ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ; ಸಚಿವ ಯುಟಿ ಖಾದರ್ – Kannada News | Karnataka Health Minister Urges Parents to Ensure Pulse Polio Vaccination for Children on June 28

ಬೆಂಗಳೂರು, ಜೂನ್​​ 25: ಜೂನ್ 28ರಂದು ರಾಷ್ಟ್ರೀಯ ಲಸಿಕಾ ದಿನ. ಹೀಗಾಗಿ ರಾಜ್ಯದ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್​​ ಮನವಿ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ ವೈರಸ್ ಸಕ್ರಿಯವಾಗಿರುವ ಕಾರಣ, ಭಾರತದಲ್ಲಿ ಮತ್ತೆ ರೋಗ ಹರಡುವ ಸಾಧ್ಯತೆ ತಡೆಯಲು ಲಸಿಕೆ ಅತ್ಯಗತ್ಯ ಎಂದರು. ಭಾರತವು 140 ಕೋಟಿ ಜನಸಂಖ್ಯೆ, ವೈವಿಧ್ಯಮಯ ಪ್ರದೇಶಗಳು ಮತ್ತು ಸವಾಲುಗಳ ನಡುವೆಯೂ ಪೋಲಿಯೋ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರೋತ್ಸಾಹ, ಆರೋಗ್ಯ ಇಲಾಖೆ, ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರು, ಎನ್‌ಜಿಒಗಳು ಮತ್ತು ಶಿಕ್ಷಣ ಇಲಾಖೆಯ ಅವಿರತ ಶ್ರಮದಿಂದ ಸಾಧ್ಯವಾಗಿದೆ ಎಂದು ಹೇಳಿದರು. ಈ ಬಾರಿ ರಾಜ್ಯದಲ್ಲಿ ಸುಮಾರು 64.84 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ರಾಜ್ಯವನ್ನು ಪೋಲಿಯೋ ಮುಕ್ತವಾಗಿರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೊನ್ನಗಿರಿಯಲ್ಲ, ಸ್ವರ್ಣಗಿರಿ; ಆಂಧ್ರದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ; ಈ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು – Kannada News | Independent India’s first private gold mining at Andhra, few facts to know

ನವದೆಹಲಿ, ಜೂನ್ 25: ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ದೇಶದ ಮೊತ್ತಮೊದಲ ಖಾಸಗಿ ಚಿನ್ನದ ಗಣಿ (Private Gold Mine) ತನ್ನ ಕಮರ್ಷಿಯಲ್ ಆಪರೇಷನ್ಸ್ ಅನ್ನು ಆರಂಭಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿ (Jonnagiri) ಈ ಬಹುನಿರೀಕ್ಷಿತ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಭಾರತ ರಫ್ತಿಗಿಂತ ಬಹಳ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಈ ಆಮದಿನಲ್ಲಿ ಚಿನ್ನ ಮತ್ತು ತೈಲವೇ ಅತಿಹೆಚ್ಚು. ಚಿನ್ನದ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಕರೆಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಜೊನ್ನಗಿರಿಯಲ್ಲಿ ಖಾಸಗಿ ಗೋಲ್ಡ್ ಮೈನಿಂಗ್ ಆರಂಭವಾಗಿದೆ. ಇದರಿಂದ ಚಿನ್ನದ ಆಮದು ಸ್ವಲ್ಪ ಮಟ್ಟಿಗೆ ಕಡಿಮೆಗೊಳ್ಳುವ ನಿರೀಕ್ಷೆ ಇದೆ. ಈ ಖಾಸಗಿ ಗಣಿಯ ಕುರಿತಾದ ಪ್ರಮುಖ ವಿಚಾರಗಳು:

ಸ್ವತಂತ್ರ ಭಾರತದ ಮೊದಲ ಖಾಸಗಿ ಗಣಿ ಮತ್ತು ಐತಿಹಾಸಿಕ ಹಿನ್ನೆಲೆ

ಸ್ವತಂತ್ರ ಭಾರತದಲ್ಲಿ ಇದುವರೆಗೆ ಕರ್ನಾಟಕದ ಕೋಲಾರ (KGF) ಮತ್ತು ರಾಯಚೂರಿನ ಹಟ್ಟಿ (HGML) ಚಿನ್ನದ ಗಣಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇವೆರಡೂ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಸರ್ಕಾರಿ ಸ್ವಾಮ್ಯದ ಗಣಿಗಳಾಗಿವೆ (ಕೋಲಾರ ಗಣಿ ಸದ್ಯ ಮುಚ್ಚಲ್ಪಟ್ಟಿದೆ). ಸ್ವಾತಂತ್ರ್ಯದ ನಂತರ ದೇಶದಲ್ಲಿ ಆರಂಭವಾಗಿರುವ ಮೊದಲ ವಾಣಿಜ್ಯ ಮಟ್ಟದ ಖಾಸಗಿ ಚಿನ್ನದ ಗಣಿ ಯೋಜನೆ ಇದಾಗಿದೆ. ವಿಶೇಷವೆಂದರೆ, ಈ ಜೊನ್ನಗಿರಿ ಪ್ರದೇಶವು ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕನ ಕಾಲದಲ್ಲೂ (ಕ್ರಿ.ಪೂ. 3ನೇ ಶತಮಾನ) ಚಿನ್ನದ ಉತ್ಪಾದನಾ ಕೇಂದ್ರವಾಗಿ ಹೆಸರುವಾಸಿಯಾಗಿತ್ತು.

ಜೊನ್ನಗಿರಿ ಇನ್ಮುಂದೆ ‘ಸ್ವರ್ಣಗಿರಿ’!

ಈ ಗಣಿಗಾರಿಕೆ ಯೋಜನೆಯ ಐತಿಹಾಸಿಕ ಮತ್ತು ಭವಿಷ್ಯದ ಮಹತ್ವವನ್ನು ಪರಿಗಣಿಸಿ, ಆಂಧ್ರಪ್ರದೇಶ ಸರ್ಕಾರವು ‘ಜೊನ್ನಗಿರಿ’ ಗ್ರಾಮದ ಹೆಸರನ್ನು ಅಧಿಕೃತವಾಗಿ ‘ಸ್ವರ್ಣಗಿರಿ’ (Swarnagiri) ಎಂದು ಮರುನಾಮಕರಣ ಮಾಡಿದೆ. ಮೌರ್ಯರ ಕಾಲದ ಶಾಸನಗಳಲ್ಲೂ ಈ ಪ್ರದೇಶವನ್ನು ‘ಸುವರ್ಣಗಿರಿ’ ಎಂದೇ ಕರೆಯಲಾಗುತ್ತಿತ್ತು. ಇದರೊಂದಿಗೆ ಇಲ್ಲಿ ಸ್ಥಳೀಯವಾಗಿಯೇ ಆಭರಣ ತಯಾರಿಕೆಯನ್ನು ಉತ್ತೇಜಿಸಲು ಒಂದು ಬೃಹತ್ ‘ಚಿನ್ನದ ಆಭರಣ ತಯಾರಿಕಾ ಪಾರ್ಕ್’ (Jewellery Park) ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಟ್ರಾನ್ಸಾಕ್ಷನ್ಸ್​ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್​ಬಿಐನಿಂದ ಹೊಸ ನಿಯಮಗಳು ಜಾರಿಗೆ

ಯೋಜನೆಗೆ ಹೂಡಿಕೆ ಎಷ್ಟು? ಯಾರು ನಿರ್ವಹಿಸುತ್ತಿದ್ದಾರೆ?

ಈ ಬೃಹತ್ ಸಮಗ್ರ ಗ್ರೀನ್‌ಫೀಲ್ಡ್ ಯೋಜನೆಯನ್ನು ಸುಮಾರು ₹405 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ‘ಜಿಯೋಮೈಸೂರು ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (Geomysore Services) ಮತ್ತು ‘ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್’ ಸಂಸ್ಥೆಗಳು ಜಂಟಿಯಾಗಿ ಮುನ್ನಡೆಸುತ್ತಿದ್ದು, ಲಾಯ್ಡ್ಸ್ ಮೆಟಲ್ಸ್ ಮತ್ತು ತ್ರಿವೇಣಿ ಅರ್ಥ್‌ಮೂವರ್ಸ್ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡುತ್ತಿವೆ. ಸುಮಾರು 1,500 ಎಕರೆ ಪ್ರದೇಶವನ್ನು ಈ ಯೋಜನೆಗೆ ಹಂಚಿಕೆ ಮಾಡಲಾಗಿದ್ದು, ಸದ್ಯ ಮೊದಲ ಹಂತದಲ್ಲಿ 600 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗಿದೆ.

ಚಿನ್ನದ ಉತ್ಪಾದನೆಯ ಗುರಿ ಮತ್ತು ಸಾಮರ್ಥ್ಯ

ಪ್ರಸ್ತುತ ಇಲ್ಲಿ ಸುಮಾರು 13.1 ಟನ್ ಚಿನ್ನದ ಅದಿರು ನಿಕ್ಷೇಪ ಇರುವುದನ್ನು ಪ್ರಮಾಣೀಕರಿಸಲಾಗಿದೆ. ಮೊದಲ ವರ್ಷದಲ್ಲಿ ಸುಮಾರು 400 ಕೆಜಿ ಚಿನ್ನವನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ವಾರ್ಷಿಕ ಉತ್ಪಾದನೆಯನ್ನು 900 ಕೆಜಿಗೆ ಏರಿಸಲಾಗುವುದು.

ಯೋಜನೆಯ ಎರಡನೇ ಸಂಸ್ಕರಣಾ ಘಟಕ ಪೂರ್ಣಗೊಂಡ ನಂತರ, ವಾರ್ಷಿಕವಾಗಿ 2 ಟನ್ (2,000 ಕೆಜಿ) ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗಣಿಯ ಒಟ್ಟು ಅವಧಿಯನ್ನು ಸದ್ಯಕ್ಕೆ 15 ವರ್ಷಗಳೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್​ನಲ್ಲಿ ಭಾಗಿ?

ಸರ್ಕಾರಕ್ಕೆ ಆದಾಯ ಮತ್ತು ಉದ್ಯೋಗಾವಕಾಶ

ಈ ಯೋಜನೆಯಿಂದ ಆಂಧ್ರಪ್ರದೇಶ ಸರ್ಕಾರಕ್ಕೆ ಉತ್ಪಾದನೆಯಾಗುವ ಚಿನ್ನದ ಮೌಲ್ಯದ ಮೇಲೆ ಶೇ. 4 ರಷ್ಟು ರಾಯಲ್ಟಿ ಸಿಗಲಿದೆ. 400 ಕೆಜಿ ಉತ್ಪಾದನೆಯಾದರೆ ಸುಮಾರು ₹57 ಕೋಟಿ ಹಾಗೂ 900 ಕೆಜಿ ಉತ್ಪಾದನೆಯಾದಾಗ ₹144 ಕೋಟಿ ವಾರ್ಷಿಕ ಆದಾಯ ಸರ್ಕಾರಕ್ಕೆ ಹರಿದುಬರಲಿದೆ. ಜೊತೆಗೆ ಈ ಯೋಜನೆಯಿಂದ ಸುಮಾರು 700 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಸಿಗಲಿದ್ದು, ಅದರಲ್ಲಿ ಶೇ. 80 ರಷ್ಟು ಉದ್ಯೋಗಾವಕಾಶಗಳನ್ನು ಸ್ಥಳೀಯ ಸಮುದಾಯದ ಯುವಕ ಮತ್ತು ಮಹಿಳೆಯರಿಗೇ ನೀಡಲಾಗುತ್ತಿದೆ.

ಭಾರತದಿಂದ ವರ್ಷಕ್ಕೆ 700ರಿಂದ 1,000 ಟನ್ ಚಿನ್ನ ಆಮದು

ಭಾರತವು ಪ್ರತಿವರ್ಷ ಸುಮಾರು 700 ರಿಂದ 1,000 ಟನ್ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ನಂತರ ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುವುದು ಚಿನ್ನವನ್ನೇ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶಿಯವಾಗಿ ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಗಣಿಗಳು ಆರಂಭವಾಗುತ್ತಿರುವುದು ಭಾರತದ ಆಮದು ಅವಲಂಬನೆಯನ್ನು ತಗ್ಗಿಸಲು ಮತ್ತು ‘ಆತ್ಮನಿರ್ಭರ ಭಾರತ’ದ ಕನಸಿಗೆ ದೊಡ್ಡ ಬಲ ತುಂಬಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು – Kannada News | Devanahalli Vijayapura Police Arrest Petrol Bunk Worker Turned Bike Thief Khalil Ahmed, Seize 42 Stolen Bikes

ಪೊಲೀಸರು ಜಪ್ತಿ ಮಾಡಿದ ಬೈಕ್​ಗಳುImage Credit source: tv9

ದೇವನಹಳ್ಳಿ, ಜೂನ್ 25: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಮಾಯವಾಗುತ್ತಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದ ವಿಜಯಪುರ ಠಾಣೆ ಪೊಲೀಸರು, ಒಂದೂವರೆ ವರ್ಷದಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಖತರ್ನಾಕ್ ಕಳ್ಳ ಖಲೀಲ್ ಅಹ್ಮದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 42 ಕದ್ದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಡೀ ಪೊಲೀಸ್ ಠಾಣೆಯ ಆವರಣವೇ ಸದ್ಯ ಬೈಕ್‌ಗಳ ಜಾತ್ರೆಯಂತೆ ಕಾಣಿಸುತ್ತಿದೆ.

ಸಂಬಳ ಸಾಕಾಗದೆ ಕಳ್ಳತನವನ್ನೇ ಕಸುಬಾಗಿಸಿಕೊಂಡ!

ಆರೋಪಿ ಖಲೀಲ್ ಅಹ್ಮದ್ ಕಳ್ಳತನದ ರೋಚಕ ಕಥೆಯನ್ನು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಅಲ್ಲಿ ಬರುತ್ತಿದ್ದ ಸಂಬಳದಲ್ಲಿ ಮೂವರು ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿದ್ದ ಬಡತನದ ಕಾರಣಕ್ಕೆ ಸುಲಭವಾಗಿ ಹಣ ಗಳಿಸಲು ಪ್ಲಾನ್ ಮಾಡಿದ ಈತ, ನಕಲಿ ಕೀಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡಿದ, ಬಸ್ ನಿಲ್ದಾಣ ಮತ್ತು ಬ್ಯಾಂಕ್‌ಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದಿಯುವುದನ್ನು ಕಾಯಕ ಮಾಡಿಕೊಂಡಿದ್ದ.

ಕೇವಲ 3 ಸಾವಿರ ರೂ.ಗೆ ಕದ್ದ ಬೈಕ್ ಮಾರುತ್ತಿದ್ದ ಆಸಾಮಿ

ಆರೋಪಿಯು ಕದ್ದ ಬೈಕ್‌ಗಳನ್ನು ಕೇವಲ 2 ರಿಂದ 3 ಸಾವಿರ ರೂಪಾಯಿಗಳಿಗೆ ಕೋಲಾರ ಹಾಗೂ ಮಾಲೂರು ಭಾಗದ ಬ್ರೋಕರ್‌ಗಳಿಗೆ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕದ್ದ ಬೈಕ್ ಖರೀದಿಸಿದ ಐದು ಜನ ಬ್ರೋಕರ್‌ಗಳ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋರ್ಟ್ ಅಲೆಯುವ ಹಾಗಿಲ್ಲ; ಠಾಣೆಯಲ್ಲೇ ಬೈಕ್ ವಾಪಸ್!

ಸಾಮಾನ್ಯವಾಗಿ ಕದ್ದ ವಾಹನಗಳು ಸಿಕ್ಕರೂ ಅವುಗಳನ್ನು ಮರಳಿ ಪಡೆಯಲು ಸಾರ್ವಜನಿಕರು ನ್ಯಾಯಾಲಯಕ್ಕೆ ಅಲೆದು ವಕೀಲರ ವೆಚ್ಚ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ವಿಜಯಪುರ ಪೊಲೀಸರು ಜಾರಿಗೆ ತಂದಿರುವ ವಿನೂತನ ಜನಸ್ನೇಹಿ ಯೋಜನೆಯಡಿ, ಬೈಕ್ ಕಳೆದುಕೊಂಡ ಮಾಲೀಕರು ಕೋರ್ಟ್‌ಗೆ ಹೋಗುವ ಅಗತ್ಯವಿಲ್ಲದೆ ಠಾಣೆಯಲ್ಲೇ ಸೂಕ್ತ ದಾಖಲೆಗಳನ್ನು ನೀಡಿ, ಬಾಂಡ್ ಪೇಪರ್ ಬರೆದುಕೊಟ್ಟು ತಮ್ಮ ವಾಹನಗಳನ್ನು ನೇರವಾಗಿ ಬಿಡಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಕೋರ್ಟ್‌ಗೆ ಅಲೆಯಬೇಕಿಲ್ಲ! ಕಳವಾಗಿದ್ದ ಬೈಕ್‌ಗಳನ್ನು ಠಾಣೆಯಲ್ಲೇ ಮಾಲೀಕರಿಗೆ ಒಪ್ಪಿಸಿ ವಿಜಯಪುರ ಪೊಲೀಸರ ವಿನೂತನ ಕಾರ್ಯ

ಕಳೆದುಹೋದ ಬೈಕ್‌ಗಳ ಮೇಲಿನ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ಸಾರ್ವಜನಿಕರು ಹಾಗೂ ಸಂತ್ರಸ್ತರು ಇದೀಗ ತಮ್ಮ ವಾಹನಗಳು ಕೈಸೇರುತ್ತಿರುವುದನ್ನು ಕಂಡು ಪೊಲೀಸರ ಕಾರ್ಯವೈಖರಿಗೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುತ್ತತ್ತಿ ಕಾವೇರಿ ನದಿಯಲ್ಲಿ ಐವರು ಜಲಸಮಾಧಿ: ಕೊನೇ ಕ್ಷಣದ ವಿಡಿಯೋ ವೈರಲ್

ಮಂಡ್ಯ, ಜೂನ್​​ 25: ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಜಲಕ್ರೀಡೆಗೆ ಇಳಿದಿದ್ದ ನಾಲ್ವರು ಮಹಿಳೆಯರು ಮತ್ತು ಅವರನ್ನು ರಕ್ಷಿಸಲು ಯತ್ನಿಸಿದ ಕಾರು ಚಾಲಕ ಸೇರಿದಂತೆ ಐವರು ಜಲಸಮಾಧಿಯಾಗಿರುವ ಘಟನೆ ನಿನ್ನೆ ನಡೆದಿತ್ತು. ಸಾವಿಗೂ ಮುನ್ನ ಸಂತಸದಿಂದ ನೀರಿಗೆ ಇಳಿದಿದ್ದವರ ಕೊನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದೇವಸ್ಥಾನಕ್ಕೆ ತೆರಳಿದ್ದ ನಾಲ್ವರು ಮಹಿಳೆಯರು ನೀರಿಗೆ ಇಳಿದಿದ್ದು, ಆರಂಭದಲ್ಲಿ ನೀರು ಮೊಣಕಾಲು ಮಟ್ಟಕ್ಕೆ ಮಾತ್ರ ಇತ್ತು. ನೀರಿನಲ್ಲಿ ಆಟವಾಡುವಾಗ ಅವರಲ್ಲಿ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಉಳಿದ ಮೂವರು ಮಹಿಳೆಯರು ಮತ್ತು ನಂತರ ಕಾರು ಚಾಲಕ ಮಹೇಶ್ ಪ್ರಯತ್ನಿಸಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುಪಿ ಚುನಾವಣೆಗೆ ಬಿಜೆಪಿಯ ಬಿಗ್ ಪ್ಲಾನ್, ಹೊಸ ಟೀಮ್, ವಯೋಮಿತಿ ಫಿಕ್ಸ್, ರಾಜನಾಥ್ ಪುತ್ರ ನೀರಜ್ ಸಿಂಗ್‌ಗೆ ಉಪಾಧ್ಯಕ್ಷ ಪಟ್ಟ – Kannada News | UP BJP New Team: Rajnath Singh’s Son Neeraj Gets Key Role for 2027 Elections

ಲಕ್ನೋ, ಜೂನ್ 25: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ(Assembly Election)ಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಬೃಹತ್ ಗುರಿಯೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ, ದೆಹಲಿ ಮತ್ತು ಲಕ್ನೋದಲ್ಲಿ ನಡೆದ ಹಿರಿಯ ನಾಯಕರ ಸರಣಿ ಸಭೆಗಳ ಬಳಿಕ, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ನೇತೃತ್ವದಲ್ಲಿ ಹೊಸ ರಾಜ್ಯ ಸಂಘಟನಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ತಳಮಟ್ಟದ ಜಾಲವನ್ನು ಬಲಪಡಿಸಲು ಈ ಹೊಸ ತಂಡದಲ್ಲಿ 19 ಉಪಾಧ್ಯಕ್ಷರು ಮತ್ತು 8 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಜನಾಥ್ ಸಿಂಗ್ ಪುತ್ರ ಮತ್ತು ಹಿರಿಯ ನಾಯಕರಿಗೆ ಸ್ಥಾನ
ಈ ಹೊಸ ಪಟ್ಟಿಯಲ್ಲಿ ಹಿರಿಯ ನಾಯಕರ ಜೊತೆಗೆ ಪ್ರಮುಖ ರಾಜಕೀಯ ವಾರಸುದಾರರಿಗೂ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ನೀರಜ್ ಸಿಂಗ್ ಅವರನ್ನು ಉತ್ತರ ಪ್ರದೇಶದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಅವರೊಂದಿಗೆ ಮಾಜಿ ಸಚಿವ ಸುರೇಶ್ ರಾಣಾ, ಅರ್ಚನಾ ಮಿಶ್ರಾ ಮತ್ತು ಪೂಜಾ ಪಾಲ್ ಹೊಸ ತಂಡದಲ್ಲಿ ಉಪಾಧ್ಯಕ್ಷರಾಗಿ ಗುರುತರ ಪಾತ್ರ ವಹಿಸಲಿದ್ದಾರೆ.

ನೂತನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ
ರಾಜ್ಯದ ವಿವಿಧ ವಲಯಗಳು ಹಾಗೂ ಸಾಮಾಜಿಕ ಸಮುದಾಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಪಕ್ಷವು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದೆ. ಅಭಿಜತ್ ಮಿಶ್ರಾ, ಶಂಕರ್ ಲೋಧಿ, ದಿಲೀಪ್ ಪಟೇಲ್ ಮತ್ತು ರಾಜೇಶ್ ಚೌಧರಿ ಅವರಿಗೆ ಯುಪಿ ಬಿಜೆಪಿಯ ಹೊಸ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ವಹಿಸಲಾಗಿದೆ.

ಮತ್ತಷ್ಟು ಓದಿ: Assembly Election Results 2026: ಐದು ರಾಜ್ಯಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ, ಇಂದು ವಿಧಾನಸಭಾ ಚುನಾವಣಾ ಫಲಿತಾಂಶ

ಆರು ಪ್ರಮುಖ ವಲಯಗಳಿಗೆ ಪ್ರಾದೇಶಿಕ ಅಧ್ಯಕ್ಷರ ನೇಮಕ
ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಪಕ್ಷದ ಚುನಾವಣಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಆರು ಪ್ರಮುಖ ಪ್ರಾದೇಶಿಕ ಅಧ್ಯಕ್ಷರನ್ನು ಘೋಷಿಸಲಾಗಿದೆ.

ಗೋರಖ್‌ಪುರ: ವಿನೋದ್ ರಾಯ್

ಅವಧ್: ಅವಧ್ ದ್ವಿವೇದಿ

ಕಾಶಿ: ಅಶೋಕ್ ಚೌರಾಸಿಯಾ

ಕಾನ್ಪುರ: ರಾಮ್‌ಕಿಶೋರ್ ಸಾಹು

ಪಶ್ಚಿಮ ಪ್ರದೇಶ: ನವಾಬ್ ಸಿಂಗ್ ನಗರ

ಬ್ರಜ್ ಪ್ರದೇಶ: ಪೂರನ್ ಲೋಧಿ

ಯುವ ನಾಯಕತ್ವಕ್ಕೆ ಆದ್ಯತೆ
ಈ ಬಾರಿಯ ಪುನರಚನೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇದರ ಭಾಗವಾಗಿ, ಭಾರತೀಯ ಜನತಾ ಯುವ ಮೋರ್ಚಾ’ (BJYM) ರಾಜ್ಯ ಅಧ್ಯಕ್ಷ ಹುದ್ದೆಗೆ ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಈ ಮೂಲಕ ಯುವ ಮತದಾರರನ್ನು ಸೆಳೆಯಲು ಪಕ್ಷ ಹೊಸ ಪ್ಲಾನ್ ಮಾಡಿದೆ.

ಈ ಮಹತ್ವದ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹಾಗೂ ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಅವರು ಸುಮಾರು 30 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ಪ್ರತಿಯೊಂದು ಹೆಸರನ್ನು ಪರಿಶೀಲಿಸಿದ ನಂತರವೇ ಕೇಂದ್ರ ನಾಯಕತ್ವದ ಒಪ್ಪಿಗೆಯೊಂದಿಗೆ ಈ ಅಂತಿಮ ಮುದ್ರೆ ಒತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:36 pm, Thu, 25 June 26

Source link

ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ಹೊಸ ಗೇಟ್‌ಗಳ ಉದ್ಘಾಟನೆ – Kannada News | Historic Unveiling: TB Dams Modernised Gates 18 21 Witnessed by Three States CMs and Union Minister.

ಕೊಪ್ಪಳ, ಜೂ.25: ಮುನಿರಾಬಾದ್‌ನಲ್ಲಿರುವ ಐತಿಹಾಸಿಕ ತುಂಗಭದ್ರಾ ಜಲಾಶಯದಲ್ಲಿ ಹೊಸ 18, 19, 20, 21ನೇ ಕ್ರಸ್ಟ್ ಗೇಟ್‌ಗಳನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಭಾಗವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರು ಜಂಟಿಯಾಗಿ ನೂತನ ಕ್ರಸ್ಟ್ ಗೇಟ್‌ಗಳ ಉದ್ಘಾಟನೆ ನೆರವೇರಿಸಿದರು. ಗೇಟ್‌ಗಳ ಬಟನ್ ಒತ್ತುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಮಾಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ, ತುಂಗಭದ್ರಾ ಜಲಾಶಯದ ಅಧಿಕಾರಿಗಳು ನೂತನ ಕ್ರಸ್ಟ್ ಗೇಟ್‌ಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಈ ಲೋಕಾರ್ಪಣೆಯು ಜಲಾಶಯದ ನೀರು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರದೇಶದ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ತುಂಗಭದ್ರಾ ಜಲಾಶಯದ ಸುದೀರ್ಘ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾವು ಬೆಳೆಗಾರರ ಸಂಕಷ್ಟಕ್ಕೆ ಕೆಂದ್ರದಿಂದ ಸ್ಪಂದನೆ: ತೋತಾಪುರಿ ಮಾವಿಗೆ ಸಹಾಯಧನ ಘೋಷಣೆ – Kannada News | Central Government Approves 1,750 Per Quintal Subsidy for 1.30 Lakh Metric Tonnes of Totapuri Mangoes in Karnataka

ಬೆಂಗಳೂರು, ಜೂನ್​​ 25: ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕದ ಮಾವು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಮಿಡಿದಿದ್ದು, ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme – MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನವನ್ನು ರೈತರಿಗೆ ನೀಡಲು ಅನುಮೋದನೆ ನೀಡಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಎಕ್ಸ್​​ ಪೋಸ್ಟ್​​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಹ್ಲಾದ್​​ ಜೋಶಿ ಪೋಸ್ಟ್​​ನಲ್ಲಿ ಏನಿದೆ?

ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ತಾನು ಮನವಿ ಮಾಡಿದ್ದೆ. ಆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme – MIS) ಅಡಿಯಲ್ಲಿ ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿರೋದಾಗಿ ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ:  ಕೋಲಾರದಲ್ಲಿ ವಾಹನಗಳನ್ನು ತಡೆದು, ರಸ್ತೆ ಬಂದ್​ ಮಾಡಿ ಮಾವು ಬೆಳೆಗಾರರ ಪ್ರತಿಭಟನೆ!

ಕೃಷಿ ಸಚಿವರಿಗೆ ಜೋಶಿ ಧನ್ಯವಾದ

ಇನ್ನು ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದವನ್ನೂ ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ. ಈ ನಿರ್ಧಾರವು ಸಾವಿರಾರು ರೈತ ಕುಟುಂಬಗಳಿಗೆ ನೆರವಾಗಲಿದ್ದು, ಅವರ ಆರ್ಥಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್​​ ಅವರಿಗೆ ಕರ್ನಾಟಕದ ಸಮಸ್ತ ರೈತರ ಪರವಾಗಿ ಧನ್ಯವಾದಗಳನ್ನು ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:12 pm, Thu, 25 June 26

Source link

ರಾಜ್ಯದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಿ ಸಿಎಂ ಆದೇಶ; ಯಾರಿಗೆ ಯಾವ ಜಿಲ್ಲೆಯ ಜವಾಬ್ದಾರಿ? ಇಲ್ಲಿದೆ ಕಂಪ್ಲೀಟ್ ಲಿಸ್ಟ್ – Kannada News | CM Allocates District Oversight to Karnataka Cabinet for Flood Management

ಬೆಂಗಳೂರು, ಜೂ.25: ರಾಜ್ಯದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಹಾಗೂ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಮತ್ತು ಪ್ರಮುಖವಾಗಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಂಪುಟದ ಪ್ರಮುಖ ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದ್ದು, ಡಿಸಿಎಂ ಡಾ. ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಹಾಗೂ ಯುವ ನಾಯಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಸಚಿವರು ಮತ್ತು ಹಂಚಿಕೆಯಾಗಿರುವ ಜಿಲ್ಲೆಗಳ ವಿವರ ಪಟ್ಟಿ:

ಸಚಿವರ ಹೆಸರು ಜಿಲ್ಲೆಗಳು
ಡಾ. ಜಿ. ಪರಮೇಶ್ವರ (ಡಿಸಿಎಂ) ತುಮಕೂರು ಮತ್ತು ಚಿತ್ರದುರ್ಗ
ಕೃಷ್ಣ ಭೈರೇಗೌಡ ಬೆಂಗಳೂರು ನಗರ ಮತ್ತು ಹಾಸನ
ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
ಕೆ.ಹೆಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು ಮತ್ತು ಚಾಮರಾಜನಗರ
ಯು.ಟಿ. ಖಾದರ್ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ
ಎಂ.ಬಿ. ಪಾಟೀಲ್ ವಿಜಯಪುರ ಮತ್ತು ಬಾಗಲಕೋಟೆ
ಪ್ರಿಯಾಂಕ್ ಖರ್ಗೆ ಕಲಬುರಗಿ ಮತ್ತು ಯಾದಗಿರಿ
ಸತೀಶ್ ಜಾರಕಿಹೊಳಿ ಬೆಳಗಾವಿ, ಧಾರವಾಡ ಮತ್ತು ಹಾವೇರಿ
ಕೆ.ಜೆ. ಜಾರ್ಜ್ ಚಿಕ್ಕಮಗಳೂರು ಮತ್ತು ದಾವಣಗೆರೆ
ಈಶ್ವರ ಖಂಡ್ರೆ ಬೀದರ್ ಮತ್ತು ಗದಗ
ಭೈರತಿ ಸುರೇಶ್ ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ. ಶರಣಪ್ರಕಾಶ್ ಪಾಟೀಲ್ ರಾಯಚೂರು ಮತ್ತು ಕೊಪ್ಪಳ

ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಪರಿಹಾರ ಕಾಮಗಾರಿಗಳ ಉಸ್ತುವಾರಿ ವಹಿಸಲು ಮುಖ್ಯಮಂತ್ರಿಗಳು ಸಚಿವರಿಗೆ ವಿವಿಧ ಜಿಲ್ಲೆಗಳ ತುರ್ತು ಪ್ರಕೃತಿ ವಿಕೋಪ ಮೇಲುಸ್ತುವಾರಿಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಿದ್ದಾರೆ.

ಸದ್ಯ ಹೊರಬಿದ್ದಿರುವ ಈ ಪಟ್ಟಿಯು ಪೂರ್ಣ ಪ್ರಮಾಣದ ಅಧಿಕೃತ ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲ, ಬದಲಿಗೆ ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿಗಾಗಿ ಮಾತ್ರ ಸಚಿವರಿಗೆ ಈ ತಾತ್ಕಾಲಿಕ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ಪ್ರಮುಖ ರಾಜಕೀಯ ಮೂಲಗಳು ಸ್ಪಷ್ಟಪಡಿಸಿವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತೀವ್ರವಾಗಿರುವುದರಿಂದ ಯು.ಟಿ. ಖಾದರ್ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಆಯಾ ಸೂಕ್ಷ್ಮ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್

ಈ ಹಂಚಿಕೆಯು ಕೇವಲ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ತಕ್ಷಣದ ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಲು ಮಾಡಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಪೂರ್ಣ ಪ್ರಮಾಣದ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:19 pm, Thu, 25 June 26

Source link

ವೈಭವ್ ಶತಕ ಬಾರಿಸಿದ್ರೆ ಬೆತ್ತಲಾಗುವೆ: ಪಾಕ್ ಮಾಜಿ ಕ್ರಿಕೆಟಿಗನ ಸವಾಲು! – Kannada News | Tanvir Ahmed’s Bold Claim on Vaibhav Sooryavanshi

ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವುದನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈ ಕಾಯುವಿಕೆಯ ನಡುವೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ತನ್ವೀರ್ ಅಹ್ಮದ್ ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ತನ್ವೀರ್ ಮುಂದಿಟ್ಟಿರುವ ವಿಲಕ್ಷಣ ಬಹಿರಂಗ ಸವಾಲು.

ಬೆತ್ತಲೆ ಸವಾಲು!

ವೈಭವ್ ಸೂರ್ಯವಂಶಿ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ತನ್ವೀರ್ ಅಹ್ಮದ್, ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಗಳಿಸಿದರೆ ತಾನು ಲಾಹೋರ್‌ನ ಬೀದಿಗಳಲ್ಲಿ ಬೆತ್ತಲೆಯಾಗಿ ನಡೆಯುವುದಾಗಿ ಘೋಷಿಸಿದ್ದಾರೆ!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಥವಾ ಏಷ್ಯಾ ಉಪಖಂಡದ ಪಿಚ್‌ಗಳಲ್ಲಿ ರನ್ ಬಾರಿಸುವುದು ಸುಲಭ. ಆದರೆ ಇಂಗ್ಲೆಂಡ್‌ನ ಸ್ವಿಂಗ್ ಪಿಚ್​ನಲ್ಲಿ ಆಡುವ ಸವಾಲೇ ಬೇರೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಬಾರಿಸಲಿ ನೋಡೋಣ. ಆತ ಸೆಂಚುರಿ ಸಿಡಿಸಿದರೆ ನಾನು ಲಾಹೋರ್​ ಬೀದಿಯಲ್ಲಿ ಬೆತ್ತಲಾಗಿ ಓಡಾಡುವೆ ಎಂದು ತನ್ವೀರ್ ಅಹ್ಮದ್ ಘೋಷಿಸಿದ್ದಾರೆ.

ವಯಸ್ಸಿನ ಬಗ್ಗೆ ಡೌಟ್:

ತನ್ವೀರ್ ಅಹ್ಮದ್ ಕೇವಲ ಬೆತ್ತಲೆ ಸವಾಲು ಮಾತ್ರ ಹಾಕಿಲ್ಲ. ಇದರ ಜೊತೆಗೆ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದಾರೆ.

ವೈಭವ್ ಸೂರ್ಯವಂಶಿಗೆ 15 ವರ್ಷ ಎನ್ನುವುದು ಶುದ್ಧ ಸುಳ್ಳು. ನನ್ನ ಪ್ರಕಾರ ಆತನಿಗೆ ಕನಿಷ್ಠ 22 ವರ್ಷ ವಯಸ್ಸಾಗಿದೆ. ಆತನ ಹಿಪ್ ರೊಟೇಷನ್ ಮತ್ತು ಸಿಕ್ಸರ್ ಹೊಡೆಯುವ ಶಕ್ತಿ 15 ವರ್ಷದ ಹುಡುಗನಿಗೆ ಇರಲು ಸಾಧ್ಯವೇ ಇಲ್ಲ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ವೈಭವ್​ ಸ್ಲಾಗರ್ ಬ್ಯಾಟರ್. ಸಣ್ಣ ಬೌಂಡರಿಗಳಿರುವ ಮೈದಾನಗಳಲ್ಲಿ ಅಡ್ಡಾದಿಡ್ಡಿ ಬ್ಯಾಟ್ ಬೀಸುವ ಒಬ್ಬ ‘ಬ್ಲೈಂಡ್ ಸ್ಲಾಗರ್’ ಅಷ್ಟೇ ಎಂದು ಟೀಕಿಸಿದ್ದಾರೆ.

ವೈಭವ್ ಮುಂದಿದೆ 7 ಪಂದ್ಯಗಳು:

ಭಾರತ ತಂಡವು ಬ್ಯಾಕ್ ಟು ಬ್ಯಾಕ್ 7 ಟಿ20 ಪಂದ್ಯಗಳನ್ನಾಡಲಿದೆ. ಮೊದಲಿಗೆ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ 5 ಮ್ಯಾಚ್​ಗಳ ಟಿ20 ಸರಣಿ ಜರುಗಲಿದೆ. ಈ ಪಂದ್ಯಗಳ ಮೂಲಕ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವುದು ಖಚಿತ.

ಇದನ್ನೂ ಓದಿ: ಟೀಮ್ ಇಂಡಿಯಾ ಮುಂದಿದೆ 3 ಆಯ್ಕೆ: ಇನಿಂಗ್ಸ್ ಆರಂಭಿಸುವವರು ಯಾರು?

ಅದರಲ್ಲೂ ಅತ್ಯುತ್ತಮ ಫಾರ್ಮ್​ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಈ ಸರಣಿಯಲ್ಲಿ ಕಣಕ್ಕಿಳಿದರೆ ಅವರು ಇಂಗ್ಲೆಂಡ್ ವಿರುದ್ಧ ಕೂಡ ಬ್ಯಾಟ್ ಬೀಸಲಿದ್ದಾರೆ. ಈ ಮೂಲಕ ತನ್ವೀರ್ ಅಹ್ಮದ್ ಅವರ ಬೆತ್ತಲೆ ಸವಾಲಿಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

Source link

25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್ – Kannada News | GBA’s 350 Cr Minerva Hudson Flyover Plan Questioned Over Prior 25 Cr White Topping

ಬೆಂಗಳೂರು, ಜೂ.25: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ನಗರದಲ್ಲಿ ಬರೋಬ್ಬರಿ 75 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ. ಇದರ ಭಾಗವಾಗಿ ನಗರದ ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್ ವರೆಗೆ 350 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ 2.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ (Flyover) ನಿರ್ಮಾಣ ಮಾಡಲು ಜಿಬಿಎ ಅಡಿಯ ‘ಬಿ ಸ್ಮೈಲ್’ ಯೋಜನೆ ಚಾಲನೆ ನೀಡಿದೆ. ಸಂಚಾರ ನಿಯಂತ್ರಿಸಲು ಫ್ಲೈಓವರ್ ಮಾಡುವುದು ಸ್ವಾಗತಾರ್ಹವಾದರೂ, ಅಧಿಕಾರಿಗಳ ಕನಿಷ್ಠ ಮುಂದಾಲೋಚನೆ ಇಲ್ಲದ ಯೋಜನೆಗಳಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವ ಆಘಾತಕಾರಿ ಸತ್ಯವೊಂದು ಈಗ ಬಯಲಾಗಿದೆ.

ಯಾವ ಜೆಸಿ ರಸ್ತೆಯಲ್ಲಿಈಗ 350 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆಯೋ, ಅದೇ ರಸ್ತೆಯನ್ನು ಇತ್ತೀಚೆಗಷ್ಟೇ ಬರೋಬ್ಬರಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣ (ವೈಟ್ ಟ್ಯಾಪಿಂಗ್) ಮಾಡಲಾಗಿತ್ತು. ಈಗ ಮತ್ತೆ ಅದೇ ಮಾರ್ಗದಲ್ಲಿ ಫ್ಲೈಓವರ್ ಕಾಮಗಾರಿ ಶುರುವಾದರೆ, ಬೃಹತ್ ಪಿಲ್ಲರ್‌ಗಳನ್ನು ಅಳವಡಿಸಲು ಈ ಹೊಸ ವೈಟ್ ಟ್ಯಾಪಿಂಗ್ ರಸ್ತೆಯನ್ನು ಅಗೆಯುವುದು ಬಹುತೇಕ ಖಚಿತ. ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಮಣ್ಣುಪಾಲಾಗುತ್ತಿದೆ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಮುಂದೆ ಫ್ಲೈಓವರ್ ಬರುತ್ತದೆ ಎಂದು ಗೊತ್ತಿದ್ದರೂ ಕೋಟಿ ಕೋಟಿ ಖರ್ಚು ಮಾಡಿ ವೈಟ್ ಟ್ಯಾಪಿಂಗ್ ಮಾಡಿದ್ದು ಯಾಕೆ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿ, ಗಲೀಜು: ಮಕ್ಕಳ ಆರೋಗ್ಯಕ್ಕೆ ಸಂಚಕಾರ

ಈ ದೊಡ್ಡ ವಿವಾದ ಹಾಗೂ ಸಾರ್ವಜನಿಕರ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಜಿಬಿಎ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು, “ಈಗಾಗಲೇ ನಿರ್ಮಿಸಲಾಗಿರುವ ವೈಟ್ ಟ್ಯಾಪಿಂಗ್ ರಸ್ತೆಗೆ ಯಾವುದೇ ರೀತಿಯ ಧಕ್ಕೆ ಅಥವಾ ಹಾನಿ ಉಂಟಾಗದ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಫ್ಲೈಓವರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು” ಎಂದು ಹೇಳುವ ಮೂಲಕ ಸಮಜಾಯಿಷಿ ನೀಡಿದ್ದಾರೆ. ಆದರೆ, ಕಣ್ಣೆದುರಗೇ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗುವ ಲಕ್ಷಣಗಳು ಕಾಣಿಸುತ್ತಿರುವುದರಿಂದ, ಜಿಬಿಎ ಇಂಜಿನಿಯರ್‌ಗಳ ಇಂತಹ ದೂರದೃಷ್ಟಿ ಇಲ್ಲದ ಯಡ್ಬಟ್ಟು ಪ್ಲಾನ್‌ಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ಉಂಟಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Thu, 25 June 26

Source link

Exit mobile version