Karnataka Weather Forecast: ನಾಳೆ 7 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್; ಕರಾವಳಿಯಲ್ಲಿ ಮಳೆಯಬ್ಬರ – Kannada News | Karnataka Weather Forecast: Orange Alert Issued for 7 Districts on July 8; Coastal and Malnad Regions on High Alert

ಬೆಂಗಳೂರು, ಜುಲೈ 07: ಕರ್ನಾಟಕದ ಹಲವೆಡೆ ಇನ್ನೂ ಕೆಲವು ದಿನಗಳ ಕಾಲ ಮುಂಗಾರು ಮಳೆಯ ಆರ್ಭಟ ಮುಂದುವರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 9 ಮತ್ತು 10ರಂದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 9ರಂದು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ 8 ಮತ್ತು 9ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 50-60 ಕಿಲೋ ಮೀಟರ್​​ ತಲುಪಬಹುದು ಎಂದೂ ತಿಳಿಸಿದೆ.

ಜುಲೈ 8ರಂದು 7 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. 7 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೊಷಿಸಲಾಗಿದ್ದು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದ ವರ್ಷಧಾರೆಯನ್ನು ನಿರೀಕ್ಷಿಸಲಾಗಿದೆ. ಬೆಳಗಾವಿ ಮತ್ತು ಧಾರವಾಡದಲ್ಲೂ ಉತ್ತಮ ಮಳೆಯ ನಿರೀಕ್ಷೆ ಇದ್ದು, ಈ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್​​ ನೀಡಲಾಗಿದೆ.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ

ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ

ಉಳಿದಂತೆ ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಕೋಲಾರ ಮತ್ತು ರಾಮನಗರದಲ್ಲಿ ಸಾಧಾರಣ ಮಳೆಯನ್ನು ಅಂದಾಜಿಸಲಾಗಿದೆ. ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:57 pm, Tue, 7 July 26

Source link

ಟೈಲ್ಸ್‌ ಫಳ ಫಳ ಹೊಳಿಬೇಕಾ? ಹಾಗಿದ್ರೆ ನೆಲ ಒರೆಸುವ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ – Kannada News | Benefits of mopping the floor with salt water

ನೈರ್ಮಲ್ಯ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿನಿತ್ಯ ನೆಲವನ್ನು ಒರೆಸಬೇಕಾಗುತ್ತದೆ. ಪ್ರತಿನಿತ್ಯ ನೆಲ ಒರೆಸಿದರೂ, ನೆಲ ಕ್ಲೀನ್‌ (floor cleaning) ಮಾಡಲು ದುಬಾರಿ ಕ್ಲೀನರ್‌ಗಳನ್ನು ಬಳಸಿದರೂ ಕೊಳಕು, ಹಳದಿ ಕಲೆ ಮತ್ತು ಬ್ಯಾಕ್ಟೀರಿಯಾಗಳು ನೆಲದ ಮೇಲೆ ಹಾಗೆಯೇ ಉಳಿದು ಬಿಡುತ್ತವೆ. ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ, ನೊಣಗಳು ಸಹ ಮನೆಯಲ್ಲೆಲ್ಲಾ ತುಂಬಿರುತ್ತವೆ. ಹೀಗಿರುವಾಗ ನೆಲ ಸ್ವಚ್ಛಗೊಳಿಸಲು, ನೊಣಗಳನ್ನು ಹೋಗಲಾಡಿಸಲು ದುಬಾರಿ ಮತ್ತು ರಾಸಾಯನಿಕಯುಕ್ತ ಕ್ಲೀನರ್‌ಗಳಿಗೆ ಹಣವನ್ನು ಖರ್ಚು ಮಾಡುವ ಬದಲು  ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಉಪ್ಪಿನ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು. ಹೌದು ಚಿಟಿಕೆ ಉಪ್ಪು ಬೆರೆಸಿದ ನೀರಿನಲ್ಲಿ ನೆಲ ಒರೆಸುವ ಮೂಲಕ, ಮನೆಯನ್ನು ಬ್ಯಾಕ್ಟೀರಿಯಾ, ಕೀಟಮುಕ್ತವನ್ನಾಗಿಸಬಹುದು.

ನೆಲ ಒರೆಸಲು ಉಪ್ಪನ್ನು ಬಳಸುವುದು ಹೇಗೆ? ಇದರ ಪ್ರಯೋಜನಗಳೇನು?

ಈ ಪರಿಹಾರವನ್ನು ಮಾಡುವುದು ತುಂಬಾ ಸುಲಭ. ಒಂದು ಬಕೆಟ್ ನೀರಿಗೆ 2 ಟೀ ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಕರಗಿಸಿ. ಈ ನೀರನಲ್ಲಿ ನೆಲವನ್ನು ನಿಯಮಿತವಾಗಿ ಒರೆಸಿ. ಉಪ್ಪು ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಈ ನೀರಿನಿಂದ ನೆಲ ಒರೆಸುವುದರಿಂದ ನೆಲ ಸಂಪೂರ್ಣವಾಗಿ ಸ್ವಚ್ಛವಾಗುವುದಲ್ಲದೆ, ಈ ಎಲ್ಲಾ ಪ್ರಯೋಜನಗಳು ಸಹ ಲಭಿಸುತ್ತವೆ.

ಬ್ಯಾಕ್ಟೀರಿಯಾದ ನೈಸರ್ಗಿಕ ನಾಶ: ಉಪ್ಪು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಲೈಸೋಲ್ ಅಥವಾ ಫಿನೈಲ್ ನಂತಹ ರಾಸಾಯನಿಕಗಳಿಗೆ ಹೋಲಿಸಿದರೆ, ಉಪ್ಪು ನೀರು ನೆಲದ ಬಿರುಕುಗಳಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ, ಇದರಿಂದಾಗಿ ಮನೆಯ ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುತ್ತದೆ. ನೆಲವನ್ನು ಉಪ್ಪು ನೀರಿನಿಂದ ಒರೆಸುವುದರಿಂದ ನೆಲದ ಮೇಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಸಾಯುತ್ತವೆ

ನೆಲದ ಮೇಲಿನ ಹಳದಿ ಮತ್ತು ಕಲೆಗಳನ್ನು ತೊಡೆದುಹಾಕುತ್ತದೆ: ಬಿಳಿ ಟೈಲ್ಸ್ ಅಥವಾ ಅಮೃತಶಿಲೆಯು ಕಾಲಾನಂತರದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಉಪ್ಪು ನೀರು ಈ ಹಳದಿ ಬಣ್ಣವನ್ನು ಒಡೆಯಲು ಸಹಾಯ ಮಾಡುತ್ತದೆ. ಉಪ್ಪು ಬೆರೆಸಿದ ನೀರಿನಿಂದ ನಿಯಮಿತವಾಗಿ ನೆಲ ಒರೆಸುವುದರಿಂದ ಟೈಲ್ಸ್‌ ಮೇಲಿನಹಳದಿ ಬಣ್ಣವು ಕ್ರಮೇಣ ಕಣ್ಮರೆಯಾಗುತ್ತದೆ ಮತ್ತು ನೆಲವು ನೈಸರ್ಗಿಕವಾಗಿ ಹೊಳೆಯಲು ಪ್ರಾರಂಭಿಸುತ್ತದೆ.

ನೊಣಗಳು ಮತ್ತು ಕೀಟಗಳನ್ನು ತೊಡೆದುಹಾಕಲು ಸಹಕಾರಿ: ಮಳೆಗಾಲದಲ್ಲಿ ಮನೆಯಲ್ಲಿ ನೊಣಗಳು ಹೆಚ್ಚಾಗಿ ಓಡಾಡುತ್ತುರುತ್ತದೆ. ಇವುಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಲು ಉಪ್ಪು ನೀರಿನಿಂದ ನೀವು ನೆಲವನ್ನು ಒರೆಸಬಹುದು. ಉಪ್ಪು ನೀರಿನ ವಾಸನೆ ಮತ್ತು ವಿನ್ಯಾಸವು ನೊಣಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಉಪ್ಪಿನಲ್ಲಿ ನಂಜುನಿರೋಧಕ ಗುಣಗಳು ಸಮೃದ್ಧವಾಗಿದ್ದು ಅದು ನೊಣಗಳನ್ನು ದೂರವಿಡುತ್ತದೆ.

ಇದನ್ನೂ ಓದಿ: ಮಸುಕಾದ ಚಿನ್ನದ ಆಭರಣಗಳ ಹೊಳಪನ್ನು ಹೆಚ್ಚಿಸಲು ಸಲಹೆಯನ್ನು ಪಾಲಿಸಿ

ಜಿಗುಟು ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ: ತೇವಾಂಶವುಳ್ಳ ವಾತಾವರಣದಲ್ಲಿ, ನೆಲವು ಜಿಗುಟಾಗಿರುತ್ತದೆ, ಇದರಿಂದಾಗಿ ನಡೆಯಲು ಕಷ್ಟವಾಗುತ್ತದೆ. ಉಪ್ಪುನೀರು ಹೆಚ್ಚುವರಿ ತೇವಾಂಶ, ಕೊಳೆಯನ್ನು ಹೀರಿಕೊಳ್ಳುತ್ತದೆ ಮತ್ತು ನೆಲವನ್ನು ತುಂಬಾ ನಯವಾಗಿಸುತ್ತದೆ. ಇದು ತೇವದ ಕಾರಣದಿಂದ ಉಂಟಾಗುವ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಮನೆಗೆ ತಾಜಾತನವನ್ನು ನೀಡುತ್ತದೆ.

ಸಕಾರಾತ್ಮಕತೆ ಹೆಚ್ಚುತ್ತದೆ: ಉಪ್ಪು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ಮನೆಗೆ ಸಕಾರಾತ್ಮಕತೆ ಬರುತ್ತದೆ. ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಟೀಸರ್ ಬಗ್ಗೆ ಟೀಕೆ, ನಟ ಹೇಳಿದ್ದೇನು? – Kannada News | Criticism against Toxic movie teaser, actor calls it hypocrisy

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದಾಗೆಲ್ಲ ಒಂದು ವರ್ಗದ ಜನ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ವಿಶೇಷವಾಗಿ ಸಿನಿಮಾನಲ್ಲಿರುವ ಲೈಂಗಿಕತೆ ಅಂಶಗಳು ಕರಿತಂತೆ ಈ ಟೀಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಹ ‘ಟಾಕ್ಸಿಕ್’ ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಿತ್ತು. ಟೀಸರ್​ನಲ್ಲಿ ಸಿನಿಮಾದ ನಾಯಕಿಯರನ್ನು ಪರಿಚಯಲಾಯ್ತು. ಟೀಸರ್​​ನ ಕೊನೆಯಲ್ಲಿ ಯಶ್, ಮಹಿಳೆಯರ ಜೊತೆ ಫೈಟ್ ಮಾಡುವ ದೃಶ್ಯವಿತ್ತು. ಜೊತೆಗೆ ಕೆಲ ಹಾಟ್ ದೃಶ್ಯಗಳು ಸಹ ಇದ್ದವು. ವಿಶೇಷವಾಗಿ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಬಂದೂಕಿನ ನಳಿಕೆಯನ್ನು ಫೈಟ್ ಮಾಡಲು ಬಂದ ಮಹಿಳೆಯ ಬಾಯಿಗೆ ಇಡುವ ದೃಶ್ಯದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಆ ದೃಶ್ಯದ ಜೊತೆಗೆ ಬರುವ ಸಂಭಾಷಣೆ ಸಹ ಈ ಟೀಕೆಗೆ ಕಾರಣವಾಗಿತ್ತು. ಈ ವಿಷಯಗಳ ಬಗ್ಗೆ ಸಿನಿಮಾನಲ್ಲಿ ನಟಿಸಿರುವ ವಿದೇಶಿ ನಟ ಬೆನಡಿಕ್ಟ್ ಗ್ಯಾರೆಟ್ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಪೋಷಕ ಪಾತ್ರದಲ್ಲಿ ನಟಿಸಿರುವ ಬೆನೆಡಿಕ್ಟ್ ಗ್ಯಾರೆಟ್, ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದು, ‘ಟಾಕ್ಸಿಕ್’ ಟೀಸರ್‌ಗೆ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ್ದು, ‘ಆ ಬಗ್ಗೆ ನನಗೆ ತಿಳಿದಿಲ್ಲ. ಹಿಂಸಾತ್ಮಕ ದೃಶ್ಯಗಳಿಗಿಂತ ಲೈಂಗಿಕ ವಿಷಯಗಳನ್ನು ನೋಡುವುದರಲ್ಲಿ ಜನರಿಗೆ ಹೆಚ್ಚಿನ ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು. ಹಿಂಸೆಗಿಂತ ಲೈಂಗಿಕ ವಿಷಯಗಳಿರುವ ಪ್ರಪಂಚವೇ ನನಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಜನ, ಸಿನಿಮಾದಲ್ಲಿ ತೋರಿಸಲಾಗುವ ಹಿಂಸೆಯ ಬಗ್ಗೆ ಚರ್ಚಿಸುವುದಿಲ್ಲ, ಬದಲಿಗೆ ಲೈಂಗಿಕತೆ ವಿಷಯಗಳ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದಾಗಲೂ ಇದೇ ರೀತಿಯ ಟೀಕೆಗಳು ವ್ಯಕ್ತವಾಗಿದ್ದವು. ಆ ಟೀಸರ್​​ನಲ್ಲಿ ಸಹ ಯಶ್, ಮಹಿಳೆಯೊಬ್ಬರ ಜೊತೆಗೆ ಕಾರಿನಲ್ಲಿ ಲೈಂಗಿಕತೆಯನ್ನು ತೊಡಗಿರುವ ದೃಶ್ಯವಿತ್ತು. ಆ ಬಗ್ಗೆ ಹಲವರು ಟೀಕೆ ಮಾಡಿದ್ದರು. ಸಿಬಿಎಫ್​​ಸಿಗೆ, ಮಹಿಳಾ ಆಯೋಗಕ್ಕೆ ದೂರು ಸಹ ನೀಡಲಾಗಿತ್ತು. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಲೈಂಗಿಕತೆಯ ದೃಶ್ಯಗಳು ಹೆಚ್ಚಿಗೆ ಇಲ್ಲವಾದರೂ ಅಲ್ಲಲ್ಲಿ ಫಾಸ್ಟ್ ಫಾರ್ವರ್ಡ್​​ನಲ್ಲಿ ಕಾಣಿಸಿಕೊಳ್ಳುತ್ತವೆ. ಕೊನೆಯಲ್ಲಿ ಬಂದೂಕು ಇಡುವ ದೃಶ್ಯವೂ ಸಹ ಪರೋಕ್ಷವಾಗಿ ‘ಅದನ್ನೇ’ ಸೂಚಿಸುತ್ತಿದೆ. ಇದೇ ಕಾರಣಕ್ಕೆ ಮತ್ತೆ ಟೀಕೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು?

ಏನೇ ಆಗಲಿ, ಟೀಸರ್ ಯಶ್ ಅಭಿಮಾನಿಗಳಿಗೆ ಮತ್ತು ದೊಡ್ಡ ಸಂಖ್ಯೆಯ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗುವಂತಾಗಿದೆ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ. ಯಶ್ ಹಾಗೂ ವೆಂಕಟ್ ಕೆ ನಾರಾಯಣ (ಕೆವಿಎನ್) ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಇದ್ದಾರೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದ್ದು, ಇತರ ದಕ್ಷಿಣ ಭಾರತೀಯ ಭಾಷೆಗಳು ಮತ್ತು ಹಿಂದಿಗೆ ಡಬ್ ಮಾಡಲಾಗಿದೆ. ಚಿತ್ರವು ಅನೇಕ ಬಾರಿ ಬಿಡುಗಡೆಯ ದಿನಾಂಕವನ್ನು ಬದಲಾಯಿಸಿದ್ದು, ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ: ‘ಕರಾವಳಿ’ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ – Kannada News | Raj B Shetty reacts to Prajwal Devaraj starrer Karavali Movie Controversy and Kannada Film Industry

ಒಂದಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ‘ಕರಾವಳಿ’ ಸಿನಿಮಾ (Karavali Movie) ಈಗ ವಿವಾದದ ಮೂಲಕ ಸುದ್ದಿ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ವೇಳೆ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಟ ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದ ಪಾತ್ರವರ್ಗಕ್ಕೆ ಸೇರ್ಪಡೆ ಆದ ಬಳಿಕ ಪ್ರಜ್ವಲ್ ಅವರಿಗೆ ಅಸಮಾಧಾನ ಉಂಟಾಗಿರಬಹುದಾ ಎಂಬ ಪ್ರಶ್ನೆ ಇದೆ. ಅದಕ್ಕೆ ಸ್ವತಃ ರಾಜ್ ಶೆಟ್ಟಿ (Raj B Shetty) ಅವರು ಉತ್ತರ ನೀಡಿದ್ದಾರೆ. ಇಂಥ ವಿಷಯಗಳನ್ನು ಚರ್ಚೆ ಮಾಡುತ್ತಿರುವುದರಿಂದಲೇ ಕನ್ನಡ ಚಿತ್ರರಂಗ ಉದ್ಧಾರ ಆಗಿಲ್ಲ ಅವರು ಖಡಕ್ ಆಗಿ ಹೇಳಿದ್ದಾರೆ.

‘ಈ ಸಿನಿಮಾದಲ್ಲಿ ನಾನು ಒಂದು ಅತಿಥಿ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾದ ಟೈಟಲ್, ಪೋಸ್ಟರ್ ಎಲ್ಲವೂ ಪ್ರಜ್ವಲ್ ದೇವರಾಜ್ ಅವರ ಹೆಸರಲ್ಲೇ ಇದೆ. ಅದು ನನಗೆ ಗೊತ್ತಿತ್ತು ಕೂಡ. ನಾನು ಬಂದಮೇಲೆ ಇರಿಸುಮುರಿಸು ಆಯ್ತಾ ಎಂಬ ಪ್ರಶ್ನೆ ಕೇಳಿದ್ದೀರಿ. ನಾನು ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ನಟ ಇವರ ಆಯ್ಕೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಆಗಲಿಲ್ಲ ಎಂದಿದ್ದಕ್ಕೆ ಕೊನೆಯಲ್ಲಿ ನಾನು ಬಂದಿದ್ದು. ಆ ಪಾತ್ರ ಮೊದಲೇ ಇತ್ತು’ ಎಂದು ರಾಜ್ ಬಿ. ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

‘ಸಿನಿಮಾ ಎಂಬುದು ನನಗಿಂತ ದೊಡ್ಡದು’

‘ನಾನು ಇಲ್ಲಿ ಯಾರ ಜೊತೆಗೂ ಪೈಪೋಟಿ ಮಾಡೋಕೆ ಬಂದಿಲ್ಲ. ನಾವು ಇಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಎಲ್ಲಕ್ಕಿಂತ ಮೊದಲು ನಾನೊಬ್ಬ ತಂತ್ರಜ್ಞ. ಸಿನಿಮಾ ಮಾಡೋದಕ್ಕೆ ಎಷ್ಟು ಶ್ರಮ ಇರುತ್ತದೆ ಎಂಬುದು ನನಗೆ ಗೊತ್ತು. ನನ್ನೊಬ್ಬನ ಜೀವನ, ನನ್ನೊಬ್ಬನ ಹೆಸರು, ನನ್ನೊಬ್ಬನ ಪೈಪೋಟಿ ಎಂಬುದರಲ್ಲಿ ನನಗೆ ಸಮ್ಮತಿ ಇಲ್ಲ. ಸಿನಿಮಾ ಎಂಬುದು ನನಗಿಂತ ದೊಡ್ಡದು. ಒಂದು ವೇಳೆ ಮುಂದಿನ ಸಿನಿಮಾದಲ್ಲಿ ನನ್ನ ಹೆಸರು ಹಾಕದೇ ಇದ್ದರೂ ಕೂಡ ಯಾರೂ ಬರಲ್ಲ’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ‘ಕರಾವಳಿ’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ ಇದು

‘ಇಂಥ ವಿಷಯ ಮಾತನಾಡಬೇಕಾಗಿ ಬಂದಿರುವುದು ದುರದೃಷ್ಟಕರ. ಕುಂದಾಪುರದ ಒಬ್ಬ ಹುಡುಗ, 9ನೇ ತರಗತಿಗೆ ಮನೆಬಿಟ್ಟು ಓಡಿಬಂದು, ಇವತ್ತು ಇಷ್ಟು ದೊಡ್ಡ ಸಿನಿಮಾ ಮಾಡಿದ್ದಾರೆ. ಇಡೀ ಭಾರತ ನೋಡುವಂತಹ ಗುಣಮಟ್ಟದಲ್ಲಿ ಸಿನಿಮಾ ಮಾಡಿದ್ದಾರೆ. ಆದರೆ ನಾವು ಬೇರೆ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ತುಂಬ ಬೇಸರದ ವಿಷಯ. ಮನುಷ್ಯತ್ವ ಬಹಳ ಮುಖ್ಯ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.

‘ಇದು ತುಂಬ ದುರದೃಷ್ಟಕರ ವಿಷಯ’

‘ಇಲ್ಲಿ ಯಾವ ಪೈಪೋಟಿ ಇದೆ? ಇದು ಕೇವಲ ನನ್ನ ಸಿನಿಮಾನಾ? ಮಿತ್ರ, ಶ್ರೀಧರ್ ಮುಂತಾದವರು ಈ ಸಿನಿಮಾದಲ್ಲಿ ಮಾಡಿಲ್ವಾ? ನಾನು ಅವರಿಗಿಂತ ದೊಡ್ಡ ಕಲಾವಿದನಾ? ಅವರ ಹೆಸರು ಪೋಸ್ಟರ್​ನಲ್ಲಿ ಇದೆಯಾ? ಇಂಥ ವಿಷಯ ನಾವು ಮಾತನಾಡಬೇಕಾಗಿ ಬಂದಿರುವುದು ತುಂಬ ದುರದೃಷ್ಟಕರ ವಿಷಯ. ಯಾಕೆ ನಮ್ಮ ಇಂಡಸ್ಟ್ರಿ ಉದ್ಧಾರ ಆಗಲ್ಲ ಅಂತ ಕೇಳುತ್ತಾರಲ್ಲ.. ಅದಕ್ಕೆ ಉತ್ತರ ಇದು’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ.

ಅಂಥ ಪರಿಸ್ಥಿತಿ ಬಂದರೆ ಚಿತ್ರರಂಗಕ್ಕೆ ವಿದಾಯ:

‘ಯಾಕೆಂದರೆ, ನಾವು ಒಟ್ಟಿಗೆ ಕೆಲಸ ಮಾಡುತ್ತಿಲ್ಲ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೆ ಬಹಳ ಖುಷಿ. ಕನ್ನಡದ ಒಬ್ಬ ನಟ ಇನ್ನೂ ದೊಡ್ಡ ಸ್ಟಾರ್ ಆಗಿ ಬೆಳೆದ ಎನ್ನುತ್ತೇನೆ. ಮಿತ್ರ ಅವರಿಗೆ ಹೆಸರು ಬಂದರೆ ನನಗೆ ಹೆಮ್ಮೆ ಆಗುತ್ತದೆ. ಅದಕ್ಕೆ ಅವರು ಅರ್ಹರು. ಅವರ ಬಳಿ ಕಿತ್ತುಕೊಂಡು ನಾನೇನು ಮಾಡಲಿ? ಈ ಹಿಂದಿನ ಸಿನಿಮಾಗಳಲ್ಲಿ ನಾನು ಖಳನಾಯಕನಾಗಿ ಕೂಡ ಮಾಡಿದ್ದೇನೆ. ಅಲ್ಲಿ ನನ್ನ ಕಟೌಟ್ ಹಾಕಿ ಅಂತ ನಾನು ಹೇಳಿಲ್ಲ. ‘ಸು ಫ್ರಂ ಸೋ’ ಚಿತ್ರದಲ್ಲಿ ನಾನು ಕಾಮಿಡಿ ಪಾತ್ರ ಮಾಡಿದ್ದೆ. ಆ ಚಿತ್ರದ ಪೋಸ್ಟರ್​ನಲ್ಲಿ ನನ್ನ ಹೆಸರು ಹಾಕಿ ಅಂತ ನಾನು ಕೇಳಿಲ್ಲ. ನನ್ನ ಜೀವನದಲ್ಲಿ ನಾನು ಅದನ್ನು ಮಾಡಲ್ಲ. ಒಂದು ವೇಳೆ ಮಾಡಿದರೆ ಆವತ್ತು ನಾನು ಚಿತ್ರರಂಗ ಬಿಡಬೇಕು ಅಂತ ಭಾವಿಸುತ್ತೇನೆ’ ಎಂದು ರಾಜ್ ಬಿ. ಶೆಟ್ಟಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vasthu Tips: ಮನೆಗೆ ಓಡುವ ಕುದುರೆ ಚಿತ್ರ ಒಳ್ಳೆಯದೇ ಅಥವಾ ಆನೆ ಚಿತ್ರವೇ? ಅದೃಷ್ಟ ತರುವ ಅಸಲಿ ರಹಸ್ಯ ಇಲ್ಲಿದೆ! – Kannada News | Vastu Paintings: Horse or Elephant for Home Success and Peace? Know Best Direction

ಮನೆಗಳು ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಬೇಕು, ಹಣದ ನಿರಂತರ ಹರಿವು ಇರಬೇಕು ಮತ್ತು ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ, ಜನರು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಅನೇಕ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ಮನೆಯಲ್ಲಿ ಶುಭ ಚಿತ್ರಗಳು ಅಥವಾ ವರ್ಣಚಿತ್ರಗಳನ್ನು (Paintings) ಅಳವಡಿಸುವುದು. ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಒಂದು ಗೊಂದಲ ಕಾಡುತ್ತಿರುತ್ತದೆ; ಮನೆಯಲ್ಲಿ ಓಡುವ ಕುದುರೆಯ ಚಿತ್ರ ಇಡುವುದು ಹೆಚ್ಚು ಶುಭವೇ ಅಥವಾ ಆನೆಯ ವರ್ಣಚಿತ್ರವೇ? ಹಾಗೆಯೇ ಇವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ? ವಾಸ್ತು ಪ್ರಕಾರ, ಸರಿಯಾದ ಚಿತ್ರಕಲೆ ಮತ್ತು ಸರಿಯಾದ ದಿಕ್ಕು ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯಬಲ್ಲದು. ಈ ಎರಡು ವರ್ಣಚಿತ್ರಗಳ ಹಿಂದಿನ ನಿಜವಾದ ರಹಸ್ಯವನ್ನು ಇಲ್ಲಿ ತಿಳಿದುಕೊಳ್ಳಿ.

ಏಳು ಓಡುವ ಕುದುರೆಗಳು ಯಶಸ್ಸು ಮತ್ತು ವೇಗದ ಸಂಕೇತ:

ವಾಸ್ತು ಶಾಸ್ತ್ರದಲ್ಲಿ, ಓಡುವ ಏಳು ಬಿಳಿ ಕುದುರೆಗಳ ವರ್ಣಚಿತ್ರವನ್ನು ಯಶಸ್ಸು, ವೇಗ, ಪ್ರಗತಿ ಮತ್ತು ಅದ್ಭುತ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಆಗಾಗ್ಗೆ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ವ್ಯವಹಾರ ಅಥವಾ ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ ಅಥವಾ ಆರ್ಥಿಕ ಪ್ರಗತಿಯ ವೇಗ ನಿಧಾನವಾಗಿದ್ದರೆ, ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಈ ವರ್ಣಚಿತ್ರವನ್ನು ಸ್ಥಾಪಿಸುವುದು ಅತ್ಯಂತ ಫಲಪ್ರದವಾಗಿದೆ. ಈ ವರ್ಣಚಿತ್ರವನ್ನು ಖರೀದಿಸುವಾಗ, ಎಲ್ಲಾ ಕುದುರೆಗಳು ಸಂತೋಷದಿಂದ ಮುಖ ಮಾಡಿಕೊಂಡು ಮುಂದೆ ಓಡುತ್ತಿರಬೇಕು. ಯಾವುದೇ ಕುದುರೆ ಗಾಯಗೊಂಡಿರಬಾರದು, ದುಃಖಿತವಾಗಿರಬಾರದು ಅಥವಾ ಹಿಂತಿರುಗಿ ನೋಡುತ್ತಿರಬಾರದು.

ಆನೆಯ ವರ್ಣಚಿತ್ರ ವೈಭವ ಮತ್ತು ಸ್ಥಿರತೆಯ ಸಂಕೇತ:

ಮತ್ತೊಂದೆಡೆ, ವಾಸ್ತು ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಆನೆಯನ್ನು ಶಕ್ತಿ, ಸ್ಥಿರತೆ, ಬುದ್ಧಿವಂತಿಕೆ, ವೈಭವ ಮತ್ತು ರಾಜಮನೆತನದ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಆನೆಯು ತನ್ನ ಸೊಂಡಿಲನ್ನು ಮೇಲಕ್ಕೆತ್ತಿರುವ ಚಿತ್ರವನ್ನು ಅತ್ಯಂತ ಶುಭ ಎಂದು ನಂಬಲಾಗುತ್ತದೆ. ಇಂತಹ ಚಿತ್ರವು ಮನೆಯಲ್ಲಿ ಸುಖ-ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕುಟುಂಬದ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆನೆಗಳ ಇಡೀ ಕುಟುಂಬ ಒಟ್ಟಿಗೆ ಇರುವ ಚಿತ್ರವನ್ನು ಹಾಕಿಕೊಂಡರೆ, ಅದು ಕುಟುಂಬದ ಏಕತೆ ಮತ್ತು ಪರಸ್ಪರ ಸಾಮರಸ್ಯವನ್ನು ವೃದ್ಧಿಸುತ್ತದೆ.

ಈ ಎರಡರಲ್ಲಿ ನಿಮ್ಮ ಮನೆಗೆ ಯಾವ ಚಿತ್ರಕಲೆ ಉತ್ತಮ?

ವಾಸ್ತು ಶಾಸ್ತ್ರದ ಪ್ರಕಾರ, ಇದಕ್ಕೆ ಒಂದೇ ರೀತಿಯ ಉತ್ತರವಿಲ್ಲ. ಏಕೆಂದರೆ ಇವೆರಡರ ಪ್ರಾಮುಖ್ಯತೆಯು ನಿಮ್ಮ ಪ್ರಸ್ತುತ ಅಗತ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ಮುಖ್ಯ ಉದ್ದೇಶ ವೃತ್ತಿಜೀವನ, ಉದ್ಯೋಗ, ವ್ಯವಹಾರದ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಗೆ ಸಂಬಂಧಿಸಿದ್ದಾಗಿದ್ದರೆ, ಏಳು ಕುದುರೆಗಳ ಚಿತ್ರಕಲೆ ನಿಮಗೆ ಹೆಚ್ಚು ಸೂಕ್ತವಾಗಿದೆ.
ಆದರೆ, ನೀವು ಮನೆಯಲ್ಲಿ ಮನಸ್ಸಿನ ಶಾಂತಿ, ಸ್ಥಿರತೆ, ಕೌಟುಂಬಿಕ ಪ್ರೀತಿ ಮತ್ತು ಸಕಾರಾತ್ಮಕ ವಾತಾವರಣವನ್ನು ಬಯಸಿದರೆ, ಆನೆಯ ವರ್ಣಚಿತ್ರವನ್ನು ಸ್ಥಾಪಿಸುವುದು ಹೆಚ್ಚು ಉತ್ತಮ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ಅದ್ಭುತ ಫಲಿತಾಂಶಕ್ಕಾಗಿ ಇವುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ಚಿತ್ರಗಳು ಎಷ್ಟು ಮುಖ್ಯವೋ, ಅವುಗಳನ್ನು ಇಡುವ ದಿಕ್ಕುಗಳೂ ಅಷ್ಟೇ ಮಹತ್ವದ್ದಾಗಿರುತ್ತವೆ.

  • ಓಡುವ ಕುದುರೆಗಳ ಚಿತ್ರಕ್ಕೆ ಸರಿಯಾದ ದಿಕ್ಕು: ವಾಸ್ತು ನಿಯಮಗಳ ಪ್ರಕಾರ, ಮನೆ ಅಥವಾ ಕಚೇರಿಯ ಪೂರ್ವ ದಿಕ್ಕಿನಲ್ಲಿ ಏಳು ಓಡುವ ಕುದುರೆಗಳ ವರ್ಣಚಿತ್ರವನ್ನು ಇಡುವುದು ಅತ್ಯಂತ ಶ್ರೇಷ್ಠ. ಇದಲ್ಲದೆ, ಇದನ್ನು ಉತ್ತರ ದಿಕ್ಕಿನಲ್ಲಿಯೂ ಇರಿಸಬಹುದು. ಏಕೆಂದರೆ ಈ ದಿಕ್ಕುಗಳು ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಪ್ರಗತಿಯನ್ನು ತರುತ್ತವೆ.
  • ಆನೆಯ ಚಿತ್ರಕ್ಕೆ ಸರಿಯಾದ ದಿಕ್ಕು: ಮನೆಯ ಉತ್ತರ, ಪೂರ್ವ ದಿಕ್ಕಿನಲ್ಲಿ ಅಥವಾ ಮನೆಯ ಮುಖ್ಯ ದ್ವಾರದ ಒಳಭಾಗದಲ್ಲಿ ಆನೆಯ ವರ್ಣಚಿತ್ರವನ್ನು ಇಡುವುದು ಸೂಕ್ತವಾಗಿದೆ. ಇದು ಮನೆಯೊಳಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ಇಡೀ ಮನೆಯ ವಾತಾವರಣವನ್ನು ಸಮತೋಲನದಲ್ಲಿಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ: ಹೇಗಿದೆ ನೋಡಿ ಆಗುಂಬೆಯ ಸೊಬಗು – Kannada News | Tourists enjoying Agumbe weather During Monsoon

ಶಿವಮೊಗ್ಗ, (ಜುಲೈ 07): ಮಳೆಗಾಲ ಶುರುವಾಯ್ತು ಅಂದ್ರೆ ಸಾಕು ಕರ್ನಾಟಕದ “ಚಿರಾಪುಂಜಿ” ಎಂಬ ಪ್ರಸಿದ್ಧಿ ಪಡೆದುಕೊಂಡಿರುವ ಆಗುಂಬೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಹೌದು…. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟ ಗುಡ್ಡಗಳು,  ಈ ಆಗುಂಬೆ ಘಾಟಿನಲ್ಲಿ ಅಲ್ಲಿಲ್ಲಿ ಝುಳು ಝುಳು’ ಎಂದು ಹರಿಯುವ ಝರಿಗಳೊಂದಿಗೆ ಆಗುಂಬೆಯು ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ತಾಣವಾಗಿದ್ದು, ವರ್ಷಪೂರ್ತಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈಗ ಹೇಳಿ ಕೇಳಿ ಮಳೆಗಾಲ ಆರಂಭವಾಗಿದ್ದು, ಮಳೆಗಾಲದಲ್ಲಿ ಈ ಪ್ರದೇಶವು ಸಂಪೂರ್ಣ ಹಸಿರು ಹೊದಿಕೆಯನ್ನು ಧರಿಸಿ ಸ್ವರ್ಗದಂತೆಯೇ ಕಾಣುತ್ತಿದೆ. ಈ ಅದ್ಭತ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗುಂಬೆಗೆ ಹರಿದುಬರುತ್ತಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಎಸ್​ಐಆರ್ ಪ್ರಕ್ರಿಯೆ​ಯಲ್ಲಿ ಲೋಪ ಆರೋಪ: ಮುಖ್ಯ ಚುನಾವಣಾ ಆಯುಕ್ತರಿಗೆ ಮೈತ್ರಿ ನಾಯಕರಿಂದ ದೂರು – Kannada News | Voter List Revision Row: BJP JDS Alliance Files Complaint with Chief Election Commissioner Over Alleged ‘SIR Malpractices’ in Karnataka

ಚುನಾವಣಾ ಆಯೋಗದ ಕೇಂದ್ರ ಕಚೇರಿImage Credit source: Getty Images

ನವದೆಹಲಿ, ಜುಲೈ 07: ಕರ್ನಾಟಕದಲ್ಲಿ ಎಸ್​ಐಆರ್ ಪ್ರಕ್ರಿಯೆ​ಯಲ್ಲಿ ಲೋಪ ಆರೋಪ ಸಂಬಂಧ ದಾಖಲೆ ಸಮೇತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ಗೆ ಬಿಜೆಪಿ, ಜೆಡಿಎಸ್ ನಿಯೋಗ ದೂರು ಸಲ್ಲಿಕೆ ಮಾಡಿದೆ. ಕೇಂದ್ರ ಸಚಿವರಾದ ಹೆಚ್​. ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಉಪ ನಾಯಕ ಅರವಿಂದ್​​ ಬೆಲ್ಲದ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಲ್​ಪಿ ನಾಯಕ ಸುರೇಶ್ ​ಬಾಬು, ನಿಖಿಲ್ ಕುಮಾರಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.

ದೂರು ಸಲ್ಲಿಕೆ ಬೆನ್ನಲ್ಲೇ ಮೈತ್ರಿ ನಾಯಕ ಸುದ್ದಿಗೋಷ್ಠಿ

ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಕೆ ಬಳಿಕ ದೆಹಲಿಯಲ್ಲಿಯೇ ಮೈತ್ರಿ ನಾಯಕರು ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ. ಎಸ್​ಐಆರ್​​ ಬಗ್ಗೆ ಕರ್ನಾಟಕದಲ್ಲಿ ಕಾಂಗ್ರೆಸ್​​ ಸರ್ಕಾರ ಮೊದಲು ವಿರೋಧ ಮಾಡಿತ್ತು. ಈಗ ಅವರೇ ಅದನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಮನೆ ಮನೆಗೆ ಹೋಗಿ ಮತಪಟ್ಟಿ ಪರಿಷ್ಕರಣೆ ಮಾಡಬೇಕೆಂಬ ಬಗ್ಗೆ ಸ್ಪಷ್ಟವಾಗಿ ಚುನಾವಣಾ ಆಯೋಗದ ನಿಮಯವಿದೆ. ಆದರೆ ಕರ್ನಾಟಕದಲ್ಲಿ ಮಸೀದಿ, ದರ್ಗಾ, ಸಮುದಾಯ ಭವನಗಳಲ್ಲಿ ಕುಳಿತು ಎಸ್​ಐಆರ್​​ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ದೂರಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕರ್ನಾಟಕದಲ್ಲಿ ಅಕ್ರಮವಾಗಿ ಎಸ್​ಐಆರ್; ಪ್ರಲ್ಹಾದ್ ಜೋಶಿ ಆರೋಪ

‘ಜನರನ್ನು ಅನಗತ್ಯ ಗಾಬರಿಪಡಿಸಲಾಗುತ್ತಿದೆ’

ರಾಜ್ಯ ಸರ್ಕಾರದ ಕೈಕೆಳಗಿರುವ ಅಧಿಕಾರಿಗಳ ಬಳಸಿಕೊಂಡು ಅಕ್ರಮ ಮಾಡಲಾಗ್ತಿದ್ದು, ನಕಲಿ ಮತಗಳನ್ನು ಸೃಷ್ಟಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಗ್ಯಾರಂಟಿ ಕಡಿತಗೊಳ್ಳುವ ಭಯ ಹುಟ್ಟಿಸಿ ಜನರನ್ನು ಅನಗತ್ಯ ಗಾಬರಿಪಡಿಸಲಾಗುತ್ತಿದೆ. ಈ ಬಗ್ಗೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಎರಡೂ ಪಕ್ಷಗಳಿಂದ ಮನವಿ ಪತ್ರ ನೀಡಿದ್ದೇವೆ. ಕೂಲಂಕಷವಾಗಿ ಪರಿಶೀಲನೆ ಮಾಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ ಎಂದವರು ಹೇಳಿದ್ದಾರೆ.

‘ಬೇರೆ ರಾಜ್ಯದ ಅಧಿಕಾರಿಗಳಿಂದ ಪರಿಷ್ಕರಣೆ ನಡೆಸಿ’

ಎಸ್ಐಆರ್​ನಲ್ಲಿ ಬಾಂಗ್ಲಾದವರ ಹೆಸರು ಸೇರಿಸುವ ಕೆಲಸ ಆಗುತ್ತಿದ್ದು, ಕಾಂಗ್ರೆಸ್​ನವರು ಹಾದಿಬೀದಿಯಲ್ಲಿ ಫಾರಂ ಹಂಚುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ದೇಶವನ್ನು ಅಪಾಯಕ್ಕೆ ಸಿಲುಕಿಸುವ ಕೆಲಸವಾಗ್ತಿದೆ. ನಾವು ಅಕ್ರಮಗಳನ್ನು ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದವರು ಕಿಡಿ ಕಾರಿದ್ದಾರೆ. ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯಾ ಎಂಬ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಆಗಬೇಕು ಎಂದೂ ಒತ್ತಾಯಿಸಿರುವ ಅಶೋಕ್​​, ಬೇರೆ ರಾಜ್ಯದ ಅಧಿಕಾರಿಗಳನ್ನು ಹಾಕಿ ಮತಪಟ್ಟಿ ಪರಿಷ್ಕರಣೆ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:37 pm, Tue, 7 July 26

Source link

ದೇಹದ ಅಲ್ಲಲ್ಲಿ ಊತ ಕಾಣಿಸಿಕೊಳ್ಳುವುದು ಈ ಆರೋಗ್ಯ ಸಮಸ್ಯೆ ಬರುವ ಸೂಚನೆಯಾಗಿರಬಹುದು! – Kannada News | Don’t Ignore Frequent Body Swelling: It May Signal Heart, Kidney Or Liver Disease

ಕೈ, ಕಾಲು, ಪಾದ, ಮುಖ ಅಥವಾ ಬೆರಳುಗಳಲ್ಲಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರಬಹುದು. ಕೆಲವೊಮ್ಮೆ ಹೆಚ್ಚು ಹೊತ್ತು ನಿಂತುಕೊಂಡಿರುವುದು, ಕುಳಿತುಕೊಳ್ಳುವುದು ಅಥವಾ ಸಣ್ಣ ಗಾಯಗಳಿಂದಲೂ ಊತ ಉಂಟಾಗುತ್ತದೆ. ಆದರೆ ಪದೇ ಪದೇ ಊತ ಕಾಣಿಸಿಕೊಳ್ಳುವುದು ಅಥವಾ ಹಲವು ದಿನಗಳವರೆಗೆ ಕಡಿಮೆಯಾಗದೇ ಇರುವುದು ದೇಹದೊಳಗಿನ ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ದೇಹದಲ್ಲಿ ಊತಕ್ಕೆ (Body Swelling) ಕಾರಣವಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು ಯಾವವು, ಲಕ್ಷಣಗಳು ಹೇಗಿರುತ್ತವೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹದಲ್ಲಿ ಊತಕ್ಕೆ ಕಾರಣವಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು;

ಹೃದಯ ವೈಫಲ್ಯ (Heart Failure): ಹೃದಯವು ರಕ್ತವನ್ನು ಸಮರ್ಪಕವಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದರೆ ಕಾಲು, ಪಾದ ಮತ್ತು ಕಣಕಾಲುಗಳಲ್ಲಿ ದ್ರವ ಸಂಗ್ರಹವಾಗಿ ಊತ ಉಂಟಾಗಬಹುದು. ಉಸಿರಾಟದ ತೊಂದರೆ, ಬೇಗ ದಣಿವು ಹಾಗೂ ತೂಕ ಹೆಚ್ಚಳವೂ ಕಾಣಿಸಬಹುದು.

ಮೂತ್ರಪಿಂಡದ ಕಾಯಿಲೆ: ಸಾಮಾನ್ಯವಾಗಿ ಮೂತ್ರಪಿಂಡಗಳು ದೇಹದಲ್ಲಿನ ಹೆಚ್ಚುವರಿ ನೀರು ಮತ್ತು ಉಪ್ಪನ್ನು ಹೊರಹಾಕುವ ಕೆಲಸ ಮಾಡುತ್ತವೆ. ಅವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಕೈ, ಕಾಲು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಊತ ಕಾಣಿಸಬಹುದು.

ಯಕೃತ್ತಿನ ಸಿರೋಸಿಸ್ (Liver Cirrhosis): ಯಕೃತ್ತಿನ ಹಾನಿಯಿಂದ ದೇಹದಲ್ಲಿ ದ್ರವ ಸಮತೋಲನ ಹದಗೆಟ್ಟು ಹೊಟ್ಟೆ ಮತ್ತು ಕಾಲುಗಳಲ್ಲಿ ಊತ ಉಂಟಾಗುವ ಸಾಧ್ಯತೆ ಇದೆ.

ಡೀಪ್ ವೇನ್ ಥ್ರಾಂಬೋಸಿಸ್ (DVT): ಕಾಲಿನ ಆಳವಾದ ರಕ್ತನಾಳದಲ್ಲಿ ರಕ್ತಗಡ್ಡೆ ಉಂಟಾದರೆ ಒಂದು ಕಾಲಿನಲ್ಲಿ ಹಠಾತ್ ಊತ, ನೋವು, ಕೆಂಪಾಗುವುದು ಮತ್ತು ಬಿಸಿ ಅನುಭವವಾಗಬಹುದು. ಇದು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಸ್ಥಿತಿಯಾಗಿದೆ.

ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರಲ್ಲೇ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣ ಏನ್ ಗೊತ್ತಾ?

ಕ್ರಾನಿಕ್ ವೆನಸ್ ಇನ್ಸಫಿಷಿಯನ್ಸಿ: ಕಾಲಿನ ರಕ್ತನಾಳಗಳು ರಕ್ತವನ್ನು ಹೃದಯಕ್ಕೆ ಸರಿಯಾಗಿ ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಕಾಲುಗಳಲ್ಲಿ ಊತ, ಭಾರವಾದ ಅನುಭವ ಮತ್ತು ನೋವು ಕಾಣಿಸಬಹುದು.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

ಊತ ಹಲವು ದಿನಗಳವರೆಗೆ ಮುಂದುವರಿದರೆ, ಉಸಿರಾಟದ ತೊಂದರೆ, ಎದೆನೋವು, ಒಂದು ಕಾಲಿನಲ್ಲಿ ಹಠಾತ್ ಊತ, ತೀವ್ರ ನೋವು, ಚರ್ಮ ಕೆಂಪಾಗುವುದು, ಹೊಟ್ಟೆ ಹೆಚ್ಚು ಊದಿಕೊಳ್ಳುವುದು ಅಥವಾ ಹಠಾತ್ ತೂಕ ಹೆಚ್ಚಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ತಡೆಗಟ್ಟಲು ಏನು ಮಾಡಬೇಕು?

  • ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದನ್ನು ತಪ್ಪಿಸಿ.
  • ನಿಯಮಿತವಾಗಿ ನಡೆಯುವ ಹಾಗೂ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  • ಉಪ್ಪಿನ ಸೇವನೆಯನ್ನು ಮಿತಿಗೊಳಿಸಿ.
  • ಸಾಕಷ್ಟು ನೀರು ಕುಡಿಯಿರಿ.
  • ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
  • ಕಾಲುಗಳಲ್ಲಿ ಊತ ಇದ್ದರೆ ವಿಶ್ರಾಂತಿಯ ಸಮಯದಲ್ಲಿ ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿ ಇರಿಸಿ.

ಗಮನಿಸಿ: ಪದೇ ಪದೇ ಅಥವಾ ನಿರಂತರವಾಗಿ ಕಾಣಿಸುವ ಊತವನ್ನು ಸಾಮಾನ್ಯವೆಂದು ನಿರ್ಲಕ್ಷಿಸಬೇಡಿ. ಕಾರಣವನ್ನು ಪತ್ತೆಹಚ್ಚಲು ವೈದ್ಯರ ಸಲಹೆ ಪಡೆದು ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Apply Now: ಕೊಡಗು ಜಿಲ್ಲಾ ಪಂಚಾಯತ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | Kodagu Health Dept Jobs 2026: 13 Contract Vacancies; Apply by July 20

ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವೊಂದು ಇಲ್ಲಿದೆ. ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆಯ ಪ್ರಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 13 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಹುದ್ದೆಗಳು ಗುತ್ತಿಗೆ (Contract) ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಆಯ್ಕೆಯಾಗಲಿದ್ದಾರೆ.

ಅಭ್ಯರ್ಥಿಗಳು ಜುಲೈ 2ರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 20ರ ಬೆಳಿಗ್ಗೆ 11.00 ಗಂಟೆಯೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಪ್ರಮುಖ ಮಾಹಿತಿ:

  • ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು
  • ನೇಮಕಾತಿ ವಿಧಾನ: ಗುತ್ತಿಗೆ ಆಧಾರ
  • ಒಟ್ಟು ಹುದ್ದೆಗಳು: 13
  • ಅರ್ಜಿ ಸಲ್ಲಿಸಲು ಕೊನೆಯ ದಿನ: 20 ಜುಲೈ 2026 (ಬೆಳಿಗ್ಗೆ 11.00 ಗಂಟೆ)
  • ಅರ್ಜಿ ಸಲ್ಲಿಸುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಮಡಿಕೇರಿ, ಕೊಡಗು

ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆಯಲ್ಲಿರುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅನುಭವ ಹಾಗೂ ಇತರೆ ಷರತ್ತುಗಳನ್ನು ಕಡ್ಡಾಯವಾಗಿ ಪರಿಶೀಲಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಟಾಗಿ ಮದುವೆಯಾಗಿದ್ದಳಾ ಸಿಯಾ? ಕೇತನ್ ಕೊಲೆ ಪ್ರಕರಣದಲ್ಲಿ ಹೊಸ ರಹಸ್ಯ ಬಯಲು – Kannada News | Siya Goyal secretly married her Lover Chetan Chaudhary before Ketan Agarwals murder WhatsApp Chat revealed

ಪುಣೆ, ಜುಲೈ 7: ಆಕೆಯ ಹೆಸರು ಸಿಯಾ ಗೋಯಲ್ (Siya Goyal). ಆಗಷ್ಟೇ ಟೀನೇಜ್ ದಾಟಿ 20ನೇ ವಯಸ್ಸಿಗೆ ಕಾಲಿಟ್ಟಿದ್ದಳು. ಹೇಳಿಕೇಳಿ ಬಹಳ ಶ್ರೀಮಂತರ ಮನೆಯ ಮಗಳು. ಮೋಜು, ಮಸ್ತಿ, ಪಬ್, ಡೇಟಿಂಗ್ ಎಲ್ಲ ಆಕೆಗೆ ಮಾಮೂಲಾಗಿತ್ತು. ಆದರೆ, ಆಕೆಯ ಅಪ್ಪ ಆಕೆಗೆ ಬೇಗ ಮದುವೆ ಮಾಡುವ ತವಕದಲ್ಲಿದ್ದರು. ಹೀಗಾಗಿ, ಪುಣೆಯ 26 ವರ್ಷದ ಉದ್ಯಮಿ ಕೇತನ್ ಅಗರ್​ವಾಲ್ (Ketan Agarwal) ಜೊತೆ ಆಕೆಯ ಮದುವೆ ನಿಶ್ಚಯ ಮಾಡಿದ್ದರು. ಎರಡೂ ಜೋಡಿಹಕ್ಕಿಗಳು ಕೈ ಹಿಡಿದು ಸುತ್ತಾಡುತ್ತಾ, ಈ ವರ್ಷಾಂತ್ಯದಲ್ಲಿ ಜೋಧ್​ಪುರದ ಅರಮನೆಯಲ್ಲಿ ನಡೆಯಲಿದ್ದ ತಮ್ಮ ಮದುವೆಗೆ ಶಾಪಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಆದರೆ, ಸಿಯಾಳ ಹುಟ್ಟುಹಬ್ಬದ ದಿನ ರಾಯಗಢ ಕೋಟೆಗೆ ಟ್ರೆಕಿಂಗ್ ಹೋಗಿದ್ದ ಆತನನ್ನು ಆಕೆಯೇ ಮೇಲಿಂದ ತಳ್ಳಿ ಕೊಲೆ ಮಾಡಿದ್ದಳು! ಈ ಪ್ರಕರಣದಲ್ಲಿ ಇದೀಗ ಪೊಲೀಸರು ಇನ್ನೊಂದು ರಹಸ್ಯ ಸಂಗತಿಯನ್ನು ಪತ್ತೆಹಚ್ಚಿದ್ದು, ಆ ಸಿಯಾ ಕೇತನ್ ಅಗರ್​ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ತನ್ನ ಲವರ್ ಚೇತನ್ ಚೌಧರಿ ಜೊತೆ ಗುಟ್ಟಾಗಿ ಮದುವೆಯಾಗಿದ್ದಳು ಎಂಬ ಸತ್ಯ ತನಿಖೆ ವೇಳೆ ಬಯಲಾಗಿದೆ.

ಇಷ್ಟು ದಿನವೂ ಚೇತನ್ ಮತ್ತು ಸಿಯಾ ಇಬ್ಬರೂ ಪ್ರೇಮಿಗಳಾಗಿದ್ದರು, ಇದೇ ಪ್ರೀತಿಯ ಅಮಲಿನಲ್ಲಿ ಅವರಿಬ್ಬರೂ ಕೇತನ್ ಚೌಧರಿಯನ್ನು ಕೊಲೆ ಮಾಡಿದ್ದರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಸಲಿ ಸಂಗತಿ ಬೇರೆಯೇ ಇದೆ. ಕೇತನ್ ಅಗರ್​​ವಾಲ್​ನನ್ನು ಕೊಲೆ ಮಾಡುವ 4 ತಿಂಗಳ ಮೊದಲೇ ಆಕೆ ತನ್ನ ಪ್ರೇಮಿ ಚೇತನ್ ಚೌಧರಿಯನ್ನು ರಹಸ್ಯವಾಗಿ ಮದುವೆಯಾಗಿದ್ದಳು ಎಂಬುದರ ಕುರಿತು ಪೊಲೀಸರಿಗೆ ಮಹತ್ವದ ದಾಖಲೆ ಸಿಕ್ಕಿದೆ. ಸಿಯಾ ಗೋಯಲ್​ ಮೊಬೈಲನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವಾಟ್ಸಾಪ್ ಚಾಟ್ ಪರಿಶೀಲನೆ ಮಾಡಿದಾಗ ಆಕೆ 4 ತಿಂಗಳ ಹಿಂದೆಯೇ ಚೇತನ್ ಜೊತೆ ರಹಸ್ಯವಾಗಿ ಮದುವೆಯಾಗಿದ್ದಳು, ಮನೆಯಲ್ಲಿ ಈ ವಿಚಾರ ಗೊತ್ತಾದರೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಮುಚ್ಚಿಟ್ಟಿದ್ದಳು ಎಂಬ ವಿಷಯ ಗೊತ್ತಾಗಿದೆ. ಅವರಿಬ್ಬರೂ ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ಫೆಬ್ರವರಿ 19ರಂದು ಸಿಯಾ ಮತ್ತು ಕೇತನ್ ಅವರ ನಿಶ್ಚಿತಾರ್ಥವು ಬಹಳ ಸಂಭ್ರಮದಿಂದ ನಡೆಯಿತು. ಅದಾದ ಸ್ವಲ್ಪ ಸಮಯದ ನಂತರ ಈ ರಹಸ್ಯವಾದ ಮದುವೆ ನಡೆದಿದೆ ಎಂಬ ಮಾಹಿತಿ ಹೊರಬರುತ್ತಿದೆ. ಪೊಲೀಸರು ಇನ್ನೂ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಮನೆಯವರಿಗೆ ಗೊತ್ತಿಲ್ಲದೆ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ, ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಕುಟುಂಬದ ಸದಸ್ಯರಿಗೆ ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತಾ? ಎಂಬ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ.

ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಮದುವೆ ಪ್ರಮಾಣಪತ್ರ ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದು ದೃಢಪಟ್ಟರೆ, ಫೆಬ್ರವರಿಯಲ್ಲಿ ಕೇತನ್ ಜೊತೆ ನಡೆದಿದ್ದ ಆಕೆಯ ನಿಶ್ಚಿತಾರ್ಥವು ಕಾನೂನುಬಾಹಿರವಾಗುತ್ತದೆ. ಈ ಮದುವೆಗೆ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಸಿಯಾಳ ಇಬ್ಬರು ಕಾಲೇಜು ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಯಾ ಮತ್ತು ಚೇತನ್​ನ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಲಾದ ಫೋಟೋಗಳನ್ನು ಮರುಪಡೆಯಲು (ರಿಕವರ್ ಮಾಡಲು) ಪೊಲೀಸರ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ. ಈ ಫೋಟೋಗಳಲ್ಲಿ ಆರೋಪಿಗಳಿಬ್ಬರು ಮದುವೆಯ ಹಾರ ಧರಿಸಿರುವುದು ಕಂಡುಬಂದಿತ್ತು ಎಂದು ವರದಿಯಾಗಿದೆ.

ಸಿಯಾ-ಚೇತನ್ ಪ್ರೇಮಕತೆ:

ಸಿಯಾ- ಕೇತನ್ ಕತೆ ಎಲ್ಲರಿಗೂ ಗೊತ್ತು. ಆದರೆ, ಸಿಯಾ ಮತ್ತು ಚೇತನ್ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ. ಇವರಿಬ್ಬರೂ ಮೊದಲು ಸ್ನೇಹಿತರಾದರು, ನಂತರ ಪ್ರೀತಿಯಲ್ಲಿ ಸಿಲುಕಿದರು. ಇಬ್ಬರೂ ಪ್ರವಾಸಕ್ಕಾಗಿ ರಾಜಸ್ಥಾನಕ್ಕೂ ಹೋಗಿದ್ದರು. ಇಬ್ಬರೂ ಉದಯಪುರ ಮತ್ತು ಜೋಧಪುರಕ್ಕೆ ಪ್ರವಾಸಕ್ಕಾಗಿ ಹೋಗಿದ್ದರು. ಅಲ್ಲಿ ಅವರ ಸ್ನೇಹಿತರು ಅವರಿಬ್ಬರನ್ನೂ ಒಟ್ಟಿಗೆ ನೋಡಿದ್ದರು. ಇಬ್ಬರೂ ತಮ್ಮ ಸ್ನೇಹಿತರಿಗೆ ತಾವು ಮದುವೆಯಾಗಿ ರಾಜಸ್ಥಾನದಲ್ಲಿ ನೆಲೆಸುವ ಕನಸಿದೆ ಎಂಬ ಬಗ್ಗೆಯೂ ಹೇಳಿದ್ದರು. ಚೇತನ್ ಸಿಯಾಗೆ ಮಾರ್ವಾಡಿ ಮಹಿಳೆಯರ ಉಡುಗೆ ತೊಡುಗೆ ಮತ್ತು ರಾಜಸ್ಥಾನಿ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುತ್ತಿದ್ದ. ಕೇತನ್ ಜೊತೆ ಎಂಗೇಜ್​ಮೆಂಟ್ ಆಗಿದ್ದರಿಂದ ತಮ್ಮಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪುವುದಿಲ್ಲ ಎಂದು ಅವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಮದುವೆಯ ನಂತರ, ಇಬ್ಬರೂ ಪುಣೆಯನ್ನು ತೊರೆದು ಉದಯಪುರ ಅಥವಾ ಜೋಧಪುರದಲ್ಲಿ ನೆಲೆಸಲು ಬಯಸಿದ್ದರು. ಆದರೆ, ವಿಧಿಯಾಟ ನೋಡಿ… ಈಗ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್

ಕೇತನ್ ಕೊಲೆ:

ಅತ್ತ ಚೇತನ್ ಜೊತೆ ಸಂಸಾರ ನಡೆಸುವ ಕನಸು ಕಂಡಿದ್ದ ಸಿಯಾ ಅದಕ್ಕೆ ಅಡ್ಡಿಯಾಗಿದ್ದ ಕೇತನ್​ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಳು. ಇತ್ತ ಪ್ರತಿ ದಿನವೂ ಸಿಯಾಳ ಜೊತೆ ಮಾತನಾಡುತ್ತಾ, ಶಾಪಿಂಗ್ ಮಾಡುತ್ತಾ ಆಕೆಯ ಕುಟುಂಬದಲ್ಲಿ ಒಬ್ಬನಾಗಿ ಬೆರೆತುಹೋಗಿದ್ದ ಕೇತನ್ ಆಕೆಯ ಜೊತೆ ಮದುವೆಯಾಗುವ ಸಂಭ್ರಮದಲ್ಲಿದ್ದ. ಚೇತನ್ ಚೌಧರಿ ಕೂಡ ಯಾರಿಗೂ ಅನುಮಾನ ಬಾರದಂತೆ ಕೇತನ್​ನನ್ನು ಕೊಂದು, ಆಕಸ್ಮಿಕ ಸಾವೆಂದು ನಂಬಿಸಿ, ತಾನೇ ಸಿಯಾಳ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮತ್ತೊಮ್ಮೆ ಮದುವೆಯಾಗುವ ಕನಸು ಕಂಡಿದ್ದ. ಆದರೆ, ಈ ಮೂವರ ಕನಸೂ ಕನಸಾಗಿಯೇ ಉಳಿಯಿತು. ಸಿಯಾ- ಚೇತನ್​ನ ಕುತಂತ್ರಕ್ಕೆ ಅಮಾಯಕ ಕೇತನ್ ಪ್ರಾಣವನ್ನೇ ಕಳೆದುಕೊಂಡ.

20 ವರ್ಷದ ಸಿಯಾ ಗೋಯಲ್ ಮತ್ತು 26 ವರ್ಷದ ಕೇತನ್ ಅಗರ್ವಾಲ್ ವಿವಾಹವು ಮುಂಬರುವ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಜೂನ್ 18ರಂದು ಕುಟುಂಬದ ಯಾರೂ ಊಹಿಸದ ರೀತಿಯಲ್ಲಿ ಪುಣೆಯ ಲೋಹಗಢ ಕೋಟೆಯಿಂದ ಬಿದ್ದು ಕೇತನ್ ಸಾವನ್ನಪ್ಪಿದ್ದ. ಫೋಟೋಗೆ ಪೋಸ್ ಕೊಡುವಾಗ ಕಾಲು ಜಾರಿ ಬಿದ್ದ ಎಂದು ಸಿಯಾ ಎಲ್ಲರನ್ನೂ ನಂಬಿಸಿದ್ದಳು. ಆದರೆ, ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಆಕೆಯೇ ಹಂತಕಿ ಎಂಬುದು ಗೊತ್ತಾಗಿತ್ತು. ಆತನನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣದಿಂದ ಸಿಯಾ ಗೋಯಲ್ ಈ ಕೊಲೆಯ ಸಂಪೂರ್ಣ ಸಂಚು ರೂಪಿಸಿದ್ದಾಳೆ ಎಂಬುದು ನಂತರ ಬಯಲಾಗಿತ್ತು.

ರಹಸ್ಯ ಮಾತುಕತೆ:

ಅಷ್ಟೇ ಅಲ್ಲದೆ, ಡಿಲೀಟ್ ಮಾಡಲಾಗಿದ್ದ ಮೊಬೈಲ್ ಡೇಟಾವನ್ನು ಮರುಪಡೆದಾಗ ಮತ್ತೊಂದು ವಿಷಯ ತಿಳಿದುಬಂದಿದೆ. ಕೊಲೆ ಸಂಚು ರೂಪಿಸಿದ ಬಳಿಕ ಪೊಲೀಸರ ತನಿಖೆಯಿಂದ ಬಚಾವಾಗಲು ಸಿಯಾ ಮತ್ತು ಚೇತನ್ ರಹಸ್ಯವಾದ ಸಂಕೇತ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಬ್ಬರೂ ಕೇತನ್ ಕುರಿತಾದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಅಡ್ಡಹೆಸರುಗಳನ್ನು ಬಳಸುತ್ತಿದ್ದರು. ಪೊಲೀಸರ ಪ್ರಕಾರ, ಪುಣೆಯ ಉದ್ಯಮಿಯನ್ನು ಕೊಲ್ಲುವ ಈ ಭೀಕರ ಯೋಜನೆ ಬಹಳ ದಿನಗಳಿಂದ ನಡೆಯುತ್ತಿತ್ತು. ಜೂನ್ 14ರಂದೇ ಆತನನ್ನು ಕೊಲ್ಲಲು ಮೊದಲ ಪ್ರಯತ್ನ ನಡೆದಿತ್ತು. ಆದರೆ, ಕೇತನ್ ಬಚಾವಾಗಿದ್ದ. ಆಗ ಆಕೆ ಚೇತನ್‌ನಿಗೆ ಮೆಸೇಜ್ ಕಳುಹಿಸಿ, ‘ನನಗೆ ಈ ಕೆಲಸ ಮಾಡಲು ಧೈರ್ಯ ಸಾಲುತ್ತಿಲ್ಲ, ನೀನೂ ಬಾ. ಇಬ್ಬರೂ ಸೇರಿ ಆತನನ್ನು ಪ್ರಪಾತಕ್ಕೆ ತಳ್ಳೋಣ’ ಎಂದು ಹೇಳಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆ ಪ್ರಕಾರ ಜೂನ್ 18ರಂದು ಇಬ್ಬರೂ ಸೇರಿ ಕೊಲೆ ಮಾಡಲು ಸಂಚು ಹೂಡಿದ್ದರು. ಕೊಲೆಯ ನಂತರ ಸಿಯಾ ಇದು ಅಪಘಾತ ಎಂದು ಕಟ್ಟುಕಥೆ ಹೆಣೆದಿದ್ದಳು. ಆದರೆ ಆಕೆಯ ವರ್ತನೆಯು ಕೇತನ್‌ನ ಸಹೋದರಿ ಮತ್ತು ಕುಟುಂಬದವರಿಗೆ ಅನುಮಾನ ತರಿಸಿತು. ತಕ್ಷಣ ಅವರು ತನಿಖೆಗೆ ಒತ್ತಾಯಿಸಿದರು. ಇದರಿಂದ ಸಿಯಾ ಸಿಕ್ಕಿಹಾಕಿಕೊಂಡಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:58 pm, Tue, 7 July 26

Source link

Exit mobile version