ಕಬೀರ್ ಬೇಡಿಯಿಂದ ಆಮಿರ್ ಖಾನ್‌ವರೆಗೆ; ಮೂರು ಬಾರಿ ಮದುವೆಯಾದ ಬಾಲಿವುಡ್ ತಾರೆಯರಿವರು – Kannada News | Aamir Khan Weds Gauri Spratt: Bollywood Stars With Multiple Marriages

ಮೂರು ಬಾರಿ ಮದುವೆಯಾದ ಬಾಲಿವುಡ್ ತಾರೆಯರಿವರು

ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಖ್ಯಾತರಾದ ನಟ ಆಮಿರ್ ಖಾನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಆದರೆ, ಅವರು ಸಿನಿಮಾಗಳ ಕಾರಣದಿಂದಾಗಿ ಅಲ್ಲ, ಬದಲಿಗೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಚರ್ಚೆಯಲ್ಲಿದ್ದಾರೆ. ಆಮಿರ್ ಖಾನ್ ಇತ್ತೀಚೆಗೆ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಿದ್ದಾರೆ. ಮೂಲಗಳ ಪ್ರಕಾರ, ಆಮಿರ್ ಕಳೆದ ಕೆಲವು ತಿಂಗಳುಗಳಿಂದ ಗೌರಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ತಮ್ಮ 60 ನೇ ಹುಟ್ಟುಹಬ್ಬದಂದು ಆಮಿರ್, ಗೌರಿ ಜೊತೆಗಿನ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಅದರ ನಂತರ ಈ ಜೋಡಿ ಅನೇಕ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಕೆಲವು ವರ್ಷಗಳ ಕಾಲ ಪ್ರೀತಿಸಿದ ನಂತರ ಆಮಿರ್ ಮತ್ತು ಗೌರಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಆಮಿರ್ ಖಾನ್ ಅವರ ಮೂರನೇ ಮದುವೆಯಾಗಿದೆ. ಎರಡು ಬಾರಿ ವಿಚ್ಛೇದನ ಪಡೆದ ನಂತರ, ನಟ ಈಗ ತಮ್ಮ ಮೂರನೇ ಜೀವನವನ್ನು ಪ್ರಾರಂಭಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಬಾಲಿವುಡ್ ತಾರೆಯರ ಕ್ಲಬ್‌ಗೆ ಈಗ ಆಮಿರ್ ಖಾನ್ ಹೆಸರೂ ಸೇರ್ಪಡೆಯಾಗಿದೆ.

1. ನಾಲ್ಕು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಬೀರ್ ಬೇಡಿ

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಬಾರಿ ವಿವಾಹವಾದ ನಟರ ಬಗ್ಗೆ ಚರ್ಚಿಸುವಾಗ ಕಬೀರ್ ಬೇಡಿ ಹೆಸರು ಮೊದಲು ಬರುತ್ತದೆ. ಇವರು ಎರಡು ಅಥವಾ ಮೂರು ಬಾರಿ ಅಲ್ಲ, ಬರೋಬ್ಬರಿ ನಾಲ್ಕು ಬಾರಿ ವಿವಾಹವಾಗಿದ್ದಾರೆ. ಕಬೀರ್ ಬೇಡಿ ಅವರ ಮೊದಲ ಮದುವೆ ಪ್ರತಿಮಾ ಬೇಡಿ ಅವರೊಂದಿಗೆ ನಡೆದಿತ್ತು. ಅವರ ನಂತರ ಸುಜೇನ್ ಮತ್ತು ನಿಕ್ಕಿ ಬೇಡಿ ಅವರನ್ನು ವಿವಾಹವಾದರು. ಕೊನೆಯದಾಗಿ ಅವರು ತಮ್ಮ ಮಗಳ ವಯಸ್ಸಿನವರಾದ ಪರ್ವೀನ್ ದುಸಾಂಜ್ ಅವರನ್ನು ನಾಲ್ಕನೇ ಬಾರಿಗೆ ಮದುವೆಯಾದರು. ಕಬೀರ್ ಬೇಡಿ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.

2. ಮೂರು ಮದುವೆಯಾದ ಸಂಜಯ್ ದತ್

ನಟ ಸಂಜಯ್ ದತ್ ಅವರ ವೈಯಕ್ತಿಕ ಜೀವನವು ಒಂದು ಸಿನಿಮಾ ಕಥೆಯಂತೆಯೇ ಇದೆ. ಇವರ ಮೊದಲ ಮದುವೆ ನಟಿ ರಿಚಾ ಶರ್ಮಾ ಅವರೊಂದಿಗೆ ಆಗಿತ್ತು. ಆದರೆ ಕ್ಯಾನ್ಸರ್ ಕಾಯಿಲೆಯಿಂದ ರಿಚಾ ಮರಣ ಹೊಂದಿದರು. ಅವರ ನಿಧನದ ನಂತರ ಸಂಜಯ್ ದತ್ ಅವರು ರಿಯಾ ಪಿಳ್ಳೈ ಅವರನ್ನು ವಿವಾಹವಾದರು. ಆದರೆ, ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಅವರು ಮಾನ್ಯತಾ ದತ್ ಅವರನ್ನು ಮೂರನೇ ಬಾರಿಗೆ ಮದುವೆಯಾದರು. ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದು, ಈ ದಂಪತಿಗೆ ಅವಳಿ ಮಕ್ಕಳಿದ್ದಾರೆ.

3. ಕಿರುತೆರೆ ಮತ್ತು ಬೆಳ್ಳಿತೆರೆಯ ನಟ ಕರಣ್ ಸಿಂಗ್ ಗ್ರೋವರ್

ಟಿವಿ ಮತ್ತು ಬಾಲಿವುಡ್ ನಟ ಕರಣ್ ಸಿಂಗ್ ಗ್ರೋವರ್ ಕೂಡ ಮೂರು ಬಾರಿ ವಿವಾಹವಾದ ನಟರ ಪಟ್ಟಿಯಲ್ಲಿದ್ದಾರೆ. ಇವರ ಮೊದಲ ಮದುವೆ ಶ್ರದ್ಧಾ ನಿಗಮ್ ಅವರೊಂದಿಗೆ ನಡೆದಿತ್ತು. ಆ ಸಂಬಂಧ ಮುರಿದುಬಿದ್ದ ಮೇಲೆ ನಟಿ ಜೆನ್ನಿಫರ್ ವಿಂಗೆಟ್ ಅವರನ್ನು ಎರಡನೇ ಬಾರಿಗೆ ಮದುವೆಯಾದರು. ಆದರೆ ಈ ಮದುವೆಯೂ ಹೆಚ್ಚು ದಿನ ಬಾಳಲಿಲ್ಲ. ಕೊನೆಯದಾಗಿ ಕರಣ್ ಸಿಂಗ್, ಬಾಲಿವುಡ್‌ನ ಜನಪ್ರಿಯ ನಟಿ ಬಿಪಾಶಾ ಬಸು ಅವರನ್ನು ಮೂರನೇ ಬಾರಿಗೆ ವಿವಾಹವಾದರು. ಪ್ರಸ್ತುತ ಈ ದಂಪತಿ ಒಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:46 am, Mon, 6 July 26

Source link

ರಾಮ ಮಂದಿರ ಟ್ರಸ್ಟ್‌ಗೆ ಬಿಕ್ಕಟ್ಟು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ – Kannada News | Ram Mandir Trust Crisis: Champat Rai, Anil Mishra Resignation Meeting Today

ಅಯೋಧ್ಯಾ, ಜುಲೈ 06: ಅಯೋಧ್ಯೆಯ ರಾಮ ಮಂದಿರ(Ram Mandir)ದ ದೇಣಿಗೆ ಹಣ ದುರುಪಯೋಗ ಹಗರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು (ಸೋಮವಾರ) ಮಧ್ಯಾಹ್ನ 3 ಗಂಟೆಗೆ ಅತ್ಯಂತ ನಿರ್ಣಾಯಕ ಸಭೆಯನ್ನು ನಡೆಸಲಿದೆ. ದೇವಸ್ಥಾನದ ಕಾಣಿಕೆ ಕಳ್ಳತನದ ನೈತಿಕ ಹೊಣೆ ಹೊತ್ತು ಈಗಾಗಲೇ ರಾಜೀನಾಮೆ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆ ಅಂಗೀಕಾರದ ಕುರಿತು ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಮಾಧ್ಯಮಗಳ ಕಣ್ಣು ತಪ್ಪಿಸಲು ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಸಭೆಯ ಸ್ಥಳವನ್ನು ಮಣಿ ರಾಮ್ ಚಾವ್ನಿಯಿಂದ ರಾಮ ಮಂದಿರದ ಆವರಣದೊಳಗಿನ ಅತಿಥಿ ಗೃಹಕ್ಕೆ ಬದಲಾಯಿಸಲಾಗಿದೆ. ಇತ್ತೀಚೆಗಷ್ಟೇ ಉಸಿರಾಟದ ತೊಂದರೆ ಮತ್ತು ಮೂತ್ರನಾಳದ ಸೋಂಕಿನಿಂದಾಗಿ ಲಕ್ನೋದ ಆಸ್ಪತ್ರೆಗೆ ದಾಖಲಾಗಿದ್ದ ಟ್ರಸ್ಟ್‌ನ 89 ವರ್ಷದ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರು ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಆದರೆ, ಹಿರಿಯ ಟ್ರಸ್ಟಿ ಕೆ. ಪರಾಸರನ್ ಅವರು ವಯೋಸಹಜ ಸಮಸ್ಯೆಯಿಂದಾಗಿ ಅಯೋಧ್ಯೆಗೆ ಬರಲು ಸಾಧ್ಯವಾಗದ ಕಾರಣ ಆನ್‌ಲೈನ್ (ವರ್ಚುವಲ್) ಮೂಲಕ ಸಭೆಗೆ ಹಾಜರಾಗಲಿದ್ದಾರೆ. 15 ಸದಸ್ಯರ ಈ ಟ್ರಸ್ಟ್‌ನಲ್ಲಿ ಒಂದು ವೇಳೆ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆ ಅಂಗೀಕಾರವಾದರೆ, ಹೊಸ ಆಡಳಿತ ಮಂಡಳಿಯ ರಚನೆಯ ಬಗ್ಗೆ ಚರ್ಚೆ ನಡೆಯಲಿದೆ.

ಎಸ್‌ಐಟಿ (SIT) ವರದಿ ಮೇಲಿನ ಚರ್ಚೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಈ ಹಗರಣದ ತನಿಖೆಯನ್ನು ನಡೆಸುತ್ತಿದ್ದು, ಸಭೆಯಲ್ಲಿ ಅದರ ಸಂಶೋಧನೆಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಎಸ್‌ಐಟಿ ಈಗಾಗಲೇ ಚಂಪತ್ ರಾಯ್ ಅವರ ಆಪ್ತ ಸಹಾಯಕ ತಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ. ಅಲ್ಲದೆ, ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ವಿಶೇಷ ಆಹ್ವಾನಿತ ಗೋಪಾಲ್ ರಾವ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ಇವರ ವಿರುದ್ಧ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಮತ್ತಷ್ಟು ಓದಿ: ‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ

ಆಡಿಟ್ ವರದಿಗಳ ಪರಿಶೀಲನೆ
ಕಳೆದ ಕೆಲವು ವರ್ಷಗಳ ಟ್ರಸ್ಟ್‌ನ ಹಣಕಾಸು ಚಟುವಟಿಕೆಗಳ ಆಡಿಟ್ ವರದಿಗಳನ್ನು ಎಸ್‌ಐಟಿ ಪರಿಶೀಲಿಸುವ ಸಾಧ್ಯತೆಯಿದೆ. ಈ ನಡುವೆ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಅವರು, ಟ್ರಸ್ಟ್‌ನ ಹಣಕಾಸು ವ್ಯವಸ್ಥೆಗಳು ಸಂಪೂರ್ಣ ಪಾರದರ್ಶಕವಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ದೇವಸ್ಥಾನದ ಹಣ ಲೂಟಿ ಮಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂದಿನ ಸಭೆಯಲ್ಲಿ ಟ್ರಸ್ಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಶಾಕ್… ವಿಶ್ವಕಪ್​ನಿಂದ ಬ್ರೆಝಿಲ್ ಔಟ್! – Kannada News | Brazil out of FIFA world cup 2026

ಫಿಫಾ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್​ಗೂ ಮುನ್ನವೇ ಹೊರಬಿದ್ದಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾರ್ವೆ ತಂಡವು 2-1 ಗೋಲುಗಳ ಅಂತರದಿಂದ ಬ್ರೆಝಿಲ್ ತಂಡವನ್ನು ಮಣಿಸಿದೆ. ಈ ಸೋಲಿನೊಂದಿಗೆ ಬ್ರೆಝಿಲ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ.

ಮಿಂಚಿದ ಹಾಲಂಡ್:

ಈ ಪಂದ್ಯದ ಆರಂಭಕ್ಕೂ ಮುನ್ನ ಗೆಲ್ಲುವ ಫೇವರೇಟ್ ತಂಡವಾಗಿ ಬ್ರೆಝಿಲ್ ಗುರುತಿಸಿಕೊಂಡಿತ್ತು. ಅದರಲ್ಲೂ ವಿನೀಶಿಯಸ್ ಜೂನಿಯರ್, ಗೇಬ್ರಿಯಲ್ ಮಾರ್ಟಿನೆಲ್ಲಿ, ಎಂಡ್ರಿಕ್ , ನೇಮಾರ್ ಜೂನಿಯರ್ ನಂತಹ ಬಲಿಷ್ಠ ಮುನ್ಪಡೆ ಆಟಗಾರರನ್ನು ಹೊಂದಿದ್ದ ಬ್ರೆಝಿಲ್ ತಂಡ ನಾರ್ವೆ ವಿರುದ್ಧ ಪ್ರಾಬಲ್ಯ ಮೆರೆಯಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ ನಾರ್ವೆ ಪಡೆ ಬ್ರೆಝಿಲ್ ತಂಡಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡಲಿಲ್ಲ. ಪರಿಣಾಮ ಮೊದಲಾರ್ಧ 0-0 ಅಂತರದಿಂದ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿ ತನ್ನ ರಣತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಅಟ್ಯಾಕಿಂಗ್‌ಗೆ ಇಳಿದ ನಾರ್ವೆ ಪರ ಎರ್ಲಿಂಗ್ ಹಾಲಂಡ್ ಬ್ಯಾಕ್ ಟು ಬ್ಯಾಕ್ ಎರಡು ಗೋಲು ಬಾರಿಸಿದರು.

  •  79ನೇ ನಿಮಿಷ: ಎರ್ಲಿಂಗ್ ಹಾಲಂಡ್ ನಾರ್ವೆ ಪರ ಮೊದಲ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
  •  90ನೇ ನಿಮಿಷ: ಪಂದ್ಯ ಮುಗಿಯಲು ಕೇವಲ ಕೆಲವೇ ನಿಮಿಷಗಳಿದ್ದಾಗ ಹಾಲಂಡ್ ಮತ್ತೊಂದು ಆಕರ್ಷಕ ಗೋಲು ಸಿಡಿಸಿ ಬ್ರೆಝಿಲ್ ಸೋಲನ್ನು ಖಚಿತಪಡಿಸಿದರು.

ಕೈಚೆಲ್ಲಿದ ಪೆನಾಲ್ಟಿ ಅವಕಾಶ!

ಪಂದ್ಯದ ಆರಂಭದಲ್ಲೇ (13ನೇ ನಿಮಿಷದಲ್ಲಿ) ಬ್ರೆಝಿಲ್‌ಗೆ ಪೆನಾಲ್ಟಿ ಮೂಲಕ ಗೋಲು ಗಳಿಸುವ ಸುವರ್ಣ ಅವಕಾಶ ಸಿಕ್ಕಿತ್ತು. ಆದರೆ ಬ್ರೂನೋ ಗಿಮರೇಶ್ ಹೊಡೆದ ಈ ಕಿಕ್ ಅನ್ನು ನಾರ್ವೆ ಗೋಲ್‌ಕೀಪರ್ ಓರ್ಜಾನ್ ನೈಲ್ಯಾಂಡ್ ಅದ್ಭುತವಾಗಿ ತಡೆದರು.

ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನೇಮಾರ್ ಜೂನಿಯರ್, ಪಂದ್ಯದ ಇಂಜುರಿ ಟೈಮ್‌ನಲ್ಲಿ (90+10ನೇ ನಿಮಿಷ) ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಆದರೆ, ಇದು ಬ್ರೆಝಿಲ್ ತಂಡಕ್ಕೆ ಸಮಾಧಾನ ತಂದಿತೇ ವಿನಃ ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ಬ್ರೆಝಿಲ್​ಗೆ ಆಘಾತ:

2022ರಲ್ಲಿ ಕ್ವಾರ್ಟರ್ ಫೈನಲ್​ಗೆ ತಲುಪಿದ್ದ ಬ್ರೆಝಿಲ್ ತಂಡವು ಇದೀಗ ದ್ವಿತೀಯ ನಾಕೌಟ್ ಹಂತದಲ್ಲೇ ಹೊರಬಿದ್ದಿದೆ. ಅದು ಕೂಡ 36 ವರ್ಷಗಳ ಬಳಿಕ. ಅಂದರೆ ಬ್ರೆಝಿಲ್ ತಂಡವು ಕೊನೆಯ ಬಾರಿ ಕ್ವಾರ್ಟರ್ ಫೈನಲ್ ತಲುಪದೇ ಹೊರಬಿದ್ದಿದ್ದು 1990 ರಲ್ಲಿ. ಇದಾದ ಬಳಿಕ 8 ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರ ನಡುವೆ 2 ಬಾರಿ ಚಾಂಪಿಯನ್ ಪಟ್ಟವನ್ನೂ ಕೂಡ ಅಲಂಕರಿಸಿದ್ದರು. ಆದರೆ ಈ ಬಾರಿ ನಾರ್ವೆ ಪಡೆಯ ಮುಂದೆ ಲಯ ತಪ್ಪಿದ ಬ್ರೆಝಿಲ್ ಆಘಾತಕಾರಿ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.

Source link

ಅಭಿವೃದ್ಧಿ ಹೆಸರಲ್ಲಿ ಕೇವಲ 3 ವರ್ಷಗಳಲ್ಲಿ ಬೆಂಗಳೂರಿನಲ್ಲಿ 19000ಕ್ಕೂ ಹೆಚ್ಚು ಮರಗಳು ಉಡೀಸ್! – Kannada News | Bengaluru Green Cover Loss: Over 19000 Trees Axed for Metro and Development Projects in Three Years

ಬೆಂಗಳೂರು, ಜುಲೈ 6: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಬೆಳೆಯುತ್ತಿರುವ ವೇಗಕ್ಕೆ ನಗರದ ಪ್ರಕೃತಿ ಮತ್ತು ಪರಿಸರ ಭಾರಿ ಬೆಲೆ ತೆರುತ್ತಿದೆ. ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆ, ರಸ್ತೆ ಅಗಲೀಕರಣ, ಫ್ಲೈಓವರ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಅಬ್ಬರಕ್ಕೆ ಕಳೆದ ಮೂರು ವರ್ಷಗಳಲ್ಲಿ (2023 ರಿಂದ 2026 ರ ಜೂನ್‌ವರೆಗೆ) ನಗರದಲ್ಲಿ ಬರೋಬ್ಬರಿ 19,268 ಮರಗಳನ್ನು ನೆಲಸಮಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಆಘಾತಕಾರಿ ವಿಚಾರ ತಿಳಿದುಬಂದಿದೆ.

ಮರಗಳ ನಾಶಕ್ಕೆ ಪ್ರಮುಖ ಕಾರಣಗಳೇನು?

ಜಿಬಿಎ ನೀಡಿರುವ ದತ್ತಾಂಶಗಳ ಪ್ರಕಾರ, ಕತ್ತರಿಸಲಾದ ಒಟ್ಟು ಮರಗಳ ಪೈಕಿ 7,683 ಮರಗಳು ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ಅಭಿವೃದ್ಧಿ ಯೋಜನೆಗಳಿಗಾಗಿ ಬಲಿಯಾಗಿವೆ. ಇನ್ನುಳಿದಂತೆ, ಅಪಾಯಕಾರಿಯಾಗಿದ್ದ ಮತ್ತು ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ಅಡ್ಡಿಯಾಗಿದ್ದ 2,468 ಮರಗಳನ್ನು ತೆರವುಗೊಳಿಸಲಾಗಿದೆ. ಇದಲ್ಲದೆ, ನಗರದಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರಿರುವುದರಿಂದ, ಅನೇಕ ಖಾಸಗಿ ಆಸ್ತಿ ಮಾಲೀಕರು ತಮ್ಮ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಲು ಮುಂದಾಗಿದ್ದು, ಈ ವಿಭಾಗದಲ್ಲೇ 7,902 ಮರಗಳು ಧರೆಗುರುಳಿವೆ. ಇಷ್ಟೇ ಅಲ್ಲದೆ, 2025-26ರ ಸಾಲಿನಲ್ಲಿ ಮುಂಗಾರು ಮಳೆ ವೇಳೆ ಮರ ಬಿದ್ದು ಅನಾಹುತ ಸಂಭವಿಸುವುದನ್ನು ತಡೆಯಲು ನಾಗರಿಕ ಸಂಸ್ಥೆಗಳೇ ಸ್ವಯಂಪ್ರೇರಿತವಾಗಿ 1,215 ಮರಗಳನ್ನು ಕತ್ತರಿಸಿವೆ. ಪ್ರಸ್ತುತ ಮತ್ತೊಂದು ಕಡೆ 1,092 ಮರಗಳನ್ನು ಕತ್ತರಿಸಲು ಅನುಮತಿ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಜಿಬಿಎ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಪರ್ಯಾಯ ಸಸಿ ನೆಡುವಿಕೆ ಬಗ್ಗೆ ಜಿಬಿಎ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಅರಣ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ‘ನಾವು ಬೇಕಾಬಿಟ್ಟಿ ಮತ್ತು ಬೇಜವಾಬ್ದಾರಿಯುತವಾಗಿ ಮರಗಳನ್ನು ಕಡಿಯಲು ಬಿಡುವುದಿಲ್ಲ. ಪ್ರತಿ ಪ್ರಕರಣವನ್ನು ಮರ ತಜ್ಞರ ಸಮಿತಿಗೆ (TEC) ಒಪ್ಪಿಸಿ, ಸಾಧ್ಯವಾದಷ್ಟು ಮರಗಳನ್ನು ಬೇರೆಡೆಗೆ ಮರುನಾಟಿ (Transplantation) ಮಾಡಲು ಪ್ರಯತ್ನಿಸುತ್ತೇವೆ. ನಗರದ ಹಸಿರನ್ನು ಕಾಪಾಡಲು ವರ್ಷಕ್ಕೆ ಸುಮಾರು ಒಂದು ಲಕ್ಷ ಸಸಿಗಳನ್ನು ನೆಡುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಂಪೇಗೌಡ ಜಯಂತಿಯಂದು ಒಂದೇ ದಿನದಲ್ಲಿ ನಗರದಾದ್ಯಂತ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು.

ಪರಿಸರ ತಜ್ಞರ ತೀವ್ರ ಕಳವಳ ಮತ್ತು ಆಕ್ರೋಶ

ಸಸಿ ನೆಡುವಿಕೆ ಮತ್ತು ಮರುನಾಟಿಗೆ ಸಂಬಂಧಿಸಿದ ಸರ್ಕಾರದ ಈ ವಾದವನ್ನು ಪರಿಸರ ತಜ್ಞರು ಒಪ್ಪುತ್ತಿಲ್ಲ. ಹೊಸದಾಗಿ ನೆಡುವ ಪುಟ್ಟ ಸಸಿಗಳು ಎಂದಿಗೂ ದಶಕಗಳಷ್ಟು ಹಳೆಯದಾದ ಬೃಹತ್ ಮರಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಇನ್‌ಫೆಂಟ್ರಿ ರಸ್ತೆಯಂತಹ ಮುಕ್ತ ಹಸಿರು ಜಾಗಗಳಲ್ಲೇ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಮರಗಳನ್ನು ನಗರದ ಮಧ್ಯಭಾಗದಲ್ಲಿ ಕತ್ತರಿಸಿ, ನಗರದ ಹೊರವಲಯದಲ್ಲಿ ಸಸಿ ನೆಡುವುದರಿಂದ ನಗರದ ತಾಪಮಾನ ನಿಯಂತ್ರಣಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ನ ಟ್ರಸ್ಟಿ ದತ್ತಾತ್ರೇಯ ದೇವರೇ ಆತಂಕ ವ್ಯಕ್ತಪಡಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಹೇಗಾಯ್ತು? ಏನೆಲ್ಲಾ ವಿಶೇಷ?

‘ಅನುಮತಿಯಿಲ್ಲದೆ ರಸ್ತೆ ಬದಿಯ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ, ಇದಕ್ಕೆ ಯಾವುದೇ ನಿಗಾ ಇಲ್ಲ. ನೆಟ್ಟ ಸಸಿಗಳ ಬದುಕುಳಿಯುವಿಕೆಯ ಬಗ್ಗೆ ಉತ್ತರದಾಯಿತ್ವ ಬೇಕು. ಇದಕ್ಕಾಗಿ ನಗರದ ಎಲ್ಲಾ ಮರಗಳು ಮತ್ತು ಸಸಿಗಳನ್ನು ಮ್ಯಾಪ್ ಮಾಡಲು ಡಿಜಿಟಲ್ ಡೇಟಾಬೇಸ್ ಸಿದ್ಧಪಡಿಸಬೇಕು’ ಎಂದು ಮತ್ತೊಬ್ಬ ಪರಿಸರವಾದಿ ವಿಜಯ್ ನಿಶಾಂತ್ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹ್ಯಾಕರ್ vs ಹ್ಯಾಕರ್; ಈ ಸರಣಿಯನ್ನು ಮಿಸ್ ಮಾಡಲೇಬೇಡಿ – Kannada News | Pritam and Pedro Review: Rajkumar Hirani Comedy Suspense Web Series on Jio Hotstar

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Rajkumar Hirani) ನಿರ್ಮಾಪಕನಾಗಿ ಒಟಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ವೆಬ್ ಸೀರೀಸ್ ‘ಪ್ರೀತಮ್ ಆ್ಯಂಡ್ ಪೆಡ್ರೊ’ ಜಿಯೋ ಹಾಟ್​ಸ್ಟಾರ್​​ನಲ್ಲಿ ಪ್ರಸಾರ ಆರಂಭಿಸಿದೆ ಕಾಮಿಡಿ ಜೊತೆಗೆ ಒಂದಷ್ಟು ಸಸ್ಪೆನ್ಸ್​​ಗಳ ಮೂಲಕ ಈ ವೆಬ್ ಸರಣಿ ಗಮನ ಸೆಳೆಯುತ್ತಾ ಇದೆ. ಹಾಗಾದರೆ, ಈ ಸರಣಿ ಹೇಗಿದೆ? ಆ ಬಗ್ಗೆ ಇಲ್ಲಿದೆ ವಿವರ.

ಇದು ಗೋವಾದಲ್ಲಿ ನಡೆಯುವ ಕಥೆ. ಪ್ರೀತಮ್ (ವೀರ್ ಹಿರಾನಿ) ಎಂಬ ಯುವಕ ಕಳೆದು ಹೋದ ರೇಡಿಯೋ ಬಗ್ಗೆ ಕಂಪ್ಲೇಟ್ ಕೊಡಲು ಪೊಲೀಸ್ ಸ್ಟೇಷನ್​ಗೆ ಬರುತ್ತಾನೆ. ಪೊಲೀಸ್ ಪೇದೆಗೆ ಹೆದರಿಸಿ ಜೈಲು ಸೇರುತ್ತಾನೆ. ಅದೇ ಪೊಲೀಸ್ ಸ್ಟೇಷನ್‌ನಲ್ಲಿ ಪೆಡ್ರೊ (ಅರ್ಶದ್ ವಾರ್ಸಿ) ಇನ್ಸ್‌ಪೆಕ್ಟರ್ ಆಗಿರುತ್ತಾನೆ. ಅಷ್ಟರಲ್ಲಿ ಅಲ್ಲಿ ಒಂದು ಹೈ ಪ್ರೊಫೈಲ್ ಎಟಿಎಂ ಕಳ್ಳತನದ ಕೇಸ್ ಬರುತ್ತದೆ. ಪೊಲೀಸರಿಗೆ ಅದನ್ನು ಹೇಗೆ ಪತ್ತೆ ಹಚ್ಚಬೇಕೆಂದು ತಿಳಿಯುವುದಿಲ್ಲ. ಆಗ ಪ್ರೀತಮ್ ರೇಡಿಯೋ ಹುಡುಕಿ ಕೊಟ್ಟರೆ ಕಳ್ಳರನ್ನು ಹಿಡಿದುಕೊಡುವುದಾಗಿ ಹೇಳುತ್ತಾನೆ. ಕಂಪ್ಯೂಟರ್ ಬಳಸಿ ಕೇವಲ ಹತ್ತು ನಿಮಿಷಗಳಲ್ಲಿ ಕಳ್ಳರ ಜಾಗ ಪತ್ತೆ ಹಚ್ಚುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಪೆಡ್ರೊ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆ ಆಗುತ್ತಾನೆ. ಆಗಲೇ ಕ್ರೀಡಾ ಸಚಿವರ ಮಗ ನಾಪತ್ತೆಯಾಗುತ್ತಾನೆ. ಆ ಬಳಿಕ ಕಥೆ ಶುರು.

ರಾಜ್‌ಕುಮಾರ್ ಹಿರಾನಿ ಶೈಲಿ

ಈ ಸರಣಿಯಲ್ಲಿ ಒಟ್ಟು 6 ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್ ಸರಾಸರಿ 35 ನಿಮಿಷ ಇದೆ. ಈ ಸರಣಿಯನ್ನು ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ಧವಾರೆ ನಿರ್ದೇಶಿಸಿದ್ದಾರೆ. ಆದರೆ ಇದರಲ್ಲಿ ರಾಜ್‌ಕುಮಾರ್ ಹಿರಾನಿ ಅವರ ಹಳೇ ಶೈಲಿಯೇ ಎದ್ದು ಕಾಣುತ್ತದೆ. ಹಿರಾನಿ ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಒಬ್ಬ ಮುಗ್ಧ ಹೀರೊ ಇರುತ್ತಾನೆ.

ಮುನ್ನಾಭಾಯ್, ಪಿಕೆ ಅಥವಾ ರಾಂಚೋ ತರಹ ಪೆಡ್ರೊ ಕೂಡ ಒಬ್ಬ ಮುಗ್ಧ ಪೊಲೀಸ್ ಅಧಿಕಾರಿ. ಭಾವನಾತ್ಮಕ ಮಾತುಗಳ ಮೂಲಕವೇ ಅವನು ಅಪರಾಧಿಗಳ ಮನಸ್ಸು ಬದಲಾಯಿಸುತ್ತಾನೆ. ಸೂಸೈಡ್ ಮಾಡಿಕೊಳ್ಳಲು ಹೋಗುವ ವ್ಯಕ್ತಿಯನ್ನು ತನ್ನ ಮಾತಿನಿಂದಲೇ ಕಾಪಾಡುತ್ತಾನೆ. ಇದನ್ನು ನೋಡುವಾಗ ನಮಗೆ ‘ಆಲ್ ಈಸ್ ವೆಲ್’ ನೆನಪಾಗುತ್ತದೆ. ಅತ್ತ, ಕಾಲೇಜು ಕಥೆ, ಆತ್ಮಹತ್ಯೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ದೃಶ್ಯಗಳು ಕರ್ನಾಟಕದಲ್ಲೂ ಸಾಗುತ್ತವೆ. ಒಂದೊಳ್ಳೆಯ ಸರಣಿ ನೋಡಬೇಕು ಎಂದರೆ ಇದನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ

ರಾಜ್​ಕುಮಾರ್ ಹಿರಾನಿ ಮಗ ವೀರ್ ಹಿರಾನಿ ಅವರು ನಟನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಅವರ ನಟನೆ ಕೂಡ ಇಷ್ಟ ಆಗುತ್ತದೆ. ಇನ್ನು ಕೆಲವು ವಿಶೇಷ ಅತಿಥಿ ಪಾತ್ರಗಳು ಚಿತ್ರದಲ್ಲಿ ಗಮನ ಸೆಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ಟ್ರೇಲಿಯಾ ಮುಡಿಗೆ ‘ಸಪ್ತ’ಮ ಕಿರೀಟ – Kannada News | Australia lift the ICC Women’s T20 World Cup 2026

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲಾರ್ಡ್ಸ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಸೋಫಿ ಮೊಲಿನ್ಯೂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕರಾಗಿ ಕಣಕ್ಕಿಳಿದ ಆ್ಯಮಿ ಜೋನ್ಸ್ 6 ರನ್​ಗಳಿಸಿ ಔಟಾದರೆ, ಡ್ಯಾನಿ ವ್ಯಾಟ್ 8 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸೀವರ್ ಬ್ರಂಟ್ 53 ಎಸೆತಗಳಲ್ಲಿ 58 ರನ್ ಬಾರಿಸಿದರು. ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಫ್ರೇಯ ಕೆಂಪ್ 28 ಎಸೆತಗಳಲ್ಲಿ 44 ರನ್​ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿತು.

151 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಬೆತ್ ಮೂನಿ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೂನಿ 49 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ 69 ರನ್ ಬಾರಿಸಿದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಫೀಬಿ ಲಿಚ್​ಫೀಲ್ಡ್ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 48 ರನ್ ಚಚ್ಚಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ 17.1 ಓವರ್​ಗಳಲ್ಲಿ 153 ರನ್​ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

 ಆಸೀಸ್ ಮುಡಿಗೆ ‘ಸಪ್ತ’ಮ ಕಿರೀಟ:

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಹಿಳಾ ತಂಡವು 7ನೇ ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಆಸೀಸ್ ಪಡೆ ವಿಶ್ವಕಪ್ ಗೆದ್ದ ವರ್ಷಗಳ ಪಟ್ಟಿ ಈ ಕೆಳಗಿನಂತಿದೆ…

  • 2010 — ಮೊದಲ ಪ್ರಶಸ್ತಿ (ನ್ಯೂಝಿಲೆಂಡ್ ವಿರುದ್ಧ ಗೆಲುವು)
  • 2012 — ಎರಡನೇ ಪ್ರಶಸ್ತಿ (ಇಂಗ್ಲೆಂಡ್ ವಿರುದ್ಧ ಗೆಲುವು)
  • 2014 — ಮೂರನೇ ಪ್ರಶಸ್ತಿ (ಇಂಗ್ಲೆಂಡ್ ವಿರುದ್ಧ ಗೆಲುವು)
  • 2018 — ನಾಲ್ಕನೇ ಪ್ರಶಸ್ತಿ (ಇಂಗ್ಲೆಂಡ್ ವಿರುದ್ಧ ಗೆಲುವು)
  • 2020 — ಐದನೇ ಪ್ರಶಸ್ತಿ (ಭಾರತದ ವಿರುದ್ಧ ಗೆಲುವು)
  • 2023 — ಆರನೇ ಪ್ರಶಸ್ತಿ (ಸೌತ್ ಆಫ್ರಿಕಾ ವಿರುದ್ಧ ಗೆಲುವು)
  • 2026 — ಏಳನೇ ಪ್ರಶಸ್ತಿ (ಇಂಗ್ಲೆಂಡ್ ವಿರುದ್ಧ ಗೆಲುವು)

ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!

ಈ ಮೂಲಕ ಆಸ್ಟ್ರೇಲಿಯಾ ತಂಡವು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.

Published On – 7:09 am, Mon, 6 July 26

Source link

ಅಮೆರಿಕ ಮಾತ್ರವಲ್ಲ, ಭಾರತವೂ ನಮ್ಮ ಶಕ್ತಿಶಾಲಿ ಮಿತ್ರ: ಜೆಡಿ ವ್ಯಾನ್ಸ್​ ಹೇಳಿಕೆಗೆ ನೆತನ್ಯಾಹು ತಿರುಗೇಟು – Kannada News | Netanyahu: India is Israel’s Powerful Ally, Not Just US, Refutes Vance’s Claim

ಜೆರುಸಲೇಂ, ಜುಲೈ 06: ಇಡೀ ವಿಶ್ವದಲ್ಲಿ ಇಸ್ರೇಲ್(Israel)​ಗೆ ಇರುವ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ ಅಮೆರಿಕ ಮಾತ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿ ಹಾಕಿದ್ದಾರೆ. ಜಗತ್ತಿನಲ್ಲಿ ನಮಗೆ ಭಾರತದಂತಹ ಇನ್ನೂ ಹಲವು ಆಪ್ತ ದೇಶಗಳ ಬೆಂಬಲವಿದೆ ಎಂದು ನೆತನ್ಯಾಹು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಭಾರತದಿಂದ ಸಿಗುತ್ತಿದೆ ಅಗಾಧ ಬೆಂಬಲ

ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರು ಹೇಳುವ ಎಲ್ಲ ಮಾತುಗಳನ್ನೂ ನಾನು ಒಪ್ಪಲು ಸಾಧ್ಯವಿಲ್ಲ. ಅಮೆರಿಕದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನ ಅತ್ಯುತ್ತಮ ಸ್ನೇಹಿತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಮಗೆ ಭಾರತದಂತಹ ಇತರ ಕೆಲವು ಶಕ್ತಿಶಾಲಿ ಸ್ನೇಹಿತರೂ ಇದ್ದಾರೆ ಎಂದಿದ್ದಾರೆ.

ಭಾರತದ ಬೆಂಬಲವನ್ನು ಶ್ಲಾಘಿಸಿದ ಅವರು, ಭಾರತವು 140 ಕೋಟಿ (1.4 ಬಿಲಿಯನ್) ಜನಸಂಖ್ಯೆ ಹೊಂದಿರುವ ದೇಶ. ಅಲ್ಲಿಂದ ಇಸ್ರೇಲ್‌ಗೆ ಸಿಗುತ್ತಿರುವ ಬೆಂಬಲ ಅಪಾರವಾದದ್ದು. ನನ್ನ ಫೇಸ್‌ಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರುತ್ತಿರುವ ಅಗಾಧವಾದ ಪ್ರೀತಿ ಮತ್ತು ಬೆಂಬಲದ ಪ್ರವಾಹ ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಜೆಡಿ ವ್ಯಾನ್ಸ್ ಹೇಳಿದ್ದೇನು?
ಕಳೆದ ತಿಂಗಳು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು ದಿ ನ್ಯೂಯಾರ್ಕ್​ ಟೈಮ್ಸ್​ ಸಂದರ್ಶನದಲ್ಲಿ ಜೆಡಿ ವ್ಯಾನ್ಸ್​ ಅವರು ಇಸ್ರೇಲ್ ಸರ್ಕಾರಕ್ಕೆ ಕಠಿಣ ಸಂದೇಶ ನೀಡಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಇಸ್ರೇಲ್ ವಿರೋಧಿಸುತ್ತಿರುವುದಕ್ಕೆ ವ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಡೀ ಜಗತ್ತಿನಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಏಕೈಕ ನಾಯಕ ಡೊನಾಲ್ಡ್ ಟ್ರಂಪ್ ಮಾತ್ರ.

ನಾನು ಇಸ್ರೇಲ್ ಸರ್ಕಾರದ ಜಾಗದಲ್ಲಿದ್ದರೆ, ಜಗತ್ತಿನಲ್ಲಿ ನಮಗಿರುವ ಏಕೈಕ ಪ್ರಬಲ ಮಿತ್ರನ (ಅಮೆರಿಕ) ಮೇಲೆಯೇ ದಾಳಿ ಮಾಡುತ್ತಿರಲಿಲ್ಲ. ಕೇವಲ ಮಿಲಿಟರಿ ಶಕ್ತಿಯಿಂದಲೇ ನಿಮ್ಮ ಎಲ್ಲಾ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವ್ಯಾನ್ಸ್ ಇಸ್ರೇಲ್ ಅನ್ನು ಟೀಕಿಸಿದ್ದರು.

ಮತ್ತಷ್ಟು ಓದಿ: ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್

ಜಾಗತಿಕವಾಗಿ ಇಸ್ರೇಲ್ ತಂತ್ರಜ್ಞಾನಕ್ಕೆ ಭಾರಿ ಬೇಡಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿಬರುತ್ತಿದ್ದರೂ ಇಸ್ರೇಲ್‌ಗೆ ತಂತ್ರಜ್ಞಾನ ಮತ್ತು ಮಿಲಿಟರಿ ರಂಗದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಬೆಂಬಲವಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ವಿಶ್ವದ ಹಲವು ದೇಶಗಳ ನಾಯಕರು ನನಗೆ ವೈಯಕ್ತಿಕವಾಗಿ ಕರೆ ಮಾಡುತ್ತಾರೆ. ರಾಜಕೀಯ ಕಾರಣಗಳಿಂದ ಸಾರ್ವಜನಿಕವಾಗಿ ಬೆಂಬಲಿಸಲು ಅವರಿಗೆ ಸಮಸ್ಯೆಯಿರಬಹುದು. ಆದರೆ ಅವರು ನಮ್ಮ ಮಿಲಿಟರಿ ತಂತ್ರಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಸೈಬರ್ ಭದ್ರತೆಯ ಪರಿಣತಿಯನ್ನು ತಮಗೂ ಕಲಿಸಿಕೊಡುವಂತೆ ಒಪ್ಪಂದಗಳಿಗೆ ವಿನಂತಿಸುತ್ತಿದ್ದಾರೆ. ಸೈಬರ್ ತಂತ್ರಜ್ಞಾನದಲ್ಲಿ ಇಸ್ರೇಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಶೀಘ್ರದಲ್ಲೇ ಟ್ರಂಪ್-ನೆತನ್ಯಾಹು ಭೇಟಿ
ಆಕ್ಸಿಯೋಸ್ ವರದಿಯ ಪ್ರಕಾರ, ಪ್ರಾದೇಶಿಕ ಭದ್ರತೆ ಹಾಗೂ ಇರಾನ್ ಮತ್ತು ಲೆಬನಾನ್ ವಿಷಯಗಳಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿವೆ. ಆದಾಗ್ಯೂ, ನ್ಯಾಟೋ (NATO) ಶೃಂಗಸಭೆಯ ನಂತರ ಶ್ವೇತಭವನದಲ್ಲಿ ಅಥವಾ ಮುಂದಿನ ವಾರ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ಕರಾವಳಿಯಲ್ಲಿ ಮಳೆಯ ಅಬ್ಬರ! 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka Weather Forecast: Heavy Rain Forecast, Orange Alert Issued for Coastal Districts

ಬೆಂಗಳೂರು, ಜುಲೈ 06: ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ (Monsoon rain) ಜೋರಾಗಿದೆ. ಭಾರೀ ಮಳೆಯಿಂದ ಈಗಾಗಲೇ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಇಂದೂ ಸಹ ಉಡುಪಿ, ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಭಾಗಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ರಾಜ್ಯದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದ್ದು, ಸಾರ್ವಜನಿಕರು ಎಚ್ಚರಿಗೆವಹಿಸುವಂತೆ ಹೇಳಲಾಗಿದೆ.

ಕರಾವಳಿಗೆ ಆರೆಂಜ್ ಅಲರ್ಟ್​

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಳಗಾವಿ ಜಿಲ್ಲೆಗೆ ಆರೆಂಜ್ ಅಲರ್ಟ್ ಇರಲಿದೆ. ಇನ್ನು ಬಾಗಲಕೋಟೆ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದಲ್ಲೂ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.

ಹಾಸನ, ಕೊಡಗಿಗೂ ಅಲರ್ಟ್​!

ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದ್ದು, **ಆರೆಂಜ್ ಅಲರ್ಟ್** ಪ್ರಕಟಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಸುಸ್ಥಿರ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು? – Kannada News | Alpha Movie Box Office Collectuion: YRF Spy Universe Disappoints, Low Weekend Collection

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಆಲ್ಫಾ’ (Alpha) ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತು ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಭಾನುವಾರದ ರಜಾದಿನದಂದೂ ದೊಡ್ಡ ಮಟ್ಟದ ಚೇತರಿಕೆ ಕಾಣದೆ ಪ್ರೇಕ್ಷಕರಿಂದ ತಣ್ಣಗಿನ ಪ್ರತಿಕ್ರಿಯೆ ಪಡೆದಿದೆ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆ.

ಭಾನುವಾರವೂ ಕೇವಲ 29.0% ಆಕ್ಯುಪೆನ್ಸಿ

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳಿಗೆ ಮೊದಲ ಭಾನುವಾರ ಅತ್ಯಂತ ನಿರ್ಣಾಯಕ. ಆದರೆ, ದೇಶಾದ್ಯಂತ ಬರೋಬ್ಬರಿ 7,439 ಶೋಗಳು ಪ್ರದರ್ಶನ ಕಂಡಿದ್ದರೂ, ಚಿತ್ರದ ಆಕ್ಯುಪೆನ್ಸಿ ಕೇವಲ 29.0% ದಾಟಲು ಸಾಧ್ಯವಾಗಿಲ್ಲ. ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಖಾಲಿ ಉಳಿದಿದ್ದು, ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಿತ್ರವು 3ನೇ ದಿನ (ಭಾನುವಾರ) ಭಾರತದಲ್ಲಿ ಕೇವಲ 13.25 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 13 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ನೋಡಿದರೆ ಈ ಗಳಿಕೆ ತುಂಬಾನೇ ಅಲ್ಪ.

3 ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ

3ನೇ ದಿನವಾದ ಭಾನುವಾರ ಈ ಸಿನಿಮಾ 13.25 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರದ ಒಟ್ಟೂ ಗಳಿಕೆ 34.00 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಗಳಿಕೆ 40.80 ಕೋಟಿ ರೂಪಾಯಿ ದಾಟಿದೆ. ವಿದೇಶದಿಂದ ಚಿತ್ರಕ್ಕೆ 3 ದಿನದಲ್ಲಿ 18.00 ಕೋಟಿ ರೂಪಾಯಿ ಹರಿದು ಬಂದಿದ್ದು, ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 58.80 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ವಾರ್ 2’ ಸೋಲಿನ ಬಳಿಕ ಜೂ. ಎನ್​ಟಿಆರ್​ ಮುಂದಿನ ಚಿತ್ರಕ್ಕೆ ಬ್ರೇಕ್ ಹಾಕಿದ ಯಶ್ ರಾಜ್ ಫಿಲ್ಮ್ಸ್?

ವೀಕೆಂಡ್‌ನಲ್ಲೂ ಕಷ್ಟಪಟ್ಟ ‘ಆಲ್ಫಾ’

ಸ್ಪೈ ಯೂನಿವರ್ಸ್‌ನ ಹಿಂದಿನ ಚಿತ್ರಗಳಾದ ‘ಪಠಾಣ್’, ‘ಟೈಗರ್ 3’ ಅಥವಾ ‘ವಾರ್’ ಸಿನಿಮಾಗಳಿಗೆ ಹೋಲಿಸಿದರೆ ‘ಆಲ್ಫಾ’ ಆರಂಭದಲ್ಲೇ ಎಡವಿದೆ. ಆಲಿಯಾ ಭಟ್ ಮತ್ತು ಶಾರ್ವರಿ ಅವರ ಆಕ್ಷನ್ ಸೀಕ್ವೆನ್ಸ್‌ಗಳು ಗಮನ ಸೆಳೆದಿದ್ದರೂ, ದುರ್ಬಲ ಕಥೆ ಮತ್ತು ನಿರಾಸೆ ಮೂಡಿಸಿದ ಚಿತ್ರಕಥೆಯಿಂದಾಗಿ ಪ್ರೇಕ್ಷಕರಿಂದ ನೆಗೆಟಿವ್ ಟಾಕ್ ಕೇಳಿ ಬಂದಿದೆ. ಭಾನುವಾರವೇ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಹೆಚ್ಚಾಗದ ಕಾರಣ, ಇಂದಿನಿಂದ (ಸೋಮವಾರ) ವಾರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ವರುಣಾರ್ಭಟ: ಕೊನೆಗೂ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ! ಹಲವೆಡೆ ಸೇತುವೆಗಳು ಜಲಾವೃತ, ಮರ ಬಿದ್ದು ಹಾನಿ – Kannada News | Karnataka Rain Fury: Krishna River Inflow Crosses 60000 Cusecs; Heavy Rainfall in Kodagu, Shivamogga and Belagavi

ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಜಲಾವೃತImage Credit source: tv9

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ (Karnataka) ಕೊನೆಗೂ ಮುಂಗಾರು ಮಳೆ (Monsoon Rain) ಬಿರುಸುಗೊಂಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹತ್ತಾರು ಅವಾಂತರಗಳು ಸೃಷ್ಟಿಯಾಗಿವೆ. ಬತ್ತಿ ಹೋಗಿದ್ದ ನದಿಗಳಿಗೆ ಈಗ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜೀವಕಳೆ ಬಂದಿದೆ. ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವೆಡೆ ಬಿರುಗಾಳಿ ಮಳೆಗೆ ಬೃಹತ್ ಮರಗಳು ಉರುಳಿ ಬಿದ್ದು ಮನೆ ಹಾಗೂ ವಾಹನಗಳು ಜಖಂಗೊಂಡಿವೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣೆ, ಮಲಪ್ರಭೆಯ ಅಬ್ಬರ

ಮಹಾರಾಷ್ಟ್ರದ ಕೊಲ್ಲಾಪುರ, ರತ್ನಗಿರಿ ಹಾಗೂ ಪಶ್ಚಿಮ ಘಟ್ಟದ ಕಣಕುಂಬಿ ಭಾಗದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿಯ ಒಳಹರಿವು ಕೇವಲ ಒಂದೇ ದಿನದಲ್ಲಿ 15 ಸಾವಿರದಿಂದ 60 ಸಾವಿರ ಕ್ಯೂಸೆಕ್‌ ದಾಟಿದೆ. ಪರಿಣಾಮವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಸೇರಿದಂತೆ ಒಟ್ಟು ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನಲ್ಲಿ ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕಾರದಗಾ-ಬೋಜ್ ಸೇರಿದಂತೆ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದ ಪ್ರಸಿದ್ಧ ಮಾರುತಿ ಮಂದಿರವು ಮಲಪ್ರಭಾ ನದಿಯ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ. ಇನ್ನು ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್‌ನ ಒಳಹರಿವು 30 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯಾಗಿ 16 ಗೇಟ್‌ಗಳ ಮೂಲಕ 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ಕೊಡಗಿನಲ್ಲಿ ಬಿರುಗಾಳಿ ಮಳೆ, ಹಾರಂಗಿ ಜಲಮಟ್ಟ ಏರಿಕೆ

ದಕ್ಷಿಣ ಕರ್ನಾಟಕದ ಕೊಡಗು ಜಿಲ್ಲೆಯಲ್ಲೂ ಮಳೆ ಬಿರುಸು ಪಡೆದುಕೊಂಡಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಡ್ಯಾಂನ ನೀರಿನ ಮಟ್ಟ ಕೇವಲ ಒಂದೇ ದಿನದಲ್ಲಿ 4 ಅಡಿ ಏರಿಕೆಯಾಗಿದೆ. ಚಿಕ್ಲಿಹೊಳೆ ಜಲಾಶಯವೂ ಭರ್ತಿಯಾಗುವ ಹಂತ ತಲುಪಿದೆ. ತೀವ್ರ ಗಾಳಿ-ಮಳೆಗೆ ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ಮಡಿಕೇರಿಯ ಯವಕಪಾಡಿ, ಕಬ್ಬಿನಕಾಡು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹವಾಮಾನ ಇಲಾಖೆಯು ಜುಲೈ 9 ರವರೆಗೆ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ಧುಮ್ಮಿಕ್ಕುತ್ತಿರುವ ಜೋಗ ಜಲಪಾತ

ಭೋರ್ಗರೆದು ಧುಮ್ಮಿಕ್ಕುತ್ತಿರುವ ಜೋಗ ಜಲಪಾತ

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಚುರುಕಾಗಿದ್ದು, ತುಂಗಭದ್ರಾ, ವರದಾ ಮತ್ತು ಶರಾವತಿ ನದಿಗಳು ಮೈದುಂಬಿವೆ. ಗಾಜನೂರಿನ ತುಂಗಾ ಡ್ಯಾಂ ಹಾಗೂ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶಿವಮೊಗ್ಗ ಭಾಗದ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಭಾಗದ ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಇದ್ದು, ಜಿಟಿಜಿಟಿ ಮಳೆಯಾಗುತ್ತಿದೆ. ಇಲ್ಲಿನ ವಾತಾವರಣಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಮೂಡಿಗೆರೆಯ ತ್ರಿಪುರ, ಬಕ್ಕಿ ಮತ್ತು ಬಡವನದಿಣ್ಣೆ ಗ್ರಾಮಗಳಲ್ಲಿ ಬೃಹತ್ ಮರಗಳು ಮನೆ ಮತ್ತು ರಸ್ತೆಯ ಮೇಲೆ ಬಿದ್ದು ಭಾನುವಾರ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಉಡುಪಿ ಮತ್ತು ಹಾಸನದಲ್ಲೂ ಮಳೆ ಅವಾಂತರ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪ್ರಸಿದ್ಧ ಕೂಡ್ಲು ಜಲಪಾತ ಭೋರ್ಗರೆದು ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹಾಸನದ ಸಕಲೇಶಪುರದ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಎರಡು ಮನೆಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ತಡವಾಗಿ ಆರಂಭವಾದರೂ ಮುಂಗಾರು ಮಳೆಯ ಆರ್ಭಟ ತೀವ್ರವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:50 am, Mon, 6 July 26

Source link

Exit mobile version