Anik Dutta: ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ; ಮೂಡಿದೆ ಹಲವು ಅನುಮಾನ

ಬೆಂಗಾಲಿ ಚಿತ್ರರಂಗದ (Bengali Film Industry) ಖ್ಯಾತ ನಿರ್ದೇಶಕ ಅನಿಕ್ ದತ್ತಾ (Anik Dutta) ಅವರು ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದ ಟೆರೇಸ್‌ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬುಧವಾರ (ಮೇ 27) ಮಧ್ಯಾಹ್ನ ಈ ಘಟನೆ ನಡೆದಿದೆ. 64 ವರ್ಷ ವಯಸ್ಸಿನ ಅನಿಕ್ ದತ್ತಾ ಅವರು ತಮ್ಮ ಚೊಚ್ಚಲ ಚಿತ್ರ ‘ಭೂತೇರ್ ಭವಿಷ್ಯತ್’ (2012) ಮತ್ತು ವಿಮರ್ಶಾತ್ಮಕವಾಗಿ ಪ್ರಶಂಸೆ ಗಳಿಸಿದ ‘ಅಪರಾಜಿತೋ’ (2022) ಸಿನಿಮಾ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ (Anik Dutta Death) ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಕೋಲ್ಕತ್ತಾದ ಹಿಂದುಸ್ತಾನ್ ಪಾರ್ಕ್‌ನಲ್ಲಿರುವ ಅನಿಕ್ ದತ್ತಾ ಅವರ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಹಡಿಯಿಂದ ಬಿದ್ದ ತಕ್ಷಣವೇ ಅವರನ್ನು ಗಂಭೀರ ಸ್ಥಿತಿಯಲ್ಲಿ ಧಾಕುರಿಯಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗಿದ್ದರೂ ಕೂಡ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎನ್ನಲಾಗಿದೆ.

ಅನಿಕ್ ದತ್ತಾ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ಮತ್ತು ತನಿಖಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆದರೆ, ಅವರ ಆಪ್ತರ ಪ್ರಕಾರ, ಅನಿಕ್ ದತ್ತಾ ಅವರು ಕಳೆದ ಕೆಲವು ಸಮಯದಿಂದ ತೀವ್ರ ಖಿನ್ನತೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಫ್ಲ್ಯಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಎಡಪಂಥೀಯ ಸಿದ್ಧಾಂತದ ಮತ್ತು ತೀಕ್ಷ್ಣ ಹಾಸ್ಯಪ್ರಜ್ಞೆಯ ಕಥೆಗಾರರಾಗಿದ್ದ ಅನಿಕ್ ದತ್ತಾ, ಆಧುನಿಕ ಬೆಂಗಾಲಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಚಲನಚಿತ್ರ ರಂಗಕ್ಕೆ ಬರುವ ಮುನ್ನ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಜಾಹೀರಾತು ರಂಗದಲ್ಲಿ ಯಶಸ್ವಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಭಾರತದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಕೂಡ ಜಾಹೀರಾತು ಲೋಕದಿಂದಲೇ ಸಿನಿಮಾ ರಂಗಕ್ಕೆ ಬಂದವರಾಗಿದ್ದರು.

ಇದನ್ನೂ ಓದಿ: ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು; ಚಿತ್ರರಂಗ ತೊರೆಯಲು ಅಸಲಿ ಕಾರಣ ಇಲ್ಲಿದೆ

ಸತ್ಯಜಿತ್ ರೇ ಅವರಿಗೆ ಗೌರವ ಸಲ್ಲಿಸಲು ಅನಿಕ್ ದತ್ತಾ ಅವರು 2022ರಲ್ಲಿ ‘ಅಪರಾಜಿತೋ’ ಚಿತ್ರವನ್ನು ನಿರ್ದೇಶಿಸಿದ್ದರು. ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಸಿನಿಮಾ ಮೇಕಿಂಗ್‌ನ ಜರ್ನಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಲ್ಲದೆ, 2024ರಲ್ಲಿ ಘೋಷಣೆಯಾದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:12 pm, Wed, 27 May 26

Source link

ನಾಳೆ ರಾಜೀನಾಮೆ ಕೊಡ್ತೀನಿ ಎಂದು CM ಹೇಳಿದ್ದಾರೆ: ಬಹಿರಂಗ ಪಡಿಸಿದ ಕಾಂಗ್ರೆಸ್ ಹಿರಿಯ ಶಾಸಕ

ಬೆಂಗಳೂರು, (ಮೇ 27): ಕರ್ನಾಟಕ ಕಾಂಗ್ರೆಸ್​​ನಲ್ಲಿನ  (Karnataka Congress) ನಾಯಕತ್ವ ಬದಲಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ಸದ್ಯ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ನಾಳೆಯೇ (ಮೇ 28) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ದೆಹಲಿ ಸಭೆ ಬಳಿಕ ಯಾವುದೇ ಶಾಸಕರು, ಸಚಿವರು ಸಿಎಂ ರಾಜೀನಾಮೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದರ ಮಧ್ಯೆ ಇದೀಗ ಕಾಂಗ್ರೆಸ್ ಹಿರಿಯ ಶಾಸಕ ಆರ್ ವಿ ದೇಶಪಾಂಡೆ, ಸಿದ್ದರಾಮಯ್ಯನವರ ರಾಜೀನಾಮೆಯನ್ನು ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೇಶಪಾಂಡೆ. ನಾಳೆ ರಾಜೀನಾಮೆ ಕೊಡ್ತೀನಿ ಎಂದು ಸಿಎಂ ಹೇಳಿದ್ದು, ನಾವು ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ನಾಳೆ (ಮೇ 28) ರಾಜೀನಾಮೆಯನ್ನು ಖಚಿತಪಡಿಸಿದರು.

ಇದನ್ನೂ ಓದಿ: ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

Source link

ಧಾರವಾಡ ಜನರ ದಶಕಗಳ ಬೇಡಿಕೆ ಈಡೇರುವ ಸಮಯ ಸನಿಹ: ಇದರಿಂದ ಜಿಲ್ಲೆಯ ಜನರಿಗೆ ಎಷ್ಟು ಲಾಭ?

ಬೆಣ್ಣೆಹಳ್ಳ ಅಭಿವೃದ್ಧಿ ಕಾಮಗಾರಿImage Credit source: tv9 kannada

ಧಾರವಾಡ, ಮೇ 27: ಜಿಲ್ಲೆಯ ಜನತೆಯ ಬಹುದಶಕಗಳ ಬೇಡಿಕೆಯೊಂದಕ್ಕೆ ಇದೀಗ ಪರಿಹಾರ ಸಿಗುತ್ತಿದೆ. ಪ್ರತಿವರ್ಷದಂತೆ ಹಲವು ದಶಕಗಳಿಂದ ಬೆಂಬಿಡದೇ ಕಾಡುತ್ತಿದ್ದ ಬೆಣ್ಣೆಹಳ್ಳದ (Bennehalla) ಪ್ರವಾಹಕ್ಕೆ ಶಾಶ್ವತ ತಡೆಗಾಗಿ ಕೊನೆಗೂ ಕಾಮಗಾರಿ ನಡೆದಿದ್ದು, ಶೇ. 60 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಆದಷ್ಟು ಬೇಗನೇ ಕೆಲಸ ಮುಗಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಈ ಬಾರಿ ಮಳೆಗಾಲದಲ್ಲಿ ಅನೇಕ ಗ್ರಾಮಗಳ ಜನರಿಗೆ ನೆಮ್ಮದಿ ಸಿಗುವ ಲಕ್ಷಣಗಳು ಕಾಣುತ್ತಿದೆ.

ಮುಖ್ಯಾಂಶಗಳು

  • ಧಾರವಾಡ ಜಿಲ್ಲೆಯ ಜನತೆಯ ಬಹುದಶಕಗಳ ಬೇಡಿಕೆಗೆ ಪರಿಹಾರ
  • ಭರದಿಂದ ಸಾಗಿರುವ ಬೆಣ್ಣೆ ಹಳ್ಳ ಅಭಿವೃದ್ಧಿ ಕಾಮಗಾರಿ
  • 200 ಕೋಟಿ ರೂ ಬಿಡುಗಡೆ ಮಾಡಿರುವ ರಾಜ್ಯ ಸರಕಾರ

ಬೆಣ್ಣೆಹಳ್ಳ ಹೆಸರು ಕೇಳಿದರೆ ಸಾಕು ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಚ್ಚಿ ಬೀಳುತ್ತಾರೆ. ಮಳೆಗಾಲದಲ್ಲಿ ಈ ಹಳ್ಳ ಸೃಷ್ಟಿಸುವ ಅನಾಹುತಗಳು ಒಂದಲ್ಲ ಎರಡಲ್ಲ. ಹೀಗಾಗಿ ಈ ಹಳ್ಳದ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತರು ಬೇಡಿಕೆ ಇಡುತ್ತಲೇ ಬಂದಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿ, ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ

ಅದರ ಅಂಗವಾಗಿ ಆರಂಭಿಕವಾಗಿ ರೂ. 200 ಕೋಟಿ ರೂ ಬಿಡುಗಡೆ ಮಾಡಿ, ಫೆಬ್ರವರಿ 8ರಂದು ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಶೇ. 60 ಕೆಲಸ ಮುಗಿದಿದೆ. ನವಲಗುಂದ ತಾಲೂಕಿನ ಯಮನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳದಲ್ಲಿನ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿದ್ದು, ಹೂಳನ್ನು ಕೂಡ ತೆಗೆಯಲಾಗಿದೆ. ಇದರಿಂದಾಗಿ ಹಳ್ಳದಲ್ಲಿ ನೀರು ಸರಾಗವಾಗಿ ಮುಂದಕ್ಕೆ ಹರಿಯಲಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳು ಹಾಗೂ ಹೊಲಗಳಿಗೆ ನೀರು ನುಗುವ ಸಾಧ್ಯತೆ ಕೂಡ ಕಡಿಮೆಯಾಗಲಿದೆ.

ಏನೆಲ್ಲಾ ಕಾಮಗಾರಿ ಕೈಗೊಳ್ಳಲಾಗಿದೆ?

ಮೊದಲನೇ ಹಂತದ ಈ ಕಾಮಗಾರಿಯಲ್ಲಿ ಬೆಣ್ಣೆಹಳ್ಳದ 60 ಕಿ.ಮೀಯಿಂದ 125 ಕಿಮೀವರೆಗೆ ಅತಿ ಅವಶ್ಯಕ ಸ್ಥಳದಲ್ಲಿ 1.05 ಕಿಮೀ ಕಾಂಕ್ರೀಟ್ ತಡೆಗೋಡೆ, 6.15 ಕಿ.ಮೀ ಏರಿ ನಿರ್ಮಾಣ, ಅತಿ ಅವಶ್ಯಕವಾಗಿರುವ 86 ಸ್ಥಳಗಳಲ್ಲಿ ಹೊಲದಲ್ಲಿನ ನೀರು ಹಳ್ಳವನ್ನು ಸೇರುವ ಇನ್‌ಲೆಟ್ ನಿರ್ಮಾಣ, ಉಪಹಳ್ಳ ಸೇರುವ ದೇಸಾಯಿಹಳ್ಳ, ಗುಂಡೇನಹಳ್ಳ ಮತ್ತು ಹಂದಿಗನಹಳ್ಳಗಳಲ್ಲಿ 500 ಮೀಟರ್ ಹೂಳೆತ್ತುವ ಕಾಮಗಾರಿ ನಡೆಯುತ್ತಿವೆ. ಏಳು ಕಡೆಗಳಲ್ಲಿ ರಸ್ತೆ ಸೇತುವೆಗಳ ನಿರ್ಮಾಣ, 2 ಕಡೆಗಳಲ್ಲಿ ಜಲಸಂಗ್ರಹಾರ ಕೈಗೊಳ್ಳಲು ಯೋಚಿಸಲಾಗಿದೆ.

ಇನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವ ಯಮನೂರು ಗ್ರಾಮದಲ್ಲಿ ಭಕ್ತರಿಗಾಗಿ 150 ಮೀಟರ್ ಉದ್ದದ ಸ್ನಾನಘಟ್ಟ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳಿಂದ ಧಾರವಾಡ ಹಾಗೂ ಗದಗ ಜಿಲ್ಲೆಗಳ 37 ಹಳ್ಳಿಗಳಲ್ಲಿನ ಪ್ರವಾಹ ತಡೆದಂತಾಗುತ್ತದೆ. ಜತೆಗೆ 20 ಸಾವಿರ ಹೆಕ್ಟೇ‌ರ್ ಪ್ರದೇಶ ಪ್ರವಾಹದಿಂದ ಮುಕ್ತವಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಬೆಣ್ಣೆಹಳ್ಳದ ಉಗ್ರಾವತಾರಕ್ಕೆ ಜನರು ಕಂಗಾಲು

ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿಯಲ್ಲಿ ಉಗಮವಾಗುವ ಬೆಣ್ಣೆಹಳ್ಳ ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಬರೋಬ್ಬರಿ 148 ಕಿಮೀ ಹರಿದು ಹೋಗುತ್ತದೆ. ತುಪ್ಪರಿಹಳ್ಳ, ರಾಡಿಹಳ್ಳ, ಹಂದಿಗನಹಳ್ಳ, ಇರವಿಹಳ್ಳ, ಹಿರೇಹಳ್ಳ, ಯರನಹಳ್ಳ ಸೇರಿದಂತೆ ಸರಿಸುಮಾರು 56 ಉಪಹಳ್ಳಗಳು ಇದಕ್ಕೆ ಸೇರುತ್ತವೆ. ಇವುಗಳಲ್ಲಿ ಅತ್ಯಂತ ಅತಿ ದೊಡ್ಡದೆಂದರೆ ತುಪ್ಪರಿಹಳ್ಳ. ಬೇಸಿಗೆ, ಚಳಿಗಾಲದಲ್ಲಿ ಮೈದಾನದಂತೆ ಭಾಸವಾಗುವ ಈ ಹಳ್ಳಗಳು, ಮಳೆಗಾಲದಲ್ಲಿ ತೋರುವ ಉಗ್ರಾವತಾರವೇ ಬೇರೆ. ಅಕ್ಷರಶಃ ಧಾರವಾಡ, ಗದಗ ಜಿಲ್ಲೆಗಳನ್ನು ಇವು ನಡುಗಿಸುತ್ತವೆ.

ಇವುಗಳ ಹಾವಳಿಗೆ 37 ಹಳ್ಳಿಗಳು ನರಕಯಾತನೆ ಅನುಭವಿಸುತ್ತವೆ. ಬೆಣ್ಣೆಹಳ್ಳ- ತುಪರಿಹಳ್ಳಗಳಿಂದ 22 ಟಿಎಂಸಿಗೂ ಅಧಿಕ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದುಹೋಗುತ್ತದೆ. ಈ ನೀರನ್ನು ಬಳಕೆ ಮಾಡಬೇಕು. ಜೊತೆಗೆ ಇಲ್ಲಿನ ಪ್ರವಾಹವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎನ್ನುವ ಹಲವಾರು ವರ್ಷಗಳ ಬೇಡಿಕೆಗೆ ಇದೀಗ ಪರಿಹಾರ ಸಿಗುತ್ತಿದೆ.

ಇದನ್ನೂ ಓದಿ: ಬೆಣ್ಣೆ ಹಳ್ಳ ಪ್ರವಾಹ: ದೇವಸ್ಥಾನದೊಳಗೆ ನುಗ್ಗಿದ ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥನ ರಕ್ಷಣೆ

2010ರವರೆಗೂ ಯಾವ ಇಲಾಖೆ ಈ ಹಳ್ಳಗಳನ್ನು ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ಯಾವುದೇ ನಿಯಮಗಳಿರಲಿಲ್ಲ. ಆದರೆ 2010ಕ್ಕೆ ಬೆಣ್ಣೆಹಳ್ಳ-ತುಪ್ಪರಿಹಳ್ಳಗಳನ್ನು ಆಗಿನ ಯಡಿಯೂರಪ್ಪ ಸರ್ಕಾರ ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿಸಿತ್ತು. ಪರಮಶಿವಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನೂ ನೀಡಿತ್ತು. ಬಳಿಕ ವಿವಿಧ ಹಂತಗಳಲ್ಲಿ ಸಮೀಕ್ಷೆಗಳನ್ನು ನಡೆಸಿ ರೂ. 1610 ಕೋಟಿ ರೂ ಯೋಜನೆಯನ್ನು ಸಿದ್ಧಪಡಿಸಿ ಡಿಪಿಆರ್‌ನ್ನು ಇಲಾಖೆಗೆ ಸಲ್ಲಿಸಿತು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷಗಳ ಹಿಂದೆಯೇ ರೂ. 200 ಕೋಟಿ ರೂ ಬಿಡುಗಡೆ ಮಾಡಿತ್ತು. ಆದರೆ ಕಾಮಗಾರಿ ನಾನಾ ಕಾರಣಗಳಿಂದಾಗಿ ಆರಂಭವಾಗಿರಲಿಲ್ಲ. ಸದ್ಯ ಇದೀಗ ಕಾಮಗಾರಿ ಆರಂಭವಾಗಿದ್ದು, ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೂರ್ಣ ಯೋಜನೆಗೆ ಅನುಮೋದನೆ ನೀಡಿ ಹಂತ ಹಂತವಾಗಿ ಕಾಮಗಾರಿ ಕೈಗೊಂಡರೆ ನಿಜಕ್ಕೂ ರೈತರಿಗೆ ಅನುಕೂಲವಾಗೋದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:01 pm, Wed, 27 May 26

Source link

ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ, ಕಾರಿನ ಕಿಟಕಿಗಳು ಪುಡಿಪುಡಿ

ತಿರುವನಂತಪುರಂ, ಮೇ 27: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿದ ಸಂದರ್ಭದಲ್ಲಿ ಸಿಪಿಐಎಂ ಬೆಂಬಲಿಗರು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಮೇಲೆ ದಾಳಿ ನಡೆಸಿದರು. ಇದರಿಂದ ಇಡಿ ಅಧಿಕಾರಿಗಳ ಕಾರಿನ ಕಿಟಕಿಗಳು ಪುಡಿಪುಡಿಯಾಗಿದ್ದವು. ತಿರುವನಂತಪುರಂ ಜಿಲ್ಲೆಯ ಬೇಕರಿ ಜಂಕ್ಷನ್‌ನಲ್ಲಿರುವ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಮನೆಯ ಮುಂದೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆಯಿತು.

ಸಿಪಿಐ(ಎಂ) ಕಾರ್ಯಕರ್ತರು ಇಡಿ ಅಧಿಕಾರಿಗಳ ವಾಹನವನ್ನು ಧ್ವಂಸಗೊಳಿಸಿದ್ದಾರೆ. ಇದಕ್ಕೂ ಮೊದಲು, ಕಣ್ಣೂರಿನಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸ ಮತ್ತು ಕೋಝಿಕ್ಕೋಡ್‌ನ ಕೊಟ್ಟುಲಿಯಲ್ಲಿರುವ ಮೊಹಮ್ಮದ್ ರಿಯಾಸ್ ಅವರ ನಿವಾಸದಲ್ಲಿ ಶೋಧ ಕಾರ್ಯ ಪೂರ್ಣಗೊಂಡಿತ್ತು. ಕೋಝಿಕ್ಕೋಡ್‌ನಲ್ಲಿ ಪೊಲೀಸರು ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೆದ್ದಿತು. ನಂತರ ನಾಯಕರು ಮಧ್ಯಪ್ರವೇಶಿಸಿ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತಂದರು. ಇಡಿ ಶೋಧ ಕಾರ್ಯಾಚರಣೆ ಸುಮಾರು 8 ಗಂಟೆಗಳ ಕಾಲ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಶತಕ, ಅರ್ಧಶತಕ ಬೇಡ; ಕೊಹ್ಲಿ ಇಷ್ಟು ರನ್ ಬಾರಿಸಿದರೆ ಸಾಕು ಗೆಲುವು ಖಚಿತ

ವಿರಾಟ್ ಕೊಹ್ಲಿ (Virat Kohli) ರನ್ ಗಳಿಸಿದಾಗಲೆಲ್ಲಾ ತಂಡಕ್ಕೆ ಗೆಲುವು ಖಚಿತ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅದು ಟೀಂ ಇಂಡಿಯಾ ಆಗಿರಲಿ ಅಥವಾ ಐಪಿಎಲ್ (IPL) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿರಲಿ, ಕೊಹ್ಲಿ ರನ್ ಗಳಿಸಿದಾಗಲೆಲ್ಲ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ. ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿಯ ಈ ಆಟದಿಂದಾಗಿ ತಂಡ ಕೂಡ ಕ್ವಾಲಿಫೈಯರ್ 1 ಗೆದ್ದು ಫೈನಲ್​ಗೇರಿದೆ. ಕ್ವಾಲಿಫೈಯರ್ 1 ರಲ್ಲಿಯೂ ಕೊಹ್ಲಿ 43 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕಾಕತಾಳೀಯವೆಂಬಂತೆ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿ ಪ್ಲೇಆಫ್ ಅಥವಾ ನಾಕೌಟ್ ಪಂದ್ಯದಲ್ಲಿ 43 ರನ್​ಗಳ ಇನ್ನಿಂಗ್ಸ್ ಆಡಿದ್ದು ಈ ಮೂರು ಪಂದ್ಯಗಳಲ್ಲೂ ತಂಡ ಗೆಲುವು ಸಾಧಿಸಿದೆ.

ಐಪಿಎಲ್ 2026 ರ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 26 ರ ಮಂಗಳವಾರ ಧರ್ಮಶಾಲಾದಲ್ಲಿ ನಡೆಯಿತು. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 254 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆಯನ್ನು ಆರ್​ಸಿಬಿ ಬರೆಯಿತು. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ನಾಯಕ ರಜತ್ ಪಾಟಿದಾರ್ ಆಡಿದ ಅಜೇಯ 93 ರನ್​ಗಳ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ರಜತ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ಆರಂಭಿಕನಾಗಿ ಕಣಕ್ಕಿಳಿದು 43 ರನ್​ಗಳ ಇನ್ನಿಂಗ್ಸ್ ಆಡಿ ತಂಡದ ಗೆಲುವನ್ನು ಆರಂಭದಲ್ಲೇ ಖಚಿತಪಡಿಸಿದರು.

43 ರನ್‌ ಬಾರಿಸಿದರೆ ಗೆಲುವು ಖಚಿತ

ಮೇಲೆ ಹೇಳಿದಂತೆ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆದಾಗ್ಯೂ ಕೊಹ್ಲಿಗೆ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಮತ್ತು ತಂಡ ದೊಡ್ಡ ಮೊತ್ತವನ್ನು ತಲುಪುವಲ್ಲಿ ಕೊಹ್ಲಿ ಆಡಿದ ಈ ಇನ್ನಿಂಗ್ಸ್ ಕೂಡ ಪರಿಣಾಮಕಾರಿಯಾಯಿತು. ಇದರ ಜೊತೆಗೆ ಕೊಹ್ಲಿ 43 ರನ್​ಗಳ ಇನ್ನಿಂಗ್ಸ್ ಆಡಿದಾಗಲೇ ಆರ್​ಸಿಬಿಗೆ ಗೆಲುವು ಖಚಿತವಾಗಿತ್ತು. ಇದಕ್ಕೆ ಕಾರಣವೂ ಇದ್ದು, ಈ ಹಿಂದೆ ಕೊಹ್ಲಿ 43 ರನ್​ಗಳ ಇನ್ನಿಂಗ್ಸ್ ಆಡಿದಾಗಲೇ ತಂಡ ಗೆಲುವು ಸಾಧಿಸಿದೆ.

RCB vs GT: ಸತತ 4ನೇ ಆವೃತ್ತಿಯಲ್ಲಿ 600 ರನ್; ಇತಿಹಾಸ ನಿರ್ಮಿಸಿದ ಕಿಂಗ್ ಕೊಹ್ಲಿ

3ನೇ ಬಾರಿಗೆ ಗೆದ್ದ ತಂಡ

ಕೊಹ್ಲಿ ಶತಕ ಅಥವಾ ಅರ್ಧಶತಕ ಗಳಿಸದೆ 43 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಮೂರನೇ ಬಾರಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇದಕ್ಕೂ ಮೊದಲು ಹಿಂದಿನ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿಯೂ ಕೊಹ್ಲಿ ಇದೇ ರೀತಿಯ ಇನ್ನಿಂಗ್ಸ್ ಆಡಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊಹ್ಲಿ, 35 ಎಸೆತಗಳಲ್ಲಿ 43 ರನ್ ಬಾರಿಸಿದ್ದರು. ಆ ಪಂದ್ಯವನ್ನು ಗೆಲ್ಲುವ ಮೂಲಕ ಆರ್​ಸಿಬಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಅದಕ್ಕೂ ಮೊದಲು, 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿಯೂ ಇಂಗ್ಲೆಂಡ್ ವಿರುದ್ಧ ಕೊಹ್ಲಿ 43 ರನ್ ಗಳಿಸಿದ್ದರು. ಆ ಪಂದ್ಯದಲ್ಲೂ ಭಾರತ ಗೆದ್ದು ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:43 pm, Wed, 27 May 26

Source link

Bakrid 2026: ಬಕ್ರೀದ್‌ ಹಬ್ಬದ ಸ್ಪೆಷಲ್‌ ಮಟನ್‌ ಬಿರಿಯಾನಿ; ಮಾಡೋದು ಬಲು ಸುಲಭ

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್‌ (Bakri Eid) ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು. ಈದ್ ಅಲ್-ಅಧಾ ಎಂದೂ ಕರೆಯಲ್ಪಡುವ ಈ ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಮನೋಭಾವ ಮತ್ತು ತ್ಯಾಗವನ್ನು ಸ್ಮರಿಸಲು ಆಚರಿಸಲಾಗುತ್ತದೆ. ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸಹಾಯ ಮನೋಭಾವದ ಪ್ರತೀಕವಾಗಿರುವ ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ. ಜೊತೆ ಮುಸ್ಲಿಂ ಬಾಂಧವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗಾಗಿ, ಪ್ರತಿ ಮನೆಯಲ್ಲಿ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ನೀವು ಈ ಬಾರಿಯ  ಬಕ್ರೀದ್‌ಗೆ ವಿಶೇಷವಾದದ್ದನ್ನು ತಯಾರಿಸಲು ಯೋಜಿಸುತ್ತಿದ್ದರೆ, ಈ ಸಾಂಪ್ರದಾಯಿಕ ಮಟನ್‌ ಬಿರಿಯಾನಿಯನ್ನು ತಯಾರಿಸಿ. ಈ ಸ್ಪೆಷಲ್‌ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

 ಬಕ್ರೀದ್‌ ಸ್ಪೆಷಲ್‌ ಮಟನ್‌ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು:

500 ಗ್ರಾಂ ಮಟನ್, 2 ಕಪ್ ಬಾಸ್ಮತಿ ಅಕ್ಕಿ, 2 ದೊಡ್ಡ ಈರುಳ್ಳಿ, 2 ಟೊಮ್ಯಾಟೊ, 1 ಕಪ್ ಮೊಸರು, 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-3 ಹಸಿ ಮೆಣಸಿನಕಾಯಿ, 1/2 ಕಪ್ ತಾಜಾ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನ ಸೊಪ್ಪು, 1 ಚಮಚ ಅಚ್ಚ ಖಾರದ ಪುಡಿ, 1/2 ಚಮಚ ಅರಿಶಿನ, 1 ಚಮಚ ಗರಂ ಮಸಾಲ, ಪಲಾವ್‌ ಎಲೆ, ಲವಂಗ, ದಾಲ್ಚಿನ್ನಿ, ಕರಿಮೆಣಸು, ಏಲಕ್ಕಿ, ತುಪ್ಪ ಅಥವಾ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕೇಸರಿ ಹಾಲು.

ಮಟನ್‌ ಬಿರಿಯಾನಿ ತಯಾರಿಸುವ ವಿಧಾನ:

ಹಂತ 1: ಮಟನ್ ಬಿರಿಯಾನಿ ಮಾಡಲು, ಮೊದಲು ಮಟನ್ ಅನ್ನು ಚೆನ್ನಾಗಿ ತೊಳೆದು ಅದನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲದೊಂದಿಗೆ ಸೇರಿಸಿ ಮ್ಯಾರಿನೇಟ್ ಮಾಡಿ. ಮಸಾಲೆಗಳು ಮಟನ್‌ಗೆ ಚೆನ್ನಾಗಿ ಹೀರಲ್ಪಡುವಂತೆ ಕನಿಷ್ಠ ಒಂದು ಗಂಟೆ ಮ್ಯಾರಿನೇಟ್ ಮಾಡಲು ಬಿಡಿ.

ಹಂತ 2: ಬಾಸ್ಮತಿ ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಂತರ, ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ, ತುಪ್ಪ, ಸ್ವಲ್ಪ ಉಪ್ಪು ಮತ್ತು ಪಲಾವ್‌ ಎಲೆ, ಲವಂಗ, ದಾಲ್ಚಿನ್ನಿ, ಏಲಕ್ಕಿ ಸೇರಿದಂತೆ ಇಡೀ ಮಸಾಲೆಗಳನ್ನು ಸೇರಿಸಿ, ಮತ್ತು ಮೊದಲೇ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಸೇರಿಸಿ, ಅಕ್ಕಿ 70% ಬೇಯುವವರೆಗೆ ಬೇಯಿಸಿ. ಅಕ್ಕಿ 70 ಬೆಂದ  ನಂತರ, ನೀರನ್ನು ಬಸಿಯಿರಿ.

ಇದನ್ನೂ ಓದಿ: ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ

ಹಂತ 3: ದಪ್ಪ ತಳದ ಪಾತ್ರೆಗೆ ತುಪ್ಪ ಅಥವಾ ಎಣ್ಣೆ ಹಾಕಿ, ಅದು ಕಾದ ಬಳಿಕ ಅದಕ್ಕೆ  ತೆಳ್ಳಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ರವರೆಗೆ ಹುರಿಯಿರಿ. ನಂತರ, ತೆಳ್ಳಗೆ ಹೆಚ್ಚಿದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಪುದೀನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಸಾಲೆ ಬೇಯುವವರೆಗೆ ಹುರಿಯಿರಿ. ಮತ್ತು ಕೊನೆಗೆ ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಟನ್ ಮೃದುವಾಗುವವರೆಗೆ ಬೇಯಿಸಿ.

ಹಂತ 4: ಮಟನ್ ಸಂಪೂರ್ಣವಾಗಿ ಬೆಂದ ನಂತರ, ಅದರ ಮೇಲೆ ಅರ್ಧ ಬೇಯಿಸಿದ ಅನ್ನವನ್ನು ಪದರಗಳಲ್ಲಿ ಹರಡಿ. ಸ್ವಲ್ಪ ತುಪ್ಪ, ಹುರಿದ ಈರುಳ್ಳಿ, ಪುದೀನ ಎಲೆಗಳು ಮತ್ತು ಕೇಸರಿ ಹಾಲನ್ನು ಸುರಿಯಿರಿ. ಪಾತ್ರೆಯನ್ನು ಬಿಗಿಯಾಗಿ ಮುಚ್ಚಿ ದಮ್‌ ಕಟ್ಟಿ 15 ರಿಂ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ ಮಟನ್‌ ಬಿರಿಯಾನಿ ಸವಿಯಲು ಸಿದ್ಧ.

ಈ ಬಿಸಿ ಬಿಸಿ ಮಟನ್ ಬಿರಿಯಾನಿಯನ್ನು ರೈತಾ ಅಥವಾ ಸಲಾಡ್‌ನೊಂದಿಗೆ ಬಡಿಸಿ, ಮನೆಯವರು ಹಾಗೂ ಅತಿಥಿಗಳ ಹೃದಯವನ್ನು ಗೆಲ್ಲಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ತೈಲಬಾವಿಯ ಸಾಂದರ್ಭಿಕ ಚಿತ್ರImage Credit source: AP

ಕೋಲ್ಕತ್ತಾ, ಮೇ 27: ಏಳೆಂಟು ವರ್ಷದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿದ್ದ ತೈಲ ನಿಕ್ಷೇಪವೊಂದಕ್ಕೆ ಕೊನೆಗೂ ಒಂದು ಮುಕ್ತಿ ಸಿಕ್ಕಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಅಶೋಕನಗರ್ ಆಯಿಲ್ ಫೀಲ್ಡ್​ನಲ್ಲಿ ತೈಲ ತೆಗೆಯುವ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ಅತಿ ಶೀಘ್ರದಲ್ಲೇ ಇಲ್ಲಿ ತೈಲ ಉತ್ಪಾದನೆ ಶುರುವಾಗಬಹುದು ಎನ್ನಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗೆ ಬಲ ಸಿಕ್ಕಿದಂತಾಗಿರುವುದು ಕಾಕತಾಳೀಯವಲ್ಲ. ರಾಜಕೀಯ ಇಚ್ಛಾ ಶಕ್ತಿ ಕೊರತೆ, ಸ್ಥಳೀಯರ ಗಲಾಟೆಗಳ ಮಧ್ಯೆ ತೈಲ ಉತ್ಪಾದನೆ ಬಹುತೇಕ ನೆನೆಗುದಿಯಲ್ಲಿ ಬಿದ್ದಂತಾಗಿತ್ತು. ಈಗ ಒಎನ್​ಜಿಸಿ ಸಂಸ್ಥೆಯಿಂದ ತೈಲ ಹೊರಬಗೆಯುವ ಕೆಲಸ ಸುಗಮವಾಗಲಿದೆ. ಇದರೊಂದಿಗೆ ಭಾರತದ ಇಂಧನ ಭದ್ರತೆ ಮತ್ತಷ್ಟು ಹೆಚ್ಚುವ ಸಂಭವ ಇದೆ.

ಕೋಲ್ಕತಾದಿಂದ ಕೇವಲ 50 ಕಿಮೀ ದೂರದಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಭಾಗಗಳಲ್ಲಿ ತೈಲ ನಿಕ್ಷೇಪಗಳಿರಬಹುದು ಎಂದು ವಿಜ್ಞಾನಿಗಳು ಸುಮಾರು 1950-60ರ ದಶಕದಲ್ಲೇ ಅಂದಾಜಿಸಿದ್ದರು. ಅಶೋಕನಗರ್ ಪಟ್ಟಣದಲ್ಲಿ 2018ರಲ್ಲಿ ಒಎನ್​ಜಿಸಿ ಸಂಸ್ಥೆ ತೈಲ ನಿಕ್ಷೇಪ ಪತ್ತೆ ಮಾಡಿತ್ತು. 2020 ರ ಕೊನೆಯಲ್ಲಿ ಇಲ್ಲಿ ವಾಣಿಜ್ಯ ಮಟ್ಟದ ತೈಲ ಉತ್ಪಾದನೆಗೆ ಚಾಲನೆ ಸಿಕ್ಕಿತು. ಆದರೆ, ಭೂ ವ್ಯಾಜ್ಯಗಳು, ಪರಿಸರ ಸಮಸ್ಯೆ, ಪರಿಹಾರ ಧನದ ಸಮಸ್ಯೆ, ಕೇಂದ್ರ ರಾಜ್ಯಗಳ ನಡುವೆ ತಿಕ್ಕಾಟ ಇವೇ ಮುಂತಾದ ಕಾರಣಗಳಿಗೆ ಇಲ್ಲಿ ಉತ್ಪಾದನೆಗೆ ಬ್ರೇಕ್ ಬಿದ್ದಿತ್ತು. ಒಂದು ಸಾವಿರ ಕೋಟಿ ರೂ ಹೂಡಿಕೆ ಮಾಡಲು ಸಜ್ಜಾಗಿದ್ದರೂ ಈ ಯೋಜನೆಯು ಪ್ಲಾನಿಂಗ್ ಹಂತದಿಂದ ಮೇಲೇರಲೇ ಇಲ್ಲ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇರುವುದರಿಂದ ಯೋಜನೆ ಜಾರಿ ಸಲೀಸಾಗಿದೆ.

ಅಶೋಕನಗರ್ ಆಯಿಲ್ ಫೀಲ್ಡ್​ನಲ್ಲಿ ಎಷ್ಟಿದೆ ತೈಲ?

ಅಶೋಕ್​ನಗರ್ ಆಯಿಲ್ ಫೀಲ್ಡ್​ನಲ್ಲಿ ಅಂದಾಜು 240 ಮಿಲಿಯನ್ ಬ್ಯಾರಲ್​ನಷ್ಟು ಕಚ್ಚಾ ತೈಲ ಸಂಗ್ರಹ ಇರಬಹುದು ಎನ್ನಲಾಗಿದೆ. ಈ ತೈಲ ನಿಕ್ಷೇಪದಿಂದ ಹೊರತೆಗೆಯಬಹುದಾದ ತೈಲದ ಮೌಲ್ಯ 45,000 ಕೋಟಿ ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ತೈಲದಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಒಟ್ಟು 4,500 ಕೋಟಿ ರೂನಷ್ಟು ಆದಾಯ ಸಿಗಬಹುದು ಎಂಬುದು ಪೆಟ್ರೋಲಿಯಂ ಸಚಿವಾಲಯದ ಅನಿಸಿಕೆ.

ಭಾರತದ ಇಂಧನ ಭದ್ರತೆಗೆ ಈ ನಿಕ್ಷೇಪ ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿದಂತೆ ಭಾರತದಲ್ಲಿ ಈಗ ಒಟ್ಟು 3 ಕಡೆ ಪೆಟ್ರೋಲಿಯಂ ಸಂಗ್ರಹಾಗಾರಗಳಿವೆ. ಎಲ್ಲಾ ಸೇರಿಸಿದರೆ ಭಾರತದಲ್ಲಿ 74 ದಿನಗಳಿಗೆ ಆಗುವಷ್ಟು ಪೆಟ್ರೋಲಿಯಂ ಸ್ಟ್ರಾಟಿಜಿಕ್ ರಿಸರ್ವ್ಸ್ ಇವೆ. ಈಗ ನಾರ್ತ್ 24 ಪರಗಣ ಜಿಲ್ಲೆಯ ತೈಲ ನಿಕ್ಷೇಪ ಸೇರಿಸಿದರೆ 130ಕ್ಕೂ ಹೆಚ್ಚು ದಿನಗಳಿಗೆ ರಿಸರ್ವ್ ಇದ್ದಂತಾಗುತ್ತದೆ. ಅಂದರೆ, ನಾಲ್ಕು ತಿಂಗಳಿಗೂ ಹೆಚ್ಚು ಕಾಲಕ್ಕೆ ಆಗುವಷ್ಟು ಪೆಟ್ರೋಲ್ ಸಂಗ್ರಹ ಭಾರತದಲ್ಲಿ ಇದ್ದಂತಾಗಲಿದೆ.

ಪೆಟ್ರೋಲ್-ಡೀಸೆಲ್ ಕೊರತೆಗೆ ಬ್ರೇಕ್

ಪ್ರಸ್ತುತ ಭಾರತವು ತನ್ನ ಇಂಧನ ಅಗತ್ಯದ ಸುಮಾರು 80-85% ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು (Import) ಮಾಡಿಕೊಳ್ಳುತ್ತದೆ. ಪಶ್ಚಿಮ ಬಂಗಾಳದ ಈ ನಿಕ್ಷೇಪವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರೆ, ದೇಶದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ನ ದೇಶೀಯ ಮಾರುಕಟ್ಟೆಗೆ ದೊಡ್ಡ ಆಸರೆಯಾಗಲಿದೆ.

ಅಶೋಕನಗರ್ ಆಯಿಲ್ ಫೀಲ್ಡ್ ಭಾರತದ 8ನೇ ಉತ್ಪಾದಕ ತೈಲ ಬೇಸಿನ್ (Oil Basin) ಆಗಿದೆ. ಗಂಗಾ-ಬ್ರಹ್ಮಪುತ್ರ ನದಿ ಮುಖಜ ಭೂಮಿಯ ಈ ‘ಬಂಗಾಳ ಬೇಸಿನ್’ ಅಡಿಯಲ್ಲಿ ಅತಿ ಹೆಚ್ಚು ಇಂಧನ ಸಂಪತ್ತು ಅಡಗಿದೆ ಎಂಬುದನ್ನು ಈ ಯಶಸ್ಸು ಸಾಬೀತುಪಡಿಸಿದೆ.

ಒಎನ್‌ಜಿಸಿ ಸಂಸ್ಥೆಯು ಅಶೋಕನಗರ ಸುತ್ತಮುತ್ತಲಿನ ಮತ್ತಷ್ಟು ಜಾಗಗಳಲ್ಲಿ ಹೊಸ ಬಾವಿಗಳನ್ನು ತೋಡಿ ಪರಿಶೋಧನೆ ನಡೆಸಲು ಯೋಜಿಸಿದೆ. ಈ ತೈಲ ನಿಕ್ಷೇಪವು ಕೇವಲ ಪಶ್ಚಿಮ ಬಂಗಾಳದ ಆರ್ಥಿಕತೆಯ ಚಿತ್ರಣವನ್ನು ಬದಲಾಯಿಸುವುದಲ್ಲದೆ, ಇಡೀ ಭಾರತದ ಇಂಧನ ಮಾರುಕಟ್ಟೆಯ ಮೇಲಿರುವ ಜಾಗತಿಕ ಬಿಕ್ಕಟ್ಟುಗಳ ಒತ್ತಡವನ್ನು ಕಡಿಮೆ ಮಾಡಬಲ್ಲ ಶಕ್ತಿ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IAF Recruitment: ವಾಯುಪಡೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕಾತಿ; ಗೇಟ್ ಸ್ಕೋರ್ ಮೂಲಕ ನೇರ ಆಯ್ಕೆಗೆ ಸುವರ್ಣಾವಕಾಶ!

ವಾಯುಪಡೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕಾತಿImage Credit source: Pinterest

ದೇಶದ ಯುವ ಎಂಜಿನಿಯರಿಂಗ್ ಪದವೀಧರರಿಗೆ ಭಾರತೀಯ ವಾಯುಪಡೆಯು (IAF) ಸುವರ್ಣ ಅವಕಾಶವೊಂದನ್ನು ಘೋಷಿಸಿದೆ. ವಾಯುಪಡೆಯ ತಾಂತ್ರಿಕ ಶಾಖೆಯ (ಆಫೀಸರ್ ಕೇಡರ್) ನೇಮಕಾತಿಗಾಗಿ ಹೊಸ ಉಪಕ್ರಮವೊಂದನ್ನು ಪ್ರಾರಂಭಿಸಲಾಗಿದ್ದು, ಇದರ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ತಮ್ಮ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (GATE) ಅಂಕಗಳ ಆಧಾರದ ಮೇಲೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಗೇಟ್ ಸ್ಕೋರ್ ಆಧಾರದ ಮೇಲೆ ನೇರ ಕಿರುಪಟ್ಟಿ:

ಈ ಹೊಸ ಯೋಜನೆಯ ಅಡಿಯಲ್ಲಿ, ಮಾನ್ಯವಾದ GATE ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು ವಾಯುಪಡೆ ಆಯ್ಕೆ ಮಂಡಳಿಯ (AFSB) ಪರೀಕ್ಷೆಗೆ ನೇರ ಆಯ್ಕೆಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಗಳಿಸಿರುವ ಗೇಟ್ ಅಂಕಗಳ ಅರ್ಹತೆಯ (Merit) ಆಧಾರದ ಮೇಲೆಯೇ ಈ ಶಾರ್ಟ್‌ಲಿಸ್ಟ್ ಪ್ರಕ್ರಿಯೆಯು ನಡೆಯಲಿದ್ದು, ಪ್ರತಿಭಾವಂತ ಎಂಜಿನಿಯರ್‌ಗಳಿಗೆ ವಾಯುಪಡೆ ಸೇರಲು ಇದೊಂದು ಸುಲಭ ಮಾರ್ಗವಾಗಿದೆ.

ಪ್ರಾಥಮಿಕ ಲಿಖಿತ ಪರೀಕ್ಷೆಯಿಂದ (AFCAT) ಮುಕ್ತಿ:

ಈ ಹೊಸ ಉಪಕ್ರಮದ ಪ್ರಮುಖ ವೈಶಿಷ್ಟ್ಯವೆಂದರೆ, ಗೇಟ್ ಸ್ಕೋರ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಾಯುಪಡೆಯ ಪ್ರಾಥಮಿಕ ಲಿಖಿತ ಪರೀಕ್ಷೆಯಾದ ‘ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ’ (AFCAT) ಇಂದ ವಿನಾಯಿತಿ ನೀಡಲಾಗುತ್ತದೆ. ಇದರಿಂದಾಗಿ ಅಭ್ಯರ್ಥಿಗಳು ಮತ್ತೊಂದು ಲಿಖಿತ ಪರೀಕ್ಷೆ ಬರೆಯುವ ಒತ್ತಡವಿಲ್ಲದೆ, ನೇರವಾಗಿ ಮುಂದಿನ ಹಂತದ ಪರೀಕ್ಷೆ ಮತ್ತು ಸಂದರ್ಶನವನ್ನು ಎದುರಿಸಬಹುದಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಅಭ್ಯರ್ಥಿಗಳಿಗೆ ಗರಿಷ್ಠ ನಮ್ಯತೆ ಮತ್ತು ಹೆಚ್ಚಿನ ಅವಕಾಶ:

ಅಭ್ಯರ್ಥಿಗಳಿಗೆ ವಾಯುಪಡೆ ಸೇರಲು ಗರಿಷ್ಠ ಅವಕಾಶ ಮತ್ತು ನಮ್ಯತೆಯನ್ನು ಒದಗಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ, ಅರ್ಹ ಅಭ್ಯರ್ಥಿಗಳು ತಮ್ಮ ಇಚ್ಛೆಯನುಸಾರ ಹಾಗೂ ತಮಗೆ ಅನುಕೂಲವಾಗುವಂತೆ AFCAT ಪರೀಕ್ಷೆಯ ಮೂಲಕ ಅಥವಾ GATE ಸ್ಕೋರ್ ಯೋಜನೆಯ ಮೂಲಕ ತಾಂತ್ರಿಕ ಶಾಖೆಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ತಾಂತ್ರಿಕ ಶಾಖೆಗೆ ಮಾತ್ರ ಈ ಯೋಜನೆ ಅನ್ವಯ:

ಈ ಹೊಸ ಗೇಟ್ ಸ್ಕೋರ್ ಆಧಾರಿತ ನೇಮಕಾತಿ ಯೋಜನೆಯು ಕೇವಲ ತಾಂತ್ರಿಕ ಶಾಖೆಯ ಆಫೀಸರ್ ಕೇಡರ್ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿದೆ. ತಾಂತ್ರಿಕ ಶಾಖೆ ಸೇರಿದಂತೆ ವಾಯುಪಡೆಯ ಇತರೆ ಎಲ್ಲಾ ಶಾಖೆಗಳ ನೇಮಕಾತಿಗೆ ಎಂದಿನಂತೆ AFCAT ಪರೀಕ್ಷೆಯು ಪ್ರಮಾಣಿತ ಪ್ರವೇಶ ಪರೀಕ್ಷೆಯಾಗಿ ಮುಂದುವರಿಯುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಣಿ–ಮೈಸೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು!: ಬೈಕ್ ಸವಾರನ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ!

ಪೆರಾಜೆ, ಮೇ,27 : ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬಳಿ ಭೀಕರ ಕಾರು ಅಪಘಾತವೊಂದು ಸಂಭವಿಸಿದೆ. ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ (Tempo Traveller) ವಾಹನಕ್ಕೆ ದಾರಿ ಬಿಟ್ಟುಕೊಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಆಳವಾದ ಚರಂಡಿಗೆ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ಕಾರು ಹೆದ್ದಾರಿಯುದ್ದಕ್ಕೂ ಅತ್ಯಂತ ಬೇಜವಾಬ್ದಾರಿತನ ಹಾಗೂ ರಸ್ತೆಯ ಎಡ-ಬಲಕ್ಕೆ ಅಡ್ಡಾದಿಡ್ಡಿಯಾಗಿ (Swerving) ಸಂಚರಿಸುತ್ತಿತ್ತು. ಕಾರಿನ ಹಿಂದೆಯೇ ಬರುತ್ತಿದ್ದ ಬೈಕ್ ಸವಾರನೊಬ್ಬ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಈ ಘಟನೆಯನ್ನು ಸೆರೆಹಿಡಿದಿದ್ದ ಎನ್ನಲಾಗಿದೆ. ರಸ್ತೆಯ ತಿರುವಿನಲ್ಲಿ ಹಿಂದಿನಿಂದ ವೇಗವಾಗಿ ಬಂದ ಟೆಂಪೋ ಟ್ರಾವೆಲರ್‌ಗೆ ಸೈಡ್ ನೀಡಲು ಚಾಲಕ ಯತ್ನಿಸಿದಾಗ ಕಾರು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ಕಾರು ರಸ್ತೆ ಬದಿಯ ಚರಂಡಿಗೆ ಜೋರಾಗಿ ಡಿಕ್ಕಿ ಹೊಡೆದು, ಟೆಂಪೋ ಟ್ರಾವೆಲರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗಕ್ಕೆ ಭಾರಿ ಹಾನಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ: ಏನೆಲ್ಲ ಚರ್ಚೆ?

ಬೆಂಗಳೂರು, ಮೇ 27: ನಾಯಕತ್ವ ಬದಲಾವಣೆ ರಾಜ್ಯದಲ್ಲಿ ನಿಶ್ಚಿತ, ಹಾಲಿ ಸಿಎಂ ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯ ನಡುವೆಯೂ ಈ ಕುರಿತ ಗೌಪ್ಯತೆಯನ್ನು ಸಿದ್ದರಾಮಯ್ಯ ಕಾಯ್ದುಕೊಂಡಿದ್ದಾರೆ. ಎಲ್ಲೂ ಈ ಬಗ್ಗೆ ಮೌನ ಮುರಿಯದ ಅವರು, ಕಾವೇರಿ ನಿವಾಸದಲ್ಲಿ 30ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿರೋದು ಕುತೂಹಲ ಮೂಡಿಸಿದೆ. ಸಚಿವರು, ಶಾಸಕರೊಂದಿಗೆ ನವದೆಹಲಿಯಲ್ಲಿ ನಡೆದ ಸಭೆ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ತುರ್ತಾಗಿ ರಾಜೀನಾಮೆ ನೀಡದಂತೆ ಸಿದ್ದರಾಮಯ್ಯಗೆ ಶಾಸಕರು ಮನವಿ ಮಾಡಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿ. ಶಾಸಕರ ಅಭಿಪ್ರಾಯದ ಬಳಿಕ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಿ ಎಂದು ಆಗ್ರಹಿಸಿದ್ದಾರೆ. ಶಾಸಕರ ಸಹಿ ಸಂಗ್ರಹ ಬಗ್ಗೆಯೂ ಕೆಲವು ಸಚಿವರು ಸಲಹೆ ನೀಡಿದ್ದಾರೆ. ಆದರೆ ಸಹಿ ಸಂಗ್ರಹಕ್ಕೆ ಒಪ್ಪದ ಸಿಎಂ ಸಿದ್ದರಾಮಯ್ಯ, ಶಾಸಕರು ಎಷ್ಟೇ ಒತ್ತಡ ಹೇರಿದರೂ ಮೌನವಾಗಿ ಇದ್ದರು. ನಾಳೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದಷ್ಟೇ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version