ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು, ಐವರು ನಾಪತ್ತೆ – Kannada News | Major landslide hits Wayanad tunnel project site near Meenakshi Bridge

ವಯನಾಡ್, ಜುಲೈ 7: ಕೇರಳದ ವಯನಾಡ್  (Wayanad Landslide) ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಎಂಬಲ್ಲಿ ಇಂದು (ಜುಲೈ 7) ನಡೆದ ಭೀಕರ ಭೂಕುಸಿತದಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ‘ಆನೆಕಂಪೋಯಿಲ್-ಮೇಪ್ಪಾಡಿ ಸುರಂಗ ರಸ್ತೆ ಯೋಜನೆ’ಯ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮೀನಾಕ್ಷಿ ಸೇತುವೆಯ ಬಳಿ ಈ ದುರಂತ ಸಂಭವಿಸಿದೆ. ಈ ದುರಂತದಿಂದ ಒಟ್ಟು 18 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, 10 ಜನರನ್ನು ಮೇಪ್ಪಾಡಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ಉಳಿದ ಐವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

“ದುರಂತ ಸಂಭವಿಸಿದ ಸಮಯದಲ್ಲಿ ಅಲ್ಲಿ ಯಾವುದೇ ಕಾರ್ಮಿಕರು ಕೆಲಸ ಮಾಡುತ್ತಿರಲಿಲ್ಲ. ಮಣ್ಣಿನ ಅಡಿಯಲ್ಲಿ ಸಿಲುಕಿರುವವರು ಇಂಜಿನಿಯರ್‌ಗಳು ಮತ್ತು ಭದ್ರತಾ ಸಿಬ್ಬಂದಿ ಎಂದು ಶಂಕಿಸಲಾಗಿದೆ. ಒಂದು ವೇಳೆ ಅಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಮತ್ತಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರನ್ನು ಕರೆದೊಯ್ಯಲು ಬಳಸಲಾಗುತ್ತಿದ್ದ ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸೊಂದು ಭೂಕುಸಿತದ ಭಾರಿ ಹೊಡೆತಕ್ಕೆ ಸಿಲುಕಿ ಹತ್ತಿರದ ನದಿಗೆ ಉರುಳಿದ್ದು, ಅರ್ಧದಷ್ಟು ನೀರಿನಲ್ಲಿ ಮುಳುಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ; ಚಂಪತ್ ರಾಯ್ ಮೊದಲ ಪ್ರತಿಕ್ರಿಯೆ – Kannada News | Champat Rai first reaction on Ram Temple Donation Theft row says Allegations against me baseless

ಅಯೋಧ್ಯೆ, ಜುಲೈ 7: ಸುಮಾರು 1 ತಿಂಗಳಿಂದ ಮೌನವಾಗಿದ್ದ ಅಯೋಧ್ಯೆ ರಾಮ ಮಂದಿರ (Ram Mandir) ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, “ದೇಣಿಗೆ ಕಳ್ಳತನದ ಆರೋಪದ ಕುರಿತು ಎಸ್​ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ನಂತರವೇ ನಾನು ಈ ವಿಷಯದ ಬಗ್ಗೆ ಸಮಗ್ರವಾಗಿ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ. ಈ ಕುರಿತು ಪತ್ರವೊಂದನ್ನು ಬರೆದಿರುವ ಚಂಪತ್ ರಾಯ್, ಡಿಜಿಟಲ್ ಜಗತ್ತಿನಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ವದಂತಿಗಳು ಮತ್ತು ಊಹಾಪೋಹಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳ ಒಳಗಿನ ಹಣ ಎಣಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ.

“ನಾನು 1991ರಿಂದ ಅಯೋಧ್ಯೆಯಲ್ಲಿ ಸಾಂಘಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ” ಎಂದು ಹೇಳಿರುವ ಚಂಪತ್ ರಾಯ್ “ಒಮ್ಮೆ ತನಿಖೆ ಪೂರ್ಣಗೊಂಡರೆ ಸತ್ಯ ಏನೆಂಬುದು ಹೊರಬರಲಿದೆ” ಎಂದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ

“ಎಸ್‌ಐಟಿಯ ಅಂತಿಮ ವರದಿ ಬಂದ ನಂತರ, ಸಾರ್ವಜನಿಕವಾಗಿ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಆಗ ಸಂಪೂರ್ಣ ಸತ್ಯವು ಬೆಳಕಿಗೆ ಬರಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಅವರು ಪತ್ರದಲ್ಲಿ ಸೇರಿಸಿದ್ದಾರೆ.

ಸತ್ಯ ಶೀಘ್ರದಲ್ಲೇ ಹೊರಬರಲಿದೆ:

ಪ್ರಸ್ತುತ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಕುರಿತು ಮಾತನಾಡಿದ ಅವರು, “ನನಗೆ ತನಿಖಾ ಸಂಸ್ಥೆಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸತ್ಯ ಏನೆಂಬುದು ಶೀಘ್ರದಲ್ಲೇ ಜಗತ್ತಿನ ಮುಂದೆ ಬರಲಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಯಾವುದೇ ತನಿಖೆಗೂ ಹೆದರುವುದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ದೇಣಿಗೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಆರೋಪಿಗಳೆಂದು ಹೆಸರಿಸಿ ಬಂಧಿಸಲಾಗಿದೆ. ಆದರೆ, ಆರೋಪಿಗಳ ಪಟ್ಟಿಯಲ್ಲಿ ಚಂಪತ್ ರಾಯ್ ಅವರ ಹೆಸರನ್ನು ಏಕೆ ಸೇರಿಸಿಲ್ಲ? ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದ್ದು, ಅವರ ಬಂಧನಕ್ಕೂ ಒತ್ತಾಯಿಸಿವೆ.

ಇದನ್ನೂ ಓದಿ: Ram Mandir Temple Donation Row: ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ರಾಮ ಮಂದಿರ ಟ್ರಸ್ಟ್‌ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್‌ ನೇಮಕ

ಚಂಪತ್ ರಾಯ್ ರಾಜೀನಾಮೆ ಅಂಗೀಕಾರ:

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ನಡೆಸಿದ ತುರ್ತು ಉನ್ನತ ಮಟ್ಟದ ಸಭೆಯಲ್ಲಿ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ ಕೇವಲ 24 ಗಂಟೆಗಳ ಒಳಗೆ ಅವರ ಈ ಮೊದಲ ಅಧಿಕೃತ ಹೇಳಿಕೆ ಹೊರಬಂದಿದೆ. ಚಂಪತ್ ರಾಯ್ ಅವರೊಂದಿಗೆ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಕೂಡ ಎಸ್‌ಐಟಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾದ ಅಂಶಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಮ ಮಂದಿರ ಟ್ರಸ್ಟ್ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಮಂದಿರದ ಸಂಕೀರ್ಣವನ್ನು ನಿರ್ವಹಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಟ್ರಸ್ಟ್‌ನ ಮುಂದಿನ ಸಭೆಯು ಜುಲೈ 22ರಂದು ನಿಗದಿಯಾಗಿದ್ದು, ಅಷ್ಟರೊಳಗೆ ಸಂಪೂರ್ಣ ಹಣಕಾಸಿನ ಹರಿವಿನ ವಿವರಗಳನ್ನು ಒಳಗೊಂಡ ಅಂತಿಮ ವರದಿಯನ್ನು ಎಸ್​ಐಟಿ ಸಲ್ಲಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಒಂದೆಡೆ ವರುಣನ ಆರ್ಭಟ: ರಾಯಚೂರು, ಕೊಪ್ಪಳದಲ್ಲಿ ಮಳೆ ಇಲ್ಲದೆ ಕಂಗಾಲಾದ ರೈತರು – Kannada News | Monsoon Contrast: Drought Devastates Farmers in Raichur and Koppal, Kalyan Karnataka

ಬೆಂಗಳೂರು, ಜು.7: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಇದೇ ರಾಜ್ಯದ ಮತ್ತೊಂದು ಭಾಗವಾದ ಕಲ್ಯಾಣ ಕರ್ನಾಟಕದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಮಳೆಯ ಸುಳಿವೇ ಇಲ್ಲದೆ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಮಾಡಿದ ಬೆಳೆಗಳು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ಅನ್ನದಾತರು ಕಣ್ಣೀರು ಇಡುತ್ತಿದ್ದಾರೆ.

ರಾಯಚೂರಿನಲ್ಲಿ ಸುಳಿಯದ ಮಳೆ:

ಬಿಸಿಲುನಾಡು ರಾಯಚೂರಿನಲ್ಲಿ ಮೇ ತಿಂಗಳ ಕೊನೆಯಲ್ಲಿ ಸುರಿದ ಮಳೆಯನ್ನು ನಂಬಿ ಹತ್ತಿ ಹಾಗೂ ತೊಗರಿ ಬಿತ್ತನೆ ಮಾಡಿದ್ದ ರೈತರು ಈಗ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಜಿಲ್ಲೆಯಾದ್ಯಂತ ಮಳೆ ಇಲ್ಲದೆ ಕೃಷಿ ಜಮೀನುಗಳು ಬರಡು ಭೂಮಿಯಂತೆ ಗೋಚರಿಸುತ್ತಿವೆ. ರಾಯಚೂರು ತಾಲೂಕಿನ ಆಶಾಪುರ ಗ್ರಾಮ ಸೇರಿದಂತೆ ಜಿಲ್ಲೆಯ ಹಲವೆಡೆ ಬಿತ್ತನೆ ಮಾಡಿರುವ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಹತ್ತಿ ಬೀಜ ಮಾತ್ರ ನಾಟಿಯಾಗಿದೆ. ಉಳಿದ ಭಾಗ ಸಂಪೂರ್ಣ ಬರಿದಾಗಿದೆ. ಇನ್ನು ಕೆಲವೆಡೆ ಮೂರು ಮೂರು ಬಾರಿ ಬಿತ್ತನೆ ಮಾಡಿದರೂ ಬೀಜಗಳು ಮೊಳಕೆಯೊಡೆದಿಲ್ಲ. ಇನ್ನು ಕೆಲವು ಹೊಲಗಳಲ್ಲಿ ಒಂದು ಅಡಿಯಷ್ಟು ಬೆಳೆದಿರುವ ಹತ್ತಿ ಗಿಡಗಳು ತೇವಾಂಶದ ಕೊರತೆಯಿಂದಾಗಿ ಒಣಗಲಾರಂಭಿಸಿವೆ.

ಇದನ್ನೂ ಓದಿ: ಮಳೆ ಇಲ್ಲದಿದ್ದರೂ ಬಾಗಲಕೋಟೆಯಲ್ಲಿ ಬೊರ್ಗರೆಯುತ್ತಿರುವ ನದಿಗಳು, ಬೆಳೆಗಳಿಗಿಲ್ಲ ನೀರು!

ಕೊಪ್ಪಳದಲ್ಲಿ ತೀವ್ರ ಬರಗಾಲ:

ಕೊಪ್ಪಳ ಜಿಲ್ಲೆಯಲ್ಲೂ ಕಳೆದ ಒಂದು ತಿಂಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಭೀತಿಯಲ್ಲಿ ರೈತರಿದ್ದಾರೆ. ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ರೈತ ಸಿದ್ದಲಿಂಗನಗೌಡ ಪಾಟೀಲ್ ಅವರು ಸುಮಾರು 60 ರಿಂದ 70 ಸಾವಿರ ರೂಪಾಯಿ ಸಾಲಸೋಲ ಮಾಡಿ 4 ಎಕರೆ ಜಮೀನಿನಲ್ಲಿ ತೊಗರಿ ಬೆಳೆದಿದ್ದಾರೆ. ಈಗ ಮಳೆ ಕೈಕೊಟ್ಟಿದ್ದರಿಂದ ಬೆಳೆ ಉಳಿಸಿಕೊಳ್ಳಲು ಪ್ರತಿ ಟ್ಯಾಂಕರ್ ನೀರಿಗೆ 700 ರಿಂದ 800 ರೂಪಾಯಿ ಖರ್ಚು ಮಾಡಿ ಪೈಪ್‌ಗಳ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆ ಬಿತ್ತನೆಯಾಗಿದೆ. ಮಳೆಯಾಗದ ಕಾರಣ ನೂರಾರು ರೈತರು ಬಿತ್ತನೆಗಾಗಿ ತಂದಿದ್ದ ಬೀಜ ಮತ್ತು ಗೊಬ್ಬರವನ್ನು ಬಳಸಲಾಗದೆ ಮನೆಯಲ್ಲೇ ಸ್ಟಾಕ್ ಇಟ್ಟುಕೊಂಡಿದ್ದಾರೆ.

ಒಟ್ಟಾರೆಯಾಗಿ, ರಾಜ್ಯದ ಒಂದು ಭಾಗದಲ್ಲಿ ನೆರೆ ಹಾವಳಿಯಿದ್ದರೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಾತ್ರ ಬರಗಾಲ ತುತ್ತೂರಿ ಊದುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸಬೇಕಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ನಾಡು ಕೆಜಿಎಫ್​​​​ನಲ್ಲಿ ಬಹುದೊಡ್ಡ ಲ್ಯಾಂಡ್​ ಸ್ಕ್ಯಾಮ್​, ಬಲಾಢ್ಯರ ಪಾಲಾಗುತ್ತಿದೆ ಸರ್ಕಾರಿ ಜಮೀನು – Kannada News | Governmnet Land Scam In KGF, Created Fake Documents to 60 Acre

ಕೋಲಾರ, (ಜುಲೈ 07): ಚಿನ್ನದ ನಾಡು ಕೆಜಿಎಫ್ ನಲ್ಲಿ ಬರೋಬ್ಬರಿ 60 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೌದು.. ಕೆಜಿಎಫ್ ನಲ್ಲಿ ಕೈಗಾರಿಕೆಗಳ ಅಭಿವೃದ್ದಿ, ಹೆದ್ದಾರಿ ಅಭಿವೃದ್ದಿಯಾಗುತ್ತಿದ್ದಂತೆ ಭೂಮಿಗೆ ಚಿನ್ನದ ಬೆಲೆ ಬಂದಿದೆ, ಪರಿಣಾಮ ಸರ್ಕಾರಿ ಜಮೀನುಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ರಕ್ಷಣೆ ಮಾಡಬೇಕಾದವರೆ ಭೂಮಿ ಕಬಳಿಕೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಅನುಮಾನ ಇದೀಗ ಮೂಡಿದೆ. ಕೆಜಿಎಫ್ ಶಾಸಕಿ ಹಾಗೂ ಅವರ ಬೆಂಬಲಿಗರು ಸರ್ಕಾರಿ ಜಮೀನನ್ನ ಕಬಳಿಕೆ ಮಾಡಿರುವ ಆರೋಪವನ್ನ ಮಾಜಿ ಶಾಸಕ ವೈ.ಸಂಪಂಗಿ ಮಾಡಿದ್ದಾರೆ.

ಭೂ ಮಂಜೂರಾತಿಗೆ ನಕಲಿ ದಾಖಲೆ ಸೃಷ್ಟಿ

ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಕದಿರೇಗೌಡನಕೊಟೆ ಸರ್ವೆ ನಂ.121 ರಲ್ಲಿ 1989 ರಲ್ಲಿ ಜಮೀನು ಪಡೆದಿರುವ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 14 ರೈತರ ಹೆಸರಿನಲ್ಲಿ ಅಂದಾಜು 4 ಎಕರೆ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಗ್ರಾಮದ ಸರ್ವೆ ನಂ.121ರಲ್ಲಿ 150 ಕೋಟಿ ಬೆಲೆ ಬಾಳುವ 60 ಎಕರೆ ಸರಕಾರಿ ಜಮೀನನ್ನು ಶಾಸಕರ ಆಪ್ತರು ನುಂಗಲು ಮುಂದಾಗಿದ್ದು,ಕೆಜಿಎಫ್ ತಾಲೂಕಿನಲ್ಲೂ ಸರ್ಕಾರಿ ಜಮೀನುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದು ಮಾಜಿ ಶಾಸಕ ವೈ.ಸಂಪಂಗಿ ಗಂಭೀರ ಆರೋಪವಾಗಿದೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡರ ಆಪ್ತನಿಂದ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು

0 ಎಕರೆಗೆ ನಕಲಿ ದಾಖಲೆಗಳು ಸೃಷ್ಟಿಸಿ

ಕೆಜಿಎಫ್ ‌ನಲ್ಲಿ ಸರಕಾರಿ ಜಮೀನು ಕಬಳಿಕೆಯ ಜಾಲವೊಂದು ಸಿದ್ದವಾಗಿದ್ದು, 60 ಎಕರೆಗೆ ನಕಲಿ ದಾಖಲೆಗಳು ಸೃಷ್ಟಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಸುಗಟೂರು ಹೋಬಳಿಯ ಕಿತ್ತಂಡೂರು ಮೂಲದವರಿಗೆ ಜಮೀನು ಮಂಜೂರು ಆಗಿರುವಂತೆ ಸಾಗುವಳಿ ಚೀಟಿ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನೂ ನೂರಾರು ಕೋಟಿ ಜಮೀನು ಕಬಳಿಕೆಗೆ ಶಾಸಕರ ಬೆಂಬಲಿಗರು ಮುಂದಾಗಿದ್ದು, ಸರಕಾರಿ ಭೂಮಿಯನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ.

ಇನ್ನೂ ಅಂದಾಜು 150 ಕೋಟಿ ರೂ. ಬೆಲೆ ಬಾಳುವ ಸರಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಕೆಜಿಎಫ್ ಈ ಹಿಂದಿನ ತಹಸೀಲ್ದಾರ್ ಭರತ್ ಅವರ ಮೇಲೆ ಶಾಸಕರ ಆಪ್ತರು ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ತಾವು ಸೂಚಿಸಿದ ಕತಡಗಳಿಗೆ ಸಹಿ ಹಾಕದಿದ್ದರೆ ವರ್ಗಾವಣೆ ಮಾಡಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆಂಬ ಆರೋಪಗಳು ಬಂದಿವೆ. ಅದರಂತೆ ಮೂರು ದಿನಗಳ ಹಿಂದೆ ವರ್ಗಾವಣೆಯಾಗಿರುವ ತಹಶೀಲ್ದಾರ್ ಭರತ್ ಇದಕ್ಕೆ ಪುಷ್ಠಿ ನೀಡುವಂತಿದೆ. ಜೊತೆಗೆ 1989ರಲ್ಲಿ ಬಂಗಾರಪೇಟೆ ತಹಶೀಲ್ದಾರ್  ಕಚೇರಿಯಲ್ಲಿ ತರೀನಾ ಎಂಬುವರು ಯಾರು ಇಲ್ಲ ತರೀನಾ ಎಂದು ಸಹಿ ಮಾಡಿದ್ದಾರೆ. ಅಂತಹವರು ಕಾರ್ಯ ನಿರ್ವಹಿಸಿರುವ ಕುರಿತು ದಾಖಲೆಗಳೇ ಇಲ್ಲ. ಈ ಹಿಂದೆ ರೂಪಕಲಾ ಶಶಿಧರ್ ಶಾಸಕರಾದ ಬಳಿಕ 524 ಎಕರೆ ಸರಕಾರಿ ಜಮೀನಿಗೆ ಕಾನೂನು ಬಾಹಿರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವ ಆರೋಪಗಳು ಕೇಳಿ ಬಂದಿವೆ.

ಕಾನೂನು ಬಾಹಿರವಾಗಿ ಸರಕಾರಿ ಜಮೀನು ಕಬಳಿಕೆ ಮಾಡುವ ಪ್ರಯತ್ನ ನಡೆಯುತ್ತಿದ್ದರೂ ಶಾಸಕರು ತಮಗೂ ತಾಲೂಕಿಗೆ ಸಂಬಂಧವಿಲ್ಲ ಎನ್ನುವಂತಿದ್ದಾರೆ.ಕೋಲಾರ ತಾಲ್ಲೂಕಿನ ರೈತ 60-70 ಕಿ.ಮೀ ದೂರ ಬಂದು ಕೃಷಿ ಮಾಡಲು ಸಾಧ್ಯವೇ ಕೆಜಿಎಫ್ ನಲ್ಲಿಯೇ ನೂರಾರು ಜಮೀನು ರಹಿತರಿದ್ದರೂ ಶಾಸಕರು ಬಡವರಿಗೆ ಜಮೀನು ನೀಡುವ ಪ್ರಯತ್ನ ಮಾಡದೆ, ಬಲಾಢ್ಯರು ಹಾಗೂ ಆತ್ಮೀಯರಿಗೆ ಜಮೀನು ಮಾಡಿಕೊಡಲು ಮುಂದಾಗಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಇನ್ನೂ ಇಷ್ಟೆಲ್ಲಾ ವಿಚಾರಗಳು ದೂರಿನ ರೂಪದಲ್ಲಿ ತಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅಲ್ಲಿ ಏನಾಗಿದೆ ಎಂಬುದನ್ನ ಪರಿಶೀಲನೆ ಮಾಡುತ್ತೇನೆ ಎನ್ನುವುದು ಹೊಸ ತಹಶೀಲ್ದಾರ್ ಗಾಯತ್ರಿ ಅವರ ಮಾತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೇ ಬಿಡುಗಡೆ ಆದ ‘ಕರಾವಳಿ’ ಟ್ರೇಲರ್ ಹೇಗಿದೆ ನೋಡಿ.. – Kannada News | Prajwal Devaraj and Raj B Shetty starrer Karavali movie trailer released

ವಿವಾದದ ಜೊತೆಜೊತೆಯಲ್ಲೇ ‘ಕರಾವಳಿ’ ಟ್ರೇಲರ್ (Karavali Trailer) ಬಿಡುಗಡೆ ಆಗಿದೆ. ಸೆಟ್ಟೇರಿದ ದಿನದಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾದ ಟ್ರೇಲರ್‌ ನೋಡಲು ಪ್ರೇಕ್ಷಕರು ಕಾದಿದ್ದರು. ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರ ಮುಂತಾದವರು ನಟಿಸಿರುವ ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ಮಾಡಲಾಗಿದೆ. ಈಗ ಯೂಟ್ಯೂಬ್​ನಲ್ಲೂ ಟ್ರೇಲರ್ ಲಭ್ಯವಾಗಿದೆ. ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಜುಲೈ 24ಕ್ಕೆ ತೆರೆಗೆ ಬರುತ್ತಿದೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ರಾಜ್ ಬಿ. ಶೆಟ್ಟಿ, ನಾಯಕಿಯರಾದ ಸಂಪದಾ, ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಆದರೆ ಪ್ರಜ್ವಲ್ ದೇವರಾಜ್ ಅವರು ಭಾಗಿಯಾಗಿರಲಿಲ್ಲ. ಟ್ರೇಲರ್​ನಲ್ಲಿ ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೈಟ್ ಆಗಿದೆ. ಕರಾವಳಿ ಭಾಗದ ಹೆಮ್ಮೆಯ ಕ್ರೀಡೆ ಕಂಬಳವನ್ನು ಸುಂದರವಾಗಿ ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ.

380 ಕೋಣಗಳನ್ನು ಬಳಸಿ ಸಿನಿಮಾ ಶೂಟಿಂಗ್:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ ಅವರು ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೇ, ಸಂಭಾವನೆ ವಿಚಾರದ ಬಗ್ಗೆಯೂ ಮಾತನಾಡಿದರು. ಸುಮಾರು 380 ಕೋಣಗಳನ್ನು ಬಳಸಿ ಸಿನಿಮಾ ಶೂಟಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡರು. ರಾಜ್ ಬಿ. ಶೆಟ್ಟಿ ಮಾತನಾಡಿ, ಇದು ಅಪ್ಪಟ ಕನ್ನಡದ ಸಿನಿಮಾ ಎಂದು ಹೇಳಿದರು.

ಪ್ರಜ್ವಲ್ ದೇವರಾಜ್ ಇನ್ನೂ ಸ್ಪಷ್ಟನೆ ನೀಡಿಲ್ಲ:

ಮಿತ್ರ, ಸಂಪದಾ ಮತ್ತು ಸುಷ್ಮಿತಾ ಕೂಡ ತಮ್ಮ ಪಾತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಖುಷಿ ವ್ಯಕ್ತಪಡಿಸಿದರು. ಹಿರಿಯ ನಟ ಶ್ರೀಧರ್, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್, ವಿತರಕ ಸುಪ್ರಿತ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು. ಟ್ರೇಲರ್​ನಲ್ಲಿ ತಮ್ಮ ಧ್ವನಿ ಇಲ್ಲದೇ ಇರುವುದರ ಬಗ್ಗೆ ಪ್ರಜ್ವಲ್ ದೇವರಾಜ್ ಅವರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ: ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ: ‘ಕರಾವಳಿ’ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ವಿತರಣೆ:

ಗುರುದತ್ ಗಾಣಿಗ ಅವರು ‘ಕರಾವಳಿ’ ಸಿನಿಮಾಗೆ ನಿರ್ದೇಶನದ ಜೊತೆಗೆ ‘ವಿಕೆ ಫಿಲ್ಮ್’ ಮತ್ತು ‘ಗಾಣಿಗ ಫಿಲ್ಮ್ಸ್‌’ ಸಹಯೋಗದಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ. ಟ್ರೇಲರ್ ನೋಡಿದ ಬಳಿಕ ಈ ಸಿನಿಮಾದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ. ಶೆಟ್ಟಿ ನಡುವಿನ ಸಂಬಂಧವೇನು ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಿಮ್ ಬೇಡ! ಕೇವಲ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಿಗುತ್ತೆ 5 ಅದ್ಭುತ ಆರೋಗ್ಯ ಪ್ರಯೋಜನ – Kannada News | Climbing Stairs Daily: A Simple Exercise For Better Heart Health And Fitness

ಇಂದಿನ ವೇಗದ ಜೀವನಶೈಲಿಯಲ್ಲಿ ಪ್ರತಿದಿನ ಜಿಮ್ ಅಥವಾ ವ್ಯಾಯಾಮಕ್ಕೆ ಸಮಯ ಮೀಸಲಿಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ದಿನನಿತ್ಯದ ಸಣ್ಣ ದೈಹಿಕ ಚಟುವಟಿಕೆಗಳೂ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಅವುಗಳಲ್ಲಿ ಮೆಟ್ಟಿಲು ಹತ್ತುವುದು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಎಲ್ಲೆಡೆ ಮಾಡಬಹುದಾದ ಈ ವ್ಯಾಯಾಮ ದೇಹವನ್ನು ಚುರುಕುಗೊಳಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳೇನು, ಯಾರಿಗೆ ಇದು ಒಳ್ಳೆಯದಲ್ಲ ಮತ್ತು ಯಾಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಉತ್ತಮ: ಮೆಟ್ಟಿಲು ಹತ್ತುವುದು ಪರಿಣಾಮಕಾರಿ ಕಾರ್ಡಿಯೊ ವ್ಯಾಯಾಮವಾಗಿದ್ದು, ಇದು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತಸಂಚಾರ ಸುಧಾರಿಸಲು ಸಹಾಯ ಮಾಡುತ್ತದೆ.

ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ: ತೊಡೆ, ಕಾಲಿನ ಸ್ನಾಯುಗಳು, ಸೊಂಟ ಮತ್ತು ಗ್ಲೂಟ್ಸ್ ಭಾಗದ ಸ್ನಾಯುಗಳು ಹೆಚ್ಚು ಕಾರ್ಯನಿರ್ವಹಿಸುವುದರಿಂದ ಅವುಗಳ ಶಕ್ತಿ ಮತ್ತು ಸಹನಶಕ್ತಿ ಹೆಚ್ಚಾಗುತ್ತದೆ.

ಕ್ಯಾಲೊರಿ ವೇಗವಾಗಿ ಕರಗುತ್ತದೆ: ಸಾಮಾನ್ಯವಾಗಿ ನಡೆಯುವುದಕ್ಕಿಂತ ಮೆಟ್ಟಿಲು ಹತ್ತುವಾಗ ಹೆಚ್ಚು ಶಕ್ತಿ ಬಳಸಲಾಗುತ್ತದೆ. ಇದರಿಂದ ಹೆಚ್ಚಿನ ಕ್ಯಾಲೊರಿ ಕರಗಿ, ತೂಕ ನಿಯಂತ್ರಣಕ್ಕೂ ನೆರವಾಗಬಹುದು.

ಸ್ಟಾಮಿನಾ ಮತ್ತು ಫಿಟ್ನೆಸ್ ಹೆಚ್ಚುತ್ತದೆ: ನಿಯಮಿತವಾಗಿ ಮೆಟ್ಟಿಲು ಹತ್ತುವುದರಿಂದ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಉತ್ತಮವಾಗಿ, ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ಇದನ್ನೂ ಓದಿ: ದೇಹದ ಅಲ್ಲಲ್ಲಿ ಊತ ಕಾಣಿಸಿಕೊಳ್ಳುವುದು ಈ ಆರೋಗ್ಯ ಸಮಸ್ಯೆ ಬರುವ ಸೂಚನೆಯಾಗಿರಬಹುದು!

ಎಲುಬುಗಳು ಗಟ್ಟಿಯಾಗುತ್ತವೆ: ಇದು ದೇಹದ ತೂಕವನ್ನು ಹೊರುವ ವ್ಯಾಯಾಮವಾಗಿರುವುದರಿಂದ ಎಲುಬುಗಳ ಬಲವನ್ನು ಕಾಪಾಡಲು ಸಹಕಾರಿ.

ಯಾರು ಎಚ್ಚರಿಕೆ ವಹಿಸಬೇಕು?

ಮೊಣಕಾಲು ನೋವು, ಸಂಧಿವಾತ, ಹೃದಯರೋಗ, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾದವರು ವೈದ್ಯರ ಸಲಹೆ ಪಡೆದ ಬಳಿಕವೇ ಈ ವ್ಯಾಯಾಮ ಮಾಡಬೇಕು. ವಯೋವೃದ್ಧರು ಸಹ ಜಾಗ್ರತೆ ವಹಿಸಬೇಕು.

ಮೆಟ್ಟಿಲು ಹತ್ತುವಾಗ ಗಮನಿಸಬೇಕಾದ ವಿಷಯಗಳು:

ಆರಂಭದಲ್ಲಿ ನಿಧಾನವಾಗಿ ಪ್ರಾರಂಭಿಸಿ. ಉತ್ತಮ ಹಿಡಿತವಿರುವ ಶೂ ಧರಿಸಿ, ಅಗತ್ಯವಿದ್ದರೆ ರೈಲಿಂಗ್ ಹಿಡಿದು ಹತ್ತಿ. ವ್ಯಾಯಾಮದ ವೇಳೆ ಎದೆನೋವು, ಉಸಿರಾಟದ ತೊಂದರೆ ಅಥವಾ ತಲೆಸುತ್ತು ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಿಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News | What are the benefits of morning walking?

ಇಂದಿನ ಈ ಬ್ಯುಸಿ ಜೀವನದಲ್ಲಿ ಹೆಚ್ಚಿನವರು ಗಂಟೆಗಟ್ಟಲೇ ಕುಳಿತೇ ಕೆಲಸವನ್ನು ಮಾಡುತ್ತಾರೆ. ಕೆಲಸದ ಒತ್ತಡದಿಂದಾಗಿ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಮಾಡಲು ಕೂಡ ಸಮಯ ಸಿಗುವುದಿಲ್ಲ. ಈ ದೈಹಿಕ ಚಟುವಟಿಕೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಿರುವಾಗ ಜಿಮ್‌ಗೆ ಹೋಗಿಯೇ ವ್ಯಾಯಾಮ ಮಾಡುವ ಬದಲು ಬೆಳಗ್ಗೆ ಎದ್ದು ಅರ್ಧ ಗಂಟೆಗಳ ಕಾಲ ವಾಕಿಂಗ್‌ (walking) ಮಾಡಬಹುದು. ತುಂಬಾ ಸರಳವಾಗಿ ಕಂಡರೂ ವಾಕಿಂಗ್‌ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮವಾಗಿದ್ದು, ಕೇವಲ 30 ನಿಮಿಷಗಳ ಕಾಲ ನಡೆದರೆ, ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೆಳಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಹೃದಯವನ್ನು ಆರೋಗ್ಯವಾಗಿಡುತ್ತದೆ: ನಡೆಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಹೃದಯಾಘಾತ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಪ್ರತಿದಿನ ಬೆಳಗಿನ ನಡಿಗೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಕಾರಿ. ನೀವು ವಾಕಿಂಗ್‌ ಮಾಡಿದಾಗ ನಿಮ್ಮ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಣೆಗೊಳ್ಳುತ್ತದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಸುಧಾರಿತ ರೋಗನಿರೋಧಕ ಶಕ್ತಿಯು ನಿಮ್ಮ ದೇಹವು ಬಾಹ್ಯ ಸೋಂಕುಗಳ ವಿರುದ್ಧ ಉತ್ತಮವಾಗಿ ಹೋರಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ: ಪ್ರತಿದಿನ ಬೆಳಿಗ್ಗೆ ಅರ್ಧ ಗಂಟೆ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ. ಮಧುಮೇಹ ರೋಗಿಗಳಿಗೆ ಪ್ರತಿದಿನ ಬೆಳಗಿನ ನಡಿಗೆ ಅತ್ಯಗತ್ಯ. ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಾಗಿದ್ದು, ಜೀವನಶೈಲಿಯ ಬದಲಾವಣೆಗಳ ಮೂಲಕ ಮಾತ್ರ ಇದನ್ನು ನಿಯಂತ್ರಿಸಬಹುದು.

ಸ್ಮರಣಶಕ್ತಿಯನ್ನು ಬಲಪಡಿಸುತ್ತದೆ: ನೀವು ಬೆಳಿಗ್ಗೆ ತಾಜಾ ಗಾಳಿಯಲ್ಲಿ 30 ನಿಮಿಷಗಳ ವಾಕಿಂಗ್‌ ಮಾಡಿದಾಗ, ನಿಮ್ಮ ಮೆದುಳಿಗೆ ಉತ್ತಮ ಆಮ್ಲಜನಕ ಪೂರೈಕೆಯಾಗುತ್ತದೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮ್ಮ ಸ್ಮರಣೆಯನ್ನು ಬಲಪಡಿಸುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ನಿಮ್ಮ ತೂಕವನ್ನು ನಿಯಂತ್ರಿಸಲು ಬಯಸಿದರೆ,  ವಾಕಿಂಗ್‌ ಮಾಡಿ. ಪ್ರತಿದಿನ 30 ನಿಮಿಷಗಳ ನಡಿಗೆ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.

ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ: ನಿಯಮಿತವಾಗಿ ನಡೆಯುವುದರಿಂದ  ಮೂಳೆಗಳು ಬಲಗೊಳ್ಳುತ್ತದೆ. ಈ ದೈನಂದಿನ ಅಭ್ಯಾಸವು ಕೀಲು ನೋವು ಮತ್ತು ಬಿಗಿತದಿಂದ ಪರಿಹಾರವನ್ನು ನೀಡುತ್ತದೆ. ಬೆಳಗ್ಗೆ ಅರ್ಧ ಗಂಟೆಯ ನಡಿಗೆ ಸ್ನಾಯುಗಳು ಬಲಗೊಳ್ಳುತ್ತವೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು?

ಮಾನಸಿಕ ಒತ್ತಡದಿಂದ ಮುಕ್ತಿ: ನಡೆಯುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ರಾತ್ರಿಯಲ್ಲಿ ಗೊರಕೆ ಹೊಡೆಯದೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಖಿನ್ನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವಾಕಿಂಗ್‌ ಮಾಡುವುದರ ಸರಿಯಾದ ಸಮಯ ಮತ್ತು ಸರಿಯಾದ ಮಾರ್ಗ:

ಸರಿಯಾದ ತಂತ್ರದೊಂದಿಗೆ ವಾಕಿಂಗ್‌ ಮಾಡಿದಾಗ ಮಾತ್ರ ನಡಿಗೆಯ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ನಡೆಯುವಾಗ ನಿಮ್ಮ ದೇಹವು ಸಂಪೂರ್ಣವಾಗಿ ನೇರವಾಗಿರಬೇಕು. ಕೆಳಗೆ ನೋಡುವ ಬದಲು, ನೇರವಾಗಿ ಮುಂದೆ ನೋಡಿ ಮತ್ತು ನಿಮ್ಮ ತೋಳುಗಳನ್ನು ನೈಸರ್ಗಿಕವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿ. ನಿಧಾನಗತಿಯಲ್ಲಿ ಪ್ರಾರಂಭಿಸಿ ಮತ್ತು ನಿಮ್ಮ ದೇಹವು ಬೆಚ್ಚಗಾದ ನಂತರ ಕ್ರಮೇಣ ನಡಿಗೆಯ ವೇಗವನ್ನು ಹೆಚ್ಚಿಸಿ.

ಯಾವಾಗಲೂ ನಡೆಯಲು ಆರಾಮದಾಯಕ ಬಟ್ಟೆಗಳು ಮತ್ತು ಉತ್ತಮ ಹಿಡಿತವಿರುವ  ಸ್ಪೋರ್ಟ್ಸ್‌ ಶೂಗಳನ್ನು ಧರಿಸಿ. ಬೆಳಿಗ್ಗೆ ಅಥವಾ ಸಂಜೆ ನಡೆಯಲು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಆಗ ಹವಾಮಾನವು ಆಹ್ಲಾದಕರ ಮತ್ತು ತಂಪಾಗಿರುತ್ತದೆ. ನಿಮಗೆ ಬೆಳಿಗ್ಗೆ ಸಮಯವಿಲ್ಲದಿದ್ದರೆ, ಸಂಜೆಯ ಸಮಯದಲ್ಲಿಯೂ ವಾಕಿಂಗ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಡೋನೇಷ್ಯಾ ಸಂಸತ್​​ನಲ್ಲಿ ಭಾರತದ ಬಿಜು ಪಟ್ನಾಯಕ್ ಸಾಹಸಗಾಥೆ ಬಿಚ್ಚಿಟ್ಟ ಪ್ರಧಾನಿ ಮೋದಿ; ಏನಿದು ಕತೆ? – Kannada News | Why PM Narendra Modi praised Biju Patnaik in Indonesia Parliament? what is his Story?

ಜಕಾರ್ತ, ಜುಲೈ 7: ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in Indonesia) ಇಂದು ಜಕಾರ್ತದ ಸಂಸತ್​​ನಲ್ಲಿ ಮಾತನಾಡುವಾಗ ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತ ಪೈಲಟ್ ದಿವಂಗತ ಬಿಜು ಪಟ್ನಾಯಕ್ ಅವರ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂಡೋನೇಷ್ಯಾದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಡಚ್ ವಸಾಹತುಶಾಹಿ ಪಡೆಗಳ ಕಣ್ಣು ತಪ್ಪಿಸಿ, ಇಂಡೋನೇಷ್ಯಾದ ಪ್ರಮುಖ ನಾಯಕರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಬಿಜು ಪಟ್ನಾಯಕ್ ವಹಿಸಿದ್ದ ಸಾಹಸಮಯ ಪಾತ್ರವನ್ನು ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಜಕಾರ್ತಾದಲ್ಲಿ ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಬಿಜು ಪಟ್ನಾಯಕ್ ಅವರು ಅಂದು ತೋರಿದ ಧೈರ್ಯವೇ ಭಾರತ ಮತ್ತು ಇಂಡೋನೇಷ್ಯಾವನ್ನು ಭೌಗೋಳಿಕವಾಗಿ ಹಾಗೂ ರಾಜತಾಂತ್ರಿಕವಾಗಿ ಅತ್ಯಂತ ಹತ್ತಿರ ತಂದಿತು” ಎಂದು ನೆನಪಿಸಿಕೊಂಡಿದ್ದಾರೆ.

“ನಮ್ಮ ಎರಡೂ ರಾಷ್ಟ್ರಗಳು ಸರಿಸುಮಾರು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದವು. ಇಂಡೋನೇಷ್ಯಾ 1945ರಲ್ಲಿ ಮತ್ತು ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಸ್ವತಂತ್ರ ರಾಷ್ಟ್ರಗಳ ಸಾರ್ವಭೌಮತ್ವದ ವಿಷಯ ಬಂದಾಗ ವಿಶ್ವಸಂಸ್ಥೆಯಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಚಳುವಳಿಯ ಪರವಾಗಿ ಭಾರತ ಪ್ರಬಲ ಧ್ವನಿಯಾಗಿ ನಿಂತಿತು. ಆ ಅವಧಿಯಲ್ಲಿ ಬಿಜು ಪಟ್ನಾಯಕ್ ವಹಿಸಿದ ಪಾತ್ರ, ಅವರು ಇಂಡೋನೇಷ್ಯಾದ ಆಗಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ರೀತಿ ಎರಡೂ ದೇಶಗಳನ್ನು ಪರಸ್ಪರ ಹತ್ತಿರ ತಂದಿತು” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಬಿಂಟಾಂಗ್ ಆದಿಪೂರ್ಣ’ ಪ್ರದಾನ

ಉಭಯ ದೇಶಗಳ ನಡುವಿನ ಐತಿಹಾಸಿಕ ಸಮುದ್ರ ಸಂಪರ್ಕದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಮತ್ತು ಇಂಡೋನೇಷ್ಯಾ ದೇಶಗಳ ಪಾಲಿಗೆ ಸಮುದ್ರ ಎಂದಿಗೂ ದೂರವನ್ನು ಪ್ರತಿನಿಧಿಸಿಲ್ಲ. ಅದು ಯಾವಾಗಲೂ ನಮ್ಮ ದೇಶಗಳ ನಡುವಿನ ಸೇತುವೆಯಾಗಿದೆ ಮತ್ತು ನಮ್ಮ ಹಂಚಿಕೆಯ ಭವಿಷ್ಯದ ಕೇಂದ್ರಬಿಂದುವಾಗಿ ಮುಂದುವರಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಇಂಡೋನೇಷ್ಯಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜು ಪಟ್ನಾಯಕ್ ಪಾತ್ರವೇನು?:

1947ರಲ್ಲಿ ಡಚ್ ವಸಾಹತುಶಾಹಿ ಆಡಳಿತದ ವಿರುದ್ಧ ನಡೆದ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಾಂತಿಯಲ್ಲಿ ಬಿಜು ಪಟ್ನಾಯಕ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಎರಡನೇ ಮಹಾಯುದ್ಧದ ನಂತರ ಇಂಡೋನೇಷ್ಯಾವನ್ನು ಮರು ವಸಾಹತು ಮಾಡಿಕೊಳ್ಳಲು ಯತ್ನಿಸಿದ ಡಚ್ ಪಡೆಗಳು ಭಾರಿ ಮಿಲಿಟರಿ ದಾಳಿ ನಡೆಸಿ, ಅಲ್ಲಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಜಕಾರ್ತಾದಲ್ಲಿ ಗೃಹಬಂಧನದಲ್ಲಿರಿಸಿದ್ದವು. ಜಗತ್ತಿಗೆ ಈ ವಿಷಯ ತಿಳಿಯದಂತೆ ಎಲ್ಲಾ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಡಚ್ ಪಡೆಗಳ ವಿರುದ್ಧ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಆ ನಾಯಕರನ್ನು ಅಲ್ಲಿಂದ ರಕ್ಷಿಸುವ ರಹಸ್ಯ ಕಾರ್ಯಾಚರಣೆಯ ಜವಾಬ್ದಾರಿಯನ್ನು 31 ವರ್ಷದ ಯುವ ಪೈಲಟ್ ಬಿಜು ಪಟ್ನಾಯಕ್ ಅವರಿಗೆ ವಹಿಸಿದ್ದರು.

ಪಟ್ನಾಯಕ್ ದಂಪತಿಯ ಸಾಹಸ ಅಂತಿಂಥದ್ದಲ್ಲ:

1947ರ ಜುಲೈನಲ್ಲಿ ಬಿಜು ಪಟ್ನಾಯಕ್ ಮತ್ತು ಅವರ ಸಹ-ಪೈಲಟ್ ಆಗಿದ್ದ ಪತ್ನಿ ಜ್ಞಾನವತಿ ಪಟ್ನಾಯಕ್ ಇಬ್ಬರೂ ‘ಡೌಗ್ಲಾಸ್ ಸಿ-47 ಡಕೋಟಾ’ (Douglas C-47 Dakota) ಮಿಲಿಟರಿ ಸಾರಿಗೆ ವಿಮಾನವನ್ನು ಭಾರತದಿಂದ ಇಂಡೋನೇಷ್ಯಾ ವೈಮಾನಿಕ ವಲಯಕ್ಕೆ ಹಾರಿಸಿದರು. ಮೂಲತಃ ಲಾಹೋರ್‌ನವರಾದ ಜ್ಞಾನವತಿ ಪಟ್ನಾಯಕ್ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದರು. ವಿಶೇಷವೆಂದರೆ, ತಮ್ಮ ಮಗ ಹುಟ್ಟಿದ ಕೇವಲ 14 ದಿನಗಳಲ್ಲೇ ಈ ದಂಪತಿ ಈ ಅಪಾಯಕಾರಿ ಕಾರ್ಯಾಚರಣೆಗೆ ಹೊರಟಿದ್ದರು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ರಾಮಾಯಣದ ತೊಗಲು ಬೊಂಬೆಯಾಟ ನೋಡಿ ಅಚ್ಚರಿಗೊಂಡ ಮೋದಿ

ಈ ವೇಳೆ ಡಚ್ ಪಡೆಗಳು “ನಿಮ್ಮ ವಿಮಾನವನ್ನು ಹೊಡೆದು ಉರುಳಿಸುತ್ತೇವೆ” ಎಂದು ನೇರ ಬೆದರಿಕೆ ಹಾಕಿದವು. ಆದರೆ ಅದಕ್ಕೆ ಕಿಂಚಿತ್ತೂ ಹೆದರದ ಬಿಜು ಪಟ್ನಾಯಕ್, “ನಮ್ಮ ವಿಮಾನದ ಮೇಲೆ ದಾಳಿ ನಡೆದರೆ ಅದಕ್ಕೆ ಪ್ರತಿಯಾಗಿ ಭಾರತದ ಆಕಾಶದಲ್ಲಿ ಹಾರಾಡುವ ಡಚ್ ವಿಮಾನಗಳನ್ನು ಹೊಡೆದು ಉರುಳಿಸಲಾಗುತ್ತದೆ” ಎಂದು ಕೌಂಟರ್ ವಾರ್ನಿಂಗ್ ನೀಡಿದರು.

ಜಗತ್ತಿನೆದುರು ಬಯಲಾಯ್ತು ಡಚ್ಚರ ಪಿತೂರಿ:

ಕೊನೆಗೂ ಡಚ್ ಪಡೆಗಳ ಕಣ್ತಪ್ಪಿಸಿ ಯಶಸ್ವಿಯಾಗಿ ಆ ಇಬ್ಬರೂ ಇಂಡೋನೇಷ್ಯನ್ ನಾಯಕರನ್ನು ವಿಮಾನದಲ್ಲಿ ಹತ್ತಿಸಿಕೊಂಡ ಪಟ್ನಾಯಕ್ ದಂಪತಿ, ಸಿಂಗಾಪುರ ಮಾರ್ಗವಾಗಿ 1947ರ ಜುಲೈ 24ರಂದು ನವದೆಹಲಿಗೆ ಬಂದು ತಲುಪಿದರು. ಈ ಯಶಸ್ವಿ ಕಾರ್ಯಾಚರಣೆಯು ಇಂಡೋನೇಷ್ಯಾದ ಸ್ವಾತಂತ್ರ್ಯದ ಹೋರಾಟದ ಕಥೆಯನ್ನು ಜಗತ್ತಿನ ವೇದಿಕೆಗೆ ತಲುಪಿಸಿತು. ಜುಲೈ 24, 1947ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಜಹ್ರೀರ್ ಮತ್ತು ಹಟ್ಟಾ, ಇಂಡೋನೇಷ್ಯಾದ ದುಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟರು. ಅದೇ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ವಿಶ್ವಸಂಸ್ಥೆಯಲ್ಲಿ ಡಚ್ ಆಕ್ರಮಣದ ವಿರುದ್ಧ ನಿರ್ಣಯವನ್ನು ತಂದವು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಡಚ್ ಪಡೆಗಳು ಹಿಂದೆ ಸರಿಯಲಾರಂಭಿಸಿದವು.

ಅಂದಿನಿಂದ ಇಂಡೋನೇಷ್ಯಾ ಬಿಜು ಪಟ್ನಾಯಕ್ ಅವರ ಈ ಮಹತ್ತರ ಪಾತ್ರವನ್ನು ಮರೆತಿಲ್ಲ. ಇಂದು ಕೂಡ ದೆಹಲಿಯಲ್ಲಿರುವ ಇಂಡೋನೇಷ್ಯಾ ರಾಯಭಾರ ಕಚೇರಿಯಲ್ಲಿ ಬಿಜು ಪಟ್ನಾಯಕ್ ಅವರಿಗಾಗಿಯೇ ಒಂದು ವಿಶೇಷ ಕೊಠಡಿಯನ್ನು ಮೀಸಲಿಡಲಾಗಿದೆ. ಇದೇ ಕಾರಣಕ್ಕೆ ಇಂಡೋನೇಷ್ಯಾ ಸರ್ಕಾರವು ಬಿಜು ಪಟ್ನಾಯಕ್ ಅವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭೂಮಿ ಪುತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂಡೋನೇಷ್ಯಾ ಅಧ್ಯಕ್ಷರ ಮಗಳಿಗೆ ಹೆಸರಿಟ್ಟಿದ್ದರು ಪಟ್ನಾಯಕ್:

ಪಟ್ನಾಯಕ್ ಅವರ ಈ ಸಾಹಸದ ನಂತರ, ಆಗಿನ ಇಂಡೋನೇಷ್ಯಾ ಅಧ್ಯಕ್ಷ ಸುಕರ್ಣೋ ಅವರು ಪಟ್ನಾಯಕ್ ದಂಪತಿಯ ಬಳಿ ತಮ್ಮ ಹೆಣ್ಣು ಮಗಳಿಗೆ ನೀವೇ ಹೆಸರಿಡಬೇಕೆಂದು ಕೋರಿದರು. ಆಗ ಪಟ್ನಾಯಕ್ ದಂಪತಿ ಆ ಮಗುವಿಗೆ ‘ಮೇಘಾವತಿ’ ಎಂದು ಹೆಸರಿಟ್ಟರು. ಅದೇ ಮೇಘಾವತಿ ಸುಕರ್ಣೋಪುತ್ರಿ ಮುಂದೆ 2001ರಲ್ಲಿ ಇಂಡೋನೇಷ್ಯಾದ ಮೊದಲ ಮಹಿಳಾ ಅಧ್ಯಕ್ಷರಾದರು. 1997ರಲ್ಲಿ ಬಿಜು ಪಟ್ನಾಯಕ್ ನಿಧನರಾದಾಗ ಇಂಡೋನೇಷ್ಯಾ ಸರ್ಕಾರವು ಅವರ ಗೌರವಾರ್ಥವಾಗಿ ದೇಶಾದ್ಯಂತ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಿ ತನ್ನ ಕೃತಜ್ಞತೆಯನ್ನು ಸಲ್ಲಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಳೆ ಇಲ್ಲದಿದ್ದರೂ ಬಾಗಲಕೋಟೆಯಲ್ಲಿ ಬೊರ್ಗರೆಯುತ್ತಿರುವ ನದಿಗಳು, ಬೆಳೆಗಳಿಗಿಲ್ಲ ನೀರು! – Kannada News | Krishna And ghataprabha Over flow In Bagalkot, but No Water to Farmers Crops

ಬಾಗಲಕೋಟೆ, (ಜುಲೈ 07): ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಕೇಳರಿಯದ ಮಳೆ (Rain) ಆಗ್ತಿದೆ. ಅದೇ ನೀರು ಕೃಷ್ಣೆಯ ಒಡಲು ಸೇರಿದ್ದು, ರಾತ್ರೋರಾತ್ರಿ ಕೃಷ್ಣಾ ನದಿ (Krishna River) ನೀರಿನ ಮಟ್ಟ 1 ಲಕ್ಷ ಕ್ಯೂಸೆಕ್ ದಾಟಿದೆ. ಜಸ್ಟ್‌ ನಾಲ್ಕು ದಿನಗಳ ಹಿಂದಷ್ಟೇ ಕೃಷ್ಣಾ ನದಿ ಒಣಗಿ ಹೋಗಿದ್ದು,  ಜಮೀನಿನಲ್ಲಿನ ಬೆಳೆಗಳು ಕೂಡಾ ಒಣಗಿ ಹೋಗಿದ್ದವು.  ಆದ್ರೆ ನಾಲ್ಕೇ ದಿನದಲ್ಲಿ ಕೃಷ್ಣಾ ನದಿ ಪಾತ್ರದ ಚಿತ್ರಣವೇ ಬದಲಾಗಿದೆ. ಕಬ್ಬು, ಜೋಳ ಸೇರಿದಂತೆ ಬೆಳೆಗಳೆಲ್ಲಾ ನದಿ ಒಡಲು ಸೇರಿವೆ. ಇನ್ನೊಂದೆಡೆ ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ‌ಮಳೆ ಕೈ ಕೊಟ್ಟಿದ್ದು, ಬರದ ಛಾಯೆ ಆವರಿಸಿದೆ. ಆದ್ರೆ, ಮಹಾರಾಷ್ಟ್ರದ ಪಶ್ಚಿಮ ಘಟ್ಟ ಮತ್ತು ಬೆಳಗಾವಿ ಭಾಗದಲ್ಲಿ ಸುರಿದ ನಿರಂತರ ಮಳೆ ಜಲಮೂಲ ಭರ್ತಿಯಾಗಿವೆ. ಖಾಲಿಯಾಗಿದ್ದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಬೊರ್ಗರೆದು ಹರಿಯುತ್ತಿವೆ. ಆದ್ರೆ, ರೈತರ ಬೆಳೆಗಳಿಗೆ ಸರಿಯಾಗಿ ನೀರಿಲ್ಲ.

ಮಳೆ ಇಲ್ಲದಿದ್ದರೂ ಉಕ್ಕಿಹರಿಯುತ್ತಿರುವ ನದಿಗಳು

ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಘಟಪ್ರಭಾ ನದಿಗೆ ಜೀವ ಕಳೆ ಬಂದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ರೌದ್ರ ರಮಣೀಯವಾಗಿ ಬೊರ್ಗರೆದು ಹರಿಯುತ್ತಿದೆ.ಬ್ಯಾರೇಜ್‌ಗೆ ಒಳಹರಿವು 77,100 ಕ್ಯೂಸೆಕ್ ಇದ್ದು, ಹೊರಹರಿವು 75,500 ಕ್ಯೂಸೆಕ್ ಇದೆ. ಹೀಗಾಗಿ ಹಿಪ್ಪರಗಿ ಬ್ಯಾರೇಜ್‌ನ 10 ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು, ನದಿ ದಡದ ಅಕ್ಕಪಕ್ಕದಲ್ಲಿರುವ ನೂರಾರು ಮೋಟಾರ್ ಪಂಪ್ ಸೆಟ್‌ಗಳು ಮುಳುಗಡೆ ಆತಂಕ ಎದುರಾಗಿದ್ದು, ಇದರಿಂದ ರೈತರು, ಜಮೀನಿಗೆ ನೀರು ಹರಿಸಲು ಅಳವಡಿಸಿದ್ದ ಪಂಪ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.

ಇದನ್ನೂ ನೋಡಿ: ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು

ಇತ್ತ ಮುಧೋಳ ಭಾಗದಲ್ಲೂ ಘಟಪ್ರಭಾ ನದಿಗೆ 11,100 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಧೋಳ ಹೊರವಲಯದ ಸಿದ್ದೇಶ್ವರ ಕಿರುಸೇತುವೆ ಸಂಪೂರ್ಣ ಜಲಾವೃತವಾಗಿದೆ. ಆದರೆ ಇದೇ ಸ್ಥಳದಲ್ಲಿ ಪೈಪ್‌ಲೈನ್ ಮೂಲಕ ನದಿಗೆ ನೊರೆ ಸಹಿತ ವಿಷಕಾರಿ ಮಲಿನ ನೀರು ಸೇರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ನದಿ ತೀರದ ರೈತರು ಇಷ್ಟು ದಿನ ನದಿಯಲ್ಲಿ ಹನಿ ನೀರೇ ಇರಲಿಲ್ಲ. ಖಾಲಿಯಾದ ನದಿ ನೋಡಿ ಬಹಳ ಬೇಸರಗೊಂಡಿದ್ದರು. ಜನ ಜಾನುವಾರುಗಳಿಗೆ, ಕೃಷಿಗೆ ನೀರಿಲ್ಲದ ಚಿಂತೆ ಕಾಡುತ್ತಿತ್ತು. ಇದೀಗ ಎಲ್ಲೋ ಆದ ಮಳೆಯಿಂದ ನದಿಗಳಿಗೆ ಜೀವಕಳೆ ಬಂದಿದ್ದು, ರೈತರು ಸಂತಸಗೊಂಡಿದ್ದಾರೆ.

ನದಿಗಳು ಹರಿಯುತ್ತಿದ್ದರೂ ಬೆಳೆಗಳಿಗಿಲ್ಲ ನೀರು

ನದಿಗಳು ತುಂಬಿ ಹರಿಯುತ್ತಿದ್ದರೂ ಸಹ ರೈತರ ಬೆಳೆಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎನ್ನುವ ಆತಂಕ ರೈತರಲ್ಲಿದೆ. ನದಿ ತುಂಬಿದರೂ ಅಧಿಕಾರಿಗಳು ನದಿ ದಡದ ಮೋಟಾರ್ ಪಂಪ್‌ಗಳಿಗೆ ಕರೆಂಟ್ ನೀಡುತ್ತಿಲ್ಲ. ಮೊದಲು ಕುಡಿಯುವ ನೀರಿಗೆ ಮಾತ್ರ ಆದ್ಯತೆ ಎನ್ನುತ್ತಿದ್ದಾರೆ. ಈಗಾಗಲೇ ಮಳೆಯಿಲ್ಲದೆ ಬೆಳೆ ಒಣಗುತ್ತಿರುವುದರಿಂದ ಕೂಡಲೇ ಕರೆಂಟ್ ಸೌಲಭ್ಯ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ: ಆರ್. ಅಶೋಕ್ ಗಂಭೀರ ಆರೋಪ – Kannada News | ECI Complaint: Opposition Accuses Karnataka Government of Electoral Roll Manipulation

ಬೆಂಗಳೂರು, ಜು.7: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SRI) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಮೌಖಿಕವಾಗಿ ಒತ್ತಡ ಹೇರುತ್ತಿದ್ದು, ಖಾನ್, ಅಬ್ದುಲ್, ಕರೀಮ್ ಎಂಬಂತಹ ಮುಸ್ಲಿಂ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡದಂತೆ ನಿರ್ದೇಶನ ನೀಡಿದೆ ಎಂದು ಆರೋಪಿಸಲಾಗಿದೆ. ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಎಸ್. ಸೋಮಶೇಖರ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸತ್ತವರು, ಬೇರೆಡೆಗೆ ವರ್ಗಾವಣೆಯಾದವರು, ಅನಧಿಕೃತ ಮತ್ತು ವಿದೇಶಿಯರ ಹೆಸರುಗಳನ್ನು ತೆಗೆದುಹಾಕಲು ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟ ನಿಯಮಗಳಿದ್ದರೂ, ಕರ್ನಾಟಕದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವರ್ತನೆಯನ್ನು ಟೀಕಿಸಿದ ನಾಯಕರು, ಅವರ ಅಧಿಕಾರದ ದುರ್ಬಳಕೆ ಕುರಿತು ಆತಂಕ ವ್ಯಕ್ತಪಡಿಸಿದರು. ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಸ್.ಆರ್. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ನ್ಯಾಯಯುತ ಮತದಾರರ ಪಟ್ಟಿ ಪರಿಷ್ಕರಣೆಗೆ ಪಕ್ಷಗಳು ಒತ್ತಾಯಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version