ತೇಲಾಡಿದ ಬೆಂಗಳೂರಿನ ಟೆಕ್ಕಿ – Kannada News | Bengaluru man shares the emotional moment of buying his own home.

ಬೆಂಗಳೂರು, ಜುಲೈ 08: ಬಾಡಿಗೆ ಮನೆ ಯಾವತ್ತಿದ್ರೂ ಸ್ವಂತ ಮನೆ ಫೀಲ್ ಕೊಡಲ್ಲ. ಬಾಡಿಗೆ ಮನೆಯಲ್ಲಿದ್ದವರಿಗೆ ತಮ್ಮ ಸ್ವಂತ ಸೂರು ಇರಬೇಕೆನ್ನುವ ಕನಸು. ಆದರೆ ಈ ಮದ್ಯಮವರ್ಗದ ಜನರು ಇರೋ ಸಂಬಳದಲ್ಲಿ ಅಲ್ಪ ಸ್ವಲ್ಪ ಉಳಿಸಿ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ. ದುಡಿದ ಹಣವನ್ನೆಲ್ಲಾ ಬಾಡಿಗೆ ಕಟ್ಟಿ, ಜೀವನ ನಿರ್ವಹಣೆಗೆ ಸಾಕಾಗುತ್ತಿದೆ. ಹೀಗಿರುವಾಗ ಬೆಂಗಳೂರಿನ (Bengaluru) ಐಟಿ ಉದ್ಯೋಗಿಯ ಸ್ವಂತ ಮನೆಯ ಕನಸು ಈಡೇರಿದೆ. ಬಾಡಿಗೆ ಮನೆಯಿಂದ ಸ್ವಂತ ಮನೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಸ್ವಂತ ಮನೆಗೂ ಬಾಡಿಗೆ ಮನೆಗೂ ಇರುವ ವ್ಯತ್ಯಾಸ ಗೊತ್ತಾಯಿತು ಎಂದಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಶಾಲ್ ಶರ್ಮಾ ಎಂಬ ಯುವಕ ಟೆಕ್ಕಿ ಆನ್ ರೀಲ್ಸ್ (techieonreels) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವಂತ ಮನೆಯ ರಿಜಿಸ್ಟ್ರೇಷನ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕುಟುಂಬಕ್ಕಾಗಿ ಮನೆ ಕಟ್ಟುವುದು ಎಂದರೆ ಅದು ಬರೀ ಒಂದೇ ಒಂದು ಸಹಿಗೆ ಸೀಮಿತವಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಮನೆ ರಿಜಿಸ್ಟ್ರೇಷನ್ ದಿನ ಬೆಳಗ್ಗೆ ನನಗೆ ಬಾಡಿಗೆ ಮನೆಯಲ್ಲಿ ಇರೋದಕ್ಕೂ, ಸ್ವಂತ ಮನೆ ಖರೀದಿ ಮಾಡುವುದಕ್ಕೂ ಇರುವ ನಿಜವಾದ ವ್ಯತ್ಯಾಸ ಗೊತ್ತಾಯಿತು. ರಿಜಿಸ್ಟ್ರೇಷನ್ ಪೇಪರ್‌ ಮೇಲೆ ಇದ್ದಿದ್ದು ನನ್ನ ಸಹಿ. ಆ ಸಹಿಯ ಹಿಂದಿನ ನನ್ನ ಖುಷಿ ನನ್ನ ಕುಟುಂಬಕ್ಕೆ ಸೇರಿದ್ದು ಎಂದು ವಿವರಿಸಿದ್ದಾರೆ.

ಸ್ವಂತ ಮನೆಯ ರಿಜಿಸ್ಟ್ರೇಷನ್ ದಿನ ಬೆಂಗಳೂರಿನಲ್ಲಿ ನೆಲೆಸಿರುವ ನನ್ನ ಸಹೋದರ, ಸಹೋದರಿ ಹಾಗೂ ಇಡೀ ಕುಟುಂಬದವರು ಜತೆಗಿದ್ದರು. ನನ್ನ ತಂದೆ-ತಾಯಿಯ ಆಶೀರ್ವಾದ, ಎಲ್ಲರ ಮುಖದಲ್ಲಿ ಖುಷಿಯಿತ್ತು. ಎಲ್ಲರ ಮೊಗದಲ್ಲಿದ್ದ ನಗು ಆ ದಿನವನ್ನು ಇನ್ನಷ್ಟು ಡಬಲ್ ಮಾಡಿತ್ತು. ಈ ಮನೆ ಒಬ್ಬನೇ ಖರೀದಿಸಿದ್ದಲ್ಲ. ಸ್ವಂತ ಮನೆ ಖರೀದಿಸುವ ಕನಸು ನನಸಾಗಲು ನನ್ನ ಇಡೀ ಕುಟುಂಬ ನನ್ನ ಜೊತೆಗೆ ನಿಂತಿತ್ತು ಎಂದಿದ್ದಾರೆ. ಈ ವಿಡಿಯೋದಲ್ಲಿ ಸ್ವಂತ ರಿಜಿಸ್ಟ್ರೇಷನ್ ದಿನದಂದು ಕುಟುಂಬ ಸೇರಿರುವುದನ್ನು ಕಾಣಬಹುದು. ಕನಸು ನನಸಾಗುವ ದಿನದಂದು ಕುಟುಂಬದ ಸದಸ್ಯರ ಮೊಗದಲ್ಲಿ ನಗು ಮೂಡಿರುವುದನ್ನು ನೋಡಬಹುದು.

ಇದನ್ನೂ ಓದಿ: ತಮ್ಮ ಮಾಸಿಕ ಹೂಡಿಕೆ 1.7 ಲಕ್ಷ ರೂ; ಇನ್ವೆಸ್ಟ್ಮೆಂಟ್ ಸೀಕ್ರೆಟ್ ರಿವೀಲ್ ಮಾಡಿದ ಬೆಂಗಳೂರಿನ ದಂಪತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಕ್ಷಣವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಯೋಗ ಕೂಡಿ ಬಂದರೆ ಎಲ್ಲವೂ ಆಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸ ಮನೆ ಖರೀದಿಸಿದ್ದೀರಿ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tabaahi Song: ಅಬ್ಬಬ್ಬಾ.. ಅದೆಷ್ಟು ಹಾಟ್; ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’ – Kannada News | Toxic Song Tabaahi Out: Yash and Kiara Advani’s Bold Romance Sets Screens on Fire

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಹಾಟೆಸ್ಟ್ ಅವತಾರ ಅನಾವರಣಗೊಂಡಿದೆ. ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡಿನಲ್ಲಿ ಇಬ್ಬರೂ ಸಖತ್ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾನ್ಸ್ ಮಿತಿಮೀರಿದೆ. ಈ ವಿಡಿಯೋದ ನೋಡಿದ ಎಲ್ಲರೂ ಕಣ್ಣರಳಿಸುತ್ತಿದ್ದಾರೆ. ಕಿಯಾರಾ ಅವರ ಗ್ಲಾಮರ್, ಯಶ್ ಅವರ ಕಟ್ಟುಮಸ್ತಾದ ದೇಹ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಆಗಸ್ಟ್​ 26ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಅದರ ಭಾಗವಾಗಿ ಸಿನಿಮಾ ಪ್ರಚಾರ ಆರಂಭಿಸಿದೆ. ಈ ಮೊದಲು ಟೀಸರ್​​ಗಳ ಮೂಲಕ ಸೆಳೆದಿದ್ದ ಈ ಚಿತ್ರ ತಂಡ ಈಗ ‘ತಬಾಹಿ’ ವಿಡಿಯೋ ಸಾಂಗ್ ಅನಾವರಣ ಮಾಡಿದೆ. ಬೆಳಿಗ್ಗೆ 11.33ಕ್ಕೆ ಸರಿಯಾಗಿ ಸಾಂಗ್ ರಿಲೀಸ್ ಆಗಿದೆ.

ಯಶ್ ಹಾಗೂ ಕಿಯಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ತಬಾಹಿ’ ಹಾಡಿನ ಉದ್ದಕ್ಕೂ ಯಶ್ ಹಾಗೂ ಕಿಯಾರಾ ರೊಮ್ಯಾನ್ಸ್ ಮಾಡುತ್ತಾರೆ. ಯಶ್ ಅವರು ರಾಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅವರು ರುಮಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ನಯನತಾರಾ ಕೂಡ ಕಾಣಿಸುತ್ತಾರೆ.

ಈ ಸಾಂಗ್ ಕೇವಲ ಸಾಂಗ್ ಆಗಿ ಮಾತ್ರ ಉಳಿದಿಲ್ಲ, ಸಿನಿಮಾದಲ್ಲಿ ದೃಶ್ಯ ಎಷ್ಟು ಅದ್ದೂರಿಯಾಗಿ ಇರಲಿದೆ ಎಂಬುದಕ್ಕೆ ಒಂದು ಮಾದರಿ ರೀತಿಯಲ್ಲಿ ಕಾಣಿಸಿದೆ. ಅದ್ದೂರಿ ದೃಶ್ಯಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡಿಗೆ ಯೋಗರಾಜ್​ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಮೊದಲು ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿತ್ತು.

ಇದನ್ನೂ ಓದಿ: ಹಿಂದಿ ಸಿನಿಮಾ ವೀಕ್ಷಿಸಿ ಕೊಂಡಾಡಿದ ‘ಟಾಕ್ಸಿಕ್’ ನಿರ್ದೇಶಕಿ, ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಡ್​ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ. ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಭಾರಿ ಬಜೆಟ್‌ನಲ್ಲಿ ಬಂಡವಾಳ ಹೂಡಿವೆ. ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಇವರೊಂದಿಗೆ ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಟ್ಟಿಗೆ ಶೂಟ್ ಆಗಿರುವ ಈ ಸಿನಿಮಾ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version