ಏಕದಿನದಲ್ಲಿ ಕನ್ನಡಿಗನ ಕಮಾಲ್; ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ಪ್ರಸಿದ್ಧ್ ಕೃಷ್ಣ – Kannada News | Team India Dominates Edgbaston ODI After Early Setback: Prasidh Krishna Shines with Double Wicket

ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆರಂಭಿಕ ಹಿನ್ನಡೆಯ ಬಳಿಕ ಅದ್ಭುತ ಪುನರಾಗಮನ ಮಾಡಿದೆ. ಮೊದಲ ವಿಕೆಟ್ ಕಬಳಿಸಲು 61 ರನ್​ಗಳನ್ನು ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಆ ಬಳಿಕ ಪ್ರಮುಖ 5 ವಿಕೆಟ್‌ಗಳನ್ನು ಕೇವಲ 19 ರನ್​ಗಳ ಅಂತರದಲ್ಲಿ ಪಡೆದುಕೊಂಡಿದೆ. ಇದರಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಕೊಡುಗೆಯೂ ಅಪಾರವಾಗಿದೆ. ಪ್ರಸಿದ್ಧ್ ಒಂದೇ ಓವರ್​ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಮೊದಲಿಗೆ ಅನುಭವಿ ಬಟ್ಲರ್ ವಿಕೆಟ್ ಪಡೆದ ಪ್ರಸಿದ್ಧ್ ಆ ಬಳಿಕ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಖಾತೆ ತೆರೆಯಲು ಬಿಡಲಿಲ್ಲ.

Source link

ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ – Kannada News | Bank Loan: Retrieve this document from the bank after repaying the loan.

ಸಾಂದರ್ಭಿಕ ಚಿತ್ರImage Credit source: Priyanka Parashar/Mint via Getty Images

ಸಾಲ (Loan) ಮಾಡಿಯಾದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಆದರೆ ಸಾಲ ಮಾಡಿ ಅದನ್ನು ತೀರಿಸುವವರೆಗೆ ನೆಮ್ಮದಿಯೇ ಇರಲ್ಲ. ಒಮ್ಮೆ ಸಾಲ ಮರುಪಾವತಿ ಮಾಡಿದ್ರೆ ಅದೇನೋ ಮನಸ್ಸಿಗೆ ಸಮಾಧಾನ. ಬ್ಯಾಂಕ್ ಸಾಲ ತೀರಿಸಿದ ಬಳಿಕ ಎಲ್ಲಾ ಕೆಲಸ ಆಯ್ತು, ಇನ್ನು ಆರಾಮಾಗಿ ಇರಬಹುದು ಅಂದು ಕೊಂಡಿದ್ದೀರಾ. ಆದರೆ ನೀವು  ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಸಾಲ ಮುಕ್ತಾಯ ಪತ್ರ, ನಿರಾಕ್ಷೇಪಣೆ ಪ್ರಮಾಣಪತ್ರ ಸೇರಿದಂತೆ ಇನ್ನಿತ್ತರ ಅಗತ್ಯ ದಾಖಲೆಗಳನ್ನು (documents) ಬ್ಯಾಂಕ್‌ನಿಂದ ಪಡೆದುಕೊಳ್ಳುವುದನ್ನು ಮಾತ್ರ ಮರೆಯದಿರಿ.

ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಪಡೆಯಬೇಕು?

ಮೂಲ ದಾಖಲೆಗಳ ಮರುಪಾವತಿ: ಸಾಲ ಪಡೆಯುವಾಗ ನೀವು ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಆಸ್ತಿ ಪತ್ರಗಳು, ಸೇಲ್ ಡೀಡ್, ಅಗ್ರಿಮೆಂಟ್ ಮುಂತಾದ ಎಲ್ಲಾ ಮೂಲ ದಾಖಲೆಗಳನ್ನು ತಪ್ಪದೇ ಪಡೆದುಕೊಳ್ಳಿ.

ನಿರಾಕ್ಷೇಪಣಾ ಪತ್ರ ಅಥವಾ ನೋ ಡ್ಯೂ ಸರ್ಟಿಫಿಕೇಟ್: ಸಾಲ ತೀರಿಸಿದ ಬಳಿಕ ನೀವು ಬ್ಯಾಂಕಿನಿಂದ ನೋ ಡ್ಯೂ ಸರ್ಟಿಫಿಕೇಟ್ ಪಡೆಯಬೇಕು. ಇದು ನೀವು ಸಾಲವನ್ನು ಸಂಪೂರ್ಣವಾಗಿ ತೀರಿಸಲಾಗಿದೆ ಹಾಗೂ ನಿಮ್ಮ ಮೇಲೆ ಯಾವುದೇ ಬಾಕಿ ಇಲ್ಲ ಎಂದು ದೃಢೀಕರಿಸುವ ದಾಖಲೆಯಾಗಿದೆ.

ಬ್ಲ್ಯಾಂಕ್ ಚೆಕ್ ವಾಪಸ್ ಪಡೆದುಕೊಳ್ಳಿ: ಬ್ಯಾಂಕಿನವರು ಸಾಲ ನೀಡುವ ವೇಳೆ ನಿಮ್ಮಿಂದ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳುತ್ತಾರೆ. ಸಾಲ ತೀರಿಸಿದ ಕೂಡಲೇ ಆ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳಿ. ಈ ಚೆಕ್ ಗಳು ದುರ್ಬಳಕೆ ಆಗುವುದನ್ನು ತಪ್ಪಿಸುತ್ತದೆ.

ಕ್ರೆಡಿಟ್ ಸ್ಕೋರ್ ಪರಿಷ್ಕರಿಸಿಕೊಳ್ಳಿ: ಸಾಲ ಮುಕ್ತಾಯಗೊಂಡ ಬಳಿಕ ನೀವು ನಿಮ್ಮ ಸಿಬಿಲ್ ವರದಿಯಲ್ಲಿ ಸಾಲದ ಸ್ಥಿತಿಯು ಮುಕ್ತಾಯಗೊಂಡಿದೆ ಎಂದು ನವೀಕೃತವಾಗಿದೆಯೇ ಒಮ್ಮೆ ನೋಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಖಾತೆ ಮುಚ್ಚುವಿಕೆ ಹೇಳಿಕೆ: ಸಾಲದ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿಸುವ ಅಧಿಕೃತ ಹೇಳಿಕೆಯಾಗಿದೆ. ಇದನ್ನು ನೀವು ಸಾಲ ತೀರಿಸಿದ ತಕ್ಷಣ ಹೇಳಿಕೆಯನ್ನು ಬ್ಯಾಂಕ್‌ನಿಂದ ಪಡೆದುಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಯಾಕೆ ಮರಳಿ ಪಡೆಯಬೇಕು?

ಉತ್ತರ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಪಡೆಯದೇ ಇದ್ದಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಪ್ರಶ್ನೆ: ಮೂಲ ದಾಖಲೆಗಳು ಎಂದರೇನು?

ಉತ್ತರ: ನೀವು ಸಾಲ ಪಡೆಯುವಾಗ ಅಡಮಾನವಿಟ್ಟ ಆಸ್ತಿ ಪತ್ರಗಳು, ಸೇಲ್ ಡೀಡ್ ಹಾಗೂ ಅಗ್ರಿಮೆಂಟ್ ಮುಂತಾದ ದಾಖಲೆಗಳೇ ಮೂಲದಾಖಲೆಗಳಾಗಿವೆ.

ಪ್ರಶ್ನೆ: ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಮರಳಿ ಪಡೆಯಬೇಕು?

ಉತ್ತರ: ಸಾಲ ತೀರಿಸಿದ ಬಳಿಕ ನಿರಾಕ್ಷೇಪಣಾ ಪತ್ರ, ಮೂಲ ದಾಖಲೆ ಪತ್ರ, ಕ್ರೆಡಿಟ್ ಸ್ಕೋರ್, ಬ್ಲ್ಯಾಂಕ್ ಚೆಕ್ ವಾಪಸ್, ಖಾತೆ ಮುಚ್ಚುವಿಕೆ ಹೇಳಿಕೆ ಈ ದಾಖಲೆಗಳನ್ನು ಕೇಳಿ ಪಡೆಯಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರಿಂದ ದಿಢೀರ್​​ ದಾಳಿ: ಕಾರಣ ಇಲ್ಲಿದೆ – Kannada News | KGF Betala Temple Raid: Aghori Guruji Detained Amidst Allegations of Black Magic and Womens Harassment

ಕೋಲಾರ, ಜುಲೈ 14: ಜಿಲ್ಲೆ ಕೆಜಿಎಫ್ ತಾಲೂಕಿನ ಐವರಹಳ್ಳಿ ಗ್ರಾಮದ ಬಳಿಯಿರುವ ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರು ದಾಳಿ ನಡೆಸಿದ್ದಾರೆ. ಅಮಾವಾಸ್ಯೆ ದಿನದಂದೇ ನಡೆದ ಈ ಕಾರ್ಯಾಚರಣೆಯಲ್ಲಿ ದೇವಾಲಯದ ನಿರ್ಮಾತೃ ಅಗೋರಿ ಚಂದ್ರನಾಥ್ ಗುರೂಜಿಯನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯವು 108 ಅಡಿ ಎತ್ತರದ ಬೇತಾಳ ವಿಗ್ರಹದ ಮೂಲಕ ಆಂಧ್ರ ಮತ್ತು ತಮಿಳುನಾಡಿನಿಂದ ಭಕ್ತರನ್ನು ಆಕರ್ಷಿಸುತ್ತಿತ್ತು. ಆದರೆ, ಇಲ್ಲಿ ಮಾಟಮಂತ್ರ, ದೆವ್ವ ಬಿಡಿಸುವಿಕೆ, ಕುಡಿತ ಬಿಡಿಸುವ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ವಿಶೇಷವಾಗಿ, ಮಹಿಳೆಯರಿಗೆ ದೆವ್ವ ಬಿಡಿಸುವ ನೆಪದಲ್ಲಿ ಹಿಂಸೆ ನೀಡಲಾಗುತ್ತಿತ್ತು ಎಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಸಿಪಿಐ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ; ಮಾಸಿಕ 400 ರೂಗೆ ಸಾವಿರಕ್ಕೂ ಹೆಚ್ಚು ಲೈವ್ ಚಾನಲ್​ಗಳು – Kannada News | Jio Home TV pack of Rs 400 gives over 1,000 live tv channels, premium OTT subscriptions

ಜಿಯೋ ಹೋಮ್ ಟಿವಿ ಪ್ಯಾಕ್Image Credit source: Reliance Jio

ಬೆಂಗಳೂರು, ಜುಲೈ 14: ದೇಶದ ಪ್ರಮುಖ ಟೆಲಿಕಾಂ ದೈತ್ಯ ರಿಲಾಯನ್ಸ್ ಜಿಯೋ (Reliance Jio), ಹೋಮ್ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಗ್ರಾಹಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರೀಮಿಯಂ ಟೆಲಿವಿಷನ್ ಅನುಭವ ನೀಡುವ ಉದ್ದೇಶದಿಂದ ‘ಜಿಯೋ ಹೋಮ್ ಟಿವಿ ಪ್ಯಾಕ್’ (Jio Home TV Pack) ಅನ್ನು ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಗ್ರಾಹಕರು ತಿಂಗಳಿಗೆ ಕೇವಲ ₹400 ಕ್ಕೆ (ಎಲ್ಲಾ ತೆರಿಗೆ ಒಳಗೊಂಡಂತೆ) 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಆನಂದಿಸಬಹುದಾಗಿದೆ.

ಜಿಯೋ ಹೋಮ್ ಟಿವಿ ಪ್ಯಾಕ್‌ನ ಪ್ರಮುಖ ಫೀಚರ್ಸ್

  • ವೈವಿಧ್ಯಮಯ ಚಾನೆಲ್‌ಗಳು: ಗ್ರಾಹಕರು ತಮ್ಮ ಇಷ್ಟದ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಕ್ರೀಡೆ, ಸುದ್ದಿ, ಕಾರ್ಟೂನ್ (ಮಕ್ಕಳಿಗಾಗಿ), ಸಂಗೀತ ಮತ್ತು ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರಸಾರಕರ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.
  • ವಿಶೇಷ ಸ್ವಾಗತ ಕೊಡುಗೆ: ಜಿಯೋ ಹೋಮ್ ಟಿವಿ ಪ್ಯಾಕ್‌ಗೆ ಚಂದಾದಾರರಾಗುವ ಗ್ರಾಹಕರಿಗೆ ಮೊದಲ ತಿಂಗಳು (Welcome Offer) 30 Mbps ವೇಗದ ಉಚಿತ ಅನಿಯಮಿತ ವೈ-ಫೈ (Wi-Fi) ಸಿಗಲಿದೆ. ಇದರೊಂದಿಗೆ 12 ಪ್ರೀಮಿಯಂ ಒಟಿಟಿ (OTT) ಆಪ್‌ಗಳ ಚಂದಾದಾರಿಕೆಯೂ ಉಚಿತವಾಗಿ ಲಭ್ಯವಿರಲಿದೆ.
  • ಆರಂಭಿಕ ವೆಚ್ಚ ಮುಕ್ತ: ಗ್ರಾಹಕರ ಮೇಲಿನ ಮುಂಗಡ ವೆಚ್ಚದ ಭಾರವನ್ನು ಕಡಿಮೆ ಮಾಡಲು ಜಿಯೋ ಶೂನ್ಯ (₹0) ಇನ್‌ಸ್ಟಾಲೇಶನ್ (ಅಳವಡಿಕೆ) ಶುಲ್ಕ ಮತ್ತು ₹0 ಸೆಕ್ಯೂರಿಟಿ ಡೆಪಾಸಿಟ್ ಕೊಡುಗೆಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ

ಜಿಯೋ ಹೋಮ್ ಟಿವಿ ಪ್ಯಾಕ್: ಪಾವತಿ ಆಯ್ಕೆ ಹೇಗೆ?

ಈ ಆಫರ್ ಆರಂಭದಲ್ಲಿ 6 ತಿಂಗಳ ರೀಚಾರ್ಜ್ (FRC) ಆಯ್ಕೆಯೊಂದಿಗೆ ಲಭ್ಯವಿದ್ದು, ಜಿಎಸ್‌ಟಿ ಸೇರಿದಂತೆ ಒಟ್ಟು ಮೊತ್ತ ₹2,400 ಆಗಿರುತ್ತದೆ. ಇದು ಗ್ರಾಹಕರಿಗೆ ದೀರ್ಘಾವಧಿಯ ಮತ್ತು ಜಂಜಾಟವಿಲ್ಲದ ಪಾವತಿ ಆಯ್ಕೆ ಒದಗಿಸುತ್ತದೆ.

ಮೊಬೈಲ್ ಗ್ರಾಹಕರಿಗೂ ಬಂಪರ್ ಆಫರ್: ಕಳೆದ ವಾರವಷ್ಟೇ ಜಿಯೋ ತನ್ನ ಮೊಬೈಲ್ ಬಳಕೆದಾರರಿಗಾಗಿ ಕೇವಲ ₹55 ಕ್ಕೆ 1,000 ಕ್ಕೂ ಹೆಚ್ಚು ಲೈವ್ ಚಾನೆಲ್‌ಗಳನ್ನು ವೀಕ್ಷಿಸಬಹುದಾದ ವಿಶೇಷ ಮೊಬೈಲ್ ಪ್ಯಾಕ್ ಅನ್ನು ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಈಗ ಹೋಮ್ ಟಿವಿ ಪ್ಯಾಕ್ ಮೂಲಕ ಇಡೀ ಕುಟುಂಬಕ್ಕೆ ಡಿಜಿಟಲ್ ಮನರಂಜನೆಯನ್ನು ಒದಗಿಸಲು ಮುಂದಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್​ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?

ಲೈವ್ ಟೆಲಿವಿಷನ್, ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಪ್ರೀಮಿಯಂ ಒಟಿಟಿ ಸ್ಟ್ರೀಮಿಂಗ್ ಈ ಮೂರನ್ನೂ ಒಂದೇ ಸೂರಿನಡಿ ತರುವ ಮೂಲಕ ರಿಲಯನ್ಸ್ ಜಿಯೋ ಭಾರತೀಯ ಕುಟುಂಬಗಳಿಗೆ ವಿಶ್ವದರ್ಜೆಯ ಡಿಜಿಟಲ್ ಅನುಭವ ನೀಡುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೋಪಿನ ಪೌಡರ್ ಬಳಸಿ 2.3 ಕೋಟಿ ಲೀಟರ್ ನಕಲಿ ಹಾಲು ತಯಾರಿ; ಮಹಾರಾಷ್ಟ್ರದಲ್ಲಿ ಬಯಲಾಯ್ತು ಹಗರಣ – Kannada News | Nirma Detergent and palm oil used to make 2.3 crore litres of fake milk in Maharashtra FDA probe reveals big scam

ಮುಂಬೈ, ಜುಲೈ 14: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೃತಕ ಅಥವಾ ನಕಲಿ ಹಾಲಿನ ಜಾಲವನ್ನು ಪೊಲೀಸರು ಹಾಗೂ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಪತ್ತೆಹಚ್ಚಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 2.3 ಕೋಟಿ ಲೀಟರ್‌ಗೂ ಹೆಚ್ಚು ಕೃತಕ ಹಾಲನ್ನು ಇಡೀ ರಾಜ್ಯಾದ್ಯಂತ ಸರಬರಾಜು ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಆರೋಪಿಗಳು ಅಸಲಿ ಹಾಲಿನಂತೆಯೇ ಕಾಣುವಂತೆ ಮಾಡಲು ಮತ್ತು ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿಸಲು ಕೆಲವು ಅಪಾಯಕಾರಿ ವಸ್ತುಗಳನ್ನು ಬಳಸುತ್ತಿದ್ದರು.

ಅವುಗಳೆಂದರೆ, ನಿರ್ಮಾ ಡಿಟರ್ಜೆಂಟ್ ಪೌಡರ್ (ಬಟ್ಟೆ ಒಗೆಯುವ ಸೋಪಿನ ಪುಡಿ), ಪಾಮ್ ಆಯಿಲ್, ಕಡಿಮೆ ಗುಣಮಟ್ಟದ ರಾಸಾಯನಿಕ ಪುಡಿ, ಕಳಪೆ ಗುಣಮಟ್ಟದ ಹಾಲಿನ ಪುಡಿ. ಕೇವಲ ಕಳೆದ 6 ತಿಂಗಳಲ್ಲಿ ಸುಮಾರು 2,30,470 ಕೆಜಿ ಕಳಪೆ ಹಾಲಿನ ಪುಡಿಯನ್ನು ಬಳಸಿ, ಸುಮಾರು 9.21 ಕೋಟಿ ರೂಪಾಯಿ ಮೌಲ್ಯದ 23,04,070 ಲೀಟರ್ ನಕಲಿ ಹಾಲನ್ನು ಇವರು ಉತ್ಪಾದಿಸಿದ್ದರು.

ದಾಳಿಯ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳ ಪ್ರಕಾರ, ಕಳೆದ 6 ತಿಂಗಳಲ್ಲಿ ಈ ನಕಲಿ ಹಾಲು ತಯಾರಿಗೆ ಸುಮಾರು 2.3 ಲಕ್ಷ ಕೆಜಿ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಈ ಪುಡಿ ಮತ್ತು ರಾಸಾಯನಿಕಗಳ ಸಹಾಯದಿಂದ ಸುಮಾರು 23.04 ಲಕ್ಷ ಲೀಟರ್ ಕೃತಕ ಹಾಲನ್ನು ನೇರವಾಗಿ ಉತ್ಪಾದಿಸಲಾಗಿದೆ. ಈ ನಕಲಿ ಹಾಲಿನ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ 9.21 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಮಾರುಕಟ್ಟೆಗೆ 2.3 ಕೋಟಿ ಲೀಟರ್ ಹಾಲು ತಲುಪಿದ್ದು ಹೇಗೆ?:

ಆರೋಪಿಗಳು ಕೃತಕ ಹಾಲನ್ನು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ, ಡೈರಿಗಳಿಗೆ ಸರಬರಾಜು ಮಾಡುವ ಮುನ್ನ ಪ್ರತಿ 100 ಲೀಟರ್ ಅಸಲಿ ಹಾಲಿಗೆ 10 ಲೀಟರ್ ಕೃತಕ ಹಾಲನ್ನು (ಶೇ. 10ರಷ್ಟು ಅನುಪಾತದಲ್ಲಿ) ಮಿಶ್ರಣ ಮಾಡುತ್ತಿದ್ದರು. ಹೀಗೆ ಅಸಲಿ ಹಾಲಿನೊಂದಿಗೆ ಈ ಕೃತಕ ಹಾಲನ್ನು ಬೆರೆಸಿದ್ದರಿಂದ, ಒಟ್ಟು ಕಲಬೆರಕೆ ಹಾಲಿನ ಪ್ರಮಾಣ 2.3 ಕೋಟಿ ಲೀಟರ್‌ಗಿಂತಲೂ ಅಧಿಕವಾಗಿ ಗ್ರಾಹಕರ ಮನೆಗಳನ್ನು ತಲುಪಿದೆ.

ಆರೋಗ್ಯಕ್ಕೆ ಭೀಕರ ಅಪಾಯ:

ಬಟ್ಟೆ ಒಗೆಯುವ ಸೋಪಿನ ಪೌಡರ್ ಮತ್ತು ರಾಸಾಯನಿಕಗಳು ಮನುಷ್ಯನ ದೇಹವನ್ನು ಸೇರಿದರೆ ಕಿಡ್ನಿ, ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಇಂತಹ ಜಾಲಗಳ ವಿರುದ್ಧ ಮಹಾರಾಷ್ಟ್ರ ಎಫ್‌ಡಿಎ ಕಠಿಣ ಕಾನೂನು ಕ್ರಮ ಕೈಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿ ವಾರ ಕಳೆದರೂ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತಾ ಕಾಯ್ದೆಯಡಿ, ಜೀವಕ್ಕೆ ಕುತ್ತು ತರುವಂತಹ ಆಹಾರ ಕಲಬೆರಕೆ ದಂಧೆಯಲ್ಲಿ ತೊಡಗಿ ಅಪರಾಧ ಸಾಬೀತಾದರೆ, ಗರಿಷ್ಠ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ: ಎಂಇಎಸ್‌ಗೆ ಕಾನೂನು ನೆರವು: ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

ಯಾರು ಈ ಐಎಎಸ್ ಅಧಿಕಾರಿ?:

ಮಹಾರಾಷ್ಟ್ರದಲ್ಲಿ ಸದ್ಯ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ (FDA) ವತಿಯಿಂದ ಹಾಲು ಕಲಬೆರಕೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಅತ್ಯಂತ ಕಠಿಣ ಕಾರ್ಯಾಚರಣೆ ನಡೆಯುತ್ತಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ಮಹಾರಾಷ್ಟ್ರದ ದಕ್ಷ ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ವಹಿಸಿಕೊಂಡಿದ್ದಾರೆ. ಮೇ 25ರಂದು ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ಮಹಾರಾಷ್ಟ್ರದ ಎಫ್‌ಡಿಎ (FDA) ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಆಹಾರ ಕಲಬೆರಕೆಯ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭವಾಯಿತು. ಡೈರಿಗಳು, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಇಡೀ ಹಾಲಿನ ಸರಬರಾಜು ಜಾಲದಾದ್ಯಂತ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅವರು ಆದೇಶ ಹೊರಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ‘ಬೌದ್ಧ ಧರ್ಮ’ದ ಹೆಸರು ಸೇರ್ಪಡೆಗೆ ಸಮಿತಿ ಸಲಹೆ – Kannada News | Karnataka Nada Geete Change: Govt Considers Adding Buddhism to Kuvempu’s Anthem

ಬೆಂಗಳೂರು, ಜು.14: ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆಯೊಂದು ಆಗುವ ಸಾಧ್ಯತೆ ದಟ್ಟವಾಗಿದೆ. ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ‘ಬೌದ್ಧ ಧರ್ಮ’ದ ಹೆಸರನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿಯು ಈ ಮಹತ್ವದ ಸಲಹೆಯನ್ನು ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಕೆಯಾಗಿದೆ. ಕುವೆಂಪು ಅವರು ಬರೆದಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರನ್ನು ಕೈಬಿಡಲಾಗಿತ್ತು. ಪ್ರಸ್ತುತ ಹಾಡಿನಲ್ಲಿ “ಜೈನರ ಪೂಜ್ಯ ಉದ್ಯಾನ” ಎಂಬ ಸಾಲಿದೆ.

ಪುರುಷೋತ್ತಮ ಬಿಳಿಮಲೆ ಸಮಿತಿಯ ಸಲಹೆಯ ಪ್ರಕಾರ, ಇನ್ನು ಮುಂದೆ ಈ ಸಾಲನ್ನು “ಜೈನ ಬೌದ್ಧರ ಪೂಜ್ಯ ಉದ್ಯಾನ” ಅಥವಾ “ಜೈನರುದ್ಯಾನದ ಜೊತೆಗೆ ಬೌದ್ಧರುದ್ಯಾನ” ಎಂದು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಕುವೆಂಪು ಅವರು ಈ ಗೀತೆಯನ್ನು ರಚಿಸುವ ಸಮಯದಲ್ಲಿ ಮೂಲ ಕಾವ್ಯದಲ್ಲಿ ಬೌದ್ಧ ಧರ್ಮದ ನೇರ ಉಲ್ಲೇಖ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳ: ಕಲ್ಯಾಣಿ ಸ್ಟೀಲ್ ಕಾರ್ಖಾನೆ ಸೀಜ್ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮದ ಪ್ರಭಾವ, ಇತಿಹಾಸ ಹಾಗೂ ಅನುಯಾಯಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲ ಧರ್ಮಗಳ ಸಮಾನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಬದಲಾವಣೆಗೆ ಸಮಿತಿ ಮುನ್ನುಡಿ ಬರೆದಿದೆ. ಸಮಿತಿಯು ಈ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದು, ರಾಜ್ಯ ಸರ್ಕಾರ ಈ ಸಲಹೆಯನ್ನು ಅಂಗೀಕರಿಸಿದರೆ ಇನ್ನು ಮುಂದೆ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬದಲಾದ ಹೊಸ ರೂಪದ ನಾಡಗೀತೆಯನ್ನು ಕೇಳಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮದರ್ ಪ್ರಾಮಿಸ್’ ಸಿನಿಮಾನಲ್ಲಿ ನಟಿಸಿದ್ದೇಕೆ? ವಿವರಿಸಿದ ಡಾಲಿ – Kannada News | Daali Dhananjay explained why he acted in Mother Promise movie

ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿ, ನಟನೆ ಸಹ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ಕೇಳಿ ಬರುತ್ತಿವೆ, ಚಿತ್ರಮಂದಿರಗಳಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಕಮರ್ಶಿಯಲ್ ಮಾಸ್ ಹೀರೋ ಎನಿಸಿಕೊಂಡಿರುವ ಡಾಲಿ ಧನಂಜಯ್, ಆಗಾಗ್ಗೆ ಸಣ್ಣ ಸಿನಿಮಾಗಳು, ಹೊಸಬರ ಸಿನಿಮಾಗಳಲ್ಲಿಯೂ ನಟಿಸುತ್ತಲೇ ಇರುತ್ತಾರೆ. ‘ಮದರ್ ಪ್ರಾಮಿಸ್’ ಸಹ ಅದಕ್ಕೆ ಹೊರತಲ್ಲ. ತಾವು ಹೀಗೆ ಹೊಸಬರ ಸಿನಿಮಾಗಳಲ್ಲಿ ನಟಿಸುವುದೇಕೆ ಎಂಬುದನ್ನು ಡಾಲಿ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ಸ್ಫೋಟಕ ಆರೋಪ: ಮಂತ್ರಿ ಸ್ಥಾನಕ್ಕೆ ಕೊಡಬೇಕಾ ಕೋಟಿ ಕೋಟಿ?

ಬೆಂಗಳೂರು, ಜುಲೈ 14: ಸಚಿವ ಸ್ಥಾನಕ್ಕೆ 100ರಿಂದ 150 ಕೋಟಿ ರೂಪಾಯಿ ಇದ್ದು, ಇದು ಪೇಮೆಂಟ್ ಸಚಿವ ಸ್ಥಾನದ ಸರ್ಕಾರ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ಆರೋಪಿಸಿದ್ದಾರೆ. ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬರುವ ಸಾಧ್ಯತೆ ಇದೆ ಎಂದು ಭವಿಷ್ಯವನ್ನೂ ನುಡಿದಿರುವ ಅವರು, ನಾನೇ 5 ವರ್ಷ ಸಿಎಂ ಅಂತಿದ್ದ ಸಿದ್ದರಾಮಯ್ಯ ಎಲ್ಲಿ ಹೋದರು? ಸಿದ್ದರಾಮಯ್ಯ ಬದಲಾಗ್ತಾರೆ ಅಂತಾ ನಾನು ಹೇಳಿದ್ದು ನಿಜ ಆಗಿದೆ. ಸಚಿವರೇ ಇಲ್ಲದೆ ಸದನ ಕರೆಯಲು ಇವರು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಕರ್ನಾಟಕ ಹೈಕೋರ್ಟ್‌ನಲ್ಲಿ 73 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳ ನೇಮಕಾತಿ; ಪದವೀಧರರಿಗೆ ಉತ್ತಮ ಅವಕಾಶ – Kannada News | Karnataka High Court Recruitment 2026: Degree Holders Can Apply for 73 Posts

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (Assistant Court Secretary) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 73 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 30, 2026ರೊಳಗೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಯಾವುದಾದರೂ ಪದವಿ ಪಡೆದಿರಬೇಕು.

  • ಕಾನೂನು ಪದವಿ (LLB)
  • ವಿಜ್ಞಾನ ಪದವಿ (B.Sc)
  • ಕಲಾ ಪದವಿ (BA)
  • ವಾಣಿಜ್ಯ ಪದವಿ (B.Com)
  • ಬಿಸಿನೆಸ್ ಅಡ್ಮಿನಿಸ್ಟ್ರೇಶನ್
  • ಕಂಪ್ಯೂಟರ್ ಅಪ್ಲಿಕೇಶನ್
  • ಎಂಬಿಎ

ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ
ವಯೋಮಿತಿ ಸಡಿಲಿಕೆ
SC/ST/Category-1 ಅಭ್ಯರ್ಥಿಗಳು – 5 ವರ್ಷ
Category 2A/2B/3A/3B ಅಭ್ಯರ್ಥಿಗಳು – 3 ವರ್ಷ

ಅರ್ಜಿ ಶುಲ್ಕ

ಪ್ರಾಥಮಿಕ ಪರೀಕ್ಷೆ
SC/ST/Cat-I/PwBD – ರೂ. 250
ಸಾಮಾನ್ಯ/2A/2B/3A/3B – ರೂ. 500
ಮುಖ್ಯ ಪರೀಕ್ಷೆ
SC/ST/Cat-I/PwBD – ರೂ. 750
ಸಾಮಾನ್ಯ/2A/2B/3A/3B – ರೂ. 1,500
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ನಾಲ್ಕು ಹಂತಗಳಲ್ಲಿ ನಡೆಯಲಿದೆ.

ಪ್ರಾಥಮಿಕ ಪರೀಕ್ಷೆ (Preliminary Examination): ಮೊದಲ ಹಂತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಪ್ರಿಲಿಮಿನರಿ ಪರೀಕ್ಷೆ ನಡೆಸಲಾಗುತ್ತದೆ.

ಮುಖ್ಯ ಲಿಖಿತ ಪರೀಕ್ಷೆ (Main Written Examination): ಪ್ರಿಲಿಮ್ಸ್‌ನಲ್ಲಿ ಅರ್ಹರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬೇಕು.

ಸ್ಟೆನೋಗ್ರಫಿ ಪರೀಕ್ಷೆ: ಈ ಹುದ್ದೆಗೆ ವೇಗವಾಗಿ ಶಾರ್ಟ್‌ಹ್ಯಾಂಡ್ ಹಾಗೂ ಟೈಪಿಂಗ್ ಮಾಡುವ ಸಾಮರ್ಥ್ಯ ಅಗತ್ಯವಾಗಿರುವುದರಿಂದ ಸ್ಟೆನೋಗ್ರಫಿ ಪರೀಕ್ಷೆ ನಡೆಸಲಾಗುತ್ತದೆ.

ಸಂದರ್ಶನ (Interview): ಕೊನೆಯ ಹಂತದಲ್ಲಿ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಈ ಕ್ರಮವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

ಹಂತ 1: ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ.

ಹಂತ 3: ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.

ಹಂತ 4: ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ.

ಹಂತ 5: ಅಗತ್ಯ ದಾಖಲೆಗಳು, ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.

ಹಂತ 6: ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಹಂತ 7: ಅರ್ಜಿ ಸಲ್ಲಿಸಿದ ಬಳಿಕ Application Number ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ಪ್ರಮುಖ ದಾಖಲೆಗಳು

  • SSLC ಅಂಕಪಟ್ಟಿ
  • ಪದವಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಆಧಾರ್ ಕಾರ್ಡ್
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಸಹಿ
  • ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
  • ಹೆಚ್ಚುವರಿ ಮಾಹಿತಿ

ಈ ಹುದ್ದೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ನ್ಯಾಯಮೂರ್ತಿಗಳ ಕಚೇರಿ ಕಾರ್ಯ, ಡಿಕ್ಟೇಶನ್ ತೆಗೆದುಕೊಳ್ಳುವುದು, ಶಾರ್ಟ್‌ಹ್ಯಾಂಡ್ ಬರೆಯುವುದು, ನ್ಯಾಯಾಲಯದ ದಾಖಲೆಗಳ ನಿರ್ವಹಣೆ, ಟೈಪಿಂಗ್ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳಿಗೆ ಉತ್ತಮ ಸ್ಟೆನೋಗ್ರಫಿ ಹಾಗೂ ಕಂಪ್ಯೂಟರ್ ಜ್ಞಾನ ಇದ್ದರೆ ಹೆಚ್ಚಿನ ಅನುಕೂಲವಾಗುತ್ತದೆ.

ಅಧಿಕೃತ ವೆಬ್‌ಸೈಟ್

https://karnatakajudiciary.kar.nic.in

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ಕರ್ನಾಟಕ ಹೈಕೋರ್ಟ್ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳ ಸಂಖ್ಯೆ ಎಷ್ಟು?

ಉತ್ತರ: ಒಟ್ಟು 73 ಹುದ್ದೆಗಳು ಖಾಲಿ ಇದ್ದು, RPC – 62 ಹಾಗೂ KKR – 11 ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?

ಉತ್ತರ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು, ವಿಜ್ಞಾನ, ಕಲಾ, ವಾಣಿಜ್ಯ, BBA, BCA ಅಥವಾ MBA ಪದವಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಪರೀಕ್ಷೆಗಳಿರುತ್ತವೆ?

ಉತ್ತರ: ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಸ್ಟೆನೋಗ್ರಫಿ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದೆ.

ವೇತನ ಎಷ್ಟು ದೊರೆಯುತ್ತದೆ?

ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹44,900 ರಿಂದ ₹1,42,400 ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: 30 ಜುಲೈ 2026 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.

Source link

7 ವರ್ಷಗಳ ಬಳಿಕ ಚಿತ್ರರಂಗಕ್ಕೆ ನಟ ಗೋವಿಂದ ಕಮ್‌ಬ್ಯಾಕ್; ಹೊಸ ಸಿನಿಮಾ ‘ರೂಪಾ’ ಘೋಷಣೆ – Kannada News | Actor Govinda announces Comeback Film Roopa after Seven years with new actress

ಬಾಲಿವುಡ್‌ನ ಹಿರಿಯ ನಟ ಗೋವಿಂದ (Govinda) ಅವರು ಸರಿಸುಮಾರು 7 ವರ್ಷಗಳ ಸುದೀರ್ಘ ಬಿಡುವಿನ ನಂತರ ಮತ್ತೆ ಬೆಳ್ಳಿಪರದೆಗೆ ಮರಳಲು ಸಜ್ಜಾಗಿದ್ದಾರೆ. ತಮ್ಮ ಮುಂಬರುವ ಹೊಸ ಚಿತ್ರ ‘ರೂಪಾ’ (Roopa) ಮೂಲಕ ಅವರು ಚಿತ್ರರಂಗಕ್ಕೆ ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ಗೋವಿಂದ ಅವರಿಗೆ ಜೋಡಿಯಾಗಿ ಹೊಸ ನಟಿ ರಾಣಿ ಸ್ವರ್ಣಕಾರ್ ನಟಿಸಲಿದ್ದಾರೆ.

ಕೇವಲ ನಾಯಕನಾಗಿ ನಟಿಸುವುದು ಮಾತ್ರವಲ್ಲದೆ, ಸ್ವತಃ ಗೋವಿಂದ ಅವರೇ ‘ರೂಪಾ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ದೀರ್ಘ ವಿರಾಮದ ನಂತರ ಚಿತ್ರರಂಗಕ್ಕೆ ಮರಳುತ್ತಿರುವ ಕುರಿತು ಮಾತನಾಡಿದ ಗೋವಿಂದ, ‘ನನ್ನ ಸಿನಿ ಜರ್ನಿ ಮುಗಿದೇ ಹೋಯಿತು ಎಂದು ಜನರು ಹಲವು ಬಾರಿ ಮಾತನಾಡಿಕೊಂಡಿದ್ದರು. ಇನ್ಮುಂದೆ ಇವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೂ ಹೇಳುತ್ತಿದ್ದರು. ಆದರೆ ನಾನು ಪ್ರತಿ ಬಾರಿಯೂ ಮತ್ತೆ ಹೊಸದಾಗಿ ಆರಂಭಿಸುತ್ತೇನೆ’ ಎಂದು ಗೋವಿಂದ ಹೇಳಿದ್ದಾರೆ.

ಹೊಸ ಪೀಳಿಗೆಯ ಪ್ರೇಕ್ಷಕರಿಗಾಗಿ:

‘ನಾನು ಅಂದುಕೊಂಡಿರುವುದನ್ನು ‘ರೂಪಾ’ ಸಿನಿಮಾ ಸಾಧಿಸಲಿದೆ ಮತ್ತು ತನ್ನದೇ ಆದ ಮ್ಯಾಜಿಕ್ ಸೃಷ್ಟಿಸಲಿದೆ ಎಂಬ ನಂಬಿಕೆ ನನಗಿದೆ. ಈ ಸಿನಿಮಾ ವಿಶೇಷವಾಗಿ ಯುವ ಪೀಳಿಗೆಯನ್ನು ಪ್ರೇರೇಪಿಸಲಿದೆ. ಯುವಕರು ಇದನ್ನು ಥಿಯೇಟರ್‌ಗಳಲ್ಲಿ ನೋಡಿದಾಗ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಅವರಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಆಶಯವನ್ನು ಗೋವಿಂದ ವ್ಯಕ್ತಪಡಿಸಿದರು.

ಯಶಸ್ಸಿನ ನಿರೀಕ್ಷೆಯಲ್ಲಿ ಹಿರಿಯ ನಟ:

90ರ ದಶಕದಲ್ಲಿ ತಮ್ಮ ಅದ್ಭುತ ಕಾಮಿಡಿ ಟೈಮಿಂಗ್, ಅದ್ಭುತ ನೃತ್ಯ ಮತ್ತು ಕೌಟುಂಬಿಕ ಚಿತ್ರಗಳ ಮೂಲಕ ಬಾಲಿವುಡ್‌ನ ಅಲ್ಟಿಮೇಟ್ ಎಂಟರ್‌ಟೈನರ್ ಆಗಿ ಗೋವಿಂದ ಮಿಂಚಿದ್ದರು. ಅವರು ಕೊನೆಯದಾಗಿ 2019ರಲ್ಲಿ ತೆರೆಕಂಡ ‘ರಂಗೀಲಾ ರಾಜ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಿರಲಿಲ್ಲ. ಇದೀಗ ‘ರೂಪಾ’ ಚಿತ್ರದ ಮೂಲಕ ಗೋವಿಂದ ಅವರು ಭರ್ಜರಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಮತ್ತೊಂದು ಶಾಕ್; ಕುಸಿದುಬಿದ್ದು ಆಸ್ಪತ್ರೆ ಸೇರಿದ ನಟ ಗೋವಿಂದ

ಗೋವಿಂದ ಜೀವನದಲ್ಲಿ 14 ಲಕ್ಕಿ ನಂಬರ್:

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಹೊಂದಿರುವ ಗೋವಿಂದ ಅವರು ತಮ್ಮ ಜೀವನದಲ್ಲಿ 14ರ ಸಂಖ್ಯೆ ಎಷ್ಟು ಅದೃಷ್ಟ ತಂದಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ‘ನನಗೆ 14 ವರ್ಷ ವಯಸ್ಸಾಗಿದ್ದಾಗಿನಿಂದಲೇ ನಾನು ಸಂಖ್ಯಾಶಾಸ್ತ್ರವನ್ನು ನಂಬಲು ಶುರು ಮಾಡಿದೆ. ದೇವರ ಕೃಪೆಯಿಂದ ನಾನು ಒಂದೇ ವಾರದಲ್ಲಿ 14 ಸಿನಿಮಾಗಳಿಗೆ ಸಹಿ ಮಾಡಿದ್ದೆ, ಅದು ನನ್ನನ್ನು 14 ವರ್ಷಗಳ ಕಾಲ ಸೂಪರ್ ಸ್ಟಾರ್ ಆಗಿ ಉಳಿಸಿತು. ಆ ನಂತರ 14ನೇ ಲೋಕಸಭೆಯ ಸಂಸದನೂ ಆದೆ. ತದನಂತರ ಮತ್ತೆ ಚಿತ್ರರಂಗಕ್ಕೆ ಮರಳುವ ಮುನ್ನ 14 ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಬೇಕಾಯಿತು. ಈ ಬಾರಿ ನಾನು ಮತ್ತಷ್ಟು ಕಾಯಲು ಬಯಸಲಿಲ್ಲ. ಹಾಗಾಗಿ ಮತ್ತೆ ಹೊಸದಾಗಿ ಆರಂಭಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version