TV9 Kannada News Live: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; ಬೆಳಗಾವಿಯಲ್ಲಿ ಪ್ರವಾಹದ ಭೀತಿ, ಇಲ್ಲಿದೆ ಇಂದಿನ ಪ್ರಮುಖ ಸುದ್ದಿಗಳು – Kannada News | Breaking News in TV9 Kannada Live 8 July Karnataka Rain Havoc, Bangalore Weather, School Holidys Mumbai Rains Latest News Updates

Breaking News Today Live Updates in Kannada: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕಂಕಣ ಬದ್ಧವಾಗಿರುವ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ಪ್ರವಾಹದ ಆತಂಕ ಶುರುವಾಗಿದೆ. ಒತ್ತುವರಿ ತೆರವು ಹೆಸರಿನಲ್ಲಿ ಬಿಬಿಎಂಪಿ ನಡೆಸುತ್ತಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ರಾಜಧಾನಿಯ ಬೀದಿ ಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರಸಿದ್ಧ ಬದರಿನಾಥ ದೇವಾಲಯದಲ್ಲಿ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಸಮಿತಿ ತನಿಖೆಗೆ ಆದೇಶಿಸಿದೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಲೈವ್​​​ ಅಪ್ಡೇಟ್​​ ಇಲ್ಲಿದೆ ನೋಡಿ.

Source link

Garuda Purana: ಸಾಲ ಪಡೆದು ಮರುಪಾವತಿ ಮಾಡದೇ ವಂಚಿಸಿದರೆ ಏನಾಗುತ್ತದೆ? ಗರುಡ ಪುರಾಣ ಹೇಳುವುದೇನು? – Kannada News | Garuda Purana: Financial Discipline, Debt Repayment and Karma’s Ethical Lessons

ಗರುಡ ಪುರಾಣವು ಮಾನವ ಜೀವನ, ಕರ್ಮ, ಧರ್ಮ ಮತ್ತು ನೈತಿಕ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡುವ ಪ್ರಮುಖ ಹಿಂದೂ ಧಾರ್ಮಿಕ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಹಣಕಾಸಿನ ಶಿಸ್ತು ಮತ್ತು ಪ್ರಾಮಾಣಿಕತೆಗೆ ವಿಶೇಷ ಮಹತ್ವ ನೀಡಲಾಗಿದೆ. ಅದರ ಪ್ರಕಾರ, ಅಗತ್ಯವಿದ್ದಾಗ ಸಾಲ ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ತೆಗೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ.

ಗರುಡ ಪುರಾಣವು ಕರ್ಮದ ಸಿದ್ಧಾಂತವನ್ನು ಒತ್ತಿಹೇಳುತ್ತದೆ. ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದೆ ಇರುವುದು, ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಮಾಡುವುದು ಅಥವಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಅಶುಭ ಕರ್ಮವೆಂದು ಪರಿಗಣಿಸಲಾಗಿದೆ. ಇಂತಹ ನಡೆ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದರ ಜೊತೆಗೆ, ಜೀವನದಲ್ಲಿ ವಿವಿಧ ರೀತಿಯ ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ಈ ಗ್ರಂಥವು ಅನಗತ್ಯ ಸಾಲವನ್ನು ಸಹ ತಪ್ಪಿಸಲು ಸಲಹೆ ನೀಡುತ್ತದೆ. ಕೇವಲ ಐಷಾರಾಮಿ ಜೀವನಶೈಲಿ ಅಥವಾ ಅನಗತ್ಯ ಖರ್ಚುಗಳಿಗಾಗಿ ಸಾಲ ಮಾಡದೇ, ಆದಾಯ–ವೆಚ್ಚದ ನಡುವೆ ಸಮತೋಲನ ಕಾಪಾಡಿಕೊಂಡು, ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳುವುದು ಆರ್ಥಿಕ ಸ್ಥಿರತೆಗೆ ಅಗತ್ಯವೆಂದು ತಿಳಿಸುತ್ತದೆ.

ಒಟ್ಟಾರೆ, ಗರುಡ ಪುರಾಣದ ಸಂದೇಶ ಸ್ಪಷ್ಟವಾಗಿದೆ. ಸಾಲ ತೆಗೆದುಕೊಳ್ಳುವುದು ಪಾಪವಲ್ಲ; ಆದರೆ ತೆಗೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ಮತ್ತು ಸಾಧ್ಯವಾದಷ್ಟು ಬೇಗ ಮರುಪಾವತಿಸುವುದು ಪ್ರತಿಯೊಬ್ಬರ ಕರ್ತವ್ಯ. ನಂಬಿಕೆ, ಪಾರದರ್ಶಕತೆ ಮತ್ತು ಹಣಕಾಸಿನ ಶಿಸ್ತು ಕೇವಲ ವೈಯಕ್ತಿಕ ಜೀವನವನ್ನಷ್ಟೇ ಅಲ್ಲ, ಸಮಾಜದ ಅಭಿವೃದ್ಧಿಯನ್ನೂ ಬಲಪಡಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮದುವೆ ಮಂಟಪದಿಂದ ಓಡಿಹೋದ ವರ, ವಾಟ್ಸಾಪ್‌ಗೆ ಬಂದ ಆ ಒಂದು ಫೋಟೋ ತಂದ ಭಾರಿ ಫಜೀತಿ – Kannada News | Groom Flees Kaithal Wedding After WhatsApp Photos Expose Bride’s Past: Viral Drama

ಕೈಥಾಲ್ ,ಜುಲೈ 08: ಮದುವೆ(Marriage) ಶಾಸ್ತ್ರಗಳು ಮುಗಿದು ಇನ್ನೇನು ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವರನೊಬ್ಬ ಮಂಟಪದಿಂದಲೇ ದಿಢೀರ್ ಓಡಿಹೋಗಿರುವ ವಿಚಿತ್ರ ಘಟನೆ ಹರಿಯಾಣದ ಕೈಥಾಲ್ ಜಿಲ್ಲೆಯಲ್ಲಿ ನಡೆದಿದೆ. ವರನ ಹಿಂದೆಯೇ ವಧು ಮತ್ತು ಆಕೆಯ ಕುಟುಂಬದವರು ಓಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ನಡೆದಿದ್ದೇನು?
ಮದುವೆ ಸಮಾರಂಭ ಅತ್ಯಂತ ಸಂಭ್ರಮದಿಂದ ನಡೆಯುತ್ತಿತ್ತು. ವಧು-ವರರಿಬ್ಬರೂ ಮಂಟಪದಲ್ಲಿದ್ದರು. ಈ ವೇಳೆ ವರನ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಒಂದು ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ, ನೀನು ಮದುವೆಯಾಗುತ್ತಿರುವ ಹುಡುಗಿ ನನ್ನ ಹಳೆಯ ಗೆಳತಿ ಎಂದು ಹೇಳಿದ್ದಲ್ಲದೆ, ಅದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ವರನ ವಾಟ್ಸಾಪ್‌ಗೆ ಕಳುಹಿಸಿದ್ದಾನೆ.

ಮಂಟಪದಿಂದಲೇ ಕಾಲ್ಕಿತ್ತ ವರ
ಮೊಬೈಲ್‌ನಲ್ಲಿ ಆ ಫೋಟೋಗಳನ್ನು ನೋಡುತ್ತಿದ್ದಂತೆ ವರನಿಗೆ ಶಾಕ್ ಆಗಿದೆ. ಆತ ಮರುಕ್ಷಣವೇ ಮದುವೆ ಬೇಡ ಎಂದು ಮಂಟಪದಿಂದ ಹೊರಗೆ ಓಡಲಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ವಧು, ಆಕೆಯ ಪೋಷಕರು ಮತ್ತು ಮದುವೆಗೆ ಬಂದಿದ್ದ ಅತಿಥಿಗಳು ವರನನ್ನು ತಡೆಯಲು ಆತನ ಹಿಂದೆಯೇ ರಸ್ತೆಯಲ್ಲಿ ಓಡಿದ್ದಾರೆ.

ವಿಡಿಯೋ

ಈ ಹೈಡ್ರಾಮಾದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ನೆಟಿಜನ್‌ಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ಕುರಿತು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚನ್ನಪಟ್ಟಣ ತಹಶೀಲ್ದಾರ್ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ 10 ಲಕ್ಷ ರೂ.ಗೆ ಬ್ಲಾಕ್‌ಮೇಲ್: ರೌಡಿಶೀಟರ್ ಬಂಧನ – Kannada News | Karnataka: Channapatna Tehsildar Assaulted and Blackmailed for Rs 10 Lakh; Rowdy Sheeter Arrested

ರಾಮನಗರ, ಜುಲೈ 8: ಚನ್ನಪಟ್ಟಣ ತಹಶೀಲ್ದಾರ್ ಬಿಎನ್ ಗಿರೀಶ್ ಮೇಲೆ ರೌಡಿಶೀಟರ್‌ಗಳು ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ 10 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಜೂನ್ 29ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತಹಶೀಲ್ದಾರ್ ಸರ್ಕಾರಿ ವಸತಿ ಗೃಹದಲ್ಲೇ ಈ ಕೃತ್ಯ ನಡೆದಿದೆ. ಮೈಸೂರು ಮೂಲದ ರೌಡಿಶೀಟರ್ ಅನುಷ್, ಶೋಭರಾಜ್ ಮತ್ತು ನವೀನ್ ಎಂಬುವರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ತಹಶೀಲ್ದಾರ್ ಗಿರೀಶ್ ಅವರಿಗೆ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಕುಡಿಸಿ ಪ್ರಜ್ಞಾಹೀನರನ್ನಾಗಿಸಿದ್ದಾರೆ. ನಂತರ ಅವರನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು 10 ಲಕ್ಷ ರೂ. ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದಾರೆ. ಅಲ್ಲದೆ, ಅವರ 8 ಗ್ರಾಂ ಚಿನ್ನದ ಉಂಗುರ ಮತ್ತು 14 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ.

ತಹಶೀಲ್ದಾರ್ ಗಿರೀಶ್ ಸದ್ಯ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೌಡಿಶೀಟರ್ ಅನುಷ್‌ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆಗಳ ಮೇಲೆ ದಾಖಲೆ… ಎಲ್ಲವೂ ಕಳಪೆ ದಾಖಲೆ! – Kannada News | Team India Script Darkest T20I Records in England Defeat

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ಸೋತಿದ್ದ ಟೀಮ್ ಇಂಡಿಯಾ ಮೂರನೇ ಪಂದ್ಯದಲ್ಲೂ ಮುಗ್ಗರಿಸಿದೆ, ಆದರೆ ಈ ಬಾರಿ ಸೋತಿರುವುದು ಬರೋಬ್ಬರಿ 125 ರನ್​ಗಳಿಂದ ಎಂಬುದೇ ಅಚ್ಚರಿ. ಟ್ರೆಂಟ್‌ ಬ್ರಿಡ್ಜ್ ಮೈದಾನದಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆದ ಭಾರತ ತಂಡ, ಸೋಲಿನ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹಾ ಕುಸಿತಕ್ಕೆ ಸಾಕ್ಷಿಯಾಗಿದೆ. ಈ ಹೀನಾಯ ಸೋಲಿನೊಂದಿಗೆ ಭಾರತ ತಂಡವು ಹಲವು ಅನಪೇಕ್ಷಿತ ದಾಖಲೆಗಳನ್ನು ನಿರ್ಮಿಸಿದೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  1.  ಅತಿ ದೊಡ್ಡ ಸೋಲು: ರನ್‌ಗಳ ಲೆಕ್ಕಾಚಾರದಲ್ಲಿ ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಎದುರಿಸಿದ ಅತ್ಯಂತ ದೊಡ್ಡ ಸೋಲಾಗಿದೆ. ಈ ಹಿಂದೆ 2019 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 80 ರನ್‌ಗಳಿಗೆ ಸೋತಿದ್ದು ಹಳೆಯ ದಾಖಲೆಯಾಗಿತ್ತು. ಇದೀಗ 125 ರನ್‌ಗಳ ಅಂತರದಲ್ಲಿ ಸೋತು ಭಾರತ ತಂಡ ಅತ್ಯಂತ ಕಳಪೆ ದಾಖಲೆ ಬರೆದಿದೆ.
  2. ನೂರು ರನ್‌ಗಳ ಅಂತರದ ಸೋಲು: ಭಾರತ ತಂಡವು ತನ್ನ ಸುದೀರ್ಘ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎದುರಾಳಿ ತಂಡದ ಎದುರು 100 ಕ್ಕಿಂತ ಹೆಚ್ಚು ರನ್‌ಗಳ ಭಾರಿ ಅಂತರದಿಂದ ಸೋಲೊಪ್ಪಿಕೊಂಡು ಭಾರೀ ಮುಖಭಂಗ ಅನುಭವಿಸಿದೆ.
  3. ಎರಡನೇ ಅತಿ ಕಡಿಮೆ ಮೊತ್ತ: ಇಂಗ್ಲೆಂಡ್‌ನ ವೇಗಿಗಳಾದ ಜೋಶ್ ಟಂಗ್ (4/28) ಮತ್ತು ಜೋಫ್ರಾ ಆರ್ಚರ್ (3/29) ದಾಳಿಗೆ ತತ್ತರಿಸಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ದಾಖಲಿಸಿದ 2ನೇ ಅತಿ ಕಡಿಮೆ ಮೊತ್ತವಾಗಿದೆ. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ 74 ರನ್‌ಗಳಿಗೆ ಆಲೌಟ್ ಆಗಿದ್ದು ಭಾರತದ ಅತ್ಯಂತ ಕನಿಷ್ಠ ಮೊತ್ತವಾಗಿದೆ.
  4. ಪವರ್‌ಪ್ಲೇನಲ್ಲೇ 5 ವಿಕೆಟ್ ಪತನ: ಭಾರತದ ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ, ಮೊದಲ 6 ಓವರ್‌ಗಳ (ಪವರ್‌ಪ್ಲೇ) ಒಳಗಾಗಿಯೇ 5 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ದಾಖಲೆ ಬರೆದಿದೆ. ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಪವರ್‌ಪ್ಲೇನಲ್ಲೇ ಪೆವಿಲಿಯನ್ ಸೇರುವ ಮೂಲಕ ಟೀಮ್ ಇಂಡಿಯಾ ಇದೇ ಮೊದಲ ಬಾರಿ ಮೊದಲ 6 ಓವರ್​ಗಳಲ್ಲಿ 5 ವಿಕೆಟ್​ ಕಳೆದ ಹೀನಾಯ ಸ್ಥಿತಿಯನ್ನು ಕಂಡಿದೆ.
  5. ಗೆಲುವು ರಹಿತ ಸತತ 5 ಪಂದ್ಯಗಳು: ನಾಯಕ ಶ್ರೇಯಸ್ ಅಯ್ಯರ್ ಅವರ ನೇತೃತ್ವದಲ್ಲಿ ಭಾರತ ತಂಡ ತನ್ನ ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ ಸತತ 5 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಲು ವಿಫಲವಾಗಿದೆ.
  6. ಕನಿಷ್ಠ ಸ್ಕೋರ್: ಇಂಗ್ಲೆಂಡ್ ಪಿಚ್‌ಗಳಲ್ಲಿ ಟಿ20 ಪಂದ್ಯವೊಂದರಲ್ಲಿ ಯಾವುದೇ ತಂಡ ದಾಖಲಿಸಿದ ಅತ್ಯಂತ ಕನಿಷ್ಠ ಸ್ಕೋರ್ ಎಂಬ ಕಳಪೆ ದಾಖಲೆಯೂ ಭಾರತದ ಪಾಲಾಗಿದೆ. ಈ ಹಿಂದೆ 2005 ರಲ್ಲಿ ಆಸ್ಟ್ರೇಲಿಯಾ ತಂಡ ಸೌತಾಂಪ್ಟನ್‌ನಲ್ಲಿ 79 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ 76 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಈ ಹೀನಾಯ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
  7. ಯಾರೊಬ್ಬರೂ 15 ರನ್ ಗಡಿ ದಾಟಲಿಲ್ಲ: ಭಾರತದ ಬ್ಯಾಟಿಂಗ್ ಲೈನ್‌ಅಪ್ ಎಷ್ಟು ಹೀನಾಯವಾಗಿತ್ತೆಂದರೆ, ತಂಡದ ಯಾರೊಬ್ಬ ಬ್ಯಾಟರ್ ಕೂಡ 15 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಗರಿಷ್ಠ ಸ್ಕೋರ್ ಎಂದರೆ ವೈಭವ್ ಸೂರ್ಯವಂಶಿ (13) ಮತ್ತು ಇಶಾನ್ ಕಿಶನ್ (13) ಗಳಿಸಿದ ರನ್ ಮಾತ್ರ. ಕೇವಲ ನಾಲ್ಕು ಬ್ಯಾಟರ್‌ಗಳು ಮಾತ್ರ ಎರಡಂಕಿ ದಾಟಲು ಶಕ್ತರಾದರು.
  8. ಕನಿಷ್ಠ ಓವರ್​ಗಳಲ್ಲಿ ಸರ್ವಪತನ: ಟಿ20 ಇತಿಹಾಸದಲ್ಲೇ ಭಾರತ ತಂಡ ಇಷ್ಟೊಂದು ಕಡಿಮೆ ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು. ಕೇವಲ 11.4 ಓವರ್‌ಗಳಲ್ಲಿ (70 ಎಸೆತಗಳು) ಭಾರತದ ಇನಿಂಗ್ಸ್ ಮುಕ್ತಾಯವಾಯಿತು. ಈ ಹಿಂದೆ 2021 ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 81 ರನ್ ಗಳಿಸಿದ್ದು ಕನಿಷ್ಠ ಬ್ಯಾಟಿಂಗ್ ಅವಧಿಯಾಗಿತ್ತು. ಆದರೆ ಸಂಪೂರ್ಣ ಆಲೌಟ್ ಆದ ಲೆಕ್ಕದಲ್ಲಿ ಇದು ಅತ್ಯಂತ ವೇಗದ ಕುಸಿತವಾಗಿದೆ.
  9. ಚೇಸಿಂಗ್​ನಲ್ಲೂ ಕಳಪೆ ದಾಖಲೆ: ಟಿ20 ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವಾಗ ಭಾರತ ದಾಖಲಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಈ ಹಿಂದೆ ಎರಡನೇ ಬ್ಯಾಟಿಂಗ್ ಮಾಡುವಾಗ ಭಾರತ ಇಷ್ಟು ಕಡಿಮೆ ರನ್‌ಗೆ ಎಂದಿಗೂ ಶರಣಾಗಿರಲಿಲ್ಲ.
  10. ಅತ್ಯಂತ ಕನಿಷ್ಠ ಬೌಂಡರಿಗಳ ಇನಿಂಗ್ಸ್​: ಇಡೀ ಇನಿಂಗ್ಸ್‌ನಲ್ಲಿ ಬಂದಿದ್ದು ಕೇವಲ 5 ಬೌಂಡರಿಗಳು (4 ಫೋರ್ ಮತ್ತು 1 ಸಿಕ್ಸರ್) ಮಾತ್ರ. ಭಾರತದ ಟಿ20 ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಪಂದ್ಯವೊಂದರಲ್ಲಿ ದಾಖಲಾದ ಅತಿ ಕಡಿಮೆ ಬೌಂಡರಿಗಳ ಇನಿಂಗ್ಸ್ ಇದಾಗಿದೆ.
  11. ಟಿ20 ವಿಶ್ವಕಪ್ ನಂತರದ ಮಹಾ ಕುಸಿತ: 2026 ರ ಟಿ20 ವಿಶ್ವಕಪ್ ಗೆದ್ದ ಬೀಗುತ್ತಿದ್ದ ಭಾರತ ತಂಡ, ಆ ಬಳಿಕ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಸೋಲೊಪ್ಪಿಕೊಂಡಿದೆ. ಇದರಲ್ಲಿ ಐರ್ಲೆಂಡ್ ವಿರುದ್ಧದ 2-0 ಸರಣಿ ಸೋಲು ಹಾಗೂ ಈಗ ಇಂಗ್ಲೆಂಡ್ ವಿರುದ್ಧದ ಸರಣಿಯ ಹಿನ್ನಡೆ ಸೇರಿದೆ. ವಿಶ್ವ ಚಾಂಪಿಯನ್ ತಂಡವೊಂದು ಪ್ರಶಸ್ತಿ ಗೆದ್ದ ತಕ್ಷಣ ಇಷ್ಟು ಕಳಪೆ ಫಾರ್ಮ್‌ಗೆ ಕುಸಿದಿರುವುದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು.

ಇದನ್ನೂ ಓದಿ: “ಘನ ಘೋರ ಪ್ರದರ್ಶನ”: ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಒಟ್ಟಾರೆಯಾಗಿ ಹೇಳುವುದಾದರೆ, ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದ ಈ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಕೇವಲ ಒಂದು ಸೋಲಲ್ಲ, ಬದಲಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಮರೆಯಲಾಗದ ಕಪ್ಪು ಚುಕ್ಕೆ. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಕೆಲವೇ ತಿಂಗಳುಗಳಲ್ಲಿ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಈ ಮಟ್ಟಿಗೆ ದಿವಾಳಿಯಾಗಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ ಮುಂದಿನ ಪಂದ್ಯದ ಮೂಲಕ ಕಂಬ್ಯಾಕ್ ಮಾಡಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

Source link

ಅಯೋಧ್ಯೆಯಲ್ಲಿ ಜಾಗ ಖರೀದಿಗೆ ರಾತ್ರೋರಾತ್ರಿ 15 ಕೋಟಿ ರೂಪಾಯಿ ಕೊಟ್ಟಿದ್ದ ಅಮಿತಾಭ್ ಬಚ್ಚನ್ – Kannada News | Amitabh Bachchan Ayodhya Property Journey: How He paid 15 Crore overnight

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜಾಗ ಖರೀದಿಸಿದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2024ರ ಜನವರಿಯಲ್ಲಿ ನಡೆದ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅವರು ಅಯೋಧ್ಯೆಯ ‘ದಿ ಸರಯೂ’ ಪ್ರಾಜೆಕ್ಟ್‌ನಲ್ಲಿ 15,000 ಚದರ ಅಡಿಯ ಜಾಗ ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರು ಅಯೋಧ್ಯೆಯಲ್ಲಿ ಆಸ್ತಿಯನ್ನು ವಿಸ್ತರಿಸುತ್ತಲೇ ಇದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯ ಸಂಸ್ಥಾಪಕ ಅಭಿನಂದನ್ ಲೋಧಾ ಅವರು, ಅಮಿತಾಭ್ ಹೇಗೆ ತಾವಾಗಿಯೇ ಕರೆ ಮಾಡಿ ಅಯೋಧ್ಯೆಯಲ್ಲಿ ಜಾಗ ಖರೀದಿಸಿದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಅರ್ಧರಾತ್ರಿ ಬಂದ ಬಿಗ್ ಬಿ ಫೋನ್ ಕಾಲ್!

ಅಭಿನಂದನ್ ಲೋಧಾ ಅವರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ 2023ರಲ್ಲಿ ನಡೆದ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಅಭಿನಂದನ್ ಆಸ್ಟ್ರೇಲಿಯಾದಲ್ಲಿದ್ದರು. ಅಲ್ಲಿನ ಸಮಯ ಬೆಳಗಿನ ಜಾವ 3 ಗಂಟೆಗೆ ಅಮಿತಾಭ್ ಅವರಿಂದ ಕರೆ ಬಂದಿತ್ತು.

‘ನನ್ನ ಫೋನ್‌ಗೆ ಒಂದೆರಡು ಮಿಸ್ಡ್ ಕಾಲ್‌ಗಳು ಬಂದಿದ್ದವು. ಅದರ ಬೆನ್ನಲ್ಲೇ ಒಂದು ಮೆಸೇಜ್ ಕೂಡ ಬಂತು. ಅದರಲ್ಲಿ ನಾನು ಅಮಿತಾಭ್ ಬಚ್ಚನ್, ನಿಮಗೆ ಬಿಡುವಿದ್ದಾಗ ದಯವಿಟ್ಟು ಮರಳಿ ಕರೆ ಮಾಡಿ ಎಂದು ಬರೆಯಲಾಗಿತ್ತು. ಆ ಸಂದೇಶ ನೋಡಿದ ತಕ್ಷಣ ನಾನು ಅಕ್ಷರಶಃ ಎದ್ದು ನಿಂತು ಅವರಿಗೆ ಮರಳಿ ಕರೆ ಮಾಡಿದೆ’ ಎಂದು ಅಭಿನಂದನ್ ಹೇಳಿದ್ದಾರೆ.

ಜಾಗ ಖರೀದಿ ಚಿಂತನೆ

ಅಮಿತಾಭ್ ಬಚ್ಚನ್ ಅವರು ನನಗೆ, ‘ಅಭಿನಂದನ್ ಅವರೇ ನಾನು ಉತ್ತರ ಪ್ರದೇಶದವನು ಮತ್ತು ನನಗೆ ಅಯೋಧ್ಯೆಯಲ್ಲಿ ಜಾಗ ಖರೀದಿಸಬೇಕು ಎಂದರು. ಅದಕ್ಕೆ ನಾನು ಖಂಡಿತವಾಗಿಯೂ ನಿಮಗಾಗಿ ಅದನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದೆ’ ಎಂದಿದ್ದಾರೆ ಅಭಿನಂದನ್. ಅಂದಹಾಗೆ, ಅಮಿತಾಭ್ ಅವರ ಮೂಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್.

ರಾತ್ರೋರಾತ್ರಿ ಮುಗಿದ 15 ಕೋಟಿಯ ಡೀಲ್

‘ನಾನು ಅವರಿಗೆ, ನಿಮ್ಮೊಂದಿಗೆ ನಾನು ಬೆಲೆಯ ಬಗ್ಗೆ ಹೇಗೆ ತಾನೇ ಮಾತನಾಡಲಿ ಎಂದೆ. ಅವರು ನೇರವಾಗಿ ನನಗೆ 15,000 ಚದರ ಅಡಿ ಜಾಗ ಬೇಕು ಎಂದರು. ನಾನು ಅದಕ್ಕೆ ಸರಿಸುಮಾರು 15 ಕೋಟಿ ರೂಪಾಯಿ ಆಗಬಹುದು ಎಂದು ತಿಳಿಸಿದೆ. ಆಶ್ಚರ್ಯವೆಂದರೆ, ಅದರ ಮರುದಿನವೇ ಅವರು ನನಗೆ 15 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟರು’ ಎಂದು ಅಭಿನಂದನ್ ನೆನಪಿಸಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಬಚ್ಚನ್ ಅವರ ಆಸ್ತಿ ವಿವರ

ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದಾರೆ. ಮೊದಲ ಜಾಗ ಖರೀದಿಸಿದ ನಂತರ, ಅವರು ತಮ್ಮ ತಂದೆಯ ಹೆಸರಿನಲ್ಲಿರುವ ‘ಹರಿವಂಶ ರಾಯ್ ಬಚ್ಚನ್ ಮೆಮೋರಿಯಲ್ ಟ್ರಸ್ಟ್’ ಅಡಿಯಲ್ಲಿ ರಾಮಮಂದಿರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಬರೋಬ್ಬರಿ 54,454 ಚದರ ಅಡಿಯ ಬೃಹತ್ ಜಾಗವನ್ನು ಖರೀದಿಸಿದ್ದಾರೆ. ಇದಲ್ಲದೆ, ಮಾರ್ಚ್​​ನಲ್ಲಿ ತಿಹುರಾ ಮಾಝಾ ಪ್ರದೇಶದಲ್ಲಿ 35 ಕೋಟಿ ರೂಪಾಯಿ ನೀಡಿ 2.67 ಎಕರೆ ಭೂಮಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆಲಸದ ಒತ್ತಡದಿಂದ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಅಮಿತಾಭ್ ಬಚ್ಚನ್

ರಣಬೀರ್ ಕಪೂರ್ ಕೂಡ ಮಾಲೀಕ

ಕೇವಲ ಅಮಿತಾಭ್ ಬಚ್ಚನ್ ಮಾತ್ರವಲ್ಲದೆ, ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ರಣಬೀರ್ ಕಪೂರ್ ಕೂಡ ಪ್ರಭು ಅಯೋಧ್ಯೆಯಲ್ಲಿ ಜಾಗದ ಒಡೆಯನಾಗಿದ್ದಾರೆ. ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯ ಪ್ರೀಮಿಯಂ ಪ್ರಾಜೆಕ್ಟ್ ಆದ ‘ದಿ ಸರಯೂ’ನಲ್ಲೇ ರಣಬೀರ್ ಕೂಡ ಹೂಡಿಕೆ ಮಾಡಿದ್ದಾರೆ. ಅವರು 2,134 ಚದರ ಅಡಿ ವಿಸ್ತೀರ್ಣದ ಜಾಗವನ್ನು ಸುಮಾರು 3.31 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫುಟ್​ಪಾತ್ ತೆರವು ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಮುಂದಾದ ಜಿಬಿಎ – Kannada News | Greater Bengaluru Authority to Launch Citywide Drive to Clear Construction Waste and 1518 Abandoned Vehicles

ಬೆಂಗಳೂರು, ಜುಲೈ 8: ಬೆಂಗಳೂರು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ರಸ್ತೆಬದಿಯ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಗೂ ವರ್ಷಗಳಿಂದ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ವಾರಿಸುದಾರರಿಲ್ಲದ ಹಳೇ ವಾಹನಗಳನ್ನು ಮುಕ್ತಿಗೊಳಿಸಲು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಸಜ್ಜಾಗಿದೆ. ನಗರದಾದ್ಯಂತ ಹಮ್ಮಿಕೊಳ್ಳಲಿರುವ ಈ ವಿಶೇಷ ಸ್ವಚ್ಛತಾ ಆಂದೋಲನವು ಇನ್ನು ಒಂದು ವಾರದೊಳಗೆ ಅಧಿಕೃತವಾಗಿ ಚಾಲನೆ ಪಡೆಯುವ ನಿರೀಕ್ಷೆಯಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಜಿಬಿಎ ಹಿರಿಯ ಅಧಿಕಾರಿಗಳು ಹಾಗೂ ನಗರದ 5 ಕಾರ್ಪೊರೇಷನ್‌ಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಆಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.

ಮೊದಲು ನೋಟಿಸ್, ಬಳಿಕ ಜಪ್ತಿ

ಈ ಸ್ವಚ್ಛತಾ ಕಾರ್ಯಾಚರಣೆಯನ್ನು ಮುಂಬರುವ ಶುಕ್ರವಾರದಿಂದಲೇ ಆರಂಭಿಸಲು ಮೊದಲಿಗೆ ಯೋಜಿಸಲಾಗಿತ್ತಾದರೂ, ಸಾರ್ವಜನಿಕರಿಗೆ ನೋಟಿಸ್ ಜಾರಿ ಮಾಡುವುದು, ಜಪ್ತಿ ಮಾಡಿದ ತ್ಯಾಜ್ಯ ಮತ್ತು ವಾಹನಗಳ ವಿಲೇವಾರಿಗೆ ಜಾಗ ಗುರುತಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿರುವುದರಿಂದ ಉದ್ಘಾಟನೆಯ ಅಧಿಕೃತ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.

‘ನಮ್ಮ ಮೂಲ ಉದ್ದೇಶ ಬೆಂಗಳೂರನ್ನು ಸಂಪೂರ್ಣ ಸ್ವಚ್ಛವಾಗಿ ಕಾಣುವಂತೆ ಮಾಡುವುದು. ಒಮ್ಮೆ ಎಲ್ಲಾದರೂ ಕಟ್ಟಡದ ತ್ಯಾಜ್ಯ ಬಿದ್ದರೆ, ಅಲ್ಲಿ ಕಸದ ರಾಶಿ ಬೀಳುವುದು ಸಾಮಾನ್ಯವಾಗುತ್ತದೆ. ನಗರದ ಕೇಂದ್ರ ಭಾಗಗಳಿಗಿಂತ ಹೊರ ವಲಯಗಳಲ್ಲಿ (Outer Areas) ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ’ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಬಿಎಂಆರ್‌ಸಿಎಲ್, ರೈಲ್ವೆ ಇಲಾಖೆಗೂ ಸೂಚನೆ

ರಸ್ತೆಬದಿಯ ತ್ಯಾಜ್ಯ ಹಾಗೂ ಬೆಳೆದಿರುವ ಕಳೆ ಗಿಡಗಳ ತೆರವಿನ ಜೊತೆಗೆ ನಮ್ಮ ಮೆಟ್ರೋ, ಕೆ-ರೈಡ್ ಮತ್ತು ರೈಲ್ವೆ ಇಲಾಖೆಗಳಿಗೂ ಜಿಬಿಎ ಕಠಿಣ ನಿರ್ದೇಶನ ನೀಡಿದೆ. ಮೂಲಸೌಕರ್ಯ ಕಾಮಗಾರಿಗಳು ಮುಗಿದ ಮೇಲೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಕಬ್ಬಿಣದ ಸಾಮಗ್ರಿಗಳು ಮತ್ತು ನಿರ್ಮಾಣ ಉಪಕರಣಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ರೈಲ್ವೆ ಅಧಿಕಾರಿಗಳೊಂದಿಗೆ ಶುಕ್ರವಾರ ಮತ್ತೊಂದು ಪ್ರತ್ಯೇಕ ಸಮನ್ವಯ ಸಭೆಯನ್ನು ಕರೆಯಲಾಗಿದೆ.

ನಗರದಲ್ಲಿದೆ 1,518 ವಾರಸುದಾರರಿಲ್ಲದ ವಾಹನಗಳು!

ನಗರದ ರಸ್ತೆಬದಿಗಳಲ್ಲಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ದೂಳು ಹಿಡಿದು ಬಿದ್ದಿರುವ ಒಟ್ಟು 1,518 ವಾರಸುದಾರರಿಲ್ಲದ ವಾಹನಗಳನ್ನು ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ. ಈ ಪೈಕಿ ಸೆಂಟ್ರಲ್ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 403, ಪೂರ್ವ ವಲಯದಲ್ಲಿ 92, ಉತ್ತರ ವಲಯದಲ್ಲಿ 209, ದಕ್ಷಿಣ ವಲಯದಲ್ಲಿ 383 ಮತ್ತು ಪಶ್ಚಿಮ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 399 ವಾಹನಗಳು ಪತ್ತೆಯಾಗಿದ್ದು, ಇವೆಲ್ಲವನ್ನೂ ಶೀಘ್ರದಲ್ಲೇ ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Silver Astrology: ಚಿನ್ನಕ್ಕಿಂತ ಬೆಳ್ಳಿ ಧರಿಸಿದರೆ ಈ 5 ರಾಶಿಯವರಿಗೆ ಹೆಚ್ಚು ಅದೃಷ್ಟ! – Kannada News | Silver Astrology Benefits: Which Zodiac Signs Should Wear Silver for Luck and Peace?

ಬೆಳ್ಳಿ ಧರಿಸಿದರೆ ಅದೃಷ್ಟImage Credit source: Instagram/driftculturejewellery

ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಬೆಲೆಯೂ ಹೆಚ್ಚುತ್ತಿದೆ. ಆದ್ದರಿಂದ ಚಿನ್ನದಷ್ಟೇ ಬೆಳ್ಳಿಗೂ ವಿಶೇಷ ಸ್ಥಾನಮಾನವಿದೆ. ಇದು ಕೇವಲ ಆಭರಣವಾಗಿ ಮಾತ್ರವಲ್ಲ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಜ್ಯೋತಿಷ್ಯದ ಪ್ರಕಾರ, ಚಿನ್ನವು ಎಲ್ಲರಿಗೂ ಸಮಾನವಾಗಿ ಶುಭಕರವಾಗಿರುವುದಿಲ್ಲ. ಕೆಲವು ರಾಶಿಯವರಿಗೆ ಬೆಳ್ಳಿ ಧರಿಸುವುದು ಹೆಚ್ಚು ಅನುಕೂಲಕರವೆಂದು ನಂಬಲಾಗಿದೆ. ಬೆಳ್ಳಿಯು ಮನಸ್ಸಿಗೆ ಶಾಂತಿ, ಆರ್ಥಿಕ ಸ್ಥಿರತೆ, ಅದೃಷ್ಟ ಮತ್ತು ಕುಟುಂಬದ ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರನು ಮನಸ್ಸು, ಭಾವನೆಗಳು ಮತ್ತು ಶಾಂತಿಯ ಸಂಕೇತ. ಬೆಳ್ಳಿಗೂ ಚಂದ್ರನಿಗೂ ವಿಶೇಷ ಸಂಬಂಧವಿದೆ ಎಂದು ಜ್ಯೋತಿಷ್ಯ ಹೇಳುವುದರಿಂದ, ಕರ್ಕಾಟಕ ರಾಶಿಯವರು ಬೆಳ್ಳಿ ಧರಿಸಿದರೆ ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಸಂತೋಷ ಹಾಗೂ ಜೀವನದಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂದು ನಂಬಲಾಗಿದೆ.

ವೃಷಭ ರಾಶಿ:

ಈ ರಾಶಿಯ ಅಧಿಪತಿ ಶುಕ್ರ. ಶುಕ್ರನು ಸಂಪತ್ತು, ಐಶ್ವರ್ಯ ಮತ್ತು ಸೌಂದರ್ಯದ ಗ್ರಹ. ವೃಷಭ ರಾಶಿಯವರು ಚಿನ್ನಕ್ಕಿಂತ ಬೆಳ್ಳಿ ಧರಿಸಿದರೆ ಅದೃಷ್ಟ ವೃದ್ಧಿಯಾಗುತ್ತದೆ, ಆರ್ಥಿಕ ಸ್ಥಿರತೆ ಮತ್ತು ಐಶ್ವರ್ಯ ಹೆಚ್ಚುತ್ತದೆ ಎಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.

ಮೀನ ರಾಶಿ:

ಮೀನ ರಾಶಿಯವರು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಮಾನಸಿಕ ಶಾಂತಿ ಬಯಸಿದರೆ ಬೆಳ್ಳಿ ಧರಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದು ಮನಸ್ಸನ್ನು ಸ್ಥಿರಗೊಳಿಸಿ, ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೆರವಾಗುತ್ತದೆ ಎಂಬ ನಂಬಿಕೆಯಿದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರು ಬೆಳ್ಳಿಯನ್ನು ಉಂಗುರ, ಸರ ಅಥವಾ ಇತರ ಆಭರಣಗಳ ರೂಪದಲ್ಲಿ ಧರಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ, ಮನಸ್ಸಿಗೆ ಶಾಂತಿ ದೊರೆತು, ಅದೃಷ್ಟವೂ ಅನುಕೂಲಕರವಾಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ತುಲಾ ರಾಶಿ:

ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಈ ರಾಶಿಯವರು ಬೆಳ್ಳಿ ಧರಿಸಿದರೆ ಜೀವನದಲ್ಲಿ ಸಮತೋಲನ, ಶಾಂತಿ ಮತ್ತು ಸಂತೋಷ ಹೆಚ್ಚುತ್ತದೆ ಎಂದು ನಂಬಲಾಗಿದೆ. ಕುಟುಂಬ ಜೀವನ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆ ತರಲು ಬೆಳ್ಳಿ ಸಹಕಾರಿ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ಬೆಳ್ಳಿ ಧರಿಸುವುದರಿಂದಾಗುವ ಪ್ರಯೋಜನಗಳು:

ಜ್ಯೋತಿಷ್ಯದ ನಂಬಿಕೆಯ ಪ್ರಕಾರ, ಬೆಳ್ಳಿಗೂ ಚಂದ್ರನಿಗೂ ನೇರ ಸಂಬಂಧವಿದೆ. ಆದ್ದರಿಂದ ಬೆಳ್ಳಿ ಧರಿಸುವುದರಿಂದ:

  • ಮನಸ್ಸಿನ ಶಾಂತಿ ಹೆಚ್ಚುತ್ತದೆ.
  • ಕೋಪ ಮತ್ತು ಆತಂಕ ಕಡಿಮೆಯಾಗುತ್ತದೆ.
  • ಏಕಾಗ್ರತೆ ಸುಧಾರಿಸುತ್ತದೆ.
  • ಭಾವನೆಗಳಲ್ಲಿ ಸಮತೋಲನ ಉಂಟಾಗುತ್ತದೆ.
  • ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯವಾಗುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಮೇಲಿನ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಜ್ಯೋತಿಷಿಗಳನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಘನ ಘೋರ ಪ್ರದರ್ಶನ”: ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು? – Kannada News | Shreyas iyer Post match interview after IND vs ENG 3rd T20 Match

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿದೆ. ನಾಟಿಂಗ್​ಹ್ಯಾಮ್​ ಟ್ರೆಂಟ್ ಬ್ರಿಡ್ಜ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 11.4 ಓವರ್​ಗಳಲ್ಲಿ ಕೇವಲ 76 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ನೂರಕ್ಕೂ ಹೆಚ್ಚು ರನ್​ಗಳ ಅಂತರದಿಂದ ಸೋಲನುಭವಿಸಿದೆ.

ಈ ಸೋಲಿನ ಬಳಿಕ ಕ್ರೀಡಾ ವಿಶ್ಲೇಷಕ ಇಯಾನ್ ಮಾರ್ಗನ್ ಹಾಗೂ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ನಡುವೆ ನಡೆದ ಪ್ರಶ್ನೋತ್ತರಗಳ ಸಾರಾಂಶ ಇಲ್ಲಿದೆ.

ಪ್ರಶ್ನೆ: ಪಂದ್ಯದ ಆರಂಭಕ್ಕೂ ಮುನ್ನವೇ ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಹಾಗಾದರೆ ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಎಲ್ಲಿ ತಪ್ಪು ನಡೆಯಿತು?

ಶ್ರೇಯಸ್ ಅಯ್ಯರ್: ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮದು “ಘನ ಘೋರ ಪ್ರದರ್ಶನ”. ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮೊದಲನೆಯದಾಗಿ, ನಾವು ಈ ಸೋಲನ್ನು ಒಪ್ಪಿಕೊಂಡು, ಸಂಪೂರ್ಣವಾಗಿ ಆರಂಭದಿಂದ ಯೋಜನೆಗಳನ್ನು ಮರುಪರಿಶೀಲಿಸಬೇಕಿದೆ. ಪಿಚ್ ನೋಡಿದರೆ ಇದು 200 ರನ್ ಗಳಿಸುವಂತಹ ವಿಕೆಟ್ ಆಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪವರ್‌ಪ್ಲೇನಲ್ಲೇ 4-5 ವಿಕೆಟ್‌ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯದ ಹಿಡಿತ ನಮ್ಮ ಕೈತಪ್ಪಿತು. ನಾವು ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ.

ಪ್ರಶ್ನೆ: ನೀವು ಆರಂಭದಿಂದಲೇ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದೀರಿ. ಪಂದ್ಯದ ಮೊದಲ ಎಸೆತಕ್ಕೂ ಮುನ್ನವೇ ಅನೇಕ ನಾಯಕರು ತಮ್ಮ ಯೋಜನೆಗಳ ಬಗ್ಗೆ ಮಾತನಾಡಿರುತ್ತಾರೆ. ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಇಡೀ ಪಂದ್ಯದ ಉದ್ದಕ್ಕೂ ನಿಮ್ಮ ಯೋಜನೆಗಳು ಏನಾಗಿದ್ದವು ಮತ್ತು ಎಲ್ಲಿ ತಪ್ಪುಗಳು ಸಂಭವಿಸಿರಬಹುದು ಎಂಬುದನ್ನು ನಮಗೆ ವಿವರವಾಗಿ ತಿಳಿಸಿ.

ಶ್ರೇಯಸ್ ಅಯ್ಯರ್: ತಂಡದ ಸಭೆಯಲ್ಲಿ ನಾವು ಎಷ್ಟು ಬೇಕಾದರೂ ಯೋಜನೆಗಳನ್ನು ರೂಪಿಸಬಹುದು. ಆದರೆ ಮೈದಾನಕ್ಕೆ ಇಳಿದ ತಕ್ಷಣ ಅಲ್ಲಿನ ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳುವುದು ಮುಖ್ಯ. ಪಿಚ್‌ಗೆ ತಕ್ಕಂತೆ ಯಾವ ಲೆಂತ್‌ನಲ್ಲಿ ಬೌಲಿಂಗ್ ಮಾಡಬೇಕೆಂದು ಬೇಗ ಅರಿಯಬೇಕು. ಇಂದಿನ ಪಂದ್ಯದಲ್ಲಿ ‘ಹಾರ್ಡ್ ಲೆಂತ್’ ಬೌಲರ್‌ಗಳಿಗೆ ನೆರವಾಗುತ್ತಿತ್ತು, ಆದರೆ ನಮ್ಮಿಂದ ಅದರ ಸರಿಯಾದ ಅನುಷ್ಠಾನ ಸಾಧ್ಯವಾಗಲಿಲ್ಲ. ಇನ್ನು ಬ್ಯಾಟಿಂಗ್‌ನಲ್ಲಿ 200 ರನ್‌ಗಳ ಗುರಿ ಬೆನ್ನಟ್ಟುವಾಗ ಇನಿಂಗ್ಸ್ ವೇಗವನ್ನು ಸರಿಯಾಗಿ ನಿಯಂತ್ರಿಸಬೇಕು. ಒಂದು ನಿರ್ದಿಷ್ಟ ಮಾದರಿಯ ಆಟ ನಮ್ಮದಾಗಿರಬೇಕಿತ್ತು. ಎಲ್ಲಾ ಕೂಡ ನಾವು ವಿಫಲರಾದೆವು. ಹೀಗಾಗಿ ಈ ಯೋಜನೆಗಳನ್ನೆಲ್ಲಾ ನಾವು ಮರುಪರಿಶೀಲಿಸಬೇಕಿದೆ.

ಪಶ್ನೆ: ಸರಣಿಯನ್ನು ಇನ್ನು ಕೇವಲ ಟೈ ಮಾಡಿಕೊಳ್ಳಲಷ್ಟೇ ಅವಕಾಶವಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಪರಿಸ್ಥಿತಿಯನ್ನು ಎಷ್ಟು ಬೇಗ ಬದಲಾಯಿಸಬಲ್ಲಿರಿ?

ಶ್ರೇಯಸ್: ಖಂಡಿತವಾಗಿಯೂ. ನೀವು ಹೇಳಿದಂತೆ, ಬಲಿಷ್ಠವಾಗಿ ಮರಳಿ ಬರಲು ಇದೊಂದು ಉತ್ತಮ ಅವಕಾಶ. ಹಿಂದೆ ನಡೆದುಹೋದ ವಿಷಯಗಳ ಬಗ್ಗೆಯೇ ಅತಿಯಾಗಿ ಯೋಚಿಸುತ್ತಾ ಕೂರಬಾರದು. ನಾವು ಅತ್ಯಂತ ಕಳಪೆ ಕ್ರಿಕೆಟ್ ಆಡಿದ್ದೇವೆ ಎಂಬುದು ಖಂಡಿತವಾಗಿಯೂ ನಿಜ, ಆದರೆ ಇದರಿಂದ ಕಲಿಯುವಂತಹ ವಿಷಯಗಳು ಕೂಡ ಬಹಳಷ್ಟಿವೆ. ಆಟಗಾರರು ಮುಖ್ಯವಾಗಿ ತಂಡದ ಮೇಲೆ ಹೇಗೆ ಪ್ರಭಾವ ಬೀರಬೇಕು ಅಥವಾ ತಂಡಕ್ಕೆ ಹೇಗೆ ಆ ಲಯವನ್ನು ತಂದುಕೊಡಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕು. ಹಾಗಾಗಿ, ಪ್ರತಿಯೊಬ್ಬ ಆಟಗಾರನೂ ವೈಯಕ್ತಿಕವಾಗಿ ಯೋಚಿಸಿ, ಪಂದ್ಯಗಳನ್ನು ಹೇಗೆ ಗೆಲ್ಲಬಹುದು ಮತ್ತು ಆ ರೀತಿಯ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳಬೇಕಿರುವುದು ಖಂಡಿತಾ ಅಗತ್ಯವಾಗಿದೆ ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು ಮತ್ತು ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೇಯಸ್ ಅಯ್ಯರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ತಪ್ಪುಗಳನ್ನು ಮರೆತು, ಮೈದಾನದ ಪರಿಸ್ಥಿತಿಗೆ ತಕ್ಕಂತೆ ಬೇಗನೆ ಹೊಂದಿಕೊಳ್ಳುವುದು ಮತ್ತು ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಂಡು ಆಡುವುದು ಸದ್ಯದ ಅಗತ್ಯವಾಗಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಸರಣಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಬ್ರಿಸ್ಟಲ್‌ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಬಲಿಷ್ಠವಾಗಿ ಕಂಬ್ಯಾಕ್ ಮಾಡಲಿದೆ ಎಂಬ ವಿಶ್ವಾಸವನ್ನು ಕೂಡ ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.

Source link

ಅಡಿಕೆ ಬೆಳೆಗಾರರಿಗೆ ಗುಡ್​​​ ನ್ಯೂಸ್​​ : ಮಹಾರಾಷ್ಟ್ರ ಸಿಎಂ ಜತೆ ಪ್ರಲ್ಹಾದ್ ಜೋಶಿ ಮಾತುಕತೆ; ಇನ್ಮುಂದೆ ಅಡಿಕೆ ಸಾಗಣೆಗೆ ಇಲ್ಲ ತಡೆ – Kannada News | Pralhad joshi secures release of karnataka areca nut vehicles in maharashtra protecting farmers

ಬೆಂಗಳೂರು, ಜು.8: ಕರ್ನಾಟಕದ ಅಡಿಕೆ ಬೆಳೆಗಾರರ ಮತ್ತು ವರ್ತಕರ ಹಿತರಕ್ಷಣೆಗೆ ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಯೋಗಾಲಯದ ಪರೀಕ್ಷೆಯ (Laboratory Testing) ನೆಪದಲ್ಲಿ ದಿನಗಟ್ಟಲೆ ತಡೆಹಿಡಿಯಲಾಗಿದ್ದ ಕರ್ನಾಟಕದ ಅಡಿಕೆ ಸರಕುಳ್ಳ ವಾಹನಗಳ ತುರ್ತು ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಜೋಶಿ ಅವರು ನಡೆಸಿದ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಕರ್ನಾಟಕದ ಸಂಸದರು ಹಾಗೂ ಶಾಸಕರ ಪ್ರಮುಖ ನಿಯೋಗವೂ ಭಾಗವಹಿಸಿತ್ತು.

ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ‘ಕರ್ನಾಟಕ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳ’ದ ಜಂಟಿ ನಿಯೋಗವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಣೆ ವಾಹನಗಳನ್ನು ಅನಗತ್ಯವಾಗಿ ತಡೆಹಿಡಿಯುತ್ತಿರುವುದರಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ತಲುಪಬೇಕಾದ ಸರಕು ಹಾಳಾಗುವ ಭೀತಿ ಎದುರಾಗಿದೆ ಮತ್ತು ಇದರಿಂದ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ನಿಯೋಗ ವಿವರಿಸಿತ್ತು.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ಸಮಸ್ಯೆಯ ಗಂಭೀರತೆಯನ್ನು ಅರಿತ ಸಚಿವ ಪ್ರಲ್ಹಾದ್ ಜೋಶಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕೇಂದ್ರ ಸಚಿವರ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ತಮ್ಮ ರಾಜ್ಯದಲ್ಲಿ ಸದ್ಯ ತಡೆಹಿಡಿಯಲಾಗಿರುವ ಕರ್ನಾಟಕದ ಅಧಿಕೃತ ಅಡಿಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಸಾಗಣೆ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಅತ್ಯುತ್ತಮ ಏರ್ ಕ್ವಾಲಿಟಿ; ಬೆಂಗಳೂರಿನಲ್ಲೂ ಶುದ್ಧ ಗಾಳಿ

ಈ ಯಶಸ್ವಿ ಮಾತುಕತೆಯ ನಂತರ ಟ್ವೀಟ್ ಮಾಡಿರುವ ಸಚಿವ ಪ್ರಲ್ಹಾದ್ ಜೋಶಿ ಅವರು, “ರಾಜ್ಯದ ಸಮಸ್ತ ರೈತ ಬಾಂಧವರ ಪರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಸರ್ಕಾರವು ಅಡಿಕೆ ಬೆಳೆಗಾರರ ಪರವಾಗಿ ದೃಢವಾಗಿ ನಿಂತಿರುವುದನ್ನು ಈ ನಿರ್ಧಾರ ಮತ್ತೊಮ್ಮೆ ಸಾಬೀತುಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಈ ಸಕಾರಾತ್ಮಕ ಸಹಕಾರವು ರೈತರ ಜೀವನೋಪಾಯವನ್ನು ರಕ್ಷಿಸಿದೆ” ಎಂದು ಹೇಳಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version