ಚಾಮರಾಜನಗರ, ಮೇ,27: ಕಾಡಿನ ನಡುವೆ ಪ್ರಾಣಿಗಳ ವಾಸಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನೂ ಮರೆತು ವರ್ತಿಸುತ್ತಿರುವ ಆಘಾತಕಾರಿ ಘಟನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಬೆಳಕಿಗೆ ಬಂದಿದೆ. ಸುಂದರ ಕಾಡಿನ ರಸ್ತೆಯಲ್ಲೇ ಚಲಿಸುತ್ತಿದ್ದ ಬಲೆನೊ ಕಾರೊಂದರಿಂದ ಪ್ರವಾಸಿಗರು ಬಿಯರ್ ಕ್ಯಾನ್‌ಗಳು ಹಾಗೂ ಬಳಸಿದ ಟಿಶ್ಯೂ ಪೇಪರ್‌ಗಳನ್ನು ರಸ್ತೆಗೆ ಎಸೆಯುವ ಮೂಲಕ ಪರಿಸರ ಮಾಲಿನ್ಯ (Littering) ಮಾಡಿದ್ದು, ಈ ಕುರಿತಾದ ಎಕ್ಸ್ (X) ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿದ್ದ ಪ್ರವಾಸಿಗರು ತಾವು ಕುಡಿದ 2 ಬಿಯರ್ ಕ್ಯಾನ್‌ಗಳು ಹಾಗೂ ಬಳಸಿದ ಟಿಶ್ಯೂ ಪೇಪರ್‌ಗಳನ್ನು ಕಾರಿನ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣವೇ ಈ ಬೇಜವಾಬ್ದಾರಿ ಕೃತ್ಯವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಚಿಕ್ಕಮಗಳೂರು, ಮೇ 27: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನಾಳೆ ರಾಜೀನಾಮೆ ನೀಡಲಿದ್ದಾರೆ. ರಾಜ್ಯದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ರಂಭಾಪುರಿ ಶ್ರೀಗಳ ಈ ಹಿಂದಿನ ಹೇಳಿಕೆ ಸತ್ಯವಾಗುತ್ತಿರುವ ಮಾತುಗಳು ಕೇಳಿಬಂದಿವೆ. ರಂಭಾಪುರಿ ಜಗದ್ಗುರುಗಳೊಂದಿಗೆ ಶಾಸಕ ತಮ್ಮಯ್ಯ ಈ ಸಂಬಂಧ ಮಾತುಕತೆ ನಡೆಸಿದ್ದು, ನಿಮ್ಮ ಆಶೀರ್ವಾದದಿಂದ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿದ್ದಾರೆ. ನೀವು ಏನು ಹೇಳಿದ್ದೀರೋ ಅದರಂತೆಯೇ ಆಗುತ್ತಿದೆ. ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದವರು ನೀವು ಎಂದು ಚಿಕ್ಕಮಗಳೂರು ನಗರದ ರೇಣುಕಾಸ್ವಾಮಿ ಕಲ್ಯಾಣ ಮಂಟಪದಲ್ಲಿ ತಮ್ಮಯ್ಯ ಶ್ರೀಗಳ ಬಳಿ ಹೇಳಿದ್ದಾರೆ. ಈ ಹಿಂದೆ ರಾಮನಗರದಲ್ಲಿ ಶ್ರೀಗಳು ಡಿಕೆಶಿ ಸಿಎಂ ಆಗುವ ಕುರಿತು ಹೇಳಿಕೆ ನೀಡಿದ್ದರು.
ತಿರುವನಂತಪುರಂ, ಮೇ 27: ಅತ್ಯಂತ ಶ್ರೀಮಂತ ಹಾಗೂ ಪವಿತ್ರ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೇರಳಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯ(Temple)ದಿಂದ ಚಿನ್ನ ಮತ್ತು ವಜ್ರದ ಅಮೂಲ್ಯ ಆಭರಣಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ದೇಶಾದ್ಯಂತ ವ್ಯಾಪಕ ಕಳವಳ ಮೂಡಿಸಿದೆ. ಈ ಘಟನೆಯು ಶತಮಾನಗಳಷ್ಟು ಹಳೆಯದಾದ ದೇವಾಲಯದ ಅಪಾರ ಸಂಪತ್ತಿನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಕೇರಳಂ ಪೊಲೀಸ್ ಮಹಾನಿರ್ದೇಶಕರು (DGP) ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ರಹಸ್ಯ ವರದಿಯ ಪ್ರಕಾರ, ದೇವಾಲಯದ ಒಟ್ಟು ದಾಸ್ತಾನು (Inventory) ಪರಿಶೀಲಿಸಿದಾಗ ಸುಮಾರು 78 ಗ್ರಾಂ ಚಿನ್ನದ ಆಭರಣಗಳು ಮತ್ತು ಅತ್ಯಂತ ಬೆಲೆಬಾಳುವ ‘ವೈರಮ್ ನಾಮ’ ಎಂದು ಕರೆಯಲ್ಪಡುವ ವಜ್ರಖಚಿತ ತುಂಡು ಕಾಣೆಯಾಗಿರುವುದು ಪತ್ತೆಯಾಗಿದೆ.
ದೇವಾಲಯದ ಆಡಳಿತ ಮಂಡಳಿಯ ದಾಖಲೆಗಳ ಪ್ರಕಾರ, ಈ ‘ವೈರಮ್ ನಾಮ’ವನ್ನು ದುರಸ್ತಿ ಕಾರ್ಯಕ್ಕಾಗಿ ಹಲವು ತಿಂಗಳ ಹಿಂದೆಯೇ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಅದನ್ನು ಮರಳಿ ತರಲಾಗಿಲ್ಲ. ಅದೇ ರೀತಿ, ಸುಮಾರು ಆರು ತಿಂಗಳ ಹಿಂದೆ ನಿರ್ವಹಣೆಗಾಗಿ ಕಳುಹಿಸಲಾಗಿದ್ದ ಚಿನ್ನದ ದೀಪವೂ ಸಹ ನಿಗೂಢವಾಗಿ ಕಣ್ಮರೆಯಾಗಿದೆ.
ದೇವಾಲಯದ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಡಿಜಿಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದ್ದಾರೆ. ದೇವಾಲಯದ ಎಲ್ಲಾ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಅತ್ಯಂತ ಸುರಕ್ಷಿತ ಕಪಾಟುಗಳಿಗೆ ಸ್ಥಳಾಂತರಿಸಬೇಕು. ಭಕ್ತರು ನೀಡುವ ಕಾಣಿಕೆಗಳನ್ನು ಕಡ್ಡಾಯವಾಗಿ ಮೀಸಲಾದ ಲಾಕರ್‌ಗಳಲ್ಲಿಯೇ ಸಂಗ್ರಹಿಸಬೇಕು.
ದೇವಾಲಯದ ಪ್ರತಿಯೊಂದು ಪ್ರವೇಶ ದ್ವಾರದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಮತ್ತು ಸರಿಯಾದ ತಪಾಸಣೆ ಇಲ್ಲದೆ ಯಾರನ್ನೂ ಒಳಗಡೆ ಬಿಡಬಾರದು.
ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಹಿನ್ನೆಲೆ
ಕೇರಳಂನ ತಿರುವನಂತಪುರಂನಲ್ಲಿರುವ ಈ ದೇವಾಲಯವು ಮಹಾವಿಷ್ಣುವಿಗೆ ಅರ್ಪಿತವಾಗಿದೆ. ಸಂಗಮ ಕಾಲದ ಇತಿಹಾಸ ಮತ್ತು ಸಾಹಿತ್ಯದಲ್ಲೂ ಈ ದೇವಾಲಯದ ಅಪಾರ ಸಂಪತ್ತನ್ನು ಉಲ್ಲೇಖಿಸಿ, ಇದನ್ನು ಗೋಲ್ಡನ್ ಟೆಂಪಲ್ (ಚಿನ್ನದ ದೇವಾಲಯ) ಎಂದು ಕರೆಯಲಾಗಿದೆ. ಇಂತಹ ಪೂಜನೀಯ ಸ್ಥಳದಲ್ಲಿ ನಡೆದಿರುವ ಈ ಭದ್ರತಾ ಲೋಪದ ಬಗ್ಗೆ ಈಗ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.
ಬೆಂಗಳೂರು, ಮೇ 27: ದೆಹಲಿಯಲ್ಲಿ ಕಾಂಗ್ರೆಸ್ (Congress) ಹೈಕಮಾಂಡ್ ನಾಯಕರೊಂದಿಗೆ ಮಂಗಳವಾರ ನಡೆದ 7 ಗಂಟೆಗಳ ದೀರ್ಘಾವಧಿ ಸಭೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು (ಮೇ 27) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ, ಹೈಕಮಾಂಡ್ ಸಭೆಯ ಕುರಿತಾದ ಪ್ರಶ್ನೆ ಎದುರಿಸಬೇಕಾಯಿತು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ ನಾಳೆ (ಗುರುವಾರ) ಎಲ್ಲವನ್ನೂ ಮುಕ್ತವಾಗಿ ಮಾತನಾಡುತ್ತೇನೆ’ ಎಂದು ಹೇಳಿದರು. ಆ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಮುಖ್ಯಾಂಶಗಳು
ದೆಹಲಿ ಹೈಕಮಾಂಡ್ ಸಭೆಯ ನಂತರ ಮೊದಲ ಬಾರಿಗೆ ಮೌನ ಮುರಿದ ಸಿಎಂ.
ವಿಧಾನಸೌಧದಲ್ಲಿ ನೆಹರೂ ಪುಣ್ಯಸ್ಮರಣೆ ಮುಗಿಸಿ ನೇರವಾಗಿ ಕಾವೇರಿ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ.
ಕೆಪಿಸಿಸಿ ಕಚೇರಿಯಲ್ಲಿನ ಕಾರ್ಯಕ್ರಮಕ್ಕೆ ಗೈರಾದ ಸಿದ್ದರಾಮಯ್ಯ.
ಎಂದಿನಂತಿಲ್ಲದ ಸಿದ್ದರಾಮಯ್ಯ ಬಾಡಿ ಲಾಂಗ್ವೇಜ್!
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಡೆದ ‘ಒನ್-ಟು-ಒನ್’ ರಹಸ್ಯ ಚರ್ಚೆಯ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಒಪ್ಪಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ಸಿಎಂ ಅವರ ಬಾಡಿ ಲ್ಯಾಂಗ್ವೇಜ್ ವಿಭಿನ್ನವಾಗಿ ಕಂಡುಬಂದಿದ್ದು, ಎಂದಿನ ವೇಗ ಕಾಣಿಸಲಿಲ್ಲ. ನಿಧಾನಗತಿಯಲ್ಲೇ ಕಾರಿಳಿದು ಬಂದು ನೆಹರೂ ಪ್ರತಿಮೆಗೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಿದರು. ತದನಂತರ ಕೆಪಿಸಿಸಿ ಕಚೇರಿಯ ಕಾರ್ಯಕ್ರಮಕ್ಕೆ ತೆರಳದ ಅವರು ನೇರವಾಗಿ ತಮ್ಮ ‘ಕಾವೇರಿ’ ನಿವಾಸಕ್ಕೆ ಮರಳಿದರು.
ಸಿದ್ದರಾಮಯ್ಯ ಮಾತಿನ ವಿಡಿಯೋ
ಸಿದ್ದರಾಮಯ್ಯ ನಿವಾಸಕ್ಕೆ ನಾಯಕರ ದೌಡು
ಏತನ್ಮಧ್ಯೆ, ಸಿಎಂ ನಿವಾಸಕ್ಕೆ ಸಚಿವರಾದ ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಶಾಸಕರುಗಳಾದ ಯಶವಂತರಾಯ ಪಾಟೀಲ್, ಶಿವಲಿಂಗೇಗೌಡ, ನಾಗೇಂದ್ರ, ಕೆ.ವೈ. ನಂಜೇಗೌಡ ಹಾಗೂ ಎಂಎಲ್‌ಸಿ ರಾಜೇಂದ್ರ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಹೈಕಮಾಂಡ್ ಮುಂದೆ ನಡೆದ ಚರ್ಚೆಗಳು ಹಾಗೂ ತಾವು ರಾಜೀನಾಮೆ ನಿಲುವು ತಳೆಯಲು ಕಾರಣವಾದ ಸಂದರ್ಭಗಳನ್ನು ಸಿಎಂ ತಮ್ಮ ಆಪ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಿಎಂ ಭೇಟಿಯಾದ ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿ, ‘ಮಾನವೀಯತೆ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೇನೆ. ಅವರು ಸುದೀರ್ಘ ರಾಜಕಾರಣ ಮಾಡಿದವರು, ಅವರಿಗೆ ಏನು ಮಾಡಬೇಕು ಎಂದು ಗೊತ್ತಿರುತ್ತದೆ, ಅವರ ನಿರ್ಧಾರಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ. ಒಟ್ಟಾರೆಯಾಗಿ ನಾಳೆ ಸಿಎಂ ನೀಡಲಿರುವ ಅಧಿಕೃತ ಹೇಳಿಕೆಯ ಮೇಲೆಯೇ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 20 ಆಟಗಾರರು ಹಿಟ್ ವಿಕೆಟ್ ಆಗಿ ಔಟಾಗಿದ್ದಾರೆ. ಈ ಇಪ್ಪತ್ತು ಆಟಗಾರರಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ಬ್ಯಾಟರ್ ಸಾಯಿ ಸುದರ್ಶನ್. ಹೀಗೆ ಎರಡು ಬಾರಿ ಹಿಟ್ ವಿಕೆಟ್ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿ ಸಾಯಿ ಸುದರ್ಶನ್ ಅನಗತ್ಯ ದಾಖಲೆ ಬರೆದಿದ್ದಾರೆ.
ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಎಸೆದ ಬೌನ್ಸರ್ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ಸಾಯಿ ಸುದರ್ಶನ್ ಅವರ ಕೈಯಿಂದ ಬ್ಯಾಟ್ ಜಾರಿ ವಿಕೆಟ್‌ಗೆ ಬಡಿದಿತ್ತು.
ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಜೇಕಬ್ ಡಫಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬ್ಯಾಟ್ ಕೈ ಚೆಲ್ಲುವ ಮೂಲಕ ವಿಕೆಟ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಹಿಟ್ ವಿಕೆಟ್ನೊಂದಿಗೆ ಸಾಯಿ ಸುದರ್ಶನ್ 14 ರನ್‌ಗಳ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಆ ಬಳಿಕ ಬಂದ ಜೋಸ್ ಬಟ್ಲರ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಡುವೆ ಶುಭ್ಮನ್ ಗಿಲ್ (2) ಕ್ಲೀನ್ ಬೌಲ್ಡ್ ಆಗಿದ್ದರು. ಪರಿಣಾಮ ಆರ್‌ಸಿಬಿ ನೀಡಿದ 255 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್‌ಗಳಲ್ಲಿ 162 ರನ್ ಗಳಿಸಿ ಆಲೌಟ್ ಆಗಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 92 ರನ್‌ಗಳ ಅಮೋಘ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್‌ಸಿಬಿ ತಂಡವು ಐಪಿಎಲ್ 2026 ರಲ್ಲಿ ಫೈನಲ್ಗೇರಿದೆ.
ಮೇ 31 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ಅಥವಾ ಸನ್ರೈಸರ್ಸ್ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಬಹುನಿರೀಕ್ಷಿತ ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ನಾಯಕ ಎಂದು ಈ ಹಿಂದೆ ಅಧಿಕೃತವಾಗಿ ಘೋಷಿಸಲಾಗಿತ್ತು. ಚಿತ್ರದ ಪೂರ್ವ ಸಿದ್ಧತೆಗಳಿಗಾಗಿ ಚಿತ್ರತಂಡ ಈಗಾಗಲೇ 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದರೆ, ರಣವೀರ್ ಸಿಂಗ್ ಕೊನೆಯ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಸಿನಿಮಾದಿಂದ ಹೊರನಡೆದಿದ್ದಾರೆ. ಇದರಿಂದ ಭಾರೀ ನಷ್ಟ ಅನುಭವಿಸಿದ ಫರ್ಹಾನ್ ಅಖ್ತರ್, ಚಿತ್ರರಂಗದ ಪ್ರಮುಖ ಒಕ್ಕೂಟವಾದ ‘ಎಫ್‌ಡಬ್ಲ್ಯೂಐಸಿಇ’ (FWICE) ಸಂಸ್ಥೆಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ತಮ್ಮ ವಾದವನ್ನು ಮಂಡಿಸಲು ರಣವೀರ್ ಸಿಂಗ್ ಅವರಿಗೆ FWICE ಒಕ್ಕೂಟವು ಮೂರು ಬಾರಿ ನೋಟಿಸ್ ನೀಡಿ ಕರೆಸಿತ್ತು. ಆದರೆ, ರಣವೀರ್ ಒಮ್ಮೆಯೂ ಹಾಜರಾಗಲಿಲ್ಲ. ಇದರಿಂದ ಬೇಸತ್ತ ಸಂಸ್ಥೆಯು ತನ್ನ ವ್ಯಾಪ್ತಿಗೆ ಬರುವ ನಿರ್ದೇಶಕರು, ಕ್ಯಾಮೆರಾಮನ್ ಮತ್ತು ತಾಂತ್ರಿಕ ಸಿಬ್ಬಂದಿಗೆ ರಣವೀರ್ ಸಿಂಗ್ ಜೊತೆ ಕೆಲಸ ಮಾಡದಂತೆ ‘ಅಸಹಕಾರ ಆದೇಶ’ ಹೊರಡಿಸಿತು. ಇದರಿಂದಾಗಿ ರಣವೀರ್ ಅವರನ್ನು ಚಿತ್ರರಂಗದಿಂದ ನಿಷೇಧಿಸಲಾಗಿದೆ ಎಂಬ ವದಂತಿ ಹಬ್ಬಿತ್ತು.
ನಿಷೇಧಿಸಿಲ್ಲ, ಇದು ಅಸಹಕಾರ ಆದೇಶ: ಸ್ಪಷ್ಟನೆ
ಈ ಗೊಂದಲಕ್ಕೆ ತೆರೆ ಎಳೆದಿರುವ FWICE ಮುಖ್ಯ ಸಲಹೆಗಾರ ಹಾಗೂ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, “ನಾವು ಯಾವುದೇ ನಟನನ್ನು ನಿಷೇಧಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಯಾರನ್ನೂ ನಿಷೇಧಿಸಲು ನಾವು ನ್ಯಾಯಾಲಯವಲ್ಲ. ಆದರೆ, ನಮ್ಮ ಒಕ್ಕೂಟದ ಅಡಿಯಲ್ಲಿ ಬರುವ 30 ಕ್ಕೂ ಹೆಚ್ಚು ವಿಭಾಗದವರಿಗೆ ಈ ವಿವಾದ ಬಗೆಹರಿಯುವವರೆಗೆ ರಣವೀರ್ ಜೊತೆ ಕೆಲಸ ಮಾಡದಂತೆ ಸೂಚಿಸಿದ್ದೇವೆ. ಅವರೊಂದಿಗೆ ಕೆಲಸ ಮಾಡಬೇಕೋ ಬೇಡವೋ ಎಂಬುದು ನಮ್ಮ ಸದಸ್ಯರ ನಿರ್ಧಾರ” ಎಂದು ಅವರು ವಿವರಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ಹಿಂದೆ ಸರಿಯುವ ಇಂತಹ ಧೋರಣೆಗಳು ಚಿತ್ರರಂಗದಲ್ಲಿ ತಪ್ಪು ಪ್ರವೃತ್ತಿಯನ್ನು ಹುಟ್ಟುಹಾಕುತ್ತವೆ ಎಂದು ಅಶೋಕ್ ಪಂಡಿತ್ ಕಳವಳ ವ್ಯಕ್ತಪಡಿಸಿದ್ದಾರೆ. ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನಂತಹ ದೊಡ್ಡ ಸಂಸ್ಥೆಗಳು ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆದುಕೊಳ್ಳಬಲ್ಲವು. ಆದರೆ ಸಣ್ಣ ನಿರ್ಮಾಪಕರಿಗೆ ಇಂತಹ ಪರಿಸ್ಥಿತಿ ಎದುರಾದರೆ ಅವರು ಬರ್ಬಾದ್ ಆಗುತ್ತಾರೆ, ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಾರೆ’ ಎಂದು ಅವರು ಹೇಳಿದ್ದಾರೆ.
ಇಷ್ಟೆಲ್ಲಾ ಉದ್ವಿಗ್ನತೆಯ ನಡುವೆಯೂ ಈ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು FWICE ನಂಬಿದೆ. ಪತ್ರಿಕಾಗೋಷ್ಠಿ ನಡೆಸುವ ಮುನ್ನ ರಣವೀರ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿತ್ತು ಎಂದು ತಿಳಿಸಿರುವ ಅಶೋಕ್ ಪಂಡಿತ್, “ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಒಟ್ಟಿಗೆ ಕುಳಿತು ಚರ್ಚಿಸಿದರೆ ಈ ವಿವಾದ ಸುಲಭವಾಗಿ ಇತ್ಯರ್ಥವಾಗುತ್ತದೆ, ಅದಕ್ಕಾಗಿ ಒಂದು ಸಭೆ ನಡೆಯಬೇಕಿದೆ” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ, ಮೇ 27: ಕಡಿಮೆ ಹಣ ಹೂಡಿಕೆ ಮಾಡಿ, ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿ ಎಂಬ ಸೈಬರ್ ವಂಚಕರ ಆಮಿಷಕ್ಕೆ ದಾವಣಗೆರೆಯ ಬರೋಬ್ಬರಿ 13 ಸಾವಿರ ಜನ ಮೋಸಹೋಗಿದ್ದಾರೆ. ಕ್ರಿಪ್ಟೋ ಕರೆನ್ಸಿ (Crypto currency)ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ನಿವಾಸಿ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಮುಖ್ಯಾಂಶಗಳು
ದಾವಣಗೆರೆಯಲ್ಲಿ ನಕಲಿ ಕ್ರಿಪ್ಟೋ ಆ್ಯಪ್ ವಂಚನೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಹತ್ತು ಸಾವಿರ ಹೂಡಿಕೆಗೆ ನಿತ್ಯ ನಾಲ್ಕುನೂರು ರೂಪಾಯಿ ಲಾಭದ ಆಮಿಷ ಒಡ್ಡಿದ್ದರು.
ಜಿಲ್ಲೆಯ ಹದಿಮೂರು ಸಾವಿರ ಬಡ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ವಂಚನೆ ನೆಟ್‌ವರ್ಕ್ ಕೆಲಸ ಮಾಡಿದ್ದು ಹೇಗೆ?
ಖದೀಮರ ಗ್ಯಾಂಗ್ ನಾವಾಬಿಟ್.ಇನ್ (Navabit.in) ಎಂಬ ನಕಲಿ ಜಾಲತಾಣ ಹಾಗೂ ಆ್ಯಪ್ ರೂಪಿಸಿತ್ತು. ಇದರಲ್ಲಿ ಕನಿಷ್ಠ 10,000 ರೂಪಾಯಿ ಹೂಡಿಕೆ ಮಾಡಿದರೆ, ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ದಿನಕ್ಕೆ 300 ರಿಂದ 400 ರೂಪಾಯಿ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಹಣವನ್ನು ಜಮೆ ಮಾಡಿ ನಂಬಿಕೆ ಗಳಿಸುತ್ತಿದ್ದರು. ಈ ಜಾಲಕ್ಕೆ ಸ್ಥಳೀಯರನ್ನೇ ದಾಳವಾಗಿ ಬಳಸಿಕೊಳ್ಳಲಾಗಿತ್ತು.
ಒತ್ತಡ ಹೇರಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಗ್ಯಾಂಗ್
ಈ ವಂಚನೆ ಜಾಲದ ಆಳ ಎಷ್ಟು ಭೀಕರವಾಗಿದೆ ಎಂದರೆ, ಸ್ಥಳೀಯ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೇ ಈ ದಂಧೆಯಲ್ಲಿ ಭಾಗಿಯಾಗಿ ಜನರನ್ನು ಸೆಳೆಯುತ್ತಿದ್ದರು. ವಂಚನೆಗೆ ಒಳಗಾದ ಸಾದಿಕ್ ಎಂಬುವವರು ಮಾತನಾಡಿ, ಮುಖ್ಯೋಪಾಧ್ಯಾಯಿನಿ ಒತ್ತಡ ಹೇರಿ ನನ್ನಿಂದ ಮೊದಲು 10,000 ರೂ. ಹೂಡಿಕೆ ಮಾಡಿಸಿದ್ದರು. ಒಂದು ತಿಂಗಳು ದಿನಾಲೂ 300 ರೂ. ಬಂತು. ಆಮೇಲೆ ದೊಡ್ಡ ಆಫರ್ ಇದೆ ಎಂದು ನಂಬಿಸಿ 50 ಸಾವಿರದಿಂದ 5 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡರು. ಸಾಲ ಮಾಡಿ ಹಣ ಹಾಕಿದ್ದೆವು, ಆದರೆ ರಂಜಾನ್ ಹಬ್ಬದ ವೇಳೆ ಹಣ ಡ್ರಾ ಮಾಡಲು ಹೋದಾಗ ಖಾತೆ ಬ್ಲಾಕ್ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸೈಬರ್ ಖದೀಮರು ಪ್ರಮುಖವಾಗಿ ಅಮಾಯಕ ಬಡ ಮಹಿಳೆಯರು, ದಿನಗೂಲಿ ನೌಕರರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 13,000 ಜನ ಈ ಆ್ಯಪ್ ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಏಪ್ರಿಲ್ 4 ರಂದೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು ತಮಿಳುನಾಡಿನಲ್ಲಿ ಮುಖ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ಸ್ಥಳೀಯ ದಾವಣಗೆರೆಯ ಮೂವರು ಆರೋಪಿಗಳು ಸೇರಿದಂತೆ ಉಳಿದ ಖದೀಮರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ, ಮೇ 27: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ರಾಜ್ಯ ರಾಜಕೀಯದ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಶಿವಮೊಗ್ಗದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಮತ್ತು ಅಸಮಾಧಾನದಿಂದ ರಾಜ್ಯದ ಆಡಳಿತ ಕುಸಿದಿದ್ದು, ಇದು ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಸಿದ್ದರಾಮಯ್ಯನವರು ಇಷ್ಟು ಸುಲಭವಾಗಿ ರಾಜೀನಾಮೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದವರು ಹೇಳಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 254 ರನ್ ಕಲೆಹಾಕಿದ್ದರು.
ಅದರಂತೆ 255 ರನ್‌ಗಳ ಗುರಿ ಬೆನ್ನತ್ತಲು ಬಂದ ಗುಜರಾತ್ ಟೈಟಾನ್ಸ್ ಬ್ಯಾಟರ್ಗಳನ್ನು ನೋಡಿ ವಿರಾಟ್ ಕೊಹ್ಲಿ ಚೆಂಡನ್ನು ಕೈಗೆತ್ತಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ಗೆ ಕ್ಯಾಪ್ ನೀಡಿ ಮೊದಲ ಓವರ್ ನಾನೇ ಎಸೆಯುತ್ತಿದ್ದೇನೆ ಎಂದು ಹೆಜ್ಜೆಗಳನ್ನು ಅಳೆಯುತ್ತಾ (ರನ್-ಅಪ್ ಮಾರ್ಕಿಂಗ್) ಸಾಗಿದರು.
ಇದನ್ನು ನೋಡಿದ ತಕ್ಷಣ ಇಡೀ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಮತ್ತು ಕಾಮೆಂಟೇಟರ್‌ಗಳಿಗೆ ಶಾಕ್. ಏಕೆಂದರೆ ವಿರಾಟ್ ಕೊಹ್ಲಿ ಈ ಹಿಂದೆ ಓವರ್ ಎಸೆದಾಗ ಏನಾಗಿತ್ತು ಎಂಬುದು ಎಲ್ಲರಿಗೂ ಚೆನ್ನಾಗಿ ನೆನಪಿದೆ.
2012 ರ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆಗೆ ಕೊನೆಯ 2 ಓವರ್‌ಗಳಲ್ಲಿ ಗೆಲ್ಲಲು 43 ರನ್‌ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ವಿರಾಟ್ ಕೊಹ್ಲಿ ಒಂದೇ ಓವರ್‌ನಲ್ಲಿ ಬರೋಬ್ಬರಿ 28 ರನ್ ನೀಡಿದ್ದರು.
ಅಂದು ಸಿಎಸ್ಕೆ ತಂಡದ ಆಟಗಾರ ಅಲ್ಬಿ ಮೊರ್ಕೆಲ್, ಕೊಹ್ಲಿ ಎಸೆದ ಆ 19ನೇ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಫೋರ್ಗಳನ್ನು ಚಚ್ಚಿದ್ದರು. ಪರಿಣಾಮ ಆ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿತ್ತು,
ಇದಾದ ಬಳಿಕ ಬೌಲಿಂಗ್ನಿಂದ ದೂರವೇ ಉಳಿದಿದ್ದ ವಿರಾಟ್ ಕೊಹ್ಲಿ ಇದಕ್ಕಿದ್ದಂತೆ ಚೆಂಡೆದು ಹಿಡಿದು ಎಲ್ಲರಿಗೂ ಶಾಕ್ ನೀಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಜೇಕಬ್ ಡಫಿಗೆ ಚೆಂಡನ್ನು ಹಸ್ತಾಂತರಿಸಿ ಎಲ್ಲರ ಗೊಂದಲ್ಕೆ ತೆರೆ ಎಳೆದರು. ಇದೀಗ ವಿರಾಟ್ ಕೊಹ್ಲಿ ಈ ಕೀಟಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್‌ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡ 92 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಕಾರ್ಯಕ್ರಮದ ವೇಳೆ ಫನ್ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಯೊಬ್ಬ ದಿಢೀರನೆ ವೇದಿಕೆ ಏರಿದ್ದಾನೆ. ನೇರವಾಗಿ ಸಮಂತಾ ಅವರ ಬಳಿ ಬಂದು ಮಂಡಿಯೂರಿ ನಿಂತು, ಕೈಯಲ್ಲಿದ್ದ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.
ಅಭಿಮಾನಿ ಪ್ರಪೋಸ್ ಮಾಡುವಾಗ ಸಮಂತಾ ಪಕ್ಕದಲ್ಲೇ ಅವರ ಪತಿ ರಾಜ್ ನಿದಿಮೋರು ಕುಳಿತಿದ್ದರು. ಈ ಇಡೀ ಪ್ರಸಂಗವನ್ನು ಕಂಡು ಪತಿ ರಾಜ್ ಸೇರಿದಂತೆ ವೇದಿಕೆ ಮೇಲಿದ್ದ ಉಳಿದ ಕಲಾವಿದರು ನಕ್ಕಿದ್ದಾರೆ. ಅಭಿಮಾನಿಯ ಈ ಅನಿರೀಕ್ಷಿತ ಧೈರ್ಯ ಮತ್ತು ಪ್ರೀತಿಯನ್ನು ಕಂಡು ಸಮಂತಾ ಕೂಡ ಆಶ್ಚರ್ಯಚಕಿತರಾಗಿ ನಸುನಕ್ಕಿದ್ದಾರೆ.
ಪ್ರಪೋಸ್ ಮಾಡಿದ ನಂತರ ಆ ಅಭಿಮಾನಿ ತನ್ನ ಮೊಬೈಲ್ ತೆಗೆದು ಸಮಂತಾ ಜೊತೆಗೆ ಸೆಲ್ಫಿ ಕೇಳಿದ್ದಾನೆ. ಆತನ ಪ್ರೀತಿಯನ್ನು ಗೌರವಿಸಿದ ನಟಿ, ಹೂವಿನ ಗುಚ್ಛವನ್ನು ಕೈಯಲ್ಲಿ ಹಿಡಿದು ಮುಗುಳ್ನಗುತ್ತಾ ಸೆಲ್ಫಿಗೆ ಪೋಸ್ ನೀಡಿದ್ದಾರೆ.