ನಿಮ್ಮ ಕುಟುಂಬದವರ ಕಾಲ್ ಡೀಟೇಲ್ಸ್ ತೆಗೆಸಲು ಅವಕಾಶ ಇದೆಯಾ? ಸಿಡಿಆರ್ ರಿಪೋರ್ಟ್ ಯಾರಿಗೆಲ್ಲಾ ಸಿಗುತ್ತೆ? – Kannada News | CDR, Call Details Record, know who have access and who don’t have, here is legal info

ಮೊಬೈಲ್ ಬಳಕೆಯ ಸಾಂದರ್ಭಿಕ ಚಿತ್ರImage Credit source: Getty Images

ಮೊಬೈಲ್ ಫೋನ್ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ಸಂದರ್ಭದಲ್ಲಿ, “ಯಾರಾದರೂ ನನ್ನ ಕಾಲ್ ಡಿಟೇಲ್ಸ್ ಅಥವಾ ಕಾಲ್ ಹಿಸ್ಟರಿಯನ್ನು (Call Detail Record – CDR) ಪಡೆದುಕೊಳ್ಳಬಹುದೇ? ನನ್ನ ಕುಟುಂಬದವರು, ಸ್ನೇಹಿತರು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳು ನನ್ನ ಅನುಮತಿ ಇಲ್ಲದೆ ಟೆಲಿಕಾಂ ಕಂಪನಿಗಳಿಂದ ಈ ಮಾಹಿತಿ ಹೊರತೆಗೆಯಲು ಸಾಧ್ಯವೇ?” ಎಂಬ ಆತಂಕ ಹಾಗೂ ಗೊಂದಲ ಹಲವರಲ್ಲಿ ಇರುತ್ತದೆ. ಕಾಲ್ ಡಿಟೇಲ್ಸ್ ಯಾರಿಗೆ ಸಿಗುತ್ತದೆ ಮತ್ತು ಕಾನೂನು ಏನು ಹೇಳುತ್ತದೆ? ಭಾರತೀಯ ಕಾನೂನು ಮತ್ತು ಗೌಪ್ಯತೆ ನಿಯಮಗಳ ಪ್ರಕಾರ, ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿದೆ.

ಕಾಲ್ ಡಿಟೇಲ್ಸ್ (CDR) ಎಂದರೇನು? ಅದರಲ್ಲಿ ಏನಿರುತ್ತದೆ?

ಕಾಲ್ ಡಿಟೇಲ್ಸ್ ಎನ್ನುವುದು ನಿಮ್ಮ ಸಿಮ್ ಕಾರ್ಡ್ ಬಳಕೆಯ ತಾಂತ್ರಿಕ ದಾಖಲೆಯಾಗಿದೆ. ಇದರಲ್ಲಿ ಈ ಕೆಳಗಿನ ವಿವರಗಳಿರುತ್ತವೆ:

  • ನೀವು ಯಾರಿಗೆ ಫೋನ್ ಮಾಡಿದ್ದೀರಿ ಮತ್ತು ಯಾರಿಂದ ಫೋನ್ ಬಂದಿದೆ (ಫೋನ್ ನಂಬರ್ ವಿವರಗಳು).
  • ಯಾವ ದಿನಾಂಕ ಮತ್ತು ಎಷ್ಟು ಗಂಟೆಗೆ ಮಾತನಾಡಿದ್ದೀರಿ.
  • ಕರೆ ಎಷ್ಟು ನಿಮಿಷ/ಸೆಕೆಂಡ್ ಇತ್ತು (Call Duration).
  • ಎಸ್‌ಎಂಎಸ್ (SMS) ಕಳುಹಿಸಿದ ಮತ್ತು ಸ್ವೀಕರಿಸಿದ ವಿವರಗಳು ಹಾಗೂ ಕರೆ ಮಾಡುವಾಗ ನೀವು ಯಾವ ಮೊಬೈಲ್ ಟವರ್ ವ್ಯಾಪ್ತಿಯಲ್ಲಿದ್ದೀರಿ (Location).

ಗಮನಿಸಬೇಕಾದ ಸಂಗತಿ ಎಂದರೆ, ಕಾಲ್ ಡಿಟೇಲ್ಸ್‌ನಲ್ಲಿ ನಿಮ್ಮ ಫೋನ್ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಇರುವುದಿಲ್ಲ. ಕೇವಲ ಕರೆಯ ತಾಂತ್ರಿಕ ದಾಖಲೆಗಳು ಮಾತ್ರ ಇರುತ್ತವೆ.

ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು

ಸಾಮಾನ್ಯ ವ್ಯಕ್ತಿಗಳಿಗೆ ಅಥವಾ ಕುಟುಂಬದವರಿಗೆ ಸಿಡಿಆರ್ ಸಿಗುತ್ತದೆಯೇ?

ಸಾಮಾನ್ಯ ವ್ಯಕ್ತಿಗಳಿಗೆ ಇದು ಖಂಡಿತವಾಗಿಯೂ ಸಿಗುವುದಿಲ್ಲ. ಭಾರತದಲ್ಲಿ ಟೆಲಿಕಾಂ ಕಂಪನಿಗಳು (Airtel, Jio, Vi, BSNL ಇತ್ಯಾದಿ) ಗ್ರಾಹಕರ ಕಾಲ್ ಡಿಟೇಲ್ಸ್ ಅನ್ನು ಅತ್ಯಂತ ಗೌಪ್ಯ ಮಾಹಿತಿ (Confidential Data) ಎಂದು ಪರಿಗಣಿಸುತ್ತವೆ.

ಯಾವುದೇ ಸಾಮಾನ್ಯ ವ್ಯಕ್ತಿ, ಖಾಸಗಿ ಪತ್ತೇದಾರಿ ಸಂಸ್ಥೆ (Private Investigators), ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿಗೂ ಸಹ ಟೆಲಿಕಾಂ ಕಂಪನಿಗಳು ಈ ಮಾಹಿತಿಯನ್ನು ನೀಡುವುದಿಲ್ಲ.

ಗ್ರಾಹಕರ ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಯನ್ನು (Privacy) ರಕ್ಷಿಸುವುದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ನಿಯಮಗಳ ಅಡಿಯಲ್ಲಿ ಕಂಪನಿಗಳ ಕಾನೂನಾತ್ಮಕ ಜವಾಬ್ದಾರಿಯಾಗಿದೆ.

ಕಾನೂನುಬದ್ಧವಾಗಿ ಯಾರಿಗೆ ಸಿಡಿಆರ್ ಸಿಗಬಹುದು?

ಭಾರತೀಯ ಕಾನೂನಿನ ಪ್ರಕಾರ, ಕೇವಲ ನಿರ್ದಿಷ್ಟ ಮತ್ತು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಅಧಿಕೃತ ಸಂಸ್ಥೆಗಳಿಗೆ CDR ನೀಡಲಾಗುತ್ತದೆ:

  • ಪೊಲೀಸ್ ಮತ್ತು ತನಿಖಾ ಸಂಸ್ಥೆಗಳು: ಯಾವುದೇ ಗಂಭೀರ ಅಪರಾಧ ಪ್ರಕರಣದ ತನಿಖೆ ನಡೆಯುತ್ತಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು (ಸಾಮಾನ್ಯವಾಗಿ ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳ ಅನುಮತಿಯೊಂದಿಗೆ) ಲಿಖಿತ ರೂಪದಲ್ಲಿ ಟೆಲಿಕಾಂ ಕಂಪನಿಗೆ ವಿನಂತಿ ಸಲ್ಲಿಸಿ ಸಿಡಿಆರ್ ಪಡೆಯಬಹುದು.
  • ನ್ಯಾಯಾಲಯದ ಆದೇಶ: ನ್ಯಾಯಾಲಯದಲ್ಲಿ ನಡೆಯುತ್ತಿರುವ ಯಾವುದೇ ಪ್ರಕರಣಕ್ಕೆ (ಉದಾಹರಣೆಗೆ ವಿಚ್ಛೇದನ, ವಂಚನೆ, ಕ್ರಿಮಿನಲ್ ಪ್ರಕರಣ) ಸಿಡಿಆರ್ ಅಗತ್ಯವಿದ್ದರೆ, ನ್ಯಾಯಾಧೀಶರ ಅಧಿಕೃತ ಆದೇಶದ (Court Order) ಮೇರೆಗೆ ಕಂಪನಿಗಳು ಕೋರ್ಟ್‌ಗೆ ಈ ದಾಖಲೆ ಸಲ್ಲಿಸುತ್ತವೆ.
  • ರಾಷ್ಟ್ರೀಯ ಭದ್ರತಾ ಸಂಸ್ಥೆಗಳು: ದೇಶದ ಭದ್ರತೆಗೆ ಧಕ್ಕೆಯಾಗುವಂತಹ ಸಂದರ್ಭಗಳಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ (CBI, ED, IB) ಇದನ್ನು ಪಡೆಯುವ ವಿಶೇಷ ಅಧಿಕಾರವಿರುತ್ತದೆ.

ಇದನ್ನೂ ಓದಿ: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ

ಕಾನೂನುಬಾಹಿರವಾಗಿ ಕಾಲ್ ರೆಕಾರ್ಡ್ ಪಡೆಯುವುದು ಗಂಭೀರ ಅಪರಾಧ

ಯಾರಾದರೂ ಹಣದ ಆಮಿಷ ಒಡ್ಡಿ ಅಥವಾ ಹ್ಯಾಕಿಂಗ್ ಮೂಲಕ ಮತ್ತೊಬ್ಬರ ಕಾಲ್ ಡಿಟೇಲ್ಸ್ ತಂದುಕೊಡುವುದಾಗಿ ಹೇಳಿದರೆ ಅದು ಕಾನೂನುಬಾಹಿರ. ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act, 2000) ಮತ್ತು ಇತ್ತೀಚಿನ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (DPDP Act) ಅಡಿಯಲ್ಲಿ ಇತರರ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಡೇಟಾ ಕಳುವು ಮಾಡುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಗ್ರಾಹಕರಿಗೆ ಮೊಬೈಲ್ ಬಿಲ್‌ಗಳ ಮೂಲಕ ವಿವರ

ಕೆಲವು ಟೆಲಿಕಾಂ ಕಂಪನಿಗಳು ಪೋಸ್ಟ್‌ಪೇಯ್ಡ್ (Postpaid) ಬಳಕೆದಾರರಿಗೆ ಮಾಸಿಕ ಬಿಲ್ ಜೊತೆಗೆ ಅವರು ಕರೆ ಮಾಡಿದ ನಂಬರ್‌ಗಳ ವಿವರವನ್ನು ನೀಡುತ್ತವೆ. ಆದರೆ ಇದು ಕೇವಲ ಆ ನಿರ್ದಿಷ್ಟ ಸಿಮ್ ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆಯೇ ಹೊರತು ಬೇರೆಯವರಿಗೆ ಸಿಗುವುದಿಲ್ಲ.

ನಿಮ್ಮ ಸಿಡಿಆರ್ ಅನ್ನು ಅನುಮತಿ ಇಲ್ಲದೆ ತೆಗೆಸಿದಾಗ ನೀವೇನು ಮಾಡಬೇಕು?

ಯಾರಾದರೂ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಕಾಲ್ ಹಿಸ್ಟರಿಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಥವಾ ನಿಮ್ಮ ಗೌಪ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅನಿಸಿದರೆ, ನೀವು ತಕ್ಷಣವೇ ನಿಮ್ಮ ಟೆಲಿಕಾಂ ಕಂಪನಿಯ ಗ್ರಾಹಕ ಸೇವೆಗೆ ದೂರು ನೀಡಬಹುದು ಅಥವಾ ಹತ್ತಿರದ ಸೈಬರ್ ಕ್ರೈಮ್ ಸೆಲ್ (Cyber Crime Cell) ಅನ್ನು ಸಂಪರ್ಕಿಸಿ ಕಾನೂನು ಕ್ರಮ ಜರುಗಿಸಬಹುದು.

(ಗಮನಿಸಿ: ಇದು ಕೇವಲ ಸಾರ್ವತ್ರಿಕ ಕಾನೂನು ಮಾಹಿತಿಯಾಗಿದೆ. ನಿಮ್ಮ ಯಾವುದೇ ನಿರ್ದಿಷ್ಟ ಪ್ರಕರಣಗಳಿಗೆ ಕಾನೂನು ತಜ್ಞರ ಅಥವಾ ವಕೀಲರ ಅಧಿಕೃತ ಸಲಹೆ ಪಡೆಯುವುದು ಸೂಕ್ತ).

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನೀವು ಜಾಣರೇ, ಈ ಲಿವಿಂಗ್ ರೂಮ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ – Kannada News | Optical Illusion: Can you tell hidden butterfly in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: the-sun.com

ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳು ಇದೀಗ ಟ್ರೆಂಡಿಂಗ್ ನಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ವೈರಲ್​ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದೆ. ನೀವು ಈ ಲಿವಿಂಗ್ ರೂಮ್ ನಲ್ಲಿರುವ ಚಿಟ್ಟೆಯನ್ನು ಹುಡುಕಬೇಕು. 5 ಸೆಕೆಂಡುಗಳೊಳಗೆ ಬಣ್ಣದ ಚಿಟ್ಟೆಯನ್ನು ಕಂಡು ಹಿಡಿಯಲು ಸಾಧ್ಯವೇ.

ಈ ಭ್ರಮೆಯ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಲಿವಿಂಗ್ ರೂಮ್ ನೋಡಬಹುದು. ಇಲ್ಲಿ ವೃದ್ಧ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಾ ಕುಳಿತಿದ್ದಾನೆ. ಈ ವಯಸ್ಸಾದ ವ್ಯಕ್ತಿಯ ಪಕ್ಕ ಸಾಕು ನಾಯಿಮರಿ ಕುಳಿತುಕೊಂಡಿದ್ದು, ನೀವು ಇಲ್ಲಿ ಅಡಗಿ ಕುಳಿತಿರುವ  ಚಿಟ್ಟೆಯನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯವಕಾಶ 5 ಸೆಕೆಂಡುಗಳು ಮಾತ್ರ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಹರಿದ ಅಂಗಿಯಲ್ಲಿ ಎಷ್ಟು ರಂಧ್ರಗಳಿವೆ ಎಂದು ಹೇಳಬಲ್ಲಿರಾ?

ಚಿಟ್ಟೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಒಗಟುಗಳನ್ನು ಬಿಡಿಸುವಲ್ಲಿ ಅನುಭವಿಗಳಾಗಿದ್ದರೂ ಈ ಟ್ರಿಕ್ಕಿ ಚಿತ್ರ ನೋಡಿ ಕ್ಷಣಾರ್ಧದಲ್ಲಿ ಉತ್ತರ ಕಂಡು ಕೊಳ್ಳುತ್ತಾರೆ. ಈ ಲಿವಿಂಗ್ ರೂಮ್ ನಲ್ಲಿರುವ ಬಣ್ಣದ ಚಿಟ್ಟೆ ಕಣ್ಣಿಗೆ ಬಿದ್ದಿತೇ. ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ನಾಯಿ ಮರಿ ಮುಂದೆ ಇರುವ ಬುಟ್ಟಿಯಲ್ಲಿ ಚಿಟ್ಟೆಯಿದೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಬೀದಿನಾಯಿಗಳ ಅಟ್ಟಹಾಸ: ಹೊಯ್ಸಳ ನಗರದಲ್ಲಿ ಒಂದೂವರೆ ತಿಂಗಳಲ್ಲಿ 3ನೇ ದಾಳಿ; ಜಿಬಿಎ ವಿರುದ್ಧ ಜನರ ಆಕ್ರೋಶ – Kannada News | Bengaluru Stray Dog Menace: Worker Attacked in Hoysala Nagar; 3rd Case Within 1.5 Months

ಬೀದಿ ನಾಯಿಗಳು (ಸಾಂದರ್ಭಿಕ ಚಿತ್ರ)Image Credit source: PTI

ಬೆಂಗಳೂರು, ಜುಲೈ 2: ಬೆಂಗಳೂರು (Bengaluru) ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಂಪೂರ್ಣ ವಿಫಲವಾಗುತ್ತಿರುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದರಲ್ಲೂ ಒಂದೇ ಪ್ರದೇಶದಲ್ಲಿ ಮೇಲಿಂದ ಮೇಲೆ ಅಮಾಯಕರ ಮೇಲೆ ಬೀದಿನಾಯಿಗಳು ಎರಗುತ್ತಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊಯ್ಸಳ ನಗರದ ಜನಸಾಮಾನ್ಯರು ರೋಸಿಹೋಗಿದ್ದಾರೆ. ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ಕಾರ್ಮಿಕನೊಬ್ಬನ ಮೇಲೆ ಬೀದಿನಾಯಿ ಭೀಕರ ದಾಳಿ ನಡೆಸಿರುವ ಘಟನೆ ನಡೆದಿದ್ದು, ಇದು ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಬೀದಿನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕ ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ರೇಬೀಸ್ ಕಾಯಿಲೆ ತಡೆಗಟ್ಟುವ ಸಲುವಾಗಿ ಈಗಾಗಲೇ ಎರಡು ಇಂಜೆಕ್ಷನ್‌ಗಳನ್ನು ಪಡೆದಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಒಂದೇ ಪ್ರದೇಶದಲ್ಲಿ ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕವನ್ನು ಹೆಚ್ಚು ಮಾಡಿದೆ.

ಒಂದೂವರೆ ತಿಂಗಳಿನಲ್ಲಿ ಇದು 3ನೇ ಪ್ರಕರಣ!

ಸ್ಥಳೀಯರ ಆರೋಪದ ಪ್ರಕಾರ, ಹೊಯ್ಸಳ ನಗರದಲ್ಲಿ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ದಾಖಲಾಗಿರುವ ಮೂರನೇ ನಾಯಿ ಕಡಿತದ ಪ್ರಕರಣ ಇದಾಗಿದೆ. ಇದೇ ಬೀದಿನಾಯಿಗಳ ಗುಂಪು ಈ ಹಿಂದೆ ಯುವತಿಯೊಬ್ಬರು ಹಾಗೂ ಮತ್ತೊಬ್ಬ ಕಾರ್ಮಿಕನ ಮೇಲೂ ಅತ್ಯಂತ ಕ್ರೂರವಾಗಿ ದಾಳಿ ನಡೆಸಿತ್ತು. ನಿರಂತರವಾಗಿ ನಡೆಯುತ್ತಿರುವ ಈ ನಾಯಿ ದಾಳಿಗಳಿಂದ ನಿವಾಸಿಗಳು ಭಯಭೀತರಾಗಿದ್ದು, ಮಕ್ಕಳು, ಹಿರಿಯರು ಹಾಗೂ ನಿತ್ಯ ಕೆಲಸಕ್ಕೆ ತೆರಳುವವರು ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ.

ಪಶು ಸಂಗೋಪನಾ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೀದಿನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಸಾರ್ವಜನಿಕರ ಸುದೀರ್ಘ ಒತ್ತಾಯದ ನಡುವೆಯೇ ಮತ್ತೊಂದು ದಾಳಿ ನಡೆದಿರುವುದು ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾಯಿ ಕಡಿತದ ಪ್ರಕರಣಗಳಿಂದಲೇ ಪ್ರಸ್ತುತ ಹೆಚ್ಚು ಸುದ್ದಿಯಾಗುತ್ತಿರುವ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ತಕ್ಷಣವೇ ಸಮಗ್ರ ಕ್ರಮ ಕೈಗೊಳ್ಳಬೇಕು ಮತ್ತು ಬೀದಿನಾಯಿಗಳ ಹಾವಳಿಗೆ ಸೂಕ್ತ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ಜಿಬಿಎ ಅಧಿಕಾರಿಗಳನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ IAS ಅಧಿಕಾರಿಗಳ ವರ್ಗಾವಣೆ: ಹೊಸ ಪ್ರಜಾಸೇವೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ನೇಮಕ – Kannada News | Karnataka Governmnet Transfers IAS Officers, Harsha Gupta PS for Praja Seva Department

ಬೆಂಗಳೂರು, (ಜುಲೈ 02): ಕರ್ನಾಟಕ ಸರ್ಕಾರವು (Karnataka Governmnet) ಸಾಲು ಸಾಲು ಐಎಎಸ್ ಅಧಿಕಾರಿಗಳ (IAS Officers) ವರ್ಗಾವಣೆ ಮಾಡುತ್ತಿದ್ದು, ಅದರಂತೆ ಇಂದು(ಜುಲೈ 02) ಸಹ ಐದು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿ ಮುಂದುವರೆದಿದ್ದು, ಅಧಿಕಾರಿಗಳ ಮನವಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಈ ಐದು ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅದರಲ್ಲೂ ಮುಖ್ಯವಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಜಾರಿಗೆ ತಂದಿರುವ ಪ್ರಜಾ ಸೇವಾ ಇಲಾಖೆಯ (Praja Seva Department) ಪ್ರಧಾನ ಕಾರ್ಯದರ್ಶಿಯಾಗಿ ಹರ್ಷ ಗುಪ್ತ ಅವರನ್ನು ನೇಮಕ ಮಾಡಲಾಗಿದೆ.

ಹರ್ಷ ಗುಪ್ತ ಹೆಗಲಿಗೆ ಪ್ರಜಾ ಸೇವಾ ಇಲಾಖೆ

ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೂತನ ಆರಂಭಿಸಿರುವ ‘ಪ್ರಜಾ ಸೇವಾ ಇಲಾಖೆ’ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜೊತೆಗೆ ಅವರು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ನೀಡಲಾಗಿದೆ. ಇನ್ನು ಹುದ್ದೆ ನಿರೀಕ್ಷೆಯಲ್ಲಿದ್ದ ಆರ್. ರಾಗಪ್ರಿಯ ಅವರನ್ನು ಕಾರ್ಮಿಕ ಇಲಾಖೆಯ ಆಯಕ್ತರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಸರ್ಕಾರ ಅಂದ್ಮೇಲೆ ನ್ಯೂನತೆ ಸಾಕಷ್ಟಿರುತ್ತೆ, 2 ಲಕ್ಷ ಜನರಿಗೆ ಗೃಹಲಕ್ಷ್ಮಿ ಕೊಡ್ತಾ ಇಲ್ಲ: ಲೋಪ ಒಪ್ಪಿಕೊಂಡ ಬಸವರಾಜ್ ರಾಯರೆಡ್ಡಿ

ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಡಾ. ಗೋಪಾಲ ಕೃಷ್ಣ ಅವರನ್ನು ಕಾಲೇಜು ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಇನ್ನು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಎನ್. ಮಂಜುಶ್ರೀ ಅವರಿಗೆ ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.

ಪ್ರಜಾಸೇವಾ ಇಲಾಖೆ ಬಗ್ಗೆ

ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮಹತ್ತರ ಹೆಜ್ಜೆಯಿಟ್ಟಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಘೋಷಿಸಿದ್ದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಇಲಾಖೆ’ಯನ್ನು ಹೊಸದಾಗಿ ಸ್ಥಾಪಿಸಿ ಈಗ ಅಧಿಕೃತ ಆದೇಶ ಹೊರಡಿಸಲಾಗಿದೆ. ಜೂನ್ 20 ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ , ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಜೂನ್ 24 ರಂದು ಈ ಹೊಸ ಇಲಾಖೆಯನ್ನು ಸೃಜಿಸಿ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ‘ಪ್ರಜಾಸೇವಾ ಇಲಾಖೆ’ಯನ್ನು ಹೊಸದಾಗಿ ಸ್ಥಾಪಿಸಿದೆ. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿಯೋಜನೆ

ಹೊಸ ಇಲಾಖೆಯ ಆಡಳಿತ ವಿನ್ಯಾಸದ ಕುರಿತು ಸ್ಪಷ್ಟ ಆದೇಶ ಹೊರಡಿಸಲಾಗಿದ್ದು , ಒಟ್ಟು 73 ಮಂಜೂರಾದ ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಷ್ಟಿಸಲಾಗಿದೆ. ಇದರಲ್ಲಿ ಸರ್ಕಾರದ ಕಾರ್ಯದರ್ಶಿ ಹಾಗೂ ಮಿಷನ್ ನಿರ್ದೇಶಕರು, ಅಪರ ಮಿಷನ್ ನಿರ್ದೇಶಕರು, ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಹುದ್ದೆಗಳು ಸೇರಿವೆ. ಇದರೊಂದಿಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳ ನಿರ್ವಹಣೆಗಾಗಿ ಒಟ್ಟು 48 ಹುದ್ದೆಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅದರಂತೆ ಇದೀಗ ಪ್ರಜಾಸೇವಾ ಇಲಾಖೆ ಇಲಾಖೆಗೆ ಹರ್ಷ ಗುಪ್ತಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NHSRCL Recruitment 2026: ಬುಲೆಟ್ ಟ್ರೈನ್ ಯೋಜನೆಯಲ್ಲಿ 224 ಹುದ್ದೆಗಳ ಭರ್ತಿ; 1.25 ಲಕ್ಷದವರೆಗೆ ಸಂಬಳ! – Kannada News | NHSRCL Recruitment 2026: 224 Bullet Train Project Jobs! Apply Now for High Speed Rail

ದೇಶದ ಅತ್ಯಂತ ಮಹತ್ವಾಕಾಂಕ್ಷಿ ಮೊದಲ ಬುಲೆಟ್ ಟ್ರೈನ್ ಯೋಜನೆಯ ನಿರ್ಮಾಣ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಭರ್ಜರಿ ಉದ್ಯೋಗಾವಕಾಶವನ್ನು ಪ್ರಕಟಿಸಿದೆ. ಒಟ್ಟು 224 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಇದರಲ್ಲಿ 209 ನಾನ್-ಎಗ್ಸಿಕ್ಯೂಟಿವ್ ಮತ್ತು 15 ಎಗ್ಸಿಕ್ಯೂಟಿವ್ ಶ್ರೇಣಿಯ ಹುದ್ದೆಗಳು ಸೇರಿವೆ. ಆಧುನಿಕ ರೈಲ್ವೆ ಯೋಜನೆಯಲ್ಲಿ ಕೆಲಸ ಮಾಡುವ ಆಸೆಯುಳ್ಳ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿವಿಧ ವಿಭಾಗಗಳಲ್ಲಿರುವ ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಅತ್ಯಂತ ಹೆಚ್ಚಾಗಿ 55 ಹುದ್ದೆಗಳು ಸ್ಟೇಷನ್ ಮ್ಯಾನೇಜರ್, ಟ್ರೈನ್ ಮ್ಯಾನೇಜರ್, ಡಿಪೋ ಕಂಟ್ರೋಲರ್ ಮತ್ತು ಆಪರೇಷನ್ಸ್ ಕಂಟ್ರೋಲರ್ ವಿಭಾಗಗಳಲ್ಲಿವೆ. ಇದರೊಂದಿಗೆ ಎಲೆಕ್ಟ್ರಿಕಲ್, ಸಿವಿಲ್, ಟ್ರ್ಯಾಕ್, ಸಿಗ್ನಲ್ ಮತ್ತು ಟೆಲಿಕಾಂ, ರೋಲಿಂಗ್ ಸ್ಟಾಕ್ ಹಾಗೂ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್ ವಿಭಾಗಗಳಲ್ಲಿ ಜೂನಿಯರ್ ಇಂಜಿನಿಯರ್ (JE) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಐಟಿ (IT) ಮತ್ತು ಭದ್ರತಾ ವಿಭಾಗಗಳಲ್ಲೂ ಉದ್ಯೋಗಾವಕಾಶಗಳಿವೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಅಭ್ಯರ್ಥಿಗಳು ಸಂಬಂಧಪಟ್ಟ ವಿಭಾಗದಲ್ಲಿ ಮೂರು ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಬಿ.ಇ/ಬಿ.ಟೆಕ್ (BE/B.Tech) ಪದವಿ ಹೊಂದಿರಬೇಕು. ಭಾರತೀಯ ರೈಲ್ವೆ, ಸರ್ಕಾರಿ ಮೆಟ್ರೋ ಅಥವಾ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ನ ಕಾರ್ಯಾಚರಣೆ ಮತ್ತು ನಿರ್ವಹಣಾ (O&M) ವಿಭಾಗದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಇರಬೇಕು. 31 ಮೇ 2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.

ಆಕರ್ಷಕ ಸಂಬಳ ಮತ್ತು ಸರ್ಕಾರಿ ಸವಲತ್ತುಗಳು:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಆಧಾರದ ಮೇಲೆ ಪ್ರತಿ ತಿಂಗಳು ₹40,000 ರಿಂದ ₹1,25,000 ವರೆಗೆ ಆಕರ್ಷಕ ವೇತನ ದೊರೆಯಲಿದೆ. ಇದರೊಂದಿಗೆ ಇಂಡಸ್ಟ್ರಿಯಲ್ ಡಿಎ (IDA), ಮನೆ ಬಾಡಿಗೆ ಭತ್ಯೆ (HRA), ವೈದ್ಯಕೀಯ ಸೌಲಭ್ಯ ಮತ್ತು ಇತರ ಸರ್ಕಾರಿ ಭತ್ಯೆಗಳ ಲಾಭವೂ ಸಿಗಲಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಕೆಯ ದಿನಾಂಕ ಮತ್ತು ಪ್ರಕ್ರಿಯೆ:

ಆಸಕ್ತರು NHSRCL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ (General/OBC/EWS) ವರ್ಗದ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

  • ಎಗ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಜುಲೈ 2026
  • ನಾನ್-ಎಗ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜುಲೈ 2026

ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಅದರಲ್ಲಿ ತೇರ್ಗಡೆಯಾದವರಿಗೆ ದಾಖಲಾತಿ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯನ್ನು (Medical Fitness Test) ನಡೆಸಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಮಾಜಿ ಕೋಚ್ ಜೊತೆಗೂಡಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ – Kannada News | Virat Kohli Training: Prepares for India vs England ODIs with Sanjay Bangar

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಪ್ರಸ್ತುತ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಜುಲೈ 14 ರಂದು ನಡೆಯಲಿದೆ. ಈ ಸರಣಿಗೆ ಟೀಂ ಇಂಡಿಯಾವನ್ನು ಸಹ ಆಯ್ಕೆ ಮಾಡಲಾಗಿದೆ. ಗಾಯದ ಕಾರಣದಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ (Virat Kohli) ಇದೀಗ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಲು ಸಜ್ಜಾಗಿದ್ದಾರೆ. ಹೀಗಾಗಿ ಪ್ರಸ್ತುತ ಇಂಗ್ಲೆಂಡ್​ನಲ್ಲಿ ನೆಲೆಸಿರುವ ಕೊಹ್ಲಿ, ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ನೇತೃತ್ವದಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ವಿಶೇಷ ತರಬೇತಿ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಕ್ಲಿಪ್‌ನಲ್ಲಿ, 37 ವರ್ಷದ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಅನ್ನು ಭುಜದ ಮೇಲೆ ಹೊತ್ತುಕೊಂಡು ತರಬೇತಿ ಮೈದಾನಕ್ಕೆ ಬರುತ್ತಾರೆ, ಅಲ್ಲಿ ಅವರನ್ನು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಸ್ವಾಗತಿಸುತ್ತಾರೆ. ನಂತರ ಇಬ್ಬರೂ ಮೈದಾನದ ಮಧ್ಯದಲ್ಲಿ ನಿಂತು ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿ ಇತ್ತೀಚೆಗೆ ಅಲಿಬಾಗ್‌ನಲ್ಲಿ ವಿಶೇಷ ಬ್ಯಾಟಿಂಗ್ ಶಿಬಿರವನ್ನು ಪೂರ್ಣಗೊಳಿಸಿದ್ದರು, ಆ ಸಮಯದಲ್ಲಿ ಬಂಗಾರ್, ಕೊಹ್ಲಿಗೆ ವಿವಿಧ ತಾಂತ್ರಿಕ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಇದೀಗ ಇಂಗ್ಲೆಂಡ್​ನಲ್ಲೂ ಈ ಜೋಡಿ ಮ್ಯಾಜಿಕ್ ಮಾಡಲು ಮುಂದಾಗಿದೆ.

ಹೊರಬಿತ್ತು ಕಿಂಗ್ ಕೊಹ್ಲಿ ಫಿಟ್ನೆಸ್ ಫಲಿತಾಂಶ; ಇಂಗ್ಲೆಂಡ್‌ ವಿರುದ್ಧ ಆಡ್ತಾರಾ ವಿರಾಟ್?

ಸಂಜಯ್ ಬಂಗಾರ್ 2014 ರಿಂದ 2019 ರವರೆಗೆ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು. ಆ ಸಮಯದಲ್ಲಿ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಬಂಗಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಕೊಹ್ಲಿಗೆ ಯಾವಾಗಲೂ ಪ್ರಯೋಜನಕಾರಿಯಾಗಿದೆ. ಹೀಗಾಗಿ 2027 ರ ಏಕದಿನ ವಿಶ್ವಕಪ್‌ಗೆ ತಯಾರಿ ದೃಷ್ಟಿಯಿಂದ ಬಹಳ ಮುಖ್ಯ ಎನಿಸಿಕೊಂಡಿರುವ ಈ ಸರಣಿಗೆ ವಿರಾಟ್ ಕೊಹ್ಲಿ ಕೂಡ ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ.

ಏಕದಿನ ಕ್ರಿಕೆಟ್​ನತ್ತ ಕೊಹ್ಲಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 14 ರಂದು ಆರಂಭವಾಗಲಿದೆ. ಐಪಿಎಲ್ 2026 ರ ನಂತರ ವಿರಾಟ್ ಕೊಹ್ಲಿ ಅವರ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. ಟೀಂ ಇಂಡಿಯಾ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಆಡಿತ್ತು, ಆದರೆ ವಿರಾಟ್ ಕೊಹ್ಲಿ ಗಾಯದಿಂದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಈಗ ಇಂಗ್ಲೆಂಡ್ ಸರಣಿಯಲ್ಲಿ ಮೈದಾನಕ್ಕೆ ಮರಳಲು ನೋಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:46 pm, Thu, 2 July 26

Source link

ಡಿಎಂಕೆ ಸೇರಲು10 ಶಾಸಕರು ಸಿದ್ಧರಿದ್ದಾರೆ ಎಂದು ಆಮಿಷ; ಟಿವಿಕೆ ಎಂಎಲ್​ಎ ಇಳಯರಾಜ ಆರೋಪ – Kannada News | DMK told 10 TVK MLAs ready to switch Stalin Party TVK MLA Alleges

ಚೆನ್ನೈ, ಜುಲೈ 2: ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಮತ್ತು ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ಪರಸ್ಪರ ಕುದುರೆ ವ್ಯಾಪಾರದ ಆರೋಪಗಳನ್ನು ಹೊರಿಸಿವೆ. ರಾಜ್ಯ ವಿಧಾನಸಭೆಯಲ್ಲಿ ಸ್ಪೀಕರ್ ವಿರುದ್ಧ ಮತ ಚಲಾಯಿಸಲು ಹಣದ ಆಮಿಷ ಒಡ್ಡಲಾಗಿದೆ ಎಂದು ಟಿವಿಕೆ ಶಾಸಕ ಎನ್. ಇಳಯರಾಜ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿದ ನಂತರ ಈ ರಾಜಕೀಯ ಸಂಘರ್ಷ ಉಂಟಾಗಿದೆ.ಪಕ್ಷಾಂತರ ಮಾಡಲು ತಮಗೆ 30 ರಿಂದ 35 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಟಿವಿಕೆ ಶಾಸಕ ಎನ್. ಇಳಯರಾಜ ಆರೋಪಿಸಿದ್ದಾರೆ. ಈಗಾಗಲೇ ಆಡಳಿತ ಪಕ್ಷದ 10 ಶಾಸಕರು ಮತ್ತು ಒಬ್ಬರು ಹಾಲಿ ಸಚಿವರು ಡಿಎಂಕೆ ಸೇರಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಯು ತಮಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

30-35 ಕೋಟಿ ರೂ. ನಗದು ಆಮಿಷ:

ಈ ಪ್ರಕರಣದ ಪ್ರಮುಖ ಆರೋಪಿ ತಿರುನಾವುಕ್ಕರಸು ಎಂಬಾತ ನನಗೆ ನಿರಂತರವಾಗಿ ಕರೆ ಮಾಡಿ ಈ ಪಿತೂರಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಟಿವಿಕೆ ಶಾಸಕ ಇಳಯರಾಜ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ‘ಆರೋಪಿ ತಿರುನಾವುಕ್ಕರಸು ಈಗಾಗಲೇ 10 ಟಿವಿಕೆ ಶಾಸಕರು ಹಾಗೂ ಒಬ್ಬ ಸಚಿವರನ್ನು ಡಿಎಂಕೆ ಪರವಾಗಿ ಸೆಳೆದಿದ್ದೇನೆ ಎಂದು ಹೇಳಿಕೊಂಡಿದ್ದ. ನನಗೆ 30 ರಿಂದ 35 ಕೋಟಿ ರೂ. ನಗದು ನೀಡುವುದಾಗಿ ಆಮಿಷ ಒಡ್ಡಿದ ಆತ, ಇದು ನಿನಗೆ ಸಿಗುತ್ತಿರುವ ದೊಡ್ಡ ಆಫರ್ ಎಂದು ಒಪ್ಪಿಸಲು ಯತ್ನಿಸಿದ’ ಎಂದು ಶಾಸಕ ವಿವರಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್ ಸರ್ಕಾರದ ಪತನಕ್ಕೆ ಸಂಚು; ಟಿವಿಕೆ ಶಾಸಕನಿಗೆ 35 ಕೋಟಿ ಆಫರ್

ಮುಖ್ಯಮಂತ್ರಿ ವಿಜಯ್‌ಗೆ ನಿಷ್ಠೆ:

ಆದರೆ, ತಮಗೆ ಬಂದ ಆಫರ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದಾಗಿ ಹೇಳಿರುವ ಶಾಸಕ ಇಳಿಯರಾಜ, ತಾವು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ನಿಷ್ಠರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ಈ ಕಾರಣಕ್ಕಾಗಿಯೇ ಆತ ನನಗೆ ಕರೆ ಮಾಡುತ್ತಿದ್ದಾನೆ ಎಂದು ತಿಳಿದಿದ್ದರೆ, ನಾನು ಫೋನ್ ಅನ್ನೇ ರಿಸೀವ್ ಮಾಡುತ್ತಿರಲಿಲ್ಲ ಎಂದು ಅವನಿಗೆ ಹೇಳಿದೆ’ ಎಂದು ಇಳಯರಾಜ ತಿಳಿಸಿದ್ದಾರೆ. ಜನರು ತಮಗೆ ನೀಡಿದ ಬೆಂಬಲಕ್ಕೆ ದ್ರೋಹ ಬಗೆಯುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಮಾಜಿ ಸಚಿವರ ಹೆಸರು:

ಟಿವಿಕೆ ಶಾಸಕರನ್ನು ಸೆಳೆಯಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ತಿರುನಾವುಕ್ಕರಸು, ನರೇಶ್ ಮತ್ತು ತ್ಯಾಗರಾಜನ್ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ ಶಾಸಕ ಇಳಿಯರಾಜ ಈ ಹೇಳಿಕೆ ನೀಡಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಡಿಎಂಕೆಯ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಕುಮಾರ್ ಅವರ ಹೆಸರನ್ನೂ ಸೇರಿಸಲಾಗಿದ್ದು, ಆರೋಪಿಗಳೊಂದಿಗೆ ಇವರಿಗೆ ನಂಟಿದೆ ಎಂದು ಆರೋಪಿಸಲಾಗಿದೆ. ಆದರೆ ಡಿಎಂಕೆ ಈ ಆರೋಪಗಳನ್ನು ನಿರಾಕರಿಸಿದೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ಈ ವಿವಾದವು ಇದೀಗ ತಮಿಳುನಾಡಿನಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ವಿಜಯ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಡಿಎಂಕೆ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಟಿವಿಕೆ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ವಿಜಯ್ ಅವರು ಡಿಎಂಕೆಯ ಇಬ್ಬರು ಶಾಸಕರು ರಾಜೀನಾಮೆ ನೀಡುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ಪಕ್ಷವು ರಾಜ್ಯಪಾಲರು ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (DVAC) ದೂರು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Viral: ಚಿನ್ನ ಹಳದಿ ಬಣ್ಣದಲ್ಲಿ ಇರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ – Kannada News | Why is gold always in yellow colour? The scientific reason behind it

ಹೆಣ್ಣು ಮಕ್ಕಳಿಗೆ ಚಿನ್ನದ (Gold) ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಚಿನ್ನ ಇಷ್ಟಪಡದವರು ಇರೋದು ಕಡಿಮೆಯೇ. ಮದುವೆ, ಹಬ್ಬ ಹರಿದಿನಗಳಲ್ಲಿ ರೇಷ್ಮೆ ಸೀರೆ ಜತೆಗೆ ಬಂಗಾರದ ಒಡವೆಗಳು ಇರಲೇಬೇಕು. ಚಿನ್ನ ಅಥವಾ ಗೋಲ್ಡ್ ಎಂದಾಗ ನೆನಪಾಗುವುದೇ ಈ ಹಳದಿ ಬಣ್ಣ (yellow colour). ಆದರೆ ಚಿನ್ನ ಹಳದಿ ಬಣ್ಣದಲ್ಲಿ ಯಾಕೆ ಇರೋದು ಎಂದು ಯಾವತ್ತಾದ್ರೂ ಯೋಚಿಸಿದ್ದೀರಾ. ಚಿನ್ನದ ಬಣ್ಣ ಹಳದಿ ಇರುವುದರ ಹಿಂದೆ ವೈಜ್ಞಾನಿಕ ಕಾರಣವು ಇದೆಯಂತೆ. ಹಾಗಾದ್ರೆ ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚಿನ್ನ ಹಳದಿ ಬಣ್ಣದಲ್ಲಿರುವುದು ಏಕೆ?

ಯಾವುದೇ ವಸ್ತುವಿರಲಿ, ಅದರ ಬಣ್ಣವು ಅದು ಪ್ರತಿಫಲಿಸುವ ಬೆಳಕಿನ ತರಂಗಾಂತರದ ಮೇಲೆ ಅವಲಂಬಿರವಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನ ಬೆಳಕು ನಿರ್ದಿಷ್ಟ ವಸ್ತುವಿನ ಮೇಲೆ ಬಿದ್ದಾಗ, ಕೆಲವು ಬಣ್ಣಗಳು ಹೀರಲ್ಪಡುತ್ತವೆ, ಇನ್ನು ಕೆಲವು ಪ್ರತಿಫಲಿಸುತ್ತದೆ. ಈ ಪ್ರತಿಫಲಿತ ಬೆಳಕು ನಮ್ಮ ಕಣ್ಣುಗಳನ್ನು ತಲುಪಿ, ಮೆದುಳು ಅದನ್ನು ವಸ್ತುವಿನ ಬಣ್ಣವೆಂದು ಗ್ರಹಿಸಿಕೊಳ್ಳುತ್ತದೆ. ಈ ಬೆಳ್ಳಿ ಮತ್ತು ಅಲ್ಯೂಮಿನಿಯಂನಂತಹ ಹೆಚ್ಚಿನ ಲೋಹಗಳು ಬಹುತೇಕ ಸಂಪೂರ್ಣ ಗೋಚರ ವರ್ಣಪಟಲವನ್ನು ಪ್ರತಿಬಿಂಬಿಸುತ್ತವೆ. ಅದಕ್ಕಾಗಿಯೇ ಅವು ನಮ್ಮ ಕಣ್ಣಿಗೆ ಬೆಳ್ಳಿಯಾಗಿ ಅಥವಾ ಬಿಳಿ ಬಣ್ಣದಲ್ಲಿ ಕಾಣುತ್ತವೆ.

ಇದನ್ನೂ ಓದಿ: ನೀರಿನ ಬಾಟಲಿನ ಕ್ಯಾಪ್​ಗಳು ಏಕೆ ಬೇರೆ ಬೇರೆ ಬಣ್ಣದಲ್ಲಿರುವುದು ಏಕೆ?

ಆದರೆ ಚಿನ್ನ ಹಾಗಲ್ಲ, ಈ ಚಿನ್ನವು ಇತರ ಲೋಹಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಚಿನ್ನವು ಎಲ್ಲಾ ಗೋಚರ ಬಣ್ಣಗಳನ್ನು ಪ್ರತಿಬಿಂಬಿಸುವ ಬದಲು, ನೀಲಿ ಮತ್ತು ನೇರಳೆ ತರಂಗಾಂತರಗಳ ಹೆಚ್ಚಿನ ಭಾಗವನ್ನು ಹೀರಿಕೊಳ್ಳುತ್ತದೆ. ಹೀಗಾದಾಗ ಇದು ಕೆಂಪು, ಕಿತ್ತಳೆ ಮತ್ತು ಹಳದಿ ತರಂಗಾಂತರಗಳನ್ನು ನಮ್ಮ ಕಣ್ಣುಗಳಿಗೆ ಹಿಂತಿರುಗಿಸುತ್ತದೆ. ಈ ಪ್ರತಿಫಲಿತ ಬಣ್ಣಗಳ ಸಂಯೋಜನೆ ಚಿನ್ನಕ್ಕೆ ಅದರ ಹಳದಿ ಬಣ್ಣವನ್ನು ನೀಡುತ್ತದೆ. ಹೀಗಾಗಿ ಚಿನ್ನ ಹಳದಿ ಬಣ್ಣದಲ್ಲಿ ಕಾಣುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಾ ರಘುವಂಶಿ ಹತ್ಯೆ ಕೇಸ್: ಸೋನಮ್ ಜಾಮೀನು ರದ್ದುಗೊಳಿಸಲು ಸುಪ್ರೀಂ ಮೆಟ್ಟಿಲೇರಿದ ಮೇಘಾಲಯ ಸರ್ಕಾರ – Kannada News | Meghalaya Honeymoon Murder: Raja Raghuvanshi Case SC to Review Sonam’s Bail

ಶಿಲ್ಲಾಂಗ್, ಜುಲೈ 02: ಕಳೆದ 2025 ರಲ್ಲಿ ಮೇಘಾಲಯಕ್ಕೆ ಹನಿಮೂನ್‌(Honeymoon)ಗೆ ಬಂದಿದ್ದ ತನ್ನ ಪತಿ ರಾಜಾ ರಘುವಂಶಿ ಅವರನ್ನು ಸುಪಾರಿ ಕೊಲೆಗಾರರ ನೆರವಿನಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಈ ಭೀಕರ ಹತ್ಯೆಯ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ಮೇಘಾಲಯ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಹಾಗೂ ಮೃತನ ಕುಟುಂಬ ಸುಪ್ರೀಂ ಕೋರ್ಟ್‌ಗೆ ತುರ್ತು ಮೇಲ್ಮನವಿ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರ ದ್ವಿಪೀಠದ ಮುಂದೆ ಗುರುವಾರ ಈ ವಿಷಯ ಪ್ರಸ್ತಾಪವಾಯಿತು. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್ ಆರೋಪಿಗೆ ಜಾಮೀನು ನೀಡುವಲ್ಲಿ ಗಂಭೀರ ತಪ್ಪು ಮಾಡಿದೆ ಎಂದು ವಾದಿಸಿದರು.

ಸೋನಮ್‌ರನ್ನು ಬಂಧಿಸುವ ಸಮಯದಲ್ಲಿ ಪೊಲೀಸರು ಲಿಖಿತ ಕಾರಣಗಳನ್ನು ಸರಿಯಾಗಿ ಒದಗಿಸಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಜಾಮೀನು ಎತ್ತಿಹಿಡಿದಿದೆ. ಆದರೆ ಅದು ಕೇವಲ ಕಾನೂನು ನಿಬಂಧನೆಯಲ್ಲಿದ್ದ ಒಂದು ಮುದ್ರಣದೋಷ ಅಷ್ಟೇ ಹೊರತು, ದೊಡ್ಡ ತನಿಖಾ ಲೋಪವಲ್ಲ ಎಂದು ಮೆಹ್ತಾ ವಾದಿಸಿದರು.

ಘೋರ ಅಪರಾಧ ಎಸಗಿರುವ ಆರೋಪಿ ಜಾಮೀನಿನ ಮೇಲೆ ಹೊರಗಿದ್ದರೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವಾದಿಸಿ, ತಕ್ಷಣವೇ ಜಾಮೀನು ರದ್ದುಗೊಳಿಸಲು ಕೋರಿದರು. ಈ ಅರ್ಜಿಯನ್ನು ಒಪ್ಪಿದ ಪೀಠವು ಶುಕ್ರವಾರವೇ ತುರ್ತು ವಿಚಾರಣೆಗೆ ಪಟ್ಟಿ ಮಾಡಿದೆ.

ಮತ್ತಷ್ಟು ಓದಿ: ಗಾನವಿ-ಸೂರಜ್ ಪ್ರಕರಣ: ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ರಾಜಾ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಅವರು ಶಿಲ್ಲಾಂಗ್ ಪೊಲೀಸರು ಮತ್ತು ಮೇಘಾಲಯ ಸರ್ಕಾರದ ತನಿಖಾ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆರೋಪಿ ಸೋನಮ್ ಕಡೆಯ ವಕೀಲರು ಭಾರಿ ಹಣ ಪಡೆದು ಜಾಮೀನು ತರಲು ಶ್ರಮಿಸಿದ್ದಾರೆ. ಆದರೆ ನಮ್ಮ ಪರ ವಕೀಲರಿಗೆ ಆರ್ಥಿಕ ನೆರವು ಸಿಗದ ಕಾರಣ ಅವರು ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸಲು ಸಾಧ್ಯವಾಗಿಲ್ಲ.

ಇತ್ತೀಚೆಗೆ ಪುಣೆಯಲ್ಲಿ ಸಿಯಾ ಎಂಬಾಕೆ ತನ್ನ ನಿಶ್ಚಿತ ವರ ಕೇತನ್‌ನನ್ನು ಕೊಂದ ಘಟನೆಯಂತೆ ಇಂದಿನ ಮಹಿಳೆಯರು ಇಂತಹ ಅಪರಾಧ ಮಾಡಲು ಈ ಜಾಮೀನು ಆದೇಶಗಳು ಧೈರ್ಯ ತುಂಬುತ್ತವೆ. ನಮಗೆ ಹೈಕೋರ್ಟ್ ಮೇಲೆ ನಂಬಿಕೆಯಿಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಪಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2025 ರ ಮೇ ತಿಂಗಳಲ್ಲಿ ರಾಜಾ ರಘುವಂಶಿ ಮತ್ತು ಸೋನಮ್ ದಂಪತಿ ಹನಿಮೂನ್‌ಗಾಗಿ ಮೇಘಾಲಯದ ಸೊಹ್ರಾ ವಲಯಕ್ಕೆ ತೆರಳಿದ್ದಾಗ ಮೇ 23 ರಂದು ಹಠಾತ್ತನೆ ನಾಪತ್ತೆಯಾಗಿದ್ದರು. ಸುದೀರ್ಘ ಶೋಧದ ನಂತರ, ಜೂನ್ 2 ರಂದು ಆಳವಾದ ಕಂದಕದಲ್ಲಿ ರಾಜಾ ಅವರ ಕೊಳೆತ ಶವ ಪತ್ತೆಯಾಗಿತ್ತು.

ಪೊಲೀಸರ ತನಿಖೆಯ ವೇಳೆ, ಪತ್ನಿ ಸೋನಮ್ ತನಗಾಗಲಿರುವ ಆರ್ಥಿಕ ಲಾಭ ಹಾಗೂ ಆಸ್ತಿಯ ಆಸೆಗಾಗಿ ಬಾಡಿಗೆ ಹಂತಕರನ್ನು ಬಳಸಿ ಪತಿಯನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿಸಿರುವುದು ಪತ್ತೆಯಾಗಿತ್ತು. ಪ್ರಸ್ತುತ ಈ ಹೈ-ಪ್ರೊಫೈಲ್ ಪ್ರಕರಣದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸರ್ಕಾರ ಅಂದ್ಮೇಲೆ ನ್ಯೂನತೆ ಸಾಕಷ್ಟಿರುತ್ತೆ, 2 ಲಕ್ಷ ಜನರಿಗೆ ಗೃಹಲಕ್ಷ್ಮಿ ಕೊಡ್ತಾ ಇಲ್ಲ: ಲೋಪ ಒಪ್ಪಿಕೊಂಡ ಬಸವರಾಜ್ ರಾಯರೆಡ್ಡಿ – Kannada News | Congress MLA Basavaraj Rayareddi Admits Flaws in Govt; Says 2 Lakh Women Deprived of Gruha Lakshmi Scheme

ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿImage Credit source: tv9

ಕೊಪ್ಪಳ, ಜುಲೈ 2: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್‌ನ (C0ngress) ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಸ್ವಪಕ್ಷದ ಸರ್ಕಾರದ ಆಡಳಿತಾತ್ಮಕ ಲೋಪಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಗುರುವಾರ ಮಾತನಾಡಿದ ಅವರು, ‘ಸರ್ಕಾರ ಅಂದಮೇಲೆ ನ್ಯೂನತೆಗಳು ಸಾಕಷ್ಟಿರುತ್ತವೆ’ ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪಗಳಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಸದ್ಯ 2 ಲಕ್ಷ ಅರ್ಹ ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ತಲುಪುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸತ್ತವರ ಖಾತೆಗೂ ಹೋಗ್ತಿದೆ ಹಣ, ಸರ್ಕಾರಿ ನೌಕರರ ಮನೆಗೂ ಗೃಹಜ್ಯೋತಿ!

ಗ್ಯಾರಂಟಿ ಯೋಜನೆಗಳ ಸಾಂಖ್ಯಿಕ ವಿವರ ನೀಡಿದ ಶಾಸಕ ರಾಯರೆಡ್ಡಿ, ‘ಗೃಹಲಕ್ಷ್ಮಿ ಯೋಜನೆಯಡಿ ನಾವು ಒಟ್ಟು 1 ಕೋಟಿ 26 ಲಕ್ಷ ಜನರಿಗೆ ಹಣ ನೀಡಬೇಕು. ಆದರೆ ಪ್ರಸ್ತುತ ದಾಖಲಾತಿ ದೋಷ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ 1 ಕೋಟಿ 24 ಲಕ್ಷ ಜನರಿಗೆ ಮಾತ್ರ ಹಣ ತಲುಪುತ್ತಿದ್ದು, 2 ಲಕ್ಷ ಜನರಿಗೆ ಹಣ ಸಿಗುತ್ತಿಲ್ಲ. ಪ್ರತಿ ತಿಂಗಳು ಭ್ರಷ್ಟಾಚಾರ ರಹಿತವಾಗಿ ನೇರವಾಗಿ 2,500 ಕೋಟಿ ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಪರಿಷ್ಕರಣೆ ನಡೆಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ಹಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯಡಿ 1 ಕೋಟಿ 68 ಲಕ್ಷ ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇದರಲ್ಲಿ ಕೆಲವು ಸರ್ಕಾರಿ ನೌಕರರ ಮನೆಗಳೂ ಸೇರಿವೆ. ಹೀಗಾಗಿ ಅನರ್ಹರನ್ನು ಗುರುತಿಸಲು ಪರಿಷ್ಕರಣೆ ಅನಿವಾರ್ಯವಾಗಿದೆ’ ಎಂದು ಹೇಳಿದ್ದಾರೆ.

ಯಾರೇ ಸಿಎಂ ಆದ್ರೂ ಗ್ಯಾರಂಟಿ ನಿಲ್ಲಲ್ಲ, ಡಿಕೆಶಿಗೂ ಬದ್ಧತೆ ಇದೆ: ರಾಯರೆಡ್ಡಿ

ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿ 52,ವಿಷಯ ಸಾವಿರ ಕೋಟಿ ರೂ. ಹಣ ನೀಡುವುದು ಅನಿವಾರ್ಯವಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಈಗ ಮುಖ್ಯಮಂತ್ರಿ ಆಗಿದ್ದಾರೆ. ಗ್ಯಾರಂಟಿಗಳನ್ನು ಮುಂದುವರಿಸಿಕೊಂಡು ಹೋಗುವ ಬದ್ಧತೆ ಅವರಿಗಿದೆ. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಕಾರ್ಯಕ್ರಮವಲ್ಲ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಯಾರೇ ಮುಖ್ಯಮಂತ್ರಿಯಾದರೂ ಯೋಜನೆಗಳು ನಿಲ್ಲುವುದಿಲ್ಲ ಎಂದು ರಾಯರೆಡ್ಡಿ ಭರವಸೆ ನೀಡಿದರು.

ಇದನ್ನೂ ಓದಿ: ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ 2028ರ ಚುನಾವಣೆಗೆ ಮಾಹಿತಿ ಸಂಗ್ರಹ: ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ

ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ವಿರೋಧ ಪಕ್ಷದವರು ಸರಿಯಾಗಿ ಸ್ಟಡಿ ಮಾಡುತ್ತಿಲ್ಲ, ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಸರ್ಕಾರವನ್ನು ಎಲ್ಲಿ ಹಿಡಿಯಬೇಕೋ ಅಲ್ಲಿ ಹಿಡಿಯುತ್ತಿಲ್ಲ’ ಎಂದು ಲೇವಡಿ ಮಾಡಿದರು. ಅಲ್ಲದೆ, ಇನ್ನು ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಲಾಗುವುದು ಎಂದು ರಾಯರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version