ಎಐನಿಂದ ಸದ್ಯದಲ್ಲೇ ಮನುಷ್ಯರಿಗೆ ಕೆಲಸ ಇಲ್ಲವಾಗುತ್ತೆ ಎನ್ನುತ್ತಿದ್ದ ಸ್ಯಾಮ್ ಆಲ್ಟ್​ಮ್ಯಾನ್ ಬಾಯಿಂದ ಈಗ ಬೇರೆಯೇ ಮಾತು – Kannada News | OpenAI CEO Sam Altman: AI Won’t Cause Job Apocalypse; Human Connection Prevails

ಸಿಡ್ನಿ, ಮೇ 26: ಕೃತಕ ಬುದ್ಧಿಮತ್ತೆ (AI) ಜಗತ್ತನ್ನು ಆವರಿಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಬಿಳಿ ಕಾಲರ್ (White-collar) ಉದ್ಯೋಗಗಳು ನಾಶವಾಗಬಹುದು ಎಂಬ ಭೀತಿ ಜಗತ್ತಿನಾದ್ಯಂತ ಸೃಷ್ಟಿಯಾಗಿತ್ತು. ಆದರೆ, ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಅವರೇ ಈಗ ಸಮಾಧಾನಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮನುಷ್ಯರ ಹೆಚ್ಚಿನ ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ ಎಂದು ಕಳೆದ ವರ್ಷ ಹೇಳುತ್ತಿದ್ದ ಸ್ಯಾಮ್ ಆಲ್ಟ್‌ಮನ್ ಇದೀಗ ತಮ್ಮ ಅಭಿಪ್ರಾಯವನ್ನೇ ಬದಲಿಸಿದ್ದಾರೆ. AI ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಜಗತ್ತಿನಲ್ಲಿ ಉದ್ಯೋಗಗಳ ಮಹಾ ಪ್ರಳಯ ಅಥವಾ ಸರ್ವನಾಶ (Jobs Apocalypse) ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ನಡೆದ ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಸ್ಯಾಮ್ ಆಲ್ಟ್‌ಮನ್, ಉದ್ಯೋಗ ನಷ್ಟದ ಕುರಿತು ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳಗಳು ಅತಿಯಾಗಿದ್ದವು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ತನ್ನ ಅಂದಾಜು ಸುಳ್ಳಾಗಿದ್ದು ಖುಷಿ ತಂದಿದೆ ಎಂದೂ ಅವರು ಅಭಿಪ್ರಾಪಟ್ಟಿದ್ದಾರೆ.

2022ರಲ್ಲಿ ಚಾಟ್‌ಜಿಪಿಟಿ ಬಿಡುಗಡೆಯಾದಾಗ, ಆರಂಭಿಕ ಹಂತದ (Entry-level) ಕಚೇರಿ ಉದ್ಯೋಗಗಳು ಅತ್ಯಂತ ವೇಗವಾಗಿ ಇಲ್ಲದಂತಾಗಬಹುದು ಎಂದು ತಾನು ಭಾವಿಸಿದ್ದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ದೊಡ್ಡ ಮಟ್ಟದ ಉದ್ಯೋಗ ನಷ್ಟ ಸಂಭವಿಸಿಲ್ಲ. ಈ ವಿಷಯದಲ್ಲಿ ತನ್ನ ಅಂದಾಜು ಅಥವಾ ಅಂತಃಪ್ರಜ್ಞೆ ತಪ್ಪಾಗಿದ್ದಕ್ಕೆ ತನಗೆ ನಿಜಕ್ಕೂ ಸಂತೋಷವಿದೆ, ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ

AI ತಂತ್ರಜ್ಞಾನದ ತಾಂತ್ರಿಕ ಪ್ರಗತಿಯ ವೇಗವನ್ನು ತಾವು ಸರಿಯಾಗಿಯೇ ಊಹಿಸಿದ್ದರೂ, ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ತಪ್ಪು ಲೆಕ್ಕಾಚಾರ ಹಾಕಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಮನುಷ್ಯರ ನಡುವಿನ ಬಾಂಧವ್ಯವನ್ನು AI ಬದಲಿಸಲು ಸಾಧ್ಯವಿಲ್ಲ

ಉದ್ಯೋಗಗಳು ಉಳಿದುಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವನ್ನೂ ಆಲ್ಟ್‌ಮನ್ ವಿವರಿಸಿದ್ದಾರೆ. ಯಾವುದೇ ಕೆಲಸದಲ್ಲೂ ಮನುಷ್ಯರ ನಡುವಿನ ಪರಸ್ಪರ ಸಂವಹನ ಮತ್ತು ಬಾಂಧವ್ಯ (Human Interaction) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಇದನ್ನು ಯಂತ್ರಗಳಿಂದ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮದೇ ಆದ ಒಂದು ವೈಯಕ್ತಿಕ ಉದಾಹರಣೆಯನ್ನು ನೀಡಿದ ಅವರು, “ನಾನು ಇಮೇಲ್ ಮತ್ತು ಸ್ಲ್ಯಾಕ್ (Slack) ಸಂದೇಶಗಳಿಗೆ ಉತ್ತರಿಸಲು AI ಬಳಸಲು ಪ್ರಾರಂಭಿಸಿದ್ದೆ. ಆದರೆ ನಂತರದ ದಿನಗಳಲ್ಲಿ ನಾವೆಲ್ಲರೂ ಮನುಷ್ಯರೊಂದಿಗಿನ ನೇರ ಸಂವಹನವನ್ನೇ ಹೆಚ್ಚು ಇಷ್ಟಪಡುತ್ತೇವೆ ಎಂಬುದು ನನಗೇ ಅರಿವಾಯಿತು. ಹಾಗಾಗಿ ನಾನು ಮತ್ತೆ ಸ್ವತಃ ನಾನೇ ಸಂದೇಶಗಳಿಗೆ ಉತ್ತರಿಸಲು ಆರಂಭಿಸಿದೆ,” ಎಂದಿದ್ದಾರೆ.

ಇದನ್ನೂ ಓದಿ: ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?

ಜಾಗತಿಕ ಕಂಪನಿಗಳ ಪರಿಸ್ಥಿತಿ ಏನಿದೆ?

ಅಮೆಜಾನ್, ಹೆಚ್‌ಎಸ್‌ಬಿಸಿ (HSBC), ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ತಮ್ಮ ಕೆಲವು ವಿಭಾಗಗಳಲ್ಲಿ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸಲು AI ಬಳಸುತ್ತಿದ್ದು, ಕೆಲವು ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿದ್ದವು. ಆದರೆ ಸ್ಯಾಮ್ ಆಲ್ಟ್‌ಮನ್ ಅವರ ಪ್ರಕಾರ, ಉದ್ಯೋಗಗಳ ಸ್ವರೂಪ ಬದಲಾಗಬಹುದೇ ವಿನಃ ಮಾರುಕಟ್ಟೆಯಿಂದ ಉದ್ಯೋಗಗಳೇ ಮಾಯವಾಗುವಂತಹ ಬಿಕ್ಕಟ್ಟು ಸೃಷ್ಟಿಯಾಗುವುದಿಲ್ಲ. ಭವಿಷ್ಯದ ಉದ್ಯೋಗ ಮಾರುಕಟ್ಟೆ ನಾವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿಯೂ, ಆಶಾದಾಯಕವಾಗಿಯೂ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಗುಡುಗು-ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ, ನಮ್ಮ ಮೆಟ್ರೋ ಸಂಚಾರ ಸ್ಥಗಿತ – Kannada News | Namma metro Stopped Over Tree collapsed On Purple Line Over Heavy rain In Bengaluru

ಬೆಂಗಳೂರು, (ಮೇ 26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಗುಡುಗು ಬಿರುಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಸಿದೆ. ಅದರಲ್ಲೂ ಮುಖ್ಯವಾಗಿ ಮರದ ಕೊಂಬೆ ಬಿದ್ದು ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಇದರಿಂದ ಮೆಟ್ರೋ ಸ್ಟೇಷನ್​​ಗಳು ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಹೋಗಲಾದೇ ಪರದಾಡುತ್ತಿದ್ದಾರೆ.

Published On – 7:01 pm, Tue, 26 May 26

Source link

ಕೆಪಿಎಸ್ ಶಾಲೆಯಿಂದ ಸರ್ಕಾರಿ ಶಾಲೆಗಳು ಕ್ಲೋಸ್ ಆಗುತ್ತಿವೆಯಾ? ಕಳವಳ ವ್ಯಕ್ತಪಡಿಸಿದ ಹೊರಟ್ಟಿ – Kannada News | Are KPS Schools Causing Closure of Government Schools; Basavaraj Horatti Raises Concern

ಸ್ಪೀಕರ್ ಬಸವರಾಜ್ ಹೊರಟ್ಟಿImage Credit source: tv9 kannada

ಹುಬ್ಬಳ್ಳಿ, ಮೇ 26: ಪ್ರಾಥಮಿಕ ಶಾಲೆಯಿಂದ ಪಿಯುಸಿವರಗೆ ಒಂದೇ ಸೂರಿನಡಿ, ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನೇಕ ವರ್ಷಗಳ ಹಿಂದೆ ಆರಂಭಿಸಿದೆ. ಈ ಶೈಕ್ಷಣಿಕ ವರ್ಷದಿಂದ ಮತ್ತಷ್ಟು ಕೆಪಿಎಸ್ ಶಾಲೆಗಳನ್ನು (KPS schools) ಆರಂಭಿಸಲು ಮುಂದಾಗಿದೆ. ಆದರೆ ಈ ಶಾಲೆಗಳ ಆರಂಭಕ್ಕೆ ಸುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡುವುದು ಮತ್ತು ಅವುಗಳನ್ನು ಬಂದ್ ಮಾಡುವ ಆರೋಪ ಕೇಳಿಬಂದಿವೆ. ಹೀಗಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ ವಿಚಾರ
  • ಶಾಲೆಗಳನ್ನು ಮರ್ಜ್ ಮಾಡೋದು ಬೇಡ ಎಂದ ಬಸವರಾಜ ಹೊರಟ್ಟಿ
  • ಸರ್ಕಾರಕ್ಕೆ ಪತ್ರ ಬರೆದ ವಿಧಾನಪರಿಷತ್ ಸಭಾಪತಿ

ಈ ವರ್ಷ ರಾಜ್ಯದಲ್ಲಿ ಸರಿಸುಮಾರು ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದರೆ ಹನ್ನೆರಡನೇ ತರಗತಿವರಗೆ ಒಂದೇ ಸೂರಿನಡಿ ಅಧ್ಯಯನ ಮಾಡಲು ಅವಕಾಶವಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿರುವ ಈ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಆದರೆ ಈ ಕೆಪಿಎಸ್ ಶಾಲೆಗಳಿಂದ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡಿ, ಕೆಪಿಎಸ್ ಶಾಲೆಗಳನ್ನು ಮಾಡುತ್ತಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಲೆಗಳನ್ನು ಬಂದ ಮಾಡುವುದು ಸರಿಯಲ್ಲ ಎಂದ ಬಸವರಾಜ್ ಹೊರಟ್ಟಿ

ಸ್ವತಃ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೆಪಿಎಸ್ ಶಾಲೆಗಳನ್ನು ಆರಂಭಿಸುವುದು ಉತ್ತಮ ನಿರ್ಧಾರ. ಆದರೆ ಕೆಪಿಎಸ್ ಶಾಲೆಗಳಿಗಾಗಿ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡುವುದು ಬೇಡ ಅಂತ ಹೇಳಿದ್ದಾರೆ. ಒಂದು ಶಾಲೆ ಆರಂಭಕ್ಕೆ ಸುತ್ತಮುತ್ತಲಿನ ಶಾಲೆಗಳು ಬಂದ್ ಆಗುವಂತೆ ಮಾಡುವುದು ಸರಿಯಲ್ಲ. ನೀವು ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಮಾಡಿ, ಅದಕ್ಕಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ವಿಲೀನ ಮಾಡುವುದು, ಅವು ಬಂದ್ ಆಗುವಂತೆ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

ಧಾರವಾಡ, ಹಾವೇರಿ ಸೇರಿದಂತೆ ಅನೇಕ ಕಡೆ ಕೆಪಿಎಸ್ ಶಾಲೆಗಳ ಆರಂಭಕ್ಕೆ, ಕಡಿಮೆ ಮಕ್ಕಳ ಸಂಖ್ಯೆಯಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಲ್ಲಿ ವಿಲೀನ ಮಾಡುವ ಕೆಲಸ ಆರಂಭವಾಗಿದೆ. ಇದರಿಂದ ಅನೇಕ ಕನ್ನಡ ಶಾಲೆಗಳು ಬಂದ್ ಆಗುತ್ತವೆ. ಜೊತೆಗೆ ಅನೇಕರು ಉದ್ಯೋಗ ವಂಚಿತರಾಗುತ್ತಾರೆ. ಅನೇಕ ಕಡೆ ಅನುದಾನಿತ ಶಾಲೆಗಳಿದ್ದು, ಅವು ಕೂಡ ಬಂದ್ ಆಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಸದ್ಯ ಇರುವ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿ, ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಆರಂಭಿಸಬೇಕು ಅನ್ನೋದು ಬಸವರಾಜ್ ಹೊರಟ್ಟಿ ಸೇರಿದಂತೆ ಅನೇಕರ ಆಗ್ರಹವಾಗಿದೆ.

ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್!

ಕೆಪಿಎಸ್ ಶಾಲೆಗಳಿಗಾಗಿ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನ ಮಾಡುವುದು ಅಥವಾ ಬಂದ್ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೊರಟ್ಟಿ ಪತ್ರ ಬರೆದಿದ್ದಾರೆ. ಆದರೆ ಶಿಕ್ಷಣ ಇಲಾಖೆ ಈ ಬಗ್ಗೆ ಯಾವ ಕ್ರಮಕೈಗೊಳ್ಳುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ – Kannada News | Manchu Manoj did haircut to an orphan watch video

ತೆಲುಗಿನ ಜನಪ್ರಿಯ ನಟ ಮಂಚು ಮನೋಜ್ (Manchu Manoj), ತಮ್ಮ ಕುಟುಂಬ ಜಗಳಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ಆದರೆ ಇದೀಗ ತಮ್ಮ ಸಾಮಾಜಿಕ ಕಾರ್ಯದಿಂದಲೂ ಸುದ್ದಿಗೆ ಬಂದಿದ್ದಾರೆ. ಅನಾಥಾಶ್ರಮವೊಂದರ ಜೊತೆಗೆ ಕೈಜೋಡಿಸಿರುವ ನಟ ಮಂಚು ಮನೋಜ್, ಇದೀಗ ರಸ್ತೆಯಲ್ಲಿ ದಿಕ್ಕು ದೆಸೆ ಇಲ್ಲದೇ ಇದ್ದ ಅನಾಥ ಭಿಕ್ಷುಕನೊಬ್ಬನಿಗೆ ಖುದ್ದು ತಾವೇ ಹೇರ್ ಕಟ್ ಮಾಡಿ ಆರೈಕೆ ಮಾಡಿದ್ದು, ಆತ ಮತ್ತೆ ಸಾಮಾನ್ಯ ಜನರಂತೆ ಕಾಣಲು ಸಹಾಯ ಮಾಡಿದ್ದಾರೆ ಅಲ್ಲದೆ ಆತನ ಆರೈಕೆಗೆ ವ್ಯವಸ್ಥೆಗಳನ್ನು ಸಹ ಮಾಡಿಕೊಟ್ಟಿದ್ದಾರೆ. ಭಿಕ್ಷುಕನ ಹೇರ್ ಕಟ್ ಮಾಡುತ್ತಿರುವ ಮಂಚು ಮನೋಜ್ ವಿಡಿಯೋ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಚಿಕ್ಕಮಗಳೂರಲ್ಲಿ ವರುಣಾರ್ಭಟ: ಮನೆಗಳಿಗೆ ನುಗ್ಗಿದ ಚರಂಡಿ ನೀರು, ಮರ ಬಿದ್ದು ರಸ್ತೆ ಬಂದ್​​ – Kannada News | Chikkamagaluru Rain Fury: Heavy Showers Flood Houses; Tree Fall Block Roads

ಮನೆಗಳಿಗೆ ನುಗ್ಗಿದ ನೀರುImage Credit source: Tv9 Kannada

ಚಿಕ್ಕಮಗಳೂರು, ಮೇ 26: ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಮುಳ್ಳಯ್ಯನಗಿರಿ ಭಾಗದಲ್ಲಿ ಕಳೆದ ಅರ್ಧಗಂಟೆಯಿಂದ ಭಾರಿ ಮಳೆಯಾಗಿದ್ದು, ಹೊನ್ನಮ್ಮನಹಳ್ಳ ಬಳಿ ಗುಡ್ಡ ಪ್ರದೇಶದಿಂದ ಭಾರಿ ಪ್ರಮಾಣದ ನೀರು ಹರಿದುಬಂದಿದೆ. ಚಂದ್ರದ್ರೋಣ ಪರ್ವತದ ಸಾಲಿನ ಹೊನ್ನಮ್ಮನಹಳ್ಳ, ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಭಾಗದಲ್ಲಿ ಗುಡುಗು-ಮಿಂಚು ಮತ್ತು ಗಾಳಿ ಸಹಿತ ಭಾರಿ ಮಳೆಯಾಗಿದೆ.

ಮುಖ್ಯಾಂಶಗಳು

  • ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ವರುಣಾರ್ಭಟ
  • ಗಾಳಿ ಸಹಿತ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ
  • ಮನೆಗಳಿಗೆ ಚರಂಡಿ ನೀರು ನುಗ್ಗಿ ಸಾಲು ಸಾಲು ಅವಾಂತರ

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಚಿಕ್ಕಮಗಳೂರು ನಗರದಲ್ಲಿ ಸಾಲು ಸಾಲು ಅವಾಂತರಗಳು ನಡೆದಿದೆ. ನಗರದ ಹಳೆ ಉಪ್ಪಳ್ಳಿ, ಗೌರಿ ಕಾಲುವೆ ಬಡಾವಣೆಯ ಹತ್ತಾರು ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಟ ನಡೆಸಿದ್ದಾರೆ. ರಾಜಕಾಲುವೆಯದುರಾವಸ್ಥೆಯಿಂದಲೇ ಮನೆಗಳಿಗೆ ಮಳೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ಅಗತ್ಯ ವಸ್ತುಗಳು, ವಸ್ತ್ರಗಳು ನೀರುಪಾಲಾಗಿವೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಮುಳುಗಿದ ರೈಲ್ವೇ ಅಂಡರ್​​ ಪಾಸ್​​, ಹೊಳೆಯಂತಾದ ರಸ್ತೆಗಳು

ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ಸಂಚಾರ ಅಸ್ತವ್ಯಸ್ತ

ರಸ್ತೆ ಮೇಲೆ ಉರುಳಿರುವ ಬೃಹತ್​​ ಮರ

ಇತ್ತ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಬಳಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬೃಹತ್​​ ಮರವೊಂದು ಬಿದ್ದ ಪರಿಣಾಮ ಚಿಕ್ಕಮಗಳೂರು-ಶಾಂತವೇರಿ, ಲಿಂಗದಹಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ. ಚಿಕ್ಕಮಗಳೂರು-ತರೀಕೆರೆ ರಸ್ತೆಯಲ್ಲಿ ಭಾರಿ ಟ್ರಾಫಿಕ್​​ ಜಾಮ್​​ ಆಗಿದ್ದು, ವಾಹನಗಳು ರಸ್ತೆಯಲ್ಲಿ ನಿಂತಲ್ಲೇ ನಿಂತ ದೃಶ್ಯಗಳು ಕಂಡುಬಂದಿವೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾಯಕತ್ವ ಬದಲಾವಣೆ ಗೊಂದಲ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್ – Kannada News | Karnataka Power Tussle: Only Discussed Karnataka Rajya Sabha Polls Says KC Venugopal

ನವದೆಹಲಿ, (ಮೇ 26): ಕರ್ನಾಟಕ ಕಾಂಗ್ರೆಸ್  (karnataka Congress) ನಾಯಕರ ಹೈಕಮಾಂಡ್ ಸಭೆಯ ಬೆನ್ನಲ್ಲೇ ಎದ್ದಿದ್ದ ಹಲವು ರಾಜಕೀಯ ಚರ್ಚೆಗಳು ಹಾಗೂ ವದಂತಿಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ತೆರೆ ಎಳೆದಿದ್ದಾರೆ. ಇಂದು (ಮೇ 26) ದೆಹಲಿಯಲ್ಲಿ ನಡೆದ ಸರಣಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೇಣುಗೋಪಾಲ್‌ ಹೇಳಿದ್ದೇನು?

ನಾವು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದೇವೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾನು ಭಾಗವಹಿಸಿದ್ದೆ. ಸಭೆಯಲ್ಲಿ ಕೇವಲ ಮುಂಬರುವ ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತ್ರ ಮಾತುಕತೆಯಾಗಿದೆ. ಚುನಾವಣಾ ವಿಚಾರವನ್ನು ಹೊರತುಪಡಿಸಿ ನಾವು ಮತ್ಯಾವ ಬಾಕಿ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಹಾಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಉಳಿದೆಲ್ಲಾ ವಿಚಾರಗಳು ಕೇವಲ ವದಂತಿ ಮತ್ತು ಊಹೆ ಮಾತ್ರ ಎಂದು ಎಂದು ಸ್ಪಷ್ಟಪಡಿಸಿದರು.

ಹಾಗಾದ್ರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ  ಹೊರಗಿಟ್ಟು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಯ್ತಾ?  ಇನ್ನು ಸಭೆ ಬಳಿಕ ತೆರಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬೇಸರದಲ್ಲಿ ತೆರಳಿದ್ದು, ಸಂಥಿಂಗ್ ಸಂಥಿಂಗ್ ಬಗ್ಗೆ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​?

Source link

ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ – Kannada News | For these reasons, a Tulsi plant should be planted in every home

ಹಿಂದೂ ಧರ್ಮದಲ್ಲಿ, ತುಳಸಿ (Tulsi) ಸಸ್ಯವು ಕೇವಲ ಒಂದು ಸಸ್ಯವಲ್ಲ, ಧಾರ್ಮಿಕ ನಂಬಿಕೆಯ ಸಂಕೇತವಾಗಿದೆ. ಮನೆಯ ಅಂಗಳದಲ್ಲಿ ತುಳಸಿಯನ್ನು ನೆಡುವುದು, ಅದಕ್ಕೆ ನೀರು ಅರ್ಪಿಸುವುದು ಮತ್ತು ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ತುಳಸಿಯ ಮಹತ್ವವು ಧಾರ್ಮಿಕ ನಂಬಿಕೆಗಳಿಗೆ ಸೀಮಿತವಾಗಿಲ್ಲ, ಇದು ಹಲವಾರು ಪ್ರಯೋಜನಗಳನ್ನೂ ಹೊಂದಿದೆ.  ಹೌದು ಗಿಡ ಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆಯಂತೆ. ಅಷ್ಟಕ್ಕೂ ತುಳಸಿ ಗಿಡದ ಪ್ರಯೋಜನಗಳೇನು, ಈ ಗಿಡವನ್ನು ಮನೆ ಸುತ್ತಲೂ ನೆಡುವುದು ಏಕೆ ಮುಖ್ಯ ಎಂಬುದನ್ನು ತಿಳಿಯಿರಿ.

ಮನೆಯಲ್ಲಿ ತುಳಸಿ ಗಿಡ ನೆಡುವುದು ಏಕೆ ಮುಖ್ಯ ನೋಡಿ?

ನೈಸರ್ಗಿಕ ಗಾಳಿ ಶುದ್ಧೀಕರಣ ಯಂತ್ರ: ಮಾಲಿನ್ಯವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ಇಂದಿನ ಕಾಲದಲ್ಲಿ, ಶುದ್ಧ ಗಾಳಿ ಬೇಕೆಂದರೆ ಮನೆ ಸುತ್ತಲೂ ತುಳಸಿ ಗಿಡವನ್ನು ನೆಡಿ.  ತುಳಸಿ ಸಸ್ಯವು ಅತ್ಯುತ್ತಮ ನೈಸರ್ಗಿಕ ಗಾಳಿ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿ ಸಸ್ಯಗಳು ಪರಿಸರದಿಂದ ಹಾನಿಕಾರಕ ಅನಿಲಗಳು ಮತ್ತು ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಈ ಸಸ್ಯವು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ, ಗಾಳಿಯನ್ನು ಸ್ವಚ್ಛವಾಗಿರಿಸುತ್ತದೆ.

ಔಷಧೀಯ ಗುಣಗಳ ಗಣಿ: ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಎರಡರಿಂದ ಮೂರು ತುಳಸಿ ಎಲೆಗಳನ್ನು ಅಗಿಯುವುದು ಅಥವಾ ಅದರ ಚಹಾವನ್ನು ಕುಡಿಯುವುದರಿಂದ ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಒತ್ತಡ ನಿವಾರಣೆ: ತುಳಸಿಯ ಸೌಮ್ಯ ಸುವಾಸನೆಯು ಮನಸ್ಸನ್ನು ಶಾಂತಗೊಳಿಸುತ್ತದೆ. ತುಳಸಿಯು ಒತ್ತಡವನ್ನು ಉಂಟು ಮಾಡುವ ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು?

ಕೀಟಗಳು ಮತ್ತು ಸೊಳ್ಳೆಗಳಿಂದ ರಕ್ಷಣೆ: ತುಳಸಿ ಗಿಡದಿಂದ ಹೊರಹೊಮ್ಮುವ ವಿಶಿಷ್ಟ ಪರಿಮಳವು ಸೊಳ್ಳೆಗಳು, ನೊಣಗಳು ಮತ್ತು ಇತರ ಸಣ್ಣ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ತುಳಸಿಯ ಸುವಾಸನೆಯು ಮಲೇರಿಯಾ ಮತ್ತು ಡೆಂಗ್ಯೂನಂತಹ ಮಾರಕ ಕಾಯಿಲೆಗಳನ್ನು ಹರಡುವ ಸೊಳ್ಳೆಗಳನ್ನು ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ. ಆದ್ದರಿಂದ, ನಿಮ್ಮ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಪ್ರಯೋಜನಕಾರಿಯಾಗಿದೆ.

ಮನೆಯಲ್ಲಿ ಸಕಾರಾತ್ಮಕತೆಯನ್ನು ಹರಡುತ್ತದೆ: ತುಳಸಿ ಗಿಡವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಇದು ಶಾಂತ ಮತ್ತು ಆಹ್ಲಾದಕರ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Qualifier-1 RCB vs GT Live Score: ಆರ್​ಸಿಬಿ- ಗುಜರಾತ್ ನಡುವೆ ಹೈವೋಲ್ಟೇಜ್ ಕದನ – Kannada News | IPL 2026 Qualifier 1 RCB vs GT Live Score at Dharamshala Stadium Royal Challengers Bengaluru vs Gujarat Titans News Updates in Kannada

ಐಪಿಎಲ್ 2026 ರ ಪ್ಲೇಆಫ್‌ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಕ್ವಾಲಿಫೈಯರ್ 1 ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದರೆ, ರಜತ್ ಪತಿದಾರ್ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಈ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಫೈನಲ್​ಗೆ ತಲುಪುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗುತ್ತದೆ. ಆದಾಗ್ಯೂ, ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಮೊದಲ ಪ್ರಯತ್ನದಲ್ಲೇ ಅಂತಿಮ ಸುತ್ತಿಗೆ ತಲುಪಲು ಪ್ರಯತ್ನಿಸುತ್ತವೆ.

Source link

ಅನ್ನಕ್ಕೆ ತುಪ್ಪ ಸೇರಿಸಿ ತಿಂದ್ರೆ ಶುಗರ್ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ವೈದ್ಯರು ನೀಡಿರುವ ಮಹತ್ವದ ಸಲಹೆ – Kannada News | Best Diet Changes to Manage Diabetes Naturally

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರಲ್ಲಿಯೇ ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಪ್ರಕಾರ, ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬಗ್ಗೆ ವೈದ್ಯ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಅವರು ನೀಡಿದ ಮಾಹಿತಿಯ ಅನುಸಾರ, ದೇಹದಲ್ಲಿ ಉಂಟಾಗುವ ‘ಇನ್ಫ್ಲಮೇಶನ್’ ಅಥವಾ ಒಳಗಿನ ಉರಿ ಅನೇಕ ದೀರ್ಘಕಾಲಿಕ ಕಾಯಿಲೆಗಳ ಮೂಲ ಕಾರಣವಾಗಿದೆ. ಪ್ರತಿದಿನ ಬಳಸುವ ರಿಫೈನ್ ಎಣ್ಣೆಗಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅದರ ಬದಲು ಸಾಂಪ್ರದಾಯಿಕ ಗಾಣದ ಎಣ್ಣೆ ಬಳಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಜೊತೆಗೆ ಡಯಾಬಿಟಿಸ್ ನಿಯಂತ್ರಣಕ್ಕೆ ತರಲು ಪ್ರತಿನಿತ್ಯ ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಗ್ಲೂಕೋಸ್ ಮಟ್ಟವೇ ಅಪಾಯಕಾರಿ

ಇಂದಿನ ಜೀವನಶೈಲಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಬಿಳಿ ಅಕ್ಕಿಯನ್ನು ಹೆಚ್ಚಾಗಿ ಬಳಸುವುದು, ದಿನಕ್ಕೆ ಹಲವು ಬಾರಿ ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ ಕುಡಿಯುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಏಕಾಏಕಿ ಹೆಚ್ಚಿಸುತ್ತದೆ. ಇದರಿಂದ ‘ಇನ್ಸುಲಿನ್ ರೆಸಿಸ್ಟೆನ್ಸ್’ ಉಂಟಾಗಿ, ನಂತರ ಡಯಾಬಿಟಿಸ್, ಹೊಟ್ಟೆಯ ಸುತ್ತ ಕೊಬ್ಬು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.

ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು?

ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಸಿಗುವ ಪ್ರಯೋಜನ?

ಡಾ. ವಿಕ್ರಾಂತ್ ಅವರ ಪ್ರಕಾರ, ವೈಟ್ ರೈಸ್ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿ, ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಗ್ಲೂಕೋಸ್ ಮಟ್ಟ ತಕ್ಷಣ ಏರಿಕೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಶುಗರ್ ನಿಯಂತ್ರಣಕ್ಕೆ ನೆರವಾಗಬಹುದು.

ಆಹಾರದಲ್ಲಿ ಯಾವ ಬದಲಾವಣೆ ಮಾಡಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಗೆ ಸಕ್ಕರೆ ಚಹಾ ಕುಡಿಯುವುದನ್ನು ತಪ್ಪಿಸಿ
  • ಇಡ್ಲಿ, ದೋಸೆ ಬದಲು ಮೊಟ್ಟೆ, ಸ್ಪ್ರೌಟ್ಸ್ ಮತ್ತು ಡ್ರೈಫ್ರೂಟ್ಸ್ ಸೇವಿಸಿ
  • ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ
  • ಹಾಲು ಮತ್ತು ಮೊಸರು ಸೇವನೆಯಿಂದ ವಿಟಮಿನ್ ಬಿ12 ದೊರೆಯುತ್ತದೆ

ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಡಯಾಬಿಟಿಸ್ ನಿಯಂತ್ರಣದಲ್ಲಿ ಇಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​? – Kannada News | KC Venugopal Denies Karnataka Leadership Change Buzz, Says High Command Meet Focused Only on Elections

ಕಾಂಗ್ರೆಸಿಗರ ಜಂಟಿ ಸುದ್ದಿಗೋಷ್ಠಿImage Credit source: Tv9 Kannada

ನವದೆಹಲಿ, ಮೇ 26: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರ ಜೊತೆಗಿನ ಸುದೀರ್ಘ ಸಭೆ ಬಳಿಕ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಸುದೀರ್ಘ ಸಭೆ ಹಿಂದಿನ ಕಾರಣವನ್ನು ರಿವೀಲ್​​ ಮಾಡಿದ್ದಾರೆ. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ದಿಢೀರ್​​ ಬುಲಾವ್​​ ಬಂದಿದ್ದ ಹಿನ್ನೆಲೆ ನಾಯಕತ್ವ ಬದಲಾವಣೆ ಸೇರಿ ಸಚಿವ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕರು ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಸಭೆಯಲ್ಲೆ ಚರ್ಚೆಯಾಗಿದ್ದೇನು?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್​​ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸಮ್ಮುಖದಲ್ಲಿ ಇವತ್ತು ದೆಹಲಿಯಲ್ಲಿ ಹೈವೋಲ್ಟೇಜ್​​ ಮೀಟಿಂಗ್​​ ನಡೆದಿತ್ತು. ಹೀಗಾಗಿ ವರಿಷ್ಠರು ಸದ್ಯ ಪಕ್ಷದಲ್ಲಿರುವ ಎಲ್ಲ ಗೊಂದಲಗಳಿಗೂ ತೆರೆ ಎಳೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಸಭೆ ಬಗ್ಗೆ ಮಾಹಿತಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯಸಭೆ ಮತ್ತು ವಿಧಾನಪರಿಷತ್​ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಯಾವುದೇ ಗೊಂದಲ ಇಲ್ಲ. ಚುನಾವಣೆ ಸಂಬಂಧ ಮಾತ್ರ ಸಿಎಂ, ಡಿಸಿಎಂ ಜತೆ ಮಾತುಕತೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

Exit mobile version