ಹೃದಯಾಘಾತದಿಂದ ತಮಿಳಿನ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಕನ್ನಡದಲ್ಲೂ ನಟನೆ – Kannada News | Veteran Tamil Director Bhagyaraj Passes Away at 73 A Cinema Legend’s Legacy

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ, ನಟ ಕೆ. ಭಾಗ್ಯರಾಜ್ ಶನಿವಾರ (ಜೂನ್ 27)ನಿಧನರಾಗಿದ್ದಾರೆ. ಚೆನ್ನೈನಲ್ಲಿ ವಾಸವಾಗಿದ್ದ ಅವರಿಗೆ ಹೃದಯಾಘಾತವಾಗಿತ್ತು. ಭಾಗ್ಯರಾಜ್​​ಗೆ 73 ವರ್ಷ ವಯಸ್ಸಾಗಿತ್ತು. ಅವರ ಸಾವು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಅವರು ತಮ್ಮ ಅದ್ಭುತ ಕಥೆಗಳ ಮೂಲಕ ಜನಪ್ರಿಯರಾಗಿದ್ದರು. ಮಧ್ಯಮ ವರ್ಗದ ಕೌಟುಂಬಿಕ ಸಿನಿಮಾಗಳನ್ನು ನೀಡಿ ಅವರು ಪ್ರಸಿದ್ಧರಾಗಿದ್ದರು. ಅವರ ನಿಧನದಿಂದ ತಮಿಳು ಸಿನಿಮಾದ ಒಂದು ಸುಂದರ ಯುಗ ಅಂತ್ಯವಾಗಿದೆ.

ಭಾಗ್ಯರಾಜ್ ಅವರ ಪತ್ನಿ ಪೂರ್ಣಿಮಾ ಮಾಜಿ ನಟಿ. ಇವರ ಮಕ್ಕಳ ಹೆಸರು ಶಂತನು ಮತ್ತು ಶರಣ್ಯ. ಮಗ ಶಂತನು ಭಾಗ್ಯರಾಜ್ ಕೂಡ ಚಿತ್ರರಂಗದಲ್ಲಿ ನಟನಾಗಿದ್ದಾರೆ. ಅವರು ಕೆಲವೇ ದಿನಗಳ ಹಿಂದೆ ಗೋವಾಕ್ಕೆ ಹೋಗಿದ್ದರು. ಅಲ್ಲಿ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಮಗಳ ಮದುವೆ ನಡೆದಿತ್ತು. ಆ ಮದುವೆ ಸಮಾರಂಭದಲ್ಲಿ ಭಾಗ್ಯರಾಜ್ ಪಾಲ್ಗೊಂಡಿದ್ದರು.

ಭಾಗ್ಯರಾಜ್ ಹಿನ್ನೆಲೆ

ಭಾಗ್ಯರಾಜ್ ಅವರ ಪೂರ್ಣ ಹೆಸರು ಕೃಷ್ಣಸ್ವಾಮಿ ಭಾಗ್ಯರಾಜ್ ಆಗಿದೆ. ಅವರು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ್ದರು. ಆರಂಭದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಪ್ರಖ್ಯಾತ ನಿರ್ದೇಶಕ ಭಾರತೀರಾಜ ಅವರ ಬಳಿ ಅವರು ಸಿನಿಮಾ ಕಲೆ ಕಲಿತಿದ್ದರು. ನಂತರ ಅವರು ಸ್ವತಂತ್ರ ನಿರ್ದೇಶಕರಾಗಿ ದೊಡ್ಡ ಯಶಸ್ಸು ಕಂಡರು. ತಮಿಳು ಚಿತ್ರರಂಗದಲ್ಲಿ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. 80 ಮತ್ತು 90ರ ದಶಕದಲ್ಲಿ ಅವರ ಸಿನಿಮಾಗಳು ಅಬ್ಬರಿಸಿದ್ದವು. ಅವರ ಸಾಮಾಜಿಕ ಕಥೆಗಳು ಜನರಿಗೆ ತುಂಬಾ ಹತ್ತಿರವಾಗಿದ್ದವು.

ಭಾಗ್ಯರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ 25 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಗೆಯೇ ಅವರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಚಿತ್ರರಂಗದ ಅತ್ಯುತ್ತಮ ಚಿತ್ರಕಥೆಗಾರ ಎಂದು ಕರೆಯಲಾಗುತ್ತದೆ. ಅವರ ‘ಮುಂದಾನೈ ಮುಡಿಚ್ಚು’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಅದರೊಂದಿಗೆ ‘ಅಂದ 7 ನಾಟ್ಕಳ್’ ಮತ್ತು ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’ ಚಿತ್ರಗಳು ಕ್ಲಾಸಿಕ್ ಎನಿಸಿಕೊಂಡಿವೆ.

ಇದನ್ನೂ ಓದಿ: ‘ಬಿಲ್ಲಾ ರಂಗ ಭಾಷಾ’ ಶೂಟಿಂಗ್ ಶುರು ಯಾವಾಗ? ಉತ್ತರ ಕೊಟ್ಟ ನಿರ್ದೇಶಕ

ಭಾಗ್ಯರಾಜ್ ಅವರಿಗೆ ಕನ್ನಡದ ಜೊತೆಯೂ ಸಣ್ಣ ನಂಟಿದೆ. 2015ರಲ್ಲಿ ಬಂದ ಕನ್ನಡದ ‘ರೆಡ್ ಅಲರ್ಟ್’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. 2025ರಲ್ಲಿ ಬಂದ ‘ಕುಬೇರ’ ಅವರ ನಟನೆಯ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರೋಬ್ಬರಿ 10 ಗೋಲುಗಳು… ಫ್ರಾನ್ಸ್ ಪಡೆಯ ಪರಾಕ್ರಮ – Kannada News | France has officially qualified for the Round of 32

FIFA World Cup 2026: ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್ ಪಡೆಯ ಪ್ರರಾಕ್ರಮ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ 3-0 ಅಂತರದಿಂದ ಗೆದ್ದಿದ್ದ ಲೆ ಬ್ಲೂಸ್ ಇದೀಗ ಬಲಿಷ್ಠ ನಾರ್ವೆಯನ್ನು 4-1 ಅಂತರದಿಂದ ಮಣಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ನಾಕೌಟ್ ಹಂತಕ್ಕೇರಿದೆ.

ಫ್ರಾನ್ಸ್​ ಐತಿಹಾಸಿಕ ಸಾಧನೆ:

ಫ್ರಾನ್ಸ್ ತಂಡವು ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ 1998 ರಲ್ಲಿ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಫ್ರಾನ್ಸ್ ಇದೀಗ ಮತ್ತೊಮ್ಮೆ ಅದೇ ರೀತಿಯ ಪ್ರಚಂಡ ಲಯವನ್ನು ಪ್ರದರ್ಶಿಸುತ್ತಿದೆ.

ಬರೋಬ್ಬರಿ 10 ಗೋಲುಗಳು:

ಫ್ರಾನ್ಸ್ ತಂಡವು ಮೊದಲ ಮೂರು ಪಂದ್ಯಗಳಲ್ಲಿ ದಾಖಲಿಸಿರುವುದು ಬರೋಬ್ಬರಿ 10 ಗೋಲುಗಳು ಎಂಬುದು ವಿಶೇಷ. ಈ ವೇಳೆ ಹೊಡೆಸಿಕೊಂಡಿರುವುದು ಕೇವಲ 2 ಗೋಲುಗಳು ಮಾತ್ರ. ಇದು ಫ್ರಾನ್ಸ್​ ತಂಡದ ಮುನ್ಪಡೆಯ ಬಲಿಷ್ಠತೆಯನ್ನು ಹಾಗೂ ರಕ್ಷಣಾ ಕೋಟೆಯ ಬಲವನ್ನು ಸೂಚಿಸುತ್ತದೆ.

  • ಮೊದಲ ಪಂದ್ಯ: ಇರಾಕ್ ವಿರುದ್ಧ 3-0 ಅಂತರದ ಭರ್ಜರಿ ಜಯ.
  •  ಎರಡನೇ ಪಂದ್ಯ: ಸೆನೆಗಲ್ ವಿರುದ್ಧ 3-1 ಗೋಲುಗಳ ಜಯಭೇರಿ
  • ಮೂರನೇ ಪಂದ್ಯ: ನಾರ್ವೆ ವಿರುದ್ಧ 4-1 ಗೋಲುಗಳ ಅಮೋಘ ಗೆಲುವು.

ಎಂಬಾಪೆ ಜೊತೆ ಡೆಂಬೆಲೆ ಮಿಂಚಿನಾಟ:

ನಾರ್ವೆ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್‌ನ ಸ್ಟಾರ್ ಆಟಗಾರ ಉಸ್ಮಾನೆ ಡೆಂಬೆಲೆ ಮೊದಲಾರ್ಧದಲ್ಲೇ (7ನೇ, 20ನೇ ಮತ್ತು 32ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಪಂದ್ಯದ ಕೊನೆಯ ಕ್ಷಣದಲ್ಲಿ (90+4′ ನಿಮಿಷ) ಡೆಸಿರೆ ಡೌ ಯಂಗ್ ಬ್ಯಾಕ್ ಗೋಲು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಅಂದರೆ ಫ್ರಾನ್ಸ್ ತಂಡವು ಕೇವಲ ಎಂಬಾಪೆಯನ್ನು ಮಾತ್ರ ಅವಲಂಭಿಸಿಲ್ಲ. ಇತ್ತ ಎದುರಾಳಿಗಳು ಎಂಬಾಪೆಗಾಗಿ ರಣತಂತ್ರ ರೂಪಿಸುತ್ತಿದ್ದರೆ ಅತ್ತ ಕಡೆಯಿಂದ ಉಸ್ಮಾನೆ ಡೆಂಬೆಲೆ, ಡೆಸಿರೆ ಡೌ ಅಟ್ಯಾಕಿಂಗ್ ಆಟದೊಂದಿಗೆ ಎದುರಾಳಿಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಾರ್ವೆ ವಿರುದ್ಧದ ಪಂದ್ಯ.

ನಾರ್ವೆ ತಂಡದ ಡಿಫೆಂಡರ್​ಗಳು ಸೆಂಟರ್ ಫಾರ್ವರ್ಡ್​ನಲ್ಲಿ ಕಿಲಿಯನ್ ಎಂಬಾಪೆಯತ್ತ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು. ಆದರೆ ಗೋಲು ಬಾರಿಸಿದ್ದು ರೈಟ್ ವಿಂಗ್​ನಲ್ಲಿದ್ದ ಉಸ್ಮಾನೆ ಡೆಂಬೆಲೆ. ಇಲ್ಲಿ ಎಂಬಾಪೆ ಗೋಲು ಬಾರಿಸುವ ಬದಲು ಎರಡು ಅಸಿಸ್ಟ್​ಗಳನ್ನು ನೀಡಿದ್ದು ವಿಶೇಷ. ಅಂದರೆ ಎದುರಾಳಿಗಳ ತಂತ್ರಕ್ಕೆ ರಣತಂತ್ರ ರೂಪಿಸುವಲ್ಲಿ ಫ್ರಾನ್ಸ್ ಯಶಸ್ವಿಯಾಗಿದೆ ಎನ್ನಬಹುದು.

  • ಕಿಲಿಯನ್ ಎಂಬಾಪೆ: 4 ಗೋಲುಗಳು, 3 ಅಸಿಸ್ಟ್‌ಗಳು
  • ಉಸ್ಮಾನೆ ಡೆಂಬೆಲೆ: 4 ಗೋಲುಗಳು, 1 ಅಸಿಸ್ಟ್

ಫ್ರಾನ್ಸ್ ಎದುರಾಳಿ ಯಾರು?

ನಾರ್ವೆ ತಂಡವನ್ನು 4-1 ಗೋಲುಗಳಿಂದ ಸೋಲಿಸಿದ ಫ್ರಾನ್ಸ್, ತನ್ನ ಗ್ರೂಪ್‌ ಐ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ನಾಕೌಟ್ (ರೌಂಡ್ ಆಫ್ 32) ಹಂತದಲ್ಲಿ ಫ್ರಾನ್ಸ್ ತಂಡವು ಸ್ವೀಡನ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಕೋಚ್ ಚಿಂತಿಸಬೇಡಿ, ಮ್ಯಾಚ್ ಮುಗೀತು! ಇದು ವೈಭವ್ ಆತ್ಮ ವಿಶ್ವಾಸದ ಕಥೆ!

ಸ್ವೀಡನ್ ವಿರುದ್ಧ ಕೂಡ ಫ್ರಾನ್ಸ್ ಪಡೆ ಗೆದ್ದರೆ ಮುಂದಿನ ಹಂತದಲ್ಲಿ (ರೌಂಡ್ ಆಫ್ 16) ಜರ್ಮನಿ ಅಥವಾ ಪರಾಗ್ವೆ ತಂಡವನ್ನು ಎದುರಿಸುವ ಸಾಧ್ಯತೆ ಇದೆ.

Source link

ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ: ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ – Kannada News | Karnataka KPTCL’s Drone Tech Prevents 1.5 Lakh Faults, Boosts Power Supply Reliability

ಬೆಂಗಳೂರು, ಜೂ.27: ರಾಜ್ಯದಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮಹತ್ತರ ತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಇರುವ ಹೈ ವೋಲ್ಟೇಜ್ (HV) ಮತ್ತು ಎಕ್ಸ್‌ಟ್ರಾ ಹೈ ವೋಲ್ಟೇಜ್ (EHV) ವಿದ್ಯುತ್ ಪ್ರಸರಣ ಲೈನ್‌ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು (Drone Technology) ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ರಾಜ್ಯದಲ್ಲಿ ತಾಂತ್ರಿಕ ದೋಷಗಳಿಂದ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ ಎಂದು ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆಪಿಟಿಸಿಎಲ್ ಅಧಿಕಾರಿಗಳು ಇದುವರೆಗೆ ಸುಮಾರು 11,000 ವಿದ್ಯುತ್ ಪ್ರಸರಣ ಟವರ್​​ಗಳನ್ನು ಡ್ರೋನ್ ಮೂಲಕ ಯಶಸ್ವಿಯಾಗಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಮೊದಲೇ ಪತ್ತೆಹಚ್ಚಿ, ಅವುಗಳನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ. ಈ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಪ್ರಸರಣ ವಲಯದ ವಿದ್ಯುತ್ ವ್ಯತ್ಯಯ ಪ್ರಕರಣಗಳ ಸಂಖ್ಯೆ 519 ರಿಂದ ಕೇವಲ 73 ಕ್ಕೆ ಕುಸಿದಿದೆ. ಅಂದರೆ ವಿದ್ಯುತ್ ಕಡಿತದಲ್ಲಿ ಶೇ. 85 ರಷ್ಟು ಬೃಹತ್ ಇಳಿಕೆ ಕಂಡಂತಾಗಿದೆ. ಇದುವರೆಗೆ ಒಟ್ಟು 3,370 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ವಿದ್ಯುತ್ ಮಾರ್ಗವನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 2,500 ಕಿ.ಮೀ ಗೂ ಹೆಚ್ಚು 220 KV ಲೈನ್‌ಗಳು ಮತ್ತು 843 ಕಿ.ಮೀ ಉದ್ದದ 400 KV ಲೈನ್‌ಗಳು ಸೇರಿವೆ.

ನಮ್ಮ ಗಮನವು ಈಗ ವಿದ್ಯುತ್ ದೋಷ ಸಂಭವಿಸಿದ ನಂತರ ದುರಸ್ತಿ ಮಾಡುವುದಕ್ಕಿಂತ, ದೋಷ ಬರುವ ಮುನ್ನವೇ ಅಪಾಯಗಳನ್ನು ಗುರುತಿಸಿ ತಡೆಯುವುದರ ಕಡೆಗೆ ಬದಲಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಡ್ರೋನ್‌ಗಳಲ್ಲಿ ಅಳವಡಿಸಲಾಗಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ಸಿಸ್ಟಮ್ (ಶಾಖ ಪತ್ತೆ ಹಚ್ಚುವಿಕೆ) ಮತ್ತು ಲಿಡಾರ್ ಸೆನ್ಸಾರ್‌ಗಳು ದಟ್ಟವಾದ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗುವ ವಿದ್ಯುತ್ ತಂತಿಗಳು ಮತ್ತು ಇನ್ಸುಲೇಟರ್‌ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತವೆ. ಲೂಸ್ ಕನೆಕ್ಷನ್‌ಗಳಿಂದಾಗಿ ಉಂಟಾಗುವ ಅಸಹಜ ತಾಪಮಾನವನ್ನು ಈ ಥರ್ಮಲ್ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಈ ದತ್ತಾಂಶಗಳನ್ನು ಕೆಪಿಟಿಸಿಎಲ್‌ನ ಡಿಜಿಟಲ್ ವ್ಯವಸ್ಥೆಗೆ ಸೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಬರಲಿರುವ ‘ಡಿಜಿಟಲ್ ಟ್ವಿನ್ ಪ್ಲಾಟ್‌ಫಾರ್ಮ್’ ಮೂಲಕ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ಇಡೀ ರಾಜ್ಯದ ವಿದ್ಯುತ್ ಜಾಲವನ್ನು ರಿಯಲ್-ಟೈಮ್‌ನಲ್ಲಿ ಮೇಲ್ವಿಚಾರಣೆ ಮಾಡಬಹುದು.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಕುರಿತು ಮಾತನಾಡಿ, “ಕರ್ನಾಟಕದ ಸುಮಾರು 45,000 ಕಿಲೋಮೀಟರ್ ವ್ಯಾಪ್ತಿಯ ವಿಶಾಲವಾದ ವಿದ್ಯುತ್ ಪ್ರಸರಣ ಜಾಲವನ್ನು ಈ ಹಿಂದಿನ ವಿಧಾನಗಳಲ್ಲಿ ಪರಿಶೀಲಿಸುವುದು ಅತ್ಯಂತ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಆದರೆ ಥರ್ಮಲ್ ಇಮೇಜಿಂಗ್ ಮತ್ತು ಲಿಡಾರ್ ತಂತ್ರಜ್ಞಾನದ ಡ್ರೋನ್‌ಗಳ ಮೂಲಕ ನಾವು ಕೇವಲ ಕೆಲವೇ ಗಂಟೆಗಳಲ್ಲಿ 360 ಡಿಗ್ರಿಯ ಸಮಗ್ರ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಅತ್ಯಂತ ಸಣ್ಣ ದೋಷಗಳನ್ನೂ ಇವು ಪತ್ತೆಹಚ್ಚುತ್ತವೆ. ಈ ತಪಾಸಣೆ ಆಧಾರಿತದಿಂದ ವಿದ್ಯುತ್ ವ್ಯತ್ಯಯದಲ್ಲಿ ಶೇ. 85 ರಷ್ಟು ಇಳಿಕೆ ಸಾಧಿಸಿರುವುದು ಕೆಪಿಟಿಸಿಎಲ್‌ನ ಡಿಜಿಟಲ್ ರೂಪಾಂತರದ ಹಾದಿಯಲ್ಲಿ ಒಂದು ದೊಡ್ಡ ಮೈಲಿಗಲ್ಲು,” ಎಂದು ಶ್ಲಾಘಿಸಿದ್ದಾರೆ.

ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್‌ಗೆ ಸಿಗಲಿದೆ 1 ಲಕ್ಷ ರೂ. ಫಂಡ್

ರಾಜ್ಯದಲ್ಲಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಇಂಧನ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಉದ್ದೇಶಕ್ಕಾಗಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ಪ್ರತಿ ವಿಭಾಗಕ್ಕೆ ತಲಾ 1 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿವೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರಕಟಿಸಿದ್ದಾರೆ. ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನ ಮೂಲವೆಂದರೆ ಅದು ವಿದ್ಯುತ್. ದಿನದಿಂದ ದಿನಕ್ಕೆ ಇದರ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಸುರಕ್ಷತೆಯ ಬಗೆಗಿನ ಜಾಗೃತಿಯೂ ಸಾರ್ವಜನಿಕರಲ್ಲಿ ಬೆಳೆಯಬೇಕಿದೆ. ನಾವೆಲ್ಲರೂ ಒಟ್ಟಾಗಿ, ಹಂಚಿಕೆಯ ಜವಾಬ್ದಾರಿಯೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ,” ಎಂದು ಕರೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಚ್ ಚಿಂತಿಸಬೇಡಿ, ಮ್ಯಾಚ್ ಮುಗೀತು! ಇದು ವೈಭವ್ ಆತ್ಮ ವಿಶ್ವಾಸದ ಕಥೆ! – Kannada News | Sangakkara Recalls 15 Year Old Vaibhav’s Fearless IPL Chase

ಕ್ರಿಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಕುರಿತಾದ ಚರ್ಚೆಗಳು ಮುಂದುವರೆದಿದೆ. ಆದರೆ ಅದು ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯದ ವೇಳೆಯಲ್ಲ. ಬದಲಾಗಿ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ನಡುವೆ. ಈ ಪಂದ್ಯದ ವೇಳೆ ಕಾಮೆಂಟ್ರಿ ಬಾಕ್ಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವರು ‘ಸ್ಕೈ ಕ್ರಿಕೆಟ್’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಂಗಾಕ್ಕರ ವೈಭವ್ ಅವರ ‘ಮಹಾ ವಿಶ್ವಾಸ’ದ ಕಥೆ ಬಿಚ್ಚಿಟ್ಟಿದ್ದಾರೆ.

ಕೋಚ್ ಚಿಂತಿಸಬೇಡಿ, ಪಂದ್ಯ ಮುಗಿಯಿತು:

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಕಲೆಹಾಕಿದ್ದು ಬರೋಬ್ಬರಿ 220 ರನ್​ಗಳು.

ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಹೊರಡುವ ಮುನ್ನ 15 ವರ್ಷದ ವೈಭವ್ ಸೂರ್ಯವಂಶಿ, ಕೋಚ್ ಸಂಗಕ್ಕಾರ ಕಡೆಗೆ ಕಣ್ಣು ಹೊಡೆದು, “ಕೋಚ್, ನೀವು ಯೋಚನೆ ಮಾಡಬೇಡಿ. ಪಂದ್ಯ ಮುಗಿಯಿತು” ಎಂದು ಹೇಳಿ ಮೈದಾನಕ್ಕಿಳಿದಿದ್ದರು!

ಸಹ ಆಟಗಾರರಿಗೂ ಸೂಚನೆ:

221 ರನ್​ಗಳ ಬೃಹತ್ ಗುರಿ ಬೆನ್ನತ್ತಲು ಹೊರಟ್ಟಿದ್ದ ವೈಭವ್ ಸೂರ್ಯವಂಶಿ ಕೇವಲ ಕೋಚ್‌ಗೆ ಮಾತ್ರ ಧೈರ್ಯ ತುಂಬಿರಲಿಲ್ಲ. ಬದಲಾಗಿ ಡಗೌಟ್‌ನಲ್ಲಿದ್ದ ಸಹ ಆಟಗಾರರಾದ ಡೊನೊವನ್ ಫೆರೇರಾ ಮತ್ತು ಲುಹಾನ್-ಡ್ರೆ ಪ್ರಿಟೋರಿಯಸ್ ಬಳಿ ಹೋಗಿ, “ನೋಡಿ, ನಾನು ಇಂದು 13 ಸಿಕ್ಸರ್‌ಗಳನ್ನು ಬಾರಿಸುತ್ತೇನೆ. ನಾನು ಔಟಾಗಿ ಬಂದ ಬಳಿಕ, ಉಳಿದ ರನ್‌ಗಳನ್ನು ನೀವು ಹೊಡೆಯಿರಿ” ಎಂದು ಆತ್ಮವಿಶ್ವಾಸದಿಂದ ಹೇಳಿ ಹೊರಟ್ಟಿದ್ದರು.

ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಅಬ್ಬರಿಸುತ್ತಿದ್ದಂತೆ, ಅದರಲ್ಲೂ ಆರಂಭದಲ್ಲೇ 5 ಸಿಕ್ಸರ್ ಬಾರಿಸುವಷ್ಟರಲ್ಲಿ, ಡೊನೊವನ್ ಮತ್ತು ಪ್ರಿಟೋರಿಯಸ್ ಆಶ್ಚರ್ಯಚಕಿತರಾಗಿದ್ದರು. ಅಲ್ಲದೆ ಈ ಹುಡುಗ ಏನು ಮಾತನಾಡಿದ್ದಾನೆ, ಅದನ್ನೇ ಮಾಡ್ತಿದ್ದಾನೆ. ಇವನ ಸಿಕ್ಸರ್‌ಗಳನ್ನು ಕೌಂಟ್ ಡೌನ್ ಮಾಡಲು ಶುರು ಮಾಡುವುದು ಒಳಿತು. ಏಕೆಂದರೆ ಇವನು ಹೇಳಿದ್ದನ್ನು ನಿಜವಾಗಿಯೂ  ಮಾಡಿ ಮುಗಿಸಲು ಹೊರಟ್ಟಿದ್ದಾನೆ ಎಂದು ತಮ್ಮೊಳಗೆ ಮಾತನಾಡಿಕೊಂಡಿದ್ದರಂತೆ.

ಹೇಳಿದಂತೆ ಮಾಡಿ ತೋರಿಸಿದ ವೈಭವ್:

ವೈಭವ್ ಸೂರ್ಯವಂಶಿ ಹೇಳಿದಂತೆ ಈ ಪಂದ್ಯದಲ್ಲಿ ಅಬ್ಬರಿಸಿದ್ದರು.  ಅಲ್ಲದೆ ಕೇವಲ 48 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ ಭರ್ಜರಿ ಬೌಂಡರಿಗಳ ನೆರವಿನಿಂದ 93 ರನ್ ಚಚ್ಚಿದರು. ಕೇವಲ 3 ಸಿಕ್ಸರ್‌ಗಳಿಂದ ತಮ್ಮ 13 ಸಿಕ್ಸರ್‌ಗಳ ಭವಿಷ್ಯ ನುಡಿಯನ್ನು ಮಿಸ್ ಮಾಡಿಕೊಂಡರೂ, ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದು ಕೊಟ್ಟಿದ್ದರು.

ಇದನ್ನೂ ಓದಿ: 2.5 ವರ್ಷಗಳ ದಾಖಲೆಗೆ ಬ್ರೇಕ್: ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಲ್ಲ!

ಈ ಆತ್ಮ ವಿಶ್ವಾಸದವನ್ನೇ ಕುಮಾರ್ ಸಂಗಾಕ್ಕರ ಹಾಡಿ ಹೊಗಳಿದ್ದಾರೆ. ಅಲ್ಲದೆ ವೈಭವ್ ಸೂರ್ಯವಂಶಿ ಅವರ ಈ ಅದ್ಭುತ ಪ್ರದರ್ಶನ ಮತ್ತು ಅಪ್ರತಿಮ ಆತ್ಮವಿಶ್ವಾಸ, ಅವರು ಕೇವಲ ಒಬ್ಬ ಸಾಮಾನ್ಯ ಆಟಗಾರನಲ್ಲ, ಬದಲಿಗೆ ಕ್ರಿಕೆಟ್ ಜಗತ್ತನ್ನು ಆಳಲು ಬಂದಿರುವ ಭವಿಷ್ಯದ ಸೂಪರ್‌ಸ್ಟಾರ್ ಎಂದು ಸಂಗಾಕ್ಕರ ಭವಿಷ್ಯ ನುಡಿದಿದ್ದಾರೆ.

Source link

ಶಂಕಿತ ಉಗ್ರ ಸುಹೇಲ್‌ಗೆ ಎನ್‌ಐಎ ಗ್ರಿಲ್: ಮಹತ್ವದ ಮಾಹಿತಿ ಕಲೆಹಾಕಿದ ಅಧಿಕಾರಿಗಳು – Kannada News | NIA Grills Suspected Terrorist Suhail for an Hour in Karnataka’s Harihar; Court Grants 10 Days Custody

ಎನ್​ಐಎ ಹಾಗೂ ಶಂಕಿತ ಉಗ್ರ ಸುಹೇಲ್Image Credit source: tv9

ಬೆಂಗಳೂರು, ಜೂನ್ 27: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರ ಸುಹೇಲ್‌ನ ಜಾಲವನ್ನು ಬೇರುಸಹಿತ ಬಯಲಿಗೆಳೆಯಲು ರಾಷ್ಟ್ರೀಯ ತನಿಖಾ ದಳ (NIA) ಅಖಾಡಕ್ಕಿಳಿದಿದೆ. ಅಯೋಧ್ಯೆಯ ರಾಮಮಂದಿರ ಸ್ಫೋಟದ ಸಂಚು ಹಾಗೂ ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆಘಾತಕಾರಿ ಮಾಹಿತಿ ಹೊರಬಂದ ಬೆನ್ನಲ್ಲೇ, ಶುಕ್ರವಾರ ಹರಿಹರಕ್ಕೆ ಆಗಮಿಸಿದ ಎನ್‌ಐಎ ಅಧಿಕಾರಿಗಳ ವಿಶೇಷ ತಂಡವು ಶಂಕಿತ ಉಗ್ರನನ್ನು ಸುಮಾರು ಹೊತ್ತು ತೀವ್ರ ವಿಚಾರಣೆಗೆ ಒಳಪಡಿಸಿದೆ.

ಸಾಮಾಜಿಕ ಜಾಲತಾಣ ಹಾಗೂ ಬ್ಯಾಂಕ್ ಖಾತೆಗಳ ಜಾಲ ಜಪ್ತಿ

ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರ ಸುಹೇಲ್‌ನನ್ನು ಸುಮಾರು ಒಂದು ಗಂಟೆಯ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ತಿಳಿಸಿದ್ದಾರೆ. ವಿಚಾರಣೆ ವೇಳೆ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳು, ಸಂಶಯಾಸ್ಪದ ಇಂಟರ್ನೆಟ್ ಚಟುವಟಿಕೆಗಳು ಹಾಗೂ ಇತರ ಪ್ರಮುಖ ಬ್ಯಾಂಕ್ ಖಾತೆಗಳ ವಹಿವಾಟು ಸೇರಿದಂತೆ ವಿವಿಧ ಆಯಾಮಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಬನ್ನಿಕೋಡು ಗ್ರಾಮದ ಗುಟ್ಯಪ್ಪ ಎಂಬುವವರ ಮನೆಯಲ್ಲಿದ್ದ ಶಂಕಿತ ಉಗ್ರ ಸುಹೇಲ್​ನನ್ನು ಇತ್ತೀಚೆಗೆ ವಶಕ್ಕೆ ಪಡೆಯಲಾಗಿತ್ತು. ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕಾಗಿ ಬಂದಿದ್ದ 10 ಜನರ ತಂಡದಲ್ಲಿ ಈ ಸುಹೇಲ್ ಮಾತ್ರ ಅತ್ಯಂತ ಸಕ್ರಿಯನಾಗಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಕೋರ್ಟ್‌ನಿಂದ 10 ದಿನಗಳ ಕಸ್ಟಡಿ

ಸ್ಥಳೀಯ ಪೊಲೀಸರು ಹಾಗೂ ಎನ್‌ಐಎ ಜಂಟಿ ಕಾರ್ಯಾಚರಣೆಯ ಬಳಿಕ ಆರೋಪಿ ಸುಹೇಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಈತನ ದೇಶದ್ರೋಹಿ ಸಂಚು ಹಾಗೂ ಅಂತಾರಾಷ್ಟ್ರೀಯ ಲಿಂಕ್‌ಗಳ ಬಗ್ಗೆ ಇನ್ನಷ್ಟು ಆಳವಾದ ತನಿಖೆ ನಡೆಯಲಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ

ಸದ್ಯದ ವಿಚಾರಣೆಯ ವೇಳೆ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಅತ್ಯಂತ ಪ್ರಮುಖ ಹಾಗೂ ರಹಸ್ಯ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ಒಳನಾಡಿನ ಇತರ ಭಾಗಗಳಲ್ಲೂ ತನಿಖೆ ಚುರುಕುಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗದಗ ಮಠದಲ್ಲಿ ಹೈಡ್ರಾಮಾ: ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಬಿಗ್‌ ಟ್ವಿಸ್ಟ್‌! – Kannada News | Gadag Mutt Controversy: Trustees Deny Threat Allegations by Kallayya Ajja

ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಬಿಗ್‌ ಟ್ವಿಸ್ಟ್‌!

ಗದಗ, ಜೂನ್ 27: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಗದಗದ (Gadag) ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದಲ್ಲಿ ಪೀಠಾಧಿಪತಿ ಮತ್ತು ಟ್ರಸ್ಟಿಗಳ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ. ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಕಣ್ಣೀರು ಹಾಕಿದ ಬೆನ್ನಲ್ಲೇ, ಮಠದ ಮೂವರು ಪ್ರಮುಖ ಟ್ರಸ್ಟಿಗಳು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದು, ಶ್ರೀಗಳ ವಿರುದ್ಧವೇ ಗಂಭೀರ ಹಗರಣಗಳ ತಿರುಗೇಟು ನೀಡಿದ್ದಾರೆ.

ಶ್ರೀಗಳ ಆರೋಪ ಶುದ್ಧ ಸುಳ್ಳು; ನಾವು ಗೂಂಡಾಗಳಲ್ಲ: ಟ್ರಸ್ಟಿಗಳ ಸ್ಪಷ್ಟನೆ

ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮಗೆ ಮೂವರು ಟ್ರಸ್ಟಿಗಳಿಂದ ಜೀವ ಬೆದರಿಕೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಟಿವಿ9 ಮೂಲಕ ಸ್ಪಷ್ಟನೆ ನೀಡಿರುವ ಟ್ರಸ್ಟಿಗಳಾದ ವಸಂತಗೌಡ, ಶಿವರುದ್ರಪ್ಪ ಇಟಗಿ ಹಾಗೂ ಪ್ರಕಾಶ್ ಬಸರಿಗಿಡದ, ನಾವು ರೌಡಿಗಳು ಅಥವಾ ಗೂಂಡಾಗಳಲ್ಲ, 40 ವರ್ಷಗಳಿಂದ ಮಠಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಭಕ್ತರು. ಶ್ರೀಗಳು ಯಾರದ್ದೋ ಪ್ರೇರಣೆಯಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಟ್ರಸ್ಟಿ ಶಿವರುದ್ರಪ್ಪ ಇಟಗಿ ಮಾತನಾಡಿ, ಶ್ರೀಗಳಿಂದ ನಾನು 10 ಲಕ್ಷ ರೂಪಾಯಿ ಹಣ ಕೇಳಿಲ್ಲ. ನಾನೇ ಮಠಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇನೆ. ಮಠದಲ್ಲಿ ನಡೆಯಬಾರದ ಘಟನೆಗಳು ನಡೆದಾಗ ಧ್ವನಿ ಎತ್ತಿದ್ದಕ್ಕೆ ನನ್ನ ಧ್ವನಿ ಅಡಗಿಸಲು ಈ ಹುನ್ನಾರ ನಡೆಸಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ನಡೆದಿದ್ದೇನು?

ಕೆಲ ದಿನಗಳ ಹಿಂದೆ ಪೀಠಾಧಿಪತಿ ಕಲ್ಲಯ್ಯಜ್ಜನವರು ಟ್ರಸ್ಟಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ನಾನು ಪೀಠಾಧಿಪತಿಯಾದಾಗ ಮಠಕ್ಕೆ 59 ಲಕ್ಷ ರೂ. ಸಾಲವಿತ್ತು, ಅದನ್ನು ತೀರಿಸಿ ಈಗ 4 ಕೋಟಿ ರೂ. ಬ್ಯಾಂಕ್ ಠೇವಣಿ ಇಟ್ಟಿದ್ದೇನೆ. ಮಠದ ಪ್ರತಿಯೊಂದು ಪೈಸೆಗೂ ಲೆಕ್ಕ ಇಟ್ಟಿದ್ದರೂ ನನ್ನ ಕುರಿತು ಅಪಪ್ರಚಾರ ಮಾಡಿ, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಶ್ರೀಗಳು ಆರೋಪಿಸಿದ್ದರು.

ಹಣ ದುರುಪಯೋಗದ ಗಂಭೀರ ಆರೋಪ

ಆದರೆ ಟ್ರಸ್ಟಿಗಳು ಪೀಠಾಧಿಪತಿಗಳ ವಿರುದ್ಧವೇ ಗಂಭೀರ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿದ್ದಾರೆ. ಕಲ್ಲಯ್ಯಜ್ಜನವರು ಮಠದ ಶಿಕ್ಷಣ ಸಂಸ್ಥೆಗೆ ಸೇರಿದ 11 ಗುಂಟೆ ಬೆಲೆಬಾಳುವ ಜಮೀನನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆ ಹಾಗೂ ಸಂಸ್ಥೆಯ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಟ್ರಸ್ಟಿ ಶಿವರುದ್ರಪ್ಪ ಆರೋಪಿಸಿದ್ದಾರೆ. ಈ ಹಗರಣದ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿರುವ ಅವರು, ತಾವು ಗದ್ದಿಗೆ ಮುಟ್ಟಿ ಆಣೆ ಮಾಡಲು ಸಿದ್ಧ ಎಂದಿದ್ದಾರೆ.

ಇದನ್ನೂ ಓದಿ ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ: ಹಣ ನೀಡುವಂತೆ ಮಾನಸಿಕ ಹಿಂಸೆ?

ಮತ್ತೊಬ್ಬ ಟ್ರಸ್ಟಿ ಪ್ರಕಾಶ್ ಬಸರಿಗಿಡದ ಮಾತನಾಡಿ, ನಮ್ಮ ಅಜ್ಜ ಮಠಕ್ಕೆ ಜಮೀನು ದಾನ ಮಾಡಿದ್ದರು. ಅವರ ಗದ್ದುಗೆ ಬಳಿ ಬಾವಿ ತೋಡಲು ಯತ್ನಿಸಿದ್ದನ್ನು ನಾವು ವಿರೋಧಿಸಿದ್ದಕ್ಕೆ ಈ ಸುಳ್ಳು ದೂರು ನೀಡಲಾಗಿದೆ. ವಾಸ್ತವವಾಗಿ ಶ್ರೀಗಳಿಂದಲೇ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುತ್ತುವರೆದ ಕೋತಿಗಳು, ಭಯದಿಂದ ಹಿಂದೆ ಕಾಲಿಟ್ಟು ಆಯತಪ್ಪಿ ಬೆಟ್ಟದ ಮೇಲಿಂದ ಬಿದ್ದು ನವವಿವಾಹಿತೆ ಸಾವು – Kannada News | Newlywed Dies After Monkey Attack Fall in Kazhugumalai, Thoothukudi Tragedy

ತೂತುಕುಡಿ, ಜೂನ್ 27: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಶನಿವಾರ ಒಂದು ಘೋರ ದುರಂತ ಸಂಭವಿಸಿದೆ. ಕೋತಿ(Monkey)ಗಳ ಹಿಂಡು ದಿಢೀರ್ ಸುತ್ತುವರೆದಿದ್ದರಿಂದ ಗಾಬರಿಗೊಂಡು ಸಮತೋಲನ ಕಳೆದುಕೊಂಡ ನವವಿವಾಹಿತೆ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ದುರ್ದೈವಿಯನ್ನು ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಎಂದು ಗುರುತಿಸಲಾಗಿದೆ. ಇವರಿಗೆ ಕಳೆದ ತಿಂಗಳಷ್ಟೇ ವಿದೇಶದಲ್ಲಿ ಕೆಲಸ ಮಾಡುವ ಸುರೇಶ್ (29) ಅವರೊಂದಿಗೆ ವಿವಾಹವಾಗಿತ್ತು. ಸುರೇಶ್ ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು. ದಂಪತಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ, ಇಬ್ಬರೂ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ಹತ್ತಿದ್ದರು. ಈ ವೇಳೆ ಅಲ್ಲಿ ನವದಂಪತಿ ಕೋತಿಗಳಿಗೆ ಹಣ್ಣುಗಳನ್ನು ತಿನ್ನಿಸಲು ಮುಂದಾಗಿದ್ದಾರೆ. ಆದರೆ, ಹಣ್ಣುಗಳನ್ನು ನೋಡಿ ಕದನಕ್ಕಿಳಿದ ಹತ್ತಾರು ಕೋತಿಗಳು ಇದ್ದಕ್ಕಿದ್ದಂತೆ ಅನಿತಾ ಅವರನ್ನು ಅತ್ಯಂತ ಹತ್ತಿರದಿಂದ ಸುತ್ತುವರೆದಿವೆ. ಇದರಿಂದ ತೀವ್ರ ಭಯಭೀತರಾದ ಅನಿತಾ, ಕೋತಿಗಳಿಂದ ತಪ್ಪಿಸಿಕೊಳ್ಳಲು ಹಿಂದೆ ಸರಿಯುವಾಗ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾರೆ.

ಮತ್ತಷ್ಟು ಓದಿ: ನಾಯಿ ಮರಿಯನ್ನು ಎತ್ತಿಕೊಂಡು ಮರದ ಮೇಲೆ ಹೋಗಿ ಕುಳಿತ ಕೋತಿ

ಬೆಟ್ಟದಿಂದ ಬಿದ್ದ ಅನಿತಾ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ಪತ್ನಿ ಸಾವನ್ನಪ್ಪಿದ್ದನ್ನು ಕಂಡು ಪತಿ ಸುರೇಶ್ ಸಂಪೂರ್ಣ ಧೃತಿಗೆಟ್ಟಿದ್ದು, ಮೃತದೇಹದ ಪಕ್ಕದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೊಂದು ವ್ಯಾಪಾರ ಯುದ್ಧ, ಟ್ರಂಪ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ ಗೊತ್ತಾ? – Kannada News | Trump’s Digital Tax Threat: US Warns Europe with 100percent Tariffs, Trade War Ahead

ವಾಷಿಂಗ್ಟನ್, ಜೂನ್ 27: ಗೂಗಲ್, ಮೆಟಾ, ಅಮೆಜಾನ್‌ನಂತಹ ಅಮೆರಿಕದ ದೈತ್ಯ ತಂತ್ರಜ್ಞಾನ ಕಂಪನಿಗಳನ್ನು ಗುರಿಯಾಗಿಸಿಕೊಂಡು ಹೊಸ ‘ಡಿಜಿಟಲ್ ಸೇವಾ ತೆರಿಗೆ’ (Digital Services Tax) ವಿಧಿಸಲು ಮುಂದಾಗಿರುವ ಯುರೋಪಿಯನ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಆರ್ಥಿಕ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಮೆರಿಕನ್ ಕಂಪನಿಗಳಿಗೆ ತೆರಿಗೆ ವಿಧಿಸುವ ಯಾವುದೇ ದೇಶದ ಸರಕುಗಳ ಮೇಲೆ ವಾಷಿಂಗ್ಟನ್ ತಕ್ಷಣವೇ ಬರೋಬ್ಬರಿ ಶೇ. 100 ರಷ್ಟು ಆಮದು ಸುಂಕ ವಿಧಿಸಲಿದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಆರ್ಭಟ
ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಕಂಪನಿಗಳ ಮೇಲೆ ತೆರಿಗೆಗಳನ್ನು ಪರಿಚಯಿಸಲು ಸಜ್ಜಾಗುತ್ತಿರುವುದನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್, ತಮ್ಮ ಪೋಸ್ಟ್‌ನಲ್ಲಿ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. ಯಾವ ದೇಶವಾದರೂ ನಮ್ಮ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಿದರೆ, ಆ ದೇಶದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೆ ರಫ್ತಾಗುವ ಪ್ರತಿಯೊಂದು ಸರಕಿನ ಮೇಲೂ ತಕ್ಷಣವೇ ಶೇ. 100 ರಷ್ಟು ಸುಂಕ ಹೇರಲಾಗುವುದು. ಈ ಹೊಸ ಕಟ್ಟುನಿಟ್ಟಿನ ನೀತಿಯು ಈ ಹಿಂದೆ ಮಾಡಿಕೊಳ್ಳಲಾದ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಅತಿಕ್ರಮಿಸಿ ಜಾರಿಗೆ ಬರಲಿದೆ.

ಇತ್ತೀಚಿನ ದಿನಗಳಲ್ಲಿ ಯುರೋಪ್‌ನ ಹಲವು ದೇಶಗಳು ತಮ್ಮ ಮಾರುಕಟ್ಟೆಯಲ್ಲಿ ಆನ್‌ಲೈನ್ ಜಾಹೀರಾತು, ಇಂಟರ್ನೆಟ್ ಸೇವೆಗಳು ಹಾಗೂ ಡಿಜಿಟಲ್ ಮಾರ್ಕೆಟ್‌ಗಳ ಮೂಲಕ ಭಾರಿ ಆದಾಯ ಗಳಿಸುವ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಹೊಸ ನಿಯಮಗಳನ್ನು ರೂಪಿಸುತ್ತಿವೆ.

ಮತ್ತಷ್ಟು ಓದಿ: ನನ್ನೊಂದಿಗೆ ಫ್ರೆಂಡ್ ಆಗಲು ಮೆಲೋನಿ ಹಾತೊರೆಯುತ್ತಿದ್ದಾರೆ! ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಈ ಡಿಜಿಟಲ್ ತೆರಿಗೆಗಳ ವ್ಯಾಪ್ತಿಗೆ ಬರುವ ಬಹುತೇಕ ಎಲ್ಲಾ ಪ್ರಮುಖ ಕಂಪನಿಗಳು ಅಮೆರಿಕ ಮೂಲದ ಸಂಸ್ಥೆಗಳೇ ಆಗಿವೆ. ಹೀಗಾಗಿ ಈ ಹೊಸ ತೆರಿಗೆಗಳು ಕೇವಲ ಅಮೆರಿಕದ ತಂತ್ರಜ್ಞಾನ ದೈತ್ಯರನ್ನು ಮಾತ್ರ ಅನ್ಯಾಯವಾಗಿ ಮತ್ತು ಅಸಮಾನವಾಗಿ ಗುರಿಯಾಗಿಸಿಕೊಂಡಿವೆ ಎಂಬುದು ಟ್ರಂಪ್​ ವಾದವಾಗಿದೆ.

ಇಡೀ ವಿಶ್ವದ ಆರ್ಥಿಕತೆಗೆ ಹೊಸ ತಲ್ಲಣ
ಸದ್ಯ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಹಳೆಯ ಅಂತರರಾಷ್ಟ್ರೀಯ ತೆರಿಗೆ ನಿಯಮಗಳು ಇಂದಿನ ಆಧುನಿಕ ಡಿಜಿಟಲ್ ಆರ್ಥಿಕತೆಗೆ ಹೊಂದಿಕೆಯಾಗುತ್ತಿಲ್ಲ. ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು ಸ್ಥಳೀಯವಾಗಿ ನ್ಯಾಯಯುತ ತೆರಿಗೆಯನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಹೊಸ ನಿಯಮಗಳು ಅತ್ಯಗತ್ಯ ಎಂದು ಯುರೋಪಿಯನ್ ಸರ್ಕಾರಗಳು ವಾದಿಸುತ್ತಿವೆ.

ಟ್ರಂಪ್ ಅವರ ಈ ಇತ್ತೀಚಿನ ಶೇ. 100 ರಷ್ಟು ಸುಂಕದ ಬೆದರಿಕೆಯು ಅಮೆರಿಕ ಮತ್ತು ಯುರೋಪ್ ನಡುವೆ ಮತ್ತೊಂದು ಸುತ್ತಿನ ಭೀಕರ ಆರ್ಥಿಕ ಮತ್ತು ವ್ಯಾಪಾರ ಉದ್ವಿಗ್ನತೆಗೆ ಕಾರಣವಾಗುವ ಎಲ್ಲಾ ಲಕ್ಷಣಗಳನ್ನು ಎದ್ದು ಕಾಣಿಸುತ್ತಿದೆ. ಒಂದು ವೇಳೆ ಯುರೋಪ್ ರಾಷ್ಟ್ರಗಳು ಈ ತೆರಿಗೆಯನ್ನು ಜಾರಿಗೊಳಿಸಿ, ಅಮೆರಿಕ ಸುಂಕ ವಿಧಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2.5 ವರ್ಷಗಳ ದಾಖಲೆಗೆ ಬ್ರೇಕ್: ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಲ್ಲ! – Kannada News | India Fail to Win a T20I Series For First Time Since Dec 2023

ಭಾರತ ತಂಡವು ಕೊನೆಗೂ ಐರ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿದೆ. ಅದು ಕೂಡ 10 ಪಂದ್ಯಗಳ ಬಳಿಕ. ಅಂದರೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ 10 ಬಾರಿ ಮುಖಾಮುಖಿಯಾಗಿತ್ತು. ಈ ವೇಳೆ ಹತ್ತು ಪಂದ್ಯಗಳಲ್ಲೂ ಜಯ ಸಾಧಿಸಿತ್ತು. ಆದರೆ 11ನೇ ಮ್ಯಾಚ್​ನಲ್ಲಿ ಭಾರತ ತಂಡಕ್ಕೆ ಸೋಲುಣಿಸುವಲ್ಲಿ ಐರ್ಲೆಂಡ್ ತಂಡ ಯಶಸ್ವಿಯಾಗಿದೆ. ಈ ಯಶಸ್ಸಿನೊಂದಿಗೆ ಐರಿಷ್ ಪಡೆ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಸರಣಿಯನ್ನು ಡ್ರಾ ಮಾಡಿಕೊಳ್ಳಲಿದೆ.

ಟೀಮ್ ಇಂಡಿಯಾ ಸರಣಿ ಗೆಲ್ಲಲ್ಲ!

ಭಾರತ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವುದು 2 ಪಂದ್ಯಗಳ ಟಿ20 ಸರಣಿ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಐರ್ಲೆಂಡ್ ಗೆದ್ದಿದೆ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ ಸರಣಿ 1-1 ಅಂತರದಿಂದ ಸಮಗೊಳ್ಳಲಿದೆ. ಹೀಗಾಗಿ ಈ ಬಾರಿ ಭಾರತ ತಂಡಕ್ಕೆ ಸರಣಿ ಗೆಲ್ಲಲು ಯಾವುದೇ ಅವಕಾಶ ಇರುವುದಿಲ್ಲ.

ಮತ್ತೊಂದೆಡೆ ದ್ವಿತೀಯ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಸೋಲುಣಿಸಿದರೆ ಐರ್ಲೆಂಡ್ ತಂಡವು ಹೊಸ ಬರೆಯಬಹುದು. ಅಂದರೆ 2-0 ಅಂತರದಿಂದ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಸರಣಿ ಗೆಲ್ಲುವ ಅವಕಾಶ ಐರ್ಲೆಂಡ್ ಮುಂದಿದೆ.

2.5 ವರ್ಷಗಳ ದಾಖಲೆಗೆ ಬ್ರೇಕ್:

ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿನ ಸೋಲಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ 12 ಸರಣಿಗಳನ್ನು ಗೆದ್ದು ಬೀಗಿದ್ದ ಟೀಮ್ ಇಂಡಿಯಾದ ಅಜೇಯ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.

ಡಿಸೆಂಬರ್ 2023ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು 1-1 ರಿಂದ ಡ್ರಾ ಮಾಡಿಕೊಂಡ ನಂತರ, ಭಾರತ ಆಡಿದ ಎಲ್ಲಾ 12 ಟಿ20 ಸರಣಿಗಳನ್ನು ಸತತವಾಗಿ ಗೆದ್ದುಕೊಂಡಿತ್ತು. ಆದರೆ ಕೇವಲ 2 ಪಂದ್ಯಗಳ ಈ ಸಣ್ಣ ಸರಣಿಯ ಮೊದಲ ಪಂದ್ಯದಲ್ಲೇ ಸೋತಿರುವುದರಿಂದ, ಭಾರತಕ್ಕೆ ಈಗ ಈ ಸರಣಿಯನ್ನು ಗೆಲ್ಲಲು ಸಾಧ್ಯವಿಲ್ಲ.

ಜೂನ್ 28ರಂದು ನಡೆಯಲಿರುವ ಮುಂದಿನ ಪಂದ್ಯವನ್ನು ಗೆದ್ದರೆ ಮಾತ್ರ ಸರಣಿಯನ್ನು 1-1 ರಿಂದ ಸಮಬಲ ಮಾಡಿಕೊಳ್ಳಬಹುದಾಗಿದೆ.

ಹೀಗಾಗಿ ಈ ಸರಣಿಯ ದ್ವಿತೀಯ ಮ್ಯಾಚ್ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು ಡ್ರಾ ಮಾಡಿಕೊಳ್ಳಬಹುದು. ಹಾಗಾಗಿ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಅಭಿಷೇಕ್ ಆರ್ಭಟಕ್ಕೆ ಧಗ್ಗರು ದಾಂಡಿಗರ ದಾಖಲೆ ಧೂಳೀಪಟ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Source link

ಗದಗ: ಮಹಿಳೆಯರ ಕೂಡಿ ಹಾಕಿ ಥಳಿಸಿದ ಮೀಟರ್ ಬಡ್ಡಿ ದಂಧೆಕೋರರು, ಎಸ್ಪಿ ಕಚೇರಿ ಎದುರು ಸಂತ್ರಸ್ತೆಯರ ಕಣ್ಣೀರು – Kannada News | Gadag Meter Baddi Row: Loan Sharks Lock Up and Assault Two Women for Missing Interest Payments

ಸಾಂದರ್ಭಿಕ ಚಿತ್ರ ಹಾಗೂ ಆರೋಪಿ ಸಿದ್ದಯ್ಯ ಹೊಸಮನಿImage Credit source: tv9

ಗದಗ, ಜೂನ್ 27: ಗದಗ (Gadag) ಜಿಲ್ಲೆಯಲ್ಲಿ ಸಾರ್ವಜನಿಕರ ಜೀವ ಹಿಂಡುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚೆಗಷ್ಟೇ ಬಡ್ಡಿ ಕುಳಗಳ ವಿರುದ್ಧ ಸಮರ ಸಾರಿ ಬೃಹತ್ ದಾಳಿಗಳನ್ನು ನಡೆಸಿದ್ದರೂ ಸಹ ದಂಧೆಕೋರರು ಮಾತ್ರ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದೀಗ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ವಾರದ ಬಡ್ಡಿ ಹಣ ನೀಡದಿದ್ದಕ್ಕೆ ಇಬ್ಬರು ಅಸಹಾಯಕ ಮಹಿಳೆಯರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಂಧೆಕೋರರ ಕೈಯಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಮಹಿಳೆಯರು ಇಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಸುರಿಸುತ್ತಾ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಲಕ್ಷಾಂತರ ರೂಪಾಯಿ ಸಾಲ; ವಾರಕ್ಕೆ ಸಾವಿರಾರು ರೂಪಾಯಿ ಬಡ್ಡಿ

ಶಿರೋಳ ಗ್ರಾಮದ ನಿವಾಸಿಗಳಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಹಲ್ಲೆಗೊಳಗಾದ ಮಹಿಳೆಯರಾಗಿದ್ದಾರೆ. ಇವರು ಅದೇ ಗ್ರಾಮದ ಅಕ್ರಮ ಬಡ್ಡಿ ದಂಧೆಕೋರ ಸಿದ್ದಯ್ಯ ಹೊಸಮನಿ ಹಾಗೂ ಆತನ ಮಗ ವಿನೋದ್ ಹೊಸಮನಿ ಎಂಬವರಿಂದ ಸಾಲ ಪಡೆದುಕೊಂಡಿದ್ದರು. ಆರೋಪಿತ ಸಿದ್ದಯ್ಯ ಹೊಸಮನಿ, ಸಂತ್ರಸ್ತೆ ಮಹಾದೇವಿ ಮಠದ ಅವರಿಗೆ 1.50 ಲಕ್ಷ ರೂಪಾಯಿ ಸಾಲ ನೀಡಿ ವಾರಕ್ಕೆ ಬರೊಬ್ಬರಿ 4,500 ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದ. ಇತ್ತ ಮತ್ತೊಬ್ಬ ಮಹಿಳೆ ಬಸವಣ್ಣೆಮ್ಮ ಅವರಿಗೆ 3 ಲಕ್ಷ ರೂಪಾಯಿ ಸಾಲ ನೀಡಿ ಪ್ರತಿ ವಾರಕ್ಕೆ 9,000 ರೂಪಾಯಿಗಳ ಭಾರಿ ಬಡ್ಡಿಯನ್ನು ಕಿತ್ತುಕೊಳ್ಳುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಮಹಿಳೆಯರು ನಿಯಮಿತವಾಗಿ ಕಷ್ಟಪಟ್ಟು ಬಡ್ಡಿ ಹಣವನ್ನು ಪಾವತಿಸಿಕೊಂಡು ಬಂದಿದ್ದರು.

ಮೂರು ತಿಂಗಳ ಬಡ್ಡಿ ಬಾಕಿಗೆ ಮೃಗೀಯ ವರ್ತನೆ

ಕಳೆದ ಮೂರು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಮಹಿಳೆಯರಿಗೆ ವಾರದ ಬಡ್ಡಿ ಹಣವನ್ನು ಸರಿಯಾಗಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪೋದ್ರಿಕ್ತರಾದ ಸಿದ್ದಯ್ಯ ಹೊಸಮನಿ ಮತ್ತು ಆತನ ಮಗ ವಿನೋದ್, ಮಹಿಳೆಯರನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ, ಹೊರಗಿನಿಂದ ಲಾಕ್ ಮಾಡಿ ಮೃಗಗಳಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ದಂಧೆಕೋರರ ದೌರ್ಜನ್ಯದಿಂದ ಬಚಾವ್‌ ಆಗಿ ಬಂದ ಮಹಿಳೆಯರು ತಕ್ಷಣವೇ ನ್ಯಾಯಕ್ಕಾಗಿ ನರಗುಂದ ಪೊಲೀಸ್ ಠಾಣೆಗೆ ಧಾವಿಸಿದ್ದರು. ಆದರೆ, ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ಉದ್ಧಟತನ ತೋರಿದ್ದಾರೆ ಎಂದು ಸಂತ್ರಸ್ತೆಯರು ಗಂಭೀರ ಆರೋಪ ಮಾಡಿದ್ದಾರೆ. ಸ್ಟೇಷನ್‌ನಲ್ಲಿ ನ್ಯಾಯ ಸಿಗದ ಕಾರಣ ಅಸಹಾಯಕ ಮಹಿಳೆಯರು ಗದಗ ಎಸ್ಪಿ ಕಚೇರಿಗೆ ಬಂದು ಕಣ್ಣೀರಿಡುತ್ತಾ ‘ನಮಗೆ ಬಡ್ಡಿಕೋರರಿಂದ ರಕ್ಷಣೆ ನೀಡಿ, ನ್ಯಾಯ ಕೊಡಿಸಿ’ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮುಂದುವರಿದ ಬಡ್ಡಿ ದಂಧೆಯ ಸರಣಿ

ಗದಗ ಜಿಲ್ಲೆಯಲ್ಲಿ ಇಂತಹ ಅಕ್ರಮ ಹಣಕಾಸು ಜಾಲಗಳು ಸಾರ್ವಜನಿಕರನ್ನು ಪೀಡಿಸುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗದಗ ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿಕೊಂಡು ಅಕ್ರಮ ಬಡ್ಡಿ ದಂಧೆಕೋರ ಮನೋಹರ್ ಕಟ್ಟಿಮನಿ ಎಂಬಾತನ ಮನೆ ಮತ್ತು ಕಚೇರಿಗಳ ಮೇಲೆ ಭರ್ಜರಿ ದಾಳಿ ನಡೆಸಿದ್ದರು. ಆ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ ಪೇಪರ್‌ಗಳು, 422 ಗ್ರಾಂ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಖಾಕಿ ಸಮರ: ಕಂತೆ ಕಂತೆ ಹಣ, ಚಿನ್ನಾಭರಣ ಕಂಡು ಶಾಕ್​​!

ಆದರೂ ಸಹ ಗ್ರಾಮೀಣ ಭಾಗಗಳಲ್ಲಿ ಇಂತಹ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ನಿಂತಿಲ್ಲ ಎನ್ನುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಎಸ್ಪಿ ಕಚೇರಿ ಮೆಟ್ಟಿಲೇರಿರುವ ಈ ಮಹಿಳೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version