ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ ಕೆಆರ್​ಎಸ್​ನಿಂದ ಮಾತ್ರ ನೀರು – Kannada News | Bengaluru Facing Water Crisis as Kabini Hits Dead Storage and KRS Dam Water Level Drops to 81 Feet

ಮಂಡ್ಯ, ಜೂನ್ 25: ಮುಂಗಾರು ಕೈಕೊಟ್ಟ ಕಾರಣ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಕೆಆರ್​ಎಸ್​ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಕಬಿನಿ ಜಲಾಶಯವು ಈಗಾಗಲೇ ಡೆಡ್ ಸ್ಟೋರೇಜ್​ ಹಂತ ತಲುಪಿದೆ. ಸದ್ಯ ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ 81 ಅಡಿಗೆ ತಲುಪಿದ್ದು, ಕೇವಲ 6 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಪ್ರತಿದಿನ 1,800 ಕ್ಯೂಸೆಕ್​ ನೀರನ್ನು ಬಿಡಲಾಗುತ್ತಿದೆ. ಕಬಿನಿಯಿಂದ ನೀರು ಲಭ್ಯವಿಲ್ಲದ ಕಾರಣ ಕೆಆರ್​ಎಸ್​ ಮೇಲೆ ಸಂಪೂರ್ಣ ಒತ್ತಡ ಬಿದ್ದಿದೆ. ಕಬಿನಿಯಲ್ಲಿ ನೀರಿಲ್ಲದ ಕಾರಣ ಇದೀಗ ಬೆಂಗಳೂರಿಗೆ ಭಾಗಶಃ ಕೆಆರ್​ಎಸ್​ನಿಂದಲೇ ನೀರು ಪೂರೈಕೆಯಾಗುತ್ತಿದೆ. ಮುಂದಿನ ಮೂರು ತಿಂಗಳ ಕಾಲ ಇದೇ ನೀರನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈಮಧ್ಯೆ ರೈತರು ಸಹ ತಮ್ಮ ಬೆಳೆಗಳಿಗಾಗಿ ನೀರಿಗಾಗಿ ಆಗ್ರಹಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತ್ತ ಮೇಲೂ ಬಿಡ್ತಿಲ್ಲ ಆನ್‌ಲೈನ್ ವಂಚಕರು: ಬೆಂಗಳೂರಲ್ಲಿ ಚಿತಾಗಾರ ಬುಕ್ಕಿಂಗ್ ಹೆಸರಲ್ಲಿ ನಕಲಿ ವೆಬ್‌ಸೈಟ್; ಸಾರ್ವಜನಿಕರೇ ಈ ಜಾಲಕ್ಕೆ ಬೀಳಬೇಡಿ! – Kannada News | Beware! Bengaluru Cremation Slot Fraud: Protect Yourself from Fake Online Booking Sites

ಬೆಂಗಳೂರು, ಜೂ.25 : ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕಳ್ಳರ ವಂಚನೆ ಮಿತಿಮೀರಿದ್ದು, ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡುವ ದಾರಿಯನ್ನು ಹುಡುಕಿಕೊಂಡಿದ್ದ,  ಇವರು ಇದೀಗ ಸಾವಿನ ಮನೆಯನ್ನು ಬಿಟ್ಟಿಲ್ಲ. ನೋವಿನಲ್ಲಿರುವ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಿ ಹಣ ಲೂಟಿ ಮಾಡುತ್ತಿರುವ ಆಘಾತಕಾರಿ ಜಾಲವೊಂದು ಬಯಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕಾಗಿ ಆನ್‌ಲೈನ್ ಸ್ಲಾಟ್ ಕಾಯ್ದಿರಿಸುವ (Crematorium Slot Booking) ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ ಸೈಬರ್ ಖದೀಮರ ವಿರುದ್ಧ ಈಗ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ನಿಯಮಾವಳಿಗಳ ಪ್ರಕಾರ, ಪಾಲಿಕೆ ವ್ಯಾಪ್ತಿಯ ಹೆಬ್ಬಾಳ ಕೆಂಪಾಪುರದ ‘ಚಿರಶಾಂತಿಧಾಮ’ ಮತ್ತು ಮೇಡಿ ಅಗ್ರಹಾರದ ‘ಮುಕ್ತಿಧಾಮ’ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸಲು ಕೇವಲ 250 ರೂ. ಅಧಿಕೃತ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಗೂಗಲ್​​ನಲ್ಲಿ ಹಾಗೂ ಇಂಟರ್ನೆಟ್‌ನಲ್ಲಿ ತಾವೇ ಅಧಿಕೃತ ಏಜೆಂಟ್‌ಗಳು ಎಂಬಂತೆ ಬಿಂಬಿಸಿಕೊಂಡಿರುವ ಸೈಬರ್ ಕಳ್ಳರು, ನಕಲಿ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ತೆರೆದಿದ್ದಾರೆ. ಕಷ್ಟದ ಸಮಯದಲ್ಲಿ ತರಾತುರಿಯಲ್ಲಿ ಆನ್‌ಲೈನ್ ಬುಕ್ಕಿಂಗ್ ಮಾಡಲು ಹೋಗುವ ಜನರನ್ನು ನಂಬಿಸಿ, ಈ ಖದೀಮರು ನಿಯಮ ಬಾಹಿರವಾಗಿ ಸಾವಿರಾರು ರೂಪಾಯಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ! ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ

ಈ ಮೋಸವನ್ನು ಪತ್ತೆ ಮಾಡಲು ಮತ್ತು ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ನಗರ ಪಾಲಿಕೆಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಯಾರೂ ಸಹ ಇಂತಹ ಮೂರನೇ ವ್ಯಕ್ತಿ ಅಥವಾ ಖಾಸಗಿ ವೆಬ್‌ಸೈಟ್‌ಗಳನ್ನು ಬಳಸಿಕೊಳ್ಳಬಾರದು ಎಂದು ವಿನಂತಿಸಿದೆ. ಈ ವಂಚಕ ಜಾಲದ ವಿರುದ್ಧ ಯಲಹಂಕದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:24 am, Thu, 25 June 26

Source link

ಸಮಂತಾ ಮೇಲೆ ವೈಯಕ್ತಿಕ ದಾಳಿ ಮಾಡಿದವರಿಗೆ ಕಾಲವೇ ಕೊಟ್ಟಿತು ತಕ್ಕ ಉತ್ತರ – Kannada News | Samantha’s Pregnancy: Time Answers Rumors on Personal Life, Divorce and Kids

ನಟಿ ಸಮಂತಾ ರುತ್ ಪ್ರಭು ಅವರ (Samantha) ವೈಯಕ್ತಿಕ ಜೀವನದ ಬಗ್ಗೆ ಹರಡಿದ್ದ ವದಂತಿಗಳಿಗೆ ಕೊನೆಗೂ ಕಾಲವೇ ಉತ್ತರ ನೀಡಿದೆ. ಎರಡನೇ ಮದುವೆಯಾದ ಕೇವಲ ಒಂದೇ ವರ್ಷದಲ್ಲಿ ಸಮಂತಾ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ, ಹಿಂದೆ ಅವರ ಮೇಲೆ ನಡೆದಿದ್ದ ವೈಯಕ್ತಿಕ ದಾಳಿಗಳು ಮತ್ತು ಹರಡಿದ್ದ ಅಪಪ್ರಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.

ನಟ ನಾಗ ಚೈತನ್ಯ ಅವರಿಂದ ಸಮಂತಾ ವಿಚ್ಛೇದನ ಪಡೆದ ಸಂದರ್ಭದಲ್ಲಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮಟ್ಟದ ದ್ವೇಷವನ್ನು ಹಬ್ಬಿಸಲಾಗಿತ್ತು. ಸಮಂತಾಗೆ ಮಗು ಬೇಡವಾಗಿತ್ತು, ಅವರಿಗೆ ಅಫೇರ್‌ಗಳಿದ್ದವು ಮತ್ತು ಅವರು ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೆಲ್ಲಾ ಅತ್ಯಂತ ಕೀಳು ಮಟ್ಟದ ವದಂತಿಗಳನ್ನು ಹರಡಲಾಗಿತ್ತು. ನಟಿಯ ತೇಜೋವಧೆ ಮಾಡಲು ನೆಟ್ಟಿಗರು ಸತತ ಪ್ರಯತ್ನ ನಡೆಸಿದ್ದರು.

ಅಂದು ಸಮಂತಾ ನೀಡಿದ್ದ ಖಡಕ್ ಉತ್ತರ

ಈ ವದಂತಿಗಳ ವಿರುದ್ಧ ಅಂದು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದರು. ‘ವಿಚ್ಛೇದನ ಎನ್ನುವುದೇ ಅತ್ಯಂತ ನೋವಿನ ಪ್ರಕ್ರಿಯೆ. ಅದರಿಂದ ಹೊರಬರಲು ನನಗೆ ಸಮಯ ಬೇಕಿದೆ. ಆದರೆ ನನ್ನ ಮೇಲೆ ವೈಯಕ್ತಿಕವಾಗಿ ನಿರಂತರ ದಾಳಿ ಮಾಡಲಾಗುತ್ತಿದೆ. ನನಗೆ ಅಫೇರ್‌ಗಳಿದ್ದವು, ನಾನು ಅವಕಾಶವಾದಿ, ನನಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ ಮತ್ತು ನಾನು ಅಬಾರ್ಷನ್ ಮಾಡಿಸಿಕೊಂಡಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ’ ಎಂದು ಬೇಸರ ಹೊರಹಾಕಿದ್ದರು. ಅಲ್ಲದೆ ಇಂತಹ ಯಾವುದೇ ಸುಳ್ಳು ಮಾತುಗಳಿಗೆ ತಾವು ಧೃತಿಗೆಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು.

ಇದನ್ನೂ ಓದಿ: ಪ್ರೆಗ್ನೆಂಟ್ ಆಗಿರುವುದು ನಿಜ; ಎಲ್ಲರ ಎದುರು ಗುಡ್ ನ್ಯೂಸ್ ನೀಡಿದ ಸಮಂತಾ

ಕಾಲವೇ ಕೊಟ್ಟಿತು ತಕ್ಕ ಉತ್ತರ

ಅಂದು ಸಮಂತಾ ವಿರುದ್ಧ ಹಬ್ಬಿಸಲಾಗಿದ್ದ ದ್ವೇಷ ಮತ್ತು ‘ಅವರಿಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ’ ಎಂಬ ಸುಳ್ಳು ವದಂತಿಗಳಿಗೆ ಇದೀಗ ಅವರ ಪ್ರೆಗ್ನೆನ್ಸಿ ಸುದ್ದಿಯೇ ಸಾಕ್ಷಿಯಾಗಿದೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂಬ ಮಾತು ಸಮಂತಾ ಜೀವನದಲ್ಲಿ ನಿಜವಾಗಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಸಮಂತಾ ಪ್ರೆಗ್ನೆಂಟ್ ಎಂಬ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹಳೆಯ ವದಂತಿಗಳನ್ನು ನೆನಪಿಸಿಕೊಳ್ಳುತ್ತಿದ್ದು, ಅಂದು ನಟಿಯ ವಿರುದ್ಧ ಸುಳ್ಳು ಸುದ್ದಿ ಹರಡಿದವರಿಗೆ ಈಗಲಾದರೂ ನಾಚಿಕೆಯಾಗಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:31 am, Thu, 25 June 26

Source link

ವೈಭವ್ ವಿಷಯದಲ್ಲಿ ತಾಳ್ಮೆ ಇರಲಿ, 22 ವರ್ಷದವರೆಗೆ ಕಾಯಿರಿ: ಕಪಿಲ್ ದೇವ್ – Kannada News | Kapil Dev Urges Caution Over Vaibhav Sooryavanshi Hype

ಕ್ರಿಕೆಟ್​ ಲೋಕದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಪಾಲಾಗಲಿದೆ. ಇಂತಹದೊಂದು ವಿಶೇಷ ದಾಖಲೆ ಬರೆಯಲಿರುವ ವೈಭವ್ ಸೂರ್ಯವಂಶಿ ಮೇಲೆ ಅತಿಯಾದ ನಿರೀಕ್ಷೆಗಳನ್ನು ಹೇರಬೇಡಿ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಬ್ಯಾಟಿಂಗ್ ಪ್ರತಿಭೆಯ ಅಸಾಧಾರಣ ಆಟವನ್ನು ಶ್ಲಾಘಿಸಿರುವ ಕಪಿಲ್ ದೇವ್, ವೈಭವ್ ಸೂರ್ಯವಂಶಿ ಮೇಲೆ ಈಗಲೇ ಅತಿಯಾದ ನಿರೀಕ್ಷೆಗಳ ಭಾರವನ್ನು ಹೇರಬೇಡಿ. ಯಾವುದೇ ಹೋಲಿಕೆಗಳನ್ನು ಕೂಡ ಮಾಡಬೇಡಿ. ಒಂದು ವೇಳೆ ಹುಡಗ ವಿಫಲನಾದರೆ ಒತ್ತಡಕ್ಕೆ ಒಳಗಾಗುತ್ತಾನೆ. ಹೀಗಾಗಿ ಯಾರೂ ಸಹ ಅತಿಯಾದ ನಿರೀಕ್ಷೆಗಳನ್ನು ಹೇರಬೇಡಿ ಎಂದು ಕಪಿಲ್ ದೇವ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

20 ರಿಂದ 22 ವರ್ಷದವರೆಗೆ ಕಾಯಿರಿ:

ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತವಾದ ಪ್ರತಿಭೆ ಇದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕ್ರಿಕೆಟ್‌ನಲ್ಲಿ ದೀರ್ಘಕಾಲ ಉಳಿಯುವುದು ಕೇವಲ ಆರಂಭಿಕ ಫಾರ್ಮ್ ಮೇಲೆ ನಿರ್ಧಾರವಾಗುವುದಿಲ್ಲ. ವೈಭವ್ ಅವರಿಗೆ ಈಗ ಕೇವಲ 15 ವರ್ಷ. ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಅವರು 20 ರಿಂದ 22 ವರ್ಷ ತಲುಪಿದ ಬಳಿಕ ಅವರ ಆಟದ ಬಗ್ಗೆ ನಾವು ಒಂದು ನಿರ್ಧಾರಕ್ಕೆ ಬರಬಹುದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಮೂಡಿಸಿದ್ದ ನಿರೀಕ್ಷೆಗಳನ್ನೇ ವೈಭವ್ ಸೂರ್ಯವಂಶಿ ಕೂಡ ಮೂಡಿಸುತ್ತಿದ್ದಾರೆ. ಆದರೆ ಸಚಿನ್ ಅವರಂತೆ ಸುದೀರ್ಘ ಕಾಲ ದೇಶಕ್ಕಾಗಿ ಆಡಲು ವೈಭವ್‌ಗೆ ಸೂಕ್ತ ಸಮಯ ಮತ್ತು ಮುಕ್ತ ವಾತಾವರಣದ ಅಗತ್ಯವಿದೆ ಎಂದು ಇದೇ ವೇಳೆ ಕಪಿಲ್ ದೇವ್ ಹೇಳಿದ್ದಾರೆ.

ಕ್ಲಬ್ ಕ್ರಿಕೆಟ್ ಅಥವಾ ವಯೋಮಿತಿಯ ಕ್ರಿಕೆಟ್‌ಗೆ ಹೋಲಿಸಿದರೆ ಹಿರಿಯರ ರಾಷ್ಟ್ರೀಯ ತಂಡದಲ್ಲಿ ಆಡುವುದು ಸಂಪೂರ್ಣ ಭಿನ್ನವಾಗಿರುತ್ತದೆ. ಆದ್ದರಿಂದ ಅವರು ಮೈದಾನಕ್ಕಿಳಿದ ತಕ್ಷಣವೇ ಅದ್ಭುತಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಬಾರದು. ಈಗ ಅತಿಯಾಗಿ ಹೊಗಳುವವರೇ ಆಟಗಾರ ಫಾರ್ಮ್ ಕಳೆದುಕೊಂಡಾಗ ತಕ್ಷಣವೇ ಟೀಕಿಸಲು ಶುರು ಮಾಡುತ್ತಾರೆ. ಇಂತಹ ಹೈಪ್‌ಗಳಿಂದ ವೈಭವ್ ಸೂರ್ಯವಂಶಿಯನ್ನು ದೂರ ಇಡುವುದು ಉತ್ತಮ.

ಕಪಿಲ್ ದೇವ್ ಕಿವಿಮಾತು:

ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಕೇವಲ ಪ್ರತಿಭೆಯಷ್ಟೇ ಸಾಲದು. ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವಾಗ ನಡೆದುಕೊಳ್ಳುವ ರೀತಿ, ಶಿಸ್ತು ಮತ್ತು ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ ಎಂದು ಕಪಿಲ್ ದೇವ್, ವೈಭವ್ ಸೂರ್ಯವಂಶಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಆಟಗಾರರಲ್ಲಿ ಕ್ಷಮೆಯಾಚಿಸಿದ ಬೆನ್ ಸ್ಟೋಕ್ಸ್..!

ಒಟ್ಟಾರೆಯಾಗಿ, ಇಂತಹ ಅಪರೂಪದ ಪ್ರತಿಭೆಯನ್ನು ಅತಿಯಾದ ಪ್ರಚಾರ ಮತ್ತು ಒತ್ತಡದಿಂದ ರಕ್ಷಿಸಿ, ಅವರು ಸ್ವಾಭಾವಿಕವಾಗಿ ಬೆಳೆಯಲು ಬಿಡುವುದೇ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು ಎಂಬುದು ಕಪಿಲ್ ದೇವ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

Source link

Video: ಮದ್ಯದ ಅಮಲಿನಲ್ಲಿ ವಿದ್ಯುತ್ ಕಂಬ ಹತ್ತಿ ಹೈ ವೋಲ್ಟೇಜ್ ತಂತಿ ಮೇಲೆ ಮಲಗಿದ ವ್ಯಕ್ತಿ, ಆಮೇಲೇನಾಯ್ತು ನೋಡಿ – Kannada News | Drunk Man on High Voltage Pole in Maharajganj Miraculously Survives Electrocution

ಮಹಾರಾಜ್‌ಗಂಜ್, ಜೂನ್ 25: ಕುಡಿದ ಮತ್ತಿನಲ್ಲಿ ಮನುಷ್ಯರು ಏನೇನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿರುವ ಈ ಘಟನೆಯೇ ಸಾಕ್ಷಿ. ಇಲ್ಲಿನ ಪರ್ಸಾ ಖುರ್ದ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಅತಿಯಾಗಿ ಮದ್ಯ(Alcohol) ಸೇವಿಸಿ, ಬರೋಬ್ಬರಿ 11,000 ವೋಲ್ಟ್ ಹೈವೋಲ್ಟೇಜ್ ವಿದ್ಯುತ್ ತಂತಿಗಳ ಮೇಲೆಯೇ ಮಲಗಿ ಸಾಹಸ ಪ್ರದರ್ಶಿಸಿದ್ದಾನೆ. ಇದನ್ನು ಕಂಡ ಇಡೀ ಗ್ರಾಮಸ್ಥರು ಯಾವುದೇ ಕ್ಷಣದಲ್ಲಾದರೂ ಆತ ಸುಟ್ಟು ಬೂದಿಯಾಗಬಹುದು ಎಂಬ ಭೀತಿಯಲ್ಲಿ ನಡುಗಿದ್ದಾರೆ. ವಿದ್ಯುತ್ ಕಂಬ ಹತ್ತಿದ ಈ ವಿಲಕ್ಷಣ ವ್ಯಕ್ತಿಯನ್ನು ದೀನ್ ದಯಾಳ್ ಎಂದು ಗುರುತಿಸಲಾಗಿದೆ.

ಅದೃಷ್ಟವಶಾತ್ ತಪ್ಪಿದ ಭೀಕರ ದುರಂತ

ಸ್ಥಳೀಯರ ಪ್ರಕಾರ, ದೀನ್ ದಯಾಳ್ ಕಂಬದ ಮೇಲಿದ್ದ ಹೈವೋಲ್ಟೇಜ್ ತಂತಿಗಳ ಮೇಲೆ ಅಡ್ಡಲಾಗಿ ಚಾಚಿಕೊಂಡಿದ್ದರೂ ಆತನಿಗೆ ಏನೂ ಆಗದಿರಲು ಒಂದು ದೊಡ್ಡ ಅದೃಷ್ಟವೇ ಕಾರಣವಾಗಿತ್ತು. ಆತ ಕಂಬ ಏರುವ ಕೆಲವೇ ನಿಮಿಷಗಳ ಮುಂಚೆಯಷ್ಟೇ ಆ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಒಂದು ವೇಳೆ ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿದ್ದರೆ ಆತ ಸ್ಥಳದಲ್ಲೇ ಸುಟ್ಟು ಭಸ್ಮವಾಗುತ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಕಂಬದ ಕೆಳಗೆ ನೂರಾರು ಭಕ್ತರು ಹಾಗೂ ನಿವಾಸಿಗಳ ದೊಡ್ಡ ಜನಸಮೂಹವೇ ಜಮಾಯಿಸಿ ಆತಂಕದಿಂದ ಮೇಲಕ್ಕೆ ನೋಡುತ್ತಿತ್ತು.

ಮತ್ತಷ್ಟು ಓದಿ: ಡ್ರಂಕ್​​ ಆ್ಯಂಡ್​​ ಡ್ರೈವ್​​ ಮಾಡಿದವನಿಗೆ ಕೋರ್ಟ್​​ ಕೊಟ್ಟ ಶಿಕ್ಷೆ ಎಂತಹದ್ದು ನೋಡಿ

ಪೊಲೀಸರು ಮತ್ತು ವಿದ್ಯುತ್ ಇಲಾಖೆಯ ಜಂಟಿ ರಕ್ಷಣೆ

ದೀನ್ ದಯಾಳ್ ಕೆಳಗೆ ಬರಲು ನಿರಾಕರಿಸುತ್ತಿದ್ದಂತೆ, ಭಿತೌಲಿ ಪೊಲೀಸರು ತಕ್ಷಣವೇ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಆ ಲೈನ್‌ಗೆ ವಿದ್ಯುತ್ ಸರಬರಾಜು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅದರ ನಂತರ ಹಲವಾರು ಗಂಟೆಗಳ ಕಾಲ ಪೊಲೀಸರು, ಅಧಿಕಾರಿಗಳು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ದೀನ್ ದಯಾಳ್ ಅವರ ಬಳಿ ಕೆಳಗೆ ಇಳಿಯುವಂತೆ ಸತತವಾಗಿ ಮನವಿ ಮಾಡಿದರು. ಕೊನೆಗೂ ಅವರ ಪ್ರಯತ್ನಗಳು ಯಶಸ್ವಿಯಾಗಿದ್ದು, ಆತ ಸುರಕ್ಷಿತವಾಗಿ ಕಂಬದಿಂದ ಕೆಳಗಿಳಿದಿದ್ದಾನೆ. ಆಗ ಇಡೀ ಜನಸಮೂಹ ನಿಟ್ಟುಸಿರು ಬಿಟ್ಟಿದೆ.

ವಿಡಿಯೋ

ಕುಟುಂಬಸ್ಥರಿಗೆ ಒಪ್ಪಿಸಿದ ಪೊಲೀಸರು

ಭಿತೌಲಿ ಪೊಲೀಸ್ ಠಾಣೆಯ ಅಧಿಕಾರಿ ಸತ್ಯೇಂದ್ರ ಕುಮಾರ್ ರೈ ಮಾತನಾಡಿ, ವ್ಯಕ್ತಿ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದ. ನಾವು ವಿದ್ಯುತ್ ಇಲಾಖೆಯೊಂದಿಗೆ ತಕ್ಷಣ ಸಮನ್ವಯ ಸಾಧಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಕುಟುಂಬದ ಸದಸ್ಯರ ಜತೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಅದೃಷ್ಟವಶಾತ್ ಈ ಇಡೀ ಹೈಡ್ರಾಮಾದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ! ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ – Kannada News | Bengaluru Property Tax Hike Proposed to Fund Toll Free Elevated Corridors Reveals DPR

ಬೆಂಗಳೂರು, ಜೂನ್ 25: ರಾಜಧಾನಿ ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ಭವಿಷ್ಯದಲ್ಲಿ ಹೆಚ್ಚುವರಿ ತೆರಿಗೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಸ್ತಾಪಿಸಲಾಗಿರುವ ಬೃಹತ್ ಎಲಿವೇಟೆಡ್ ಕಾರಿಡಾರ್‌ ಮತ್ತು ಫ್ಲೈಓವರ್‌ ಯೋಜನೆಗಳ ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಆಸ್ತಿ ತೆರಿಗೆಯನ್ನು (Property Tax) ಹೆಚ್ಚಿಸುವಂತೆ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸರ್ಕಾರಕ್ಕೆ ಶಿಫಾರಸು ಮಾಡಿದೆ. ಎಲಿವೇಟೆಡ್ ಕಾರಿಡಾರ್ ಬರುವ ಪ್ರದೇಶಗಳಲ್ಲಿ ಕನೆಕ್ಟಿವಿಟಿ ಉತ್ತಮಗೊಂಡು ಜಮೀನು ಹಾಗೂ ಮನೆಗಳ ಮೌಲ್ಯ ಹೆಚ್ಚಾಗುವುದರಿಂದ, ಅದರ ಲಾಭ ಪಡೆಯುವ ಮಾಲೀಕರಿಂದಲೇ ಈ ವೆಚ್ಚವನ್ನು ವಸೂಲಿ ಮಾಡುವುದು ನ್ಯಾಯಸಮ್ಮತ ಎಂದು ಅಧಿಕಾರಿಗಳು ವಾದಿಸಿದ್ದಾರೆ.

ಟೋಲ್ ಸಂಗ್ರಹ ಇಲ್ಲ!

ಇಂದಿರಾನಗರದ ಮೂಲಕ ಹಾದುಹೋಗುವ ಓಲ್ಡ್ ಮದ್ರಾಸ್ ರಸ್ತೆ – ಹೊಸೂರು ರಸ್ತೆ ಎಲಿವೇಟೆಡ್ ಕಾರಿಡಾರ್‌ನ ಡಿಪಿಆರ್ ಪ್ರಕಾರ, ಈ ಮಾರ್ಗದಲ್ಲಿ ನೇರವಾಗಿ ಟೋಲ್ ಸಂಗ್ರಹಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಈ ಕಾರಿಡಾರ್ ನಿರಂತರವಾಗಿರದೆ ಮಧ್ಯೆ ಮಧ್ಯೆ ರ್‍ಯಾಂಪ್‌ಗಳು, ಅಸ್ತಿತ್ವದಲ್ಲಿರುವ ಫ್ಲೈಓವರ್‌ಗಳು ಹಾಗೂ ರಸ್ತೆಗಳನ್ನು ಒಳಗೊಂಡಿರುತ್ತದೆ. ಇಂತಹ ವಿನ್ಯಾಸದಲ್ಲಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುವುದಲ್ಲದೆ, ಅದರ ನಿರ್ವಹಣಾ ವೆಚ್ಚ ಭರಿಸುವಷ್ಟು ಆದಾಯ ಬರುವುದಿಲ್ಲ. ಹೀಗಾಗಿ ಈ ಯೋಜನೆಗಳನ್ನು ಇಪಿಸಿ (EPC) ಮಾದರಿಯಲ್ಲಿ ಸರ್ಕಾರವೇ ನಿರ್ಮಿಸಲಿದ್ದು, ಸಾರ್ವಜನಿಕರಿಗೆ ಇವು ಸಂಪೂರ್ಣ ಟೋಲ್ ಮುಕ್ತವಾಗಿರಲಿವೆ.

ಆಸ್ತಿ ಮಾಲೀಕರ ಜೇಬಿಗೆ ಕತ್ತರಿ ಬೀಳುವುದು ಹೇಗೆ?

ಟೋಲ್‌ನಿಂದ ಬಾರದ ಆದಾಯವನ್ನು ಸರಿದೂಗಿಸಲು ‘ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ (Value Capture Financing)’ ತತ್ವದ ಅಡಿಯಲ್ಲಿ ಕಾರಿಡಾರ್ ಬರುವ ಸುತ್ತಮುತ್ತಲಿನ ವಲಯದ (Influence Zone) ಆಸ್ತಿಗಳ ಮೇಲೆ ಹೆಚ್ಚುವರಿ ಲೇವಿ ಅಥವಾ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿ ತೆರಿಗೆ ವ್ಯವಸ್ಥೆಯಲ್ಲೇ ಇದನ್ನು ಸೇರಿಸುವುದರಿಂದ ಸರ್ಕಾರಕ್ಕೆ ನಿರಂತರ ಹಾಗೂ ಸ್ಥಿರವಾದ ಆದಾಯ ಹರಿದುಬರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಲೆಎತ್ತಲಿವೆ 9 ಫ್ಲೈಓವರ್​

ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ವತಿಯಿಂದ 13,262 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 126 ಕಿಲೋಮೀಟರ್ ಉದ್ದದ 11 ಎಲಿವೇಟೆಡ್ ಕಾರಿಡಾರ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ 9 ಫ್ಲೈಓವರ್‌ಗಳು ಸೇರಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಷ್ಟು ಬೇಗ ಮದುವೆಯಾಗಲು ಇಷ್ಟವಿರಲಿಲ್ಲ, ಮಾನಸಿಕವಾಗಿ ಸಿದ್ಧಳಿರಲಿಲ್ಲ, ಅದಕ್ಕೆ ಕೇತನ್​ನ ಕೊಂದೆ ಎಂದ ಸಿಯಾ – Kannada News | Lohagad Fort Case Takes Dramatic Turn as Siya Goyal and Associate Admit Involvement

ಪುಣೆ, ಜೂನ್ 25: ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಹತ್ಯೆ ಪ್ರಕರಣಕ್ಕೆ ಈಗ ಅತ್ಯಂತ ಪ್ರಮುಖ ತಿರುವು ಸಿಕ್ಕಿದೆ. ತನಿಖೆ ನಡೆಸುತ್ತಿರುವ ಪುಣೆ ಪೊಲೀಸರ ಪ್ರಕಾರ, ಸಿಯಾ ಗೋಯಲ್ ಈ ಮದುವೆಗೆ ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಆಕೆಯ ಕುಟುಂಬಸ್ಥರು ಕೇತನ್‌ನನ್ನು ಮದುವೆಯಾಗುವಂತೆ ಭಾರಿ ಒತ್ತಡ ಹೇರುತ್ತಿದ್ದರು. ಈ ಕೌಟುಂಬಿಕ ಒತ್ತಡ ಹಾಗೂ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆಗಿನ ಅಕ್ರಮ ಸಂಬಂಧವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಜೂನ್ 29 ರವರೆಗೆ ಆರೋಪಿಗಳಿಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಳ್ಳಪ್ರೇಮಕ್ಕೆ ಅಡ್ಡಿಯಾಗಿದ್ದ ವರ: ಪೊಲೀಸರ ತನಿಖೆ

ಹಿರಿಯ ಪೊಲೀಸ್ ಅಧಿಕಾರಿಗಳು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿಯ ಪ್ರಕಾರ, ಸಿಯಾ ಕಳೆದ ವರ್ಷದ ದೀಪಾವಳಿ ಪಾರ್ಟಿಯಲ್ಲಿ ಡ್ರೈಫ್ರೂಟ್ಸ್​ ವ್ಯಾಪಾರಿ ಚೇತನ್ ಚೌಧರಿಯನ್ನು ಭೇಟಿಯಾಗಿದ್ದಳು. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರಿಂದ ಆಕೆಗೆ ತನಗಾಗಿ ಹೆಚ್ಚಿನ ಸಮಯ ಬೇಕಿತ್ತು ಮತ್ತು ನವೆಂಬರ್‌ನಲ್ಲಿ ನಿಗದಿಯಾಗಿದ್ದ ಅದ್ದೂರಿ ಮದುವೆಯನ್ನು ಮುಂದುವರಿಸಲು ಆಕೆಗೆ ಇಷ್ಟವಿರಲಿಲ್ಲ. ತನ್ನ ಪ್ರೀತಿಯ ಮಧ್ಯೆ ಕೇತನ್ ಒಂದು ದೊಡ್ಡ ‘ಅಡಚಣೆ’ಯಾಗಿದ್ದರಿಂದ, ಆತನನ್ನು ಜಗತ್ತಿನಿಂದಲೇ ಇಲ್ಲದಂತೆ ಮಾಡಲು ಪ್ರಿಯಕರನ ಜೊತೆ ಕೆಫೆಯೊಂದರಲ್ಲಿ ಕುಳಿತು ಸಿಯಾ ಸ್ಕೆಚ್ ಹಾಕಿದ್ದಳು.

ಮೇ ತಿಂಗಳಿನಿಂದಲೇ ನಡೆದಿತ್ತು ಮರ್ಡರ್ ಸ್ಕೆಚ್

ಪೊಲೀಸ್ ಅಧಿಕಾರಿಗಳ ಪ್ರಕಾರ, ಕೇತನ್‌ನನ್ನು ಕಂದಕಕ್ಕೆ ತಳ್ಳುವ ಪ್ಲಾನ್ ಹಠಾತ್ತನೆ ಮಾಡಿದ್ದಲ್ಲ. ಅದರ ಪ್ರಯತ್ನ ತುಂಬಾ ತಿಂಗಳಿನಿಂದ ನಡೆದಿತ್ತು. ಮೇ 31 ರಂದು ಇಬ್ಬರೂ ಕೋಟೆಗೆ ಹೋಗಿದ್ದಾಗ ಕೇತನ್ ಅತ್ಯಂತ ಅಪಾಯಕಾರಿ ಅಂಚಿನಲ್ಲಿ ಕುಳಿತಿರುವುದನ್ನು ಸಿಯಾ ಗಮನಿಸಿದ್ದಳು. ಆ ದಿನವೇ ಆತನನ್ನು ತಳ್ಳಲು ಆಕೆ ಮೊದಲ ಬಾರಿಗೆ ಯೋಚಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಜೂನ್ 6 ರಂದು ಪ್ರಿ-ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಹೊರಡುವಾಗ, ಸಿಯಾ ಕಾರಿನಲ್ಲಿ ಪ್ಲಾನ್ ಮಾಡಿ ಕೇತನ್ ಪಾಸ್‌ಪೋರ್ಟ್ ಕದ್ದಿದ್ದಳು. ಇದರಿಂದ ಪ್ರವಾಸ ರದ್ದಾಗಿತ್ತು. ಪ್ರವಾಸ ರದ್ದಾದ ಬೆನ್ನಲ್ಲೇ ಜಗಳವಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದು ಸಿಯಾ ಮೊದಲ ಬಾರಿ ತಳ್ಳಿದ್ದಳು. ಆದರೆ ಕೇತನ್ ಪೊದೆ ಹಿಡಿದು ಬದುಕುಳಿದಾಗ, ‘ಹಾವು ಬಂತು’ ಎಂದು ಸುಳ್ಳು ಹೇಳಿ ಅಪ್ಪಿಕೊಂಡು ನಾಟಕವಾಡಿದ್ದಳು.

ಕೊನೆಗೂ ಜೂನ್ 18 ರಂದು ಆಕೆ ಅಂದುಕೊಂಡಂತೆ ಮಾಡಿಬಿಟ್ಲು ಹತ್ಯೆ

ಜೂನ್ 18 ರಂದು ತನ್ನ ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಸಿಯಾ, ಕೇತನ್‌ನನ್ನು ಮತ್ತೆ ಅದೇ ಕೋಟೆಗೆ ಕರೆತಂದಿದ್ದಾಳೆ. ಇವರಿಬ್ಬರು ಬರುವ ಮೊದಲೇ ಪ್ರಿಯಕರ ಚೇತನ್ ಚೌಧರಿ ಕೋಟೆಯ ಜಾಗದಲ್ಲಿ ಅವಿತು ಕುಳಿತಿದ್ದ. ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ನಂತರ ಇದನ್ನು ಬಲವಾದ ಗಾಳಿಯಿಂದ ನಡೆದ ಅಪಘಾತ ಎಂದು ಬಿಂಬಿಸಲು ಪೊಲೀಸರಿಗೆ ಸುಳ್ಳು ಕಥೆ ಹೇಳಿದ್ದರು.

ಮಗನ ಹೆಣ ಕಂಡರೂ ಅವಳ ಕಣ್ಣಲ್ಲಿ ನೀರಿರಲಿಲ್ಲ: ತಂದೆಯ ಆಕ್ರಂದನ

ಮೃತನ ತಂದೆ ವಿಶಾಲ್ ಅಗರ್ವಾಲ್ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ, ನನ್ನ ಮಗನ ಶವದೊಂದಿಗೆ ಪೊಲೀಸರು ಮನೆಗೆ ಬಂದಾಗಲೂ ಸಿಯಾ ಮುಖದಲ್ಲಿ ಯಾವುದೇ ದುಃಖದ ಭಾವನೆ ಇರಲಿಲ್ಲ, ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಇಡೀ ಕೊಲೆ ಸಂಚು ಗೋಯಲ್ ಕುಟುಂಬಕ್ಕೂ ಮೊದಲೇ ತಿಳಿದಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಪೊಲೀಸರು ಈ ಆರೋಪವನ್ನು ಇನ್ನು ದೃಢಪಡಿಸಿಲ್ಲ. ಡಿಜಿಟಲ್ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಚುರುಕಿನಿಂದ ಸಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಕಾಯಿಲೆ; ಆ ಸಮಸ್ಯೆ ಬಗ್ಗೆ ಇಲ್ಲಿದೆ ವಿವರ – Kannada News | Alka Yagnik’s Health Update: Battling SNHL After Padma Bhushan Honor

ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ದೀರ್ಘಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋಗುವಾಗ ಅವರು ಸಹಾಯಕರ ನೆರವು ಪಡೆದರು. ಈ ವಿಡಿಯೋ ನೋಡಿ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಅಟ್ಯಾಕ್‌ನಿಂದ ಬಂದ ಕಾಯಿಲೆ

ಅಲ್ಕಾ ಯಾಗ್ನಿಕ್ ಅವರಿಗೆ ಅಪರೂಪದ ಶ್ರವಣ ದೋಷ ಕಾಣಿಸಿಕೊಂಡಿದೆ. ಇದನ್ನು ‘ಸೆನ್ಸೋರಿನೂರಲ್ ಹಿಯರಿಂಗ್ ಲಾಸ್’ (SNHL) ಎಂದು ಕರೆಯಲಾಗುತ್ತದೆ. 2024ರಲ್ಲಿ ತಮಗೆ ಈ ಕಾಯಿಲೆ ಇರುವುದನ್ನು ಅವರು ಬಹಿರಂಗಪಡಿಸಿದ್ದರು. ವಿಮಾನದಿಂದ ಕೆಳಗೆ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಕಿವಿ ಕೇಳಿಸದಂತಾಗಿತ್ತು. ವೈರಲ್ ಇನ್ಫೆಕ್ಷನ್ ಕಾರಣದಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು ಸೆನ್ಸೋರಿನೂರಲ್ ಹಿಯರಿಂಗ್ ಲಾಸ್?

ಕಿವಿಯ ಒಳಭಾಗ ಅಥವಾ ಶ್ರವಣ ನರಗಳಿಗೆ ಹಾನಿಯಾದಾಗ ಈ ಶ್ರವಣ ದೋಷ ಉಂಟಾಗುತ್ತದೆ. ಇದರಿಂದಾಗಿ ಶಬ್ದಗಳನ್ನು ಸರಿಯಾಗಿ ಗ್ರಹಿಸಲು ಮೆದುಳಿಗೆ ಸಾಧ್ಯವಾಗುವುದಿಲ್ಲ. ವಯಸ್ಸಾಗುವುದು ಮತ್ತು ಸೋಂಕುಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಅಲ್ಕಾ ಅವರ ವಿಷಯದಲ್ಲಿ ವೈರಲ್ ಅಟ್ಯಾಕ್ ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿರುತ್ತದೆ.

ಇದನ್ನೂ ಓದಿ: ‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಹಾಡುವುದನ್ನು ನಿಲ್ಲಿಸಿದ ಗಾಯಕಿ

ಈ ಕಾಯಿಲೆಯಿಂದಾಗಿ ಅಲ್ಕಾ ಯಾಗ್ನಿಕ್ ಅವರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸಂಗೀತ ನಿರ್ದೇಶಕರು ಇಂದಿಗೂ ಅವರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಹಾಡುಗಳನ್ನು ರೆಕಾರ್ಡ್ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಮ್ತಿಯಾಜ್ ಅಲಿ ನಿರ್ದೇಶನದ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಮ್ ಕಾಲ್ಜಾ’ ಅವರು ಹಾಡಿದ ಕೊನೆಯ ಹಾಡಾಗಿದೆ. ತಾವೀಗ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವುದಾಗಿ ಅಲ್ಕಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:02 am, Thu, 25 June 26

Source link

ಇಂಗ್ಲೆಂಡ್ ಆಟಗಾರರಲ್ಲಿ ಕ್ಷಮೆಯಾಚಿಸಿದ ಬೆನ್ ಸ್ಟೋಕ್ಸ್..! – Kannada News | Ben Stokes Apologises to England Teammates

ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ಮರಳುವಿಕೆಯೊಂದಿಗೆ ಸ್ಟೋಕ್ಸ್  ತಮ್ಮ ಸಹ ಆಟಗಾರರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.  ಜೂನ್ 8 ರಂದು ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಮುಗಿದ ಬಳಿಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್‌ ಒಂದಕ್ಕೆ ಭೇಟಿ ನೀಡಿದ್ದರು.

ಈ ವೇಳೆ ನಡೆದ ಗಲಾಟೆಯ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ನಡೆಸಿತು.  ಕ್ಲಬ್​ನಲ್ಲಿ ನಡೆದ ಸಂಘರ್ಷದಲ್ಲಿ ಸ್ಟೋಕ್ಸ್ ಹಾಗೂ ಅಟ್ಕಿನ್ಸನ್ ಅವರ ಯಾವುದೇ ತಪ್ಪಿಲ್ಲದಿದ್ದರೂ, ತಂಡದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರಿಗೂ ಲಿಖಿತ ಎಚ್ಚರಿಕೆ ನೀಡಿ, ಎರಡನೇ ಟೆಸ್ಟ್‌ನಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿರಲಿಲ್ಲ.

ಇದೀಗ ಬೆನ್ ಸ್ಟೋಕ್ಸ್ ಮುಂದಾಳತ್ವದಲ್ಲಿ ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಬೆನ್ ಸ್ಟೋಕ್ಸ್ ಇಂಗ್ಲೆಂಡ್  ಆಟಗಾರರಲ್ಲಿ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ…

  • ನನ್ನ ತಪ್ಪುಗಳಿಂದಾಗಿ ಇಡೀ ತಂಡದ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಒಬ್ಬ ನಾಯಕನಾಗಿ ತಾವೇ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಬೆನ್ ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ.
  • ನನ್ನ ಈ ವಿವಾದದಿಂದಾಗಿ ಇಂಗ್ಲೆಂಡ್ ತಂಡಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿದ ಜೇಮ್ಸ್ ರಿವ್, ಜೋರ್ಡನ್ ಕಾಕ್ಸ್ ಮತ್ತು ಸೋನಿ ಬೇಕರ್ ಅವರ ಐತಿಹಾಸಿಕ ಸಾಧನೆಗಳು ಬದಿಗೆ ಸರಿದವು.
  • ಅಲ್ಲದೆ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಇಂಗ್ಲೆಂಡ್ ತಂಡವು ದ್ವಿತೀಯ ಪಂದ್ಯದಲ್ಲಿ ಜೋ ರೂಟ್ ನಾಯಕತ್ವದಲ್ಲಿ ಕಣಕ್ಕಿಳಿಯಬೇಕಾಯಿತು.
  • ಕೆನ್ನಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 253 ರನ್‌ಗಳ ಭಾರಿ ಸೋಲನ್ನು ಅನುಭವಿಸಿತು. ಇದರಿಂದ ಹಂಗಾಮಿ ನಾಯಕ ಜೋ ರೂಟ್ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಒಳಗಾಗಿದ್ದರು.

ಇಷ್ಟಕ್ಕೆಲ್ಲಾ ಕಾರಣವಾಗಿದ್ದು ನಾನು ಮಾಡಿದ ತಪ್ಪು. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯ ವೇಳೆ ತಂಡದ ಮಧ್ಯರಾತ್ರಿಯ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ನಾನು ನೈಟ್‌ಕ್ಲಬ್‌ನಲ್ಲಿ ಉಳಿದುಕೊಂಡಿದ್ದು ಇಡೀ ತಂಡದ ಏಕಾಗ್ರತೆಗೆ ಧಕ್ಕೆ ತಂದಿತು ಎಂದು ಬೆನ್ ಸ್ಟೋಕ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಇಡೀ ತಂಡದ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್​ ಸೆಮಿಫೈನಲ್​ಗೇರಿದ ಇಂಗ್ಲೆಂಡ್

ಈ ಕ್ಷಮಾಪಣೆಯೊಂದಿಗೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಅದರಂತೆ ಜೂನ್ 25 ರಿಂದ ಶುರುವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸ್ಟೋಕ್ಸ್ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.

Source link

‘ಪೆದ್ದಿ’ ಸಿನಿಮಾ ಬಗೆಗಿನ ಟ್ರೋಲ್‌ ಬಗ್ಗೆ ಕೊನೆಗೂ ಮೌನ ಮುರಿದ ರಾಮ್ ಚರಣ್ – Kannada News | Ram Charan on Peddi and Janhvi Kapoor Controversy: Box Office Success Amidst Criticism

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರದ ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದೀಗ ಈ ವಿವಾದಗಳ ಬಗ್ಗೆ ನಟ ರಾಮ್ ಚರಣ್ ಹೈದರಾಬಾದ್‌ನಲ್ಲಿ ನಡೆದ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಚಿತ್ರದ ಪರ ಧ್ವನಿ ಎತ್ತಿದ್ದಾರೆ.

ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ರಾಮ್ ಚರಣ್

ಯಾರು ಏನೇ ವಿಮರ್ಶೆ ಬರೆದರೂ ಈ ಯಶಸ್ಸು ಪ್ರೇಕ್ಷಕರಿಗೆ ಸೇರಿದ್ದು ಎಂದು ರಾಮ್ ಚರಣ್ ಹೇಳಿದ್ದಾರೆ. ‘ತೆಲುಗು ಪ್ರೇಕ್ಷಕರು ಯಾರನ್ನೂ ಅಷ್ಟು ಬೇಗ ಇಷ್ಟಪಡುವುದಿಲ್ಲ. ಆದರೆ ಒಮ್ಮೆ ಇಷ್ಟಪಟ್ಟರೆ ಪ್ರಾಣ ಇರುವವರೆಗೂ ಪ್ರೀತಿಸುತ್ತಾರೆ’ ಎಂದು ಅವರು ತಿಳಿಸಿದ್ದಾರೆ. ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡ ದೊಡ್ಡ ವಾಹಿನಿಗಳು ಮತ್ತು ಸಣ್ಣ ವಿಮರ್ಶಕರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಜಾನ್ವಿ ಪಾತ್ರ

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ‘ಅಚ್ಚಿಯಮ್ಮ’ ಎಂಬ ಪಾತ್ರದ ಚಿತ್ರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಕೆಲವು ದೃಶ್ಯಗಳಲ್ಲಿ ಜಾನ್ವಿ ಅವರ ಪಾತ್ರವನ್ನು ಅತಿ ಹೆಚ್ಚು ಗ್ಲಾಮರಸ್ ಆಗಿ ತೋರಿಸಲಾಗಿದೆ ಎಂದು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕರು, ‘ನಾವು ರಾಮ್ ಚರಣ್ ಮತ್ತು ಜಾನ್ವಿ ನಡುವೆ ಒಂದು ರೋಮ್ಯಾಂಟಿಕ್ ಕಥೆ ತೋರಿಸಲು ಬಯಸಿದ್ದೆವು. ಆದರೆ ಪ್ರೇಕ್ಷಕರು ಇದನ್ನು ಇಷ್ಟು ನೆಗೆಟಿವ್ ಆಗಿ ತಗೆದುಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ’ ಎಂದಿದ್ದರು.

ಇದನ್ನೂ ಓದಿ: ‘ನನ್ನ ಮಗಳು ನನ್ನ ಅಪ್ಪ ಎಂದು ಕರೆಯುತ್ತಿಲ್ಲ’: ರಾಮ್ ಚರಣ್

ದೃಶ್ಯಗಳನ್ನೇ ತೆಗೆದುಹಾಕಿದ ಚಿತ್ರತಂಡ

ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡ ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕಿದೆ. ಥಿಯೇಟರ್ ಆವೃತ್ತಿಗೆ ಹೊಸ ದೃಶ್ಯಗಳನ್ನು ಸೇರಿಸಲಾಗಿದೆ. ಈ ಎಲ್ಲಾ ವಿವಾದಗಳ ನಡುವೆಯೂ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 332 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಗೇಮ್ ಚೇಂಜರ್’ ಮತ್ತು ‘ಆಚಾರ್ಯ’ ಸಿನಿಮಾಗಳ ಸೋಲಿನ ನಂತರ ರಾಮ್ ಚರಣ್ ಪಾಲಿಗೆ ಈ ಸಿನಿಮಾ ದೊಡ್ಡ ಕಮರ್ಷಿಯಲ್ ಗೆಲುವು ತಂದುಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version