ಒಳನುಸುಳುವಿಕೆ, ಜನಸಂಖ್ಯೆ ಬದಲಾವಣೆ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ; ಅಮಿತ್ ಶಾ ಘೋಷಣೆ – Kannada News | Amit Shah announced high level committee to examine demographic change in India

ನವದೆಹಲಿ, ಮೇ 26: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ದೇಶದ ಜನಸಂಖ್ಯೆಯಲ್ಲಿ ಆಗುತ್ತಿರುವ ಆತಂಕಕಾರಿ ಬದಲಾವಣೆಗಳು ಮತ್ತು ಒಳನುಸುಳುವಿಕೆ (Infiltration) ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಈ ಸಮಸ್ಯೆಯನ್ನು ಎದುರಿಸಲು ವಿಶೇಷ ಸಮಿತಿಯೊಂದನ್ನು ರಚಿಸಿರುವುದಾಗಿ ಘೋಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಸಭೆಯೊಂದರಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಗಡಿಭಾಗದ ಮೂಲಕ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ ದೇಶದ ಆಂತರಿಕ ಭದ್ರತೆಗೆ ಮತ್ತು ಸಾಮಾಜಿಕ ಸಮತೋಲನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಒಳನುಸುಳುವಿಕೆ ಗಡಿ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತಿದೆ ಎಂದು ಅಮಿತ್ ಶಾ ಬೇಸರ ವ್ಯಕ್ತಪಡಿಸಿದರು. ಹಾಗೇ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮತ್ತು ಗಡಿಭಾಗದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಅನುಪಾತವು ತೀರಾ ಅಸಹಜವಾದ ರೀತಿಯಲ್ಲಿ ಬದಲಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಅಸಹಜ ಜನಸಂಖ್ಯಾ ಬದಲಾವಣೆಯ ಹಿಂದಿನ ನಿಖರವಾದ ಕಾರಣಗಳು, ನುಸುಳುವಿಕೆಯ ಪ್ರಮಾಣ ಮತ್ತು ಅದರ ಭೌಗೋಳಿಕ ಪ್ರಭಾವಗಳನ್ನು ಆಳವಾಗಿ ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಮೇ 5ರ ನಂತರ ಹೆಣ್ಣುಮಕ್ಕಳು ಭಯವಿಲ್ಲದೆ ಮಧ್ಯರಾತ್ರಿ 1 ಗಂಟೆಗೂ ಹೊರಗೆ ಓಡಾಡಬಹುದು; ಅಮಿತ್ ಶಾ ಭರವಸೆ

ಈ ಸಮಿತಿಯು ಗಡಿಭಾಗದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಡೇಟಾ ಪರಿಶೀಲಿಸಲಿದೆ. ಅಕ್ರಮವಾಗಿ ವಲಸೆ ಬಂದು ನೆಲೆಸಿರುವವರನ್ನು ಪತ್ತೆಹಚ್ಚಲು ಹಾಗೂ ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರಕ್ಕೆ ಅಗತ್ಯ ಶಿಫಾರಸುಗಳನ್ನು ನೀಡಲಿದೆ. ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಗಡಿ ಭದ್ರತಾ ಪಡೆಗಳಿಗೆ (BSF ಮತ್ತು ಇತರ ರಕ್ಷಣಾ ಸಂಸ್ಥೆಗಳಿಗೆ) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಅಮಿತ್ ಶಾ ಅವರ ಪೋಸ್ಟ್ ಇಲ್ಲಿದೆ:

ಗಡಿಭಾಗಗಳಲ್ಲಿ ತಂತ್ರಜ್ಞಾನ ಆಧಾರಿತ ಕಣ್ಗಾವಲು, ಡ್ರೋನ್ ಬಳಕೆಯ ಹೆಚ್ಚಳ ಮತ್ತು ಫೆನ್ಸಿಂಗ್ ಕಾರ್ಯಗಳನ್ನು ಚುರುಕುಗೊಳಿಸಲು ಆದೇಶಿಸಲಾಗಿದೆ ಎಂದಿದ್ದಾರೆ. ಯಾವುದೇ ರಾಜಕೀಯ ಅಥವಾ ಪ್ರಾದೇಶಿಕ ಒತ್ತಡಗಳಿಗೆ ಮಣಿಯದೆ, ದೇಶದ ಸುರಕ್ಷತೆಯ ಹಿತದೃಷ್ಟಿಯಿಂದ ಅಕ್ರಮ ವಲಸಿಗರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮೇ 5ರ ನಂತರ ಹೆಣ್ಣುಮಕ್ಕಳು ಭಯವಿಲ್ಲದೆ ಮಧ್ಯರಾತ್ರಿ 1 ಗಂಟೆಗೂ ಹೊರಗೆ ಓಡಾಡಬಹುದು; ಅಮಿತ್ ಶಾ ಭರವಸೆ

ಅಮಿತ್ ಶಾ ಅವರ ಈ ಘೋಷಣೆಯು ದೇಶದ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಗಡಿ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ವಲಸೆಯ ವಿರುದ್ಧ ಕೇಂದ್ರ ಸರ್ಕಾರ ಭಾರಿ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂಬುದರ ಮುನ್ಸೂಚನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಯಕತ್ವ ಬದಲಾವಣೆ: ಸಿದ್ದರಾಮಯ್ಯಗೆ ಆಫರ್ ಮೇಲೆ ಆಫರ್ ಕೊಟ್ರಾ ರಾಹುಲ್ ಗಾಂಧಿ? – Kannada News | Rahul Gandhi Gives Big Offers To CM Siddaramaiah Over Karnataka Power Tussle, here Is Meeting Inside details

ನವದೆಹಲಿ,(ಮೇ 26): ದೆಹಲಿಯಲ್ಲಿಂದು (New Delhi) ನಡೆದ ಸರಣಿ ಸಭೆಯಲ್ಲಿ ರಾಜ್ಯಸಭಾ ಚುನಾವಣೆ ಮಾತ್ರವಲ್ಲದೇ ಪ್ರಮುಖವಾಗಿ ಕರ್ನಾಟಕ (Karnataka) ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಜತೆ ಪ್ರತ್ಯೇಕ ಸಭೆ ನಡೆಸಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸರಿಸುಮಾರು 45 ನಿಮಿಷಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಸಿದ್ದರಾಮಯ್ಯಗೆ ರಾಜ್ಯಸಭೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ಯಾವುದೇ ಆಫರ್​​​ಗೆ ಸಮ್ಮಿಸಿಲ್ಲ ಎನ್ನಲಾಗಿದೆ.

ಒನ್ ಟು ಒನ್ ಮಾತುಕತೆ ವೇಳೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂದೆ ಅಧಿಕಾರ ಹಂಚಿಕೆ ಪ್ರಸ್ತಾಪ ಇಟ್ಟಿದ್ದು, ಇದರ ಜೊತೆ ಸಿದ್ದರಾಮಯ್ಯಗೆ ರಾಜ್ಯಸಭೆಯ ಆಫರ್ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ ಮಾತ್ರವಲ್ಲದೇ ಪುತ್ರ ಯತೀಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿಯೂ ಸಹ ರಾಹುಲ್ ಗಾಂಧಿ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಆಫರ್​​ಗಳಿಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸದೆ ಸೈಲೆಂಟ್ ಆಗಿ ಬೇಸರದಲ್ಲೇ ಆಚೆ ಬಂದು ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ನಿಂತುಕೊಂಡರು.

ಇದನ್ನೂ ನೋಡಿ: ನಾಯಕತ್ವ ಬದಲಾವಣೆ ಗೊಂದಲ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್

ಹೈಕಮಾಂಡ್ ಮುಂದೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಆಫರ್ ಮುಂದಿಟ್ಟಾಗ ಸಿಎಂ ಸಿದ್ದರಾಮಯ್ಯ ಸಹ ರಾಹುಲ್ ಮುಂದೆ ನೇರ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ. ನಾನು ರಾಜ್ಯಸಭೆಗೆ ಹೋದರೆ, ಮುಂದಿನ ಕರ್ನಾಟಕದ ಸಿಎಂ ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿ, ಹೈಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ. ನಿಮ್ಮನ್ನು ಸಹ ವಿಶ್ವಾಸಕ್ಕೆ ಪಡೆದು ನಿರ್ಧಾರಕೈಗೊಳ್ಳುತ್ತೆ ಎಂದಿದ್ದಾರಂತೆ.

ಸಭೆಯಲ್ಲಿ ಕೇವಲ ರಾಜ್ಯಸಭೆ ಬಗ್ಗೆ ಚರ್ಚೆಯಾಗಿದೆ ಎಂದು ಕೆಸಿ ವೇಣುಗೋಪಾಲ್ ರಾಜಕೀಯ ಹೇಳಿಕೆಯಾಗಿ ನೀಡಿದ್ದಾರೆ. ಆದ್ರೆ, ಅಸಲಿಗೆ ರಾಹುಲ್ ಗಾಂಧಿ ಸಿದ್ದರಾಮಯ್ಯನವರ ಜೊತೆ ನಾಯತ್ವ ಬದಲಾವಣೆಯನ್ನೂ ಸಹ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಆಲಿಸಿದ ಸಿದ್ದರಾಮಯ್ಯ, ಸಭೆ ಮುಗಿಯುತ್ತಿದ್ದಂತೆಯೇ ಯಾವುದೇ ಪ್ರತಿಕ್ರಿಯೆ ನೀಡಿದೇ ಬೇಸರ ಮುಖದಲ್ಲೇ ನೇರವಾಗಿ ತಮ್ಮ ಬೆಂಬಲಿಗರು ತಂಗಿರುವ ಜಾರ್ಜ್ ನಿವಾಸಕ್ಕೆ ತೆರಳಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್​​​ನಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದ್ದು, ಮುಂದೆ ಈ ಬೆಳವಣಿಗೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’ – Kannada News | Amulya Gowda new Kannada Serial Mahalakshmi Maduve on Sun Udaya Tv Story Line Star Cast

‘ಸನ್ ಉದಯ’ (Sun Udaya) ವಾಹಿನಿಯಲ್ಲಿ ಹಲವು ಧಾರಾವಾಹಿಗಳು ಜನಮನ ಗೆದ್ದಿವೆ. ʻಮೂಗುತಿ ಮಲ್ಲಿ’ ರೀತಿಯ ಜನಪ್ರಿಯ ಧಾರಾವಾಹಿಯನ್ನು ಕನ್ನಡಿಗರಿಗೆ ನೀಡಿದ ಈ ವಾಹಿನಿಯು ಈಗ ಮಧ್ಯಮ ವರ್ಗದ ಮನೆ ಮನೆಯ ಕಥೆಯೊಂದನ್ನು ಇಟ್ಟುಕೊಂಡು ಹೊಸ ಧಾರಾವಾಹಿಯನ್ನು ಪರಿಚಯಿಸುತ್ತಿದೆ. ʻಮಹಾಲಕ್ಷ್ಮೀ ಮದುವೆʼ (Mahalakshmi Maduve) ಎಂಬುದು ಈ ಹೊಸ ಸೀರಿಯಲ್ ಹೆಸರು. ಈ ಧಾರಾವಾಹಿಯು ಜೂನ್‌ 1ರಿಂದ ಪ್ರಸಾರ ಆರಂಭಿಸಿಲಿದೆ. ಈ ಸೀರಿಯಲ್ (Kannada Serial) ಕಥೆಯ ಎಳೆ ಏನು ಎಂಬುದನ್ನು ತಿಳಿಸಲಾಗಿದೆ.

ಈ ಧಾರಾವಾಹಿಯ ಕಥಾನಾಯಕ ಶ್ರೀಹರಿ ಓರ್ವ ಮಧ್ಯಮ ವರ್ಗದ ಹುಡುಗ. ಕಥಾನಾಯಕಿ ಮಹಾಲಕ್ಷ್ಮೀ ಕೂಡ ಮಧ್ಯಮ ವರ್ಗದವಳು. ಬ್ಯಾಂಕಲ್ಲಿ ಕೆಲಸ ಮಾಡುವ ಮಗನಿಗೆ ಒಳ್ಳೆಯ ವರದಕ್ಷಿಣೆ ಹಾಗೂ ಒಡವೆ ತರುವ ಹುಡುಗಿ ಸಿಗಲಿ ಎಂಬುದು ಹುಡುಗನ ಅಮ್ಮನ ಆಸೆ. ಈ ಆಸೆಗೆ ಇನ್ನೂ ಸ್ವಲ್ಪ ಕುಮ್ಮಕ್ಕು ಕೊಡುವವಳು ಹುಡುಗನ ಅಕ್ಕ. ಹಾಗಂತ ಅವರೆಲ್ಲ ಕೆಟ್ಟವರಲ್ಲ. ‘ನಮ್ ಶ್ರೀಹರಿ ಚೆನ್ನಾಗಿದ್ರೆ ನಾವೂ ಚೆನ್ನಾಗಿರ್ತೀವಿ’ ಎಂಬ ಮಹದಾಸೆ ಅವರಿಗೆ.

ಆದರೆ ಮಹಾಲಕ್ಷ್ಮೀ ಗಟ್ಟಿಗಿತ್ತಿ. ಅಪ್ಪನ ಆಸರೆ ಇಲ್ಲದೇ ಮನೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡವಳು. ತಂಗಿಯರನ್ನು ಓದಿಸಬೇಕು, ಅಮ್ಮನಿಗೆ ಆಸರೆಯಾಗಬೇಕು ಎಂಬುದು ಆಕೆಯ ಉದ್ದೇಶ. ಆದ್ದರಿಂದ ಮದುವೆ ಆದರೂ ಕೂಡ ಸಂಬಳವನ್ನು ತಾಯಿಗೆ ಕೊಡುತ್ತೇನೆ ಎಂಬದು ಆಕೆಯ ಷರತ್ತು. ಸಾವಿರ ಸುಳ್ಳು ಅಲ್ಲ, ಒಂದೇ ಒಂದು ಸುಳ್ಳಿನ ಮೂಲಕ ನಡೆಯುವ ಶ್ರೀಹರಿ ಮತ್ತು ಮಹಾಲಕ್ಷ್ಮೀ ಮದುವೆ ಯಾವ ರೀತಿ ಮುಂದೆ ಸಾಗುತ್ತದೆ ಎಂಬುದೇ ಈ ಸೀರಿಯಲ್ ಕಹಾನಿ.

ಮಹಾಲಕ್ಷ್ಮೀ ಪಾತ್ರದಲ್ಲಿ ಖ್ಯಾತ ನಟಿ ಅಮೂಲ್ಯ ಗೌಡ ಅವರು ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಭರತ್‌ ಶಿವಣ್ಣ ಅವರು ಈ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಶಿವಾಜಿ ರಾವ್‌ ಜಾಧವ್, ಸೀತಾ ಕೋಟೆ, ಮಂಜು ಪಾವಗಡ, ಅಮೃತಾ ರಾಮಮೂರ್ತಿ, ಪದ್ಮಿನಿ, ಮಾನಸಾ, ಮೇಘಶ್ರೀ, ಪ್ರತೀಕ್ಷಾ, ಧನುಷ್‌ ಗೌಡ, ಸ್ನೇಹಾ ಭಟ್‌, ಹರಿಪ್ರಿಯಾ, ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿಯ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ

‘ಲೈಮ್‌ಲೈಟ್ ಪ್ರೊಡಕ್ಷನ್ಸ್‌’ ಮೂಲಕ ನಿರ್ಮಾಣ ಆಗುತ್ತಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಗೆ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ನಿರ್ಮಾಪಕರಾಗಿದ್ದಾರೆ. ಪಾಪಾ ಔಟ್‌ಡೋರ್‌ ಯೂನಿಟ್‌ನ ಗಾಯತ್ರಿ ಸೆಲ್ವಂ ಅವರು ಈ ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರು. ಶಿವು ಪೂಜೇನ ಅಗ್ರಹಾರ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಯೋಗೇಶ್ ಗೌಡ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಬಿಡುಗಡೆಗೆ ದಿನಾಂಕ ನಿಗದಿ: ಸಮಂತಾಗೆ ಶುರು ಆತಂಕ – Kannada News | Thalapathy Vijay starrer Jana Nayagan movie may release on June 19

ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ. ವಿಜಯ್ ಅವರು ರಾಜಕೀಯ ಪ್ರವೇಶದ ಬಳಿಕ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರು ನಟಿಸಿದ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿದ್ದರು. ಈ ಸಿನಿಮಾ ಇದೇ ವರ್ಷ ಜನವರಿಯಲ್ಲಿ ಬಿಡುಗಡೆ ಆಗಬೇಕಿತ್ತು ಆದರೆ ರಾಜಕೀಯ ಒತ್ತಡಗಳ ಕಾರಣ ಇನ್ನೂ ಬಿಡುಗಡೆ ಆಗಿಲ್ಲ. ಇದೀಗ ವಿಜಯ್ ಸಿಎಂ ಆದ ಬಳಿಕ ‘ಜನ ನಾಯಗನ್’ ಬಿಡುಗಡೆ ಗ್ಯಾರೆಂಟಿ ಎನ್ನಲಾಗಿತ್ತು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ನಿಗದಿ ಆಗಿದೆಯಂತೆ.

ಕೆಲ ದಿನಗಳ ಹಿಂದಷ್ಟೆ ಮಾಧ್ಯಮಗಳ ಎದುರು ಮಾತನಾಡಿದ್ದ ‘ಜನ ನಾಯಗನ್’ ನಿರ್ಮಾಪಕ ವೆಂಕಟ್ ನಾರಾಯಣ್, ‘ಜನ ನಾಯಗನ್’ಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ಇನ್ನೂ ದೊರೆತಿಲ್ಲ ಆದರೆ ಶೀಘ್ರವೇ ದೊರೆಯಲಿದೆ ಎಂದಿದ್ದರು. ಕೆಲ ಮೂಲಗಳ ಪ್ರಕಾರ ಇದೀಗ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆಯುವುದು ಖಾತ್ರಿ ಆಗಿದ್ದು, ಅದರ ಆಧಾರದ ಮೇಲೆ ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಿದ್ದಾರಂತೆ. ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ‘ಜನ ನಾಯಗನ್’ ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

‘ಜನ ನಾಯಗನ್’ ಸಿನಿಮಾ ಈಗಾಗಲೇ ಆನ್​​ಲೈನ್​​ನಲ್ಲಿ ಸೋರಿಕೆ ಆಗಿದೆ. ಹಾಗಿದ್ದರೂ ಸಹ ಸಿನಿಮಾಕ್ಕೆ ಕ್ರೇಜ್ ಇದ್ದು, ಜೂನ್ 19ರಂದು ಸಿನಿಮಾ ಅನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ವಿಜಯ್ ಹುಟ್ಟುಹಬ್ಬ ಜೂನ್ 22 ಕ್ಕೆ ಇದ್ದು ಅದಕ್ಕೆ ಮುಂಚಿತವಾಗಿ ಸಿನಿಮಾವನ್ನು ತೆರೆಗೆ ತರುವುದು ನಿರ್ಮಾಪಕರ ಯೋಜನೆ. ಇದೀಗ ಸ್ವತಃ ವಿಜಯ್ ಅವರು, ಸಿನಿಮಾ ಬಿಡುಗಡೆ ಆದ ಮೊದಲ ವಾರ ಚಿತ್ರಮಂದಿರಗಳಲ್ಲಿ ಐದು ಪ್ರದರ್ಶನ ಮಾಡಲು ಆದೇಶ ಹೊರಡಿಸಿದ್ದು, ಇದು ಸಹ ‘ಜನ ನಾಯಗನ್’ ನಿರ್ಮಾಪಕರಿಗೆ ಸಹಕಾರಿ ಆಗಲಿದೆ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಬಿಡುಗಡೆ ಯಾವಾಗ: ಅಪ್​​ಡೇಟ್ ಹಂಚಿಕೊಂಡ ನಿರ್ಮಾಪಕ

ಆದರೆ ‘ಜನ ನಾಯಗನ್’ ಜೂನ್ 19ಕ್ಕೆ ಬಿಡುಗಡೆ ಆದರೆ ಸಮಂತಾಗೆ ಸಂಕಷ್ಟ ಆಗಲಿದೆ. ಸಮಂತಾ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಜೂನ್ 4 ರಂದು ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಮುಂದಿನ ವಾರವೂ ಸಹ ತೆಲುಗಿನ ಮತ್ತೊಂದು ದೊಡ್ಡ ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಿ ಜೂನ್ 19ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಈಗ ಹಠಾತ್ತನೆ ‘ಜನ ನಾಯಗನ್’ ಎದುರು ಬಿದ್ದಿದೆ. ಮತ್ತೆ ‘ಮಾ ಇಂಟಿ ಬಂಗಾರಂ’ ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ.

‘ಜನ ನಾಯಗನ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರೀಮೇಕ್ ಇದಾಗಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಮಲಯಾಳಂನ ಮಮಿತಾ ಬಿಜು ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್. ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ – Kannada News | Nilesh Shah calls for bold economic reforms seizing global crisis as opportunity for growth

ನಿಲೇಶ್ ಶಾ ಅವರ ಫೈಲ್ ಚಿತ್ರImage Credit source: TV9 Network

ನವದೆಹಲಿ, ಮೇ 26: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಹಾಗೂ ಸವಾಲುಗಳು ಎದುರಾಗಿರುವ ಈ ಸಮಯದಲ್ಲಿ, ಭಾರತವು ಈ ಬಿಕ್ಕಟ್ಟನ್ನು ಕೇವಲ ಒಂದು ಸಮಸ್ಯೆಯಾಗಿ ನೋಡಬಾರದು. ಬದಲಿಗೆ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಮತ್ತು ದಿಟ್ಟ ಸುಧಾರಣೆಗಳನ್ನು (Bold Reforms) ಜಾರಿಗೆ ತರಲು ಇದೊಂದು ಅತ್ಯುತ್ತಮ ಅವಕಾಶ ಎಂದು ಖ್ಯಾತ ಆರ್ಥಿಕ ತಜ್ಞ ನಿಲೇಶ್ ಶಾ (Nilesh Shah) ಅಭಿಪ್ರಾಯಪಟ್ಟಿದ್ದಾರೆ. ಸಿಎನ್​ಬಿಸಿ ಆವಾಜ್ ಎನ್ನುವ ಹಿಂದಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕೋಟಕ್ ಎಎಂಸಿಯ ಎಂಡಿ ನಿಲೇಶ್ ಶಾ, 2047ರ ವಿಕಸಿತ ಭಾರತದ (Viksit Bharat) ಗುರಿ ಈಡೇರಬೇಕಾದರೆ ತಂತ್ರಜ್ಞಾನ ಸಾಮರ್ಥ್ಯ ಹೆಚ್ಚಿಸಬೇಕು ಎಂದಿದ್ದಾರೆ.

“ಇತಿಹಾಸವನ್ನು ಗಮನಿಸಿದರೆ ಭಾರತವು ದೊಡ್ಡ ಬಿಕ್ಕಟ್ಟುಗಳು ಎದುರಾದಾಗಲೆಲ್ಲಾ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದೆ. 1991ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶವು ಆರ್ಥಿಕ ಉದಾರೀಕರಣವನ್ನು (Liberalisation) ಅಪ್ಪಿಕೊಂಡಿತು. ಅದೇ ರೀತಿ ಪ್ರಸ್ತುತ ಎದುರಾಗುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಸರ್ಕಾರವು ಮತ್ತಷ್ಟು ದಿಟ್ಟ ಆರ್ಥಿಕ ಹೆಜ್ಜೆಗಳನ್ನು ಇಡಬೇಕು,” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?

ಕೈಗೊಳ್ಳಬೇಕಾದ ಪ್ರಮುಖ ಸುಧಾರಣೆಗಳನ್ನು ತಿಳಿಸಿದ ನಿಲೇಶ್ ಶಾ

ಭಾರತವು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಲು ಹಾಗೂ ಆಂತರಿಕ ಮಾರುಕಟ್ಟೆಯನ್ನು ಸದೃಢಗೊಳಿಸಲು ಈ ಕೆಳಗಿನ ಕ್ಷೇತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ:

  • ರಚನಾತ್ಮಕ ಸುಧಾರಣೆಗಳು (Structural Reforms): ಉತ್ಪಾದನಾ ವಲಯ (Manufacturing), ಭೂಮಿ ಮತ್ತು ಕಾರ್ಮಿಕ ಕಾನೂನುಗಳ ಸರಳೀಕರಣದ ಕಡೆಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು.
  • ಬಳಕೆದಾರರ ನಂಬಿಕೆ ಹೆಚ್ಚಿಸುವುದು (Consumer Resilience): ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಹಾಗೂ ಬಳಕೆಯ ಪ್ರವೃತ್ತಿಯನ್ನು (Consumption Trends) ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು.
  • ಹೂಡಿಕೆಗೆ ಉತ್ತೇಜನ: ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು (FIIs) ಸೆಳೆಯಲು ಭಾರತದ ಮಾರುಕಟ್ಟೆಯನ್ನು ಸುಲಭ ಹಾಗೂ ಸುರಕ್ಷಿತ ಹೂಡಿಕೆಯ ತಾಣವನ್ನಾಗಿ ರೂಪಿಸಬೇಕು.

ಇದನ್ನೂ ಓದಿ: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

ಭಾರತದ ಭವಿಷ್ಯದ ಮೇಲೆ ಭರವಸೆ

ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಸುಂಕದ ನೀತಿಗಳು ಹಾಗೂ ತಂತ್ರಜ್ಞಾನ ವಲಯದಲ್ಲಿನ ಏರುಪೇರುಗಳ ನಡುವೆಯೂ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಜಾಗತಿಕ ಕಂಪನಿಗಳು ಚೀನಾಕ್ಕೆ ಪರ್ಯಾಯವಾಗಿ ಬೇರೆ ದೇಶಗಳನ್ನು ಹುಡುಕುತ್ತಿರುವಾಗ, ಭಾರತವು ತನ್ನ ನೀತಿಗಳನ್ನು ಮತ್ತಷ್ಟು ಉದಾರಗೊಳಿಸಿ ಆ ಹೂಡಿಕೆಗಳನ್ನು ತನ್ನತ್ತ ಸೆಳೆದುಕೊಳ್ಳಬೇಕು. ಈ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಿದರೆ ಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ನಿಲೇಶ್ ಶಾ ಆಶಾವಾದ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡಲು ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪ್ರಯತ್ನಿಸಿ – Kannada News | Try these simple tricks to keep children away from smartphones

ಈ ಡಿಜಿಟಲ್‌ ಯುಗದಲ್ಲಿ ದೊಡ್ಡವರಿಗಿಂತ ಮಕ್ಕಳೇ (children) ಹೆಚ್ಚು  ಮೊಬೈಲ್‌ ಫೋನ್‌ ವ್ಯಸನಿಗಳಾಗಿದ್ದಾರೆ. ಹೌದು ಈಗಿನ ಮಕ್ಕಳಂತೂ ಹೊರಗೆ ಹೋಗಿ ಆಟ ಆಡುವುದಕ್ಕಿಂತ ಹೆಚ್ಚು ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಒಂದು ಅಭ್ಯಾಸ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡುವುದು ಬಹಳ ಮುಖ್ಯ. ಆದರೆ ಅನೇಕ ಪೋಷಕರಿಗೆ ತಮ್ಮ ಮಕ್ಕಳನ್ನು ಮೊಬೈಲ್‌ ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿಲ್ಲ. ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಮಕ್ಕಳನ್ನು ಸ್ಮಾರ್ಟ್‌ ಫೋನ್‌ನಿಂದ ದೂರವಿಡಬಹುದು.

ಮಕ್ಕಳನ್ನು ಸ್ಮಾರ್ಟ್‌ ಫೋನ್‌ನಿಂದ ದೂರವಿಡುವುದು ಹೇಗೆ?

ಹೊರಗೆ ಆಟವಾಡಲು ಪ್ರೇರೇಪಿಸಿ: ಮಕ್ಕಳನ್ನು ಆಟವಾಡಲು ಕರೆದುಕೊಂಡು ಹೋಗಿ. ಸೈಕ್ಲಿಂಗ್‌, ಕ್ರಿಕೆಟ್, ಬ್ಯಾಡ್ಮಿಂಟನ್ ಅಥವಾ ಫುಟ್ಬಾಲ್ ಆಡಲು ಪ್ರೋತ್ಸಾಹಿಸಿ. ಇಲ್ಲವೆ ಉದ್ಯಾನವನಗಳಿಗೆ ವಾಕಿಂಗ್‌ ಕರೆದುಕೊಂಡು ಹೋಗಿ, ಈ ರೀತಿ ಹೊರಾಂಗಣ ಆಟಗಳನ್ನು ಆಡಿದಾಗ  ಮಕ್ಕಳು ದೈಹಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಮತ್ತು ಫೋನ್‌ನಿಂದ ಮನಸ್ಸನ್ನು ದೂರವಿಡುತ್ತಾರೆ.

ಹೊಸ ಹವ್ಯಾಸಗಳನ್ನು ಕಲಿಸಿ: ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಒರಿಗಮಿಯಂತ ಹವ್ಯಾಸಗಳನ್ನು ಕಲಿಸಿ ಮತ್ತು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಮಕ್ಕಳು ತಮ್ಮ ಆಯ್ಕೆಯ ಸೃಜನಶೀಲ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಾಗ, ಅವರು ಮೊಬೈಲ್‌ನಲ್ಲಿ ತೊಡಗಿಕೊಳ್ಳುವುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ.

ಮನೆಕೆಲಸಗಳನ್ನು ಮೋಜಿನಿಂದ ಮಾಡಿಸಿ: ಮಕ್ಕಳಿಗೆ ಮೊಬೈಲ್‌ ನೀಡುವ ಬದಲು ಅಡುಗೆ ಅಥವಾ ತೋಟಗಾರಿಕೆಯಂತಹ ಚಟುವಟಿಕೆಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಿ. ಸಸ್ಯಗಳಿಗೆ ನೀರು ಹಾಕುವುದು,  ವಾರ್ಡ್ರೋಬ್ ಅನ್ನು ಜೋಡಿಸುವುದು, ಗುಡಿಸುವುದು ಇತ್ಯಾದಿ ಕೆಲಸಗಳಿಗೆ , ಸಹಾಯಕ್ಕಾಗಿ ಅವರನ್ನು ಕೇಳಿ. ಇದು ಮಕ್ಕಳಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ, ಹೊಸದನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ಮೊಬೈಲ್‌ನಲ್ಲಿ ತೊಡಗಿಕೊಳ್ಳದಂತೆ ಮಾಡುತ್ತದೆ.

ಒಳಾಂಗಣ ಆಟಗಳನ್ನು ಆಡಿಸಿ: ಲುಡೋ, ಕ್ಯಾರಮ್, ಹಾವು ಮತ್ತು ಏಣಿ, ಚದುರಂಗ ಅಥವಾ ಒಗಟುಗಳಂತಹ ಆಟಗಳನ್ನು ಆಡಿಸಿ, ಈ ಆಟಗಳು ಮಕ್ಕಳ ಮನಸ್ಸನ್ನು ಚುರುಕುಗೊಳಿಸುತ್ತವೆ. ಈ ಆಟಗಳು ಮಕ್ಕಳನ್ನು ಮೊಬೈಲ್‌ ಫೋನ್‌ಗಳಿಂದ ದೂರ ಇರಿಸುತ್ತವೆ.

ನಿಯಮಗಳನ್ನು ಹೊಂದಿಸಿ: ಮನೆಯಲ್ಲಿ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿಸಿ. ಉದಾಹರಣೆಗೆ, ಊಟ ಮಾಡುವಾಗ ಮೊಬೈಲ್‌ ನೋಡಬಾರದು ಅಥವಾ ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಯಾರೂ ಗ್ಯಾಜೆಟ್‌ಗಳನ್ನು ಬಳಸುವಂತಿಲ್ಲ ಎಂಬ ನಿಯಮಗಳನ್ನು ಮಾಡಿ. ಈ ಮೂಲಕ ಮಕ್ಕಳ ಫೋನ್‌ ಬಳಕೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಅತಿಯಾದ ಕೋಪ ದೇಹದ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ ಗೊತ್ತಾ?

ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ: ಕೆಲವೊಮ್ಮೆ ಮಕ್ಕಳು ಬೇಸರಗೊಂಡಾಗ  ಅಥವಾ ಮಾತನಾಡಲು ಯಾರೂ ಇಲ್ಲದ ಕಾರಣ ಫೋನ್ ನೋಡುತ್ತಾರೆ. ಆದ್ದರಿಂದ, ಪೋಷಕರು ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಬೇಕು. ಅವರ ಶಾಲೆಯ ಬಗ್ಗೆ ಕೇಳಿ, ನಿಮ್ಮ ಬಾಲ್ಯದ ತಮಾಷೆಯ ಕಥೆಗಳನ್ನು ಹೇಳಿ, ಅಥವಾ ಕುಳಿತು ಒಳ್ಳೆಯ ಪುಸ್ತಕ ಓದಿ.

ಮಕ್ಕಳ ಮುಂದೆ ನಿಮ್ಮ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ: ಮಕ್ಕಳು ತಮ್ಮ ಪೋಷಕರು ಏನು ಮಾಡುತ್ತಾರೋ ಅದನ್ನೇ ಕಲಿಯುತ್ತಾರೆ ಮತ್ತು ಅನುಕರಿಸುತ್ತಾರೆ. ನೀವು ದಿನವಿಡೀ ನಿಮ್ಮ ಮೊಬೈಲ್ ಫೋನ್‌ನೊಂದಿಗೆ ಕಳೆದರೆ, ನಿಮ್ಮ ಮಗುವೂ ಸಹ ಮೊಬೈಲ್‌ ಬೇಕೆಂದು ಹಠ ಹಿಡಿಯುತ್ತದೆ. ಆದ್ದರಿಂದ ಮಕ್ಕಳ ಮುಂದೆ ಪೋಷಕರು ಮೊಬೈಲ್‌ ಬಳಸಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳ ಜತೆಗೆ ನಿಂತು ಪ್ರಾರ್ಥನೆಯಲ್ಲಿ ಭಾಗಿಯಾದ ಶ್ವಾನ – Kannada News | Sikkim: Dog joins students in prayer at school assembly in Sikkim

ಸಿಕ್ಕಿಂ, ಮೇ 26: ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯಲ್ಲಿ ಸಾಕಿದ ಶ್ವಾನವೇ ಇರಲಿ, ಬೀದಿ ನಾಯಿಯೇ ಇರಲಿ, ಒಮ್ಮೆ ಪ್ರೀತಿ ತೋರಿದರೆ ಅವುಗಳು ಜೀವನ ಪರ್ಯಂತ ನೆನೆಪಿಟ್ಟುಕೊಳ್ಳುತ್ತದೆ. ಹೀಗಿರುವಾಗ ಬೀದಿ ನಾಯಿಯೊಂದು ವಿದ್ಯಾರ್ಥಿಗಳನ್ನೇ ಫ್ರೆಂಡ್ಸ್ ಮಾಡಿಕೊಂಡಿದೆ. ಇದೀಗ ಸ್ಕೂಲ್ ಅಸೆಂಬ್ಲಿಯ ವೇಳೆ ಸಿಕ್ಕಿಂನ (Sikkim) ಶಾಲೆಯೊಂದರಲ್ಲಿನ ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ಹೌದು, ಮಕ್ಕಳ ಜತೆಗೆ ಸಾಲಿನಲ್ಲಿ ನಿಂತು ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ದೃಶ್ಯವು ಎಲ್ಲರ ಗಮನ ಸೆಳೆದಿದೆ.

ಪ್ರಸನ್ನ ಪಖ್ರಿನ್ (Prasanna Pakhrin) ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶ್ವಾನವೊಂದು ಸ್ಕೂಲ್ ಅಸೆಂಬ್ಲಿಯಲ್ಲಿ ಭಾಗಿಯಾಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಾಲಾಗಿ ಶಾಲಾ ಆವರಣದಲ್ಲಿ ನಿಂತುಕೊಂಡಿರುವುದನ್ನು ಕಾಣಬಹುದು. ಇದೇ ವೇಳೆ ಬೀದಿ ನಾಯಿಯೊಂದು ಸ್ಕೂಲ್ ಅಸೆಂಬ್ಲಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದೆ. ಮಕ್ಕಳ ಜತೆಗೆ ಸಾಲಿನಲ್ಲಿ ನಿಂತುಕೊಂಡ ಶ್ವಾನವು ತನ್ನ ಎರಡು ಕಾಲುಗಳನ್ನು ಮೇಲೆತ್ತಿಕೊಂಡು ಪ್ರಾರ್ಥನೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶ್ವಾನವು ಈ ಪುಟಾಣಿಗಳ ಆಪ್ತ ಸ್ನೇಹಿತ ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳಿಗಿಂತ ಈ ಶ್ವಾನವೇ ಶಿಸ್ತಿನ ಸಿಪಾಯಿಯಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ವಿಡಿಯೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs GT Qualifier-1: ಟಾಸ್ ಗೆದ್ದ ಗುಜರಾತ್; ಉಭಯ ತಂಡಗಳಲ್ಲೂ ಬದಲಾವಣೆ – Kannada News | IPL 2026 Qualifier 1: RCB vs GT Playing XI and Toss Report from Dharamshala

ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1, ಐಪಿಎಲ್ 2026 ಫೈನಲ್‌ಗೆ ಅರ್ಹತೆ ಪಡೆಯಲು ನಿರ್ಣಾಯಕ ಪಂದ್ಯವಾಗಿದೆ. ವಿಜೇತ ತಂಡವು ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದರೆ, ಸೋತ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ದುಕೊಂಡಿದೆ.

ಟಾಸ್ ಗೆದ್ದ ಗುಜರಾತ್

ಮೇಲೆ ಹೇಳಿದಂತೆ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದಿದ್ದು, ಉಭಯ ತಂಡಗಳಲ್ಲೂ ಒಂದೊಂದು ಬದಲಾವಣೆಗಳನ್ನು ಮಾಡಲಾಗಿದೆ. ಆರ್​ಸಿಬಿ ತಂಡದಲ್ಲಿ ರೋಮಾರಿಯೋ ಶೆಫರ್ಡ್​ ಬದಲಿಗೆ ಜೆಕೋಬ್ ಡಫಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫ್ಫಿ ಮತ್ತು ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್ಸ್​: ರೊಮಾರಿಯೋ ಶೆಫರ್ಡ್, ಸುಯಾಶ್ ಶರ್ಮಾ, ಕನಿಷ್ಕ್ ಚೌಹಾನ್, ಅಭಿನಂದನ್ ಸಿಂಗ್ ಮತ್ತು ಜೋರ್ಡಾನ್ ಕಾಕ್ಸ್.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ನಿಶಾಂತ್ ಸಿಂಧು, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ (ಅರ್ಷದ್ ಖಾನ್ ಬದಲಾಗಿ), ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇಂಪ್ಯಾಕ್ಟ್ ಪ್ಲೇಯರ್ಸ್​: ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ ಮತ್ತು ಸಾಯಿ ಕಿಶೋರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’ – Kannada News | Hombale Films Hombale Music buys Devi Mahatme Kannada Movie Audio rights

ಭಾರತೀಯ ಚಿತ್ರರಂಗದಲ್ಲಿ ‘ಹೊಂಬಾಳೆ’ (Hombale Films) ಸಂಸ್ಥೆಯು ಸಕ್ರಿಯವಾಗಿ ತೊಡಗಿಕೊಂಡಿದೆ. ‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ರೀತಿಯ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಮಾತ್ರವಲ್ಲದೇ ಸಿನಿಮಾಗಳ ವಿತರಣೆಯಲ್ಲೂ ಈ ಸಂಸ್ಥೆ ಆ್ಯಕ್ಟೀವ್ ಆಗಿದೆ. ಈಗ ಮ್ಯೂಸಿಕ್ ಮಾರುಕಟ್ಟೆಗೂ ಕಾಲಿಟ್ಟಿದೆ. ‘ಹೊಂಬಾಳೆ ಮ್ಯೂಸಿಕ್’ (Hombale Music) ಮೂಲಕ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಖರೀದಿಸಲು ಆರಂಭಿಸಿದೆ. ಹೊಂಬಾಳೆ ಸಂಸ್ಥೆ ಖರೀದಿಸಿದ ಮೊದಲ ಸಿನಿಮಾ ಆಲ್ಬಂ ‘ದೇವಿ ಮಹಾತ್ಮೆ’ (Devi Mahatme) ಆಗಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಟೈಟಲ್ ಹಾಗೂ ಪೋಸ್ಟರ್ ಮೂಲಕ ‘ದೇವಿ‌ ಮಹಾತ್ಮೆ’ ಚಿತ್ರವು ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ. ಈಗ ಈ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಚಿತ್ರದ ಹಾಡುಗಳು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಮ್ಯೂಸಿಕ್’ಗೆ ಮಾರಾಟ ಆಗಿರುವುದು ಇಡೀ ಚಿತ್ರತಂಡ ಸಂತಸಕ್ಕೆ ಕಾರಣವಾಗಿದೆ. ‘ಹೊಂಬಾಳೆ’ ಜೊತೆ ಕೈ ಜೋಡಿಸಿರುವುದರಿಂದ ಚಿತ್ರತಂಡದ ಬಲ ಹೆಚ್ಚಿದೆ.

ಹೌದು, ‘ಹೊಂಬಾಳೆ ಮ್ಯೂಸಿಕ್’ ಕಂಪನಿಯು ‘ದೇವಿ ಮಹಾತ್ಮೆ’ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿ‌ ಮಾಡಿದೆ. ಅಂದಹಾಗೇ ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ನಾಗರಾಜ ಸೋಮಯಾಜಿ. ಈ ಮೊದಲು ‘ಮರ್ಯಾದೆ ಪ್ರಶ್ನೆ’ ಸಿನಿಮಾ ಮಾಡಿದ್ದ ಅವರ ಸಾರಥ್ಯದಲ್ಲಿ ಈಗ ‘ದೇವಿ ಮಹಾತ್ಮೆ’ ಚಿತ್ರ ಮೂಡಿಬರುತ್ತಿದೆ. ಲಿಖಿತ್ ಪ್ರಸಾದ್ ಕೆ. ಶೆಟ್ಟಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘ಯುವಿಜಿ ಸ್ಟುಡಿಯೋ’ ಬ್ಯಾನರ್ ಮೂಲಕ ವಿದ್ಯಾ ಗಾಂಧಿರಾಜನ್ ಅವರು ‘ದೇವಿ ಮಹಾತ್ಮೆ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗಾಂಧಿರಾಜನ್ ಅವರು ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಒಂದೊಳ್ಳೆ ತಾಂತ್ರಿಕ ವರ್ಗ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ. ಉಜ್ವಲ್ ಚಂದ್ರ ಅವರ ಸಂಕಲನ, ಎಸ್.ಕೆ. ರಾವ್ ಅವರ ಛಾಯಾಗ್ರಹಣ ಈ ಸಿನಿಮಾಗೆ ಇದೆ.

ಇದನ್ನೂ ಓದಿ: ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ

ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ‘ದೇವಿ ಮಹಾತ್ಮೆ’. ನಾಗರಾಜ ಸೋಮಯಾಜಿ ಅವರು ಈ ಸಿನಿಮಾಗೆ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ‌, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಐನಿಂದ ಸದ್ಯದಲ್ಲೇ ಮನುಷ್ಯರಿಗೆ ಕೆಲಸ ಇಲ್ಲವಾಗುತ್ತೆ ಎನ್ನುತ್ತಿದ್ದ ಸ್ಯಾಮ್ ಆಲ್ಟ್​ಮ್ಯಾನ್ ಬಾಯಿಂದ ಈಗ ಬೇರೆಯೇ ಮಾತು – Kannada News | OpenAI CEO Sam Altman: AI Won’t Cause Job Apocalypse; Human Connection Prevails

ಸಿಡ್ನಿ, ಮೇ 26: ಕೃತಕ ಬುದ್ಧಿಮತ್ತೆ (AI) ಜಗತ್ತನ್ನು ಆವರಿಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಬಿಳಿ ಕಾಲರ್ (White-collar) ಉದ್ಯೋಗಗಳು ನಾಶವಾಗಬಹುದು ಎಂಬ ಭೀತಿ ಜಗತ್ತಿನಾದ್ಯಂತ ಸೃಷ್ಟಿಯಾಗಿತ್ತು. ಆದರೆ, ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಅವರೇ ಈಗ ಸಮಾಧಾನಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮನುಷ್ಯರ ಹೆಚ್ಚಿನ ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ ಎಂದು ಕಳೆದ ವರ್ಷ ಹೇಳುತ್ತಿದ್ದ ಸ್ಯಾಮ್ ಆಲ್ಟ್‌ಮನ್ ಇದೀಗ ತಮ್ಮ ಅಭಿಪ್ರಾಯವನ್ನೇ ಬದಲಿಸಿದ್ದಾರೆ. AI ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಜಗತ್ತಿನಲ್ಲಿ ಉದ್ಯೋಗಗಳ ಮಹಾ ಪ್ರಳಯ ಅಥವಾ ಸರ್ವನಾಶ (Jobs Apocalypse) ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ನಡೆದ ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಸ್ಯಾಮ್ ಆಲ್ಟ್‌ಮನ್, ಉದ್ಯೋಗ ನಷ್ಟದ ಕುರಿತು ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳಗಳು ಅತಿಯಾಗಿದ್ದವು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ತನ್ನ ಅಂದಾಜು ಸುಳ್ಳಾಗಿದ್ದು ಖುಷಿ ತಂದಿದೆ ಎಂದೂ ಅವರು ಅಭಿಪ್ರಾಪಟ್ಟಿದ್ದಾರೆ.

2022ರಲ್ಲಿ ಚಾಟ್‌ಜಿಪಿಟಿ ಬಿಡುಗಡೆಯಾದಾಗ, ಆರಂಭಿಕ ಹಂತದ (Entry-level) ಕಚೇರಿ ಉದ್ಯೋಗಗಳು ಅತ್ಯಂತ ವೇಗವಾಗಿ ಇಲ್ಲದಂತಾಗಬಹುದು ಎಂದು ತಾನು ಭಾವಿಸಿದ್ದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ದೊಡ್ಡ ಮಟ್ಟದ ಉದ್ಯೋಗ ನಷ್ಟ ಸಂಭವಿಸಿಲ್ಲ. ಈ ವಿಷಯದಲ್ಲಿ ತನ್ನ ಅಂದಾಜು ಅಥವಾ ಅಂತಃಪ್ರಜ್ಞೆ ತಪ್ಪಾಗಿದ್ದಕ್ಕೆ ತನಗೆ ನಿಜಕ್ಕೂ ಸಂತೋಷವಿದೆ, ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ

AI ತಂತ್ರಜ್ಞಾನದ ತಾಂತ್ರಿಕ ಪ್ರಗತಿಯ ವೇಗವನ್ನು ತಾವು ಸರಿಯಾಗಿಯೇ ಊಹಿಸಿದ್ದರೂ, ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ತಪ್ಪು ಲೆಕ್ಕಾಚಾರ ಹಾಕಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಮನುಷ್ಯರ ನಡುವಿನ ಬಾಂಧವ್ಯವನ್ನು AI ಬದಲಿಸಲು ಸಾಧ್ಯವಿಲ್ಲ

ಉದ್ಯೋಗಗಳು ಉಳಿದುಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವನ್ನೂ ಆಲ್ಟ್‌ಮನ್ ವಿವರಿಸಿದ್ದಾರೆ. ಯಾವುದೇ ಕೆಲಸದಲ್ಲೂ ಮನುಷ್ಯರ ನಡುವಿನ ಪರಸ್ಪರ ಸಂವಹನ ಮತ್ತು ಬಾಂಧವ್ಯ (Human Interaction) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಇದನ್ನು ಯಂತ್ರಗಳಿಂದ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮದೇ ಆದ ಒಂದು ವೈಯಕ್ತಿಕ ಉದಾಹರಣೆಯನ್ನು ನೀಡಿದ ಅವರು, “ನಾನು ಇಮೇಲ್ ಮತ್ತು ಸ್ಲ್ಯಾಕ್ (Slack) ಸಂದೇಶಗಳಿಗೆ ಉತ್ತರಿಸಲು AI ಬಳಸಲು ಪ್ರಾರಂಭಿಸಿದ್ದೆ. ಆದರೆ ನಂತರದ ದಿನಗಳಲ್ಲಿ ನಾವೆಲ್ಲರೂ ಮನುಷ್ಯರೊಂದಿಗಿನ ನೇರ ಸಂವಹನವನ್ನೇ ಹೆಚ್ಚು ಇಷ್ಟಪಡುತ್ತೇವೆ ಎಂಬುದು ನನಗೇ ಅರಿವಾಯಿತು. ಹಾಗಾಗಿ ನಾನು ಮತ್ತೆ ಸ್ವತಃ ನಾನೇ ಸಂದೇಶಗಳಿಗೆ ಉತ್ತರಿಸಲು ಆರಂಭಿಸಿದೆ,” ಎಂದಿದ್ದಾರೆ.

ಇದನ್ನೂ ಓದಿ: ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?

ಜಾಗತಿಕ ಕಂಪನಿಗಳ ಪರಿಸ್ಥಿತಿ ಏನಿದೆ?

ಅಮೆಜಾನ್, ಹೆಚ್‌ಎಸ್‌ಬಿಸಿ (HSBC), ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ತಮ್ಮ ಕೆಲವು ವಿಭಾಗಗಳಲ್ಲಿ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸಲು AI ಬಳಸುತ್ತಿದ್ದು, ಕೆಲವು ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿದ್ದವು. ಆದರೆ ಸ್ಯಾಮ್ ಆಲ್ಟ್‌ಮನ್ ಅವರ ಪ್ರಕಾರ, ಉದ್ಯೋಗಗಳ ಸ್ವರೂಪ ಬದಲಾಗಬಹುದೇ ವಿನಃ ಮಾರುಕಟ್ಟೆಯಿಂದ ಉದ್ಯೋಗಗಳೇ ಮಾಯವಾಗುವಂತಹ ಬಿಕ್ಕಟ್ಟು ಸೃಷ್ಟಿಯಾಗುವುದಿಲ್ಲ. ಭವಿಷ್ಯದ ಉದ್ಯೋಗ ಮಾರುಕಟ್ಟೆ ನಾವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿಯೂ, ಆಶಾದಾಯಕವಾಗಿಯೂ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version