IVF Surrogacy New Law: ಐವಿಎಫ್, ಸರೊಗಸಿ ಚಿಕಿತ್ಸಾಲಯಗಳಿಗೆ ಕೇಂದ್ರದ ಹೊಸ ನಿಯಮ: ಇನ್ಮುಂದೆ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಕಡ್ಡಾಯ – Kannada News | India’s New Rules: IVF and Surrogacy Clinic Licenses Mandatory Every 3 5 Years

ಐವಿಎಫ್ ಕೇಂದ್ರ-ಸಾಂದರ್ಭಿಕ ಚಿತ್ರ

ನವದೆಹಲಿ, ಜುಲೈ 02: ದೇಶಾದ್ಯಂತ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಹಾಗೂ ಐವಿಎಫ್ (IVF) ಕೇಂದ್ರಗಳ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಎಲ್ಲಾ ಫಲವತ್ತತೆ ಚಿಕಿತ್ಸಾಲಯಗಳು (Fertility Clinics) ಮತ್ತು ವೀರ್ಯ ಬ್ಯಾಂಕುಗಳು (Sperm Banks) ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಹೊಸ ನಿಯಮ ಜಾರಿಗೊಳಿಸಿದೆ.

ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹಂತ 1 IVF ಮತ್ತು ವೀರ್ಯ ಬ್ಯಾಂಕ್‌ಗಳು: ನವೀಕರಣ ಶುಲ್ಕ 25,000 ರೂ. ನಿಗದಿತ ಸಮಯ ಮೀರಿದರೆ 50,000 ರೂ. (ಡಬಲ್ ದಂಡ) ಪಾವತಿಸಬೇಕು.

ಹಂತ 2 IVF ಚಿಕಿತ್ಸಾಲಯಗಳು: ನವೀಕರಣ ಶುಲ್ಕ 1 ಲಕ್ಷ ರೂ. ಒಂದು ವೇಳೆ ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಬರೋಬ್ಬರಿ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

ವಿನಾಯಿತಿ: ಈ ಎಲ್ಲಾ ನಿಯಮ ಹಾಗೂ ಶುಲ್ಕಗಳಿಂದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಮತ್ತು ಸಂಸ್ಥೆಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಗೆ ಆದ್ಯತೆ
ತಜ್ಞರ ಅಭಿಪ್ರಾಯ: ನವದೆಹಲಿಯ ನರ್ಚರ್ ಕ್ಲಿನಿಕ್‌ನ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಅವರ ಪ್ರಕಾರ, ಸದ್ಯ ದೇಶದ ಕೇವಲ ಶೇ. 20 ರಿಂದ 25 ರಷ್ಟು ಚಿಕಿತ್ಸಾಲಯಗಳಲ್ಲಿ ಮಾತ್ರ ಅಧಿಕೃತ ತಪಾಸಣೆ ನಡೆದಿದೆ. ಈ ಹೊಸ ನಿಯಮದಿಂದಾಗಿ ಕ್ಲಿನಿಕ್‌ಗಳು ತಮ್ಮ ಸೇವೆಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕಾಗುತ್ತದೆ ಮತ್ತು ರೋಗಿಗಳ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

ಮತ್ತಷ್ಟು ಓದಿ: ಕರೆಂಟ್, ನೀರು ಆಯ್ತು ಈಗ ಹಾಸ್ಪಿಟಲ್ ಬಿಲ್ ಸರದಿ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರವೂ ದುಬಾರಿ

ಅರ್ಜಿ ಸಲ್ಲಿಸಿದ 60 ದಿನಗಳ ಒಳಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾ ಕ್ಲಿನಿಕಲ್ ಮತ್ತು ನೈತಿಕ ಮಾನದಂಡಗಳನ್ನು ಪಾಲಿಸಿದ್ದರೆ ಮಾತ್ರ ಪರವಾನಗಿ ನವೀಕರಣಗೊಳ್ಳಲಿದ್ದು, ನವೀಕರಿಸಿದ ಪ್ರಮಾಣಪತ್ರವನ್ನು ಚಿಕಿತ್ಸಾಲಯದ ಮುಂಭಾಗದಲ್ಲೇ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ, ಭಾರತದಲ್ಲಿ ಸದ್ಯ ಸುಮಾರು ಶೇ. 15 ರಷ್ಟು ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ವಾಣಿಜ್ಯ ಸರೊಗಸಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಯಾವುದೇ ಆರ್ಥಿಕ ವ್ಯವಹಾರವಿಲ್ಲದ ಪರಹಿತಚಿಂತನೆಯ ಸರೊಗಸಿಗೆ ಭಾರಿ ಬೇಡಿಕೆಯಿದೆ.

ಉದ್ಯಮದ ಅಂದಾಜಿನ ಪ್ರಕಾರ, ಭಾರತದ ಸಂತಾನೋತ್ಪತ್ತಿ ಆರೋಗ್ಯ ಮಾರುಕಟ್ಟೆಯು ಪ್ರಸ್ತುತ 5,000 ಕ್ಕೂ ಹೆಚ್ಚು ಕ್ಲಿನಿಕ್‌ಗಳೊಂದಿಗೆ ಭಾರಿ ವೇಗದಲ್ಲಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇದರ ಮೌಲ್ಯ ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯ ಐವಿಎಫ್ ತಜ್ಞ ಹೃಷಿಕೇಶ್ ಪೈ ಅವರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದು, ಸಣ್ಣ ಚಿಕಿತ್ಸಾಲಯಗಳಿಗೆ ತೊಂದರೆಯಾಗದಂತೆ ಪ್ರಾಯೋಗಿಕವಾಗಿ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:01 am, Thu, 2 July 26

Source link

Numerology: ಈ ಮೂರು ದಿನಾಂಕಗಳಲ್ಲಿ ಹುಟ್ಟಿದವರಿಗೆ ಸಂಬಂಧದಲ್ಲಿ ಸವಾಲುಗಳು ಹೆಚ್ಚು ಯಾಕೆ ಗೊತ್ತಾ? – Kannada News | Numerology and Marriage: Root Numbers 4, 7, 8 Cause Relationship Challenges?

ಕೆಲವು ಜನರ ಜೀವನದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ ಅಥವಾ ದಾಂಪತ್ಯದಲ್ಲಿ ನಿರಂತರ ಮಾನಸಿಕ ಅಶಾಂತಿ ಕಾಡುತ್ತಿರುತ್ತದೆ. ಇದಕ್ಕೆ ಅವರ ಜಾತಕ ಮಾತ್ರವಲ್ಲ, ಜನ್ಮ ದಿನಾಂಕವೂ ಕಾರಣವಾಗಿರಬಹುದು ಎನ್ನುತ್ತದೆ ಸಂಖ್ಯಾಶಾಸ್ತ್ರ (Numerology). ನಾವು ಹುಟ್ಟಿದ ದಿನಾಂಕವು ನಮ್ಮ ಸ್ವಭಾವ, ವ್ಯಕ್ತಿತ್ವ ಮತ್ತು ಆಲೋಚನಾ ವಿಧಾನವನ್ನು ನಿರ್ಧರಿಸುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲ ಸಂಖ್ಯೆ 4, 7 ಮತ್ತು 8 ಹೊಂದಿರುವವರು ತಮ್ಮ ವೈವಾಹಿಕ ಜೀವನದಲ್ಲಿ ಇತರರಿಗಿಂತ ಹೆಚ್ಚಿನ ಸವಾಲುಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ.

ಮೂಲ ಸಂಖ್ಯೆ 4 ರಾಹುವಿನ ಪ್ರಭಾವ ಮತ್ತು ವಿಭಿನ್ನ ಆಲೋಚನೆಗಳು:

ಯಾವುದೇ ತಿಂಗಳ 4, 13, 22 ಮತ್ತು 31 ನೇ ತಾರೀಖಿನಂದು ಜನಿಸಿದ ಜನರು ರಾಹು ಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಇವರ ಮೂಲ ಸಂಖ್ಯೆ 4 ಆಗಿರುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ಅತ್ಯಂತ ನಿಷ್ಠಾವಂತರು ಮತ್ತು ಸಂಬಂಧಕ್ಕೆ ಬದ್ಧರಾಗಿರುತ್ತಾರೆ. ಆದರೆ, ಇವರ ಆಲೋಚನೆಗಳು ಸಮಾಜದ ಸಾಂಪ್ರದಾಯಿಕ ಆಲೋಚನೆಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತವೆ. ಕೆಲವೊಮ್ಮೆ ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಇವರು ತುಂಬಾ ಹಠಮಾರಿ ಮತ್ತು ಮೊಂಡಾಗಿ ವರ್ತಿಸುತ್ತಾರೆ. ಈ ಸ್ವಭಾವವೇ ದಾಂಪತ್ಯದಲ್ಲಿ ಅನಗತ್ಯ ಭಿನ್ನಾಭಿಪ್ರಾಯಗಳು ಮತ್ತು ತಪ್ಪು ತಿಳುವಳಿಕೆಗಳಿಗೆ ಪ್ರಮುಖ ಕಾರಣವಾಗುತ್ತದೆ.

ಮೂಲ ಸಂಖ್ಯೆ 8 ಶನಿಯ ಪ್ರಭಾವ:

ಯಾವುದೇ ತಿಂಗಳ 8, 17 ಮತ್ತು 26 ನೇ ತಾರೀಖಿನಂದು ಜನಿಸಿದವರ ಮೂಲ ಸಂಖ್ಯೆ 8 ಆಗಿರುತ್ತದೆ. ಇವರು ನ್ಯಾಯದೇವನಾದ ಶನಿ ಗ್ರಹದಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಇವರ ಹೃದಯದಲ್ಲಿ ಸಂಗಾತಿಯ ನಡೆಗೆ ಅಪಾರ ಪ್ರೀತಿ ಇರುತ್ತದೆಯಾದರೂ, ಅದನ್ನು ಸರಿಯಾದ ಸಮಯಕ್ಕೆ ವ್ಯಕ್ತಪಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಭಾವನೆಗಳನ್ನು ಹೊರಹಾಕಲು ವಿಫಲರಾಗುವ ಇವರ ಈ ಸ್ವಭಾವದಿಂದಾಗಿ, ಸಂಗಾತಿಯೊಂದಿಗೆ ಒಂದು ರೀತಿಯ ಅಸ್ಪಷ್ಟ ಅಂತರ ಸೃಷ್ಟಿಯಾಗುತ್ತದೆ. ಪ್ರೀತಿಯಿದ್ದರೂ ಸಂವಹನದ ಕೊರತೆಯಿಂದಾಗಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ!

ಮೂಲ ಸಂಖ್ಯೆ 7 ಕೇತುವಿನ ಪ್ರಭಾವ:

ತಿಂಗಳ 7, 16 ಅಥವಾ 25 ರಂದು ಜನಿಸಿದವರು 7 ರ ಮೂಲ ಸಂಖ್ಯೆಯನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಸಂಖ್ಯೆಯು ಕೇತು ಗ್ರಹದ ಪ್ರಭಾವದಿಂದ ಕೂಡಿರುತ್ತದೆ. ಈ ದಿನಾಂಕದಂದು ಜನಿಸಿದವರು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಇವರು ತಮ್ಮ ಸಂಗಾತಿಯಿಂದ ಅತಿಯಾದ ಪ್ರೀತಿ, ವಾತ್ಸಲ್ಯ ಮತ್ತು ಮಾನಸಿಕ ಸಂಪರ್ಕವನ್ನು ನಿರೀಕ್ಷಿಸುತ್ತಾರೆ. ಆದರೆ, ಒಂದುವೇಳೆ ಆ ನಿರೀಕ್ಷೆಗಳು ಈಡೇರದಿದ್ದರೆ, ಇವರು ಮೌನಕ್ಕೆ ಶರಣಾಗುತ್ತಾರೆ ಮತ್ತು ತಮ್ಮ ನೋವನ್ನು ವ್ಯಕ್ತಪಡಿಸದೆ ಒಳಗೊಳಗೇ ಕೊರಗುತ್ತಾರೆ. ಈ ಮಾನಸಿಕ ಅಂತರವು ದಾಂಪತ್ಯದಲ್ಲಿ ದೊಡ್ಡ ತಪ್ಪು ತಿಳುವಳಿಕೆಗೆ ದಾರಿ ಮಾಡಿಕೊಡುತ್ತದೆ.

ದೋಷಗಳಿದ್ದರೂ ದಾಂಪತ್ಯ ಮಧುರವಾಗಿಸಲು ಸರಳ ಪರಿಹಾರಗಳು:

ಈ ದಿನಾಂಕಗಳಲ್ಲಿ ಜನಿಸಿದ ತಕ್ಷಣ ಎಲ್ಲರ ವೈವಾಹಿಕ ಜೀವನವೂ ಹಾಳಾಗುತ್ತದೆ ಎಂದರ್ಥವಲ್ಲ. ಸಂಖ್ಯಾಶಾಸ್ತ್ರವು ಕೇವಲ ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿ ಮತ್ತು ಅವರು ಎದುರಿಸಬಹುದಾದ ಸವಾಲುಗಳನ್ನು ಮುನ್ಸೂಚನೆಯಾಗಿ ತಿಳಿಸುತ್ತದೆ ಅಷ್ಟೇ. ಇಂತಹ ಸವಾಲುಗಳನ್ನು ನಿವಾರಿಸಲು ತಜ್ಞರು ಕೆಲವು ಸರಳ ಸಲಹೆಗಳನ್ನು ನೀಡುತ್ತಾರೆ. ಈ ವಿಶೇಷ ದಿನಾಂಕಗಳಲ್ಲಿ ಜನಿಸಿದವರು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ಸಂಗಾತಿಯ ಅಭಿಪ್ರಾಯಗಳಿಗೆ ಗೌರವ ನೀಡುವುದು ಮತ್ತು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ. ಚಂದ್ರು ಲಮಾಣಿ ಕಾರು ಚಾಲಕನ ಆತ್ಮಹತ್ಯೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರಿಂದ ಗಂಭೀರ ಆರೋಪ – Kannada News | Shirahatti MLA Driver Death Case Takes Dramatic Twist: Family Alleges Threat and Foul Play by MLA Chandru Lamani

ಶಾಸಕ ಚಂದ್ರು ಲಮಾಣಿ ಮತ್ತು ಚಾಲಕ ಸುನೀಲ್​​Image Credit source: Tv9 Kannada

ಗದಗ, ಜುಲೈ 02: ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಿರಹಟ್ಟಿ ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 2025 ಜನವರಿ 9ರಂದು ನೇಣು ಬಿಗಿದುಕೊಂಡು ಚಾಲಕ ಸುನೀಲ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಸಕರ ಅವ್ಯವಹಾರ ಆತನಿಗೆ ಗೊತ್ತಿತ್ತು. ಹೀಗಾಗಿ ಅವನಿಗೆ ಶಾಸಕರು ಬೆದರಿಕೆ ಹಾಕಿದ್ದರು. ಅಲ್ಲದೆ ಕೆಲಸ ಮಾಡಿರುವ ವೇತನವನ್ನು ಕೂಡ ಸರಿಯಾಗಿ ನೀಡಿಲ್ಲ. ಹೀಗಾಗಿ ನಮಗೆ ಸುನೀಲ್ ಸಾವಿಗೆ ಬಗ್ಗೆ ಅನುಮಾನ ಇದೆ. ನಮಗೆ ನ್ಯಾಯ ಸಿಗಬೇಕು ಎಂದು ಮೃತನ ಸಹೋದರ, ತಂದೆ ಮತ್ತು ತಾಯಿ ಆಗ್ರಹಿಸಿದ್ದಾರೆ.

ಜೀವ ಬೆದರಿಕೆ ಇದೆ ಎಂದ ಪೋಷಕರು

ಪ್ರಕರಣ ಕೆದಕಿದ್ರೆ ನಿಮ್ಮ ದೊಡ್ಡ ಮಗ ಕೂಡ ಬೀದಿ ಹೆಣವಾಗ್ತಾನೆ ಎಂದು ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ. ಪಿಎಸ್ಐನಿಂದಲೂ ನಮಗೆ ಜೀವ ಬೆದರಿಕೆ ಇದೆ. ಮರಣೋತ್ತರ ಪರೀಕ್ಷೆ ವರದಿ ಕೊಡಲು ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪಿಎಸ್​​ಐ ಒಂದು ವರ್ಷ ಅಲೆದಾಡಿಸಿದ್ದಾರೆ ಅಂತಲೂ ಮೃತ ಸುನೀಲ್​​ ಪೋಷಕರು ದೂರಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ನಿವಾಸದಲ್ಲೇ ಕಾರು ಚಾಲಕ ನಿಗೂಢ ಸಾವು..!

ಶಾಸಕರ ಮನೆಯಲ್ಲೇ ಪ್ರಾಣ ಬಿಟ್ಟಿದ್ದ ಚಾಲಕ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಸುನೀಲ್ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತಾದರೂ, ನಿಖರ ಕಾರಣ ತಿಳಿದುಬಂದಿರಲಿಲ್ಲ. ಶಾಸಕ ಚಂದ್ರು ಲಮಾಣಿ ನಿವಾಸದಲ್ಲೇ ಸುನಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ಜು ಮೃತ ಸುನಿಲ್‌ ಶಾಸಕ ಚಂದ್ರು ಅವರ ಸಂಬಂಧಿ ಕೂಡ ಆಗಿದ್ದು, ಮನೆ ಕಟ್ಟುವ ವಿಷಯದಲ್ಲಿ ಸಹೋದರರ ನಡುವೆ ಕಲಹವೇ ಘಟನೆಗೆ ಕಾರಣವಿರಬಹುದು ಎನ್ನಲಾಗಿತ್ತು.

ಸುನೀಲ್ ಲಮಾಣಿ ಆತ್ಮಹತ್ಯೆ ಬಗ್ಗೆ ಕುಟುಂಬಸ್ಥರು ಅಂದೇ ಅನುಮಾನ ವ್ಯಕ್ತಪಡಿಸಿದ್ದರು. ಕುಟುಂಬಸ್ಥರು ಬರುವ ತನಕ ಪೊಲೀಸರು ಕಾಯದೆ, ಅವಸರದಲ್ಲಿ ಶವ ತೆಗೆದಿದ್ದಾರೆ. ಸುನೀಲ್​​ ಕತ್ತಿನಲ್ಲಿ ರಕ್ತ ಕಾಣಿಸಿದೆ. ಹೀಗಾಗಿ ಯಾರಾದರೂ ಕೊಲೆ‌ ಮಾಡಿರುವ ಅನುಮಾನ ಇದೆ. ಆತ್ಮಹತ್ಯೆ ಮಾಡಿಕೊಂಡರೆ ನಾಲಿಗೆ ಹೊರ ಬರುತ್ತಿತ್ತು. ಉರುಳು ಹಾಕಿಕೊಂಡ ಹಗ್ಗದ ಗುರುತು ಕತ್ತಿನಲ್ಲಿ ಇರ್ತಿತ್ತು. ಆದ್ರೆ ಕತ್ತಿನಲ್ಲಿ ರಕ್ತ ಕಂಡಿದೆ. ಹೀಗಾಗಿ ಸಾವಿನಲ್ಲಿ ಅನುಮಾನ ಇದೆ ಎಂದ ಕುಟುಂಬಸ್ಥರು ಹೇಳಿದ್ದರು. ಈಗ ಆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ದಕ್ಷಿಣ ಕಾಶಿ’ ಶಿವಗಂಗೆ ಬೆಟ್ಟ ಏರುವ ಮುನ್ನ ಜೋಕೆ!; ತುಕ್ಕು ಹಿಡಿದು ಶಿಥಿಲಗೊಂಡ ಕಬ್ಬಿಣದ ಕಂಬಿಗಳು – Kannada News | Nelamangala Shivagange Trekkers Face Life Threatening Rusted Railings

ನೆಲಮಂಗಲ ಜು. 2: ಚಾರಣಿಗರ ಸ್ವರ್ಗ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಪ್ರವಾಸಿಗರ ಸುರಕ್ಷತೆಗೆ ಭಾರೀ ಅಪಾಯ ಉಂಟಾಗಿದೆ. ಬೆಟ್ಟದ ತುತ್ತ ತುದಿಯನ್ನು ಏರಲು ಅಳವಡಿಸಲಾಗಿರುವ ಕಬ್ಬಿಣದ ಸುರಕ್ಷತಾ ಕಂಬಿಗಳು ಸಂಪೂರ್ಣವಾಗಿ ತುಕ್ಕು ಹಿಡಿದು, ಸಡಿಲಗೊಂಡು ಸಾವು ಆಹ್ವಾನ ನೀಡುವ ದುಸ್ಥಿತಿಯಲ್ಲಿದ್ದು, ಮುಜರಾಯಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಶಿವಗಂಗೆ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4400 ಅಡಿ ಎತ್ತರದಲ್ಲಿದೆ. ಈ ಬೆಟ್ಟವನ್ನು ಹತ್ತಲು ಪ್ರತಿನಿತ್ಯ ಸಾವಿರಾರು ಭಕ್ತರು ಹಾಗೂ ದೇಶ-ವಿದೇಶಗಳ ಚಾರಣಿಗರು (Trekkers) ಬರುತ್ತಾರೆ. ಕಡಿದಾದ ಈ ಬೆಟ್ಟವನ್ನು ಏರಲು ಪ್ರವಾಸಿಗರಿಗೆ ಆಸರೆಯಾಗಿ ಅಳವಡಿಸಲಾಗಿದ್ದ ಕಬ್ಬಿಣದ ರೇಲಿಂಗ್ಸ್ (ಕಂಬಿಗಳು) ಈಗ ಅತ್ಯಂತ ಅಪಾಯಕಾರಿ ಸ್ಥಿತ ತಲುಪಿವೆ. ಕಂಬಿಗಳಿಗೆ ಹಿಡಿದಿರುವ ಸಪೋರ್ಟ್‌ಗಳು ಸಡಿಲಗೊಂಡಿದ್ದು, ಸ್ವಲ್ಪ ಆಯತಪ್ಪಿದರೂ ಪ್ರವಾಸಿಗರು ಆಳವಾದ ಕಂದಕಕ್ಕೆ ಬೀಳುವ ಭೀತಿ ಎದುರಾಗಿದೆ. ಬೆಟ್ಟದ ತುದಿಯಲ್ಲಿ ಕಂಬಿಗಳು ಅಲುಗಾಡುತ್ತಿರುವ ಮತ್ತು ತುಕ್ಕು ಹಿಡಿದು ಮುರಿದು ಬೀಳುವ ಹಂತದಲ್ಲಿರುವ ದೃಶ್ಯಗಳನ್ನು ಕೆಲವು ಜಾಗೃತ ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮುಜರಾಯಿ ಇಲಾಖೆಯ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ನಡೆಸಿದ್ದಾರೆ. “ಇಲ್ಲಿ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಾಣಕ್ಕೇ ಕಂಟಕ ಗ್ಯಾರಂಟಿ. ಸಣ್ಣ ಪುಟ್ಟ ಮಕ್ಕಳು ಮತ್ತು ವೃದ್ಧರು ಈ ಕಂಬಿಗಳನ್ನು ನಂಬಿ ಬೆಟ್ಟ ಏರುತ್ತಾರೆ, ಅಧಿಕಾರಿಗಳು ಯಾವುದೋ ದೊಡ್ಡ ಅನಾಹುತ ನಡೆಯುವವರೆಗೆ ಕಾಯುತ್ತಿದ್ದಾರೆಯೇ?” ಎಂದು ಭಕ್ತರು ಪ್ರಶ್ನಿಸಿದ್ದಾರೆ.

ವರದಿ: ಮಂಜುನಾಥ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆ ಹಗರಣದ ತನಿಖೆ ವೇಳೆ ಬಯಲಾಯ್ತು ನಕಲಿ ನೇಮಕಾತಿ ದಂಧೆ, ಸಿಗದ ಉದ್ಯೋಗ ದಾಖಲೆಗಳು – Kannada News | Ayodhya Ram Mandir: Fake Recruitment Scam Uncovered Amidst Donation Theft Probe

ಅಯೋಧ್ಯೆ, ಜುಲೈ 02: ಅಯೋಧ್ಯೆ ರಾಮ ಮಂದಿರ(Ram Mandir)ದ ದೇಣಿಗೆ ಕಳ್ಳತನ ಹಗರಣವು ಈಗ ಕೇವಲ ಹಣದ ದುರುಪಯೋಗಕ್ಕೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡ ಮಟ್ಟದ ‘ನಕಲಿ ನೇಮಕಾತಿ ದಂಧೆ’ ನಡೆದಿರುವ ಆಘಾತಕಾರಿ ಸುಳಿವು ಪೊಲೀಸರಿಗೆ ಸಿಕ್ಕಿದೆ. ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (SIT) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಸಿದ ಬೆನ್ನಲ್ಲೇ, ಅಯೋಧ್ಯಾ ಪೊಲೀಸರು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಭೀಕರ ದಾಳಿ ನಡೆಸಿದ್ದಾರೆ.

ಉದ್ಯೋಗ ದಾಖಲೆಗಳೇ ಮಾಯ, ಸಿಕ್ಕಿಬಿದ್ದ ಆಪ್ತರು
ದೇವಾಲಯದ ಒಳಗೆ ಕಾಣಿಕೆ ಹಣ ಎಣಿಸಲು ನೇಮಕಗೊಂಡಿದ್ದ ಸಿಬ್ಬಂದಿಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದಾಗ ದೊಡ್ಡ ವಂಚನೆ ಬೆಳಕಿಗೆ ಬಂದಿದೆ. ಜೈಲು ಪಾಲಾಗಿರುವ ಹಲವು ಸಿಬ್ಬಂದಿಯ ಅಧಿಕೃತ ನೇಮಕಾತಿ ಪತ್ರಗಳು ಉದ್ಯೋಗ ಒಪ್ಪಂದಗಳು ಅಥವಾ ಯಾವುದೇ ದಾಖಲೆಗಳು ಪೊಲೀಸರಿಗೆ ಇದುವರೆಗೆ ಪತ್ತೆಯಾಗಿಲ್ಲ!

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಲವ್ ಕುಶ್ ಮಿಶ್ರಾ ಮತ್ತು ಅನುಕಲ್ಪ್ ಮಿಶ್ರಾ ಎಂಬ ಇಬ್ಬರು ಪ್ರಮುಖ ಆರೋಪಿಗಳು, ತನಿಖೆಯ ವ್ಯಾಪ್ತಿಯಲ್ಲಿರುವ ಟ್ರಸ್ಟ್‌ನ ಉನ್ನತ ಅಧಿಕಾರಿಗಳ ಹತ್ತಿರದ ಸಂಬಂಧಿಕರಾಗಿದ್ದಾರೆ. ಇವರ ಶಿಫಾರಸಿನ ಮೇರೆಗೆ ಬ್ಯಾಕ್ ಡೋರ್ ಎಂಟ್ರಿ ಮೂಲಕ ಯಾರ ನಿರ್ದೇಶನದ ಮೇರೆಗೆ ಇವರನ್ನು ಸೇರಿಸಿಕೊಳ್ಳಲಾಗಿತ್ತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಟ್ರಸ್ಟ್ ಸದಸ್ಯರ ವಿಚಾರಣೆಗೆ ಸಜ್ಜಾಗಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ

ಈ ನೇಮಕಗಳ ಹಿಂದೆ ಕೋಟ್ಯಂತರ ರೂಪಾಯಿ ಲಂಚ ಮತ್ತು ಕಮಿಷನ್ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬಂಧಿತ ಆರೋಪಿಗಳ ಮತ್ತು ಆಪಾದಿತ ಜಾಲದ ಇತರ ಸದಸ್ಯರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

80 ಲಕ್ಷ ರೂ. ನಗದು ವಶ; ಎಸ್‌ಬಿಐಗೂ ತಟ್ಟಿದ ಬಿಸಿ
ಜೂನ್ 25 ರಂದು ದಾಖಲಾದ ಎಫ್‌ಐಆರ್ (FIR) ಬಳಿಕ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಈ ಪೈಕಿ ಆರು ಆರೋಪಿಗಳಿಂದ ಪೊಲೀಸರು ಈಗಾಗಲೇ ಸುಮಾರು 80 ಲಕ್ಷ ರೂಪಾಯಿ ನಗದು ಮತ್ತು ಭಾರಿ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗೆ ಕೇವಲ ಸಿಬ್ಬಂದಿಯನ್ನು ಪೂರೈಸಿದ್ದ ಖಾಸಗಿ ಏಜೆನ್ಸಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಆದರೆ, ಬ್ಯಾಂಕಿನ ವೇತನದಾರರಾಗಿದ್ದುಕೊಂಡು ಕಳ್ಳತನಕ್ಕೆ ಸಾಥ್ ನೀಡಿದ ಸಿಬ್ಬಂದಿ ಹಾಗೂ ಟ್ರಸ್ಟ್ ಅಧಿಕಾರಿಗಳ ನಡುವಿನ ಲಿಂಕ್ ಬಗ್ಗೆ ತನಿಖೆ ನಡೆಯುತ್ತಿದೆ.

ಅಯೋಧ್ಯಾ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್‌ಗಳ ಸಮ್ಮುಖದಲ್ಲಿ ಲವ್ ಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ್ ಯಾದವ್ ಸೇರಿದಂತೆ ಎಲ್ಲಾ ಎಂಟು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ದೇವಸ್ಥಾನದ ಸುತ್ತಮುತ್ತ ನಡೆದಿರುವ ಜಮೀನು ಖರೀದಿ (ಭೂ ಹಗರಣ) ಪ್ರಕ್ರಿಯೆಯನ್ನೂ ಸಹ ಈಗ ತನಿಖೆಯ ವ್ಯಾಪ್ತಿಗೆ ತರಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿರಾಟ್ ಕೊಹ್ಲಿ ದಾಖಲೆ ಉಡೀಸ್: ಹೊಸ ಇತಿಹಾಸ ಬರೆದ ಶ್ರೇಯಸ್ ಅಯ್ಯರ್ – Kannada News | Team India Captain Shreyas Iyer Creates History in England

ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಆಂಗ್ಲರ ನಾಡಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ನಾಯಕನಾಗಿ ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಟಿ20 ಪಂದ್ಯದಲ್ಲೇ ಎಂಬುದು ವಿಶೇಷ. ಈ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಅಯ್ಯರ್ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆ ಮುರಿದಿದ್ದಾರೆ. (PC: getty images)

Source link

52 ವರ್ಷಗಳಿಂದ ಸಲ್ಮಾನ್ ಖಾನ್ ಕೇವಲ 1 ಬಿಎಚ್​​ಕೆ ಮನೆಯಲ್ಲಿ ವಾಸಿಸುತ್ತಿರುವುದೇಕೆ ಗೊತ್ತಾ? – Kannada News | Galaxy Apartment: Salim Khan’s Struggle to Salman Khan’s Iconic Mumbai Home

ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಕೇವಲ ಒಂದು ಕಟ್ಟಡವಲ್ಲ. ಇದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸ್ಟಾರ್‌ಡಮ್‌ಗೆ ಸಾಕ್ಷಿಯಾದ ಐತಿಹಾಸಿಕ ಸ್ಥಳ. ಸಲ್ಮಾನ್ ಖಾನ್ ಇಲ್ಲಿ ಕಳೆದ 52 ವರ್ಷಗಳಿಂದ ವಾಸವಾಗಿದ್ದಾರೆ. ಈಗ ಅವರು ಈ ಮನೆಯನ್ನು ಬಿಟ್ಟು ಬೇರೆಡೆ ಹೋಗಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಈ ಅಪಾರ್ಟ್‌ಮೆಂಟ್ ಸಲ್ಮಾನ್ ತಂದೆ ಹಾಗೂ ಖ್ಯಾತ ಲೇಖಕ ಸಲೀಂ ಖಾನ್ ಅವರ ಸುದೀರ್ಘ ಹೋರಾಟದ ಸಂಕೇತವಾಗಿದೆ.

ಸಲೀಂ ಖಾನ್ ಅವರು ಇಂದೋರ್‌ನಿಂದ ಮುಂಬೈಗೆ ದೊಡ್ಡ ಕನಸು ಹೊತ್ತು ಬಂದಿದ್ದರು. ಆರಂಭದ ದಿನಗಳಲ್ಲಿ ಅವರು ಪ್ರೇಮ ಪತ್ರಗಳನ್ನು ಬರೆಯುವ ಕೆಲಸ ಮಾಡುತ್ತಿದ್ದರು. ಇಂದೋರ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಮುಂಬೈನ ನಿರ್ಮಾಪಕ ಕೆ. ಅಮರನಾಥ್ ಅವರು ಸಲೀಂ ಅವರನ್ನು ಗುರುತಿಸಿದರು. ಅವರು ಸಲೀಂ ಅವರಿಗೆ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದರು. ನಂತರ ಸಲೀಂ ಖಾನ್ ಮುಂಬೈಗೆ ಬಂದು ‘ಬರಾತ್’ (1960) ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು.

ತಿಂಗಳಿಗೆ 55 ರೂಪಾಯಿ

ಮುಂಬೈನಲ್ಲಿ ಸಲೀಂ ಖಾನ್ ಅವರ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಅವರು ಮರಿನಾ ಗೆಸ್ಟ್ ಹೌಸ್‌ನಲ್ಲಿ ವಾಸವಿದ್ದರು. ತಿಂಗಳಿಗೆ 55 ರೂಪಾಯಿ ಬಾಡಿಗೆ ಇತ್ತು. ಅಲ್ಲಿ ಒಂದು ಕೋಣೆಯಲ್ಲಿ ಇಬ್ಬರು ಇರಬೇಕಾಗಿತ್ತು. ಜೊತೆಯಲ್ಲಿದ್ದ ವ್ಯಕ್ತಿ ಜೋರಾಗಿ ಗೊರಕೆ ಹೊಡೆಯುತ್ತಿದ್ದ ಕಾರಣ ಸಲೀಂ ಅವರಿಗೆ ನಿದ್ದೆ ಬರುತ್ತಿರಲಿಲ್ಲ. ಸ್ವಂತವಾಗಿ ಒಂದು ಇಡೀ ಕೋಣೆಯನ್ನು ಬಾಡಿಗೆಗೆ ಪಡೆಯುವುದೇ ಅವರ ಮೊದಲ ಗುರಿಯಾಗಿತ್ತು. ಆದರೆ ಅದಕ್ಕಾಗಿ ಅವರು ತಮ್ಮ ಕುಟುಂಬದ ಬಳಿ ಹಣ ಕೇಳಲಿಲ್ಲ.

ಇದನ್ನೂ ಓದಿ: ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ತೊರೆಯಲಿದ್ದಾರಾ ಸಲ್ಮಾನ್ ಖಾನ್? ಆರು ಅಂತಸ್ತಿನ ಹೊಸ ಮನೆ ನಿರ್ಮಾಣಕ್ಕೆ ಸಜ್ಜು

ಖ್ಯಾತ ಲೇಖಕನಾಗಿ ಗ್ಯಾಲಕ್ಸಿ ಫ್ಲಾಟ್ ಖರೀದಿ

ನಟನೆಯಲ್ಲಿ ಭವಿಷ್ಯವಿಲ್ಲ ಎಂದು ತಿಳಿದ ಮೇಲೆ ಸಲೀಂ ಖಾನ್ ಅವರು ಬರವಣಿಗೆಯತ್ತ ಮುಖ ಮಾಡಿದರು. ಜಾವೇದ್ ಅಖ್ತರ್ ಅವರೊಂದಿಗೆ ಜೊತೆಯಾಗಿ ಬರೆದ ‘ಜಂಜೀರ್’ (1973) ಸಿನಿಮಾ ಭಾರಿ ಯಶಸ್ಸು ಕಂಡಿತು. ಮುಂಬೈಗೆ ಬಂದು 14 ವರ್ಷಗಳ ಹೋರಾಟದ ನಂತರ ಅವರು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಮೊದಲ ಫ್ಲಾಟ್ ಖರೀದಿಸಿದರು. ಆಗ ಆ ಫ್ಲಾಟ್‌ನ ಬೆಲೆ ಸುಮಾರು 50 ಸಾವಿರದಿಂದ 1.5 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದು ಈ ಇಡೀ ಆಸ್ತಿಯ ಮೌಲ್ಯ 100 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಸೂಪರ್‌ಸ್ಟಾರ್ ಆದರೂ ಸಲ್ಮಾನ್ ಖಾನ್ 1 BHK ಮನೆಯಲ್ಲೇ ಉಳಿದಿದ್ದೇಕೆ?

ಸಲ್ಮಾನ್ ಖಾನ್ ಅವರಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಅವರ ಕುಟುಂಬ ಈ ಮನೆಗೆ ಬಂದಿತ್ತು. ಸಲ್ಮಾನ್ ಖಾನ್ ಅವರು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಆದರೂ ಅವರು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿರುವ ಅತ್ಯಂತ ಸಾಧಾರಣವಾದ 1 BHK ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಅವರ ತಂದೆ-ತಾಯಿ ಮೇಲಿನ ಮಹಡಿಯಲ್ಲಿ ವಾಸವಿದ್ದಾರೆ. ದೇಶದ ಅತಿ ದೊಡ್ಡ ಸೂಪರ್‌ಸ್ಟಾರ್ ಆದ ಮೇಲೆಯೂ ಅವರು ಈ ಸಣ್ಣ ಮನೆ ಬಿಟ್ಟು ಕದಲಿಲ್ಲ. ಸದ್ಯ ಈ ಸಿಂಗಲ್ ಬೆಡ್‌ರೂಮ್ ಮನೆಯ ಮೌಲ್ಯವೇ ಸುಮಾರು 16 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಲ್ಮಾನ್ ಖಾನ್​​ಗೆ ಈ ಮನೆಯ ಮೇಲೆ ವಿಶೇಷ ಪ್ರೀತಿ ಇದೆ. ಈ ಮನೆಯನ್ನು ಅದೃಷ್ಟ ಎಂದು ಕೂಡ ಪರಿಗಣಿಸುತ್ತಾರೆ. ಹೀಗಾಗಿ, ಈ ಮನೆ ಬಿಟ್ಟು ಅವರು ಕದಲಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka News Today Live Updates: ರಾಮ ಮಂದಿರ ಹುಂಡಿ ಎಣಿಕೆ ಕಳ್ಳತನ ಪ್ರಕರಣ: ಎಸ್​​ಐಟಿಯಿಂದ ಟ್ರಸ್ಟ್‌ನ ಐದು ವರ್ಷಗಳ ಲೆಕ್ಕಪರಿಶೋಧನೆ – Kannada News | TV9 Kannada News Live 2 July 2026 Karnataka SIR, Udupi Mangalore Rains, Gruha Jyothi Scheme, Bengaluru Footpath Clearance News Updates

ರಾಮ ಮಂದಿರದ ಹುಂಡಿ ಹಣ ದುರ್ಬಳಕೆ ಸಂಬಂಧ ಎಸ್​​ಐಟಿ ತನಿಖೆ ಚುರುಕುಗೊಳಿಸಿದೆ. ಮತ್ತೊಂದೆಡೆ ಸಿಎಂ ಡಿ.ಕೆ. ಶಿವಕುಮಾರ್​​ ನೇತೃತ್ವದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಕರಾವಳಿ ಕರ್ನಾಟಕದಲ್ಲಿ ವರುಣಾರ್ಭಟ ಶುರುವಾಗಿದ್ದು, ಮೂರು ಜಿಲ್ಲೆಗಳಿಗೆ ರೆಡ್​​ ಅಲರ್ಟ್​​ ಘೋಷಿಸಲಾಗಿದೆ. ಇವೆಲ್ಲವೂ ಸೇರಿದಂದತೆ ರಾಜ್ಯ, ದೇಶ, ಸಿನಿಮಾ ಮತ್ತು ಕ್ರೀಡಾ ಸುದ್ದಿಗಳ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

Source link

ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಐತಿಹಾಸಿಕ ಗುರುದ್ವಾರ ಧ್ವಂಸ, ಭಾರತ ಎಚ್ಚರಿಕೆ – Kannada News | Pakistan: 125 Year Old Gurudwara Demolished, India Demands Immediate Rebuild

ಇಸ್ಲಾಮಾಬಾದ್, ಜುಲೈ 02: ಪಾಕಿಸ್ತಾನ(Pakistan)ದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಪವಿತ್ರ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಅನ್ನು ಸ್ಥಳೀಯ ಉದ್ಯಮಿಯೊಬ್ಬರು ಅಕ್ರಮವಾಗಿ ಕೆಡವಿ ಹಾಕಿದ್ದಾರೆ. ಲಾಹೋರ್‌ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಫಾರೂಕಾಬಾದ್‌ನಲ್ಲಿ ಜೂನ್ 24 ರ ರಾತ್ರಿ ನಡೆದಿರುವ ಈ ಕೃತ್ಯವು ಅಲ್ಲಿನ ಅಲ್ಪಸಂಖ್ಯಾತ ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತ ಸರ್ಕಾರವೂ ಈ ಧ್ವಂಸ ಕೃತ್ಯವನ್ನು ಬಲವಾಗಿ ಖಂಡಿಸಿದೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಿಖ್ ದೇವಾಲಯದ ಮೇಲೆ ನಡೆದಿರುವ ಈ ವಿಧ್ವಂಸಕ ಕೃತ್ಯ ಅತ್ಯಂತ ಶೋಚನೀಯವಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಳ್ಳುವ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ.

ಈ ಹೇಯ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಹಾಗೂ ಧ್ವಂಸಗೊಳಿಸಲಾದ ಗುರುದ್ವಾರದ ಭಾಗಗಳನ್ನು ಪಾಕಿಸ್ತಾನ ಸರ್ಕಾರವೇ ಸ್ವತಃ ತಕ್ಷಣವೇ ಪುನರ್ನಿರ್ಮಿಸಿಕೊಡಬೇಕು ಎಂದು ಭಾರತ ಆಗ್ರಹಿಸಿದೆ.

ಮತ್ತಷ್ಟು ಓದಿ: ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ

ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ (NOC) ಪಡೆಯದೆಯೇ ಉದ್ಯಮಿ ಈ ಕಟ್ಟಡವನ್ನು ನೆಲಸಮಗೊಳಿಸಿದ್ದಾನೆ. ಸ್ಥಳೀಯ ಸಿಖ್ಖರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಪಾಕಿಸ್ತಾನದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಸಚಿವ ರಮೇಶ್ ಸಿಂಗ್ ಅರೋರಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಅವರು, ಗುರುದ್ವಾರದ ಪುನಃಸ್ಥಾಪನೆ ಕೆಲಸವನ್ನು ತಕ್ಷಣವೇ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಗುರುದ್ವಾರದ ಸುತ್ತಮುತ್ತ ಇರುವ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಸರ್ಕಾರದ ಪುನರ್ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ 80 ವರ್ಷಗಳಿಂದ ಈ ಗುರುದ್ವಾರವು ಪಾಳುಬಿದ್ದಿತ್ತು ಮತ್ತು ಇಲ್ಲಿ ಅನೇಕ ಅಂಗಡಿಗಳು ಹಾಗೂ ಕುಟುಂಬಗಳು ನೆಲೆಸಿದ್ದವು ಎಂದು ಅವರು ವಾದಿಸಿದ್ದಾರೆ. ಈಗ ಗುರುದ್ವಾರವನ್ನು ಪುನಃಸ್ಥಾಪಿಸಿದರೆ ಇಲ್ಲಿನ ಡಜನ್ಗಟ್ಟಲೆ ಕುಟುಂಬಗಳು ಬೀದಿಪಾಲಾಗಲಿವೆ, ಆದ್ದರಿಂದ ಸರ್ಕಾರ ತಮಗೆ ಪರ್ಯಾಯ ವಸತಿ ಮತ್ತು ಜೀವನೋಪಾಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ವೈರಲ್ ಸೋಂಕು ಕೇಸ್​​ಗಳ ಸಂಖ್ಯೆ ಏರಿಕೆ: ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು – Kannada News | Bengaluru Sees Spike in Viral Infections: Doctors Explain Surge in Flu and Covid Cases

ಬೆಂಗಳೂರು, ಜುಲೈ 02: ಉಸಿರಾಟ ಸಂಬಂಧಿತ ವೈರಲ್ ಸೋಂಕುಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಮಖ್ಯೆ ಬೆಂಗಳೂರು ನಗರದಲ್ಲಿ ಹೆಚ್ಚಿದೆ. ವೈದ್ಯರ ಪ್ರಕಾರ, ಕೋವಿಡ್-19 ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯಾಗಿದ್ದರೂ, ಸೀಸನಲ್ ಇನ್‌ಫ್ಲುಯೆನ್ಜಾ ಸೋಂಕಿನ ಕೇಸ್​​ಗಳು ಹೆಚ್ಚು ವರದಿಯಾಗುತ್ತಿವೆ. ಮಳೆ, ಹವಾಮಾನದ ಏರಿಳಿತ ಹಾಗೂ ಶಾಲೆಗಳು ಪುನರಾರಂಭವಾಗಿರುವುದು ಸೋಂಕು ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ಸ್ವೈನ್ ಫ್ಲೂ ಮತ್ತು H3N2 ತಳಿಗಳ ಸೋಂಕು ಹೆಚ್ಚಳ

ವೈದ್ಯರ ಮಾಹಿತಿ ಪ್ರಕಾರ, ಇನ್‌ಫ್ಲುಯೆನ್ಜಾ ಎ ವೈರಸ್, ಅದರಲ್ಲೂ ಸ್ವೈನ್ ಫ್ಲೂ ಮತ್ತು H3N2 ತಳಿಗಳ ಸೋಂಕುಗಳು ಸದ್ಯ ಕೋವಿಡ್-19ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಮತ್ತೊಂದೆಡೆ, JN.1 ಕೋವಿಡ್ ರೂಪಾಂತರಿ ಇನ್ನೂ ಹರಡುತ್ತಿದ್ದರೂ, ಅದು ಒಮಿಕ್ರಾನ್ ಮಾದರಿಯಂತೆಯೇ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಕಳೆದ ಕೆಲವು ವಾರಗಳಿಂದ ಇನ್‌ಫ್ಲುಯೆನ್ಜಾ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಪ್ರತಿದಿನ ಸುಮಾರು 10 ರಿಂದ 15 ಇನ್‌ಫ್ಲುಯೆನ್ಜಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕಿಮ್ಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ತಜ್ಞೆ ಡಾ.ಅಂಕಿತಾ ತೇಜಾ ನಾರಾಯಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕೂರೋ ಬೆಂಗಳೂರಿನ ಪುರುಷರ ಲೈಫ್ ಡೇಂಜರ್; ಮಹಿಳೆಯರಿಗಿಂತ ಗಂಡಸರಿಗೆ ಬಿಪಿ, ಶುಗರ್ ಬರೋ ಚಾನ್ಸ್ ಜಾಸ್ತಿ

ಹೆಚ್ಚಿನ ರೋಗಿಗಳು ಜ್ವರ, ಮೂಗಿನಿಂದ ನೀರು ಸುರಿಯುವುದು, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಲಕ್ಷಣಗಳೊಂದಿಗೆ ಬರುತ್ತಿದ್ದು, ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿದ್ದಾರೆ. ಆದರೆ, ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕೆಲವರು ತೀವ್ರ ಉಸಿರಾಟದ ಸಮಸ್ಯೆಯಿಂದ ಐಸಿಯು ಚಿಕಿತ್ಸೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾಗಿದೆ. ತೀವ್ರ ಲಕ್ಷಣಗಳಿರುವವರಿಗೆ ಮಾತ್ರ ಕೋವಿಡ್ ಮತ್ತು ಇನ್‌ಫ್ಲುಯೆನ್ಜಾ ಪರೀಕ್ಷೆ ನಡೆಸಲಾಗುತ್ತಿರುವುದರಿಂದ, ಸೌಮ್ಯ ಕೋವಿಡ್ ಸೋಂಕಿನ ಕೆಲವು ಪ್ರಕರಣಗಳು ಪತ್ತೆಯಾಗದೇ ಉಳಿಯುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ವೈರಲ್ ಸೋಂಕು ಹರಡುವಿಕೆಗೆ ಇದೂ ಪ್ರಮುಖ ಕಾರಣ

ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಆಂತರಿಕ ವೈದ್ಯಕೀಯ ತಜ್ಞ ಡಾ.ಎಂ.ರವಿ ಕುಮಾರ್ ಅವರ ಪ್ರಕಾರ, ಕೋವಿಡ್ ಈಗ ಸ್ಥಳೀಯವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ (ಎಂಡೆಮಿಕ್) ಸೋಂಕಾಗಿ ಪರಿಣಮಿಸಿದೆ. JN.1 ರೂಪಾಂತರಿ ಸುಲಭವಾಗಿ ಹರಡಬಹುದಾದರೂ, ಬಹುತೇಕ ಪ್ರಕರಣಗಳಲ್ಲಿ ರೋಗದ ತೀವ್ರತೆ ಕಡಿಮೆಯೇ ಇರುತ್ತದೆ ಎಂದು ಅವರು ಹೇಳಿದ್ದಾರೆ. ವೈದ್ಯರ ಪ್ರಕಾರ, ಶಾಲೆಗಳು ಪುನರಾರಂಭವಾಗಿರುವುದೂ ವೈರಲ್ ಸೋಂಕು ಹರಡುವಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಮಕ್ಕಳು ಶಾಲೆಗಳಲ್ಲಿ ಪರಸ್ಪರ ಸೋಂಕು ತಗುಲಿ, ನಂತರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:40 am, Thu, 2 July 26

Source link

Exit mobile version