Bengaluru Air Quality: ಮಳೆಯ ಎಫೆಕ್ಟ್, ಬೆಂಗಳೂರಿನಲ್ಲಿ ಶುದ್ಧ ಗಾಳಿ – Kannada News | Bengaluru AQI Today: Air Quality Remains Moderate; Chikkamagaluru Records Cleanest Air

ಮಳೆಯ ಎಫೆಕ್ಟ್, ಬೆಂಗಳೂರಿನಲ್ಲಿ ಶುದ್ಧ ಗಾಳಿ
Image Credit source: aqi.in

ಬೆಂಗಳೂರು, ಮೇ 27: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕಾಗಿರುವುದರಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ  (AQI)  ಗಣನೀಯವಾಗಿ ಕಡಿಮೆಯಾಗಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಆರೋಗ್ಯಕರ ಮಟ್ಟದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ನಿಯಂತ್ರಣದಲ್ಲಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ಸಾಧಾರಣ ಮಟ್ಟದಲ್ಲಿ ದಾಖಲಾಗಿದೆ.
  • ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ವಾಯು ಮಾಲಿನ್ಯದ ಮಟ್ಟ ಹೆಚ್ಚಾಗಿದೆ.
  • ಮಲೆನಾಡಿನ ಚಿಕ್ಕಮಗಳೂರು ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿಯನ್ನು ಹೊಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಹೇಗಿದೆ?

ಇಂದು ಬೆಂಗಳೂರು ನಗರದಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 68 ರಿಂದ 76ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಸಾಧಾರಣ ಅಥವಾ ತೃಪ್ತಿದಾಯಕ ವಲಯದಲ್ಲಿದೆ. ಕಳೆದ ಕೆಲವು ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುತ್ತಿರುವುದರಿಂದ ಗಾಳಿಯಲ್ಲಿನ ಧೂಳಿನ ಕಣಗಳು (PM2.5 ಮತ್ತು PM10) ನೆಲಕಚ್ಚಿದ್ದು, ಮಾಲಿನ್ಯದ ತೀವ್ರತೆ ಕಡಿಮೆಯಾಗಿದೆ.

ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್ ವಾಹನಗಳ ಸಂಚಾರ ಹೆಚ್ಚಿರುವುದರಿಂದ ಇಲ್ಲಿ 77 ರಿಂದ 106 ರವರೆಗೆ (ಸಾಧಾರಣದಿಂದ ಕಳಪೆ) AQI ದಾಖಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಕೈಗಾರಿಕಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇಲ್ಲಿನ AQI 82 ರಷ್ಟಿದೆ. ಹೆಬ್ಬಾಳ ಮತ್ತು ಜಯನಗರ ಭಾಗಗಳಲ್ಲಿ ಹಸಿರು ಮತ್ತು ಮುಕ್ತ ವಾತಾವರಣ ಇರುವುದರಿಂದ ವಾಯು ಗುಣಮಟ್ಟ ಉತ್ತಮವಾಗಿದ್ದು, 58 ರಿಂದ 69 ರ ಆಸುಪಾಸಿನಲ್ಲಿ ದಾಖಲಾಗಿದೆ.

ಕರ್ನಾಟಕದ ಇತರ ನಗರಗಳ ವಾಯು ಗುಣಮಟ್ಟ

ರಾಜ್ಯದ ಒಟ್ಟಾರೆ ವಾಯು ಗುಣಮಟ್ಟವನ್ನು ಗಮನಿಸಿದರೆ, ಉತ್ತರ ಒಳನಾಡು ಮತ್ತು ಕರಾವಳಿ ಭಾಗದ ನಗರಗಳಲ್ಲಿ ಪರಿಸ್ಥಿತಿ ತೃಪ್ತಿದಾಯಕವಾಗಿದೆ.

  • ಧಾರವಾಡ – 124
  • ಕೊಪ್ಪಳ- 84
  • ಹುಬ್ಬಳ್ಳಿ- 76
  • ಕಲಬುರಗಿ- 76
  • ಬಾಗಲಕೋಟೆ – 73
  • ತುಮಕೂರು – 68
  • ವಿಜಯಪುರ- 68
  • ಬೆಳಗಾವಿ – 35
  • ಚಿಕ್ಕಮಗಳೂರು – 18

ಇಂದಿನ ವರದಿಯ ಪ್ರಕಾರ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಮಾತ್ರ ವಾಯು ಮಾಲಿನ್ಯದ ಮಟ್ಟ ಸ್ವಲ್ಪ ಹೆಚ್ಚಾಗಿದ್ದು (124 AQI), ಕಳಪೆ ವಲಯವನ್ನು ತಲುಪಿದೆ. ಇನ್ನುಳಿದಂತೆ ಮಲೆನಾಡು ಭಾಗದ ಚಿಕ್ಕಮಗಳೂರು ಕೇವಲ 18 AQI ದಾಖಲಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿಯನ್ನು ಹೊಂದಿರುವ ನಗರವಾಗಿ ಹೊರಹೊಮ್ಮಿದೆ.

ಬೆಂಗಳೂರು ಹಾಗೂ ರಾಜ್ಯದ ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿದ್ದರೂ, ಉಸಿರಾಟದ ತೊಂದರೆ ಅಥವಾ ಅಸ್ತಮಾ ಇರುವಂತಹ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹೈದರಾಬಾದ್ ಏರ್​ಪೋರ್ಟ್​ನ ವಿಐಪಿ ನುಗ್ಗಿದ ಬೀದಿ ನಾಯಿ – Kannada News | Dog Wanders Into Rajiv Gandhi International Airport, Viral Video Sparks Reactions

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ರಾಜಾರೋಷವಾಗಿ ಓಡಾಡುತ್ತಿರುವ ಮತ್ತು ಮೇಜಿನ ಮೇಲೆ ಉಳಿದಿದ್ದ ಆಹಾರವನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಭಾರಿ ವೈರಲ್ ಆಗಿದೆ. ಇದು ಹೈಟೆಕ್ ಏರ್‌ಪೋರ್ಟ್‌ನ ಸುರಕ್ಷತೆಯ ಬಗ್ಗೆ ಪ್ರಯಾಣಿಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಜಿಎಚ್‌ಎಂಸಿ (GHMC) ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಜಿಎಚ್‌ಎಂಸಿ ತಂಡಗಳು ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಜನವರಿ 2026 ರಿಂದ ಇದುವರೆಗೆ 21 ಬೀದಿ ನಾಯಿಗಳನ್ನು ಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಏರ್‌ಪೋರ್ಟ್‌ನ ಒಳಗೆ ಕಟ್ಟುನಿಟ್ಟಾದ ತ್ಯಾಜ್ಯ ನಿರ್ವಹಣೆಯನ್ನು ಜಾರಿಗೊಳಿಸಲಾಗಿದ್ದು, ಮುಚ್ಚಿದ ತೊಟ್ಟಿಗಳಲ್ಲೇ ಆಹಾರ ವಿಲೇವಾರಿ ಮಾಡಲು ಆದೇಶಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಆನ್-ಗ್ರೌಂಡ್ ಸಿಬ್ಬಂದಿಗೆ ಹೆಚ್ಚಿನ ಜಾಗರೂಕತೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಾಲೆ, ಆಸ್ಪತ್ರೆ ಮತ್ತು ವಿಮಾನ ನಿಲ್ದಾಣಗಳಂತಹ ನಿರ್ಣಾಯಕ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆಗೆದುಹಾಕುವ ಆದೇಶವನ್ನು ಬದಲಾಯಿಸಲು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಂದು ಶೂಟ್​​ನಲ್ಲಿ ನಾನು ವಿಜಯ್ ಸಾಯುತ್ತಿದ್ದೆವು’; ಹಳೆಯ ಘಟನೆ ನೆನೆದ ವಿಲನ್ ಅಭಿಮನ್ಯು – Kannada News | Abhimanyu Singh’s terrifying ‘Velayudham’ train stunt with Vijay: A near death experience

ಖ್ಯಾತ ನಟ ಅಭಿಮನ್ಯು ಸಿಂಗ್ ಹೆಸರು ಹೇಳಿದರೆ ತಕ್ಷಣ ನೆನಪಾಗದಿರಬಹುದು, ಆದರೆ ‘ಗಬ್ಬರ್ ಸಿಂಗ್’ ಸಿನಿಮಾದ ಖಳನಾಯಕ ಎಂದರೆ ಭಾರತೀಯ ಚಿತ್ರಪ್ರೇಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ರಾಮ್ ಗೋಪಾಲ್ ವರ್ಮಾ ಅವರ ‘ರಕ್ತ ಚರಿತ್ರೆ’ ಮೂಲಕ ದಕ್ಷಿಣ ಭಾರತಕ್ಕೆ ಪರಿಚಯವಾದ ಇವರು, ಕನ್ನಡದಲ್ಲಿ ‘ಚಕ್ರವ್ಯೂಹ’ ಹಾಗೂ ‘ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದರು. ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡದ ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು, ತಮಿಳುನಾಡು ಸಿಎಂ ದಳಪತಿ ವಿಜಯ್ (Vijay) ನಟನೆಯ ಸೂಪರ್ ಹಿಟ್ ‘ವೇಲಾಯುಧಂ’ ಚಿತ್ರದಲ್ಲೂ ಮುಖ್ಯ ಖಳನಾಯಕನಾಗಿ ನಟಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ಸಿನಿಮಾದ ಶೂಟಿಂಗ್ ವೇಳೆ ನಡೆದಿದ್ದ ಒಂದು ರೋಮಾಂಚನಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ.

‘ಅದು ನನ್ನ ಮೊದಲ ತಮಿಳು ಸಿನಿಮಾ. ಒಂದು ಪ್ರಮುಖ ಫೈಟಿಂಗ್ ದೃಶ್ಯದ ಚಿತ್ರೀಕರಣಕ್ಕಾಗಿ ನಾವು ಕೊಯಮತ್ತೂರಿನಿಂದ ಸುಮಾರು ಒಂದೂವರೆ ಗಂಟೆ ದೂರದಲ್ಲಿದ್ದ ಒಂದು ಸಣ್ಣ ರೈಲು ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲಿ ನಮಗಾಗಿ ಒಂದು ವಿಶೇಷ ರೈಲನ್ನು ಸಿದ್ಧಪಡಿಸಲಾಗಿತ್ತು. ಸುಮಾರು ಆರು ದಿನಗಳ ಕಾಲ ಅಲ್ಲಿ ಬೇರೆ ದೃಶ್ಯಗಳ ಚಿತ್ರೀಕರಣ ನಡೆಯಿತು. ಏಳನೇ ದಿನ, ವಿಜಯ್ ಮತ್ತು ನಾನು ಚಲಿಸುವ ರೈಲಿನ ಮೇಲೆ ನಿಂತು ಸಾಹಸ ದೃಶ್ಯವನ್ನು ಮಾಡಬೇಕಿತ್ತು. ಶೂಟಿಂಗ್ ಆರಂಭವಾಗುವ ಮುನ್ನ ನಾವಿಬ್ಬರೂ ರೈಲಿನ ಮೇಲೆ ನಿಂತು ಪೂರ್ವಾಭ್ಯಾಸ (ರಿಹರ್ಸಲ್) ಮಾಡಿದೆವು. ಕ್ಯಾಮೆರಾ ಆನ್ ಆಗುತ್ತಿದ್ದಂತೆ ರೈಲು ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ ಎಂದು ಚಿತ್ರತಂಡ ಹೇಳಿದಾಗ ನನಗೆ ನಿಜಕ್ಕೂ ಭಯವಾಗಿತ್ತು’ ಎಂದು ಅಭಿಮನ್ಯು ಸಿಂಗ್ ನೆನಪಿಸಿಕೊಂಡಿದ್ದಾರೆ.

‘ಚಲಿಸುವ ರೈಲಿನ ಮೇಲೆ ಫೈಟ್ ಮಾಡುವುದು ಹೇಗೆ ಎಂದು ನಾನು ವಿಜಯ್ ಅವರನ್ನು ಕೇಳಿದೆ. ಅದಕ್ಕೆ ಅವರು ಧೈರ್ಯ ತುಂಬುತ್ತಾ, ‘ನಾವು ಇಲ್ಲಿ ಜಗಳ ಆಡುತ್ತಿಲ್ಲ, ಬದಲಿಗೆ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುತ್ತಿದ್ದೇವೆ’ ಎಂದರು. ನೋಡನೋಡುತ್ತಿದ್ದಂತೆ ರೈಲು ಗಂಟೆಗೆ 70-80 ಕಿಲೋಮೀಟರ್ ವೇಗವನ್ನು ಪಡೆದುಕೊಂಡಿತು. ರೈಲಿನ ಮೇಲೆ ನಮ್ಮಿಬ್ಬರ ಜೊತೆ ಕ್ಯಾಮೆರಾಮನ್ ಮಾತ್ರ ಇದ್ದರು. ಅಷ್ಟರಲ್ಲಿ ನಮ್ಮ ಮುಂದೆ ಒಂದು ದೊಡ್ಡ ರೈಲ್ವೆ ಸೇತುವೆ ಕಾಣಿಸಿತು. ಅದನ್ನು ನೋಡಿ ನನ್ನ ಎದೆ ಝಲ್ಲೆಂದಿತು. ಒಂದು ವೇಳೆ ಆ ವೇಗದಲ್ಲಿ ಕಾಲು ಜಾರಿ ಬಿದ್ದರೆ, ನೇರವಾಗಿ 2500 ಅಡಿ ಆಳದ ಕಣಿವೆಗೆ ಬಿದ್ದು ಪ್ರಾಣವೇ ಹೋಗುತ್ತಿತ್ತು. ಅಲ್ಲಿ ವಿಜಯ್ ಅವರ ಜೀವವೂ ಅಪಾಯದಲ್ಲಿತ್ತು’ ಎಂದು ಆ ಆತಂಕದ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್​ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ

‘ದೇವರ ಕೃಪೆಯಿಂದ ಅಂದು ಯಾವುದೇ ಅನಾಹುತ ಸಂಭವಿಸಲಿಲ್ಲ. ನಾವಿಬ್ಬರೂ ಆ ಸಾಹಸ ದೃಶ್ಯವನ್ನು ಯಶಸ್ವಿಯಾಗಿ ಮುಗಿಸಿದೆವು. ಆದರೆ, ಆ ಶೂಟಿಂಗ್ ಮುಗಿದ ನಂತರ ನನಗೆ ಒಂದು ವಾರದವರೆಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ಒಂದು ವೇಳೆ ಏನಾದರೂ ಹೆಚ್ಚುಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಎಂಬ ಆಲೋಚನೆ ನನ್ನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುತ್ತಿತ್ತು. ಅಂದು ನಾವಿಬ್ಬರೂ ಸಾವಿನ ಅಂಚಿನಿಂದ ಪಾರಾಗಿ ಬಂದಿದ್ದೆವು’ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ಆಘಾತಕಾರಿ ಸತ್ಯ ಬಯಲು – Kannada News | Karnataka Food Safety Department Report: Adulterated Bakery Items and Chips Found with Cancer Causing Chemicals

ಬೆಂಗಳೂರು, ಮೇ 27: ಬಣ್ಣ ಬಣ್ಣದ ಸಿಹಿತಿಂಡಿಗಳು, ಬಿಸಿ ಬಿಸಿ ಬೇಕರಿ ಪಫ್ಸ್‌ ಹಾಗೂ ಕುರುಕುಲು ಚಿಪ್ಸ್‌ಗಳನ್ನು (Bakery Food) ಇಷ್ಟಪಟ್ಟು ತಿನ್ನುವ ಗ್ರಾಹಕರಿಗೆ ಕರ್ನಾಟಕ (Karnataka) ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಇತ್ತೀಚಿನ ವರದಿಯೊಂದು ಭಾರಿ ಆಘಾತ ನೀಡಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವಿವಿಧ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ ಎಂದು ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಆಕರ್ಷಣೆಗಾಗಿ ಈ ತಿನಿಸುಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳನ್ನು (Chemical Colors) ಬಳಸುತ್ತಿರುವುದು ಇಲಾಖೆಯ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ರಾಜ್ಯಾದ್ಯಂತ ಬೇಕರಿ ಹಾಗೂ ಚಿಪ್ಸ್ ತಯಾರಿಕಾ ಕೇಂದ್ರಗಳಿಂದ 35,639 ಆಹಾರದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ.
  • ಆಕರ್ಷಕ ಬಣ್ಣಕ್ಕಾಗಿ ಕಾನೂನು ನಿಯಮ ಉಲ್ಲಂಘಿಸಿ ಮಿತಿಮೀರಿದ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳನ್ನು ಬಳಸಿರುವುದು ಪತ್ತೆ.
  • ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ತಯಾರಕರ ಪರವಾನಗಿ ರದ್ದುಪಡಿಸಲು ಸಾರ್ವಜನಿಕರ ಆಗ್ರಹ.

ಲ್ಯಾಬ್ ರಿಪೋರ್ಟ್ ಬಿಚ್ಚಿಟ್ಟ ಆಘಾತಕಾರಿ ವಿಚಾರ

ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯದ ಮೂಲೆ ಮೂಲೆಗಳ ಬೇಕರಿಗಳಿಂದ ಬರೋಬ್ಬರಿ 35,639 ಆಹಾರದ ಮಾದರಿಗಳನ್ನು (Food Samples) ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಪ್ರಸ್ತುತ ಬಂದಿರುವ ಲ್ಯಾಬ್ ವರದಿಯ ಪ್ರಕಾರ, ಬಹುತೇಕ ಬೇಕರಿ ತಿನಿಸುಗಳು ಮತ್ತು ಚಿಪ್ಸ್‌ಗಳಲ್ಲಿ ನಿಷೇಧಿತ ಹಾಗೂ ಮಿತಿಮೀರಿದ ರಾಸಾಯನಿಕ ಬಣ್ಣಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲಾ ವರ್ಗದ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳಲು ಇಂತಹ ಕಲಬೆರಕೆ ಹಾಗೂ ವಿಷಕಾರಿ ಆಹಾರ ಪದ್ಧತಿಯೇ ಮುಖ್ಯ ಕಾರಣ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಆಹಾರ ಇಲಾಖೆಯ ಈ ಆಘಾತಕಾರಿ ವರದಿ ಪ್ರಕಟವಾಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಿಯಮ ಉಲ್ಲಂಘಿಸಿ ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತಿರುವ ಇಂತಹ ಬೇಜವಾಬ್ದಾರಿ ತಯಾರಕರ ಮತ್ತು ಬೇಕರಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಂತಹ ಅಂಗಡಿಗಳನ್ನು ತಕ್ಷಣವೇ ಮುಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ತಲೆ ಎತ್ತಿದ ಪ್ಲಾಸ್ಟಿಕ್ ಫುಡ್ ಪೇಪರ್, ಆಹಾರದ ಜೊತೆ ಕ್ಯಾನ್ಸರ್ ಕಾರಕ ಉಚಿತ

ಕಣ್ಣಿಗೆ ಚಂದ ಕಾಣುವ ಬಣ್ಣದ ಆಕರ್ಷಣೆಗೆ ಮರುಳಾಗಿ ಸ್ಲೋ ಪಾಯ್ಸನ್ ಅನ್ನು ಕಾಸು ಕೊಟ್ಟು ಕೊಳ್ಳುವ ಮುನ್ನ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಇಂತಹ ತಿಂಡಿಗಳನ್ನು ಕೊಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK ದಾಖಲೆಯನ್ನೇ ಧೂಳೀಪಟ ಮಾಡಿದ RCB – Kannada News | RCB Breaks CSK’s Playoffs Records

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್​ನಲ್ಲಿ ಆರ್ಭಟಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಂಡಿಗರು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹೆಸರಿನಲ್ಲಿದ್ದ 2 ಭರ್ಜರಿ ರೆಕಾರ್ಡ್​ಗಳನ್ನು ಅಳಿಸಿ ಹಾಕಿದ್ದಾರೆ.

ಧರ್ಮಾಶಾಲಾದಲ್ಲಿ ನಡೆದ ಐಪಿಎಲ್​ನ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವೆಂಕಟೇಶ್ ಅಯ್ಯರ್ (19), ವಿರಾಟ್ ಕೊಹ್ಲಿ (43), ದೇವದತ್ ಪಡಿಕ್ಕಲ್ (30), ರಜತ್ ಪಾಟಿದಾರ್ (93), ಕೃನಾಲ್ ಪಾಂಡ್ಯ (43) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಆರ್​ಸಿಬಿ ದಾಂಡಿಗರು ಬಾರಿಸಿದ ಒಟ್ಟು ಬೌಂಡರಿಗಳ ಸಂಖ್ಯೆ ಬರೋಬ್ಬರಿ 38 .

ಇದರೊಂದಿಗೆ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು (ಫೋರ್ ಮತ್ತು ಸಿಕ್ಸ್​) ಬಾರಿಸಿದ ದಾಖಲೆ ಆರ್​ಸಿಬಿ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು.

CSK ದಾಖಲೆ ಉಡೀಸ್:

2012ರ ಪ್ಲೇಆಫ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ದಾಂಡಿಗರು ಬರೋಬ್ಬರಿ 33 ಬೌಂಡರಿಗಳನ್ನು ಬಾರಿಸಿ ಭರ್ಜರಿ ದಾಖಲೆ ನಿರ್ಮಿಸಿದ್ದರು. ಇದೀಗ 14 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆರ್​​ಸಿಬಿ ದಾಂಡಿಗರು ಯಶಸ್ವಿಯಾಗಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಬ್ಯಾಟರ್​ಗಳು 14 ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ಒಟ್ಟು 38 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ತಂಡವೆಂಬ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಕಲೆಹಾಕಿದ್ದು 254 ರನ್​ಗಳು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್​ಸಿಬಿ 92 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

CSK ದಾಖಲೆ ಧೂಳೀಪಟ:

ಈ ಗೆಲುವಿನೊಂದಿಗೆ ಐಪಿಎಲ್​ ಪ್ಲೇಆಫ್​​ನಲ್ಲಿ (ನಾಕೌಟ್ ಅಲ್ಲದೇ) ಅತ್ಯಧಿಕ ರನ್​ಗಳ ಅಂತರದಿಂದ ವಿಜಯ ಸಾಧಿಸಿದ ತಂಡವೆಂಬ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು.

ಸಿಎಸ್​ಕೆ ತಂಡವು 2012 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪ್ಲೇಆಫ್​ ಪಂದ್ಯದಲ್ಲಿ 82 ರನ್​ಗಳ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ 92 ರನ್​ಗಳ ಭರ್ಜರಿ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ಹಿಂದೆಂದೂ ಕಾಣದ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಈ ಮೂಲಕ ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್​ಗಳ ಅಂತರದಿಂದ ಗೆದ್ದ ತಂಡವೆಂಬ ಭರ್ಜರಿ ದಾಖಲೆಯನ್ನು ಆರ್​ಸಿಬಿ ತಮ್ಮದಾಗಿಸಿಕೊಂಡಿದ್ದಾರೆ.

Source link

Video: ನೇಪಾಳದಲ್ಲಿ ಭಾರಿ ಮಳೆ, ತರಗತಿಗೆ ನುಗ್ಗಿದ ನೀರು, ವಿದ್ಯಾರ್ಥಿಗಳನ್ನು ರಕ್ಷಿಸಲು ಡೆಸ್ಕ್​ ಅಡ್ಡ ಹಿಡಿದು ನಿಂತ ಶಿಕ್ಷಕಿ – Kannada News | Volunteer Teacher in Nepal Praised for Protecting Students During Heavy Rain

ಕಠ್ಮಂಡು, ಮೇ 27: ನೇಪಾಳದ ಶ್ರೀ ರಾಮಶರಣ್ ಬೇಸಿಕ್ ಶಾಲೆಯಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ತಲ್ಲಣ ಸೃಷ್ಟಿಸಿತ್ತು. ಹಠಾತ್ ಬಂದ ಬಿರುಗಾಳಿಗೆ ಶಾಲೆಯ ತರಗತಿ ಕೊಠಡಿಯ ಮೇಲ್ಛಾವಣಿ ಕಿತ್ತುಹೋಗಿ, ಒಳಗಿದ್ದ ಪುಟ್ಟ ವಿದ್ಯಾರ್ಥಿಗಳ ಮೇಲೆ ಮಳೆ ನೀರು ನೇರವಾಗಿ ಸೋರಲು ಆರಂಭಿಸಿತ್ತು.

ಇದನ್ನು ಕಂಡ ಶಂಭುವ್ ಬಿ.ಕೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ ಅವರು, ತಮಗಾಗುತ್ತಿದ್ದ ತೊಂದರೆಯನ್ನು ಲೆಕ್ಕಿಸದೆ ಮಳೆಯಲ್ಲಿಯೇ ಭಾರವಾದ ಮರದ ಡೆಸ್ಕ್‌ಅನ್ನು ತಮ್ಮ ಕೈಗಳಿಂದ ಮೇಲಕ್ಕೆತ್ತಿ ಹಿಡಿದು, ಮಳೆಯ ನೀರು ಮಕ್ಕಳ ಮೇಲೆ ಬೀಳದಂತೆ ಭದ್ರವಾದ ಛತ್ರಿಯಂತೆ ರಕ್ಷಣೆ ನೀಡಿದರು.

ತಮ್ಮ ಪ್ರಾಣ ಮತ್ತು ಆರೋಗ್ಯವನ್ನು ಪಣಕ್ಕಿಟ್ಟು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶ್ರಮಿಸಿದ ಈ ಶಿಕ್ಷಕಿಯ ಅದ್ಭುತ ಕರ್ತವ್ಯ ನಿಷ್ಠೆ ಹಾಗೂ ವಾತ್ಸಲ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಗೆದ್ದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೈರಲ್ ಆಯಿತು ರಜನಿಕಾಂತ್ ಕಂಡಕ್ಟರ್ ಐಡಿ ಕಾರ್ಡ್;275 ರೂ. ಸಂಬಳ – Kannada News | Rajinikanth’s Viral Old BTS ID Card: From Conductor to Superstar Journey

ಚಿತ್ರರಂಗದಲ್ಲಿ ಯಾರೂ ತಲುಪಲಾಗದ ಎತ್ತರಕ್ಕೆ ಬೆಳೆದು ನಿಂತಿರುವ ‘ತಲೈವಾ’ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಹಳೆಯ ದಿನಗಳ ಅಪರೂಪದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಇಂದು ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ರಜನಿಕಾಂತ್, ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈಗ ವೈರಲ್ ಆಗಿರುವ ಅವರ ಅಂದಿನ ಅಧಿಕೃತ ಐಡಿ ಕಾರ್ಡ್ ಆ ದಿನಗಳ ನೆನಪನ್ನು ಮತ್ತೊಮ್ಮೆ ಹಸಿರಾಗಿಸಿದೆ.

ಈ ಗುರುತಿನ ಚೀಟಿಯಲ್ಲಿ ರಜನಿಕಾಂತ್ ಅವರ ಅಸಲಿ ಹೆಸರು ‘ಶಿವಾಜಿ ರಾವ್ ಗಾಯಕ್ವಾಡ್’ ಎಂದು ನಮೂದಿಸಲಾಗಿದೆ. ಅವರು ಶ್ರೀನಗರ ಡಿಪೋದಲ್ಲಿ, ರೂಟ್ ನಂಬರ್ 10A ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ. ವಿಶೇಷವೆಂದರೆ, 18-06-1971 ರಲ್ಲಿ ಬಿಟಿಎಸ್ ಸೇರಿದಾಗ ಅವರಿಗಿದ್ದ ಮಾಸಿಕ ಸಂಬಳ ಕೇವಲ 275 ರೂಪಾಯಿ.

ಬೆಂಗಳೂರಿನ ಬಸ್ಸುಗಳಲ್ಲಿ ಟಿಕೆಟ್ ಕೊಡುವಾಗ ಶಿವಾಜಿ ರಾವ್ ತೋರುತ್ತಿದ್ದ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಟೈಲ್ ಅಂದಿನ ಪ್ರಯಾಣಿಕರನ್ನು ಸೆಳೆಯುತ್ತಿತ್ತು. ನಂತರ ಗೆಳೆಯ ರಾಜ ಬಹದ್ದೂರ್ ಪ್ರೇರಣೆಯಿಂದ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿದ ಅವರು, ನಿರ್ದೇಶಕ ಕೆ. ಬಾಲಚಂದರ್ ಅವರ ಕಣ್ಣಿಗೆ ಬಿದ್ದು ‘ರಜನಿಕಾಂತ್’ ಆಗಿ ಬದಲಾದರು.

ಇದನ್ನೂ ಓದಿ: ‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ಕೇವಲ 275 ರೂಪಾಯಿ ಸಂಬಳ ಪಡೆಯುತ್ತಿದ್ದ ಒಬ್ಬ ಸಾಮಾನ್ಯ ಯುವಕ, ಇಂದು ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಾ ನಟನಾಗಿ ಬೆಳೆದು ನಿಂತಿರುವುದು ಒಂದು ಅದ್ಭುತ ಇತಿಹಾಸ. ಈ ಐಡಿ ಕಾರ್ಡ್ ಕೇವಲ ಒಂದು ದಾಖಲೆಯಲ್ಲ, ಶ್ರಮ ಮತ್ತು ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:50 am, Wed, 27 May 26

Source link

ಸೋರುತಿಹುದು ಏರ್​ಪೋರ್ಟ್ ಮಾಳಿಗಿ! ಭಾರಿ ಮಳೆಗೆ ಮತ್ತೆ ಸೋರಿದ ಟರ್ಮಿನಲ್ 1ರ ಮೇಲ್ಛಾವಣಿ, ವಿಡಿಯೋ ವೈರಲ್ – Kannada News | Bengaluru Airport Flooding: Terminal 1 Roof Leaks Again After Heavy Rain at KIA, Video goes viral

ದೇವನಹಳ್ಳಿ, ಮೇ 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಹಾಗೂ ರಾತ್ರಿ ಭಾರಿ ಮಳೆ ಸುರಿದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವ್ಯಾಪ್ತಿಯಲ್ಲೂ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳು ಸೃಷ್ಟಿಯಾದವು. ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ರನ್‌ವೇ ಸ್ಪಷ್ಟವಾಗಿ ಕಾಣಿಸದೆ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಯಿತು. ಅನೇಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು.

ಏರ್‌ಪೋರ್ಟ್‌ನ ಟರ್ಮಿನಲ್-1 ರ ಮೇಲ್ಛಾವಣಿಯಲ್ಲಿ ನೀರು ಸೋರಲು ಆರಂಭಿಸಿ ಟರ್ಮಿನಲ್ ಒಳಗೆಲ್ಲ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಡುವಂತಾಯಿತು. ಟರ್ಮಿನಲ್ ಛಾವಣಿ ಸೋರುತ್ತಿರುವ ಮತ್ತು ಒಳಗೆ ಜಲಪ್ರವಾಹ ಸಂಭವಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಕೆಲವು ಬಾರಿ ಟರ್ಮಿನಲ್ ಮೇಲ್ಛಾವಣಿ ಸೋರಿದ ಬಗ್ಗೆ ವರದಿಯಾಗಿದ್ದು, ವಿಡಿಯೋಗಳೂ ವೈರಲ್ ಆಗಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬೆಂಗಳೂರು, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಆರೆಂಜ್ ಅಲರ್ಟ್ ಘೋಷಣೆ! – Kannada News | Karnataka Weather Forecast: Heavy Rain in Bengaluru, Orange Alert Issued for Bagalkot, Kalaburagi and Vijayapura

ಬೆಂಗಳೂರು, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು, ಮೇ 27: ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ  (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಮುಖ್ಯಾಂಶಗಳು

  • ಬಾಗಲಕೋಟೆ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ.
  • ಹಾಸನ, ಕೊಡಗು, ಮೈಸೂರು ಭಾಗಗಳಲ್ಲಿ ಮಳೆ ಹೆಚ್ಚಳ, ಯೆಲ್ಲೋ ಅಲರ್ಟ್ ಮುನ್ನೆಚ್ಚರಿಕೆ.
  • ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ.

ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್

ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ.

ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ರೂಪದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 30 ರಿಂದ 40 ಕಿಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಬಹುದು.

ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ 40-50 ಕಿಮೀ ವೇಗದ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆ ಆರ್ಭಟಿಸುವ ಸಾಧ್ಯತೆಯಿದೆ.

ಕರಾವಳಿಯಲ್ಲೂ ತುಂತುರು ಮಳೆ

ಕರಾವಳಿ ಕರ್ನಾಟಕದ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಮುನ್ಸೂಚನೆಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆ ಹಾಗೂ ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಮುಖವಾಗಿ ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ನಿಲ್ಲದಂತೆ ಮತ್ತು ವಿದ್ಯುತ್ ಕಂಬಗಳಿಂದ ದೂರವಿರಲು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್​​ನಿಂದ ಕಳುವಾಯ್ತು ಬರೋಬ್ಬರಿ 66 ಹಾರ್ಡ್​​ ಡಿಸ್ಕ್ – Kannada News | Bollywood Data Heist: 66 Hard Disks Stolen from Zoya Akhtar’s Tiger Baby Production House

ಬಾಲಿವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್‌ವೊಂದರಿಂದ ಬರೋಬ್ಬರಿ 66 ಹಾರ್ಡ್ ಡಿಸ್ಕ್‌ಗಳು ಕಳವಾಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಚಿತ್ರರಂಗದಲ್ಲಿ ಇಂತಹ ಹೈ-ಪ್ರೊಫೈಲ್ ಡೇಟಾ ಕಳ್ಳತನ ನಡೆಯುವುದು ತೀರಾ ಅಪರೂಪವಾಗಿದ್ದು, ಸದ್ಯ ಈ ಸುದ್ದಿ ಬಾಲಿವುಡ್ (Bollywood) ಅಂಗಳದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಾಕಷ್ಟು ಎಚ್ಚರಿಕೆ ಮಧ್ಯೆಯೂ ಈ ರೀತಿ ಆಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಖ್ಯಾತ ನಿರ್ದೇಶಕಿಯರಾದ ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರಿಗೆ ಸೇರಿದ ‘ಟೈಗರ್ ಬೇಬಿ ಡಿಜಿಟಲ್ ಎಲ್‌ಎಲ್‌ಪಿ’ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಕಚೇರಿಯಲ್ಲಿದ್ದ ಒಟ್ಟು 119 ಹಾರ್ಡ್ ಡಿಸ್ಕ್‌ಗಳ ಪೈಕಿ 66 ಹಾರ್ಡ್ ಡಿಸ್ಕ್‌ಗಳು ನಾಪತ್ತೆಯಾಗಿದ್ದು, ಇವುಗಳಲ್ಲಿ ಶೂಟಿಂಗ್‌ನ ರಾ ಫೂಟೇಜ್, ಎಡಿಟ್ ಮಾಡಿದ ದೃಶ್ಯಗಳು, ಪೋಸ್ಟ್-ಪ್ರೊಡಕ್ಷನ್ ಫೈಲ್‌ಗಳು ಮತ್ತು ಇನ್ನೂ ಬಿಡುಗಡೆಯಾಗದ ಚಿತ್ರಗಳ ಅತ್ಯಂತ ಪ್ರಮುಖ ಡೇಟಾ ಇತ್ತು ಎಂದು ತಿಳಿದುಬಂದಿದೆ.

ಕಳ್ಳತನ ಬಯಲಾಗಿದ್ದು ಹೇಗೆ?

ಮೇ 21 ರಂದು ಕಚೇರಿಯ ಸಿಬ್ಬಂದಿ ಪರಿಶೀಲಿಸಿದಾಗ ಹಾರ್ಡ್ ಡಿಸ್ಕ್ ಬಾಕ್ಸ್‌ಗಳು ಹರಿದಿರಿವುದು ಮತ್ತು ಅವು ಖಾಲಿ ಇರುವುದು ಪತ್ತೆಯಾಗಿದೆ. ತಕ್ಷಣವೇ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಲಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಶಾಹಿದ್ ಅಜೀಂ ಖಾನ್ ಮತ್ತು ರಿತೇಶ್ ಸುರೇಶ್ ಶಾ ಎಂಬ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಡಿಮೆ ಬೆಲೆಗೆ ಮಾರಾಟ:

ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಕಳೆದ ಐದು ತಿಂಗಳಲ್ಲಿ 24 ಹಾರ್ಡ್ ಡಿಸ್ಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವುಗಳನ್ನು ತಲಾ 15,000 ದಿಂದ 20,000 ರೂಪಾಯಿಗಳಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಾರ್ಡ್ ಡಿಸ್ಕ್‌ಗಳಲ್ಲಿ ಅಮೆಜಾನ್ ಪ್ರೈಮ್‌ನ ಸೂಪರ್ ಹಿಟ್ ಸರಣಿ ‘ಮೇಡ್ ಇನ್ ಹೆವನ್’ ಮತ್ತು ‘ಘೋಸ್ಟ್ ಸ್ಟೋರೀಸ್’ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳ ಬ್ಯಾಕಪ್ ಡೇಟಾ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

ಆನ್‌ಲೈನ್ ಲೀಕ್ ಆತಂಕ:

ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟೊಂದು ದೊಡ್ಡ ಮಟ್ಟದ ಡೇಟಾ ಕಳವಾಗಿರುವುದು ನಿರ್ಮಾಣ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಕದ್ದಿರುವ ಡೇಟಾವನ್ನು ಆನ್‌ಲೈನ್‌ನಲ್ಲಿ ಎಲ್ಲಾದರೂ ಲೀಕ್ ಮಾಡಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಬಾಂದ್ರಾ ಪೊಲೀಸರು ಸದ್ಯ ಸೈಬರ್ ಕ್ರೈಮ್ ತಜ್ಞರ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಸಂಸ್ಥೆಯ ಇತರ ಉದ್ಯೋಗಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version