ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಫೈನಲ್ ತಲುಪುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಕನಸು ಬಹುತೇಕ ಕಮರಿದೆ. ನ್ಯೂಝಿಲೆಂಡ್ ವಿರುದ್ಧ ಎದುರಿಸಿದ ಭಾರಿ ಸೋಲು ಹಾಗೂ ಐಸಿಸಿ ವಿಧಿಸಿದ ಭಾರಿ ಪೆನಾಲ್ಟಿಯಿಂದಾಗಿ ಇಂಗ್ಲೆಂಡ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಿಂದ ಹೊರಬಿದ್ದಿರುವುದು ಖಚಿತವಾಗಿದೆ.
ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಹಿನ್ನಡೆಗೆ ಕೇವಲ ಕಳಪೆ ಪ್ರದರ್ಶನ ಕಾರಣವಲ್ಲ, ಬದಲಿಗೆ ಮಂದಗತಿಯ ಓವರ್ ರೇಟ್ ದೊಡ್ಡ ಹೊಡೆತ ನೀಡಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಐಸಿಸಿ ಇಂಗ್ಲೆಂಡ್ ತಂಡಕ್ಕೆ ಬರೋಬ್ಬರಿ 12 ಅಂಕಗಳ ದಂಡ ವಿಧಿಸಿದೆ. ಈ ಸರಣಿಯಲ್ಲಿ ಒಟ್ಟು 14 ಅಂಕಗಳನ್ನು ಕಳೆದುಕೊಂಡಿರುವುದು ಇಂಗ್ಲೆಂಡ್‌ಗೆ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಪ್ರಸ್ತುತ ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಕೇವಲ 26.39% ಪಾಯಿಂಟ್ಸ್ ಶೇಕಡಾವಾರು (PCT) ಅಂಕಗಳನ್ನು ಹೊಂದಿದ್ದು, ಹೀಗಾಗಿ ಮುಂದಿನ 9 ಪಂದ್ಯಗಳಲ್ಲಿ ಗೆದ್ದರೂ ಫೈನಲ್ಗೇರುವುದು ಕಷ್ಟಸಾಧ್ಯ.
ಏಕೆಂದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 87.50% ಪಾಯಿಂಟ್ಸ್ ಶೇಕಡಾವಾರು ಹೊಂದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 75.00% ಪಾಯಿಂಟ್ಸ್ ಶೇಕಡಾವಾರು ಹೊಂದಿದೆ.
- ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ.
ಇತ್ತ ಇಂಗ್ಲೆಂಡ್ ತಂಡವು ಮುಂದಿನ ಎಲ್ಲಾ ಮ್ಯಾಚ್ಗಳಲ್ಲೂ ಜಯ ಸಾಧಿಸಿದರೆ 57.94% ಪಾಯಿಂಟ್ಸ್ ಶೇಕಡಾವಾರು ಮಾತ್ರ ಹೊಂದಲಿದೆ. ಅಂದರೆ ಈಗ ಟಾಪ್-2 ನಲ್ಲಿರುವ ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾ ತಂಡಗಳನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ: ಆ ತಪ್ಪನ್ನು ಮತ್ತೆ ಮಾಡ್ಬೇಡಿ… ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಕಿಡಿ!
ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಇತಿಹಾಸ ಮತ್ತು ಪ್ರಸ್ತುತ ಪೈಪೋಟಿಯ ಪ್ರಕಾರ ಫೈನಲ್ ತಲುಪಲು ಕನಿಷ್ಠ 60% ರಿಂದ 64% PCT ಅಗತ್ಯವಿರಲಿದೆ. ಆದರೆ ಇಂಗ್ಲೆಂಡ್ ತಂಡವು ಮುಂದಿನ 9 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದರೂ ಪಡೆಯುವುದು 57.94% PCT ಮಾತ್ರ. ಹೀಗಾಗಿಯೇ ಇಂಗ್ಲೆಂಡ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಈ ಬಾರಿಯೂ ಭಗ್ನಗೊಂಡಿರುವುದು ಬಹುತೇಕ ಖಚಿತವಾಗಿದೆ.
