5 ಪಂದ್ಯಗಳ ಸರಣಿಗೆ ಇಂಗ್ಲೆಂಡ್​ಗೆ ಬಂದಿಳಿದ ಟೀಮ್ ಇಂಡಿಯಾ – Kannada News | Team India arrives in England for T20I series

ಬಹುನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಡರ್ಹಾಮ್ ತಲುಪಿದೆ. ಜುಲೈ 1 ರಿಂದ (ನಾಳೆ) ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲು ತಂಡವು ಈಗಾಗಲೇ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ಆರಂಭಿಸಿದ್ದು, ಈ ಮೂಲಕ ಆಂಗ್ಲ ಬೌಲರ್​ಗಳನ್ನು ಭಾರತೀಯ ಬ್ಯಾಟರ್​ಗಳು ಸಜ್ಜಾಗುತ್ತಿದ್ದಾರೆ.

ಈ ಸರಣಿಗಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ಭಾರತ ಟಿ20 ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್),  ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್,  ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್,  ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

ಭಾರತ vs ಇಂಗ್ಲೆಂಡ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ / ಸ್ಥಳ ಸಮಯ (IST)
1ನೇ ಟಿ20 ಪಂದ್ಯ ಜುಲೈ 01, ಬುಧವಾರ ರಿವರ್ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಪಂದ್ಯ ಜುಲೈ 04, ಶನಿವಾರ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಪಂದ್ಯ ಜುಲೈ 07, ಮಂಗಳವಾರ ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಪಂದ್ಯ ಜುಲೈ 09, ಗುರುವಾರ ಬ್ರಿಸ್ಟಲ್ ಕೌಂಟಿ ಗ್ರೌಂಡ್, ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಪಂದ್ಯ ಜುಲೈ 11, ಶನಿವಾರ ರೋಸ್ ಬೌಲ್, ಸೌತಾಂಪ್ಟನ್ ಸಂಜೆ 7:00 ಗಂಟೆಗೆ
1ನೇ ಏಕದಿನ ಪಂದ್ಯ ಜುಲೈ 14, ಮಂಗಳವಾರ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ ಮಧ್ಯಾಹ್ನ 3:30ಕ್ಕೆ
2ನೇ ಏಕದಿನ ಪಂದ್ಯ ಜುಲೈ 16, ಗುರುವಾರ ಸೋಫಿಯಾ ಗಾರ್ಡನ್ಸ್, ಕಾರ್ಡಿಫ್ ಸಂಜೆ 5:30ಕ್ಕೆ
3ನೇ ಏಕದಿನ ಪಂದ್ಯ ಜುಲೈ 19, ಭಾನುವಾರ ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್ ಮಧ್ಯಾಹ್ನ 3:30ಕ್ಕೆ

ಇದನ್ನೂ ಓದಿ: WTC ಫೈನಲ್ ರೇಸ್​ನಿಂದ ಇಂಗ್ಲೆಂಡ್ ಔಟ್​..!

ಇಂಗ್ಲೆಂಡ್ ವಿರುದ್ಧದ ಐದು ಮ್ಯಾಚ್​ಗಳ ಟಿ20 ಸರಣಿ ಬಳಿಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Source link

Vasthu Tips: ಮನೆಯ ಮುಂಭಾಗದಲ್ಲಿ ಮೆಣಸಿನ ಗಿಡ ನೆಡಬಾರದು ಏಕೆ ಗೊತ್ತಾ? – Kannada News | Vastu Warning: Why Chili Plants in Front of Home Bring Conflict and Stress

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮನೆ ಹಾಗೂ ಅದರ ಸುತ್ತಮುತ್ತಲಿನ ಪರಿಸರಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಮನೆಯ ಒಳಗೆ ಮತ್ತು ಸುತ್ತಲೂ ಹರಿಯುವ ಶಕ್ತಿಯು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮನೆ ಕಟ್ಟುವಾಗ ಮಾತ್ರವಲ್ಲ, ಮನೆಯ ಸುತ್ತಮುತ್ತ ಯಾವ ಸಸ್ಯಗಳನ್ನು ನೆಡಬೇಕು ಎಂಬುದಕ್ಕೂ ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೆ, ವಾಸ್ತು ತಜ್ಞರ ಪ್ರಕಾರ ಮನೆಯ ಮುಂಭಾಗದಲ್ಲಿ ಮೆಣಸಿನ ಗಿಡವನ್ನು ಬೆಳೆಸುವುದು ಅಶುಭ ಎಂದು ಹೇಳಲಾಗುತ್ತದೆ. ಹಾಗಾದರೆ, ಇದಕ್ಕೆ ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಕುಟುಂಬದಲ್ಲಿ ಹೆಚ್ಚಾಗುತ್ತೆ ಕಲಹ ಮತ್ತು ಮಾನಸಿಕ ಒತ್ತಡ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆವರಣದಲ್ಲಿ ಮೆಣಸಿನ ಗಿಡವಿದ್ದರೆ ಅದು ಕುಟುಂಬ ಸದಸ್ಯರ ನಡುವೆ ಅನಗತ್ಯ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತದೆ. ವಿಶೇಷವಾಗಿ, ಮನೆಯ ಮುಂಭಾಗದಲ್ಲಿ ಈ ಗಿಡವಿದ್ದರೆ ಸಣ್ಣಪುಟ್ಟ ವಿಷಯಗಳಿಗೂ ಜಗಳಗಳು ಆರಂಭವಾಗಿ, ಕೆಲವೊಮ್ಮೆ ಗಂಭೀರ ಮಟ್ಟವನ್ನು ತಲುಪಬಹುದು. ಇದು ಮನೆಯಲ್ಲಿ ವಾಸಿಸುವ ಜನರ ಮಾನಸಿಕ ನೆಮ್ಮದಿಯನ್ನು ಕೆಡಿಸಿ, ಸದಾ ಒತ್ತಡದ ವಾತಾವರಣ ಇರುವಂತೆ ಮಾಡುತ್ತದೆ. ಆದ್ದರಿಂದಲೇ ಮನೆಯ ಮುಖ್ಯ ದ್ವಾರದ ಬಳಿ ಈ ಗಿಡ ಇರಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಆರ್ಥಿಕ ಪ್ರಗತಿ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ:

ಮನೆಯ ಮುಂಭಾಗದಲ್ಲಿ ತೀಕ್ಷ್ಣ ಸ್ವಭಾವದ ಗಿಡಗಳಿದ್ದರೆ ಅದು ಆ ಮನೆಯ ಆರ್ಥಿಕ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ ಎಂದು ನಂಬಲಾಗಿದೆ. ಇದು ಧನಾಗಮನವನ್ನು ಕುಂಠಿತಗೊಳಿಸುವುದಲ್ಲದೆ, ಅನಗತ್ಯ ಖರ್ಚುಗಳನ್ನು ಹೆಚ್ಚಿಸಬಹುದು. ಇದರೊಂದಿಗೆ, ಮನೆಯಲ್ಲಿರುವವರ ಆರೋಗ್ಯದ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರಬಹುದು.

ಮೆಣಸಿನ ಗಿಡ ಬೆಳೆಸಲು ಬಯಸುವವರಿಗೆ ವಾಸ್ತು ಪರಿಹಾರ:

ನಿಮಗೆ ಮನೆಯಲ್ಲಿ ಮೆಣಸಿನ ಗಿಡವನ್ನು ಬೆಳೆಸಲೇಬೇಕು ಎಂಬ ಹಂಬಲವಿದ್ದರೆ, ಅದಕ್ಕೂ ವಾಸ್ತು ಶಾಸ್ತ್ರದಲ್ಲಿ ಒಂದು ಪರ್ಯಾಯ ಮಾರ್ಗವಿದೆ. ಈ ಗಿಡವನ್ನು ಎಂದಿಗೂ ಮನೆಯ ಮುಂಭಾಗದಲ್ಲಿ ಅಥವಾ ಮುಖ್ಯ ದ್ವಾರಕ್ಕೆ ಎದುರಾಗಿ ಇಡಬೇಡಿ. ಬದಲಿಗೆ, ಇದನ್ನು ಮನೆಯ ಹಿತ್ತಲಿನಲ್ಲಿ ಅಥವಾ ಮನೆಯಿಂದ ಸ್ವಲ್ಪ ದೂರದಲ್ಲಿ, ಯಾರಿಗೂ ನೇರವಾಗಿ ಕಾಣಿಸದ ಜಾಗದಲ್ಲಿ ಬೆಳೆಸಬಹುದು. ಇದರಿಂದ ಅದರ ನಕಾರಾತ್ಮಕ ಪ್ರಭಾವ ಮನೆಗೆ ತಟ್ಟುವುದಿಲ್ಲ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣವಾಗಿ ವಾಸ್ತು ಶಾಸ್ತ್ರದ ನಂಬಿಕೆಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಮಂಗಳೂರು ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

ಕರ್ನಾಟಕದಲ್ಲಿ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಪಾರದರ್ಶಕತೆಗಾಗಿ ಚುನಾವಣಾ ಆಯೋಗ ಹಾಗೂ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಬೆಂಗಳೂರಿನಲ್ಲಿ ಸಾರ್ವಜನಿಕರ ನೆರವಿಗಾಗಿ ಕಂಟ್ರೋಲ್ ರೂಂ, ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯಾದ್ಯಂತ ಇದೇ ಕ್ರಮ ಅನುಸರಿಸಲಾಗುವುದು ಎಂದು ಆಯೋಗ ತಿಳಿಸಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ವೈರಲ್ ಆಗಿರುವ ಆಡಿಯೋ ಬಿಸಿಬಿಸಿ ರಾಜಕೀಯ ಚರ್ಚೆಗಳಿಗೆ ಗ್ರಾಸವಾಗಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ, ವೆನೆಜುವೆಲಾದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,719ಕ್ಕೆ ಏರಿಕೆಯಾಗಿದೆ. ಪ್ಯಾರಿಸ್‌ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದರೆ, ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ನಾಳೆಯಿಂದ (ಜುಲೈ 1) ಶುರುವಾಗಲಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಲೇಟೆಸ್ಟ್ ಅಪ್​ಡೇಟ್ಸ್​ಗಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ: ಬಟ್ಟೆಗಿಂತ ಹೊಲಿಗೆ ಕೂಲಿಯೇ ದುಪ್ಪಟ್ಟು! – Kannada News | Bengaluru Government School Parents Outraged as Uniform Stitching Charges Cost More Than Ready Made Clothes

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ (Karnataka) ಈಗಾಗಲೇ ಶಾಲೆಗಳು ಶುರುವಾಗಿವೆ. ಆದರೆ, ಇತ್ತ ಶಾಲಾ ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಉಚಿತ ಸಮವಸ್ತ್ರ ನೀಡುವ ವಿಷಯದಲ್ಲಿ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದೆ. ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಗಳ ಪೋಷಕರು ‘ನಮಗೆ ಸರ್ಕಾರದ ಉಚಿತ ಸಮವಸ್ತ್ರದ ಬಟ್ಟೆಯೇ ಬೇಡ, ನಾವೇ ಸ್ವಂತ ಹಣದಲ್ಲಿ ಖರೀದಿ ಮಾಡುತ್ತೇವೆ’ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಶಿಕ್ಷಣ ಇಲಾಖೆ ನೀಡುವ ಉಚಿತ ಬಟ್ಟೆಗಿಂತ ಅದರ ಹೊಲಿಗೆ ಕೂಲಿಯೇ ದುಪ್ಪಟ್ಟಾಗಿರುವುದು. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಟ್ಟೆಗಿಂತ ಹೊಲಿಗೆ ಕೂಲಿಯೇ ಎರಡು ಪಟ್ಟು ಹೆಚ್ಚು!

ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಈಗಾಗಲೇ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡಿದೆ. ಆದರೆ, ಬಟ್ಟೆಯ ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರೇ ಭರಿಸಬೇಕು ಎಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಒಂದು ಜೊತೆ ಶರ್ಟ್ ಹಾಗೂ ಪ್ಯಾಂಟ್ ಅಥವಾ ಚಡ್ಡಿ ಹೊಲಿಸಲು ಕನಿಷ್ಠ 1,300 ರಿಂದ 1,500 ರೂಪಾಯಿಗೂ ಅಧಿಕ ಹಣವನ್ನು ದರ್ಜಿಗಳು (Tailors) ಕೇಳುತ್ತಿದ್ದಾರೆ. ಈ ಭಾರಿ ಮೊತ್ತದ ಹೊಲಿಗೆ ವೆಚ್ಚವನ್ನು ಬಡ ಪೋಷಕರು ಭರಿಸಬೇಕಾಗಿ ಬಂದಿರುವುದರಿಂದ ಅವರು ಪರದಾಡುವಂತಾಗಿದೆ. ಕಳೆದ ಎರಡು ವರ್ಷಗಳಿಂದ ಶಿಕ್ಷಣ ಇಲಾಖೆ ಕೇವಲ ಬಟ್ಟೆಯನ್ನು ನೀಡುತ್ತಿದ್ದು, ಹೊಲಿಗೆ ಕೂಲಿ ಗಗನಕ್ಕೇರಿದೆ. ‘ಇಷ್ಟು ಹೊಲಿಗೆ ಕೂಲಿ ಕೊಡುವ ಹಣದಲ್ಲಿ ಮಾರುಕಟ್ಟೆಯಲ್ಲಿ ಎರಡು ಜೊತೆ ಸಿದ್ಧ (Ready-made) ಸಮವಸ್ತ್ರಗಳೇ ಸಿಗುತ್ತವೆ. ಹೀಗಾಗಿ ಸರ್ಕಾರ ಬಟ್ಟೆ ಕೊಡುವುದನ್ನು ನಿಲ್ಲಿಸಿ, ಸಿದ್ಧಪಡಿಸಿದ ಸಮವಸ್ತ್ರವನ್ನೇ ನೀಡಲಿ ಇಲ್ಲವಾದರೆ ಬೇಡವೇ ಬೇಡ’ ಎಂದು ಪೋಷಕರು ಶಿಕ್ಷಕರ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಣ್ಣ ಬಣ್ಣದ ಬಟ್ಟೆಗಳ ಗೋಳಾಟ

ಸದ್ಯ ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಲೈಟ್ ಬ್ಲೂ ಮೇಲಂಗಿ (ಶರ್ಟ್) ಮತ್ತು ನೇವಿ ಬ್ಲೂ ನಿಕ್ಕರ್ ಬಟ್ಟೆ ನೀಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ ಬಣ್ಣ ಮಿಶ್ರಿತ ಚಕ್ಸ್ ಇರುವ ಚೂಡಿದಾರ್ ಟಾಪ್, ಹಸಿರು ಬಾಟಮ್ ಹಾಗೂ ದುಪ್ಪಟ್ಟಾ ಮತ್ತು ನೇವಿ ಬ್ಲೂ ಸ್ಕರ್ಟ್ ಬಟ್ಟೆಗಳನ್ನು ವಿತರಿಸಲಾಗುತ್ತಿದೆ. ಈ ಬಟ್ಟೆಗಳನ್ನು ಹೊಲಿಸಿಕೊಳ್ಳಲು ಹಣವಿಲ್ಲದೆ, ಪೋಷಕರು ಹಿಂದೇಟು ಹಾಕುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಹೊಸ ಬಟ್ಟೆ ಸಿಕ್ಕಿದ್ದರೂ ಹಳೆಯ ಸಮವಸ್ತ್ರ ಧರಿಸಿಕೊಂಡೇ ಶಾಲೆಗೆ ಬರುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಶಾಲೆಗಳು! ಸರ್ಕಾರಿ ಶಾಲೆಗಳ ದುಸ್ಥಿತಿ ಕೇಳೋರಿಲ್ಲ

ಮತ್ತೊಂದು ವಿಚಿತ್ರವೆಂದರೆ, ಇಲಾಖೆಯು 7ನೇ ತರಗತಿಯ ಗಂಡು ಮಕ್ಕಳಿಗೆ ಚಡ್ಡಿಯ ಸಮವಸ್ತ್ರ ನೀಡುತ್ತಿದೆ. ಆದರೆ, ಈ ವಯಸ್ಸಿನ ವಿದ್ಯಾರ್ಥಿಗಳು ಚಡ್ಡಿ ಧರಿಸಲು ನಿರಾಕರಿಸುತ್ತಿದ್ದು, ಪ್ಯಾಂಟ್ ಧರಿಸುತ್ತಿದ್ದಾರೆ. ಹೀಗಾಗಿ ಪೋಷಕರು ಸರ್ಕಾರದ ಬಟ್ಟೆಯನ್ನು ಕೈಬಿಟ್ಟು ಸ್ವಂತ ಹಣದಲ್ಲಿ ಪ್ಯಾಂಟ್ ಖರೀದಿಸಿ ಕೊಡುತ್ತಿದ್ದಾರೆ.

ಅಧಿಕಾರಿಗಳ ಮತ್ತು ಆಯೋಗದ ಭರವಸೆ

ಈ ಗಂಭೀರ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್, ಶಾಲಾ ವಿದ್ಯಾರ್ಥಿಗಳ ಮತ್ತು ಪೋಷಕರ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲೇ ಸರಿಪಡಿಸುವ ಭರವಸೆ ನೀಡಿದ್ದಾರೆ. ಇತ್ತ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಹ ಪೋಷಕರ ಅಸಮಾಧಾನ ಹಾಗೂ ಹೊಲಿಗೆ ವೆಚ್ಚದ ಹೊರೆಯ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾಗಬಂಧಂ’ ಚಿತ್ರಕ್ಕಾಗಿ ಸಸ್ಯಹಾರಿಗಳಾದ ಚಿತ್ರತಂಡ: ರಹಸ್ಯ ಬಿಚ್ಚಿಟ್ಟ ನಟಿ ನಭಾ ನಟೇಶ್ – Kannada News | Naba Natesh on Nagabandham: Unique Parvati Role, Grand Sets and 5000 Dancers

ನಟಿ ನಭಾ ನಟೇಶ್ ಅವರು ಕನ್ನಡದವರು. ಸದ್ಯ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಒಳ್ಳೊಳ್ಳೆಯ ಆಫರ್​​ಗಳು ಹುಡುಕಿ ಬರುತ್ತಿವೆ. ಈಗ ವಿರಾಟ್ ಕರ್ಣ ಹಾಗೂ ಅಭಿಷೇಕ್ ನಾಮಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ನಾಗಬಂಧಂ’ ಸಿನಿಮಾದಲ್ಲಿ ನಭಾ (Nabha Natesh) ನಟಿಸಿದ್ದಾರೆ. ಇಡೀ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರ ಅವರದ್ದಂತೆ. ಸಿನಿಮಾ ಜುಲೈ 3ರಂದು ತೆರೆಗೆ ಬರಲು ಸಜ್ಜಾಗಿದೆ. ನಭಾ ನಟೇಶ್, ತಮ್ಮ ಪಾತ್ರ ಹಾಗೂ ಶೂಟಿಂಗ್ ಸೆಟ್‌ನ ರೋಚಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದುವರೆಗೆ ಮಾಡದ ವಿಭಿನ್ನ ಪಾತ್ರ

ಚಿತ್ರದಲ್ಲಿ ತಮ್ಮ ‘ಪಾರ್ವತಿ’ ಪಾತ್ರದ ಬಗ್ಗೆ ಮಾತನಾಡಿರುವ ನಭಾ, ‘ನಾನು ಈ ಹಿಂದೆ ಎಂದೂ ಇಂತಹ ಪಾತ್ರ ಮಾಡಿಲ್ಲ. ಪಾರ್ವತಿ ಸಾಂಪ್ರದಾಯಿಕ ಹುಡುಗಿಯಾಗಿದ್ದರೂ ಅಷ್ಟೇ ಧೈರ್ಯಶಾಲಿ. ಕಥೆಯ ಪ್ರತಿಯೊಂದು ಪ್ರಮುಖ ತಿರುವುಗಳು ಆಕೆಯ ನಿರ್ಧಾರಗಳ ಮೇಲೆಯೇ ಆಧಾರಿತವಾಗಿವೆ. ನನ್ನ ಕರಿಯರ್‌ನಲ್ಲೇ ಇದು ಅತ್ಯಂತ ಪ್ರಭಾವಶಾಲಿ ಪಾತ್ರ’ ಎಂದಿದ್ದಾರೆ.

ದೇವಸ್ಥಾನದ ಸೆಟ್‌, ಸಸ್ಯಹಾರಿ ಊಟ

ಈ ಚಿತ್ರಕ್ಕಾಗಿ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಬೃಹತ್ ಸೆಟ್ ಒಂದನ್ನು ಮರುಸೃಷ್ಟಿ ಮಾಡಲಾಗಿತ್ತು. ಆ ಸೆಟ್‌ನ ಒಳಗಿದ್ದ ಅನುಭವವನ್ನು ಹಂಚಿಕೊಂಡ ನಭಾ ನಟೇಶ್, ‘ದೇವಸ್ಥಾನದ ಸೆಟ್ ಒಳಗೆ ಕಾಲಿಡುತ್ತಿದ್ದಂತೆ ನಮಗೆ ನಿಜವಾದ ಭಕ್ತಿ ಮತ್ತು ಆಧ್ಯಾತ್ಮಿಕ ಭಾವನೆ ಮೂಡುತ್ತಿತ್ತು. ಚಿತ್ರತಂಡದ ಪ್ರತಿಯೊಬ್ಬರೂ ಆ ಪವಿತ್ರ ವಾತಾವರಣಕ್ಕೆ ಗೌರವ ನೀಡಿದ್ದರು. ಪ್ರತಿದಿನ ಶೂಟಿಂಗ್ ಆರಂಭಕ್ಕೂ ಮುನ್ನ ವಿಶೇಷ ಪೂಜೆ-ವಿಧಿವಿಧಾನಗಳು ನಡೆಯುತ್ತಿದ್ದವು. ಅಷ್ಟೇ ಅಲ್ಲದೆ, ಆ ಶೆಡ್ಯೂಲ್ ಮುಗಿಯುವವರೆಗೂ ಚಿತ್ರತಂಡದವರೆಲ್ಲರೂ ಕಡ್ಡಾಯವಾಗಿ ಸಸ್ಯಹಾರಿ ಆಹಾರವನ್ನೇ ಸೇವಿಸುತ್ತಿದ್ದೆವು’ ಎಂದು ಶೂಟಿಂಗ್ ದಿನಗಳನ್ನು ನೆನೆದಿದ್ದಾರೆ.

ಇದನ್ನೂ ಓದಿ: ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೀರೋಯಿನ್ ರೀತಿ ಕಾಣ್ತಿದ್ದಾರೆ ಕನ್ನಡದ ನಭಾ ನಟೇಶ್

5000 ನೃತ್ಯಗಾರರೊಂದಿಗೆ ಭರ್ಜರಿ ಸಾಂಗ್

ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಗಣೇಶ್ ಆಚಾರ್ಯ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಭಕ್ತಿ ಪ್ರಧಾನ ಸಾಂಗ್. ಇದರಲ್ಲಿ ಸುಮಾರು 5,000 ಜನ ನೃತ್ಯಗಾರರು ಭಾಗವಹಿಸಿದ್ದು, ವಿಶುವಲ್ ಆಗಿ ಈ ಹಾಡು ಪ್ರೇಕ್ಷಕರಿಗೆ ಕಣ್ಣಿನ ಹಬ್ಬವಾಗಲಿದೆಯಂತೆ. ‘ನಾಗಬಂಧಂ’ ಚಿತ್ರಮಂದಿರದಲ್ಲೇ ನೋಡಬೇಕಾದ ದೃಶ್ಯ ವೈಭವ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WTC ಫೈನಲ್ ರೇಸ್​ನಿಂದ ಇಂಗ್ಲೆಂಡ್ ಔಟ್​..! – Kannada News | England Virtually Eliminated from WTC 2027 Final Race

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಫೈನಲ್ ತಲುಪುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಕನಸು ಬಹುತೇಕ ಕಮರಿದೆ.  ನ್ಯೂಝಿಲೆಂಡ್ ವಿರುದ್ಧ ಎದುರಿಸಿದ ಭಾರಿ ಸೋಲು ಹಾಗೂ ಐಸಿಸಿ ವಿಧಿಸಿದ ಭಾರಿ ಪೆನಾಲ್ಟಿಯಿಂದಾಗಿ ಇಂಗ್ಲೆಂಡ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಇಂಗ್ಲೆಂಡ್​ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ರೇಸ್​ನಿಂದ ಹೊರಬಿದ್ದಿರುವುದು ಖಚಿತವಾಗಿದೆ.

ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಹಿನ್ನಡೆಗೆ ಕೇವಲ ಕಳಪೆ ಪ್ರದರ್ಶನ ಕಾರಣವಲ್ಲ, ಬದಲಿಗೆ ಮಂದಗತಿಯ ಓವರ್ ರೇಟ್ ದೊಡ್ಡ ಹೊಡೆತ ನೀಡಿದೆ.  ಅಂದರೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಐಸಿಸಿ ಇಂಗ್ಲೆಂಡ್ ತಂಡಕ್ಕೆ ಬರೋಬ್ಬರಿ 12 ಅಂಕಗಳ ದಂಡ ವಿಧಿಸಿದೆ. ಈ ಸರಣಿಯಲ್ಲಿ ಒಟ್ಟು 14 ಅಂಕಗಳನ್ನು ಕಳೆದುಕೊಂಡಿರುವುದು ಇಂಗ್ಲೆಂಡ್‌ಗೆ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಪ್ರಸ್ತುತ ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಕೇವಲ 26.39% ಪಾಯಿಂಟ್ಸ್ ಶೇಕಡಾವಾರು (PCT) ಅಂಕಗಳನ್ನು ಹೊಂದಿದ್ದು,  ಹೀಗಾಗಿ ಮುಂದಿನ 9 ಪಂದ್ಯಗಳಲ್ಲಿ ಗೆದ್ದರೂ ಫೈನಲ್​ಗೇರುವುದು ಕಷ್ಟಸಾಧ್ಯ.

ಏಕೆಂದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 87.50% ಪಾಯಿಂಟ್ಸ್ ಶೇಕಡಾವಾರು ಹೊಂದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 75.00% ಪಾಯಿಂಟ್ಸ್ ಶೇಕಡಾವಾರು ಹೊಂದಿದೆ.

  • ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್​ ಆಡಲಿದೆ.

ಇತ್ತ ಇಂಗ್ಲೆಂಡ್ ತಂಡವು ಮುಂದಿನ ಎಲ್ಲಾ ಮ್ಯಾಚ್​ಗಳಲ್ಲೂ ಜಯ ಸಾಧಿಸಿದರೆ  57.94% ಪಾಯಿಂಟ್ಸ್ ಶೇಕಡಾವಾರು ಮಾತ್ರ ಹೊಂದಲಿದೆ. ಅಂದರೆ ಈಗ ಟಾಪ್-2 ನಲ್ಲಿರುವ ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾ ತಂಡಗಳನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ: ಆ ತಪ್ಪನ್ನು ಮತ್ತೆ ಮಾಡ್ಬೇಡಿ… ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಕಿಡಿ!

ಏಕೆಂದರೆ  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಇತಿಹಾಸ ಮತ್ತು ಪ್ರಸ್ತುತ ಪೈಪೋಟಿಯ ಪ್ರಕಾರ ಫೈನಲ್ ತಲುಪಲು ಕನಿಷ್ಠ 60% ರಿಂದ 64% PCT ಅಗತ್ಯವಿರಲಿದೆ. ಆದರೆ ಇಂಗ್ಲೆಂಡ್ ತಂಡವು ಮುಂದಿನ 9 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದರೂ ಪಡೆಯುವುದು 57.94% PCT ಮಾತ್ರ.  ಹೀಗಾಗಿಯೇ ಇಂಗ್ಲೆಂಡ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ಫೈನಲ್ ಕನಸು ಈ ಬಾರಿಯೂ ಭಗ್ನಗೊಂಡಿರುವುದು ಬಹುತೇಕ ಖಚಿತವಾಗಿದೆ.

Source link

ಆ ತಪ್ಪನ್ನು ಮತ್ತೆ ಮಾಡ್ಬೇಡಿ… ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಕಿಡಿ! – Kannada News | Benching Vaibhav Was A Mistake: Sunil Gavaskar Slams Team India

ಐರ್ಲೆಂಡ್ ಪ್ರವಾಸದಲ್ಲಿ ಎದುರಾದ ಆಘಾತಕಾರಿ ಸರಣಿ ಸೋಲಿನ ಬೆನ್ನಲ್ಲೇ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ನಾಯಕ ಸುನಿಲ್ ಗಾವಸ್ಕರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೆ ಐರ್ಲೆಂಡ್ ವಿರುದ್ಧ ಪೆಡ್ಲರ್ಸ್ ಮೈದಾನದಲ್ಲಿ ಆಡಲು ಅವಕಾಶ ನೀಡದಿರುವುದು ಮ್ಯಾನೇಜ್‌ಮೆಂಟ್ ಮಾಡಿದ “ದೊಡ್ಡ ತಪ್ಪು” ಎಂದು ಗಾವಸ್ಕರ್ ಗುಡುಗಿದ್ದಾರೆ.

ಬುಧವಾರದಿಂದ (ಜುಲೈ 1) ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ಈ ಪಂದ್ಯದಲ್ಲಾದರೂ ಭಾರತ ಆ ತಪ್ಪನ್ನು ಮರುಕಳಿಸಬಾರದು. ಅಲ್ಲದೆ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲೇ ಕಣಕ್ಕಿಳಿಸಬೇಕು ಎಂದು ಗವಾಸ್ಕರ್ ಆಗ್ರಹಿಸಿದ್ದಾರೆ.

ಸುನಿಲ್ ಗಾವಸ್ಕರ್ ವಾದವೇನು?

ಐರ್ಲೆಂಡ್‌ನಂತಹ ಕಡಿಮೆ ಒತ್ತಡದ ಸರಣಿಯಲ್ಲಿ ಯುವ ಆಟಗಾರ ವೈಭವ್‌ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸೂಕ್ತ ಅವಕಾಶವಿತ್ತು. ಆದರೆ ಮ್ಯಾನೇಜ್‌ಮೆಂಟ್ ಅತಿಯಾದ ಜಾಗರೂಕತೆ ತೋರಿ ಅವನನ್ನು ಬೆಂಚ್ ಮೇಲೆ ಕೂರಿಸಿದ್ದು ತಪ್ಪು ನಿರ್ಧಾರ ಎಂದು ಗಾವಸ್ಕರ್ ಹೇಳಿದ್ದಾರೆ.

ಐಪಿಎಲ್ 2026 ರಲ್ಲಿ ಭರ್ಜರಿ 776 ರನ್ ಸಿಡಿಸಿ ಅಬ್ಬರಿಸಿರುವ ವೈಭವ್‌ನ ಸ್ಫೋಟಕ ಬ್ಯಾಟಿಂಗ್ ಶೈಲಿ ಇಂಗ್ಲೆಂಡ್ ಬೌಲರ್‌ಗಳನ್ನು ಸುಲಭವಾಗಿ ಕಂಗಾಲು ಮಾಡಬಲ್ಲದು. ಅವನಲ್ಲಿರುವ ಪವರ್-ಹಿಟ್ಟಿಂಗ್ ಸಾಮರ್ಥ್ಯದ ಮುಂದೆ ಇಂಗ್ಲೆಂಡ್ ಹೈರಾಣರಾಗಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್​ನನ್ನು ಮೊದಲ ಪಂದ್ಯದಿಂದಲೇ ಕಣಕ್ಕಿಳಿಸಬೇಕು ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಯಾರನ್ನು ಕೈ ಬಿಡಬೇಕು?

ವೈಭವ್ ಸೂರ್ಯವಂಶಿಯನ್ನು ಕಣಕ್ಕಿಳಿಸಬೇಕಿದ್ದರೆ ಒಬ್ಬರನ್ನು ಕೈ ಬಿಡಬೇಕಿರುವುದು ಅನಿವಾರ್ಯ. ಆದರೆ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಅವರಂತಹ ಸೆಟ್ ಓಪನರ್‌ಗಳನ್ನು ಕೈಬಿಡುವ ಅಗತ್ಯವಿಲ್ಲ. ಬದಲಿಗೆ ಸದ್ಯ ಫಾರ್ಮ್‌ ಕಳೆದುಕೊಂಡು ಪರದಾಡುತ್ತಿರುವ ಮಿಡಲ್ ಆರ್ಡರ್ ಬ್ಯಾಟರ್ ಒಬ್ಬರನ್ನು ಕೈಬಿಟ್ಟು ವೈಭವ್‌ಗೆ ಜಾಗ ಮಾಡಿಕೊಡಬೇಕು ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.

ಸುನಿಲ್ ಗವಾಸ್ಕರ್ ಪ್ರಕಾರ, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿಯೇ ಮುಂದುವರೆಯಲಿ. ಇಲ್ಲಿ ಮಧ್ಯಮ ಕ್ರಮಾಂಕದಿಂದ ಒಬ್ಬರನ್ನು ಕೈ ಬಿಟ್ಟು ವೈಭವ್ ಸೂರ್ಯವಂಶಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ ಎಂದು ಗವಾಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ, ಇಂಗ್ಲೆಂಡ್​​ಗೆ ಸೋಲುಣಿಸಿ 21ನೇ ಶತಮಾನದಲ್ಲಿ ಇತಿಹಾಸ ಬರೆದ ಲ್ಯಾಥಮ್!

ಸುನಿಲ್ ಗವಾಸ್ಕರ್ ಅವರ ಸಲಹೆಯಂತೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ವೈಭವ್ ಸೂರ್ಯವಂಶಿಗೆ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.

Source link

Vasthu Shastra: ಮನೆಗೆ ಪದೇ ಪದೇ ಹಾವು ಬರುತ್ತಿದ್ದರೆ ಏನರ್ಥ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Snakes in Your Home? Vastu and Spiritual Meaning of Frequent Sightings

ಮನೆಗೆ ಪದೇ ಪದೇ ಹಾವು ಬರುತ್ತಿದ್ದರೆ ಏನರ್ಥ? Image Credit source: Getty Images

ಮಳೆಗಾಲದಲ್ಲಿ ಬಿಲಗಳಿಗೆ ನೀರು ತುಂಬುವುದರಿಂದ ಹಾವುಗಳು ಒಣ ಜಾಗವನ್ನು ಹುಡುಕುತ್ತಾ ಮನೆಯ ಸುತ್ತಮುತ್ತ ಹಾಗೂ ಮನೆಯೊಳಗೆ ಬರುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತಿದ್ದರೆ, ಅದನ್ನು ವಾಸ್ತು ಶಾಸ್ತ್ರದಲ್ಲಿ ಕೇವಲ ಕಾಕತಾಳೀಯ ಎಂದು ಪರಿಗಣಿಸುವುದಿಲ್ಲ. ಇದು ಮನೆಯಲ್ಲಿರುವ ಯಾವುದೋ ಪ್ರಮುಖ ವಾಸ್ತು ದೋಷದ ಮುನ್ಸೂಚನೆ ಎಂದು ಹೇಳಲಾಗುತ್ತದೆ.

ಪೂರ್ವಜರ ಆಶೀರ್ವಾದದ ಸಂಕೇತವೇ ಹಾವು?

ಆಧ್ಯಾತ್ಮಿಕ ಮತ್ತು ಪೌರಾಣಿಕ ದೃಷ್ಟಿಕೋನದಿಂದ ನೋಡಿದಾಗ, ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಿಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ತೋಟದಲ್ಲಿ ಹಾವು ಪದೇ ಪದೇ ಕಾಣಿಸಿಕೊಂಡು, ಅದು ಯಾರಿಗೂ ಯಾವುದೇ ಹಾನಿ ಮಾಡದೆ ಸುಮ್ಮನೆ ಹೊರಟುಹೋದರೆ, ಅದನ್ನು ಶುಭ ಸಂಕೇತ ಎನ್ನಲಾಗುತ್ತದೆ. ವಿದ್ವಾಂಸರ ಪ್ರಕಾರ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನಿಮ್ಮ ಪೂರ್ವಜರೇ (ಪಿತೃ ದೇವತೆಗಳು) ಹಾವಿನ ರೂಪದಲ್ಲಿ ಬಂದು ಆಶೀರ್ವಾದ ನೀಡುತ್ತಿದ್ದಾರೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿದೆ.

ಮನೆಯ ಮುಖ್ಯ ದ್ವಾರದಲ್ಲಿ ಹಾವು ಕಂಡರೆ ಆರೋಗ್ಯದ ಸಮಸ್ಯೆ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ (Main Entrance) ಅಥವಾ ಮನೆಯ ಒಳಗಿನ ಲಿವಿಂಗ್ ರೂಮ್‌ಗಳಲ್ಲಿ ಹಾವುಗಳು ಪದೇ ಪದೇ ಪ್ರವೇಶಿಸುತ್ತಿದ್ದರೆ ಅದು ತೀವ್ರವಾದ ವಾಸ್ತು ದೋಷವನ್ನು ಸೂಚಿಸುತ್ತದೆ. ಇಂತಹ ದೋಷಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರ ನೇರ ಪರಿಣಾಮ ಕುಟುಂಬದ ಸದಸ್ಯರ ಆರೋಗ್ಯದ ಮೇಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಆದಾಗ ಕುಟುಂಬಸ್ಥರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಹಾವಿನ ಬಣ್ಣಗಳ ರಹಸ್ಯ: ಯಾವ ಬಣ್ಣ ಏನನ್ನು ಸೂಚಿಸುತ್ತದೆ?

ನೀವು ನೋಡುವ ಹಾವಿನ ಬಣ್ಣದ ಆಧಾರದ ಮೇಲೆಯೂ ಅದರ ಶುಭ-ಅಶುಭ ಫಲಗಳನ್ನು ಜ್ಯೋತಿಷ್ಯದಲ್ಲಿ ವ್ಯಾಖ್ಯಾನಿಸಲಾಗಿದೆ:

  • ಬಿಳಿ ಹಾವು: ಅತ್ಯಂತ ಅಪರೂಪದ ಬಿಳಿ ಹಾವು ಮನೆಯ ಬಳಿ ಕಂಡರೆ ಅದು ಧನಲಾಭ ಮತ್ತು ಅದೃಷ್ಟದ ಸಂಕೇತವಾಗಿದೆ.
  • ಹಳದಿ ಹಾವು: ಹಳದಿ ಬಣ್ಣದ ಹಾವುಗಳು ನಿಮ್ಮ ಜೀವನದಲ್ಲಿ ಆಗಲಿರುವ ಆಧ್ಯಾತ್ಮಿಕ ಪ್ರಗತಿ ಮತ್ತು ಜ್ಞಾನದ ವೃದ್ಧಿಯನ್ನು ಸೂಚಿಸುತ್ತವೆ.
  • ಕಪ್ಪು ಹಾವು: ಕಪ್ಪು ಹಾವು ಪದೇ ಪದೇ ಕಾಣಿಸಿಕೊಂಡರೆ ಜಾತಕದಲ್ಲಿ ರಾಹು ದೋಷ ಅಥವಾ ಕಾಳಸರ್ಪ ದೋಷವಿರುವ ಸಾಧ್ಯತೆಯನ್ನು ಇದು ತೋರ್ಪಡಿಸುತ್ತದೆ.

ಗಮನಿಸಿ: ಆಧ್ಯಾತ್ಮಿಕ ನಂಬಿಕೆಗಳು ಏನೇ ಇದ್ದರೂ, ಹಾವುಗಳು ಕಂಡಾಗ ತಕ್ಷಣವೇ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಉರಗ ರಕ್ಷಕರನ್ನು (Snake Catchers) ಸಂಪರ್ಕಿಸುವುದು ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಮೊದಲ ಆದ್ಯತೆಯಾಗಿರಬೇಕು. ಭಯದಿಂದ ಹಾವಿಗೆ ಯಾವುದೇ ರೀತಿಯಿಂದಲೂ ಹಾನಿ ಮಾಡಬೇಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ಯಾರಿಸ್‌ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ – Kannada News | SS Rajamouli’s Eega Thrills Paris Audience; Director Receives Global Honor in Europe

ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ (Rajamouli) ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರ ಸೂಪರ್ ಹಿಟ್ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ‘ಆರ್‌ಆರ್‌ಆರ್’, ‘ಬಾಹುಬಲಿ’ ಮತ್ತು ‘ಈಗ’ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರಿಗಾಗಿ ಪ್ರದರ್ಶಿಸಲಾಗುತ್ತಿದೆ. ಸಮಂತಾ, ನಾನಿ, ಸುದೀಪ್ ಮೊದಲಾದವರು ನಟಿಸಿರೋ ‘ಈಗ’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ಯಾರಿಸ್‌ನಲ್ಲಿ ‘ಈಗ’ ಸಿನಿಮಾದ ಪ್ರದರ್ಶನ ನಡೆದಿದೆ. ಈ ವೇಳೆ ಚಿತ್ರದ ಪ್ರಮುಖ ದೃಶ್ಯವೊಂದಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ರಾಜಮೌಳಿ ಅವರ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಿನಿಮಾದ ಕೊನೆಯಲ್ಲಿ ನಾಯಕ ಕಿಚ್ಚ ಸುದೀಪ್ ಅವರಿಗೆ ನೊಣ ಚಾಲೆಂಜ್ ಹಾಕುವ ದೃಶ್ಯವಿದು. ನೊಣವು ಗೋಡೆಯ ಮೇಲೆ ‘ಐ ವಿಲ್ ಬಿ ಬ್ಯಾಕ್’ (ನಾನು ಮತ್ತೆ ಬರುತ್ತೇನೆ) ಎಂದು ಬರೆಯುತ್ತದೆ. ಈ ದೃಶ್ಯಕ್ಕೆ ಫ್ರಾನ್ಸ್ ದೇಶದ ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಖತ್ ಕಿರುಚಾಡಿ ಸಂಭ್ರಮಿಸಿದ್ದಾರೆ.

‘ಈಗ’ ಸಿನಿಮಾದ ಹಿನ್ನೆಲೆ

‘ಈಗ’ ಸಿನಿಮಾ 2012ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನಾನಿ, ಸಮಂತಾ ಮತ್ತು ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಖಳನಾಯಕನಿಂದ ಕೊಲೆಯಾಗುವ ನಾಯಕ ನೊಣವಾಗಿ ಮರುಜನ್ಮ ಪಡೆಯುತ್ತಾನೆ. ನಂತರ ತನ್ನ ಸಾವಿಗೆ ಸೇಡು ತೀರಿಸಿಕೊಳ್ಳುವ ವಿಭಿನ್ನ ಕಥೆ ಇದಾಗಿತ್ತು. ಸುದೀಪ್ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು.

ಇದನ್ನೂ ಓದಿ: ರಿಲೀಸ್​​ಗೆ 7 ತಿಂಗಳಿರುವಾಗಲೇ ‘ವಾರಣಾಸಿ’ ಶೂಟ್ ಪೂರ್ಣಗೊಳಿಸಲಿದ್ದಾರೆ ರಾಜಮೌಳಿ

ರಾಜಮೌಳಿಗೆ ಸಿಕ್ಕಿತು ಜಾಗತಿಕ ಗೌರವ

ಪ್ಯಾರಿಸ್ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಪ್ರತಿಷ್ಠಿತ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ದೊಡ್ಡ ಗೌರವ ಲಭಿಸಿದೆ. ಈ ಸಂಸ್ಥೆಯ ಹಾಲ್‌ನಲ್ಲಿ ರಾಜಮೌಳಿ ಅವರಿಗೆ ಖಾಯಂ ಸ್ಥಾನ ನೀಡಲಾಗಿದೆ. ಈ ಬಗ್ಗೆ ರಾಜಮೌಳಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ‘ಪ್ಯಾರಿಸ್‌ನಲ್ಲಿ ನನ್ನ ಚಿತ್ರಗಳ ಪ್ರದರ್ಶನ ಆಗುತ್ತಿರುವುದೇ ನನಗೆ ದೊಡ್ಡ ಗೌರವ. ಆದರೆ ಈ ವಿಶೇಷ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಫ್ರೆಂಚ್ ಸಂಸ್ಥೆಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣಕ್ಕೆ ಇನ್ಮುಂದೆ ವಾಕಿಂಗ್ ಹೋಗೋಕೂ ದುಡ್ಡು ಕೊಡಬೇಕು! – Kannada News | Bengaluru Hebbal Veterinary College Mandatory Entry Pass For Walkers To Curb Illegal Activities

ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣಕ್ಕೆ ಇನ್ಮುಂದೆ ವಾಕಿಂಗ್ ಹೋಗೋಕೂ ದುಡ್ಡು ಕೊಡಬೇಕು!

ಬೆಂಗಳೂರು, ಜೂನ್ 30: ರಾಜಧಾನಿಯ ಹೆಬ್ಬಾಳದಲ್ಲಿರುವ ಪ್ರಸಿದ್ಧ ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಇನ್ಮುಂದೆ ಸಾರ್ವಜನಿಕರು ಮುಕ್ತವಾಗಿ ವಾಯುವಿಹಾರ ಮಾಡಲೂ ಹಣ ಕೊಡಬೇಕೆಂಬ ಹೊಸ ರೂಲ್ಸ್ ಬಂದಿದೆ. ಆವರಣಕ್ಕೆ ಅಪರಿಚಿತರ ಪ್ರವೇಶ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿಯು ಭದ್ರತೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದು, ಹೊಸ ಪ್ರವೇಶ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ನಿಯಮ ಬದಲಾವಣೆ ಏಕೆ? ಇಲ್ಲಿದೆ ಅಸಲಿ ಕಾರಣ

ಹೆಬ್ಬಾಳದ ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಸುಮಾರು 300 ಎಕರೆ ವಿಸ್ತಾರವಾದ ಹಸಿರು ಆವರಣವನ್ನು ಹೊಂದಿದೆ. ವಿಶಾಲವಾದ ಈ ಕ್ಯಾಂಪಸ್‌ಗೆ ನಿತ್ಯ ನೂರಾರು ಸ್ಥಳೀಯ ನಿವಾಸಿಗಳು ವಾಯು ವಿಹಾರಕ್ಕಾಗಿ (ವಾಕಿಂಗ್) ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಅಪರಿಚಿತರು ಮತ್ತು ಕಿಡಿಗೇಡಿಗಳು ಕಾಲೇಜು ಆವರಣ ಪ್ರವೇಶಿಸುತ್ತಿರುವುದು ಹೆಚ್ಚಾಗಿತ್ತು. ಕ್ಯಾಂಪಸ್ ಒಳಗೆ ಅನೈತಿಕ ಚಟುವಟಿಕೆಗಳು, ಅನಧಿಕೃತ ವಾಹನ ನಿಲುಗಡೆ ಹಾಗೂ ವಿದ್ಯಾರ್ಥಿನಿಯರ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಧಕ್ಕೆ ತರುವಂತಹ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಕಾಲೇಜಿನ ಆಸ್ತಿಪಾಸ್ತಿ ರಕ್ಷಣೆಗೆ ಆಡಳಿತ ಮಂಡಳಿ ಮುಂದಾಗಿದೆ.

ಪಾಸ್ ಇದ್ದರೆ ಮಾತ್ರ ಎಂಟ್ರಿ: 100 ರೂ. ಶುಲ್ಕ ನಿಗದಿ

ಹೊಸ ನಿಯಮದ ಪ್ರಕಾರ, ವಾಯು ವಿಹಾರಕ್ಕಾಗಿ ಬರುವ ಸ್ಥಳೀಯ ನಿವಾಸಿಗಳು ಕಡ್ಡಾಯವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರವೇಶ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. ಪ್ರತಿ ಪಾಸ್​ಗೆ 100 ರೂ. ನಿಗದಿ ಮಾಡಿದ್ದು, ಈಗಾಗಲೇ 500 ಪಾಸ್​ಗಳು ವಿತರಣೆಯಾಗಿವೆ ಎಂದು ಹೇಳಲಾಗಿದೆ. ಪಾಸ್ ನೀಡಿದ ಮೇಲೂ ಕೇವಲ ಬೆಳಗ್ಗೆ ಮತ್ತು ಸಂಜೆಯ ನಿಗದಿತ ಸಮಯದಲ್ಲಿ ಮಾತ್ರ ವಾಕಿಂಗ್ ಮಾಡಲು ಅವಕಾಶವಿರಲಿದ್ದು, ಉಳಿದ ಸಮಯದಲ್ಲಿ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಡೀನ್ ಡಾ. ನಾಗರಾಜು, ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಶಿಸ್ತನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ಭದ್ರತೆಯನ್ನು ಬಲಪಡಿಸಲು ಮತ್ತು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಈ ಪಾಸ್ ವ್ಯವಸ್ಥೆ ತರಲಾಗಿದೆ ಎಂದು ತಿಳಿಸಿದ್ದಾರೆ. ಆಡಳಿತ ಮಂಡಳಿಯ ಈ ಶಿಸ್ತುಕ್ರಮಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

Source link

Exit mobile version