ಕೇತನ್ ಅಗರ್ವಾಲ್ ಸಾವಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ 5 ವರ್ಷ ಅಮಾನತು – Kannada News | Controversial Post on Ketan Aggarwal’s Death: AIDSA Suspends Dentist Dr. Muskan Soni for 5 Years Over Derogatory Instagram Post

ಡಾ. ಮುಸ್ಕಾನ್ ಸೋನಿ Image Credit source: Muskan Soni Instagram

ನವದೆಹಲಿ, ಜುಲೈ 01: ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಡೆಂಟಲ್ ಸ್ಟುಡೆಂಟ್ಸ್ ಅಂಡ್ ಸರ್ಜನ್ಸ್ ಅಸೋಸಿಯೇಷನ್ (AIDSA) ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಿ ಆದೇಶಿಸಿದೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೇತನ್ ಅಗರ್ವಾಲ್ ಅವರ ಸಾವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಅಮಾನತು ಆದೇಶದ ಪ್ರಕಾರ, ಡಾ. ಮುಸ್ಕಾನ್ ಸೋನಿ ಅವರು ಎಐಡಿಎಸ್ಎ ಸಂವಿಧಾನ, ನಡವಳಿಕೆ ಸಂಹಿತೆ ಮತ್ತು ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿ, ಮೃತ ಕೇತನ್ ಅಗರ್ವಾಲ್ ಕುರಿತು ಅನುಚಿತ, ಆಕ್ಷೇಪಾರ್ಹ ಹಾಗೂ ಅಗೌರವದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಂಘಟನೆಯಲ್ಲಿನ ಎಲ್ಲ ಹುದ್ದೆಗಳು, ಜವಾಬ್ದಾರಿಗಳು, ಸಮಿತಿಗಳು ಹಾಗೂ ಸದಸ್ಯತ್ವದಿಂದ ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಅವರು ಸಂಘಟನೆಯನ್ನು ಪ್ರತಿನಿಧಿಸಲು, ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲು ಅಥವಾ ಯಾವುದೇ ಹುದ್ದೆಗೆ ಸ್ಪರ್ಧಿಸಲು ಅಥವಾ ನೇಮಕಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ:  ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ದಂತ ವೈದ್ಯೆ ಪೋಸ್ಟ್​​ನಲ್ಲಿ ಏನಿತ್ತು?

ಕೇತನ್ ಅಗರ್ವಾಲ್ ಹತ್ಯೆ ಕುರಿತು ಡಾ. ಮುಸ್ಕಾನ್ ಸೋನಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಆ ವಿಡಿಯೊದಲ್ಲಿ ಅವರು ಆ ಪುಣೆಯ ಹುಡುಗನಿಗೆ ಕೂದಲೇ ಇರಲಿಲ್ಲ. ಇಂತಹ ಸುಳ್ಳು ಹೇಳಿದರೆ ಸಾಯುವುದು ಖಚಿತ. ಹೀಗಾಗಿಯೇ ಐ ಹೇಟ್​​ ಮೆನ್​​ ಎಂದು ಅವರು ಬರೆದುಕೊಂಡಿದ್ದರು.

ಆಕ್ರೋಶದ ಬೆನ್ನಲ್ಲೇ ಕ್ಷಮೆ

ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪಹಾಸ್ಯ ಮಾಡಿದ್ದ ವಿಡಿಯೊ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬಳಿಕ, ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ನಾನು ಬಳಸಿದ ಪದಗಳಿಗಾಗಿ ನನಗೆ ತುಂಬಾ, ತುಂಬಾ ವಿಷಾದವಾಗಿದೆ. ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದವರು ಹೇಳಿದ್ದಾರೆ. ಇದೇ ವೇಳೆ, “#IHateMen” ಎಂಬ ಪದಪ್ರಯೋಗವನ್ನು ಬಳಸಿದ್ದನ್ನು ಸಮರ್ಥಿಸಿಕೊಂಡಿರುವ ಅವರು, ನನ್ನ ಹಿಂದಿನ ಜೀವನದ ಕೆಲವು ವೈಯಕ್ತಿಕ ಅನುಭವಗಳಿಂದಾಗಿ ನಾನು ಈ ಪದವನ್ನು ಬಳಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಬಿಎಂಪಿ ಹಗರಣಗಳ ತನಿಖೆಗೆ ಆರ್. ಅಶೋಕ್ ಆಗ್ರಹ: ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕನ ತೀವ್ರ ವಾಗ್ದಾಳಿ! – Kannada News | R Ashoka Slams Minister Krishna Byre Gowda Over BBMP Corruption Scandals

ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ!

ಬೆಂಗಳೂರು, ಜುಲೈ 01: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಿಗಳ ಸಂತಾನಹರಣ ಮತ್ತು ಸಸಿ ನೆಡುವ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಸ್ವತಃ ಸಚಿವರೇ ಸರ್ಕಾರದ ಲೂಟಿಯನ್ನು ಬಯಲು ಮಾಡಿದ್ದಾರೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.

“ಕನ್ನಡಿಗರ ಕಿವಿಯಲ್ಲಿ ದಾಸವಾಳ ಇಡಬೇಡಿ”

ಸಭೆಯಲ್ಲಿ ಸಚಿವರು “ನನ್ನ ಕಿವಿಯಲ್ಲಿ ದಾಸವಾಳ ಹೂವು ಕಾಣ್ತಾ ಇದ್ಯಾ?” ಎಂದು ಅಧಿಕಾರಿಗಳನ್ನು ಕೇಳಿದ್ದನ್ನು ಉಲ್ಲೇಖಿಸಿರುವ ಆರ್. ಅಶೋಕ್, ಅಸಲಿಗೆ ಈ ಪ್ರಶ್ನೆಯನ್ನು ಕೇಳಬೇಕಾಗಿರುವುದು ತಾವಲ್ಲ ಸ್ವಾಮಿ, ಏಳೂವರೆ ಕೋಟಿ ಕನ್ನಡಿಗರು ನಿಮ್ಮ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ, ಕೆಳಮಟ್ಟದ ಅಧಿಕಾರಿಗಳ ಮೇಲೆ ರೋಷಾವೇಶ ತೋರಿಸಿದರೆ ಏನು ಪ್ರಯೋಜನ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಮೀಟಿಂಗ್‌ಗಳಲ್ಲಿ ಸಣ್ಣಪುಟ್ಟ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿದರೆ ಲೂಟಿ ಹೊಡೆದ ಹಣ ವಾಪಸ್ ಬರುತ್ತಾ? ಈ ಮಹಾಲೂಟಿಯ ಹಿಂದಿರುವ ದೊಡ್ಡ ದೊಡ್ಡ ತಿಮಿಂಗಲಗಳು ಯಾರು ಎನ್ನುವುದನ್ನು ತನಿಖೆ ಮಾಡಿಸಿ ಪತ್ತೆ ಹಚ್ಚಿ ಎಂದು ಅಶೋಕ್ ಸಚಿವರಿಗೆ ಸವಾಲು ಹಾಕಿದ್ದಾರೆ.

ಸಸಿ ನೆಡಲು 3,108 ಕೋಟಿ ರೂ., ನಾಯಿಗಳ ಆಪರೇಷನ್‌ಗೆ 42.50 ಕೋಟಿ ರೂ. ಲೂಟಿ!

ಬೆಂಗಳೂರಿನಲ್ಲಿ ಒಂದು ಸಸಿ ನೆಡಲು ಬರೋಬ್ಬರಿ 2,300 ರೂಪಾಯಿಯಿಂದ 3,108 ರೂಪಾಯಿವರೆಗೆ ವೆಚ್ಚ ಮಾಡಲಾಗುತ್ತಿದೆ. ಆದರೆ ರಸ್ತೆ ಬದಿಯಲ್ಲಿ ಸರಿಯಾಗಿ ಗುಣಿಯನ್ನೇ ತೆಗೆಯದೆ, ಗೊಬ್ಬರ ಹಾಕದೆ ಕೇವಲ ಕಾಗದದ ಮೇಲೆ ಗಿಡ ನೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ 42.50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೂ ಬೆಂಗಳೂರಿನಲ್ಲಿ ನಾಯಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗಾದರೆ ಬಡವರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

ಸಚಿವರ ಮೂಗಿನಡಿಯೇ ಲೂಟಿ; ಸರ್ಕಾರಕ್ಕೆ ಹಿಡಿತವಿಲ್ಲ!

ಪ್ರತಿ ಹಗರಣ ನಡೆದಾಗಲೂ ಕೇವಲ ಅಧಿಕಾರಿಶಾಹಿಯನ್ನಷ್ಟೇ ಹೊಣೆ ಮಾಡಿ ಸಚಿವರು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಮೇಲೆ ನಿಗಾ ಇಡಲು ಕಾರ್ಯಾಂಗವನ್ನು ಮುನ್ನಡೆಸಲು ಮಂತ್ರಿಗಳಿರುವುದು. ಸಚಿವರ ಮೂಗಿನಡಿಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತೇ? ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲ ಎಂಬುದು ಸಚಿವರ ಮಾತಿನಿಂದಲೇ ಜಗಜ್ಜಾಹೀರಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ. ತೆರಿಗೆ ಕಟ್ಟಿ ಕಂಗಾಲಾಗಿರುವ ಜನತೆಗೆ ಈ ಸರ್ಕಾರ ಮಹಾ ದ್ರೋಹ ಮಾಡುತ್ತಿದ್ದು, ಕೇವಲ ಸಭೆ ನಡೆಸಿ ರೀಲ್ಸ್ ಮಾಡುವುದನ್ನು ಬಿಟ್ಟು ಈ ಲೂಟಿಯ ಹಿಂದಿರುವ ಅಸಲಿ ಮುಖಗಳನ್ನು ಬಯಲಿಗೆಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ – Kannada News | VB G RAM G replaces MNREGA scheme for employment guarantee, officially comes to force from today

ನವದೆಹಲಿ, ಜುಲೈ 1: ಎರಡು ದಶಕಗಳ ಹಳೆಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MNREGA) ಸುಧಾರಿತ ರೂಪವಾದ ವಿಬಿ ಜಿ ರಾಮ್ ಜಿ ಕಾಯ್ದೆ ಇವತ್ತಿನಿಂದ (ಜುಲೈ 1) ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭಾರತ ಸರ್ಕಾರವು ಅತ್ಯಂತ ದೊಡ್ಡ ಬದಲಾವಣೆಗಳನ್ನು ತಂದಿದೆ. ಸುಮಾರು 20 ವರ್ಷಗಳ ಇತಿಹಾಸ ಹೊಂದಿರುವ ಮನರೇಗಾ (MGNREGA) ಯೋಜನೆಯ ಜಾಗಕ್ಕೆ ಈಗ ಜಿ ರಾಮ್ ಜಿ (VB- G RAM G – Viksit Bharat- Guarantee for Rozgar and Ajeevika Mission -Gramin) ಕಾಯ್ದೆ ಜಾರಿಗೆ ಬಂದಿದೆ.

ವಿಬಿ ಜಿ ರಾಮ್ ಜಿ ಮೂಲಕ ಮಾಡಲಾಗಿರುವ ಪ್ರಮುಖ ಬದಲಾವಣೆಗಳು

  • ಉದ್ಯೋಗ ದಿನಗಳ ಹೆಚ್ಚಳ: ಗ್ರಾಮೀಣ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಕಡ್ಡಾಯ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
  • ಗ್ರಾಮ ಯೋಜನೆಗಳಿಗೆ ಆದ್ಯತೆ: ಈ ಹಿಂದೆ ಕಾರ್ಮಿಕರು ಕೆಲಸ ಕೇಳಿದಾಗ ನೀಡಲಾಗುತ್ತಿತ್ತು (Demand-driven). ಆದರೆ ಇನ್ನು ಮುಂದೆ ಉಪಗ್ರಹ ಆಧಾರಿತ ಮ್ಯಾಪಿಂಗ್ (Geospatial mapping) ಬಳಸಿ ಮೊದಲೇ ಸಿದ್ಧಪಡಿಸಲಾದ ಗ್ರಾಮ ಅಭಿವೃದ್ಧಿ ಯೋಜನೆಗಳ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ.
  • ತಂತ್ರಜ್ಞಾನದ ಬಳಕೆ: ಯೋಜನೆಗಳನ್ನು ಗುರುತಿಸಲು ಮತ್ತು ಅವುಗಳ ಮೇಲ್ವಿಚಾರಣೆ ನಡೆಸಲು ಉಪಗ್ರಹ ಚಿತ್ರಗಳು, ಜಿಐಎಸ್ (GIS) ಮ್ಯಾಪಿಂಗ್ ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಲಾಗುತ್ತದೆ.
  • ಶಾಶ್ವತ ಆಸ್ತಿಗಳ ಸೃಷ್ಟಿ: ಕೇವಲ ತಾತ್ಕಾಲಿಕ ಕೆಲಸಗಳ ಬದಲಾಗಿ ರಸ್ತೆಗಳು, ನೀರಾವರಿ ವ್ಯವಸ್ಥೆಗಳು ಮತ್ತು ಜಲಸಂರಕ್ಷಣೆಯಂತಹ ದೀರ್ಘಕಾಲ ಬಾಳಿಕೆ ಬರುವ ಗ್ರಾಮೀಣ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ.
  • ವಿವಿಧ ಯೋಜನೆಗಳ ಸಮ್ಮಿಲನ: ಒಂದೇ ರೀತಿಯ ಕೆಲಸಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಮತ್ತು ದಕ್ಷತೆ ಹೆಚ್ಚಿಸಲು ಇದನ್ನು ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಜೋಡಿಸಲಾಗುತ್ತದೆ (Convergence).

ಇದನ್ನೂ ಓದಿ: ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ

ರಾಜಕೀಯ ಚರ್ಚೆ ಮತ್ತು ಸವಾಲುಗಳು

ಕೇಂದ್ರ ಸರ್ಕಾರವು ಈ ಬದಲಾವಣೆಯಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ ಎನ್ನುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಕಾನೂನಿನ ಪ್ರಕಾರ ರಾಜ್ಯ ಸರ್ಕಾರಗಳು ವೆಚ್ಚದ ಹೆಚ್ಚಿನ ಪಾಲನ್ನು ಭರಿಸಬೇಕಾಗಬಹುದು, ಇದು ರಾಜ್ಯಗಳ ಆರ್ಥಿಕತೆಯ ಮೇಲೆ ಹೊರೆಯಾಗಬಹುದು ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಅಲ್ಲದೆ, ಮುಂಗಾರು ಮಳೆಯ ಸಮಯದಲ್ಲಿ ಈ ಬದಲಾವಣೆ ತಂದಿರುವುದರಿಂದ ಆರಂಭದಲ್ಲಿ ಯೋಜನೆಗಳ ಅನುಮೋದನೆ ವಿಳಂಬವಾಗಬಹುದು ಎಂಬ ಆತಂಕವೂ ಇದೆ.

ಗ್ರಾಮೀಣ ಕಾರ್ಮಿಕರಿಗೆ ಈಗ 125 ದಿನಗಳ ಕೆಲಸದ ಗ್ಯಾರಂಟಿ ಸಿಗಲಿದೆ, ಆದರೆ ಕೆಲಸ ಸಿಗುವ ಮತ್ತು ಯೋಜನೆಗಳು ರೂಪಿತವಾಗುವ ವಿಧಾನ ಸಂಪೂರ್ಣ ಡಿಜಿಟಲ್ ಹಾಗೂ ವ್ಯವಸ್ಥಿತವಾಗಿ ಬದಲಾಗಲಿದೆ. ಹಿಂದಿನ ಮನ್ರೇಗಾ ಯೋಜನೆಯಲ್ಲಿ ಕೆಲಸದ ಖಾತ್ರಿ ಎಂಬ ಕಾರಣಕ್ಕೆ ಅನಗತ್ಯ ಕೆಲಸಗಳನ್ನು ಸೃಷ್ಟಿಸುವಂತಿತ್ತು ಎನ್ನುವ ಆರೋಪ ಇದೆ. ಆದರೆ, ಹೊಸ ಕಾಯ್ದೆಯು ಅಗತ್ಯ ಕೆಲಸಗಳನ್ನು ಆಧರಿಸಿ ಉದ್ಯೋಗಗಳನ್ನು ಹಂಚಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಸಣ್ಣ ವಿಷ್ಯಗಳನ್ನು ಸಂಭ್ರಮಿಸುವ ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆ – Kannada News | A foreign woman said that Indians are great in celebrating small things.

ಭಾರತಕ್ಕೆ ಬಂದ ವಿದೇಶಿಗರು (foreigner) ಇಲ್ಲಿನ ಆಚಾರ ವಿಚಾರ, ಆಹಾರ ಪದ್ಧತಿಯನ್ನು ಮನಸಾರೆ ಇಷ್ಟ ಪಡ್ತಾರೆ. ಭಾರತೀಯರ ಒಳ್ಳೆತನಕ್ಕೆ, ಗುಣಕ್ಕೆ ಫಿದಾ ಆಗುತ್ತಾರೆ. ಭಾರತೀಯರು ಸಣ್ಣ ಸಣ್ಣ ವಿಷ್ಯಗಳನ್ನು ಸಂಭ್ರಮಿಸುವುದನ್ನು ಕಂಡು ವಿದೇಶಿ ಮಹಿಳೆಯೊಬ್ಬರು ಫುಲ್ ಫಿದಾ ಆಗಿದ್ದಾರೆ. ವಿದೇಶಿ ಮಹಿಳೆ ಈ ದೇಶದ ಜನರು ಸಣ್ಣಪುಟ್ಟ ವೈಯಕ್ತಿಕ ಮೈಲಿಗಲ್ಲುಗಳನ್ನು ಹೇಗೆ ಸಂಭ್ರಮಿಸುವ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನೆಟ್ಟಿಗರ ಹೃದಯ ಗೆದ್ದಿದೆ.

ಗಾಬಿ (gabiinindia) ಎಂಬ ಮಹಿಳೆ ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ಗೆ ಭಾರತೀಯರು ಈ ಕ್ಷಣಗಳನ್ನು ಆಚರಿಸುವ ರೀತಿ ಇಷ್ಟ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ, ಶುಭೋದಯ ಹುಡುಗರೇ. ನಾನು ಯುರೋಪಿಯನ್, ಆದರೆ ನಾನೀಗ ಭಾರತದಲ್ಲಿ ವಾಸಿಸುತ್ತಿದ್ದೇನೆ. ನೀವು ಹೊಸ ಫೋನ್ ಖರೀದಿಸಿದಾಗ ಅಥವಾ ನೀವು ಹೊಸ ಸ್ಕೂಟಿ ಅಥವಾ ಹೊಸ ಕಾರು ಖರೀದಿಸಿದಾಗ ಜನರು ಇಲ್ಲಿ ನಿಮ್ಮನ್ನು ಅಭಿನಂದಿಸುತ್ತಿದ್ದಾರೆಂದು ನಾನು ಅರಿತುಕೊಂಡೆ. ಇದು ನಿಜಕ್ಕೂ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಯುರೋಪಿನಲ್ಲಿ ಈ ರೀತಿ ಅಭಿನಂದನೆ ಹೇಳುವುದನ್ನು ನಾನು ಎಂದಿಗೂ ನೋಡಿಲ್ಲ. ಇದು ತುಂಬಾ ಆಸಕ್ತಿದಾಯಕವಾಗಿದೆ. ಆದ್ದರಿಂದ ಈ ರೀತಿಯ ನಡವಳಿಕೆ ತುಂಬಾ ಸಕಾರಾತ್ಮಕ ಹಾಗೂ ದಯೆಯಿಂದ ಕೂಡಿದೆ. ಹೌದು, ಜನರು ಇಲ್ಲಿ ಬೇರೆ ಯಾವುದಕ್ಕೆ ಅಭಿನಂದಿಸುತ್ತಿದ್ದಾರೆಂದು ನೀವು ಕಾಮೆಂಟ್‌ಗಳಲ್ಲಿ ನನಗೆ ತಿಳಿಸಬಹುದು. ಇಲ್ಲಿ ಯುರೋಪ್ ಹಾಗೂ ಭಾರತದಲ್ಲಿನ ವ್ಯತ್ಯಾಸಗಳ ಬಗ್ಗೆ ನಾನು ಅರಿತುಕೊಂಡದ್ದನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇನೆ. ಮುಂದಿನ ಬಾರಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಣ್ಣ ಪುಟ್ಟ ವಿಷ್ಯಗಳನ್ನು ಸಂಭ್ರಮಿಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇನ್ನೊಬ್ಬರು, ದಕ್ಷಿಣ ಭಾರತದಲ್ಲಿ, ನೀವು ಹೊಸದನ್ನು ಖರೀದಿಸಿದ್ದೀರಿ ಎಂದು ಯಾರಿಗೂ ಹೇಳಬೇಡಿ, ಏಕೆಂದರೆ ಅವರು ಮೊದಲು ಕೇಳುವುದು ಪಾರ್ಟಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತೀಯರು ಸಣ್ಣ ಕ್ಷಣಗಳಲ್ಲಿಯೂ ಸಂತೋಷವನ್ನು ಹೇಗೆ ಕಂಡುಕೊಳ್ಳಬೇಕೆಂದು ತಿಳಿದಿದ್ದಾರೆ. ಇದು ಬದುಕನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಸಂಖ್ಯೆ! ದಿನಕ್ಕೆ 100 ಕರೆಗಳು ಬರುತ್ತಿವೆ ಎಂದ ಉರಗ ರಕ್ಷಕರು – Kannada News | Bengaluru Snake Hatching Season: 100 rescue calls per day, Shortage of Rescuers Leaves City Vulnerable to Venomous Reptiles

ಬೆಂಗಳೂರು, ಜುಲೈ 01: ಜೂನ್​ನಿಂದ ಆಗಸ್ಟ್​ವರೆಗಿನ ಅವಧಿಯು ಹಾವುಗಳ (Snakes) ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆದು ಮರಿ ಹೊರಬರುವ (Hatching Season) ಸಮಯವಾಗಿದೆ. ಈ ಸಮಯದಲ್ಲಿ ಮನೆಗಳ ಒಳಗೆ, ಸುತ್ತಮುತ್ತ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಬೆಂಗಳೂರಿನಲ್ಲೂ ಹಾವುಗಳ ಸಂತತಿ ಹೆಚ್ಚಾಗಿದ್ದು, ಉರಗ ರಕ್ಷಕರು ಪರದಾಡುವಂತಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಲಯಗಳಿಗೆ ಕೇವಲ 7 ಮಂದಿ ಉರಗ ರಕ್ಷಕರಿದ್ದು, ಸಾರ್ವಜನಿಕರಿಂದ ದಿನಕ್ಕೆ ಬರುವ 100ಕ್ಕೂ ಹೆಚ್ಚು ಕರೆಗಳಲ್ಲಿ (Rescue calls) ಕೇವಲ 10-15 ಕರೆಗಳಿಗೆ ಮಾತ್ರ ಸ್ಪಂದಿಸಲು ಸಾಧ್ಯವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

5 ವಲಯಗಳಿಗೆ ಕೇವಲ 7 ರಕ್ಷಕರು: ಹೆಚ್ಚಿದ ಆತಂಕ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ವಲಯಗಳಿಗೆ (City Corporations) ಕೇವಲ 7 ಜನ ಹಾವು ರಕ್ಷಕರಿದ್ದಾರೆ. ನಿಯಮಾವಳಿಗಳ ಪ್ರಕಾರ ಪ್ರತಿ ವಲಯಕ್ಕೆ ಕನಿಷ್ಠ ನಾಲ್ಕು ಉರಗ ರಕ್ಷಕರಿರಬೇಕು. ಆದರೆ ಪ್ರಸ್ತುತ ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ತಲಾ ಇಬ್ಬರು ಹಾಗೂ ಪೂರ್ವ, ಉತ್ತರ ಮತ್ತು ಕೇಂದ್ರ ವಲಯಗಳಲ್ಲಿ ತಲಾ ಒಬ್ಬರೇ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಒಬ್ಬ ರಕ್ಷಕ ದಿನಕ್ಕೆ ಗರಿಷ್ಠ 10 ರಿಂದ 15 ಕರೆಗಳನ್ನು ಮಾತ್ರ ನಿರ್ವಹಿಸಲು ಸಾಧ್ಯ. ಉಳಿದ 80ಕ್ಕೂ ಹೆಚ್ಚು ಕರೆಗಳಿಗೆ ಯಾರೂ ಹೋಗದ ಕಾರಣ, ಸಾರ್ವಜನಿಕರು ಭಯದಿಂದ ಹಾವುಗಳನ್ನು ಕೊಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿರಿಯ ವನ್ಯಜೀವಿ ವಾರ್ಡನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಷಪೂರಿತ ಹಾವುಗಳ ಭೀತಿ

ನಗರದಲ್ಲಿ ನಾಗರಹಾವು (Spectacled Cobra), ಕಟ್ಟುಹಾವು (Common Krait) ಮತ್ತು ಮಂಡಲದ ಹಾವುಗಳು (Russell’s Viper) ಹೆಚ್ಚಾಗಿ ಕಂಡುಬರುತ್ತಿದ್ದು, ಇವು ತೀರಾ ವಿಷಪೂರಿತವಾಗಿವೆ. ಹೊಸದಾಗಿ ಹುಟ್ಟಿದ ನಾಗರಹಾವಿನ ಸಣ್ಣ ಮರಿಯ ವಿಷವೂ ಸಹ ಕನಿಷ್ಠ 10 ಜನರನ್ನು ಕೊಲ್ಲುವಷ್ಟು ತೀವ್ರವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಮತ್ತೊಂದೆಡೆ, ನಿರಂತರವಾಗಿ ಜೀವದ ಹಂಗು ತೊರೆದು ಕೆಲಸ ಮಾಡುವ ಜಿಬಿಎ ವನ್ಯಜೀವಿ ರಕ್ಷಕರಿಗೆ ಕಳೆದ 6 ತಿಂಗಳಿನಿಂದ 18,000 ರೂಪಾಯಿಗಳ ಗೌರವಧನ ಪಾವತಿಯಾಗಿಲ್ಲ. ಗೌರವಧನವನ್ನು 35,000 ರೂಪಾಯಿಗೆ ಹೆಚ್ಚಿಸುವಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯೂ ಧೂಳು ಹಿಡಿಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ: ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ – Kannada News | Bengaluru Footpath Clearance Drive: Street Vendors Outraged in Chamarajapet Over Sudden Eviction

ಬೆಂಗಳೂರು, ಜುಲೈ 1: ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಗರದ ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲೂ ಈ ಕಾರ್ಯಚರಣೆ ಚುರುಕುಗೊಂಡಿದ್ದು, ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಒತ್ತುವರಿಗಳನ್ನು ತೆರವು ಮಾಡಲಾಗುತ್ತಿದೆ. ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿಯೂ ಕೇಂದ್ರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ನಿರ್ಮಾಣ ಸಾಮಗ್ರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

ಪಾದಚಾರಿ ಮಾರ್ಗದಲ್ಲಿ ಯಾವುದೇ ರೀತಿಯ ಕಟ್ಟಡ ಸಾಮಗ್ರಿಗಳನ್ನು ಅಥವಾ ಅಂಗಡಿಗಳನ್ನು ಇಡುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಆದರೆ, ಈ ತೆರವು ಕಾರ್ಯಾಚರಣೆಯಿಂದ ಬೀದಿ ಬದಿ ವ್ಯಾಪಾರಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ಬಿಬಿಎಂಪಿ ಈ ಹಿಂದೆ ಕೊಟ್ಟಿದ್ದ ಗುರುತಿನ ಚೀಟಿ ಪಡೆದು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ತಮ್ಮನ್ನು ಈಗ ತೆರವು ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಗುರುತಿನ ಚೀಟಿ ಕೊಟ್ಟವರೇ ಈಗ ನಮ್ಮ ಅಂಗಡಿಗಳನ್ನು ತೆರವು ಮಾಡುತ್ತಿದ್ದಾರೆ. ನಾವು ಎಲ್ಲಿಗೆ ಹೋಗಿ ವ್ಯಾಪಾರ ಮಾಡಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ. ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips : ಮನೆಯ ಅದೃಷ್ಟ ಬದಲಾಯಿಸುತ್ತೆ ಪರದೆಯ ಬಣ್ಣ; ಯಾವ ದಿಕ್ಕಿಗೆ ಯಾವ ಬಣ್ಣ ಶ್ರೇಷ್ಠ? – Kannada News | Vastu Curtains: Choose Right Colors and Directions for Home Harmony and Prosperity

ಕಿಟಕಿ, ಬಾಗಿಲಿನ ಪರದೆಯ ಬಣ್ಣImage Credit source: Getty Images

ಮನೆಯನ್ನು ಸುಂದರವಾಗಿ ಅಲಂಕರಿಸಲು ಬಣ್ಣ ಬಣ್ಣ ಪರದೆ(curtains)ಗಳನ್ನು ಬಳಸಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಪರದೆಗಳನ್ನು ನೇತುಹಾಕುವಾಗ ಅವುಗಳ ಬಣ್ಣ ಮತ್ತು ದಿಕ್ಕಿಗೆ ವಿಶೇಷ ಗಮನ ನೀಡಬೇಕು. ತಪ್ಪು ಬಣ್ಣವನ್ನು ಬಳಸುವುದರಿಂದ ವಾಸ್ತು ದೋಷಗಳು ಉಂಟಾಗಬಹುದು. ಸರಿಯಾದ ದಿಕ್ಕಿನಲ್ಲಿ ಸರಿಯಾದ ಬಣ್ಣದ ಪರದೆಗಳನ್ನು ಬಳಸುವುದರಿಂದ ಮನೆಯ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಸಮೃದ್ಧಿ ನೆಲೆಸುತ್ತದೆ. ಹಾಗಾದರೆ ವಾಸ್ತು ಪ್ರಕಾರ ಯಾವ ಕೋಣೆಗೆ ಅಥವಾ ಯಾವ ದಿಕ್ಕಿಗೆ ಯಾವ ಬಣ್ಣದ ಪರದೆಗಳನ್ನು ಹಾಕಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೆಂಪು ಪರದೆಗಳು:

ನಿಮ್ಮ ಮನೆಯಲ್ಲಿ ಸದಾ ಸಣ್ಣಪುಟ್ಟ ವಿಷಯಗಳಿಗೂ ಜಗಳ, ವಿವಾದಗಳು ಅಥವಾ ಮಾನಸಿಕ ಘರ್ಷಣೆಗಳು ನಡೆಯುತ್ತಿದ್ದರೆ, ಕೆಂಪು ಬಣ್ಣದ ಪರದೆಗಳು ಇದಕ್ಕೆ ಉತ್ತಮ ಪರಿಹಾರ ನೀಡಬಲ್ಲವು. ವಾಸ್ತು ಶಾಸ್ತ್ರದ ಪ್ರಕಾರ, ಕೆಂಪು ಬಣ್ಣದ ಪರದೆಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು. ಇದು ಕುಟುಂಬದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಸೌಹಾರ್ದತೆಯನ್ನು ಮೂಡಿಸುತ್ತದೆ. ಆದರೆ, ಮಲಗುವ ಕೋಣೆಯಲ್ಲಿಎಂದಿಗೂ ಕಡು ಕೆಂಪು ಬಣ್ಣದ ಪರದೆಗಳನ್ನು ಹಾಕದಂತೆ ವಾಸ್ತು ಶಾಸ್ತ್ರವು ಎಚ್ಚರಿಸುತ್ತದೆ.

ಗುಲಾಬಿ ಪರದೆಗಳು:

ಗುಲಾಬಿ ಬಣ್ಣವು ಪ್ರೀತಿ, ಶಾಂತಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಇದು ಕುಟುಂಬದಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಮತ್ತು ಮನೆಯಲ್ಲಿ ಪ್ರೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ನವದಂಪತಿಗಳ ಅಥವಾ ದಂಪತಿಗಳ ಮಲಗುವ ಕೋಣೆಯಲ್ಲಿ ಗುಲಾಬಿ ಬಣ್ಣದ ಪರದೆಗಳನ್ನು ಅಳವಡಿಸುವುದರಿಂದ, ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ, ತಿಳುವಳಿಕೆ ಮತ್ತು ಮಾಧುರ್ಯ ಹೆಚ್ಚಾಗುತ್ತದೆ.

ಬಿಳಿ ಮತ್ತು ಕ್ರೀಮ್ ಪರದೆಗಳು:

ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ? ಆರ್ಥಿಕ ತೊಂದರೆಗಳು ಕಾಡುತ್ತಿದ್ದರೆ ಬಿಳಿ ಬಣ್ಣದ ಪರದೆಗಳು ನಿಮಗೆ ಸಹಾಯ ಮಾಡಬಲ್ಲವು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ದಿಕ್ಕಿನ ಕಿಟಕಿ ಅಥವಾ ಬಾಗಿಲುಗಳಿಗೆ ಬಿಳಿ ಪರದೆಗಳನ್ನು ಹಾಕುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಸರಿಯಾದ ಫಲಿತಾಂಶವನ್ನು ನೀಡುವುದರ ಜೊತೆಗೆ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದರೊಂದಿಗೆ, ಮನೆಯ ವಾಯುವ್ಯ ದಿಕ್ಕಿನಲ್ಲಿರುವ ಮಲಗುವ ಕೋಣೆಗೆ ಕ್ರೀಮ್ ಬಣ್ಣದ ಪರದೆಗಳನ್ನು ಬಳಸುವುದು ಅತ್ಯುತ್ತಮವಾಗಿದೆ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಹಸಿರು ಪರದೆಗಳು:

ಹಸಿರು ಬಣ್ಣವನ್ನು ಪ್ರಕೃತಿ, ಸಮೃದ್ಧಿ, ಪ್ರಗತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡ ಅಥವಾ ಜೀವನದಲ್ಲಿ ನಿರಾಶೆಯಿಂದಾಗಿ ಸಂತೋಷದ ಕೊರತೆ ಕಾಡುತ್ತಿದ್ದರೆ ಹಸಿರು ಬಣ್ಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮನೆಯ ಪೂರ್ವ ದಿಕ್ಕಿಗೆ ಎದುರಾಗಿರುವ ಕಿಟಕಿ ಅಥವಾ ಬಾಗಿಲುಗಳ ಮೇಲೆ ಹಸಿರು ಪರದೆಗಳನ್ನು ನೇತುಹಾಕುವುದರಿಂದ ಮನೆಯಲ್ಲಿ ಸದಾ ಸಕಾರಾತ್ಮಕತೆ ಮತ್ತು ಸಂತೋಷದ ವಾತಾವರಣ ಇರುತ್ತದೆ.

ಹಳದಿ ಪರದೆಗಳು:

ಹಳದಿ ಬಣ್ಣವನ್ನು ಅತ್ಯಂತ ಶುಭ ಹಾಗೂ ಆಧ್ಯಾತ್ಮಿಕ ಬಣ್ಣವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಹಳದಿ ಬಣ್ಣದ ಪರದೆಗಳನ್ನು ಅಳವಡಿಸುವುದು ಅತ್ಯಂತ ಶ್ರೇಷ್ಠ ಮತ್ತು ವಾಸ್ತು ಆಧಾರಿತವಾಗಿದೆ. ಇದು ಮನೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮನೆಯ ಇತರ ಪ್ರಮುಖ ಕೋಣೆಗಳಲ್ಲಿ ಹಳದಿ ಪರದೆಗಳನ್ನು ಅಳವಡಿಸುವುದರಿಂದ ನಕಾರಾತ್ಮಕತೆ ದೂರವಾಗಿ, ಮಾನಸಿಕ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಆದರೆ ಮನೆಯಲ್ಲಿ ಎಂದಿಗೂ ತೀರಾ ಕಡು ಕಪ್ಪು ಅಥವಾ ಕಡು ನೀಲಿ ಬಣ್ಣದ ಪರದೆಗಳನ್ನು ಅತಿಯಾಗಿ ಬಳಸಬೇಡಿ. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ತಿಳಿ ಮತ್ತು ಸೌಮ್ಯವಾದ ಬಣ್ಣಗಳ ಪರದೆಗಳೇ ಮನೆಗೆ ಸದಾ ಮಂಗಳಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?

ನೆಲಮಂಗಲ, ಜುಲೈ 01: ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಮೆಡಿಕಲ್ ತ್ಯಾಜ್ಯವನ್ನು ಅಕ್ರಮವಾಗಿ ಎಸೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಮೆಡಿಕಲ್ ಶಾಪ್‌ಗಳ ಮಾಲೀಕರು ಎಲ್ಲೆಂದರಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಬಿಸಾಕುತ್ತಿದ್ದು, ಇದು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ಮಾತ್ರೆಗಳು, ಎಕ್ಸ್‌ಪೈರಿ ದಿನಾಂಕ ಮೀರಿದ ಔಷಧಗಳು, ಸಿರಂಜ್‌ಗಳು ಜನರು, ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಜಾನುವಾರುಗಳ ಆರೋಗ್ಯಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿವೆ. ಜಾನುವಾರುಗಳು ಈ ತ್ಯಾಜ್ಯವನ್ನು ಸೇವಿಸಿ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಅವರು, ಈ ಅಕ್ರಮ ವಿಲೇವಾರಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ. ಹಾಗೆಯೇ, ನೆಲಮಂಗಲ ತಾಲೂಕು ವೈದ್ಯಾಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ. ಆದರೆ, ಈ ಹಿಂದೆ ಕೂಡ ಇಂತಹ ಘಟನೆಗಳು ವರದಿಯಾಗಿದ್ದರೂ, ಅಧಿಕಾರಿಗಳಿಂದ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದ್ರಾಸ್ ಹೈಕೋರ್ಟ್​​ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ – Kannada News | Cow Slaughter Ban: Tamil Nadu Government Moves Supreme Court Challenging Madras High Court’s Order

ನವದೆಹಲಿ/ಚೆನ್ನೈ, ಜುಲೈ 01: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ವ್ಯಾಪ್ತಿಯನ್ನು ಮೀರಿ ನೀಡಲಾಗಿದೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ. ಮೇ 27ರಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣ್ ಅವರ ವಿಭಾಗೀಯ ಪೀಠವು, ಕಾಯ್ದೆಯಡಿ ಅನುಮತಿಸಲಾದ ಸಂದರ್ಭಗಳನ್ನು ಹೊರತುಪಡಿಸಿ, ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು ಅಥವಾ ಕರುವಿನ ಹತ್ಯೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಸರ್ಕಾರದ ವಾದವೇನು?

ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ಸೆಕ್ಷನ್ 4ರ ಪ್ರಕಾರ, 10 ವರ್ಷ ಮೇಲ್ಪಟ್ಟ, ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವೆಂದು ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣೀಕರಿಸಲ್ಪಟ್ಟ ಹಸುವನ್ನು ಮಾತ್ರ ವಧೆ ಮಾಡಲು ಅವಕಾಶವಿದೆ. ಆದರೆ ಹೈಕೋರ್ಟ್ ಈ ಕಾನೂನು ಚೌಕಟ್ಟನ್ನು ಮೀರಿ ಸಂಪೂರ್ಣ ನಿಷೇಧ ಹೇರಿರುವುದು ಕಾನೂನು ವ್ಯಾಪ್ತಿಯನ್ನು ಮೀರಿದ ಕ್ರಮ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ; ಹೇಗಿತ್ತು ಗೊತ್ತಾ ಆರೋಪಿಗಳ ಕಳ್ಳಾಟ? ಸ್ಫೋಟಕ ಮಾಹಿತಿ ರಿವೀಲ್​​

ಹೈಕೋರ್ಟ್​​ ಆದೇಶ ಏನು?

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ, ಅದನ್ನು ತಡೆಯುವಂತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನೂ ಉಲ್ಲೇಖಿಸಿತ್ತು.

ಬಹಳಷ್ಟು ಮುಸ್ಲಿಮರು ಬಕ್ರೀದ್ ದಿನ ಗೋವನ್ನು ಬಲಿ ನೀಡುವುದಿಲ್ಲ. ಗೋವನ್ನು ಬಲಿ ನೀಡುವುದು ಇಸ್ಲಾಂ ಧರ್ಮದ ಕಡ್ಡಾಯ ಆಚರಣೆಯಲ್ಲ. ಬಕ್ರೀದ್ ಸಂದರ್ಭದಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡಬಹುದು; ಅದಕ್ಕೆ ಗೋಹತ್ಯೆಯೇ ಏಕೈಕ ಮಾರ್ಗವಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿರುವುದನ್ನು ಹೈಕೋರ್ಟ್ ತಿಳಿಸಿತ್ತು. ಆದರೀಗ ಹೈಕೋರ್ಟ್​​ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಕೈ ತುಂಬಾ ಸಂಪಾದನೆಯಿದ್ರೂ ಕೆಲಸದಲ್ಲಿ ಖುಷಿಯಿಲ್ಲ; ಭ್ರಮನಿರಸ ಅನುಭವ ಬಿಚ್ಚಿಟ್ಟ ವ್ಯಕ್ತಿ – Kannada News | Unhappy at work: A man reveals his experience of job disillusionment

ಈಗ ಎಲ್ಲವೂ ಬದಲಾಗಿದೆ. ಕೈ ತುಂಬಾ ಸಂಪಾದನೆಯಿದೆ. ಆದರೆ ಕೆಲಸದಲ್ಲಿ (job) ನೆಮ್ಮದಿ ಖುಷಿ ನೆಮ್ಮದಿಯಂತೂ ಇಲ್ಲವೇ ಇಲ್ಲ. ಇದೀಗ ವ್ಯಕ್ತಿಯೊಬ್ಬರು ಉದ್ಯೋಗಿಗಳ ಭ್ರಮನಿರಸನದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಮೋಷನ್ ಸಿಕ್ಕಿದ್ರೂ, ಲೈಫ್ ಸೆಟ್ಲ್ ಆದ್ರೂ ತಾವು ಮಾಡುವ ಕೆಲಸದಲ್ಲಿ ಖುಷಿಯಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಮಾತನ್ನು ಒಪ್ಪಿಕೊಂಡಿದ್ದಾರೆ.

ನಾಸಿರ್ (the.headless) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಇದು ನನಗೆ ಮಾತ್ರನಾ, ಅಥವಾ ಯಾರೂ ನಿಜವಾಗಿಯೂ ತಮ್ಮ ಕೆಲಸವನ್ನು ಆನಂದಿಸುತ್ತಿಲ್ಲ ಎಂದು ಅನಿಸುತ್ತಿದೆಯೇ? ಕೆಲವು ವರ್ಷಗಳ ಹಿಂದೆ, ಕೆಲಸವು ನಿರಾಶಾದಾಯಕವಾಗಿದ್ದಿತು. ಆದರೆ ಹಣ ಸಿಗುತ್ತಿದ್ದಂತೆ ಜೀವನವು ಸ್ವಲ್ಪ ಸುರಕ್ಷಿತ ಎನಿಸಿತು. ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ, ಕಂಪನಿಗಳನ್ನು ಬದಲಾಯಿಸಿದರೂ, ಬಡ್ತಿ ಸಿಕ್ಕರೂ ಹಾಗೂ  ಮೌಲ್ಯಮಾಪನಕ್ಕಾಗಿ ಕಾಯುತ್ತಿದ್ದರೂ ತಮ್ಮ ಕೆಲಸವನ್ನು ಇಷ್ಟ ಪಡುತ್ತಿಲ್ಲ ಎಂದಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಹೀಗಾದಾಗ ಕೆಲಸಕ್ಕೆ ಸಂಬಂಧಿಸಿದ ಎಲ್ಲವೂ ಇದ್ದಕ್ಕಿದ್ದಂತೆ ಅರ್ಥಹೀನವೆನಿಸುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ, ಆದರೆ ನೀವು ಇನ್ನೂ ಸಾಕಷ್ಟು ಗಳಿಸುವುದಿಲ್ಲ. ನೀವು ಒಳ್ಳೆಯ ಕೆಲಸ ಮಾಡಿದರೆ, ನಿಮಗಿಂತ ಮೇಲಿರುವ ಯಾರಾದರೂ ಅದನ್ನು ಹಾಳು ಮಾಡುತ್ತಾರೆ. ಆ ಕೆಲಸದ ಎಲ್ಲಾ ಕ್ರೆಡಿಟ್ ಅವರೇ ತೆಗೆದುಕೊಳ್ಳುತ್ತಾರೆ. ನೀವು ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡಿದರೆ, ಕ್ಲೈಂಟ್ ಎಷ್ಟೇ ಅಸಮಂಜಸನಾಗಿದ್ದರೂ, ಅಂತಿಮವಾಗಿ ಅವರು ಅಭಿನಂದನೆ ಪಡೆಯುತ್ತಾರೆ. ಹೀಗಾಗಿ ನೀವು ಮಾಡುವ ಕೆಲಸವು ದಿನದ ಕೊನೆಯಲ್ಲಿ ಅರ್ಥಹೀನವೆಂದು ನಿಮಗೆ ಭಾವಿಸುತ್ತದೆ. ನಾನು ಹೇಳುತ್ತಿರುವುದು ಒಂದೇ ಇದರ ಅರ್ಥವೇನು?, ನಾವು ಇದನ್ನೆಲ್ಲಾ ಏಕೆ ಮಾಡುತ್ತಿದ್ದೇವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ

ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು, ಬಡ್ತಿ ಇನ್ನು ಮುಂದೆ ಪ್ರಗತಿಯಂತೆ ಭಾಸವಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಸಂಬಳ ಹೆಚ್ಚಾಗುತ್ತದೆ, ಆದರೆ ನೆಮ್ಮದಿ ಮಾತ್ರ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕಾರ್ಪೊರೇಟ್ ಜೀವನವು ಭ್ರಮನಿರಸವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version