ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್ – Kannada News | Davanagere Cyber Crime: Navabit Crypto App Scam Mastermind Arrested From Tamil Nadu

ದಾವಣಗೆರೆ, ಮೇ 27: ಕಡಿಮೆ ಹಣ ಹೂಡಿಕೆ ಮಾಡಿ, ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿ ಎಂಬ ಸೈಬರ್ ವಂಚಕರ ಆಮಿಷಕ್ಕೆ ದಾವಣಗೆರೆಯ ಬರೋಬ್ಬರಿ 13 ಸಾವಿರ ಜನ ಮೋಸಹೋಗಿದ್ದಾರೆ. ಕ್ರಿಪ್ಟೋ ಕರೆನ್ಸಿ (Crypto currency) ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ನಿವಾಸಿ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ನಕಲಿ ಕ್ರಿಪ್ಟೋ ಆ್ಯಪ್ ವಂಚನೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
  • ಹತ್ತು ಸಾವಿರ ಹೂಡಿಕೆಗೆ ನಿತ್ಯ ನಾಲ್ಕುನೂರು ರೂಪಾಯಿ ಲಾಭದ ಆಮಿಷ ಒಡ್ಡಿದ್ದರು.
  • ಜಿಲ್ಲೆಯ ಹದಿಮೂರು ಸಾವಿರ ಬಡ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.

ವಂಚನೆ ನೆಟ್‌ವರ್ಕ್ ಕೆಲಸ ಮಾಡಿದ್ದು ಹೇಗೆ?

ಖದೀಮರ ಗ್ಯಾಂಗ್ ನಾವಾಬಿಟ್‌.ಇನ್‌ (Navabit.in) ಎಂಬ ನಕಲಿ ಜಾಲತಾಣ ಹಾಗೂ ಆ್ಯಪ್ ರೂಪಿಸಿತ್ತು. ಇದರಲ್ಲಿ ಕನಿಷ್ಠ 10,000 ರೂಪಾಯಿ ಹೂಡಿಕೆ ಮಾಡಿದರೆ, ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ದಿನಕ್ಕೆ 300 ರಿಂದ 400 ರೂಪಾಯಿ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಹಣವನ್ನು ಜಮೆ ಮಾಡಿ ನಂಬಿಕೆ ಗಳಿಸುತ್ತಿದ್ದರು. ಈ ಜಾಲಕ್ಕೆ ಸ್ಥಳೀಯರನ್ನೇ ದಾಳವಾಗಿ ಬಳಸಿಕೊಳ್ಳಲಾಗಿತ್ತು.

ಒತ್ತಡ ಹೇರಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಗ್ಯಾಂಗ್

ಈ ವಂಚನೆ ಜಾಲದ ಆಳ ಎಷ್ಟು ಭೀಕರವಾಗಿದೆ ಎಂದರೆ, ಸ್ಥಳೀಯ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೇ ಈ ದಂಧೆಯಲ್ಲಿ ಭಾಗಿಯಾಗಿ ಜನರನ್ನು ಸೆಳೆಯುತ್ತಿದ್ದರು. ವಂಚನೆಗೆ ಒಳಗಾದ ಸಾದಿಕ್ ಎಂಬುವವರು ಮಾತನಾಡಿ, ಮುಖ್ಯೋಪಾಧ್ಯಾಯಿನಿ ಒತ್ತಡ ಹೇರಿ ನನ್ನಿಂದ ಮೊದಲು 10,000 ರೂ. ಹೂಡಿಕೆ ಮಾಡಿಸಿದ್ದರು. ಒಂದು ತಿಂಗಳು ದಿನಾಲೂ 300 ರೂ. ಬಂತು. ಆಮೇಲೆ ದೊಡ್ಡ ಆಫರ್ ಇದೆ ಎಂದು ನಂಬಿಸಿ 50 ಸಾವಿರದಿಂದ 5 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡರು. ಸಾಲ ಮಾಡಿ ಹಣ ಹಾಕಿದ್ದೆವು, ಆದರೆ ರಂಜಾನ್ ಹಬ್ಬದ ವೇಳೆ ಹಣ ಡ್ರಾ ಮಾಡಲು ಹೋದಾಗ ಖಾತೆ ಬ್ಲಾಕ್ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ ಕರ್ನಾಟಕದಲ್ಲಿ ‘ಹೌಸ್ ಪಾರ್ಟಿ’ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

ಬಡ ಮಹಿಳೆಯರು, ಕೂಲಿ ಕಾರ್ಮಿಕರೇ ಇವರ ಟಾರ್ಗೆಟ್!

ಈ ಸೈಬರ್ ಖದೀಮರು ಪ್ರಮುಖವಾಗಿ ಅಮಾಯಕ ಬಡ ಮಹಿಳೆಯರು, ದಿನಗೂಲಿ ನೌಕರರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 13,000 ಜನ ಈ ಆ್ಯಪ್ ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಏಪ್ರಿಲ್ 4 ರಂದೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು ತಮಿಳುನಾಡಿನಲ್ಲಿ ಮುಖ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ಸ್ಥಳೀಯ ದಾವಣಗೆರೆಯ ಮೂವರು ಆರೋಪಿಗಳು ಸೇರಿದಂತೆ ಉಳಿದ ಖದೀಮರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವಧಿ ಪೂರ್ವ ಚುನಾವಣೆ ಖಚಿತ ಎಂದ ವಿಜಯೇಂದ್ರ – Kannada News | Vijayendra Predicts Early Karnataka Elections Amidst CM Resignation Speculation

ಶಿವಮೊಗ್ಗ, ಮೇ 27: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ರಾಜ್ಯ ರಾಜಕೀಯದ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಶಿವಮೊಗ್ಗದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಮತ್ತು ಅಸಮಾಧಾನದಿಂದ ರಾಜ್ಯದ ಆಡಳಿತ ಕುಸಿದಿದ್ದು, ಇದು ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಸಿದ್ದರಾಮಯ್ಯನವರು ಇಷ್ಟು ಸುಲಭವಾಗಿ ರಾಜೀನಾಮೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೆಡಿನಾ… ಮೊದಲ ಓವರ್​ ನಂದೇ! RCB ಫ್ಯಾನ್ಸ್​ಗೆ ಶಾಕ್ ನೀಡಿದ ಕೊಹ್ಲಿ – Kannada News | Virat kohli sparks laughter with bowling tease in dharamshala

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 254 ರನ್​ ಕಲೆಹಾಕಿದ್ದರು.

ಅದರಂತೆ 255 ರನ್​ಗಳ ಗುರಿ ಬೆನ್ನತ್ತಲು ಬಂದ ಗುಜರಾತ್ ಟೈಟಾನ್ಸ್ ಬ್ಯಾಟರ್​ಗಳನ್ನು ನೋಡಿ ವಿರಾಟ್ ಕೊಹ್ಲಿ ಚೆಂಡನ್ನು ಕೈಗೆತ್ತಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್​ಗೆ ಕ್ಯಾಪ್ ನೀಡಿ ಮೊದಲ ಓವರ್​ ನಾನೇ ಎಸೆಯುತ್ತಿದ್ದೇನೆ ಎಂದು ಹೆಜ್ಜೆಗಳನ್ನು ಅಳೆಯುತ್ತಾ (ರನ್-ಅಪ್ ಮಾರ್ಕಿಂಗ್) ಸಾಗಿದರು.

ಇದನ್ನು ನೋಡಿದ ತಕ್ಷಣ ಇಡೀ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಮತ್ತು ಕಾಮೆಂಟೇಟರ್‌ಗಳಿಗೆ ಶಾಕ್. ಏಕೆಂದರೆ ವಿರಾಟ್ ಕೊಹ್ಲಿ ಈ ಹಿಂದೆ ಓವರ್ ಎಸೆದಾಗ ಏನಾಗಿತ್ತು ಎಂಬುದು ಎಲ್ಲರಿಗೂ ಚೆನ್ನಾಗಿ ನೆನಪಿದೆ.

2012 ರ ಐಪಿಎಲ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆಗೆ ಕೊನೆಯ 2 ಓವರ್‌ಗಳಲ್ಲಿ ಗೆಲ್ಲಲು 43 ರನ್‌ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ವಿರಾಟ್ ಕೊಹ್ಲಿ ಒಂದೇ ಓವರ್​ನಲ್ಲಿ ಬರೋಬ್ಬರಿ 28 ರನ್ ನೀಡಿದ್ದರು.

ಅಂದು ಸಿಎಸ್​ಕೆ ತಂಡದ ಆಟಗಾರ ಅಲ್ಬಿ ಮೊರ್ಕೆಲ್, ಕೊಹ್ಲಿ ಎಸೆದ ಆ 19ನೇ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಫೋರ್​ಗಳನ್ನು ಚಚ್ಚಿದ್ದರು. ಪರಿಣಾಮ ಆ ಮ್ಯಾಚ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿತ್ತು,

ಇದಾದ ಬಳಿಕ ಬೌಲಿಂಗ್​ನಿಂದ ದೂರವೇ ಉಳಿದಿದ್ದ ವಿರಾಟ್ ಕೊಹ್ಲಿ ಇದಕ್ಕಿದ್ದಂತೆ ಚೆಂಡೆದು ಹಿಡಿದು ಎಲ್ಲರಿಗೂ ಶಾಕ್ ನೀಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಜೇಕಬ್ ಡಫಿಗೆ ಚೆಂಡನ್ನು ಹಸ್ತಾಂತರಿಸಿ ಎಲ್ಲರ ಗೊಂದಲ್ಕೆ ತೆರೆ ಎಳೆದರು. ಇದೀಗ ವಿರಾಟ್ ಕೊಹ್ಲಿ ಈ ಕೀಟಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್​ಗಳಲ್ಲಿ 162 ರನ್​​ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆರ್​ಸಿಬಿ ತಂಡ 92 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಪತಿಯ ಎದುರೇ ಸಮಂತಾಗೆ ಪ್ರಪೋಸ್ ಮಾಡಿದ ಅಭಿಮಾನಿ; ರಾಜ್ ರಿಯಾಕ್ಷನ್ ಏನು? – Kannada News | Fan Proposed Samantha Ruth Prabhu in Front Of Her Husband Raj Nidhimoru

ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಕಾರ್ಯಕ್ರಮದ ವೇಳೆ ಫನ್ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಯೊಬ್ಬ ದಿಢೀರನೆ ವೇದಿಕೆ ಏರಿದ್ದಾನೆ. ನೇರವಾಗಿ ಸಮಂತಾ ಅವರ ಬಳಿ ಬಂದು ಮಂಡಿಯೂರಿ ನಿಂತು, ಕೈಯಲ್ಲಿದ್ದ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಅಭಿಮಾನಿ ಪ್ರಪೋಸ್ ಮಾಡುವಾಗ ಸಮಂತಾ ಪಕ್ಕದಲ್ಲೇ ಅವರ ಪತಿ ರಾಜ್ ನಿದಿಮೋರು ಕುಳಿತಿದ್ದರು. ಈ ಇಡೀ ಪ್ರಸಂಗವನ್ನು ಕಂಡು ಪತಿ ರಾಜ್ ಸೇರಿದಂತೆ ವೇದಿಕೆ ಮೇಲಿದ್ದ ಉಳಿದ ಕಲಾವಿದರು ನಕ್ಕಿದ್ದಾರೆ. ಅಭಿಮಾನಿಯ ಈ ಅನಿರೀಕ್ಷಿತ ಧೈರ್ಯ ಮತ್ತು ಪ್ರೀತಿಯನ್ನು ಕಂಡು ಸಮಂತಾ ಕೂಡ ಆಶ್ಚರ್ಯಚಕಿತರಾಗಿ ನಸುನಕ್ಕಿದ್ದಾರೆ.

ಪ್ರಪೋಸ್ ಮಾಡಿದ ನಂತರ ಆ ಅಭಿಮಾನಿ ತನ್ನ ಮೊಬೈಲ್ ತೆಗೆದು ಸಮಂತಾ ಜೊತೆಗೆ ಸೆಲ್ಫಿ ಕೇಳಿದ್ದಾನೆ. ಆತನ ಪ್ರೀತಿಯನ್ನು ಗೌರವಿಸಿದ ನಟಿ, ಹೂವಿನ ಗುಚ್ಛವನ್ನು ಕೈಯಲ್ಲಿ ಹಿಡಿದು ಮುಗುಳ್ನಗುತ್ತಾ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ವಲ್ಪ ಎಚ್ಚರ ತಪ್ಪಿದ್ರೂ ಬೆಂಗಳೂರಿನಲ್ಲಿ ನಡೆಯುತ್ತಿತ್ತು ದೊಡ್ಡ ವಿಮಾನ ದುರಂತ! ಪ್ರಾಣಭಯದಲ್ಲಿ ವಿಮಾನದ ರೆಕ್ಕೆ ಮೇಲೆಯೇ ಓಡಿದ ಪ್ರಯಾಣಿಕರು! – Kannada News | KIA IndiGo Flight Evacuation: Slide Fails, Passengers Walked on Wing Amid Smoke

ಬೆಂಗಳೂರು, ಮೇ.27: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಿನ್ನೆ (ಮೇ 26) ಸಂಜೆ ಭಾರಿ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಾಗಿದ್ದ ಇಂಡಿಗೋ ವಿಮಾನದಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ 230 ಕ್ಕೂ ಹೆಚ್ಚು ಪ್ರಯಾಣಿಕರನ್ನು ತುರ್ತಾಗಿ ಸ್ಥಳಾಂತರಿಸಲಾಯಿತು. ಆದರೆ, ಈ ವೇಳೆ ವಿಮಾನದ ಸುರಕ್ಷತಾ ತುರ್ತು ದಾರಿಯ ಇನ್‌ಫ್ಲೇಟಬಲ್ ಸ್ಲೈಡ್ (Inflatable Slide) ಸರಿಯಾಗಿ ತೆರೆದುಕೊಳ್ಳದ ಕಾರಣ, ಪ್ರಯಾಣಿಕರು ಪ್ರಾಣಭಯದಿಂದ ವಿಮಾನದ ಬಲಗಡೆಯ ರೆಕ್ಕೆಯ ಮೇಲೆಯೇ ನಡೆದು ಬಂದಿರುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಇಂಡಿಗೋ ಸಂಸ್ಥೆಯ ‘6E 6017’ ವಿಮಾನವು ಪ್ರಯಾಣಿಕರನ್ನು ಹೊತ್ತು ಟೇಕ್-ಆಫ್ ಆಗಲು ರನ್‌ವೇ ಕಡೆಗೆ ಚಲಿಸುತ್ತಿದ್ದಾಗ (Taxiing) ವಿಮಾನದ ಕ್ಯಾಬಿನ್ ಮತ್ತು ಕಾಕ್‌ಪಿಟ್ ಒಳಗಡೆ ದಿಢೀರನೆ ದಟ್ಟವಾದ ಹೊಗೆ ಆವರಿಸಿಕೊಂಡಿತು. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನವನ್ನು ಮಧ್ಯದಲ್ಲೇ ನಿಲ್ಲಿಸಿ, ಗಂಭೀರ ಪರಿಸ್ಥಿತಿ ಘೋಷಿಸಿ ಎಮರ್ಜೆನ್ಸಿ ಎಕ್ಸಿಟ್ (Emergency Evacuation) ಮೂಲಕ ಎಲ್ಲರನ್ನು ಕೆಳಗಿಳಿಸಲು ಸೂಚಿಸಿದರು.

ಇಲ್ಲಿದೆ ನೋಡಿ ವಿಡಿಯೋ:,

ಈ ವಿಮಾನದಲ್ಲಿದ್ದ ದೀಪನ್ ಕ್ವೀಟರ್ ಕಣ್ಣನ್ ಎಂಬ ಪ್ರಯಾಣಿಕರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನದ ಬಲಗಡೆಯ ಓವರ್‌ವಿಂಗ್ ಎಕ್ಸಿಟ್‌ನಲ್ಲಿದ್ದ ಸುರಕ್ಷತಾ ಸ್ಲೈಡ್ ಸರಿಯಾಗಿ ಗಾಳ ತುಂಬಿ ಓಪನ್ ಆಗಲೇ ಇಲ್ಲ! ಇದರಿಂದಾಗಿ ಗಾಬರಿಗೊಂಡ ಜನರು ಅನಿವಾರ್ಯವಾಗಿ ವಿಮಾನದ ರೆಕ್ಕೆಯ (Wing) ಮೇಲೆ ಹತ್ತಿ ನಿಲ್ಲಬೇಕಾಯಿತು. ನಂತರ ಅಲ್ಲಿಂದ ಮತ್ತೆ ವಿಮಾನದ ಒಳಗಡೆ ಹೋಗಿ ಬೇರೆ ದಾರಿಯ ಮೂಲಕ ಕೆಳಗಿಳಿಯಬೇಕಾಯಿತು” ಎಂದು ಅವರು ಬರೆದುಕೊಂಡಿದ್ದಾರೆ. “ಡಿಜಿಸಿಎ (DGCA) ಈ ತಾಂತ್ರಿಕ ಲೋಪದ ಬಗ್ಗೆಯೂ ಗಂಭೀರ ತನಿಖೆ ನಡೆಸಬೇಕು. ತುರ್ತು ಸಂದರ್ಭದಲ್ಲಿ ಗಾಬರಿಯಿಂದ ಜನರು ರೆಕ್ಕೆಯ ಮೇಲಿಂದ ಕೆಳಗೆ ಬಿದ್ದು ದೊಡ್ಡ ಅನಾಹುತವೇ ಸಂಭವಿಸಬಹುದಿತ್ತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಹಣಕ್ಕಾಗಿ ಸಂಚು ರೂಪಿಸಿದ ‘ಪಂಕ್ಚರ್ ಮಾಫಿಯಾ’! ಮಾಗಡಿ ರಸ್ತೆಯುದ್ದಕ್ಕೂ ಮೊಳೆಗಳ ರಾಶಿ

ಇಂಡಿಗೋ ಸಂಸ್ಥೆಯ ಸ್ಪಷ್ಟನೆ; ತನಿಖೆಗೆ ಡಿಜಿಸಿಎ ಆದೇಶ:

ಈ ಇಡೀ ಘಟನೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಡಿಗೋ ಏರ್‌ಲೈನ್ಸ್ ವಕ್ತಾರರು, “ಮೇ 26 ರಂದು ಬೆಂಗಳೂರು-ಚೆನ್ನೈ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸ್ಥಳಾಂತರ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಅವರನ್ನು ಟರ್ಮಿನಲ್‌ಗೆ ಕರೆತರಲಾಗಿದೆ. ಅವರ ಪ್ರಯಾಣಕ್ಕೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು” ಎಂದು ತಿಳಿಸಿದ್ದಾರೆ. ಆದರೆ ವಿಮಾನದಲ್ಲಿ ಹೊಗೆ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಪ್ರಸ್ತುತ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಮಾನವನ್ನು ತಪಾಸಣೆಗಾಗಿ ಗ್ರೌಂಡ್ ಮಾಡಲಾಗಿದೆ ಹಾಗೂ ತನಿಖೆಗೆ ಆದೇಶಿಸಿದೆ. ಸ್ಥಳಾಂತರದ ಪ್ರಕ್ರಿಯೆಯ ವೇಳೆ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ – Kannada News | Siddaramaiah Agrees to Step Down as Karnataka CM: Inside Story of how Congress High Command Convinced Him

ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ?Image Credit source: new indian express

ಬೆಂಗಳೂರು, ಮೇ 27: ರಾಜ್ಯ ರಾಜಕಾರಣದಲ್ಲಿ ಬಹುದಿನಗಳಿಂದ ಸದ್ದು ಮಾಡುತ್ತಿದ್ದ ಕಾಂಗ್ರೆಸ್​​ ನಾಯಕತ್ವ ಬದಲಾವಣೆ ಸಮರ ಕೊನೆಗೂ ಕ್ಲೈಮಾಕ್ಸ್​​ ಹಂತಕ್ಕೆ ತಲುಪಿದೆ. ಸಿಎಂ ಸ್ಥಾನ ತ್ಯಜಿಸಲು ಸಿದ್ದರಾಮಯ್ಯ ಅವರನ್ನು ಮನವೊಲಿಸುವಲ್ಲಿ ಹೈಕಮಾಂಡ್​​ ನಾಯಕರು ಯಶಸ್ವಿಯಾಗಿದ್ದು, ನಾಳೆ (ಮೇ 28) ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಭೇಟಿಗೂ ಅವರು ಸಮಯ ಕೇಳಿರುವ ಮಾಹಿತಿ ಇದೆ. ಅಷ್ಟಕ್ಕೂ ಮುಖ್ಯಮಂತ್ರಿ ಸ್ಥಾನ ಬಿಡಲು ಸಿದ್ದರಾಮಯ್ಯ ಅವರನ್ನು ವರಿಷ್ಠರು ಮನವೊಲಿಸಿದ್ದು ಹೇಗೆ ಎಂಬುದೇ ಇಂಟರೆಸ್ಟಿಂಗ್​ ಆಗಿದೆ.

ಮುಖ್ಯಾಂಶಗಳು

  • ರಾಜ್ಯ ರಾಜಕಾರಣದಲ್ಲಿ ಕೊನೆಗೂ ಸ್ಫೋಟಕ ಬೆಳವಣಿಗೆ
  • ಸಿಎಂ ಸ್ಥಾನ ತ್ಯಜಿಸಲು ಮುಂದಾಗಿರುವ ಸಿದ್ದರಾಮಯ್ಯ
  • ಹೈಕಮಾಂಡ್​​ ಸಿದ್ಧರಾಮಯ್ಯರ ಮನವೊಲಿಸಿದ್ದೇಗೆ ಗೊತ್ತಾ?

ಅಷ್ಟಕ್ಕೂ ಹಾಲಿ ಸಿಎಂ ಸಿದ್ದರಾಮಯ್ಯ ಅವರರಿಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಹೇಳುವುದು ಕಾಂಗ್ರೆಸ್​​ ಹೈಕಮಾಂಡ್​​ಗೂ ಸುಲಭದ ಕೆಲಸವೇನೂ ಆಗಿರಲಿಲ್ಲ. ವರಿಷ್ಠರ ತಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆದುಕೊಂಡೇ ಸಿದ್ದರಾಮಯ್ಯ ದೆಹಲಿ ವಿಮಾನ ಹತ್ತಿದ್ದರು. ಒಂದೊಮ್ಮೆ ಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾದರೆ ತಾನು ಯಾವ ದಾಳ ಉರುಳಿಸಬೇಕು ಎಂಬ ಪಕ್ಕಾ ಪ್ಲ್ಯಾನ್​​ ಸಿದ್ಧಮಾಡಿಕೊಂಡೇ ತೆರಳಿದ್ದರು. ಆದರೆ ಸಿಎಂ ಭೇಟಿಗೂ ಮುನ್ನ ರಾಹುಲ್ ಗಾಂಧಿ ಎಲ್ಲಾ ವಿವರ ಪಡೆದುಕೊಂಡಿದ್ದು, 2023ರ ಮಾತುಕತೆ ಬಗ್ಗೆ ಎಐಸಿಸಿ ನಾಯಕರು ರಾಹುಲ್​ಗೆ ವಿವರಿಸಿದ್ದರು. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್​​ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದರು. ಈ ವೇಳೆ ಭರವಸೆ ನೀಡಿದ್ದರೆ ಹಾಗೆ ನಡೆದುಕೊಳ್ಳೋದು ಸೂಕ್ತ ಎಂದು ರಾಹುಲ್​​ ಗಾಂಧಿಯೂ ಹೇಳಿದ್ದು, ಸಿಎಂ ಜೊತೆಗೆ ಸಭೆ ನಡೆದಾಗಲೂ ಅದನ್ನೇ ರಾಹುಲ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಕೊನೆಗೂ ತೆರೆ; ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ

ಇನ್ನು ಎರಡು ಅವಧಿಯಲ್ಲಿ ಪಕ್ಷ ತಮ್ಮನ್ನು ಗೌರವದಿಂದ ನಡೆಸಿಕೊಂಡಿದೆ, ಹೀಗೆಯೇ ಮುಂದೆಯೂ ಗೌರವದಿಂದ ನಡೆಸಿಕೊಳ್ಳಲಿದೆ. ತಾವು ಮುಂದಿನ ಬೆಳವಣಿಗೆಗೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ. ಈ ವೇಳೆ ಅಹಿಂದ ಮತ ಹಿಡಿದಿಟ್ಟುಕೊಳ್ಳಲು ತನ್ನ ಮುಂದುವರಿಕೆ ಅಗತ್ಯ ಎಂದು ಸಿದ್ದರಾಮಯ್ಯ ಮನವರಿಕೆ ಯತ್ನ ಮಾಡಿದ್ದರಾದರೂ ಅದನ್ನು ಬ್ಯಾಲೆನ್ಸ್ ಮಾಡಲು ಎಲ್ಲಾ ನಾಯಕರಿಗೂ ಜವಾಬ್ದಾರಿ ಹಂಚಿಕೆ ಮಾಡುವ ಭರವಸೆಯನ್ನು ಈ ವೇಳೆ ರಾಹುಲ್​​ ನೀಡಿದ್ದಾರೆ. ಹೀಗಾಗಿ ರಾಹುಲ್​ ಗಾಂಧಿ ಮಾತಿಗೆ ಕಟ್ಟುಬಿದ್ದು ಸಿಎಂ ಸ್ಥಾನ ತ್ಯಜಿಸಲು ನಿರ್ಧರಿಸಿರೋದಾಗಿ ಆಪ್ತ ಸಚಿವರ ಬಳಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರಂತೆ. ಜೊತೆಗೆ ಸಿದ್ದರಾಮಯ್ಯಗೆ ರಾಜ್ಯಸಭಾ ಸ್ಥಾನ ಮತ್ತು ಅವರ ಪುತ್ರ, ಎಂಎಲ್​​ಸಿ ಯತೀಂದ್ರಗೆ ಡಿಸಿಎಂ ಸ್ಥಾನದ ಭರವಸೆಯೂ ನಾಯಕರಿಂದ ಸಿಕ್ಕಿದೆ ಎಂಬ ಮಾಹಿತಿಯೂ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ, ಬಿಹಾರ ಸೇರಿ ಹಲವು ರಾಜ್ಯಗಳ ವಿರೋಧದ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು – Kannada News | Supreme Court Says SIR Strengthens Democratic Framework and Constitutional Values

ನವದೆಹಲಿ, ಮೇ 27: ಕರ್ನಾಟಕ, ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ನೀಡಿರುವ ತೀರ್ಪು ಅಚ್ಚರಿ ಮೂಡಿಸಿದೆ. ಬಿಹಾರದಲ್ಲಿ ಭಾರತೀಯ ಚುನಾವಣಾ ಆಯೋಗ (ECI) ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಸಾಂವಿಧಾನಿಕ ಮತ್ತು ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷ ಪರಿಷ್ಕರಣೆ ನಡೆಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.

ಸಂವಿಧಾನದ 324 ನೇ ವಿಧಿ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ ವಿಶೇಷ ಪರಿಷ್ಕರಣೆ ನಡೆಸುವ ಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅದಕ್ಕಾಗಿ ಮತದಾರರ ಪಟ್ಟಿಯನ್ನು ನವೀಕರಿಸುವುದು ಅತ್ಯಗತ್ಯ.

ಈ ವಿಶೇಷ ಪರಿಷ್ಕರಣೆಯು ನಿಯಮಿತವಾಗಿ ನಡೆಯುವ ಸಾಮಾನ್ಯ ಪ್ರಕ್ರಿಯೆಗಿಂತ ಭಿನ್ನವಾಗಿದೆ ಎಂಬ ಒಂದೇ ಕಾರಣಕ್ಕೆ ಇದನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಲು ಸಾಧ್ಯವಿಲ್ಲ. ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಎಸ್​ಐಆರ್​​ನಲ್ಲಿ ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು?

ಪ್ರಕರಣದ ಹಿನ್ನೆಲೆ ಮತ್ತು ಅರ್ಜಿಗಳಲ್ಲೇನಿತ್ತು?
ಚುನಾವಣಾ ಆಯೋಗದ ಈ ಬೃಹತ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲು ಆಯೋಗಕ್ಕೆ ಶಾಸನಬದ್ಧ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಪ್ರಕರಣದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 12 ರಂದೇ ಆರಂಭಿಸಿತ್ತು.

ಈ ವಿಶೇಷ ಪರಿಷ್ಕರಣೆಯ (SIR) ಭಾಗವಾಗಿ, ಬಿಹಾರದ ಕರಡು ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ನಕಲಿ ಅಥವಾ ಅಸಿಂಧು ಹೆಸರುಗಳನ್ನು ಚುನಾವಣಾ ಆಯೋಗವು ತೆಗೆದುಹಾಕಿತ್ತು. ಅಧಿಸೂಚನೆಯ ಪ್ರಕಾರ, 2002 ಅಥವಾ 2003 ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಆ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ತಮ್ಮ ಪೂರ್ವಜರ ಸಂಪರ್ಕವನ್ನು ಸಾಬೀತುಪಡಿಸಬೇಕಾಗಿತ್ತು.

ಆದರೆ, ಈಗ ಸುಪ್ರೀಂ ಕೋರ್ಟ್ ಈ ಇಡೀ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಎಂದು ಘೋಷಿಸಿರುವುದರಿಂದ ಚುನಾವಣಾ ಆಯೋಗದ ಕ್ರಮಕ್ಕೆ ಸುಪ್ರೀಂ ಮುದ್ರೆ ಬಿದ್ದಂತಾಗಿದೆ.

ಕರ್ನಾಟಕದಲ್ಲೂ ವಿರೋಧ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವ ಹುನ್ನಾರ ಎಂದು ಆರೋಪಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇದರ ವಿರುದ್ಧ ತಾರ್ಕಿಕ ಹಾಗೂ ಕಾನೂನು ಸಮರ ನಡೆಸುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಎಸ್‌ಐಆರ್ ಪ್ರಕ್ರಿಯೆಯು ಬಡವರ ಮತಕ್ಕೆ ಕತ್ತರಿ ಹಾಕುವ ತಂತ್ರವಾಗಿದೆ ಎಂದು ಆಕ್ಷೇಪಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮತ್ತೊಂದು ವಿವಾದ: ಮಾಜಿ ರೌಡಿಶೀಟರ್‌ಗೆ ಆಶೀರ್ವದಿಸಿದ ವಿಡಿಯೋ ವೈರಲ್! – Kannada News | Nagalakshmi Chowdhari Controversy: Karnataka Women’s Commission Chief Caught on Camera Blessing Ex Rowdy Sheeter in Udupi

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿImage Credit source: tv9

ಉಡುಪಿ, ಮೇ 27: ಕರ್ನಾಟಕ (Karnataka) ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮತ್ತೊಂದು ಹೊಸ ವಿವಾದದ ಸುಳಿಗೆ ಸಿಲುಕಿದ್ದಾರೆ. ಉಡುಪಿ ಜಿಲ್ಲಾ ಪ್ರವಾಸದ ವೇಳೆ ಅವರು ಮಾಜಿ ರೌಡಿಶೀಟರ್ ಸೋನು ಸುಧೀರ್ ಎಂಬಾತನಿಗೆ ಕಾರಿನಲ್ಲಿ ಕುಳಿತು ತಲೆ ಮುಟ್ಟಿ ಆಶೀರ್ವದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಂವಿಧಾನಿಕ ಮತ್ತು ಜವಾಬ್ದಾರಿಯುತ ಹುದ್ದೆಯಲ್ಲಿರುವ ಮಹಿಳಾ ಆಯೋಗದ ಅಧ್ಯಕ್ಷರೇ ಈ ರೀತಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಮುಖ್ಯಾಂಶಗಳು

  • ಉಡುಪಿ ಪ್ರವಾಸದ ವೇಳೆ ಕಾರಿನಲ್ಲಿ ಕುಳಿತೇ ಮಾಜಿ ರೌಡಿಶೀಟರ್ ಸೋನು ಸುಧೀರ್ ತಲೆ ಸವರಿ ಆಶೀರ್ವದಿಸಿದ ಡಾ. ನಾಗಲಕ್ಷ್ಮೀ ಚೌಧರಿ.
  • ಎರಡು ಪ್ರಮುಖ ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಸೋನು ಸುಧೀರ್.
  • 2021ರಿಂದ 2023ರವರೆಗೆ ಕಾಪು ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದ ಸೋನು ಸುಧೀರ್.

ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ಇಂತಹ ವಿವಾದಗಳು ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ, ಕೋಮು ಸಂಬಂಧಿತ ಪ್ರಕರಣಗಳಲ್ಲಿ ಹಾಗೂ ಹತ್ತಾರು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಬಲಪಂಥೀಯ ಕಾರ್ಯಕರ್ತ ಹಾಗೂ ಗೋರಕ್ಷಕ ಪುನೀತ್ ಕೆರೆಹಳ್ಳಿಗೆ ಇವರು ಇದೇ ಮಾದರಿಯಲ್ಲಿ ಶುಭ ಹಾರೈಸಿ ಆಶೀರ್ವದಿಸಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಸಂದರ್ಭದಲ್ಲಿಯೂ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಆರೋಪಿಗಳ ಪರ ನಿಲ್ಲುತ್ತಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕರು ಹಾಗೂ ಸಂಘಟನೆಗಳು ಆಯೋಗದ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

ವಿಡಿಯೋ ಇಲ್ಲಿ ನೋಡಿ

ಇದೀಗ, ಹಳೇ ವಿವಾದದ ಬೆಂಕಿ ಆರುವ ಮುನ್ನವೇ ಉಡುಪಿಯಲ್ಲಿ ಸರಣಿ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ್ದ ಅಧ್ಯಕ್ಷೆ, ಅಲ್ಲಿ ಮತ್ತೆ ಇಂತಹದ್ದೇ ಹೆಜ್ಜೆ ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೋನು ಸುಧೀರ್ ಎರಡು ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ರೌಡಿಶೀಟರ್ ಲಿಸ್ಟ್‌ನಲ್ಲಿದ್ದ ವ್ಯಕ್ತಿ. ಮಹಿಳೆಯರ ರಕ್ಷಣೆ ಮತ್ತು ಹಕ್ಕುಗಳಿಗಾಗಿ ಶ್ರಮಿಸಬೇಕಾದ ಆಯೋಗದ ಮುಖ್ಯಸ್ಥರೇ ರೌಡಿಶೀಟರ್‌ಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವಂತೆ ಬಿಂಬಿತವಾಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Viral CCTV: Bus Driver’s Quick Reflexes Avert Horrific Pedestrian Accident

ಕೇರಳ: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರೀ ವೈರಲ್ ಆಗುತ್ತಿರುವ ಈ ಸಿಸಿಟಿವಿ ದೃಶ್ಯಾವಳಿಯು, ಮುಂಜಾನೆ ಸುಮಾರು 6:15ರ ವೇಳೆಗೆ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಭೀಕರ ಘಟನೆಯನ್ನು ತೋರಿಸುತ್ತದೆ. ವಿಡಿಯೋದಲ್ಲಿ, ಎಂದಿನಂತೆ ಕಚೇರಿಗೆ ಹೊರಟ ವ್ಯಕ್ತಿಯೊಬ್ಬರು ಹಾಗೂ ಇಬ್ಬರು ಪಾದಚಾರಿಗಳು ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಅಷ್ಟರಲ್ಲೇ ಅತ್ಯಂತ ವೇಗವಾಗಿ ಬಂದ ಹಳದಿ ಮತ್ತು ನೀಲಿ ಬಣ್ಣದ ಖಾಸಗಿ ಬಸ್, ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಿದ್ದ ಜನರ ಮೇಲೆಯೇ ನುಗ್ಗುವಂತೆ ಆತಂಕ ಸೃಷ್ಟಿಸಿದೆ. ಆದರೆ, ಇನ್ನೇನು ಪಾದಚಾರಿಗಳಿಗೆ ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಚಾಲಕ ತೋರಿದ ಅದ್ಭುತ ಸಮಯಪ್ರಜ್ಞೆಯಿಂದ ಭೀಕರ ಅಪಘಾತ ತಪ್ಪಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಮತ್ತೆ ಹಣಕ್ಕಾಗಿ ಸಂಚು ರೂಪಿಸಿದ ‘ಪಂಕ್ಚರ್ ಮಾಫಿಯಾ’! ಮಾಗಡಿ ರಸ್ತೆಯುದ್ದಕ್ಕೂ ಮೊಳೆಗಳ ರಾಶಿ – Kannada News | Bengaluru Road Safety Alert: Puncture Mafia Scatters Nails, Drivers Beware!

ಬೆಂಗಳೂರು, ಮೇ27: ಬೆಂಗಳೂರಿನಲ್ಲಿ ಜನರಿಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ರಸ್ತೆ ಗುಂಡಿಮ ಟ್ರಾಫಿಕ್​​​​​, ದರೋಡೆ, ಕಳ್ಳತನ ಹೀಗೆ ಅನೇಕ ಸಮಸ್ಯೆಗಳು ಇದೆ. ಇದೀಗ ಸಂಚಾರ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳ ನಡುವೆ ಈಗ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಮತ್ತೊಂದು ಘೋರ ಗಂಡಾಂತರ ಎದುರಾಗಿದೆ. ಹೌದು, ನಗರದಲ್ಲಿ ಸದ್ದಡಗಿದ್ದ ಕುಖ್ಯಾತ ‘ಪಂಕ್ಚರ್ ಮಾಫಿಯಾ’ (Nails Puncture Mafia) ಮತ್ತೊಮ್ಮೆ ತನ್ನ ಕೃತ್ಯ ಆರಂಭಿಸಿದೆ. ಈ ಗ್ಯಾಂಗ್ ಸವಾರರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿಯೇ ಹಾಕಿ ಸವಾರರನ್ನುನ ಸಂಕಷ್ಟಕ್ಕೆ ಸಿಲುಕಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚಿನ ಲಾಭ ಗಳಿಸುವ ಮತ್ತು ಪಂಕ್ಚರ್ ಅಂಗಡಿಗಳಿಗೆ ಗ್ರಾಹಕರನ್ನು ಸೆಳೆಯುವ ಏಕೈಕ ದುರಾಸೆಯಿಂದ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಗಳಲ್ಲೇ ಮೊಳೆಗಳು, ಸ್ಕ್ರೂಗಳು ಮತ್ತು ಬ್ಲೇಡ್‌ಗಳನ್ನು ಎಸೆಯಲಾಗುತ್ತಿದೆ. ಆಫೀಸ್​​ ತಡವಾಗಿದೆ ಎಂಬ ಅವಸರದಲ್ಲಿರುವ ಐಟಿ ಉದ್ಯೋಗಿಗಳು, ಬೈಕ್ ಸವಾರರು, ಕ್ಯಾಬ್ ಚಾಲಕರು, ಡೆಲಿವರಿ ಏಜೆಂಟ್‌ಗಳು ಹಾಗೂ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳೇ ಈ ಮಾಫಿಯಾದ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅಮಾಯಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಈ ಜಾಲದ ಕ್ರಿಮಿನಲ್ ಬುದ್ಧಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು?

ಇದು ಕೇವಲ ಹಣ ದೋಚುವ ದಂಧೆಯಾಗಿ ಉಳಿದಿಲ್ಲ, ಬದಲಿಗೆ ಅಮಾಯಕರ ಜೀವಕ್ಕೆ ಕಂಟಕ ತರುವ ಕೃತ್ಯವಾಗಿದೆ. ಅತಿ ವೇಗವಾಗಿ ಚಲಿಸುವ ದ್ವಿಚಕ್ರ ವಾಹನಗಳ ಟೈರ್ ಒಮ್ಮೆಲೇ ಪಂಕ್ಚರ್ ಆದರೆ ಸವಾರರು ನಿಯಂತ್ರಣ ತಪ್ಪಿ ಬಿದ್ದು ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. “ಒಂದು ವೇಳೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಹೊತ್ತೊಯ್ಯುವ ಆಂಬ್ಯುಲೆನ್ಸ್‌ನ ಟೈರ್ ಇಂತಹ ಮೊಳೆಗಳಿಂದ ಪಂಕ್ಚರ್ ಆದರೆ ಆಗುವ ಅನಾಹುತಕ್ಕೆ ಹೊಣೆ ಯಾರು?” ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ನಗರದ ಹೆಬ್ಬಾಳ, ನೆಲಮಂಗಲ ಹೈವೇ ಹಾಗೂ ಔಟರ್ ರಿಂಗ್ ರೋಡ್‌ಗಳ ಬೆನ್ನಲ್ಲೇ ಈಗ ಬ್ಯಾಡರಹಳ್ಳಿ ಮತ್ತು ಮಾಗಡಿ ರಸ್ತೆಯಲ್ಲೂ ಈ ದಂಧೆ ವ್ಯಾಪಕವಾಗಿ ಹರಡುತ್ತಿದೆ. ರಸ್ತೆಗಳು ಸುರಕ್ಷಿತ ಪ್ರಯಾಣಕ್ಕಾಗಿ ಇವೆಯೇ ಹೊರತು ಅಕ್ರಮ ಸಂಪಾದನೆಗಾಗಿ ಅಮಾಯಕರನ್ನು ಬಲೆಗೆ ಬೀಳಿಸುವ ಜಾಗಗಳಲ್ಲ. ಆದ್ದರಿಂದ ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಠಾಣಾ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ರಸ್ತೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಮೊಳೆ ಜಲ್ಲುವ ಕಿರಾತಕರನ್ನು ಪತ್ತೆ ಹಚ್ಚಬೇಕು. ಹಾಗೂ ಇಂತಹ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ರಸ್ತೆ ಬದಿಯ ಪಂಕ್ಚರ್ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಂಗಳೂರಿನ ನಾಗರಿಕರು ಗೃಹ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 am, Wed, 27 May 26

Source link

Exit mobile version