ಬೆಳಗಾವಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ – Kannada News | Belagavi Road Accident: Parents and 9 Month Old Baby Killed on the Spot as Wrong Side Goods Auto Rams Bike in Rayabag

ಅಪಘಾತದ ತೀವ್ರತೆಗೆ ಗೂಡ್ಸ್ ಆಟೋ ಪಲ್ಟಿಯಾಗಿರುವುದುImage Credit source: tv9

ಬೆಳಗಾವಿ, ಮೇ 26: ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ರಾಂಗ್ ಸೈಡ್​ನಲ್ಲಿ ಬಂದ ಗೂಡ್ಸ್ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಒಂಬತ್ತು ತಿಂಗಳ ಕಂದಮ್ಮ ಸೇರಿದಂತೆ ತಂದೆ-ತಾಯಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮಾನೆ (27), ಅವರ ಪತ್ನಿ ಸಾಕ್ಷಿ ಮಾನೆ (23) ಹಾಗೂ ಒಂಬತ್ತು ತಿಂಗಳ ಮಗು ಸಮರ್ಥ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತೊಂದು ಮಗುವಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮುಖ್ಯಾಂಶಗಳು

  • ಬೈಕ್‌ಗೆ ಗೂಡ್ಸ್ ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು.
  • ಬೊಮ್ಮನಾಳ ಗ್ರಾಮದಿಂದ ರಾಯಬಾಗಕ್ಕೆ ತೆರಳುವ ರಸ್ತೆಯಲ್ಲಿ ಘಟನೆ.
  • ಆಟೋ ಚಾಲಕನ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ.

ಗ್ರಾಮದಲ್ಲಿ ಸೂತಕದ ಛಾಯೆ

ಮಹಾಂತೇಶ್ ಮಾನೆ ಕುಟುಂಬದೊಂದಿಗೆ ಬೊಮ್ಮನಾಳ ಗ್ರಾಮದಿಂದ ಬೈಕ್‌ನಲ್ಲಿ ರಾಯಬಾಗ ಪಟ್ಟಣಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಟ್ಟಣದ ಹೊರವಲಯದ ರಸ್ತೆಯಲ್ಲಿ ಎದುರಿನಿಂದ ಅತಿ ವೇಗವಾಗಿ ಮತ್ತು ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಆಟೋ ಚಾಲಕ ಬೈಕ್‌ಗೆ ನೇರವಾಗಿ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ದಂಪತಿ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಆಟೋ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ರಾಯಬಾಗ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡಿರುವ ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ ಮೂವರು ಅಸುನೀಗಿರುವುದಕ್ಕೆ ಬೊಮ್ಮನಾಳ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ

ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಲೆಮರೆಸಿಕೊಂಡಿರುವ ಆಟೋ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ಮಗಳನ್ನು ಕಳೆದುಕೊಂಡಿದ್ದೇನೆ, ಮಮತಾ ಅಧಿಕಾರವನ್ನು, ಆರ್​ಜಿ ಕರ್ ಸಂತ್ರಸ್ತೆಯ ತಾಯಿಯ ಭಾವುಕ ಮಾತು – Kannada News | Mamata Defeat: RG Kar Victim’s Mother Calls It Justice’s First Step

ಕೋಲ್ಕತ್ತಾ, ಮೇ 26: ಪಶ್ಚಿಮ ಬಂಗಾಳ(West Bengal)ದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇದರ ಬೆನ್ನಲ್ಲೇ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ವೈದ್ಯೆಯ ತಾಯಿ ಹಾಗೂ ಪ್ರಸ್ತುತ ಪಾಣಿಹಟಿ ಕ್ಷೇತ್ರದ ಬಿಜೆಪಿ ಶಾಸಕಿ ರತ್ನಾ ದೇಬ್ನಾಥ್ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ನಬನ್ನಾದ 14ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಭೇಟಿಯಾದ ನಂತರ ರತ್ನಾ ದೇಬ್ನಾಥ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಾಮಾಣಿಕತೆಯ ಶಕ್ತಿ ಅಪಾರವಾಗಿದೆ. ಅನ್ಯಾಯದ ವಿರುದ್ಧ ತಾಳ್ಮೆಯಿಂದ ಹೋರಾಡುವುದು ಮಾತ್ರ ನಮಗೆ ಅಗತ್ಯವಾಗಿತ್ತು ಎಂದು ಬರೆದಿರುವ ಅವರು, ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಚುನಾವಣಾ ಸೋಲನ್ನು ತಮ್ಮ ಮಗಳ ಸಾವಿಗೆ ಹೋಲಿಸಿದ್ದಾರೆ.

ರತ್ನಾ ದೇಬ್ನಾಥ್ ಅವರ ವರ್ಷದ ಮಗಳು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯೆಯಾಗಿದ್ದರು. 2024ರ ಆಗಸ್ಟ್ 8 ಮತ್ತು 9ರ ಮಧ್ಯರಾತ್ರಿ ಆಸ್ಪತ್ರೆಯ ಸೆಮಿನಾರ್ ಕೋಣೆಯೊಳಗೆ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಮತ್ತಷ್ಟು ಓದಿ: ಸುವೇಂದು ಆಪ್ತ ಸಹಾಯಕ ಚಂದ್ರನಾಥ್ ರಥ್ ಕೊಲೆಯಾಗಿದ್ದು ಹೇಗೆ? ಭೀಕರ ಕೃತ್ಯದ ವಿವರ ಇಲ್ಲಿದೆ

ಹಿಂದಿನ ಟಿಎಂಸಿ ಸರ್ಕಾರ ಮತ್ತು ಕೋಲ್ಕತ್ತಾ ಪೊಲೀಸರು ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಮೊದಲಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಕೋಲ್ಕತ್ತಾ ಹೈಕೋರ್ಟ್​ ನಿರ್ದೇಶನದಂತೆ ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದರ ತನಿಖೆ ನಡೆಸುತ್ತಿದ್ದು, ಕಳೆದ ವಾರವಷ್ಟೇ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಅಧಿಕಾರಕ್ಕೆ ಬಂದ ತಕ್ಷಣವೇ ಆ್ಯಕ್ಷನ್‌ಗೆ ಇಳಿದಿರುವ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಆರ್‌ಜಿ ಕರ್ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಹಾಗೂ ಪ್ರಮುಖ ಹುದ್ದೆಗಳಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿಗಳಾದ ವಿನೀತ್ ಗೋಯಲ್, ಇಂದಿರಾ ಮುಖರ್ಜಿ ಮತ್ತು ಅಭಿಷೇಕ್ ಗುಪ್ತಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಈ ಮೂವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಿದ್ದಾರೆ.

ನಾನು ಇಂದು ಶಾಸಕಿಯಾಗಿರಬಹುದು, ಆದರೆ ನನ್ನ ಜೀವನದ ಎಲ್ಲಾ ಸಂತೋಷಗಳು ಮಗಳೊಂದಿಗೆ ಹೋಗಿವೆ. ನನ್ನ ಏಕೈಕ ಉದ್ದೇಶ ನನ್ನ ಮಗಳಿಗೆ ನ್ಯಾಯ ಸಿಗುವುದಾಗಿದೆ. ಈ ಹಿಂದೆ ತನಿಖಾಧಿಕಾರಿಗಳಿಗೆ ನೀಡಿದ್ದ ಪ್ರಮುಖ ಶಂಕಿತರ ಹೆಸರುಗಳ ಪಟ್ಟಿಯನ್ನು ಈಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೂ ಸಲ್ಲಿಸಿದ್ದೇನೆ ಎಂದು ರತ್ನಾ ದೇಬ್ನಾಥ್ ಭಾವುಕರಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇನ್ಮುಂದೆ ಬಹಳ ಸುಲಭವಾಗಿ ಸಿಗಲಿದೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ! ದೇಶದಲ್ಲೇ ಪ್ರಥಮ ವಿನೂತನ ಕಮಾಂಡ್ ಸೆಂಟರ್ ಲೋಕಾರ್ಪಣೆ – Kannada News | India’s First Integrated 108 Ambulance Command Centre Launched in Bengaluru by CM Siddaramaiah

ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ರೂಂ ಲೋಕಾರ್ಪಣೆImage Credit source: Karnataka Govt

ಬೆಂಗಳೂರು, ಮೇ 26: ಸಾರ್ವಜನಿಕರಿಗೆ ಇನ್ನು ಮುಂದೆ ತುರ್ತು ಆರೋಗ್ಯ ಸೇವೆಗಳು ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗಲಿವೆ. ಆ್ಯಂಬುಲೆನ್ಸ್ (Ambulance) ಸಿಗದೆ ರೋಗಿಗಳು ಪರದಾಡುವ ಸ್ಥಿತಿಗೆ ಮುಕ್ತಿಹಾಡಲು ಮುಂದಾಗಿರುವ ಕರ್ನಾಟಕ ಸರ್ಕಾರ, 108 ಆರೋಗ್ಯ ಕವಚ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದೆ. ಬೆಂಗಳೂರಿನ (Bengaluru) ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ, ದೇಶದಲ್ಲೇ ಪ್ರಥಮ ಮಾದರಿಯ ‘ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ರೂಂ’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 25ರ ಸೋಮವಾರದಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿರುವ ಈ ವ್ಯವಸ್ಥೆಯು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದೆ.

ಮುಖ್ಯಾಂಶಗಳು

  • ಒಂದೇ ಸೂರಿನಡಿ ಲಭ್ಯವಾಗಲಿವೆ ರಾಜ್ಯದ ಎಲ್ಲಾ ಪ್ರಮುಖ ತುರ್ತು ಸಹಾಯವಾಣಿಗಳು.
  • ಎಲ್ಲ ಭಾಗ್ಯಗಳಿಗಿಂತ ಜನರ ಆರೋಗ್ಯ ಭಾಗ್ಯವೇ ನಮಗೆ ಅತಿ ಮುಖ್ಯ ಎಂದ ಸಿಎಂ.
  • ಬಜೆಟ್ ಭರವಸೆಯಂತೆ ಸರ್ಕಾರದಿಂದಲೇ ಜವಾಬ್ದಾರಿ ಹೊತ್ತು ಹೈಟೆಕ್ ಕೇಂದ್ರ ಸ್ಥಾಪನೆ.

ತ್ವರಿತ ಮತ್ತು ವಿಶ್ವಾಸಾರ್ಹ ತುರ್ತು ಸೇವೆ

ಈ ನೂತನ ಕಮಾಂಡ್ ಸೆಂಟರ್ ಸಾರ್ವಜನಿಕರತುರ್ತು ಅಗತ್ಯಗಳಿಗೆ ಒಂದೇ ಕಂಟ್ರೋಲ್ ರೂಂ ಮೂಲಕ ತಕ್ಷಣ ಸ್ಪಂದಿಸಲಿದೆ. ಗಂಭೀರ ಹಾಗೂ ಸಾಮಾನ್ಯ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಮತ್ತು ಬೇಸಿಕ್ ಲೈಫ್ ಸಪೋರ್ಟ್ (BLS) ಆ್ಯಂಬುಲೆನ್ಸ್ ಕಾರ್ಯಾಚರಣೆಯನ್ನು ಇದು ನಿಯಂತ್ರಿಸಲಿದೆ. ಅಪಘಾತದ ಪ್ರಕರಣಗಳು, ಗರ್ಭಿಣಿಯರ ಆರೈಕೆ ಮತ್ತು ತೀವ್ರ ನಿಗಾ ಅಗತ್ಯವಿರುವ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಉನ್ನತ ಆರೋಗ್ಯ ಸಂಸ್ಥೆಗೆ ಸುರಕ್ಷಿತವಾಗಿ ರವಾನಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.

ಸಿದ್ದರಾಮಯ್ಯರಿಂದ ಲೋಕಾರ್ಪಣೆ

ಇದನ್ನೂ ಓದಿ: ನಮ್ಮ ಮೆಟ್ರೋ ಬ್ಲೂ ಲೈನ್ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲು ಪ್ಲಾನ್!

ಈ ಹಿಂದೆ ತಾಂತ್ರಿಕ ಅಡಚಣೆಗಳಿಂದಾಗಿ 108 ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಸುಧಾರಿಸುವಂತೆ ಸಿಎಂ ನೀಡಿದ್ದ ಖಡಕ್ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆ ಸ್ವತಃ ಜವಾಬ್ದಾರಿ ಹೊತ್ತು ಈ ಹೈಟೆಕ್ ಕೇಂದ್ರವನ್ನು ಸಿದ್ಧಪಡಿಸಿದೆ. ಅತ್ಯಾಧುನಿಕ ಜಿಪಿಎಸ್ ಮತ್ತು ಡಿಜಿಟಲ್ ನೆಟ್‌ವರ್ಕ್ ಹೊಂದಿರುವ ಈ ಹೊಸ ಕಂಟ್ರೋಲ್ ರೂಂ, ಸಾರ್ವಜನಿಕರ ಕರೆ ಬಂದ ತಕ್ಷಣ ಹತ್ತಿರದ ಆ್ಯಂಬುಲೆನ್ಸ್ ಅನ್ನು ಸ್ಥಳಕ್ಕೆ ರವಾನಿಸುವ ಮೂಲಕ ಅಮೂಲ್ಯ ಪ್ರಾಣಗಳನ್ನು ಉಳಿಸಲು ನೆರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:23 am, Tue, 26 May 26

Source link

ಆರ್​​ಆರ್​ ವಿರುದ್ಧ ಕೇಸ್ ಹಾಕಿದ ಅರ್ಜುನ್ ಕಪೂರ್? ಪೋಸ್ಟ್​ ಡಿಲೀಟ್​ಗೆ ಇದುವೇ ಕಾರಣ – Kannada News | Arjun Kapoor vs RR: Why Rajasthan Royals Deleted Controversial IPL Meme on Personality Rights

ಐಪಿಎಲ್ 2026ರ ಪ್ಲೇಆಫ್ ರೇಸ್‌ನಿಂದ ಪಂಜಾಬ್ ಕಿಂಗ್ಸ್ ತಂಡ ಹೊರಬಿದ್ದ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹಾಕಿದ್ದ ಮೀಮ್ ಒಂದು ಚರ್ಚೆ ಹುಟ್ಟುಹಾಕಿತ್ತು. ಈ ಮೀಮ್ ಪಂಜಾಬ್ ಕಾಲೆಳೆಯಲು ಹಾಕಿದ್ದಾದರೂ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಘನತೆಗೆ ಧಕ್ಕೆ ತರುವ ರೀತಿ ಇತ್ತು. ಈಗ ಈ ಮೀಮ್​ ಅನ್ನು ಡಿಲೀಟ್ ಮಾಡಲಾಗಿದೆ. ಅರ್ಜುನ್ ಕಪೂರ್ ಅವರು ಆರ್ಆರ್ ಫ್ರಾಂಚೈಸಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್​​ಆರ್​ ತಂಡದವರು ಈ ಪೋಸ್ಟ್​​ನ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಶನಿವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದಿದ್ದ ಪಂಜಾಬ್ ಕಿಂಗ್ಸ್ 15 ಅಂಕ ಪಡೆದು ಪ್ಲೇಆಫ್ ಆಶಯವನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 30 ರನ್‌ಗಳ ಭರ್ಜರಿ ಗೆಲುವು ಸಾಧಿಸಿ 16 ಅಂಕಗಳ ಮೂಲಕ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತು. ಇದರಿಂದಾಗಿ ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಬೇಕಾಯಿತು.

ಲೀಗ್ ಹಂತದ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ತಂಡ ವಿನಾಕಾರಣ ರಾಜಸ್ಥಾನ ರಾಯಲ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆದಿತ್ತು. ಇದಕ್ಕೆ ತಿರುಗೇಟು ನೀಡಲು ಕಾಯುತ್ತಿದ್ದ ರಾಜಸ್ಥಾನ ರಾಯಲ್ಸ್ ಅಡ್ಮಿನ್, ತಾವು ಪ್ಲೇಆಫ್ ತಲುಪಿದ ತಕ್ಷಣ ಟ್ವಿಟರ್ ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಕೆಣಕುವಂತೆ ‘ಪಂಗಾ ನಾ ಲೋ’ ಎಂಬ ಶೀರ್ಷಿಕೆಯೊಂದಿಗೆ ಒಂದು ಮೀಮ್ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ವಿಡಿಯೋದಲ್ಲೇನಿತ್ತು?

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಮನೆಯಲ್ಲಿ ಕಾರ್ಯಕ್ರಮ ಒಂದು ನಡೆದಿತ್ತು. ಬಂದ ಅತಿಥಿಗಳನ್ನು ಅವರು ಮನೆಯ ಒಳಗೆ ಕಳುಹಿಸುತ್ತಾರೆ. ಕೊನೆಗೆ ಅವರನ್ನೇ ಹೊರಕ್ಕೆ ಇಟ್ಟು ಬಾಗಿಲು ಹಾಕಲಾಗುತ್ತದೆ. ಈ ವಿಡಿಯೋ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ ಬಾಗಿಲು ಮುಚ್ಚಿದೆ ಎಂದು ಲೇವಡಿ ಮಾಡಲು ಅರ್ಜುನ್ ಕಪೂರ್ ಅವರ ವಿಡಿಯೋವನ್ನು ಬಳಸಿಕೊಳ್ಳಲಾಗಿತ್ತು. ಇದು ನಟನ ಘನತೆಗೆ ಕುಂದು ತರುವ ರೀತಿಯಲ್ಲಿ ಇತ್ತೆನ್ನಲಾಗಿದೆ.

ಪೋಸ್ಟ್ ಆದ 24 ಗಂಟೆಗಳ ಒಳಗಾಗಿ ರಾಜಸ್ಥಾನ ರಾಯಲ್ಸ್ ತಂಡ ಈ ವಿಡಿಯೋವನ್ನು ಡಿಲೀಟ್ ಮಾಡಿದೆ. ಅರ್ಜುನ್ ಕಪೂರ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಮತ್ತು ಅವರ ಇಮೇಜ್‌ಗೆ ಧಕ್ಕೆ ತಂದಿದ್ದಕ್ಕಾಗಿ ನೋಟಿಸ್ ನೀಡಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ನಟನ ಕಡೆಯಿಂದಾಗಲಿ ಅಥವಾ ಅವರ ಕಾನೂನು ತಂಡದಿಂದಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಆರ್ಆರ್ ಪೋಸ್ಟ್ ಡಿಲೀಟ್ ಮಾಡಲು ಅಸಲಿ ಕಾರಣ ಇದಾ?

ಇತ್ತೀಚೆಗಷ್ಟೇ ನಟ ಅರ್ಜುನ್ ಕಪೂರ್ ಅವರು ದೆಹಲಿ ಹೈಕೋರ್ಟ್‌ನಿಂದ ತಮ್ಮ ‘ಪರ್ಸನಾಲಿಟಿ ರೈಟ್ಸ್’ ರಕ್ಷಣೆಗಾಗಿ ಮಧ್ಯಂತರ ಆದೇಶವನ್ನು ಪಡೆದುಕೊಂಡಿದ್ದಾರೆ. ಈ ಆದೇಶದ ಪ್ರಕಾರ, ಅರ್ಜುನ್ ಕಪೂರ್ ಅವರ ಅನುಮತಿಯಿಲ್ಲದೆ ಅವರ ಹೆಸರು, ಧ್ವನಿ, ಚಿತ್ರ ಅಥವಾ ವಿಡಿಯೋಗಳನ್ನು ಮಾರ್ಫ್ ಮಾಡಿ, ಎಐ ತಂತ್ರಜ್ಞಾನ ಬಳಸಿ ಅಥವಾ ತಪ್ಪು ಮಾಹಿತಿ ಹರಡುವ ಉದ್ದೇಶಕ್ಕೆ ಬಳಸುವಂತಿಲ್ಲ.

ಇದನ್ನೂ ಓದಿ:  ಸತತ 6 ಗೆಲುವು, ಅಗ್ರಸ್ಥಾನ; ಆರ್​ಸಿಬಿಯನ್ನು ಗೇಲಿ ಮಾಡಿ ಹಳಿತಪ್ಪಿದ ಪಂಜಾಬ್

ಸಾರ್ವಜನಿಕ ಕಾಮೆಂಟ್‌ಗಳಿಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದರೂ, ಯಾವುದೇ ಸೆಲೆಬ್ರಿಟಿಯ ವರ್ಚಸ್ಸಿಗೆ ಧಕ್ಕೆ ತರುವಂತೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸಿದೆ. ಕೋರ್ಟ್‌ನ ಈ ಕಠಿಣ ಆದೇಶದ ಹಿನ್ನೆಲೆಯಲ್ಲಿ, ಮುಂದಾಗಬಹುದಾದ ಕಾನೂನು ಸಂಕಷ್ಟಗಳಿಂದ ಪಾರಾಗಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಕ್ಷಣವೇ ಎಚ್ಚೆತ್ತುಕೊಂಡು ಆ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಪರ ಇನಿಂಗ್ಸ್ ಆರಂಭಿಸುವವರು ಯಾರು? – Kannada News | Virat Kohli’s Opening Partner: Iyer or Salt for IPL 2026: Qualifier 1

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಧರ್ಮಶಾಲಾದ ಹೆಚ್​​ಪಿಸಿಎ ಮೈದಾನದಲ್ಲಿ ಇಂದು (ಮೇ 26) ನಡೆಯಲಿರುವ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಪರ ಇನಿಂಗ್ಸ್ ಆರಂಭಿಸುವವರು ಯಾರು ಎಂಬುದೇ ಪ್ರಶ್ನೆ.

ಏಕೆಂದರೆ ಗಾಯದ ಕಾರಣ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಫಿಲ್ ಸಾಲ್ಟ್ ಇದೀಗ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಇದಾಗ್ಯೂ ಅವರು ಓಪನರ್ ಆಗಿ ಕಣಕ್ಕಿಳಿಯುವ ಬಗ್ಗೆ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಖಚಿತತೆ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಫಿಲ್ ಸಾಲ್ಟ್ ತಮ್ಮ ಬೆರಳಿನ ಗಾಯದಿಂದ ಚೇತರಿಸಿಕೊಂಡಿದ್ದು, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಅವರು ಇನ್ನು ಕೂಡ ವೈದ್ಯಕೀಯ ತಂಡದ ನಿಗಾದಲ್ಲಿದ್ದು, ಧರ್ಮಶಾಲಾ ಪಿಚ್ ನೋಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಅಂದರ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬುದನ್ನು ಇನ್ನೂ ಕೂಡ ನಿರ್ಧರಿಸಲಾಗಿಲ್ಲ. ಪಿಚ್​ ಮೇಲ್ಮೈ ನೋಡಿದ ಬಳಿಕವಷ್ಟೇ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಈ ಹೇಳಿಕೆಯಿಂದಾಗಿಯೇ ಇದೀಗ ಆರ್​ಸಿಬಿ ಪರ ಇನಿಂಗ್ಸ್ ಆರಂಭಿಸುವವರು ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ ಸಾಲ್ಟ್ ಅನುಪಸ್ಥಿತಿಯಲ್ಲಿ ಕೆಲ ಮ್ಯಾಚ್​ಗಳಲ್ಲಿ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಅವರು ಕೂಡ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ.

ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಇತ್ತ ಜೇಕಬ್ ಬೆಥೆಲ್ ಗಾಯಗೊಂಡಿದ್ದ ಕಾರಣ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಯ್ಯರ್ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಫಿಲ್ ಸಾಲ್ಟ್​​ಗೆ ಅವಕಾಶ ನೀಡಬೇಕಿದ್ದರೆ ಇನ್​ಫಾರ್ಮ್​ನಲ್ಲಿರುವ ವೆಂಕಟೇಶ್ ಅಯ್ಯರ್ ಅವರನ್ನು ಕೈ ಬಿಡಬೇಕಾಗಿ ಬರಬಹುದು. ಇಲ್ಲಾ ಇಂಪ್ಯಾಕ್ಟ್ ಪ್ಲೇಯರ್ ಲಿಸ್ಟ್​ನಲ್ಲಿರಿಸಬೇಕಾಗುತ್ತದೆ. ಹೀಗಾಗಿಯೇ ಇದೀಗ ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ಆರಂಭಿಕನ ಆಯ್ಕೆಯೇ ಗೊಂದಲವಾಗಿ ಮಾರ್ಪಟ್ಟಿದೆ.

ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಆರಂಭಿಕ ಜೋಡಿಯನ್ನು ಇನ್ನೂ ಕೂಡ ನಿರ್ಧರಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಗಾಯದಿಂದ ಚೇತರಿಸಿಕೊಂಡಿರುವ ಸಾಲ್ಟ್​ಗೆ ಈ ಪಂದ್ಯದಲ್ಲಿ ಚಾನ್ಸ್ ನೀಡಲು ನಿರ್ಧರಿಸಿದರೆ, ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

ಇಲ್ಲದಿದ್ದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಮುಂದುವರೆಸಲಿದ್ದಾರೆ. ಅಂದರೆ ಇಲ್ಲಿ ಫಿಲ್ ಸಾಲ್ಟ್ ಹಾಗೂ ವೆಂಕಟೇಶ್ ಅಯ್ಯರ್ ನಡುವೆ ನೇರ ಪೈಪೋಟಿ ಇದೆ. ಈ ಪೈಪೋಟಿಯ ಕಾರಣ ಆರಂಭಿಕನಾಗಿ ತಂಡದಲ್ಲಿರುವ ಮತ್ತೋರ್ವ ಆಟಗಾರ ಜೋರ್ಡನ್ ಕಾಕ್ಸ್ ಈ ಪಂದ್ಯದಲ್ಲೂ ಬೆಂಚ್ ಕಾಯಬೇಕಾಗಿ ಬರಬಹುದು.

Source link

Weather Report: ರಾಜ್ಯದ ಜನತೆಗೆ ಸಿಕ್ತು ಬಿಸಿಲಿನಿಂದ ಬಿಗ್ ರಿಲೀಫ್!; ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ – Kannada News | IMD Karnataka Rain Alert: Heavy Showers Expected May 26, Relief from Heat

ಮಳೆಯಲ್ಲಿ ಮಕ್ಕಳು ಆಟವಾಡುವ ಚಿತ್ರ Image Credit source: Tv9 kannada

ಬೆಂಗಳೂರು, ಮೇ,26 :  ತೀವ್ರ ಉಷ್ಣಾಂಶ ಹಾಗೂ ಬೇಸಿಗೆಯ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಕರ್ನಾಟಕದ ಜನತೆಗೆ ವರುಣದೇವ ಕೊನೆಗೂ ತಂಪಾದ ಸುದ್ದಿ ನೀಡಿದ್ದಾನೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಪ್ರಸರಣ ಹಿನ್ನೆಲೆಯಲ್ಲಿ, ಇಂದು (ಮೇ 26) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ವಾತಾವರಣ ಸಂಪೂರ್ಣವಾಗಿ ಮೋಡ ಕವಿದಿರಲಿದ್ದು, ಸಂಜೆಯ ವೇಳೆಗೆ ಭಾರಿ ಗುಡುಗು ಮತ್ತು ತೀಕ್ಷ್ಣ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಜೊತೆಗೆ ಮಳೆಯಾಗುವ ಮುನ್ಸೂಚನೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವ ಮಳೆಯ ಮುಂದುವರಿದ ಭಾಗವಾಗಿ ಇಂದೂ ಸಹ ಮಧ್ಯಾಹ್ನದ ನಂತರ ದಟ್ಟ ಮೋಡಗಳು ಆವರಿಸಲಿವೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ನಗರದಾದ್ಯಂತ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಮೂಲಕ ನಗರ ಕಂಪ್ಲೀಟ್ ಕೂಲ್ ಆಗಲಿದೆ.

ಇದನ್ನೂ ಓದಿ: ಉತ್ತರ ಮತ್ತು ದಕ್ಷಿಣ ಒಳನಾಡಿನ ಜನರೇ ಎಚ್ಚರ!: ಮುಂದಿನ 5 ದಿನ ರಾಜ್ಯದಲ್ಲಿ ವರುಣನ ಆರ್ಭಟ ಜೋರು

ಕರಾವಳಿಯ ಈ ಅವಳಿ ಜಿಲ್ಲೆಗಳಲ್ಲಿ ಇಂದು ತಾಪಮಾನ 33°C ಹಾಗೂ ಕನಿಷ್ಠ ತಾಪಮಾನ 27°C ದಾಖಲಾಗಲಿದೆ. ಕರಾವಳಿ ಭಾಗದಲ್ಲಿ ದಟ್ಟ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು, ತೀಕ್ಷ್ಣ ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ತಂಪಾದ ಪ್ರದೇಶವಾದ ಮಡಿಕೇರಿಯಲ್ಲಿ ಇಂದು ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 22°C ಇರಲಿದೆ. ಜಿಲ್ಲೆಯಾದ್ಯಂತ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಗರಿಷ್ಠ ತಾಪಮಾನ 33°C ಹಾಗೂ ಕನಿಷ್ಠ ತಾಪಮಾನ 24°C ದಾಖಲಾಗುವ ನಿರೀಕ್ಷೆಯಿದೆ. ಮಧ್ಯಾಹ್ನದ ನಂತರ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಲಿದ್ದು, ಗಾಳಿಯ ರಭಸದೊಂದಿಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಪ್ರೀ-ಮಾನ್ಸೂನ್ (ಮುಂಗಾರು ಪೂರ್ವ) ಮಳೆಯಾಗಲಿದೆ. ಒಟ್ಟಾರೆಯಾಗಿ ಈ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನವು ಕೊಂಚ ತಂಪಾಗಿದ್ದು, ಗಾಳಿಯ ತೀವ್ರತೆ ಹೆಚ್ಚಿರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ಅಣ್ಣನ ಮಗ ನಿರಂಜನ್ ಸುದಿಂದ್ರ ನಿಶ್ಚಿತಾರ್ಥ; ಹುಡುಗಿ ಬಗ್ಗೆ ಇಲ್ಲಿದೆ ಮಾಹಿತಿ

Source link

ರೇವತಿ ನಕ್ಷತ್ರಕ್ಕೆ ಶನಿ ಎಂಟ್ರಿ!: ಯಾರಿಗೆ ಕಷ್ಟ, ಯಾರಿಗೆ ಒಲಿಯಲಿದೆ ಅದೃಷ್ಟ? – Kannada News | Daily Devotional: Shanis Entry into Revati Nakshatra and Its Effects on Your Rashi

ಬೆಂಗಳೂರು, ಮೇ.26: ಶನಿ ಭಗವಾನರ ರೇವತಿ ನಕ್ಷತ್ರ ಸಂಚಾರದ ಫಲಗಳನ್ನು ತಿಳಿಸಲಾಗಿದೆ. ಕರ್ಮಕಾರಕ ಹಾಗೂ ನ್ಯಾಯಾಧೀಶರಾದ ಶನಿಯ ಸಂಚಾರವು ಇಡೀ ಬ್ರಹ್ಮಾಂಡಕ್ಕೆ ಮುಖ್ಯವಾಗಿರುತ್ತದೆ. ಪ್ರಸ್ತುತ ಶನಿ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಮೇಷ ರಾಶಿಯವರಿಗೆ ಸಾಡೆಸಾತಿ, ಮೀನ ರಾಶಿಯವರಿಗೆ ಗರ್ಭ ಸಾಡೆಸಾತಿ ಹಾಗೂ ಕುಂಭ ರಾಶಿಯವರಿಗೆ ಕಟ್ಟಕಡೆಯ ಸಾಡೆಸಾತಿ ನಡೆಯುತ್ತಿದೆ. ಶನಿ ಭಗವಾನರು 2026ರ ಮೇ 17ರಂದು ರೇವತಿ ನಕ್ಷತ್ರ ಪ್ರವೇಶ ಮಾಡಿದ್ದಾರೆ. ಇದು ಬುಧನ ನಕ್ಷತ್ರವಾಗಿದೆ. ಈ ಸಂಚಾರವು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಮೇಷ ರಾಶಿಯವರಿಗೆ ನಿಧಾನ ಗತಿ, ವೃಷಭ ರಾಶಿಯವರಿಗೆ ಅದೃಷ್ಟ, ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಕರ್ಕಾಟಕ ರಾಶಿಯವರಿಗೆ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಶುಭವಾಗಲಿದ್ದು, ಸಿಂಹ ರಾಶಿಯವರು ಈಗ ಚೇತರಿಕೆ ಕಾಣುತ್ತಾರೆ. ಈ ಎಲ್ಲವೂ ನಂಬಿಕೆಯ ಆಧಾರದ ಮೇಲೆ ಇದ್ದು, ಪ್ರತಿಯೊಬ್ಬರೂ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗೂರುಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಿಂಗ್​ಹ್ಯಾಮ್ ರಸ್ತೆ To ದೆಹಲಿ, ರೋಚಕವಾಗಿದೆ ಸಿದ್ದರಾಮಯ್ಯ ತಂತ್ರಗಾರಿಕೆ! ಡಿಕೆ ಸಹೋದರರಿಂದ ಕೌಂಟರ್ ಪ್ಲಾನ್ – Kannada News | Karnataka CM Chair Climax: CM Siddaramaiah Ready with Blueprint as DK Shivakumar Plans Counter Strategy

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 26: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಕುರಿತಾದ ಆಂತರಿಕ ರಾಜಕೀಯ ಬಿಕ್ಕಟ್ಟು ಈಗ ಅಂತಿಮ ಘಟ್ಟಕ್ಕೆ ತಲುಪಿರುವಂತೆ ಕಾಣಿಸುತ್ತಿದೆ. ಹೈಕಮಾಂಡ್‌ನಿಂದ ದಿಢೀರ್ ಕರೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ದೆಹಲಿಗೆ ತೆರಳಿದ್ದು, ಇಂದು (ಮೇ 26 ರ ಬುಧವಾರ) ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಮಹತ್ವದ ಸಭೆ ತೀವ್ರ ಕುತೂಹಲ ಮೂಡಿಸಿದೆ. ಸಿದ್ದರಾಮನಹುಂಡಿಯ ಮಾಸ್ ಲೀಡರ್ ಸಿದ್ದರಾಮಯ್ಯ ಹಾಗೂ ಕನಕಪುರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ನಡುವಿನ ಈ ‘ಪವರ್ ಫೈಟ್’ಗೆ ದಿಲ್ಲಿ ದರ್ಬಾರ್‌ನಲ್ಲಿ ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ಸಭೆಯ ಅಜೆಂಡಾ ಎದುರಿಸಲು ಇಬ್ಬರೂ ನಾಯಕರು ತಮ್ಮದೇ ಆದ ಅಸ್ತ್ರಗಳೊಂದಿಗೆ ಸಜ್ಜಾಗಿದ್ದಾರೆ.

ಮುಖ್ಯಾಂಶಗಳು

  • ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಸಿದ್ದರಾಮಯ್ಯ ಸೀಕ್ರೆಟ್ ಪ್ಲ್ಯಾನ್.
  • ಅಧಿಕಾರ ಹಂಚಿಕೆ ಪ್ರಸ್ತಾಪವಾದರೆ ಸಿದ್ದು ಪರ್ಯಾಯ ದಾಳ ಸಿದ್ಧ.
  • ಹೈಕಮಾಂಡ್ ಕರೆ ಬೆನ್ನಲ್ಲೇ ಡಿಕೆ ಸಹೋದರರು ಜಂಟಿ ಸಭೆ ನಡೆಸಿದ್ದು, ಪ್ರತಿ ತಂತ್ರ ರೂಪಿಸಿದ್ದಾರೆ.

ಪ್ರತಿಷ್ಠೆಯ ಕಣವಾದ ದಿಲ್ಲಿ ಸಭೆ: ಹೈಕಮಾಂಡ್‌ಗೆ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರ ದಂಡನ್ನೇ ಕಟ್ಟುಕೊಂಡು ದೆಹಲಿಗೆ ತೆರಳುವ ಮೂಲಕ ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಒಂದು ವೇಳೆ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಯ ಒತ್ತಡ ಹೇರಿದರೆ, ಜಿ. ಪರಮೇಶ್ವರ್ ಅವರ ಹೆಸರನ್ನು ಮುಂಚೂಣಿಗೆ ತರುವ ಅಥವಾ ಆಪ್ತರ ಸಲಹೆ ಪಡೆದು ನಿರ್ಧಾರ ಪ್ರಕಟಿಸುವುದಾಗಿ ಹೇಳಿ ಕಾಲಹರಣ ಮಾಡುವ ಸೂತ್ರವನ್ನು ಸಿದ್ದರಾಮಯ್ಯ ಸಿದ್ಧಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸಂಪುಟ ವಿಸ್ತರಣೆ ಮಾಡದಿದ್ದರೆ ಉಂಟಾಗಬಹುದಾದ ರಾಜಕೀಯ ನಷ್ಟದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲು ತಯಾರಿ ನಡೆಸಿದ್ದಾರೆ.

ಇನ್ನೊಂದೆಡೆ, ಡಿಕೆ ಶಿವಕುಮಾರ್ ತಮಗೆ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಪಟ್ಟು ಹಿಡಿಯಲಿದ್ದಾರೆ. ಮುಂಬರುವ 2028ರ ವಿಧಾನಸಭೆ ಮತ್ತು 2029ರ ಲೋಕಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ನಾಯಕತ್ವದ ಅನಿವಾರ್ಯತೆ ಹಾಗೂ ಗಾಂಧಿ ಕುಟುಂಬಕ್ಕೆ, ವಿಶೇಷವಾಗಿ ಸೋನಿಯಾ ಗಾಂಧಿ ಅವರಿಗೆ ತಾವು ತೋರಿರುವ ನಿಷ್ಠೆಯ ಭಾವನಾತ್ಮಕ ವಿಷಯಗಳನ್ನು ಮುಂದಿಡಲಿದ್ದಾರೆ. ಕೇವಲ ಸಂಪುಟ ಪುನಾರಚನೆಗೆ ದೆಹಲಿ ಭೇಟಿ ಸೀಮಿತವಾದರೆ ತಮಗೆ ಹಿನ್ನಡೆಯಾಗಲಿದೆ ಎಂಬ ಆತಂಕದಲ್ಲಿರುವ ಡಿಸಿಎಂ, ಮೊದಲು ನಾಯಕತ್ವದ ಗೊಂದಲ ನಿವಾರಣೆಗೆ ಹಠ ಹಿಡಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಭೇಟಿ ಹಿಂದೆಯೇ ಸತೀಶ್ ಜಾರಕಿಹೊಳಿ ಸೇರಿ 7 ಮಂದಿ ಸಚಿವರ ಪಟಲಾಂ ರಾಜಧಾನಿಗೆ ದೌಡು!

ಒಟ್ಟಿನಲ್ಲಿ, ಇಬ್ಬರು ಮಹಾ ನಾಯಕರ ಹಿತಾಸಕ್ತಿ ಕಾಯ್ದು ಪಕ್ಷವನ್ನು ಮುನ್ನಡೆಸುವುದು ಈಗ ಎಐಸಿಸಿ ನಾಯಕತ್ವಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಹನುಮನಿಗೆ ಬೆಲ್ಲದ ದೀಪ ಹಚ್ಚಿದರೆ ಈ ರಾಶಿಯವರಿಗೆ ಭರ್ಜರಿ ಅದೃಷ್ಟ!: ಕುಜದೋಷ ನಿವಾರಣೆಗೆ ಇಂದು ಅತ್ಯಂತ ಶುಭ ದಿನ! – Kannada News | Zodiac Sign Effects on 26 May 2026: Comprehensive Daily Horoscope by Dr. Basavaraj Guruji

ಬೆಂಗಳೂರು, ಮೇ.26: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 26 ಮೇ 2026 ರ ಮಂಗಳವಾರದ ದ್ವಾದಶ ರಾಶಿಗಳ ದೈನಿಕ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ ದಶಮಿ, ಉತ್ತರಾ ನಕ್ಷತ್ರ, ಸಿದ್ಧಿ ಯೋಗ ಮತ್ತು ಗರಜ ಕರಣ ಇರುತ್ತದೆ. ರವಿ ವೃಷಭ ರಾಶಿಯಲ್ಲಿ ಹಾಗೂ ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ರಾಹುಕಾಲ ಮಧ್ಯಾಹ್ನ 3:26 ರಿಂದ 5:02 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ (ಶುಭಕಾಲ) ಮಧ್ಯಾಹ್ನ 12:16 ರಿಂದ 1:52 ರವರೆಗೆ ಇದೆ. ಇಂದು ಮಂಗಳವಾರವಾದ್ದರಿಂದ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಲು ಹಾಗೂ ಕುಜದೋಷ ನಿವಾರಣೆಗೆ ಪೂಜೆ ಸಲ್ಲಿಸಲು ಸೂಕ್ತ ದಿನ. ಹನುಮನಿಗೆ ಬೆಲ್ಲದ ದೀಪ ಹಚ್ಚುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ರಾಶಿ ಭವಿಷ್ಯದಲ್ಲಿ ಪ್ರತಿಯೊಂದು ರಾಶಿಯವರಿಗೆ ಆರ್ಥಿಕ, ಕೌಟುಂಬಿಕ, ವೈವಾಹಿಕ, ಉದ್ಯೋಗ ಮತ್ತು ಆರೋಗ್ಯ ಸಂಬಂಧಿತ ಫಲಿತಾಂಶಗಳನ್ನು ವಿವರಿಸಲಾಗಿದೆ. ಅಲ್ಲದೆ, ಪ್ರತಿಯೊಂದು ರಾಶಿಗೆ ನಿರ್ದಿಷ್ಟ ಅದೃಷ್ಟ ಸಂಖ್ಯೆ, ಶುಭ ಬಣ್ಣ, ಶುಭ ದಿಕ್ಕು ಮತ್ತು ಪಠಿಸಬೇಕಾದ ಮಂತ್ರಗಳ ಬಗ್ಗೆಯೂ ಮಾಹಿತಿ ಒದಗಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version