ರಾಜ್ಯದಲ್ಲಿ ಹೆಚ್ಚುತ್ತಿರುವ ಗಾಂಜಾ ದಂಧೆ: ಬೆಳಗಾವಿ, ಆನೇಕಲ್ ಹಾಗೂ ನಂಜನಗೂಡಿನಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲು – Kannada News | Karnataka Drug Crackdown: Ganja Chocolates in Belagavi and 10kg Seized in Anekal

ರಾಜ್ಯದಲ್ಲಿ ಹೆಚ್ಚುತ್ತಿರುವ ಗಾಂಜಾ ದಂಧೆ

ಬೆಂಗಳೂರು, ಆಗಸ್ಟ್ 12: ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮೂಹವನ್ನು ಟಾರ್ಗೆಟ್ ಮಾಡಿ ನಡೆಸುತ್ತಿದ್ದ ಗಾಂಜಾ ಜಾಲದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಆನೇಕಲ್ ಹಾಗೂ ಮೈಸೂರಿನ ನಂಜನಗೂಡಿನಲ್ಲಿ ಗಾಂಜಾಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳು ಬೆಳಕಿಗೆ ಬಂದಿವೆ.

ಬೆಳಗಾವಿಯಲ್ಲಿ ಚಾಕಲೇಟ್ ಹೆಸರಿನಲ್ಲಿ ಗಾಂಜಾ ದಂಧೆ

ಬೆಳಗಾವಿ ನಗರದ ಉದ್ಯಮಬಾಗದಲ್ಲಿರುವ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್‌ಗೆ ರೂ. 50ರಂತೆ ಮಾರಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್‌ನಲ್ಲಿ ರೌಡಿಶೀಟರ್ ಪವನ್ ಬಂಧನ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಬ್ಯಾಗಡದೇನಹಳ್ಳಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು, 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 2 ಕೊಲೆ ಹಾಗೂ 1 ರಾಬರಿ ಕೇಸ್‌ನಲ್ಲಿ ಭಾಗಿಯಾಗಿರುವ ರೌಡಿಶೀಟರ್ ಪವನ್ ಅಲಿಯಾಸ್ ತಿಕ್ಲ ಪವನ್ (28) ಎಂಬಾತನನ್ನು ಬಂಧಿಸಲಾಗಿದೆ. ಒಡಿಶಾದಿಂದ ಗಾಂಜಾ ತಂದು ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಬೇದ್ ಮತ್ತು ಜಾಫರ್ ಜೊತೆ ಸೇiಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ನಂಜುಂಡೇಶ್ವರ ದೇಗುಲದ ಬಳಿ ಗಾಂಜಾ ಸೇವನೆ‘

ಮೈಸೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನದ ಪಾರ್ಕಿಂಗ್ ಬಳಿ ಯುವಕನೊಬ್ಬ ಗಾಂಜಾ ಸೇವಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ಫೋಟೋ ಹಾಗೂ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪವಿತ್ರ ದೇಗುಲದ ಸುತ್ತಮುತ್ತ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸುತ್ತಮುತ್ತ ಕಾವಲು ಹೆಚ್ಚಿಸಿ, ಇಂತಹ ಅಕ್ರಮ ಚಟುವಟಿಕೆಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ – Kannada News | President’s Independence Day Invite: Celebrating India’s Folk Art and Cultural Diversity

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗೌರವಾನ್ವಿತ ರಾಷ್ಟ್ರಪತಿಯವರಿಂದ ಗಣ್ಯ ಅತಿಥಿಗಳಿಗೆ ಕಳುಹಿಸಲಾಗಿರುವ ಆಹ್ವಾನ ಪತ್ರಿಕೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ವೈವಿಧ್ಯತೆಯನ್ನು ಅನಾವರಣಗೊಳಿಸಿದೆ. ಈ ವರ್ಷದ ಆಹ್ವಾನ ಪತ್ರಿಕೆಯ ವಿನ್ಯಾಸವು ಸಮುದಾಯ, ಸೃಜನಶೀಲತೆ ಮತ್ತು ಸಂರಕ್ಷಣೆ ನಡುವಿನ ಪರಸ್ಪರ ಅವಲಂಬನೆಯನ್ನು ಪ್ರತಿಬಿಂಬಿಸುವಂತಿದ್ದು, ಭಾರತದ ವಿವಿಧ ಪ್ರದೇಶಗಳ ವಿಶಿಷ್ಟ ಕಲಾ ಪರಂಪರೆಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ವಿಶೇಷವಾಗಿ ಛತ್ತೀಸ್‌ಗಢ, ಗೋವಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೀವಂತ, ವರ್ಣರಂಜಿತ ಹಾಗೂ ವೈವಿಧ್ಯಮಯ ಜನಪದ ಕಲಾ ಪರಂಪರೆಗಳಿಂದ ಈ ವರ್ಷದ ಆಹ್ವಾನ ಪತ್ರಿಕೆ ಮತ್ತು ಔತಣಕೂಟದ ಮುಖ್ಯ ಪರಿಕಲ್ಪನೆಗೆ ಸ್ಫೂರ್ತಿ ಪಡೆಯಲಾಗಿದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆ ಮತ್ತು ಸೃಜನಶೀಲತೆಯನ್ನೂ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ಯಾಂಕರ್ -ಆಟೋ ರಿಕ್ಷಾ ಡಿಕ್ಕಿ: ಐವರು ಮಹಿಳೆಯರು ಸೇರಿ ಕರ್ನಾಟಕದ 6 ಮಂದಿ ಸಾವು, 6 ಮಂದಿಗೆ ಗಂಭೀರ ಗಾಯ – Kannada News | Tragic Accident in Telangana’s Sangareddy: Tanker Collides with Auto Rickshaw; 6 Killed, 6 Injured from Karnataka’s Bidar

ಸಂಗಾರೆಡ್ಡಿ (ತೆಲಂಗಾಣ), ಆಗಸ್ಟ್​​ 12: ವೇಗವಾಗಿ ಬಂದ ಟ್ಯಾಂಕರ್​​ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಸತ್ವಾರ್ ಗ್ರಾಮದ ಸಮೀಪ ನಡೆದಿದೆ. ಆಟೋ ರಿಕ್ಷಾ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ಆಟೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಮೃತರು ಹಾಗೂ ಗಾಯಾಳುಗಳು ಕರ್ನಾಟಕದ ಬೀದರ್ ಜಿಲ್ಲೆಯ ರಾಜಗೀರಾ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಗುರುತು ಪತ್ತೆ

ಅಪಘಾತದಲ್ಲಿ ಮೃತಪಟ್ಟವರನ್ನು ರೇಖಾ, ಶ್ರೀದೇವಿ, ಕವಿತಾ, ರೇಷ್ಮಾ, ನಿಖಿತಾ ಹಾಗೂ ಆಟೋ ಚಾಲಕ ದೇವದಾಸ್ ಎಂದು ಗುರುತಿಸಲಾಗಿದೆ. ನಿರ್ಮಲಾ, ತುಳಜಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಮತ್ತು ಶೋಭಾ ಎಂಬವರು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:  ಮಾಣಿಕ ಪ್ರಭು ದೇವಸ್ಥಾನಕ್ಕೆ ಮೂಗು ಮುಚ್ಚಿಕೊಂಡು ಬರ್ತಿದ್ದ ಭಕ್ತರು: ಫ್ಯಾಕ್ಟರಿ ಮುಚ್ಚಲು ಈಶ್ವರ ಖಂಡ್ರೆ ಸೂಚನೆ

‘ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ’

ಅಪಘಾತದಲ್ಲಿ ಗಂಭೀರ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಚಿವ ಈಶ್ವರ್​​ ಖಂಡ್ರೆ ವಿಚಾರಿಸಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬ್ರಿಮ್ಸ್‌ನ ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕದಲ್ಲಿ ಮೂವರು ಹಾಗೂ ಬೇರೆ ವಾರ್ಡ್‌ನಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜಗೀರಾ ರಾಜಗೀರಾ ಗ್ರಾಮದ 6 ಜನ ಮೃತಪಟ್ಟಿರುವುದು ಅತ್ಯಂರ ದುಖಃಕರ ಸಂಗತಿ. ಸಿಎಂ ನಿಧಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತೆ. ಮೃತರ ಕುಟುಂಬದ ಜೊತೆ ಹಾಗೂ ಗಾಯಾಳುಗಳ ಜೊತೆ ನಮ್ಮ ಸರ್ಕಾರ ಇರುತ್ತೆ ಎಂಬ ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:48 am, Wed, 12 August 26

Source link

TV9 Kannada News Live: ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ; ಅಸಿಸ್ಟೆಂಟ್ ಸೂಪರಿಂಡೆಂಟ್ ಸಸ್ಪೆಂಡ್ ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 12 August 2026 Karnataka Bandh, Cabinet Portfolio, Assembly Session Politics Cinema Latest Updates Online

  • 12 Aug 2026 10:59 AM (IST)

    ಚಾಕಲೇಟ್ ಹೆಸರಿನಲ್ಲಿ ಗಾಂಜಾ ದಂಧೆ, ಯುಪಿ ಮೂಲದ ಆರೋಪಿ ಬಂಧನ

    ಬೆಳಗಾವಿ ನಗರದ ಉದ್ಯಮಬಾಗದಲ್ಲಿ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್‌ನಲ್ಲಿ ಗಾಂಜಾ ಬೆರೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್‌ಗೆ ರೂ. 50ರಂತೆ ಮಾರಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 Aug 2026 10:58 AM (IST)

    ಡಿಸಿ ಕಚೇರಿ ಮುಂದೆ ನಕಲಿ ದಾಖಲೆ ಪ್ರಶ್ನಿಸಿ ದೂರು ನೀಡಿದವರ ಮೇಲೆ ಹಲ್ಲೆ

    ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಶೈಲಾ ಹಾಗೂ ಚಂದ್ರಮಾನ್ ದೂರು ನೀಡಿದ್ದರು. ಇದರ ಕೋಪದಿಂದ ಕಟ್ಟಡ ನಿರ್ಮಿಸುತ್ತಿರುವ ಶಾಂತಾ ಎಂಬ ಮಹಿಳೆ, ಪೊಲೀಸರ ಎದುರಲ್ಲೇ ದೂರುದಾರರ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದು, ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 Aug 2026 10:57 AM (IST)

    13 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಹಾಸ್ಟೆಲ್ ಮುಖ್ಯಸ್ಥನ ಬಂಧನ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹಾಸ್ಟೇಲ್‌ನಲ್ಲಿ 13 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುಖ್ಯಸ್ಥ ಜಾನ್ ಶಾಮೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

  • 12 Aug 2026 10:56 AM (IST)

    ಬೀದರ್ ಮೂಲದ ಕೂಲಿ ಕಾರ್ಮಿಕರ ದುರ್ಮರಣ: ಸಚಿವ ಈಶ್ವರ ಖಂಡ್ರೆ ಭೇಟಿ

    ತೆಲಂಗಾಣದಲ್ಲಿ ನಡೆದ ಅಪಘಾತದಲ್ಲಿ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖಕರ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಸಂತ್ರಸ್ತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಲಿದೆ.

  • 12 Aug 2026 10:56 AM (IST)

    ಅಯೋಧ್ಯೆ ರಾಮಮಂದಿರ ಸಿಇಒ ಹುದ್ದೆ

    ‘ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್‌ ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಂದ 5200 ಅರ್ಜಿಗಳಲ್ಲಿ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದಂತೆ ಅಭ್ಯರ್ಥಿಗಳಿಗೆ ಜನಿವಾರ ಧರಿಸುವಿಕೆ, ಶಿಕಾ, ಸಸ್ಯಾಹಾರ, ಮದ್ಯಪಾನ ನಿಷೇಧ, ರಾಮಭಕ್ತಿ ಹಾಗೂ ಸಾಂಪ್ರದಾಯಿಕ ಉಡುಗೆಯಂತಹ ಧಾರ್ಮಿಕ ಆಚರಣೆ ಮತ್ತು ಜೀವನಶೈಲಿಯ ಕುರಿತು ಕಠಿಣ ಪ್ರಶ್ನೆಗಳನ್ನು ಗೂಗಲ್ ಫಾರ್ಮ್ ಮೂಲಕ ಕೇಳಲಾಗಿದೆ. ಟ್ರಸ್ಟ್‌ನ ಪಾರದರ್ಶಕ ಆಡಳಿತಕ್ಕಾಗಿ ಈ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಸೆಪ್ಟೆಂಬರ್ 2ರೊಳಗೆ ಮೂರು ಹೆಸರುಗಳನ್ನು ಅಂತಿಮ ಶಿಫಾರಸು ಮಾಡಲಾಗುತ್ತದೆ. ಮತ್ತಷ್ಟು ಓದಿ

  • 12 Aug 2026 10:55 AM (IST)

    ಯುವಕರು ದೇಶದ ವರ್ತಮಾನದ ದೊಡ್ಡ ಶಕ್ತಿ ಎಂದ ಪ್ರಧಾನಿ ಮೋದಿ

    ಅಂತರರಾಷ್ಟ್ರೀಯ ಯುವ ದಿನದ ಹಿನ್ನೆಲೆಯಲ್ಲಿ ದೇಶದ ಯುವಜನತೆಯನ್ನು ಉದ್ದೇಶಿಸಿ ಸಂದೇಶ ಹಂಚಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಭಾರತದ ಅತ್ಯಂತ ದೊಡ್ಡ ಶಕ್ತಿ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಸಂಸ್ಕೃತ ಶ್ಲೋಕದ ಮೂಲಕ ದೃಷ್ಟಿ, ಮಾತು ಮತ್ತು ಕಾಯಕದ ಮಹತ್ವವನ್ನು ಯುವ ಸಮೂಹಕ್ಕೆ ತಿಳಿಸಿದ್ದಾರೆ. ಮತ್ತಷ್ಟು ಓದಿ

  • 12 Aug 2026 10:04 AM (IST)

    ಪ್ರಜ್ವಲ್ ರೇವಣ್ಣ ಜೈಲು ಮೊಬೈಲ್ ಪ್ರಕರಣ: ಅಸಿಸ್ಟೆಂಟ್ ಸೂಪರಿಂಡೆಂಟ್ ಸಸ್ಪೆಂಡ್

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದ ಹಿನ್ನೆಲೆ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲು ಎಸ್‌ಪಿ ಅನ್ಶುಕುಮಾರ್‌ಗೆ ಡಿಜಿಪಿ ಅಲೋಕ್ ಕುಮಾರ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

  • Source link

    ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್: ಯಾರಿಗೆ ಯಾವ ಇಲಾಖೆಯ ಜವಾಬ್ದಾರಿ? – Kannada News | Karnataka Cabinet Portfolios Allocated: DK Shivakumar Assigns Departments to New Ministers Ahead of Monsoon Session

    ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು, ಆಗಸ್ಟ್​​ 12: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಆಗಸ್ಟ್​​ 03ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಭಾರಿ ಅಸಮಾಧಾನ ಭುಗೆಲದ್ದಿದ್ದ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​​, ಅಳೆದು ತೂಗಿ ನೂತನ ಸಚಿವರಿಗೆ ಜವಾಬ್ದಾರಿ ನೀಡಿದೆ. ನಾಳೆಯಿಂದ ಆಗಸ್ಟ್ 27ರವರೆಗೆ ವಿಧಾನಮಂಡಲ ಮುಂಗಾರು ಅಧಿವೇಶನ ನಿಗದಿಯಾಗಿದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯದರೋದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಅಧಿವೇಶನ ಆರಂಭದ ಮುನ್ನಾ ದಿನವೇ ನೂತನ ಸಚಿವರಿಗೆ ಇಲಾಖಾವಾರು ಜವಾಬ್ದಾರಿ ಹಂಚಿಕೆ ನಡೆದಿದೆ.

    ಯಾರಿಗೆ ಯಾವ ಖಾತೆ?

    • ಎನ್​.ಚಲುವರಾಯಸ್ವಾಮಿ-ಕೃಷಿ ಇಲಾಖೆ
    • ರಿಜ್ವಾನ್ ಅರ್ಷದ್-ಆಹಾರ & ನಾಗರಿಕ ಸರಬರಾಜು ವ್ಯವಹಾರ
    • ಕೆ.ಹೆಚ್​.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ
    • ಸಂತೋಷ್ ಲಾಡ್-ಕಾರ್ಮಿಕ ಇಲಾಖೆ
    • ಕೆ.ಎಸ್.ಬಸವಂತಪ್ಪ- ಮೀನುಗಾರಿಕೆ, ಬಂದರು ಮತ್ತು ಒಳನಾಡು
    • ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ
    • ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ ಇಲಾಖೆ
    • ಜಮೀರ್ ಅಹ್ಮದ್ ಖಾನ್​-ವಸತಿ ಇಲಾಖೆ
    • ಲಕ್ಷ್ಮಣ ಸವದಿ-ಸಹಕಾರ ಇಲಾಖೆ
    • ಡಾ.ಅಜಯ್​ ಸಿಂಗ್​-ಅರಣ್ಯ ಇಲಾಖೆ
    • ಎಸ್​.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂವಿಜ್ಞಾನ ಇಲಾಖೆ
    • ಹೆಚ್​.ಸಿ.ಬಾಲಕೃಷ್ಣ-ಸಣ್ಣ ನೀರಾವರಿ ಇಲಾಖೆ
    • ಪುಟ್ಟರಂಗ ಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

    ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

    Published On – 11:28 am, Wed, 12 August 26

    Source link

    International Youth Day 2026: ಜೀವನವನ್ನು ಹಾಳು ಮಾಡುವ ಈ ಅಭ್ಯಾಸಗಳಿಂದ ಯುವಕರು ದೂರವಿದ್ದಷ್ಟು ಒಳ್ಳೆಯದು – Kannada News | International Youth Day 2026: To be successful in life, youth should avoid these habits

    ಅಂತಾರಾಷ್ಟ್ರೀಯ ಯುವ ದಿನImage Credit source: Getty Images

    ಯುವಶಕ್ತಿ ದೇಶದ ಶಕ್ತಿ. ಹೌದು ಯುವ ಜನತೆಯ (Youth) ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳುವುದರಿಂದ ದೇಶ ಪ್ರಗತಿಯತ್ತ ಸಾಗುತ್ತದೆ. ಜೊತೆಗೆ ಯುವಕ ಭವಿಷ್ಯವೂ ಉಜ್ವಲವಾಗಿರುತ್ತದೆ. ಹಾಗಾಗಿ ಸಮಾಜವು ಸುಸ್ಥಿರ ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಎಷ್ಟು ಮುಖ್ಯ ಎಂದು ಸಾರಲು, ಸಾಮಾಜಿಕ, ಆರ್ಥಿಕ, ರಾಜಕೀಯ  ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು  ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯುವ ದಿನದ ಈ ವಿಶೇಷ ಸಂದರ್ಭದಲ್ಲಿ ಯುವಕರು ಯಾವೆಲ್ಲಾ ಅಭ್ಯಾಸಗಳಿಂದ ದೂರವಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂಬುದನ್ನು ನೋಡೋಣ ಬನ್ನಿ.

    ಅಂತಾರಾಷ್ಟ್ರೀಯ ಯುವ ದಿನದ ಇತಿಹಾಸವೇನು?

    1999 ರಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಬೇಕು ಎಂಬ ನಿರ್ಣಯವನ್ನು ವಿಶ್ವ ಸಂಸ್ಥೆಯ ಸಅಮಾನ್ಯ ಸಭೆ ಘೋಷಿಸಿತು. 1998 ರಲ್ಲಿ, ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ವಿಶ್ವ ಯುವ ಸಮ್ಮೇಳನವನ್ನು ಆಯೋಜಿಸಲಾಗಿತ್ತು.  ಇದರಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ, ಭಾಗವಹಿಸಿದ್ದ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿದರು. ನಂತರ ಡಿಸೆಂಬರ್ 17, 1999 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ಪ್ರಸ್ತಾಪವನ್ನು ಅನುಮೋದಿಸಿತು. ಅಂದಿನಿಂದ, ಪ್ರತಿ ವರ್ಷ ಆಗಸ್ಟ್ 12 ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.

    ಅಂತಾರಾಷ್ಟ್ರೀಯ ಯುವ ದಿನದ ಮಹತ್ವವೇನು?

    • ಯುವ ದಿನದ ಮಹತ್ವವೆಂದರೆ ಯುವಕರನ್ನು ಒಗ್ಗೂಡಿಸುವುದು ಮತ್ತು ಸಾಮಾಜಿಕ, ಆರ್ಥಿಕ ಮತ್ತು ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಅವರು ಕೊಡುಗೆಯನ್ನು ಗುರುತಿಸುವುದು ಮತ್ತು ಎಲ್ಲಾ ಕ್ಷೇತ್ರದಲ್ಲೂ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದಾಗಿದೆ.
    • ಸಾಮಾಜಿಕ, ಆರ್ಥಿಕ, ರಾಜಕೀಯ  ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಯುವಕರನ್ನು ಪ್ರೋತ್ಸಾಹಿಸುವುದು ಅಂತಾರಾಷ್ಟ್ರೀಯ ಯುವ ದಿನದ ಆಚರಣೆಯ  ಉದ್ದೇಶವಾಗಿದೆ.

    ಜೀವನದಲ್ಲಿ ಯಶಸ್ಸನ್ನು ಗಳಿಸಲು ಯುವಜನತೆ ಈ ಅಭ್ಯಾಸಗಳಿಂದ ದೂರವಿರಬೇಕು:

    ಕೆಟ್ಟ ಸಹವಾಸದಿಂದ ದೂರವಿರಿ: ಯುವಕರು ಕೆಟ್ಟವರ ಸಹವಾಸದಿಂದ ದೂರವಿರಬೇಕು. ಸಹವಾಸವು ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ಸ್ನೇಹಿತರನ್ನು ಮಾಡಿಕೊಳ್ಳುವಾಗ ಬಹಳ ಜಾಗರೂಕರಾಗಿರಿ. ಕೆಟ್ಟ ಗುಣ ಹಾಗೂ ಕೆಟ್ಟ ಚಟವನ್ನು ಹೊಂದಿರುವ ವ್ಯಕ್ತಿಗಳ ಸಹವಾಸದಿಂದ ಆದಷ್ಟು ದೂರವಿರಿ. ಇಲ್ಲದಿದ್ದರೆ ಇದು ನಿಮ್ಮ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಯುವಕರು ಯಾವಾಗಲೂ ಸಜ್ಜನರ ಸಹವಾಸದಲ್ಲಿ ಇರಬೇಕು.

    ಕೆಟ್ಟ ಚಟದಿಂದ ದೂರವಿರಿ: ಯೌವನದ ಈ ವಯಸ್ಸಿನಲ್ಲಿ, ಕೆಟ್ಟ ಚಟಗಳು ಹೆಚ್ಚು ಆಕರ್ಷಿಸುತ್ತವೆ. ಇದಕ್ಕೇನಾದರೂ ಬಲಿಯಾದರೆ ಜೀವನವೇ ಸಂಪೂರ್ಣವಾಗಿ ನಾಶವಾಗುತ್ತದೆ. ಹೌದು, ನಿಮ್ಮ ಯೌವನದಲ್ಲಿ ನೀವು ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡರೆ, ಅವುಗಳಿಂದ ಹೊರಬರುವುದು ಕಷ್ಟಸಾಧ್ಯ. ಇದರಿಂದ ಸಂಪೂರ್ಣ ಜೀವನವೇ ಹಾಳಾಗಬಹುದು. ಹಾಗಾಗಿ ಜೀವನದಲ್ಲಿ ಮುಂದುವರೆಯಲು ಬಯಸಿದರೆ ಸಾಧ್ಯವಾದಷ್ಟು ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿಂದ ದೂರವಿರಿ.

    ಏನೂ ಮಾಡದೆ ಸುಮ್ಮನೆ ಕೂರುವುದು: ಸೋಮಾರಿತನದಿಂದ ಏನನ್ನೂ ಮಾಡದೆ ಸುಮ್ಮನೆ ಕೂರುವುದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಯೌವನದ ಸಮಯದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವುದು ಅಷ್ಟೇನೂ ಕಷ್ಟಕರವಲ್ಲ ಏಕೆಂದರೆ ಆ ಶಕ್ತಿ, ಸಾಮರ್ಥ್ಯ ನಿಮ್ಮ ಬಳಿ ಇರುತ್ತದೆ. ಆದ್ದರಿಂದ ಸೋಮಾರಿತನವನ್ನು ಬಿಟ್ಟು ಯೌವನದ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ. ಇದು ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.

    ಇದನ್ನೂ ಓದಿ: ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು

    ನಿಮ್ಮ ಭಯದಿಂದ ದೂರ ಓಡುವುದು: ಕೆಲವರು ಭಯದಿಂದಾಗಿ ತಾವು ಅಂದುಕೊಂಡ ಕಾರ್ಯವನ್ನು ಮಾಡಲು ಹಿಂದೇಟು ಹಾಕುತ್ತಾರೆ. ಹೌದು ನಾನು ಈ ಬಿಸಿನೆಸ್‌ ಮಾಡಿ ನಷ್ಟ ಅನುಭವಿಸಿದರೆ ಏನು ಮಾಡೋದು ಎಂದ ಭಯದಿಂದ ಅನೇಕರು ತಮ್ಮ ಕನಸಿಗೆ ಮುನ್ನುಡಿ ಬರೆಯಲು ಹಿಂದೇಟು ಹಾಕುತ್ತಾರೆ. ಈ ಭಯವಿದ್ದರೆ ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಯುವಕರು ಭಯವನ್ನು ಬಿಟ್ಟು ಮುನ್ನಡೆಯಬೇಕು. ಅಪಾಯಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಬರುವ ಎಂತಹದ್ದೇ ಕಷ್ಟಗಳನ್ನು ಎದುರಿಸಲು ಸಾಧ್ಯ.

    ಸಮಯವನ್ನು ದುರುಪಯೋಗಪಡಿಸುವುದು: ಸಮಯಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ. ಅದರಲ್ಲೂ ಯೌವನದ ಪ್ರಾಯದಲ್ಲಿ ಮೋಜು, ಮಸ್ತಿ ಎಂದು ಸಮಯ ಕಳೆಯುತ್ತಾ ಭವಿಷ್ಯಕ್ಕಾಗಿ ಕೆಲಸ ಮಾಡದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಯುವಕರು ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು, ತಮ್ಮ ಕಾರ್ಯಗಳತ್ತ ಗಮನವನ್ನು ಹರಿಸಬೇಕು.

    ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    Nag Panchami 2026: ಆಗಸ್ಟ್ 17 ನಾಗರ ಪಂಚಮಿ; ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ – Kannada News | Nag Panchami 2026: Rituals, Significance and Kaalsarpa Dosha Remedies for Blessings

    ಹಿಂದೂ ಧರ್ಮದಲ್ಲಿ ಪ್ರಕೃತಿ ಮತ್ತು ಜೀವರಾಶಿಗಳನ್ನು ದೇವರೆಂದು ಪೂಜಿಸುವ ಶ್ರೇಷ್ಠ ಸಂಪ್ರದಾಯವಿದೆ. ಅದರಲ್ಲಿಯೂ ಶ್ರಾವಣ ಮಾಸದಲ್ಲಿ ಬರುವ ನಾಗ ಪಂಚಮಿ ಹಬ್ಬವು ಸರ್ಪ ದೇವರಿಗೆ ಅರ್ಪಿತವಾದ ಅತ್ಯಂತ ಪವಿತ್ರವಾದ ದಿನವಾಗಿದೆ. ವೈದಿಕ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಈ ಹಬ್ಬವನ್ನು ದೇಶಾದ್ಯಂತ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವತೆಯನ್ನು ಪೂಜಿಸುವುದರಿಂದ ಶಿವ ಮತ್ತು ವಿಷ್ಣುವಿನ ಕೃಪೆ ಲಭಿಸುವುದಲ್ಲದೆ, ಜಾತಕದಲ್ಲಿರುವ ಪ್ರಮುಖ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

    ನಾಗ ಪಂಚಮಿ ಹಬ್ಬದ ಧಾರ್ಮಿಕ ಮಹತ್ವ:

    ಪ್ರಸಿದ್ಧ ಜ್ಯೋತಿಷಿ ಚಂದ್ರಶೇಖರ ಶರ್ಮಾ ಅವರ ಪ್ರಕಾರ, ನಾಗ ಪಂಚಮಿಯ ದಿನದಂದು ನಾಗ ದೇವತೆಗಳನ್ನು ಆರಾಧಿಸುವುದರಿಂದ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ತಲುಪುತ್ತದೆ. ವಿಶೇಷವಾಗಿ ಜಾತಕದಲ್ಲಿ ಕಾಳಸರ್ಪ ದೋಷ ಅಥವಾ ರಾಹು-ಕೇತು ಗ್ರಹಗಳ ದುಷ್ಪರಿಣಾಮ ಎದುರಿಸುತ್ತಿರುವವರಿಗೆ ಈ ದಿನ ಅತ್ಯಂತ ಫಲದಾಯಕವಾಗಿದೆ. ಈ ಪವಿತ್ರ ದಿನದಂದು ಸೂಕ್ತ ಧಾರ್ಮಿಕ ನಿಯಮಗಳನ್ನು ಪಾಲಿಸಿ ಪೂಜೆ ಸಲ್ಲಿಸುವುದರಿಂದ ಸರ್ಪ ಭಯ ನಿವಾರಣೆಯಾಗಿ, ಕುಟುಂಬದಲ್ಲಿ ಅಭಿವೃದ್ಧಿ ಉಂಟಾಗುತ್ತದೆ.

    ನಾಗ ಪಂಚಮಿಯಂದು ತಪ್ಪದೇ ಏನು ಮಾಡಬೇಕು?

    ನಾಗ ಪಂಚಮಿಯ ದಿನದಂದು ಕೆಲವು ಮುಖ್ಯವಾದ ಧಾರ್ಮಿಕ ವಿಧಿ-ವಿಧಾನಗಳನ್ನು ಪಾಲಿಸುವುದರಿಂದ ಸಂಪೂರ್ಣ ಪೂಜಾ ಫಲ ಲಭಿಸುತ್ತದೆ.

    • ದ್ವಾರ ಪೂಜೆ ಮತ್ತು ನಾಗರ ಆಕೃತಿ: ಮನೆಯ ಮುಖ್ಯ ಬಾಗಿಲಿನಲ್ಲಿ ಹಸುವಿನ ಸಗಣಿ, ಅರಿಶಿನ ಅಥವಾ ಗಂಧದಿಂದ ಹಾವಿನ ಆಕೃತಿಯನ್ನು ಬಿಡಿಸಿ ಪೂಜಿಸಬೇಕು. ಅಥವಾ ತಾಮ್ರ ಮತ್ತು ಬೆಳ್ಳಿಯಿಂದ ಮಾಡಿದ ನಾಗರ ವಿಗ್ರಹಗಳನ್ನು ತಂದು ಪೂಜಿಸುವುದು ಶ್ರೇಷ್ಠ.
    • ಶಿವ ಪೂಜೆ ಮತ್ತು ಮಂತ್ರ ಜಪ: ಶಿವಲಿಂಗಕ್ಕೆ ನೀರು, ಹಾಲು ಹಾಗೂ ಬಿಲ್ವಪತ್ರೆಯನ್ನು ಅರ್ಪಿಸಿ. ಪೂಜೆಯ ಸಮಯದಲ್ಲಿ “ಓಂ ನಮಃ ಶಿವಾಯ” ಅಥವಾ “ಓಂ ನಾಗದೇವತಾಯ ನಮಃ” ಮಂತ್ರಗಳನ್ನು ಭಕ್ತಿಯಿಂದ ಜಪಿಸಿ.
    • ಕಾಳಸರ್ಪ ದೋಷ ಪರಿಹಾರ: ಕಾಲಸರ್ಪ ದೋಷವಿರುವವರು ಈ ದಿನ ರುದ್ರಾಭಿಷೇಕ ನೆರವೇರಿಸಿ, ಪ್ರವಾಹಿ ನೀರಿನಲ್ಲಿ ಜೋಡಿ ನಾಗರ ಪ್ರತಿಮೆಯನ್ನು ವಿಸರ್ಜಿಸುವುದು ದೋಷ ನಿವಾರಣೆಗೆ ಉತ್ತಮ ಪರಿಹಾರವಾಗಿದೆ.
    • ದಾನ ಧರ್ಮ: ಪೂಜೆಯ ನಂತರ ನಿರ್ಗತಿಕರಿಗೆ ಹಾಗೂ ಬ್ರಾಹ್ಮಣರಿಗೆ ಅಕ್ಕಿ, ಹಾಲು, ಸಿಹಿತಿಂಡಿ ಮತ್ತು ವಸ್ತ್ರಗಳನ್ನು ದಾನ ಮಾಡುವುದು ಅತ್ಯಂತ ಪುಣ್ಯದಾಯಕ.

    ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

    ನಾಗ ಪಂಚಮಿಯಂದು ಏನು ಮಾಡಬಾರದು?

    ಶಾಸ್ತ್ರಗಳ ಪ್ರಕಾರ, ನಾಗ ಪಂಚಮಿಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಮೀರಿದರೆ ಅಶುಭ ಫಲಗಳು ಎದುರಾಗಬಹುದು:

    • ಭೂಮಿ ಅಗೆಯುವುದು ನಿಷಿದ್ಧ: ಈ ದಿನ ಹೊಲಗಳನ್ನು ಉಳುಮೆ ಮಾಡುವುದು, ಮಣ್ಣು ಅಗೆಯುವುದು ಅಥವಾ ಕಟ್ಟಡದ ಅಡಿಪಾಯ ಹಾಕುವುದು ಮಾಡಬಾರದು. ಮಣ್ಣಿನ ಅಡಿಯಲ್ಲಿ ಅಡಗಿರುವ ಕ್ರಿಮಿಕೀಟ ಹಾಗೂ ಹಾವುಗಳಿಗೆ ಹಾನಿಯಾಗಬಾರದು ಎಂಬುದು ಇದರ ಮುಖ್ಯ ಉದ್ದೇಶ.
    • ಜೀವಂತ ಹಾವಿಗೆ ಹಾಲು ನೀಡಬೇಡಿ: ಪ್ರಕೃತಿ ನಿಯಮದಂತೆ ಹಾವುಗಳು ಹಾಲು ಕುಡಿಯುವುದಿಲ್ಲ. ಜೀವಂತ ಹಾವಿಗೆ ಬಲವಂತವಾಗಿ ಹಾಲು ನೀಡುವುದು ಅವುಗಳ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಆದ್ದರಿಂದ ಕೇವಲ ಶಿವಲಿಂಗ, ವಿಗ್ರಹ ಅಥವಾ ಚಿತ್ರಕ್ಕೆ ಸಾಂಕೇತಿಕವಾಗಿ ಮಾತ್ರ ಹಾಲು ಅರ್ಪಿಸಿ.
    • ಚೂಪಾದ ವಸ್ತುಗಳ ಬಳಕೆಯಿಂದ ದೂರವಿರಿ: ನಾಗ ಪಂಚಮಿಯ ದಿನ ಸೂಜಿ, ದಾರ, ಕತ್ತರಿ ಹಾಗೂ ಚಾಕುವಿನಂತಹ ಚೂಪಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು.
    • ಕಬ್ಬಿಣದ ಪಾತ್ರೆಗಳ ಬಳಕೆ ನಿಷೇಧ: ಅನೇಕ ಕಡೆಗಳಲ್ಲಿ ಈ ದಿನ ಒಲೆಯ ಮೇಲೆ ಕಬ್ಬಿಣದ ಹರಿವಾಣ (ತವಾ) ಅಥವಾ ಬಾಂಡಲಿಯನ್ನು ಇಟ್ಟು ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ.

    ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

    Source link

    Independence Day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಮತ್ತು ಮಹತ್ವ – Kannada News | Indian Independence Day; Know About Date, Importance and History of Freedom Struggle in Kannada

    ಸ್ವಾತಂತ್ರ್ಯ ದಿನಾಚರಣೆImage Credit source: PTI

    ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ(Independence Day)ಯನ್ನು ಆಚರಿಸುತ್ತದೆ. 1947ರ ಆಗಸ್ಟ್ 15ರಂದು ಸುಮಾರು ಎರಡು ಶತಮಾನಗಳ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದು ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗ ಮತ್ತು ಹೋರಾಟವನ್ನು ಸ್ಮರಿಸುವ ಈ ದಿನಂದು ದೇಶಾದ್ಯಂತ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರಧ್ವಜ ಹಾರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡುವುದು ಸ್ವಾತಂತ್ರ್ಯ ದಿನದ ಪ್ರಮುಖ ಆಚರಣೆಯಾಗಿದೆ.

    ಸ್ವಾತಂತ್ರ್ಯ ದಿನದ ಮಹತ್ವವೇನು?

    1947ರ ಆಗಸ್ಟ್ 15ರಂದು ಭಾರತ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹಾಗೂ ಬಳಿಕ ಬ್ರಿಟಿಷ್ ಸಾಮ್ರಾಜ್ಯದ ವಸಾಹತುಶಾಹಿ ಆಡಳಿತದಿಂದ ಮುಕ್ತವಾಯಿತು. ಹೀಗಾಗಿ ಈ ದಿನವು ದೇಶದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಹೋರಾಟಗಾರರನ್ನು ಈ ದಿನದಂದು ದೇಶ ಸ್ಮರಿಸುತ್ತದೆ.

    ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಲು ಇಲ್ಲಿವೆ ಸಂದೇಶಗಳು

    ಬ್ರಿಟಿಷರ ಆಳ್ವಿಕೆ ಹೇಗೆ ಆರಂಭವಾಯಿತು?

    ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕ್ರಮೇಣ ದೇಶದ ರಾಜಕೀಯ ಮತ್ತು ಆಡಳಿತದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿತು. ವಿವಿಧ ಯುದ್ಧಗಳು ಮತ್ತು ರಾಜಕೀಯ ತಂತ್ರಗಳ ಮೂಲಕ ಭಾರತದ ಹಲವು ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿತು. ನಂತರ ಬ್ರಿಟಿಷ್ ಕ್ರೌನ್ ನೇರವಾಗಿ ಭಾರತದ ಆಡಳಿತವನ್ನು ವಹಿಸಿಕೊಂಡು ವಸಾಹತುಶಾಹಿ ಆಡಳಿತವನ್ನು ಮುಂದುವರಿಸಿತು.

    1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

    ಬ್ರಿಟಿಷರ ಆಡಳಿತದ ವಿರುದ್ಧ 1857ರಲ್ಲಿ ನಡೆದ ಸಶಸ್ತ್ರ ದಂಗೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮಂಗಲ್ ಪಾಂಡೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವರು ಬ್ರಿಟಿಷರ ವಿರುದ್ಧ ಹೋರಾಡಿದರು. ಈ ಹೋರಾಟವು ದೇಶದ ವಿವಿಧ ಭಾಗಗಳಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಅಸಮಾಧಾನ ಮತ್ತು ಪ್ರತಿರೋಧಕ್ಕೆ ಹೊಸ ದಿಕ್ಕು ನೀಡಿತು.

    ಗಾಂಧೀಜಿಯವರ ಅಹಿಂಸಾ ಹೋರಾಟ

    20ನೇ ಶತಮಾನದಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಹೊಸ ರೂಪ ದೊರೆಯಿತು. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಆಡಳಿತವನ್ನು ವಿರೋಧಿಸುವ ಚಳುವಳಿಗಳು ದೇಶಾದ್ಯಂತ ವ್ಯಾಪಿಸಿದವು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿಗಳು ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳಾಗಿವೆ. ಈ ಚಳುವಳಿಗಳ ಮೂಲಕ ಲಕ್ಷಾಂತರ ಭಾರತೀಯರು ಬ್ರಿಟಿಷರ ವಿರುದ್ಧ ಒಗ್ಗೂಡಿದರು.

    ಕ್ರಾಂತಿಕಾರಿಗಳ ಕೊಡುಗೆ

    ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ಚಳುವಳಿಗಳ ಜೊತೆಗೆ ಕ್ರಾಂತಿಕಾರಿಗಳ ಹೋರಾಟವೂ ಪ್ರಮುಖ ಪಾತ್ರ ವಹಿಸಿತು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಮತ್ತು ಲಾಲಾ ಲಜಪತ್ ರಾಯ್ ಸೇರಿದಂತೆ ಅನೇಕ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿದರು. ವಿಶೇಷವಾಗಿ ಯುವಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಕ್ರಾಂತಿಕಾರಿಗಳ ಹೋರಾಟ ಮಹತ್ವದ ಪಾತ್ರ ವಹಿಸಿತು. ಅನೇಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.

    ಆಗಸ್ಟ್ 15ರಂದೇ ಸ್ವಾತಂತ್ರ್ಯ ಏಕೆ?

    ಭಾರತಕ್ಕೆ ಸ್ವಾತಂತ್ರ್ಯ ನೀಡುವ ಯೋಜನೆಯನ್ನು ಬ್ರಿಟಿಷ್ ಸರ್ಕಾರದ ಪರವಾಗಿ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು 1947ರ ಜೂನ್ 3ರಂದು ಘೋಷಿಸಿದರು. ಭಾರತ ವಿಭಜನೆಯೊಂದಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮದ ಜೊತೆಗೆ, ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 15, 1947ರ ದಿನಾಂಕವನ್ನು ಆಯ್ಕೆ ಮಾಡಲಾಯಿತು. ಮೌಂಟ್‌ಬ್ಯಾಟನ್ ಅವರು 1945ರ ಆಗಸ್ಟ್ 15ರಂದು ಜಪಾನ್ ಮಿತ್ರರಾಷ್ಟ್ರಗಳಿಗೆ ಶರಣಾದ ದಿನವನ್ನು ತಮ್ಮ ಸೇನಾ ಸೇವೆಯ ಪ್ರಮುಖ ಘಟನೆಯಾಗಿ ಪರಿಗಣಿಸಿದ್ದರು. ಇದೇ ದಿನಾಂಕದೊಂದಿಗೆ ಸಂಬಂಧ ಹೊಂದಿದ್ದರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಆಗಸ್ಟ್ 15ರ ದಿನವನ್ನು ಆಯ್ಕೆ ಮಾಡಲಾಯಿತು ಎಂಬುದು ಇತಿಹಾಸ.

    ಸ್ವಾತಂತ್ರ್ಯ ದಿನವು ಕೇವಲ ರಾಷ್ಟ್ರೀಯ ರಜಾದಿನವಲ್ಲ. ಇದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಮತ್ತು ರಾಷ್ಟ್ರದ ಏಕತೆ, ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪುನರುಚ್ಚರಿಸುವ ದಿನವಾಗಿದೆ.

    ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

    Source link

    ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು… – Kannada News | HCL 50 years, co founder Ajai Chowdhry shares inspirational story of the company’s journey

    ಎಚ್​ಸಿಎಲ್​ನ ಆರು ಸಂಸ್ಥಾಪಕರುImage Credit source: X user @AjaiChowdhry

    ನವದೆಹಲಿ, ಆಗಸ್ಟ್ 12: ಎಚ್​ಸಿಎಲ್ ಇವತ್ತು ಭಾರತದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದು. ಭಾರತದಲ್ಲಿ ಮೊದಲು ಕಂಪ್ಯೂಟರ್ ತಯಾರಿಸಿದ ಕಂಪನಿಗಳಲ್ಲಿ ಒಂದು. ಲಕ್ಷಾಂತರ ಕೋಟಿ ರೂ ಮೌಲ್ಯದ ಕಂಪನಿ ಎನಿಸಿದೆ. ಈ ಕಂಪನಿ ಶುರುವಾಗಿ 50 ವರ್ಷ ಗತಿಸಿದೆ. ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿ ಬೆಳೆದು ನಿಂತಿರುವ ಎಚ್‌ಸಿಎಲ್ (HCL) ಕೇವಲ ₹1.87 ಲಕ್ಷದ ಬಂಡವಾಳದಲ್ಲಿ ಆರಂಭವಾಗಿತ್ತು ಎಂಬ ಸತ್ಯ ಬಹಳ ಮಂದಿಗೆ ತಿಳಿದಿಲ್ಲ. ಕಂಪನಿಯ 50 ವರ್ಷದ ಸಂಭ್ರಮದ ಸಂದರ್ಭದಲ್ಲಿ ಈ ಐತಿಹಾಸಿಕ ಪಯಣವನ್ನು ಎಚ್‌ಸಿಎಲ್ ಸಹ-ಸಂಸ್ಥಾಪಕರಾದ ಅಜಯ್ ಚೌಧರಿ ಅವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೆಲಸಕ್ಕೆ ರಾಜೀನಾಮೆ, ಕಾರ್ ಮಾರಾಟ ಮತ್ತು ಆ ಹುಚ್ಚು ಧೈರ್ಯ

    1976 ರಲ್ಲಿ ಕಂಪನಿಯನ್ನು ಆರಂಭಿಸಿದ ದಿನಗಳನ್ನು ನೆನಪಿಸಿಕೊಂಡ ಅಜಯ್ ಚೌಧರಿ, “ನಾವು ಆರು ಜನ ಇದ್ದೆವು—ಶಿವ್ ನಾಡಾರ್, ಅರ್ಜುನ್ ಮಲ್ಹೋತ್ರಾ, ಯೋಗೇಶ್ ವೈದ್ಯ, ಸುಭಾಷ್ ಅರೋರಾ, ಡಿ.ಎಸ್. ಪುರಿ ಮತ್ತು ನಾನು. ನಾವೆಲ್ಲರೂ ನಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದೆವು,” ಎಂದಿದ್ದಾರೆ.

    ಅಜಯ್ ಚೌಧರಿ ಹಂಚಿಕೊಂಡ ಪೋಸ್ಟ್ ಇದು

    ಆ ಸಮಯದಲ್ಲಿ ಭಾರತದಲ್ಲಿ ‘ಸ್ಟಾರ್ಟ್‌ಅಪ್’ ಅಥವಾ ‘ವೆಂಚರ್ ಕ್ಯಾಪಿಟಲ್’ ಎಂಬ ಪರಿಕಲ್ಪನೆಗಳೇ ಇರಲಿಲ್ಲ. ಆಸ್ತಿ ಪತ್ರಗಳಿರದ ಯುವಕರಿಗೆ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತಿರಲಿಲ್ಲ. ಕಂಪ್ಯೂಟರ್ ಅಂದರೆ ಏನು ಎಂದೇ ಹೆಚ್ಚಿನ ಜನರಿಗೆ ತಿಳಿದಿರದ ಆ ಕಾಲದಲ್ಲಿ, ಮೈಕ್ರೋಪ್ರೊಸೆಸರ್ ಜಗತ್ತನ್ನೇ ಬದಲಾಯಿಸಲಿದೆ ಎಂಬ ನಂಬಿಕೆಯಿಂದ ಈ ಆರು ಜನ ಯುವಕರು ತಮಗಿದ್ದ ಉಳಿತಾಯದ ಹಣ, ಸಾಲ ಹಾಗೂ ಒಬ್ಬರ ಕಾರನ್ನು ಮಾರಿ ಒಟ್ಟುಗೂಡಿಸಿದ್ದು ₹1.87 ಲಕ್ಷ!

    ಇದನ್ನೂ ಓದಿ: ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ

    ದೆಹಲಿಯ ‘ಗೋಲ್ಫ್ ಲಿಂಕ್ಸ್’ ಪ್ರದೇಶದಲ್ಲಿದ್ದ ಒಂದು ಸಣ್ಣ ‘ಬಾರ್ಸಾತಿ’ (ಟೆರೇಸ್ ಕೊಠಡಿ) ಅವರ ಮೊದಲ ಕಚೇರಿಯಾಗಿತ್ತು. ಆಗ ಅವರ ಕಂಪನಿಯ ಹೆಸರು ‘ಮೈಕ್ರೋಕಾಂಪ್’ (Microcomp) ಆಗಿತ್ತು.

    ಕಂಪ್ಯೂಟರ್ ಸಿದ್ದಗೊಳ್ಳುವ ಮುನ್ನವೇ ಮಾರಾಟಕ್ಕೆ ಧೈರ್ಯ

    ತಮ್ಮ ಕಥೆಯ ಅತ್ಯಂತ ಸಾಹಸಮಯ ಭಾಗವನ್ನು ಹಂಚಿಕೊಂಡ ಚೌಧರಿ, “ಇನ್ನೂ ವಿನ್ಯಾಸ ಹಂತದಲ್ಲೇ ಇದ್ದ ಕಂಪ್ಯೂಟರ್ ಅನ್ನು ನಾವು ಮಾರಾಟ ಮಾಡಲು ಶುರು ಮಾಡಿದೆವು! ನಮ್ಮ ಬಳಿ ಕೇವಲ ಒಂದು ಬ್ರೋಷರ್ ಮತ್ತು ಕಂಪ್ಯೂಟರ್‌ನ ಒಂದು ಮಾದರಿ (Mock-up) ಇತ್ತು. ನಮ್ಮ ಮಾರಾಟ ಸಿಬ್ಬಂದಿ ಭಾರತದಾದ್ಯಂತ ಪ್ರತಿಯೊಂದು ಬಾಗಿಲು ತಟ್ಟಿ, ತಾವು ಎಂದಿಗೂ ಬಳಸದ ತಂತ್ರಜ್ಞಾನವನ್ನು ನಂಬಿ ಖರೀದಿಸುವಂತೆ ಉದ್ಯಮಿಗಳನ್ನು ಒಪ್ಪಿಸುತ್ತಿದ್ದರು,” ಎಂದು ಬರೆದುಕೊಂಡಿದ್ದಾರೆ. ಒಂದೆರಡು ಐಐಟಿಯಿಂದ ಪೂರಕ ಸ್ಪಂದನೆ ಸಿಕ್ಕಿತಂತೆ. ಆರ್ಡರ್ ಸಿಕ್ಕ ಬಳಿಕ ಮುಂದಿನ ಸವಾಲು ಇದ್ದದ್ದು ಕಂಪ್ಯೂಟರ್ ಅನ್ನು ತಯಾರಿಸುವ ಕೆಲಸ.

    ಇವರ ಬಳಿ ಕಂಪ್ಯೂಟರ್ ತಯಾರಿಕೆಗೆ ಅಗತ್ಯವಿದ್ದ ಲೈಸೆನ್ಸ್ ಇರಲಿಲ್ಲ. ಆಗ ಇವರು ಹೋಗಿದ್ದ ‘ಯುಪಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್’ ಬಳಿ. ಆ ಸಂಸ್ಥೆಗೆ ಲೈಸೆನ್ಸ್ ಇತ್ತು, ಇವರ ಬಳಿ ತಂತ್ರಜ್ಞಾನ ಇತ್ತು. ಹೀಗೆ, ಈ ಎರಡು ಕಂಪನಿಗಳು ಸೇರಿ HCL (Hindustan Computers Limited) ಜನಿಸಿತು. ಐಐಟಿ ಖರಗ್‌ಪುರ ಮತ್ತು ಐಐಟಿ ಮದ್ರಾಸ್ ಸಂಸ್ಥೆಗಳಿಂದ ಎಚ್‌ಸಿಎಲ್‌ಗೆ ಮೊದಲ ಆರ್ಡರ್‌ಗಳು ಬಂದವು.

    ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

    50 ವರ್ಷಗಳ ಕನಸಿನ ಹಾದಿ

    ಸಣ್ಣ ಕೊಠಡಿಯಿಂದ ಆರಂಭವಾದ ಎಚ್‌ಸಿಎಲ್, ಕೇವಲ 4 ವರ್ಷಗಳಲ್ಲಿ ಸಿಂಗಾಪುರಕ್ಕೂ ಕಾಲಿಟ್ಟು ಬೆಳೆಯಿತು.

    “50 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, 1976 ರಲ್ಲಿ ಕುಳಿತಿದ್ದ ಆ ಆರು ಜನರ ‘ಈ ಹುಚ್ಚು ಕಲ್ಪನೆ ನಿಜವಾಗಲು ಸಾಧ್ಯವೇ?’ ಎಂಬ ಪ್ರಶ್ನೆ ನೆನಪಾಗುತ್ತದೆ. ದೊಡ್ಡ ಬ್ರಾಂಡ್, ದೊಡ್ಡ ಬ್ಯಾಲೆನ್ಸ್ ಶೀಟ್ ಇಲ್ಲದಿದ್ದರೂ ಹಾದಿ ಕಂಡುಕೊಳ್ಳುವ ನಮ್ಮ ಛಲವೇ ಎಚ್‌ಸಿಎಲ್‌ನ ನಿಜವಾದ ಕಥೆ,” ಎಂದು ಅಜಯ್ ಚೌಧರಿ ಭಾವನಾತ್ಮಕವಾಗಿ ಬರೆದಿದ್ದಾರೆ.

    “ದೊಡ್ಡ ಕನಸು ಕಾಣಿ, ರಿಸ್ಕ್ ತೆಗೆದುಕೊಳ್ಳಿ ಮತ್ತು ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ” ಎಂಬ ಸಂದೇಶದೊಂದಿಗೆ ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.

    ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

    Source link

    ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ: ಯುವಜನತೆಗೆ ಪ್ರೇರಣೆ ಎಂದ ಪ್ರಧಾನಿ ಮೋದಿ – Kannada News | Pm modi unveils ram nath kovinds autobiography an inspiring journey to presidency

    ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ

    ದೆಹಲಿ, ಆ.12: ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌ನಾಥ್ ಕೋವಿಂದ್ ಅವರ ಜೀವನಾಧಾರಿತ ಆತ್ಮಕಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಆ.12) ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾನ್‌ಪುರ ದೇಹತ್‌ನ ಸಾಧಾರಣ ಕುಟುಂಬದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದ ರಾಮ್‌ನಾಥ್ ಕೋವಿಂದ್ ಅವರ ಜೀವನ ಯಾನವು ಭಾರತದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು. ಅಲ್ಲದೆ, ಕೋವಿಂದ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಈ ಪುಸ್ತಕಕ್ಕೆ ಇಡಲಾಗಿರುವ ಶೀರ್ಷಿಕೆ ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಾಮ್‌ನಾಥ್ ಕೋವಿಂದ್ ಅವರ ಬಾಲ್ಯದ ದಿನಗಳನ್ನು ಸ್ಮರಿಸಿದ ಪ್ರಧಾನಿ ಮೋದಿ:

    “ಕೋವಿಂದ್ ಜಿ ಅವರ ಜೀವನವನ್ನು ಒಮ್ಮೆ ಗಮನಿಸಿ. ಅವರು ಕಾನ್‌ಪುರ ದೇಹತ್‌ನ ತೀರಾ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ಇಂತಹ ಆಘಾತಕಾರಿ ಘಟನೆಯಿಂದ ಯಾರು ಬೇಕಾದರೂ ಕುಗ್ಗಿಹೋಗಬಹುದು. ಆದರೆ, ಕೋವಿಂದ್ ಅವರು ಈ ನೋವಿನಿಂದಲೇ ಇನ್ನಷ್ಟು ಬಲಶಾಲಿಯಾಗಿ ಬೆಳೆದರು” ಎಂದು ಹೇಳಿದರು. ಈ ಹಂತದಲ್ಲಿ ಕೋವಿಂದ್ ಅವರ ತಂದೆ ಅವರ ಜೀವನವನ್ನು ರೂಪಿಸುವಲ್ಲಿ ವಹಿಸಿದ ಪಾತ್ರವನ್ನು ಪ್ರಧಾನಿ ವಿಶೇಷವಾಗಿ ನೆನಪಿಸಿಕೊಂಡರು.

    ಇಲ್ಲಿದೆ ನೋಡಿ ವಿಡಿಯೋ:

    ದೇಶದ ಪ್ರಥಮ ಪ್ರಜೆಯಾದ ಮೇಲೆಯೂ ರಾಮ್‌ನಾಥ್ ಕೋವಿಂದ್ ಅವರು ಕಾಪಾಡಿಕೊಂಡ ಸರಳತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. “ಭಾರತದಂತಹ ಬೃಹತ್ ದೇಶದ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಕೋವಿಂದ್ ಜಿ ಎಂದಿಗೂ ತಮ್ಮ ಮೂಲವನ್ನು ಮರೆಯಲಿಲ್ಲ, ಅತ್ಯಂತ ವಿನಮ್ರವಾಗಿ ಉಳಿದುಕೊಂಡರು.” ಎಂದರು. ಈ ಆತ್ಮಕಥೆಯು ದೇಶದ ಯುವಸಮುದಾಯಕ್ಕೆ ಜೀವನದ ಮೌಲ್ಯಯುತ ಪಾಠಗಳನ್ನು ಹಾಗೂ ಕಠಿಣ ಪರಿಶ್ರಮಕ್ಕೆ ಸ್ಪೂರ್ತಿಯನ್ನು ನೀಡಲಿದೆ ಎಂದು ಪ್ರಧಾನಿ ಹೇಳಿದರು.

    ಇದನ್ನೂ ಓದಿ: ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ಪ್ರಧಾನಿ ಮೋದಿ

    ರಾಮ್‌ನಾಥ್ ಕೋವಿಂದ್ ಹಿನ್ನಲೆ:

    ಅಕ್ಟೋಬರ್ 1, 1945 ರಂದು ಉತ್ತರ ಪ್ರದೇಶದ ಕಾನ್‌ಪುರ ದೇಹತ್ ಜಿಲ್ಲೆಯ ಪರಾಉಂಖ್ ಗ್ರಾಮದಲ್ಲಿ ಜನಿಸಿದರು. ವಾಣಿಜ್ಯ ಮತ್ತು ಕಾನೂನು ವ್ಯಾಸಂಗ ಮುಗಿಸಿ, ಸಾರ್ವಜನಿಕ ಜೀವನಕ್ಕೆ ಬರುವ ಮೊದಲು ವಕೀಲರಾಗಿ ಸೇವೆ ಸಲ್ಲಿಸಿದರು. ರಾಜ್ಯಸಭಾ ಸಂಸದರಾಗಿ, ಬಳಿಕ ಬಿಹಾರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದರು. 2017 ರಿಂದ 2022 ರವರೆಗೆ ಭಾರತದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

    ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    Exit mobile version