Karnataka Weather Forecast: ಕರಾವಳಿ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​, ಈ ಜಿಲ್ಲೆಗಳಲ್ಲಿಯೂ ಭಾರಿ ಮಳೆ ನಿರೀಕ್ಷೆ – Kannada News | Karnataka Weather Forecast: Orange Alert for Coastal Districts; Heavy Rain Likely Until June 28

ಬೆಂಗಳೂರು, ಜೂನ್​​ 24: ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಮೂರು ಕರಾವಳಿ ಜಿಲ್ಲೆಗಳಿಗೆ ವಿಶೇಷವಾಗಿ ಶುಕ್ರವಾರದಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯ ತೀವ್ರತೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಜೂನ್ 27 ಮತ್ತು 28ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 25ರಿಂದ ಮಲೆನಾಡು ಭಾಗದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಳ್ಳಲಿದ್ದು, ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಲ್ಲೆಲ್ಲಿ ಮಳೆ ಮುನ್ಸೂಚನೆ?

ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಗಂಟೆಗೆ 30-40 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ವರ್ಷಧಾರೆಯಾಗಲಿದ್ದು, ದಕ್ಷಿಣ ಕನ್ನಡದ ಹಲವೆಡೆಯೂ ಗಾಳಿ ಸಹಿತ ಸಾಧಾರಣ ಮಳೆ ಅಂದಾಜಿಸಲಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರದಲ್ಲಿಯೂ ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ವದಂತಿ ಸುಳ್ಳು; ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದ ಹವಾಮಾನ ತಜ್ಞರು

ಹೇಗಿರಲಿದೆ ಬೆಂಗಳೂರು ವೆದರ್​​?

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಕೆಲ ಪ್ರದೇಶಗಳಲ್ಲಿ ಮಾತ್ರ ಗಾಳಿಯ ಜೊತೆಗೆ ಅಲ್ಪ ಪ್ರಮಾಣದ ಮಳೆಯನ್ನು ನಿರೀಕ್ಷಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ: ರಾಜ್ಯದಲ್ಲಿ ಮತ್ತೆ ರಸ್ತೆಗಿಳಿಯಲಿವೆ ಬೈಕ್​ ಆ್ಯಂಬುಲೆನ್ಸ್​​ಗಳು – Kannada News | Karnataka Health Department Sets to Re Launch Bike Ambulance Service

ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ

ಬೆಂಗಳೂರು, ಜೂನ್​​ 24: ಟ್ರಾಫಿಕ್​​ ಸಮಸ್ಯೆಯಿಂದ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗುತ್ತಿರುವ ನಡುವೆ ಆರೋಗ್ಯ ಇಲಾಖೆ ಬೆಂಗಳೂರಿಗರಿಗೆ (Bengaluru) ಗುಡ್​​ ನ್ಯೂಸ್​​ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಬೈಕ್ ಆ್ಯಂಬ್ಯುಲೆನ್ಸ್ ಸೇವೆ ಪುನರಾರಂಭಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್​​ ಕೂಡ ಬಹಳ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಖಾದರ್​​ ಆರೋಗ್ಯ ಸಚಿವರಾಗಿದ್ದ ವೇಳೆಯೇ ರಾಜ್ಯದಲ್ಲಿ ಬೈಕ್​​ ಆ್ಯಂಬುಲೆನ್ಸ್​​ ಸೇವೆ ಪರಿಚಯಿಸಲಾಗಿತ್ತು ಎಂಬುದಿಲ್ಲಿ ಗಮನಾರ್ಹ.

2015ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೈಕ್ ಆ್ಯಂಬ್ಯುಲೆನ್ಸ್​​ಗಳು ರಸ್ತೆಗಿಳಿದಿದ್ದವು. ರಾಜ್ಯದ್ಯಾಂತ ಒಟ್ಟು 30 ಬೈಕ್ ಆ್ಯಂಬ್ಯುಲೆನ್ಸ್ಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಆದರೆ 8 ವರ್ಷಗಳ ಬಳಿಕ ಬೈಕ್ ರಿಪೇರಿಗೆ ಅನುದಾನದ ಕೊರತೆ, ಸಿಬ್ಬಂದಿ ಸಂಬಳದ ವಿಚಾರ ಸೇರಿ ನಾನಾ ಕಾರಣಗಳಿಂದಾಗಿ ಮಹತ್ವದ ಯೋಜನೆ ನಿಂತಿತ್ತು. ಇದೀಗ ರಾಜ್ಯದ ಆರೋಗ್ಯ ಸಚಿವರಾಗಿ ಯು.ಟಿ. ಖಾದರ್​​ ಮತ್ತೆ ಅಧಿಕಾರ ಸ್ವೀಕಾರದ ಬೆನ್ನಲ್ಲೇ ಈ ಸೇವೆ ಪುನರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಚಿವರು ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬಹಳ ಸುಲಭವಾಗಿ ಸಿಗಲಿದೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ! ದೇಶದಲ್ಲೇ ಪ್ರಥಮ ವಿನೂತನ ಕಮಾಂಡ್ ಸೆಂಟರ್ ಲೋಕಾರ್ಪಣೆ

ಬೈಕ್​​ ಆ್ಯಂಬುಲೆನ್ಸ್​​ಗಳ ವಿಶೇಷತೆ ಏನು?

  • ರೋಗಿಗಳಿಗೆ ಸುಲಭವಾಗಿ ತಕ್ಷಣ ಚಿಕಿತ್ಸೆ ಒದಗಿಸಲು ಸಾಧ್ಯ
  • ಟ್ರಾಫಿಕ್ ಸಮಯದಲ್ಲಿಯೂ ರೋಗಿಯ ಬಳಿ ಸುಲಭವಾಗಿ ತಲುಪಬಹುದು
  • ಆ್ಯಂಬುಲೆನ್ಸ್​​ಗಳ ಮಾದರಿಯಲ್ಲೇ ಇವು ಆಕ್ಸಿಜನ್ ಸಿಲಿಂಡರ್, ಫಸ್ಟ್ ಏಡ್ ಕಿಟ್, ಲೈಫ್ ಸೇವಿಂಗ್ ಮೆಡಿಸಿನ್, ಆಕ್ಸಿಮೀಟರ್, ಗ್ಲೂಕೋಮೀಟರ್, ಡ್ರೆಸಿಂಗ್ ಸಾಮಗ್ರಿಗಳನ್ನು ಹೊಂದಿರಲಿವೆ
  • ಕೆಲ ಬೈಕ್​​ಗಳಲ್ಲಿ ಸೈಡ್ ಕ್ಯಾರೇಜ್ ಅಳವಡಿಸುವ ಕಾರಣ ರೋಗಿ ಮಲಗಲು ಅನುಕೂಲ ಮಾಡುವ ವ್ಯವಸ್ಥೆಯೂ ಇರಲಿದೆ

ಯು.ಟಿ. ಖಾದರ್​​ ಮಾಹಿತಿ

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್​​, 108 ಆ್ಯಂಬುಲೆನ್ಸ್ ಹಾಗೂ ಬೈಕ್ ಆ್ಯಂಬುಲೆನ್ಸ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಬೈಕ್ ಆ್ಯಂಬುಲೆನ್ಸ್​​ಗಳು ಸೇವೆ ನೀಡುತ್ತಿವೆ. ಹೀಗಾಗಿ ನಮ್ಮಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಮತ್ತೆ ಆರಂಭಿಸುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:19 pm, Wed, 24 June 26

Source link

ತುಂಗಭದ್ರಾದ ಹೊಸ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆ: ಜೂ 25ರಂದು ಶಾಲೆಗಳಿಗೆ ರಜೆ ಘೋಷಣೆ – Kannada News | Tungabhadra Dam New Crest Gates Inauguration: Schools Declare Holiday on June 25

ಕೊಪ್ಪಳ, ಜೂನ್​​ 24: ಕರ್ನಾಟಕ ಸೇರಿದಂತೆ ನೆರೆಯ ಮೂರು ರಾಜ್ಯಗಳ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೀಗ (Tungabhadra Dam) ಹೊಸ ಕಳೆ ಬಂದಿದೆ. ಕ್ರಸ್ಟ್ ಗೇಟ್ ದುರಂತಕ್ಕೆ ಇದೀಗ ಶಾಶ್ವತ ಮುಕ್ತಿ ಸಿಕ್ಕಿದ್ದು, ಜೂನ್​​ 25ರಂದು ನೂತನ 33 ಕ್ರಸ್ಟ್​ ಗೇಟ್‌ಗಳ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆ ಕೊಪ್ಪಳ ತಾಲೂಕಿನ ಮುನಿರಾಬಾದ್​​ನಲ್ಲಿ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆ ರಜೆ (holiday) ಘೋಷಿಸಲಾಗಿದೆ.

ಬೃಹತ್ ವೇದಿಕೆ ಸಿದ್ಧ

ನಾಳೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್​ ಗೇಟ್‌ಗಳು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಮಹಾ ಕಾರ್ಯಕ್ರಮಕ್ಕಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜರ್ಮನ್ ಮಾದರಿಯಲ್ಲಿ ಬೃಹತ್ ಹವಾಮಾನ ನಿಯಂತ್ರಿತ ಟೆಂಟ್ ಅಳವಡಿಸಲಾಗಿದ್ದು, ವಿಐಪಿಗಳಿಗಾಗಿ ಹೈಟೆಕ್ ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ: ಜೂ 25ಕ್ಕೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ

ಈಗಾಗಲೇ ನೆರೆಯ ರಾಜ್ಯ ಆಂಧ್ರ ಹಾಗೂ ತೆಲಂಗಾಣ ಸಿಎಂಗಳಿಗೆ ಬಸವರಾಜ್ ರಾಯರೆಡ್ಡಿ ನೇತೃತ್ವದ ನಿಯೋಗ ಖುದ್ದು ಭೇಟಿ ಮಾಡಿ ಆಹ್ವಾನ ನೀಡಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನೀರಿಕ್ಷೆ ಇದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬರುವುದು ಖಚಿತ

ಇನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗುತ್ತಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬರುವುದು ಖಚಿತವಾಗಿದೆ. ಇಂದು ಅಧಿಕೃತ ಪ್ರವಾಸ ಪಟ್ಟಿ ಬಿಡುಗಡೆ ಆಗಿದೆ. ನಾಳೆ ಬೆಳಿಗ್ಗೆ 9.40ಕ್ಕೆ ಮುನಿರಾಬಾದ್​ಗೆ ಆಗಮಿಸಲಿದ್ದಾರೆ. 10 ಗಂಟೆಗೆ ಟಿಬಿ ಡ್ಯಾಂಗೆ ಭೇಟಿ ನೀಡಿ ಗೇಟ್​ಗಳ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಳಿಕ ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಘಟನೆ ಹಿನ್ನೆಲೆ 

ಕಳೆದ 2024ರ ಡಿಸೆಂಬರ್ ತಿಂಗಳ ಆ ಕರಾಳ ದಿನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗುವ ಮೂಲಕ ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿದು ಹೋಗಿತ್ತು. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರದ ರೈತರು ಕಣ್ಣೀರು ಹಾಕಿದ್ದರು. ಆದರೆ, ರಾಜ್ಯ ಸರ್ಕಾರ ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿತು. ಕೇವಲ ಒಂದು ಗೇಟ್ ರಿಪೇರಿ ಮಾಡುವುದರ ಬದಲಾಗಿ, ಭವಿಷ್ಯದ ದೃಷ್ಟಿಯಿಂದ ಇಡೀ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನೇ ಬದಲಾಯಿಸಲು ಮಾಸ್ಟರ್ ಪ್ಲ್ಯಾನ್​ ಮಾಡಿತ್ತು. ಇದೀಗ ಬರೋಬ್ಬರಿ 51 ಕೋಟಿ ರೂ ವೆಚ್ಚದಲ್ಲಿ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಚಿವ ಸ್ಥಾನಕ್ಕೆ ಶಾಸಕರ ಲಾಬಿ: ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ – Kannada News | Karnataka Cabinet Expansion: Congress High command Warns to DK Shivakumar about MLAs Lobby For Minister Post

ಬೆಂಗಳೂರು, (ಜೂನ್ 24): ಡಿಕೆ ಶಿವಕುಮಾರ್  (DK Shivakumar)ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಕುರಿತು ಚರ್ಚೆಗಳು ಜೋರಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೇ ಜೂನ್ 27ರಂದು ದೆಹಲಿಗೆ ಭೇಟಿ ನೀಡಿ ಪಕ್ಷದ ಹೈಕಮಾಂಡ್ (Congress High command) ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದ್ರೆ, ಇದೇ ಸಂಪುಟ ವಿಸ್ತರಣೆ ವಿಚಾರಕ್ಕೆ ಹೈಕಮಾಂಡ್​​​ ಜತೆ ಚರ್ಚಿಸುವ ಮುನ್ನವೇ ದೆಹಲಿಯಿಂದ ಡಿಕೆ ಶಿವಕುಮಾರ್​​​ಗೆ ಮಹತ್ವದ ಸೂಚನೆ ಬಂದಿದೆ. ಹೌದು….ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ಕೊಡಬೇಡಿ ಎಂದ ಡಿಕೆ ಶಿವಕುಮಾರ್ ಅವರಗೆ ಹೈಕಮಾಂಡ್​​​​ ದೂರವಾಣಿ ಕರೆ ಮಾಡಿ ಸೂಚಿಸಿದೆ.

ಸಚಿವ ಸ್ಥಾನ ನೀಡಬೇಕೆಂದು ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದು, ಈ ಸಂಬಂಧ ದೆಹಲಿಗೆ ತೆರಳಿ ಭಾರೀ ಲಾಬಿ ನಡೆಸಿದ್ದಾರೆ. ಇನ್ನೊಂದೆಡೆ ತಮ್ಮ ಶಾಸಕರನ್ನು ಮಂತ್ರಿ ಮಾಡಬೇಕೆಂದು ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ಸಹ ನಡೆದಿವೆ. ಇನ್ನು ಸ್ವಾಮೀಜಿ, ಸಮುದಾಯದ ಮಠಾಧೀಶರು ಸೇರಿದಂತೆ ವಿವಿಧ ಮೂಲಗಲಿಂದ ಮಂತ್ರಿ ಸ್ಥಾನಕ್ಕೆ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಹೈಕಮಾಂಡ್, ಯಾವುದೇ ಕಾರಣಕ್ಕೂ ಇದು ತಾರಕ್ಕೆ ಹೋಗಬಾರದು ಎಂದು ಎಚ್ಚೆತ್ತುಕೊಂಡು ಕೂಡಲೇ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ನೀಡಬೇಡಿ. ಯಾವುದೇ ರೀತಿಯ ಲಾಬಿಯನ್ನು ಸಹಿಸಿಕೊಳ್ಳುವುದಿಲ್ಲ. ಸಂಪುಟ ವಿಸ್ತರಣೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೆ ಎಂದು ಖಡಕ್ ಆಗಿ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೆಬ್ಬಾಳ ಫ್ಲೈಓವರ್ ಇಳಿದ್ರೆ ನರಕ ದರ್ಶನ: ಮೇಕ್ರಿ ಸರ್ಕಲ್ ದಾಟುವಷ್ಟರಲ್ಲಿ ಸುಸ್ತಾದ ಕಾರು ಸವಾರರು; ಹೇಗಿದೆ ನೋಡಿ ಟ್ರಾಫಿಕ್‌ ಟೈಮ್‌ಲೈನ್ – Kannada News | Hebbal Flyover Congestion: Bangalore Commuter’s 70 Minute Traffic Ordeal to Windsor Manor

ಬೆಂಗಳೂರು, ಜೂ.24: ಸಿಲಿಕಾನ್ ಸಿಟಿಯ ಹೆಬ್ಬಾಳ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು ಎದುರಿಸುತ್ತಿರುವ ನರಕಯಾತನೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಹೆಬ್ಬಾಳ ಫ್ಲೈಓವರ್ ಇಳಿದು ವಿಂಡ್ಸರ್ ಮ್ಯಾನರ್ ಸೇರುವ ಕೇವಲ 3 ಕಿಲೋಮೀಟರ್‌ಗಿಂತಲೂ ಕಡಿಮೆ ಅಂತರದ ರಸ್ತೆಯನ್ನು ದಾಟಲು ವಾಹನ ಸವಾರರೊಬ್ಬರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಈ ಟ್ರಾಫಿಕ್ ವ್ಯೂಹದಲ್ಲಿ ಸಿಲುಕಿರುವ ಬೆಂಗಳೂರು ಪೋಸ್ಟ್​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಟ್ರಾಫಿಕ್‌ನಲ್ಲಿ ಸಿಲುಕಿದ ಸವಾರ ಹಂಚಿಕೊಂಡ ‘ಟೈಮ್‌ಲೈನ್’ ಇಲ್ಲಿದೆ ನೋಡಿ

ಬೆಳಗಿನ ಪೀಕ್ ಅವರ್‌ನಲ್ಲಿ ಹೆಬ್ಬಾಳ ಮಾರ್ಗವಾಗಿ ನಗರ ಪ್ರವೇಶಿಸುವಾಗ ವಾಹನಗಳು ಹೇಗೆ ಇಂಚಿಂಚೂ ಕದಲುವುದಿಲ್ಲ ಎಂಬುದಕ್ಕೆ ವಾಹನ ಸವಾರರೊಬ್ಬರು ಹಂಚಿಕೊಂಡಿರುವ ಈ ಸಮಯದ ವಿವರಣೆಯೇ ಸಾಕ್ಷಿ.

ಬೆಳಗ್ಗೆ 9:00 AM: ಹೆಬ್ಬಾಳ ಫ್ಲೈಓವರ್ ಪ್ರವೇಶ.

ಬೆಳಗ್ಗೆ 9:05 AM: ಬ್ಯಾಪ್ಟಿಸ್ಟ್ ಆಸ್ಪತ್ರೆ ಜಂಕ್ಷನ್ .

ಬೆಳಗ್ಗೆ 9:20 AM: ಗಂಗಾನಗರ ತಲುಪಲು 15 ನಿಮಿಷ ವ್ಯಯ!

ಬೆಳಗ್ಗೆ 9:25 AM: ಫೋರ್ ಸೀಸನ್ಸ್ ಹೋಟೆಲ್ ಮಗ್ಗುಲು.

ಬೆಳಗ್ಗೆ 9:35 AM: ಮೇಕ್ರಿ ಸರ್ಕಲ್ ತಲುಪುವಷ್ಟರಲ್ಲಿ ಅರ್ಧ ಗಂಟೆ.

ಬೆಳಗ್ಗೆ 9:45 AM: ಪ್ಯಾಲೇಸ್ ಗ್ರೌಂಡ್ಸ್

ಬೆಳಗ್ಗೆ 9:58 AM: ಪ್ಯಾಲೇಸ್ ಕುತ್ತಹಳ್ಳಿ .

ಬೆಳಗ್ಗೆ 10:10 AM: ಕೊನೆಗೂ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ತಲುಪಿದ ವಾಹನ

ಇದನ್ನೂ ಓದಿ: ‘ಓನ್ಲಿ ಇನ್ ನಮ್ಮ ಬೆಂಗಳೂರು’: ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:

ಹೆಬ್ಬಾಳ ಫ್ಲೈಓವರ್‌ನಿಂದ ಕೆಳಗೆ ಜೂಮ್ ಮಾಡಿಕೊಂಡು ಬರುವ ವಾಹನಗಳು ನೇರವಾಗಿ ಟ್ರಾಫಿಕ್ ಎಂಬ ಮಾಯಾಲೋಕದೊಳಗೆ ಧುಮುಕುತ್ತವೆ. ಕೇವಲ 3 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಬರೋಬ್ಬರಿ 70 ನಿಮಿಷಗಳು ಬೇಕಾಗಿರುವುದು ಬೆಂಗಳೂರಿನ ಮೂಲಸೌಕರ್ಯದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯ ನಾಗರಿಕರಿಂದ ಹಿಡಿದು ದೇಶದ ಸಂಸದರವರೆಗೂ ಯಾರೂ ಈ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ಇದು ನಮ್ಮ ನಿತ್ಯದ ದಿನಚರಿಯಾಗಿದೆ, ಇದನ್ನು ಒಮ್ಮೆ ಯೋಚಿಸಿ ನೋಡಿ” ಎಂದು ಸಾರ್ವಜನಿಕರು ಸಾರಿಗೆ ಇಲಾಖೆ ಹಾಗೂ ಜಿಬಿಎ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:33 pm, Wed, 24 June 26

Source link

ಈ ಪ್ರಪಂಚದಲ್ಲಿ ಜನ ಅತೀ ಹೆಚ್ಚು ಸೇವಿಸುವ ಹಣ್ಣು ಯಾವುದು ಗೊತ್ತೇ? – Kannada News | Which fruit do people eat the most in the world?

ಅಗತ್ಯವಾಗ ಜೀವಸತ್ವಗಳು, ಖನಿಜಗಳು, ಫೈಬರ್‌, ಉತ್ಕರ್ಷಣ ನಿರೋಧಕ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು (fruits) ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ವೈದ್ಯರು ಕೂಡ ನಿತ್ಯ ಹಣ್ಣು ತಿನ್ನಲು ಶಿಫಾರಸ್ಸು ಮಾಡುತ್ತಾರೆ. ನೀವು ಕೂಡ ಸೇಬು, ಮಾವು, ಕಲ್ಲಂಗಡಿ ಅಂತೆಲ್ಲಾ ಪ್ರತಿನಿತ್ಯ ವೆರೈಟಿ ಹಣ್ಣುಗಳನ್ನು ತಿನ್ನುತ್ತೀರಿ ಅಲ್ವಾ. ಆದ್ರೆ ಈ ಜಗತ್ತಿನಲ್ಲಿ ಯಾವ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಜನ ಯಾವ ಹಣ್ಣನ್ನು ಹೆಚ್ಚು ಸೇವನೆ ಮಾಡುತ್ತಾರೆ ಎಂಬುದರ ಇಂಟರೆಸ್ಟಿಂಗ್‌ ಮಾಹಿತಿಯನ್ನು ತಿಳಿದುಕೊಳ್ಳಿ.

ಪ್ರಪಂಚದಲ್ಲಿ ಯಾವ ಹಣ್ಣನ್ನು ಹೆಚ್ಚು ಸೇವಿಸಲಾಗುತ್ತದೆ?

ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಸೇವಿಸಲಾಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಈ ಹಣ್ಣು ವರ್ಷಪೂರ್ತಿ ಲಭ್ಯವಿರುವುದರಿಂದ, ಕೈಗೆಟಕುವ ಬೆಲೆಗೂ ದೊರಕುವುದರಿಂದ ಹಣ್ಣುಗಳಲ್ಲಿ ಬಾಳೆ ಹಣ್ಣನ್ನೇ ಹೆಚ್ಚು ಸೇವನೆ ಮಾಡಲಾಗುತ್ತದೆ.  ಜೊತೆಗೆ ಸ್ಮೂಥಿಗಳು, ಸಿಹಿತಿಂಡಿಗಳು, ಚಿಪ್ಸ್, ಬೇಕರಿ ಉತ್ಪನ್ನಗಳು ಮತ್ತು ಮಕ್ಕಳ ಫುಡ್‌ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಸಹ ಬಾಳೆಹಣ್ಣನ್ನು ಬಳಕೆ ಮಾಡಲಾಗುತ್ತದೆ.

ಬಾಳೆಹಣ್ಣು ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹಣ್ಣು ಏಕೆ?

ಬಾಳೆಹಣ್ಣುಗಳ ಜನಪ್ರಿಯತೆಯ ಹಿಂದಿನ ನಿಜವಾದ ಕಾರಣ ಅವುಗಳ ರುಚಿ, ಪೌಷ್ಟಿಕಾಂಶ, ಕೈಗೆಟುಕುವ ಬೆಲೆ ಮತ್ತು ಬಹುಮುಖತೆ. ಬಾಳೆಹಣ್ಣನ್ನು ಅದರ ಕೈಗೆಟುಕುವ ಬೆಲೆ, ಸುಲಭ ಲಭ್ಯತೆ ಮತ್ತು ಹೇರಳವಾದ ಪೌಷ್ಟಿಕಾಂಶದ ಗುಣಗಳಿಂದಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಈ ಹಣ್ಣನ್ನು ಸೇವಿಸಲಾಗುತ್ತದೆ. ಚಿಕ್ಕ ಮಕ್ಕಳಿಂದ ವಯಸ್ಕರರವರೆಗೂ ಎಲ್ಲಾ ವಯಸ್ಸಿನ ಜನರು ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೆ ಇದರಲ್ಲಿ ನೈಸರ್ಗಿಕ ಸಿಹಿ ಮತ್ತು ತ್ವರಿತ ಶಕ್ತಿಯನ್ನು ಒದಗಿಸುವ ಸಾಮರ್ಥ್ಯ ಇರುವುದರಿಂದ ಹೆಚ್ಚಿನವರು ತಿನ್ನಲು  ಈ ಹಣ್ಣನ್ನೇ ಆಯ್ಕೆ ಮಾಡುತ್ತಾರೆ.

ವಿಶ್ವದಲ್ಲೇ ಅತಿ ಹೆಚ್ಚು ಬಾಳೆಹಣ್ಣು ಬೆಳೆಯುವ ದೇಶ ಯಾವುದು?

ಭಾರತದಲ್ಲಿ ಅತೀ ಹೆಚ್ಚು ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಬಾಳೆಹಣ್ಣು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದ ಅನುಕೂಲಕರ ಹವಾಮಾನ ಮತ್ತು ಹೆಚ್ಚಿನ ಪ್ರಮಾಣದ ಕೃಷಿಯೋಗ್ಯ ಭೂಮಿ ಬಾಳೆಹಣ್ಣುಗಳ ದೊಡ್ಡ ಪ್ರಮಾಣದ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಭಾರತದ ಜೊತೆಗೆ ಚೀನಾ, ಇಂಡೋನೇಷ್ಯಾ, ಬ್ರೆಜಿಲ್ ಮತ್ತು ಈಕ್ವೆಡಾರ್ ಸೇರಿದಂತೆ ಉಷ್ಣವಲಯ ಪ್ರದೇಶದ  ದೇಶಗಳು ಬಾಳೆಹಣ್ಣುಗಳನ್ನು ಬೆಳೆದು ವಿಶ್ವ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತವೆ.

ಇದನ್ನೂ ಓದಿ: ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?

ಬಾಳೆಹಣ್ಣಿನ ಪ್ರಯೋಜನಗಳೇನು?

  • ಬಾಳೆಹಣ್ಣು ಹಲವಾರು ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕ ಹಣ್ಣು. ಇದರಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ6, ಸಿ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ.
  • ಬಾಳೆಹಣ್ಣುದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.
  • ಬಾಳೆಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ತಡೆಯಬಹುದು.
  • ಬಾಳೆಹಣ್ಣು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತದೆ.
  • ಇದು ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ‘ಅಗ್ನಿಸಾಕ್ಷಿ’ ಸೀರಿಯಲ್ ಶೀರ್ಷಿಕೆ ಗೀತೆ – Kannada News | Colors Kannada serial Agnisakshi new title song ft Shamanth Bro Gowda and Varshini

ವಿಶ್ವ ಸಂಗೀತ ದಿನದ ವಿಶೇಷ ಸಂದರ್ಭದಲ್ಲಿ, ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ (Colors Kannada) ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೊಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರಸಾರ ಆರಂಭವಾಗಿ ಕೇವಲ ದಿನಗಳಲ್ಲೇ ರಾಜ್ಯಾದ್ಯಂತ ಪ್ರೇಕ್ಷಕರ ಮನಗೆದ್ದಿರುವ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್, ತನ್ನ ಟೈಟಲ್ ಸಾಂಗ್ ಮೂಲಕವೂ ಗಮನ ಸೆಳೆಯುತ್ತಿದೆ.

‘ಅಗ್ನಿಸಾಕ್ಷಿ’ ಸೀರಿಯಲ್ ಸದ್ಯ ಸಂಜೆ 7 ಗಂಟೆಯ ಪ್ರೈಮ್-ಟೈಮ್ ಸ್ಲಾಟ್‌ನಲ್ಲಿ ಭರ್ಜರಿ ಪ್ರಶಂಸೆ ಗಳಿಸುತ್ತಿದೆ. ಇದು ಅಗ್ನಿ ಮತ್ತು ಸಾಕ್ಷಿ ಎಂಬ ಇಬ್ಬರು ಸಮಾನ ಮನಸ್ಕರ, ಹಠಮಾರಿಗಳ ನಡುವಿನ ರೋಚಕ ಪ್ರೇಮಕಾವ್ಯವಾಗಿದೆ. ಕೆಂಡ ಮತ್ತು ಬಿರುಗಾಳಿಯಂತಿರುವ ಅವರಿಬ್ಬರ ಮುಖಾಮುಖಿ ಮುಂದೆ ಹೇಗೆ ಸುಂದರ ಪ್ರೇಮದ ಮಳೆಯಾಗಲಿದೆ ಎಂಬುದನ್ನು ಈ ಹೊಸ ಹಾಡು ವಿವರಿಸುತ್ತದೆ.

‘ಅಗ್ನಿಸಾಕ್ಷಿ’ ಧಾರಾವಾಹಿಯ ಶೀರ್ಷಿಕೆ ಗೀತೆ:

‘ಮಾಯದ ಗಾಯವ ಮಾಡಿರೋ ಒಲವೇ…’ ಎಂಬ ಸಾಲುಗಳಿಂದ ಆರಂಭವಾಗುವ ಈ ಸುಮಧುರ ಗೀತೆಯಲ್ಲಿ ಸುನಾದ್ ಗೌತಮ್, ವಿಕಾಸ್ ನೇಗಿಲೋಣಿ, ರಜತ್ ಹೆಗಡೆ ಅವರ ಕಾಂಬಿನೇಷನ್ ಇದೆ. ಸುನಾದ್ ಗೌತಮ್ ಅವರು ಸಂಗೀತ ಸಂಯೋಜಿಸಿದ್ದು, ‘ಕನ್ನಡತಿ’ ಧಾರಾವಾಹಿಗೆ ಕಥೆ-ಸಂಭಾಷಣೆ ಬರೆದಿದ್ದ ವಿಕಾಸ್ ನೇಗಿಲೋಣಿ ಅವರು ಸಾಹಿತ್ಯ ರಚಿಸಿದ್ದಾರೆ. ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿ, ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡ ರಜತ್ ಹೆಗಡೆ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ

ಭಾವನೆಗಳ ತೀವ್ರತೆ ಮತ್ತು ಕಥೆಯ ಆಳವನ್ನು ಹಿಡಿದಿಡುವ ಈ ಶೀರ್ಷಿಕೆ ಗೀತೆಯು ‘ಕಲರ್ಸ್ ಕನ್ನಡ’ ವಾಹಿನಿಯ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರನ್ನು ಸೆಳೆದುಕೊಂಡಿದೆ. ಹ್ಯಾರಿಸ್ ನಿರ್ಮಾಣದ, ಪ್ರಶಾಂತ್ ಡಿ.ಪಿ. ನಿರ್ದೇಶನದ ಈ ಮೆಗಾ ಫಿಕ್ಷನ್ ಶೋನಲ್ಲಿ ಶಮಂತ್ ಬ್ರೋ ಗೌಡ (ಅಗ್ನಿ) ಮತ್ತು ಪ್ರತಿಭಾವಂತ ನಟಿ ವರ್ಷಿಣಿ ಗೌಡ (ಸಾಕ್ಷಿ) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ – Kannada News | Iran President invites PM Modi for Ayatollah Ali Khamenei funeral on July

ಟೆಹ್ರಾನ್, ಜೂನ್ 24: ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಅತ್ಯುನ್ನತ ಧಾರ್ಮಿಕ ಮತ್ತು ರಾಜಕೀಯ ನಾಯಕರಾದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ನಿಧನದ ಬೆನ್ನಲ್ಲೇ ಭಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮುಂದಿನ ತಿಂಗಳು ಟೆಹ್ರಾನ್‌ನಲ್ಲಿ ನಡೆಯಲಿರುವ ಅಲಿ ಖಮೇನಿ ಅವರ ಸನ್ಮಾನಪೂರ್ವಕ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಇರಾನ್ ಮತ್ತು ಭಾರತದ ನಡುವಿನ ಐತಿಹಾಸಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಅವರು ಪ್ರಧಾನಿ ಮೋದಿಗೆ ಈ ವಿಶೇಷ ಆಹ್ವಾನವನ್ನು ಕಳುಹಿಸಿದ್ದಾರೆ. ಚಾಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯತಂತ್ರದ ಪಾಲುದಾರಿಕೆಗಳನ್ನು ಹೊಂದಿರುವ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ

ಅಯತೊಲ್ಲಾ ಅಲಿ ಖಮೇನಿ ಅವರು 1989ರಿಂದ ಇರಾನ್‌ನ ಅತ್ಯುನ್ನತ ನಾಯಕರಾಗಿ ಸರ್ವಾಧಿಕಾರ ನಡೆಸುತ್ತಿದ್ದರು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಇರಾನ್ ಹೊಂದಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಖಮೇನಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವುದರಿಂದ ವಿಶ್ವದ ಹಲವು ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇರಾನ್ ಅಧ್ಯಕ್ಷರಿಂದ ಅಧಿಕೃತ ಆಹ್ವಾನ ಬಂದಿದ್ದರೂ, ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಇನ್ನು ಯಾವುದೇ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಪ್ರಸ್ತುತ ದೇಶದಲ್ಲಿ ಸಚಿವ ಸಂಪುಟ ಪುನಾರಚನೆಯ ಸಾಧ್ಯತೆಗಳು ಮತ್ತು ದೇಶೀಯ ರಾಜಕೀಯದ ನಡುವೆ ಪ್ರಧಾನಿ ಮೋದಿ ಅವರ ಈ ಇರಾನ್ ಪ್ರವಾಸದ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದಿನ ತಿಂಗಳು ನಡೆಯಲಿರುವ ಈ ಅಂತ್ಯಕ್ರಿಯೆಗೆ ಭಾರತದ ಪರವಾಗಿ ಪ್ರಧಾನಿಯವರೇ ಹೋಗಲಿದ್ದಾರೆಯೇ ಅಥವಾ ಹಿರಿಯ ಸಚಿವರ ನಿಯೋಗವನ್ನು ಕಳುಹಿಸಲಾಗುತ್ತದೆಯೇ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಜುಲೈ 4ರಂದು ಟೆಹ್ರಾನ್‌ನ ಗ್ರಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಖಮೇನಿ ಅವರ ಪಾರ್ಥಿವ ಶರೀರವನ್ನು ಇಡಲಾಗುವುದು. ಅಂದಿನಿಂದಲೇ ಸರ್ಕಾರಿ ಅಂತ್ಯಕ್ರಿಯೆ ಆರಂಭವಾಗಲಿದೆ. ಟೆಹ್ರಾನ್ ಮತ್ತು ಕೋಮ್ ನಗರಗಳಲ್ಲಿ ಬೃಹತ್ ಸಾರ್ವಜನಿಕ ಮೆರವಣಿಗೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ವಿಶೇಷ ಪ್ರಾರ್ಥನೆಗಳು ನಡೆಯಲಿವೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ

ಜುಲೈ 9ರಂದು ಖಮೇನಿ ಅವರ ರಸದಾದ ಮಶಾದ್‌ನಲ್ಲಿರುವ ಪ್ರಸಿದ್ಧ ‘ಇಮಾಮ್ ರೆಜಾ’ ದರ್ಗಾದಲ್ಲಿ ಅಂತಿಮ ದಫನ ಪ್ರಕ್ರಿಯೆ ನೆರವೇರಲಿದೆ. ಕಳೆದ 4 ದಶಕಗಳ ಕಾಲ ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಿದ್ದ ಧೀಮಂತ ನಾಯಕನಿಗೆ ವಿದಾಯ ಹೇಳಲು ಕೋಟ್ಯಂತರ ಜನರು ಈ ಸಂದರ್ಭದಲ್ಲಿ ಸೇರುವ ನಿರೀಕ್ಷೆಯಿದೆ.

ಫೆಬ್ರವರಿಯಲ್ಲಿ ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನರಾದ ತಕ್ಷಣ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಭಾರತ ಸರ್ಕಾರದ ಪರವಾಗಿ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ್ದರು. ಭಾರತವು ಇರಾನ್‌ನೊಂದಿಗೆ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕವಾಗಿ ಸುದೀರ್ಘ ಹಾಗೂ ನಿಕಟ ಸಂಬಂಧವನ್ನು ಹೊಂದಿದೆ. ಪಶ್ಚಿಮ ಏಷ್ಯಾದಲ್ಲಿ 40 ದಿನಗಳ ಕಾಲ ನಡೆದ ಸಂಘರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಇರಾನ್ ಈ ಅಂತ್ಯಕ್ರಿಯೆಗೆ ಜಾಗತಿಕ ಮಟ್ಟದ ಹಲವು ದೇಶಗಳಿಗೆ ಆಹ್ವಾನ ನೀಡಿದ್ದು, ಈಗಾಗಲೇ ಇರಾಕ್, ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ, ಲೆಬನಾನ್, ರಷ್ಯಾ, ಚೀನಾ ಮತ್ತು ಮಧ್ಯ ಏಷ್ಯಾದ ಹಲವು ದೇಶಗಳ ಹಿರಿಯ ನಿಯೋಗಗಳು ಇದರಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

15 ವರ್ಷ, 6 ಟ್ರೋಫಿ; ಟ್ರೋಲಿಗರಿಗೆ ಆಹಾರವಾದ ಸಂಜೀವ್ ಗೋಯೆಂಕಾ – Kannada News | Rishabh Pant’s LSG Exit: Owner Goenka’s U Turn Sparks IPL 2025 Controversy and Trolling

2025 ರ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ವೇತನದೊಂದಿಗೆ ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಿಷಭ್​ ಪಂತ್​ ಇದೀಗ ಕೇವಲ ಎರಡೇ ವರ್ಷಕ್ಕೆ ತಂಡದಿಂದ ಹೊರಬಿದ್ದಿದ್ದಾರೆ. ಪಂತ್ ನಾಯಕತ್ವದಲ್ಲಿ ಲಕ್ನೋ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಎರಡೂ ಆವೃತ್ತಿಗಳಲ್ಲಿ ಪಂತ್ ನಾಯಕನಾಗಿ ಮತ್ತು ಆಟಗಾರನಾಗಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಖಚಿತವಾಗಿತ್ತು. ಆದರೆ ಅವರನ್ನು ತಂಡದಿಂದಲೇ ಹೊರಹಾಕಲಾಗುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಿರಲಿಲ್ಲ. ಇದಕ್ಕೆ ಕಾರಣ 2025 ರ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ದಾಖಲೆಯ ಬೆಲೆಗೆ ಖರೀದಿಸಿದ ಬಳಿಕ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಆಡಿದ ಮಾತುಗಳು.

2025 ರ ಮೆಗಾ ಹರಾಜಿನ ಬಳಿಕ ನಿರೂಪಕ ಜತಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದ ಸಂಜೀವ್ ಗೋಯೆಂಕಾ, ಪಂತ್ ಅವರನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಾದ ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಸಿದ್ದರು. ಆ ವೇಳೆ ಪಂತ್​ನ ಹಾಡಿ ಹೊಗಳಿದ್ದ ಸಂಜೀವ್, ‘ನನ್ನ ಪ್ರಕಾರ ಪಂತ್ ಕನಿಷ್ಠ 12-14 ವರ್ಷಗಳ ಕಾಲ ಲಕ್ನೋ ಪರ ಆಡುತ್ತಾರೆ. ಆದ್ದರಿಂದ, ಇದು 15 ವರ್ಷಗಳಲ್ಲಿ ನಾಲ್ಕು, ಐದು ಅಥವಾ ಆರು ಐಪಿಎಲ್ ಟ್ರೋಫಿಗಳನ್ನು ಹೇಗೆ ಗೆಲ್ಲುವುದು ಎಂಬುದರ ಪ್ರಯಾಣವಾಗಿದೆ.

ಪ್ರಸ್ತುತ ಜನರು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಅತ್ಯಂತ ಯಶಸ್ವಿ ತಂಡಗಳೆಂದು ಕರೆಯುತ್ತಾರೆ. ಹಾಗೆಯೇ ಮಹಿ ಮತ್ತು ರೋಹಿತ್ ಅತ್ಯುತ್ತಮ ನಾಯಕರು ಎನ್ನುತ್ತಿದ್ದಾರೆ. ಹೌದು ಧೋನಿ ಮತ್ತು ರೋಹಿತ್ ಉತ್ತಮ ನಾಯಕರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನೀವು ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಮುಂದಿನ 10 ವರ್ಷಗಳ ನಂತರ, ಇದೇ ಜನರು ಅತ್ಯಂತ ಯಶಸ್ವಿ ನಾಯಕರ ಬಗ್ಗೆ ಮಾತನಾಡುವಾಗ ಮಹಿ, ರೋಹಿತ್ ಜೊತೆಗೆ ರಿಷಭ್ ಪಂತ್ ಅವರ ಹೆಸರನ್ನು ಸೇರಿಸುತ್ತಾರೆ ಎಂದಿದ್ದರು. ಆದರೆ ಪಂತ್ ಬಗ್ಗೆ ಈ ರೀತಿಯ ಹೊಗಳಿಕೆಯ ಮಾತುಗಳನ್ನಾಡಿದ್ದ ಸಂಜೀವ್ ಗೋಯೆಂಕಾ ಕೇವಲ ಎರಡೇ ವರ್ಷಕ್ಕೆ ಪಂತ್ ಅವರನ್ನು ತಂಡಕ್ಕೆ ಹೊರಹಾಕಿರುವುದು ಈಗ ಟ್ರೋಲಿಗರಿಗೆ ಆಹಾರವಾದ್ದಂತ್ತಾಗಿದೆ. ಹೀಗಾಗಿ ನೆಟ್ಟಿಗರು ವಿವಿದ ರೀತಿಯಲ್ಲಿ ಲಕ್ನೋ ಮಾಲೀಕರ ಕಾಲೆಳೆಯುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ? – Kannada News | Indian stock market recovers from yesterday’s fall, know reasons for this fall and rise

ನವದೆಹಲಿ, ಜೂನ್ 24: ನಿನ್ನೆ ಸಖತ್ ಹಿನ್ನಡೆ ಕಂಡಿದ್ದ ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಬುಧವಾರ ರಿಬೌಂಡ್ ಆಗಿದೆ. ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಉತ್ತಮವಾಗಿ ಚೇತರಿಸಿಕೊಂಡಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಶೇ. 1.04ರಷ್ಟು (790.54 ಅಂಕ) ಹೆಚ್ಚಳಗೊಂಡು 76,991 ಮಟ್ಟ ಮುಟ್ಟಿದೆ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ-50 ಸೂಚ್ಯಂಕವು 197.55 ಅಂಕಗಳಷ್ಟು ಚೇತರಿಸಿ, 24,021.65 ಮಟ್ಟ ದಾಟಿದೆ. ನಿನ್ನೆ ಮಂಗಳವಾರ ಸೆನ್ಸೆಕ್ಸ್ 892, ಮತ್ತು ನಿಫ್ಟಿ ಸೂಚ್ಯಂಕ 278 ಅಂಕಗಳನ್ನು ಕಳೆದುಕೊಂಡಿದ್ದುವು. ಇವತ್ತು ತಕ್ಕಮಟ್ಟಿಗೆ ಚೇತರಿಸಿಕೊಂಡಿವೆ.

ಇಂದು ಮಾರುಕಟ್ಟೆ ಮೇಲಕ್ಕೆ ಹೋಗಲು ಪ್ರಮುಖ ಕಾರಣಗಳು

  • ಐಟಿ ಷೇರುಗಳಲ್ಲಿ ಭರ್ಜರಿ ಖರೀದಿ: ಐಟಿ (IT) ವಲಯದ ಷೇರುಗಳು ಇಂದಿನ ಮಾರುಕಟ್ಟೆಯ ಏರಿಕೆಗೆ ಪ್ರಮುಖ ಇಂಧನವಾಗಿ ಕೆಲಸ ಮಾಡಿವೆ. ವಿಶೇಷವಾಗಿ ವಿಪ್ರೋ (Wipro) ಸಂಸ್ಥೆಯು ಅಮೆರಿಕ ಮೂಲದ ‘ಸರ್ವಿಸ್‌ನೌ’ (ServiceNow) ಕಂಪನಿಯೊಂದಿಗೆ ಜಂಟಿಯಾಗಿ ‘ಏಜೆಂಟಿಕ್ AI’ (Agentic AI) ತಂತ್ರಜ್ಞಾನವನ್ನು ವಿಸ್ತರಿಸಲು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಅದರ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಏರಿಕೆ ಕಂಡವು. ಇದು ಇಡೀ ಐಟಿ ಇಂಡೆಕ್ಸ್ ಅನ್ನು ಶೇಕಡಾ 2.3 ರಷ್ಟು ಮೇಲಕ್ಕೆತ್ತಿತು.
  • ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ (Crude Oil Drop) ಶೇ. 1.12 ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 92.66 ಡಾಲರ್‌ಗೆ ತಲುಪಿದೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಇಳಿಕೆಯಾದರೆ ದೇಶದ ಆಮದು ವೆಚ್ಚ ಮತ್ತು ಹಣದುಬ್ಬರ (Inflation) ನಿಯಂತ್ರಣಕ್ಕೆ ಬರುತ್ತದೆ. ಇದು ಮಾರುಕಟ್ಟೆಗೆ ಸಕಾರಾತ್ಮಕ ಅಂಶವಾಗಿದೆ.
  • ಮಧ್ಯಪ್ರಾಚ್ಯದಲ್ಲಿ ಶಾಂತಿ ಸೂಚನೆ: ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯದಲ್ಲಿ (Middle East) ಕದನ ವಿರಾಮವನ್ನು ಮತ್ತೊಂದು 60 ದಿನಗಳ ಕಾಲ ವಿಸ್ತರಿಸಲು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲು ಒಪ್ಪಂದ ಏರ್ಪಟ್ಟಿದೆ ಎಂಬ ವರದಿಗಳು ಬಂದಿವೆ. ಈ ಭೌಗೋಳಿಕ ರಾಜಕೀಯ (Geopolitical) ಉದ್ವಿಗ್ನತೆ ಕಡಿಮೆಯಾಗಿರುವುದು ಜಾಗತಿಕ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
  • ಸಕಾರಾತ್ಮಕ ಜಾಗತಿಕ ಮಾರುಕಟ್ಟೆ: ಅಮೆರಿಕದ ಮಾರುಕಟ್ಟೆಗಳು ಹಿಂದಿನ ದಿನ ಲಾಭದೊಂದಿಗೆ ಮುಕ್ತಾಯಗೊಂಡಿದ್ದವು. ಇದರ ಬೆನ್ನಲ್ಲೇ ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಜಪಾನ್‌ನ ನಿಕಿ (Nikkei), ದಕ್ಷಿಣ ಕೊರಿಯಾದ ಕಾಸ್ಪಿ (Kospi) ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಕೂಡ ಏರಿಕೆ ಹಾದಿಯಲ್ಲಿ ವಹಿವಾಟು ನಡೆಸುತ್ತಿರುವುದು ಭಾರತೀಯ ಮಾರುಕಟ್ಟೆಗೆ ಬಲ (Positive Global Cues) ನೀಡಿದೆ.
  • ರೂಪಾಯಿ ಮೌಲ್ಯ ವೃದ್ಧಿ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 5 ಪೈಸೆ ಚೇತರಿಸಿಕೊಂಡು 95.53 ಕ್ಕೆ ತಲುಪಿದೆ.
  • ಎಫ್​ಐಐಗಳಿಂದ ಷೇರು ಖರೀದಿ ಏರಿಕೆ: ಭಾರತದ ಷೇರು ಮಾರುಕಟ್ಟೆ ಕಂಬ್ಯಾಕ್ ಮಾಡಲು ಎಫ್​ಐಐಗಳ ಸಣ್ಣ ಕೊಡುಗೆಯೂ ಇದೆ. ಬುಧವಾರ ಎಫ್​ಐಐಗಳು ಷೇರು ಮಾರಾಟ ಮಾಡಿದ್ದಕ್ಕಿಂತ ಖರೀದಿ ಮಾಡಿದ್ದು ಸ್ವಲ್ಪ ಹೆಚ್ಚಿದೆ.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್​​ಸೆಟ್ ಕ್ಲಾಸ್?

ಜೂನ್ 23ರಂದು ಮಾರುಕಟ್ಟೆ ಕುಸಿಯಲು ಕಾರಣವೇನು?

  • ಕರಡಿಗಳ ಹಿಡಿತ: ಮಾರುಕಟ್ಟೆಯಲ್ಲಿ ‘ಹ್ಯಾಮರ್’ (Hammer pattern) ಮಾದರಿಯ ಚಾರ್ಟ್ ಪ್ರವೃತ್ತಿ ಕಂಡುಬಂದಿದ್ದು, ಮಾರುಕಟ್ಟೆಯ ಮೇಲಿನ ಮಟ್ಟದಲ್ಲಿ ಮಾರಾಟದ ಒತ್ತಡ (Bearish Dominance) ಹೆಚ್ಚಾಗಿತ್ತು.
  • ಪ್ರಾಫಿಟ್ ಬುಕಿಂಗ್: ಹೂಡಿಕೆದಾರರು ಹೆಚ್ಚಿನ ಲಾಭ ಗಳಿಕೆಗೆ (Profit Booking) ಮುಂದಾಗಿದ್ದು ಮತ್ತು ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾಗುವ ಮುನ್ನ ಇದ್ದ ಆತಂಕಗಳು ನಿನ್ನೆ ಮಾರುಕಟ್ಟೆಯನ್ನು ಕೆಳಕ್ಕೆ ತಳ್ಳಿದ್ದವು.

ಇದನ್ನೂ ಓದಿ: ಡೆಲಿವರಿ ಬಾಯ್ ಆಗಿದ್ದವ ಇವತ್ತು ವಾಟ್ಸಾಪ್ ಬಾಸ್; ಕುಟುಂಬ ದಿವಾಳಿ ಎದ್ದರೂ ಜಗ್ಗದೆ ಗೆಲ್ಲಲು ಹೊರಟ ಸ್ಟ್ರೀಟ್​ಸ್ಮಾರ್ಟ್ ಹುಡುಗ ಕುನಾಲ್ ಶಾ

ಪ್ರಸ್ತುತ ನಿಫ್ಟಿ 24,000 ಶ್ರೇಣಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು, ಐಟಿ ಮತ್ತು ಬ್ಯಾಂಕಿಂಗ್ ವಲಯದ ಬೆಂಬಲದೊಂದಿಗೆ ಮಾರುಕಟ್ಟೆ ಗ್ರೀನ್ ಮಾರ್ಕ್‌ನಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version