ವಿಸ್ಫೋಟಕ ಸೆಂಚುರಿ ಸಿಡಿಸಿದ ನಿಕಿನ್ ಜೋಸ್: ಪಾಂಡೆ ಪಡೆಗೆ ಸೋಲು! – Kannada News | Nikin Jose Smashed Century in Maharaja Trophy 2026

ಮೈಸೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಿಕಿನ್ ಜೋಸ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮನೀಶ್ ಪಾಂಡೆ 34 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 70 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 19.5 ಓವರ್​ಗಳಲ್ಲಿ 177 ರನ್​ ಕಲೆಹಾಕಿತು.

178 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಕೋಸ್ಟಲ್ ಕಿಂಗ್ಸ್ ಮಂಗಳೂರು ಪರ ಆರಂಭಿಕನಾಗಿ ಕಣಕ್ಕಿಳಿದ ನಿಕಿನ್ ಜೋಸ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ನಿಕಿನ್ 47 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 100 ರನ್ ಬಾರಿಸಿದರು.

ಮತ್ತೊಂದೆಡೆ ನಿಕಿನ್​​ಗೆ ಉತ್ತಮ ಸಾಥ್ ನೀಡಿದ ನಾಯಕ ಕರುಣ್ ನಾಯರ್ 36 ಎಸೆತಗಳಲ್ಲಿ 56 ರನ್ ಬಾರಿಸಿದರು. ಈ ಮೂಲಕ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡವು 16.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 181 ರನ್​ ಕಲೆಹಾಕಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇಯಿಂಗ್ 11:  ಲೋಚನ್ ಗೌಡ (ವಿಕೆಟ್ ಕೀಪರ್ ) ಶರತ್ ಬಿಆರ್ , ಪ್ರಖರ್ ಚತುರ್ವೇದಿ , ಆರವ್ ಮಹೇಶ್ , ಮ್ಯಾಕ್ನೀಲ್ ನೊರೊನ್ಹಾ , ಮನೀಶ್ ಪಾಂಡೆ (ನಾಯಕ) , ತಿಪ್ಪಾ ರೆಡ್ಡಿ , ಕ್ರಾಂತಿ ಕುಮಾರ್ , ಧ್ರುವ ಪ್ರಭಾಕರ್ , ಆದಿತ್ಯ ನಾಯರ್ , ರೋನಿತ್ ಮೋರ್.

ಇದನ್ನೂ ಓದಿ: ಬಾಯಿ ಮುಚ್ಚಿಕೊಂಡ ಆಟಗಾರನನ್ನು ಹೊರಹಾಕಿದ ಮ್ಯಾಚ್ ರೆಫರಿ!

ಕೋಸ್ಟಲ್ ಕಿಂಗ್ಸ್ ಮಂಗಳೂರು ಪ್ಲೇಯಿಂಗ್ 11: ಕರುಣ್ ನಾಯರ್ (ನಾಯಕ) , ನಿಕಿನ್ ಜೋಸ್ , ಸೂರಜ್ ಅಹುಜಾ (ವಿಕೆಟ್ ಕೀಪರ್ ) ಕೋದಂಡ ಅಜಿತ್ ಕಾರ್ತಿಕ್ , ಮುರಳೀಧರ ವೆಂಕಟೇಶ್ , ಶ್ರೇಯಸ್ ಗೋಪಾಲ್ , ಸಿದ್ಧಾರ್ಥ್ ಅಖಿಲ್ , ಧೀರಜ್ ಜೆ ಗೌಡ , ವಾಸುಕಿ ಕೌಶಿಕ್ , ಕುಶಾಲ್ ವಾಧ್ವಾನಿ , ಸಂತೋಖ್ ಸಿಂಗ್.

Source link

UPSC Recruitment 2026: ಯುಪಿಎಸ್‌ಸಿಯಿಂದ 538 ಹುದ್ದೆಗಳಿಗೆ ಬೃಹತ್ ಅಧಿಸೂಚನೆ; ಜು.3 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | UPSC Recruitment 2026: 538 Group A and B Gazetted Posts Apply Online by July 3!

ಕೇಂದ್ರ ಲೋಕಸೇವಾ ಆಯೋಗವು (UPSC) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 538 ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಗೆಜೆಟೆಡ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 3 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಲಭ್ಯವಿರುವ ಪ್ರಮುಖ ಹುದ್ದೆಗಳ ವಿವರ:

ಈ ಬೃಹತ್ ನೇಮಕಾತಿ ಅಡಿಯಲ್ಲಿ ವಿವಿಧ ವಿಭಾಗಗಳ ಒಟ್ಟು 12ಕ್ಕೂ ಹೆಚ್ಚು ಮಾದರಿಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾಗಿ ಸಹಾಯಕ ಗ್ರೇಡ್-2 (50 ಹುದ್ದೆಗಳು), ಕಾರ್ಯಾಚರಣೆ ಅಧಿಕಾರಿ ಡಿಜಿಸಿಎ (19 ಹುದ್ದೆಗಳು), ವಾಯು ಸುರಕ್ಷತಾ ಅಧಿಕಾರಿ (15 ಹುದ್ದೆಗಳು), ಸಹಾಯಕ ನಿರ್ದೇಶಕ (15 ಹುದ್ದೆಗಳು), ಖಾಸಗಿ ಕಾರ್ಯದರ್ಶಿ (12 ಹುದ್ದೆಗಳು) ಮತ್ತು ಸಹಾಯಕ ಕಾನೂನು ಸಲಹೆಗಾರ (12 ಹುದ್ದೆಗಳು) ಸೇರಿವೆ. ಇವುಗಳೊಂದಿಗೆ ಜೂನಿಯರ್ ಸೈಂಟಿಫಿಕ್ ಆಫೀಸೆರ್, ಸಹಾಯಕ ರಿಜಿಸ್ಟ್ರಾರ್, ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರು, ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ ಹಾಗೂ ಸಹಾಯಕ ಸಾರ್ವಜನಿಕ ಅಭಿಯೋಜಕ ಹುದ್ದೆಗಳೂ ಇವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ನಿರ್ದಿಷ್ಟ ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹುದ್ದೆಗಳಿಗೆ ತಕ್ಕಂತೆ ಪದವಿ, ಬಿಇ/ಬಿಟೆಕ್, ಸ್ನಾತಕೋತ್ತರ ಪದವಿ (PG), ಪಿಜಿ ಡಿಪ್ಲೊಮಾ, ಪಿಎಚ್‌ಡಿ ಅಥವಾ ಎಲ್‌ಎಲ್‌ಬಿ ಮುಂತಾದ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಕೆಲವು ವಿಶೇಷ ಹುದ್ದೆಗಳಿಗೆ ಆಯಾ ಕ್ಷೇತ್ರದಲ್ಲಿ ಕೆಲಸದ ಅನುಭವವೂ ಕಡ್ಡಾಯವಾಗಿರುತ್ತದೆ. ಇನ್ನು ವಯೋಮಿತಿಯ ವಿಷಯಕ್ಕೆ ಬಂದರೆ, ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಅಭ್ಯರ್ಥಿಗಳ ವಯಸ್ಸು 30 ರಿಂದ 50 ವರ್ಷಗಳ ನಡುವೆ ಇರಬೇಕು.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಶುಲ್ಕದ ವಿವರಗಳು:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಪುರುಷ ಅಭ್ಯರ್ಥಿಗಳಿಗೆ ಅತ್ಯಂತ ಕನಿಷ್ಠ ಅಂದರೆ ಕೇವಲ ರೂ. 25 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ ಸಾಮಾಜಿಕ ನ್ಯಾಯ ಮತ್ತು ಉತ್ತೇಜನದ ದೃಷ್ಟಿಯಿಂದ ಎಸ್‌ಸಿ, ಎಸ್‌ಟಿ, ದಿವ್ಯಾಂಗ ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಈ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು, ಇವರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಆಕರ್ಷಕ ವೇತನ ಶ್ರೇಣಿ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲ ಹಂತವಾಗಿ ಅವರ ಪ್ರೊಫೈಲ್ ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ನೇಮಕಾತಿ ಪರೀಕ್ಷೆಯನ್ನು ನಡೆಸಿ, ಅದರಲ್ಲಿ ತೇರ್ಗಡೆಯಾದವರನ್ನು ಅಂತಿಮ ಸುತ್ತಿನ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂಪೂರ್ಣ ಅರ್ಹತೆಯ (ಮೆರಿಟ್) ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಈ ಪ್ರಕ್ರಿಯೆಯ ಮೂಲಕ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ ರೂ. 44,900 ರಿಂದ ಗರಿಷ್ಠ ರೂ. 2,18,200 ರವರೆಗೆ ಅತ್ಯಂತ ಆಕರ್ಷಕ ವೇತನವನ್ನು ನೀಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:41 pm, Tue, 23 June 26

Source link

ತಾಯಿ ಆಗಲಿರುವ ಸಮಂತಾರನ್ನು ಮನೆಗೆ ಕರೆದು ಸತ್ಕರಿಸಿದ ಚಿರಂಜೀವಿ ದಂಪತಿ – Kannada News | Chiranjeevi and his wife felicitate Samantha Ruth Prabhu

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಈ ಫ್ಯಾಮಿಲಿ ಆಕ್ಷನ್ ಡ್ರಾಮಾ ಹಿಟ್ ಎನಿಸಿಕೊಂಡಿದೆ. ಕುಟುಂಬಗಳು ವಿಶೇಷವಾಗಿ ಮಹಿಳೆಯರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರು ಮಾತ್ರವೇ ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅವರಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಸಹ ಒಬ್ಬರು. ಸಿನಿಮಾ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ, ಇಡೀ ಕುಟುಂಬವನ್ನು ಮನೆಗೆ ಆದರಿಸಿ ಸತ್ಕರಿಸಿದ್ದಾರೆ. ಜೊತೆಗೆ ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ತಂಡವನ್ನು ಮನೆಗೆ ಆಹ್ವಾನಿಸಿದ್ದ ಚಿರಂಜೀವಿ, ತಾಯಿ ಆಗುತ್ತಿರುವ ಸಮಂತಾ ಅವರಿಗೆ ಸೀರೆ ಇನ್ನಿತರೆ ಪವಿತ್ರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಮಂತಾ ಅವರಿಗೆ ಶಂಖವೊಂದನ್ನು ಸಹ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ನೀಡಿದ್ದಾರೆ. ಚಿತ್ರಗಳನ್ನು ಖುದ್ದು ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾ ಬಹಳ ಆಸಕ್ತಿಕರ ಎನಿಸಿತು. ಕೌಟುಂಬಿಕೆ ಕತೆಯನ್ನು ಆಕ್ಷನ್, ಭಾವನೆಗಳು, ಸ್ತ್ರೀಪರ ನಿಲುವುಗಳನ್ನು ಹಾಸ್ಯದ ಲೇಪನದೊಂದಿಗೆ ನಿರ್ದೇಶಕಿ ನಂದಿನಿ ರೆಡ್ಡಿ ಅವರು ತೆರೆಗೆ ತಂದಿದ್ದಾರೆ. ಸಮಂತಾ ನಟನೆ ಚೆನ್ನಾಗಿದೆ, ಮುಖ್ಯವಾಗಿ ಅವರು ಸೀರೆಯುಟ್ಟು ಮಾಡುವ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಈ ರೀತಿಯ ವೈವಿಧ್ಯಮಯ ಸ್ತ್ರೀ ಪ್ರಧಾನ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಅವಶ್ಯಕ. ಈ ಸಿನಿಮಾದ ಗೆಲುವಿಗೆ ಸಮಂತಾ, ನಂದಿನಿ, ರಾಜ್ ಇನ್ನೂ ಕೆಲ ಪ್ರಮುಖರಿಗೆ ಅಭಿನಂದನೆಗಳು. ಹಾಗೆಯೇ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾಲಿರಿಸುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗಳಿಗೆ ಅಭಿನಂದನೆಗಳು’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:3 ದಿನಕ್ಕೆ ಸಮಂತಾ ಚಿತ್ರದ ಕಲೆಕ್ಷನ್ 43 ಕೋಟಿ ರೂ.!

ಚಿತ್ರರಂಗದ ಹಿರಿಯರಾಗಿ, ಚಿರಂಜೀವಿ ಅವರ ಈ ಪ್ರೀತಿ ಪೂರ್ವಕ ನಡೆಯನ್ನು ಅಭಿಮಾನಿಗಳು ಪ್ರಶಂಸಿಸಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಚಿರಂಜೀವಿ ಬೆಂಬಲಿಸುತ್ತಿರುವ ರೀತಿಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಯಾವುದೇ ಒಳ್ಳೆಯ ಸಿನಿಮಾಗಳು ಬಂದಾಗಲೂ ಸಹ ಚಿರಂಜೀವಿ ಅವರು ಖುದ್ದು ಆ ಸಿನಿಮಾ ನೋಡಿ, ತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವ ಪದ್ಧತಿ ಇರಿಸಿಕೊಂಡಿದ್ದಾರೆ. ವಿಶೇಷವಾಗಿ ಸಣ್ಣ ಸಿನಿಮಾಗಳಿಗೆ ಚಿರಂಜೀವಿ ಈ ರೀತಿಯ ಬೆಂಬಲ ನೀಡುತ್ತಾ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರಲ್ಲೂ ಅಧಿಕಾರಿಗಳ ಜೊತೆ ಮೀಟಿಂಗ್​​: ವಿಡಿಯೋ ಕಾನ್ಫರೆನ್ಸ್​​ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಕೃಷ್ಣಭೈರೇಗೌಡ – Kannada News | Bengaluru Development Minister Krishna Byre Gowda Holds High Level Virtual Meeting with Officials While Commuting in Car

ವಿಡಿಯೋ ಕಾನ್ಫರೆನ್ಸ್​​ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡImage Credit source: Krishna Byre Gowda X Account

ಬೆಂಗಳೂರು, ಜೂನ್​​ 23: ಕೃಷ್ಣ ಭೈರೇಗೌಡರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯ ಕಾರ್ಯಗಳಿಗೆ ಚುರುಕು ಮುಟ್ಟಿಸಿದ್ದು, ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಜಿಬಿಎ, ಬಿಎಂಆರ್​​ಸಿಎಲ್​​ ಮತ್ತು ಬಿ-ಸ್ಮೈಲ್ ಸಭೆಗಳಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರ ಭಾರಿ ಸುದ್ದಿಯಾಗಿತ್ತು. ಈ ನಡುವೆ ಸಮಯ ಉಳಿತಾಯ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವಿನಿಂದ ಕಾರಿನಲ್ಲಿ ಸಂಚಾರದ ಸಮಯದಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಯಾರೆಲ್ಲ ಭಾಗಿ?

ಆಡಳಿತಾತ್ಮಕ ಕಾರ್ಯಗಳ ಕುರಿತು ಪ್ರಯಾಣದ ವೇಳೆಯೇ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕೃಷ್ಣ ಭೈರೇಗೌಡರು ಮೀಟಿಂಗ್​​ ನಡೆಸಿದ್ದು, ತಂತ್ರಜ್ಞಾನ ಬಳಸಿ ಆಡಳಿತಕ್ಕೆ ವೇಗ ನೀಡುವ ಸಂದೇಶ ನೀಡಿದ್ದಾರೆ. ಸಚಿವರು ನಡೆಸಿರುವ ಈ ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್​​ಗಳು ಭಾಗಿಯಾಗಿದ್ದರು.

ಇದನ್ನೂ ಓದಿ:

ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(ಬಿ-ಸ್ಮೈಲ್) ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ್ದ ಸಚಿವ ಕೃಷ್ಣ ಭೈರೇಗೌಡರು, ಕೆಲಸ ಕಾರ್ಯಗಳ ವಿಚಾರವಾಗಿ ಗರಂ ಆಗಿದ್ದರು. ಎಲಿವೇಟೆಡ್ ಕಾರಿಡಾರ್ ಆಗುತ್ತೆ, ಫ್ಲೈಓವರ್ ಬರುತ್ತೆ ಅಂತಾ ಗೊತ್ತಿದ್ದರೂ ವೈಟ್ ಟ್ಯಾಪಿಂಗ್ ಮಾಡೋದೇಕೆ, ಆಮೇಲೆ ಫ್ಲೈಓವರ್ ಕಾರಣಕ್ಕೆ ಮತ್ತೆ ವೈಟ್ ಟ್ಯಾಪಿಂಗ್ ಕಿತ್ತಾಕೋದು ಯಾರಿಗೆ ಬಿಲ್ ಮಾಡೋಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ಪಡೆದಿದ್ದರು. ಬೆಂಗಳೂರಿನಲ್ಲಿ ಕಾಮಗಾರಿಗಳಿಂದ ವಾಹನ ಸಂಚಾರ ಅಸ್ತವ್ಯಸ್ತ ಹಿನ್ನೆಲೆ ಟ್ರಾಫಿಕ್‌ಜಾಮ್‌ ಆಗದಂತೆ ಕಾಮಗಾರಿಗಳನ್ನು ನಡೆಸಲು ಸೂಚನೆ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:37 pm, Tue, 23 June 26

Source link

11 ವರ್ಷ ಮಕ್ಕಳಿಲ್ಲದ ದಂಪತಿಗೆ ನಕಲಿ ದಾಖಲೆ ಸೃಷ್ಟಿಸಿ ಮಗು ಮಾರಿದ್ದ ಖ್ಯಾತ ವೈದ್ಯ ಅರೆಸ್ಟ್! – Kannada News | Udupi Baby Trafficking Case: Reputed Doctor Arrested for Illegal Adoption Setup

ಉಡುಪಿ, ಜೂನ್ 23: ಜಿಲ್ಲೆಯಲ್ಲಿ ದಂಪತಿಗೆ ಕಾನೂನುಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ದತ್ತು ನೀಡಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಈ ದಂಧೆಗೆ ಸಂಬಂಧಿಸಿದಂತೆ ಉಡುಪಿಯ ಪ್ರಸಿದ್ಧ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಮುಖ್ಯಾಂಶಗಳು

  • ಉಡುಪಿಯಲ್ಲಿ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
  • ನಕಲಿ ದಾಖಲೆ ಸೃಷ್ಟಿಸಿ ಮಗು ನೀಡಿದ್ದ ಪ್ರಸಿದ್ಧ ವೈದ್ಯನನ್ನು ಬಂಧಿಸಲಾಗಿದೆ.
  • ಮಗುವನ್ನು ಹೆತ್ತು ಮಾರಾಟ ಮಾಡಿದ್ದ ಕಾರ್ಕಳದ ಪೋಷಕರನ್ನೂ ದಸ್ತಗಿರಿ ಮಾಡಲಾಗಿದೆ.

ಮಕ್ಕಳ ರಕ್ಷಣಾ ಘಟಕದ ದಾಳಿ ವೇಳೆ ಸಿಕ್ಕಿಬಿದ್ದ ದಂಪತಿ

ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಸಂತೆಕಟ್ಟೆಯ ನೇಜಾರು ನಿವಾಸದ ದಂಪತಿ ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಒಂದು ತಿಂಗಳ ಹೆಣ್ಣು ಮಗುವನ್ನು ದತ್ತು ತಂದು ಸಾಕುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಜೂನ್ 19 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಡಿಪಿಒ ಅಧಿಕಾರಿಗಳ ಜಂಟಿ ತಂಡ ಸಂತೆಕಟ್ಟೆಯ ಸುಬ್ರಹ್ಮಣ್ಯ ನಗರದಲ್ಲಿರುವ ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಯ ಮನೆಗೆ ದಾಳಿ ನಡೆಸಿತು. ಈ ವೇಳೆ ಮನೆಯಲ್ಲಿ ದಂಪತಿ, ಮಗು ಮತ್ತು ಪೂರ್ಣಿಮಾ ಸಹೋದರಿ ಲಕ್ಷ್ಮಿ ಇದ್ದರು. ಅಧಿಕಾರಿಗಳು ಮಗುವಿನ ದಾಖಲೆಗಳ ಬಗ್ಗೆ ವಿಚಾರಿಸಿದಾಗ ದಂಪತಿಗಳು ಗೊಂದಲದ ಹೇಳಿಕೆಗಳನ್ನು ನೀಡಲಾರಂಭಿಸಿದರು. ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.

ಹೆಣ್ಣು ಮಗುವಿನ ಮಾರಾಟಕ್ಕೆ ವೈದ್ಯನ ಸಾಥ್!

ವಿಚಾರಣೆಯ ವೇಳೆ ತಿಳಿದುಬಂದ ಆಘಾತಕಾರಿ ಅಂಶವೆಂದರೆ, ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಗೆ ಮದುವೆಯಾಗಿ 11 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಅವರು ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಸಂತಾನಹೀನತೆ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ, ಆಸ್ಪತ್ರೆಯ ವೈದ್ಯ ಡಾ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವೊಂದನ್ನು ಕೊಡಿಸುವಂತೆ ವಿನಂತಿಸಿದ್ದರು.

ಇದಕ್ಕೆ ಒಪ್ಪಿದ ಡಾ. ಕಾಮತ್, ಸುಮಾರು ಒಂದು ತಿಂಗಳ ಹಿಂದೆ ಈ ದಂಪತಿಗೆ ಹೆಣ್ಣು ಮಗುವನ್ನು ಹಸ್ತಾಂತರಿಸಿದ್ದರು. ಅಷ್ಟೇ ಅಲ್ಲದೆ, ಪ್ರಕಾಶ್ ಮತ್ತು ಪೂರ್ಣಿಮಾ ಅವರೇ ಆ ಮಗುವಿನ ನಿಜವಾದ ಪೋಷಕರು ಎಂದು ಬಿಂಬಿಸುವ ನಕಲಿ ಜನನ ಪ್ರಮಾಣ ಪತ್ರವನ್ನು ಸೃಷ್ಟಿಸಿಕೊಟ್ಟಿದ್ದರು. ಮಗುವಿನ ಹೆತ್ತ ತಂದೆ-ತಾಯಿ ಯಾರು ಎಂಬುದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಂಪತಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ: ಹುಡುಗನ ಜೊತೆಗೆ ಹುಡುಗ ಡೇಟಿಂಗ್​​​​​​​​​​​​ ಮಾಡಲು ಕರೆಸಿ ಕಿಡ್ನಾಪ್

ದಾಖಲೆಗಳನ್ನು ನಕಲು ಮಾಡಿ, ಕಾನೂನುಬಾಹಿರವಾಗಿ ಹಣದ ದುರಾಸೆಗೆ ಮಗುವನ್ನು ಮಾರಾಟ ಮಾಡಿದ ಆರೋಪದಡಿ ವೈದ್ಯ ಡಾ. ಕಾಮತ್ ಮತ್ತು ಮಗು ಪಡೆದ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಮಗುವನ್ನು ಹೆತ್ತು ಮಾರಾಟ ಮಾಡಿದ್ದ ಕಾರ್ಕಳ ತಾಲೂಕಿನ ನಂದಳಿಕೆ ನಿವಾಸಿಗಳಾದ ಸಂಪತ್ (22) ಮತ್ತು ಸುಪ್ರೀತಿ (22) ಎಂಬ ದಂಪತಿಯನ್ನೂ ವಶಕ್ಕೆ ಪಡೆದಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲನ್ಯಾಯ ಕಾಯ್ದೆಯಡಿ (JJ Act) ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Source link

ಪಠ್ಯಪುಸ್ತಕ ಮುದ್ರಿಸಿ ವಿತರಿಸಿದರೂ ಸಿಗದ ಹಣ: ಅಧಿಕಾರಿಗಳ ಎಡವಟ್ಟಿಗೆ ಮುದ್ರಕರು ಕಂಗಾಲು, ಸಿಎಂಗೆ ದೂರು ನೀಡಲು ಚಿಂತನೆ – Kannada News | Karnataka Textbook Printers Bill Payment Delayed As Education Dept Officials Return Released Funds

ಬೆಂಗಳೂರು, ಜೂನ್ 23: ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುದ್ರಕರು ತೀವ್ರ ಒತ್ತಡದ ನಡುವೆಯೂ ಪಠ್ಯಪುಸ್ತಕಗಳನ್ನು (Text Books) ಮುದ್ರಿಸಿ ಸರಬರಾಜು ಮಾಡಿದ್ದರೂ, ಸರ್ಕಾರ ಮಾತ್ರ ಅವರಿಗೆ ಹಣ ಬಿಡುಗಡೆ ಮಾಡದೆ ಮೀನಮೇಷ ಎಣಿಸುತ್ತಿದೆ. ಆರ್ಥಿಕ ಇಲಾಖೆಯಿಂದ (Finance Department) ಬಿಲ್ ಪಾವತಿಗೆ ಅನುಮೋದನೆ ಸಿಕ್ಕಿದ್ದರೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಹಣ ಕೈಸೇರದೆ ಮುದ್ರಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಪುಸ್ತಕ ಪೂರೈಸಿದರೂ ಮುದ್ರಕರಿಗೆ ಸಿಗದ ಬಿಲ್.
  • ಅಧಿಕಾರಿಗಳ ಬೇಜವಾಬ್ದಾರಿಯಿಂದ ವಾಪಸ್ ಹೋದ ಹಣ.
  • ಬಾಕಿ ಹಣಕ್ಕಾಗಿ ಸಿಎಂಗೆ ದೂರು ನೀಡಲು ನಿರ್ಧಾರ.

ಒತ್ತಡದ ನಡುವೆ ಪುಸ್ತಕ ನೀಡಿದ್ರೂ ಸಿಗದ ಹಣ

ಈ ಬಾರಿ ಪಠ್ಯಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಕರೆಯಲು ಶಿಕ್ಷಣ ಇಲಾಖೆಯು 2-3 ತಿಂಗಳು ತಡ ಮಾಡಿತ್ತು. ಆದಾಗ್ಯೂ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು, ಮುದ್ರಕರು ತೀವ್ರ ಒತ್ತಡದ ನಡುವೆಯೂ ಕೇವಲ 75 ದಿನಗಳಲ್ಲಿ ಪುಸ್ತಕಗಳನ್ನು ಮುದ್ರಿಸಿ ಪಠ್ಯಪುಸ್ತಕ ಸಂಘಕ್ಕೆ ವಿತರಣೆ ಮಾಡಿದ್ದರು. ಆದರೆ, ಸರಬರಾಜು ಮುಗಿದಿದ್ದರೂ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡಿಲ್ಲ. ‘ಮಕ್ಕಳ ಪುಸ್ತಕಕ್ಕೂ ಹಣವಿಲ್ಲವೇ’ ಎಂದು ಮುದ್ರಕರು ಈಗ ಪ್ರಶ್ನಿಸುತ್ತಿದ್ದಾರೆ.

ಹಣ ವಾಪಸ್ ಕಳುಹಿಸಿದ ಅಧಿಕಾರಿಗಳು

ಮುದ್ರಕರ ಆಕ್ರೋಶದ ಹಿನ್ನೆಲೆಯಲ್ಲಿ ಜೂನ್ 4 ರಂದು ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸೂಚನೆ ನೀಡಿತ್ತು. ಹೀಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿ ಬಂದಿದ್ದ ಅನುದಾನವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತೆ ವಾಪಸ್ ಕಳುಹಿಸಿದ್ದಾರೆ. ಹಣ ಬಿಡುಗಡೆಗೆ ಸರ್ಕಾರದ ಸೂಚನೆ ಇದ್ದರೂ ಅಧಿಕಾರಿಗಳು ಬಿಲ್ ಪಾವತಿಸುತ್ತಿಲ್ಲ. ಹೀಗಾಗಿ, ಬಿಲ್ ಪಾವತಿಸದ ಅಧಿಕಾರಿಗಳ ವಿರುದ್ಧ ನೇರವಾಗಿ ಮುಖ್ಯಮಂತ್ರಿಗಳಿಗೆ ದೂರು ನೀಡಲು ಮುದ್ರಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಶಾಲೆ ಆರಂಭವಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದ್ಮಶ್ರೀ ಪುರಸ್ಕೃತ ಅಂಕೇಗೌಡರ 20 ಲಕ್ಷ ಪುಸ್ತಕಗಳ ಸಂರಕ್ಷಣೆಗೆ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ – Kannada News | CM DK Shivakumar Sanctions 2 Acres of Land and Rs 5 Crore For Padma Shri Ankegowda’s Book Collection Library in Mandya

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅಂಕೇಗೌಡರು (ಚಿತ್ರ ಕೃಪೆ: ಡಿಕೆ ಶಿವಕುಮಾರ್ ಎಕ್ಸ್ ಹ್ಯಾಂಡಲ್)Image Credit source: @DKShivakumar

ಬೆಂಗಳೂರು, ಜೂನ್ 23: ನಾಡಿನ ಹೆಮ್ಮೆಯ ಪುಸ್ತಕ ಪ್ರೇಮಿ, ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ (M Ankegowda) ಜೀವಮಾನವಿಡೀ ಸಂಗ್ರಹಿಸಿರುವ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಅಪರೂಪದ ಗ್ರಂಥಗಳ ಸುರಕ್ಷತೆಗೆ ಕೊನೆಗೂ ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾದ ಅಂಕೇಗೌಡರು, ಸೂಕ್ತ ಜಾಗ ಹಾಗೂ ಸುಸಜ್ಜಿತ ಕಟ್ಟಡದ ಕೊರತೆಯಿಂದಾಗಿ ಪುಸ್ತಕಗಳನ್ನು ಕಾಯ್ದಿಟ್ಟುಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ವಿನಂತಿಯನ್ನು ಆಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಭರವಸೆ ನೀಡಿ, ಮಂಡ್ಯ ಜಿಲ್ಲೆಯಲ್ಲಿ ಹೊಸ ಗ್ರಂಥಾಲಯದ ಸ್ಥಾಪನೆಗಾಗಿ 2 ಎಕರೆ ಭೂಮಿ ಮತ್ತು 5 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿ ಆದೇಶದ ಪತ್ರದ ಮೇಲೆ ಸಹಿ ಹಾಕಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಾವು ಸಂಗ್ರಹಿಸಿರುವ ಹಳೆಯ ಅಪರೂಪದ ನಾಣ್ಯಗಳು ಹಾಗೂ ಅಂಚೆ ಚೀಟಿಗಳನ್ನು ಸಿಎಂಗೆ ತೋರಿಸಿ ಅಂಕೇಗೌಡ ಗಮನ ಸೆಳೆದರು. ಅಲ್ಲದೆ, ನವೀನ ಓದುವ ಕೊಠಡಿ, ಕಂಪ್ಯೂಟರ್ ವ್ಯವಸ್ಥೆ ಹಾಗೂ ಪುರಾತನ ಕೃತಿಗಳ ರಕ್ಷಣೆಗೆ ಡಿಜಿಟಲೀಕರಣದ ಅಗತ್ಯತೆ ಕುರಿತು ಲಿಖಿತ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ (MLC) ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.

ಅಂಕೇಗೌಡ ಯಾರು, ಸಾಧನೆ ಏನು?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಮೂಲದ ಎಂ. ಅಂಕೇಗೌಡ ಜ್ಞಾನದಾಸೋಹದ ಅನನ್ಯ ಸಾಕಾರ ಮೂರ್ತಿ. ಸಹಕಾರ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದ (ಟೈಮ್ ಕೀಪರ್) ಇವರು, ಸಂಪಾದನೆಯ ಬಹುಪಾಲು ಹಣವನ್ನು ಪುಸ್ತಕಗಳ ಖರೀದಿಗೆ ಬಳಸಿದರು. ಕೇವಲ ವೈಯಕ್ತಿಕ ಹವ್ಯಾಸವಾಗಿ ಆರಂಭವಾದ ಇವರ ಈ ಕಾರ್ಯ, ಇಂದು ದೇಶದ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯವಾದ ‘ಪುಸ್ತಕ ಮನೆ’ಯಾಗಿ ಮಾರ್ಪಟ್ಟಿದೆ. ಇವರ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದಲ್ಲಿ ಹಸ್ತಪ್ರತಿಗಳು, ಹಳೆಯ ಪತ್ರಿಕೆಗಳು ಹಾಗೂ ಅಳಿವಿನಂಚಿನಲ್ಲಿರುವ ಅಪರೂಪದ ಕೃತಿಗಳು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಸಾಹಿತ್ಯಿಕ ದಾಖಲೆಗಳಿವೆ. ಇವರ ಈ ಅಪ್ರತಿಮ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2022 ರಲ್ಲಿ ಇವರಿಗೆ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಸಿಎಂ ಡಿಕೆ ಶಿವಕುಮಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಹಳಗನ್ನಡದ ಕವಿತೆಯನ್ನು ಉಲ್ಲೇಖಿಸಿ ಅಂಕೇಗೌಡರೊಂದಿಗಿನ ಭೇಟಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

“ವಿಪುಲೈಶ್ವರ್ಯಮಯಿಯಾದ ಸಾಕ್ಷಾತ್‌ ತಾಯಿ ಸರಸ್ವತೀದೇವಿಯೆ, ಸೆರಗು ಓಸರಿಸಿ, ಸ್ವರ್ಣ ಕಲಶಸದೃಶ್ಯಗಳಾದ ತನ್ನ ದುಗ್ದಪೀನ ಪಯೋಧರಗಳನ್ನು ತನ್ನ ಮುಗ್ಧ ಕವಿನಂದನ ಮುಂದೆ ಚಾಚಿ ನಿಂತಂತಿತ್ತು, ‘ಬಾ ಪೀಯುಷ ಪಾನಗೈ’ ಎಂದು”. ವಿಶ್ವಮಾನವ ಕುವೆಂಪು ಅವರು ತಮ್ಮ ಆತ್ಮಕಥೆ ʻನೆನಪಿನ ದೋಣಿಯಲ್ಲಿʼ ಮೊದಲ ಬಾರಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಅನುಭವಿಸಿದ ಜ್ಞಾನದ ಹಸಿವನ್ನು ಹೀಗೆ ಬಣ್ಣಿಸಿದ್ದರು ಎಂದು ಎಕ್ಸ್ ಸಂದೇಶದಲ್ಲಿ ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಅಂತಹದ್ದೇ ಜ್ಞಾನದ ದಾಸೋಹವನ್ನು ಲಕ್ಷಾಂತರ ಪುಸ್ತಕಗಳ ಸಂಗ್ರಹದ ಮೂಲಕ ನಾಡಿಗೆ ಉಣಬಡಿಸುತ್ತಿರುವ ಮಹಾನ್ ಚೇತನ, ಪದ್ಮಶ್ರೀ ಪುರಸ್ಕೃತರು ಹಾಗೂ ‘ಪುಸ್ತಕ ಮನೆ’ಯ ರೂವಾರಿಗಳಾದ ಶ್ರೀ ಅಂಕೇಗೌಡ ಎಂ. ಅವರು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಸಮಾಲೋಚಿಸಿದರು. ಪುಸ್ತಕ ಲೋಕದ ಈ ಅನನ್ಯ ಸಾಧಕರೊಂದಿಗಿನ ಭೇಟಿ ಅತ್ಯಂತ ಅರ್ಥಪೂರ್ಣವಾಗಿತ್ತು ಎಂದು ಡಿಕೆಶಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ: ಆರ್​​. ಅಶೋಕ್​​ ಸ್ಪಷ್ಟನೆ

ನವದೆಹಲಿ/ಬೆಂಗಳೂರು, ಜೂನ್​​ 23: ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಅಡ್ಡಮತದಾನದ ಮೂಲಕ ಪಕ್ಷಕ್ಕೆ ಮೋಸ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು . ಯಾರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೋ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಇಂತಹ ದುಷ್ಕೃತ್ಯ ಮತ್ತೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ವಿರುದ್ಧ ಆತ್ಮರಕ್ಷಣೆಗೆ ಭಾರತದ ಆಕಾಶ್​ತೀರ್ ಡಿಫೆನ್ಸ್ ಸಿಸ್ಟಂ ಮತ್ತು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಯುಎಇ ಮುಂದು – Kannada News | UAE may buy Brahmos missile and Akashteer defence system from India

ಯಲಹಂಕದ ಏರ್ ಶೋ ವೇಳೆ ಪ್ರದರ್ಶನಕ್ಕಿಡಲಾಗಿದ್ದ ಬ್ರಹ್ಮೋಸ್​ನ ಚಿತ್ರImage Credit source: PTI

ನವದೆಹಲಿ, ಜೂನ್ 23: ವೆಸ್ಟ್ ಏಷ್ಯಾ (ಮಧ್ಯಪ್ರಾಚ್ಯ) ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭಾರತದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳಾದ ‘ಬ್ರಹ್ಮೋಸ್’ (BrahMos) ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್ ಮತ್ತು ‘ಆಕಾಶತೀರ್’ (Akashteer) ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ರಾಯ್ಟರ್ಸ್ (Reuters) ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಈ ವರದಿ ಪ್ರಕಾರ, ಭಾರತ ಮತ್ತು ಯುಎಇ ನಡುವೆ ಈ ಪ್ರಮುಖ ಶಸ್ತ್ರಾಸ್ತ್ರಗಳ ರಫ್ತು ಕುರಿತು ಆರಂಭಿಕ ಹಂತದ ಮಾತುಕತೆಗಳು ನಡೆಯುತ್ತಿದ್ದು, ಅವು ಅತ್ಯಂತ ವೇಗವಾಗಿ ಮುನ್ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಇತ್ತೀಚಿನ ಸಂಘರ್ಷಗಳ ನಂತರ ಯುಎಇ ತನ್ನ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುತ್ತಿದೆ. ವಿಶೇಷವಾಗಿ ಡ್ರೋನ್ ದಾಳಿಗಳು ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ಹಾಗೂ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಭದ್ರತೆಯನ್ನು ಬಲಪಡಿಸಲು ಯುಎಇ ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸ್ಟಾರ್ಟಪ್​ನಲ್ಲಿ ಮೆಟಾ ಭಾರೀ ಹೂಡಿಕೆ; ವಾಟ್ಸಪ್​ಗೆ ಕುನಾಲ್ ಶಾ ಹೊಸ ಬಾಸ್

ಬ್ರಹ್ಮೋಸ್ ಕ್ಷಿಪಣಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್, ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ಇದು ಭೂಮಿ, ಸಮುದ್ರ ಮತ್ತು ಆಕಾಶದಿಂದಲೂ ನಿಖರವಾಗಿ ಗುರಿ ತಲುಪಬಲ್ಲದು. ಈ ಒಪ್ಪಂದಕ್ಕೆ ರಷ್ಯಾದ ಒಪ್ಪಿಗೆಯೂ ಬೇಕಾಗಲಿದ್ದು, ಯುಎಇ ಜೊತೆ ರಷ್ಯಾ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಅಡ್ಡಿಯಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ಆಕಾಶತೀರ್ ಸಿಸ್ಟಂ: ಇದು ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಭಾರತೀಯ ಸೇನೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವಯಂಚಾಲಿತ ವಾಯು ರಕ್ಷಣಾ ನಿಯಂತ್ರಣ ವ್ಯವಸ್ಥೆಯಾಗಿದೆ. ಇದು ಯುದ್ಧಭೂಮಿಯಲ್ಲಿ ರೇಡಾರ್ ಹಾಗೂ ಸೆನ್ಸಾರ್‌ಗಳ ದತ್ತಾಂಶವನ್ನು ಒಟ್ಟುಗೂಡಿಸಿ, ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ತಕ್ಷಣವೇ ಪತ್ತೆಹಚ್ಚಿ ಹೊಡೆದುರುಳಿಸಲು ನೆರವಾಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸುವುದು ತಿಳಿಯಿರಿ; ಖರ್ಚು ಹೆಚ್ಚದಂತೆ ರಿವಾರ್ಡ್ಸ್ ಪಡೆಯುವ ಸ್ಮಾರ್ಟ್ ಪ್ಲಾನ್ ತಿಳಿದಿರಿ

ಈ ಒಪ್ಪಂದವು ಯಶಸ್ವಿಯಾದರೆ, ಫಿಲಿಪೈನ್ಸ್ ಬಳಿಕ ಭಾರತದ ಹೆಮ್ಮೆಯ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸುವ ಮತ್ತೊಂದು ಪ್ರಮುಖ ದೇಶವಾಗಿ ಯುಎಇ ಹೊರಹೊಮ್ಮಲಿದೆ. ಇದು ಭಾರತದ ರಕ್ಷಣಾ ರಫ್ತು ವಲಯಕ್ಕೆ ಭಾರಿ ಉತ್ತೇಜನ ನೀಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆಯಲ್ಲಿ ಭಾರಿ ಲೋಪ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲು – Kannada News | Ram Mandir Donation Scam: SIT Reveals Shocking Financial Irregularities and Security Lapses

ಅಯೋಧ್ಯೆ, ಜೂನ್ 23: ಅಯೋಧ್ಯೆ(Ayodhya)ಯ ಶ್ರೀ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಕಳ್ಳತನ ಮತ್ತು ಕಾಣಿಕೆ ಹಣದ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ದೇವಸ್ಥಾನದ ದೇಣಿಗೆ ನಿರ್ವಹಣೆಯಲ್ಲಿ ಭೀಕರ ಲೋಪಗಳು ಮತ್ತು ಭದ್ರತಾ ವೈಫಲ್ಯಗಳು ಇರುವುದನ್ನು ಪತ್ತೆಹಚ್ಚಿದೆ. ಟ್ರಸ್ಟ್‌ನ ಕೋರಿಕೆಯ ಮೇರೆಗೆ ಜೂನ್ 13, 2026 ರಂದು ರಚಿಸಲಾದ ಮೂವರು ಸದಸ್ಯರ ಈ ಎಸ್‌ಐಟಿ ತಂಡವು 100 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದೆ. ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಎಸ್‌ಐಟಿ ಸಜ್ಜಾಗಿದೆ.

ಕ್ಯಾಮೆರಾಗಳನ್ನು ಮರೆಮಾಚಿದ ಸಿಬ್ಬಂದಿ: ಹಣ ಎಣಿಕೆ ಮಾಡುವ ಸಮಯದಲ್ಲಿ ಅಲ್ಲಿನ ನೌಕರರು ಸಿಸಿಟಿವಿ ಕ್ಯಾಮೆರಾಗಳಿಗೆ ಅಡ್ಡವಾಗಿ ನಿಂತು ದೃಶ್ಯಾವಳಿಗಳು ರೆಕಾರ್ಡ್ ಆಗದಂತೆ ತಡೆದಿದ್ದಾರೆ. ನಗದು ಎಣಿಕೆ ಕೋಣೆಯ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಡಿಲೀಟ್ ಮಾಡಲಾಗಿರುವ ಅಥವಾ ಬದಲಾಯಿಸಲಾಗಿರುವ ಬಲವಾದ ಲಕ್ಷಣಗಳು ಕಂಡುಬಂದಿವೆ. ಜೊತೆಗೆ ಕೇವಲ 45 ದಿನಗಳ ಹಳೆಯ ದೃಶ್ಯಾವಳಿಗಳು ಮಾತ್ರ ಲಭ್ಯವಿದ್ದು, ಹಳೆಯ ದಾಖಲೆಗಳನ್ನು ಪರಿಶೀಲಿಸುವುದು ಕಷ್ಟವಾಗಿದೆ.

ಹಣ ಎಣಿಸುವ ಸಿಬ್ಬಂದಿ ಬರುವಾಗ ಮತ್ತು ಹೋಗುವಾಗ ಅವರ ದೇಹ ತಪಾಸಣೆ (Checking) ನಡೆಸಲು ಯಾವುದೇ ಬಲವಾದ ವ್ಯವಸ್ಥೆ ಇರಲಿಲ್ಲ. ನಿಯಮಿತ ಸಮವಸ್ತ್ರ ಧರಿಸುವ ಬದಲಿಗೆ ಸಿಬ್ಬಂದಿ ತಮ್ಮ ಸಾಮಾನ್ಯ ಬಟ್ಟೆಯಲ್ಲೇ ಬಂದು ಹಣ ಎಣಿಸುತ್ತಿದ್ದರು. ಇದು ಹಣವನ್ನು ಸುಲಭವಾಗಿ ಹೊರಗೆ ಸಾಗಿಸಲು ದಾರಿ ಮಾಡಿಕೊಟ್ಟಿದೆ.

ಶಿಫಾರಸಿನ ಮೇರೆಗೆ ನೌಕರಿ: ದೇವಸ್ಥಾನದ 35 ದೇಣಿಗೆ ಪೆಟ್ಟಿಗೆಗಳಿಂದ ಹಣವನ್ನು ತಂದು ಎಣಿಸುವ ಜವಾಬ್ದಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಿಬ್ಬಂದಿಗೆ ನೀಡಲಾಗಿತ್ತು. ಆದರೆ, ಬ್ಯಾಂಕ್‌ನವರು ವಾರಾಣಸಿಯ ಖಾಸಗಿ ಸಂಸ್ಥೆಯೊಂದರ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರು. ಈ ನೇಮಕಾತಿಯು ರಾಮ ಮಂದಿರ ಟ್ರಸ್ಟ್‌ಗೆ ಆಪ್ತರಾದವರ ಶಿಫಾರಸಿನ ಮೇರೆಗೆ ನಡೆದಿತ್ತು. ಉದಾಹರಣೆಗೆ, ಟ್ರಸ್ಟ್‌ನ ಆಪ್ತ ಅನುಕುಲ್ ಮಿಶ್ರಾ ಎಂಬಾತ ತನ್ನ ಸೋದರಮಾವ ಲವ್‌ಕುಶ್ ಮಿಶ್ರಾ ಎಂಬುವವರಿಗೆ ಹಣ ಎಣಿಸುವ ಕೆಲಸ ಕೊಡಿಸಿದ್ದರು. ಇಂತಹ ಪಾರದರ್ಶಕವಲ್ಲದ ನೇಮಕಗಳಿಂದ ವಂಚನೆ ಸುಲಭವಾಗಿದೆ ಎಂದು ಎಸ್‌ಐಟಿ ಹೇಳಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

ಚಿನ್ನ-ಬೆಳ್ಳಿ ಆಭರಣಗಳ ದಾಖಲೆಯಲ್ಲೂ ವ್ಯತ್ಯಾಸ
ಕೇವಲ ನಗದು ಮಾತ್ರವಲ್ಲದೆ, ಭಕ್ತರು ದೇವರಿಗೆ ದಾನ ಮಾಡಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಮತ್ತು ಅಮೂಲ್ಯ ರತ್ನಗಳನ್ನು ಟ್ರಸ್ಟ್ ಹೇಗೆ ಸಂಗ್ರಹಿಸಿಟ್ಟಿದೆ ಮತ್ತು ದಾಖಲಿಸಿದೆ ಎಂಬುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳಿದ್ದು, ಅಸಲಿ ಆಭರಣಗಳನ್ನು ಕದ್ದು ಅವುಗಳ ಜಾಗಕ್ಕೆ ನಕಲಿ ಆಭರಣಗಳನ್ನು ಇಟ್ಟಿರುವ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸಿದೆ.

2025 ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಹರಿದುಬಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಇದರೊಂದಿಗೆ ಟ್ರಸ್ಟ್ ಖರೀದಿಸಿರುವ ಭೂಮಿ ಮತ್ತು ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲೂ ಅಕ್ರಮ ನಡೆದಿದೆಯೇ ಎಂಬ ತನಿಖೆ ನಡೆಯುತ್ತಿದೆ.

ಇಂತಹ ಲೋಪಗಳು ಮುಂದೆ ಮರುಕಳಿಸದಂತೆ ತಡೆಯಲು ಎಸ್‌ಐಟಿ ಮುಖ್ಯಮಂತ್ರಿ ಕಚೇರಿಗೆ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

-ಖಾಸಗಿ ವ್ಯಕ್ತಿಗಳ ಬದಲಿಗೆ ಕೇವಲ ಅಧಿಕೃತ ಬ್ಯಾಂಕ್ ಸಿಬ್ಬಂದಿಯಿಂದ ಮಾತ್ರ ಹಣ ಎಣಿಸಬೇಕು.

-ನೌಕರರ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕು.

-ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು.

-ದೇವಸ್ಥಾನದ ಒಟ್ಟು ಆದಾಯ ಮತ್ತು ಖರ್ಚುಗಳ ಬಗ್ಗೆ ನಿಯಮಿತವಾಗಿ ಸ್ವತಂತ್ರ ಆಡಿಟಿಂಗ್ (ಲೆಕ್ಕಪರಿಶೋಧನೆ) ನಡೆಸಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:00 pm, Tue, 23 June 26

Source link

Exit mobile version