4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ, ಇಲ್ಲಿದೆ ನೋಡಿ ವಿಡಿಯೋ – Kannada News | Lost Son Found in Delhi: Mother’s Joyful Tears After 4 Year Separation

ದೆಹಲಿ, ಮೇ.22: ಹೆತ್ತ ಕರಳಿಗೆ ತನ್ನ ಮಗನೇ ಸರ್ವಸ್ವ. ಅಂತಹ ಮಗ ಕಣ್ಣೆದುರೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟರೆ ಆ ಹೆತ್ತವರ ಒಡಲು ಅನುಭವಿಸುವ ನರಕಯಾತನೆ ಅಷ್ಟಿಷ್ಟಲ್ಲ. ಇಲ್ಲೊಂದು ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಮಗನ ಅಗಲಿಕೆಯ ತೀವ್ರ ವೇದನೆಯನ್ನು ಅನುಭವಿಸುತ್ತಿತ್ತು. ಆದರೆ ಇಂದು, ಆ ಕಳೆದುಹೋಗಿದ್ದ ಮಗ ಸಾಕ್ಷಾತ್ ತನ್ನ ಕಣ್ಣೆದುರೇ ಬಂದು ನಿಂತಾಗ, ಆ ತಾಯಿ ನಿಯಂತ್ರಿಸಲಾಗದೆ ಭಾವುಕತೆಯ ಕಣ್ಣೀರಿನ ಮಹಾಪೂರವನ್ನೇ ಹರಿಸಿದ್ದಾಳೆ. ಈ ಹೃದಯಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾದ ಇಡೀ ವಾತಾವರಣವೇ ಭಾವುಕತೆಯ ಗೂಡಾಗಿ ಮಾರ್ಪಟ್ಟಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಬಡ ಹೆತ್ತವರು ಪ್ರತಿಕ್ಷಣವೂ ಅನುಭವಿಸಿದ ನೋವು, ಪಟ್ಟ ಪಾಡು ಮತ್ತು ಎದೆಯೊಳಗಿನ ಯಾತನೆ ಎಂತವರ ಕಣ್ಣಲ್ಲೂ ನೀರು ತರಿಸುವಂತದ್ದು. ಮಗ ಜೀವಂತವಾಗಿದ್ದಾನೋ ಇಲ್ಲವೋ ಎಂಬ ಆತಂಕದ ಮಧ್ಯೆಯೇ ದಿನ ದೂಡುತ್ತಿದ್ದ ಆ ಪೋಷಕರಿಗೆ ಇಂದು ಜಗತ್ತಿನ ಅತ್ಯಂತ ದೊಡ್ಡ ಸಂತೋಷ ಸಿಕ್ಕಂತಾಗಿದೆ. ಮಗನನ್ನು ಬಿಗಿದಪ್ಪಿ ಅಳುತ್ತಿದ್ದ ಆ ತಾಯಿಯ ಕಣ್ಣೀರು, ಆಕೆ ಇಷ್ಟು ವರ್ಷಗಳ ಕಾಲ ಮನಸ್ಸಿನೊಳಗೆ ಬಚ್ಚಿಟ್ಟುಕೊಂಡಿದ್ದ ಕೋಟಿ ಜನ್ಮಗಳ ನೋವನ್ನು ಹೊರಹಾಕುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ನೋಡಿ ‘ಡ್ರ್ಯಾಗನ್’ ಕತೆ ಬದಲಾಯಿಸಿದರೇ ಪ್ರಶಾಂತ್ ನೀಲ್? – Kannada News | Did Prashanth Neel following Dhurandhar success secrete for Dragon movie

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ ಮೇ 20ಕ್ಕೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಮಾದಕ ದ್ರವ್ಯದ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳು ಪರಸ್ಪರ ಬಡಿದಾಡುವ ಕತೆಯನ್ನು ಸಿನಿಮಾ ಒಳಗೊಂಡಿರುವುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಆದರೆ ‘ಡ್ರ್ಯಾಗನ್’ ಸಿನಿಮಾಕ್ಕೂ ‘ಧುರಂಧರ್’ಗೂ ಸಾಮ್ಯತೆ ಇದೆ ಎಂಬುದು ಆ ನಂತರ ಹೊರಬಂದ ಪ್ರಶಾಂತ್ ನೀಲ್ ಸಂದರ್ಶನದಿಂದ ತಿಳಿದು ಬಂರುತ್ತಿದ್ದು, ‘ಧುರಂಧರ್’ ಸಿನಿಮಾದ ಯಶಸ್ಸಿನ ಬಳಿಕ ‘ಡ್ರ್ಯಾಗನ್’ ಕತೆಯನ್ನು ನೀಲ್ ಬದಲಿಸಿದ್ದಾರೆಯೇ ಎಂಬ ಅನುಮಾನವನ್ನು ಕೆಲ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ‘ಡ್ರ್ಯಾಗನ್’ ಸಿನಿಮಾವನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದಾಗ, ‘ನಾವು ಈ ವರೆಗೆ ಎಂದೂ ಬರದಂಥಹಾ ಒಂದು ದೇಶಭಕ್ತಿಯ ಸಿನಿಮಾವನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ. ಆ ಮೂಲಕ ಇದು ಪ್ರಶಾಂತ್ ನೀಲ್ ಅವರ ಹಿಂದಿನ ಸಿನಿಮಾಗಳಂತೆ ಕೇವಲ ಗ್ಯಾಂಗ್ ವಾರ್, ನಾಯಕನ ವಿಜೃಂಭಣೆ, ಅಬ್ಬರದ ಸಂಗೀತದ ಸಿನಿಮಾ ಮಾತ್ರವಲ್ಲ, ಇದು ದೇಶಭಕ್ತಿಯನ್ನು ಜಾಗೃತಗೊಳಿಸುವ ಸಿನಿಮಾ ಎಂಬ ಅಂಶವನ್ನು ಖುದ್ದು ನೀಲ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಥಿಯೇಟರ್​​​ನಲ್ಲಿ 65ದಿನ ಪೂರೈಸಿದ ‘ಧುರಂಧರ್ 2’; ಒಟ್ಟೂ ಗಳಿಕೆ ಎಷ್ಟು?

‘ಧುರಂಧರ್’ ಸಹ ದೇಶಭಕ್ತಿಯನ್ನು ಜಾಗೃತಪಡಿಸುವ ಸಿನಿಮಾ ಆಗಿದ್ದು, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಅದು ಮಾತ್ರವೇ ಅಲ್ಲದೆ ರಾಷ್ಟ್ರೀಯತೆಯ ವಿಷಯವಾಗಿ ಇತ್ತೀಚೆಗೆ ಹಲವು ಸಿನಿಮಾಗಳು ಬಂದಿದ್ದು, ಬಹುತೇಕ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಮಾತ್ರವಲ್ಲದೆ ದೇಶಪ್ರೇಮ, ರಾಷ್ಟ್ರೀಯತೆಯನ್ನು ಆಧಾರವಾಗಿಟ್ಟುಕೊಂಡು ಹಲವು ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಈಗ ರಾಷ್ಟ್ರೀಯತೆಯ ಟ್ರೆಂಡ್ ಜೋರಾಗಿರುವ ಕಾರಣ, ‘ಡ್ರ್ಯಾಗನ್’ ಅಂಥಹಾ ಗ್ಯಾಂಗ್​​ಸ್ಟರ್ ಸಿನಿಮಾನಲ್ಲಿ ದೇಶಭಕ್ತಿಯ ಅಂಶಗಳನ್ನು ನೀಲ್ ಬೆರೆಸಿದ್ದಾರೆ ಎನ್ನಲಾಗುತ್ತಿದೆ.

ನೀಲ್ ಅವರು ತಮ್ಮ ಸಿನಿಮಾಗಳಲ್ಲಿ ಸೆಂಟಿಮೆಂಟ್ ಅಂಶಗಳನ್ನು ಇರಿಸಿಯೇ ಇರಿಸುತ್ತಾರೆ. ‘ಉಗ್ರಂ’ನಲ್ಲಿ ತಾಯಿ ಮತ್ತು ಗರ್ಲ್​ಫ್ರೆಂಡ್ ಸೆಂಟಿಮೆಂಟ್, ‘ಕೆಜಿಎಫ್’ನಲ್ಲಿ ತಾಯಿ, ‘ಸಲಾರ್’ನಲ್ಲೂ ತಾಯಿ. ಈಗ ‘ಡ್ರ್ಯಾಗನ್’ ಸಿನಿಮಾನಲ್ಲಿ ದೇಶಪ್ರೇಮದ ಸೆಂಟಿಮೆಂಟ್ ಅನ್ನು ಎಳೆದು ತಂದಿರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ‘ಡ್ರ್ಯಾಗನ್’ ಸಿನಿಮಾ ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ಪ್ರಕಟ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಕರ್ನಾಟಕದಲ್ಲಿ ಮಳೆ ಅಬ್ಬರ, ಸೀಕ್ರೆಟ್ ಮದ್ವೆಗೆ ಕಂಗನಾ ಸ್ಪಷ್ಟನೆ: ಸಂಜೆವರೆಗಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Heavy Rains Lash Karnataka; Kangana Ranaut Clarifies Secret Marriage Rumours

ಬೆಂಗಳೂರು, ಮೇ 22: ಕನ್ನಡ ಪರ ಹೋರಾಟಗಾರರು, ರೈತರು, ದಲಿತರು ಹಾಗೂ ಕಳಸಾ-ಬಂಡೂರಿ ಮತ್ತು ಕಾವೇರಿ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕರ್ನಾಟಕ ಸಚಿವ ಸಂಪುಟ (cabinet) ತೀರ್ಮಾನಿಸಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ 7 ಪ್ರಕರಣಗಳೂ ಸೇರಿವೆ. ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರವು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದು, ಮುಸ್ಲಿಮರ ಮೇಲಿನ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯುವ ಮೂಲಕ ಕ್ರಿಮಿನಲ್‌ಗಳ ಪರ ಎಂಬ ಕೆಟ್ಟ ಸಂದೇಶ ನೀಡುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಿಡಿಕಾರಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕ್ಯಾಬಿನೆಟ್ ಉಪಸಮಿತಿಯ ಶಿಫಾರಸಿನಂತೆ ಕಾನೂನಾತ್ಮಕವಾಗಿ ಮತ್ತು ಸುದೀರ್ಘ ಚರ್ಚೆಯ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಇಂದಿನಿಂದ ಒಂದು ವಾರ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಮೇ 22 ರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಹಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ ಗಂಟೆಗೆ 30-40 ಕಿ.ಮೀ ವೇಗ ಸಹಿತ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ಕೆಲವು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಹೊತ್ತಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಆತಂಕ ಬೇಡ: ಪನಗರಿಯಾ

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಕುಸಿಯುತ್ತಿರುವುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಅತಿಯಾಗಿ ಆತಂಕಪಡುವ ಅಗತ್ಯವಿಲ್ಲ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಹೇಳಿದ್ದಾರೆ. ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 100 ರೂಪಾಯಿಗಳ ಗಡಿ ದಾಟಿದರೂ ಅದು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಕೃತಕವಾಗಿ ರೂಪಾಯಿ ಮೌಲ್ಯವನ್ನು ರಕ್ಷಿಸಲು ಹೋದರೆ ದೇಶದ ಫಾರೆಕ್ಸ್ ನಿಧಿ ಖಾಲಿಯಾಗುವ ಅಪಾಯವಿದೆ ಎಚ್ಚರಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸುತ್ತಾರಾ ವಿರಾಟ್ ಕೊಹ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಕ್ವಾಲಿಫೈಯರ್ 1 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಇನ್ನು ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ತರ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ಇದನ್ನೂ ಓದಿ: SRH vs RCB: ಕೊನೆಯ ಲೀಗ್ ಪಂದ್ಯದಲ್ಲಿ ಆರ್​ಸಿಬಿಗೆ ಸನ್‌ರೈಸರ್ಸ್ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ?

ಇಂದು ವಿರಾಟ್ ಕೊಹ್ಲಿ ಕೇವಲ 58 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲೇ ಸತತ 4 ಸೀಸನ್‌ಗಳಲ್ಲಿ 600ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಕಿಂಗ್ ಕೊಹ್ಲಿ ಈ ಹಿಂದೆ 2023ರಲ್ಲಿ 639, 2024ರಲ್ಲಿ 741 ಮತ್ತು 2025ರಲ್ಲಿ 657 ರನ್​​ ಗಳಿಸಿದ್ದರು. ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ 13 ಪಂದ್ಯಗಳಲ್ಲಿ ಅವರು 542 ರನ್ ಗಳಿಸಿದ್ದಾರೆ. ಈಗಾಗಲೇ ಕ್ರಿಸ್ ಗೇಲ್, ಡೇವಿಡ್ ವಾರ್ನರ್ ಮತ್ತು ಕೆ.ಎಲ್. ರಾಹುಲ್ ಸತತ ಮೂರು ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರಾದರೂ, ಸತತ ನಾಲ್ಕು ಬಾರಿ ಯಾರೂ ಈ ಮೈಲಿಗಲ್ಲು ತಲುಪಿಲ್ಲ. ಇಂದು ಕೊಹ್ಲಿ ಆ ಅಪರೂಪದ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಸೀಕ್ರೆಟ್ ಮದ್ವೆ ಬಗ್ಗೆ ನಟಿ ಕಂಗನಾ ರಣಾವತ್ ಸ್ಪಷ್ಟನೆ

ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರು ಮಂಗಳಸೂತ್ರ ಹಾಗೂ ಹಸಿರು ಬಳೆಗಳನ್ನು ಧರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಅವರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ವತಃ ಕಂಗನಾ ರಣಾವತ್​ ಅವರು ಸ್ಪಷ್ಟನೆ ನೀಡಿದ್ದು, ಇದು ಸಿನಿಮಾ ಚಿತ್ರೀಕರಣವೊಂದರ ಪಾತ್ರದ ಗೆಟಪ್ ಆಗಿದ್ದು, ಇದನ್ನ ಯಾರೋ ಫೋಟೋ ಕ್ಲಿಕ್ಕಿಸಿದ್ದಾರೆ. ನಾನು ಎಂದಿಗೂ ಗುಟ್ಟಾಗಿ ಮದುವೆಯಾಗುವುದಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ – Kannada News | Madhya Pradesh High Court allows Twisha Sharma’s second post mortem to be conducted by Delhi AIIMS

ನವದೆಹಲಿ, ಮೇ 22: ತ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಒಂದು ದೊಡ್ಡ ಬೆಳವಣಿಗೆಯಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ಇಂದು ಭೋಪಾಲ್‌ನಲ್ಲಿ ಏಮ್ಸ್ ದೆಹಲಿ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಆದೇಶಿಸಿದೆ. ಕೆಳ ನ್ಯಾಯಾಲಯವು ತಮ್ಮ ವಿನಂತಿಯನ್ನು ನಿರಾಕರಿಸಿದ ನಂತರ ತ್ವಿಶಾ ಶರ್ಮಾ ಅವರ ಕುಟುಂಬ ಸದಸ್ಯರು ಎರಡನೇ ಶವಪರೀಕ್ಷೆ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.

ಎರಡನೇ ಮರಣೋತ್ತರ ಪರೀಕ್ಷೆಗಾಗಿ ಕೆಳ ನ್ಯಾಯಾಲಯವು ಮಾಡಿದ ಮನವಿಯನ್ನು ವಜಾಗೊಳಿಸಿದ ನಂತರ ತ್ವಿಶಾ ಶರ್ಮಾ ಅವರ ಕುಟುಂಬ ಹೈಕೋರ್ಟ್‌ಗೆ ತೆರಳಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ತ್ವಿಶಾ ಶರ್ಮಾ ಅವರ ದೇಹವನ್ನು ಭೋಪಾಲ್ ಏಮ್ಸ್‌ನ ಶವಾಗಾರದಲ್ಲಿ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಲಾಗಿದೆ. ಆದರೆ ಮೃತದೇಹವನ್ನು ಹೆಚ್ಚಿನ ಸಮಯದವರೆಗೆ ಸಂರಕ್ಷಿಸಲು ಮೈನಸ್ 80 ಡಿಗ್ರಿ ಸೆಲ್ಸಿಯಸ್ ಅಗತ್ಯವಿದೆ. ಆ ನಗರದಲ್ಲಿ ಅಂತಹ ಸೌಲಭ್ಯಗಳು ಲಭ್ಯವಿಲ್ಲ. ಹೀಗಾಗಿ, ಬೇಗ ಶವಪರೀಕ್ಷೆ ನಡೆಸಿ ಎಂದು ನ್ಯಾಯಾಲಯ ಹೇಳಿದೆ.

ತನಿಖೆಯಲ್ಲಿ ತಾಂತ್ರಿಕ ದೋಷಗಳಿವೆ ಎಂದು ಬಲಿಪಶುವಿನ ಕುಟುಂಬವು ಆರೋಪಿಸಿತ್ತು ಮತ್ತು ಎಫ್‌ಐಆರ್ ದಾಖಲಿಸುವಲ್ಲಿ ಮೂರು ದಿನಗಳ ವಿಳಂಬದ ವಿಷಯವನ್ನು ಸಹ ಎತ್ತಿತ್ತು. ಅವರ ಅರ್ಜಿಯ ಪ್ರಕಾರ, ಮೊದಲ ಮರಣೋತ್ತರ ಪರೀಕ್ಷೆ ನಡೆಸಿದಾಗ ನೇಣು ಬಿಗಿದ ಬೆಲ್ಟ್ ಅನ್ನು ತನಿಖಾಧಿಕಾರಿಗಳು ಒದಗಿಸಲು ವಿಫಲರಾಗಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ತ್ವಿಶಾ ಅವರ ದೇಹದ ಮೇಲೆ ಕಂಡುಬಂದ ಗಾಯಗಳ ಬಗ್ಗೆ ವಿವರವಾದ ಉಲ್ಲೇಖವಿಲ್ಲದಿರುವ ಬಗ್ಗೆ ಅವರ ವಕೀಲರು ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ

ಉತ್ತರ ಪ್ರದೇಶದ ನೊಯ್ಡಾದ 33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್‌ನಲ್ಲಿರುವ ಅವರ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ತ್ವಿಶಾ ಸಾಯುವಂತೆ ಮಾಡಲಾಗಿತ್ತು. ಆದರೆ, ಅವರು 33 ವರ್ಷದ ತ್ವಿಶಾ ಶರ್ಮಾ ಮಾದಕ ವ್ಯಸನಿಯಾಗಿದ್ದರು ಎಂದು ಆಕೆಯ ಗಂಡನ ಮನೆಯವರು ಆರೋಪಿಸಿದ್ದರು.

ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ಕೂಡ ಅವರ ಸಾವಿನ ನಂತರ ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಪೊಲೀಸರು ಬಹುಮಾನ ಘೋಷಿಸಿದ್ದಾರೆ. ಈ ಮಧ್ಯೆ ಸಮರ್ಥ್ ಸಿಂಗ್ ಶೀಘ್ರದಲ್ಲೇ ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ.

ತ್ವಿಶಾ ಶರ್ಮಾ ಅವರ ಸಾವು ಸಾಮಾನ್ಯ ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಅವರ ಪೋಷಕರು ಮತ್ತು ಕುಟುಂಬದವರು ಗಂಭೀರ ಆರೋಪ ಮಾಡಿದ್ದರು. ಮೊದಲನೇ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳಿರಬಹುದು. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿರಬಹುದು ಎಂದು ಶಂಕಿಸಿದ ಕುಟುಂಬಸ್ಥರು, ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ: 33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?

ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾವಿನ ಹಿಂದಿನ ನೈಜ ಕಾರಣವನ್ನು ಮತ್ತು ಸತ್ಯಾಂಶವನ್ನು ಹೊರತರಲು ದೆಹಲಿಯ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ (AIIMS Delhi) ತಜ್ಞ ವೈದ್ಯರ ಮಂಡಳಿಯ ಮೂಲಕ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ತಾಳಿ ಧರಿಸಿದ್ದು ದೊಡ್ಡ ವಿಷಯ ಅಲ್ಲ’; ಸೀಕ್ರೆಟ್ ಮದುವೆ ವದಂತಿಗೆ ಕಂಗನಾ ಸ್ಪಷ್ಟನೆ – Kannada News | Kangana Ranaut clarifies secret Marriage rumours over Mangalsutra Viral Video

ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಅವರು ಇತ್ತೀಚೆಗೆ ಮಂಗಳಸೂತ್ರ (Mangalsutra) ಮತ್ತು ಹಸಿರು ಬಳೆಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಕಂಗನಾ ರಣಾವತ್ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿದ್ದವು. ಆ ‘ಅದೃಷ್ಟವಂತ ಪುರುಷ’ ಯಾರು ಎಂದು ನೆಟ್ಟಿಗರು ಹುಡುಕಾಡಲಾರಂಭಿಸಿದ್ದರು. ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಕಂಗನಾ ರಣಾವತ್ (Kangana Ranaut) ಅವರೇ ಸ್ಪಷ್ಟನೆ ನೀಡಿದ್ದು, ‘ಇದರಲ್ಲಿ ಇಷ್ಟೊಂದು ತಲೆಕೆಡಿಸಿಕೊಳ್ಳುವಂತದ್ದು ಏನಿದೆ?’ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕಂಗನಾ ಅವರು ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿ, ಕತ್ತಿನಲ್ಲಿ ಮಂಗಳಸೂತ್ರ ಹಾಗೂ ಕೈಯಲ್ಲಿ ಹಸಿರು ಬಳೆಗಳೊಂದಿಗೆ ಕಟ್ಟಡವೊಂದರಿಂದ ಹೊರಬಂದು ತಮ್ಮ ಕಾರಿನತ್ತ ತೆರಳುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಇದನ್ನು ನೋಡಿದ ತಕ್ಷಣವೇ, ‘ಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರೆ’ ಎಂದು ನೆಟ್ಟಿಗರು ತೀರ್ಮಾನಿಸಿಬಿಟ್ಟಿದ್ದರು.

ಈ ಕುರಿತು ಶುಕ್ರವಾರ (ಮೇ 22) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಹರಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ‘ನಾನು ಪ್ರತಿದಿನ ನಗರದ ಸುತ್ತಮುತ್ತ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತೇನೆ. ಯಾರೋ ಒಬ್ಬರು ನನ್ನ ಕ್ಯಾರೆಕ್ಟರ್ ಮೇಕ್-ಅಪ್ ಲುಕ್‌ನ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈಗ ನನಗೆ ಸಾಲು ಸಾಲು ಫೋನ್ ಕರೆಗಳು ಬರುತ್ತಿವೆ. ಅಷ್ಟಕ್ಕೂ ವಿವಾಹಿತ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡರೆ ಅದರಲ್ಲಿ ಅಷ್ಟೊಂದು ದೊಡ್ಡ ವಿಷಯ ಏನಿದೆ? ನಟರು ಚಿತ್ರಗಳಿಗಾಗಿ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುತ್ತಾರೆ. ನಾನು ಎಂದಿಗೂ ರಹಸ್ಯವಾಗಿ ಮದುವೆಯಾಗುವುದಿಲ್ಲ. ಇದು ನನ್ನ ಪ್ರಾಮಿಸ್’ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕಂಗನಾ ರಣಾವತ್ ಅವರು ತೀವ್ರವಾದ ಬಿಸಿಲಿನಲ್ಲಿ ಹೊರಾಂಗಣ ಶೂಟಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಎಸಿ ರೂಮ್‌ನಲ್ಲಿ ಕುಳಿತು ದೂರುವ ಸುದ್ದಿ ನಿರೂಪಕರ ಕಾಲೆಳೆದಿದ್ದಾರೆ. ‘ಎಸಿ ಸ್ಟುಡಿಯೋಗಳಲ್ಲಿ ಕುಳಿತುಕೊಳ್ಳುವ ನ್ಯೂಸ್ ಆ್ಯಂಕರ್‌ಗಳು ಹೊರಗಿನ ತಾಪಮಾನ ಮತ್ತು ಬಿಸಿಲಿನ ಬೇಗೆಯ ಬಗ್ಗೆ ದೂರುತ್ತಿದ್ದಾರೆ. ಆದರೆ ನಮ್ಮಂತವರ ಪಾಡೇನು? ನಾವು ಅಷ್ಟೊಂದು ಲೈಟ್ಸ್‌ ನಡುವೆ ಹೊರಾಂಗಣ ಶೂಟಿಂಗ್ ಮಾಡುತ್ತಿದ್ದೇವೆ. ದೂರುವುದನ್ನು ನಿಲ್ಲಿಸಿ ಫ್ರೆಂಡ್ಸ್. ಜೀವನ ಸವಾಲಾಗಿದ್ದರಷ್ಟೇ ಬದುಕಿದ್ದೀವಿ ಎನಿಸುತ್ತದೆ, ಸುಲಭ ಮತ್ತು ನಿರೀಕ್ಷಿತವಾಗಿದ್ದರೆ ಅದು ಸಾವಿಗೆ ಸಮಾನ. ಹ್ಯಾಪಿ ಸಮ್ಮರ್’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

‘ಎಮರ್ಜೆನ್ಸಿ’ ಚಿತ್ರದ ಸೋಲಿನ ನಂತರ ಕಂಗನಾ ಅವರು ‘ಭಾರತ್ ಭಾಗ್ಯ ವಿಧಾತ’ ಸಿನಿಮಾದಲ್ಲಿ ನಟಿಸಿದ್ದಾರೆ. 2008ರಲ್ಲಿ ಮುಂಬೈನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದರ ಒಳಗೆ ನಡೆಯುವ ನೈಜ ಘಟನೆಗಳ ಆಧಾರಿತ ಕಥೆಯನ್ನು ಈ ಸಿನಿಮಾ ತೋರಿಸಲಿದೆ. ಈ ಚಿತ್ರವು ಜೂನ್ 12ರಂದು ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾನಸಿಕವಾಗಿ ಕುಗ್ಗಿದ್ದ ರಾಮ್ ಚರಣ್​​ಗೆ ನೆರವು ನೀಡಿದ್ದು ಆ ಸ್ಟಾರ್ ನಿರ್ದೇಶಕ – Kannada News | Ram Charan talks about how SS Rajamouli helped in his tough times

ರಾಮ್ ಚರಣ್ (Ram Charan) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಆದರೆ ಅವರು ಇಂದು ಏರಿರುವ ಸ್ಥಾನವನ್ನು ಗಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ಆಗಿದ್ದ ರಾಮ್ ಚರಣ್ ಮೇಲೆ ಭಾರಿ ನಿರೀಕ್ಷೆಗಳಿತ್ತು. ಆರಂಭದಲ್ಲಿ ರಾಜಮೌಳಿ ನಿರ್ದೇಶಿಸಿದ್ದ ‘ಮಗಧೀರ’ ಗೆದ್ದಿತಾದರೂ ಆ ನಂತರ ಬಂದ ಸಿನಿಮಾಗಳು ಸೋತು, ರಾಮ್ ಚರಣ್ ಟಾಲಿವುಡ್​​ನಿಂದ ಹೊರಗುಳಿಯುತ್ತಾರೆ ಎನ್ನಲಾಗಿತ್ತು. ಆದರೆ ಸತತ ಪರಿಶ್ರಮದಿಂದ ರಾಮ್ ಚರಣ್ ಸ್ಪರ್ಧೆಯಲ್ಲಿ ಉಳಿದವರು ಮಾತ್ರವಲ್ಲೇ ತಮ್ಮ ನಟನೆಯನ್ನು ತಿದ್ದಿಕೊಳ್ಳುತ್ತಾ ಇಂದು ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಆದರೆ ಒಂದು ಸಮಯದಲ್ಲಿ ರಾಮ್ ಚರಣ್ ಬಹಳ ಕುಗ್ಗಿಹೋಗಿದ್ದರಂತೆ. ಆಗ ಅವರಿಗೆ ನೆರವು ನೀಡಿದ್ದು ಈಗಿನ ಸ್ಟಾರ್ ನಿರ್ದೇಶಕ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಾಮ್ ಚರಣ್ ತೊಡಗಿದ್ದಾರೆ. ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟ ರಾಮ್ ಚರಣ್, ತಾವು ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಆ ಸಮಯದಲ್ಲಿ ತಮಗೆ ನೆರವು ನೀಡಿದ್ದು ಖ್ಯಾತ ನಿರ್ದೇಶಕ ಎಸ್​​ಎಸ್ ರಾಜಮೌಳಿ ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.

ರಾಮ್ ಚರಣ್, ಜೂ ಎನ್​​ಟಿಆರ್ ನಟಿಸಿ, ರಾಜಮೌಳಿ ನಿರ್ದೇಶಿಸಿರುವ ‘ಆರ್‌ಆರ್‌ಆರ್’ (RRR) ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಸಮಯದಲ್ಲಿಯೇ ಕೋವಿಡ್ ಲಾಕ್‌ಡೌನ್ ಘೋಷಣೆಯಾಯಿತು ಎಂಬುದನ್ನು ನೆನಪು ಮಾಡಿಕೊಂಡಿರುವ ರಾಮ್ ಚರಣ್, ಆ ಸಮಯದಲ್ಲಿ ಶೂಟಿಂಗ್ ಸಂಪೂರ್ಣವಾಗಿ ನಿಂತುಹೋಗಿತ್ತು ಮತ್ತು ಸಿನಿಮಾ ಯಾವಾಗ ಮುಗಿಯುತ್ತದೆ ಎಂಬ ಗೊಂದಲವಿತ್ತು. ಅಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಖಾಲಿ ಕುಳಿತುಕೊಳ್ಳುವುದು ತಮಗೆ ತೀವ್ರ ಮಾನಸಿಕ ಆತಂಕ ಮತ್ತು ಒತ್ತಡವನ್ನು ಉಂಟುಮಾಡಿತ್ತು ಎಂದು ಚರಣ್ ತಿಳಿಸಿದ್ದಾರೆ.

ಇದನ್ನೂ ಓದಿ:ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ

‘ಲಾಕ್‌ಡೌನ್ ಸಮಯದಲ್ಲಿ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಸಿನಿಮಾ ರಂಗದ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆ ಸಮಯದಲ್ಲಿ ನಾನು ತೀವ್ರ ಮಾನಸಿಕ ಸಂಘರ್ಷಕ್ಕೆ ಒಳಗಾಗಿದ್ದೆ. ಆಗ ನಾನು ನಿರ್ದೇಶಕ ರಾಜಮೌಳಿ ಅವರಿಗೆ ಕರೆ ಮಾಡಿ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಆಗ ರಾಜಮೌಳಿ ಅವರು ನನಗೆ ಒಂದು ಅದ್ಭುತವಾದ ಸಲಹೆ ನೀಡಿದರು’ ಎಂದು ರಾಮ್ ಚರಣ್ ಹೇಳಿದ್ದಾರೆ.

ರಾಜಮೌಳಿ ಅವರ ಸಲಹೆಯನ್ನು ನೆನಪಿಸಿಕೊಂಡಿರುವ ರಾಮ್ ಚರಣ್, ‘ರಾಜಮೌಳಿ ಅವರು ನನಗೆ ಫೋನ್‌ನಲ್ಲಿ ಧೈರ್ಯ ತುಂಬಿದರು. ‘ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲದಿದ್ದಾಗ ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಡ. ಈ ಸಮಯವನ್ನು ನಿನ್ನ ದೇಹ ಮತ್ತು ಮನಸ್ಸನ್ನು ಹುರಿದುಂಬಿಸಲು ಬಳಸಿಕೊ. ನಿನಗೆ ಇಷ್ಟವಾದ ಕೆಲಸಗಳನ್ನು ಮಾಡು, ಪುಸ್ತಕಗಳನ್ನು ಓದು ಮತ್ತು ಮುಂದಿನ ದೊಡ್ಡ ಹೋರಾಟಕ್ಕೆ ಸಿದ್ಧನಾಗು’ ಎಂದು ಹೇಳಿದರು. ಅವರ ಆ ಮಾತುಗಳು ನನ್ನಲ್ಲಿ ಹೊಸ ಭರವಸೆ ಮೂಡಿಸಿದವು ಮತ್ತು ಆ ಮಾನಸಿಕ ಒತ್ತಡದಿಂದ ಹೊರಬರಲು ಸಹಾಯ ಮಾಡಿದವು’ ಎಂದು ತಿಳಿಸಿದ್ದಾರೆ.

ಲಾಕ್​​ಡೌನ್ ಬಳಿಕ ‘ಆರ್​​ಆರ್​​ಆರ್’ ಸಿನಿಮಾ ಮತ್ತೆ ಶುರುವಾಯ್ತು ಆ ನಂತರದ್ದು ಇತಿಹಾಸ. ರಾಮ್ ಚರಣ್ ಅನ್ನು ಟಾಲಿವುಡ್ ಸ್ಟಾರ್ ನಟನಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟನನ್ನಾಗಿ ಮಾಡಿತು ಆ ಸಿನಿಮಾ. ರಾಮ್ ಚರಣ್ ಇದೀಗ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gajalakshmi Rajayoga 2026: ಶೀಘ್ರದಲ್ಲೇ ಗಜಲಕ್ಷ್ಮಿ ರಾಜಯೋಗ; ಈ 5 ರಾಶಿಯವರಿಗೆ ಆಕಸ್ಮಿಕ ಧನಲಾಭ! – Kannada News | Gajalakshmi Rajayoga 2026: June 10 Brings Fortune to 5 Zodiac Signs!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026 ರ ಜೂನ್ 10 ರಂದು ಆಕಾಶಮಂಡಲದಲ್ಲಿ ಒಂದು ಅತ್ಯಂತ ಅಪರೂಪದ ಹಾಗೂ ಅದ್ಭುತವಾದ ಖಗೋಳ ವಿದ್ಯಮಾನ ಜರುಗಲಿದೆ. ಜ್ಞಾನ ಮತ್ತು ಭಾಗ್ಯದ ಕಾರಕನಾದ ದೇವಗುರು ಬೃಹಸ್ಪತಿ (ಗುರು) ಹಾಗೂ ಭೌತಿಕ ಸುಖ, ಐಶ್ವರ್ಯ ಮತ್ತು ವೈಭವದ ಅಧಿಪತಿಯಾದ ಶುಕ್ರ ಗ್ರಹಗಳು ಒಂದೇ ರಾಶಿಯಲ್ಲಿ ಶೂನ್ಯ ಡಿಗ್ರಿಯಲ್ಲಿ ಮುಖಾಮುಖಿಯಾಗಿ ಮಹಾಯುತಿಯನ್ನು ಸಾಧಿಸಲಿವೆ.

ಶುಕ್ರ ಮತ್ತು ಗುರುಗಳ ಈ ಅಪರೂಪದ ಸಂಯೋಜನೆಯಿಂದ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಸುಖ, ಸಮೃದ್ಧಿ ಮತ್ತು ಯಶಸ್ಸಿನ ಹೆಬ್ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಈ ರಾಜಯೋಗದ ಪ್ರಭಾವದಿಂದಾಗಿ ವಿಶೇಷವಾಗಿ 5 ರಾಶಿಯವರ ಜೀವನದಲ್ಲಿ ಭಾರಿ ಧನಾತ್ಮಕ ಬದಲಾವಣೆಗಳು ಬರಲಿದ್ದು, ಆರ್ಥಿಕ ಪ್ರಗತಿ ಹಾಗೂ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಬಲವಾದ ಯೋಗಗಳಿವೆ. ಆ ಅದೃಷ್ಟದ 5 ರಾಶಿಗಳ ವಿವರ ಇಲ್ಲಿದೆ.

ವೃಷಭ ರಾಶಿ (Taurus):

ಈ ಮಹತ್ತರವಾದ ಗಜಲಕ್ಷ್ಮಿ ರಾಜಯೋಗವು ವೃಷಭ ರಾಶಿಯಲ್ಲೇ ನಿರ್ಮಾಣವಾಗುತ್ತಿರುವುದರಿಂದ, ಇದರ ಸಂಪೂರ್ಣ ಮತ್ತು ಗರಿಷ್ಠ ಲಾಭವು ಈ ರಾಶಿಯ ಜಾತಕರಿಗೆ ಸಿಗಲಿದೆ. ಆಕಸ್ಮಿಕವಾಗಿ ಸಿಲುಕಿಕೊಂಡಿದ್ದ ಹಣ ಕೈಸೇರಲಿದೆ. ಹಳೆಯ ಹೂಡಿಕೆಗಳಿಂದ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದ್ದು, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಳ (Salary Hike) ಮತ್ತು ಪ್ರಮೋಷನ್ ಸಿಗುವ ಬಲವಾದ ಸೂಚನೆಗಳಿವೆ. ವ್ಯಾಪಾರಿಗಳಿಗೆ ಹೊಸ ಉದ್ಯಮ ಪಾಲುದಾರರು (Partners) ಸಿಗಲಿದ್ದು, ವ್ಯವಹಾರ ದುಪ್ಪಟ್ಟಾಗಲಿದೆ. ಪ್ರೇಮ ಜೀವನದಲ್ಲೂ ಮಧುರತೆ ಇರಲಿದೆ.

ಕರ್ಕ ರಾಶಿ (Cancer):

ಕರ್ಕ ರಾಶಿಯವರಿಗೆ ಈ ಅವಧಿಯು ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ಸುವರ್ಣ ತಿರುವುಗಳನ್ನು ತರಲಿದೆ. ನೀವು ಕೆಲಸದ ಸ್ಥಳದಲ್ಲಿ ಪಟ್ಟ ಕಠಿಣ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಮತ್ತು ಗೌರವ ಸಿಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಿದ್ದಾರೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ಬರಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರು ಮತ್ತು ದೊಡ್ಡ ಆರ್ಡರ್‌ಗಳು ಕೈಸೇರುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಈ ಗ್ರಹ ಸ್ಥಿತಿಯು ಅವರ ಭಾಗ್ಯ ಮತ್ತು ನಕ್ಷತ್ರವನ್ನು ಬಲಪಡಿಸುವ ಪ್ರಮುಖ ಮೂಲವಾಗಿ ಕೆಲಸ ಮಾಡಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಅಥವಾ ಅರ್ಧಕ್ಕೆ ನಿಂತುಹೋಗಿದ್ದ ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದ್ದು, ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಲಿದೆ. ಸಂಗಾತಿಯೊಂದಿಗೆ ಸಂಬಂಧ ಸುಧಾರಿಸಲಿದ್ದು, ಪರಸ್ಪರ ಒಡನಾಟ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದ್ದರೂ, ಖರ್ಚುಗಳ ಮೇಲೆ ನಿಯಂತ್ರಣವಿರಲಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ತುಲಾ ರಾಶಿ (Libra):

ಇತ್ತೀಚಿನ ದಿನಗಳಲ್ಲಿ ಏರಿಳಿತಗಳಿಂದ ಕೂಡಿದ್ದ ತುಲಾ ರಾಶಿಯವರ ಜೀವನವು ಈ ರಾಜಯೋಗದ ಪ್ರಭಾವದಿಂದ ಮತ್ತೊಮ್ಮೆ ಸರಿಯಾದ ಹಳಿಗೆ ಮರಳಲಿದೆ. ಜೀವನದಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರಾಗಲಿವೆ. ಕೇವಲ ಹಣ ಗಳಿಕೆಯತ್ತ ಮಾತ್ರವಲ್ಲದೆ, ಆರೋಗ್ಯ ಮತ್ತು ಕುಟುಂಬದ ಅಗತ್ಯತೆಗಳ ಕಡೆಗೂ ನೀವು ಗಮನ ಹರಿಸಲಿದ್ದೀರಿ. ಈ ಅವಧಿಯಲ್ಲಿ ಜಮೀನು ಅಥವಾ ಆಸ್ತಿಯ ಮೇಲೆ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಕೋಟಿ ಕೋಟಿ ಲಾಭವನ್ನು ತಂದುಕೊಡಲಿವೆ.

ಧನು ರಾಶಿ (Sagittarius):

ದೇವಗುರು ಬೃಹಸ್ಪತಿಯ ಸ್ವಂತ ರಾಶಿಯಾದ ಧನಸ್ಸಿನ ಜನರಿಗೆ ಈ ಗಜಲಕ್ಷ್ಮಿ ರಾಜಯೋಗವು ಧನ-ಧಾನ್ಯಗಳ ಮಹಾಪೂರವನ್ನೇ ಹರಿಸಲಿದೆ. ಪಿತ್ರಾರ್ಜಿತ ಆಸ್ತಿ ಅಥವಾ ಹಳೆಯ ಹೂಡಿಕೆಗಳಿಂದ ನಿರೀಕ್ಷಿಸದ ಬೃಹತ್ ಮೊತ್ತದ ಆರ್ಥಿಕ ಲಾಭವಾಗಲಿದೆ. ನಿಮ್ಮ ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿದ್ದು, ಉಳಿತಾಯದ (Savings) ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದೀರಿ. ಈ ಅವಧಿಯಲ್ಲಿ ಕುಟುಂಬದವರೊಂದಿಗೆ ಸುಂದರವಾದ ಧಾರ್ಮಿಕ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಲಿದ್ದೀರಿ. ಮಕ್ಕಳ ಕಡೆಯಿಂದ ಶುಭ ವಾರ್ತೆಗಳು ಕೇಳಿಬರಲಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pahalgam Attack: ಪಹಲ್ಗಾಮ್​ನ​ ಭೀಕರ ದಾಳಿಯ ದಿನ ಏನೇನಾಯ್ತು? ಉಗ್ರರ ಸಿದ್ಧತೆ ಹೇಗಿತ್ತು?   – Kannada News | What happened on the day of the horrific Pahalgam Terror attack Lunch Under Tree GoPro To Record murder Chilling Timeline

ನವದೆಹಲಿ, ಮೇ 22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ (Pahalgam Terror Attack) ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಉಗ್ರರ ದಾಳಿಗೆ ಜಗತ್ತಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಕೈವಾಡ ಈ ದಾಳಿಯ ಹಿಂದೆ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

2025ರ ಏಪ್ರಿಲ್ 22ರಂದು ಮಧ್ಯಾಹ್ನ ಸುಮಾರು 2.23ಕ್ಕೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಬೈಸರನ್ ವ್ಯಾಲಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 26 ಜನ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ 25 ಪ್ರವಾಸಿಗರು ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ರೈಡರ್ ಕೂಡ ಸೇರಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೃತರ ಪೈಕಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಎಂಬ ಇಬ್ಬರು ಪ್ರವಾಸಿಗರು ಕೂಡ ಸೇರಿದ್ದರು.

ಪಾಕಿಸ್ತಾನದ ಲಾಹೋರ್‌ನಲ್ಲಿದ್ದುಕೊಂಡು ದಾಳಿಯನ್ನು ನಿಯಂತ್ರಿಸಿದ ಟಿಆರ್‌ಎಫ್ ಕಮಾಂಡರ್ ಸಾಜಿದ್ ಜಾಟ್ ಉರ್ಫ್ ಲಂಗ್ಡಾ ಈ ದಾಳಿಯ ಮಾಸ್ಟರ್‌ಮೈಂಡ್ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

2025ರ ಪಹಲ್ಗಾಮ್ ದಾಳಿಯ ಪ್ರಮುಖ ವಿವರಗಳು:

ಏಪ್ರಿಲ್ 15ರಿಂದ 21:

ಏಪ್ರಿಲ್ 21ರಂದು ಫೈಸಲ್ ಜಾಟ್ ಉರ್ಫ್ ಸುಲೈಮಾನ್ ಶಾ, ಹಬೀಬ್ ತಾಹಿರ್ ಉರ್ಫ್ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂಬ ಮೂವರು ಸಶಸ್ತ್ರ ಪಾಕಿಸ್ತಾನಿ ಉಗ್ರರು ಸುದೀರ್ಘ ಪ್ರಯಾಣದ ನಂತರ ತೀವ್ರ ದಣಿವು ಮತ್ತು ಬಾರಿಕೆಯಿಂದ ಸ್ಥಳೀಯ ನಿವಾಸಿ ಪರ್ವೈಜ್ ಅಹ್ಮದ್ ಎಂಬುವವರ ಗುಡಿಸಿಲಿಗೆ ಬಂದು ಆಶ್ರಯ ಪಡೆದರು.

ಇದನ್ನೂ ಓದಿ: 16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್​ಇಟಿ ಉಗ್ರ ಸೆರೆ

ಏಪ್ರಿಲ್ 22ರ ದಾಳಿಯ ದಿನ:

ಬೈಸರನ್ ವ್ಯಾಲಿಯ ಪಾರ್ಕ್ ಒಳಗೆ ನುಗ್ಗುವ ಮುನ್ನ ಉಗ್ರರು ಮೈದಾನದಲ್ಲಿದ್ದ ಮರವೊಂದರ ಕೆಳಗೆ ಕುಳಿತು ಮಧ್ಯಾಹ್ನದ ಊಟ ಮಾಡಿದರು. ನಂತರ ತಮ್ಮ ಆಯುಧಗಳು ಯಾರಿಗೂ ಕಾಣದಂತೆ ಬಚ್ಚಿಡಲು ತಮ್ಮ ಬ್ಯಾಗ್‌ಗಳಲ್ಲಿದ್ದ ಕಂಬಳಿಗಳನ್ನು ಮೈಮೇಲೆ ಹೊದ್ದುಕೊಂಡರು. ಬಳಿಕ ಇಬ್ಬರು ಉಗ್ರರು ಹತ್ತಿರದ ತೊರೆಯ ಬಳಿ ನಡೆದುಕೊಂಡು ಹೋಗಿ ಪ್ರವಾಸಿಗರ ಚಲನವಲನಗಳನ್ನು ಗಮನಿಸಿ, ಇಡೀ ಮೈದಾನದ ನಕ್ಷೆಯನ್ನು ಸಿದ್ಧಪಡಿಸಿಕೊಂಡರು. ಬಳಿಕ ದಕ್ಷಿಣದ ಜಿಪ್‌ಲೈನ್ ಮತ್ತು ಉತ್ತರದ ಪ್ರಮುಖ ಗೇಟ್ ಕಡೆಯಿಂದ ಏಕಕಾಲಕ್ಕೆ ದಾಳಿ ನಡೆಸಿ ಇಡೀ ಮೈದಾನದಲ್ಲಿ ಹೆಣಗಳು ಬೀಳುವಂತೆ ಮಾಡಿದರು.

ಧರ್ಮ ಕೇಳಿ ಹತ್ಯೆ:

ಪ್ರವಾಸಿಗರ ಧರ್ಮವನ್ನು ಕೇಳಿ, ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡು ಗುಂಡಿಕ್ಕಿ ಕೊಲ್ಲಲಾಯಿತು. ಸ್ಥಳೀಯ ಮುಸ್ಲಿಂ ಸಮುದಾಯದ ಕುದುರೆ ಸವಾರ ಉಗ್ರನನ್ನು ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು. ಮೊದಲ ಬುಲೆಟ್ ಅನ್ನು ಎಂ-4 ಕಾರ್ಬೈನ್ ರೈಫಲ್‌ನಿಂದ ಹಾರಿಸಲಾಯಿತು. ಉಳಿದ ಇಬ್ಬರು ಉಗ್ರರು ಅಲ್ಲಿನ ಡಾಬಾಗಳು ಮತ್ತು ಇಳಿಜಾರು ಗುಡ್ಡದ ಬಳಿ ಎಕೆ-47 ರೈಫಲ್‌ಗಳಿಂದ ಮನಬಂದಂತೆ ಗುಂಡಿನ ಮಳೆಗರೆದರು. ಗಾಬರಿಗೊಂಡ ಜನರನ್ನು ಒಂದು ಕಡೆ ಸೇರಿಸಿದ ಉಗ್ರರು, ಇಸ್ಲಾಮಿಕ್ ‘ಕಲ್ಮಾ’ ಹೇಳಲು ಸೂಚಿಸಿದರು. ಕಲ್ಮಾ ಪಠಿಸಲು ಸಾಧ್ಯವಾಗದವರನ್ನು ಗುರುತಿಸಿ ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಂದರು.

ಹತ್ಯೆಯ ಲೈವ್ ರೆಕಾರ್ಡ್:

ತಮ್ಮ ಮುಖ್ಯ ಬ್ಯಾಗ್‌ಗಳನ್ನು ಒಂದು ಕಡೆ ಇಟ್ಟು ಬಂದ ಉಗ್ರರು, ಪಾರ್ಕ್‌ನ ಬೇಲಿಯನ್ನು ದಾಟಿ ಒಳಗೆ ನುಗ್ಗಿದರು. ಈ ಹತ್ಯಾಕಾಂಡವನ್ನು ಲೈವ್ ಆಗಿ ರೆಕಾರ್ಡ್ ಮಾಡಲು ಒಬ್ಬ ಉಗ್ರನು ತನ್ನ ಹೆಲ್ಮೆಟ್‌ಗೆ ‘ಗೋಪ್ರೊ’ (GoPro) ಆಕ್ಷನ್ ಕ್ಯಾಮೆರಾವನ್ನು ಅಳವಡಿಸಿಕೊಂಡಿದ್ದನು. ಇಬ್ಬರು ಉಗ್ರರು ಸಾರ್ವಜನಿಕ ಶೌಚಾಲಯಗಳ ಬಳಿ ಇದ್ದ ಪ್ರಮುಖ ಪ್ರವೇಶ ದ್ವಾರದತ್ತ ನುಗ್ಗಿದರೆ ಮೂರನೇ ಉಗ್ರನು ಪ್ರವಾಸಿಗರ ಜಿಪ್‌ಲೈನ್ ಕೊನೆಗೊಳ್ಳುವ ಜಾಗದಲ್ಲಿ ನಿಂತುಕೊಂಡನು. ಪ್ರವಾಸಿಗರು ಎಲ್ಲಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಇಡೀ ಮೈದಾನವನ್ನು ಒಂದು ‘ಸಾವಿನ ವಲಯ’ (Kill Zone)ವನ್ನಾಗಿ ಮಾರ್ಪಡಿಸಲು ಅವರು ಈ ರೀತಿ ತಂತ್ರ ರೂಪಿಸಿದ್ದರು.

ಉಗ್ರರ ಸಂಭ್ರಮಾಚರಣೆ:

ಕಾಡಿನ ಕಡೆಗೆ ಓಡಿಹೋಗುವಾಗ ಮರಗಳ ಹಿಂದೆ ಅಡಗಿದ್ದ ಮೂವರು ನಾಗರಿಕರನ್ನು ಬಹಳ ಹತ್ತಿರದಿಂದ ಶೂಟ್ ಮಾಡಲಾಯಿತು. ಪಾರ್ಕ್‌ನಿಂದ ಹೊರಹೋಗುವಾಗ ಯಾವುದೇ ಪಶ್ಚಾತ್ತಾಪವಿಲ್ಲದೆ ಉಗ್ರರು ಸಂಭ್ರಮದಿಂದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದರು.

ಭಾರತದ ಪ್ರತಿಕ್ರಿಯೆ:

ಈ ದಾಳಿಯನ್ನು ಖಂಡಿಸಿ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿತು. ಪಾಕಿಸ್ತಾನದ ರಾಯಭಾರಿಗಳನ್ನು ದೇಶದಿಂದ ಉಚ್ಚಾಟಿಸಲಾಯಿತು. ಅಟ್ಟಾರಿ ಗಡಿಯನ್ನು ಮುಚ್ಚಲಾಯಿತು. ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.

ಮೇ 7ರಿಂದ 10ರವರೆಗೆ ಆಪರೇಷನ್ ಸಿಂಧೂರ್:

ಪಹಲ್ಗಾಮ್​ನ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಸೇನೆ ಪಾಕಿಸ್ತಾನದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಅಡಿಯಲ್ಲಿ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿತು. ಇದು ಉಭಯ ದೇಶಗಳ ನಡುವೆ 4 ದಿನಗಳ ಸೈನಿಕ ಸಂಘರ್ಷಕ್ಕೆ ಕಾರಣವಾಯಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ?

ಜುಲೈ 28ಕ್ಕೆ ಆಪರೇಷನ್ ಮಹಾದೇವ್:

ಭಾರತೀಯ ಭದ್ರತಾ ಪಡೆಗಳು ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ‘ಆಪರೇಷನ್ ಮಹಾದೇವ್’ ಆರಂಭಿಸಿದವು. ಜುಲೈ 28ರಂದು ದಚಿ ಗಾಮ್ ಅರಣ್ಯ ಪ್ರದೇಶದಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಪಹಲ್ಗಾಮ್ ದಾಳಿ ನಡೆಸಿದ್ದ ಮೂವರು ಪ್ರಮುಖ ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಲಾಯಿತು.

ಚಾರ್ಜ್‌ಶೀಟ್ ಸಲ್ಲಿಕೆ:

ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ 7,500ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು. ಉಗ್ರರು ಬಳಸಿದ ಫೋನ್‌ಗಳು ಪಾಕಿಸ್ತಾನದಲ್ಲಿ ಖರೀದಿಯಾಗಿದ್ದವು. ಈ ದಾಳಿಯ ಹೊಣೆ ಹೊತ್ತ ಗುಂಪಿನ ಸಾಮಾಜಿಕ ಜಾಲತಾಣಗಳ ಐಪಿ ವಿಳಾಸ (IP Address) ಪಾಕಿಸ್ತಾನದ್ದು ಎಂದು ತಾಂತ್ರಿಕ ಸಾಕ್ಷ್ಯಗಳ ಸಮೇತ ಸಾಬೀತುಪಡಿಸಿತು.

ಎನ್‌ಐಎ ತನಿಖೆಯ ಪ್ರಕಾರ, ಉಗ್ರರು ದಾಳಿ ಮಾಡುವಾಗ ಪ್ರವಾಸಿಗರಿಗೆ “ಮೋದಿಗೆ ಹೋಗಿ ಹೇಳಿ” ಎಂದು ಕೂಗುತ್ತಿದ್ದರು. ಇದು ಕೇವಲ ಪ್ರವಾಸಿಗರ ಹತ್ಯೆಯಷ್ಟೇ ಅಲ್ಲದೆ ಭಾರತ ಸರ್ಕಾರದ ವಿರುದ್ಧ ಜಿಹಾದಿ ಸಿದ್ಧಾಂತವನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು ಎಂಬುದು ಸಾಬೀತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather forecast: ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ, 1 ವಾರ ಗುಡುಗು ಸಹಿತ ಭಾರೀ ಮಳೆ – Kannada News | Karnataka Weather weather forecast: IMD Forecasts Heavy Showers And Gusty Winds Across State

ಬೆಂಗಳೂರು (ಮೇ 22): ಕರ್ನಾಟಕದಲ್ಲಿ (Karnataka) ಮುಂಗಾರು ಪೂರ್ವ ಮಾರುತಗಳು (Pre Monsoon Rain) ತೀವ್ರಗೊಂಡಿದ್ದು, ಮೇ 22 ರಿಂದ ಮುಂದಿನ ಐದಾರು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮಾಲ್ಡೀವ್ಸ್ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಮುನ್ನಡೆಯಲು ಪೂರಕ ವಾತಾವರಣವಿದ್ದು, ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ .

ಯಾವಾಗ ಎಲ್ಲೆಲ್ಲಿ ಮಳೆ?

ಮೇ 23 ರಂದು ಬಾಗಲಕೋಟೆ, ಕೊಪ್ಪಳ, ವಿಜಯಪುರ, ತುಮಕೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಮೇ 24 ರಂದು ತುಮಕೂರು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದು, ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ. ಮೇ 25 ಮತ್ತು 26 ರಂದು ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇದನ್ನೂ ನೋಡಿ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ

ಇನ್ನು ಮೇ 27 ಮತ್ತು 28 ರಂದು ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದೆ. ಇನ್ನು ರಾಜ್ಯದ ಗರಿಷ್ಠ ತಾಪಮಾನದಲ್ಲಿ ಮುಂದಿನ 5 ದಿನಗಳವರೆಗೆ ಯಾವುದೇ ಪ್ರಮುಖ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡು

ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವರುಣನ ಅಬ್ಬರ ಹೆಚ್ಚಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಿಡಿಲು ಮತ್ತು ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಜಾಗರೂಕರಾಗಿರಲು ಸೂಚಿಸಲಾಗಿದೆ.

ಉತ್ತರ ಒಳನಾಡು

ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಕರಾವಳಿ ಕರ್ನಾಟಕ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಮತ್ತು ಕೊಡಗು ಜಿಲ್ಲೆಗಳ ಹಲವು ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಚದುರಿದಂತೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉರಿ ಸೆಖೆಯ ವಾತಾವರಣ ಮುಂದುವರಿಯಲಿದ್ದು, ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್ – Kannada News | ITR Filing 2026: Avoid Tax Notices! Check AIS for Mismatches Now

ನವದೆಹಲಿ, ಮೇ 22: 2026ರ ಆದಾಯ ತೆರಿಗೆ ರಿಟರ್ನ್ಸ್ (ITR Filing 2026) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ತೆರಿಗೆದಾರರು ತಮ್ಮ ವಾರ್ಷಿಕ ಮಾಹಿತಿ ಹೇಳಿಕೆ ಅಥವಾ ಎಐಎಸ್ (AIS – Annual Information Statement) ಅನ್ನು ಸೂಕ್ಷ್ಮವಾಗಿ ಗಮನಿಸುವುದು ಅತ್ಯಗತ್ಯವಾಗಿದೆ. ಐಟಿಆರ್‌ನಲ್ಲಿ ಘೋಷಿಸಿದ ಆದಾಯ ಮತ್ತು ಎಐಎಸ್‌ನಲ್ಲಿರುವ ಮಾಹಿತಿಯ ನಡುವೆ ವ್ಯತ್ಯಾಸಗಳಿದ್ದರೆ (Mismatches), ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್‌ಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಎಐಎಸ್ (AIS) ಎಂದರೇನು?

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಪ್ಯಾನ್ (PAN) ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಪ್ರಮುಖ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಅದನ್ನು ಒಂದೇ ವರದಿಯಲ್ಲಿ ಸಂಗ್ರಹಿಸುತ್ತದೆ. ಇದನ್ನೇ ‘ಆನ್ಯುವಲ್ ಇನ್ಫರ್ಮೇಷನ್ ಸ್ಟೇಟ್‌ಮೆಂಟ್’ (AIS) ಎನ್ನಲಾಗುತ್ತದೆ. ಇದರಲ್ಲಿ ಈ ಕೆಳಗಿನ ಮಾಹಿತಿ ಒಳಗೊಂಡಿರಬಹುದು:

  • ಸಂಬಳ (Salary) ಮತ್ತು ಬ್ಯಾಂಕ್ ಇಂಟರೆಸ್ಟ್ (Interest Income)
  • ಷೇರು ಮತ್ತು ಮ್ಯೂಚುವಲ್ ಫಂಡ್‌ಗಳ ಲಾಭಾಂಶ (Dividends & Capital Gains)
  • ಸ್ಥಿರ ಆಸ್ತಿ ಖರೀದಿ ಅಥವಾ ಮಾರಾಟದ ವಿವರಗಳು
  • ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ದೊಡ್ಡ ಮೊತ್ತದ ಪಾವತಿಗಳು ಮತ್ತು ವಿದೇಶಿ ಹಣ ರವಾನೆ (Foreign Remittance) ಮುಂತಾದ ಎಲ್ಲಾ ವಿವರಗಳು ಲಭ್ಯವಿರುತ್ತವೆ.

ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ

ಮಾಹಿತಿ ತಾಳೆಯಾಗದಿದ್ದರೆ (Mismatch) ಏನಾಗುತ್ತದೆ?

ತೆರಿಗೆದಾರರು ತಮಗೆ ತಿಳಿಯದೆಯೋ ಅಥವಾ ನಿರ್ಲಕ್ಷ್ಯದಿಂದಲೋ ಕೆಲವು ಆದಾಯದ ಮೂಲಗಳನ್ನು (ಉದಾಹರಣೆಗೆ ಎಫ್‌ಡಿ ಇಂಟರೆಸ್ಟ್ ಅಥವಾ ಡಿವಿಡೆಂಡ್) ತಮ್ಮ ಐಟಿಆರ್ ಫಾರ್ಮ್‌ನಲ್ಲಿ ನಮೂದಿಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ, ಈ ಮಾಹಿತಿ ಎಐಎಸ್‌ನಲ್ಲಿ ದಾಖಲಾಗಿರುತ್ತದೆ. ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ಸಾಫ್ಟ್‌ವೇರ್‌ಗಳ ಮೂಲಕ ಇವೆರಡನ್ನೂ ಹೋಲಿಸಿ ನೋಡುತ್ತದೆ.

ಯಾವಾಗ ಇವೆರಡರ ನಡುವೆ ವ್ಯತ್ಯಾಸ ಕಾಣಿಸುತ್ತದೆಯೋ, ಆಗ ಸಿಸ್ಟಮ್ ಸ್ವಯಂಚಾಲಿತವಾಗಿ (Automated) ಅದನ್ನು ಗುರುತಿಸಿ ಸೆಕ್ಷನ್ 143(1) ರ ಅಡಿಯಲ್ಲಿ ತೆರಿಗೆದಾರರಿಗೆ ಇಮೇಲ್ ಅಥವಾ ಎಸ್‌ಎಮ್‌ಎಸ್ ಮೂಲಕ ಎಚ್ಚರಿಕೆ ಸಂದೇಶ ಅಥವಾ ನೋಟಿಸ್ ಕಳುಹಿಸುತ್ತದೆ.

ಎಐಎಸ್‌ನಲ್ಲಿ ತಪ್ಪುಗಳಿರಲು ಏನು ಕಾರಣ?

ಕೆಲವೊಮ್ಮೆ ತೆರಿಗೆದಾರರ ತಪ್ಪಿಲ್ಲದಿದ್ದರೂ ಎಐಎಸ್‌ನಲ್ಲಿ ತಪ್ಪು ಮಾಹಿತಿ ಕಾಣಿಸಿಕೊಳ್ಳಬಹುದು. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಬ್ಯಾಂಕುಗಳು, ಬ್ರೋಕರ್‌ಗಳು ಅಥವಾ ಕಂಪನಿಗಳು ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ಸಲ್ಲಿಸಿರಬಹುದು ಅಥವಾ ಒಂದೇ ವಹಿವಾಟನ್ನು ಎರಡು ಬಾರಿ (Duplicate entry) ವರದಿ ಮಾಡಿರಬಹುದು. ಅಥವಾ, ಬೇರೆಯವರ ವಹಿವಾಟಿಗೆ ನಿಮ್ಮ ಪ್ಯಾನ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿದ್ದರೆ, ಅವರ ಆದಾಯವೂ ನಿಮ್ಮ ಎಐಎಸ್‌ನಲ್ಲಿ ತೋರಿಸುತ್ತದೆ.

ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

ನೋಟಿಸ್ ಬರದಂತೆ ತಡೆಯಲು ಏನು ಮಾಡಬೇಕು?

ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ, ‘ಸರ್ವಿಸಸ್’ (Services) ಟ್ಯಾಬ್ ಅಡಿಯಲ್ಲಿರುವ AIS ಮತ್ತು TIS (Taxpayer Information Summary) ಅನ್ನು ಡೌನ್‌ಲೋಡ್ ಮಾಡಿ ಸಂಪೂರ್ಣವಾಗಿ ಪರಿಶೀಲಿಸಿ.

ಎಐಎಸ್‌ನಲ್ಲಿ ಯಾವುದಾದರೂ ತಪ್ಪು ಮಾಹಿತಿ ಅಥವಾ ನಿಮಗೆ ಸಂಬಂಧಿಸದ ವಹಿವಾಟು ಕಂಡುಬಂದರೆ, ಅಲ್ಲೇ ಇರುವ ‘Add Feedback’ ಆಯ್ಕೆಯನ್ನು ಬಳಸಿ ಅದನ್ನು ತಿರಸ್ಕರಿಸಬಹುದು (Deny) ಅಥವಾ ತಿದ್ದುಪಡಿ ಕೋರಬಹುದು.

ಒಂದು ವೇಳೆ ಈಗಾಗಲೇ ಐಟಿಆರ್ ಸಲ್ಲಿಸಿದ್ದು, ಅದರಲ್ಲಿ ಆದಾಯದ ವಿವರ ಬಿಟ್ಟುಹೋಗಿದ್ದರೆ, ನೋಟಿಸ್ ಬರುವ ಮುನ್ನವೇ ಪರಿಷ್ಕೃತ ಐಟಿಆರ್ (Revised Return) ಸಲ್ಲಿಸಿ ತಪ್ಪು ತಿದ್ದಿಕೊಳ್ಳಬಹುದು.

2026ರ ಜುಲೈ 31 ರ ಒಳಗೆ ಸಂಬಳ ಪಡೆಯುವ ನೌಕರರು ತಮ್ಮ ಐಟಿಆರ್ ಸಲ್ಲಿಸಬೇಕಾಗಿದ್ದು, ಕೊನೆಯ ಕ್ಷಣದ ಗಡಿಬಿಡಿಯಲ್ಲಿ ನೋಟಿಸ್‌ಗಳನ್ನು ಆಹ್ವಾನಿಸುವುದಕ್ಕಿಂತ ಮುಂಚಿತವಾಗಿ ಎಐಎಸ್ ಪರಿಶೀಲಿಸುವುದು ಜಾಣತನ ಎಂದು ತೆರಿಗೆ ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version