IND A vs SL A: ಮಿಂಚಿದ ಆಕಿಬ್ ನಬಿ; ಭಾರತಕ್ಕೆ 122 ರನ್​ಗಳ ಮುನ್ನಡೆ – Kannada News | Galle Unofficial Test: Sudarshan, Jurel Centuries and Nabi’s 4 For Secure 122 Run Lead vs SL A

ಗಾಲೆಯಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 122 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಎ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 452ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಗುರಿ ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ತಂಡ 330 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ಸಿಕ್ಕಿದೆ. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ಎರಡು ಶತಕ ಹಾಗೂ 1 ಅರ್ಧಶತಕ ದಾಖಲಾದರೆ, ಇತ್ತ ಶ್ರೀಲಂಕಾ ಪರ ಮೂರು ಅರ್ಧಶತಕಗಳು ದಾಖಲಾದವು. ಆದರೆ ಇದರ ಹೊರತಾಗಿಯೂ ಆತಿಥೇಯ ತಂಡಕ್ಕೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಜಮ್ಮು ಕಾಶ್ಮೀರ ವೇಗಿ ಆಕಿಬ್ ನಬಿ (Aqib Nabi).

452 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್

ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಸಾಯಿ ಸುದರ್ಶನ್ (132) ಹಾಗೂ ನಾಯಕ ಧೃವ್ ಜುರೇಲ್ (141) ಶತಕದ ಇನ್ನಿಂಗ್ಸ್ ಆಡಿದರು. ಉಳಿದಂತೆ ಶೇಕ್ ರಶೀದ್ ಕೂಡ 63 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಅಮೋಘ ಇನ್ನಿಂಗ್ಸ್​ನಿಂದಾಗಿ ಟೀಂ ಇಂಡಿಯಾ 452 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

30 ರನ್‌ಗಳಿಗೆ ಐದು ವಿಕೆಟ್‌

ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾಗೆ ಉತ್ತಮ ಆರಂಭ ಸಿಗಲಿಲ್ಲ. ಪವಂತ ವೀರಸಿಂಘೆ (11), ನಿರೋಶನ್ ಡಿಕ್ವೆಲ್ಲಾ (10) ಬೇಗನೇ ಔಟಾದರು. ಆ ಬಳಿಕ ಬಂದ ನುವಾನಿಂದು ಫೆರ್ನಾಂಡೊ (84), ಅಶೆನ್ ಬಂಡಾರ (70) ಮತ್ತು ಸಹನ್ ಅರಚ್ಚಿಗೆ (72) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಉಳಿದಂತೆ ಅಂಜಲ ಬಂಡಾರ (15), ರವಿಂದು ಫೆರ್ನಾಂಡೊ (22), ಕವಿಂದು ಪತಿರತ್ನೆ (3) ಮತ್ತು ಚಮಿಕಾ ಗುಣಶೇಖರ (15) ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಲಂಕಾ ಎ ತಂಡವು ತನ್ನ ಕೊನೆಯ ಐದು ವಿಕೆಟ್‌ಗಳನ್ನು 30 ರನ್‌ಗಳಿಗೆ ಕಳೆದುಕೊಂಡಿತು.

IND W vs ENG W: ಟೀಂ ಇಂಡಿಯಾ ವಿರುದ್ಧದ ಲಾರ್ಡ್ಸ್‌ ಟೆಸ್ಟ್​​ಗೆ ಇಂಗ್ಲೆಂಡ್‌ ತಂಡ ಪ್ರಕಟ

ಮಿಂಚಿದ ಆಕಿಬ್ ನಬಿ

ಇನ್ನು ಭಾರತ ಎ ಪರ ಬೌಲಿಂಗ್​ನಲ್ಲಿ ಮಿಂಚಿದ ಆಕಿಬ್ ನಬಿ 19.4 ಓವರ್‌ಗಳಲ್ಲಿ 58 ರನ್‌ಗಳಿಗೆ 4 ವಿಕೆಟ್ ಪಡೆದರೆ, ಯಶ್ ಠಾಕೂರ್ ಮತ್ತು ಹರ್ಷ್ ದುಬೆ ತಲಾ 2 ವಿಕೆಟ್ ಪಡೆದರು. ಅನ್ಶುಲ್ ಕಾಂಬೋಜ್ ಮತ್ತು ಸರನ್ಶ್ ಜೈನ್ ತಲಾ 1 ವಿಕೆಟ್ ಪಡೆದರು. ಆಕಿಬ್ ನಬಿ ಅಂಜಲಾ ಬಂಡಾರ, ರವಿಂದು ಫರ್ನಾಂಡೊ, ಚಾಮಿಕಾ ಗುಣಶೇಖರ ಮತ್ತು ದುಲಾಜ್ ಸಮುದಿತ ಅವರನ್ನು ಔಟ್ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:46 pm, Sat, 27 June 26

Source link

ಈ ಮೂರು ‘ಕೆ’ ಗಳನ್ನು ಯಾವತ್ತೂ ಮರೆಯಬಾರದು: ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ, ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್ – Kannada News | Kempegowda Jayanti: CM Highlights Bengaluru Development and Enduring Legacie

ಬೆಂಗಳೂರು, ಜೂ.27: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಅನಾವರಣಗೊಳಿಸಿದರು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕೆಗಳು ತಾತ್ಕಾಲಿಕ, ಆದರೆ ಮಾಡಿದ ಕೆಲಸಗಳು ಶಾಶ್ವತ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬೆಂಗಳೂರಿನ ಪ್ರಗತಿಗೆ ಕೊಡುಗೆ ನೀಡಿದ ಮೂರು ಕೆ ಗಳನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಬೆಂಗಳೂರನ್ನು ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರು, ವಿಧಾನ ಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಮತ್ತು ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಎಸ್.ಎಂ. ಕೃಷ್ಣ. ಈ ಮೂವರೂ ಬಿಟ್ಟು ಹೋದ “ಸಾಕ್ಷಿ ಗುಡ್ಡೆಗಳೇ” ಅವರ ಕೆಲಸಗಳಿಗೆ ಸಾಕ್ಷಿ ಎಂದರು. ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದ 11 ಕಿಲೋಮೀಟರ್ ರಸ್ತೆಯನ್ನು 123 ಕಿಲೋಮೀಟರ್ ಪೆರಿಫೆರಲ್ ರಿಂಗ್ ರಸ್ತೆಯನ್ನಾಗಿ ವಿಸ್ತರಿಸುವ ಮಹತ್ವದ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಘೋಷಿಸಿದರು. ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ 10 ಪಥಗಳ ರಸ್ತೆಯನ್ನು ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಧಾರಗಳನ್ನು ತಿಳಿಸಿದ ಅವರು, ಬೆಂಗಳೂರಿನ ಬೆಳವಣಿಗೆಗೆ ಈ ಯೋಜನೆಗಳು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ವಿಡಿಯೋ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಣ್ಮಕ್ಳಿಗೆ ಜಿರಳೆಗಳನ್ನು ಕಂಡ್ರೆ ಅಷ್ಟೊಂದು ಭಯವೇಕೆ ಗೊತ್ತೇ?

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಭಯ (fear) ಇದ್ದೇ ಇರುತ್ತದೆ. ಕೆಲವರು ಕತ್ತಲೆಗೆ ಹೆದರಿದರೆ, ಕೆಲವರಿಗೆ ಎತ್ತರದ ಸ್ಥಳಗಳೆಂದರೆ ಸಿಕ್ಕಾಪಟ್ಟೆ ಭಯ, ಇನ್ನೂ ಕೆಲವರು ನೀರು, ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಇದೇ ರೀತಿ ಅನೇಕ ಮಹಿಳೆಯರಿಗೆ ಜಿರಳೆಗಳೆಂದರೆ ತುಂಬಾನೇ ಭಯ. ಮನೆಯಲ್ಲಿ ಏನಾದ್ರೂ ಜಿರಳೆಗಳನ್ನು ಕಂಡರೆ ಜೋರಾಗಿ ಕಿರುಚಾಡುತ್ತಾ ಅಲ್ಲಿಂದ ಓಡಿ ಹೋಗುತ್ತಾರೆ. ಕೆಲವರಂತೂ ಜಿರಳೆಗಳನ್ನು ಕಂಡರೆ ಭಯದಿಂದ ನಡುಗುತ್ತಾರೆ. ಗಾತ್ರದಲ್ಲಿ ತುಂಬಾನೇ ಸಣ್ಣದಾಗಿರುವ ಈ ಜೀವಿಯನ್ನು ಕಂಡರೆ ಮಹಿಳೆಯರಿಗೆ ಅಷ್ಟೊಂದು ಹೆದರಿಕೆ ಏಕೆ? ಈ ಭಯದ ಹಿಂದಿರುವ ನಿಜವಾದ ಕಾರಣವೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮಹಿಳೆಯರಿಗೆ ಜಿರಳೆಗಳನ್ನು ಕಂಡರೆ ಭಯವೇಕೆ?

ಮನೋವಿಜ್ಞಾನದ  ಪ್ರಕಾರ ಜಿರಳೆಗಳಿಗೆ ಭಯಪಡುವುದನ್ನು ‘ಕತ್ಸರಿಡಾಫೋಬಿಯಾ’ (Katsaridaphobia) ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ  ಫೋಬಿಯಾ ಆಗಿದ್ದು, ಪ್ರಪಂಚದಾದ್ಯಂತ ಅನೇಕ ಜನರಿಗೆ ಈ ಫೋಬಿಯಾ ಇದೆ. ಈ ಪರಿಸ್ಥಿತಿಯಲ್ಲಿ, ಯಾರಾದರೂ ಜಿರಳೆಯನ್ನು ನೋಡಿದಾಗ, ದೇಹದಲ್ಲಿ ವಿವಿಧ ಪ್ರತಿಕ್ರಿಯೆಗಳು ಸಂಭವಿಸುತ್ತವೆ, ಕೈಗಳು ಮತ್ತು ಪಾದಗಳು ತಣ್ಣಗಾಗುವುದು, ಅತಿಯಾದ ಬೆವರುವುದು, ಹೃದಯ ಬಡಿತ ಹೆಚ್ಚಾಗುವುದು ಮತ್ತು ಕೆಲವು ಕ್ಷಣಗಳ ಕಾಲ ಯೋಚಿಸುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಈ ಭಯವು ಹೆಚ್ಚಾಗಿ ಬಾಲ್ಯದಲ್ಲಿಯೇ ಪ್ರಾರಂಭವಾಗುತ್ತದೆ. ಮಗು ತನ್ನ ಸುತ್ತಲಿನ ಜನರನ್ನು ಗಮನಿಸುವ ಮೂಲಕ ಪ್ರತಿಕ್ರಿಯಿಸಲು ಕಲಿಯುತ್ತದೆ. ಕುಟುಂಬದಲ್ಲಿ ಪೋಷಕರು ಅಥವಾ ಹಿರಿಯರು ಜಿರಳೆಯನ್ನು ನೋಡಿದಾಗ ಭಯಪಟ್ಟರೆ, ಅದು ಮಗುವಿನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ನಂತರ ಮಗುವು ಈ ಜೀವಿ ಅಪಾಯಕಾರಿ ಎಂಬ ಕಲ್ಪನೆಯನ್ನು ಬೆಳೆಸಿಕೊಳ್ಳುತ್ತದೆ. ಕ್ರಮೇಣ, ಆ ಕಲ್ಪನೆ  ಭಯವಾಗಿ ಬೆಳೆಯುತ್ತದೆ. ಈ ರೀತಿಯಾಗಿ, ಜಿರಳೆಗಳ ಭಯವು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಡುತ್ತದೆ.

ಜಿರಳೆಗಳಿಗೆ ಹುಡುಗಿಯರೇ ಹೆಚ್ಚು ಭಯಪಡುವುದೇಕೆ?

ಹುಡುಗಿಯರಲ್ಲಿ ಈ ಭಯವು ಹೆಚ್ಚು ಗಮನಾರ್ಹವಾಗಿರುವುದರ ಹಿಂದೆ ಸಾಮಾಜಿಕ ಮತ್ತು ಮಾನಸಿಕ ಅಂಶಗಳೂ ಇವೆ. ಅನೇಕ ಸಂದರ್ಭಗಳಲ್ಲಿ, ಹುಡುಗಿಯರಿಗೆ ಚಿಕ್ಕ ವಯಸ್ಸಿನಿಂದಲೇ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪರಿಣಾಮವಾಗಿ, ಅವರು ಸ್ವಾಭಾವಿಕವಾಗಿ ಕೊಳಕು ವಾತಾವರಣದಲ್ಲಿ ವಾಸಿಸುವ ಜೀವಿಗಳ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ. ಜಿರಳೆಗಳು ಸಾಮಾನ್ಯವಾಗಿ ಚರಂಡಿಗಳಲ್ಲಿ ಅಥವಾ ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ವಾಸಿಸುವುದರಿಂದ, ಅವುಗಳ ಉಪಸ್ಥಿತಿಯು ಅವರಿಗೆ ಕೋಪ ಮತ್ತು ಭಯ ಎರಡನ್ನೂ ಉಂಟುಮಾಡುತ್ತದೆ.

ಇದನ್ನೂ ಓದಿ: ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?

ಜಿರಳೆಗಳ ದೈಹಿಕ ರಚನೆಗಳೂ ಭಯಕ್ಕೆ ಕಾರಣ:

ಜಿರಳೆಗಳ ದೈಹಿಕ ಗುಣಲಕ್ಷಣಗಳು ಈ ಭಯವನ್ನು ಹೆಚ್ಚಿಸುತ್ತವೆ. ಎಣ್ಣೆಯುಕ್ತ ಚರ್ಮ, ಬೇಗನೆ ಓಡಿಹೋಗುವ ಅಭ್ಯಾಸ ಮತ್ತು ಇದ್ದಕ್ಕಿದ್ದಂತೆ ಹಾರಿ ದೇಹದ ಮೇಲೆ ಬೀಳುವುದು.ಈ ನಡವಳಿಕೆಗಳು ಅನೇಕರಿಗೆ ಅನಾನುಕೂಲವನ್ನುಂಟುಮಾಡುತ್ತವೆ. ವಿಶೇಷವಾಗಿ, ಅನಿರೀಕ್ಷಿತವಾಗಿ ಹಾರುವ ಜಿರಳೆಗಳು ಅನೇಕರನ್ನು ಆಶ್ಚರ್ಯಗೊಳಿಸುತ್ತವೆ. ಈ ಅನಿರೀಕ್ಷಿತತೆಯು ಭಯವನ್ನು ಹೆಚ್ಚಿಸುತ್ತದೆ.

ಜಿರಳೆಗಳು ಹಾವುಗಳು ಅಥವಾ ಕಾಡು ಪ್ರಾಣಿಗಳಂತೆ ನೇರವಾಗಿ ಮಾರಕವಲ್ಲದಿದ್ದರೂ, ಅವು ಇನ್ನೂ ವಿವಿಧ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ. ಕೊಳಕು ಸ್ಥಳಗಳಲ್ಲಿ ವಾಸಿಸುವುದರಿಂದ, ಅವುಗಳ ದೇಹದಲ್ಲಿ ವಿವಿಧ ರೀತಿಯ ಅಲರ್ಜಿನ್‌ಗಳಿವೆ. ಈ ಅಲರ್ಜಿನ್ ಆಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಜಿರಳೆಗಳ ಸುತ್ತಲಿನ ಉಪಪ್ರಜ್ಞೆ ಮನಸ್ಸಿನಲ್ಲಿ ಅಪಾಯದ ಪ್ರಜ್ಞೆಯನ್ನು ಸೃಷ್ಟಿಯಾಗುತ್ತದೆ. ಈ ಭಯವನ್ನು ಸೂಕ್ತ ಸಮಾಲೋಚನೆ, ಮತ್ತು ಕ್ರಮೇಣ ನಿಮ್ಮನ್ನು ನೀವು ಮಾನಸಿಕವಾಗಿ ಸಿದ್ಧಪಡಿಸುವ ಮೂಲಕ ಕಡಿಮೆ ಮಾಡಬಹುದು. ಜಿರಳೆಗಳಿಗೆ ಭಯಪಡುವವರನ್ನು ನೋಡಿ ನಗಬಾರದು ಅಥವಾ ಯಾರನ್ನೂ ಕೀಳಾಗಿ ನೋಡಬಾರದು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಏಕೆಂದರೆ ಇದು ಉದ್ದೇಶಪೂರ್ವಕ ಪ್ರತಿಕ್ರಿಯೆಯಲ್ಲ, ಬದಲಾಗಿ ಮನಸ್ಸಿನ ನೈಸರ್ಗಿಕ ರಕ್ಷಣಾ ಕಾರ್ಯವಿಧಾನ. ಯಾರಾದರೂ ಜಿರಳೆಗಳಿಗೆ ಹೆದರಿದಾಗ, ಅವರ ದೇಹವು ಅದನ್ನು ಅಪಾಯದ ಸಂಕೇತವಾಗಿ ತೆಗೆದುಕೊಳ್ಳುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಅವರು ಪ್ರತಿಕ್ರಿಯಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಚರಣ್ ಕಾರಣಕ್ಕೆ ಟ್ರೋಲ್​​ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ – Kannada News | Chiranjeevi being criticized for over praising his son

ಮೆಗಾಸ್ಟಾರ್ ಚಿರಂಜೀವಿ (Chiranjeevi) ಟಾಲಿವುಡ್​​ನ ಸೂಪರ್ ಸ್ಟಾರ್ ನಟ. 70ರ ವಯಸ್ಸಿನಲ್ಲೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಮಾತ್ರವಲ್ಲದೆ, ಸಿನಿಮಾ ರಂಗಕ್ಕೆ ಏನೇ ಸಮಸ್ಯೆ ಬಂದಾಗ ಮುಂದೆ ನಿಲ್ಲುತ್ತಾರೆ. ಹೊಸಬರ ಸಿನಿಮಾಗಳಿಗೆ ಬೆಂಬಲ ನೀಡುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಒಬ್ಬ ಆದರ್ಶ ಹಿರಿಯ ನಟನಂತೆ ಇದ್ದಾರೆ. ಆದರೆ ಇತ್ತೀಚೆಗೆ ಚಿರಂಜೀವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಬೇಸರ, ಟೀಕೆ ಮತ್ತು ಟ್ರೋಲಿಂಗ್ ಶುರುವಾಗಿದೆ. ಅದಕ್ಕೆ ಅವರ ಪುತ್ರ ಪ್ರೇಮವೇ ಕಾರಣವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರು ಸಹಜವಾಗಿಯೇ ಮಗ ರಾಮ್ ಚರಣ್ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ‘ಪೆದ್ದಿ’ ಸಿನಿಮಾಕ್ಕೂ ಚಿರಂಜೀವಿ ಅವರು ಆಸಕ್ತಿವಹಿಸಿ, ಆರಂಭದಲ್ಲಿ ಎದುರಾದ ವಿಘ್ನಗಳನ್ನು ಸಹ ನಿವಾರಿಸಿಕೊಟ್ಟರು. ಸೆಟ್​​ಗೆ ಭೇಟಿ ನೀಡಿದ ಸಮಯದಲ್ಲೂ ಸಹ ಮಗನ ಶ್ರಮ, ಸಾಹಸಗಳನ್ನು ಬಾಯ್ತುಂಬ ಕೊಂಡಾಡಿದರು. ಅದೆಲ್ಲ ಸಹಜವಾಗಿಯೇ ಇತ್ತು, ಆದರೆ ಇತ್ತೀಚೆಗೆ ‘ಪೆದ್ದಿ’ ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆ ವೇಳೆ ಚಿರಂಜೀವಿ ಆಡಿರುವ ಮಾತುಗಳು ಇದೀಗ ವಿಮರ್ಶೆಗೆ ಒಳಗಾಗಿವೆ.

ತಮ್ಮ ಮಗನನ್ನು ಮುಂದಿನ ‘ಮೆಗಾಸ್ಟಾರ್’ ಆಗಿ ಟಾಲಿವುಡ್​​ನಲ್ಲಿ ನೆಲೆ ನಿಲ್ಲಿಸುವ ದೂರಾಲೋಚನೆ ಹೊಂದಿರುವ ಚಿರಂಜೀವಿ ಅವರು ತಮ್ಮ ಅಂದಿನ ಭಾಷಣದಲ್ಲಿ ಪದೇ ಪದೇ ಇದೇ ವಿಷಯವನ್ನು ಒತ್ತಿ ಹೇಳಿದರು. ‘ನನ್ನ ಬಿರುದನ್ನು ನಾನು ಮಗನಿಗೆ ನೀಡುತ್ತಿದ್ದೇನೆ’, ‘ಅಪ್ಪನನ್ನು ಮೀರಿಸಿದ ಮಗ ಎನಿಸಿಕೊಂಡಿದ್ದಾನೆ’, ‘ಪ್ರಧಾನಿ ನರೇಂದ್ರ ಮೋದಿ ಸಹ ರಾಮ್ ಚರಣ್ ಅನ್ನು ಭವಿಷ್ಯದ ಮೆಗಾಸ್ಟಾರ್’ ಎಂದೇ ಕರೆಯುತ್ತಾರೆ’ ಎಂದೆಲ್ಲ ಹೇಳಿದರು. ಆ ಮೂಲಕ ತಮ್ಮ ಸ್ಥಾನಕ್ಕೆ ಮಗನನ್ನು ಕೂರಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ:ಸಮಂತಾ ತಾಯಿ ಆಗೋ ವಿಷಯವನ್ನು ಖಚಿತಪಡಿಸಿದ ಚಿರಂಜೀವಿ

ರಾಮ್ ಚರಣ್ ನಟನೆ ಬಗ್ಗೆ ಮಾತನಾಡುತ್ತಾ, ‘ಈ ಬಾರಿ ರಾಷ್ಟ್ರಪ್ರಶಸ್ತಿ ನನ್ನ ಮಗನಿಗೆ ಸಿಗಲೇ ಬೇಕು’ ಎಂಬರ್ಥದ ಮಾತುಗಳನ್ನು ಚಿರಂಜೀವಿ ಆಡಿದರು. ರಾಷ್ಟ್ರಪ್ರಶಸ್ತಿಗೂ ಮೀರಿದ ನಟನೆಯನ್ನು ತಮ್ಮ ಮಗ ಮಾಡಿದ್ದಾನೆ ಎಂದು ಸಹ ಅವರು ಹೇಳಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ‘ಪುಷ್ಪ’ ಸಿನಿಮಾದ ನಟನೆಗೆ ಅಲ್ಲು ಅರ್ಜುನ್ ಅವರಿಗೆ ಈಗಾಗಲೇ ರಾಷ್ಟ್ರಪ್ರಶಸ್ತಿ ದೊರೆತಿದೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನಡುವೆ ಸ್ಪಷ್ಟವಾದ ಸ್ಪರ್ಧೆ, ಪ್ರತಿಸ್ಪರ್ಧೆ ಇದೆ. ಅಲ್ಲು ಅರ್ಜುನ್ ಈಗಾಗಲೇ ರಾಷ್ಟ್ರಪ್ರಶಸ್ತಿ ಗಳಿಸಿರುವ ಕಾರಣ, ಚಿರಂಜೀವಿ ಅವರು ತಮ್ಮ ಪುತ್ರನಿಗೂ ರಾಷ್ಟ್ರಪ್ರಶಸ್ತಿ ಲಭಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ತಮ್ಮ ಪ್ರಭಾವ ಬಳಸಿ ರಾಷ್ಟ್ರಪ್ರಶಸ್ತಿ ಕೊಡಿಸಿದರೂ ಅಚ್ಚರಿ ಏನಿಲ್ಲ.

ಚಿರಂಜೀವಿ ಅವರು ಮೊದಲಿನಿಂದಲೂ ತಮ್ಮ ಪುತ್ರ ಪ್ರೇಮದ ಕಾರಣದಿಂದ ಆಗಾಗ್ಗೆ ಟ್ರೋಲ್ ಆಗುತ್ತಾ ಬಂದಿದ್ದಾರೆ. ಹಿಂದೆ, ‘ಬಾಹುಬಲಿ 1’ ಸಿನಿಮಾ ಬಿಡುಗಡೆ ಆದಾಗಲೂ ಸಹ ಆ ಸಿನಿಮಾದ ಬಗ್ಗೆ ಪೂರ್ಣ ತೃಪ್ತಿಯಿಂದ ಮಾತನಾಡಿರಲಿಲ್ಲ, ಬದಲಿಗೆ ‘ಮಗಧೀರ’ ಸಿನಿಮಾ ‘ಬಾಹುಬಲಿ 1’ಗಿಂತಲೂ ಚೆನ್ನಾಗಿದೆ ಎಂಬರ್ಥದ ಮಾತುಗಳನ್ನಾಡಿದ್ದರು. ಈಗ ಆ ಹಳೆಯ ವಿಡಿಯೋ ಸಹ ಮತ್ತೆ ವೈರಲ್ ಆಗುತ್ತಿದೆ. ಒಟ್ಟಾರೆ, ವೃತ್ತಿ ಜೀವನದ ಉದ್ದಕ್ಕೂ ಪ್ರಶಂಸೆಗಳನ್ನೇ ಕೇಳುತ್ತಾ ಬಂದಿರುವ ಚಿರಂಜೀವಿ ಅವರು ಈಗ ತಮ್ಮ ಅತಿಯಾದ ಪುತ್ರ ಪ್ರೇಮದಿಂದ ಟೀಕೆಗಳನ್ನು ಎದುರಿಸಬೇಕಾಗಿ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ದೇಶಾದ್ಯಂತ ‘SIR’ ಮತದಾರರ ಪಟ್ಟಿ ಪರಿಷ್ಕರಣೆ: 12 ರಾಜ್ಯಗಳಲ್ಲಿ ಬರೋಬ್ಬರಿ 5.18 ಕೋಟಿ ಮತದಾರರ ಹೆಸರು ಡಿಲೀಟ್ – Kannada News | Voter List Revision India: ECI’s SIR Process Removes More than 5 crores Names, Impact and Legal Status

ದೆಹಲಿ, ಜೂ.27: ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಹಮ್ಮಿಕೊಂಡಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯು ಭಾರೀ ರಾಜಕೀಯ ಜಟಾಪಟಿ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಎರಡನೇ ಹಂತದ ಪರಿಷ್ಕರಣೆಯಲ್ಲೇ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 5 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಕಳೆದ ವರ್ಷ ಅಕ್ಟೋಬರ್ 27 ರಂದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸ್‌ಗಢ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗುಜರಾತ್, ಮಧ್ಯಪ್ರದೇಶ ಮತ್ತು ಗೋವಾ ಸೇರಿದಂತೆ 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ SIR ಪ್ರಕ್ರಿಯೆಯನ್ನು ಘೋಷಿಸಲಾಗಿತ್ತು. ಈ ರಾಜ್ಯಗಳಲ್ಲಿ ಪರಿಷ್ಕರಣೆಗೆ ಮುನ್ನ ಒಟ್ಟು ಮತದಾರರ ಸಂಖ್ಯೆ 50.99 ಕೋಟಿಯಷ್ಟಿತ್ತು. ಆದರೆ, ಪ್ರಕ್ರಿಯೆಯ ನಂತರ ಈ ಸಂಖ್ಯೆ 45.81 ಕೋಟಿಗೆ ಕುಸಿದಿದೆ. ಅಂದರೆ, ಒಟ್ಟಾರೆಯಾಗಿ ಶೇಕಡಾ 10.2 ರಷ್ಟು (ಸುಮಾರು 5.18 ಕೋಟಿಗೂ ಹೆಚ್ಚು) ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಈ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಒಟ್ಟು 66,88,636 ಮೃತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದರಲ್ಲಿ ಉತ್ತರ ಪ್ರದೇಶದಿಂದ ಅತಿ ಹೆಚ್ಚು ಅಂದರೆ 25.47 ಲಕ್ಷ ಮತ್ತು ಪಶ್ಚಿಮ ಬಂಗಾಳದಿಂದ 24.16 ಲಕ್ಷ ಮೃತ ವ್ಯಕ್ತಿಗಳ ಹೆಸರುಗಳನ್ನು ಕೈಬಿಡಲಾಗಿದೆ. ಸಾರ್ವಜನಿಕ ಆಕ್ಷೇಪಣೆಗಳು ಮತ್ತು ನ್ಯಾಯಾಂಗ ತೀರ್ಪಿನ ಪ್ರಕ್ರಿಯೆಗಳ ನಂತರ ಹೆಚ್ಚುವರಿಯಾಗಿ 63.16 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ 12 ರಾಜ್ಯಗಳ ಪೈಕಿ ಉತ್ತರ ಪ್ರದೇಶವು ತನ್ನ ಅಂತಿಮ ಮತದಾರರ ಪಟ್ಟಿಯ ದತ್ತಾಂಶವನ್ನು ಕೊನೆಯದಾಗಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಡ್ರಗ್ಸ್ ಮುಕ್ತ ಭಾರತಕ್ಕೆ ಮಾಸ್ಟರ್ ಪ್ಲಾನ್; 3 ವರ್ಷದ ‘ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿದ ಅಮಿತ್ ಶಾ

ಕಳೆದ ವರ್ಷ ಜೂನ್ 24 ರಂದು ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಈ ಪ್ರಾಯೋಗಿಕ SIR ಪ್ರಕ್ರಿಯೆಯನ್ನು ಅಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿತ್ತು. ಆ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ಚುನಾವಣಾ ಆಯೋಗವು ಬಿಜೆಪಿಯ ಮಾತಿನಂತೆ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರು ಭಾರಿ ಆರೋಪ ಮಾಡಿದ್ದರು. ಬಿಹಾರದಲ್ಲಿ ಸುಮಾರು 65 ಲಕ್ಷ ಮತಗಳನ್ನು ಕಡಿತಗೊಳಿಸಲಾಗಿತ್ತು. ಆದರೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಈ ‘SIR’ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಸರ್ವಾನುಮತದಿಂದ ಎತ್ತಿಹಿಡಿದು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.

ಮತದಾರರ ಪಟ್ಟಿಯ ಈ ಶುದ್ಧೀಕರಣ ಪ್ರಕ್ರಿಯೆಯು ಈಗ ಕೇವಲ ಮತದಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳ ನಂತರ ಎರಡೂ ಸರ್ಕಾರಗಳು ಒಂದು ಮಹತ್ವದ ಆದೇಶ ಹೊರಡಿಸಿವೆ. ಅದರಂತೆ, SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡಿರುವ ವ್ಯಕ್ತಿಗಳನ್ನು ರಾಜ್ಯದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಸೌಲಭ್ಯಗಳಿಂದಲೂ ಹೊರಗಿಡಲಾಗುತ್ತಿದೆ. ವೋಟರ್ ಲಿಸ್ಟ್‌ನ ಡೇಟಾವನ್ನು ಸಾಮಾಜಿಕ ಭದ್ರತೆಯೊಂದಿಗೆ ಲಿಂಕ್ ಮಾಡಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು? – Kannada News | Boyfriend Detonates Crude Bomb While Riding in Car With Girlfriend: What Happened

ಸುಟ್ಟುಕರಕಲಾದ ಕಾರುImage Credit source: tv9 kannada

ತುಮಕೂರು, ಜೂನ್​​ 27: ಕಾರಿನಲ್ಲಿ ನಾಡಬಾಂಬ್ (nada bomb)​ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ (death) ಮಾಡಿಕೊಂಡಿರುವಂತ ಭೀಕರ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಇನ್ನು ಈ ದುರಂತದಲ್ಲಿ ಅಪಹರಣಕ್ಕೊಳಗಾಗಿದ್ದ ಯುವತಿ ಹಾಗೂ ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ತುಮಕೂರು ಎಸ್​ಪಿ ವೆಂಕಟ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಮತ್ತೊಂದು ಜೀವಂತ ಬಾಂಬ್ ಪತ್ತೆ ಆಗಿದೆ.

ನಡೆದಿದ್ದೇನು?

ರಮ್ಯಾ ಹಾಗೂ ನಾಗೇಂದ್ರ ಇಬ್ಬರು ಅಂಕೋಲ ಮೂಲದವರು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರಮ್ಯಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರೆ, ನಾಗೇಂದ್ರ ಡೆಲಿವರಿ ಬಾಯ್ ಆಗಿದ್ದ. ಇಬ್ಬರು ಕಳೆದ ಏಳೆಂಟು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ರಮ್ಯಾ ಮದುವೆಗೆ ನಿರಾಕರಿಸಿದ್ದಳು.

ರಮ್ಯಾಳನ್ನ ಬಲವಂತವಾಗಿ ಕಿಡ್ನ್ಯಾಪ್ ಮಾಡಿದ ನಾಗೇಂದ್ರ

ಇದರಿಂದ ಕೋಪಗೊಂಡಿದ್ದ ನಾಗೇಂದ್ರ, ತಾನೇ ಒಂದು ಬಾಡಿಗೆ ಕಾರನ್ನು ಬುಕ್ ಮಾಡಿಕೊಂಡು, ರಮ್ಯಾ ತಂಗಿದ್ದ ಬೆಂಗಳೂರಿನ ಪಿಜಿ ಬಳಿ ತೆರಳಿ ಆಕೆಯನ್ನು ಬಲವಂತವಾಗಿ ಅಪಹರಿಸಿದ್ದ. ನಾಗೇಂದ್ರ ಪ್ಲ್ಯಾನ್​ ಮಾಡಿ ನಾಡಬಾಂಬ್ ತಯಾರಿಸಿಕೊಂಡು ತಂದಿದ್ದ ಎಂಬ ಮಾಹಿತಿ ಇದೆ. ರಮ್ಯಾ ನಾಪತ್ತೆ ಕುರಿತು ಆಕೆಯ ಸ್ನೇಹಿತೆ ತಕ್ಷಣವೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಗದಗ: ಮಹಿಳೆಯರ ಕೂಡಿ ಹಾಕಿ ಥಳಿಸಿದ ಮೀಟರ್ ಬಡ್ಡಿ ದಂಧೆಕೋರರು, ಎಸ್ಪಿ ಕಚೇರಿ ಎದುರು ಸಂತ್ರಸ್ತೆಯರ ಕಣ್ಣೀರು

ಇನ್ನು ರಮ್ಯಾಳನ್ನು ಕಿಡ್ನ್ಯಾಪ್ ಮಾಡಿದ ನಾಗೇಂದ್ರ ಶಿರಾ ರಸ್ತೆಯಲ್ಲಿ ತೆರಳುತ್ತಿದ್ದ. ಕಾರಿನಲ್ಲೇ ಇಬ್ಬರ ಮಧ್ಯೆ ತೀವ್ರ ಜಗಳ ನಡೆದಿದೆ. ಈ ವೇಳೆ ನಾಗೇಂದ್ರ ರಮ್ಯಾ ತಲೆಗೆ ಆಯುಧದಿಂದ ಹೊಡೆದಿದ್ದಾನೆ. ರಮ್ಯಾ ತಕ್ಷಣವೇ ಚಲಿಸುವ ಕಾರಿನಿಂದ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾಳೆ. ಯುವತಿ ಕಾರಿನಿಂದ ಇಳಿದಾಗ ಚಾಲಕ ಸಹಾಯಕ್ಕೆ ತೆರಳಿದ್ದಾನೆ.

ಕಾರಿನೊಳಗೇ ಸಜೀವ ದಹನ

ಇದೇ ಸಮಯವನ್ನು ಬಳಸಿಕೊಂಡ ನಾಗೇಂದ್ರ ಕಾರಿನ ಎಲ್ಲಾ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ತಾನು ತಂದಿದ್ದ ನಾಡಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ.

ಇದನ್ನೂ ಓದಿ: ಆಸ್ತಿಗಾಗಿ ತಂದೆ ಕಥೆಯನ್ನೇ ಮುಗಿಸಿದ್ರಾ ಮಕ್ಕಳು?: ದೂರು, ಪ್ರತಿದೂರಿನ ಹಿನ್ನೆಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಸದ್ಯ ಪ್ರಕರಣ ಭಾರಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಪರಿಶೀಲನಾ ತಂಡ ಆಗಮಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಮತ್ತು ಕಳ್ಳಂಬೆಳ್ಳ ಪೊಲೀಸರು ಜಂಟಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಹೈಡ್ರಾಮ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ – Kannada News | JDS Workers throws slipper On Congress MLA Pradeep Eshwar In Chikkaballapur

ಚಿಕ್ಕಬಳ್ಳಾಪುರ, (ಜೂನ್ 27): ಚಿಕ್ಕಬಳ್ಳಾಪುರದಲ್ಲಿ (Chikkaballapur) ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆಯುತ್ತಿದ್ದ ಕೆಂಪೇಗೌಡ ಕಾರ್ಯಕ್ರಮಕ್ಕೆ  ನುಗ್ಗಿದ ಜೆಡಿಎಸ್ ಕಾರ್ಯಕರ್ತರು, ಪ್ರದೀಪ್ ಈಶ್ವರ್ ಅವರನ್ನ ವೇದಿಕೆಯಿಂದ ಕೆಳಗಿಳಸಬೇಕೆಂದು ಗಲಾಟೆ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದು, ಬಳಿಕ ಸ್ವಾಮೀಜಿ ಮಧ್ಯೆ ಪ್ರವೇಶಿಸಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಇದಾದ ನಂತರ ಪ್ರದೀಪ್ ಈಶ್ವರ್, ತಮ್ಮ ವಿರುದ್ಧ ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತರಿಗೆ ಮೀಸೆ ತಿರುವಿ ತೋಳು ತಟ್ಟಿ ತಿರುಗೇಟು ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಪ್ರದೀಪ್ ಈಶ್ವರ್ ಕಾರಿನ ಸನ್​ ರೂಫ್​​​​ ಮೂಲಕ ಮೆರವಣಿಗೆ ತೆರಳುತ್ತಿದ್ದ ವೇಳೆ ಕೆಲವರು ಚಪ್ಪಲಿ ಎಸೆದಿದ್ದು, ಕೂಡಲೇ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ನೋಡಿ: ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ, ಪೊಲೀಸರಿಂದ ಲಘು ಲಾಠಿ ಚಾರ್ಜ್

Source link

ಹೀಗೊಂದು ಕಾಕತಾಳೀಯ; 2028 ರ ಟಿ20 ವಿಶ್ವಕಪ್ ಕೂಡ ಭಾರತದ್ದೇ – Kannada News | Team India’s Ireland T20 Defeat: A Repeat of History, Predicting 2028 WC Win?

ಜೂನ್ 26 ರಂದು ನಡೆದ ಅದೊಂದು ಕ್ರಿಕೆಟ್ ಪಂದ್ಯ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿದೆ. ದುರ್ಬಲ ತಂಡವೆಂದೇ ಪರಿಗಣಿಸಿರುವ ಐರ್ಲೆಂಡ್, ಬಲಿಷ್ಠ ಟೀಂ ಇಂಡಿಯಾವನ್ನು (India vs Ireland) ಸೋಲಿಸಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಆತಿಥೇಯ ಐರ್ಲೆಂಡ್ 34 ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐರ್ಲೆಂಡ್, ಟೀಂ ಇಂಡಿಯಾ ವಿರುದ್ಧ ಮೊಟ್ಟ ಮೊದಲ ಪಂದ್ಯ ಗೆದ್ದ ಸಾಧನೆಯನ್ನು ಮಾಡಿದೆ. ಇತ್ತ ಟೀಂ ಇಂಡಿಯಾ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸೋತ ಬೇಡದ ದಾಖಲೆಯನ್ನು ನಿರ್ಮಿಸಿದೆ. ಆದರೆ ಈ ಹಿಂದೆ ನಡೆದಿದ್ದ ಘಟನೆಯನ್ನು ತಾಳೆ ಹಾಕಿ ನೋಡಿದರೆ, ಐರ್ಲೆಂಡ್ ವಿರುದ್ಧದ ಸೋಲು 2028 ರ ಟಿ20 ವಿಶ್ವಕಪ್​ನಲ್ಲಿ (T20 World Cup 2028) ಟೀಂ ಇಂಡಿಯಾವೇ ಚಾಂಪಿಯನ್ ಎಂಬ ಭವಿಷ್ಯ ನುಡಿಯುತ್ತಿದೆ.

ಚಾಂಪಿಯನ್ ಆದ ಬಳಿಕ ಮೊದಲ ಸೋಲು

ಎಲ್ಲರಿಗೂ ತಿಳಿದಿರುವಂತೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ವರ್ಷ ನಡೆದ ಟಿ20 ವಿಶ್ವಕಪ್ ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಆಯಿತು. ಇದಕ್ಕೂ ಮುನ್ನ ಟೀಂ ಇಂಡಿಯಾ 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಆದಾಗ್ಯೂ, ಆ ಕಪ್ ಗೆದ್ದ ನಂತರ ಆಡಿದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತು. ಅದೂ ಜಿಂಬಾಬ್ವೆಯಂತಹ ದುರ್ಬಲ ತಂಡದ ವಿರುದ್ಧ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಜಿಂಬಾಬ್ವೆ ಕೇವಲ 115 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 102 ರನ್​ಗಳಿಗೆ ಆಲೌಟ್ ಆಗುವ ಮೂಲಕ 13 ರನ್​ಗಳಿಂದ ಸೋತಿತ್ತು. ಆಗಲೂ, ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಅದು ಪೂರ್ಣ ಪ್ರಮಾಣದ ಟಿ20 ನಾಯಕನಾಗಿ ಶುಭ್​ಮನ್ ಗಿಲ್ ಅವರ ಮೊದಲ ಪಂದ್ಯವಾಗಿತ್ತು. ಹಾಗೆಯೇ ಅದು ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾದ ಮೊದಲ ಪಂದ್ಯವೂ ಆಗಿತ್ತು.

2026 ರಲ್ಲೂ ಅದೇ ರಿಪೀಟ್

ಕಾಕತಾಳಿಯವೆಂದರೆ.. ಈಗಲೂ ಅದೇ ರೀತಿಯ ಫಲಿತಾಂಶ ಪುನರಾವರ್ತನೆಯಾಗಿದೆ. 2026 ರ ಟಿ20 ವಿಶ್ವಕಪ್ ಗೆದ್ದ ನಂತರ ಮೊದಲ ಪಂದ್ಯವನ್ನಾಡಿದ ಟೀಂ ಇಂಡಿಯಾ ಚೇಸಿಂಗ್ ಮಾಡುವಾಗ ಸೋತಿದೆ. ಅದು ಕೂಡ ಐರ್ಲೆಂಡ್​ನಂತಹ ದುರ್ಬಲ ತಂಡದ ವಿರುದ್ಧ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಹೊಸ ನಾಯಕನೊಂದಿಗೆ ಕಣಕ್ಕಿಳಿದಿತ್ತು. ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್​ಗೆ ಇದು ಮೊದಲ ಪಂದ್ಯವಾಗಿತ್ತು. ಈ ಎಲ್ಲಾ ಕಾಕತಾಳಿಯಗಳನ್ನು ಜೊತೆಗೆ ಸೇರಿಸಿ ನೋಡಿದಾಗ 2028 ರ ಟಿ20 ವಿಶ್ವಕಪ್ ಕೂಡ ಭಾರತದ್ದೇ ಎಂಬ ಭಾವನೆ ಹಲವರಲ್ಲಿ ಮೂಡಿದೆ.

IND vs IRE: ಐರ್ಲೆಂಡ್ ವಿರುದ್ಧ ಸೋತು 5 ಅವಮಾನಕರ ದಾಖಲೆ ಬರೆದ ಟೀಂ ಇಂಡಿಯಾ

ಬದಲಾಗ್ತಾನಾ ನಾಯಕ?

ಆದಾಗ್ಯೂ, ಗಿಲ್ ನಾಯಕನಾಗಿ ವಿಫಲವಾದ ನಂತರ, ಸೂರ್ಯ ಅವರಿಗೆ ಟಿ20 ನಾಯಕತ್ವವನ್ನು ನೀಡಲಾಯಿತು. ಇಲ್ಲೂ ಅದೇ ಆಗುತ್ತದೆಯೇ? ಅಥವಾ ಟಿ20 ವಿಶ್ವಕಪ್​ವರೆಗೆ ಅಯ್ಯರ್ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆಯೇ? ಅದನ್ನು ನೋಡಬೇಕಾಗಿದೆ. ಏಕೆಂದರೆ ಅಯ್ಯರ್ ಮೊದಲ ಪಂದ್ಯದಲ್ಲಿ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ವಿಫಲರಾಗಿದ್ದಾರೆ. ಆದಾಗ್ಯೂ, ಕೇವಲ ಒಂದು ಪಂದ್ಯದೊಂದಿಗೆ ಅಯ್ಯರ್ ಅವರನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ, ಆದರೆ ಟೀಂ ಇಂಡಿಯಾದ ಭವಿಷ್ಯ ಮತ್ತು ನಾಯಕನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:41 pm, Sat, 27 June 26

Source link

IND vs IRE: ಐರ್ಲೆಂಡ್ ವಿರುದ್ಧ ಸೋತು 5 ಅವಮಾನಕರ ದಾಖಲೆ ಬರೆದ ಟೀಂ ಇಂಡಿಯಾ

Source link

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

Source link

Exit mobile version