ಕೋರ್ಟ್‌ನಲ್ಲಿ ಗೆದ್ದರೂ ಸಿಗದ ಸರ್ಕಾರಿ ಕೆಲಸ: ಒಂದು ದಶಕದಿಂದ ಕರ್ನಾಟಕದ ಮೂವರ ನಿರಂತರ ಹೋರಾಟ! – Kannada News | Karnataka Job Aspirants Denied Appointments Despite Winning 10 Year Court Battle

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website

ಬೆಂಗಳೂರು, ಜುಲೈ 04: ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಮೂವರು ಅಭ್ಯರ್ಥಿಗಳು ಕೆಲಸಕ್ಕಾಗಿ ಕೋರ್ಟ್ ಮತ್ತು ಸರ್ಕಾರಿ ಕಚೇರಿಗಳ ನಡುವೆ ಅಲೆಯುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ (High Court) ಇವರ ಪರವಾಗಿ ಸ್ಪಷ್ಟ ಆದೇಶ ನೀಡಿದ್ದರೂ, ಇಂದಿಗೂ ಇವರಿಗೆ ನೇಮಕಾತಿ ಆದೇಶ ಪತ್ರ ಕೈಸೇರಿಲ್ಲ.

ಕಾನೂನು ಹೋರಾಟಕ್ಕಿಳಿದ ಅಭ್ಯರ್ಥಿಗಳು

ರಾಮನಗರ ಜಿಲ್ಲೆಯ ಹರೀಶ್ ಕುಮಾರ್ ಎಚ್.ಪಿ., ಕೊಪ್ಪಳ ಜಿಲ್ಲೆಯ ವಿಶ್ವನಾಥ್ ಮತ್ತು ವಿಜಯಪುರ ಜಿಲ್ಲೆಯ ಹಂಪಣ್ಣ ಕೊಲಕಾರ್ ಈ ಮೂವರೂ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ‘ವರ್ಕ್ ಇನ್ಸ್‌ಪೆಕ್ಟರ್’ (Work Inspector) ಹುದ್ದೆಗೆ ಆಯ್ಕೆಯಾಗಿದ್ದರು. ಇಲಾಖೆಯು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಹೊರತಾಗಿಯೂ, ಕೆಲವು ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಇವರಿಗೆ ನೇಮಕಾತಿ ಪತ್ರ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ಅಭ್ಯರ್ಥಿಗಳು ಕಾನೂನು ಹೋರಾಟ ಆರಂಭಿಸಿದ್ದರು.

ಹೈಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ?

ಸುದೀರ್ಘ ಹೋರಾಟದ ನಂತರ, 2026 ಮಾರ್ಚ್ 23ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಅಭ್ಯರ್ಥಿಗಳ ಪರವಾಗಿ ಮಹತ್ವದ ತೀರ್ಪು ನೀಡಿತು. “ಸಂಬಂಧಪಟ್ಟ ವೃಂದವನ್ನು (Cadre) ಸರ್ಕಾರ ತಿದ್ದುಪಡಿಗಳ ಮೂಲಕ ರದ್ದುಗೊಳಿಸಿದ್ದರೂ, ಅರ್ಜಿದಾರರಿಗೆ ಉದ್ಯೋಗ ನಿರಾಕರಿಸುವಂತಿಲ್ಲ. ಅವರನ್ನು ತತ್ಸಮಾನ ಹುದ್ದೆಗಳಲ್ಲಿ ನಿಯೋಜಿಸಬೇಕು” ಎಂದು ತಿಳಿಸಿದ ಕೋರ್ಟ್, ಎರಡು ತಿಂಗಳ ಒಳಗಾಗಿ ಇವರಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಗಡುವು ವಿಧಿಸಿತ್ತು. ಆದರೆ, ಆ ಗಡುವು ಮುಗಿದರೂ ತಾಂತ್ರಿಕ ಕಾರಣಗಳನ್ನು ಹೇಳಿ ಅಧಿಕಾರಿಗಳು ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ.

ಅಭ್ಯರ್ಥಿಗಳ ಅಳಲು

ಈ ಸುದೀರ್ಘ ಕಾನೂನು ಹೋರಾಟದ ನಡುವೆ ನಾವು ಇತರೆ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವ ವಯೋಮಿತಿಯನ್ನು ಮೀರಿದ್ದೇವೆ. ಇದರಿಂದ ಬೇರೆ ಉದ್ಯೋಗದ ಅವಕಾಶಗಳೂ ನಮಗೆ ಬಂದ್ ಆಗಿವೆ. ಹಣಕಾಸಿನ ಮುಗ್ಗಟ್ಟು, ಕುಟುಂಬದ ಜವಾಬ್ದಾರಿಗಳ ಮಧ್ಯೆ ಬೆಂಗಳೂರಿನ ಕೋರ್ಟ್‌ಗೆ ಅಲೆದಾಡಿ ಸುಸ್ತಾಗಿದ್ದೇವೆ ಎಂದು ಈ ಮೂವರೂ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಅಭ್ಯರ್ಥಿಗಳು ಹೊಸ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ನಾವು ಈಗ ಕೇವಲ ಕೆಲಸಕ್ಕಾಗಿ ಹೋರಾಡುತ್ತಿಲ್ಲ, ನಮಗಾದ ಅನ್ಯಾಯದ ವಿರುದ್ಧದ ನ್ಯಾಯ ಮತ್ತು ಘನತೆಗಾಗಿ ಹೋರಾಡುತ್ತಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಸ ತಿಂದು ‘ಚಿನ್ನ’ ಕೊಡುವ ಪುಟ್ಟ ಕಾರ್ಮಿಕರು! ಉಡುಪಿಯ ವಂಡ್ಸೆಯಲ್ಲಿ ಕೀಟಗಳ ನೆರವಿನಿಂದ ಕಸ ಮುಕ್ತ ಕ್ರಾಂತಿ – Kannada News | Udupi Vandse Gram Panchayat’s Eco Friendly Waste Management Using Black Soldier Fly Larvae Sparks Revolution

‘ಬ್ಲಾಕ್ ಸೋಲ್ಜರ್ ಫ್ಲೈ’ ಗೊಬ್ಬರ ತಯಾರಿಕಾ ಘಟಕ

ಉಡುಪಿ, ಜುಲೈ 4: ಮನೆಯಲ್ಲಿ ಉಳಿದ ಹಸಿ ಕಸವನ್ನು ಹೊರಗೆ ಎಸೆಯುವುದು ಸಾಮಾನ್ಯ ಸಂಗತಿ. ಆದರೆ, ಇದೇ ತ್ಯಾಜ್ಯವನ್ನು ಕೆಲವೇ ಗಂಟೆಗಳಲ್ಲಿ ಅಮೂಲ್ಯವಾದ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಪುಟ್ಟ ಕಾರ್ಮಿಕರ ಸೈನ್ಯವೊಂದು ಉಡುಪಿಯಲ್ಲಿದೆ! ಇವು ಸಂಬಳ ಕೇಳುವುದಿಲ್ಲ, ರಜೆ ಬೇಡುವುದಿಲ್ಲ, ಮುಷ್ಕರವನ್ನೂ ಮಾಡುವುದಿಲ್ಲ! ಹಗಲು-ರಾತ್ರಿ ನಿರಂತರವಾಗಿ ಕೆಲಸ ಮಾಡುತ್ತಾ ಪರಿಸರವನ್ನು ಕಾಪಾಡುತ್ತಿರುವ ಈ ವಿಶೇಷ ಜೀವಿಗಳೇ ‘ಬ್ಲಾಕ್ ಸೋಲ್ಜರ್ ಫ್ಲೈ (ಕಪ್ಪು ಸೈನಿಕ ನೊಣ)’ ಎಂಬ ಕೀಟಗಳು. ಉಡುಪಿ (Udupi) ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿಯ ಎಸ್‌ಎಲ್‌ಆರ್‌ಎಂ (Solid and Liquid Resource Management) ಘಟಕವು ಈ ವಿನೂತನ ಪ್ರಯೋಗದ ಮೂಲಕ ಇಂದು ಇಡೀ ಕರ್ನಾಟಕ ರಾಜ್ಯದ ಗಮನ ಸೆಳೆದಿದೆ.

ಯಂತ್ರಗಳಿಗಿಂತ ವೇಗವಾಗಿ ಕೆಲಸ ಮಾಡುವ ಕೀಟಗಳು!

ಸಾಮಾನ್ಯವಾಗಿ ಕಸದ ರಾಶಿ ಎಂದರೆ ದುರ್ವಾಸನೆ, ನೊಣಗಳ ಕಾಟ ಮತ್ತು ಸಾಂಕ್ರಾಮಿಕ ರೋಗಗಳ ಚಿತ್ರಣ ನಮ್ಮ ಕಣ್ಣೆದುರಿಗೆ ಬರುತ್ತದೆ. ಆದರೆ ವಂಡ್ಸೆ ಎಸ್‌ಎಲ್‌ಆರ್‌ಎಂ ಘಟಕದೊಳಗೆ ಕಾಲಿಟ್ಟರೆ ದೃಶ್ಯವೇ ಸಂಪೂರ್ಣ ಬೇರೆಯಾಗಿದೆ. ಇಲ್ಲಿ ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಈ ಬ್ಲಾಕ್ ಸೋಲ್ಜರ್ ಫ್ಲೈ ಕೀಟದ ಮರಿಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಆಶ್ಚರ್ಯವೆಂದರೆ, ಈ ಪುಟ್ಟ ಜೀವಿಗಳು ಒಂದೇ ರಾತ್ರಿಯಲ್ಲಿ ದೊಡ್ಡ ಪ್ರಮಾಣದ ಹಸಿ ತ್ಯಾಜ್ಯವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಂಡು ಅದನ್ನು ಅತ್ಯುತ್ತಮ ಗುಣಮಟ್ಟದ ಜೈವಿಕ ರಸಗೊಬ್ಬರವಾಗಿ ಪರಿವರ್ತಿಸುತ್ತವೆ. ಈ ಕೀಟಗಳಿಂದ ದೊರೆಯುವ ಗೊಬ್ಬರವು ಸಾಮಾನ್ಯ ಎರೆಹುಳು ಗೊಬ್ಬರಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂಗೆ 300 ರಿಂದ 400 ರೂಪಾಯಿ ವರೆಗೆ ಭರ್ಜರಿ ಬೆಲೆಗೆ ಮಾರಾಟವಾಗುತ್ತಿದೆ.

ತ್ಯಾಜ್ಯವೇ ಇಲ್ಲಿ ಆರ್ಥಿಕತೆಯ ಮೂಲ

ವಿಶೇಷವೆಂದರೆ, ಈ ವಂಡ್ಸೆ ಘಟಕ ಕೇವಲ ಕಸ ವಿಲೇವಾರಿಗಷ್ಟೇ ಸೀಮಿತವಾಗಿಲ್ಲ. ಇಡೀ ಆವರಣವನ್ನು ಪರಿಸರ ಸ್ನೇಹಿಯಾಗಿ ರೂಪಿಸಲಾಗಿದ್ದು, ಇಲ್ಲಿ ಜೇನು ಸಾಕಣೆ, ಪಶುಸಂಗೋಪನೆ ಮತ್ತು ಕುಕ್ಕುಟ ಸಾಕಣೆಯನ್ನೂ ಒಟ್ಟಿಗೆ ಮಾಡಲಾಗುತ್ತದೆ. ತ್ಯಾಜ್ಯವನ್ನು ಸಮಸ್ಯೆಯಾಗಿ ನೋಡದೆ, ಅದನ್ನೊಂದು ಲಾಭದಾಯಕ ಸಂಪನ್ಮೂಲವನ್ನಾಗಿ ಪರಿವರ್ತಿಸಿರುವ ವಂಡ್ಸೆ ಗ್ರಾಮ ಪಂಚಾಯಿತಿ ತನ್ನ ಅತ್ಯುತ್ತಮ ತ್ಯಾಜ್ಯ ನಿರ್ವಹಣೆಗಾಗಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಜೈವಿಕ ತಂತ್ರಜ್ಞಾನವನ್ನು ಹಳ್ಳಿ ಮಟ್ಟದಲ್ಲೇ ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಈ ಮಾದರಿಯು ರಾಜ್ಯದ ಇತರ ಗ್ರಾಮ ಪಂಚಾಯಿತಿಗಳಿಗೂ ದೊಡ್ಡ ಪ್ರೇರಣೆಯಾಗಿದೆ.

ಮಾಲಿನ್ಯ ಮುಕ್ತ ಗ್ರಾಮದ ಕನಸು ನನಸು

ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿ ದಿನ ಟನ್‌ಗಟ್ಟಲೆ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಯಾವುದೇ ದುರ್ವಾಸನೆ ಅಥವಾ ಪರಿಸರ ಮಾಲಿನ್ಯವಿಲ್ಲದೆ ಜೈವಿಕವಾಗಿ ವಿಲೇವಾರಿ ಮಾಡುತ್ತಿರುವ ಈ ಘಟಕ, ಕಸವೂ ಆದಾಯದ ಮೂಲವಾಗಬಹುದು ಎಂಬುದನ್ನು ಯಶಸ್ವಿಯಾಗಿ ಸಾಬೀತುಪಡಿಸಿದೆ. ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ಹೊಸ ಅಧ್ಯಾಯವನ್ನೇ ಬರೆದಿದ್ದು, ಈ ಪುಟ್ಟ ಕೀಟಗಳು ಈಗ ಗ್ರಾಮಾಭಿವೃದ್ಧಿಯ ಕನಸನ್ನು ನನಸು ಮಾಡುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ – Kannada News | Another Setback For Mamata Banerjee TMC State President Chandrima Bhattacharya Resigns From All Party Posts

ಕೊಲ್ಕತ್ತಾ, ಜುಲೈ 4: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಇಂದು ಟಿಎಂಸಿ ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದು, ಇದು ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಾಳಯಕ್ಕೆ ಮತ್ತೊಂದು ಭಾರಿ ಆಘಾತ ನೀಡಿದೆ. ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಪಕ್ಷದ ಅಧಿಕೃತ ಸಹಿದಾರರ ಜವಾಬ್ದಾರಿ ಸೇರಿದಂತೆ ಸಂಘಟನೆಯ ಎಲ್ಲಾ ಜವಾಬ್ದಾರಿಗಳಿಂದ ತಾವು ಕೆಳಗಿಳಿಯುತ್ತಿರುವುದಾಗಿ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.

ಚುನಾವಣಾ ಸೋಲಿನ ನಂತರ ಟಿಎಂಸಿ ತೊರೆಯುತ್ತಿರುವ ಪ್ರಮುಖ ನಾಯಕರ ಪಟ್ಟಿ ದೊಡ್ಡದಾಗುತ್ತಲೇ ಇದ್ದು, ಪಕ್ಷದ ಮೇಲಿನ ಮಮತಾ ಬ್ಯಾನರ್ಜಿ ಅವರ ಹಿಡಿತದ ಬಗ್ಗೆ ಈಗ ದೊಡ್ಡ ಪ್ರಶ್ನೆಗಳು ಎದ್ದಿವೆ. ಚಂದ್ರಿಮಾ ಅವರು ಮಮತಾ ಬ್ಯಾನರ್ಜಿಯ ಅತ್ಯಂತ ನಿಕಟವರ್ತಿ ಹಾಗೂ ನಂಬಿಕಸ್ಥ ನಾಯಕಿಯಾಗಿದ್ದರಿಂದ ಈ ರಾಜೀನಾಮೆ ರಾಜಕೀಯವಾಗಿ ಮಮತಾಗೆ ದೊಡ್ಡ ಹೊಡೆತ ನೀಡಿದೆ.

ದಮ್ ದಮ್ ಉತ್ತರ ಕ್ಷೇತ್ರದಲ್ಲಿ ಚಂದ್ರಿಮಾಗೆ ಸೋಲು:

ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅನುಭವಿಸಿದ ವೈಯಕ್ತಿಕ ಸೋಲಿನ ಕೆಲವು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಚುನಾವಣೆಯಲ್ಲಿ ಚಂದ್ರಿಮಾ ಅವರು 76,880 ಮತಗಳನ್ನು ಪಡೆದರೂ, ಬಿಜೆಪಿಯ ಸೌರವ್ ಸಿಕ್ದರ್ ವಿರುದ್ಧ 26,404 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಸೋಲು ರಾಜ್ಯದಲ್ಲಿ ಟಿಎಂಸಿಯ ಒಟ್ಟಾರೆ ಕುಸಿತದ ಪ್ರತಿಬಿಂಬವಾಗಿತ್ತು. ಈ ಬಾರಿ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದ್ದರೆ, ಬಿಜೆಪಿ 207 ಸ್ಥಾನಗಳನ್ನು ಗೆದ್ದು ಭರ್ಜರಿಯಾಗಿ ಅಧಿಕಾರ ಹಿಡಿದಿದೆ.

ಇದನ್ನೂ ಓದಿ: ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

ಬಂಡಾಯವೆದ್ದ ಶಾಸಕರು ಮತ್ತು ಸಂಸದರ ರಾಜೀನಾಮೆ ಪರ್ವ:

ಚುನಾವಣಾ ಫಲಿತಾಂಶದ ನಂತರ ಟಿಎಂಸಿಯಲ್ಲಿ ಅಭೂತಪೂರ್ವ ಪಕ್ಷಾಂತರದ ಅಲೆ ಎದ್ದಿದೆ. ಮೊದಲು ಶಾಸಕಾಂಗ ಪಕ್ಷದಲ್ಲಿ ಆರಂಭವಾದ ಈ ಬಂಡಾಯದಲ್ಲಿ, ಬಹುಪಾಲು ಟಿಎಂಸಿ ಶಾಸಕರು ರೆಬೆಲ್ ನಾಯಕ ರಿತಬ್ರತಾ ಬ್ಯಾನರ್ಜಿ ಹಿಂದೆ ಸಾಲುಗಟ್ಟಿ ನಿಂತಿದ್ದಾರೆ.

ಬಳಿಕ ಈ ಬಿಕ್ಕಟ್ಟು ಸಂಸತ್ತಿಗೂ ವ್ಯಾಪಿಸಿದ್ದು, ಹಿರಿಯ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ರಾಜ್ಯಸಭೆ ಹಾಗೂ ಪಕ್ಷ ಎರಡಕ್ಕೂ ರಾಜೀನಾಮೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ರಾಜ್ಯಸಭಾ ಸಂಸದರು ಹೊರಹೋಗುವ ಸಾಧ್ಯತೆಯಿದ್ದು, ಸಂಸತ್ತಿನಲ್ಲಿ ಟಿಎಂಸಿಯ ಬಲ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಲೋಕಸಭೆಯಲ್ಲೂ ಬಿರುಕು:

ಲೋಕಸಭೆಯಲ್ಲೂ ತೃಣಮೂಲ ಕಾಂಗ್ರೆಸ್‌ಗೆ ಭಿನ್ನಮತದ ಬಿಸಿ ತಟ್ಟಿದೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸಂಸದರ ಗುಂಪೊಂದು ಲೋಕಸಭೆಯಲ್ಲಿ ತಮಗೆ ಪ್ರತ್ಯೇಕ ಬಣವಾಗಿ ಮಾನ್ಯತೆ ನೀಡಬೇಕೆಂದು ಕೋರಿದ್ದು, ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ. ಈ ಒಡೆದ ಸಂಸದರ ಗುಂಪಿನಲ್ಲಿ ಸಯೋನಿ ಘೋಷ್, ಯೂಸುಫ್ ಪಠಾಣ್ ಮತ್ತು ಮಾಜಿ ಫುಟ್‌ಬಾಲ್ ಆಟಗಾರ ಪ್ರಸೂನ್ ಬ್ಯಾನರ್ಜಿ ಕೂಡ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ

ಪಕ್ಷದ ಸಾಂಘಿಕ ಮಟ್ಟದಲ್ಲೂ ಕುಸಿತ ಮುಂದುವರಿದಿದ್ದು, ಇತ್ತೀಚೆಗಷ್ಟೇ ಮಾಜಿ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ, ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಿರಿಯ ನಾಯಕರು, ಸಂಸದರು, ಶಾಸಕರು ಮತ್ತು ತಳಮಟ್ಟದ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯುತ್ತಿರುವುದರಿಂದ, ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಜೀವನದಲ್ಲೇ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮಮತಾ ನೇತೃತ್ವದ ನಾಯಕತ್ವವು ಈ ವಲಸೆಯನ್ನು ತಡೆದು ಪಕ್ಷವನ್ನು ಮತ್ತೆ ಹೇಗೆ ಕಟ್ಟಿ ನಿಲ್ಲಿಸಲಿದೆ ಎಂಬುದರ ಮೇಲೆ ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳ ರಾಜಕಾರಣದ ಭವಿಷ್ಯ ನಿರ್ಧಾರವಾಗಲಿದೆ.

ಚಂದ್ರಿಮಾ ಭಟ್ಟಾಚಾರ್ಯ ಯಾರು?:

ಚಂದ್ರಿಮಾ ಭಟ್ಟಾಚಾರ್ಯ ಪಶ್ಚಿಮ ಬಂಗಾಳದ ಮಾಜಿ ಸಚಿವರಾಗಿದ್ದು, ಮಮತಾ ಬ್ಯಾನರ್ಜಿ ಅವರ ಆಪ್ತರಲ್ಲಿ ಒಬ್ಬರೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದರು. ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಗಳಲ್ಲಿ ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭೂ ಸುಧಾರಣೆ ಹಾಗೂ ನಿರಾಶ್ರಿತರ ಮತ್ತು ಪುನರ್ವಸತಿ ಇಲಾಖೆಗಳ ಮಾಜಿ ರಾಜ್ಯ ಸಚಿವರಾಗಿದ್ದರು. ಭಟ್ಟಾಚಾರ್ಯ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದು, 2011ರ ಚುನಾವಣೆಯವರೆಗೆ ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಅವರು ದಮ್ ದಮ್ ಉತ್ತರದ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

116ರ ಹರೆಯದಲ್ಲೂ ಕೋಲು ಹಿಡಿದು ಅಲಿಪಿರಿ ಮೆಟ್ಟಿಲು ಹತ್ತಿ ತಿರುಪತಿ ತಲುಪಿದ ಕರ್ನಾಟಕದ ಭೀಮವ್ವ – Kannada News | Karnataka’s 116 Year Old Bhimavva Conquers Tirupati Alipiri Steps

ತಿರುಪತಿ, ಜು.4: ವಯಸ್ಸು ಹೆಚ್ಚಾಗುತ್ತಿದ್ದಂತೆ 60 ಅಥವಾ 70 ದಾಟಿದ ತಕ್ಷಣವೇ ಅನೇಕರು ಮಂಡಿ ನೋವು, ಆಯಾಸ ಮತ್ತು ದೈಹಿಕ ದೌರ್ಬಲ್ಯದಿಂದ ಬಳಲುತ್ತಾರೆ. ಕನಿಷ್ಠ ನಾಲ್ಕು ಅಡಿ ನಡೆಯಲೂ ಪರದಾಡುವ ಇಂದಿನ ದಿನಗಳಲ್ಲಿ, ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರ ದೈಹಿಕ ಸಂಕಲ್ಪ ಮತ್ತು ಅಚಲ ಭಕ್ತಿ ಈಗ ದೇಶಾದ್ಯಂತ ಎಲ್ಲರನ್ನೂ ಬೆರಗುಗೊಳಿಸಿದೆ. ಕರ್ನಾಟಕದ ಹಳ್ಳಿಯೊಂದರ ನಿವಾಸಿಯಾದ ಲಕ್ಷ್ಮವ್ವ (ಸ್ಥಳೀಯವಾಗಿ ಇವರನ್ನು ಭೀಮವ್ವ ಎಂದೂ ಕರೆಯುತ್ತಾರೆ) ಎಂಬ 116 ವರ್ಷದ ವೃದ್ಧೆ, ಯಾವುದೇ ಸಹಾಯವಿಲ್ಲದೆ ತಿರುಪತಿಯ ಅತ್ಯಂತ ಕಠಿಣವಾದ ಅಲಿಪಿರಿ ಮೆಟ್ಟಿಲುಗಳನ್ನು ಕಾಲ್ನಡಿಗೆ ಮೂಲಕ ಹತ್ತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಯಾರ ನೆರವೂ ಇಲ್ಲದೆ 3,550 ಮೆಟ್ಟಿಲು ಹತ್ತಿದ ವೃದ್ಧೆ:

ವರದಿಗಳ ಪ್ರಕಾರ ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದಿದ್ದರೂ, ಅವರ ಕುಟುಂಬದವರ ಪ್ರಕಾರ ಮತ್ತು ಅವರ ಶಾರೀರಿಕ ಸ್ಥಿತಿಯನ್ನು ನೋಡಿದರೆ ಅವರು ಶತಾಯುಷಿ ಎಂಬುದು ಸ್ಪಷ್ಟ ಕಾಣುತ್ತದೆ. ಈ ಇಳಿವಯಸ್ಸಿನಲ್ಲೂ ಅವರು ತಿರುಪತಿ ತಿರುಮಲದ ಅಲಿಪಿರಿ ಕಾಲ್ನಡಿಗೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನು ತಂದಿದೆ. ಸುಮಾರು 3,550 ಮೆಟ್ಟಿಲುಗಳಿರುವ ಈ ಅತ್ಯಂತ ಕಠಿಣ ಹಾದಿಯನ್ನು, ಅವರು ಯಾರ ಸಹಾಯವೂ ಇಲ್ಲದೆ, ಕೇವಲ ಕೈಯಲ್ಲೊಂದು ಕೋಲನ್ನು ಆಸರೆಯಾಗಿ ಹಿಡಿದು, ‘ಗೋವಿಂದಾ… ಗೋವಿಂದಾ…’ ಎಂದು ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಯಶಸ್ವಿಯಾಗಿ ಏರಿ ತಿರುಮಲ ತಲುಪಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​:

ಭೀಮವ್ವ ಅವರ ಈ ಅದ್ಭುತ ದೃಢಸಂಕಲ್ಪ, ಆತ್ಮವಿಶ್ವಾಸ ಮತ್ತು ಭಕ್ತಿಯನ್ನು ಕಂಡು ದಾರಿಯುದ್ದಕ್ಕೂ ಇದ್ದ ಸಹಯಾತ್ರಿಕರು ಮತ್ತು ಭಕ್ತರು ಅಚ್ಚರಿಯಿಂದ ಎಲ್ಲರೂ ನೋಡಿದ್ದಾರೆ. ವಯಸ್ಸು ಕೇವಲ ದೇಹಕ್ಕೆ ಮಿತಿಗಳನ್ನು ವಿಧಿಸಬಹುದೇ ಹೊರತು, ಮನಸ್ಸು ಬಲವಾಗಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದನ್ನು ಭೀಮವ್ವ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಹೊಸ ಪ್ಲ್ಯಾನ್‌: ಬಸ್ಸಿನೊಳಗೆ ಸ್ಪೀಕರ್ ಮೂಲಕ ಜಾಹೀರಾತು ನೀಡಲು ಮುಂದು, ಪ್ರಯಾಣಿಕರು ಗರಂ!

ಈ ವೃದ್ಧಾಪ್ಯದಲ್ಲೂ ಅವರಿಗೆ ಇಷ್ಟೊಂದು ದೈಹಿಕ ಮತ್ತು ಮಾನಸಿಕ ಶಕ್ತಿ ಲಭಿಸಿರುವುದು ಸಾಕ್ಷಾತ್ ವೆಂಕಟೇಶ್ವರ ಸ್ವಾಮಿಯ ಅನುಗ್ರಹವೇ ಸರಿ ಎಂದು ಅನೇಕ ಭಕ್ತರು ಭಾವಪರವಶರಾಗಿ ಕೈಮುಗಿದಿದ್ದಾರೆ. ಒಟ್ಟಿನಲ್ಲಿ 116ನೇ ವಯಸ್ಸಿನಲ್ಲಿ ಅಲಿಪಿರಿ ಮೆಟ್ಟಿಲು ಹತ್ತಿದ ಭೀಮವ್ವ ಅವರು ಈಗ ಸಾವಿರಾರು ಜನರಿಗೆ ದೊಡ್ಡ ಸ್ಫೂರ್ತಿಯಾಗಿ ನಿಂತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:45 pm, Sat, 4 July 26

Source link

‘ಆಲ್ಫಾ’ ಚಿತ್ರ ಪಾಕಿಸ್ತಾನದಲ್ಲಿ ಟ್ಯಾಕ್ಸ್​ ಫ್ರೀ? ಇದರ ಹಿಂದಿನ ಕಥೆ ಏನು? – Kannada News | Is Alia Bhatt’s Alpha Tax Free in Pakistan? Here is the Truth Behind the Viral Post

ಆಲಿಯಾ ಭಟ್, ಶಾರ್ವರಿ ನಟನೆಯ ‘ಆಲ್ಫಾ’ ಸಿನಿಮಾ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ನೆಗೆಟಿವ್ ವಿಮರ್ಶೆ ಸಿಗುತ್ತಿದೆ. ಈ ಸಿನಿಮಾನ ಟೀಕಿಸಲು ಕೆಲವರು ಒಂದು ಹಂತ ಮುಂದಕ್ಕೆ ಹೋಗಿದ್ದಾರೆ. ‘ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ’ ಎಂಬ ಪೋಸ್ಟರ್ ಎಲ್ಲ ಕಡೆಗಳಲ್ಲಿ ವೈರಲ್ ಮಾಡಿದ್ದಾರೆ. ಇದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಆಲ್ಫಾ’ ಸಿನಿಮಾ ಒಂದು ಸ್ಪೈ ಯೂನಿವರ್ಸ್. ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಭಾರತದ ಸೋಲ್ಜರ್​​ನ ಪಾಕಿಸ್ತಾನ ಸ್ಪೈ ಎಂಬ ರೀತಿಯಲ್ಲಿ ತೋರಿಸಲಾಗಿದೆಯಂತೆ. ಇದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಇದು ಅನೇಕರಿಗೆ ಒಂದು ಜೋಕ್ ರೀತಿ ಕಾಣಿಸಿದೆ. ಹೀಗಾಗಿ, ಇದನ್ನು ಟೀಕಿಸಲಾಗುತ್ತಿದೆ.

‘ಧುರಂಧರ್’ ಚಿತ್ರದಲ್ಲಿ ಭಾರತದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅಲ್ಲಿನ ಗೂಢಾಚಾರಿಗಳನ್ನಾಗಿ ಮಾಡಿದ ರೀತಿಯಲ್ಲಿ ತೋರಿಸಲಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ‘ಆಲ್ಫಾ’ ಸಿನಿಮಾ ಇದೆ. ಹೀಗಾಗಿ, ಅನೇಕರು ಈ ಚಿತ್ರ ಪಾಕಿಸ್ತಾನದವರಿಗೆ ಖುಷಿ ಕೊಡುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಒಂದು ಹಂತ ಮುಂದಕ್ಕೆ ಹೋಗಿ, ‘ಪಾಕಿಸ್ತಾನದಲ್ಲಿ ಈ ಚಿತ್ರ ಟ್ಯಾಕ್ಸ್ ಫ್ರೀ ಮಾಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ‘ಧುರಂಧರ್ ಚಿತ್ರಕ್ಕೆ ಆಲ್ಫಾ ಮೂಲಕ ಕೌಂಟರ್ ಕೊಟ್ಟ ಪಾಕ್’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ರಣ್ವೀರ್ ಸಿಂಗ್

ಅಂದಹಾಗೆ, ಭಾರತದ ಯಾವ ಸಿನಿಮಾಗಳೂ ಪಾಕಿಸ್ತಾನದಲ್ಲಿ ರಿಲೀಸ್ ಆಗೋದಿಲ್ಲ. ಸದ್ಯ ವೈರಲ್ ಆಗುತ್ತಿರುವ ಪೋಸ್ಟ್​ ಹಾಗೂ ಟ್ವೀಟ್​​ಗಳು ಕೇವಲ ಚಿತ್ರವನ್ನು ಟೀಕೆ ಮಾಡಲು ಬಳಕೆ ಮಾಡುತ್ತಿರೋದು ಅಷ್ಟೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:45 pm, Sat, 4 July 26

Source link

Karnataka SIR Row: ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ – Kannada News | Karnataka SIR Row: Pralhad Joshi Allege Major Irregularities in Voter Revision

ಬೆಂಗಳೂರು, ಜುಲೈ 04: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಸರಿಯಾಗಿ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ. ಸಾಮೂಹಿಕವಾಗಿ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗುತ್ತಿದೆ, ಇದು ಎಸ್ಐಆರ್ ಮಾಡುವ ಸರಿಯಾದ ವಿಧಾನವಲ್ಲ ಎಂದು ಅವರು ತಿಳಿಸಿದ್ದಾರೆ. ವಾರ್ಡ್ ನಂಬರ್ 69, ಬೂತ್ ನಂಬರ್ 116 ರಲ್ಲಿ ಮೂರು ಕುಟುಂಬಗಳಿಗೆ 50 ಫಾರ್ಮ್‌ಗಳನ್ನು ನೀಡಿರುವಂತಹ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಬಿಎಲ್ಎಗಳು ಆಕ್ಷೇಪಿಸಿದಾಗಲೂ ಕ್ರಮ ಕೈಗೊಂಡಿಲ್ಲ ಎಂದು ಜೋಶಿ ದೂರಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೃತರು, ಸ್ಥಳಾಂತರಗೊಂಡವರು ಮತ್ತು ಅಕ್ರಮ ವಲಸಿಗರನ್ನು ಗುರುತಿಸಲು ಎಸ್ಐಆರ್ ಮಾಡಬೇಕೇ ಹೊರತು ಸಾಮೂಹಿಕವಾಗಿ ಫಾರ್ಮ್ ಭರ್ತಿ ಮಾಡುವುದಕ್ಕಲ್ಲ ಎಂದು ಅವರು ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಬಗ್ಗೆ ಬಿಜೆಪಿ ಪ್ರಮುಖರೊಂದಿಗೆ ಚರ್ಚಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲದಲ್ಲಿ ಬಿಎಲ್‌ಒಗಳ ಕಳ್ಳಾಟ ಬಯಲು: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು ಎಸ್‌ಐಆರ್ ಪತ್ರ ವಿತರಣೆ! – Kannada News | SIR Irregularities: BLOs Conduct SIR Campaign Inside Nelamangala Mosque

ನೆಲಮಂಗಲ, ಜುಲೈ 04: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಿಎಲ್‌ಒಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ನಿಯಮದಂತೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಿದ್ದ ಅಧಿಕಾರಿಗಳು, ನೆಲಮಂಗಲ ನಗರದ ಮಸೀದಿಯೊಂದರಲ್ಲಿ ಕುಳಿತಲ್ಲೇ ಪರಿಷ್ಕರಣೆ ನಡೆಸಿದ್ದಾರೆ. ಮಸೀದಿಗೆ ಸಾರ್ವಜನಿಕರು ಹಾಗೂ ಮಹಿಳೆಯರನ್ನು ಕರೆಸಿಕೊಂಡ ಬಿಎಲ್‌ಒಗಳು, ಅಲ್ಲಿಯೇ ಅವರಿಂದ ಮಾಹಿತಿ ಪಡೆದು ಎಸ್‌ಐಆರ್ ಪತ್ರಗಳನ್ನು ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಒಂದೇ ಸೂರಿನಡಿ ಜನರನ್ನು ಗುಂಪುಗೂಡಿಸಿ ನಿಯಮ ಉಲ್ಲಂಘಿಸುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ಮಳೆ ಅಬ್ಬರ: 2 ತಿಂಗಳಿನಿಂದ ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು – Kannada News | Krishna River Recovers as Heavy Rain in Maharashtra Ghats Triggers 15000 Cusecs Inflow

ಚಿಕ್ಕೋಡಿ, ಜುಲೈ 4: ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ. ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನದಿಗೆ ಬರೋಬ್ಬರಿ 15 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಮನೆ ಮಾಡಿದೆ. ಕೃಷ್ಣಾ ನದಿಯು ದಕ್ಷಿಣ ಕರ್ನಾಟಕದ ಜೀವನಾಡಿಗಳಲ್ಲಿ ಒಂದಾಗಿದೆ. ನದಿಯಲ್ಲಿ ನೀರಿಲ್ಲದೆ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಇದೀಗ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನದಿಯಲ್ಲಿ ನೀರಿನ ಹರಿವು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಕಳೆದ ವಾರದಿಂದ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದ್ದು, ಆ ಭಾಗದಲ್ಲಿರುವ ನದಿಗಳು ಹಾಗೂ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಗಡಿಯೊಳಗೆ ಹರಿಯುವ ಕೃಷ್ಣಾ ನದಿಗೂ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ. ಇದು ಬೆಳಗಾವಿ ಜಿಲ್ಲೆ ಸೇರಿದಂತೆ ನದಿಯ ಪಾತ್ರದಲ್ಲಿರುವ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಭರವಸೆ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿನ್ನಂಥ ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ’ ಎಂದಿದ್ದ ಹೆಂಡತಿಯ ಕೊಲೆ: ಪತಿಯ ಜೀವಾವಧಿ ಶಿಕ್ಷೆ 7 ವರ್ಷಕ್ಕೆ ಕಡಿತಗೊಳಿಸಿದ ಹೈಕೋರ್ಟ್! – Kannada News | MP High Court Reduces Life Sentence to 7 Years Over Wife’s Provocative Remark

ಮಧ್ಯಪ್ರದೇಶ, ಜುಲೈ 04: ರಾಜ್ಯದಲ್ಲಿ 7 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಇದೀಗ ಶಿಕ್ಷೆಯನ್ನು 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಡಿತಗೊಳಿಸಿ ಮಧ್ಯಪ್ರದೇಶ ಹೈಕೋರ್ಟ್ (High Court)​ ಆದೇಶ ಹೊರಡಿಸಿದೆ. ಮೊದಲಿಗೆ ಮಹಿಳೆಯ ಕೊಲೆ ಪೂರ್ವನಿಯೋಜಿತವಾಗಿರಬಹುದೆಂದು ಹೇಳಲಾಗಿತ್ತು. ಆದರೆ “ನಿನ್ನಂತಹ ಸಾವಿರ ಗಂಡಂದಿರನ್ನು ನಾನು ಇಟ್ಟುಕೊಳ್ಳಬಲ್ಲೆ” ಎಂಬ ಪತ್ನಿಯ ಮಾತಿನಿಂದ ಪ್ರಚೋದನೆಗೊಳಗಾಗಿಯೇ ಹತ್ಯೆ ನಡೆದಿದೆ ಎಂದು ಕೋರ್ಟ್​ ಸ್ಪಷ್ಟಪಡಿಸಿದ್ದು, ಪತಿಯ ಶಿಕ್ಷೆಯನ್ನು ಕಡಿತಗೊಳಿಸಿ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ಹೆಂಡತಿಯು ಗಂಡನಿಗೆ ಈ ರೀತಿ ಹೇಳಿದಾಗ, ಅದು ಆತನ ನಿಷ್ಪ್ರಯೋಜಕತೆಯನ್ನು ಪರೋಕ್ಷವಾಗಿ ಬಿಂಬಿಸುತ್ತದೆ. ಅಂದರೆ ಮಾನವನಾಗಿ ಅಥವಾ ಪತಿಯಾಗಿ ಆತನಿಗೆ ಯಾವುದೇ ಮೌಲ್ಯವಿಲ್ಲ ಎಂದು ಸಾರಿದಂತಾಗುತ್ತದೆ. ಇದನ್ನು ಹಠಾತ್ ಪ್ರಚೋದನೆ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

ನಡೆದಿದ್ದೇನು?

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಚೌರಾಯ್ ನಿವಾಸಿ ಶಿವ ಕಹಾರ್ ಎಂಬಾತ 2021ರ ಸೆಪ್ಟೆಂಬರ್ 18ರಂದು ತನ್ನ ಪತ್ನಿ ಕಿರಣ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಜಗಳ ತಾರಕಕ್ಕೇರಿದಾಗ ಕಿರಣ್, “ನಿನ್ನಂಥ ಸಾವಿರ ಗಂಡಂದಿರನ್ನು ನಾನು ಹೊಂದಬಲ್ಲೆ” ಎಂದು ನಿಂದಿಸಿದ್ದರು. ಇದರಿಂದ ತೀವ್ರ ಕೋಪಗೊಂಡ ಶಿವ ಕಹಾರ್, ಹತ್ತಿರದಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಹೆಂಡತಿಯ ತಲೆಗೆ ಹೊಡೆದಿದ್ದನು. ಪರಿಣಾಮವಾಗಿ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಗರ್ಭಿಣಿಯಾಗಿದ್ದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ನಂತರ ಆರೋಪಿಯೇ ಸ್ವತಃ ಮಾವನಿಗೆ ವಿಷಯ ತಿಳಿಸಿ, ಪೊಲೀಸರಿಗೂ ಶರಣಾಗಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಛಿಂದ್ವಾರಾದ ಸ್ಥಳೀಯ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.

ಹೈಕೋರ್ಟ್ ತೀರ್ಪು

ಪ್ರಕರಣದ ಸಂಪೂರ್ಣ ವಿವರಣೆ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದ ಹೈಕೋರ್ಟ್, ಇದು ಮೊದಲೇ ಯೋಜಿಸಿ ಮಾಡಿದ ಕೊಲೆಯಲ್ಲ ಎಂದು ಸ್ಪಷ್ಟಪಡಿಸಿದೆ. ಆರೋಪಿಗೆ ಕೊಲ್ಲುವ ಉದ್ದೇಶ ಇರಲಿಲ್ಲ, ಕೇವಲ ಪತ್ನಿಯ ನಿಂದನೆಯಿಂದ ಉಂಟಾದ ಕೋಪದಿಂದ ಈ ಘಟನೆ ನಡೆದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ, ಕೆಳ ನ್ಯಾಯಾಲಯದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 (ಭಾಗ-1) ರ ಅಡಿಯಲ್ಲಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಜೈಲು ವಾಸಕ್ಕೆ ಇಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Amila Thandur: ‘ರಣರಂಗ’ ಚಿತ್ರದಲ್ಲಿ ಶಿವಣ್ಣನ ಜೊತೆ ಅಭಿನಯಿಸಿದ್ದ ಈ ನಟಿ ಈಗ ಹೇಗಿದ್ದಾರೆ ನೋಡಿ – Kannada News | Ranaranga Child Artist Akila Thandur: Where Is She Now and What Is She Doing?

ಅಂದು ‘ರಣರಂಗ’ ಚಿತ್ರದಲ್ಲಿ ಮುದ್ದಾಗಿ ನಟಿಸಿದ್ದ ಈ ಬೆಂಗಳೂರು ಬೆಡಗಿ, ಕೇವಲ ಬಾಲನಟಿಯಾಗಿ ಮಾತ್ರವಲ್ಲದೆ ನಾಯಕಿಯಾಗಿಯೂ ಬೆಳೆದರು. ‘ದೇವತಾ ಮನುಷ್ಯ’ ಚಿತ್ರದಲ್ಲೂ ಇವರು ಪ್ರಮುಖ ಪಾತ್ರ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದಾಗಿದ್ದು, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ.

ಅಖಿಲಾ ಕೇವಲ ಬೆಳ್ಳಿಪರದೆಗೆ ಸೀಮಿತವಾಗದೆ, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿ ಮನೆಮಾತಾಗಿದ್ದಾರೆ. ತಮ್ಮ ಬಹುಮುಖ ಪ್ರತಿಭೆಯಿಂದ ಹಿಂದಿ ಭಾಷೆಯ ಸಾಕ್ಷ್ಯಚಿತ್ರ ಮತ್ತು ತಮಿಳಿನ ಪ್ರಸಿದ್ಧ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು, ಕಲೆಯ ಎಲ್ಲಾ ಮಾಧ್ಯಮಗಳಲ್ಲೂ ತಮ್ಮ ಸೃಜನಶೀಲ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಅವರು ಶಿವರಾಜ್​​ಕುಮಾರ್ ಅವರನ್ನು ಭೇಟಿ ಮಾಡಿದ್ದರು. ತಾವು ಒಂದು ಕಾಲದಲ್ಲಿ ಅವರ ಸಿನಿಮಾದಲ್ಲಿ ನಟಿಸಿದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈ ಸಂದರ್ಭದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು.

ನಟನೆಯ ಆಚೆಗೂ ಅಖಿಲಾ ಅವರು ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಲೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಇವರು, ಕಾಲೇಜು ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯದ ವರ್ಕ್‌ಶಾಪ್‌ಗಳನ್ನು ನಡೆಸುತ್ತಿದ್ದಾರೆ. ತಮ್ಮ ರಂಗಭೂಮಿಯ ಸುದೀರ್ಘ ಅನುಭವವನ್ನು ಬಳಸಿಕೊಂಡು ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗಿ, ಪ್ರೇರಣೆಯಾಗಿ ದೇಶದ ಯುವಶಕ್ತಿಯನ್ನು ಸಬಲೀಕರಣಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಅಖಿಲಾ ಅವರ ಬದುಕಿನ ತತ್ವ ತುಂಬಾ ಸರಳ ಮತ್ತು ಸ್ಪೂರ್ತಿದಾಯಕವಾಗಿದೆ. ‘ಜೀವನದಲ್ಲಿ ಬಿರುಗಾಳಿ ಹಾದುಹೋಗುವವರೆಗೆ ಕಾಯಬೇಡಿ, ಮಳೆಯಲ್ಲೇ ನೃತ್ಯ ಮಾಡುವುದನ್ನು ಕಲಿಯಿರಿ’ ಎಂಬ ತತ್ವವನ್ನು ಇವರು ದೃಢವಾಗಿ ನಂಬಿದ್ದಾರೆ. ಅಂದು ಶಿವಣ್ಣನ ಸಿನಿಮಾದಲ್ಲಿದ್ದ ಬಾಲನಟಿ, ಇಂದು ಒಬ್ಬ ಪರಿಪೂರ್ಣ ನಟಿಯಾಗಿ ಮತ್ತು ಯುವಕರಿಗೆ ಆದರ್ಶ ಮಾರ್ಗದರ್ಶಕಿಯಾಗಿ ಸಮಾಜದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯುತ್ತಿದ್ದಾರೆ.

Published On – 1:31 pm, Sat, 4 July 26

Source link

Exit mobile version