ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು, ಓರ್ವ ಸಾವು

ರುದ್ರಪ್ರಯಾಗ, ಮೇ 22: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಸೋನ್‌ಪ್ರಯಾಗ (Sonprayag) ಪ್ರದೇಶದ ಹನುಮಾನ್ ಬ್ಯಾರಿಯರ್ ಬಳಿ ಇಂದು ಬೆಳಿಗ್ಗೆ ಬೆಟ್ಟದ ಇಳಿಜಾರಿನಿಂದ ಬಂಡೆಗಳು ಮತ್ತು ಕಲ್ಲುಗಳು ಇದ್ದಕ್ಕಿದ್ದಂತೆ ಬಿದ್ದು ಇಬ್ಬರು ಸಿಲುಕಿಕೊಂಡ ನಂತರ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಿಸಿ ಚಿಕಿತ್ಸೆಗಾಗಿ ಸೋನ್‌ಪ್ರಯಾಗದ ಎಂಆರ್‌ಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ವೈದ್ಯಕೀಯ ಆರೈಕೆಯ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs RCB: 3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್ – Kannada News | Abhishek Sharma’s Lucky Fifty: RCB Drops 3 Catches vs SRH in Hyderabad IPL Match

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್‌ ಮಾಡಿತು. ಅದರಂತೆ ತಂಡದ ಆರಂಭಿಕರಾದ ಟ್ರಾವಿಡ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್​ಗೆ 45 ರನ್​ಗಳ ಜೊತೆಯಾಟ ನೀಡಿದರು. ಹೆಡ್ ವಿಕೆಟ್ ಪತನದೊಂದಿಗೆ ಇವರಿಬ್ಬರ ಜೊತೆಯಾಟ ಮುರಿದು ಬಿತ್ತು.

ಹೆಡ್ ವಿಕೆಟ್ ಪತನದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಕೂಡ ಔಟಾಗುವುದರಲ್ಲಿದ್ದರು. ಆದರೆ ಆರ್​ಸಿಬಿ ಫೀಲ್ಡರ್​ಗಳ ಕಳಪೆ ಫೀಲ್ಡಿಂಗ್​ನಿಂದ ವಿಕೆಟ್ ಕೈತಪ್ಪಿತು. ಆರ್​ಸಿಬಿ ಅಭಿಷೇಕ್ ಅವರ ಒಟ್ಟು ಮೂರು ಕ್ಯಾಚ್​ಗಳನ್ನು ಕೈಚೆಲ್ಲಿತು. ಇದರ ಲಾಭ ಪಡೆದ ಅಭಿಷೇಕ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಮೊದಲಿಗೆ 6ನೇ ಓವರ್​ನಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ವೆಂಕಟೇಶ್ ಅಯ್ಯರ್ ಕ್ಯಾಚ್ ಬಿಟ್ಟರು. ನಂತರ 7ನೇ ಓವರ್​ನಲ್ಲಿ ಜೋರ್ಡಾನ್ ಕಾಕ್ಸ್ , ಅಭಿಷೇಕ್​ಗೆ 2ನೇ ಜೀವದಾನ ನೀಡಿದರು. 8ನೇ ಓವರ್​ನ ಮೊದಲ ಎಸೆತದಲ್ಲಿ ದೇವದತ್ ಪಡಿಕ್ಕಲ್ ಕೂಡ ಕ್ಯಾಚ್ ಡ್ರಾಪ್ ಮಾಡಿದರು. ಈ ಮೂರು ಜೀವದಾನಗಳ ಲಾಭ ಪಡೆದ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಹತ್ತನೇ ಓವರ್‌ನಲ್ಲಿ ಸುಯಾಶ್‌ ಶರ್ಮಾಗೆ ಬಲಿಯಾದರು.

Source link

ಬಾಯಾರಿಕೆಯಿಂದ ಬಸ್ ಅಡ್ಡಗಟ್ಟಿ ನೀರು ಕುಡಿದ ಕೋತಿಗಳು; ವಿಡಿಯೋ ವೈರಲ್ – Kannada News | Thirsty monkeys blocked bus to drink water in maharashtra video goes viral

ನವದೆಹಲಿ, ಮೇ 22: ಭಾರತದಲ್ಲಿ ಬೇಸಿಗೆಯ ಧಗೆ ಜೋರಾಗಿದೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಶಾಖದ ಮಟ್ಟವು ತುಂಬಾ ತೀವ್ರವಾಗಿದೆ. ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿಟ್ಟರೆ ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗುತ್ತದೆ. ನೀರು ಸಿಗದೆ ಎಷ್ಟೋ ಪಕ್ಷಿಗಳು ಸಾಯುತ್ತಿವೆ. ಮಹಾರಾಷ್ಟ್ರದಲ್ಲಿ ನೀರಿಗಾಗಿ ಸರ್ಕಾರಿ ಬಸ್ ಅನ್ನು ಮಂಗಗಳ (Monkey Video) ಗುಂಪೊಂದು ತಡೆಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ.

ಭಾರತದಲ್ಲಿನ ಹೆಚ್ಚಿನ ತಾಪಮಾನವು ಮನುಷ್ಯರನ್ನು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ಕಾಡುಗಳಲ್ಲಿನ ಜಲಮೂಲಗಳು ಒಣಗುತ್ತಿರುವುದರಿಂದ, ಪ್ರತಿ ವರ್ಷ ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕುತ್ತಾ ಜನರು ವಾಸಿಸುವ ಸ್ಥಳಗಳಿಗೆ ಬರುತ್ತವೆ. ಮಹಾರಾಷ್ಟ್ರದಲ್ಲಿ ಮಂಗಗಳ ಗುಂಪೊಂದು ನೀರಿಗಾಗಿ ಸರ್ಕಾರಿ ಬಸ್‌ನ ದಾರಿಯನ್ನು ತಡೆದ ಘಟನೆಗೆ ಸಂಬಂಧಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೆಲವು ಮಂಗಗಳು ರಸ್ತೆಯಲ್ಲಿ ಕುಳಿತಿವೆ. ಸಾರ್ವಜನಿಕರು ಅವುಗಳಿಗೆ ಕುಡಿಯಲು ನೀರು ನೀಡುತ್ತಿದ್ದಾರೆ. ತುಂಬಾ ಬಾಯಾರಿಕೆಯಾಗಿರುವ ಮಂಗಗಳು ನೀರನ್ನು ಕಸಿದುಕೊಂಡು ಕುಡಿಯುತ್ತಿವೆ. ಇದೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ.

ನೀರಿಗಾಗಿ ಬಸ್ಸನ್ನು ತಡೆದ ಮಂಗಗಳು, ನೀರು ಕುಡಿದು ಬಾಯಾರಿಕೆ ತಣಿಸಿಕೊಂಡ ನಂತರವೇ ಬಸ್ಸಿಗೆ ದಾರಿ ಮಾಡಿಕೊಟ್ಟವು. ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ತ್ವಿಶಾ ಶರ್ಮಾ ಕೇಸ್​​ಗೆ ಟ್ವಿಸ್ಟ್, ಅಶೋಕ್​​ಗಿಲ್ಲ ಸೂರು​​, ಕಾಕ್ರೋಚ್ ಪಾರ್ಟಿಗೆ ಬ್ರೇಕ್: ಈ ಹೊತ್ತಿನ ಮುಖ್ಯ ಸುದ್ದಿಗಳು – Kannada News | TV9 Kannada News Live: Twist in Twisha Sharma Case; No House for Ashok, Setback for Cockroach Party

ತ್ವಿಶಾ ಶರ್ಮಾ, ಆರ್​ ಅಶೋಕ್​​, ಕಾಕ್ರೋಚ್ ಪಾರ್ಟಿImage Credit source: tv9 kannada

ಬೆಂಗಳೂರು, ಮೇ 22: ಮಾಡೆಲ್ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣಕ್ಕೆ (Twisha Sharmas death case) ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಆಕೆಯ ಪತಿ ಸಮರ್ಥ್ ಸಿಂಗ್ ಜಬಲ್ಪುರ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ. ತ್ವಿಶಾ ನಿಗೂಢ ಸಾವಿನ ಬಳಿಕ ಆಕೆಯ ಕುಟುಂಬಸ್ಥರು ಸಮರ್ಥ್ ಮತ್ತು ಆತನ ಕುಟುಂಬಸ್ತರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆಯ ಗಂಭೀರ ಆರೋಪ ಮಾಡಿದ್ದರು. ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು. ನಿರೀಕ್ಷಣಾ ಜಾಮೀನು ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾದ ಕಾರಣ ಸಮರ್ಥ್ ಸಿಂಗ್ ಜಬಲ್ಪುರದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಈ ಹೈಪ್ರೊಫೈಲ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).

ನನಗೆ ಇನ್ನೂ ಸರ್ಕಾರಿ ಬಂಗಲೆ ನೀಡಿಲ್ಲ; ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಹಲವು ತಿಂಗಳು ಕಳೆದಿದ್ದರೂ ತಮಗೆ ಇದುವರೆಗೂ ಅಧಿಕೃತ ಸರ್ಕಾರಿ ಬಂಗಲೆಯನ್ನು ಹಂಚಿಕೆ ಮಾಡದಿರುವ ಕುರಿತು ಮಾಜಿ ಸಚಿವ ಹಾಗೂ ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಯುವ ಜಿಲ್ಲಾಧ್ಯಕ್ಷನಿಂದ ಅಶ್ಲೀಲ ಪದಬಳಕೆ: ಸಿಡಿದೆದ್ದ ಮುಸ್ಲಿಂ ಸಮುದಾಯ; ಬಂಧನಕ್ಕೆ ಡೆಡ್​​​​ಲೈನ್

ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷದ ನಾಯಕರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಮತ್ತು ಸೌಲಭ್ಯಗಳು ಸಿಗಬೇಕು. ಆದರೆ ಸರ್ಕಾರವು ರಾಜಕೀಯ ದ್ವೇಷದಿಂದ ತಮಗೆ ಮನೆ ಹಂಚಿಕೆ ಮಾಡದೆ ಸತಾಯಿಸುತ್ತಿದೆ ಎಂದು ಅವರು ದೂರಿದ್ದಾರೆ. ಬಂಗಲೆ ಹಂಚಿಕೆಯಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಈ ಧೋರಣೆಯು ಸಾಂವಿಧಾನಿಕ ಹುದ್ದೆಗೆ ನೀಡುವ ಗೌರವವೇ ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).

ಬೆಂಗಳೂರಲ್ಲಿ CJP ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ ಬೆಂಗಳೂರು ಪೊಲೀಸರು

ದೇಶದೆಲ್ಲೆಡೆ ಈಗ ಕಾಕ್ರೋಚ್ ಜನತಾ ಪಾರ್ಟಿಯ ಸದ್ಧು ಜೋರಾಗಿದೆ. ಇತ್ತ ರಾಜ್ಯಕ್ಕೂ ಕಾಕ್ರೋಚ್ ಜನತಾ ಪಾರ್ಟಿ ಕಾಲಿಟ್ಟಿದೆ. ಬೆಂಗಳೂರಿನ ಟೌನ್‌ಹಾಲ್ ಬಳಿ ಮೇ 24ರ ಅಂದರೆ ಭಾನುವಾರ ಬೆಳಗ್ಗೆ 11 ಗಂಟೆಗೆ “ಶಾಂತಿಯುತ ಮಾನವ ಸರಪಳಿ” ಕಾರ್ಯಕ್ರಮ ನಡೆಯಲಿದೆ ಎಂಬ ಪೋಸ್ಟ್ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು.

ಇದನ್ನೂ ಓದಿ: Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ಟೌನ್‌ಹಾಲ್ ಬಳಿ ಇಂತಹ ಯಾವುದೇ ಕಾರ್ಯಕ್ರಮ ಆಯೋಜನೆಗೆ ಇದುವರೆಗೆ ಮನವಿ ಬಂದಿಲ್ಲ, ಒಂದು ವೇಳೆ ಮನವಿ ಬಂದರೂ, ಟೌನ್‌ಹಾಲ್ ವ್ಯಾಪ್ತಿಯಲ್ಲಿ ಸಭೆ-ಸಮಾವೇಶಗಳಿಗೆ ಅನುಮತಿ ನೀಡುವುದಿಲ್ಲ ಸ್ಪಷ್ಟಣೆ ನೀಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಇಂತಹ ಸುಳ್ಳು ಅಥವಾ ದೃಢೀಕರಣವಾಗದ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು. ಮೇ 24ರಂದು ಜನರು ಟೌನ್‌ಹಾಲ್ ಬಳಿ ಜಮಾಯಿಸಬಾರದು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).

ನಟ ಮೋಹನ್‌ಲಾಲ್ ಭಾವುಕ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಚಿತ್ರದ ವಿಶೇಷ ಪ್ರದರ್ಶನವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಈ ಸ್ಕ್ರೀನಿಂಗ್ ಮುಗಿಯುತ್ತಿದ್ದಂತೆ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಅದ್ಭುತ ಕಥಾಹಂದರವನ್ನು ಕಂಡು ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರೇಕ್ಷಕರ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು ನಟ ಮೋಹನ್‌ಲಾಲ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೋಹನ್‌ಲಾಲ್ ಅವರು ಭಾವುಕರಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ದಿಢೀರ್ ನಿವೃತ್ತಿ ಘೋಷಿಸಿದ ಆಲ್‌ರೌಂಡರ್ ವಿಜಯ್ ಶಂಕರ್​​​​

ಭಾರತ ತಂಡದ ಮಾಜಿ ಆಲ್‌ರೌಂಡರ್ ವಿಜಯ್ ಶಂಕರ್ ಅವರು ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಗಳಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಜಾಗತಿಕ ಮಟ್ಟದ ಇತರ ಫ್ರಾಂಚೈಸಿ ಲೀಗ್‌ಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಹುಡುಕುವ ಮತ್ತು ಆಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತಮಿಳುನಾಡು ಮೂಲದ 35 ವರ್ಷದ ವಿಜಯ್ ಶಂಕರ್ ಭಾರತ ತಂಡದ ಪರ 12 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಕ್ರೋಚ್ ಜನತಾ ಪಾರ್ಟಿಗೆ ‘ಲಕ್ಷ್ಮಣರೇಖೆ’ ಎಳೆದ ಬೆಂಗಳೂರು ಪೊಲೀಸರು, ಆಗಿದ್ದೇನು? – Kannada News | No Permission Granted: Bengaluru Police Warn Against ‘Cockroach Janta Party Karnataka’ Town Hall Gathering

ಬೆಂಗಳೂರು, (ಮೇ 22): ಕಾಕ್ರೋಜ್ ಜನತಾ ಪಾರ್ಟಿ (cockroach janata party) ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇತ್ತ ಕಾಕ್ರೋಜ್ ಜನತಾ ಪಾರ್ಟಿ ಕರ್ನಾಟಕ, ಇದೇ ಮೇ. 24 ರಂದು ಬೆಂಗಳೂರಿನ (Bengaluru) ಟೌನ್ ಹಾಲ್ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ. ಕಾಕ್ರೋಜ್ ಜನತಾ ಪಾರ್ಟಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ಪೊಲೀಸರು, ಇಂತಹ ಕಾರ್ಯಕ್ರಮ ಆಯೋಜನೆಗೆ ಮನವಿ ಬಂದಿಲ್ಲ. ಒಂದು ವೇಳೆ ಮನವಿ ಬಂದರೂ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯಾಂಶಗಳು

  • ಮೇ 24ರಂದು ಬೆಂಗಳೂರಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕ್ರಮವೆಂದು ಪೋಸ್ಟ್ ವೈರಲ್
  • ಪೋಸ್ಟ್ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಬೆಂಗಳೂರು ಪೊಲೀಸರು
  • ಇಂತಹ ಕಾರ್ಯಕ್ರಮ ಆಯೋಜನೆಗೆ ಮನವಿ ಬಂದಿಲ್ಲ
  • ಮನವಿ ಬಂದರೂ ಟೌನ್​ಹಾಲ್ ಬಳಿ ಅನುಮತಿ ಇಲ್ಲ ಎಂದು ಪೊಲೀಸರಿಂದ ಸ್ಪಷ್ಟನೆ

ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

ಕಾಕ್ರೋಜ್ ಜನತಾ ಪಾರ್ಟಿಯಿಂದ ಬೆಂಗಳೂರಿನ ಟೌನ್ ಹಾಲ್ ಬಳಿ ಮಾನವ ಸರಪಳಿ ಪೋಸ್ಟ್​​​ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷದಿಂದ ಅನುಮತಿ ಕೋರಿರುವ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಇದನ್ನೂ ಓದಿ: Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

ಸಾರ್ವಜನಿಕರಿಗೆ ಖಡಕ್ ಸೂಚನೆ

ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೇರೆ ಯಾವುದೇ ಸ್ಥಳಗಳಲ್ಲಿ ಧರಣಿ, ಪ್ರತಿಭಟನಾ Rally ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಮನವಿ ಬಂದರೂ ಸಹ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ಟೌನ್ ಹಾಲ್ ಮುಂಭಾಗ ಜನರು ಬಂದು ಸೇರುವುದು ನ್ಯಾಯಾಲಯ ಆದೇಶದ ಸ್ಪಷ್ಪ ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಜನರು ಟೌನ್ ಹಾಲ್ ಬಳಿ ಆಗಮಿಸಿ ಗುಂಪು ಸೇರಬಾರದು. ಅಲ್ಲದೇ ಸಾರ್ವಜನಿಕರು ಇಂತ ಪೋಸ್ಟ್ ಗಳನ್ನ ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.

ಮಾನವ ಸರಪಳಿ ನಿರ್ಮಾಣಕ್ಕೆ ಕರೆ ನೀಡಿದ್ದ ಪೋಸ್ಟ್ ವೈರಲ್

ಯುವಕರಿಗೆ ಭವಿಷ್ಯವಿಲ್ಲ. ಬೆಲೆ ಏರಿಕೆಯಿಂದ ಬದುಕಿಲ್ಲ. ವಿದ್ಯಾರ್ಥಿಗಳಿಗೆ ನೀಟು ಪರೀಕ್ಷೆಇಲ್ಲ. ನಮ್ಮ ಮತ ಕದಿಯುತ್ತದ್ದಾರೆ. ಬನ್ನಿ ಕಾಕ್ರೋಜ್ ಗಳ ಸಂದೇಶ ನೀಡೋಣ. ಇಲ್ಲಿ ನಾಯಕರಿಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆ ಇಲ್ಲ. ಪ್ರಜೆಗಳು ಕೈ ಜೋಡಿಸುವುದೇ ಸಂಘಟನೆ . ಬನ್ನಿ ಶಕ್ತಿ ಪ್ರದರ್ಶಿಸೋಣ. ಆತ್ಮ ವಂಚಕ ಆಡಳಿತಕ್ಕೆ ಸಂದೇಶ ರವಾನಿಸೋಣ. ಹೀಗಾಗಿ ಟೌನ್​​ಹಾಲ್ ಬಳಿ ಮೇ 24ರಂದು ಬೆಳಗ್ಗೆ 11ಗಂಟೆಗೆ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಎಂದು ಪೋಸ್ಟ್ ಮಾಡಲಾಗಿತ್ತು. ಆದ್ರೆ, ಇದೀಗ ಪೊಲೀಸರ ಖಡಕ್ ಸೂಚನೆ ಬೆನ್ನಲ್ಲೇ ಟೌನ್ ಹಾಲ್ ಸಭೆ ಮುಂದೂಡಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ನಡುವೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಆಲ್‌ರೌಂಡರ್ – Kannada News | Vijay Shankar Retires from IPL and Domestic Cricket: Indian All Rounder Ends Career

2026 ರ ಐಪಿಎಲ್ (IPL 2026) ಲೀಗ್ ಹಂತ ಮುಗಿದು ಪ್ಲೇಆಫ್ ಹಂತ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಭಾರತದ ಸ್ಟಾರ್ ಆಲ್‌ರೌಂಡರ್ ವಿಜಯ್ ಶಂಕರ್ (Vijay Shankar) ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದ ವಿಜಯ್ ಶಂಕರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ವಿಚಾರವನ್ನು ಪ್ರಕಟಿಸಿರುವ ವಿಜಯ್ ಶಂಕರ್ ತಾನು ಉತ್ತಮ ಕ್ರಿಕೆಟಿಗನಾಗಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ

ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ವಿಜಯ್ ಶಂಕರ್ , ‘ಕ್ರಿಕೆಟ್ ನನ್ನ ಜೀವನ. 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ನಾನು 25 ವರ್ಷ ತುಂಬುವ ಹೊತ್ತಿಗೆ ಎಲ್ಲಾ ಹಂತದ ಕ್ರಿಕೆಟ್ ಆಡಿದ್ದೇನೆ. ನನ್ನ ದೇಶಕ್ಕಾಗಿ ಆಡುವುದು ಯಾವಾಗಲೂ ನನ್ನ ಹೆಮ್ಮೆಯ ಮತ್ತು ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ನಾನು ಕ್ರಿಕೆಟ್ ಆಡುವುದನ್ನು ಮುಂದುವರಿಸಲು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಹೆಚ್ಚು ಇಷ್ಟಪಡುವದನ್ನು ಮಾಡಲು ಅವಕಾಶ ನೀಡಿದ್ದಕ್ಕಾಗಿ ಕೇವಲ ಧನ್ಯವಾದ ಹೇಳಿದರೆ ಸಾಕಾಗುವುದಿಲ್ಲ’.

ಮುಂದುವರೆದು, ‘ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಧನ್ಯವಾದ ಅರ್ಪಿಸಿರುವ ವಿಜಯ್ ಶಂಕರ್, ‘ನಾಗ್ಪುರದಲ್ಲಿ ನಡೆದ ಭಾರತದ 500 ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡುವುದು ಮತ್ತು 2019 ರ ವಿಶ್ವಕಪ್‌ನಲ್ಲಿ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಕ್ಷಣಗಳನ್ನು ನಾನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ನನ್ನ ಐಪಿಎಲ್ ತಂಡಗಳಾದ ಗುಜರಾತ್, ಸನ್​ರೈಸರ್ಸ್​, ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ಗೆ ವಿಶೇಷ ಧನ್ಯವಾದಗಳು.

ಹಾಗೆಯೇ ತಮಿಳುನಾಡು ಪರ ಅಂಡರ್ 13, ಅಂಡರ್ 15, ಅಂಡರ್ 17, ಅಂಡರ್ 19, ಅಂಡರ್ 22 ಜೊತೆಗೆ ಸೀನಿಯರ್ ತಂಡದಲ್ಲೂ ಆಡಿದ್ದೇನೆ. ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿರುವ ಶಂಕರ್, ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು, ತರಬೇತುದಾರರು, ಮೈದಾನದ ಸಿಬ್ಬಂದಿ, ಮಾಧ್ಯಮ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯ್ ಶಂಕರ್ ವೃತ್ತಿಜೀವನ

ವಿಜಯ್ ಶಂಕರ್ ಭಾರತ ಪರ 12 ಏಕದಿನ ಪಂದ್ಯಗಳಲ್ಲಿ 31.8 ಸರಾಸರಿಯಲ್ಲಿ 223 ರನ್ ಗಳಿಸಿದ್ದಾರೆ. ಒಂಬತ್ತು ಟಿ20 ಪಂದ್ಯಗಳಲ್ಲಿ 25 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಶಂಕರ್ 13 ಶತಕಗಳು ಸೇರಿದಂತೆ 4,253 ರನ್ ಬಾರಿಸಿದ್ದಾರೆ. ಲಿಸ್ಟ್ ಎ ನಲ್ಲಿ ಎರಡು ಶತಕಗಳು ಸೇರಿದಂತೆ 2,790 ರನ್ ಬಾರಿಸಿರುವ ಶಂಕರ್, ಟಿ20 ಪಂದ್ಯಗಳಲ್ಲಿ 12 ಅರ್ಧಶತಕಗಳು ಸೇರಿದಂತೆ 2,583 ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:49 pm, Fri, 22 May 26

Source link

ಆರ್.ಅಶೋಕ್​ ಮನೆ ಕಿತ್ತಾಟ ಮುನ್ನೆಲೆಗೆ: ಸಿಡಿದೆದ್ದ ವಿಪಕ್ಷ ನಾಯಕ, ಸಿಎಸ್​​​​ಗೆ ಖಡಕ್ ಎಚ್ಚರಿಕೆ – Kannada News | R Ashok Angry For Karnataka Government Yet To Allot House

ಬೆಂಗಳೂರು, (ಮೇ 22): ರಾಜ್ಯದಲ್ಲಿ ಕಾಂಗ್ರೆಸ್‌‍ (Congress) ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ (R Ashok) ಅವರಿಗೆ ಇನ್ನೂ ಸರ್ಕಾರಿ ನಿವಾಸವನ್ನು (Governmnet House) ಮಂಜೂರು ಮಾಡಿಲ್ಲ. ಹುದ್ದೆ ಅಲಂಕರಿಸಿದಾಗಿನಿಂದ ಈವರೆಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿ ದ್ದರೂ, ರಾಜ್ಯ ಸರ್ಕಾರವು ಸ್ಪಂದಿಸಿಲ್ಲ ಎಂದು ಅವರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ವಿಪಕ್ಷ ನಾಯಕ ಅರ್. ಅಶೋಕ್ ಗೆ ಸರ್ಕಾರಿ ಮನೆ ಹಂಚಿಕೆ ಮಾಡದಿರುವ ವಿಚಾರ
  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ
  • ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡುವಂತೆ ಪತ್ರದ ಮೂಲಕ ಒತ್ತಾಯ
  • ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ ಎಂದು ಮಾಹಿತಿ
  • ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ

ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ

ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮತ್ತೊಮ್ಮೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಂ. 1 ಕುಮಾರಕೃಪಾ ಪೂರ್ವ ಬೆಂಗಳೂರು, ನಂ 1 ರೇಸ್ ವ್ಯೂ ಕಾಟೇಜ್ ಮತ್ತು ನಂ 2 ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ. ಈ ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಒಂದು ವೇಳೆ ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ. ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಮುಂದೆಯೇ ಅಸಮಾಧಾನ

ಗುರುವಾರ ವಿಧಾನಸೌಧದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸುತ್ತಿದೆ .ವಿರೋಧ ಪಕ್ಷದ ನಾಯಕನಿಗೆ ನಿಮ್ಮ ಸರ್ಕಾರ ಒಂದು ಸರ್ಕಾರಿ ಬಂಗಲೇ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಖಾರವಾಗಿ ಪ್ರಶ್ನೆ ಪ್ರಶ್ನಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಹಾಗೂ ವಿಧಾನಪರಿಷತ್‌ ವಿಪಕ್ಷದ ನಾಯಕರಿಗೆ ಸರ್ಕಾರಿ ಬಂಗಲೆ ನೀಡಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕುಮಾರ ಕೃಪ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ನೀಡಲಾಗಿತ್ತು. ಇದು ಅದೃಷ್ಟದ ಬಂಗಲೆ ಎಂದೇ ನಂಬಲಾಗಿತ್ತು. ಇದೀಗ ಆ ಬಂಗಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಉಳಿದುಕೊಂಡಿದ್ದಾರೆ.

ಆರ್‌.ಅಶೋಕ್‌ ಅವರು ಬೆಂಗಳೂರಿನ ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ರೇಸ್‌‍ ವ್ಯೂ ಕಾಟೇಜ್‌ ಅಥವಾ ಕುಮಾರ ಪಾರ್ಕ್‌ನಲ್ಲಿರುವ ನಿವಾಸಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇದುವರೆಗೆ 5 ರಿಂದ 6 ಬಾರಿ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಹಲವು ಬಾರಿ ಪತ್ರ ಬರೆದು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಧಿಕೃತ ನಿವಾಸ ಇಲ್ಲದಿರುವುದರಿಂದ, ಅವರು ತಮ ಸ್ವಂತ  ಜಯನಗರದ ನಿವಾಸವಾದಲ್ಲೇ ಉಳಿದುಕೊಂಡಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷವಾದರೂ ಅಶೋಕ್ ಅವರ ಮನೆ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ.  ಇನ್ನು ಉಳಿದಿರುವುವುದು ಎರಡು ವರ್ಷ ಅವಧಿ.  ಇನ್ನಾದರೂ ಮುಖ್ಯಕಾರ್ಯದರ್ಶಿಗಳು ಅಶೋಕ್ ಅವರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Source link

‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್ – Kannada News | Malayalam star Mohanlal gets emotional at Drishyam 3 Dubai screening Video Goes Viral

ಮಾಲಿವುಡ್‌ನ ಸ್ಟಾರ್ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ದೃಶ್ಯಂ 3’ (Drishyam 3) ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಪ್ರದರ್ಶನವೊಂದರಲ್ಲಿ ಅಭಿಮಾನಿಗಳಿಂದ ವ್ಯಕ್ತವಾದ ಅದ್ಭುತ ಪ್ರತಿಕ್ರಿಯೆಯನ್ನು ಕಂಡು ಮೋಹನ್‌ಲಾಲ್ (Mohanlal) ಭಾವುಕರಾಗಿದ್ದು, ಆನಂದಭಾಷ್ಪ ಸುರಿಸಿದ್ದಾರೆ. ಸದ್ಯ ಥಿಯೇಟರ್‌ ಒಳಗಿನ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನ ಗೆಲ್ಲುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ಮುಗಿಯುತ್ತಿದ್ದಂತೆ ಇಡೀ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆಯುತ್ತಾ ಮೋಹನ್‌ಲಾಲ್ ಅವರಿಗೆ ಗೌರವ ಸಲ್ಲಿಸಿದರು. ಪ್ರೇಕ್ಷಕರು ತೋರಿದ ಈ ಅಪಾರ ಪ್ರೀತಿಯನ್ನು ಕಂಡು ಮೋಹನ್‌ಲಾಲ್ ತೀವ್ರ ಭಾವುಕರಾಗಿದ್ದಾರೆ. ಅವರು ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಮುಖದಲ್ಲಿ ದೊಡ್ಡ ನಗು ಬೀರಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಆ ಚಿತ್ರಮಂದಿರಲ್ಲಿದ್ದ ಅಭಿಮಾನಿಗಳು ತಮ್ಮ ಮೊಬೈಲ್‌ಗಳಲ್ಲಿ ಈ ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದಾರೆ. ಈ ಘಟನೆ ಮೋಹನ್‌ಲಾಲ್ ಅವರಿಗೆ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಇರುವ ಭಾರಿ ಕ್ರೇಜ್ ಎಷ್ಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳ ಬಳಿಕ ‘ದೃಶ್ಯಂ 3’ ಕೂಡ ಜನಮನ ಗೆಲ್ಲುತ್ತಿದೆ.

ಕಳೆದ ಹಲವು ವರ್ಷಗಳಿಂದ ‘ದೃಶ್ಯಂ’ ಸರಣಿಯಲ್ಲಿ ಮೋಹನ್‌ಲಾಲ್ ನಿರ್ವಹಿಸಿರುವ ಜಾರ್ಜ್‌ ಕುಟ್ಟಿ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಪಾತ್ರಗಳಲ್ಲಿ ಒಂದಾಗಿದೆ. ಜೀತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ, ಸಿದ್ದಿಕ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

‘ದೃಶ್ಯಂ 3’ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಮಲಯಾಳಂ ಆವೃತ್ತಿಯೊಂದರಲ್ಲೇ ಮೊದಲ ದಿನ ಬರೋಬ್ಬರಿ 13.70 ಕೋಟಿ ರೂ. ಕಲೆಕ್ಷನ್ ಮಾಡಿದೆ. ಉಳಿದಂತೆ ತೆಲುಗಿನಲ್ಲಿ 1.50 ಕೋಟಿ ರೂ., ಕನ್ನಡದಲ್ಲಿ 20 ಲಕ್ಷ ರೂ. ಮತ್ತು ತಮಿಳಿನಲ್ಲಿ 45 ಲಕ್ಷ ರೂ. ಗಳಿಸಿದೆ. ಇನ್ನು ವಿದೇಶಿ ಮಾರುಕಟ್ಟೆಯಿಂದಲೇ ಭರ್ಜರಿ 30 ಕೋಟಿ ರೂ. ಬಾಚಿಕೊಂಡಿರುವ ‘ದೃಶ್ಯಂ 3’, ಒಟ್ಟಾರೆಯಾಗಿ ವಿಶ್ವದಾದ್ಯಂತ ಮೊದಲ ದಿನವೇ ಬರೋಬ್ಬರಿ 48.37 ಕೋಟಿ ರೂ. ಕಲೆಕ್ಷನ್ ಮಾಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿ ಯುವ ಜಿಲ್ಲಾಧ್ಯಕ್ಷನಿಂದ ಅಶ್ಲೀಲ ಪದಬಳಕೆ: ಸಿಡಿದೆದ್ದ ಮುಸ್ಲಿಂ ಸಮುದಾಯ; ಬಂಧನಕ್ಕೆ ಡೆಡ್​​​​ಲೈನ್ – Kannada News | Obscene Remarks by BJP Youth District President Trigger Outrage; Muslim Community Demands Arrest

ಬಿಜೆಪಿ ಯುವ ಮುಖಂಡ ಸಂತೋಷ್Image Credit source: tv9 kannada

ಚಿಕ್ಕಮಗಳೂರು, ಮೇ 22: ಕಾಫಿನಾಡು ಚಿಕ್ಕಮಗಳೂರಿನಲ್ಲಿ (chikkamagaluru) ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ನಡೆದ ಗಲಾಟೆ ಇದೀಗ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಮಾಡಿ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. ತಕ್ಷಣವೇ ಸಂತೋಷ್‌ನನ್ನು ಬಂಧಿಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದಾರೆ.

ಮುಖ್ಯಾಂಶಗಳು

  • ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
  • ಮುಸ್ಲಿಂ ಸಮುದಾಯದ ವಿರುದ್ಧ ನಿಂದನೆ
  • ಬಿಜೆಪಿ ಯುವ ಮುಖಂಡ ಸಂತೋಷ್​ ವಿರುದ್ಧ ದೂರು

ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಆರೋಪ

ಚಿಕ್ಕಮಗಳೂರಿನ ರಾಂಪುರದ ಬಳಿ MLC ಸಿ.ಟಿ.ರವಿ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸಂತೋಷ್, ಸಿಟಿ ರವಿ ಸಮ್ಮುಖದಲ್ಲೇ ಮುಸ್ಲಿಂ ಸಮುದಾಯದ ವಿರುದ್ಧ ಅತ್ಯಂತ ಅಶ್ಲೀಲ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ

ಇನ್ನು ವಿಡಿಯೋ ವೈರಲ್ ಬೆನ್ನಲ್ಲೇ ಮುಸ್ಲಿಂ ಸಮುದಾಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ಸಮುದಾಯದ ಪ್ರಮುಖ ಮುಖಂಡರು ಒಟ್ಟಾಗಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಸಂತೋಷ್​​ನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಸಂತೋಷ್​ ಬಂಧನಕ್ಕೆ ನಾಳೆವರೆಗೆ ಗಡುವು

ಇನ್ನು ಈ ಬಗ್ಗೆ ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಮಾತನಾಡಿದ್ದು, ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಸಂತೋಷ್ ಮಾತನಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಘನತೆಗೆ ಧಕ್ಕೆಯಾಗಿದೆ. ನಾವು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಸಿದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಇಡೀ ಮುಸ್ಲಿಂ ಸಮುದಾಯ ನಮ್ಮನ್ನು ಪ್ರಶ್ನೆ ಮಾಡುತ್ತಿದೆ. ನಾವು ನಾಳೆವರೆಗೆ ಕಾಯುತ್ತೇವೆ, FIR ಮಾಡಿ ಬಂಧಿಸಬೇಕು. ಇಲ್ಲಾಂದರೆ ಉಗ್ರ ಹೋರಾಟವನ್ನ ಮುಸ್ಲಿಂ ಸಮುದಾಯ‌ ಮಾಡುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ರಸ್ತೆ ಕಾಮಗಾರಿಯ ಕ್ರೆಡಿಟ್​​​​ಗಾಗಿ​ ಕಾಫಿನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿನ್ನೆ ಹೈ ಡ್ರಾಮಾ ನಡೆದಿದೆ. ಬಿಜೆಪಿ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಕಾಂಗ್ರೆಸ್ ಅವಧಿಯಲ್ಲಿ ವರ್ಕ್ ಆರ್ಡರ್‌ ಪಡೆದು ಹಣ ಬಿಡುಗಡೆಯಾಗಿತ್ತು. ನಿನ್ನೆ ವೀಕ್ಷಣೆ ಮಾಡಲು ಬಂದ ಎಂಎಲ್​​ಸಿ ಸಿ.ಟಿ ರವಿ ಎದುರೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಚಿಕ್ಕಮಗಳೂರು ನಗರ ಸಮೀಪದ ರಾಂಪುರ ಗ್ರಾಮದಲ್ಲಿ ಹೈಡ್ರಾಮಾವೇ ನಡೆದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅನಗತ್ಯ ಹೂಡಿಕೆಗಳ ಮೂಲಕ ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರಿ ಜೋಕೆ; ಗಮನಿಸಬೇಕಾದ ಸಂಗತಿಗಳಿವು – Kannada News | Investment Success: How to Avoid Losing Money in the Stock Market

ನವದೆಹಲಿ, ಮೇ 22: ಷೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ, ಹೂಡಿಕೆ ಮಾಡಿದ ಅಸಲು ಹಣವನ್ನು ನಷ್ಟದಿಂದ ರಕ್ಷಿಸಿಕೊಳ್ಳುವುದು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅತ್ಯಂತ ಮುಖ್ಯವಾಗಿದೆ. ಇತ್ತೀಚೆಗೆ ನಡೆದ “ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರುವ ಕಲೆ” (Art of Not Losing Money) ಎಂಬ ಚರ್ಚಾಗೋಷ್ಠಿಯಲ್ಲಿ ಪಿಪಿಎಫ್‌ಎಎಸ್ ಮ್ಯೂಚುವಲ್ ಫಂಡ್‌ನ ಸಿಐಒ ರಾಜೀವ್ ಠಕ್ಕರ್ ಮತ್ತು ಐಸಿಐಸಿಐ ಪ್ರುಡೆನ್ಷಿಯಲ್ ಎಎಮ್‌ಸಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ನರೇನ್ ಅವರು ಹೂಡಿಕೆದಾರರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ದೊಡ್ಡ ನಷ್ಟಗಳನ್ನು ತಪ್ಪಿಸಿ

ರಾಜೀವ್ ಠಕ್ಕರ್ ಅವರು ನಷ್ಟದ ಹಿಂದಿರುವ ಗಣಿತವನ್ನು ವಿವರಿಸುತ್ತಾ, “ಒಂದು ವೇಳೆ ನಿಮ್ಮ ₹100 ರ ಹೂಡಿಕೆ ಕುಸಿದು ₹50 ಕ್ಕೆ ತಲುಪಿದರೆ, ಅದು ಶೇ. 50 ರಷ್ಟು ನಷ್ಟವನ್ನು ಅನುಭವಿಸಿದಂತೆ. ಆದರೆ, ಆ ₹50 ಮತ್ತೆ ₹100 ರ ಸಮೀಪಕ್ಕೆ ಬರಬೇಕಾದರೆ ಶೇ. 100 ರಷ್ಟು ಲಾಭ ಗಳಿಸಬೇಕಾಗುತ್ತದೆ. ನಷ್ಟದ ಆಳ ಹೆಚ್ಚಾದಷ್ಟೂ, ಅದರಿಂದ ಚೇತರಿಸಿಕೊಳ್ಳುವುದು ಕಷ್ಟ,” ಎಂದಿದ್ದಾರೆ. ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರ ನಿಯಮವನ್ನು ನೆನಪಿಸಿರುವ ಅವರು, “ಮೊದಲ ನಿಯಮ – ಹಣವನ್ನು ಕಳೆದುಕೊಳ್ಳಬೇಡಿ; ಎರಡನೇ ನಿಯಮ – ಮೊದಲ ನಿಯಮವನ್ನು ಎಂದಿಗೂ ಮರೆಯಬೇಡಿ” ಎಂದು ಹೇಳಿದ್ದಾರೆ. ನಷ್ಟದ ಅಪಾಯವನ್ನು ನಿಯಂತ್ರಣದಲ್ಲಿಟ್ಟರೆ, ಲಾಭ ತನ್ನಷ್ಟಕ್ಕೆ ತಾನೇ ಬರುತ್ತದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು

ಅಸೆಟ್ ಹಂಚಿಕೆ ಅತ್ಯಗತ್ಯ

ಎಸ್. ನರೇನ್ ಅವರ ಪ್ರಕಾರ, ಹೆಚ್ಚಿನ ಹೂಡಿಕೆದಾರರು ಕೇವಲ ‘ಹೆಚ್ಚಿನ ರಿಟರ್ನ್ಸ್’ ಗಳಿಸುವುದರ ಕಡೆಗೆ ಗಮನ ಹರಿಸುತ್ತಾರೆಯೇ ಹೊರತು, ಅಸಲನ್ನು ಉಳಿಸಿಕೊಳ್ಳುವತ್ತ ಗಮನ ಹರಿಸುವುದಿಲ್ಲ. “ವಿವಿಧ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು (Asset Allocation) ಮಾರುಕಟ್ಟೆಯ ಏರಿಳಿತದ ಸಮಯದಲ್ಲಿ ರಕ್ಷಣೆ ನೀಡುವ ಅತ್ಯುತ್ತಮ ಸಾಧನವಾಗಿದೆ” ಎಂದು ಅವರು ಹೇಳಿದ್ದಾರೆ. ಕೇವಲ ಈಕ್ವಿಟಿ (ಷೇರು) ಮಾರುಕಟ್ಟೆಯಲ್ಲೇ ಸಂಪೂರ್ಣ ಹಣವನ್ನು ಹೂಡುವ ಬದಲಿಗೆ ಡೆಟ್ ಫಂಡ್​ಗಳು (Debt), ಹೈಬ್ರಿಡ್ ಫಂಡ್‌ಗಳು ಮತ್ತು ಚಿನ್ನದಂತಹ ವಿಭಿನ್ನ ವಿಭಾಗಗಳಲ್ಲಿ ಹಂಚಿಕೆ ಮಾಡುವುದು ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದು ಅವರ ಅನಿಸಿಕೆ.

ಮಾರುಕಟ್ಟೆಯ ಭ್ರಮೆಗಳಿಗೆ ಮರುಳಾಗಬೇಡಿ

ಕೆಲವು ವಲಯಗಳು (Sectors) ಅಥವಾ ಥೀಮ್‌ಗಳು ಇತ್ತೀಚೆಗೆ ಭಾರಿ ಲಾಭ ನೀಡಿವೆ ಎಂಬ ಒಂದೇ ಕಾರಣಕ್ಕೆ ಅವುಗಳ ಬೆನ್ನಟ್ಟಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಕೆಲವು ಕ್ಷೇತ್ರಗಳು ಅತ್ಯಂತ ದುಬಾರಿ ಮೌಲ್ಯದಲ್ಲಿ (Expensive valuations) ವಹಿವಾಟು ನಡೆಸುತ್ತಿವೆ. ಕೇವಲ ಮಾರುಕಟ್ಟೆಯ ಪ್ರವೃತ್ತಿ ಅಥವಾ ಟ್ರೆಂಡ್ ನೋಡಿ ಕುರುಡಾಗಿ ಹಣ ಹೂಡುವುದು ಅಪಾಯಕಾರಿ.

ತುರ್ತು ನಿಧಿ ನಿಮ್ಮ ಬ್ರೇಕ್ ಇದ್ದಂತೆ

ಹೂಡಿಕೆದಾರರು ಯಾವಾಗಲೂ ಒಂದು ತುರ್ತು ನಿಧಿಯನ್ನು ಪ್ರತ್ಯೇಕವಾಗಿ ಕಾಯ್ದುಕೊಳ್ಳಬೇಕು. ಆರ್ಥಿಕ ಬಿಕ್ಕಟ್ಟು ಎದುರಾದಾಗ ಈ ನಿಧಿ ಇಲ್ಲದಿದ್ದರೆ, ಹೂಡಿಕೆದಾರರು ಅನಿವಾರ್ಯವಾಗಿ ತಮಗೆ ನಷ್ಟವಾಗುತ್ತಿದ್ದರೂ ಷೇರುಗಳನ್ನು ಮಾರಾಟ ಮಾಡಬೇಕಾಗಿ ಬರುತ್ತದೆ. ಇದನ್ನು ಕಾರಿನ ಬ್ರೇಕ್‌ಗೆ ಹೋಲಿಸಿದ ರಾಜೀವ್ ಠಕ್ಕರ್, “ಕಾರಿಗೆ ಬ್ರೇಕ್ ಇರುವುದರಿಂದಲೇ ನಾವು ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ. ಬ್ರೇಕ್ ಇಲ್ಲದಿದ್ದರೆ ಅಪಘಾತದ ಭಯದಿಂದ ಅತ್ಯಂತ ನಿಧಾನವಾಗಿ ಚಲಿಸಬೇಕಾಗುತ್ತದೆ. ತುರ್ತು ನಿಧಿಯು ಮಾರುಕಟ್ಟೆಯ ಅನಿಶ್ಚಿತತೆಯ ಸಮಯದಲ್ಲಿ ಧೈರ್ಯವಾಗಿರಲು ಸಹಾಯ ಮಾಡುತ್ತದೆ,” ಎಂದಿದ್ದಾರೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

ಅತಿಯಾದ ಟ್ರೇಡಿಂಗ್ ಬೇಡ

ಚಿಲ್ಲರೆ ಹೂಡಿಕೆದಾರರು (Retail Investors) ಅತಿಯಾಗಿ ಟ್ರೇಡಿಂಗ್ ಮಾಡುವುದರ ವಿರುದ್ಧ ಎಸ್. ನರೇನ್ ಎಚ್ಚರಿಕೆ ನೀಡಿದ್ದಾರೆ. “ನನ್ನ ಇಷ್ಟು ವರ್ಷಗಳ ಮಾರುಕಟ್ಟೆಯ ಅನುಭವದಲ್ಲಿ, ಚಿಲ್ಲರೆ ಹೂಡಿಕೆದಾರರು ಡೆರಿವೇಟಿವ್ಸ್ (F&O) ಮಾರುಕಟ್ಟೆಯಲ್ಲಿ ಹಣ ಗಳಿಸಿರುವುದನ್ನು ನಾನು ನೋಡಿಲ್ಲ,” ಎಂದು ಅವರು ಹೇಳಿದ್ದಾರೆ. ಅತಿಯಾದ ಆಕ್ರಮಣಕಾರಿ ಟ್ರೇಡಿಂಗ್ ಮಾಡುವ ಬದಲು ಶಿಸ್ತುಬದ್ಧ ದೀರ್ಘಾವಧಿಯ ಹೂಡಿಕೆಯೇ ಸಂಪತ್ತು ಸೃಷ್ಟಿಗೆ ಸೂಕ್ತ ಮಾರ್ಗವಾಗಿದೆ.

ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಎಂದರೆ ಕೇವಲ ಲಾಭ ಗಳಿಸುವ ಷೇರುಗಳನ್ನು ಪತ್ತೆಹಚ್ಚುವುದಷ್ಟೇ ಅಲ್ಲ; ಬದಲಿಗೆ ಶಿಸ್ತು ಕಾಯ್ದುಕೊಳ್ಳುವುದು, ಅನಗತ್ಯ ರಿಸ್ಕ್ ತೆಗೆದುಕೊಳ್ಳದಿರುವುದು ಮತ್ತು ಕಷ್ಟಪಟ್ಟು ದುಡಿದ ಅಸಲು ಹಣವನ್ನು ನಷ್ಟದಿಂದ ರಕ್ಷಿಸಿಕೊಳ್ಳುವುದೇ ಆಗಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:15 pm, Fri, 22 May 26

Source link

Exit mobile version