CSK ದಾಖಲೆಯನ್ನೇ ಧೂಳೀಪಟ ಮಾಡಿದ RCB – Kannada News | RCB Breaks CSK’s Playoffs Records

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್​ನಲ್ಲಿ ಆರ್ಭಟಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಂಡಿಗರು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹೆಸರಿನಲ್ಲಿದ್ದ 2 ಭರ್ಜರಿ ರೆಕಾರ್ಡ್​ಗಳನ್ನು ಅಳಿಸಿ ಹಾಕಿದ್ದಾರೆ.

ಧರ್ಮಾಶಾಲಾದಲ್ಲಿ ನಡೆದ ಐಪಿಎಲ್​ನ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವೆಂಕಟೇಶ್ ಅಯ್ಯರ್ (19), ವಿರಾಟ್ ಕೊಹ್ಲಿ (43), ದೇವದತ್ ಪಡಿಕ್ಕಲ್ (30), ರಜತ್ ಪಾಟಿದಾರ್ (93), ಕೃನಾಲ್ ಪಾಂಡ್ಯ (43) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಆರ್​ಸಿಬಿ ದಾಂಡಿಗರು ಬಾರಿಸಿದ ಒಟ್ಟು ಬೌಂಡರಿಗಳ ಸಂಖ್ಯೆ ಬರೋಬ್ಬರಿ 38 .

ಇದರೊಂದಿಗೆ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು (ಫೋರ್ ಮತ್ತು ಸಿಕ್ಸ್​) ಬಾರಿಸಿದ ದಾಖಲೆ ಆರ್​ಸಿಬಿ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು.

CSK ದಾಖಲೆ ಉಡೀಸ್:

2012ರ ಪ್ಲೇಆಫ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ದಾಂಡಿಗರು ಬರೋಬ್ಬರಿ 33 ಬೌಂಡರಿಗಳನ್ನು ಬಾರಿಸಿ ಭರ್ಜರಿ ದಾಖಲೆ ನಿರ್ಮಿಸಿದ್ದರು. ಇದೀಗ 14 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆರ್​​ಸಿಬಿ ದಾಂಡಿಗರು ಯಶಸ್ವಿಯಾಗಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಬ್ಯಾಟರ್​ಗಳು 14 ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ಒಟ್ಟು 38 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ತಂಡವೆಂಬ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಕಲೆಹಾಕಿದ್ದು 254 ರನ್​ಗಳು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್​ಸಿಬಿ 92 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

CSK ದಾಖಲೆ ಧೂಳೀಪಟ:

ಈ ಗೆಲುವಿನೊಂದಿಗೆ ಐಪಿಎಲ್​ ಪ್ಲೇಆಫ್​​ನಲ್ಲಿ (ನಾಕೌಟ್ ಅಲ್ಲದೇ) ಅತ್ಯಧಿಕ ರನ್​ಗಳ ಅಂತರದಿಂದ ವಿಜಯ ಸಾಧಿಸಿದ ತಂಡವೆಂಬ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು.

ಸಿಎಸ್​ಕೆ ತಂಡವು 2012 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪ್ಲೇಆಫ್​ ಪಂದ್ಯದಲ್ಲಿ 82 ರನ್​ಗಳ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ 92 ರನ್​ಗಳ ಭರ್ಜರಿ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ಹಿಂದೆಂದೂ ಕಾಣದ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಈ ಮೂಲಕ ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್​ಗಳ ಅಂತರದಿಂದ ಗೆದ್ದ ತಂಡವೆಂಬ ಭರ್ಜರಿ ದಾಖಲೆಯನ್ನು ಆರ್​ಸಿಬಿ ತಮ್ಮದಾಗಿಸಿಕೊಂಡಿದ್ದಾರೆ.

Source link

Video: ನೇಪಾಳದಲ್ಲಿ ಭಾರಿ ಮಳೆ, ತರಗತಿಗೆ ನುಗ್ಗಿದ ನೀರು, ವಿದ್ಯಾರ್ಥಿಗಳನ್ನು ರಕ್ಷಿಸಲು ಡೆಸ್ಕ್​ ಅಡ್ಡ ಹಿಡಿದು ನಿಂತ ಶಿಕ್ಷಕಿ – Kannada News | Volunteer Teacher in Nepal Praised for Protecting Students During Heavy Rain

ಕಠ್ಮಂಡು, ಮೇ 27: ನೇಪಾಳದ ಶ್ರೀ ರಾಮಶರಣ್ ಬೇಸಿಕ್ ಶಾಲೆಯಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ತಲ್ಲಣ ಸೃಷ್ಟಿಸಿತ್ತು. ಹಠಾತ್ ಬಂದ ಬಿರುಗಾಳಿಗೆ ಶಾಲೆಯ ತರಗತಿ ಕೊಠಡಿಯ ಮೇಲ್ಛಾವಣಿ ಕಿತ್ತುಹೋಗಿ, ಒಳಗಿದ್ದ ಪುಟ್ಟ ವಿದ್ಯಾರ್ಥಿಗಳ ಮೇಲೆ ಮಳೆ ನೀರು ನೇರವಾಗಿ ಸೋರಲು ಆರಂಭಿಸಿತ್ತು.

ಇದನ್ನು ಕಂಡ ಶಂಭುವ್ ಬಿ.ಕೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ ಅವರು, ತಮಗಾಗುತ್ತಿದ್ದ ತೊಂದರೆಯನ್ನು ಲೆಕ್ಕಿಸದೆ ಮಳೆಯಲ್ಲಿಯೇ ಭಾರವಾದ ಮರದ ಡೆಸ್ಕ್‌ಅನ್ನು ತಮ್ಮ ಕೈಗಳಿಂದ ಮೇಲಕ್ಕೆತ್ತಿ ಹಿಡಿದು, ಮಳೆಯ ನೀರು ಮಕ್ಕಳ ಮೇಲೆ ಬೀಳದಂತೆ ಭದ್ರವಾದ ಛತ್ರಿಯಂತೆ ರಕ್ಷಣೆ ನೀಡಿದರು.

ತಮ್ಮ ಪ್ರಾಣ ಮತ್ತು ಆರೋಗ್ಯವನ್ನು ಪಣಕ್ಕಿಟ್ಟು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶ್ರಮಿಸಿದ ಈ ಶಿಕ್ಷಕಿಯ ಅದ್ಭುತ ಕರ್ತವ್ಯ ನಿಷ್ಠೆ ಹಾಗೂ ವಾತ್ಸಲ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಗೆದ್ದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೈರಲ್ ಆಯಿತು ರಜನಿಕಾಂತ್ ಕಂಡಕ್ಟರ್ ಐಡಿ ಕಾರ್ಡ್;275 ರೂ. ಸಂಬಳ – Kannada News | Rajinikanth’s Viral Old BTS ID Card: From Conductor to Superstar Journey

ಚಿತ್ರರಂಗದಲ್ಲಿ ಯಾರೂ ತಲುಪಲಾಗದ ಎತ್ತರಕ್ಕೆ ಬೆಳೆದು ನಿಂತಿರುವ ‘ತಲೈವಾ’ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಹಳೆಯ ದಿನಗಳ ಅಪರೂಪದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಇಂದು ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ರಜನಿಕಾಂತ್, ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈಗ ವೈರಲ್ ಆಗಿರುವ ಅವರ ಅಂದಿನ ಅಧಿಕೃತ ಐಡಿ ಕಾರ್ಡ್ ಆ ದಿನಗಳ ನೆನಪನ್ನು ಮತ್ತೊಮ್ಮೆ ಹಸಿರಾಗಿಸಿದೆ.

ಈ ಗುರುತಿನ ಚೀಟಿಯಲ್ಲಿ ರಜನಿಕಾಂತ್ ಅವರ ಅಸಲಿ ಹೆಸರು ‘ಶಿವಾಜಿ ರಾವ್ ಗಾಯಕ್ವಾಡ್’ ಎಂದು ನಮೂದಿಸಲಾಗಿದೆ. ಅವರು ಶ್ರೀನಗರ ಡಿಪೋದಲ್ಲಿ, ರೂಟ್ ನಂಬರ್ 10A ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ. ವಿಶೇಷವೆಂದರೆ, 18-06-1971 ರಲ್ಲಿ ಬಿಟಿಎಸ್ ಸೇರಿದಾಗ ಅವರಿಗಿದ್ದ ಮಾಸಿಕ ಸಂಬಳ ಕೇವಲ 275 ರೂಪಾಯಿ.

ಬೆಂಗಳೂರಿನ ಬಸ್ಸುಗಳಲ್ಲಿ ಟಿಕೆಟ್ ಕೊಡುವಾಗ ಶಿವಾಜಿ ರಾವ್ ತೋರುತ್ತಿದ್ದ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಟೈಲ್ ಅಂದಿನ ಪ್ರಯಾಣಿಕರನ್ನು ಸೆಳೆಯುತ್ತಿತ್ತು. ನಂತರ ಗೆಳೆಯ ರಾಜ ಬಹದ್ದೂರ್ ಪ್ರೇರಣೆಯಿಂದ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿದ ಅವರು, ನಿರ್ದೇಶಕ ಕೆ. ಬಾಲಚಂದರ್ ಅವರ ಕಣ್ಣಿಗೆ ಬಿದ್ದು ‘ರಜನಿಕಾಂತ್’ ಆಗಿ ಬದಲಾದರು.

ಇದನ್ನೂ ಓದಿ: ‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ಕೇವಲ 275 ರೂಪಾಯಿ ಸಂಬಳ ಪಡೆಯುತ್ತಿದ್ದ ಒಬ್ಬ ಸಾಮಾನ್ಯ ಯುವಕ, ಇಂದು ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಾ ನಟನಾಗಿ ಬೆಳೆದು ನಿಂತಿರುವುದು ಒಂದು ಅದ್ಭುತ ಇತಿಹಾಸ. ಈ ಐಡಿ ಕಾರ್ಡ್ ಕೇವಲ ಒಂದು ದಾಖಲೆಯಲ್ಲ, ಶ್ರಮ ಮತ್ತು ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:50 am, Wed, 27 May 26

Source link

ಸೋರುತಿಹುದು ಏರ್​ಪೋರ್ಟ್ ಮಾಳಿಗಿ! ಭಾರಿ ಮಳೆಗೆ ಮತ್ತೆ ಸೋರಿದ ಟರ್ಮಿನಲ್ 1ರ ಮೇಲ್ಛಾವಣಿ, ವಿಡಿಯೋ ವೈರಲ್ – Kannada News | Bengaluru Airport Flooding: Terminal 1 Roof Leaks Again After Heavy Rain at KIA, Video goes viral

ದೇವನಹಳ್ಳಿ, ಮೇ 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಹಾಗೂ ರಾತ್ರಿ ಭಾರಿ ಮಳೆ ಸುರಿದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವ್ಯಾಪ್ತಿಯಲ್ಲೂ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾದವು. ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ರನ್‌ವೇ ಸ್ಪಷ್ಟವಾಗಿ ಕಾಣಿಸದೆ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಯಿತು. ಅನೇಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು.

ಏರ್‌ಪೋರ್ಟ್‌ನ ಟರ್ಮಿನಲ್-1 ರ ಮೇಲ್ಛಾವಣಿಯಲ್ಲಿ ನೀರು ಸೋರಲು ಆರಂಭಿಸಿ ಟರ್ಮಿನಲ್ ಒಳಗೆಲ್ಲ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಡುವಂತಾಯಿತು. ಟರ್ಮಿನಲ್ ಛಾವಣಿ ಸೋರುತ್ತಿರುವ ಮತ್ತು ಒಳಗೆ ಜಲಪ್ರವಾಹ ಸಂಭವಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಕೆಲವು ಬಾರಿ ಟರ್ಮಿನಲ್ ಮೇಲ್ಛಾವಣಿ ಸೋರಿದ ಬಗ್ಗೆ ವರದಿಯಾಗಿದ್ದು, ವಿಡಿಯೋಗಳೂ ವೈರಲ್ ಆಗಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬೆಂಗಳೂರು, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಆರೆಂಜ್ ಅಲರ್ಟ್ ಘೋಷಣೆ! – Kannada News | Karnataka Weather Forecast: Heavy Rain in Bengaluru, Orange Alert Issued for Bagalkot, Kalaburagi and Vijayapura

ಬೆಂಗಳೂರು, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು, ಮೇ 27: ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ  (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಮುಖ್ಯಾಂಶಗಳು

  • ಬಾಗಲಕೋಟೆ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ.
  • ಹಾಸನ, ಕೊಡಗು, ಮೈಸೂರು ಭಾಗಗಳಲ್ಲಿ ಮಳೆ ಹೆಚ್ಚಳ, ಯೆಲ್ಲೋ ಅಲರ್ಟ್ ಮುನ್ನೆಚ್ಚರಿಕೆ.
  • ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ.

ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್

ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ.

ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ರೂಪದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 30 ರಿಂದ 40 ಕಿಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಬಹುದು.

ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ 40-50 ಕಿಮೀ ವೇಗದ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆ ಆರ್ಭಟಿಸುವ ಸಾಧ್ಯತೆಯಿದೆ.

ಕರಾವಳಿಯಲ್ಲೂ ತುಂತುರು ಮಳೆ

ಕರಾವಳಿ ಕರ್ನಾಟಕದ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಮುನ್ಸೂಚನೆಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆ ಹಾಗೂ ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಮುಖವಾಗಿ ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ನಿಲ್ಲದಂತೆ ಮತ್ತು ವಿದ್ಯುತ್ ಕಂಬಗಳಿಂದ ದೂರವಿರಲು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್​​ನಿಂದ ಕಳುವಾಯ್ತು ಬರೋಬ್ಬರಿ 66 ಹಾರ್ಡ್​​ ಡಿಸ್ಕ್ – Kannada News | Bollywood Data Heist: 66 Hard Disks Stolen from Zoya Akhtar’s Tiger Baby Production House

ಬಾಲಿವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್‌ವೊಂದರಿಂದ ಬರೋಬ್ಬರಿ 66 ಹಾರ್ಡ್ ಡಿಸ್ಕ್‌ಗಳು ಕಳವಾಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಚಿತ್ರರಂಗದಲ್ಲಿ ಇಂತಹ ಹೈ-ಪ್ರೊಫೈಲ್ ಡೇಟಾ ಕಳ್ಳತನ ನಡೆಯುವುದು ತೀರಾ ಅಪರೂಪವಾಗಿದ್ದು, ಸದ್ಯ ಈ ಸುದ್ದಿ ಬಾಲಿವುಡ್ (Bollywood) ಅಂಗಳದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಾಕಷ್ಟು ಎಚ್ಚರಿಕೆ ಮಧ್ಯೆಯೂ ಈ ರೀತಿ ಆಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಖ್ಯಾತ ನಿರ್ದೇಶಕಿಯರಾದ ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರಿಗೆ ಸೇರಿದ ‘ಟೈಗರ್ ಬೇಬಿ ಡಿಜಿಟಲ್ ಎಲ್‌ಎಲ್‌ಪಿ’ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಕಚೇರಿಯಲ್ಲಿದ್ದ ಒಟ್ಟು 119 ಹಾರ್ಡ್ ಡಿಸ್ಕ್‌ಗಳ ಪೈಕಿ 66 ಹಾರ್ಡ್ ಡಿಸ್ಕ್‌ಗಳು ನಾಪತ್ತೆಯಾಗಿದ್ದು, ಇವುಗಳಲ್ಲಿ ಶೂಟಿಂಗ್‌ನ ರಾ ಫೂಟೇಜ್, ಎಡಿಟ್ ಮಾಡಿದ ದೃಶ್ಯಗಳು, ಪೋಸ್ಟ್-ಪ್ರೊಡಕ್ಷನ್ ಫೈಲ್‌ಗಳು ಮತ್ತು ಇನ್ನೂ ಬಿಡುಗಡೆಯಾಗದ ಚಿತ್ರಗಳ ಅತ್ಯಂತ ಪ್ರಮುಖ ಡೇಟಾ ಇತ್ತು ಎಂದು ತಿಳಿದುಬಂದಿದೆ.

ಕಳ್ಳತನ ಬಯಲಾಗಿದ್ದು ಹೇಗೆ?

ಮೇ 21 ರಂದು ಕಚೇರಿಯ ಸಿಬ್ಬಂದಿ ಪರಿಶೀಲಿಸಿದಾಗ ಹಾರ್ಡ್ ಡಿಸ್ಕ್ ಬಾಕ್ಸ್‌ಗಳು ಹರಿದಿರಿವುದು ಮತ್ತು ಅವು ಖಾಲಿ ಇರುವುದು ಪತ್ತೆಯಾಗಿದೆ. ತಕ್ಷಣವೇ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಲಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಶಾಹಿದ್ ಅಜೀಂ ಖಾನ್ ಮತ್ತು ರಿತೇಶ್ ಸುರೇಶ್ ಶಾ ಎಂಬ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಡಿಮೆ ಬೆಲೆಗೆ ಮಾರಾಟ:

ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಕಳೆದ ಐದು ತಿಂಗಳಲ್ಲಿ 24 ಹಾರ್ಡ್ ಡಿಸ್ಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವುಗಳನ್ನು ತಲಾ 15,000 ದಿಂದ 20,000 ರೂಪಾಯಿಗಳಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಾರ್ಡ್ ಡಿಸ್ಕ್‌ಗಳಲ್ಲಿ ಅಮೆಜಾನ್ ಪ್ರೈಮ್‌ನ ಸೂಪರ್ ಹಿಟ್ ಸರಣಿ ‘ಮೇಡ್ ಇನ್ ಹೆವನ್’ ಮತ್ತು ‘ಘೋಸ್ಟ್ ಸ್ಟೋರೀಸ್’ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳ ಬ್ಯಾಕಪ್ ಡೇಟಾ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

ಆನ್‌ಲೈನ್ ಲೀಕ್ ಆತಂಕ:

ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟೊಂದು ದೊಡ್ಡ ಮಟ್ಟದ ಡೇಟಾ ಕಳವಾಗಿರುವುದು ನಿರ್ಮಾಣ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಕದ್ದಿರುವ ಡೇಟಾವನ್ನು ಆನ್‌ಲೈನ್‌ನಲ್ಲಿ ಎಲ್ಲಾದರೂ ಲೀಕ್ ಮಾಡಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಬಾಂದ್ರಾ ಪೊಲೀಸರು ಸದ್ಯ ಸೈಬರ್ ಕ್ರೈಮ್ ತಜ್ಞರ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಸಂಸ್ಥೆಯ ಇತರ ಉದ್ಯೋಗಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​​ನಲ್ಲಿ ಹಿಂದೆಂದೂ ಕಾಣದ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

Source link

ವರುಣಾರ್ಭಟಕ್ಕೆ 6 ವರ್ಷದ ಕಂದಮ್ಮ ಬಲಿ: ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್ ಮರಗಳು, ವಿಮಾನ ಸಂಚಾರದಲ್ಲಿ ವ್ಯತ್ಯಯ – Kannada News | Bengaluru, Bidar Rain: 6 Year Old Child Killed in Roof Collapse, Trees Uprooted, and KIA Airport Terminal Flooded

ಬೆಂಗಳುರಿನಲ್ಲಿ ರಸ್ತೆಗೆ ಬೃಹತ್ ಮರ ಬಿದ್ದಿರುವುದುImage Credit source: tv9

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ಮುಂಗಾರು (Monsoon) ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ತತ್ತರಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಯು ಭೀಕರ ದುರಂತವೊಂದಕ್ಕೆ ಕಾರಣವಾಗಿದ್ದು, 6 ವರ್ಷದ ಕಂದಮ್ಮ ಪ್ರಾಣ ಕಳೆದುಕೊಂಡಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಗೆ ಬೃಹತ್ ಮರಗಳು ರಸ್ತೆಗಳ ಮೇಲೆ ಬಿದ್ದವು. ಸಂಜೆಯಾಗುತ್ತಿದ್ದಂತೆ ಆರಂಭವಾದ ವರುಣನ ಅಬ್ಬರಕ್ಕೆ ಪ್ರಮುಖ ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ವಾಹನ ಸವಾರರು ರಸ್ತೆಗಳಲ್ಲೇ ನರಕಯಾತನೆ ಅನುಭವಿಸುವಂತಾಯಿತು.

ಮುಖ್ಯಾಂಶಗಳು

  • ಬೀದರ್‌ನ ಹುಲಸೂರಿನಲ್ಲಿ ಆಲಿಕಲ್ಲು ಮಳೆಯ ಅಬ್ಬರಕ್ಕೆ ಮನೆಯ ಮೇಲ್ಛಾವಣಿ ಕುಸಿದು 6 ವರ್ಷದ ಮಾಹೇರಾ ಸಾವು, ನಾಲ್ವರಿಗೆ ಗಂಭೀರ ಗಾಯ.
  • ಬೆಂಗಳೂರಿನ ಸಂಜಯನಗರ, ವೈಟ್‌ಫೀಲ್ಡ್, ಪೀಣ್ಯ ಸೇರಿದಂತೆ ಹಲವೆಡೆ ನೂರಾರು ಬೃಹತ್ ಮರಗಳು ಧರೆಗೆ.
  • ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಸೋರಿಕೆ.

ಬೀದರ್‌ನಲ್ಲಿ ಕಂದಮ್ಮ ಬಲಿ

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಬಳಿಯಿರುವ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಮೇಲಿದ್ದ ಭಾರವಾದ ಕಲ್ಲುಗಳು ನೇರವಾಗಿ ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮನೆ ಮೇಲ್ಛಾವಣಿ ಕುಸಿದು ಅವಾಂತರವಾಗಿರುವುದು

ಘಟನೆಯಲ್ಲಿ ಕುಟುಂಬದ ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಜಲಾವೃತಗೊಂಡ ವಾಹನಗಳು!

ಬೆಂಗಳೂರಿನ ಇಂದಿರಾನಗರ, ಕೆ.ಆರ್. ಪುರಂ, ಮಹದೇವಪುರ, ಮಲ್ಲೇಶ್ವರಂ ಹಾಗೂ ಮೆಜೆಸ್ಟಿಕ್ ಸೇರಿದಂತೆ ಹಲವು ಭಾಗಗಳಲ್ಲಿ ಬಿರುಗಾಳಿ ಮಳೆ ಅವಾಂತರ ಸೃಷ್ಟಿಸಿದೆ. ಪೀಣ್ಯದ ಬಿಎಫ್‌ಡಬ್ಲ್ಯೂ ರಸ್ತೆ, ಸಂಜಯನಗರ ಮುಖ್ಯ ರಸ್ತೆ, ಗಂಗಮ್ಮ ಸರ್ಕಲ್, ಜಾಲಹಳ್ಳಿ ಹಾಗೂ ವೀರಣ್ಣಪಾಳ್ಯ ಜಂಕ್ಷನ್‌ಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದಿವೆ. ವೈಟ್‌ಫೀಲ್ಡ್ ರಸ್ತೆಯೊಂದರಲ್ಲೇ 3 ರಿಂದ 4 ಕಡೆ ಮರಗಳು ಧರಾಶಾಯಿಯಾಗಿದ್ದು, ಶಾಂತಿನಿಕೇತನ ಜಂಕ್ಷನ್ ಬಳಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಅನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಹೆಬ್ಬಾಳ ಮತ್ತು ಕೆ.ಆರ್. ಪುರಂ ರಿಂಗ್ ರೋಡ್ ಸರ್ವಿಸ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಸುತ್ತಮುತ್ತ ಮಳೆಯ ಆರ್ಭಟ ಹೆಚ್ಚಾಗಿದ್ದರಿಂದ ರನ್‌ವೇ ಸ್ಪಷ್ಟವಾಗಿ ಕಾಣಿಸದೆ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಯಿತು. ಮಳೆಯ ಬಿರುಗಾಳಿಯ ಹೊಡೆತಕ್ಕೆ ಏರ್‌ಪೋರ್ಟ್‌ನ ಟರ್ಮಿನಲ್-1 ರ ಮೇಲ್ಛಾವಣಿಯ ಭಾಗವೊಂದು ಸೋರಲು ಆರಂಭಿಸಿತು.

ವಿಮಾನ ನಿಲ್ದಾಣದ ಟರ್ಮಿನಲ್-1 ಮೇಲ್ಛಾವಣಿ ಸೋರಿಕೆ

ಇದರಿಂದಾಗಿ ದೇಶಿ ಹಾಗೂ ವಿದೇಶಿ ಪ್ರಯಾಣಿಕರು ನಿಲ್ದಾಣದ ಒಳಗಡೆಯೇ ಲಗೇಜ್‌ಗಳೊಂದಿಗೆ ಇತ್ತ ಇತ್ತ ಓಡಾಡುತ್ತಾ ತೀವ್ರ ಪರದಾಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು-ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ, ನಮ್ಮ ಮೆಟ್ರೋ ಸಂಚಾರ ಸ್ಥಗಿತ

ನಗರದ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ರಾತ್ರಿಯಿಡೀ ಕತ್ತಲೆ ಆವರಿಸಿತ್ತು. ಬಿಬಿಎಂಪಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸಲು ಕಾರ್ಯಾಚರಣೆ ನಡೆಸಿದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾಗಿ ಆರೇ ತಿಂಗಳಿಗೆ ಮಹಿಳೆ ಸಾವು: ವರದಕ್ಷಿಣೆ ಕಿರುಕುಳ, ಕೊಲೆ ಮಾಡಿ ನೇಣು ಹಾಕಿರುವ ಆರೋಪ – Kannada News | Lucknow Dowry Death: Newlywed Found Dead, Family Alleges Murder and Harassment

ಪತಿಯೊಂದಿಗೆ ಮೃತ ಮಹಿಳೆ ಶ್ವೇತಾ Image Credit source: NDTV

ಲಕ್ನೋ, ಮೇ 27: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ(Dowry)ಗಾಗಿ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಲಕ್ನೋದಲ್ಲಿ ಮತ್ತೊಂದು ಮಹಿಳೆಯನ್ನು ಬಲಿ ಪಡೆದಿದೆ. ಮದುವೆಯಾಗಿ ಕೇವಲ ಆರೇ ತಿಂಗಳಿಗೆ ತನ್ನ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾರು ಕೊಡಿಸುವಂತೆ ಪತಿ ಮತ್ತು ಆತನ ಕುಟುಂಬದವರು ನಿತ್ಯ ಕಿರುಕುಳ ನೀಡುತ್ತಿದ್ದರು, ಅದೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

ಮದುವೆಯಾದ ಕೆಲವೇ ದಿನಗಳಲ್ಲಿ ಶುರುವಾಯ್ತು ನರಕಯಾತನೆ
ಮೃತ ಮಹಿಳೆಯನ್ನು ಶ್ವೇತಾ ಸಿಂಗ್ ಎಂದು ಗುರುತಿಸಲಾಗಿದೆ. ಶ್ವೇತಾ ವಿವಾಹ 2025ರ ನವೆಂಬರ್ 22ರಂದು ಭೂಪೇಂದ್ರ ಸಿಂಗ್ ಎಂಬಾತನೊಂದಿಗೆ ನಡೆದಿತ್ತು. ಶ್ವೇತಾ ಅವರ ತಂದೆ ಉಮೇಶ್ ಕುಮಾರ್ ಸಿಂಗ್ ಅವರ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆಯ ಮನೆಯವರಿಂದ ಕಿರುಕುಳ ಆರಂಭವಾಗಿತ್ತು. ಪತಿ ಭೂಪೇಂದ್ರ ಸಿಂಗ್ ಪ್ರತಿದಿನವೂ ಆಕೆಗೆ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ, ಶ್ವೇತಾಳ ಅತ್ತೆಯು ತನ್ನ ಸ್ವಂತ ಸಂಬಂಧಿಕರನ್ನು ಸೇರಿಸಿಕೊಂಡು ಆಕೆಯನ್ನು ನಿರಂತರವಾಗಿ ನಿಂದಿಸುತ್ತಿದ್ದಳು. ಇದರಿಂದಾಗಿ ಶ್ವೇತಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.

ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ?
ಲಕ್ನೋದ ಠಾಕೂರ್​​ಗಂಜ್ ಪ್ರದೇಶದಲ್ಲಿರುವ ಅತ್ತೆಯ ಮನೆಯಲ್ಲಿ ಶ್ವೇತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ, ಅಷ್ಟರೊಳಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶ್ವೇತಾಳ ಪೋಷಕರು ಇದನ್ನು ಆತ್ಮಹತ್ಯೆ ಎಂದು ಒಪ್ಪಲು ಸಿದ್ಧರಿಲ್ಲ. ಅತ್ತೆ-ಮಾವಂದಿರು ಕಾರಿಗಾಗಿ ಬೇಡಿಕೆ ಇಟ್ಟು ಆಕೆಯನ್ನು ಕೊಲೆ ಮಾಡಿದ್ದಾರೆ, ತದನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ನೇಣು ಹಾಕಿ ಆತ್ಮಹತ್ಯೆಯಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಹೆತ್ತವರಿಗೆ ಮರ್ಯಾದೆ ಕೊಡಲ್ಲವೆಂದು ಬೈದ ಪತಿ: ಕ್ವಾಟ್ರಸ್​ನಲ್ಲೇ ಆತ್ಮಹತ್ಯೆಗೆ ಶರಣಾದ ಕಾನ್ಸ್​ಟೇಬಲ್​​ನ ಪತ್ನಿ

ಮಗಳ ಸಾವಿನಿಂದ ಕಂಗಾಲಾದ ತಂದೆ ಉಮೇಶ್ ಕುಮಾರ್ ಸಿಂಗ್ ನೀಡಿದ ಕಟ್ಟುನಿಟ್ಟಿನ ದೂರಿನ ಮೇರೆಗೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವೇತಾ ಅವರ ಪತಿ ಭೂಪೇಂದ್ರ ಸಿಂಗ್, ಮಾವ, ಅತ್ತೆ, ಮೈದುನ, ಮೈದುನನ ಪತ್ನಿ ಹಾಗೂ ನಾದಿನಿ ಸೇರಿದಂತೆ ಇಡೀ ಕುಟುಂಬದ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 80 (ವರದಕ್ಷಿಣೆ ಸಾವು), ಸೆಕ್ಷನ್ 85 (ಕ್ರೌರ್ಯ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ಗಂಭೀರ ಮೊಕದ್ದಮೆ ಹೂಡಲಾಗಿದೆ.

ಪ್ರಸ್ತುತ ಪತಿಯ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಶ್ವೇತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ಅಸಲಿ ಕಾರಣ ಬಯಲಾಗಲಿದೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:13 am, Wed, 27 May 26

Source link

ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್​ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ – Kannada News | Pawan Kalyan Feels ‘Jealous’ Of Vijay’s Political Success, Addresses Comparison With TVK Chief

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗೆ ತಮಿಳು ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ತಮಿಳುನಾಡು ಸಿಎಂ ವಿಜಯ್ ಅವರ ರಾಜಕೀಯ ಯಶಸ್ಸಿನ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಜಯ್ ಅವರ ಗೆಲುವನ್ನು ನೋಡಿ ತಮಗೆ ಕೊಂಚ “ಅಸೂಯೆ” ಆಯಿತು ಎಂದು ತಮಾಷೆಯಾಗಿ ಹೇಳಿದ್ದಾರೆ.

‘ನಾನು ಇತ್ತೀಚೆಗೆ ತಮಿಳುನಾಡು ರಾಜಕೀಯವನ್ನು ಗಮನಿಸುತ್ತಿದ್ದೇನೆ. ಅವರು ಎಷ್ಟು ಆರಾಮವಾಗಿ ಚುನಾವಣೆ ಎದುರಿಸಿದರು ಎಂದರೆ ನನಗೆ ಸ್ವಲ್ಪ ಅಸೂಯೆ ಆಯಿತು. ಕಟೌಟ್‌ಗಳು ಮತ್ತು ಹೊಲೊಗ್ರಾಮ್‌ಗಳನ್ನು ಬಳಸಿಕೊಂಡು ಆರಾಮವಾಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೆ ನಾನು ಕಳೆದ 15 ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇನೆ.. ಆದರೆ’ ಎಂದು ಪವನ್ ಕಲ್ಯಾಣ್ ನಕ್ಕರು. 15 ವರ್ಷ ಹೋರಾಟ ಮಾಡಿದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಈ ಮಾತಿನ ಅರ್ಥ. ಪಕ್ಷವನ್ನು ಮುನ್ನಡೆಸಲು ಮತ್ತು ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಆಳವಾದ ಜ್ಞಾನ ಹಾಗೂ ತಳಮಟ್ಟದ ಶ್ರಮ ಬೇಕು ಎಂಬುದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ವಿಜಯ್ ಅವರ ಯಶಸ್ಸನ್ನು ತಮಗೆ ಹೋಲಿಸುತ್ತಿರುವ ಜನರಿಗೆ ಪವನ್ ಕಲ್ಯಾಣ್ ತಿರುಗೇಟು ನೀಡಿದ್ದಾರೆ. ‘ಪಕ್ಕದ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಕಟ್ಟಿ ಸಿಎಂ ಆದರು, ನೀವೂ ಆಂಧ್ರದಲ್ಲಿ ಹಾಗೆಯೇ ಮಾಡಬೇಕಿತ್ತು ಎಂದು ಹಲವರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ಪರಿಸ್ಥಿತಿಗಳು ತೀರಾ ಭಿನ್ನವಾಗಿವೆ. ಈ ಹೋಲಿಕೆ ಸರಿಯಲ್ಲ’ ಎಂದಿದ್ದಾರೆ.

2019ರ ಚುನಾವಣೆಯಲ್ಲಿ ತಮಗೆ ಎದುರಾದ ಕಠಿಣ ಸವಾಲುಗಳು ಮತ್ತು ಸ್ವಂತ ಸಚಿವರೇ ಸಾಥ್ ನೀಡದ ದಿನಗಳನ್ನು ನೆನಪಿಸಿಕೊಂಡ ಪವನ್, ‘ನಮ್ಮ ಹೋರಾಟದ ಹಾದಿಯೇ ಬೇರೆ, ದಯವಿಟ್ಟು ಯಾರೊಂದಿಗೂ ಹೋಲಿಸಬೇಡಿ’ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ರಾಜಕೀಯದಲ್ಲಿ ದಶಕಕ್ಕೂ ಹೆಚ್ಚು ಕಾಲ ಸೈಕಲ್ ಹೊಡೆದು, ಹಂತಹಂತವಾಗಿ ಬೆಳೆದು ಇಂದು ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:01 am, Wed, 27 May 26

Source link

Exit mobile version